ಹೊರಾಂಗಣದಲ್ಲಿ ಹೆಣ್ಣು – ಕರ್ನಾಟಕದ ನೊಮಿತೋ ಕಾಂದಾರ್ – ಡಾ. ವಿನತೆ ಶರ್ಮ

Nomito 1
ಮುಖಕ್ಕೆ ಬೂದಿ ಕಪ್ಪು, ಆರೋಗ್ಯಕ್ಕೆ ಬಹಳ ಒಪ್ಪು

ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಹೊರಾಂಗಣ ಕ್ರೀಡೆಗಳು, ಮನರಂಜನೆ ಮತ್ತು ಹೊರಾಂಗಣ ಕಲಿಕೆ ವಿಷಯಗಳ ಬಗ್ಗೆ ಹೆಚ್ಚೆಚ್ಚು ಆಸಕ್ತಿ ಮೂಡುತ್ತಿದೆ. ಈ ಹೊರಾಂಗಣ ಮನರಂಜನೆ ಮತ್ತು ಸಾಹಸ ಚಟುವಟಿಕೆಗಳು ಸಾಮಾನ್ಯ, ಮಧ್ಯಮವರ್ಗದ ಜನರಿಂದ ಹಿಡಿದು ಶ್ರೀಮಂತರಲ್ಲೂ ಸಾಕಷ್ಟು ಕುತೂಹಲವನ್ನು ಕೆರಳಿಸಿ ಅವರನ್ನು ಹೊರಾಂಗಣ ಮತ್ತು ಸಾಹಸ ಕ್ರೀಡೆಗಳತ್ತ ಆಕರ್ಷಿಸುತ್ತಿವೆ. ಸಾಹಸ ಮತ್ತು ಅತಿ ಸಾಹಸ ಕ್ರೀಡೆಗಳ ಬಗ್ಗೆ ನಾನು ಈ ಜಾಲ ಜಗುಲಿಯಲ್ಲಿ ಹಿಂದೆ ಬರೆದಿದ್ದೆ. ಈಗ ಬರೆಯುತ್ತಿರುವುದು ಹೊರಾಂಗಣ ಚಟುವಟಿಕೆಗಳು ಮತ್ತು ಪರಿಸರ ಕಲಿಕೆ ಜನಸಾಮಾನ್ಯರಲ್ಲಿ ಎಂತಹ ಬದಲಾವಣೆಯನ್ನು ಉಂಟು ಮಾಡಬಹುದು ಎಂದು. ಅದರಲ್ಲೂ, “ಹೆಣ್ಣು” ಎಂಬ ಸಾಮಾಜಿಕ ಮತ್ತು ಸಾಂಸ್ಕೃತಿಕ ಹಣೆಪಟ್ಟಿಯನ್ನು ಪಕ್ಕಕ್ಕೆ ಸರಿಸಿ ಹೊರಾಂಗಣ ಕಲಿಕಾ, ಸಾಹಸ ಕ್ರೀಡೆಗಳ ಕ್ಷೇತ್ರದಲ್ಲಿ ಸಾವಿರಾರು ಹೆಣ್ಣು ಮಕ್ಕಳಿಗೆ, ತಾಯಂದಿರಿಗೆ, ಅಜ್ಜಿಯರಿಗೆ ಸ್ಪೂರ್ತಿಯಾಗಿರುವ ನೊಮಿತೊ ಕಾಂದಾರ್ ಅವರ ಬಗ್ಗೆ .

೧೯೯೦ ರ ದಶಕದಲ್ಲೇ ಬೆಂಗಳೂರಿನ ಎಸ್ ಎಲ್ ಎನ್ ಸ್ವಾಮಿ ತಮ್ಮ ದಿ ಅಡ್ವೆಂಚರರ್ಸ್ (The Adventurers, ೧೪೨, ೬೯ ನೇ ಕ್ರಾಸ್, ಐದನೇ ಬ್ಲಾಕ್, ರಾಜಾಜಿನಗರ) ಸಂಸ್ಥೆಯನ್ನು ಹುಟ್ಟು ಹಾಕಿ ಬೆಳೆಸಿ, ಅಂತಹ ಚಟುವಟಿಕೆಗಳನ್ನು ಮತ್ತು ಪರಿಸರ ಕಲಿಕೆಯನ್ನು ಕರ್ನಾಟಕದಲ್ಲಿ ಎಲ್ಲರ ಕೈಗೂ ಎಟುಕುವಂತೆ ಮಾಡಿದ ಮೊದಲಿಗರ ಪರಂಪರೆಗೆ ಸೇರಿದವರು. ನಂತರ ಅವರ ಜೊತೆ ಸೇರಿ ದಿ ಅಡ್ವೆಂಚರರ್ಸ್ ಸಂಸ್ಥೆಯನ್ನು ಬಲಪಡಿಸಿದ ನೊಮಿತೊ ಕಾಂದಾರ್ ಎಂಬ ಸಾಹಸಿ ಹೆಣ್ಣು ಸಂಸ್ಥೆಯ ಹೊರಾಂಗಣ ಚಟುವಟಿಕೆಗಳು ಮತ್ತು ಕಲಿಕೆಯ ಸಹ-ಮುಂದಾಳತ್ವವನ್ನು ವಹಿಸಿಕೊಂಡರು. ಹೋದ ತಿಂಗಳು ನಾನು ನೊಮಿತೊ ಜೊತೆ ದೂರವಾಣಿಯಲ್ಲಿ ಮಾತನಾಡಿ ಆಕೆಯ ಸಂದರ್ಶನವನ್ನು ಮಾಡಿದ್ದೆ. ಅದರಿಂದ ಹೊಮ್ಮಿರುವ ಲೇಖನ ಇಗೋ ನಿಮ್ಮ ಮುಂದಿದೆ.

೧೯೮೦-೯೦ ರ ದಶಕಗಳಲ್ಲಿ ಎಸ್ ಎಲ್ ಎನ್ ಸ್ವಾಮಿ ಅನುಭವ ಕಲಿಕೆ, ಪರಿಸರ ಶಿಕ್ಷಣ, ಹೊರಾಂಗಣ ಕಲಿಕೆ, ಪರಿಸರದಿಂದ ಮನುಷ್ಯ ಏನನ್ನು, ಯಾಕೆ ಕಲಿಯಬೇಕು ಎಂದೆಲ್ಲಾ ಮಾತನಾಡುತ್ತಾ, ಪಶ್ಚಿಮ ಘಟ್ಟಗಳನ್ನು ಸುತ್ತುತ್ತಾ, ಪರಿಸರ ಸಂಬಂಧಿತ ಚಟುವಟಿಕೆಗಳನ್ನು ಸಾಮಾನ್ಯ ಜನರಿಗೆ, ಶಾಲಾ ಮಕ್ಕಳಿಗೆ ತಲುಪಿಸಲು ಪ್ರಯತ್ನಿಸುತ್ತಿದ್ದ ಕಾಲ. ನಗರ ಪ್ರದೇಶಗಳ ಮಕ್ಕಳು, ಅವರ ಕುಟುಂಬಗಳು ಪ್ರಕೃತಿಯಿಂದ, ಹೊರಾಂಗಣ ಪರಿಸರದಿಂದ ಕ್ರಮೇಣ ದೂರವಾಗುತ್ತಿದ್ದ ದಿನಗಳು ಅವು. ಮನುಷ್ಯ ಪರಿಸರಕ್ಕೆ ಇನ್ನೂ ಹತ್ತಿರವಾಗಬೇಕು, ದೂರವಲ್ಲ ಎಂದು ಸ್ವಾಮಿ ಆಗ ಮಲೆನಾಡಿನ ಹೊನ್ನೆ ಮರಡು (ಳು) ಎಂಬ ಸ್ಥಳದಲ್ಲಿ ಕಾರ್ಯಕ್ಷೇತ್ರವನ್ನು ಆರಂಭಿಸಿದ್ದರು. ಶಾಲಾ ಮಕ್ಕಳನ್ನು ಮತ್ತು ಯುವಜನತೆಯನ್ನು ಆ ಕಣ್ಮನ ಸೆಳೆಯುವ ಪ್ರಶಾಂತವಾದ ಲಿಂಗನಮಕ್ಕಿ ಜಲಾಶಯದ ಹಿನ್ನೀರಿನ ಪ್ರದೇಶಕ್ಕೆ ಕರೆತಂದು ಅವರಿಗೆ ಕಯಾಕಿಂಗ್, ತೆಪ್ಪದಾಟ, ಕೊರಕಲ್, ಈಜುವುದು, ಕಲ್ಲೇರು (rock climbing), ಬೆಟ್ಟ ಪರ್ವತಗಳ ಚಾರಣಗಳು ಮುಂತಾದ ಹೊರಾಂಗಣ ಮತ್ತು ಸಾಹಸ ಕ್ರೀಡೆಗಳನ್ನು ಪರಿಚಯಿಸಿದರು. ಈ ಚಟುವಟಿಕೆಗಳಿಗೆ ಬೇಕಾದ ಉಪಕರಣಗಳು, ಉಡುಪು, ಮತ್ತಿತರ ಅಗತ್ಯ ಸಾಧನಗಳ ಬಗ್ಗೆ, ತಮ್ಮ ವಿವಿಧ ಯೋಜನೆಗಳನ್ನು ಕಾರ್ಯರೂಪಕ್ಕಿಳಿಸುವ ದಾರಿಗಳ ಬಗ್ಗೆ ಶೋಧನೆ ನಡೆಸಿದ್ದರು. ಕಾರ್ಯಕ್ರಮ ಸಂಯೋಜಕಿಯಾಗಿ ಬಂದು ನಿಂತವರು ನೊಮಿತೊ. ಆಗ ಮನೆಯಲ್ಲಿ ತನ್ನ ಪರಿಸರ ಪ್ರೀತಿಯನ್ನು, ಅನುಭವ ಕಲಿಕೆಯನ್ನು, ವಿಭಿನ್ನ ಆಲೋಚನೆಗಳನ್ನು, ಜೀವನ ದೃಷ್ಟಿಯನ್ನು ಹೆತ್ತವರಿಗೆ, ಒಡಹುಟ್ಟಿದವರಿಗೆ ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತಿತ್ತು. ಅವರ ವಿರೋಧದಿಂದ ನನಗೂ ಕಷ್ಟವಾಗುತ್ತಿತ್ತು ಎನ್ನುವ ನೊಮಿತೊಗೆ ಬೇಕಿದ್ದ ನೆಲೆಯನ್ನು ಅಡ್ವೆಂಚರರ್ಸ್ ಸಂಸ್ಥೆ ಒದಗಿಸಿದ್ದು “ನನ್ನ ಅದೃಷ್ಟ” ಎಂದು ನೊಮಿತೊ ನೆನಪಿಸಿಕೊಳ್ಳುತ್ತಾರೆ.
ಮೂವತೈದು ವರ್ಷಗಳ ಹಿಂದೆ ಹೊರಾಂಗಣ ಮತ್ತು ಪರಿಸರ ಶಿಕ್ಷಣವನ್ನು ಕರ್ನಾಟಕದ ಮತ್ತು ಭಾರತದ ಜನಸಾಮಾನ್ಯರಿಗೆ ತಲುಪಿಸಬೇಕು ಎಂಬುದು The Adventurers ಸಂಸ್ಥೆಯ ಗುರಿಯಾಗಿತ್ತು. ಈಗಲೂ ನಮ್ಮ ಆ ಗುರಿಯನ್ನಿಟ್ಟುಕೊಂಡೇ ನಾವು ಕೆಲಸಮಾಡುತ್ತಿದ್ದೀವಿ ಎಂದು ಮಾತನ್ನಾರಂಭಿಸಿದ ನೊಮಿತೊ ಹೇಳಿದ್ದು “ಈಗ ವಿಶೇಷವೆಂದರೆ ನಮ್ಮಲ್ಲಿಗೆ ಬರುವವರಲ್ಲಿ ಶೇಕಡಾ ೬೫ ರಷ್ಟು ಮಹಿಳೆಯರು ಮತ್ತು ಹೆಣ್ಣು ಮಕ್ಕಳು.”

ತಕ್ಷಣವೇ ನಾನು ಅದನ್ನು ಸ್ವಲ್ಪ ವಿವರಿಸಿ ಎಂದೆ. ನೊಮಿತೋರ ಪರಿಸರ ಕಲಿಕೆ, ಅನುಭಾವಿ ಕಥೆ ಅನೇಕ ಉಪಕಥೆಗಳ ಜೊತೆ ತೆಕ್ಕೆ ಹಾಕಿಕೊಂಡಿತು.

ನೊಮಿತೋ ಸಂಸ್ಥೆಗೆ ಬಂದ ಕಾಲದಲ್ಲಿ ಹೊನ್ನೆ ಮರಡುವಿನ ಕಾರ್ಯಕ್ಷೇತ್ರಕ್ಕೆ ಬರುವವರಲ್ಲಿ ಗಂಡಸರ, ಶಾಲಾ ಗಂಡು ಮಕ್ಕಳ ಗುಂಪುಗಳೇ ಹೆಚ್ಚಿದ್ದವು. ಆನಂತರದ ಎರಡು ದಶಕಗಳಲ್ಲಿ ಎಲ್ಲಾ ವಯಸ್ಸಿನ ಗಂಡು ಮತ್ತು ಹೆಣ್ಣು ಶಾಲಾ ಮಕ್ಕಳ ಗುಂಪುಗಳೂ ಬರಲಾರಂಭಿಸಿದವು. ೨೦೦೦ ರ ನಂತರ ಉಂಟಾದ ಜಾಗತಿಕ ಅಲೆಯಲ್ಲಿ ಹೊರಾಂಗಣ ಕಲಿಕಾಕ್ಷೇತ್ರವೂ ಸಾಕಷ್ಟು ಬೆಳಿಕಿಗೆ ಬಂತು. ಕಳೆದ ಒಂದು ದಶಕದಲ್ಲಿ ಪ್ರೌಢ ಮಹಿಳೆಯರು, ಮಧ್ಯ ವಯಸ್ಕ ಮತ್ತು ಹಿರಿ ವಯಸ್ಸಿನ ಮಹಿಳೆಯರು (೫೦-೬೦) ಬರುತ್ತಿದ್ದಾರೆ. ತಾಯಂದಿರು ಮತ್ತು ಅವರ ಮಕ್ಕಳ ಗುಂಪು, ಒಂದೇ ಕುಟುಂಬದ ಹಲವಾರು ಮಹಿಳಾ ಸದಸ್ಯರು, ಮಹಿಳಾ ಸ್ನೇಹಿತರ ಗುಂಪುಗಳು, ಒಂಬ್ಬಂಟಿ ಮಹಿಳೆಯರು ಬರುತ್ತಿದ್ದಾರೆ. ಹೊನ್ನೆ ಮರಡುವಿನ ನಮ್ಮ ಕಾರ್ಯಕ್ರಮಗಳಿಗೆ ಬಂದು ಹೋದ ಮಕ್ಕಳು ತಮ್ಮ ಹಿರಿಯರಿಗೆ ಕಟ್ಟಿಕೊಟ್ಟ ಅರ್ಥಪೂರ್ಣ ಅನುಭವಗಳನ್ನು ಕೇಳಿ ಸ್ವತಃ ತಾವೇ ಭಾಗವಹಿಸಲು ಬಂದ ತಂದೆ ತಾಯಿಯರೂ ಇದ್ದಾರೆ. ಹೆಚ್ಚಿನ ಮಟ್ಟಿಗೆ ಹೆಣ್ಣು ಮಕ್ಕಳು ಮತ್ತು ಮಹಿಳೆಯರು ಭಾಗವಹಿಸಲು ಮುಂದೆಬರುವ ಕಾರಣ ಹೆಣ್ಣೊಬ್ಬಳು ಕಾರ್ಯ ಕ್ಷೇತ್ರದಲ್ಲಿ ಸ್ವತಃ ಇದ್ದು, ಕಾರ್ಯಕ್ರಮದ ಮುಂಚೂಣಿಯನ್ನು ಹಿಡಿದು ಅವರ ಕ್ಷೇಮವನ್ನು, ಹಿತಾಸಕ್ತಿಯನ್ನು ಗಮನಿಸುವುದು. “ಅವರಿಗೆ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕವಾದ ಕ್ಷೇಮಭಾವನೆ ಹುಟ್ಟುತ್ತದೆ. ಹೊರಾಂಗಣ ಮತ್ತು ಸಾಹಸ ಚಟುವಟಿಕೆಗಳಲ್ಲಿ ಭಾಗವಹಿಸುವ ಹುಮ್ಮಸ್ಸು ಹೆಚ್ಚುತ್ತದೆ. ನಾನು ನೋಡುತ್ತಿರುವ ಹಾಗೆ ಹೆಂಗಸರು ಈ ಚಟುವಟಿಕೆಗಳಿಂದ ಹೆಚ್ಚನ್ನು ಪಡೆಯುತ್ತಾರೆ. ತಮ್ಮ ಬಾಲ್ಯದಲ್ಲಿ ‘ನೀನು ಹೆಣ್ಣು’ ಎಂಬ ಕಾರಣದಿಂದ ಅಂತಹ ಅವಕಾಶಗಳಿಂದ ವಂಚಿತರಾದ ಹೆಂಗಸರಿಗೆ, ನನ್ನ ತರಹ ಲಿಂಗತಾರತಮ್ಯತೆಗಳನ್ನು ಅನುಭವಿಸಿದವರಿಗೆ ಹೊನ್ನೆ ಮರಡುವಿಗೆ ಬಂದು ಪಾಲ್ಗೊಳ್ಳುವುದು ಸುವರ್ಣಾವಕಾಶ. ಅವರ ಬಾಲ್ಯದ ಬುತ್ತಿಯನ್ನು ಬಿಚ್ಚುವುದಕ್ಕೆ, ಎಲ್ಲೋ ಅಡಗಿ ಕುಳಿತ, ತುಳಿದ ಭಾವನೆಗಳನ್ನು ಹೊರ ಹರಿಯಬಿಡುವುದಕ್ಕೆ, ಮತ್ತೆ ತನ್ನ ‘ತಾನು’ ಎಂಬುವುದನ್ನ ಕಂಡುಕೊಳ್ಳುವುದಕ್ಕೆ ನಮ್ಮ ಹೊರಾಂಗಣ ಚಟುವಟಿಕೆಗಳು, ಸಾಹಸಗಳು, ಚಾರಣಗಳು ಬಹಳ ಉಪಯೋಗಕ್ಕೆ ಬಂದಿವೆ. ಅದೊಂದು ಹೊರಾಂಗಣ, ಪರಿಸರ ಚಿಕಿತ್ಸೆ” ಎನ್ನುತ್ತಾರೆ ನೊಮಿತೋ.

ಸ್ವಲ್ಪ ಉದಾಹರಣೆಗಳನ್ನ ಕೊಡಿ ಎಂದು ನನ್ನ ಕೋರಿಕೆ.

“ನನ್ನ ಕುಟುಂಬವೇ ಬಹಳ ಸಾಂಪ್ರದಾಯಿಕವಾಗಿತ್ತು. ಹೊರಾಂಗಣ ಮತ್ತು ಪರಿಸರ ಚಟುವಟಿಕೆಗಳ ಬಗ್ಗೆ ಬಹಳ ಆಸಕ್ತಿಯಿದ್ದ ನನಗೆ ಅದರಿಂದ ಸಾಕಷ್ಟು ಘಾಸಿಯಾಗಿತ್ತು. ನಾ ಇಲ್ಲಿಗೆ ಬಂದಾಗ ನನಗೆ ಸ್ವಾತಂತ್ರ್ಯ ಸಿಕ್ಕಿದ ಹಾಗಾಗಿತ್ತು. ಪ್ರಕೃತಿಯೊಂದಿಗೆ ಸ್ಪಂದಿಸಿದಾಗ ಅದುಮಿಟ್ಟಿದ್ದ ನನ್ನ ಕೋಪ, ಅಸಹನೆ, ಹತಾಶೆಗಳು ತಣ್ಣಗಾದವು. ಮನಸ್ಸು, ಹೃದಯ ಶಾಂತವಾಯಿತು. ಆ ಶಾಂತತೆ ಹೊರಾಂಗಣ ಪರಿಸರದಲ್ಲಿ ಮಾತ್ರ ಸಿಕ್ಕುವಂಥದ್ದು ಮತ್ತು ಅತ್ಯಮೂಲ್ಯ. ನಮ್ಮದೊಂದು ಕಾರ್ಯಕ್ರಮಕ್ಕೆ ಬಂದ ೭೨ ವರ್ಷದ ಹಿರಿಯ ಹೆಂಗಸರೊಬ್ಬರು ಖಾಸಗಿ ತೇಲು ಎದೆಕವಚವನ್ನು (personal floatation device or PFD) ಧರಿಸಿ ಈಜಿದಾಗ ಅವರು ಹೇಳಿದ್ದು – “ನನ್ನ ಜೀವನದಲ್ಲಿ ಮೊದಲ ಬಾರಿಗೆ ಹೊರಾಂಗಣ ಪರಿಸರದಲ್ಲಿ ನಾನು ಈಜುತ್ತಿರುವುದು. ನಾನೀಗ ಸಂತೋಷದಿಂದ ಸಾಯಲು ಸಿದ್ಧ.”

ಅದೇ ರೀತಿ ದೈಹಿಕ ಮತ್ತು ಮಾನಸಿಕ ವಿವಿಧ ಸಾಮರ್ಥ್ಯಗಳಿರುವ (differently abled) ಇರುವ ಕೆಲ ಮಕ್ಕಳ ತಾಯಂದಿರು ತಮ್ಮ ಮತ್ತು ತಮ್ಮ ಮಕ್ಕಳ ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮದಲ್ಲಿ ಬಂದಿರುವ ಒಳ್ಳೆಯ ಬದಲಾವಣೆಯ ಬಗ್ಗೆ ಹೇಳಿಕೊಳ್ಳುತ್ತಾರೆ.

ನಿಮ್ಮ ಮುಂದಾಳತ್ವದಲ್ಲಿ ಕಾರ್ಯಕ್ರಮಗಳನ್ನು ನಡೆಸುವಾಗ ಉಂಟಾಗುವ ಅಡೆತಡೆಗಳು, ಸವಾಲುಗಳು ಏನು ಎನ್ನುವುದು ನನಗೆ ತಿಳಿದುಕೊಳ್ಳಬೇಕಿತ್ತು. ನೊಮಿತೋ ಉತ್ತರಿಸಿದಂತೆ ಅವರಿಗೆ ಅಂತಹ ಅಡೆತಡೆಗಳು ಸವಾಲುಗಳು ಹೆಚ್ಚಿನ ಸಮಯ ಗಂಡಸರಿಂದ ಉಂಟಾಗುತ್ತವೆ. “ಹೆಂಗಸು ಹೊರಾಂಗಣದಲ್ಲಿ, ಕಾಡುಮೇಡು, ಗುಡ್ಡ ಪರ್ವತಗಳಲ್ಲಿ, ನದಿಗಳಲ್ಲಿ ಓಡಾಡುತ್ತಾ ತನ್ನ ಮುಂದಾಳತ್ವದಲ್ಲಿ ಗಂಡಸರನ್ನು ಮುನ್ನಡೆಸುವುದು ಅನೇಕ ಗಂಡಸರಿಗೆ ಒಪ್ಪಿಕೊಳ್ಳಲು ಕಷ್ಟ, ಅಸಾಧ್ಯ ಮತ್ತು ಕಿರಿಕಿರಿ. ನಾನು ನಮ್ಮ ಪರಿಸರ ಕಲಿಕೆ ಕಾರ್ಯಕ್ರಮಗಳಲ್ಲಿ, ಹೊರಾಂಗಣ ಚಟುವಟಿಕೆಗಳಲ್ಲಿ ಅಪಾಯ ನಿರ್ವಹಣಾ ಪ್ರಕ್ರಿಯೆಯನ್ನು, ಕ್ಷೇಮ ನಿರ್ವಹಣೆಯನ್ನು ಕಟ್ಟು ನಿಟ್ಟಾಗಿ ಹೇಳಿಕೊಡುತ್ತೀನಿ, ಎಲ್ಲರೂ ಅದನ್ನು ತಪ್ಪದೆ ಪಾಲಿಸಬೇಕೆಂದು ಹೇಳುತ್ತೀನಿ. ಇದು ಅನೇಕರಿಗೆ ಸಹಿಸಲಾಗುವುದಿಲ್ಲ. ಅವರಿಗೆ ಇಷ್ಟವಾಗುವುದಿಲ್ಲ. ಹೆಣ್ಣೊಬ್ಬಳು ತಮಗೆ ಸವಾಲೆಸಗುವಂತೆ ಅವರು ಅದನ್ನು ಸ್ವೀಕರಿಸುತ್ತಾರೆ. ಅವಳ ಮಾತನ್ನು ಯಾಕೆ ಕೇಳಬೇಕು ಎಂಬುದೇ ಅವರ ಗಮನ ಹೊರತು, ಯಾಕೆ ಅವರು ಆ ನಿಯಮಗಳನ್ನು ಪಾಲಿಸಬೇಕು ಎಂಬ ವಿವೇಚನೆ ಇರುವುದಿಲ್ಲ. ಕೊಳ್ಳುಬಾಕ ಸಂಸ್ಕೃತಿಯಿಂದ ಹೊರಾಂಗಣ ಚಟುವಟಿಕೆಗಳು ಬಹಳಷ್ಟು ಪೆಟ್ಟು ತಿನ್ನುತ್ತಿವೆ. ಪರಿಸರಸಂರಕ್ಷಣೆ ಎಂಬ ಪರಿಕಲ್ಪನೆಯನ್ನು ಮೂಡಿಸುವ ನನ್ನ/ನಮ್ಮ ಪ್ರಯತ್ನಕ್ಕೆ ಸಾಕಷ್ಟು ವಿರೋಧವನ್ನು ಒಡ್ಡುವ ಗಂಡಸರು ಅನೇಕರು. ಇದು ಧೂಮಪಾನರಹಿತ/ಮದ್ಯಪಾನ ನಿಷೇಧಿತ ಪ್ರದೇಶ, ಇಲ್ಲಿ ಕಸವನ್ನು ನಿರ್ದಿಷ್ಟ ಜಾಗದಲ್ಲಿ ಮಾತ್ರ ಚೆಲ್ಲಬೇಕು ಎನ್ನುವ ನಮ್ಮ ನಿಯಮಗಳಿಗೂ ಕೂಡ ಅವರು ತಡೆ ಒಡ್ಡಲು, ಕೀಟಲೆ ಮಾಡಲು, ದೂರು ಹೇಳಲು ಬರುತ್ತಾರೆ ಎನ್ನುವ ನೊಮಿತೋ ಮತ್ತೊಂದು ಘಟನೆಯನ್ನು ನನ್ನೊಂದಿಗೆ ಹಂಚಿಕೊಂಡರು.

Nomito 2
ಅಂಬಿಗಳು ನಾ ಎನ್ನುತ್ತಿರುವ ನೊಮಿತೋ

ಹಿಂದೊಮ್ಮೆ ಸುಮಾರು ೧೭-೧೮ ವಯಸ್ಸಿನ ೧೦ ಯುವಕರು ನಮ್ಮ ಚಾರಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದರು. ಎಲ್ಲರೂ ಯಾಣಕ್ಕೆ ಹೋಗುವ ಪ್ರಸಂಗ. ಅವರೆಲ್ಲರೂ ಅದೆಷ್ಟು ನಕಾರಾತ್ಮಕ (ನೆಗಿಟಿವ್) ಮನಸ್ಸನ್ನು, ಆಲೋಚನೆಯನ್ನು ತೋರಿದರು, ನನ್ನನ್ನು ಎಷ್ಟು ವಿರೋಧಿಸಿದರು ಎಂದರೆ ಆ ಕಾರ್ಯಕ್ರಮವನ್ನು ನಿರ್ವಹಿಸಲು ನನಗೆ ತುಂಬಾ ಕಷ್ಟವಾಯಿತು. ಕೇವಲ ನಾನು ಹೆಣ್ಣು ಎಂಬುದಕ್ಕೆ ಅವರು ಅಷ್ಟೊಂದು ಪ್ರತಿರೋಧವನ್ನು ಒಡ್ಡಿದರು. ಕಡೆಗೆ ನಾನು ನನ್ನ ಸಹಾಯಕರಿಗೆ ಅದನ್ನು ವಹಿಸಿಬೇಕಾಯಿತು. ಆ ಹುಡುಗರ ವರ್ತನೆಯಿಂದ ನನಗೆ ತುಂಬಾ ನೋವಾಯಿತು ಕೂಡ. ಕೆಲ ವರ್ಷಗಳ ನಂತರ ಅವರಲ್ಲಿ ಆರು ಮಂದಿ ಮತ್ತೆ ನಮ್ಮ ಕಾರ್ಯಕ್ರಮಕ್ಕೆ ಬಂದರು. ಆಗ ನಾನು ಒಬ್ಬೊಬ್ಬರ ಹತ್ತಿರವೂ ಪ್ರತ್ಯೇಕವಾಗಿ ಅವರು ಹಿಂದೊಮ್ಮೆ ಬಂದಿದ್ದಾಗ ಇದ್ದ ಅಥವಾ ಆದ ಸಮಸ್ಯೆಯಾದರೂ ಏನು, ಅವರು ಯಾಕಷ್ಟು ಸಮಸ್ಯೆ ಉಂಟು ಮಾಡಿದರು ಎಂದು ವಿಚಾರಿಸಿದೆ. ಆಗಲೂ ಹೊರಬಿದ್ದ ಸಂಗತಿಯೆಂದರೆ ಅವರಿಗೆ ಹೆಂಗಸೊಬ್ಬಳು ಅವರನ್ನು ಹೊರಾಂಗಣ ಪರಿಸರದಲ್ಲಿ, ಕಾಡು ಮೇಡುಗಳ ಚಾರಣದಲ್ಲಿ ಮುನ್ನಡೆಸುವುದು ಇಷ್ಟವಾಗಲಿಲ್ಲ, ಬೇಕಾಗಿಯೇ ಪ್ರತಿರೋಧ ಒಡ್ಡಿದರು ಎಂದು ಅವರೇ ಒಪ್ಪಿಕೊಂಡು ಹೇಳಿದರು.

 

“ಆದರೆ, ನಮ್ಮ ಕಾರ್ಯಕ್ರಮಕ್ಕೆ ಬರುವ ಎಲ್ಲಾ ಗಂಡಸರೂ ಹಾಗೇ ಇಲ್ಲ. ಒಂದು ದಿನ ಗುಂಪು ಹಂಚಿಕೆಯಲ್ಲಿ ಒಬ್ಬಾತ ತನ್ನ ಅಜ್ಜಿಯ ಬಗ್ಗೆ ಹೇಳಿದ ವಿಷಯ ಬಹಳ ಚೆನ್ನಾಗಿತ್ತು. ಅವನ ಅಜ್ಜಿ ಪ್ರತಿ ಬೇಸಗೆಯಲ್ಲೂ ತನ್ನ ಮೊಮ್ಮಕ್ಕಳಿಗೆ ಈಜು ಮತ್ತು ಸೈಕಲ್ ತುಳಿಯುವುದನ್ನು ಹೇಳಿಕೊಡಲು ಒಬ್ಬರನ್ನು ದುಡ್ಡು ಕೊಟ್ಟು ಗೊತ್ತು ಮಾಡಿದ್ದರು. ಆದ್ದರಿಂದ ನನಗೆ ಈಜು ಮತ್ತು ಸೈಕಲ್ ಸವಾರಿ ಕಲಿಯಲು ಆಯಿತು. ಆ ಅಜ್ಜಿಯ ಬಗ್ಗೆ ನನಗೆ ಬಹಳಾ ಹೆಮ್ಮೆ ಎಂದೂ ಆತ ಹೇಳಿದ.

ಮತ್ತೊಂದು ಕಾರ್ಯಕ್ರಮದಲ್ಲಿ ಮದುವೆಯಾದ ಹೆಣ್ಣೊಬ್ಬಳು ಬಂದಿದ್ದಳು. ಅವಳ ಗಂಡನಿಗೆ ದೈಹಿಕ ನ್ಯೂನತೆಯಿತ್ತು, ಕಾಲಿಗೆ ಎಂದು ನೆನಪು. ಅವಳು ನಮ್ಮ ಹೊರಾಂಗಣ ಚಟುವಟಿಕೆಗಳನ್ನು ಮುಗಿಸಿಕೊಂಡು ಹೊರಡುವಷ್ಟರಲ್ಲಿ ಬದಲಾದ ಹೆಣ್ಣಾಗಿದ್ದಳು. ಅವಳ ನಿರ್ಧಾರಗಳನ್ನು ಕೈಗೊಳ್ಳುವ ಸಾಮರ್ಥ್ಯ, ತನ್ನ ಯೋಚನೆಗಳನ್ನು ಅಳುಕಿಲ್ಲದೆ ಹೇಳುವ ಧೈರ್ಯ, ಅವಳ ಹಿಗ್ಗಿದ ಮನೋವಿಶ್ವಾಸ – ಅವೆಲ್ಲವೂ ಅವಳ ಗಂಡನ ಗಮನಕ್ಕೂ ಬಂತು. ಅವನೇ ಹೇಳಿದಂತೆ “ಮನೆಯಲ್ಲಿ ನನಗೊಬ್ಬಳು ಹೆಂಡತಿಯಷ್ಟೇ ಅಲ್ಲ, ಒಂದು ಸಂಪನ್ಮೂಲವೇ ಇದೆ.”

ಇಂತಹ ಪ್ರಸಂಗಗಳು ನೊಮಿತೋರ ಖಜಾನೆಯಲ್ಲಿ ಬಹಳಷ್ಟು ಇವೆ. ಅವರ ಈಗಿನ ಮತ್ತು ಮುಂದಿನ ಕನಸುಗಳೇನು, ಅವರ ಕಾರ್ಯಕ್ರಮಗಳು ಹೇಗೆಲ್ಲಾ ಮುಂದುವರೆಯಬೇಕು ಎಂದು ಅವರು ಯೋಜಿಸಿದ್ದಾರೆ?

ಅವರ ಈಗಿನ ಯಶಸ್ವಿ ಕಾರ್ಯಕ್ರಮವೆಂದರೆ ತಾಯಂದಿರು ಮತ್ತು ಅವರ ಮಾನಸಿಕವಾಗಿ ವಿವಿಧ ಸಾಮರ್ಥ್ಯವುಳ್ಳ ಮಕ್ಕಳಿಗಾಗಿ ನಡೆಸುವ ಹೊರಾಂಗಣ ಚಟುವಟಿಕೆಗಳು ಮತ್ತು ಪರಿಸರ ಕಲಿಕೆ. ಅಲ್ಲದೆ ಮಧ್ಯ ವಯಸ್ಕ ಮಹಿಳೆಯರನ್ನು ಇನ್ನೂ ಹೆಚ್ಚಾಗಿ ಹೊರಾಂಗಣಕ್ಕೆ, ಪ್ರಕೃತಿಯ ಮಡಿಲಿಗೆ ತರುವುದು ಅವರ ನೆಚ್ಚಿನ ಕಾರ್ಯಕ್ರಮ. ಅಲ್ಲದೇ, ತಮ್ಮ ಜೀವನದಲ್ಲಿ ಲೈಂಗಿಕ ಶೋಷಣೆಗೊಳಗಾದ ಹೆಂಗಳೆಯರನ್ನು, ದೈಹಿಕ ಅಂಗವಿಕಲತೆಯಿರುವವರ ಒಳಗೊಂಡ ಕಾರ್ಯಕ್ರಮಗಳೂ ನಡೆಯುತ್ತಿವೆ. ಪ್ರಕೃತಿಯ ಮಡಿಲಲ್ಲಿ ಅವರು ತಮ್ಮ ಅನುಭವಗಳನ್ನು ಒರೆಗೆ ಹಚ್ಚಿ, ಆಳವಾಗಿ ಒಳಅಲೋಚನೆ ಮಾಡಿ ಹೊಸ ಮಾನಸಿಕ ಶಕ್ತಿ ಪಡೆಯುತ್ತಾರೆ.

ನಾನಾ ತರಹದ ಹಿನ್ನಲೆಯುಳ್ಳ ಎಲ್ಲರಿಗೂ ಹೊರಾಂಗಣ, ಸಾಹಸ ಮತ್ತು ಪರಿಸರ ಚಟುವಟಿಕೆಗಳು ಅವಶ್ಯಕ. ನಮ್ಮೆಲ್ಲರಲ್ಲೂ ನೈಸರ್ಗಿಕ ಪ್ರಪಂಚ ಉತ್ತಮ ಪರಿವರ್ತನೆಯನ್ನು ಉಂಟು ಮಾಡುತ್ತದೆ. ನೈಸರ್ಗಿಕ ಪ್ರಪಂಚಕ್ಕೆ ತನ್ನದೇ ಆದ ಗುಣಕಾರಿ ಸ್ವಭಾವವಿದೆ, ಇದು ಮಾನವನಿಗೆ ನೈಸರ್ಗಿಕದತ್ತ ವರ, ನಿಸರ್ಗದಿಂದ ನಾವು ಬಲ ಪಡೆದುಕೊಂಡು ಆರೋಗ್ಯವಂತರಾಗುತ್ತೀವಿ. ನಾವು ಮನುಷ್ಯರು ಎಲ್ಲದರಲ್ಲೂ, ಎಲ್ಲದರ ಮೇಲೂ ನಿಯಂತ್ರಣವನ್ನು ಹೊಂದಿಲ್ಲ, ನಾವು ನೈಸರ್ಗಿಕ ಪ್ರಪಂಚದ ಹುಲ್ಲು ಕಡ್ಡಿಯ ಭಾಗವಷ್ಟೇ ಎಂಬುದರ ಅರಿವನ್ನು ಹೊರಾಂಗಣ ಪ್ರಪಂಚ ನಮಗೆ ಮಾಡಿಸಿ ಕೊಡುತ್ತದೆ. ಆಗ ನಮ್ಮ ಚಿಪ್ಪಿನಿಂದ ಹೊರಬಂದು ನಾವು ಉತ್ತಮ ಮಟ್ಟದಲ್ಲಿ ಎಲ್ಲದರ ಜೊತೆ ಸಂಬಂಧವನ್ನು ಮತ್ತು ಸಂಪರ್ಕವನ್ನು ಪಡೆಯುತ್ತೀವಿ.

ಅದರಲ್ಲೂ ಮಹಿಳೆಯರು ಹೊರಾಂಗಣ ಚಟುವಟಿಕೆಗಳಿಂದ ತಮ್ಮ ಒಳಿತಿಗಾಗಿ ವ್ಯಕ್ತಿತ್ವವನ್ನೇ ಮಾರ್ಪಡಿಸಿಕೊಳ್ಳುವ ಅವಕಾಶಗಳು ಬೇಕಷ್ಟಿವೆ. ಇಂತಹ ಕಾರ್ಯಕ್ರಮಗಳನ್ನು ಸಾಂಸ್ಥಿಕವಾಗಿಸಬೇಕಿದೆ. ಶಾಲೆಗಳಷ್ಟೇ ಅಲ್ಲ, ಮಹಿಳೆಯರು ಕೆಲಸ ಮಾಡುವ ಸಂಸ್ಥೆಗಳು, ಸರ್ಕಾರಗಳು ಕೂಡ ಮಹಿಳೆಯರು ಹೆಚ್ಚಾಗಿ ಪರಿಸರ ಕಲಿಕೆ, ಹೊರಾಂಗಣ ಚಟುವಟಿಕೆಗಳು ಮತ್ತು ಸಾಹಸ ಕ್ರೀಡೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಬೇಕು, ಅದಕ್ಕೆ ಬೇಕಾದಂತೆ ಅನುವು ಮಾಡಿ ಕೊಡಬೇಕು.

Nomito 3
ಹೊನ್ನೆ ಮರಡಿನ ಸುಂದರ ಖಾಸಗಿ ಕ್ಷಣದಲ್ಲಿ ತಲ್ಲೀನೆವಾಗಿರುವ ನೊಮಿತೊ

ಮಹಿಳೆಯರು ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸಿದಾಗ ಅವರಿಗಷ್ಟೇ ಅಲ್ಲ, ಅವರ ಮಕ್ಕಳು, ಕುಟುಂಬಗಳೂ ಕೂಡ ಅದರಿಂದ ಲಾಭ ಪಡೆಯುತ್ತವೆ. ಹೆಣ್ಣಿನ ಮನೋದಾರ್ಢ್ಯ, ಆತ್ಮ ವಿಶ್ವಾಸ, ಧೈರ್ಯಗಳು ಕುಟುಂಬದ ಮೇಲೆ ಬಹಳಷ್ಟು ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ನಮ್ಮ ಭಾರತೀಯ ಹೆಂಗಸರು ಅನೇಕ ವಿವಿಧ ಕೆಲಸಗಳನ್ನು ಒಂದೇ ಸಮಯಕ್ಕೆ ಮಾಡುತ್ತಿರುತ್ತಾರೆ. ಮನೆಯ ಒಳಗೆ ಮತ್ತು ಹೊರಗೆ ಎರಡೂ ಕಡೆ ದುಡಿದರೂ ಹೆಣ್ಣು ಎಂಬ ಪಡಿಯಚ್ಚಿನ ಆಘಾತದಲ್ಲಿರುತ್ತಾರೆ. ನಮ್ಮ ಹೆಂಗಸರಿಗೆ ಅವರದೇ ಆರೋಗ್ಯಕ್ಕೆ, ಯೋಗಕ್ಷೇಮಕ್ಕೆ ಇಂತಹ ಪರಿಸರ ಕಲಿಕೆ, ಹೊರಾಂಗಣ ಚಟುವಟಿಕೆಗಳು ಅತ್ಯಗತ್ಯ, ಎನ್ನುವುದು ನೊಮಿತೋ ರ ನಿಲುವು.

ಹೀಗೆ ತಮ್ಮ ಹೊರಾಂಗಣ, ಪರಿಸರ ಕಲಿಕೆ, ಸಾಹಸ ಕ್ರೀಡೆಗಳು, ಚಟುವಟಿಕೆಗಳಲ್ಲಿ ಭಾಗವಹಿಸುವವರು ತಮ್ಮ ದಿನನಿತ್ಯದ ಜೀವನದಲ್ಲಿ ನೈಸರ್ಗಿಕ ಪ್ರಪಂಚ ನಮಗೆ ಕೊಡುವ ಸಂದೇಶಗಳನ್ನು, ಪಾಠಗಳನ್ನು ಅಳವಡಿಸಿಕೊಂಡು ಶಾಂತಿಯಿಂದ ಸಹಬಾಳ್ವೆಯಿಂದ ಬದುಕಿದರೆ ಅದು ನನಗೆ, ನಮ್ಮ ಸಂಸ್ಥೆಗೆ ಅತ್ಯಂತ ಸಂತೋಷವನ್ನು, ತೃಪ್ತಿಯನ್ನು ಕೊಡುತ್ತದೆ, ಅನ್ನುತ್ತಾರೆ ನೊಮಿತೋ.

ನಮ್ಮ ವಿಶೇಷತೆಯೆಂದರೆ ನಗರಗಳಿಂದ ನಮ್ಮಲ್ಲಿಗೆ ಬರುವವರು ಈ ಮಲೆನಾಡು ಪ್ರದೇಶದ ಸ್ಥಳೀಯರೊಂದಿಗೆ, ಬುಡಕಟ್ಟು ಜನರ ಜೊತೆ ಮಿಳಿತು ಅವರ ಜೀವನ, ಸಂಸ್ಕೃತಿಗಳ ಪರಿಚಯ ಮತ್ತು ಸ್ಥಳೀಯ ನಿಸರ್ಗ-ಸಂಬಂಧಿತ ಜೀವನಕ್ರಮದ ಬಗ್ಗೆ ತಿಳಿದುಕೊಂಡು ಅವರೊಂದಿಗೆ ಬೆಸುಗೆ ಹಾಕಿಕೊಳ್ಳುತ್ತಾರೆ. ಹಾಗೆ, ಸ್ಥಳೀಯರಿಗೆ ನಾವು ನಾನಾ ತರಹದ ತರಬೇತಿಗಳನ್ನು ಕೊಟ್ಟು ಅವರು ಹೊರಾಂಗಣ ಮತ್ತು ಸಾಹಸ ಚಟುವಟಿಕೆಗಳ ಕ್ಷೇತ್ರದಲ್ಲಿ, ತಮ್ಮದೇ ಆದ ಸಾಂಸ್ಕೃತಿಕ ಕಲೆಗಳನ್ನು, ಕುಲ ಕಸುಬನ್ನು ಉಪಯೋಗಿಸಿಕೊಂಡು ಸ್ವಂತ ಉದ್ಯೋಗ, ಉದ್ದಿಮೆಗಳನ್ನು, ಕೆಲಸವನ್ನು ಪಡೆಯುವಂತೆ ಸಹಾಯ ಮಾಡಿದ್ದೀವಿ. ಅವರಲ್ಲಿ ದೈಹಿಕವಾಗಿ ವಿವಿಧ ಸಾಮರ್ಥ್ಯ ಪಡೆದವರ ಗುಂಪೂ ಸೇರಿದ್ದಾರೆ. ಎರಡೂ ನಿಟ್ಟಿನಲ್ಲಿ ನಗರದವರು ಮತ್ತು ಸ್ಥಳೀಯರು ಪ್ರಯೋಜನ ಪಡೆದಿದ್ದಾರೆ.

ಹಿಂದೆ ಅವರಲ್ಲಿಗೆ ಬರುತ್ತಿದ್ದ ಶಾಲಾ ಮಕ್ಕಳು ಈಗ ಬೆಳೆದು ದೊಡ್ಡವರಾಗಿ ಅವರೇ ಕೆಲವರು ತಮ್ಮದೇ ಹೊರಾಂಗಣ ಕಲಿಕಾ ಸಂಸ್ಥೆಗಳನ್ನು ಆರಂಭಿಸಿ ನಡೆಸುತ್ತಿದ್ದಾರೆ. ಆಗಿನ ಪುಟ್ಟ ಹೆಣ್ಣು ಮಕ್ಕಳಲ್ಲಿ ಕೆಲವರು ಈಗ ಭಾರತದ ಹೊರಾಂಗಣ ಕಲಿಕೆ ಮತ್ತು ಸಾಹಸ ಕ್ರೀಡೆಗಳ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ನಾನು ಕೆಲವರ ಹೆಸರುಗಳನ್ನು ಹೇಳಿದಾಗ ನೊಮಿತೋ “ಹೌದು ಹೌದು, ಅವರೆಲ್ಲಾ ನಮ್ಮ ಸಂಸ್ಥೆಯಿಂದಲೇ ತರಬೇತಿ ಹೊಂದಿದವರು, ನಾವಂತೂ ಗಟ್ಟಿಯಾಗಿ ಇಲ್ಲೇ ಇದ್ದೀವಿ,” ಎಂದು ನಗುತ್ತಾರೆ.

ಮುಂದಿನ ಬಾರಿ ಕನ್ನಡದ ಮಡಿಲಿಗೆ ಮರಳಿದಾಗ ಒಮ್ಮೆ ಹೊನ್ನೆ ಮರಡಿಗೆ ಹೋಗಿ ನೊಮಿತೋರನ್ನ ಮಾತನಾಡಿಸಿ ಬನ್ನಿ !

7 thoughts on “ಹೊರಾಂಗಣದಲ್ಲಿ ಹೆಣ್ಣು – ಕರ್ನಾಟಕದ ನೊಮಿತೋ ಕಾಂದಾರ್ – ಡಾ. ವಿನತೆ ಶರ್ಮ

 1. ಇತ್ತೀಚೆಗೆ ತುಮಕೂರಿನಿಂದ ಹೊರಟು ಹತ್ತಿರದ ಸಿದ್ದ್ದರ ಬೆಟ್ಟ್ಟವನ್ನು ಹತ್ತಿದ ತಂಡದಲ್ಲಿ ಮಹಿಳೆಯರೇ ಬಹಳಷ್ಟಿದ್ದರು. ಪತಿಯೊಡನೆ ಬಂದವರು ಬಹಳ ಜನ. ಸಾಹಸದ ಗಾಳಿ ಎಲ್ಲೆಡೆಯಲ್ಲೂ ಬೀಸುತ್ತಿರುವ ಒಂದು ಉದಾಹರಣೆಯಿದು. ನೊಮಿತೊ ಅಂತಹ ಮಹಿಳೆಯರಿಗಿರುವ ಧೈರ್ಯ, ಸಾಧಿಸುವ ಸ್ಟೈರ್ಯ ಇತರ ಮಹಿಳೆಯರಿಗೆ ಮಾದರಿ ಮತ್ತು ಆದರ್ಶ. ಆಕೆಯ ಬಾಲ್ಯ, ತರಬೇತಿಗಳ ಬಗ್ಗೆಯೂ ತಿಳಿಯುವ ಕುತೂಹಲ ಲೇಖನ ಓದಿದಾಗ ಮೂಡಿಬಂತು. ” ಹೆಣ್ಣುಮಕ್ಕಳಿಗೆ ಇದೆಲ್ಲ ಯಾಕೆ ಬೇಕು? ” ಅನ್ನುವ ಮನೋಭಾವ ಕಡಿಮೆಯಾಗುತ್ತಿರುವುದು ನಿಜವಾದ ಪ್ರಗತಿಯೆಂದು ಹೇಳಬಹುದು.

  Liked by 1 person

 2. ವಿನತೆಯವರೇ,

  ೧೯೯೨-೧೯೯೬ ರ ಪ್ರತಿ ವರ್ಷವೂ, ಕನಿಷ್ಟ ೨-೩ ಚಾರಣಗಳಿಗೆ ಹೋಗಿದ್ದೇನೆ.ಹಾಗಾಗಿ ಅದರ ಅನುಭವ ಏನೆಂದು ನನಗೆ ಚೆನ್ನಾಗಿ ಗೊತ್ತು. ಆಗ ಯಾಣ ಕ್ಕೆ ಕಾಲುದಾರಿಯಿರಲಿಲ್ಲ. ಕುಮಾರಪರ್ವತದ ಶಿಖರ ಮುಟ್ಟಲು ಕಾಡಿನ ಮೂಲಕವೇ ಹೋಗಬೇಕಿತ್ತು. ಪುಷ್ಪಗಿರಿ, ಯಡಕುಮೇರಿ, ಜೇನುಕಲ್ಲು ಗುಡ್ಡ, ಊಟಿಯ ಪರ್ವತಗಳು ಹೀಗೆ ಹುಡುಕಿಕೊಂಡು ಹಲವಾರು ದಿನಗಳ ಕಾಲುನಡಿಗೆಯಲ್ಲಿ ಸಾಗಿ, ಶಿಖರಗಳಲ್ಲಿ ಬೆಂಕಿಯ ಸುತ್ತ ಮಲಗಿದರೆ, ಯಾವ ಕಾಡು ಪ್ರಾಣಿ ಬೇಕಾದರೂ ಬರಲಿ ನನಗೇನು ಎನ್ನುವಷ್ಟು ನಿದ್ದೆ.ಆನೆಗಳು, ಹುಲಿಯ ಹೆಜ್ಜೆ, ಕೊಳಕುಮಂಡಲ, ಕಾಳಿಂಗ ಸರ್ಪ, ಹಸಿರು ಹಾವು, ಕೇರೆ ಹಾವುಗಳ ನಡುವೆ ಇದ್ದುಬಂದಿದ್ದೇನೆ. ಹೆಸರೇ ಕೇಳಿಲ್ಲದ ಜಲಪಾತಗಳಲ್ಲಿ ಮಿಂದು, ನೀರಿನ ಹೊಂಡಗಳಲ್ಲಿ ಏನಿದೆ ಎಂದು ನೋಡದೆ ನೆಗೆದು ಈಜಿದ್ದೇನೆ. ಸ್ವರ್ಗ ಸದ್ರುಶವಾದ ಅನುಭವ ಅಂತ ಹೇಳಬಹುದು. ಸಣ್ಣಬುದ್ದಿಯ ಈ ಲೋಕದಿಂದ ತಪ್ಪಿಸಿಕೊಂಡು ಕಾಡಲ್ಲಿ ಕಾಡಾಗಿ ಕಲೆದ ಆ ದಿನಗಳು ಇವತ್ತು ಮತ್ತೆ ಸಿಗಲಾರವು. ಆದರೆ ಅದರ ನೆನಪು ಮಾತ್ರ ಇಂದಿಗೂ ಮೈನವಿರೇಳಿಸುತ್ತದೆ
  ಹೊನ್ನೆಮರಡು ಹೊಸದಲ್ಲ. ಅಲ್ಲಿ ನೀರಿನ ಚಟುವಟಿಕೆಗಳಿಗೆ ಆದ್ಯತೆ. ಇನ್ನೊಂದು ಬಗೆಯ ಸೌಂದರ್ಯ.ಕಾಡಿನ ಚೆಲುವಿನ ಮುಂದೆ ಸೌಕರ್ಯಗಳಿಂದ ಕೂಡಿದ ಹೊನೆಮರಡು ಭಾರೀ ದೂರ. ಆದರೆ ಅದನ್ನೂ ಬಿಟ್ಟಿಲ್ಲ. ಪ್ರತಿ ಚಾರಣದ ಬಗ್ಗೆಯೂ ಪತ್ರಿಕೆಗಳಲ್ಲಿ ಸ್ವಾನುಭವದ ಲೇಖನಗಳನ್ನು ತಪ್ಪದೇ ಬರೆದಿದ್ದೇನೆ.ಅದನ್ನೆಲ್ಲ ಮತ್ತೆ ನೆನಪಿಸುವ ಲೇಖನ ಬರೆದದ್ದಕ್ಕೆ ಮತ್ತು ನಮಿತೋರ ಪರಿಚ ಮಾಡಿಕೊಟ್ಟದ್ದಕ್ಕೆ ಧನ್ಯವಾದಗಳು.

  Liked by 1 person

 3. ಲೇಖನಕ್ಕೆ ಪ್ರೋತ್ಸಾಹದಾಯಕವಾಗಿ ಪ್ರತಿಕ್ರಿಯಿಸಿದ ನಿಮ್ಮೆಲ್ಲರಿಗೂ ನನ್ನ ಕೃತಜ್ಞತೆಗಳು. ಹೊನ್ನೆ ಮರಡುವುಗೆ ಹೊರಡುವ ಮುನ್ನ ದಯವಿಟ್ಟು ನೊಮಿತೋರನ್ನ ಸಂಪರ್ಕಿಸಿ – ೯೪೪೯೦೦೪೭೪೮.

  Like

 4. ವಿನತೆ ಭಾರೀ ಸೊಗಸಾದ ನಿರೂಪಣೆ. ನೊಮಿತೋ ಮತ್ತೊಮ್ಮೆ ಅನಾವರಣಗೊಂಡಂತೆ. ಹೊನ್ನೆಮರಡುವಿನ ಸುತ್ತಮುತ್ತ ನೊಮಿತೊ ಜೊತೆ ಅಡ್ಡಾಡಿದ ಅನುಭವವಾಯ್ತು.

  Liked by 1 person

 5. ವಿನುತೆ ಇನ್ನೆರಡು ವಾರದಲ್ಲಿ ನಾವು ಸಂಸಾರ ಸಮೇತ ಬೆಂಗಳೂರಿಗೆ ಹೋಗುತ್ತಿದ್ದೇವೆ. ನಿಮ್ಮ ಲೇಖನ ಓದಿದ ನಂತರ ನಮ್ಮ ಮಕ್ಕಳನ್ನು ಈ ನೊಮಿತೋ ಅವರ ಹೊನ್ನೆ ಮರಡಿಗೆ ಕರೆದೊಯ್ಯಲು ನಿರ್ಧರಿಸಿದ್ದೇನೆ. ಆದರೆ ಈಗ ಅಲ್ಲಿ ಬಹಳ ಮಳೆಯಾಗುತ್ತಿದೆ ಎಂದು ಓದಿದೆ. ಆದರೂ ಪರವಾಗಿಲ್ಲ, ನೊಮಿತೋ ಅವರನ್ನು ಭೇಟಿ ಮಾಡಿ ಬರುತ್ತೇನೆ. ನಿಮ್ಮ ಲೇಖನ ನೂರಾರು ಮಹಿಳೆಯರನ್ನು ಹೊರಾಂಗಣದ ಚಟುವಟಿಕೆಗಳಲ್ಲಿ ಭಾಗವಹಿಸಲು ಹುಮ್ಮಸ್ಸು ನೀಡುವುದರಲ್ಲಿ ಸಫಲವಾಗುತ್ತದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಹೆಣ್ಣು ಮಕ್ಕಳಿಗೆ ನಮ್ಮ ಸಮಾಜದಲ್ಲಿದ್ದ ಕಟ್ಟುಪಾಡುಗಳು ಇನ್ನಾದರೂ ಮಾಯವಾಗಲಿ. ನಾವೆಲ್ಲಾ ಇದರ ಕಬಂಧ ಬಾಹುಗಳಲ್ಲಿ ಸಿಲುಕಿ, ನಮ್ಮ ಜೀವನದ ಉತ್ತಮ ಘಳಿಗೆಗಳನ್ನು ನಷ್ಟಗೊಳಿಸಿದ್ದೇವೆ. ಆದರೆ ಈಗ ಮಹಿಳೆಯರು ತಮ್ಮ ಇಳಿವಯಸ್ಸಿನಲ್ಲಿ ಈ ಹೊನ್ನೆಮರಡಿಯಲ್ಲಿ ಹೊರಾಂಗಣ ಚಟುವಟಿಕೆಯಲ್ಲಿ ಭಾಗವಹಿಸಿ ತಮ್ಮ ಮನದ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಹಳ ಸಂತೋಷವಾಯಿತು. ನೊಮಿತೋ ಅವರಿಗೆ ನನ್ನ ಅನೇಕಾನೇಕ ನಮಸ್ಕಾರಗಳು. ಅವರನ್ನು ಸಂದರ್ಶಿಸಿ, ಈ ಸ್ಥಳದ ಬಗ್ಗೆ ಬರೆದು ನಮಗೆ ಮಾಹಿತಿ ನೀಡಿದ ನಿಮಗೂ ಬಹಳ ಧನ್ಯವಾದಗಳು. ಹೀಗೆ ನಿಮ್ಮ ವೈಷಿಷ್ಟ್ಯಪೂರ್ಣ ಲೇಖನಗಳನ್ನು ನಮಗೆ ನೀಡುತ್ತಿರಿ ಎಂದು ಆಶಿಸುತ್ತೇನೆ.
  ಉಮಾ ವೆಂಕಟೇಶ್

  Liked by 2 people

 6. ಒಬ್ಬ ಧಾಡಸಿ, ಅದ್ಭುತ ವ್ಯಕ್ತಿತ್ವದ ನೋಮಿತಾ ಕಾಂದಾರ್ ಅವರ ಪರಿಚಯ ಮಾಡಿಸಿಕೊಟ್ಟ ವಿನತೆಯವರಿಗೆ ಅಭಿನಂದನೆಗಳು. ನೋಮಿತೋ ಅವರ ಬಗ್ಗೆ ಗೊತ್ತೇ ಇರದ ನನ್ನಂಥವರಿಗೂ ಇದು ಹೆಮ್ಮೆಯ ವಿಷಯ. Back to the Nature ಎಂದು ಕೆಲಸ ಮಾಡಿ ಅದರಲ್ಲಿ ತೊಡಗಿಸಿಕೊಳ್ಳಲು ಅನೇಕರನ್ನು ಹುರಿದುಂಬಿಸಿರಿವ multi-tasking woman ಎಂಥ ಶ್ಲಾಘನೀಯ ಕೆಲಸ ಮಾಡುತ್ತಿದ್ದಾರೆ ಎಂದು ಪರಿಚಯ ಮಾಡಿಕೊಡಲು ಹೊರಾಂಗಣ ಚಟುವಟಿಕೆಗಳಲ್ಲಿ ಪಾರಂಗತರೆಂದು ’ಅನಿವಾಸಿ’ ಓದುಗರಿಗೆ ಈಗಾಗಲೇ ಪರಿಚಿತರಾದ ವಿನತೆಯವರೇ ಬೇಕಾಯಿತು. ಹೊನ್ನೆ ಮರಡು ಕೈ ಬೀಸಿ ಕರೆದಂತಾಯಿತು. ಹೋಗುವ ಆಸೆ ಕುದಿರಿಸಿದಿರಿ. ಧನ್ಯವಾದಗಳು!

  Liked by 1 person

 7. ವಿನತೆ ಶರ್ಮಾ ಅವರ ಹೊರಾಂಗಣದಲ್ಲಿ ಹೆಣ್ಣು ತುಂಬಾ ಮಾಹಿತಿಪೂರ್ಣ ಸಕಾಲಿಕ ಲೇಖನ .ಈ ನಗರೀಕರಣದಿಂದಾಗಿ ನಿಸರ್ಗದಿಂದ ದೂರವಾಗುತ್ತಿರುವ ಮಾನವ ಈ ಹೊರಾಂಗಣ ಕ್ರೀಡೆ ,ಸಾಹಸಗಳಿಂದಾಗಿ ನಿಸರ್ಗಕ್ಕೆ ಹತ್ತಿರವಾಗ ಬಯಸುತ್ತಿದ್ದಾನೆ.ನಿಸರ್ಗದ ಮಡಿಲಲ್ಲಿ ನಮ್ಮ ಅಲ್ಪತೆಯ ಅರಿವಾಗಿ ಕಣ್ತೆರೆದು ಹೊರಜಗ ನೋಡಿದಾಗ ತಿಳಿವು ಆಳವಾಗಿ ವ್ಯಕ್ತಿತ್ಪ ಬೇರೆಯೇ ಹರಿವನ್ನೂ ಪಡೆಯುವುದು.ವಿಶೇಷವಾಗಿ ಹೆಣ್ಣಿನ ಆತ್ಮಸ್ಥೈರ್ಯ ,ಆತ್ಮವಿಶ್ವಾಸ ಹೆಚ್ಚುವುದು ಸಾಹಸಕ್ರೀಡೆಗಳಲ್ಲಿಪಾಲ್ಗೊಂಡಾಗ.ಈಗ ಮೂರು ದಶಕಗಳ ಹಿಂದೆಯೇ ಸಂಪ್ರದಾಯದ ,ಮನೆಯವರ ಅಡೆತಡೆಗಳನ್ನ ಎದುರಿಸಿ ತನ್ನನ್ನು ಹೊರಾಂಗಣ ಸಾಹಸಗಕ್ರೀಡಕ್ರೀಡೆಗಳಲ್ಲಿ ತೊಡಗಿಸಿಕೊಂಡು ಅನೇಕ ಜನರಿಗೆ ,ವಿಶೇಷವಾಗಿ ಹೆಣ್ಣುಮಕ್ಕಳಿಗೆ ತರಬೇತಿ ನೀಡುವ ನೋಮಿತಾ ಕಾಂದಾರ ಕರ್ನಾಟಕಎಂಬಎಂಬುದು ಕನ್ನಡಿಗರಾದ ನಮ್ಮ ಹೆಮ್ಮೆ.ಈ ವಿಷಯಗಳನ್ನ ವಿಸ್ತೃತವಾಗಿ ಸುಂದರವಾಗಿ ತಮ್ಮ ಲೇಖನದಲ್ಲಿ ಮೂಡಿಸಿರುವ ವಿನತೆಯವರು ನಿಜಕ್ಕೂ ಧನ್ಯವಾದಗಳಿಗೆ ಭಾಜನರು.
  ಸರೋಜಿನಿ ಪಡಸಲಗಿ ,

  Liked by 2 people

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.