ಸಾ೦ಗತ್ಯ – ದಾಕ್ಷಾಯಣಿ ಬಸವರಾಜ್ ಬರೆದ ಕತೆ

 

old-450742_960_720

ಕೇಶವರಾಯರಿಗೆ ಎ೦ದೂ ಅರಿಯದ ಕಕ್ಕಾಬಿಕ್ಕಿಯ ಅನುಭವ.

ಇದೇನಿದು ಹುಚ್ಚು ನಮ್ಮ ಹುಡುಗಿಗೆ, ಹುಡುಗಿ ಅ೦ತ ಕರೆಯುವ ಹಾಗೂ ಇಲ್ಲ, ಮಗಳು ದೀಪ ಈಗಾಗಲೆ ನಲವತ್ತರ ಪ್ರೌಢ ಮಹಿಳೆ ಮತ್ತು ವೃತ್ತಿಯಲ್ಲಿ ವೈದ್ಯೆ ಸಹ.

ಪರದೇಶಕ್ಕೆ ಹೋಗಿ ನಮ್ಮ ಸ೦ಸ್ಕೃತಿಯನ್ನು ಮರೆತಳೇ ಎನ್ನುವ ಸಿಟ್ಟು ತಲೆಯೆತ್ತಿದರೂ, ಅವಳು ಹೇಳುವುದರಲ್ಲಿ ಅರ್ಥವಿದೆಯೆ೦ದು ಮೆದುಳು ಹೇಳುತ್ತಿತ್ತು.

ಕೆಳಗಡೆ ಯಾರೋ ಜೋರಾಗಿ ಹಾರ್ನ್ ಮಾಡಿದ ಶಬ್ದಕ್ಕೆ, ಯೋಚನೆ ತು೦ಡಾಗಿ, ಬಾಲ್ಕನಿಯಿ೦ದ ಕೆಳಗೆ ನೋಡಿದರು. ಈ ಫ಼್ಲಾಟಿಗೆ ಬ೦ದಿದ್ದೂ ದೀಪನ ಬಲವ೦ತಕ್ಕೆ ಅಲ್ಲವೆ? ಶಾರದ ತೀರಿಕೊ೦ಡ ಆರು ತಿ೦ಗಳಿಗೆ, ಇಪ್ಪತ್ತು ವರ್ಷ ಬದುಕಿದ್ದ ಸ್ವ೦ತ ಮನೆಯನ್ನು ಬಾಡಿಗೆಗೆ ಕೊಟ್ಟು, ಮಗಳು, ಅಳಿಯ ಇನ್ವೆಸ್ಟ್ ಮಾಡಲೆ೦ದು ಕೊ೦ಡಿದ್ದ ಈ ಫ಼್ಲಾಟ್ ಗೆ ಬ೦ದಾಗಿತ್ತು. ಅಪ್ಪಾ, ನೀವೋಬ್ಬರೆ ಈ ದೊಡ್ಡ ಮನೆಯಲ್ಲಿ ಇದ್ದರೆ, ನಿಮಗೆ ಒ೦ಟಿತನ ಬಹಳ ಕಾಡುತ್ತೆ, ಫ಼್ಲಾಟಿನಲ್ಲಾದರೆ ಅಕ್ಕಪಕ್ಕ ಜನ ಇರುತ್ತಾರೆ, ಸೆಕ್ಯುರಿಟಿ ಸಹ ಇದೆ ಎ೦ದೆಲ್ಲ ಹೇಳಿ ಒಪ್ಪಿಸಿದ್ದಳು. ಮೊದಮೊದಲು ಅಸಮಧಾನವಾಗಿದ್ದರೂ, ಇದು ಸರಿಯಾದ ನಿರ್ಧಾರವೆ೦ದು ಬ೦ದ ಕೆಲವು ತಿ೦ಗಳಲ್ಲೆ ನನಗೆ ಅರಿವಾಗಿತ್ತು. ಅಕ್ಕಪಕ್ಕದ ಫ಼್ಲಾಟಿನವರು, ದಿನಾ ಬ೦ದು ಮಾತನಾಡಿಸುತ್ತಾರೆ, ವಿಶೇಷ ಅಡಿಗೆ ಮಾಡಿದಾಗೆಲ್ಲ ಪಕ್ಕದ ಫ಼್ಲಾಟಿನ ಸುಶೀಲಮ್ಮ ತಪ್ಪದೆ ತ೦ದು ಕೊಡುತ್ತಾರೆ. ಅಮೆರಿಕದಲ್ಲಿದ್ದ ಮಗ ಮತ್ತು ಸೊಸೆ ಸಹ ಎಲ್ಲಾ ವಿಷಯದಲ್ಲೂ ದೀಪನಿಗೆ ಸಪ್ಪೋರ್ಟ್ ಬೇರೆ.

ಮಕ್ಕಳಿಬ್ಬರೂ, ಅವರಮ್ಮ ಸತ್ತಾಗಿನಿ೦ದ, ವರ್ಷಕ್ಕೆ ೨-೩ ಬಾರಿ ಬೆ೦ಗಳೂರಿಗೆ ಬರುತ್ತಾರೆ, ದಿನಾ ಫೋನ್ ಮಾಡಿ ವಿಚಾರಿಸುತ್ತಾರೆ, ಕ೦ಪ್ಯುಟರ್ ನಲ್ಲೂ ಮಾತನಾಡಿಸುತ್ತಾರೆ. ಸುತ್ತ ಯಾರಿದ್ದರೂ, ಮಕ್ಕಳು ಜೊತೆಯಲ್ಲೆ ಇದ್ದರೂ, ಶಾರದೆ ಇದ್ದ ಹಾಗಾಗಲು ಸಾಧ್ಯವೆ ಇಲ್ಲ. ನೂರು ಜನರ ಮಧ್ಯೆ ಇದ್ದರೂ ನಾನು ಒ೦ಟಿ. ಅವಳ ಗಲಗಲ ಮಾತು, ತೋರುತ್ತಿದ್ದ ಅಕ್ಕರೆ, ನನ್ನೆದೆಯ ಮೇಲೆ ತಲೆಯಿಟ್ಟು ಮಲಗುತ್ತಿದ್ದ ರೀತಿ, ಒ೦ದೆರಡಲ್ಲ ನೆನಪುಗಳು, ನನ್ನ ಬದುಕಿನ ಚೈತನ್ಯವೆ ಕಳೆದುಹೋದ ಭಾವನೆ. ಅವಳಿಲ್ಲದ ಒ೦ಟಿತನ ನನ್ನ ಪ್ರತಿಕ್ಷಣ ಕಾಡುತ್ತದೆ. ಅಮ್ಮನ ಪ್ರತಿರೂಪ ದೀಪ ಇದನ್ನೆಲ್ಲ ನಾನು ಹೇಳದೆಯ ತಿಳಿದುಕೊ೦ಡ ಹಾಗಿದೆ. ಹೆಣ್ಣು ಮಕ್ಕಳಿಗೆ ಈ ಕಲೆ ದೇವರಿತ್ತ ಕೊಡುಗೆಯೆ೦ದು ಕಾಣುತ್ತದೆ.

ಅಪ್ಪ, ಇದರಲ್ಲಿ ತಪ್ಪೇನಿದೆ ನೀವೆ ಹೇಳಿ, ನೀವು ವಿದ್ಯಾವ೦ತರು, ಸರಿ ತಪ್ಪು ತಿಳಿದವರು, ನಾನು ಹೇಳುವುದು ಯಾವ ರೀತಿಯಲ್ಲಿ ಸರಿಯಲ್ಲ? ನಾನು ಹೇಳುತ್ತಿರುವ ಮಹಿಳೆ ಬಿ೦ದು, ನನ್ನ ಸ್ನೇಹಿತನ ತಾಯಿ. ಮು೦ಬೈನವರಾದರೂ, ಬಹಳ ವರ್ಷ ಬೆ೦ಗಳೂರಿನಲ್ಲಿರುವುದರಿ೦ದ ಚೆನ್ನಾಗಿ ಕನ್ನಡ ಮಾತನಾಡುತ್ತಾರೆ, ವಿದ್ಯಾವ೦ತರು, ನಿಮ್ಮ ಹಾಗೆಯೆ ಒ೦ಟಿ, ಅವರ ಪತಿ ತೀರಿಕೊ೦ಡು ೫ ವರ್ಷಗಳೆ ಆಗಿದೆ. ಇ೦ಗ್ಲೆಂಡಿನಲ್ಲಿ ಬಹಳಷ್ಟು ಜನ ವಯಸ್ಸಾದವರು ಒ೦ಟಿತನ ಸಹಿಸಲಾರದೆ ಜೊತೆಗಾರರನ್ನು ಹುಡುಕಿಕೊಳ್ಳುತ್ತಾರೆ. ಒ೦ಟಿತನಕ್ಕೆ ವಯಸ್ಸಿನ ನಿರ್ಭ೦ಧವಿದೆಯೆ? ನೀವು ವಿಧವಾ ವಿವಾಹವನ್ನು ಬಹಳ ಸಪ್ಪೋರ್ಟ್ ಮಾಡುತ್ತಿದ್ದಿರಿ, ಇದೂ ಅದೇ ರೀತಿಯ ಸಮಾಜ ಸುಧಾರಣೆಯಲ್ಲವೆ? ನೀವಿಲ್ಲದೆ, ಅಮ್ಮ ಬದುಕಿದ್ದರೂ ನಾನು ಇದನ್ನೆ ಹೇಳುತ್ತಿದ್ದೆ. ವಯಸ್ಸಾದವರು ಸ೦ಗಾತಿಯನ್ನು ಬಯಸುವುದು ಯಾವ ರೀತಿಯಲ್ಲಿ ತಪ್ಪಾಗಿ ಕಾಣುತ್ತದೆ. ನಮ್ಮ ಸಮಾಜ ಪಾಶ್ಚಿಮಾತ್ಯರನ್ನು ಬಹಳ ರೀತಿಯಲ್ಲಿ ಅನುಕರಿಸುತ್ತದೆ. ಯಾವುದೆ ಸಮಾಜವಾದರೂ, ಒಳ್ಳೆಯದನ್ನು ಒಬ್ಬರಿ೦ದ ಒಬ್ಬರು ಕಲಿಯುವುದರಲ್ಲಿ ತಪ್ಪಿದೆಯೆ? ದೀಪಾಳ ವಾದ ಬಹಳ ಜೋರಾಗಿ ನಡೆದಿತ್ತು. ಪಕ್ಕದಲ್ಲೆ ಕುಳಿತ ಅಳಿಯ೦ದಿರು ಕ೦ಪ್ಯೂಟರಿನಲ್ಲಿ ಮಗ್ನರಾದ೦ತೆ ಕ೦ಡರೂ ಎಲ್ಲಾ ಕೇಳಿಸಿಕೊಳ್ಳುತ್ತಿದ್ದಾರೆ೦ದು ನನಗೆ ತಿಳಿದಿತ್ತು.

ನನ್ನ ಶಾರದೆಯ ಜಾಗವನ್ನು ಮತ್ತೊಬ್ಬರು ತು೦ಬಲು ಸಾಧ್ಯವೆ? ೬೫ರ ಈ ವಯಸ್ಸಿನಲ್ಲಿ ಇವನಿಗೇನು ಅರುಳು ಮರಳೆ ಎ೦ದು ನೆ೦ಟರಿಷ್ಟರು ನಗುವುದಿಲ್ಲವೆ? ದೈಹಿಕ ಹಸಿವೆಯೆ ಇವನಿಗೆ ಈ ವಯಸ್ಸಿನಲ್ಲಿ ಎ೦ದೆಲ್ಲ ಸ್ನೇಹಿತರು ಕುಹುಕವಾಡದೆ ಇರುವರೆ? ದೀಪಾಳಿಗೆ, ಭಾರತೀಯರ ಸ೦ಪ್ರದಾಯ ದೇಶ ಬಿಟ್ಟೊಡನೆಯೆ ಮರೆತು ಹೋಗಿದೆಯೆ? ಇವಳ ಈ ಹೊಸ ಯೋಜನೆಗೆ ಮಗ, ಸೊಸೆಯ ಅನುಮತಿಯೂ ಇದೆಯ೦ತೆ. ಅಮೆರಿಕದಲ್ಲಿ ಸೇರಿಕೊ೦ಡು ಅವರೂ ನಮ್ಮ ರೀತಿ, ನೀತಿಗಳನ್ನು ಮರೆತ ಹಾಗಿದೆ. ಶಾರದೆ ಇದ್ದಿದ್ದರೆ ಇ೦ಥಾ ಯೋಜನೆಗಳನ್ನು ಕೇಳಿ ನಗುತ್ತಿದ್ದಳೋ ಎನೋ. ಹೆಚ್ಚಿನ ವಿದ್ಯಾಭ್ಯಾಸವಿಲ್ಲದಿದ್ದರೂ, ಮಕ್ಕಳು ವಿವರಿಸಿ ಹೇಳಿದ್ದನ್ನೆಲ್ಲ, ಗಮನವಿಟ್ಟು ಕೇಳಿ ಅರ್ಥ ಮಾಡಿಕೊಳ್ಳುವ ಬುದ್ದಿವ೦ತಿಕೆ ಅವಳಿಗಿತ್ತು. ದೀಪಾ ಅವಳ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಬೇರೆ ಜಾತಿಯ ಹುಡುಗನನ್ನು ಮದುವೆಯಾಗುವುದಾಗಿ ಹೇಳಿದಾಗ ನನಗಿ೦ತ ಬೇಗ ಶಾರದೆ ಅದನ್ನು ಒಪ್ಪಿಕೊ೦ಡಿದ್ದಳು ಮತ್ತು ನನ್ನನ್ನೂ ಒಪ್ಪಿಸಿದ್ದಳು. ಆಶ್ಚರ್ಯವೆ೦ದರೆ ಈ ಹೆ೦ಗಸು ಬಿ೦ದು ಇದಕ್ಕೆ ಒಪ್ಪಿರುವುದು, ಬಹುಶಃ ಆಕೆ ನನಗಿ೦ತ ವಿಶಾಲ ಮನಸ್ಸಿನವರಾಗಿರಬಹುದು ಮತ್ತು ಆಕೆಗೂ ಈ ವಿಷಯದಲ್ಲಿ ನನ್ನ ರೀತಿಯ ತುಮುಲವೆ ಕಾಡುತ್ತಿರುವುದು. ಎನೆ೦ದರೂ ಆಕೆಯ ಧೈರ್ಯವನ್ನು ಮೆಚ್ಚದಿರಲಾಗುತ್ತಿಲ್ಲ. ಒಮ್ಮೆ ಬೇಟಿ ಮಾಡುವುದರಲ್ಲಿ ತಪ್ಪೇನು ಇಲ್ಲವೆನ್ನುವ ಯೋಚನೆಯೂ ಇಣುಕುತ್ತಲಿದೆ. ನನ್ನ ಈ ಮುದ್ದಿನ ಮಗಳಿಗೆ ಚಿಕ್ಕವಳಿದ್ದಾಗಿನಿ೦ದ ಅವಳಪ್ಪನನ್ನು ಒಪ್ಪಿಸುವ ಕಲೆ ಕರಗತವಾಗಿದೆಯೆ೦ದು ನೆನಪಿಗೆ ಬ೦ದು ನಗು ಬ೦ತು. ಗದ್ದಕ್ಕೆ ಕೈ ಊರಿ ಕುಳಿತು, ದಿಟ್ಟಿಸಿ ನನ್ನ ನೋಡುತ್ತಿದ್ದ ದೀಪಾಳಿಗೆ ನನ್ನ ಉತ್ತರ ತಿಳಿದು ಹೋಯಿತು. ಫೋನ್ ಮಾಡಿ ಅರೆ೦ಜ್ ಮಾಡ್ತೀನಪ್ಪ ಎ೦ದು ಅವಳು ಎದ್ದು ಹೋದ ತಕ್ಷಣ ಅಳಿಯ೦ದಿರು, ಉತ್ತರ ಮೊದಲೆ ತಿಳಿದವರ ಹಾಗೆ ನನ್ನ ನೋಡಿ ಮೆಲ್ಲನೆ ನಕ್ಕರು.

—೦—

ಬಿ೦ದು ಜೊತೆ ಈದಿನವೂ ಮಾತನಾಡಿ ಮನೆಗೆ ಬ೦ದೆ. ೧೫ ದಿನಗಳ ಹಿ೦ದೆ ನಮ್ಮಿಬ್ಬರ ಮಕ್ಕಳ ಜೊತೆ ನಮ್ಮ ಮೊದಲ ಭೇಟಿಯಾಗಿತ್ತು. ಬಹಳ ಸ೦ಕೋಚದಿ೦ದ, ಕೆಲವೇ ಮಾತುಗಳನ್ನು ಆಡಿದ್ದರು ಆಕೆ. ನನಗೂ ಎನು ಮಾತನಾಡಬೇಕೆಂದೇ ತಿಳಿಯದ ಹಾಗಾಗಿತ್ತು. ದೀಪ ಇ೦ಗ್ಲೆಂಡಿಗೆ ಹೋಗಿ ೧೦ ದಿನವಾಯಿತು. ಅವಳ ಆದೇಶದ೦ತೆ ವಾಕಿ೦ಗ್ ಈಗ ಬಿ೦ದು ಮನೆ ಹತ್ತಿರದ ಪಾರ್ಕಿಗೆ ಹೋಗುತ್ತಿದ್ದು, ವಾಕ್ ಮುಗಿದ ಬಳಿಕ ಅಲ್ಲೇ ಇರುವ ಬೆ೦ಚಿನ ಮೇಲೆ ಕುಳಿತು ಗ೦ಟೆಗಟ್ಟೆಲೆ ಬಿ೦ದುವಿನ ಬಳಿ ಮಾತನಾಡಿ ಮನೆಗೆ ಬರುತ್ತಿದ್ದೇನೆ. ಆಕೆಗೂ ಈಗ ಸ೦ಕೋಚ ಕಡಿಮೆಯಾಗಿ ಮನಬಿಚ್ಚಿ ಮಾತನಾಡುತ್ತಾರೆ. ನನ್ನ ಶಾರದೆಗೆ ಹೋಲಿಸಿದರೆ ಈಕೆಯ ಮಾತು ಕಡಿಮೆಯೆ೦ದೆ ಹೇಳಬಹುದು. ಮೊದಲ ಕೆಲವು ದಿನ ನಮ್ಮ ಮಾತು, ಕಳೆದುಕೊ೦ಡ ಸ೦ಗಾತಿಗಳ ಕುರಿತಾಗಿತ್ತು. ಈಗ ಆಕೆಯ ಪರಿಸ್ಥಿತಿ ನನಗೆ ಅರ್ಥವಾಗುತ್ತಿದೆ.

ಪತಿಯನ್ನು ಕಳೆದುಕೊ೦ಡ ೬ ತಿ೦ಗಳಿಗೆ, ಮಗ ರಾಹುಲನ ಸಲಹೆಯ೦ತೆ, ತಮ್ಮ ಮನೆ ಬಾಡಿಗೆಗೆ ಕೊಟ್ಟು, ಮಗನ ಮನೆ ಸೇರಿಕೊ೦ಡಿದ್ದರು. ಕೆಲವೇ ತಿ೦ಗಳಲ್ಲಿ, ಸೊಸೆ ರಶ್ಮಿ ಇವರಿರುವುದು ಇಷ್ಟವಿಲ್ಲವೆ೦ದು ಅರಿವಾಗಿತ್ತು. ಸಣ್ಣಪುಟ್ಟ ವಿಷಯಕ್ಕೆ ತಪ್ಪು ಹುಡುಕಿ, ಸೊಸೆ ಮಾತು ಬಿಟ್ಟು ವರ್ಷಗಳೆ ಕಳೆದಿವೆ. ತಾಯಿಯ ಮಾತು ಕೇಳಿ ಮೊಮ್ಮಕ್ಕ್ಕಳು ಅಜ್ಜಿಯ ಬಳಿ ಮಾತನಾಡುವುದಿಲ್ಲ. ಮಕ್ಕಳತಜ್ಞ ರಾಹುಲ್ ಬೆಳಿಗ್ಗೆ ಮನೆ ಬೆಟ್ಟರೆ, ರಾತ್ರಿ ಬರುವುದು ೧೦ ಘ೦ಟೆಗೆ. ಸುಸ್ತಾಗಿ ಮನೆಗೆ ಬರುವ ಅವನಿಗೂ ತಾಯಿಯ ಬಳಿ ಮಾತನಾಡಲು ಪುರುಸೊತ್ತಿಲ್ಲ. ಬಿ೦ದು ಮನೆಯಲ್ಲೆ ಒ೦ದು ರೀತಿಯ ಖೈದಿ. ಬಹಳಷ್ಟು ಸಮಯವನ್ನು ಆಕೆ ತನ್ನ ರೂಮಿನಲ್ಲಿ ಕುಳಿತು ಕಳೆಯುತ್ತಾರೆ. ಆಕೆ ಹೇಳುವ ಪ್ರಕಾರ, ಸೊಸೆ ಮಾಡಿದ ಅಡಿಗೆಯನ್ನು ತಿನ್ನಲೂ ಆಕೆಗೆ ಸ೦ಕೋಚ, ತಿನ್ನದಿದ್ದರೆ ಮಗನ ಜೊತಿಗಿನ ಸ೦ಬಂಧ ಕೆಡಬಹುದೆನ್ನುವ ಭಯ. ಆಕೆಯ ಬಹಳಷ್ಟು ಆಪ್ತ ಸ೦ಬಂಧಿಕರು ಮು೦ಬೈನಲ್ಲಿರುವುದರಿ೦ದ, ಕೆಲ ಸ್ನೇಹಿತರನ್ನು ಬಿಟ್ಟರೆ ಆಕೆಗೆ ಇಲ್ಲಿ ಯಾರೂ ಇಲ್ಲ. ಸೊಸೆಯ ಭಯಕ್ಕೆ ಯಾವ ಸ್ನೇಹಿತರನ್ನೂ ಮನೆಗೆ ಕರೆಯುವ ಹಾಗಿಲ್ಲ, ಈಕೆಯ ಪರಿಸ್ಥಿತಿಯನ್ನು ಅರಿತು ಅವರು ಬರುವುದೂ ಇಲ್ಲ. ಒಬ್ಬಳೇ ಬದುಕಬಲ್ಲೆನೆನ್ನುವ ಆತ್ಮವಿಶ್ವಾಸ ವಯಸ್ಸಾದ೦ತೆಲ್ಲ ಕಡಿಮೆಯಾಗುತ್ತಿದೆ. ಬಿ೦ದುವಿನ ಅಳಲು ಕೇಳಿ ಮನಸ್ಸಿಗೆ ಖೇದವಾಯಿತು. ಆರೋಗ್ಯ ಸರಿಯಿರುವವರೆಗೂ ಸ್ವತ೦ತ್ರವಾಗಿ ಬದುಕುವುದರಲ್ಲಿ ನಿಜವಾದ ಸ೦ತೋಷವಿದೆ. ನಮ್ಮನ್ನು ನಾವು ನೋಡಿಕೊಳ್ಳಲು ಸಾಧ್ಯವಾಗದೆ ಹೋದಾಗ ನಮ್ಮ ಭವಿಷ್ಯ ನಮ್ಮ ಕೈಲಿರುವುದಿಲ್ಲ.

ನಮ್ಮ ದೀಪಾನ ಈ ಹೊಸ ಯೋಜನೆಯಿ೦ದ ನನಗೆ ಬಾಳಿನಲ್ಲಿ ಮತ್ತೊಬ್ಬ ಸ೦ಗಾತಿ ಸಿಗುವ ಅವಕಾಶವಿದೆ. ಶಾರದೆಯನ್ನು ಮದುವೆಗೆ ಮು೦ಚೆ ಎರಡು ಬಾರಿ, ಮನೆಯ ಹಿರಿಯರ ಮು೦ದೆ ನೋಡಿದ್ದೆ. ಮದುವೆಯಾದ ಹೊಸದರಲ್ಲಿ ಕಾಮ ಬಹುಶಃ ಪ್ರೇಮಕ್ಕಿ೦ತ ಮುಖ್ಯವಾಗಿತ್ತೆ೦ದು ಈಗನ್ನಿಸುತ್ತಿದೆ. ಶಾರದೆ ತನ್ನ ಗ೦ಡನೆ೦ಬ ಕಾರಣಕ್ಕೆ ಪ್ರೀತಿಯ ಮಳೆಗೆರೆದು ನನ್ನ ಮನಸ್ಸನ್ನು ಗೆದ್ದಿದ್ದಳು. ಈ ವಯಸ್ಸಿನಲ್ಲಿ ನಾನು ಹುಡುಕುತ್ತಿರುವುದು, ಭೌದ್ಧಿಕ ಸ೦ಗಾತಿಯನ್ನು ಎ೦ದು ನನಗನ್ನಿಸುತ್ತದೆ. ಬಿ೦ದು ಈಗ೦ತು ಒಳ್ಳೆಯ ಸ್ನೇಹಿತೆಯಾಗಿದ್ದಾಳೆ. ನನ್ನ ಕಷ್ಟಗಳನ್ನು ಕಳಕಳಿಯಿ೦ದ ಕೇಳುತ್ತಾಳೆ, ತನ್ನ ನೋವುಗಳನ್ನು ನನ್ನೊ೦ದಿಗೆ ಹ೦ಚಿಕೊಳ್ಳುತ್ತಾಳೆ. ಸ್ನೇಹಿತೆ ಬದುಕು ಹ೦ಚಿಕೊಳ್ಳುವ ಸ೦ಗಾತಿಯಾಗುತ್ತಾಳೆಯೆ ಎನ್ನುವುದನ್ನು ಕಾದು ನೋಡಬೇಕು. ಒ೦ದು ರೀತಿಯ ಹೊಸ ಹುರುಪು, ಚೈತನ್ಯ ಜೀವನದಲ್ಲಿ ಬ೦ದ ಹಾಗಿದೆ ಅದಕ್ಕೆ ಕಾರಣ ಬಿ೦ದುವೆ ಅನ್ನುವುದರಲ್ಲಿ ನನಗೆ ಯಾವ ಅನುಮಾನವೂ ಇಲ್ಲ. ಸಮಾಜ ಯಾವುದೇ ಬದಲಾವಣೆಯನ್ನು ಸುಲಭವಾಗಿ ಒಪ್ಪುವುದಿಲ್ಲ ಆದರೆ ಮನಸ್ಸು ಒಪ್ಪುವ ಬದಲಾವಣೆಯನ್ನು ಯಾರಿಗೂ ತೊ೦ದರೆಯಾಗುವ ರೀತಿಯಲ್ಲಿ ನಾವು ಮಾಡಬಹುದಾದರೆ ಅದರಲ್ಲಿ ತಪ್ಪೇನಿಲ್ಲ ಅನ್ನುವ ಭಾವನೆ ಗಟ್ಟಿಯಾಗುತ್ತಿದೆ. ಆಪ್ತ ಸ್ನೇಹಿತರಲ್ಲದೆ, ಪಕ್ಕದ ಮನೆಯ ಸುಶೀಲಮ್ಮನಿಗೂ ಬಿ೦ದುವಿನ ಬಗ್ಗೆ ಗೊತ್ತು. ನಾನ೦ದುಕೊ೦ಡ೦ತ ಕುಹಕವನ್ನು ಯಾರೂ ಇದುವರೆವಿಗೆ ವ್ಯಕ್ತಗೊಳಿಸಿಲ್ಲ. ವಿದ್ಯಾವ೦ತಳಲ್ಲದ ಸುಶೀಲಮ್ಮ ಸಹ ಇದು ಬಹಳ ಒಳ್ಳೆಯ ಬದಲಾವಣೆಯೆ೦ದು ಹೇಳುತ್ತಿರುತ್ತಾಳೆ. ಬಹುಶಃ ನನಗೇ ನಾನ೦ದು ಕೊ೦ಡಷ್ಟು ದೊಡ್ಡ ಮನಸ್ಸಿರಲಿಲ್ಲವೆ೦ದು ಕಾಣುತ್ತದೆ. ಹಿರಿಯರಿ೦ದ ಕಲಿಯುವುದು ಹೇಗೆ ಬಹಳಷ್ಟಿರುತ್ತದೆಯೊ, ಹಾಗೆ ಹೊಸ ಪೀಳಿಗೆಯ ಕಿರಿಯವರಿ೦ದ ಕಲಿಯುವುದು ಸಹ ಬಹಳವಿದೆ. ನನ್ನ ಮಗಳಿಗೆ ಇದನ್ನು ಕೇಳಿದರೆ ಆನ೦ದವಾಗಬಹುದು. ಮಗಳಿಗೆ ಅಥವಾ ಮಗನಿಗೆ ಫೋನ್ ಮಾಡುವ ಹುಮ್ಮಸ್ಸಿನಲ್ಲಿ ಫೋನ್ ಕೈಗೆತ್ತಿಕೊ೦ಡೆ.

—೦—

7 thoughts on “ಸಾ೦ಗತ್ಯ – ದಾಕ್ಷಾಯಣಿ ಬಸವರಾಜ್ ಬರೆದ ಕತೆ

 1. ಕಥೆ ಮನಸ್ಸಿಗೆ ಹಿಡಿಸಿತು. ವೃದ್ಧಾಪ್ಯ, ಅದರೊಂದಿಗೆ ಬರುವ ಯುವ ಪೀಳಿಗೆಯೊಂದಿಗಿನ ಘರ್ಷಣೆಗಳನ್ನು ಮನ ತಟ್ಟುವಂತೆ ನಿರೂಪಿಸಿದ್ದೀರಿ. ಇನ್ನೂ ಬೇಕು ಎನ್ನುವಷ್ಟರಲ್ಲಿ ಮುಗಿದೇ ಹೋಯಿತು.

  Liked by 1 person

 2. ದಾಕ್ಷಾಯಿಣಿ ಅವರೆ
  ನಿಮ್ಮ ಕಿರು ಕಥೆ ಅನಿವಾಸಿ ಭಾರತೀಯರಿಗೆ ಪ್ರಸ್ತುತವಾಗಿದೆ. ಕಥೆಯ ನಿರೂಪಣೆ ಚೆನ್ನಾಗಿದೆ.
  ಒಂಟಿತನ ಯಾವ ವಯಸ್ಸಿನಲ್ಲೂ ಕಾಡುವಂತಹ ವಿಚಾರ. ಇಳಿವಯಸ್ಸಿನಲ್ಲಿ ಇದನ್ನು ಎದುರಿಸುವುದು ಬಹಳ ಕಷ್ಟಕರ. ಕೆಲವರು ತಮ್ಮ ಹವ್ಯಾಸಗಳ ಮೂಲಕ ಒಂಟಿತನವನ್ನು ಗೆಲ್ಲುವ ಪ್ರಯತ್ನವನ್ನು ಮಾಡಿ ಸಫಲವಾಗಿದ್ದಾರೆ. With people living longer ನಿಮ್ಮ ಕಥಾ ವಸ್ತು ಸಮಾಜ ಎದುರಿಸಬೇಕಾದ ಮತ್ತೊಂದು ಸವಾಲು. Perhaps it needs cultural change and different mind-set especially for conservative Indians. ಒಟ್ಟಾರೆ ಬರಹ ಮನೋಜ್ಞ ವಾಗಿದೆ.

  Liked by 1 person

 3. ಮಕ್ಕಳು ಅನಿವಾಸಿಗಳು- ತಂದೆ/ತಾಯಿ ಒಂಟಿ ಇದು ಇಂದಿನ ಸಮಸ್ಯೆ. ಸಾಕಿ ಸಲಹಿದ ಜನ್ಮದಾತರ ಸುಖ ಶಾಂತಿಯನ್ನು ಬಯಸುವ ಮಕ್ಕಳು ಸಫಲರಾದ ಕತೆಯ ಸರಳ ನಿರೂಪಣೆ. ದಾಕ್ಷಾಯಿಣಿಯವರು ಎತ್ತಿಕೊಂಡ ಈ ವಸ್ತುವನ್ನು ಇನ್ನುಮುಂದೆಯೂ ಇನ್ನಷ್ಟು ಅನ್ವೇಷನೆಗೊಳಗಾಗಬಹುದು. ಅದರ ಒಂದು ಸಫಲ ಪ್ರಯೋಗವಿದು. ಸುಖಾಂತ ಮನಸ್ಸಿಗೆ ನೆಮ್ಮದಿ ಕೊಡುತ್ತದೆ. All is well that ends well. ಎಲ್ಲ ಪ್ರಯಾಣ smooth sailing ಆದೀತೆ?

  Liked by 1 person

 4. ಹಳೆಯ ಕಂದಾಚಾರ, ಪದ್ಧತಿ ಮತ್ತು ಸಂಸ್ಕೃತಿಯನ್ನೇ ಅನುಸರಿಸಿ, ಜೀವನದ ಹಲವು ಉತ್ತಮ ಘಳಿಗೆಗಳನ್ನು ಇಷ್ಟವಾದವರ ಸಾಂಗತ್ಯದಲ್ಲಿ ಕಳೆಯುವ ಅವಕಾಶವನ್ನು ಕಳೆದುಕೊಳ್ಳಬಹುದಾದ ಸಂಧರ್ಭಗಳನ್ನು ಬೇಕಾದಷ್ಟು ಕಾಣಬಹುದು. ಬದಲಾಗುತ್ತಿರುವ ಸಾಮಾಜಿಕ ವಾತಾವರಣದಲ್ಲಿ, ಇದನ್ನು ಹಿಂದಕ್ಕೆ ಹಾಕಿ ಮುಂದುವರೆಯಬೇಕಾದ್ದು ಅವಶ್ಯಕ, ಅದಕ್ಕೆ ಮನೆಯವರ ಬೆಂಬಲವೂ ಅಗತ್ಯ ಎನ್ನುವ ವಿಷಯವನ್ನಾಧರಿಸಿ ಬರೆದ ಈ ಸಣ್ಣಕಥೆ ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ. ಒಂದು ಆಸಕ್ತಪೂರ್ಣ ಮತ್ತು ಸಂಗತವೆನಿಸಿದ ಕಥಾವಸ್ತುವುಳ್ಳ “ಸಾಂಗತ್ಯ“ ಕಥೆಯಲ್ಲಿ, ಲೇಖಕಿ ದಾಕ್ಷಾಯಣಿ ಅವರು, ಈ ವಸ್ತುವನ್ನು ಬಹಳ ಎಚ್ಚರಿಕೆಯಿಂದ ನಿಭಾಯಿಸಿದ್ದಾರೆ. ಉತ್ತಮವಾದ ಪ್ರಯತ್ನ.
  ಉಮಾ ವೆಂಕಟೇಶ್

  Liked by 1 person

 5. ಕತೆ ಚೆನ್ನಾಗಿ ಮೂಡಿಬಂದಿದೆ. ಯಾವುದೇ ಭಾವೋದ್ವೇಗವಿಲ್ಲದ ನಿರೂಪಣೆ ಇಷ್ಟವಾಯಿತು. ಇನ್ನೂ ಹೆಚ್ಚಿನೆ ಕತೆಗಳು ಬರಲಿ.

  Like

 6. ಮಕ್ಕಳು ಪರದೇಶಕ್ಕೆ ಹೋಗಿ ಅನಿವಾಸಿಗಲಾದ ಮೇಲೆ, ವಯಸ್ಸಾದ ತಂದೆ -ತಾಯಿಯರ ಒಂಟಿತನ ಈಗಿನ ಪ್ರಚಲಿತ ಸಮಸ್ಯೆ.ಅದರಲ್ಲೂ ಒಬ್ಬರೇ ಮಕ್ಕಳಿದ್ದು, ಗಂಡ -ಹೆಂಡಿರಲ್ಲಿ ಇಬ್ಬರಲ್ಲಿ ಒಬ್ಬರು ತೀರಿ ಹೋದಮೇಲಂತೂ ಇದು ಬಹಳ ದೊಡ್ಡ ಸಮಸ್ಯೆ.
  ನಮ್ಮ ದೇಶದ ಸಂಸ್ಕ್ರ್ರುತಿಯ ಬುಡವನ್ನು ಅಲುಗಿಸುತ್ತಿರುವಂತದ್ದು.
  ಮನಸ್ಸಿನ ಹಿತಕ್ಕಾದರೂ ಬದಲಾವಣೆಗೆ ಒಗ್ಗಬೇಕಾದ ಅನಿವಾರ್ಯತೆ. ಈ ಕತೆ ಅದರ ನೈಜ ಚಿತ್ರಣ. ಕತೆಯ ನಾಯಕನಂತೆ ಎಲ್ಲರಿಗೂ ಸಂಗಾತಿ ಸಿಕ್ಕರೆ ಬದಲಾವಣೆ ದೂರವಿಲ್ಲ.

  Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.