”ಬ್ರಿಟಿಷ್ ಕನ್ನಡಿಗ” ಬೆಂಜಮಿನ್ ಲೂಯಿಸ್ ರೈಸ್ – ಬೇಸಿಂಗ್ ಸ್ಟೋಕ್ ರಾಮಮೂರ್ತಿ ಬರೆದ ಲೇಖನ

ನೀವು ಬೆಂಜಮಿನ್  ರೈಸ್ ನ ಬಗ್ಗೆ ಹೆಚ್ಚಿಗೆ ಕೇಳದಿದ್ದರೆ ಏನೂ ಆಶ್ಚರ್ಯ ಇಲ್ಲವೇನೋ. ಆದರೆ ಈತ ನಮ್ಮ ಹಳೆಯ ಮೈಸೂರ್ ದೇಶದಲ್ಲಿ ಸುಮಾರು ೧೨೦ ವರ್ಷಗಳ ಹಿಂದೆ ಮೊದಲನೆಯ ಬಾರಿಗೆ ಪ್ರಾಥಮಿಕ ಶಿಕ್ಷಣವನ್ನು (Primary Education)  ಸ್ಟಾಪಿಸಿದವರು. ಸಾವಿರಾರು ಹಳೆಯ ಕನ್ನಡ ಮತ್ತು ಸಂಸ್ಕೃತ ಗ್ರಂಥಗಳು ಮತ್ತು ಶಾಸನಗಳನ್ನು ಸಂಗ್ರಹಿಸಿ ಮೊದಲ ಬಾರಿಗೆ ಜನಗಳಿಗೆ ಪರಿಚಯ ಮಾಡಿದವರು.BL Rice

೧೭/೦೭/೧೮೩೭ ನಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆ ಬೆಂಜಮಿನ್ ಹೋಲ್ಟ್ ರೈಸ್ ಅವರು ೧೮೦೦ ನಲ್ಲಿ ಇಂಗ್ಲೆಂಡ್ ನಿಂದ ಬಂದವರು. ಇವರು ಕನ್ನಡದಲ್ಲಿ ಪಾಂಡಿತ್ಯ ಪಡೆದು ನಮ್ಮ ಚರಿತ್ರೆ, ಭೂಗೋಲ ಮತ್ತು ಗಣಿತದ ಪುಸ್ತಕಗಳನ್ನು ಬರೆದರು. ಕನ್ನಡದಲ್ಲಿ ಮೊದಲ ಬೈಬಲ್ ಇವರದ್ದೆ. ಬೆಂಗಳೂರಿನಲ್ಲಿ ಈಗಲೂ Rice Memorial Church ಇದೆ. ಬೆಂಜಮಿನ್ ಲೂಯಿಸ್  ರೈಸ್ ಅವರ ಪ್ರಾಥಮಿಕ ವಿಧ್ಯಾಬ್ಯಾಸ ಬೆಂಗಳೂರಿನಲ್ಲಿ , ೧೮೬೦ ನಲ್ಲಿ ಕೇಂಬ್ರಿಜ್ ನಲ್ಲಿ  ಬಿ ಎ ಪದವಿ ಪಡೆದು ಮೈಸೂರಿಗೆ ಹಿಂತಿರಿಗಿ ಬೆಂಗಳೂರು ಸೆಂಟ್ರಲ್  ಹೈಸ್ಕೂಲ (ಈಗಿನ ಸೆಂಟ್ರಲ್ ಕಾಲೇಜ್ )ನ ಪ್ರಿನ್ಸಿಪಾಲ್ ಆಗಿ ಸೇರಿದರು.

ಈತ ಕನ್ನಡ, ಹಿಂದಿ, ಸಂಸ್ಕೃತ ಮತ್ತು ತಮಿಳು ಭಾಷೆಗಳಲ್ಲಿ ಪಾಂಡಿತ್ಯ ಪದೆದವರು. ೫ ವರ್ಷದ ನಂತರ Inspector of Schools ಆದರು. ಈ ಹುದ್ದೆಯಲ್ಲಿ ಮೈಸೂರು ಪ್ರಾಂತದ ಎಲ್ಲ ಭಾಗಗಳಿಗೂ ಹೋದಾಗ ನೂರಾರು ಶಿಲಾ ಶಾಸನ ಗಳನ್ನು ಸ್ಥಳೀಯ ಜನರ ಸಹಾಯ ದಿಂದ ಹಳೆ ಕನ್ನಡದಿಂದ ಅಧುನಿಕ ಕನ್ನಡಕ್ಕೆ ಭಾಷಾಂತರಿಸಿದರು. ಇದಲ್ಲದೆ  ಅನೇಕ ತಾಳೆಗೆರೆ ಮತ್ತು ತಾಮ್ರ ಶಾಸನಗಳನ್ನು ಸಹ ಸಂಗ್ರಹಿಸಿದರು. Chitradurga_ಇವೆಲ್ಲವನ್ನು Epigraphia Carnatica ದಲ್ಲಿ ೧೨ ಸಂಪುಟಗಳಲ್ಲಿ ಪ್ರಕಟಿಸಿದರು. ಅವರ ಸಂಗ್ರಹದಲ್ಲಿ ಸುಮಾರು ೯೦೦೦  ಶಾಸನಗಳ ಪ್ರತಿ ಇವೆ. ಇದರಿಂದ ಮೈಸೂರು ದೇಶದ ಎರಡು ಸಾವಿರ ವರ್ಷ ದ ಸಾಮಾಜಿಕ  ಜೀವನದ ಚರಿತ್ರೆ ಪರಿಚಯ ಉಂಟಾಯಿತು.

೧೮೭೩ ರಲ್ಲಿ ಡಿ ಪಿ ಐ (Director of  Public Instruction) ಆಗಿ, ಪ್ರಾಥಮಿಕ ಶಿಕ್ಷಣವನ್ನು( Primary Education)  ಸ್ಟಾಪಿಸಿದರು.ಪ್ರತಿ ಹೋಬಳಿ ಯಲ್ಲೂ ಒಂದು ಶಾಲೆ ಸ್ಥಾಪಿಸಿದವರು ಇವರೆ. ಆದರೆ ಇವರ ಗುರಿ ಇದ್ದುದು ಪ್ರತಿ  ಹಳ್ಳಿಯಲ್ಲಿ  ಸಹ ಶಾಲೆ ಇರಬೇಕು ಅಂತ.  ಆದರೆ ಸರಿಯಾದ ಉಪಾಧ್ಯಾಯರ ಕೊರತೆ ಇದ್ದದ್ದರಿಂದ ಈ ಯೋಜನೆ ಜಾರಿಗೆ ಬರಲು ಸ್ವಲ್ಪ ಕಷ್ಟ ಆಯಿತು. ಆಗಿನ  ಮಹಾರಾಜರ ಆಡಳಿತದಲ್ಲಿ ಇವರನ್ನು ಮೈಸೂರಿನ ಜನಗಣತಿ ಮಾಡಲು ನೇಮಿಸಲಾಯಿತು. ಮುಂದೆ, ಶಿಕ್ಷಣ ಇಲಾಖೆಯ ಕಾರ್ಯದರ್ಶಿಯಾಗಿ ಇಡೀ  ಭಾರತದ ಶಿಕ್ಷಣ ನೀತಿಗೆ ( Education Policy) ನಾಂದಿ ಹಾಕಿದರು.

೧೮೮೪ ನಲ್ಲಿ   Director of Archaeology  ಆಗಿ ಕೆಲಸ ಶುರು ಮಾಡಿದರು. ಅಶೋಕನ ಕಾಲದ ಹಲವಾರು ಶಾಸನಗಳು, ರೋಂ ಸಾಮ್ರಾಜ್ಯದ ನಾಣ್ಯ ಮುಂತಾದವು ಸಿಕ್ಕಿದ ಮೇಲೆ ನಮ್ಮ ದೇಶದ ಚರಿತ್ರೆ ಅನೇಕರಿಗೆ ಪರಿಚಯ ವಾಯಿತು. ನೇಪಾಳದ ರಾಜವಂಶವನ್ನು ಪ್ರಾರಂಬಿಸಿದ ನನ್ಯದೇವ, ಕರ್ನಾಟಕದ ಗಂಗ ವಂಶದವನು ಅಂತ ಸಾಧಿಸಿದ್ದು ರೈಸ್ ಅವರ ಹೆಗ್ಗಳಿಕೆ.

೧೮೭೬ ಮತ್ತು ೧೮೯೭ ರಲ್ಲಿ Mysore Gazetteer ಇವರ ಇನ್ನೊಂದು ಮಹತ್ಸಾಧನೆ. ಇದರಲ್ಲಿ ಇವರು ಬರೆದ ಮೈಸೂರು ಮತ್ತು ಕೂರ್ಗ್ ಪ್ರದೇಶದ ಪಟ್ಟಣ ಮತ್ತು ಕೆಲವು ಹಳ್ಳಿಗಳ ಚರಿತ್ರೆ  ಸಿಗುತ್ತದೆ.Mysore and coorg_

೧೯೦೬  ಇವರು ನಿವೃತ್ತಿ ಆಗುವ ಮುಂಚೆ Bibliotheca Carnatica, a collection of all major literary Texts in Kannada ಎಂಬ ಲೇಖನ ಸಂಗ್ರಹವನ್ನು ೬ ಸಂಪುಟದಲ್ಲಿ ಪ್ರಕಟಿಸದರು ಸುಮಾರು. ಅದರಲ್ಲಿ ೩೦೦ ಕನ್ನಡ ಸಾಹಿತಿಗಳು ಮತ್ತು ಕವಿಗಳ ಬಗ್ಗೆ ವಿವರವಾಗಿ ಪ್ರಸ್ತಾಪನೆ ಮಾಡಿದ್ದಾರೆ. ರೈಸ್ ಅವರಿಗೆ ನಮ್ಮ ಭಾಷೆ, ಚರಿತ್ರೆ ಮತ್ತು ಧಾರ್ಮಿಕ ಸಹಿಷ್ಣುತೆ ಮೇಲೆ ಬಹಳ ಹೆಮ್ಮೆ ಇತ್ತು.

೧೯೦೬ ರಲ್ಲಿ  ತಮ್ಮ ೬೯ ನೆಯ ವಯಸ್ಸಿಗೆ ಹುಟ್ಟಿದ ಬೆಂಗಳೂರು ಬಿಟ್ಟು ಇವರು ಕುಟುಂಬ ಸಮೇತ ಇಂಗ್ಲೆಂಡ್ ಗೆ ತೆರಳಿದರು. ಅಲ್ಲೂ  ಕನ್ನಡ ಭಾಷೆ ಮರೆಯಲ್ಲಿಲ್ಲ. ೧೯೨೪ ರಲ್ಲಿ ಲಂಡನ್ ನಲ್ಲಿ ಒಂದು ವಸ್ತುಪ್ರದರ್ಶನ (exhibition) ದಲ್ಲಿ ಕೆಲ ಕನ್ನಡಿಗರನ್ನು ಭೇಟಿಯಾದರು. ಅವರಲ್ಲಿ ಒಬ್ಬಾತ ಇಂಗ್ಲಿಷ್ ನಲ್ಲಿ ಮಾತನಾಡಲು ರೈಸ್ ಅವರು “ಅಯ್ಯಾ ಕನ್ನಡದಲ್ಲಿ ಮಾತನಾಡೋಣ ,  ಮುದ್ದಿನ ಕನ್ನಡ ನನ್ನ ಕಿವಿಗೆ ಬಿದ್ದು ಬಹಳ ದಿನಗಳಾದವು” ಎಂಬ ಉದ್ಗಾರ ತೆಗೆದರಂತೆ!

ತಮ್ಮ ಸ್ನೇಹಿತರಾಗಿದ್ದ ಶ್ರೀ ನರಸಿಂಹಾಚಾರರಿಗೆ ೧೯೨೭ ಏಪ್ರಿಲ್ ನಲ್ಲಿ ಬರೆದ ಸಂದೇಶದಲ್ಲಿ ಹೀಗೆ ಬರೆದಿದ್ದಾರೆ: “remember me to all my love to Mysore is unending”

೧೦-೦೭-೧೯೨೭ ರಲ್ಲಿ ರೈಸ್ ಅವರು ನಿಧನರಾದರು. ಇವರು೪೩ ವರ್ಷಗಳ ಕಾಲ ಕನ್ನಡಕ್ಕೆ ಮಾಡಿದ ಸೇವೆ ಎಂದಿಗೂ ಮರೆಯುವ ಹಾಗಿಲ್ಲ.

ಆದರೆ ಕರ್ನಾಟಕದಲ್ಲಿ ಇವರನ್ನು ಈಗ  ನೆನಸುವವರು ಎಷ್ಟು ಜನ?             

 

6 thoughts on “”ಬ್ರಿಟಿಷ್ ಕನ್ನಡಿಗ” ಬೆಂಜಮಿನ್ ಲೂಯಿಸ್ ರೈಸ್ – ಬೇಸಿಂಗ್ ಸ್ಟೋಕ್ ರಾಮಮೂರ್ತಿ ಬರೆದ ಲೇಖನ

  1. ದಿವಂಗತ ರೈಸರು ಕರ್ನಾಟಕದಲ್ಲಿ ನೆಲಸಿ ಬೆಳೆದ ಕಾರಣ ಕನ್ನಡವನ್ನು ಕಲಿತು,ಭಾಷೆಯ ಒಳಿತಿನ ಬಗ್ಗೆ ತಗೊಂಡ ಕಾಳಜಿ ನಮಗೆಲ್ಲ ಮಾದರಿ! ಇವರ ಬಗ್ಗೆ ತಿಳಿಸಿದ ರಾಮಮೂರ್ತಿಯವರು ಒಳ್ಳೆಯ ಕೆಲಸ ಮಾಡಿದ್ದಾರೆ.
    ಇವತ್ತು ರೈಸರ ಆತ್ಮ ಬೆಂಗಳೂರಿಗೆ ಭೇಟಿಯಿತ್ತಲ್ಲಿ, ಭಯಾನಕ ಕ್ಷೋಭೆಗೊಳಗಾಗುವುದು ಖಂಡಿತ! ಕನ್ನಡದಂತ ಪುರಾತನ ಮತ್ತು ಸಿರಿವಂತ ಭಾಷೆಯನ್ನು ಬಲಿಗೊಟ್ಟಿರುವ ಪ್ರತಿ ಕನ್ನಡಿಗನ ಬಗ್ಗೆ ಖೇದವೆನಿಸುತ್ತದೆ. ತಮ್ಮ ಭಾಷೆಯನ್ನು ಬಾಯ್ತುಂಬ ಮಾತಾಡಿಕೊಂಡೇ ನಮ್ಮಂತೆಯೇ ಇಂಗ್ಲಿಷಿನಲ್ಲಿ ಕೂದ ಮಾತಾಡಬಲ್ಲ ತಮಿಳರು, ತೆಲುಗು ಮತ್ತು ಮಲೆಯಾಳ್ಂ ಜನರನ್ನು ನೋಡಿದಾಗ ಕನ್ನಡಿಗರು ತಮ್ಮ ಭಾಷೆಯ ಬಗ್ಗೆ ತೋರುವ ನಿರ್ಲಕ್ಶ್ಯಕ್ಕೆ ಕಾರಣವೇ ತಿಳಿಯುವುದಿಲ್ಲ.
    ಪಾಶ್ಚಿಮಾತ್ಯ ಭಾಷೆಗಳೊಂದಿಗೆ ಪಾಷ್ಚಿಮಾತ್ಯರು ಭಾಷೆಗಳ ಉಳಿಕೆಯ ಬಗ್ಗೆ ತೋರುವ ಕಾಳಜಿಯ ಬಗ್ಗೆಯೂ ಕಲಿಯುವುದು ತರವಲ್ಲವೇ?

    Like

  2. ಲಂಡನ್ನಿನಲ್ಲಿ ಕನ್ನಡ ಪ್ರಜೆಯನ್ನು ಭೇಟಿಯಾದಾಗ, ಕನ್ನಡಿಗನ ಬಾಯಲ್ಲಿ ಸಿರಿಗನ್ನಡ ನುಡಿ ಕೇಳದೆ ನಿರಾಶರಾಗಿ, “ಅಯ್ಯಾ ಕನ್ನಡದಲ್ಲಿ ಮಾತನಾಡೋಣ!“ ಎಂದ ರೈಸನ ಕನ್ನಡ ಅಭಿಮಾನದ ಬಗ್ಗೆ ಇಂದಿನ ಕನ್ನಡಿಗರು ಹೆಮ್ಮೆ ಪಡತಕ್ಕದ್ದೇ ಅಲ್ಲವೇ? ರೈಸನಿಗಿದ್ದ ಕನ್ನಡ ಭಾಷೆಯ ಅಭಿಮಾನದಲ್ಲಿ, ಕೇವಲ ಸ್ವಲ್ಪ ಭಾಗದ ಅಭಿಮಾನ ಇಂದಿನ ಕನ್ನಡಿಗರ ಹೃದಯದಲ್ಲಿದ್ದರೆ, ಕನ್ನಡ ಭಾಷೆಗೆ ಯಾವುದೇ ಅಪಾಯವಿಲ್ಲ ಎಂದು ನನ್ನ ಅಭಿಪ್ರಾಯ. ಅಂತಹ ಮಹಾನುಭಾವನ ಬಗ್ಗೆ ಪರಿಚಯಿಸದ್ದಕ್ಕಾಗಿ ರಾಮಮೂರ್ತಿ ಅವರಿಗೆ ಧನ್ಯವಾದಗಳು. ಕಿಟ್ಟಲ್ಲನ ಕನ್ನಡ ಕೊಡುಗೆ ಎಷ್ಟು ಮುಖ್ಯವೋ, ಕನ್ನಡಕ್ಕೆ ರೈಸ್ ಇತ್ತಿರುವ ಕೊಡುಗೆಯೂ ಅಷ್ಟೇ ಉತ್ಕೃಷ್ಟವಾದದ್ದು.
    ಉಮಾ ವೆಂಕಟೇಶ್

    Like

  3. ರಾಮಮೂರ್ತಿಯವರು ಈ ಲೇಖನವನ್ನುಮೊದಲು ಬರೆದಾಗಲೇ ನಾನು ಉತ್ಸುಕನಾಗಿದ್ದೆ. ನನ್ನ ತಂದೆಯವರೂ ಶಾಸನಗಳ ಪಂಡಿತರಾದ್ದರಿಂದ ರೈಸ್ ಅವರ ಹೆಸರು ನನಗೆ ಪರಿಚಯದ್ದೇ. ನಾನು ಚಿಕ್ಕವನಾಗಿದ್ದಾಗ ಅವರ ಕೋಣೆಯಲ್ಲಿ ಶಿಲಾಶಾಸನಗಳ ರಾಶಿ ರಾಶಿ ಪ್ರತಿಗಳು, ತಾಮ್ರಪಟಗಳನ್ನಲ್ಲದೆ Epigraphia Carnatica ದ ಬೈಂಡಾದ ಸಂಫುಟಗಳನ್ನು ನೋಡಿದ್ದು ನೆನಪಿದೆ. ಅದೇ ಕಪಾಟಿನಲ್ಲಿ ಕಿಟಲ್ ಡಿಕ್ಷನರಿ. ಇವೆರಡೂ ಅವರ ಬೈಬಲ್ ತರ. ತಿಳಿ ಹಸಿರು ಬಣ್ಣದ ಮುಖಪುಟದ ಮೇಲೆ ಬಿ ಎಲ್ ರ್ರೈಸ್ ಹೆಸರು. ಅವರು ಕನ್ನಡ ಶಾಸನ ಸಂಗ್ರಹಕ್ಕೆ ನಾಂದಿ ಹಾಕಿದ್ದು, ನಂತರ ಆರ್ ನರಸಿಂಹಾಚಾರ್, ನೀಲಕಂಠ ಶಾಸ್ತ್ರಿ, ಎನ್ ಎಲ್ ರಾವ್, ಜಿ ಎಸ್ ಗಾಯಿ ಇವರೆಲ್ಲ ಶಿಲಾ ಮತ್ತು ತಾಮ್ರಪಟ ಶಾಸನಗಳ ಸಂಗ್ರಹ ಮಾಡಿ ಕರ್ನಾಟಕದ ಇತಿಹಾಸವನ್ನು ಬರೆಯಲು ಸಹಾಯ ಮಾಡಿದರು. ಮುಂದೆ ಇವುಗಳ ಪ್ರಕಟಣೆ Dept of Archeology ಸ್ಥಾಪಿಸಿದ Epigraphica Indica ದಲ್ಲಿ ಪ್ರಕಟವಾಗಲು ಶುರುವಾದವು.ಲೇಖನದ ಕೊನೆಯಲ್ಲಿ ರಾಮಮೂರ್ತಿಯವರು ತೆಗೆದ ಉದ್ಗಾರದಂತೆ ನಮಗೆ ಈತನ ಹೆಸರು ಶಾಲೆಯಲ್ಲೇ ಪರಿಚಯವಾಗಿರ ಬೇಕಾಗಿತ್ತು. ಆತನ Epigraphia Carnatica ದ ಎಲ್ಲ ಸಂಫುಟಗಳ CD 2005ರಲ್ಲಿ ಬಿಡುಗಡೆಯಾಯಿತು ಎಂದು ಈಚೆಗೆ ತಿಳಿಯಿತು. ಆತನ ಆತ್ಮಕ್ಕೆ ಈ ಸುದ್ದಿ ಖುಶಿ ಕೊಟ್ಟಿರಬೇಕು! ಮೇಲೆ ಕಾವಳೆಯವರು ಬರೆದಂತೆ ಮುಂದೆ ಅವರು ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ಸಮಯ ವ್ಯಯಿಸಿದ್ದರಿಂದ Loss to epigraphy was gain to Education ಆಗಿರಬಹುದೇನೋ ಎಂದು ನನ್ನ ಊಹೆ. ಈ ಲೇಖನ ನಮ್ಮ ವೇದಿಕೆಯಲ್ಲಿ ಪ್ರಕಟವಾದುದು ಸ್ತುತ್ಯವೇ.

    Like

  4. ರಾಮಮೂರ್ತಿಯವರೇ,
    ತಾವು ಬೆಂಜಮಿನ್ ಲೂಯಿಸ್ ರೈಸ್ ಅವರ ಬಗ್ಗೆ ಬರೆದ ಈ ಲೇಖನವು ಬಹು ಮಾಹಿತಿದಾಯಕವಾಗಿದೆ. ಕೇಶವ ಕುಲಕರ್ಣಿಯವರು ಹೇಳಿದಹಾಗೆ ರೈಸ್ ಅವರಬಗ್ಗೆ ಕನ್ನಡಿಗರ ಮತ್ತು ಭಾರತೀಯರ ಅಜ್ಞಾನವು ಅವರ ಧೋರಣೆಯನ್ನು ತೋರಿಸುತ್ತದೆ. ಮೊದಲನೆಯದಾಗಿ ಬಿ ಎಲ್ ರೈಸ್ ಅವರು ಬ್ರಿಟಿಷರು ಮತ್ತು ಅವರು ಕ್ರೈಸ್ತಮತಪ್ರಚಾರಕ ವಂಶದವರಾಗಿದ್ದುದರಿಂದ ಆವರು ಭಾರತದ ವೈರಿಗಳು ಎಂದು ಭಾರತೀಯರು ಅವರನ್ನು ಮರೆತಿರುವಹಾಗಿದೆ. ಕನ್ನಡದ ನಿಘಂಟನ್ನು ಮೊಟ್ಟಮೊದಲು ಬರೆದವರು ಸ್ವಿಟ್ಸರ್‌ಲ್ಯಾಂಡಿನ ಬಾಸೆಲ್ ನಗರದ ಜರ್ಮನ್ ಕ್ರೈಸ್ತಮತಪ್ರಚಾರಕ. ಅಂದವಾದ ಕನ್ನಡದ ಮುದ್ರಾ ಅಕ್ಷರಗಳನ್ನು ರಚಿಸಿದವರು ಜರ್ಮನಿಯ ಅಚ್ಚುಗಾರರು. ಈ ಪರಕೀಯರು ಕನ್ನಡಕ್ಕೆ ಮಾಡಿದ ಕೊಡುಗೆಯನ್ನು ತಿರಸ್ಕರಿಸಲಸಾಧ್ಯ. ಆದರೆ ಅವುಗಳನ್ನು ಮರೆಯುವುದು ಬಹು ಸುಲಭ.
    ನಮ್ಮ ತಂದೆಯವರು ಹೇಳುತ್ತಿದ್ದ ಒಂದು ಮಾತು ನನಗೆ ಸೆನಪಿಗೆ ಬರುತ್ತದೆ. ಮೈಸೂರಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರವರು ಮೈಸೂರಿಗೆ ಅತ್ಯಂತ ಉತ್ತಮ ವಿದ್ಯಾಶಿಕ್ಷಣ ವ್ಯವಸ್ಥೆಯನ್ನು ಒದಗಿಸಲು ಇಂಗ್ಲೆಂಡಿನಿಂದ ಕುಕ್ (Cooke)ಎಂಬ ಅದಿಕಾರಿಯನ್ನು ಕರೆಸಿದರಂತೆ. ಇವರು ವಿದ್ಯಾಭ್ಯಾಸದ ಒಲೆಯನ್ನು ಹಚ್ಚಿದರಂತೆ, ಆನಂತರ Pott ಎಂಬುವರನ್ನು ಕರೆಸಿದರಂತೆ. ಇವರು ಒಲೆಯಮೇಲೆ ಮಡಿಕೆಯನ್ನು ಇಟ್ಟು ನೀರು ಹಾಕಿದರಂತೆ. ನಂತರ Rice ಎಂಬ ಅಧಿಕಾರಿಯನ್ನು ಕರೆಸಿದರಂತೆ. ಇವರು ಮಡಿಕೆಯಲ್ಲಿನ ಬಿಸಿನೀರಿಗೆ ಅಕ್ಕಿಯನ್ನು ಹಾಕಿದರಂತೆ. ನಂತರ Cox ಎಂಬುವರು ಬಂದರಂತೆ. ಇವರು ಮಡಿಕೆಗೆ ಕೋಳಿಯ ಮಾಂಸವನ್ನು ಮತ್ತು ಉಪ್ಪನ್ನು ಹಾಕಿದರಂತೆ. ನಂತರ Tateಎಂಬುವರು ಬಂದು ರುಚಿಯನ್ನು(taste) ನೋಡಿ, ಎಲ್ಲವೂ ಸರಿಯಾಗಿದೆ ಎಂದರಂತೆ. ಆದುದರಿಂದಲೇ ಮೈಸೂರು ಪ್ರಾಂತ್ಯಕ್ಕೆ ಅತ್ಯುತ್ತಮ ವಿದ್ಯಾಭ್ಯಾಸ ಶಿಕ್ಷಣವು ದೊರೆಯಿತಂತೆ.
    -ರಾಜಾರಾಮ್ ಕಾವಳೆ

    Like

  5. ದಿನಾ ರೈಸ್ ತಿನ್ನುತ್ತಿದ್ದರೂ ಈ ರೈಸ್ ಬಗ್ಗೆ ನನಗೆ ಗೊತ್ತೇ ಇರಲಿಲ್ಲ. ಇಂಥಾ ಒಬ್ಬ ಮಹಾನುಭಾವನ ಬಗ್ಗೆ ನನ್ನ ಅಜ್ಞಾನಕ್ಕೆ ನಮ್ಮ ಪಠ್ಯಪುಸ್ತಕಗಳ ಮತ್ತು ಪತ್ರಿಕೆಗಳ ಪಾಲು ಬಹಳ ದೊಡ್ಡದಿದೆ. ಕನ್ನಡಭಾಷೆ ಇಂಥವರ್ ಕೊಡುಗೆಯಿಂದಲೇ ಇಷ್ಟೊಂದು ಬೆಳೆದಿರುವುದು. ಇದನ್ನು ಕಾಪಾಡಿಕೊಳ್ಳುವುದು ಮತ್ತು ಬೆಳೆಸುವುದು ನಮ್ಮೆಲ್ಲರ ಹೊಣೆ. ರಾಮಮೂರ್ತಿಯವರಿಗೆ ನಾನು ಋಣಿ.
    – ಕೇಶವ

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.