ಅತಿಥಿಗಳು – ವಿಜಯಾ ನಾಯಕ್ ಬರೆದ ಚುಟುಕುಗಳು

ಡಾ. ವಿಜಯಾ ನಾಯಕ್, ದಕ್ಷಿಣ ಕನ್ನಡದಲ್ಲಿ ಹುಟ್ಟಿ ಬೆಳೆದವರು. ದಿ.ಶಿವರಾಮ ಕಾರಂತರ ಓಡನಾಟ ಅವರಿಗೆ ಚಿಕ್ಕಂದಿನಲ್ಲಿ ಸಿಕ್ಕ ಭಾಗ್ಯ. ಕಾರಂತರ ಬಾಲವನದಲ್ಲಿ ಅವರೊಟ್ಟಿಗೆ ಆಡಿ ಬೆಳೆದದ್ದು ವಿಜಯಾರವರ ಸಾಹಿತ್ಯ ಸ್ಫೂರ್ತಿಗೆ ನೀರೆರೆದಂತಿದೆ. ಅವರ ಕವನಗಳಿಗೆ ಪ್ರಶಸ್ತಿಗಳು ಬಂದಿವೆ. ಕಾವ್ಯದೊಂದಿಗೆ, ಚಿತ್ರಕಲೆಯಲ್ಲೂ ಅವರಿಗೆ ಆಸಕ್ತಿ. ಅವರ ಕವನಗಳಿಗೆ ಚಿತ್ರ ಬರೆದು ಸಂಕಲನಗಳನ್ನು ಪ್ರಕಟಿಸಿದ್ದಾರೆ. ಇದೊಂದು ಆಕರ್ಷಕ ಹೊಸ ಪ್ರಯೋಗ.

ವೈದ್ಯಕೀಯ ಕವನಗಳು/ಚುಟುಕುಗಳು, ಕನ್ನಡದಲ್ಲಿ ಸಹಜವಾಗಿ ಲಭ್ಯವಿಲ್ಲ. ತನ್ನ ವೈದ್ಯಕೀಯ ಜ್ಞಾನ ಬಳಸಿ ಅವರು ಬರೆದಿರುವ     ಕವನಗಳು ವಿಜಯಾರವರ ಪ್ರಯೋಗಶೀಲತೆಗೆ ಸಾಕ್ಷಿ. ಅವರ ಅತಿಥಿಗಳು ಕರೆಯದೇ ಬರುವವರು, ಸರಿಯಾಗಿ ಹಿಂಡಿ, ಸತ್ವ ಹೀರಿ ನೆಲೆ ನಿಲ್ಲುವವರು.

ಬೀಸಿ ಬಂದುಡಿದು ಮಲಗಿಸಿ

ಉಸಿರನ್ನುಳಿದು ಮತ್ತೆಲ್ಲವ

ಕಸಿದು ಕಬಳಿಸಿ, ಕಳೆದ ನಿನ್ನೆಗಳ

ಬಿಸಿ ನೆತ್ತರ ರಾತ್ರಿಗಳ ನೆನಪಿನ ಹೊತ್ತಗೆಯನು

ಕಿತ್ತೆಸೆದು ಮುಸಿ ಮುಸಿ ನಗುತಿದೆ – ಪಾರ್ಶ್ವವಾಯ

ಇರಿವ ಚಳಿಯೊಡನೆ ತಿಮಿರದಲಿ

ಸೂರಿನೊಳಗಿಂದ ತೂರಿಬಂದು ಕ್ಷಣದಲಿ

ಏರಿ ಬರುವ ಮೇಲುಸಿರಿನ ಕೊಡುಗೆ ಇತ್ತು

ಕೂರಗೊಡದೆ, ನೇರ ಮಲಗಗೊಡದೆ

ಎದೆಯೊಳಗಿಂದ ಸೀಳಿ

ಬರುವ ದನಿಯಾಲಿಸಿ ಸವಿಯುತಿದೆ – ಗೂರಲು

ಚೇತನದ ಹನಿಯಾಗಿದ್ದ ತನುವನು

ಭೂತದಂತೆ ಹೊಕ್ಕಿ ಕಾಣದಂತಿದ್ದು

ಊತ, ವಾತ, ಎದೆ ಬಡಿತವೆಂದು

ಮತ್ತೆ ಹೊಟ್ಟೆಯಲ್ಲಿದೆ ಕೆಟ್ಟ ನೀರೆಂದು

ಮೆತ್ತಗೆ ಕೊಲ್ಲಲೆಳಸುತಿದೆ – ರಕ್ತಹೀನತೆ

Image result for rheumatic feverಎದೆಯೊಂದು ತಾಳವಿಲ್ಲದ ತಮ್ಮಟೆಯಾಗಿ

ನೊಂದ ದೇಹ ಎಮಿಕೆಯ ಹಂದರವಾಗಿ

ಬೆದರಿ ನಿಂತ ಬಂಧುಗಳು ಮೂಗರಾಗಿ ಆಸೆ ಬಿಟ್ಟಾಗ

“ಶುದ್ಧ ನಿಸ್ಸಾರ” ವೆಂದೆನಿಸಿ, ಕುಣಿದು ಕುಪ್ಪಳಿಸುವ ಇನ್ನೊಬ್ಬ

ಮುಗ್ಧ ಎಳೆಯನ ಮೊಣಕಾಲನರಸಿ ಓಡತ್ತದೆ – ನಿಷ್ಠೂರಿ ಶೀತವಾಯು

– ವಿಜಯಾ ನಾಯಕ್

5 thoughts on “ಅತಿಥಿಗಳು – ವಿಜಯಾ ನಾಯಕ್ ಬರೆದ ಚುಟುಕುಗಳು

  1. ಕರೆಯದೇ ಬಂದ ಅತಿಥಿಯಾಗಿ ರೋಗಗಳು ಬಂದು, ‘ನಕ್ಕು’ ಸವಿದು’ ಅಥವಾ ‘ಕೊಂದು’ ಮನೆಯವರಿಗೆ ‘ತಿಥಿ’ ಮಾಡಿಸಿ, ಹೋಗುವ ದಾರುಣ ಸತ್ಯವನ್ನು ಮತ್ತು ಇದಲ್ಲದೆ ಕೆಲವು ರೋಗಗಳ ಲಕ್ಷಣಗಳನ್ನು ಕಾವ್ಯದಲ್ಲಿ ತೋರಿಸುವ ಚಮತ್ಕಾರವಿಲ್ಲಿದೆ. ಆ ಕ್ರೌರ್ಯದಲ್ಲೂ ಒಂದು ತರದ ‘ಸ್ಮಶಾನ ಸೌಂದರ್ಯ’ (oxymoron?) ಇದೆ ಅನ್ನಬಹುದೇನೋ? ಕೀಟ್ಸ್ ಕವಿ ಹೇಳಿದಂತೆ truth is beauty ಯಲ್ಲವೇ? ಆಕರ್ಣಕ, ಮಂಡಿ ಕೊಡತಿ, (stethoscope, knee hammer) ಅಥವಾ ನಾಡಿ ಹಿಡಿದ ವೈದ್ಯರಾರೂ ಕವಯಿತ್ರಿ ಹೃದಯದ dysrhythmiaವನ್ನು ”ಎದೆಯೊಂದು ತಾಳವಿಲ್ಲದ ತಮ್ಮಟೆ” ಎಂದು ವರ್ಣಿಸಿದ್ದನ್ನು. ಮತ್ತು ಅನೀಮಿಯಾದ ಭೂತ ಕಣ್ಣಿಗೆ ಕಾಣದಂತೆ ಹೊಕ್ಕು ಪೀಡಿಸುವಾಗ ರೋಗಿಯಲ್ಲಿ ಕಾಣಿಸುವ ವಿವಿಧ ಗುಣಲಕ್ಷಣಗಳ ಪಟ್ಟಿ, ಇವಕ್ಕೆ ತಲೆದೂಗಲೇ ಬೇಕು. ಮೇಲೆ ಗುರುತಿಸಿದಂತೆ ಇಷ್ಟರಲ್ಲೂ ಪ್ರಾಸ ಕಾಯ್ದಿರುವದನ್ನು ಕಂಡು ಅಚ್ಚರಿ ಪಟ್ಟೆ. ಅಪರೂಪದ ಪ್ರತಿಭೆ!

    Like

  2. ತುಂಬಾ ಸುಂದರ ಹೊಸ ರೀತಿಯ ಪ್ರಯತ್ನ. ಇದೇ ತರಹ ಇನ್ನೂ ಬರಲಿ. ಆದಿ ಪ್ರಾಸ ಚೆನ್ನಾಗಿ ಮೂಡಿಬಂದಿದೆ. ಯಾವುದಾದರೂ ಕನ್ನಡ ಛಂದಸ್ಸಿನಲ್ಲಿ ಬರೆದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು.

    Like

  3. ಈ ಕರೆಯದೆ ಬರುವ, ಆತಿಥ್ಯ ಬಯಸದ, ಅಥಿತಿಗಳನ್ನು ಕಾವ್ಯ ರೂಪದಲ್ಲಿ ಕಂಡ ಮೊದಲ ಅನುಭವ ವಿಜಯಾರವರ ಕವನ ನಮಗೆ ಮಾಡಿಕೊಟ್ಟಿದೆ. ಜೊತೆಗೇ ಬಂದ ಚಿತ್ರಗಳು, ಸಂದೇಶದ ಬಲವನ್ನು ಹೆಚ್ಚಿಸುವುದರ ಬಗೆಗಿನ ನನ್ನ ಅನುಮಾನವನ್ನು ಕಳೆದಿಲ್ಲ.

    Dakshayani

    Like

  4. ತಮ್ಮ ವೈದ್ಯಕೀಯ ಅನುಭವ ಮತ್ತು ಘ್ಯಾನಗಳನ್ನು ಚತುರತೆಯಿಂದ ತಮ್ಮ ಪದಗಳ ಗುಛ್ಚದಲ್ಲಿ ಪೋಣಿಸಿ ಕವಿತೆಯ ಮಾಲೆಯನ್ನು ಹೆಣೆದಿದ್ದಾರೆ ಡಾ ವಿಜಯಾ ನಾಯಕ್. ನಮ್ಮ ದೇಹಕ್ಕೆ ಬೇಡದ ಅತಿಥಿಗಳಾಗಿ ಬರುವ ರೋಗವೆಂಬ ಶತ್ರುವನ್ನು ನಿಜಕ್ಕೂ ಆಸಕ್ತಿಪೂರ್ಣವಾಗಿ ವರ್ಣಿಸಿದ್ದಾರೆ . ಇದೊಂದು ನವೀನ ಪ್ರಯೋಗ.
    ಉಮಾ ವೆಂಕಟೇಷ್

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.