ಜಲಧಾರೆ ಹಾಗೂ ತಿರುವು- ಸವಿತಾ ಮಧುಸೂದನ

ಪೃಕೃತಿ ಕವಿಗಳಿಗೆ ಸದಾ ಸ್ಫೂರ್ತಿಯ ಚಿಲುಮೆ. ಅದರ ಚೆಲುವನ್ನು ಸವಿಯುತ್ತ, ಋತುಗಳ ಮಾಯೆಯ ಮೋಡಿಗೆ ಸಿಲುಕಿ ಆಧ್ಯಾತ್ಮದ ಸುಳಿಯಲ್ಲಿ ಕೊಚ್ಚಿ ಹೋಗುವುದ ಸಹಜ.  ಸವಿತಾ ಮಧುಸೂದನ್ ದೀಪಾವಳಿ ಕನ್ನಡ ಕಾವ್ಯ ಸಮ್ಮೇಳನದಲ್ಲಿ ಎಚ್ಚೆಸ್ವಿ ಅವರ ಸಮ್ಮುಖದಲ್ಲಿ ಓದಿದ ಕವನಗಳು ಇದಕ್ಕೆ ಸಾಕ್ಷಿ.


ಜಲಧಾರೆ

ಧಮನೆ ಧುಮುಕುತಲಿದೆ

ಬಂಡೆಗಳನ್ನೊಡೆದು,

ಪ್ರಪಾತದಲ್ಲಡಗಿರುವ ಗುಪ್ತ

ಆತ್ಮಲಿಂಗಕೆ ಕ್ಷೀರಾಭಿಷೇಕವಿದು

ಕೆಳಗೆ ತಾ ಧುಮಕುತಲು

ಈ ಮನವ ಮೇಲೆತ್ತುತಿದೆ

ಅನ್ಯ ಗದ್ದಲವ ನುಂಗಿ ಆ ಧ್ವನಿಯು

ದೀರ್ಘ ಧ್ಯಾನ ಧಾರೆಯಂತಿರೆ

ತೊರೆದು ಚಂಚಲತೆಯ ಅದರಂತೆ

ಭಾವಾತಿಶಯದಲಿ ಮನವು,

ಅಂತರಾಳದಿ ಭಾವಾತೀತನೆಡೆಗೆ

ಅವತರಿಸಬಾರದೇಕಿಂದು?

ದಿಶೆ ತಪ್ಪಿ ದೂರವಾಗಿಯೂ

ಮತ್ತೆ ಕೂಡುವಂತೆ ಝರಿಯು,

ಐಕ್ಯವಾಗುತಲಿರಲಿ ಭಾವಗಳು

ಭಕ್ತಿ ಧಾರೆಯಲಿ, ಅತ್ತಿತ್ತ ಅಲೆದು


ತಿರುವು

ನಿನ್ನ ಪುಸ್ತಕದಲಿಹುದು

ಹೊಸ ಕುಡಿಗಳ; ಹಸಿರೆಲೆಗಳ

ಬಿಂಕ;

ನಿನ್ನದೇ ಪದದಡಿಯಲಿಹುದು

ಸೊರಗೊಣಗಿದ ಮೃತ ಎಲೆಗಳ

ಸಾಂದ್ರ.

ನಿಂತಿರುವೆ ನೀ ಸೂರ್ಯೋದಯದ

ಶುಭಗಳಿಗೆಯಿಂದ ಸೂರ್ಯಾಸ್ತವನು

ಕಾದು;

ಮತ್ತೆ ಸೂರ್ಯಾಗಮನವ ಕಾಯ್ವೆ

ಮತ್ತೊಂದು ಮಬ್ಬು ರಾತ್ರೆಯನು

ಹಾದು.

ಬಸಂತ ಋತು ಬರಲು

ಮೈದುಂಬಿ, ಮನದಣಿಯೆ ಹಿಗ್ಗಿ

 ನಲಿವೆ;

ಮುನ್ನಡೆದು ಹೇಮಂತದಲಿ

ಸಿರಿತನವ ಕಳೆದು ಬರಿಗೈಯ್ಯಲೂ

ನಿಲ್ಲುವೆ

ಹಸಿರೆಲೆಗಳಿಗೂ, ತರಗೆಲೆಗಳಿಗೂ

ನೆಲೆಯಾಗಿ ತಂಗಿ, ಎಸಗುತಿದೆ

ಸೃಷ್ಟಿ;

ಹಗಳನಲ್ಲದೆ ಇರುಳನೂ

ಹೊತ್ತು ಸೂಸುತಿದೆ, ಸುಖ ದುಃಖಗಳ

ವೃಷ್ಟಿ.

3 thoughts on “ಜಲಧಾರೆ ಹಾಗೂ ತಿರುವು- ಸವಿತಾ ಮಧುಸೂದನ

  1. ಪ್ರಕೃತಿಯ ಸೊಬಗು,ಬದಲಾವಣೆಗಳ ಆಳವಾದ ನೋಟ.
    ಸೌಂದರ್ಯದ ಉಪಾಸನೆಯನ್ನು ಅಂತರ್ಮುಖಿಗಳಾಗಿ ಅನುಭಾವಗೊಳಿಸದೆ ಈ ಕವನಗಳು ಮೂಡಿರಲಾರವು. ಉತ್ತಮ ಅಭಿವ್ಯಕ್ತಿ.

    Like

  2. ನಮ್ಮ ಹೊಸ ಕವಯಿತ್ರಿ ಈ ಎರಡು ಕವನಗಳಲ್ಲಿ ಸೃಷ್ಟಿಯಿಂದ ಸ್ಫೂರ್ತಿ ಪಡೆದು ಸ್ವಚ್ಛಂದವಾಗಿ, ಭಾವ ಪೂರ್ಣವಾಗಿ ಹಾಡಿದ್ದಾರೆ. ವೇದಿಕೆಗೆ ಸುಸ್ವಾಗತ. ಕವನಗಳಲ್ಲಿಯ ವರ್ನವಿನ್ಯಾಸಕ್ಕೆ ತಕ್ಕ ಚಿತ್ರಗಳನ್ನೋದಗಿಸಿ ಸಂಪಾದಕರು ಚಿತ್ರ-ಕವನಗಳ ರೂಪ ಕೊಟ್ಟಿದ್ದಾರೆ. ಮನಸ್ಸಿಗೆ, ಕಣ್ಣಿಗೆ, ಒಳಗಣ್ಣಿಗೆ ಆಹ್ಲಾದಕರ ಇವು.

    Like

Leave a Reply

Your email address will not be published. Required fields are marked *