ವಿಮಾನ ನಿಲ್ದಾಣದಲ್ಲಿ ನಾಟಕ

ರಜಕ್ಕೆ ಹೋಗುವುದೆಂದರೆ ಎಲ್ಲಿಲ್ಲದ ಹುರುಪು ನಮಗೆಲ್ಲ. ಆದರೆ ಆಧುನಿಕ ಜಗದ ಪ್ರಯಾಣ ಪ್ರಯಾಸವೇ ಸರಿ, ಅದರಲ್ಲೂ ವಿಮಾನ ಯಾನದಷ್ಟು ರಗಳೆ ಬೇರೆ ಯಾವುದರಲ್ಲೂ ಇಲ್ಲ. ಹೋರ ದೇಶಗಳಲ್ಲಿರುವ, ಗಗನ ಯಾನ ಮಾಡಿ ಅಭ್ಯಾಸವಿರುವ ನಮಗೇ ಒಮ್ಮೆ ವಿಮಾನ ನಿಲ್ದಾಣದಿಂದ ಹೊರ ಬಂದರೆ ಸಾಕಪ್ಪಾ ಎನ್ನುವಷ್ಟು ಜುಗುಪ್ಸೆ ಬಂದಿದೆ. ಇನ್ನು, ಮೊದಲ ಸಲ ಹೊರ ದೇಶಕ್ಕೆ ಹೊರಟ ಹಳ್ಳಿ ಹೆಣ್ಣು ಸಾವಿತ್ರಿ ಬಾಯಿ  ಪಟ್ಟ ಪಾಡನ್ನು ವತ್ಸಲ ರಾಮಮೂರ್ತಿಯವರು ಹಾಸ್ಯಮಯವಾಗಿ ಹೇಳಿದ್ದಾರೆ. ಇದು ಅನಿವಾಸಿಯಲ್ಲಿ ಅವರ ಚೊಚ್ಚಲ ಪ್ರಯತ್ನ.

ವಿಮಾನ ನಿಲ್ದಾಣದಲ್ಲಿ ನಾಟಕ

ಸೌ .ಸಾವಿತ್ರೀಬಾಯಿ ಹಿಂದಿನಕಾಲದ ಮುಗ್ಧ ಹೆಂಗಸು. ಮರಾಠಿ  ಹೆಂಗಸು, ಮೇಲೆ ಸಂಪ್ರದಾಯಸ್ಥೆ ಬೇರೆ. ಉಸರು ಹಳ್ಳಿಯೆಂಬ  ಹಳ್ಳಿಯಲ್ಲಿ ವಾಸ, ದೊಡ್ದ ಕಟ್ಟೆ ಮನೆಯಂಥಾ ಮನೆ. ಅವಳ ಗಂಡ ಶ್ರೀನಿವಾಸರಾಯರು ಊರಿನ ಶ್ಯಾನುಭೋಗರು. ಈ ದಂಪತಿಗಳ ಒಬ್ಬನೇ ಕಣ್ಮಣಿ ಮಗ ವೆಂಕಟ. ಅವರ ಹಳ್ಳಿಯಲ್ಲಿಯೇ ಪ್ರಾಥಮಿಕ, ಮಾಧ್ಯಮಿಕ ಹಾಗೂ ಹೈಸ್ಕೂಲು ಮುಗಿಸಿ ಮುಂದೆ ಓದುವ ಇರಾದೆ ಉಸುರಿದ. “ಓದಿಗೆ ಮುಂಡಾಮೋಚ್ತು, ನನ್ನ ಶ್ಯಾನುಭೋಗಿಕೆಯನ್ನೇ ಮುಂದುವರಿಸೋ”, ಎಂದು ಶ್ರೀನಿವಾಸರಾಯರು ಜಬರದಸ್ತಿ ಮಾಡಿದರು. ಸಾವಿತ್ರಿ ಬಾಯಿ ಕೇಳಬೇಕೆ? ಮಗನ ಆಸೆಯನ್ನು ಇಡೇರಿಸದಿದ್ದರೆ ಹೇಗೆ? ಯಮಧರ್ಮನನ್ನೇ ಹಣ್ಣು ಗಾಯಿ ನೀರುಗಾಯಿ ಮಾಡಿದ ಸಾವಿತ್ರಿ ‘ಬಾಯಿಯ’ ಆಗ್ರಹಕ್ಕೆ ಶ್ರೀನಿವಾಸರಾಯರು ಸಮ್ಮತಿಸಿ ಬೆಂಗಳೂರಿಗೆ ಕಳಿಸಿದರು. ಅವನೂ ಚೆನ್ನಾಗಿಯೇ ಓದಿದ. ಯುಗಾದಿಯ ದಿನ ತನ್ನ ರೇಂಕ್ ಬಂದ ಸಿಹಿಯನ್ನೂ, ತಾನು ಹೆತ್ತವರನ್ನು ತೊರೆದು ಅಮೇರಿಕಾಗೆ ಹಾರುವ ಬೇವಿನ ಕಹಿಯನ್ನೂ  ಒಟ್ಟೊಟ್ಟಿಗೇ ಉಣಬಡಿಸಿದ.

ತಾಯಿಗೆ ಸಿಹಿಯೋ ಕಹಿಯೋ ಎಂದು ಗಲಿಬಿಲಿಯಾಗುವಲ್ಲಿ, ತಂದೆಗೆ  ಬೇವಿನ ಕಹಿಯೇ ಬಲವಾಗಿ ನಾಲಿಗೆಯಲ್ಲಿ ನೆಲೆಯೂರಿತು. ಯುಗಾದಿಯ ಹೋಳಿಗೆ ಕೂಡಾ ಉಪ್ಪುಪ್ಪು ಎಂದೆನಿಸಿ ಹೆಂಡತಿಯ ಮೇಲೆ ಹಾರಾಡಿದರು, ಮಗನ ಕೂಡಾ ಮಾತೂ ಬಿಟ್ಟರು. ‘ಬನ್ನಿ’ ಕೊಟ್ಟು ಹರಸಿ ಎಂದ ಮಗನಿಗೆ ಹೋಗು ಹೋಗೆಲೋ ‘ಕುನ್ನಿ’ ಎಂದು ದೂಶಿಸಿ ಮುಖತಿರುಗುಸಿದರು. ವೆಂಕಟ ತನ್ನ ಸಂಗಾತಿ ಸುಮ್ಮಿಯ ಜೊತೆ ಝುಮ್ಮೆಂದು ಹಾರುವ ಕನಸು ಕಾಣುತ್ತಿದ್ದನಾಗಿ ಹೆಚ್ಚು ಸಂಕಟವನ್ನೇನೂ ಪಡಲಿಲ್ಲ; ಸಾವಿತ್ರಿಯ ಕರುಳು ಯಾವುಯಾವುದೋ ಕಾರಣಕ್ಕಾಗಿ ಚುರ್ರೆನ್ನುವುದು ತಪ್ಪಲಿಲ್ಲ.

ವೆಂಕಟನೇನು ಅಮ್ಮನನ್ನು ಮರೆಯಲಿಲ್ಲ. ಹೋಗಿ ತನ್ನ ನೆಲೆ ಕಂಡಮೇಲೆ ಅಮ್ಮನಿಗೆ, ಅಮೇರಿಕಾ ಎಂಬುದು ಭೂಲೋಕದ ಸ್ವರ್ಗವೆಂದೂ , ‘ಇಲ್ಲೇ ಸ್ವರ್ಗ ಇಲ್ಲೇ ನರಕ ಮೇಲೇನಿಲ್ಲಾ ಸುಳ್ಳು’ ಎಂದು ಹೇಳಿ, ತನ್ನಲ್ಲಿಗೆ ಬರಬೇಕೆಂದೂ,ರಾಮಾಯಣದ ಪುಷ್ಪಕ ವಿಮಾನದ ರೀತಿಯಲ್ಲೇ ಈ ಕಾಲದ ವಿಮಾನಗಳಿರುತ್ತವೆಂದೂ, ಅದರಲ್ಲಿ ಗಂಧರ್ವ ಕನ್ಯೆಯರು ಬಂದು  ಸೇವೆ ಮಾಡುತ್ತಾರೆಂದೂ,ಈ ಅವಕಾಶವನ್ನು ಕಳೆದುಕೊಳ್ಳಬಾರದೆಂದೂ, ಸಾಧ್ಯವಾದರೆ ಅಪ್ಪನನ್ನು ಕರೆದು ತರಬೇಕೆಂದು ತಾಕೀತು ಮಾಡಿ ಅವರ ವೀಸಾ, ಟಿಕೇಟು ಇತ್ಯಾದಿ ಕಳಿಸಿದ.

ಬೇರೆ ಯಾವ ವಿವರಣೆಗಳು ಶ್ಯಾನುಭೋಗರ ಮನಸ್ಸನ್ನು ಆಕರ್ಷಿಸದಿದ್ದರೂ, ಗಂಧರ್ವ ಕನ್ಯೆಯರ ಬಗ್ಗೆ ಕುತೂಹಲ ಅವರನ್ನು ಕೆರಳಿಸದಿರಲಿಲ್ಲ. ಅದರೂ, ತಮ್ಮ ಹಮ್ಮು-ಬಿಮ್ಮು ಬಿಟ್ಟುಕೊಡದೆ, ಮಗ ಹೋದಾಗಿನಿಂದಲೂ ಗುಮ್ಮೆಂದು ಗುರುಗುಡುತ್ತಿದ್ದ ಹೆಂಡತಿಯಿಂದ ಒಂದಷ್ಟು ಬಿಡುಗಡೆ ಸಿಕ್ಕರೆ ಸಾಕೆಂದು, “ನೀನ್ ಬೇಕಾದ್ರೆ ಹೋಗು, ನನ್ನ ಬಲವಂತ ಮಾಡ್ಬೇಡ. ನಾನಿಲ್ಲೇ ನಮ್ಮಕ್ಕನ ಮನೇಲಿ ಊಟ ತಿಂಡಿ ಮಾಡ್ಕೊಂಡಿರ್ತೀನಿ. ಆ ಚಿಂತೆ ನಿಂಗೇನ್ ಬೇಡಾ” ,ಅಂತ ಹೇಳಿ ಒಪ್ಪಿಗೆ ಕೊಟ್ಟು ಬಿಟ್ಟು ನಿರಾಳವಾದರು.

ಸಾವಿತ್ರಿ ಬಾಯಿ ಊರೆಲ್ಲಾ ತಿರುಗಿ, ತಿಳಿದವರ ಮನೆಗೆಲ್ಲಾ ಹೋಗಿ, ವಾರಿಗೆಯವರಲ್ಲಿ ಬೀಗಿ,ಮಗನಿಗೆ ಕೋಡುಬಳೆ, ಚಕ್ಕುಲಿ, ಮೈಸೂರುಪಾಕು, ಇತ್ಯಾದಿ ಮುತುವರ್ಜಿಯಿಂದ ಮಾಡಿಕೊಂಡು ಹೊರಟರು.

ಹಸಿರು ಸೀರೆ, ಮೇಲು ಕಚ್ಚೆ ಹಾಕಿ, ಧಾರವಾಡದ ಸಾಂಪ್ರದಾಯಿಕ ಬಾಳೇ ಕಾಯಿ ನೆರಿಗೆ ಸುತ್ತಿ, ಇಳಕಲ್ಲಿನ ಬ್ಲೌಸ್ ಹಾಕಿಕೊಂಡು, ತುರುಬು ಕಟ್ಟಿ, ಕಾಲುಂಗುರ ಮೂಗುತಿ ದೊಡ್ದ ಕುಂಕುಮ ಹಚ್ಚಿ ಹೊರಟಳು. ಹೆಂಡತಿಯ ಸಡಗರವನ್ನು ವಾರೆಗಣ್ಣಿನಿಂದಲೇ ಗಮನಿಸಿದ ಶ್ಯಾನುಭೋಗರು, “ಲೇ.. ಇವಳೇ, ನೀನೇನು ನೆಂಟರ ಮನೆ ಮದುವೆಗೆ ಹೊರಟೀಯೋ ಇಲ್ಲಾ ಮಂಗನ ಹಾಗೆ ಹಾರ್ಕೊಂಡು ವಿದೇಶಕ್ಕೆ ಹೊರಟೀಯೋ?” ಕೇಳಿದರು

ಸಾವಿತ್ರಮ್ಮನವರ ಸಿಟ್ಟು ಕೆರಳಿ, “ನಾನೂ ಮದುವ್ಯಾದಾಗಿಂದ ನೋಡೀನಿ. ಉಸುರು ಹಳ್ಳಿ ಬಿಟ್ಟು ಬೇರೆ ಊರಿನ್ ಹೆಸರು ಕಂಡಿಲ್ಲ. ಕುಚೋದ್ಯಕ್ಕೇನೂ ಕಮ್ಮಿಯಿಲ್ಲ” ಅಂತ ಝಾಡಿಸಿಬಿಟ್ಟರು. “ಶ್ರೀನಿವಾಸ, ನಿನಗ್ಯಾಕಪ್ಪಾ ಇವಳ ಸವಾಸ?” ಅಂತ ತಮಗೆ ತಾವೇ ಹೇಳ್ಕೊಂಡು, “ಸರಿ ಹುಷಾರಾಗಿ ಹೋಗ್ಬಾರೆ”, ಅಂತ ಬೀಳ್ಕೊಟ್ಟರು.

ವಿಮಾನದಲ್ಲಿ ಕೂತ ಸಾವಿತ್ರಿ ಬಾಯಿ ನವ ಆಭರಣಗಳನ್ನು ಕಿರೀಟ ಸಮೇತ ಧರಿಸಿ, ಹೂ ಮುಡಿದು ವಯ್ಯಾರ ಮಾಡುತ್ತಾ ಬರುವ ಗಂಧರ್ವ ಕನ್ಯೆಯರ ಆಗಮನಕ್ಕೆ ಕಾದಳು. ಎಲ್ಲೆಲ್ಲೂ ಬೋಳು ಹಣೆಯ, ಹರವಿದ ಮುಡಿಯ, ತುಂಡುಡುಗೆ ತೊಟ್ಟ ಬಿಳೀaeroplane ಚರ್ಮದ ಹೆಣ್ಣುಗಳು ಓಡಾಡಿದವೇ ವಿನಃ ರಾಜಕುಮಾರನ ಚಿತ್ರದಲ್ಲಿ ಕಂಡ ರೀತಿಯ ಗಂಧರ್ವರು ಕಾಣಲಿಲ್ಲ. ಇವರೆಲ್ಲಾ ಬೇರೆ ಲೋಕದ ಅಪ್ಸರೆಯರಿರಬೇಕೆಂದು ಬಗೆದು, ಬಿಟ್ಟ ಬಾಯಿ ಹಾಗೇ ತೆಗೆದು ನೋಡುತ್ತಾ ಕುಂತುಬಿಟ್ಟಳು.

ವೆಜ್ಜು, ನಾನ್ ವೆಜ್ಜು ಇತ್ಯಾದಿ ಊಟದ ತಟ್ಟೆಗಳನ್ನು ಒಂದೇ ತಳ್ಳು ಗಾಡಿಯ ಕಪಾಟಿನಿಂದ ತೆಗೆಯುವುದು ಕಂಡು ಮೂಗು ಮುರಿದು ಊಟ ಬೇಡವೇ ಬೇಡ ಎಂದು ನಿರ್ಧರಿಸಿ ನೀರು ಕುಡಿದು ಏಕಾದಶಿಯನ್ನು ಅಂತರಿಕ್ಷದಲ್ಲಿ ಆಚರಿಸಿ ದೇವರಿಗೆ ಇನ್ನೂ ಪ್ರಿಯಳಾದೆ ಎಂದು ಸಮಾಧಾನ ತಂದುಕೊಂಡಳು. ಕೊನೆಗೂ ವಿಮಾನ ತನ್ನ ಅಂತ್ಯವನ್ನು ಮುಟ್ಟಿ ನ್ಯೂಯಾರ್ಕ್ ನಗರದ ನಿಲ್ದಾಣದಲ್ಲಿ ಇಳಿಯಿತು.

ನಿಂಬೆ ಹಣ್ಣಿನಂಥ ಹುಡುಗಿಯ ವಯಸ್ಸು ದಾಟಿ ಕುಂಬಳದಂತಿದ್ದ ಸಾವಿತ್ರಮ್ಮನೂ, ಆಕೆಯ ವೇಷ ಭೂಶಣಗಳನ್ನೂ ಗಮನಿಸಿದ ಸೆಕ್ಯುರಿಟಿ ಭಾಷೆಯ ತೊಂದರೆ ಗಮನಿಸಿ, ಹೆಬ್ಬೆಟ್ಟು ಒತ್ತಿಸಿಕೊಂಡು ,ಮುಗುಳ್ನಕ್ಕು ಕಳಿಸಿದ. ಮುಂದೆ ಇನ್ನೊಬ್ಬಳೂ ಹಾಗೇ ನಕ್ಕಳು. ಕಾರಣವಿಲ್ಲದೆ ನಗುವುದನ್ನು ಕಂಡು ಕೇಳರಿಯದ ಸಾವಿತ್ರಮ್ಮನಿಗೆ ಇವರೆಲ್ಲ ಅರೆ ಹುಚ್ಚರಿರಬೇಕೆಂಬ  ಸಂಶಯದ ಹುಳ ತಲೆಗೆ ಹೊಕ್ಕಿತು!

ಅಲ್ಲಿಂದ ಮುಂದೆ ಎರಡು ಬಾಗಿಲ ಕಟ್ಟು ಮಾತ್ರವಿದ್ದು ಬಾಗಿಲೇ ಇಲ್ಲದ ಜಾಗದ ಮೂಲಕ ತೂರಲು ಹೇಳಿದರು. ಅರೇ ಇದೇನಿದು, ಮನೆಯೇ ಇರದ ಬಯಲಲ್ಲಿ ಬಾಗಿಲು? ದೊಡ್ದ ಹಜಾರದಲ್ಲಿ ಈ ಬಾಗಿಲವಾಡ ನಿಲ್ಲಿಸಿದ್ದಾದರೂ ಏಕಿರಬಹುದು? ‘ಮನೆಯೊಂದು ಮೂರು ಬಾಗಿಲು’ ಎಂಬ ಧಾರವಾಹಿ ನೆನಪಿಗೆ ಬರದೇ ಇರಲಿಲ್ಲ. ಯೋಚಿಸುತ್ತಲೇ ಅದರ ಮೂಲಕ ಹಾದು  ಹೋಗುವಲ್ಲಿ ಅದು ಗುಂಯ್ ಗುಂಯ್ ಶಬ್ದ ಮಾಡಿಬಿಡಬೇಕೆ? ಬೆಚ್ಚಿದ ಸಾವಿತ್ರಿ ಅದು ಯಮನ ಕೋಣದ ಹೂಂಕಾರವೇ ಇರಬೇಕೆಂದು ತೀರ್ಮಾನಿಸಿದಳು. ಯಮ ನರಕದ ನಾಯಕನಲ್ಲವೇ? ಮಗ ಸ್ವರ್ಗಕ್ಕೆ ಕರೆಸುತ್ತೇನೆಂದು ಹೇಳಿ ನರಕ ದರ್ಶನ ಮಾಡಿಸುತ್ತಿದ್ದಾನಲ್ಲ ಎಂದು ಯೋಚಿಸುವಲ್ಲಿ ಧುತ್ತೆಂದು, ಕಪ್ಪುವರ್ಣದ , ಧಡೂತಿ, ದಪ್ಪ ಕುಂಡೆಯ, ಹೆಣ್ಣಾಕೃತಿಯೊಂದು ಪ್ರತ್ಯಕ್ಷವಾಯ್ತು. ಗೊಗ್ಗರು ಕಂಠದಲ್ಲಿ ಇಲ್ಲಿ ಬಾ ಎಂದು ಕರೆದದ್ದಲ್ಲದೆ ಕೈ ಸನ್ನೆ ಮಾಡಿತು. ಓಹೋ ತಾನು ನರಕಕ್ಕಿಳಿದಿರುವುದು ಗ್ಯಾರಂಟಿ. ಗಂಡನನ್ನು ಬಿಟ್ಟು ಹೊರಟಾಗಲೇ ನನ್ನ ಪುಣ್ಯದ ಫಲ ಕಳೆದು, ಪಾಪದ ಕೊಡ ತುಂಬಿ ಸ್ವರ್ಗಾಭಿಮುಖ ವಿಮಾನ ನರಕಕ್ಕೆ ತಂದಿಳಿಸಿರುವುದು ಗ್ಯಾರಂಟಿ ಎಂದು ಖಚಿತ ಮಾಡಿಕೊಳ್ಳುತ್ತಿರುವಲ್ಲಿ, ಆ ರಾಕ್ಷಸಾಕಾರದ ಹೆಣ್ಣು ಕೈ ಚಾಚು, ಕಾಲ್ಚಾಚು ಕೈ ಎತ್ತು, ಆ ಕಾಲೆತ್ತು ,ಈ ಕಾಲೆತ್ತು ಅಂತ ಸಾವಿತ್ರಮ್ಮನಿಂದ ಕಸರತ್ತು ಮಾಡಿಸತೊಡಗಿತು. ಹೇ ಅಚ್ಯುತಾ, ಏನಿಂಥಾ ಸಂದಿಗ್ಧ ತಂದೊಡ್ಡಿದೆ ದೇವಾ ಎನ್ನುತ್ತಾ ಹಪಹಪಿಸುತ್ತಿರುವಲ್ಲಿ, ಆ ಅಶೋಕವನದ ಲಂಕಿಣಿಯಂತಿದ್ದ ಅವಳ ಕಣ್ಣು, ಸಾವಿತ್ರಿ ಬಾಯಿ ಸೀರೆಯಿಂದ ಸೊಂಟದಲ್ಲಿ ಕಟ್ಟಿದ್ದ ಬಾಳೇಕಾಯಿಯ ಮೇಲೆ ಬಿದ್ದುಬಿಡಬೇಕೇ? ಅದೇನದು ಎಂದು ಕೇಳಿದ್ದಲ್ಲದೆ, ಅದನ್ನು ಬಿಚ್ಚು ಎಂದು ತಾಕೀತು ಮಾಡಿದಳು. ಮೂರು ಸೇರು ಉಪ್ಪು ಕೊಡಲಿ, ತಿಂದೇನು; ಎಣ್ಣೆ ಕೊಪ್ಪರಿಗೆಗೆಸೆಯಲಿ, ಕುದ್ದೇನು; ಚಾವಟಿಯಲ್ಲಿ ಹೊಡೆಯಲಿ, ಸಹಿಸಿಯೇನು ಆದರೆ, ಆದರೆ ಈ ಸೀರೆ ಸೆಳೆತವನ್ನು ಮಾತ್ರಾ ಸಹಿಸಲಾರೆ ಎಂಬ ಬಬ್ರುವಾಹನ ಚಿತ್ರದ ಡೈಲಾಗು ರೀತಿಯ ಆಲೋಚನಾ ಲಹರಿ  ಅವಳ ಮನಸ್ಸಿನಲ್ಲಿ ಸುಳಿದು ಹೋಯಿತು. ನಖಶಿಖಾಂತ ಉರಿದು, ಅದನ್ನು ಬಿಚ್ಚಿದರೆ ತಾನು ಮಾನಮುಚ್ಚಿಕೊಳ್ಳಲು ಆಗುವುದಿಲ್ಲವೆಂದೂ, ಅದನ್ನು ಕೇಳುವ ಹಕ್ಕು ಆ ರಾವಣನ ವಂಶಸ್ಥಳಿಗೆ ಇಲ್ಲವೆಂದೂ, ಕಿರುಚಿ, ಅಚ್ಚಕನ್ನಡದ ಭಾಷೆಯ ಬೈಗುಳ ಪದಪ್ರಯೋಗ ಮಾಡಿ, ಝಪ್ಪೆಂದು ಕುಳಿತು ಬಿಟ್ಟಳು.

‘’ My dear madam, you have to open the bundle. I want to see. You may be hiding drugs, gold, we want to confirm ‘’ ಎಂದು ಬಿಟ್ಟಳು

ಅದೇನ್ ಮಾಡ್ಕೋತಿಯೋ ಮಾಡ್ಕೋ. ನಾನು ಸೀರೆ ಬಿಚ್ಚಲ್ಲ ಬಾಳೇಕಾಯಿ ತೆಗೆಯಲ್ಲ, ಅಂತ ಹೇಳಿ ಅಳುತ್ತಾ ಕುಳಿತುಬಿಟ್ಟಳು. ಇವಳ ಅಳು, ಹಠ ಕಂಡು ಅವರಿಗೆ ಅನುಮಾನವೂ, ಅವರು ತನ್ನನ್ನು ಈ ರೀತಿ ನಡೆಸಿಕೊಂಡಿದ್ದು ಇವಳಿಗೆ ಅವಮಾನವೂ ಆಗಿ, ಬಾಳೇ ಕಾಯಿ ಗಂಟಿಗಿಂತಲೂ ಜಟಿಲವಾದ ಕಗ್ಗಂಟು ಎರಡೂ ಪಾರ್ಟಿಗಳ ಮಧ್ಯದಲ್ಲಿ ಉದ್ಭವವಾಯಿತು.!

ಹೊರಗೆ, ವೆಂಕನೂ, ಅವನ ಗೆಳತಿ ಸುಮ್ಮಿಯೂ, ಸುಮ್ಮನೆ ಕಾದಿದ್ದೇ ಕಾದಿದ್ದು. ಸಾವಿತ್ರಮ್ಮ ಎಷ್ಟು ಹೊತ್ತಾದರೂ ಬರಲೇ ಇಲ್ಲ. ಸಾವಿತ್ರಮ್ಮನ ಪೆಟ್ಟಿಗೆ ಕನ್ವೇಯರ್ ಬೆಲ್ಟಿನ ಮೇಲೆ ಕಾಲುಸುಟ್ಟ ನಾಯಿಯಂತೆ ಗಸ್ತು ಹೊಡೆಯುತ್ತಲೇ ಇತ್ತು.

ಕಡೆಗೆ ಅಲ್ಲಿ ವಿಚಾರಿಸಲಾಗಿ, extended investigation and security check ಗಾಗಿ ಸಾವಿತ್ರಮ್ಮನನ್ನು ಹಿಡಿದು  ಕೂಡಿಸಿರುವುದಾಗಿಯೂ, ಅಲ್ಲಿ lost in translation ಸಮಸ್ಯೆಯ ಜಟಿಲತೆಯಿಂದಾಗಿ ಎಲ್ಲವೂ ಸ್ತಬ್ಧಸ್ಥಿತಿಗೆ ಬಂದಿರುವುದಾಗಿಯೂ ತಿಳಿದ ಮೇಲೆ ಸುಮ್ಮಿಯು, ಇದು ಬಟ್ಟೆ ತೊಡುವ ಸಂಪ್ರದಾಯ ಎಂದು ಅವರಿಗೆ ಹೇಳಿದರೂ ಕೇಳದಿದ್ದಾಗ, ಸಾವಿತ್ರಮ್ಮನ ಚೀಲದಿಂದ ಹದಿನಾರು ಗಜ ಸೀರೆಯೊಂದನ್ನು ತೆಗೆದು ಸುಮ್ಮಿಯು ಉಟ್ಟು ತೋರಿಸಿದ ಮೇಲೆ ಅವರೆಲ್ಲಾ ಸಾರಿ ಕಣಮ್ಮಿ ಅಂತ ಇಂಗ್ಲೀಷಿನಲ್ಲಿ ಹೇಳಿ ಸುಮ್ಮನಾದರಂತೆ. ಆದರೇನು? damage was done.

ಹೊರಗೆ ಬರುತ್ತಲೇ ಅವರಿಗೆಲ್ಲಾ ನೆಟಿಗೆ ಮುರಿದು, ಶಾಪ ಹಾಕಿ, ಇರುವಷ್ಟು ದಿನ ಇದ್ದು ವಾಪಾಸು ಹೊರತುಬಿಟ್ಟಳಂತೆ. ಮತ್ತೆ ಅಮೇರಿಕಾ ಕಡೆ ತಲೆ ಹಾಕಲಿಲ್ಲವಂತೆ. ವೆಂಕಟನ ಮದುವೆಯಾಗಿ ಸುಮ್ಮಿ ಸೊಸೆಯಾದಮೇಲೆ ಅತ್ತೆ ಸೊಸೆ ಜಗಳವೇ ಆಡಲಿಲ್ಲಂತೆ. ಈ ಘಟಾಣಿ ಹೆಣ್ಣು ಸಾವಿತ್ರಿ, ಸುಮ್ಮಿಯ  ತಾಳಕ್ಕೆ ಕುಣಿಯುವುದನ್ನು ಹಳ್ಳಿ ಮನೆಕಂಡ ಶ್ರೀನಿವಾಸರಾಯರಿಗೆ ಈ ಅನ್ಯೋನ್ಯತೆಯ ರಹಸ್ಯ ಕಗ್ಗಂಟಾಗಿಯೇ ಉಳಿದಿದೆಯಂತೆ!!!!

-ವತ್ಸಲ ರಾಮಮೂರ್ತಿ

Advertisements

10 thoughts on “ವಿಮಾನ ನಿಲ್ದಾಣದಲ್ಲಿ ನಾಟಕ

 1. ಬಹಳ ಉತ್ತಮವಾದ ನಗೆಬರಹ. ಅಂತರಿಕ್ಷದಲ್ಲಿ ಎಕಾದಶಿ ಮಾಡಿ ಹೆಚ್ಚಿನ ಪುಣ್ಯ ಕಟ್ಟಿಕೊಂಡು ದಪ್ಪಕುಂಡಿಯ ಲಂಕಿಣಿಯ ಜೊತೆಗಿನ ಮುಖಾಮುಖಿ ತಪಾಸಣೆಯನ್ನು ಜಯಿಸಿ ಕೊನೆಗೊ ’ನರಕ’ ದಿಂದ ಮುಕ್ತವಾಗಿ ಹಳ್ಳಿ ಸೇರಿದ ಸಾವಿತ್ರಿಯ ಸಾಹಸ ಬಹಳ ಸ್ವಾರಸ್ಯಕರವಾಗಿದೆ. ಇತ್ತಿಚಿಗೆ ನಾನು ಓದಿದ ಲಘುಬರವಣಿಗೆಗಳಲ್ಲಿ ಹೆಚ್ಚಿನ ಖುಷಿಕೊಟ್ಟು ನಕ್ಕುನಗಿಸಿದ ಬರಹ.

  ಕಳೆದ ವರ್ಷ ನಾನು ಪೂರ್ಣಿಮ ಫಿಲಡೆಲ್ಫ಼ಿಯ ನಿಲ್ದಾಣದಲ್ಲಿ ಇಳಿದಾಗ ಪೂರ್ಣಿಮ ಬ್ಯಾಗ್ ನಲ್ಲಿ ತಿನ್ನದೆ ಉಳಿದ ಬಾಳೆಹಣ್ಣನ ವಾಸನೆಹಿಡಿದ ಸೆಕ್ಯುರಿಟಿ ನಾಯಿಯಿಂದಾಗಿ ಲಂಕಿಣಿಯು ತಪಾಸನೆ ನಡೆಸಿ ಪೂರ್ಣಿಮ Banana trafficker ಎಂದು ದಾಖಲು ಮಾಡಿದ ಸಂಗತಿಯನ್ನು ಇಲ್ಲಿ ನೆನೆಯುತ್ತೇನೆ. ಇದು ನಮ್ಮ ಪಾಲಿನ ವಿಮಾನ ನಿಲ್ದಾಣದ ನಾಟಕ

  Like

 2. ಜಗತ್ತೇ ಒಂದು ರಂಗಭೂಮಿ, ಎಂದ ಶೇಕ್ಸ್ ಪಿಯರ್.( ‘All the world’s a stage!’). ನಿಜವಾಗಿಯೂ ಎಲ್ಲ ಮಿಮಾನ ನಿಲ್ದಾಣಗಳೂ ಒಮ್ಮೊಮ್ಮೆ, ಅವರವರ ಪಾಲಿಗೆ ರಂಗಸ್ಥಳವಾಗುವದನ್ನು ಈಗ ಸಾವಿತ್ರಮ್ಮನ ಅನುಭವದಿಂದ ತೋರಿಸಿಕೊಟ್ಟಿದ್ದಾರೆ ವತ್ಸಲಾ ಅವರು, ತಮ್ಮದೇ ಆದ ಶೈಲಿಯಲ್ಲಿ. ನಮ್ಮನ್ನೆಲ್ಲ ನಗೆಗಡಲಲ್ಲಿ ತೇಲಿಸಿದ್ದಾರೆ. ಅಂತೂ ವೆಂಕಟ ಹೇಳಿದಂತೆ ನರಕವನ್ನು ಅಲ್ಲೇ ಕಂಡು ಕೊಂಡರಲ್ಲ ಬಡಪಾಯಿ ಸಾವಿತ್ರಮ್ಮ! ‘ಇಲ್ಲೇ ಸ್ವರ್ಗ ಇಲ್ಲೇ ನರಕ ಮೇಲೇನಿಲ್ಲಾ ಸುಳ್ಳು’. ಕಾಲ ಬೇರೆಯಾದರೇನು; ಏರ್ಪೋರ್ಟ್ ನಾಟಕಗಳಿಗೆ ಕೊರತೆಯಿಲ್ಲ. ನಮ್ಮ ಬರಹಗಾರರಿಂದ ಇನ್ನಷ್ಟು ಅನುಭವಗಳನ್ನು ಇಲ್ಲಿ ಕಾಣುವ ಉತ್ಸುಕತೆಯಿದೆ. ವತ್ಸಲಾ ಅವರ ಮುಂದಿನ ಬರಹವನ್ನೂ ಎದುರು ನೋಡುತ್ತೇವೆ

  Like

 3. ಪರದೇಶ -ವಿದೇಶದ ಗಮ್ಮತ್ತು ಆಪತ್ತುಗಳ ಸರಣಿ ಚೆನ್ನಾಗಿದೆ. ಮಕ್ಕಳ ಬಗೆಗಿನ ನಿರೀಕ್ಶೆಗಳ ವಿಡಂಬನೆಯೂ ಇದೆ.
  ನಿಮ್ಮ ಲೇಖನಿಯಿಂದ ಮತ್ತಸ್ಟು ಬರವಣಿಗೆ ಬರಲಿ.

  Like

 4. ವತ್ಸಲಾ ಅವರು ತಮ್ಮ ಪ್ರಥಮ ಪ್ರಯತ್ನದಲ್ಲೇ, ನಮ್ಮನ್ನೆಲ್ಲಾ ತಮ್ಮ ಹಾಸ್ಯಮಯ ಬರವಣಿಗೆಯಿಂದ ನಗಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕೆ ಮೊದಲು ದೇಸಾಯಿ ಅವರು ತಮ್ಮ “ತುರುಕು“ ಬರಹದಲ್ಲಿ, ವಿಮಾನ ನಿಲ್ದಾಣದ ಅನುಭವವನ್ನು ರಸವತ್ತಾಗಿ ಬರೆದು ನಮ್ಮನ್ನೆಲ್ಲಾ ಮನರಂಜಿಸಿದ್ದರು. ವತ್ಸಲಾ ಅವರ ಲೇಖನದ ಸಾವಿತ್ರಿ ಬಾಯಿ, ೭೦ ರ ದಶಕದಲ್ಲಿ, ಮೈಸೂರಿನಿಂದ ಇದೇ ಪೀಳಿಗೆಯ ಮಹಿಳೆಯರು, ತಮ್ಮ ಮಗಳ ಬಾಣಂತನಕ್ಕೆಂದು ಅಮೆರಿಕಾಗೆ ಪ್ರಯಾಣ ಮಾಡುವಾಗ ಆದ ಅನುಭವಗಳನ್ನು ನೆನಪಿಸಿದರು. ಹೊರಗಿನ ಪ್ರಪಂಚದ ಆಗುಹೋಗುಗಳ ಬಗ್ಗೆ ಎಳ್ಳಷ್ಟೂ ಪರಿಚಯವಿಲ್ಲದ ವ್ಯಕ್ತಿಗಳು, ವಿಮಾನ ನಿಲ್ದಾಣವನ್ನು ಮೊದಲ ಬಾರಿಗೆ ತಲುಪಿದಾಗ, ಅವರಿಗಾಗುವ ಆಘಾತಗಳ ಸರಮಾಲೆಯನ್ನೇ, ವತ್ಸಲಾ ತಮ್ಮ ಲೇಖನದಲ್ಲಿ ಬಹಳ ಚೆನ್ನಾಗಿ ವಿವರಿಸಿದ್ದಾರೆ. ಸಾವಿತ್ರಿಬಾಯಿಯೊಂದಿಗೆ, ಅವರ ಪತಿಊ ಹೋಗಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. ವತ್ಸಲಾ ಅವರ ಲೇಖನಿಯಿಂದ ಇನ್ನೂ ಇಂತಹ ಲೇಖನಗಳು ಹೊರಬರಲಿ.
  ಉಮಾ ವೆಂಕಟೇಶ್

  Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s