i- ಪದಗಳು – ಸುದರ್ಶನ ಗುರುರಾಜರಾವ್ ಬರೆದ ಕವಿತೆ

ಐ-ಫೋನ್, ಐ ಪ್ಯಾಡ್ ಇವುಗಳು ನಮ್ಮ ಎಡ ಬಿಡದ ಸಂಗಾತಿಗಳಾಗಿವೆ. ಇವುಗಳ ಜೊತೆಗೆ ಕಳೆಯುವ ಸಮಯ ನಮ್ಮ ದಿನದ ಬಹು ಭಾಗವನ್ನು ಆಕ್ರಮಿಸಿಕೊಂಡು ಮನುಷ್ಯರ ನಡುವಿನ ಸಂವಹನಕ್ಕೆ ಅಡ್ಡ ಗೋಡೆಗಳಾಗಿವೆ. ಮಕ್ಕಳೂ ಇದಕ್ಕೆ ಹೊರತಲ್ಲ. ಭಾವನೆಗಳೇ ಇಲ್ಲದೆ ಬೆಳೆಸಿದರೆ ನಾಳೆ ನಮ್ಮ ಜೊತೆ ಹಂಚಿಕೊಳ್ಳಲು ಅವ್ಗಳಿಗೆ ಏನೂ ಉಳಿದಿರಲಾರದು ಎನ್ನುವುದು ನನ್ನ ಅನಿಸಿಕೆ. ಈ ಹಿನ್ನೆಲೆಯಿಂದ ಬರೆದ ಕವನ ಜಿ.ಪಿ.ರಾಜರತ್ನಂ ರ ರತ್ನನ ಪದಗಳು (hendkudka ratna) ಜಾಡಿನಲ್ಲಿ ಓದಿಸಿಕೊಂಡು ಹೋಗುತ್ತದೆ. ಅವರ ಕ್ಷಮೆ ಇರಲಿ. ಹಳೆ ಬೇರಿಗೆ ಹೊಸ ಚಿಗುರನ್ನು ಬಲವಂತವಾಗಿಯಾದರೂ ಅಂಟಿಸುವ ಹುನ್ನಾರ ನನ್ನದು!!

 

 

 

 

 

 

 

i- ಪ್ಯಾದೆಗಳು (padegalu)

ಐ-ಪಾಡ್,ಐ-ಫೋನ್,ಐ-ಪ್ಯಾಡ್ ಅಂದ್ರೆ
ಎಲ್ಲಾರ್ಗೂನು ಪ್ರಾಣ
ಐ-ಪ್ಯಾಡ್ ಕೈಯಲ್ಲಿತ್ತೂಂತಂದ್ರೆ
ಮೈಮೇಲಿರಲ್ಲ ಜ್ಞಾನ                                                                                                                           

ಬೆಳ್ಗಾಗೆದ್ದು ಐ-ಪ್ಯಾಡ್ ಹಿಡ್ಕಂಡ್
ಟಾಯ್ಲೆಟ್ಗೆ ಹೋದಾಂತನ್ನು                  
ಬ್ರಹ್ಮ ಶೌಚ ಮಾಡ್ಕೋಡ್ ಕುಂತು
ಮರ್ತು ಬೇರೇವ್ರನ್ನು

ಒಂದೇ ಒಂದು ಬಚ್ಲು ಟಾಯ್ಲೆಟ್
ಮನೇಲಿತ್ತೂಂತಂದ್ರೆ
ಕೇಳ್ಲೇ ಬೇಡ ಕಾಯ್ತಿರೋರ್ಗೆ
ಹೊಟ್ಟೇಗಾಗೋ ತೊಂದ್ರೆ

ಪರ್ದೇ ಮೇಲೆ ಕೂತಿರ್ತಾವೆ
‘’ಆಪ್” ಗಳೆಂಬೋ ಕೋತಿ
ಥಕ್ ಥಕ್ ಅಂತಾ ತೆಕ್ಕೋಂತಾವೆ
ತಿವುದ್ರೆ ಅವ್ಗುಳ್ ಮೂತಿ

ಆಂಗ್ರೀ ಬರ್ಡು, ಕ್ಯಾಂಡೀ ಕ್ರಶ್ಶು
ಫ಼ೇಸ್ಬುಕ್ ಇನ್ನೂ ಏನೇನೇನೋ
ಕೋತಿ ಕೂಣ್ಸೋಕ್ ಹೋದೋರ್ಗೆಲ್ಲ
ಕಣ್ಣಿಗ್ ಬೀಳ್ತಾವ್ ಕಾಣೋ

ಮೊದ್ ಮೊದ್ಲೆಲ್ಲಾ ತಾವೇ ಕುಣ್ದು
ಮದ ತಲೆಗೇರ್ಸಿ
ಆಮೇಲಿಂದ ನಿನ್ನೇ ಕೋತಿ
ಕುಣುಸ್ತಾವೆ ಆಡ್ಸಿ

ಸಫ಼ಾರಿ ಅನ್ನೋ ಆನೇ ಮೇಲೆ
ಕೂತ್ಕೊಂಡ್ ಹೋದ್ರೆ ಸವಾರಿ
ಅಂತರ್ಜಾಲದ್ ಕಾಡ್ನಲ್ ದಾರಿ
ತಪ್ಪಿ ಕಳೆದೋಗ್ತೀರಿ

ಕೆಲ್ಸ ಕಾರ್ಯ ಎಲ್ಲ ಇಟ್ಕೊಂಡ್
ಸೋಫ಼ಾ ಮೇಲೆ ಕುಂಡಿ
ಊರ್ಕೊಂಡ್ ಐ-ಪ್ಯಾಡ್ ನೋಡ್ತಾ ಇದ್ರೆ
ಹೆಂಡ್ತಿ ಆಗ್ತಾಳ್ ಚಂಡಿ

ಅಯ್ಯ ನಿಂತ್ಕೊಂಡ್ ಉಚ್ಛೆ ಹುಯ್ದ್ರೆ
ಮಕ್ಳು ತಾವೇನ್ ಕಮ್ಮಿ
ಅಂತಾ ಓಡಾಡ್ ಹುಯ್ದಾಕ್ತಾವೆ
ಅನ್ನೋದ್ ಗಾದೆ ಸ್ವಾಮಿ

ಮಾತೇ ಆಡ್ದೆ ಐ-ಪ್ಯಾಡ್ ಹಿಡ್ಕೊಂಡ್
ಇದ್ರೆ ಗುಮ್ಮನ್ ಹಂಗೆ
ಪ್ರೀತಿ ಮಮ್ತೆ ತೋರ್ದೆ ಹೋದ್ರೆ
ಮಕ್ಳು ಬೆಳ್ಯೋದ್ ಹೆಂಗೆ!!??

ಅಪ್ಪ ಅಮ್ಮ ಅಜ್ಜಿ ತಾತ
ಎಲ್ಲಾ ಜೊತೆಗೆ ಸೇರಿ
ನಕ್ಕು ನಲ್ದು ಬೆರ್ತು ಬಾಳಿ
ತೋರ್ಸಿ ಜೀವ್ನದ್ ದಾರಿ

 

 

ಸುದರ್ಶನ ಗುರುರಾಜರಾವ್.

7 thoughts on “i- ಪದಗಳು – ಸುದರ್ಶನ ಗುರುರಾಜರಾವ್ ಬರೆದ ಕವಿತೆ

  1. ಅಪ್ಪ ಅಮ್ಮ ಅಜ್ಜಿ ತಾತ ಹಿಡಿದು ಎಲ್ಲರೂ ಐ-ಪ್ಯಾಡ್ ಧಾರಿಗಳಾಗುವ ಕಾಲ ಬಂದಿದೆ. ಕೊನೆಯ ಸಾಲಿನಲ್ಲಿ ಹೇಳಿದಂತೆ ಜೀವನದ ದಾರಿ ತೋರಿಸಲು ಐ-ಪಾಡ್ ಸ್ವಿಚ್ ಮಾಡಿದ ಕೂಡಲೆ ಆಪ್ಪಲ್ ಕೆಳಗೆ ಆ ಧ್ಯೇಯವಾಕ್ಯ (“ಎಲ್ಲಾ ಜೊತೆಗೆ ಸೇರಿ ನಕ್ಕು ನಲ್ದು ಬೆರ್ತು ಬಾಳಿ”) ಬೆಳಗಿದರೆ, ಮತ್ತೆ ಮತ್ತೆ ಫ್ಲಾಶ್ ಆದರೆ ಚೆನ್ನು ಎಂದೆನೆನಿಸುತ್ತದೆ!
    ಮೆಚ್ಚುವಂಥ ರಚನೆ. It’ll give ರನ್ನ run for his money!
    ಶ್ರೀವತ್ಸ

    Like

  2. ತುಂಬಾ ಚೆನ್ನಾಗಿ ಮೂಡಿಬಂದಿದೆ. ರಾಜರತ್ನಂ ನಿಜವಾಗಿಯೂ ಹೆಮ್ಮೆ ಪಡುತ್ತಾರೆ.

    Like

  3. ಸುದರ್ಶನ್ ಅವರೆ,
    ಸಮಯೋಚಿತವಾಗಿದೆ ನಿಮ್ಮ ಐ-ಪದ(ಪ್ಯಾದೆ)ಗಳು. ಜನರ ಜೀವನವನ್ನೇ ಬದಲಾಯಿಸಿ, ಎಲ್ಲರ ಮನ ಮತ್ತು ಮನೆಗಳಲ್ಲಿ, ಒಂದು ವಿಧದ ಹಾವಳಿಯನ್ನೇ ಉಂಟು ಮಾಡಿರುವ ಈ ಆಯತಾಕಾರದ ಪ್ಯಾಡ್ ಕೆಲವೊಮ್ಮೆ ನಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತದೆ. ಎಲ್ಲಾ ವಯಸ್ಸಿನವರೂ ಇದರ ಜಾಲಕ್ಕೆ ಸಿಲುಕಿದ್ದಾರೆ.
    “ಮಾತೇ ಆಡ್ದೇ , ಮುಖ ಎತ್ ನೋಡ್ದೇ,
    ಐಪ್ಯಾಡ್ ನಲ್ ಮುಳ್ಗಿರೋ ತನ್ಕ,
    ಯಾರ್ ಮನೇ ಸಂಸಾರ್ದಲ್ಲೂ
    ಉಳಿಯಾಕಿಲ್ಲ ನೆಮ್ಮ್ದಿ ಪ್ರೀತಿ ಅನ್ಕ.

    Like

  4. ಬಹಳ ಚೆನ್ನಾಗಿ ಬರೆದಿದ್ದೀರಿ. ಈ ಹೊಸ ರೀತಿಯ ಆಪಲ್ಗಳು ಮನೆಗಳಲ್ಲಿ ಮಾಡುತ್ತಿರುವ ಅವಾಂತರವನ್ನು, ಎಲ್ಲಾ ಪತ್ನಿಯರ ದೂರುಗಳನ್ನು ಪದ್ಯದ ರೀತಿಯಲ್ಲಿ ಬರೆದಿದ್ದೀರಿ. ಕವಳೆಯವರು ಬರೆದ ಹಾಗೆ ರಾಜರತ್ನಂ ಸಹ ಇದನ್ನು ಭೇಷ್ ಅನ್ನುತ್ತಿದ್ದರು.

    Like

  5. ತುಂಬ ಚೆನ್ನಾಗಿದೆ ನಿಮ್ಮ i ಪದ.
    ಅಂತರ್ಜಾಲದ ಹಾವಳಿ ತುಂಬ ಆಗಿ ಬದುಕೇ ಬದಲಾಗಿದೆ.
    ಇದು ಅನಿವಾರ್ಯ ವಿಪತ್ತೋ, ಸಂಪತ್ತೋ ಗೊತ್ತಿಲ್ಲ. ಆದರೆ ನಿಲ್ಲಿಸುವುದು ಅಷ್ಟು ಸುಲಭವಲ್ಲ.

    ಪ್ರಯತ್ನ ಪಟ್ಟು ಸ್ವಲ್ಪ ಸಮತೋಲನ ಕಾಪಾಡಿಕೊಳ್ಳದಿದ್ದರೆ I ದೇವರೇ ಗತಿ!

    Like

  6. ಸುದರ್ಶನ ಅವರು ಬರೆದ ಪದ್ಯ ಸರಿಯಾಗೇ ಇದ್ದಿರಬಹುದು. ಏಲ್ಲಾ ಚರಣಗಳೂ ಒಟ್ಟುಗೂಡಿ ಈ ವರ್ಡ್‍ಪ್ರೆಸ್ಸ್ ಬ್ಲಾಗಿನಲ್ಲಿ ಒಂದೇ ಸಮನೆ ಬಂದಿದೆ. ಅದು ಅವರ ತಪ್ಪು ಅಲ್ಲವೇ ಅಲ್ಲ. ನನ್ನ ಪದ್ಯವೂ ಹಾಗೆಯೇ ಬಂದಿದೆ. ಆದುದರಿಂದ ಅವರ ಕ್ಷಮೆ ಬೇಡುವೆ. ಆದರೂ ಈ ಬ್ಲಾಗಿನ ವಿಲಕ್ಷಣದಿಂದ ನನ್ನ ಅನಿಸಿಕೆಯನ್ನು ಪದ್ಯರೂಪದಲ್ಲಿ ಬರೆಯಲು ಸ್ಪೂರ್ತಿ ದೊರಕಿತಲ್ಲವೇ?
    ರಾಜಾರಾಮ್

    Like

  7. ಸುದರ್ಶನ ಅವರ ಪದ್ಯಾನ್ ನೋಡಿ
    ಬೆರಗಾದೆ ನಾನ್ ಅದನ್ ಓದಿ
    ರಾಜರತ್ನಮ್ ಏನಾರ್ ಇದ್ದಿದ್ರೆ
    ಸಾಬಾಸ್ ಕೊಡ್ತಿದ್ರು ಅವ್ರದನ್ ಓದಿ.

    ಚರಣ್‍ಗಳ್ನ ಬೇರ‍್ ಬೇರ್ ಮಾಡಿದ್ರೆ
    ಪದಗಳ್‍ಪ್ರಾಸ ಸಿಕ್ಕೋ‍ದ್ ಕಣ್ರಿ
    ಎತ್ತಿನ್‍ಉಚ್ಚೆ ಉಯ್ದಂಗ್ ಬರೆದ್ರೆ
    ಪ್ರಾಸ್‍ಗಳೆಲ್ಲಾ ತಪ್ಪೋಯ್ತದೆ ಅನ್ರಿ.

    ಐ ಫೋನ್ ಓಗ್ಲಿ ಐ ಪ್ಯಾಡ್ ಓಗ್ಲಿ
    ಎಲ್ಲಾ ಕೊಚ್ಕೊಂಡ್ ಓಗ್ಲಿ
    ಬುದ್ದಿ ನೆಟ್ಗಿರೋಗಂಟ
    ಕನ್ನಡ್‍ಪದಗೋಳ್ ಸಾಗ್ಲಿ.

    -ರಾಜಾರಾಮ್ ಕಾವಳೆ.

    Like

Leave a Reply

Your email address will not be published. Required fields are marked *