ಅಂತರಾಗ್ನಿ – ಸುದರ್ಶನ್ ಬರೆದ ಕವನ

ಅಂತರಾಗ್ನಿ

ಸಾಧನೆಯ ಅಂತರಾಗ್ನಿಯದು
ಬೇಕೆಂದು ಬದುಕಿಗೆ
ಸಾಧನೆಯೆ ಇಲ್ಲದಿಹುದೆಂಥ ಬದುಕು
ಸುತ್ತಲಿನ ಪರಿಸರದಿ ಸ್ಫೂರ್ತಿಯನು
ಪಡೆಯುತಲಿ ನೀ ಶ್ರಮಿಸು
ಪರಿಹರಿಸೆ ಅದರ ಹುಳುಕು                                                                                 the inner fire is the most important thing mankind possesses.

ಅದಿಕವಿ ಪಂಪ ತಾ ಭಾರತವ
ಬರೆದಾಗ ಕನ್ನಡದಿ
ಭಾರತದ ಕಾವ್ಯವಿರಲಿಲ್ಲ
ಸ್ಫೂರ್ತಿಯನು ತಾ ಪಡೆದು
ರಚಿಸಿರಲು ಕಾವ್ಯವನು
ಅದಿಕವಿ ತಾನಾಗಿ ಮೆರೆಯದಿರಲಿಲ್ಲ

ಪಂಪನಾ ಕಾವ್ಯವದು ಒರತೆಯಾಗುತ
ಹರಿದು ಮುಂದೆಲ್ಲ
ಹಲವಾರು ಕಾವ್ಯಗಳ ಕೂಡಿ
ಕಾಲನಾ ಹರಿವಿನಲಿ ಹಲವು
ಕಾವ್ಯಗಳೆಂಬ ಝರಿಗಳನು
ಸೇರುತಲಿ ನದಿಯಾಗಿ ಓಡಿ

ರನ್ನ ಜನ್ನರ ಪೊನ್ನ ಹರಿಹರರ
ಕಾವ್ಯಗಳು ಕನ್ನಡದ
ಸಾಹಿತ್ಯ ನದಿಗೆ ಸೇರುತಿರೆ
ಭಾರತಾಂಬೆಯಖಂಡ ಸಾಹಿತ್ಯ
ಸಾಗರದ ಮಡಿಲನ್ನು
ತಾವೆಂದು ತುಂಬಿ ಹರಿಸುತಿರೆ

ಭಾಷೆ ಹಲವಾರಿರಲು ಭರತ
ಖಂಡದ ತುಂಬ ನೀತಿ
ನಿಯಮಗಳೊಂದು ಹೊಂದಿ ಸೇರದಿರೆ
ಪಾಣಿನಿಯು ಇದಕಂಡು ವ್ಯಾಕರಣ
ರಚಿಸಿರಲು ಏಕತೆಯು
ವಿವಿಧತೆಯ ನಡುವೆ ಮೂಡುತಿರೆ

ಬಾಣಂತಿ ಜ್ವರದಿಂದ ಮಾತೆಯರು
ಅಸುನೀಗಿ ಹಸುಗೂಸುಗಳು
ಆಗೆ ತಬ್ಬಲಿಗಳು
ಇಗ್ನಾಜು ಫಿಲಿಪ ಸಮಲ್ವೈಸ
ಇದಕಂಡು ಮರುಗುತಲಿ
ದುಡಿದು ತಾ ಹಗಲು ಇರುಳು

ಸಂಕಲ್ಪವನು ತೊಟ್ಟು ನಿದ್ರೆ
ಊಟವ ಬಿಟ್ಟು ದುಡಿದಿರಲು
ಜ್ವರಕೆ ತಾ ಕಾರಣವನರಸಿ
ಕೈ ತೊಳೆದು ರೋಗಿಗಳ ಮುಟ್ಟುವುದೆ
ಇದಕೆಂದು ಪರಿಹಾರ
ಎಂಬಂಥ ಬೆಳಕು ಹರಿಸಿ

ಕರ್ತೃತ್ವ ಶಕ್ತಿಯದು ಪ್ರತಿಯೊಂದು
ಜೀವಿಯಲು ಅಡಗಿಹುದು
ಕಾಣದೆಯೆ ಸುಪ್ತವಾಗಿ
ಅಂತರಾಗ್ನಿಯ ಕಾವು ಸೋಕಿರಲು
ತಾ ಕರಗಿ ಹರಿಯುವುದು
ಹೊರಗಡೆಗೆ ವ್ಯಕ್ತವಾಗಿ

 ನಿನ್ನೊಳಗೆ ಅಡಗಿರುವ ಪ್ರತಿಭೆಗಳೆ
ಎಂದೆಂದು ಸಾಧನೆಗೆ
ಬೇಕಿರುವ ಪರಿಕರಗಳು
ಗುರು-ಮಿತ್ರ ತಂದೆ ತಾಯಿಯರು
ಪರಿಸರವು ನಿನ್ನ ಸಾಧನೆಗೆ
ವೇಗ ವರ್ಧಕಗಳು     

ಮೈಕೊಡವಿ ಎದ್ದೇಳು ಆಲಸ್ಯವನು
ಬಿಟ್ಟು ಉದ್ದೀಪಿಸು
ನಿನ್ನಂತರಾಗ್ನಿಯನ್ನು
ಉರಿವ ಹಣತೆಯ ತೆರದಿ ತೋರುತಿರು
ಬೆಳಕನ್ನು ವ್ಯರ್ಥಗೊಳಿಸದೆ
ನಿನ್ನ ಜೀವನವನು.             
                                                                                  

 

ಡಾ.ಸುದರ್ಶನ ಗುರುರಾಜರಾವ್

6 thoughts on “ಅಂತರಾಗ್ನಿ – ಸುದರ್ಶನ್ ಬರೆದ ಕವನ

 1. ’ಬಂಗಾರದ ಮನುಷ್ಯ’ ಸಿನಿಮಾದ ’ಆಗದು ಎಂದು ಕುಳಿತರೆ ಸಾಗದು ಕೆಲಸವು ಮುಂದೆ’ ಎಂಬ ಹಾಡನ್ನು ಯುಟ್ಯೂಬಿನಲ್ಲಿ ಕೇಳಬಹುದು.(http://youtu.be/2SFhuY1myD4). ಈ ಸಿನಿಮಾವನ್ನು ಸಂಪೂರ್ಣವಾಗಿಯೂ ನೋಡಬಹುದು
  (http://youtu.be/PO0eCLDw9zE)

  Like

 2. ರಾಜಾರಾಮ್ ಅವರಿಗೆ ಕನ್ನಡ ಚಲನಚಿತ್ರ “ಬಂಗಾರದ ಮನುಶ್ಯದ“ ಗೀತೆ ನೆನಪಿದೆ ಎಂದು ತಿಳಿದು ಸಂತೋಷವಾಯಿತು.
  ಉಮಾ ವೆಂಕಟೇಶ್

  Like

 3. ಸುದರ್ಶನ ಅವರ ಈ ಪದ್ಯವು, ’ಎಲ್ಲರೂ ತಮ್ಮಲ್ಲಡಗಿರುವ ಸುಪ್ತಶಕ್ತಿಯನ್ನು ಪ್ರಚೋದಿಸಿ ಹೊರತರುವ ಒಂದು ಸ್ಪೂರ್ತಿದಾಯಕ ಸಲಹೆಯ ಹಾಗಿದೆ. ಈ ಪದ್ಯವು ಕುವೆಂಪು ಅವರ ಪದ್ಯ – ’ಓ ನನ್ನ ಚೇತನ ಆಗು ನೀ ಅನೀಕೇತನ……. ’ ಮತ್ತು ’ಬಂಗಾರದ ಮನುಷ್ಯ’ ಚಿತ್ರದ ಗೀತೆ – ’ಆಗದು ಎಂದು ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೈಲಾಸವು ಮುಂದೆ’ ಇವುಗಳನ್ನು ಜ್ಞಾಪಕಕ್ಕೆ ತರುತ್ತದೆ ! ಇವರೇನು ಮಾನಸಿಕ ಚಿಕಿತ್ಸೆಯಲ್ಲಿ ತರಬೇತಿ ಹೊಂದಿದವರೇ?!
  –ರಾಜಾರಾಮ್ ಕಾವಳೆ

  Like

 4. ಉಮ ಅವರು ನಿಮ್ಮ ಬರಹಕ್ಕೆ ಚೆನ್ನಾಗಿ ಸ್ಪಂದಿಸಿದ್ದಾರೆ
  ಬರಹ ಅಥವಾ ಏನೇ ಇತರೆ ಇಳಕೆಂಡವಿದ್ದವರಿಗೆ ನಿಮ್ಮ ಬರಹದ ಕಿಡಿ ತಗುಲಲಿ.

  Like

 5. ಭಲೇ ಸುದರ್ಶನ್ ಅವರೆ,
  ನಿಮ್ಮ ಕವನವೆಂಬ ಕತ್ತಿಯನ್ನು ಝಳಪಿಸಿ,
  ಮಲಗಿರುವ ನಮ್ಮ ಸದಸ್ಯರನ್ನೆಬ್ಬಿಸಿ,
  ಅವರ ಅಂತರಾಗ್ನಿಯನ್ನುರಿಸಿ
  ಅವರ ಲೇಖನಿಂದ ಬರಹದ ಝರಿಗಳನ್ನುಕ್ಕಿಸಿ
  ಕಾಣಲಿ ಸಾರ್ಥಕತೆಯನ್ನು
  ನಿಮ್ಮ ಈ ಕವನದ ತೊರೆ.

  ಉಮಾ ವೆಂಕಟೇಶ್

  Like

 6. ನಿಮ್ಮ ಕವನದಲ್ಲೂ ಆ ಜ್ವಾಲವನ್ನು ಕಾಣುತ್ತೇವೆಯಲ್ಲವೆ? ಕಠೋಪನಿಷತ್ತಿನ ‘ಉತ್ತಿಷ್ಠ ಜಾಗೃತ ಪ್ರಾಪ್ಯ ವರಾನ್ನಿಬೋಧಿತ’ದಿಂದ ಪ್ರೇರಿತರಾಗಿ ಸ್ವಾಮಿ ವಿವೇಕಾನಂದರು ಭಾರತದ ಯುವಕರಿಗೆ “arise, awake, stop not till the goal is reached” ಎಂದು clarion call ಕರೆಗೊಟ್ಟದ್ದನ್ನು ನೆನಪಿಗೆ ತರುವಂತೆ ಸುಂದರವಾಗಿ ರಚಿಸಿದ ಕವನದದಿಂದ ಅಂತರಾಗ್ನಿಯ ಝಳ ರಭಸದಿಂದ ಬಂದು ತಾಗುತ್ತದೆ! ಕರ್ತೃತ್ವ ಶಕ್ತಿ ಬೆಳೆಸಿ ಯಾರಿಂದ ಮಾರ್ಗ ದರ್ಶನ ಪಡೆಯಬೇಕೆಂದೂ ಹೇಳುತ್ತಿದೆ. ಪಂಪ-ರನ್ನ- ಪಾಣಿನಿಯಂಥ ಐತಿಹಾಸಿಕ ಪುರುಷರನ್ನಷ್ಟೇ ಅಲ್ಲ, ಇತ್ತೀಚಿನ ನಿಸ್ಸ್ವಾರ್ಥಿ ವೈದ್ಯ-ಸಂಶೋಧಕ ಸೆಮ್ಮೆಲ್ವೈಸನವರೆಗೆ ಇದರ ಹರಹು. ಬಿಸಿ,ಬೆಳಕು ಎರಡನ್ನೂ ಕೊಡುತ್ತಿದೆ. ಸ್ಫೂರ್ತಿದಾಯಕ!
  ಬಹುಮುಖ ಪ್ರತಿಭೆಯ ಇನ್ನೊಂದು ಕೊಡುಗೆ.
  ಶ್ರೀವತ್ಸ

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.