ಲೆಕ್ಕಾಚಾರ ತಪ್ಪಿದ್ದೆಲ್ಲಿ? – ಪ್ರೇಮಲತ ಬಿ. ಅವರು ಬರೆದ ಪ್ರಶ್ನೆ

ಮಟ ಮಟ ಮಧ್ಯಾನ. ಪಾತ್ರೆ ಅಂಗಡೀಲಿ ಗುಂಡು ಇಡ್ಲಿ ಪಾತ್ರೆ, ಮಿಕ್ಸಿ ತಗೊಳೋಣ ಅಂತ ಹೋಗಿದ್ದೆ. “ಎಲ್ಲಿದ್ದೀರ ಮೇಡಂ?”ಪಾತ್ರೆ ಅಂಗಡಿ ಮಾಲೀಕ ಕೇಳಿದ.
“ಇಲ್ಲೆ ವಿಜಯನಗರ ಕಣಪ್ಪ” ಅಂದೆ.
“ಅಲ್ಲ ಮೇಡಂ,ಎಲ್ಲಿಂದ ಬಂದಿದ್ದೀರ ಅಂತ ಕೇಳಿದ್ದು” ಅಂದ!
‘ಎಲ ಇವನ? ಇನ್ನುರೈವತ್ತು ರೂಪಾಯಿ ಚೂಡಿದಾರ ಹಾಕಿದ್ದೀನಿ, ಕನ್ನಡದಲ್ಲಿ ಮಾತಾಡ್ತ ಇದ್ದೀನಿ, ನೋಡಕ್ಕೆ ಇವನ ಥರಾನೆ ಇದೀನಿ, ಪಟ್ ಅಂತ ಪರದೇಸಿ ಅಂತ ಕಂಡು ಹಿಡಿದನಲ್ಲ! ಭಾರೀ ಚುರುಕು ‘ ಅಂದುಕೊಂಡೆ.
ಮಗನಿಗೆ ದೇಸಿ ಬಟ್ಟೆ ತಗೋಳೋಣ ಅಂತ ಹೋದಾಗ್ಲು ಇದೇ ಅನುಭವ. ಈ ಸರ್ತಿ ಇನ್ನು ಚಿಕ್ಕ ವಯಸ್ಸಿನವನು!. ಜೊತೇಲಿದ್ದ ಅಕ್ಕ “ಬಹುಶಃ ನೀನು ಕನ್ನಡದಲ್ಲಿ ಮಾತಾಡಿದ್ದಕ್ಕೆ ಅವನಿಗೆ ತಿಳೀತು ಅನ್ನಿಸುತ್ತೆ” ಅಂದಳು. ಇದ್ಯಾವ ನ್ಯಾಯ ಸ್ವಾಮಿ, ಪರದೇಶದಲ್ಲಿ ಬರೀ ಆಂಗ್ಲ ಭಾಷೇಲಿ ಮಾತಾಡಿ, ಕರ್ನಾಟಕಕ್ಕೆ ಹೋಗಿ ಬಾಯ್ತುಂಬ ಕನ್ನಡ ಮಾತ್ತಾಡಂಗೂ ಇಲ್ವ? ಅಥವಾ ಮಾತಾಡಿದ್ರೆ ನಮ್ಮ ಪರದೇಶಿ ಸ್ತಾನ ಬಟಾಂಬಯಲಾ?
ದೂರದ ದೇಶದಲ್ಲಿ ಪರಕೀಯರಿರಲಿ, ನಮ್ಮ ದೇಶದಲ್ಲು ಪರಕೀಯರಾಗಿ ಬಿಟ್ವಲ್ಲ ಅಂತ ಹಪಹಪಿಸಿದೆ.

Street scene reduced

“ನಾನಿರೋಕಡೆ ಕನ್ನಡಿಗರ್ಯಾರು ಗೊತ್ತಿಲ್ಲ ಕಣೆ, ಭಾರೀ ಬೇಜಾರು. ಮಕ್ಕಳ್ನ ಕರ್ಕೊಂಡು ಬಂದು, ನಿಮ್ಮನೇಲಿ ಒಂದು ತಿಂಗ್ಳು ಇದ್ದೋಗ್ತೀನಿ” ಅಂತ ಭಾರತದಲ್ಲೀರೊ ಅಕ್ಕನಿಗೆ ದೂರವಾಣಿ ಕರೆ ಹಚ್ಚಿದೆ.
ಆಗತ್ಯವಾಗಿ ಬಾ, ನೀವು ಬಂದಾಗ ನಮ್ಮ ಇಂಗ್ಲಿಷೂ ಸ್ವಲ್ಪ ಸುಧಾರಿಸುತ್ತೆ” ಅಂದ್ಲು ಅಕ್ಕ!!!
ಮಕ್ಕಳನ್ನ ಕರ್ನಾಟಕಕ್ಕೆ ಕರಕೊಂಡು ಹೋದ್ರೆ ಮಕ್ಕಳ ಕನ್ನಡ ಸುಧಾರಿಸುತ್ತೆ ಅನ್ನೋ ನನ್ನ ಲೆಕ್ಕಚಾರ ಕಕ್ಕರಮಕ್ಕರವಾಗಬೇಕೆ?!!!!
* * * *
ಶಿರಾ ತಾಲ್ಲೂಕಿನಲ್ಲಿ ಆಜ್ಜಿ ಮನೆ. ದೊಡ್ಡ ಮರದ ಕಂಬಗಳು. ಮರದ ತೊಲೆಗಳ ಅಟ್ಟ. ಜಂತಿಗಳ ಸೂರು.
ಸಣ್ಣ ಸಣ್ಣ ಗೂಡುಗಳು.ಮಾಡಿನಲ್ಲಿ ಗವಾಕ್ಷಿ.

Village HouseSirsi Ajji
ಆಲ್ಲಿಗೆ ಹೋಗಿ ಮುವತ್ತು ವರ್ಷಗಳಾದವು. ದೊಡ್ಡ ನಗರಗಳಲ್ಲಿ ಬೆಳೀತಿದ್ದ ನಮಗೆ, ಸಣ್ಣ ಮಕ್ಕಳಿದ್ದಾಗ ‘ಅಜ್ಜಿ ಮನೆ’ ಅಂತ ಪ್ರೀತಿ ಇದ್ದ್ರೂ , ಏನೋ ಜಂಬ. ಅಸಡ್ದೆ. ಹಳೇ ಕಾಲದ ಮನೆ, ಹಳ್ಳಿ ವಾತಾವರಣ ಅಂತ ನಿರ್ಲಕ್ಷ್ಯ. ಜೊತೆಗೆ ನಾವು ಆಧುನಿಕ ತಲೆಮಾರು ಅನ್ನೊ ದೊಡ್ಡಸ್ತಿಕೆ!
ಇತ್ತೀಚೆಗೆ, ಇಂಗ್ಲೆಂಡ್ ಮಕ್ಕಳ ಶಾಲೆಯ ಸರಹದ್ದಿನಲ್ಲಿ ಮನೆಗಳ ಹುಡುಕಾಟ ನಡೆದಿತ್ತು. ಶಾಲೆಗೆ ಹತ್ತಿರ ಇದ್ದ ಮನೆಗಳೆಲ್ಲ ಭಾರೀ ಹಳೆ ಮನೆಗಳು. ಗತಿಯಿಲ್ಲ ಅಂತ ನೋಡಲು ಹೋದ್ವಿ.
“ಇದು 85 ವರ್ಷ ಹಳೆ ಮನೆ, ಈ ತೊಲೆಗಳಿರೋ ಮಾಡು, ಮುಂದಿರೋ ಜಗಲಿ, ತಲೆ ತಗ್ಗಿಸಿ ಒಳಗೋಗೊ ಕೋಣೆಗಳ ಆಕರ್ಷಣೆ, ಈ ಮಾದರಿ ಮನೆಗಳಿಗೆ ಭಾರೀ ಬೇಡಿಕೆ, ಅದಕ್ಕೆ ಈ ಮನೇಗೆ ಅರ್ಧ ಮಿಲ್ಲಿಯನ್ ಅಂತ ಮನೆ ತೋರಿಸಲು ಬಂದಿದ್ದ ಭಂಟ ಭಾಷಣ ಬಿಗೀತಿದ್ದ.
ಮುಂದುವರೆದ ದೇಶ, ಆಧುನಿಕ ಜೀವನ, ಹೊಚ್ಚ ಹೊಸಾ ಅನುಭವ ಅಂತ ಈ ದೇಶಕ್ಕೆ ಬಂದರೆ ಕೊನೆಗೆ ಈ ಹಳೆ ಮನೆ ಅದರ ಜೊತೆಗೆ ಹೆಚ್ಚು ದುಡ್ದು ಬೇರೆ ಕೊಡ್ಬೇಕ ಶಿವನೆ? ಅನ್ನೊ ಯೊಚನೆ ಜೊತೆ ಭ್ರಮನೆರಸನ ಆಗದೆ ಇರಲು ಸಾದ್ಯಾನೆ?
ಅಜ್ಜಿ ಮನೆ ಇದರ ನಾಲಕ್ಕರಷ್ಟು ದೊಡ್ದದಿತ್ತು ಅಂತ ನೆನೆಸಿಕೊಂಡಾಗ “ಜೊತೆಗೆ ಕೊಟ್ಟಿಗೆ ಇಲ್ವ?”ಅಂತ ಕೇಳೊ ಮನಸ್ಸಾಯ್ತು!!!!
* * * *

ದಶಕವಾಯ್ತು ಈ ದೇಶಕ್ಕೆ ಬಂದು. ದಶಕದ ಹಿಂದೆ ಭಾರತ ಶತ ವರ್ಷ ಹಿಂದಿತ್ತು. ನಮಗಿನ್ನೂ ಸಣ್ಣ ವಯಸ್ಸು.
ಕಣ್ಣಲ್ಲಿ ಕನಸುಗಳು. ದೂರದ ಬೆಟ್ಟ ನುಣ್ಣಗೆ ಕಂಡಿತ್ತು. ಹಸಿರು ಹುಲ್ಲು ಆಕರ್ಷಕವಾಗಿ ಕಂಡು ,ಸೂಟುಕೇಸಿನಲ್ಲಿ ಬಟ್ಟೆ ಹಾಕಿಕೊಂಡು ಪಶ್ಚಿಮ ದೇಶಗಳನ್ನು ನೋಡೆ ಬಿಡಾಣ ಅಂತ ಬಂದು ಇಲ್ಲಿ ಸಂಸಾರ ಹೂಡಿದ್ದೆ ಬಂತು, ಅತ್ತಕಡೆ ಹಿಂದೆ ಕಾಣದ್ದೆಲ್ಲ ಶುರುವಾಯ್ತು!
ಪಶ್ಚಿಮೀಕರಣ ,ಮಾರುಕಟ್ಟೆ ಮತ್ತು ಬೆಲೆಗಳು ಒಂದೇ ಸಮನೆ ಬೆಳೆಯಲು ಶುರುವಾಗಬೇಕೇ? ಇತ್ತಕಡೆ ಬೆಳವಣಿಗೆ ನಿಲ್ಲೋದರ ಜೊತೆ ಸಂಬಳಕ್ಕು ಕಬಂದ!!!!.
“ಹತ್ತು ವರ್ಷ ಆಯ್ತು, ಹದಿನೈದು ದೇಶ ನೋಡಿದ್ದಾಯ್ತು, ಇಲ್ಲೆ ಇದ್ದು ಸತ್ರೂ ಪರದೇಶಿಗಳೆ, ಬನ್ರಿ, ವಾಪಸ್ ಹೋಗಣ” ಅಂದೆ.
“ದುಡಿದಿದ್ದು ಸಾಲಲ್ವೆ?” ಅಂದ ಗಂಡ!
“ನಮ್ಮಂಗೆ ಹತ್ತು ವರ್ಷ ಹಿಂದೆ ಇಂಡಿಯಾದಲ್ಲಿ ಶುರು ಮಾಡಿದವರೆಲ್ಲ, ಹೊಸ ಮನೆ ಕೊಂಡುಕೊಂಡು,ಜಾಗ್ವರ-XF ಕಾರು ಇಟ್ಟುಕೊಂಡೀದಾರಲ್ರೀ” ಅಂದೆ.
“ಓಡ್ಸಿರೋ ಗಾಡಿ ಆದ್ರೆ ನಾವೂ ಕೊಂಡ್ಕೋಬಹುದು ತಗೋ” ಅಂತ ಸಮಜಾಯಶಿ ಹೇಳಿದ ಗಂಡ!!!!.
ಅಂತಜಾರ್ಲದಲ್ಲಿ ಅರ್ದ ಗಂಟೆ ತಡಕಾಡಿ ಕೊನೆಗೆ, “ಟ್ಯಾಕ್ಸ್ ಕಟ್ಟಿ, ಮಕ್ಕಳ್ನ ಒಳ್ಳೆ ಸ್ಕೂಲಲ್ಲಿ ಓದಿಸ್ಕೊಂಡು, ಇನ್ಸೂರೆನ್ಸ್ ಕಟ್ಟೋದು ಸ್ವಲ್ಪ ಕಷ್ಟ ಆಗ್ಬಹುದು ” ಅಂತ ಮಾತು ಮುಗಿಸಿದ!!!!!.

* * * *

ಪಶ್ಚಿಮ ಘಟ್ಟಗಳಲ್ಲಿ ಪ್ರತಿ ವರ್ಷ ಎರಡೆರಡು ಬಾರಿ ಚಾರಣಕ್ಕೆ ಹೋಗ್ತಿದ್ವಿ. ಕೈಯಲ್ಲಿ ಮಚ್ಚು, ಮನಸ್ಸಲ್ಲಿ ಕೆಚ್ಚು. ಕಷ್ಟ ಬಂದ್ರೆ ಕರೆಯೋಕ್ಕೆ ದೇವರದೊಂದೆ ನಂಬರು!
ನೋಡ್ತಿದ್ದ ಹಾವುಗಳೆಷ್ಟು, ಆನೆ-ಸಲಗಗಳೆಷ್ಟು. ಮರದ ಮೇಲೆ ಚಿರತೆ ಉಗುರಿನ ಗುರುತು ನೋಡ್ಕೊಂಡು ಡವಗುಡುವ ಹೃದಯಾನ ಗಟ್ಟಿ ಮಾಡ್ಕೊಂಡು ಆಕಾಶದ ಕೆಳಗೋ, ಬಟಾಂಬಯಲಿನಲ್ಲೋ, ಹಳೇ ಮಂಟಪದಲ್ಲೋ ಮಲಗಿಕೊಂಡ್ರೆ, ಅರೆಕ್ಷಣದಲ್ಲಿ ನಿದ್ದೆ. ಮೊಣಕಾಲ ಕೆಳಗೆ ನಮಗೆ ಪಾದಗಳಿದ್ದದ್ದೆ ಗೊತ್ತಾಗ್ತ ಇರಲಿಲ್ಲ.
ಈ ದೇಶಕ್ಕೆ ಬಂದ ಹೊಸತು. ಕಾರುಚಾಲನೆ ಕಲೀತಾ ಇದ್ದೆ.
ಒಂದು ದಿನ ಯಾವುದೋ ಹೊಸ ರಸ್ತೆಗೆ ಹೋದ್ವಿ. ನನ್ನ ಗುರುವರ್ಯನ ಮುಖ ಯಾಕೋ ಕೆಂಪಗಾಯ್ತು!
ಬುದ್ದಿಯ ದೀವಿಗೆ ಹೊತ್ತಿಕೊಂಡಿತು! ಆತನ ದ್ವನಿ ಆಳವಾಯ್ತು! ರಸ್ತೆ ಬದಿಯಲ್ಲಿ ನಿಧಾನವಾಗಿ ಚಲಿಸಲು ಎಚ್ಚರಿಕೆಯ ಸಲಹೆಗಳು ಬರಹತ್ತಿದವು!
ಏನೋ ಗಂಡಾಂತರ ಬಂತಲ್ಲಪ್ಪ ಅಂತ ನಾನು ಗುರುವಿನ ಕಡೆ ಆಗಾಗ ನೋಡಹತ್ತಿದೆ. ನನ್ನ ಗುರು, ನಾನು ಏಕಾಗ್ರತೆ ಕಳಕೊಳ್ಳದಂತೆ ಎಚ್ಚರಿಕೆ ವಹಿಸಿ, ಭಾರೀ ಕಾಳಜಿಯಿಂದ ಹೇಳಿದ.
” ಹೆದರ್ಕೋಬೇಡ, ಆದ್ರೆ ಈ ರಸ್ತೇಲಿ ಆಗಾಗ ‘ಹೇಸರಗತ್ತೆಗಳು’ ಕಾಣಸಿಗ್ತವೆ. ಆವು ರಸ್ತೆ ದಾಟೋದನ್ನ ನಾನು ತುಂಬ ಸಾರಿನೋಡಿದ್ದೇನೆ”ಅಂದ!!!!!!!
ಟಾಟಾ ಸುಮೊದಲ್ಲಿ ಮುತ್ತತ್ತಿ ಕಡೆ ಚಾರಣಕ್ಕೆ ದಾರಿ ಹುಡುಕಿ ತೆರಳುತ್ತಿದ್ದಾಗ ಆನೆಗಳ ಹಿಂಡೇ ಎದುರಾದದ್ದು ನನ್ನ ಮನಸ್ಸಿನಲ್ಲಿ ಹಾದುಹೋಯ್ತು .
ಆ ಗಳಿಗೆ, ಮಾತುಕತೆಯ ಏಲ್ಲ ಶಿಷ್ಟಾಚಾರಗಳನ್ನ ಬದಿಗೊತ್ತಿ ನಾನು ನಗಹತ್ತಿದೆ. ಅವನಿಗೋ ಪೂರ್ತಿ ಮುಜುಗರ.
ನನ್ನ ನಗು ನಿಲ್ಲಲು ಕೆಲವು ನಿಮಿಶಗಳೇ ಬೇಕಾದವು. ಆಮೇಲೆ ‘ಸಾರಿ’ ಕೇಳಿ ವಿವರಣೆ ನೀಡಿದ್ದಾಯ್ತು.
ಮೂರನ್ನು ಆರು ಮಾಡಿ ಮಾತಾಡಿ, ಪ್ರಪಂಚಾನೆ ಆಳಿದ ಇವರ ಬಣ್ಣನೆಯ ಆಳ ಯಾರಿಗೆ ಗೊತ್ತಿಲ್ಲ. ಆದ್ರೆ ‘ಹೇಸರಗತ್ತೆ’ ಗೂ ಇಷ್ಟೊಂದು ವರ್ಣನೆಯೇ!!

Mule2

* * * *

ಗಾಜಿನ ಮನೇಲಿ ಕೂತು ಹೊರಗಿನ ಹಸಿರು ಉದ್ಯಾನ ನೋಡ್ತಿದ್ದೆ.
ಸುಂದರ ಅತಿ ಸುಂದರ. ಇದನ್ನೇ ಕರ್ನಾಟಕದಲ್ಲಿ ನಿಭಾಯಿಸಬೇಕಂದ್ರೆ ಜಾಗಕ್ಕೆ ಇನ್ನಿಲ್ಲದ ಬೆಲೆ, ನೀರಿಗೆ ಬರ!
ಈ ದೇಶದ ಹುಲ್ಲು ಹಾಸನ್ನು ಆರಾಮಾಗಿ ಅನುಭವಿಸೋಣ ಅಂದ್ರೆ, ಬಹುಶಃ, ವಷರ್ಕ್ಕೆ ಮೂರು ದಿನ ಅದರಲ್ಲು ಮೂರುತಾಸು ಮಾತ್ರ ಸಾದ್ಯ.
ಅಕ್ಕ ಮತ್ತು ಅಕ್ಕನ ಮಗಳು ನಮ್ಮ ದೇಶದಿಂದ ಇಲ್ಲಿಗೆ ಬಂದಿದ್ದರು. ಹದಿನೈದು ವರ್ಷದ ಅಕ್ಕನ ಮಗಳು ‘ಮಾರ್ಕ್ ಅಂಡ್ ಸ್ಪೆನ್ಸರಿನ’ ಅಂಗಿ, ‘ಆಡಿದಾಸ್ ಶೂ’, ‘ಡೆಬೆನಹ್ಯಾಮಿನ’ ಗನ್ ಷಾಟ್ ಜೀನ್ಸ್ ಧರಿಸಿ ನಮ್ಮನೆಗೆ ಕಾಲಿಟ್ಟಾಗ, ನಮಗೇ ಅರೆಗಳಿಗೆ ದಂಗು!.
“ಹೊಸಾ ಸ್ಟ್ಯೆಲು ಬರ್ತಿದ್ದಂಗೆ, ನಾನು, ನನ್ನ ಗೆಳತೀರು ಎಲ್ಲ ಹೋಗಿ ಕೊಂಡುಕೋತೀವಿ ಚಿಕ್ಕಮ್ಮ” ಅಂತ ಹೇಳ್ದಾಗ ಭಾಸಮತಿ ಅಕ್ಕಿ ಎರಡು ಪೌಂಡು ಅಗ್ಗ ಅಂತ ಹದಿನೈದು ಮೈಲಿ ಗಾಡಿ ಚಲಾಯಿಸಿ, ಸೇಲಿನಲ್ಲಿ ಉಡುಪು ಖರೀದಿಸಿ, ಮಕ್ಕಳಿಗೆ ಕನ್ನಡ ಕಲಿಸಿ, ದೇಸೀ ಉಡುಪು ಹಾಕಿ ಸಂತೋಷ ಪಡೋ ನಮ್ಮ ಕನ್ನಡಿಗರ ಪರದೇಸಿ ಬದುಕು ಗಾಜಿನ ಮನೇಲಿ ಕೂತು,ಹೊರಗಿನ ಹುಲ್ಲು ಹಾಸನ್ನು ನೋಡಿ ಆನಂದಿಸೋ ಲೆಕ್ಕಾನೆ ಹೌದಾ ಅನ್ನೊ ಕೌತುಕ ನನ್ನನ್ನು ಬಾಧಿಸದೆ ಬಿಟ್ಟಿಲ್ಲ.
ಲೆಕ್ಕಾಚಾರ ತಪ್ಪಿದ್ದೆಲ್ಲಿ?!

4 thoughts on “ಲೆಕ್ಕಾಚಾರ ತಪ್ಪಿದ್ದೆಲ್ಲಿ? – ಪ್ರೇಮಲತ ಬಿ. ಅವರು ಬರೆದ ಪ್ರಶ್ನೆ

  1. ಪರದೇಶಿಗಳ ಗೊಂದಲ, ಗೊಂದಲದ ಬದುಕು, ಇಂಗ್ಲೀಷು-ಕನ್ನಡ, ಭಾರತ- ಇಂಗ್ಲಂಡು..ಓದಿ ಮುಗಿಸಿದಾಗ ಒಂತರ ವಿಚಿತ್ರ ಅನುಭವ.

    Like

  2. ಪ್ರೇಮಲತಾ ಅವರೆ,
    ನಿರೂಪಣೆ ಬಹಳ ವಿನೋದಮಯವಾಗಿ ಹಾಗೂ ಸುಂದರವಾಗಿ ಮಾಡಿದ್ದೀರ. ಸುಂದರ ಕನ್ನಡ ಭಾಷಾ ಲಹರಿ ಕೂಡಾ ಆಕರ್ಷಕವಾಗಿದೆ. ಅಭಿನಂದನೆಗಳು.
    ನಾನು ಶಿರಾ ತಾಲೂಕಿನ ಬರಗೂರಿನಲ್ಲಿ ೬ ವರ್ಷ ಓದಿ ನಂತರ ತುಮಕೂರಿಗೆ ಬಂದಿದ್ದು.
    ನೀವು ಹೇಳಿದಂತೆ ನಾವು ಇತ್ತ ಬಂದಮೇಲೆ ಭಾರತ ನಾಗಾಲೋಟದಲ್ಲಿ ಓಡಿಬಿಟ್ಟಿದೆ. ಶ್ರೀವತ್ಸರವರು ತಮ್ಮ ಕವಿತೆಯಲ್ಲಿ ಬರೆದಂತೆ ನಾವೂ ಅಲ್ಲಿಯೂ ಇಲ್ಲಿಯೂ ಹೊಂದದೆ ತ್ರಿಶಂಕು ಸ್ಥಿತಿಯಲ್ಲಿರುವ ಅಭಿಮನ್ಯುಗಳಂತಾಗಿದ್ದೇವೆ. ಲೆಕ್ಕಾಚಾರ ಬಹುಷಃ ತಪ್ಪುವುದೇ ಜೀವನ ಕ್ರಮ ಇರಬೇಕು!!
    ನಾನು ಅಡಿಗರ ದೊಡ್ಡ ಅಭಿಮಾನಿಯಲ್ಲದಿದ್ದರೂ ಅವರ “ಇರುವುದೆಲ್ಲವ ಬಿಟ್ಟು ಇರದುದರ ಕಡೆಗೆ ತುಡಿವುದೇ ಜೀವನ ” ಎಂಬ ಸಾಲುಗಳು ನಮ್ಮ ಜೀವನಕ್ಕೆ ಬಹು ಪ್ರಸ್ತುತ. ಅದನ್ನು ನಮ್ಮ ಪರಿಸ್ಥಿತಿಗೆ ಹೀಗೆ ಬದಲಾಯಿಸಿಕೊಳ್ಳಬಹುದು- “ಇರುವುದೆಲ್ಲವ ಬಿಟ್ಟು ಇರುವೆಯ ಬಿಟ್ಟುಕೊಳ್ಳುವುದೇ ಜೀವನ!!!”
    ಸುದರ್ಶನ

    Like

  3. ಪ್ರೇಮಲತಾ ಅವರೆ, ನಾವು ಬಿಟ್ಟ ಭಾರತ ದೇಶ ಇನ್ನು ಕನಸೇ ! ಅಜ್ಜಿ ಮನೆಯ ವೈಭೋಗ, ಗುಡಿಸಲಿನ ಸೌಂಧರ್ಯ, ಯಾರಿಗೂ ಬೇಡ. ಕನ್ವೆಂಶನ್ ಸೆಂಟರ್, ಡಿಸೈನರ್ ಬ್ರಾಂಡ್, ಜಾಗುವಾರ್ ಕಾರಿನ ಸಮ್ಭ್ರಮದಲ್ಲಿ ನಮ್ಮವರೆಲ್ಲಾ ಮೈಮರೆತಿದ್ದಾರೆ. ನಾವಿನ್ನೂ ೭೦ರ ದಶಕದ ಭಾರತವನ್ನೇ, ಯೂರೋಪಿನಲ್ಲಿದ್ದುಕೊಂಡು ನೆನಪಿಸಿಕೊಳ್ಳುತ್ತಿದ್ದೀವಿ. ಇನ್ನು ಇವೆಲ್ಲದರ ಮಧ್ಯೆ ಕನ್ನಡ ಪುಸ್ತಕಗಳನ್ನು ಕೇಳೋರ್ಯಾರು? ಜೊತೆಗೆ ನಾವೆಷ್ಟೇ ಆಟೋ ಚಾಲಕರೊಂದಿಗೆ, ಚಾಲಾಕಿಯಿಂದ ಕನ್ನಡ ಮಾತಾಡಿದರು, ಆ ನನ್ನ ಮಕ್ಕಳಿಗೆ ಹೇಗೂ ನಾವು ಪರದೇಸಿ ಕನ್ನಡಿಗರು ಎನ್ನೋದು ಗೊತ್ತಾಗತ್ತಲ್ಲಾ, ಅದು ಹೇಗೇ? ನಿಮ್ಮ ಅನುಭವಗಳನ್ನು ಓದಿ ಖುಶಿಯಾಯಿತು. ಮುಂದೆಯೂ ನಮಗೆ ಇಂತಹ ಲೇಖನಗಳನ್ನು ಬರೆದು ನಮ್ಮನ್ನು ಆನಂದಗೊಳಿಸಿ.

    Like

  4. ನಾವು ಊರಿಗೆ ಹೋದಾಗ ಹಣೆಯ ಮೇಲೆ, ನಾಲಿಗೆಯ ಮೇಲೆ N R I ಎಂದು ಬರಕೊಂಡೇ ಹೋಗಿರುತ್ತೇವೆ, ವೇಷ ಭೂಷಣ ಹೇಗೇ ಇರಲಿ! ನಮ್ಮೆಲ್ಲರ ಅನುಭವಗಳೂ ಹೀಗೇ ಆದರೂ ಬಹಳೇ ರಸವತ್ತಾಗಿ ಚಿತ್ರಿಸಿದ್ದೀರಿ. ಗಾಜಿನ ಮನೆಯಲ್ಲಿ ಕುಳಿತಿದ್ದರೂ ಹಳ್ಳಿಯ ಗುಡಿಸಲಿನ ಅಂದವನ್ನು ನೆನೆಯುವ ಈ ತ್ರಿಶಂಕು ಸ್ವರ್ಗವಾಸಿಗಳು ಬರೆದ, ಬರೆಯಲಿರುವ, ಹೆಬ್ಬೊತ್ತಿಗೆಯ ಪುಟಗಳಿವು. ನೀವೂ ಇನ್ನೂ ಬರೆಯುತ್ತಾ ಹೋಗಿ.
    ಶ್ರೀವತ್ಸ

    Like

Leave a comment

This site uses Akismet to reduce spam. Learn how your comment data is processed.