ಆಂಗ್ ಕ್ಲೂಂಗದಿಂದ ಹೊಮ್ಮಿದ ದಕ್ಷಿಣಾದಿ ಸಂಗೀತ! – ಶ್ರೀವತ್ಸ ದೇಸಾಯಿ ಬರಹ

ಮೊದಲೇ ನನ್ನ ಕೈ ತೋರಿಸಿ ಹೇಳಿ ಬಿಡುತ್ತೇನೆ. ನನಗೆ ಸಂಗೀತ ಅರ್ಥವಾಗುವದು ಅಷ್ಟರಲ್ಲೇ ಇದೆ. ಆದರೆ ಪಶುವಿಗೂ, ಮಗುವಿಗೂ ಅಷ್ಟೇ ಅಲ್ಲ ಹಾವಿಗೂ ಸಹ ಗಾನ ರಸ ಅನಂದಿಸಲು ಬರುತ್ತದೆ  ಎಂಬುದನ್ನು ಸುಂದರವಾಗಿ ಹೇಳುವ ಪಶುರ್ವೇತ್ತಿ  ಶಿಶುರ್ವೇತ್ತಿ ವೇತ್ತಿ ಗಾನ ರಸಂ ಫಣಿಃ ಎಂಬ ಸಂಸ್ಕೃತ ವಾಣಿಯ ಸಮರ್ಥನೆ ಮಾಡಿಕೊಂಡು ನಾನು ಕೇಳಿದ ಒಂದು ಅಪರೂಪದ ಕಚೇರಿಯ ಬಗ್ಗೆ ಬರೆಯುತ್ತಿದ್ದೇನೆ.

ಮೊನ್ನೆ ಬೆಂಗಳೂರಿಗೆ ಹೋಗಿದ್ದಾಗ, 19-01-2014 ರಂದು ಯು.ಕೆ. ಕನ್ನಡ ಬಳಗದ ಹಿರಿಯ ಆಜೀವ ಸದಸ್ಯೆ ಡಾ ವಸಂತಶ್ರೀಯವರು ಭೇಟಿಯಾಗಿ ಇಂದು ಗೋಖಲೆ ಸಾರ್ವಜನಿಕ ಸಂಸ್ಥೆಯಲ್ಲಿ ಆಂಗ್ ಕ್ಲೂಂಗ ವಾದ್ಯದ ಸಂಗೀತ ಕಚೇರಿ ಇದೆ, ಬರುತ್ತೀರಾ? ಎಂದರು. ಅಲ್ಲಿಯವರೆಗೆ ಅದರ ಹೆಸರನ್ನೇ ಕೇಳಿದ್ದಿಲ್ಲ. ಯಾವ ಕ್ಲೂನು? ಎಂದು ಕೇಳಿ ನನ್ನ ಅಜ್ಞಾನವನ್ನು ಪ್ರದರ್ಶಿಸದೆ, ಸ್ವತಃ ಅಲ್ಲಿಗೇ ಹೋದರಾಯಿತು ಎಂದು ಸಾಯಂಕಾಲ ಹಾಜರಾದೆ. ಸಭಾಂಗಣ ತುಂಬಿ ಹೋಗಿತ್ತು.

Dr. Anasuya Kulkarni

ವೇದಿಕೆಯ ಮೇಲೆ ಶ್ರೀಮತಿ ಡಾ.ಅನಸೂಯಾ ಕುಲಕರ್ಣಿಯವರು ಗಂಭೀರರಾಗಿ ಆಸೀನರಾಗಿದ್ದರು. ಅವರ ಹಿಂದೆ ಅವರ ಶಿಷ್ಯೆ ಒಬ್ಬಳು ಕುಳಿತಿದ್ದು, ಅವರಿಬ್ಬರ ಮುಂದೆಯೂ ಅವರು ಅಂದು ನುಡಿಸಲಿದ್ದ ವಾದ್ಯ ಉಪಸ್ಥಿತವಾಗಿತ್ತು.  ಸುಮಾರು ಮೂರಡಿ ಉದ್ದ, ಎರಡೂವರೆ ಅಡಿ  ಎತ್ತರದ ಕಟ್ಟಿಗೆಯ ಚೌಕಟ್ಟಿನಲ್ಲಿ ಏಳುಬಿದಿರಿನ ಕಾಂಡಗಳ ಜೊತೆಗಳನ್ನು, ಇನ್ನೊಂದು ಚಿಕ್ಕದಾದ ಚೌಕಟ್ಟಿನಲ್ಲಿ ಕೂಡಿಸಿ ತೂಗುಮಣೆಗಳಂತೆ ಸಾಲಾಗಿ ತೂಗುಬಿಟ್ಟಿದ್ದಾರೆ. ಅವರು ಆ ದಿನ ನುಡಿಸಲಿರುವ ರಾಗಕ್ಕುನುಗುಣವಾಗಿ ಆರು, ಏಳು ಅಥವಾ ಎಂಟು ತೂಗುಮಣೆಗಳನ್ನು “frameಗೆhookಮಾಡುತ್ತಾರೆ ಅಂತೆಹೇಳಿದರು.

ಆದರೆ ಚೌಕಟ್ಟಿನ ಈಚೆಯ ತುದಿಯ ಕಂಬ ಬರೀ ಒಂದೂವರೆ ಅಡಿ ಇದ್ದು, ಆಚೆ ತುದಿಯದು ಎರಡಡಿಯೇನೋ ಎನ್ನಿಸುತ್ತದೆ. ಹೀಗಾಗಿ ಆ ವಾದ್ಯ ಒಂದು ಅಸಮಾನವಾದ ಚೌಕಟ್ಟಿನ ರೂಪದಲ್ಲಿತ್ತು. ಆ ತೂಗುಮಣೆಗಳನ್ನು ಕೈಯಿಂದ ಅಲ್ಲಾಡಿಸಿದರೆ ಬಿದಿರಿನ ನಾಲಿಗೆ ಗಳಿಂದ ಒಂದೊಂದು ಸ್ವರ ಹೊರಡುತ್ತಿತ್ತು. ಯಥಾಪ್ರಕಾರ ಪಕ್ಕ ವಾದ್ಯಗಳಾಗಿ -ಮೃದಂಗ, ಪಿಟೀಲು, ತಬಲಾ, ಮೋರ್ಚಿಂಗುಗಳ ಏರ್ಪಾಡಾಗಿತ್ತು. ಮೈಸೂರು ವಾಸುದೇವಾಚಾರ್ಯರ ಒಂದು ವರ್ಣದಿಂದ ಕಾರ್ಯಕ್ರಮದ ಆರಂಭವಾಯಿತು. ಅನಸೂಯಾ ಅವರು ತಾಳಬದ್ಧವಾಗಿಬೇರೆ ಬೇರೆ ಆಂಗ್ಕ್ಲೂಂಗಿನ ಸ್ವರ ನಾಲಿಗೆಗಳನ್ನು ಅಲುಗಾಡಿಸುತ್ತ ಹೋದಂತೆ ಬಿದಿರಿನ ಕಂಪನದಿಂದ ಅದೊಂದು ತರಹದ ಮಧುರವಾದ ಸ್ವರ-ಸಂಗಮದ ಉದ್ಭವವಾಗುತ್ತಿದ್ದು, ಕರ್ನಾಟಕ ಸಂಗೀತದ ಲಹರಿ ನಮ್ಮನ್ನು ಸಂಪೂರ್ಣವಾಗಿ ಆವರಿಸಿತು.

ಅದನ್ನು ಮುಗಿಸಿದ ನಂತರ ತಮ್ಮ ಸಂಗೀತಕ್ಕೆ ವಿರಾಮ ಕೊಟ್ಟು ಅನುಸೂಯಾ ಅವರು ಸಂಕ್ಷಿಪ್ತವಾಗಿ ಪ್ರೇಕ್ಷಕರಿಗೆ ಆ ಅಪರಿಚಿತ ವಾದ್ಯದ (Angklung) ಪರಿಚಯ ಮಾಡಿಕೊಟ್ಟರು.

ಮೂಲತಃ ದೂರ ಪ್ರಾಚ್ಯ ದೇಶದ ಈ ಘನ ವಾದ್ಯ (idiophone) ಬಿದಿರಿನಿಂದ ಮಾಡಿದ್ದು. ಇಂಡೋನೇಷಿಯಾದ ಜಾವಾ, ಬಾಲಿ, ಮುಂತಾದ ನಡುಗಡ್ಡೆಗಳಲ್ಲಿ ಮೊದಲು ಉಗಮವಾಯಿತೆಂದು ಪ್ರತೀತಿ. ಆ ನಾಡಿನ ಸುಂಡಾ ಎಂಬ ಹಿಂದು ರಾಜ್ಯದಲ್ಲಿ ಏಳನೆಯ ಶತಮಾನದ ಸಮಯದಲ್ಲಿ ಈ ವಾದ್ಯ ಪ್ರಚಲಿತವಾಗಿದ್ದ ದಾಖಲೆ ಸಿಗುತ್ತದೆಯಂತೆ. ವಿಶ್ವ ಸಂಸ್ಥೆಯಲ್ಲಿ ಅಧಿಕಾರಿಯಾಗಿದ್ದ ತಮ್ಮ ಪತಿಯೊಡನೆ ದೇಶವಿದೇಶ ಸುತ್ತಿದ ಅನಸೂಯಾ ಅವರು ಹಿಂದುಸ್ತಾನಿ ಮತ್ತು ಕರ್ನಾಟಕ ಸಂಗೀತ ಎರಡರಲ್ಲೂ ಪರಿಣತಿಯಿದ್ದ ಕಲಾವಿದೆ.  ಪ್ರಖ್ಯಾತ ಪಿಟೀಲು ವಾದಕ ದಿ.ಟಿ ಚೌಡಯ್ಯ ಅವರ ಶಿಷ್ಯ ಪರಂಪರೆಯಲ್ಲಿ ತಮ್ಮನ್ನು ಗುರ್ತಿಸಿ ಕೊಳ್ಳುತ್ತಾರೆ. ತಾವು ಹೋದ ಜಾಗದಲ್ಲೆಲ್ಲಾ, ಆ ದೇಶದ ಸಂಗೀತದಲ್ಲಿ ಅಪಾರ ಆಸ್ಥೆ ತೋರುತ್ತಿದ್ದ ಅನಸೂಯಾ, ಅವನ್ನು ಕಲಿತಿದ್ದಲ್ಲದೆ ಆ ದೇಶಗಳ ವಿವಿಧ ವಾದ್ಯಗಳ ಸಂಗ್ರಹವನ್ನೂ ಮಾಡಿದ್ದಾರೆ. ಅಫಘಾನಿಸ್ತಾನದಲ್ಲಿ ಹಿಂದೂಸ್ತಾನಿ ಸಂಗೀತದ ಗುರು ಉಸ್ತಾದ ಮಹಮ್ಮದ ಹುಸೇನಸರಹಂಗರಿಂದ ಪಡೆದ ಮೊದಲ ಕೊಡುಗೆ ಸ್ವರಮಂಡಲ ವಾದ್ಯದಿಂದ ಆರಂಭವಾದ ಈ ಸಂಗ್ರಹ ಬೆಳೆದು, ಈಗ ಬೆಂಗಳೂರಿನ ಅವರ ಜೆ ಪಿ ನಗರದ ಮನೆಯಲ್ಲಿ ಸುಮಾರು ಮುನ್ನೂರನ್ನು ತಲುಪಿದೆಯಂತೆ! ಇಂಡೋನೇಷಿಯದಲ್ಲಿದ್ದಾಗ ಅವರಿಗೆ ಹಿಡಿಸಿದ ಈ ಬಿದಿರಿನ ವಾದ್ಯವನ್ನು, ಭಾರತೀಯ ಅದೂ ಕರ್ನಾಟಕ ಸಂಗೀತಕ್ಕೆಂದು ಗಮನಕೊಟ್ಟು ಅಳವಡಿಸ ಬೇಕಾಯಿತು. ಇಂಡೋನೇಷಿಯಾದಲ್ಲಿ ನಿಂತುಆಂಗ್ ಕ್ಲುಂಗನ್ನು ನುಡಿಸಿದರೆ, ನಾವು ಭಾರತೀಯರು ಕುಳಿತುಕೊಂಡು ನುಡಿಸುತ್ತೇವೆ. ಈ ವಾದ್ಯವನ್ನು ಮರುಗಾತ್ರಗೊಳಿಸಿದಾಗ (resize) ಅದರ ಸ್ವರ-ಲಯಗಳಿಗೆ ಧಕ್ಕೆ ತಗಲದಂತೆ ಕಾಳಜಿ ವಹಿಸ ಬೇಕಾಯಿತು ಎಂದು ಹೇಳಿದ್ದಾರೆ. ಅದಕ್ಕೆ ಆಂಗ್ಕ್ ರಂಗ್ ಎಂದು ನಾಮಕರಣ ಮಾಡಿದ್ದಾರೆ.

 AnasuyaKulk2Collections reduced

ವಾದ್ಯವನ್ನು ಸಭಿಕರಿಗೆ ಪರಿಚಯಿಸಿದ ನಂತರ, ತಮ್ಮ ಕಾರ್ಯಕ್ರಮವನ್ನು ಮುಂದುವರಿಸುತ್ತ, ಎರಡನೆಯದಾಗಿ ಹಂಸಧ್ವನಿಯಲ್ಲಿ ದೀಕ್ಷಿತರ ವಾತಾಪಿ ಕೃತಿಯು ಪ್ರಸ್ತುತವಾಯಿತು. ನಂತರದ ಅಮೃತವರ್ಷಿಣಿಯಲ್ಲಿ ಸುಧಾಮಯಿ ಸುಧಾನಿಧೇನುಡಿಸುವಾಗ ಕಚೇರಿಗೆ ರಂಗೇರಿದ್ದು, ತದನಂತರ ಅಭೇರಿಯಲ್ಲಿ ತ್ಯಾಗರಾಜರ ನಗುಮೋಮುವಿನ ಮೂಲಕ ಮುಂದುವರೆಯಿತು.  ಸಭಿಕರೆಲ್ಲ ಸಲೀಸಾಗಿ ಚಲಿಸುತ್ತಿದ್ದ ಅವರ ಕೈಗಳು ತೂಗುಮಣೆಗಳನ್ನಲ್ಲಾಡಿಸಿ ಸ್ವರದಿಂದ ಸ್ವರ ಜೋಡಿಸುತ್ತಿದ್ದ ವಿನ್ಯಾಸವನ್ನು ನೋಡುತ್ತ ಸಂಗೀತದ ಸ್ವಾದ ಹೀರುತ್ತಿದ್ದರು. ಎಲ್ಲ ವಾದ್ಯಗಳಿಂದ ಕೂಡಿದ ಆ ಕಚೇರಿ, ನಮಗೆ ಕರ್ನಾಟಕ ಸಂಗೀತದಲ್ಲಿನ ಒಂದು ಭಿನ್ನವಾದ ಅನುಭವವನ್ನು ನೀಡಿತ್ತು. ಆದಿಮಾನವ ಮೊಟ್ಟಮೊದಲು ಆಲಿಸಿ ಹುಟ್ಟಿಸಿದ್ದು ಸಂಗೀತ, ಆ ಬಿದಿರಿನಲ್ಲಿ ಗಾಳಿ ಹೊಕ್ಕಾಗಲೇ ಏನೋ ಎಂದೆಲ್ಲ ವಿಚಾರ ನನ್ನ ತಲೆಯಲ್ಲಿ ಸುಳಿದಾಡುತ್ತಿತ್ತು. ಬಿದಿರಿನದೇ ಅತ್ಯಂತ ಸ್ವಾಭಾವಿಕ ಧ್ವನಿಯೇ. ಶಾಸ್ತ್ರದ ಪ್ರಕಾರ ಕೊರೆದ ಬಿದಿರಿನ ನಾಲಗೆಯನ್ನು ಅದುರಿಸಿದಾಗಅದರಿಂದ ಹೊರಡುವ ಧ್ವನಿ ವಿಶಿಷ್ಠವಾದುದು. ಅದನ್ನು ಕೇಳಿಯೇ ಅನುಭವಿಸಬೇಕು.

ಈ ವಾದ್ಯವನ್ನು ಭಾರತೀಯ ಸಂಗೀತಕ್ಕೆ ಅಳವಡಿಸಿ ಕಚೇರಿ ಮಟ್ಟಕ್ಕೆ ತಂದ ಹೆಗ್ಗಳಿಕೆ ಡಾ ಅನಸೂಯಾ ಕುಲಕರ್ಣಿ ಅವರದಾಗಿದೆ. ಇದರ ಫಲಸ್ವರೂಪವಾಗಿ 2008 ರಲ್ಲಿ ಇವರ ಹೆಸರು ಲಿಂಕಾ ಬುಕ್ ಆಫ್ ರೆಕಾರ್ಡ್ಸನಲ್ಲಿ (Limca book of records) ದಾಖಲಾಗಿದೆ.

ಡಾ ಅನಸೂಯಾ ಕುಲಕರ್ಣಿಯವರು. ಜಗತ್ತಿನ ಹಲವಾರು ದೇಶಗಳಲ್ಲಿ, ಅಮೆರಿಕಾದಿಂದ ಹಿಡಿದು, ಪಪುವಾ ನ್ಯೂಗಿನಿ ಸಹಿತ, ಉಗಾಂಡ ದೇಶಗಳವರೆಗೆ ಇದನ್ನು ಒಯ್ದು ನುಡಿಸಿದ್ದಾರೆ. ಅಂದು ಜೀವನದಲ್ಲಿ ನಾನು ಪ್ರಥಮ ಬಾರಿ ಆಂಗ್ ಕ್ಲುಂಗ್ ವಾದ್ಯ ಕೇಳಿದ್ದು, ಇಡೀ ದಿನ ಅದರ ಗುಂಗಿನಲ್ಲಿಯೇ ಇದ್ದೆ!  ಅಂದಿನ ಕಾರ್ಯಕ್ರಮವನ್ನು ಪ್ರಾಯೋಜಿಸಿದ ಶ್ರೀ ಮಾಸ್ತಿ ಪ್ರತಿಷ್ಠಾನಕ್ಕೆ ನನ್ನ ಅನೇಕ ವಂದನೆಗಳು. ಈ ವಾದ್ಯವನ್ನು ಕೇಳುವ ಆಸ್ಥೆಯಿದ್ದವರು ಕೆಳಗಿನ ಕೊಂಡಿಯನ್ನು ಒತ್ತಿ ಯೂ-ಟ್ಯೂಬಿನಲ್ಲಿ ಆ ಸಂಗೀತದದ ಒಂದು ಝಲಕ್ ಸವಿಯ ಬಹುದು.

http://www.youtube.com/watch?v=_SCVpmG9ViI

 

9 thoughts on “ಆಂಗ್ ಕ್ಲೂಂಗದಿಂದ ಹೊಮ್ಮಿದ ದಕ್ಷಿಣಾದಿ ಸಂಗೀತ! – ಶ್ರೀವತ್ಸ ದೇಸಾಯಿ ಬರಹ

  1. Tumba chennagide Desayi avara baraha.
    Dhvani mudrana iddalli ee jaala jaguliyalli haaki. Naavoo kelabahudu.
    Anasuya avara Srujanasheelatege abhinandanegalu.
    Sudarshan

    Like

    • ತಡವಾಗಿನಿಮ್ಮ ಪ್ರತಿಕ್ರಿಯೆ ನೋಡಿದೆ. ನಾನು ರೆಕಾರ್ಡ್ ಮಾಡಿಲ್ಲ. ಲೇಖನದ ಕೊನೆಗೆ ಕೊಟ್ಟ ಕೊಂಡಿ ಹಿಂದಿನ ಕಚೇರಿಗೆ ಒಯ್ಯುತ್ತದೆ. ಕೇಳಿ ನೋಡಿ, ಸುದರ್ಶನ ಅವರೇ. ಶ್ರೀವತ್ಸ

      Like

  2. Dear Dr. Desai,

    Reading your article I wasn’t convinced that this instrument would really work properly. So, I followed your YouTube link and was quite amazed that not only does it produce melody, it could also be used as a percussion instrument. Mrs. Anusooya must have put a lot of effort in achieving the desired effect and her talent is truly remarkable.

    Sathya

    Like

    • Sorry, didn’t see it before. I agree, it has its limitations as the sound is produced by ‘rattling’ the twin tubes with staggered octaves.the bamboos are also special,one of 16 special varieties.

      Like

  3. ಅನಸೂಯಾ ಅವರ ಸಾಧನೆ ನಿಜಕ್ಕೂ ಬಹು ಅಪರೂಪದ ಸಂಗತಿ. ಈ ಹೊಸ ವಾದ್ಯವನ್ನು ಪಳಗಿಸಿ ಅದನ್ನು ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ಅಳವಡಿಸಿ ಸಂಗೀತದ ರಸದೌತಣವನ್ನು ಕಲಾಭಿಮಾನಿಗಳಿಗೆ ಒದಗಿಸುತ್ತಿರುವ ಸಂಗತಿಯನ್ನು ನಮ್ಮೆಲ್ಲರಿಗೂ ಬಹಳ ಆಸಕ್ತಿಪೂರ್ಣವಾದ ರೀತಿಯಲ್ಲಿ ತಮ್ಮ ಲೇಖನದ ಮೂಲಕ ತಿಳಿಸಿದ್ದಾರೆ ಡಾ ದೇಸಾಯಿ ಅವರು. ಇಂತಹ ಇನ್ನೂ ಅನೇಕ ಲೇಖನಗಳು ಅವರ ಲೇಖನಿಯಿಂದ ಹೊರಬರಲಿ.

    Like

    • ಧನ್ಯವಾದಗಳು. ಹೊಸ ವಾದ್ಯ; ಹೊಸ ಪ್ರತಿಭೆ. ಪಿಟೀಲು ಪಶ್ಚಿಮದಿಂದ ಬಂದು ಕರ್ನಾಟಕ ಸಂಗೀತದಲ್ಲಿ ತನ್ನದೇ ಸ್ಥಾನ ಪಡೆದಂತೆ ಪ್ರಾಚ್ಯದ ಈ ವಾದ್ಯಕ್ಕೆ ಎಂಥ ಭವಿಷ್ಯವಿದೆಯೋ! ನಿಮ್ಮೆಲ್ಲರ ಗಮನ ಸೆಳೆದದ್ದಂತೆ ಬೇರೆಯವರಿಗೂ ಪರಿಚಯವಾಗಲೆಂದೇ ಬರೆದುದು. ಶ್ರೀವತ್ಸ

      Like

  4. ಹೊಸ ವಾದ್ಯ ಹಾಗೂ ಅದರ ವೈಚಿತ್ರ್ಯ ಸೊಗಸಾಗಿ ವರ್ಣಿಸಿದ್ದೀರಿ. ಅನುಸೂಯ ಕುಲಕರ್ಣಿ ಅವರ ಸಾಧನೆ ಕೇಳಿ ದಂಗಾದೆ.

    Like

  5. ತುಂಬ ಚೆನ್ನಾಗಿ ಮೂಡಿ ಬಂದಿದೆ ನಿಮ್ಮ ಬರಹ. ಹೊಸ ವಾದ್ಯದ ಪರಿಚಯವಾಯಿತು.

    Like

Leave a comment

This site uses Akismet to reduce spam. Learn how your comment data is processed.