ಕ್ಷಮಿಸಿ, ಈ ತಲೆಬರಹ ನಿಮಗೆ ಸಂದಿಗ್ಧತೆಯನ್ನು ತಂದಿದ್ದರೆ! ನಾನು ಜಾತ್ಯಾತೀತನಾಗಿ ಬರೆಯುತ್ತಿದ್ದೇನೆ. ಇದು ಭಿನ್ನ ಮತೀಯವರ ಬಗೆಗೆ ಬರೆದುದ್ದಲ್ಲ!
ಎರಡು ದಿನಗಳ ಕೆಳಗೆ ತಾನೆ ಆರು ವಾರ ಭಾರತದಲ್ಲಿದ್ದು ಲಂಡನ್ನಿಗೆ ವಾಪಸ್ ಬಂದೆ. ಊರಿಗೆ ಹೋದ ಮೇಲೆ ಕೇಳಬೇಕೆ, ತರ ತರದ ತಿಂಡಿ, ಪಕ್ವಾನ್ನಗಳನ್ನು ಬಾಯಲ್ಲಿ ತುರುಕಿದ್ದಾಯಿತು. ಸೂಟಕೇಸಿನಲ್ಲೂ ತುರುಕಿದ್ದಾಯಿತು. ಇತ್ತೀಚೆಗೆ ಕೆಲವು ಏರ್ಲೈನ್ ಕಂಪನಿಗಳು ಒಬ್ಬೊಬ್ಬರಿಗೆ 40 ಕೆಜಿ ಲಗ್ಗೇಜು ತರಲು ಬಿಡುತ್ತಾರೆ. ಮನುಷ್ಯನ ದುರಾಸೆಗೆ ಕೊನೆಯುಂಟೇ? ಮೊದಲು ಹೆಚ್ಚೆಂದರೆ 20 ಕೆ ಜಿಗೆ ಪರವಾನಗಿ ಇತ್ತು. ಮತ್ತೆ ಮತ್ತೆ ಮನೆಯಲ್ಲಿ ತೂಕ ನೋಡಿ ಹತ್ತೊಂಬತ್ತೂವರೆಗೆ ನಿಲ್ಲಿಸಿ ಬಿಡುತ್ತಿದ್ದೆ. ಈಗ ಎರಡು ಕೇಸುಗಳನ್ನು ಬಿಡುತ್ತಾರೆ. ಬೇಕೆಂದರೆ ಹೆಣ್ಣು ಮಕ್ಕಳಿಗೆ ವರ ಕೊಟ್ಟಂತೆ (ಅಹುದು, boon!) ಹ್ಯಾಂಡ ಲಗ್ಗೇಜ್ನಲ್ಲಿ ಐದೋ ಏಳೋ ಕೆಜಿ ಅಲ್ಲೋವನ್ಸ್ ಉಂಟು. “ಆ ನೋ ಭದ್ರೋ ಕ್ರತವೋ ಯಂತು ವಿಶ್ವತಃ” ಕೇಳಿದ್ದೀರಿ. ’ಆ ನೋ ಭದ್ರೋ ಗ್ರಂಥೋ ವಿಶ್ವತಃ’ ಕೇಳಿರಲಿಕ್ಕಿಲ್ಲ! ನನ್ನಲ್ಲಿ ಒಂದು ಪುಸ್ತಕಗಳ ಸಂಗ್ರಹವೇ ಆಗಿತ್ತು. ನಾನು ಕೊಂಡಿದ್ದು ಕೆಲವು, ಬೇರೆಯವರು ಪುಕ್ಕಟೇ ಕೊಟ್ಟಿದ್ದು ಉಳಿದವು, ಅಜ್ಜನ ಇತ್ತೀಚೆಗೆ ಹಸ್ತಪ್ರತಿ ಸಿಕ್ಕು ಬೆಳಕಿಗೆ ಬಂದು ಛಾಪಿಸಿದ ಹೊಸ ಪುಸ್ತಕಗಳ ಕಾಂಪ್ಲಿಮೆಂಟರಿ ಕಾಪಿಗಳು, ಅವರ ಮೇಲೆ ಬರೆದವರು ಕೊಟ್ಟವು, ಕವಿಗಳು ತಮ್ಮದೇ ಹೊಸ ಕವನ ಸಂಗ್ರಹಗಳಿಗೆ ಆಟೋಗ್ರಾಫ್ ಹಾಕಿಕೊಟ್ಟವು ಪ್ರತಿಗಳು ಕೆಲವು, ಗೆಳೆಯರು ತರಲು ಹೇಳಿದವು ಬೇರೆ! ಇವನ್ನೆಲ್ಲ ಹೊತ್ತ ಈ ಹೇಸರಗತ್ತೆಗೆ ನಾಚಿಕೆಯಿಲ್ಲ!

ಏರ್ಪೋರ್ಟ್ ಸೇರಿದೆ.
ಚೆಕ್ ಇನ್’ ಕೌಂಟರಿನ ಆಸಾಮಿ, “ಮೂರು ನಾಲ್ಕು ಕೆಜಿ ತೂಕ ಹೆಚ್ಚಾಗಿದ್ದಂತೆ ಕಾಣುತ್ತದೆ!” ಅಂದ.
“ಊರಿಗೆ ಬಂದಾಗ ಎಲ್ಲರೂ ಕಂಠ ಮಟ ತಿನ್ನುವವರೇ ಅಲ್ಲವೆ, ಅಣ್ಣ! ಮನೆಗೆ ಮರಳಿ ಡಯಟಿಂಗ ಮಾಡುವದು ಖಂಡಿತ!” ಅಂದೆ.
“ಅಲ್ಲ, ನಿಮ್ಮ ಸೂಟ ಕೇಸು, excess charge ಕೊಡಬೇಕಾಗುತ್ತದೆ.”
ನನ್ನ ಬಹುದಿನಗಳ ಸಂಶಯಕ್ಕೆ ಇಂದು ಪುರಾವೆ ಸಿಕ್ಕಂತಾಯಿತು: ವಿಮಾನ ನಿಲ್ದಾಣದಲ್ಲಿ ಮಶೀನುಗಳನ್ನು ಕೆಡಿಸಿಡುವ ಒಳಸಂಚು ನಡೆದಿರುತ್ತದೆ. ತೂಕ ಇರುವದಕ್ಕಿಂತ ಹೆಚ್ಚು ತೋರಿಸುತ್ತದೆ ಅಂತ.
ಹಿಂದೆ ಮುಂದೆ ನೋಡುತ್ತ ಕೇಳಿದೆ: “ಎಷ್ಟು?”
“ಲಂಡನ್ ವರೆಗೆ ಅಂದರೆ ಒಂದು ಕೆಜಿಗೆ ಎರಡುಸಾವಿರ ರೂಪಾಯಿ, ಆಮೇಲೆ tax ಎಲ್ಲ ಕೂಡಿ ಹತ್ತು ಸಾವಿರದಷ್ಟಾಗ ಬಹುದು!”
ನನಗೆ ಗರ ಬಡಿಯಿತು. ಜೊತೆಗೆ ಯಾರೂ ಇಲ್ಲ, ಖಾಲಿ ಮಾಡಿ ಅವರ ಕೈಲಿ ಕೊಡಲು. ಇತ್ತಿತ್ತಲಾಗಿ ಬೇರೆಯವರನ್ನು ಒಳಗೆ ಬಿಡುವದೂ ಇಲ್ಲ. ಅಜ್ಜ ಸಾಲಿ ರಾಮಚಂದ್ರರಾಯರ ಅಪರೂಪದ ಮೇಘದೂತ ಪುಸ್ತಕದ prepublication ಪ್ರತಿಗಳೆ ಇರಲಿ, ಅಷ್ಟು ಬೆಲೆಬಾಳುವಂಥದೇನೂ ಅಲ್ಲ ಎಂದು ನಾನೇ ನಿರ್ಧರಿಸ ಬೇಕೆ? ಇಲ್ಲ ಕಷ್ಟ ಪಟ್ಟು ಸಂಗ್ರಹಿಸಿದ, ಬೇರೆಯವರು ಪ್ರೀತಿಯಿಂದ ಮಾಡಿ ಕೊಟ್ಟ ಭಕ್ಷಣಗಳನ್ನು ಸುತ್ತ ಮುತ್ತಲೂ ಕಾಯ್ದು ಕುಳಿತ ’ಹಸಿದ ಹದ್ದು’ಗಳಿಗೆ ವಿತರಣೆ ಮಾಡುವದೆ? ಇದಕ್ಕೇನಾ ಧರ್ಮ ಸಂಕಟ ಅನ್ನುವದು?
“ನೋಡಿ, ನನ್ನ ಹ್ಯಾಂಡ ಲಗ್ಗೇಜ ಅಂದರೆ ಖಾಲಿ ಕ್ಯಾಮರಾ ಬ್ಯಾಗು!” ಎಂದು ಪುಸಲಾಯಿಸಲು ನೋಡಿದೆ.
ಹೆಣ್ಣು ಮಗಳಾಗಿದ್ದರೆ ಬಿಡುತ್ತಿದ್ದನೇನೋ,ಅಂದರೆ ನೀವು ನನ್ನನ್ನು MCP ಅಂದು ಬಿಡುತ್ತೀರಿ. ಆ ವಿಚಾರವನ್ನೇ ಬದಿಗೊತ್ತಿದೆ. Think outside the box ಎಂದು ಯಾರೋ ಹೇಳಿದಂತಾಯಿತು. ಯೋಚಿಸುತ್ತಿದ್ದಂತೆಯೇ ಕನಿಕರ ಪಟ್ಟು ನನ್ನನ್ನು ಬದಿಗೆ ಸರಿಯಲು ಹೇಳಿದ. ನಿಮ್ಮ ಸರತಿಯನ್ನು ಕಾಯ್ದಿಡುವೆ ಎಂದು ಭರವಸೆ ಬೇರೆ ಕೊಟ್ಟ. ಇಡೀ ಏರ್ಪೋರ್ಟಿನ ಸಾವಿರ ಕಣ್ಣುಗಳು ನನ್ನನ್ನು ಭೇದಿಸುತ್ತಿದ್ದಂತೆ ಭಾಸವಾಯಿತು. ಬದಿಗೆ ತೆಗೆದುಕೊಂಡು ಹೋಗಿ ಸೂಟ್ ಕೇಸುಗಳನ್ನು ನನ್ನ ಸರ್ಜನ್ ಮಿತ್ರ ಮಾಡುವಂತೆ ಹೊಟ್ಟೆ ಬಗಿದು (ಅವುಗಳ ಕೀಲಿ ಬಿಚ್ಚಿ ಮುಚ್ಚಳ ಪೂರ್ತಿ ತೆಗೆದು) ’ಹೂರಣ’ವನ್ನು ಪರೀಕ್ಷೆ ಮಾಡಿದೆ. ಮೊಗ್ಗಿನ ಪಕಳೆಗಳರಳಿದಂತೆ ಹೊರಸೂಸಿದ ವಸ್ತುಗಳತ್ತ ಕಣ್ಣು ಹಾಯಿಸಿದೆ. “ಊಹ್ಞೂ”, ಇನ್ನೊಂದನ್ನು ನೋಡುವಾ.” ಈಗ ಎರಡೂ ಕುಸುಮಗಳು ಅರಳಿದವು. ನನಗೆ ಏನು ಹೊಳೆಯಿತೋ. ದೊಡ್ಡ ಪುಸ್ತಕಗಳನ್ನೆಲ್ಲ ಹೊರತೆಗೆದು ಕೆಲವೊಂದನ್ನು ಕ್ಯಾಮರಾ ಕೇಸಿನಲ್ಲಿ, ಕೆಲವೊಂದನ್ನು ಪ್ಲಾಸ್ಟಿಕ್ ಕ್ಯಾರಿಯರ್ ಬ್ಯಾಗಿನಲ್ಲಿ ತುರುಕಿದೆ.Hanging one’s dirty linen in public ಎಂದರು ಯಾರೋ.It’s full of junk. No, junk food! ಎಂತೆಲ್ಲ ಬಂದ ಉತ್ಪ್ರೇಕ್ಷೆಗಳನ್ನು ಸಹಿಸುತ್ತಿದ್ದಂತೆ ತಮಾಷೆ ನೋಡುತ್ತಿದ್ದ ಸೂಪರ್ವೈಸರ್ ಮಹಾಶಯ ’ಪುಸ್ತಕಗಳನ್ನು ಕೈಯಲ್ಲಿ ಇಟ್ಟುಕೊಂಡು ಹೋಗ ಬಹುದು,’ ಅಂದ.
ಕೈಚೀಲಗಳಲ್ಲಿ ತುರುಕಿದ್ದಷ್ಟು ಸಾಕೇನೋ ಎಂದು ಧೈರ್ಯ ಮಾಡಿ ಮತ್ತೆ ಕೌಂಟರಿಗೆ ಬಂದೆ. ಸ್ವಲ್ಪವಾದರೂ ತೆತ್ತಬೇಕೇನೊ, ಅಂದುಕೊಂಡೆ. ಲಗ್ಗೇಜ ತೂಕವನ್ನು ಲಗೇಚ್ ಕಡಿಮೆ ಮಾಡಿಕೊಳ್ಳುವ ಬೇರೆ ಯವದೂ ಉಪಾಯವನ್ನು ಅದು ವರೆಗೆ ಮಾಡುವ ಪ್ರಸಂಗವೇ ಬಂದಿರಲಿಲ್ಲ. “ಲಂಡನ್”ಗೆ ಹೋಗಿ ಉಲ್ಟಿ ಮಾಡಿದ್ದರೆ ಹೊಟ್ಟೆಯೇನೋ ಹಗುರಾಗುತ್ತಿತ್ತೇನೋ. ಆದರೆ ಇದೊಂದೇ ಉಪಾಯದಿಂದ ಎರಡರ ತೂಕ ಈಗ ಮೂವತ್ತೊಂಬತೂವರೆ ಕೆಜಿಗೆ ಬಂದು ನಿಂತಿತ್ತು!
ಚಿಕ್ಕಂದಿನಲ್ಲಿ ಹೇಳಿ ನಗುತ್ತಿದ್ದ ಮಾತು ನಿಜ: Less luggage, more comfort. Make your London trip a pleasure!
ಮುಂದಿನ ಕೆಲಸ? ಅವುಗಳನ್ನೆಲ್ಲ ಓದಬೇಕಲ್ಲವೆ? ಬೇಂದ್ರೆ ಹೇಳಿದ ಕಥೆ ನೆನಪಾಗುತ್ತದೆ. ಲೈಬ್ರರಿಯಿಂದ ಪುಸ್ತಕ ಕಡ ತೊಗಂಡವನನ್ನು ಕೇಳಿದರಂತೆ: “ಪುಸ್ತಕ ಓದೀಯೇನೋ?” “ಓದೀನಿ, ಮಾಸ್ತರ.” “ಹಂಗಾದರ ಅದರ ಮ್ಯಾಲೆ ಪ್ರಶ್ನೆ ಕೇಳಲೇನು?” “ಓದಿಲ್ಲ, ಸರ್.” “ಈಗಿನ್ನೂ ಓದೀನಿ ಅಂದಿ?” “ಪುಸ್ತಕ ಓದೀನಿ (ಒಯ್ದಿದ್ದೇನೆ), ಸರ್, ಆದರ ಓದಿಲ್ಲ” ಅಂದನಂತೆ.
ನನ್ನದೂ ಅದೇ ಕಥೆ!
Dear Shrivatsa
Your humorous article reminded me of several similar embarrassing , frustrating, experiences at various airports . Many a times I had no choice but to shell out excess luggage penalty to avoid arguments with the check in counter staff. Many thanks for conveying us tips to all the readers who face similar experiences. It is so handy to carry hand held luggage scale in your suitcase, not in your hand luggage as the airport authority consider such instruments are sharp objects!
Your article is quite humorous ,written in typical Dharwad style! You have inherited genius gene from your late Grand Father,Late Mr.Sali Ramchandra Rao.
Dr.Aravind .Kulkarni
LikeLike
ತುರುಕುವುದನ್ನು ಒಂದು ಕಲೆಯೆಂದ ಗಿರಿಧರರಿಗೂ ತುರುಕಿ ಬೆಲೆ (ದಂಡ) ಅರಿತ ಅರವಿಂದರಿಗೂ ನಮನ.ಹ್ಯಾಂಡ್ ಲಗೇಜ ತಕ್ಕಡಿಯನ್ನು ಪೆಟ್ಟಿಗೆಯೊಳಗಿಡುವ ಬದಲು ಹೊರಡುವ ಮೊದಲು ಉಪಯೋಗಿಸಿದರೆ ಉತ್ತಮ!
ಉಪಯುಕ್ತ ಸಲಹೆಯ ಜೊತೆಗೆ ಪ್ರಶಂಸೆಗಳನ್ನೂ ತುರುಕಿದ್ದೀರಿ.ಅನರ್ಹನೆಂಬ ಶ್ರೀವತ್ಸ
LikeLike
ಮುಂದುವರೆದ (ತಲೆ)ಹರಟೆ- ತುರುಕು ಒಂದು ಕಲೆ. ಕಸದಿಂದ ರಸ ಬೇರೆ ಮಾಡುವ ವಿಧಾನ. ರೂಂ ತುಂಬಾ ಯದ್ವಾ ತದ್ವಾ ಬಿದ್ದಿರುವ ಸಮಾನುಗಳನ್ನು ಕ್ಷಣಾರ್ದದಲ್ಲಿ ಸರಿಯಾದ ಜಾಗಗಳಲ್ಲಿ ತುರುಕುವುದು ಕಲಿತ್ತಿದ್ದು ನನ್ನ ರೂಂಮೇಟ್ನಂದ.
ಯಾವತ್ತೂ ವಸ್ತುಗಳನ್ನು ತುರುಕುವಾಗ ತುರುಕಿಸುವ ಸಾಧನ ಅದನ್ನು ತಡೆಯಬಲ್ಲದೇ ಅಂತ ಪರೀಕ್ಷೆ ಮಾಡಿ ಮುಂದುವರಿಯಬೇಕು. ಇಲ್ಲವೆಂದರೆ ಸಾಧನವೇ ಮುರಿಯುತ್ತದೆ. ಆಪರೇಶನ್ ಮಾಡುವಾಗ ಅಪರೇಶನ್ ಮಾಡಿದ ಜಾಗವನ್ನು ಮುಚ್ಚದ ಪರಿಸ್ಥಿತಿ ಬರಬಹುದು. Z or Y Plasty ಮಾಡುವ ಪರಿಸ್ಥಿತಿ ಬಂದೀತು. ಹೀಗೆ ಒಮ್ಮೆ ಅಪರೇಶನ್ ಮಾಡುವಾಗ ನನ್ನ ಪ್ರೋಫ಼ೆಸರ್ ಹೇಳಿದ ಮಾತು Never Force anything, if it can not hold. ಕೆಲವೊಮ್ಮೆ ಅವರು ಜ್ಞಾನ-ಮೆದುಳಿನ್ನು ಉದ್ದೇಶಿಸಿ ಹೇಳಿದ್ದಾ? ಅನ್ನಿಸುತ್ತೆ.
LikeLike
Excellent narration of a brief encounter of a common scenario seen and heard but only difference is that the suitcase was full of food for the thought and not for stomach! The airline manager may not have seen many intellectual travellers like you. I am sure you value your possession after this ordeal and I hope you find time to indulge in reading. All the best for future travel.
LikeLike
ದೇಸಾಯಿ ಅವರೆ ಹೆಣ್ಣು ಮಕ್ಕಳಿಗೆ ಕೈಚೀಲದಲ್ಲಿ ತುಂಬಲು ಸಾವಿರ ಪದಾರ್ಥಗಳಿದೆ. ಪುಸ್ತಕಗಳನ್ನು ಒಯ್ಯವ ಮಹಿಳೆಯರು ತೀರಾ ಕಡಿಮೆ. ನೀವು ಸೂಟ್ ಕೇಸ್ ತೆಗೆದ ರೀತಿಯನ್ನು ಸಹಜವಾಗಿಯೇ ನಿಮ್ಮ ವೃತ್ತಿಗೆ ಅನುಗುಣವಾಗಿ ಒಬ್ಬ ವೈದ್ಯನ ರೀತಿಯಲ್ಲಿ ಪ್ರಾರಂಭಿಸಿ ಅನಂತರ ಕವಿಯ ಮಾದರಿಯಲ್ಲಿ ಮುಗಿಸಿದ್ದೀರಿ. ಕಡೆಗೆ ನೀವು ಜೊತೆಯಲ್ಲಿ ತಂದ ಎಲ್ಲಾ ಪುಸ್ತಕಗಳನ್ನೂ ಅಲ್ಲೇ ಬಿಡದೆ ಲಂಡನ್ ಮುಟ್ಟಿಸಿದಿರಿ. ”ತುರುಕು” ಪುಸ್ತಕಗಳನ್ನು ಬೆಂಗಳೂರಿನಿಂದ ತರುವಾಗ ಹೇಗೆ ಹ್ಯಾಂಡ್ ಲಗ್ಗೇಜಿನಲ್ಲಿ ತುರುಕಬಹುದು ಎಂಬ ಮಾಹಿತಿ ನೀಡುವಲ್ಲಿ ಯಶಸ್ವಿಯಾಗಿದೆ. ಲೇಖನ ಬಹಳ ಆಸಕ್ತಿ ಪೂರ್ಣವಾಗಿದೆ.
LikeLike
ಧನ್ಯವಾದಗಳು.
ಮೊದಲೇ ಹೇಳಿದಂತೆ ಇದರಲ್ಲಿ MCP ದ ಲವಲೇಷವೂ ಅಂಶವಿಲ್ಲ. ಕೈಯಲ್ಲಿ ಒಂದು ಖಾಲಿ ಚೀಲ ಯಾವಾಗಲೂ ಉಪಯೋಗಕ್ಕೆ ಬರುತ್ತೆ. ನನ್ನದು ಅನ್ವರ್ಥಕವಾಗಿ Next ಅಂಗಡಿಯದು! What next? ಗೆ ತಾರಕ ಮಂತ್ರ!
ಶ್ರೀವತ್ಸ
LikeLike
ಓದಿ, ಬಹಳ ಮಜಾ ಬಂತ್ರಿ. ಏರ್ಪೋರ್ಟ್ ನಾಗಾದರೂ ನಿಮಗ ಹೊಟ್ಟಿ ಕೊಯ್ಯೋ ಸೌಭಾಗ್ಯ ಸಿಕ್ಕ ಹಂಗಾಯ್ತು.
LikeLike
ಧನ್ಯವಾದಗಳು.
ಆಗ ನನ್ನ ಮನಸ್ಸಿನಲ್ಲಿದ್ದ ಪೇಷಂಟ್ ಅಂದರೆ ಆ ದ್ವಾರಪಾಲಕ ಜಯ- ವಿಜಯರೇ!
ಶ್ರೀವತ್ಸ
LikeLike
ರಸವತ್ತಾಗಿದೆ, ಸಕತ್ ಹಾಸ್ಯಮಯ. ನಿಮ್ಮ ತುರುಕುವಿನಿಂದಾಗಿ ನಾವೂ ಸ್ವಲ್ಪ ಕನ್ನಡ ಪುಸ್ತಕಗಳನ್ನು ಓದುವಂತಾಗಲಿ. ನಿಮ್ಮಿಂದ ಇನ್ನೂ ಹೆಚ್ಚು ಬರವಣಿಗೆಗಳು ಬರುವಂತಾಗಲಿ.
LikeLike
ಧನ್ಯವಾದಗಳು, ಕೇಶವ!
ಇಂಥ ಪ್ರಸಂಗಗಳಲ್ಲಿ ಹಾಸ್ಯವನ್ನು ಆಮೇಲೆ ತಾನೆ ನೋಡುತ್ತೇವೆ?
ಶ್ರೀವತ್ಸ
LikeLike