“ಥಟ್ ಅಂತ ಹೇಳಿ!”- ‘ಅನಿವಾಸಿ’ಗೆ ಥಟ್ಟನೆ ಗಿಟ್ಟಿದ ರಸಘಟ್ಟಿ!

ಕನ್ನಡದ ಅತ್ಯಂತ ಜನಪ್ರಿಯ ರಸಪ್ರಜ್ಞೆ ಕಾರ್ಯಕ್ರಮ ’ಥಟ್ ಅಂತ ಹೇಳಿ’ ಕಾರ್ಯಕ್ರಮ ಈಗ ಮೊದಲ ಬಾರಿಗೆ ಯು ಕೆ ದಲ್ಲಿ ಕಾಲಿಟ್ಟಿದೆ! ಭಾರತೀಯ ಟೆಲಿವಿಷನ್ ಮಾಧ್ಯಮದಲ್ಲಿ ಅತ್ಯಂತ ಸುದೀರ್ಘ ಕಾಲದಿಂದ ಪ್ರಸಾರವಾಗುತ್ತಿರುವ ಕ್ವಿಜ್ ಕಾರ್ಯಕ್ರಮವೆಂದು ’ಲಿಮ್ಕ ದಾಖಲೆ’ ಮಾಡಿದ ಹೆಗ್ಗಳಿಕೆ ಅದಕ್ಕೆ. ಈ ಪ್ರಸಾರವನ್ನು ಕಳೆದ ರವಿವಾರದಂದು ಸಾವಿರಾರು ಜನರು ಜಗತ್ತಿನ ಬೇರೆ ಬೇರೆ ಜಾಗಗಳಲ್ಲಿ ವೀಕ್ಷಿಸಿದ್ದು ಹೆಮ್ಮೆಯ ವಿಷಯ.

(ಚಿತ್ರಕೃಪೆ) ರಮ್ಯ ಭಾದ್ರಿ

ರಮ್ಯ ಭಾದ್ರಿ ಬರೆಯುತ್ತಾರೆ

ಥಟ್ ಅಂತ ಹೇಳಿ! ಎಂದು ಪ್ರಸಿದ್ದಿ ಪಡೆದ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸದವಕಾಶ ಯು.ಕೆ. ದಲ್ಲಿಯ ನಮ್ಮ ’ಅನಿವಾಸಿ’ ಬಳಗಕ್ಕೆ ದೊರೆತಿರುವುದು ಹೆಮ್ಮೆಯ ವಿಚಾರ. ಕಳೆದ ರವಿವಾರ ಜುಲೈ 5, 2020 ರಂದು ಮೊದಲ ಕಾರ್ಯಕ್ರಮ ಯಶಸ್ವಿಯಾಗಿ ಪ್ರಸಾರವಾಯಿತು.

ಡಾ ನಾ. ಸೋಮೇಶ್ವರ

ಥಟ್ ಅಂತ ಹೇಳಿ ಎಂದಾಕ್ಷಣ ಥಟ್ ಅಂತ ನೆನಪಾಗೋದು ಚಂದನ ವಾಹಿನಿಯಲ್ಲಿ ಮೂಡಿಬರುತ್ತಿದ್ದ ಡಾ ನಾ. ಸೋಮೇಶ್ವರ ರವರು ನಡೆಸಿಕೊಡುತ್ತಿದ್ದ ಜನಪ್ರಿಯ ರಸ ಪ್ರೆಶ್ನೆ ಕಾರ್ಯಕ್ರಮ. ಪ್ರಾಯಶಃ ಈ ಕಾರ್ಯಕ್ರಮವನ್ನರಿಯದ, ನೋಡದ ಕನ್ನಡಿಗನೇ ಇಲ್ಲ ಅಂದರೆ ಅತಿಶಯೋಕ್ತಿಯಲ್ಲ. ಇದು ಕರುನಾಡ  ಜನಮನ ಗೆದ್ದ ಮನೆಮಾತಾದ ಅದ್ಬುತ ರಸ ಪ್ರೆಶ್ನೆ ಕಾರ್ಯಕ್ರಮವೆನ್ನುವುದಕ್ಕೆ ಕಳೆದ 18 ವರ್ಷಗಳಿಂದ ಯಶಶ್ವಿಯಾಗಿ ನಡೆದುಕೊಂಡು ಬಂದಿರಿವುದೆ ಸಾಕ್ಷಿ.  ಇದು ಇಂದು 3000ಕ್ಕೂ ಹೆಚ್ಚು ಕಂತುಗಳನ್ನು ಅಮೋಘವಾಗಿ ಪೂರೈಸುತ್ತಾ  ಅಂತರ್ರಾಷ್ಟ್ರೀಯ ಅಲ್ಲದೆ ಅಂತರ ಖಂಡಗಳ ಮಟ್ಟದಲ್ಲಿ ಪ್ರಪಂಚದ ಮೊಲೆಮೂಲೆಯಲ್ಲಿ ನೆಲೆಸಿರುವ ಕನ್ನಡಿಗರನ್ನು ತಂತ್ರಜ್ಞಾನದ ಸಹಯೋಗದಿಂದ ತಲುಪಿರುವುದು ಅತ್ಯಂತ ಹೆಮ್ಮೆಯ ವಿಚಾರ. ಈ ಕಾರ್ಯಕ್ರಮದ ವಿಶೇಷತೆಯೆಂದರೆ ಪ್ರೆಶ್ನೆಯ ಪ್ರತಿಯೊಂದು ಉತ್ತರಕ್ಕೆ ಬಹುಮಾನವಾಗಿ ಒಂದು ಕನ್ನಡ ಪುಸ್ತಕವನ್ನು ನೀಡಲಾಗುವುದು. ಪುಸ್ತಕಗಳು  ನಮ್ಮ ಅಂತರಂಗ ಹಾಗು ಬಹಿರಂಗ ಜ್ಞಾನದ ಮಾರ್ಗದರ್ಶಿಗಳು. ’ದೇಶ ಸುತ್ತು ಕೋಶ ಓದು’ ಎಂಬ ನಾಣ್ಣುಡಿಯನ್ನು ಆಚರಣೆಗೆ ತರುವಂತ ಹಾಗು ಇದರಲ್ಲಿ ಭಾಗವಹಿಸುವ ಸ್ಪರ್ಧಿಗಳು ಮತ್ತು ವೀಕ್ಷಕರಿಗೂ ಪುಸ್ತಕ ಓದುವ ಹವ್ಯಾಸ ವನ್ನು ರೂಢಿಸಿಕೊಳ್ಳಲು ಪ್ರೇರೇಪಿಸುವಂತ ಅದ್ಬುತ ಕಾರ್ಯಕ್ರಮ. 

ಕ್ವಿಜ್ ಮಾಸ್ಟರ್ ಅಪ್ಪಟ ಕನ್ನಡಿಗರಾದ ಡಾ. ನಾ. ಸೋಮೇಶ್ವರ ಅವರಿಗೆ ಕನ್ನಡ ನಾಡು, ನುಡಿ, ಸಂಸ್ಕೃತಿ, ಸಾಹಿತ್ಯದ ಬಗೆಗಿನ ಅವರ ಒಲವು ಅಪರಿಮಿತವಾದವು. ಮೂಲತಃ  ಬೆಂಗಳೂರಿನವರು; ವೃತ್ತಿಯಲ್ಲಿ ವೈದ್ಯರು ಹಾಗೂ ಅತ್ಯುತ್ತಮ ಬರಹಗಾರರು ಹೌದು. ಅವರ ‘ಏಳು ಸುತ್ತಿನ ಕೋಟೆಯಲ್ಲಿ ಎಂಟು ಕೋಟಿ ಬಂಟರು’, ‘ಅನಂತದೆಡೆಗೆ’, ’ಓ ನನ್ನ ಚೇತನ’ ಕೃತಿಗಳು ಅವರ ಪ್ರಬುದ್ಧತೆ ಹಾಗು ಸಾಹಿತ್ಯದಲ್ಲಿನ ಪ್ರೌಢಿಮೆಯನ್ನು ಮನನ ಮಾಡಿಕೊಡುತ್ತದೆ. ಅಷ್ಟೇ ಅಲ್ಲದೆ ವಿವಿಧ ವಿಷಯಗಳ ಬಗ್ಗೆ 30ಕ್ಕೂ ಹೆಚ್ಚು ಪುಸ್ತಗಳನ್ನು ಬರೆದಿರುವ ಖ್ಯಾತಿ ಅವರದು. ಇವರ ಸಾಹಿತ್ಯದೆಡೆಗಿನ ಮನೋಜ್ಞ  ಸೇವೆಗಳಿಗೆ ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’, ‘ಆರ್ಯಭಟ್ಟ ಪ್ರಶಸ್ತಿ’, ಗೌರವ ಡಾಕ್ಟರೇಟ್ ಪದವಿ  ಹೀಗೆ ಇನ್ನು ಹಲವು ಗೌರವಗಳು ಸಂದಿವೆ. ಒಟ್ಟಿನಲ್ಲಿ  ಕನ್ನಡಿಗರು ಥಟ್ ಎಂದು ಗುರುತಿಸಿಬಿಡುವ ವಿಶ್ವಮಾನ್ಯತೆಯನ್ನು ಗಳಿಸಿರುವ ಆತ್ಮೀಯ ಗಣ್ಯರು ಸೋಮೇಶ್ವರ ರವರು. 

’ಅನಿವಾಸಿ’ ಬಳಗ

ಇಂತಹ ಪ್ರಸಿದ್ದಿ ಪಡೆದ ಕಾರ್ಯಕ್ರಮದಲ್ಲಿ ಭಾಗವಹಿಸುವ ಸದವಕಾಶ ನಮ್ಮ ’ಅನಿವಾಸಿ’ ಬಳಗಕ್ಕೆ ದೊರೆತಿರುವುದು ಹೆಮ್ಮೆಯ ವಿಚಾರ. ಹೊರ ದೇಶದಲ್ಲಿದ್ದರೂ ನಮ್ಮ ಕನ್ನಡ ಸಂಸ್ಕೃತಿಯನ್ನು ಉಳಿಸಿ ಬೆಳೆಸಿ ಪ್ರೋತ್ಸಾಹಿಸುವ ಆಶಯದಲ್ಲಿ ಅಕ್ಟೋಬರ್ 2013ರರಲ್ಲಿ ಹುಟ್ಟಿದ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ, ಯು.ಕೆ (KSSVV ) ಎಂಬ ಕನಸಿನ ಕೂಸು ಇಂದು “ಅನಿವಾಸಿ”ಎಂಬ ಹೆಸರಿನಿಂದ ಜನ ಮನ್ನಣೆ ಪಡೆದಿದೆ. 2014ರರಲ್ಲಿ ಚೊಚ್ಚಲ KSSVV ಮ್ಯಾಗಜಿನ್ ಪ್ರಕಟಣೆಯಿಂದ ಪ್ರಾರಂಭವಾದ ಅನಿವಾಸಿಯ ಪಯಣ ಸಾಗಿ  ಅನೇಕ ಸ್ವಯಂ  ಸೇವಕರ ಪರಿಶ್ರಮದಿಂದ  2014 ರಲ್ಲಿ ಅಧಿಕೃತವಾಗಿ ಅಂತರ್ಜಾಲ ಪ್ರವೇಶಿಸಿತು.  ಅನಿವಾಸಿಯ ಚೊಚ್ಚಲ ಕೃತಿ “ಅನಿವಾಸಿಗಳ ಅಂಗಳದಿಂದ” 2016ರಲ್ಲಿ ಲೋಕಾರ್ಪಣೆಯಾಯಿತು  ಅಂದಿನಿಂದ ಇಂದಿನವರೆಗೂ ಪ್ರತಿವಾರವೂ ವೈವಿಧ್ಯಮಯವಾದ ಲೇಖನ, ಕಥೆ, ಕವಿತೆ, ವಿಮರ್ಶೆ, ಪ್ರವಾಸ ಕಥನಗಳು anivaasi.com ನಲ್ಲಿ ಪ್ರಕಟಗೊಳ್ಳುತ್ತ ಬಂದಿದೆ. ಅಷ್ಟಕ್ಕೇ ಸೀಮಿತಗೊಳ್ಳದೆ ಹೆಸರಾಂತ ಸಾಹಿತಿಗಳು, ಚಿತ್ರ ನಿರ್ದೇಶಕ್ರನ್ನು ಸಂದರ್ಶನಗಳು, ಅವುಗಳ ವಿಡಿಯೋಗಳು ಇಂದಿಗೂ ಅನಿವಾಸಿ ಜಾಲ ಜಗುಲಿಯಲ್ಲಿ, youtube ನಲ್ಲಿ ಕಾಣ ಸಿಗುವುದು. 

ನಮ್ಮ ಈ ಅನಿವಾಸಿ ಬಳಗಕ್ಕೆ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಿಕೊಟ್ಟವರು ವಿವಿಡ್ಲಿಪಿ ಖ್ಯಾತಿಯ ಶ್ರೀಯುತ ಪ್ರಮೋದ್ ಲಕ್ಕುಂಡಿ ಅವರು.

ಪ್ರಮೋದ ಬರೆಯುತ್ತಾರೆ:

ಜಗತ್ತು ತನ್ನ ಹೊರಗಿನ ಕಾರುಬಾರು ನಿಲ್ಲಿಸಿ, ಮನುಷ್ಯ ಜೀವಿ ಬಿಲದಲ್ಲಿ ಸೇರುವಂತೆ ಮಾಡಿದಾಗ ಎಲ್ಲರೂ ಚಿಂತಿತರಾದರು. ಇಂತಹ ಸಮಯದಲ್ಲಿ ವಾಟ್ಸಪ್, ಜೂಮ್, ವೆಬ್ಎಕ್ಷ ಮುಂತಾದವು ಮನುಷ್ಯನಿಗೆ ದೇವರು ಕೊಟ್ಟ ವರವಾಯಿತು. ವಿವಿಡ್ಲಿಪಿ ಕೂಡ ಇಂತಹ ವರವಾದ ಏರ್ ಮೀಟ್ (Airmeet)ಇಂದ ನೇರ ಪ್ರಸಾರ ಕಾರ್ಯಕ್ರಮಗಳನ್ನು ಪ್ರಾರಂಭ ಮಾಡಿತು, ಈ ಕಾರ್ಯಕ್ರಮದಲ್ಲಿ ಒಂದು “ಕ್ವಿಜ್ ನಡೆದು ಬಂದ ದಾರಿ” ಡಾ. ನಾ ಸೋಮೇಶ್ವರ ಅವರಿಂದ. ಆಗ ಹುಟ್ಟಿದ ಮತ್ತೊಂದು ಕನಸು, ಕಿರುತೆರೆಯಿಂದ ಕನ್ನಡ ನಾಡು- ಭಾಷೆ- ಸಂಸ್ಕೃತಿ- ಕಲೆ- ಸಾಹಿತ್ಯ- ವಿಚಾರ- ಆಚಾರ ಇತ್ಯಾದಿ ಜನರಿಗೆ ತಲುಪಿಸಿದ “ಥಟ್ ಅಂತ ಹೇಳಿ” ರಸಪ್ರಶ್ನೆ ಕಾರ್ಯಕ್ರಮ ಜಗತ್ತಿನ ಕನ್ನಡಿಗರಿಗೆ ತಲುಪಿಸುವುದು. ಅವರೊಡನೆ ಮಾತಾಯಿತು, ಹೊಸ ಪ್ರಯತ್ನಕ್ಕೆ ವೇದಿಕೆ ಸಜ್ಜಾಯಿತು ಆದರೆ ಯಾರೊಡನೆ ಮೊದಲ ಪ್ರಸಾರ ಎನ್ನುವುದು ಪ್ರಶ್ನೆ ಉಳಿಯಿತು.
ಮನದೊಳಗೆ ಯಾರೊಡನೆ ಮಾಡೋಣ ಎಂಬ ವಿಚಾರ ನಡೆದಾಗ ಬಂದ ಹೆಸರು “ಅನಿವಾಸಿ ಬಳಗ”. ಇದೇ ಹೆಸರು ಬರಲು ಕಾರಣ,
೧. ಬಳಗದ ಸದಸ್ಯರೆಲ್ಲರೂ ಸಾಹಿತ್ಯ ಪ್ರೇಮಿಗಳು
೨. ಸಾಹಿತ್ಯಕ ಚಟುವಟಿಕೆಗಳನ್ನು ಮಾಡುತ್ತಾ ಉಳಿದವರಿಗೂ ಪ್ರೋತ್ಸಾಹ ಕೊಡುತ್ತ ಬಂದಿದ್ದಾರೆ
೩. ಇಲ್ಲಿ ನಾಯಕ (ಕಿ) ಎಂಬ ಸ್ಥಾನಕ್ಕೆ ಬೆಲೆಯಿಲ್ಲ, ಬದಲು ಇಲ್ಲಿ ಸಾರಥಿಗಳಿದ್ದಾರೆ ಮತ್ತು ಪ್ರತಿ ಕಾರ್ಯಕ್ಕೂ ಯಾರಾದರೊಬ್ಬರು ಸಾರಥ್ಯವಹಿಸಿ ಕಾರ್ಯದ ಗುರಿ ಮುಟ್ಟಿಸುತ್ತಾರೆ.

5-7-2020 ರ ಕಾರ್ಯಕ್ರಮ



ಇದಕ್ಕಿಂತ ಹೆಚ್ಚಿನ ಅರ್ಹತೆ ಆಯ್ಕೆ ಮಾಡಲು ಅವಶ್ಯಕತೆ ಇರಲಿಲ್ಲ, ನಮ್ಮ “ಥಟ್ ಅಂತ ಹೇಳಿ” ರಥ ಸಿದ್ದವಾಯಿತು ಮತ್ತು ಶ್ರೀವತ್ಸ ದೇಸಾಯಿ ಅವರ ಸಾರಥ್ಯದಲ್ಲಿ ಮೊದಲ ಗುರಿ ಮುಟ್ಟಿತು.

ಕಾರ್ಯಕ್ರಮದಲ್ಲಿ ಭಾಗವಹಿಸಲು ಅನೇಕ ಆಸಕ್ತರು ತಮ್ಮ ಹೆಸರುಗಳನ್ನೂ ನೊಂದಾಯಿಸಿದರು. ಮೊದಲು ನೊಂದಾಯಿಸಿದ  12 ಜನರಿಗೆ ಈ ಸದಾವಕಾಶ ದೊರಕಿತು. ಒಟ್ಟು ನಾಲ್ಕು ಕಂತುಗಳು ನಡೆಯಲಿದ್ದು, ಒಂದೊಂದು ಕಂತಿನಲ್ಲಿ ನಾಲ್ವರು ಎಂಬಂತೆ ಈಗಾಗಲೇ (5-7-2020) ಮೊದಲನೆಯ ಕಂತು ಬಹಳ ಯಶಸ್ವಿಯಾಗಿ ಪ್ರದರ್ಶನಗೊಂಡಿತು. ನಮ್ಮ ಸ್ಪರ್ಧಿಗಳು ಅತ್ಯಂತ ಹುರುಪಿನಿಂದ ಪ್ರೆಶ್ನೆಗಳಿಗೆ ಉತ್ತರಿಸಿ ಪುಸ್ತಕಗಳನ್ನು ತಮ್ಮದಾಗಿಸಿಕೊಂಡರು. ಎಂದಿನಂತೆ ೧೦ ಸುತ್ತುಗಳಿದ್ದರೂ ಹೊಸದೊಂದು ಸುತ್ತಿನ ಸೇರ್ಪಡೆ ಮೊದಲ ಕಂತನ್ನು ವಿಶೇಷವನ್ನಾಗಿಸಿತು. ಅದುವೇ ಚಿತ್ರ ಕವನ ಸುತ್ತು. ಇದು ಹೊಸ ಪ್ರಯೋಗವಾದರೂ ಪ್ರತಿಭಾನ್ವಿತರಾದ ನಮ್ಮ ಸ್ಪರ್ಧಿಗಳು ಚಿತ್ರವನ್ನು ನೋಡುತ್ತಿದ್ದಂತೆಯೇ  ಲೀಲಾಜಾಲವಾಗಿ ಆಶು ಕವನಗಳ ಮಳೆಯೇ ಸುರಿಸಿದರು. ಒಬ್ಬರಿಗಿಂದ ಒಬ್ಬರು ಅದ್ಬುತ ಕವನಗಳು. ಇದರಿಂದ ಪ್ರೇರೇಪಿತರಾದ ವೀಕ್ಷಕರೂ ಕೂಡ ಕವನಗಳನ್ನು ಬರೆದು ಕಳಿಸಿದ್ದು ವಿಶೇಷವಾಗಿತ್ತು . ಇಡೀ ಕಾರ್ಯಕ್ರಮದ ರೆಕಾರ್ಡಿಂಗನ್ನು ಕೆಳಗಿನ ಫೇಸ್ ಬುಕ್ ಲಿಂಕ್ನಲ್ಲಿ ನೋಡಬಹುದು:

[facebook url=”https://www.facebook.com/vividlipi/videos/202429907731383″ /ದೆ ಯೂಟ್ಯೂಬ್ ಮತ್ತು ಏರ್ ಮೀಟ್ ವಾಹಿನಿಗಳಲ್ಲೂ ಏಕಕಾಲಕ್ಕೆ ನೋಡಲು ವೀಕ್ಷಕರಿಗೆ ಸಾಧ್ಯವಾಯಿತು.

 

 

ಪ್ರತಿ ಸುತ್ತಿನಿಂದ ಒಬ್ಬ ವಿಜೇತರು ನಾಲ್ಕನೆಯ ಸುತ್ತಿನ ದಿನ (16-8-2020) ಫೈನಲ್ ನಲ್ಲಿ ಸ್ಫರ್ಧಿಸುತ್ತಾರೆ. ಮೊದಲ ಸುತ್ತಿನಲ್ಲಿ ಡಾ ಲಕ್ಷ್ಮಿನಾರಾಯಣ ಗುಡೂರ್ ಎಲ್ಲರಿಗಿಂತ ಹೆಚ್ಚು ಗುಣಗಲನ್ನು ಗಳಿಸಿ ವಿಜೇತರಾಗಿದ್ದಾರೆ. ಅವರಿಗೆ ನಮ್ಮ ಅಭಿನಂದನೆಗಳು. ಈ ಸಲದ ಉಳಿದ ಸ್ಫರ್ಧಿಗಳು ತಮ್ಮ ಅನುಭವವನ್ನು ಈ ಕೆಳಗೆ ಹಂಚಿಕೊಂಡಿದ್ದಾರೆ.

1)ರಾಧಿಕಾ ಜೋಶಿಯವರು ಪದ್ಯದಲ್ಲೇ ಅದನ್ನು ಬರೆದಿದ್ದಾರೆ:

         ”ಜೂಲೈ ೫ ರ ’ಥಟ್ ಅಂತ ಹೇಳಿ’ ಅನುಭವ”

ನುರಿತ ಅರಿತ ನಿಪುಣರೊಂದಿಗೆ(ಸಹ ಸ್ಪರ್ಧಿಗಳು) ಕಳೆದ ಕ್ಷಣ
ದಿಗ್ಗಜರು(ಡಾ. ಸೋಮೇಶ್ವರ್) ಮಾಡಿಸಿದರು ದಿಗಂತದ ದರ್ಶನ

ಮಾತ್ರವಲ್ಲ ಇದು ರಸಪ್ರಶ್ನೆಯ ಆಟ
ಕನ್ನಡವೆಂಬ ಮಹಾಸಾಗರದ ವಿಹಂಗಮ ನೋಟ

ಸುತ್ತಿನ ಸುಳಿಯೊಳಗೆ ಮುಳುಗಿ ಉತ್ತರಿಸದೆ ತಬ್ಬಿಬಾಗಿ
ಚಿತ್ರಕವನಗಳ ಸಾಲುಗಳ ಉತ್ಸಾಹದಿಂದ ಬೀಗಿ

ಸೋಲು ಗೆಲುವಿಗೂ ಮೀರಿದ ಅನುಭವ
ವಿಶ್ವದಾದ್ಯಂತ ಬೀರಿತು ಥಟ್ಟನೆ ಪ್ರಭಾವ.

2) ಗೌರಿ ಪ್ರಸನ್ನ:

ಆಕಸ್ಮಿಕವೋ ಪೂವ೯ನಿಯೋಜಿತವೋ..ಥಟ್ಟಂತ ನನಗೂ ಒಂದು ಅವಕಾಶ ಸಿಕ್ಕೇ ಬಿಟ್ಟಿತು..ಕನ್ನಡ ನಾಡು ಕಂಡ ಅತ್ಯಂತ ಜನಪ್ರಿಯ ಕಾರ್ಯಕ್ರಮ ‘ಥಟ್ಟಂತ ಹೇಳಿ’ ಕ್ವಿಜ್ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶ. ಬದುಕು ಹೀಗೇಯೇ ಅಲ್ಲವೇ ನೀವು ನಿರೀಕ್ಷಿಸಿಯೇ ಇರದ ಸುವಣಾ೯ವಕಾಶವೊಂದನ್ನು ಥಟ್ಟನೇ ನಿಮ್ಮ ಜೋಳಿಗೆಗೆ ಹಾಕಿಬಿಡುವುದು. ಡಾ. ನಾ ಸೋಮೇಶ್ವರರಂಥ ವಿದ್ವಾಂಸರ ಎದಿರು hot seat ನಲ್ಲಿ ಕುಳಿತುಕೊಳ್ಳಲು ಎಂಥವರಿಗೇ ಆದರೂ ಎದೆ ಡವಡವ ಎನ್ನದೇ ಇರದು. ಅವರ ಜ್ಞಾನದ ಬತ್ತಳಿಕೆಯಿಂದ ಅದ್ಯಾವ ಪ್ರಶ್ನೆಯ ಬಾಣ ಸುಯ್ ಎಂದು ಬಂದುಬಿಡುವುದೋ ಊಹಿಸಲಾಸಾಧ್ಯ.  ನನ್ನ ಜೀವನದ ಅವಿಸ್ಮರಣೀಯ ಕ್ಷಣಗಳವು.‘ಪುಷ್ಪಮಾಲಾ ಪ್ರಸಂಗೇಣ ಸೂತ್ರಂ ಶಿರಸಿ ಧಾಯ೯ತೇ’ ಅಂದಂತೆ ಅವರಿಂದಾಗಿ ‘ಅನಿವಾಸಿ‘ ಗಳಾದ  ನಾವೂ ಕನ್ನಡಾಭಿಮಾನಿಗಳ ಮನೆ- ಮನ ತಲುಪಿದೆವು.ನಮ್ಮ ರೆಕ್ಕೆಗಳಿಗೆ ಹಾರಲು ಬಾನು ಕಲ್ಪಿಸಿದ ವಿವಿಡ್ಲಿಪಿ, ಡಾ.ಸೋಮೇಶ್ವರ ಅವರಿಗೆ ಹಾಗೂ ಅನಿವಾಸಿ ಬಳಗಕ್ಕೆ ಧನ್ಯವಾದಗಳು .

3) ಅಮಿತಾ ರವಿಕಿರಣ ಬರೆಯುತಾರೆ:

ನಾವೆಲ್ಲ ಚಹ ಎಲೆಯಂಥವರು  ಬಿಸಿನೀರಿನಲ್ಲಿ  ಹಾಕಿದಾಗಲೆ ನಮ್ಮ ನಿಜ ಬಣ್ಣ ತಿಳಿಯುವುದು, ತುಂಬಾ ಹಿಂದೆ ಓದಿದ ಈ  ಮಾತು ಮೊನ್ನೆ ಮತ್ತೊಮ್ಮೆ ನೆನಪಾಯಿತು ಮತ್ತು ಪ್ರಸ್ತುತವೂ ಎನಿಸಿತು.

ಎಲ್ಲಿ ಕನ್ನಡ ನಾಡಿನ ಪ್ರಸಿದ್ಧ ರಸಪ್ರಶ್ನೆ ಕಾರ್ಯಕ್ರಮ” ಥಟ್ ಅಂತ ಹೇಳಿ” ಎಲ್ಲಿ ಯುಕೆಯ ನಡುಗಡ್ಡೆಯೊಂದರಲ್ಲಿ ಇರುವ ನಾನು. ಕನಸುಗಳು ನಿಜವಾಗುತ್ತವೆ ಎಂಬ ಮಾತಿಗೆ ಮತ್ತೆ ಪುಷ್ಟಿ ಸಿಕ್ಕಂತಾಯಿತು. ಪಿಯುಸಿ ಓದುತ್ತಿದ್ದಾಗಿನಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂಬ ಆಸೆ ಇದ್ದರೂ ಹೋಗುವ ಪ್ರಯತ್ನ ಮಾಡುವ ಧೈರ್ಯ ಕೂಡ ಆಗಿರಲಿಲ್ಲ. ಅನಿವಾಸಿ ಭಾರತೀಯಳಾಗಿರುವಾಗ ಇಂಥ ಒಂದು ಅಪರೂಪದ ಅವಕಾಶ ಬಂದಿದ್ದು ನನಗೆ ತುಂಬಾ ಅಚ್ಚರಿ ಖುಷಿ ಕೊಟ್ಟಿತು ಅಂತೆಯೇ ನನ್ನ ಕನ್ನಡ ದ  ಬಗೆಗಿರುವ ಜ್ಞಾನವನ್ನು ಒರೆಹಚ್ಚಲು ಒಂದು ವೇದಿಕೆಯು ಒದಗಿ ಬಂತು ಅನ್ನೋ ಖುಷಿ ಇತ್ತಾದರೂ, ಹಾಟ್ ಸೀಟ್ ಎಂಬುದು ತಲೆಯಲ್ಲಿರುವ ಉತ್ತರಗಳನ್ನು ಆ ಮಟ್ಟಿಗೆ ಆವಿ ಮಾಡುತ್ತದೆಂದು ಅಂದುಕೊಂಡಿರಲಿಲ್ಲ.

ಡಾ ನಾ ಸೋಮೇಶ್ವರ್ ಅವರ ವಿದ್ವತ್ತು, ವಾಕ್ಚಾತುರ್ಯ , ಪ್ರತಿ ಪುಸ್ತಕದ ಬಗ್ಗೆ ಅವರು ಕೊಡುತ್ತಿದ್ದ ವಿವರಣೆ ಅದನ್ನು ಆಶರ್ಯವೆನಿಸುತ್ತಿತ್ತು. ಜೊತೆಗೆ ಸ್ಪರ್ಧಿಸಿದ 3 ಜನರ ಬುದ್ಧಿಮತ್ತೆಯನ್ನು ನೋಡಿ” ಅಬ್ಬಾ ಎಷ್ಟೆಲ್ಲಾ  ಗೊತ್ತು ಇವರಿಗೆ” ಅಂದು ಕೊಂಡಿದ್ದು ಅದೆಷ್ಟುಬಾರಿಯೋ!!!!! ಚಿತ್ರ ಕವಿತೆಯ ಸುತ್ತು ತುಂಬಾ ಇಷ್ಟವಾಯಿತಾದರೂ ಕಷ್ಟಕರವಾಗಿತ್ತು. ಅತಿ ಸುಲಭ ಎಣಿಸಿದ ಕೆಲ ಪ್ರಶ್ನೆಗಳ ಉತ್ತರವೇ ತಪ್ಪಾಗಿ ಅಯ್ಯೋ ದೇವ್ರೇ ಅನ್ನೋ ಹಾಗೆ ಮಾಡಿದವು. ಮೂರುವರೆ ಘಂಟೆಗಳು ಕಳೆದಿದ್ದು ಗೊತ್ತೇ ಆಗಲಿಲ್ಲ.

ಒಟ್ಟಿನಲ್ಲಿ ಇದೊಂದು ಜೀವನಪರ್ಯಂತ ನೆನಪಿಡುವಂತಹ ಕಾರ್ಯಕ್ರಮ. ತಂತ್ರಜ್ಞಾನದ  ಹೊಸ ಮಜಲನ್ನು ಸಾಹಿತ್ಯದ ಪಡಸಾಲಿಗೆ ತೆರೆದ  ವಿವಿಡ್ಲಿಪಿಯ ಪ್ರಮೋದ್ ಅವರಿಗೂ, ಅಚ್ಚುಕಟ್ಟಾಗಿ ನಿಯಮ, ಸಮಯ, ಹೀಗಿರಬೇಕು ಹೀಗೆ ಬೇಡ ಎಂದು ಹೇಳಿದ ಶ್ರೀವತ್ಸ ದೇಸಾಯಿಯವರಿಗೂ ಧನ್ಯವಾದಗಳು.- ಅಮಿತಾ ರವಿಕಿರಣ

4) ಡಾ ಲಕ್ಷ್ಮಿನಾರಾಯಣ ಗುಡೂರ್ ಬರೆಯುತಾರೆ:

‘ಥಟ್ ಅಂತ ಹೇಳಿ’ಯಂತಹ ಅತ್ತ್ಯುತ್ತಮ ಗುಣಮಟ್ಟದ, ಜನಪ್ರಿಯ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದ್ದು ಬಹಳೇ ಸಂತೋಷದ ವಿಷಯ. ನಡೆಸಿಕೊಡುವ ಶ್ರೀ ನಾ ಸೋಮೇಶ್ವರ ಅವರ ಅಗಾಧ ಜ್ಞಾನ, ಪ್ರಶ್ನೋತ್ತರ ನಡೆಸಿಕೊಡುವ ಪರಿ ಎಲ್ಲ ಮೆಚ್ಚುವಂಥದ್ದು. ಈ ಮರೆಯದ ನೆನಪನ್ನ ಒದಗಿಸಿಕೊಟ್ಟ ಅನಿವಾಸಿ ತಂಡಕ್ಕೂ, ವಿವಿಡ್ಲಿಪಿ ಅವರಿಗೂ ಹೃತ್ಪೂರ್ವಕ ಧನ್ಯವಾದಗಳು. – ಲಕ್ಷ್ಮಿನಾರಾಯಣ ಗುಡೂರ್

(ಈ ವರದಿ ಲೇಖನ ಪ್ರಕಟನೆಯ ಹಿಂದೆಯೂ ಅನೇಕರ ಪರಿಶ್ರಮವಿದೆ. ಇವರಿಗೆಲ್ಲ ಋಣಿ: ರಮ್ಯ ಭಾದ್ರಿ, ಸತ್ಯಪ್ರಮೋದ ಲಕ್ಕುಂಡಿ (vividlipi), ಅನಿಸಿಕೆಗಳನ್ನು ಬರೆದ ರಾಧಿಕಾ ಜೋಶಿ, ಅಮಿತಾ ರವಿಕಿರಣ, ಗೌರಿ ಪ್ರಸನ್ನ (ಶೀರ್ಷಿಕೆ ಸೂಚಿಸಿದ್ದಕ್ಕೂ).

          ಶ್ರೀವತ್ಸ ದೇಸಾಯಿ

ಈ ಸುತ್ತಿನ ವೀಕ್ಷಣೆಯ ವಿವರಗಳು (ಇತ್ತೀಚಿನದು): ಕಾರ್ಯಕ್ರಮ 33,116 ಜನರನ್ನು ತಲುಪಿ, 12,000 ಜನರು ಮನಃಪೂರ್ವಕವಾಗಿ ವಿಡಿಯೋ ವೀಕ್ಷಿಸಿ, 1,200 ಜನ ವ್ಯಾಖ್ಯೆ ಬರೆದಿದ್ದಾರೆ. ಜೊತೆಗೆ ಹೊನ್ನಾವರದ ನಾಲ್ಕು ತಾಲೂಕು ಮತ್ತು ಸುತ್ತಲಿನ ಊರಿನವರು ಸೇರಿ 20,000 ವೀಕ್ಷಕರು ತಮ್ಮ ಕೇಬಲ್ ಟಿ ವಿ ಯಲ್ಲಿ ಇದನ್ನು ವೀಕ್ಷಣೆ ಮಾಡಿದ್ದಾರೆ, ಅವರ ಎಣಿಕೆ ಸರಿಯಾಗಿ ಸಿಕ್ಕಿಲ್ಲ. 5,317 ಎಂಗೇಜ್ಮೆಂಟ್ಸ್, YouTube ವೀಕ್ಷಕರು 683. ಈ ಕಾರ್ಯದಲ್ಲಿ ತೊಡಗಿಸಿಕೊಂಡ ಎಲ್ಲರಿಗೂ ಇದು ಒಂದು ಸಂತಸ ಕೊಡುವ ವಿಷಯವಾಯಿತು. ವೀಕ್ಷಕರ ಪ್ರಶ್ನೆಗೆ ಸರಿಯಾದ ಉತ್ತರ ನೂರರ ಹತ್ತಿರ ನಿರ್ದಿಷ್ಟ ಸಮಯದಲ್ಲಿ ಬಂದಿವೆ.(ಮಾಹಿತಿ ಕೃಪೆ: ಪ್ರಮೋದ್)

ರೇಡಿಯೋ, ಗಿರ್ಮಿಟ್ ಮತ್ತು ಅನಿವಾಸಿ – ಶ್ರೀವತ್ಸ ದೇಸಾಯಿ ಬರೆದ ಲೇಖನ

ಶ್ರೀವತ್ಸ ದೇಸಾಯಿ

‘ಅನಿವಾಸಿ’ ಯ ಕ್ರಿಯಾಶೀಲ ಬರಹಗಾರರೂ ಮತ್ತು ಪೋಷಕರೊಬ್ಬರಲ್ಲಾಗಿರುವ ಶ್ರೀವತ್ಸ ದೇಸಾಯಿಯವರು, ಇತ್ತೀಚಿಗೆ ಧಾರವಾಡಕ್ಕೆ ಪ್ರವಾಸ ಹೋಗಿದ್ದರು. ಅಲ್ಲಿರುವ ರೇಡಿಯೋ ಗಿರ್ಮಿಟ್ ಕಚೇರಿಗೆ ಭೇಟಿಯಾಗುವ ಮತ್ತು ಸಂದರ್ಶನವೊಂದನ್ನು ನೀಡುವ ಅವಕಾಶ ಒದಗಿ ಬಂದಾಗ ಅವರು  ‘ಅನಿವಾಸಿಯ’ ಧ್ವಜವನ್ನು ಹಾರಿಸಲು ಮರೆಯಲಿಲ್ಲ. ಸಂದರ್ಶನದ ಧ್ವನಿ ಸುರುಳಿ ವಾಟ್ಸಾಪ್ ನಲ್ಲಿ ನನಗೆ ಕೇಳಲು ದೊರಕಿದಾಗ, ಡಾ ।। ದೇಸಾಯಿ ಯವರ ‘ಅನಿವಾಸಿ’ ಬಗೆಗಿನಪ್ರೀತಿ , ಅದಕ್ಕಾಗಿ ದುಡಿದವರನ್ನು ಅವರು ನೆನೆಸಿದ ಪರಿ ಎಲ್ಲವೂ ಅವರ ‘ಅನಿವಾಸಿ’ ಯ ಬಗೆಗಿನ ಕಾಳಜಿ ಮತ್ತು ಅದರ ಬಗೆಗಿನ ವಿನಮ್ರತೆಯನ್ನು ತೋರಿಸುತ್ತಿತ್ತು. ಈ ಸಂದರ್ಶನವನ್ನೇಕೆ ಒಂದು ಲೇಖನವನ್ನಾಗಿಸಬಾರದು ಎಂದು ಅವರೊಡನೆ ಚರ್ಚಿಸಿದಾಗ, ಅವರು ಸಂದರ್ಶನವನ್ನೇ ವಸ್ತುವಾಗಿರಿಸದೆ, ಅದರ ಅನುಭವವನ್ನು ವಸ್ತುವನ್ನಾಗಿಸಿ ಒಂದು ಲೇಖನ ಬರೆಯಬಹುದು ಎಂದು ಹೇಳಿದರು. ಅದರಂತೆ ಈ ವಾರ ಅನಿವಾಸಿಯಲ್ಲಿ ಒಂದು ಲೇಖನದ ಗಿರ್ಮಿಟ್ ಅನ್ನು ನಮಗೆಲ್ಲ ಬಡಿಸಿದ್ದಾರೆ. ಯು ಕೆ ಯ ಹಲವಾರು ಭಾಗಗಳಲ್ಲಿ ಬರುವ ವಾರಾಂತ್ಯದಲ್ಲಿ ಹಿಮಪಾತವಾಗುವ ಮುನ್ಸೂಚನೆಯಿದ್ದು, ಈ ಲೇಖನವನ್ನು ಓದಿದಮೇಲೆ ಮನೆಯಲ್ಲಿ ಗಿರ್ಮಿಟ್ ಮಂಡಕ್ಕಿ ಮತ್ತು ಮೆಣಸಿನಕಾಯಿ ಬಜ್ಜಿ ಮಾಡಿಕೊಂಡು ತಿನ್ನಲು ಅನೇಕರು ಪ್ರಚೋದಿತರಾಗುವ   ಸಂಭವ ಹೆಚ್ಚಾಗಿದೆ. ತಪ್ಪದೇ  ಓದಿ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ. 
                                                                                ಸಂ : ಶ್ರೀನಿವಾಸ ಮಹೇಂದ್ರಕರ್ 

ರೇಡಿಯೋ

ನನಗೂ ರೇಡಿಯೋಗೂ ಅಂಟಿದ ನಂಟು ಹುಟ್ಟಿನಿಂದಲೇ ಇರಬೇಕೇನೋ! ನಮ್ಮ ಮನೆ, ಅಂದರೆ ನಾನು ಧಾರವಾಡದ ಸಪ್ತಾಪುರದಲ್ಲಿ ಹುಟ್ಟಿದ ಮನೆ ಆಕಾಶವಾಣಿ ಧಾರವಾಡದ ಒಂದೇ ತರಂಗಾಂತರದಲ್ಲೇ ಇದ್ದಿರಬೇಕು, ಏಕೆ, ಒಂದೇ ಕೂಗಳತೆಯಲ್ಲೇ ಇತ್ತು. ಇನ್ನೊಂದು ರೀತಿಯಲ್ಲಿ ಹೇಳುವದೆಂದರೆ, ಆಗ AIR Dharwad ದಲ್ಲಿ ರೇಡಿಯೋ ಪ್ರೋಗ್ರಾಮ್ಮರ್ ಆಗಿ ಕೆಲಸ ಮಾಡುತ್ತಿದ್ದ ಹೆಸರಾಂತ ಲೇಖಕ ಹೆಚ್ ಕೆ ರಂಗನಾಥರ ಶಬ್ದಗಳಲ್ಲಿ ”ಮಾತು-ಮಾತು-ಮಾತಿನ ಮೋಡಿ ಹಾಕುವ ದ ರಾ ಬೇಂದ್ರೆ”ಯವರು ಆಗ AIR advisor ಆಗಿದ್ದಾಗ ತಮ್ಮ ಕೋಣೆಯಲ್ಲಿ ಕುಳಿತು ಸ್ವಲ್ಪ ಜೋರಾಗಿ ಮಾತಾಡಿದರೆ ಹೊರಗಿನಿಂದಲೇ ನಮ್ಮ ಮನೆಯವರೆಗೂ ಕೇಳುವಷ್ಟು ಸಮೀಪ ಆ ರೇಡಿಯೋ ಸ್ಟೇಷನ್! ನಮ್ಮ ಮನೆಯಲ್ಲಿ ನಮಗಾಗಿ ಒಂದು ರೇಡಿಯೋ ಇರಲಿಲ್ಲ. ನನ್ನ ಅಣ್ಣ ಮತ್ತು ನಾನು ಕೂಡಿ ಒಂದು ಕ್ರಿಸ್ಟಲ್ ರೇಡಿಯೋವನ್ನು (ನೀವಾರೂ ಅದನ್ನು ಕೇಳಿರಲಿಕ್ಕೆ ಅಥವಾ ನೋಡಿಯೂ ಇರಲಿಕ್ಕಿಲ್ಲ) ನಾವೇ ಕಟ್ಟಿ, ಇಯರ್ ಫೋನ್ ಕಿವಿಗೆ ಹಚ್ಚಿ ರೇಡಿಯೋ ಪ್ರಸಾರವನ್ನು ಕೇಳುತ್ತಿದ್ದೆವು.

Crystal Radio

ಆಗ ಧಾರವಾಡ ಆಕಾಶವಾಣಿಯಿಂದ ಹಿಂದುಸ್ತಾನಿ ಸಂಗೀತದ ದಿಗ್ಗಜರಾದ ಮಲ್ಲಿಕಾರ್ಜುನ ಮನ್ಸೂರ್, ಬಸವರಾಜ ರಾಜಗುರು, ಗಂಗೂಬಾಯಿ ಹಾನಗಲ್ ಅವರ ಸಂಗೀತ, ಶ್ರೀರಂಗರ ನಾಟಕ ಇತ್ಯಾದಿ ಪ್ರಸಾರವಾಗುತ್ತಿದ್ದ ಕಾಲವದು. ಅದು 1950ರ ದಶಕ. ಆಲ್ ಇಂಡಿಯಾ ರೇಡಿಯೋ (AIR) ಆಗ ತಾನೇ ಅಧಿಕೃತವಾಗಿ ‘ಬಹುಜನಹಿತಾಯ, ಬಹುಜನ ಸುಖಾಯ‘ ಆಕಾಶವಾಣಿ ಎಂದು ಕರೆದುಕೊಳ್ಳಲಾರಂಭಿಸಿತು. ಡಾ ಗೋಪಾಲಸ್ವಾಮಿ ಪ್ರಾರಂಭಿಸಿದ ಮೈಸೂರು ಬಾನುಲಿ ಕೇಂದ್ರಕ್ಕೆ ’ಆಕಾಶವಾಣಿ’ ಎಂಬ ಆ ಹೆಸರನ್ನು ಮೊದಲು ಸೂಚಿಸಿದವರು ಸಾಹಿತಿ, ಹಾಸ್ಯಲೇಖಕ ನಾ. ಕಸ್ತೂರಿ ಅಂತ ದಾಖಲೆಯಾಗಿದೆ. ಆಗ ನಾನು ಶಾಲೆಯಲ್ಲಿದ್ದಾಗ ಓದಿದ ’ಗೆಳೆಯರ ಗುಂಪಿನ’ವರೊಲ್ಲೊಬ್ಬರಾದ ವಿನಾಯಕರು (ವಿ ಕೃ ಗೋಕಾಕ) ರಚಿಸಿದ ಕವಿತೆಯ ಆರಂಭ ಹೀಗಿತ್ತು:

”ಕಾಡಿಯೋ ಬೇಡಿಯೋ, ತಂದೆನೊಂದು ರೇಡಿಯೋ!” ರೇಡಿಯೋ ಅಷ್ಟು ಅಪರೂಪ. ಆಗ ರಾಷ್ಟ್ರೀಯ ಬಾನುಲಿ ಪ್ರಸಾರವೊಂದೇ ಇತ್ತು ನಮ್ಮ ಮನರಂಜನೆಗೆ. ಆನಂತರ ರೇಡಿಯೋ ಸಿಲೋನ್ ಗೆ ಪೈಪೋಟಿಯಾಗಿ ’ವಿವಿಧ ಭಾರತಿ” ಪ್ರಾರಂಭವಾಗಿ ಸ್ವಲ್ಪೇ ಸಮಯದಲ್ಲಿ ಜನಪ್ರಿಯವಾಯಿತು. ರೇಡಿಯೋ ಮನೆ ಮನೆಯಲ್ಲೂ ಕಾಣಿಸಿ, ಕೇಳಿಸಿಕೊಳ್ಳಲಾರಂಭಿಸಿತು. ರೇಡಿಯೋದ ರಿಸೆಪ್ಶನ್ ಸ್ಪಷ್ಟವಾಗಿ ಕೇಳಿಸದೆ ಮಧ್ಯ ಮಧ್ಯದಲ್ಲಿ ’ಕರ್ ಕರ್” ಎನ್ನುವ ಕಿವಿಗೆ ತ್ರಾಸ ಕೊಡುತ್ತಿದ್ದ ಕರ್ಕಶ ಸದ್ದುಗಳೊಂದಿಗೆ ಪ್ರಸಾರವಾಗುತ್ತಿದ್ದ ಮೀಡಿಯಂ ವೇವ್ AM (amplitude modulation) ರೇಡಿಯೋ ಮುಂದೆ ಸುಧಾರಿಸಿ FM (frequency modulation) ರೇಡಿಯೋ ಆಗಿ, ಈಗ ಅಂತರ್ಜಾಲದಲ್ಲಿ ಸ್ಟ್ರೀಮ್ ಆಗುವ ಕಾಲ ಬಂದಿದೆ. ಅವುಗಳನ್ನು ಸ್ಮಾರ್ಟ್ ಫೋನಿನ ಆಪ್ ನಲ್ಲಿಯೋ ಕಂಪ್ಯೂಟರಿನಲ್ಲೋ (IP ಪ್ರೋಟೋಕಾಲ್) ಕೇಳಲು ಸಿಗುವ ಸ್ವತಂತ್ರ ರೇಡಿಯೋ ಪ್ರಸಾರಗಳು ಹೇರಳವಾಗಿವೆ. ಅಂಥವುಗಳಲ್ಲೊಂದು ರೇಡಿಯೋ ಗಿರ್ಮಿಟ್ ಆನ್ ಲೈನ್ ರೇಡಿಯೋ.

ಗಿರ್ಮಿಟ್

ಏನಿದು ಗಿರ್ಮಿಟ್? ಈ ಊರಿನ ಎರಡು ಖಾದ್ಯಗಳು ಧಾರವಾಡದ ಕೀರ್ತಿಯನ್ನು ಅಜರಾಮರವನ್ನಾಗಿ ಮಾಡಿವೆ: ಒಂದು ಸಿಹಿಯಾದ ಧಾರವಾಡದ ಫೇಡೆ; ಇನ್ನೊಂದು ಖಾರದ ಗಿರ್ಮಿಟ್. ಅದೊಂದು ತರಹದ ಮಿಕ್ಷ್ಚರ್: ಚುರಮುರಿ, ಉಳ್ಳಾಗಡ್ಡಿ (ಇಲ್ಲಿ ಈರುಳ್ಳಿ, ಅಂದರೆ ತಪ್ಪು!), ಹುಣಸೆ ರಸ, ಅಥವಾ ನಿಂಬೆ, ಹಸಿರು ಮೆಣಸಿನಕಾಯಿ, ಉಪ್ಪು, ಸಕ್ಕರೆ, ಒಗ್ಗರಣೆ, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಸಣ್ಣನೆಯ ಶೇವ್ ಇವೆಲ್ಲ ಕೂಡಿ ಪುಟಾಣಿ ಹಿಟ್ಟಿನೊಂದಿಗೆ ಕಲೆಸಿ, ಮೇಲೆ ಗಾರ್ನಿಶ್ ಗೆಂದು ಸ್ವಲ್ಪ ಸಣ್ಣಗೆ ಹೆಚ್ಚಿದ ಉಳ್ಳಾಗಡ್ಡಿ. ಕರಿದ ಹಸಿ ಮೆಣಸಿನಕಾಯಿಯನ್ನು ಜೊತೆಯಲ್ಲಿ ನಂಜಿಕೊಳ್ಳುತ್ತ, ಹಾಡು ಕೇಳುತ್ತ, ಹಾಡುತ್ತ ತಿಂದರೆ ಸ್ವರ್ಗಕ್ಕೆ ಮೂರೇ ಗೇಣು. ಉತ್ತರ ಕರ್ನಾಟಕದ ತುಂಬೆಲ್ಲ ಇದರ ಖ್ಯಾತಿ ಹರಡಿದೆ, ಈಗ ದಕ್ಷಿಣಕ್ಕೂ ಪಸರಿಸಿದೆ. ವಿಜಾಪುರ, ಬೆಳಗಾಂ ಕಡೆ ಇದಕ್ಕೆ ’ಸಂಗೀತ” ಅಂತ ಕರೆಯುತ್ತಾರಂತೆ. ರಾತ್ರಿಯಿಡೀ ನಾಟಕ ಸಂಗೀತ ನೋಡುತ್ತ ಕೇಳುತ್ತ ಟೆಂಟಿನ ಹೊರಗಡೆ ಬಿಸಿಬಿಸಿ ಬಿಕ್ಕುವ ಈ ಖಾದ್ಯಕ್ಕೆ ಆ ಹೆಸರು ಬಂದಿರಬೇಕೆಂದು ಕೆಲ ರಸಿಕರ ಗ್ರಹಿಕೆ. ಏನೇ ಇರಲಿ, ಹೊಸದೊಂದು ವೈಶಿಷ್ಟ್ಯಪೂರ್ಣ ರೇಡಿಯೋ ಸ್ಟೇಷನ್ ಧಾರವಾಡದಲ್ಲಿ ಶುರು ಮಾಡುವಾಗ ಇದರ ಸ್ಥಾಪಕರು ಇದಕ್ಕಿಂತ ಒಳ್ಳೆಯ ಹೆಸರನ್ನು ಹುಡುಕುವ ಗೋಜಿಗೇ ಹೋಗಿರಲಿಕ್ಕಿಲ್ಲ, ಎಂದು ನನ್ನ ತಿಳುವಳಿಕೆ. ಆ ರೇಡಿಯೋ ಸ್ಟೇಷನ್ನಿನ ವಿಳಾಸ ಗೋಪಾಳಪುರ, ಮಾಳಮಡ್ಡಿ, ಧಾರವಾಡ ಎಂದು ತಿಳಿದ ಮೇಲಂತೂ ಕೂಡಲೆ ಇದೇ ವರ್ಷಾರಂಭದಲ್ಲಿ ಊರಿಗೆ ಹೋಗಿದ್ದ ನಾನು ಅವರ ಆಮಂತ್ರಣಕ್ಕೊಪ್ಪಿ ನಡೆದುಕೊಂಡೇ ಸ್ಟುಡಿಯೋಕ್ಕೆ ಹೊರಟೆ.

ಕ್ಷಣಕ್ಷಣಕ್ಕೆ ಕಾಲ ಮೇಲೆ ಹರಿದು ಬರಬಹುದಾದ ಕಾರು, ದ್ವಿಚಕ್ರಗಳಿಂದ ಬಚಾಯಿಸಿಕೊಳ್ಳುತ್ತ ನಡೆದು, ಜೀವವನ್ನು ಮುಷ್ಟಿಯಲ್ಲಿ ಹಿಡಿದುಕೊಂಡು ಚರಂಡಿ, ನಾಯಿಗಳಿಂದ ತಪ್ಪಿಸಿಕೊಳ್ಳಲು ’ಹಾಪ್ ಸ್ಟೆಪ್ ಅಂಡ್ ಜಂಪ್’ ಮಾಡದೆ ಕೇರ್ ಫ್ರೀ ಕಾಲ್ನಡಿಗೆಯ ಆನಂದವನ್ನು ಇನ್ನೂ ಅನುಭವಿಸಲು ಸಾಧ್ಯವಾಗುವ ಕೆಲವೇ ಪಟ್ಟಣಗಳಲ್ಲಿ ನನ್ನ ಹುಟ್ಟೂರು ಧಾರವಾಡವೂ ಒಂದು. ಈ ರೇಡಿಯೋ ಸ್ಟುಡಿಯೋ ಈಗ ಮನೆಮಾಡಿರುವ ಪವಮಾನ ಅಪಾರ್ಟ್ಮೆಂಟ್ಸ್ ಕಟ್ಟಡದ ಮುಂದಿನ ರಸ್ತೆಯಗುಂಟವೇ ನಾನು ಪ್ರತಿದಿನ ಶಾಲೆಯಿಂದ ಮನೆಗೆ ಮರಳುತ್ತಿದ್ದುದನ್ನು ನೆನೆದು ಎದೆಯಲ್ಲಿ ಪುಳಕ. ಆ ಕಟ್ಟಡದ ಎದುರಿಗೇ ’ಆನಂದಕಂದ’ವೆಂಬ ಹೆಸರಿನ ಮನೆ, ಆ ಕಾಲದ ಪ್ರಸಿದ್ಧ ಸಾಹಿತಿ ಬೆಟಗೇರಿ ಶರ್ಮರ ಕುಟುಂಬದ್ದು. ಅವರು ಬದುಕಿದ್ದ ಸಮಯದಲ್ಲಿ ಊರಿನ ವೀಥಿಗಳಲ್ಲಿ ಅಡ್ಡಾಡುವಾಗ ಕನ್ನಡದ ಕೆಲಸ ಮಾಡಿದ ಅದೆಷ್ಟು ಸಾಹಿತಿಗಳು, ಕವಿಗಳು, ಕಲಾಕಾರರು ಕಾಲ್ನಡಿಗೆಯಲ್ಲೋ ಟಾಂಗಾದಲ್ಲೋ ಹೋಗುವದನ್ನು ನೋಡುವದು ಸರ್ವೇ ಸಾಮಾನ್ಯವಾಗಿತ್ತು! ಬೇಂದ್ರೆ, ಆಲೂರು ವೆಂಕಟರಾಯರು, ಶಂ ಭಾ ಜೋಷಿ, ಚೆನ್ನವೀರ ಕಣವಿ, ಕೆ ಕೃಷ್ಣಮೂರ್ತಿ, ಹೀಗೇ ಅನೇಕರನ್ನು ನೋಡಿದ್ದ ನೆನಪು ಇನ್ನೂ ಹಸಿರಾಗಿಯೇ ಇದೆ.

Audacity ಕಾರ್ಯದಲ್ಲಿ ತೊಡಗಿದ ವಿಜಯ ಸತ್ತೂರ

ನಾನು ರೇಡಿಯೋ ಗಿರ್ಮಿಟ್ ಗೆ ಮೊದಲ ಭೇಟಿಕೊಟ್ಟ ದಿನ ಒಂದು ಜಾನೇವರಿ ಮುಂಜಾವಿನ ಎಳೆ ಬಿಸಿಲಿನಲ್ಲಿ ನಡೆಯುತ್ತಾ ಹಳೆಯ ನೆನಪುಗಳನ್ನು ಮೆಲಕು ಹಾಕುತ್ತಾ ಹೋದೆ. ಒಂದು ಹೊಸ ಕಟ್ಟಡದ ಮೂರನೆಯ ಮಹಡಿಯ ಬಾಗಿಲಲ್ಲಿ ನಿಂತು ಕಾಲ್ ಬೆಲ್ ಒತ್ತಿದಾಗ ಹೃತ್ಪೂರ್ವಕವಾಗಿ ಸ್ವಾಗತಿಸಿದವರು ವಿಜಯ ಸತ್ತೂರ್ ಮತ್ತು ಹಸನ್ಮುಖಿಯರಾದ ಅವರ ಸಹೋದ್ಯೋಗಿಗಳು! ಇದಾದ ಕೆಲ ದಿನಗಳ ನಂತರ ಸಂದರ್ಶನ ತೆಗೆದುಕೊಂಡವರು ಇನ್ನೊಬ್ಬ ವಿಜಯರು (ಇನಾಂದಾರ್). ಚಿಕ್ಕಂದಿನಲ್ಲಿ ನಾನು ನೋಡಿದ್ದ ಆಲ್ ಇಂಡಿಯಾ ರೇಡಿಯೋದ ಐವತ್ತರ ದಶಕದ ಆಕಾಶವಾಣಿ ಕೇಂದ್ರಕ್ಕೂ ಇಪ್ಪತ್ತೊಂದನೆಯ ಶತಮಾನದ ಇಂಟರ್ನೆಟ್ ಆಧಾರಿತ ನವಯುಗದ ಒಂದು ಸ್ಟುಡಿಯೋಕ್ಕೂ ಬಹಳ ವ್ಯತ್ಯಾಸವಿರಬಹುದು, ಇಲ್ಲಿ ರೇಡಿಯೋ ಪ್ರಸಾರ ಹೇಗೆ ಆಗುತ್ತದೆ, ಏನು ವ್ಯತ್ಯಾಸ, ಅದರ nuts and bolts ಏನೆಂದು ತಿಳಿದುಕೊಳ್ಳುವ ತವಕ ನನಗೆ. ರೇಡಿಯೋ ಗಿರ್ಮಿಟ್ ಇತ್ತೀಚೆಗಷ್ಟೇ ಪ್ರಾರಂಭವಾದ, ಎರಡು ವರ್ಷಗಳಿಗಿಂತ ಕಡಿಮೆಯ ವಯಸ್ಸಿನ ಹಸುಳೆ, ಎಂದು ಗೊತ್ತಾಯಿತು. ’ವಿವಿಡ್ ಲಿಪಿ’ (VIVIDLIPI)ಮತ್ತು ಈ ರೇಡಿಯೋ ಎರಡೂ ಪ್ರಮೋದ LNS ಅವರ  ಕನಸಿನ ಕೂಸು. ಕೆಲವೇ ಕಾಯಂ ಸಿಬ್ಬಂದಿಗಳು. ಆಡಳಿತಕ್ಕೆ ಆರೇಳು ಜನರಷ್ಟೇ ಫುಲ್ ಟೈಮ್ ಕೆಲಸಮಾಡುವವರು. ಇನ್ನುಳಿದವರೆಲ್ಲ ಪಾರ್ಟ್ ಟೈಮ್. ಅವರ ಕುಟುಂಬದವರನ್ನೇಕರು ಅದರಲ್ಲಿ ಕೆಲಸಮಾಡುತ್ತಾರೆ. ಎಲ್ಲರೂ ಈಗಿನ ಕಾಲದಲ್ಲಿ ಸಾಮಾನ್ಯವೆನ್ನುವ ‘ಮಲ್ಟಿ ಟಾಸ್ಕಿಂಗ್’ ಪಟುಗಳು.

ರೇಡಿಯೋ ಗಿರ್ಮಿಟ್ ಈಗ ಲಾಭೋದ್ದೇಶಬಾಹಿರ (non-profit making) ಸಂಸ್ಥೆ. ಅದರ ಪ್ರಸಾರವನ್ನು ರೇಡಿಯೋ ಜಾರ್ (Jar) ಹೋಸ್ಟ್ ಮಾಡುತ್ತದೆಯಂತೆ. ಅದು 24*7 ಪ್ರಸಾರವಾಗುವ ರೇಡಿಯೋ. ಅದರ ವೆಬ್ ಸೈಟ್ (www.radiogirmit.com) ನಲ್ಲಿ ಅವರ ಪ್ರಸಾರಗಳ ವಿವಿಧ ಅಂಗಗಳನ್ನು ಕೇಳಬಹುದು: ಹರಟೆ ಕಟ್ಟೆ, ಸ್ಪಂದನ, ವಿಷಯಧಾರೆ, ಚಿಣ್ಣರ ಕಥಾಗುಚ್ಛ, ವಿಶೇಷ ಸಂದರ್ಶನ, ಇತ್ಯಾದಿ. ಅವುಗಳಲ್ಲಿ ಕೆಲವು ತಪ್ಪದೆ ನಿಯತ ಕಾಲದಲ್ಲಿ ಪ್ರಸಾರವಾದರೂ ಇನ್ನು ಕೆಲವು ಮಧ್ಯದಲ್ಲಿ ಸ್ಥಗಿತಗೊಂಡಂತೆ ಕಾಣುತ್ತದೆ. ಈ ಕಾರ್ಯಕ್ರಮಗಳು ಪ್ರಸಾರವಾಗದ ಉಳಿದ ಸಮಯದಲ್ಲಿ ಹಾಡು, ಸಂಗೀತವನ್ನು 24/7 ಕೇಳಬಹುದು. ’ಲಹರಿ’ ಯವರು ಕೊಡಮಾಡಿದ ಹಾಡುಗಳ ಲಹರಿ ಸತತವಾಗಿ ಹರಿಯುತ್ತಿರುತ್ತದೆ. ಇಲ್ಲಿಯವರೆಗೆ ತಡೆಯಿಲ್ಲದೆ ಪ್ರಸಾರವಾದ ಹರಟೆಕಟ್ಟೆಯ ಹಲವಾರು ಉತ್ಕೃಷ್ಟ ಹರಟೆಗಳನ್ನು ನಾನು ಸ್ವತ: ಆಲಿಸಿ ಆನಂದಿಸಿರುವೆ. ಅದರಲ್ಲಿ ಪ್ರಸ್ತುತ ಪಡಿಸುತ್ತಿರುವ ಬಲಕುಂದಿಯ ಗೌರಿ ಪ್ರಸನ್ನ (ಈಗ ಯುಕೆ ವಾಸಿ) ಅವರ ’ಧಾರವಾಡಿ’ ಭಾಷೆ ಮತ್ತು ಶೈಲಿ ಹರಟೆಗೆ ಒಗ್ಗುತ್ತದೆ. ಪ್ರತಿಯೊಂದು ಹರಟೆಗಳಲ್ಲಿ ತುಂಬ ವಿಷಯ ವೈವಿಧ್ಯತೆ ಮತ್ತು ಸಾಹಿತ್ಯದ ಉಲ್ಲೇಖ, ಇವು ಬರೀ ಒಣ ಹರಟೆಯಾಗದೆ ಅವನ್ನು ಮುದ್ರಿಸಿದರೆ ಒಳ್ಳೆಯ ಲೇಖನಗಳಾಗುವ ಸಾಧ್ಯತೆಯಿದೆ ಎಂದೆನಿಸುವದು. ಉದ್ಘೋಷಕಿ ಉಮಾ ಭಾತಖಂಡೆಯವರ ಇಂಪಾದ ಧ್ವನಿ ಕೆಲವೊಂದು ಕಾರ್ಯಕ್ರಮಗಳಿಗೆ ಮೆರುಗು ಕೊಟ್ಟಿದೆ. ಈ ರೇಡಿಯೋದ ನಿರ್ವಾಹಕರ ಉದ್ದೇಶಗಳೇನೋ ಮಹತ್ತರವಾದವು; ”ಇದನ್ನು ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ತಂಗುದಾಣವನ್ನಾಗಿ ಮಾಡಬೇಕೆಂದು” ಅವರ ಗುರಿ. ಸಮಯ ಕಳೆದಂತೆ, ಕ್ರಮೇಣ ಸಂಸ್ಥೆ ಬೆಳೆದಂತೆ ಅದು ಸಫಲವಾಗಲಿ ಎಂದು ಹಾರೈಸುವೆ.

ನನ್ನ ಸಂದರ್ಶನ

ನಿಗದಿತ ಸಂದರ್ಶನದ ತಾರೀಖು ಬದಲಾಗಿದ್ದರಿಂದ, ಮತ್ತು ತಪ್ಪಿಸಲಾರದ ಬೇರೆ ಅಪಾಯಿಂಟ್ಮೆಂಟ್ ಕಾರಣದಿಂದಾಗಿ ನನ್ನ ಸಂದರ್ಶನ ನಡೆದದ್ದು ಫೆಬ್ರುವರಿ 8, 2020 ರಂದು ಮಧ್ಯಾಹ್ನ. ಬಲಿಪಶುವಿನಂತಿಲ್ಲದಿದ್ದರೂ ಸ್ವಲ್ಪ ’ನರ್ವಸ್’ ಆಗಿಯೇ ಸ್ಟೂಡಿಯೋದಲ್ಲಿ ಕಾಲಿಟ್ಟೆ. ಸಂದರ್ಶಕ -ಸಂದರ್ಶನಾರ್ಥಿಗಳ ಸಂಬಂಧ ವಿಚಿತ್ರ. ಅವರ ಕೆಮಿಸ್ಟ್ರಿ ಸರಿಯಾದರೆ ಇಬ್ಬರಿಗೂ ’ವಿನ್-ವಿನ” ಲಾಭದ ಆಟ. ಸಂದರ್ಶನ ಹರಿತವಾದ ಎರಡಲುಗಗಳ ಕತ್ತಿಯಿದ್ದಂತೆ. ಯಾರು ಘಾಸಿಯಾಗುತ್ತಾರೆ ಎನ್ನುವದು ಭಾಗವಹಿಸುವ ಆಟಗಾರರ ಮೇಲೆ ಅವಲಂಬಿಸಿದ್ದು. ನಾನು ಬಿ.ಬಿ.ಸಿ.ಯ ರೇಡಿಯೊ 4 ರ ನಿಷ್ಠಾವಂತ ಶ್ರೋತೃ ಅನ್ನಿ. ಅದು ಜಗತ್ತಿನ ನಂಬರ್ 1 ರೇಡಿಯೋ ಸ್ಟೇಷನ್ ಆಗಿ ಇನ್ನೂ ಉಳಿದಿದೆಯೋ ಗೊತ್ತಿಲ್ಲ, ಆದರೂ ನಾನು ಕೇಳುತ್ತ ಬಂದ ನಾಲ್ಕು ದಶಕಗಳಲ್ಲಿ ಅದು ಪ್ರಸಾರ ಮಾಡಿದ ಅವಿಸ್ಮರಣೀಯ ಸಂದರ್ಶನಗಳು ಮತ್ತು ವುಗಳನ್ನು ನಡೆಸಿಕೊಟ್ಟ ಅಸಾಧಾರಣ ನಿರೂಪಕರ ಸಾಲೇ ಇದೆ ಬ್ರಾಡ್ಕಾಸ್ಟಿಂಗ್ ಹೌಸ್ ದಲ್ಲಿ. ಅವರಲ್ಲಿ ಸುಪ್ರಸಿದ್ಧರು 30 ವರ್ಷಗಳ ಅಖಂಡ ಸೇವೆಯ ನಂತರ ಇತ್ತೀಚೆಗೆ ದಿನನಿತ್ಯದ ಬೆಳಿಗ್ಗಿನ ರೇಡಿಯೋ ’’ಟುಡೇ” ದಿಂದ ನಿವೃತ್ತರಾದ ’ರಾಟ್ ವೈಲರ್’ ಬಿರುದಿನ ಜಾನ್ ಹಂಫ್ರೀಸ್. ಅವರೆಂಥ ಪ್ರಚಂಡ ಸಂದರ್ಶಕರೆಂದರೆ ಅತಿರಥಿ ಮಹಾರಥಿ ರಾಜಕಾರಣಿಗಳು ಸಹ ಅವರ ಸಮ್ಮುಖದಲ್ಲಿ ಕಿಂಚಿತ್ತಾದರೂ ನಡುಗಿತ್ತಿದ್ದರಂತೆ. ಆದರೂ ಕೆಲವರು ತೋರಗೊಡುತ್ತಿರಲಿಲ್ಲವಂತೆ. ಆದರೆ ನಾನು ರಾಜಕಾರಣಿಯೂ ಅಲ್ಲ ಮತ್ತು ವಿರೋಧಾಭಾಸದ ಮನುಷ್ಯನೂ ಅಲ್ಲವೆಂದ ಮೇಲೆ ಏಕೆ ಅಳುಕು?

ಸಂದರ್ಶಕ ವಿಜಯ ಇನಾಂದಾರ ಮತ್ತು ಲೇಖಕ (Photo: Radio Girmit)

ಅವರು ಹೇಳಿದಂತೆ ಆ ದಿನ ಮಧ್ಯಾಹ್ನ ಮೂರೂವರೆಗೆ ಅದೇ ಅಟ್ಟ ಹತ್ತಿ ಹೋದೆ. ಕೈಯಲ್ಲಿ ’ಅನಿವಾಸಿ’ ಬಗೆಗಿನ ಮಾಹಿತಿಯ ಟಿಪ್ಪಣಿ ಮಾಡಿಕೊಂಡ ನೋಟ್ ಬುಕ್ಕು. ಉಮಾ ಅವರು ಬರಮಾಡಿಕೊಂಡು ಸ್ಟೂಡಿಯೋಕ್ಕೆ ಕರೆದೊಯ್ದರು. ಸ್ಟೂಡಿಯೋ ಅಂದರೆ ಚಿಕ್ಕದಾದರೂ ಬೆಳಕಿನಿಂದ ಕೂಡಿದ ಆ ಕೋಣೆಯಲ್ಲಿ ಒಂದು ಟೇಬಲ್ಲು; ಅದರ ಮೇಲೆ ವಿಜಯ ಸತ್ತೂರ್ ಮತ್ತು ಉಮಾ ಅವರು ಎಡಿಟಿಂಗ್ ಗೆ ಉಪಯೋಗಿಸುವ ಕಂಪ್ಯೂಟರ್; ಅದರಲ್ಲಿ ಲೋಡ್ ಮಾಡಿದ ಮತ್ತು ಈ ಮೊದಲೇ ನನಗೆ ಪ್ರದರ್ಶಿಸಿದ ’ಆಡಾಸಿಟಿ’ ತಂತ್ರಾಂಶ; ಗೋಡೆಯ ಮೇಲೆ ರೇಡಿಯೋ ಗಿರ್ಮಿಟ್ಟಿನ ಲೋಗೋ ಹೊತ್ತ ದೊಡ್ಡ ಪೋಸ್ಟರ್. ಕೋಣೆಯ ಇನ್ನೊಂದು ಭಾಗದಲ್ಲಿ ಇಬ್ಬರಿಗೂ ಕೂಡಲು ಕುರ್ಚಿಗಳು; ಅವರ ಮಧ್ಯದಲ್ಲಿ ಗೋಡೆಯ ಬ್ರಾಕೆಟ್ಟಿನಿಂದ ತೂಗುಬಿಟ್ಟ ಪ್ರೋಫೆಷನಲ್ ಮೈಕ್ರೋಫೋನ್. ಇದನ್ನೆಲ್ಲ ನೋಡುವಷ್ಟರಲ್ಲಿ ಕೋಣೆಯಲ್ಲಿ ಹೊಕ್ಕರು ವಿಜಯ ಇನಂದಾರ್. ಪರಿಚಯ, ಪೀಠಿಕೆಯ ಮಾತುಗಳು ಆದವು. ನಾನು ಈ ಮೊದಲೇ ಕಳಿಸಿದ್ದ ಅನಿವಾಸಿಯ ಲೇಖನಗಳು ಅವರಿಗೆ ತಲುಪಿದೆಯೆಂದು ಖಚಿತ ಪಡಿಸಿಕೊಂಡೆ. ಸಂದರ್ಶನದ ರೂಪರೇಷೆಗಳನ್ನು ಸ್ಪಷ್ಟಪಡಿಸಿಯಾದ ಮೇಲೆ, ಉಮಾ ಅವರು ಸ್ವಿಚ್ಚಾನ್ ಮಾಡಿ (?) ಸೋನಿ ಡಿಜಿಟಲ್ ರೆಕಾರ್ಡರನ್ನು ಅವರ ಕೈಗಿತ್ತರು. ತಡಮಾಡದೇ ಸಂದರ್ಶನ ಪ್ರಾರಂಭವಾಯಿತು. ಸರತಿ ಪ್ರಕಾರ ಮೈಕ್ರೋಫೋನಿನಂತೆ ಅದನ್ನು ಕೈಯಲ್ಲಿ ಹಿಡಿದು ಅದರೊಳಗೆ ನಾವು ಒಬ್ಬೊಬ್ಬರಾಗಿ ಮಾತಾಡ ಬೇಕು, ಮತ್ತು ಇನ್ನೊಬ್ಬರಿಗೆ ವಾಪಾಸ್ ಕೊಡಬೇಕು.

ಸಂದರ್ಶನ ಮುಂದುವರೆದಂತೆ ಅದರಲ್ಲಿ ಪಳಗಿದ ಇನಾಂದಾರರು ನನ್ನ ಮೇಲೆ ಪೂರ್ತಿ ವಿಜಯ ಸಾಧಿಸಲು ಸನ್ನದ್ಧರಾಗಿದ್ದಂತೆ ಕಾಣದೆ ಬಹಳ ಸೌಹಾರ್ದಕರ ವಾತವರಣ ನಿರ್ಮಿಸಿ ರಿಲಾಕ್ಸ್ ಆಗುವಂತೆ ಮಾಡಿದ್ದಕ್ಕೆ ನಾನು ಋಣಿ. ಬರ್ದುಗರಾದ್ದರಿಂದ ಆಗಾಗ ಪ್ರಶ್ನೆಗಳಿಂದಲೇ ಪೇಚು ಹಾಕುತ್ತಿದ್ದರು! ಕನ್ನಡ ಬಳಗ ಯು ಕೆದ ಪ್ರಾರಂಭ, ಮತ್ತು ಅದು ಹೇಗೆ ಅನಿವಾಸಿಯ ಹುಟ್ಟಿಗೆ ನಾಂದಿ ಹಾಡಿತು, ಅದರ ಪ್ರೇರಣೆ, ಬೆಳವಣಿಗೆ ಎಲ್ಲ ಚರ್ಚೆ ಮಾಡಿದೆವು. ಧನ್ಯಾವಾದಗಳೊಂದಿಗೆ ಸಂದರ್ಶನ ಮುಗಿಯಿತು. ರೆಕಾರ್ಡರ್ನಲ್ಲಿ ಹೇಗೆ ಮೂಡಿದೆ ಎಂದು ನೋಡುವಾ ಅಂತ ಉಮಾ ಅವರು ಕಂಪ್ಯೂಟರಿನಲ್ಲಿ ಹಾಕಿದರೆ ಏನೂ ಕೇಳಿಸವಲ್ಲದು. Blank, ಶೂನ್ಯ! ಹಾಂಡ್ ಸೆಟ್ ಸ್ವಿಚ್ ಆನ್ ಆಗಿರಲೇ ಇಲ್ಲ. ಸುಮ್ಮನೆ ಗಾಳಿಯ ಜೊತೆಗೆ ಮಾತಾಡಿದಂತೆ ಆಗಿತ್ತು! ದೀಪವಿಲ್ಲದೆ ಆರತಿಯಂತೆ. ’ತುಪ್ಪದ ಬತ್ತಿ ಹಚ್ಚಿ’ ಎರಡನೆಯ ಸಲ ಮತ್ತೆ ಸಂದರ್ಶನದ ಪುನರಾವೃತ್ತಿ. ಈ ಸಲ ರೆಕಾರ್ಡ್ ಆದದ್ದು ಖಚಿತ ಪಡಿಸಿಕೊಂಡು ಹೊರಬಿದ್ದೆ. ಹೋಗುವಾಗ ರೇಡಿಯೋ ಗಿರ್ಮಿಟ್ಟಿನ ಮೆಮೆಂಟೊ ಹಿಡಿದು de rigueur ಫೋಟೋ ತೆಗೆಸಿಕೊಂಡು ಅವಿಸ್ಮರಣೀಯ ಭೆಟ್ಟಿಗೆ, ಮತ್ತು ‘ಅನಿವಾಸಿ’ಯ ಬಗ್ಗೆ ಚರ್ಚೆ ಮಾಡಲು ಕೊಟ್ಟ ಅವಕಾಶಕ್ಕೆ ಧನ್ಯವಾದಗಳನ್ನರ್ಪಿಸಿ ಮರಳಿದೆ. ಏನೋ, ನನ್ನ ಕರ್ತವ್ಯ ಮಾಡಿದ ಸಮಾಧಾನ.

ಶ್ರೀವತ್ಸ ದೇಸಾಯಿ (ಲೇಖನ ಮತ್ತು ಫೋಟೋಗಳು)

ಕೃಪೆ: ರೇಡಿಯೋ ಗಿರ್ಮಿಟ, ಸರೋಜಿನಿ ಪಡಸಲಗಿ