ಈ ಸಾಲಿನ ಟಿ ಎಸ್ ಏಲಿಯಟ್ ಪ್ರಶಸ್ತಿ ವಿಜೇತೆ ಸಾರಾ ಹೋವ್ ಬರೆದ ಎರಡು ಕವಿತೆಗಳು – ಉಮಾ ವೆಂಕಟೇಶ್ ಮತ್ತು ಕೇಶವ ಕುಲಕರ್ಣಿ

ಸಾರಾ ಹೋವ್ (Sarah Howe), ಬ್ರಿಟಿಷ್ ಕವಿ, ತಮ್ಮ ಮೂವತ್ತರ ಹರೆಯದಲ್ಲೇ, ತಮ್ಮ ಪ್ರಥಮ ಕವನ ಸಂಕಲನಕ್ಕೇ (Loop Of Jade) ಪ್ರತಿಷ್ಟಿತ ಟಿ ಎಸ್ ಏಲಿಯಟ್ ಪ್ರಶಸ್ತಿಯನ್ನು ಈ ವರ್ಷ ಪಡೆದಿದ್ದಾರೆ. ಹಾಂಕಾಂಗಿನಲ್ಲಿ ಹುಟ್ಟಿ (ಇಂಗ್ಲೀಷ್ ತಂದೆ, ಚೈನೀ ತಾಯಿ), ಚಿಕ್ಕವರಿರುವಾಗಲೇ ಇಂಗ್ಲಂಡಿಗೆ ಬಂದವರು. ಇಂಗ್ಲೀಷ್ ಮತ್ತು ಚೀನಾದ ಪರಂಪರೆಯನ್ನು ಕವಿತಗಳಲ್ಲಿ ಅರಸುತ್ತಾರೆ.

ಲಿಂಗಬೇಧದ ಅನ್ಯಾಯವನ್ನು ಕವಿತೆಗಳಲ್ಲಿ ಬೆರಗುಗೊಳಿಸುವಂತೆ ಅನ್ವೇಷಣೆ ಮಾಡುತ್ತಾರೆ ಎಂದು ಪ್ರಶಸ್ತಿ ಪ್ರಕಟಣೆಯ ಸಮಯದಲ್ಲಿ ಹೇಳಿದ್ದಾರೆ. ಅವರು ಹೆಂಗಸಾಗಿರುವುದರಿಂದ, ಬಿಳಿಯರಲ್ಲದಿರುವುದರಿಂದ, ವಯಸ್ಸಾಗದಿರುವುದರಿಂದ ಈ ಪ್ರಶಸ್ತಿ ಕೊಟ್ಟಿದ್ದಾರೆ ಎಂದು ಕುಹುಕ ಕೂಡ ಕೇಳಿಬಂದಿದೆ.

ಕೆಲವೇ ಕೆಲವು ಸಾಲುಗಳಲ್ಲಿ ಏನೆಲ್ಲವನ್ನು ಹೇಳಬಹುದು ಎನ್ನುವುದಕ್ಕೆ `ಉನ್ಮತ್ತ` ಕವನ ಒಂದು ಒಳ್ಳೆಯ ಉದಾಹರಣೆ. ವಿಜ್ಞಾನದ ಕ್ಲಿಷ್ಟಕರ ವಿಷಯಗಳನ್ನೂ ಕವಿತೆಯಾಗಿಸಬಹುದು ಎನ್ನುವುದಕ್ಕೆ `ಸಾಪೇಕ್ಷತೆ` ಒಂದು ಉತ್ತಮ ನಿದರ್ಶನ.

ಒಂದೇ ಓದಿಗೆ ಈ ಕವಿತೆಗಳು ದಕ್ಕುವುದಿಲ್ಲ. ಹಾಗಂತ ಪೂರ್ತಿ ಅರ್ಥವಾಗದೆಯೂ ಇರುವುದಿಲ್ಲ. ಒಂದೊಂದೇ ಸಾಲುಗಳನ್ನು ನಮ್ಮದಾಗಿಸಿಕೊಂಡು ಕವಿತೆ ಮೂಡಿಸುವ ಅಮೂರ್ತ ಚಿತ್ರಗಳಲ್ಲಿ ಕಳೆದುಹೋದರೆ ಕವಿತೆ ಸಾರ್ಥಕ.

————————————
ಕನ್ನಡಕ್ಕೆ: ಕೇಶವ ಕುಲಕರ್ಣಿ

ಉನ್ಮತ್ತ

ಅದುಮಿಡುವುದು
ಒಂಥರದ

ಅಗತ್ಯ? ನಾನರೆ
ಹಣ್ಣಾದ ಹಣ್ಣು

ನೀ ಹುಲಿ
ನಿನ್ನುಗುರು ನೀನೇ ಕಚ್ಚುತ್ತ

ನಾವ್ ಮದುವೆಯಾದ ದಿನ
ಮರಗಳದುರಿದವು, ಅವಕೆ

ಮೈಮೇಲೆ ದೆವ್ವ ಬಂದಂತೆ –
ದಯೆಯಿರಲೆನ್ನ ಮೇಲೆ, ಎಂದೆ ನೀ.

(ಮೂಲ ಕವನ: Frenzied ಓದಲು ಇಲ್ಲಿ ಒತ್ತಿ)

————————————–
ಕನ್ನಡಕ್ಕೆ: ಉಮಾ ವೆಂಕಟೇಶ್

ಸಾಪೇಕ್ಷತೆ

ಕತ್ತಲಲ್ಲಿ ಭಯದ ಭಾವ ಸ್ಪರ್ಶಿಸಿದಾಗ ಎಚ್ಚೆತ್ತ ನಮ್ಮ
ಕಣ್ಣಾಲಿಗಳು ಪರಿಚಿತವಾದ ಆಕಾರಗಳನ್ನೇ ತಡಕಾಡುತ್ತವೆ.

ಓಟದ ಹಾದಿಯಲ್ಲಿ ಹರಿಬಿಟ್ಟ ಬೇಟೆನಾಯಿಗಳಂತೆ, ಕಂಡಿಯಿಂದ ಮುಕ್ತವಾಗುವ
ಫೋಟಾನುಗಳಿಂದ ಬೆಳಕಿನ ಜೋಡುಸ್ವರೂಪ ಪ್ರಕಟಿಸುತ್ತಾ ಸ್ಫುರಿಸುವ ನೆರಳುಗಳು

ಮಬ್ಬುಪ್ರಯೋಗಾಲಯದ ಗೋಡೆಮೇಲೆ ಪಟ್ಟೆಯಂತೆ ಮೂಡುವಷ್ಟರಲ್ಲಿ-
ಕಣಗಳಲ್ಲ ಅವು-ಅಲೆಗಳಾಗಿ ಸಮಸ್ತ ಖಚಿತವಾದಗಳಿಗೂ ವಿದಾಯ.

ಮಾಯಾಂಗನೆಯ ಮಧ್ಯರಾತ್ರಿಯ ರೋದನದಂತೆ ಅದೃಶ್ಯವಾಗುವ
ಡಾಪ್ಲರನ (Doppler’s shift) ಈ ವಿಶ್ವದಲ್ಲಿ ಖಚಿತವೆನ್ನುವುದಿದೆಯೇನು?

ರಭಸದಿಂದೋಡುವ ರೈಲುಗಾಡಿಯಿಂದ ಕಾಣುವ ಹೊಳೆಯುವ ಮಿಂಚೊಂದು,
ಸಮಯವೇಕೆ ಪರಿಪೂರ್ಣ ಮಧ್ಯಾಹ್ನದಂತೆ ಹಿಗ್ಗುವುದೆಂದು ವಿವರಿಸುವುದಂತೆ;

ಸಮಾನಾಂತರ ರೇಖೆಗಳೆಲ್ಲಿ ಸಂಧಿಸುವುವೋ, ಯಾವುದರ ಪೂರ್ಣ ಕ್ಷಿತಿಜದಲ್ಲಿ
ಪ್ರತಿಭಟಿಸಲಾಗದೆ ತಾರೆಯ ಬೆಳಕಿನ ಕಿರಣವೂ ತನ್ನ ಪಥದಲ್ಲಿ ಬಾಗುವುದೋ

ಅಂತಹ ಕೃಷ್ಣರಂಧ್ರಗಳಿರುವಿಕೆಯನ್ನು ಪ್ರವಾದಿಸುವರಲ್ಲಾ; ಇಷ್ಟೆಲ್ಲಾ ಆಳವಾಗಿ ಚಿಂತಿಸುವ
ನಮಗೆ; ನಮ್ಮ ಕಣ್ಗಳಿಗೆ, ಕತ್ತಲೆಗೆ ಹೊಂದಿಕೊಳ್ಳುವುದು ಸಾಧ್ಯವಿಲ್ಲವೇನು?

(ಅಡಿಬರಹ: ಔಪಚಾರಿಕ ಪರಿಭಾಷೆಯಲ್ಲಿ `ಸಾಪೇಕ್ಷತೆ -Relativity` ಕವನವನ್ನು ಒಂದು ಚತುರ್ದಶಪದಿ (ಸಾನೆಟ್) ಅನ್ನಬಹುದು. ತನ್ನ ಸಣ್ಣ ಕೋಣೆಯೊಳಗೆ, ಎಲ್ಲವನ್ನು ತನ್ನೊಳಗೆ ಕುಗ್ಗಿಸಿಕೊಂಡು, ತನ್ನದೇ ಗುರುತ್ವಾಕರ್ಷಣ ಬಲ ಪ್ರಯೋಗದಿಂದ ಪತನಗೊಂಡ ಒಂದು ಕೃಷ್ಣರಂಧ್ರದ ಸ್ವರೂಪವೆಂದು ಚಿಂತಿಸಿ ಪ್ರಾರಂಭಿಸಿದ ಕವನ. ಹೀಗಿದ್ದರೂ ಸಹಾ, ನನ್ನ ಚತುರ್ದಶಪದಿ ಬೃಹತ್ಪ್ರಮಾಣ ಗುರುತ್ವದ ಜಗತ್ತಿನಲ್ಲಿರುವ ಬೆಳಕಿನ ರೂಪದೊಂದಿಗೆ ಶುರುವಾಗದೆ, ಕ್ವಾಂಟಮ್ ಭೌತಶಾಸ್ತ್ರದ ಉಪಪರಮಾಣು ಮಟ್ಟದಲ್ಲಿ ಪ್ರಾರಂಭವಾಗುತ್ತದೆ. ಈ ಎರಡು ರಾಜಿಯಾಗದ ಸಿದ್ಧಾಂತಗಳನ್ನು ಅನ್ಯೋನ್ಯವಾಗಿರಿಸಿ ಪರಸ್ಪರ ಸಂಭಾಷಿಸುವಂತೆ ಪ್ರಯತ್ನಿಸುವುದು, ಸಮಕಾಲೀನ ಭೌತಶಾಸ್ತ್ರಜ್ಞರ ಪಾಲಿಗೆ ಒಂದು ಭಗೀರಥ ಪ್ರಯತ್ನವೆನಿಸಿದೆ. “ಸಾಪೇಕ್ಷತೆ” ಕವನದ ಮೊದಲ ಭಾಗವು, ಬೆಳಕಿನ ದ್ವಂದ್ವ ಜೀವನವನ್ನು ಪ್ರಮಾಣೀಕರಿಸುವ ಭೌತಿಕ ಪ್ರಯೋಗವನ್ನು ನಿರೂಪಿಸುತ್ತದೆ. ಬೆಳಕಿನ ಕಿರಣವೊಂದು ಸಮಾನಾಂತರ ಕಂಡಿಗಳ ಮೂಲಕ ಪ್ರಕಾಶಿಸುತ್ತದೆ: ಫೋಟಾನುಗಳು ಬೆಳಕು-ಕಂಡಿಯ ಮೂಲಕ ಹರಿಯುವುದನ್ನು ಗಮನಿಸಿದಾಗ ಅವು ಕಣಗಳಂತೆ ವರ್ತಿಸುತ್ತವೆ, ಕಂಡಿಗೆ ಎದುರಾಗಿರುವ ಪರದೆಯನ್ನು ಘರ್ಷಿಸುವಷ್ಟು ಸಮಯದಲ್ಲಿ ಅಡ್ಡವಾಗಿ ಬರುತ್ತಾ, ಅವು ಅಲೆಗಳಂತೆ ವರ್ತಿಸಲು ಪ್ರಾರಂಭಿಸಿ, ನನ್ನ ಕವನದ ಚರಣದ ಸಾಲುಗಳಂತೆ ಗಾಢ ಬಣ್ಣದ ಮತ್ತು ಡೊಂಕಾದ ಪಟ್ಟಿಗಳನ್ನು ಸೃಷ್ಟಿಸುತ್ತವೆ. ‘ತರಂಗ-ಕಣದ ಉಭಯತ್ವ’ (Wave-Particle Duality) ಎಂದು ಕರೆಯಲ್ಪಡುವ ಈ ವರ್ತನೆ, ಕ್ವಾಂಟಮ್ ವಸ್ತುಗಳು ನೀವು ಅವನ್ನು ಪತ್ತೆ ಮಾಡುವವರೆಗೂ ತರಂಗ ಅಥವಾ ಅಲೆಗಳಂತೆ ವರ್ತಿಸುತ್ತವೆ, ಒಮ್ಮೆ ನೀವು ಅವನ್ನು ಪತ್ತೆ ಮಾಡಿದ ತಕ್ಷಣದಲ್ಲೇ, ಆ ವರ್ತನೆ ಅದೃಶ್ಯವಾಗುತ್ತದೆ ಎನ್ನುವುದು ಒಂದು ಕಲ್ಪನೆಯಾಗಿದೆ. ಭೌತಶಾಸ್ತ್ರಜ್ಞರು ಈಗ ಈ ಕಲ್ಪನೆಯನ್ನು ನಂಬುತ್ತಾರೆ ಹಾಗೂ ಹೈಸನ್ಬರ್ಗನ (Werner Heisenberg) ಪ್ರಸಿದ್ಧವಾದ “ಅನಿಶ್ಚಿತ ತತ್ವ” (Uncertainty principle) ಎನ್ನುವುದು ಅದೇ ರೀತಿಯ ಅಂತರ್ನಿಹಿತ ವಿದ್ಯಮಾನದ ಮೇಲೆ ಆಧಾರಿತವಾದ ಕೇವಲ ಎರಡು ಅಭಿವ್ಯಕ್ತಿಗಳಾಗಿವೆ.

ಮಿಲ್ಟನ್ನನಿಗಿಂತ ಇತ್ತೀಚಿನ ಹಲವಾರು ಕವಿಗಳು ತಮ್ಮ ಪ್ರೇರಣೆಗಾಗಿ ವಿಜ್ಞಾನದ ಮೊರೆಹೋಗಿದ್ದಾರೆ. ಅವರಲ್ಲಿ ಮುಖ್ಯರಾದವರು– ಲವೀನಿಯಾ ಗ್ರೀನ್ಲಾ (Lavinia Greenlaw), ಗ್ವೆನಿಥ್ ಲೂಯಿಸ್ (Gwyneth Lewis), ಜೋರಿ ಗ್ರಹಾಮ್ (Jori Graham), ಜೆ.ಎಚ್ ಪ್ರಿನ್ (J.H.Prynn) ಇವರಲ್ಲಿ ಹಲವರೆನ್ನಬಹುದು. ‘ಸಾಪೇಕ್ಷತೆ’ (Relativity) ಕವನವನ್ನು ಬರೆಯುವ ಸಮಯದಲ್ಲಿ, ಟ್ರೇಸಿ ಸ್ಮಿತ್ತಳ (Tracy Smith) ಶ್ರೇಷ್ಠವೆನಿಸಿದ, ಪುಲಿಟ್ಝರ್ ಪ್ರಶಸ್ತಿ ವಿಜೇತ, Life on Mars ಎನ್ನುವ ಮೂರನೆಯ ಕವನ ಸಂಗ್ರಹದಲ್ಲಿನ, ಒಂದು ಕವನದಲ್ಲಿರುವ “ನಮ್ಮ ಕಣ್ಣುಗಳು ಕತ್ತಲಿಗೆ ಹೊಂದಿಕೊಳ್ಳುತ್ತವೆ” ಎನ್ನುವ ಸಾಲು ನನ್ನ ಮನವನ್ನು ಎಡಬಿಡದೆ ಕಾಡಿತ್ತು. ಟ್ರೇಸಿ ಸ್ಮಿತ್ತಳ ತಂದೆ, ಪ್ರತಿಷ್ಠಿತ ಹಬ್ಬಲ್ ಅಂತರಿಕ್ಷ ದೂರದರ್ಶಕದಲ್ಲಿ (Hubble Deep Space Telescope) ಇಂಜಿನೀಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರಂತೆ. ಅವಳು ಬರೆದ ‘My God it is Full of Stars’ ಕವನದಲ್ಲಿ, ಆಕೆ ಹಬ್ಬಲ್ ದೂರದರ್ಶಕದ `ತಜ್ಞ-ಕಣ್ಣುಗಳು’, ಅಂತರಿಕ್ಷದ ಅಗಾಧ ತೆರಪಿನಲ್ಲಿ `ಅದರ ಅಂಚಿನವರೆಗೂ ತನ್ನ ದೃಷ್ಟಿ ಬೀರುತ್ತ’, ಅಲ್ಲಿರುವುದನ್ನೆಲ್ಲಾ ಅದ್ಭುತವಾಗಿ ಜ್ವಾಜ್ಯಲ್ಯಗೊಳಿಸುತ್ತಾ ಸ್ಪಷ್ಟಗೊಳಿಸುವುದನ್ನು ಕಲ್ಪಿಸಿಕೊಳ್ಳುತ್ತಾಳೆ. ನಮ್ಮ ಕಣ್ಣುಗಳು ಕತ್ತಲೆಗೆ ಹೊಂದಿಕೊಳ್ಳದಿರಬಹುದೇ? ಸ್ಮಿತ್ತಳ ಈ ಪದಗುಚ್ಛ ನನ್ನ ಕವನದ ಅಂತ್ಯದಲ್ಲಿ, ಒಂದು ಕಲ್ಪಿತವಾದ-ಮುಂದೂಡಲ್ಪಟ್ಟ, ಆದರೆ ಒಂದು ಆಶಾದಾಯಕ ಪ್ರಶ್ನೆಯಾಗಿ ಪುನರಾವರ್ತಿಸುತ್ತಾ, ಮಾರ್ದನಿಸಿದೆ. ಕಡೆಗೆ, ಗೆಲಿಲಿಯೋ ಮತ್ತು ಮಿಲ್ಟನ್ ಅಂತಹ ಕವಿಗಳ ಕುರುಡುತನವೂ ಕೂಡಾ, ಇತರ ರೀತಿಯ ಕಣ್ಣುಗಳನ್ನೇ ಅವಲಂಬಿಸಲಿಲ್ಲವೇ.)

(ಮೂಲಕವನ Relativity ಓದಲು ಇಲ್ಲಿ ಒತ್ತಿ)

ಭರವಸೆ

ಯುಗಾದಿ  ಹಬ್ಬದ ಕವಿ ಗೋಷ್ಠಿ ‘ಅನಿವಾಸಿ’ ಯ ಬಾಳಿನಲ್ಲಿ ಹೊಸ ಭರವಸೆ ಹುಟ್ಟಿಸುವಲ್ಲಿ ಸಫಲವಾಯಿತು. ಈ ಆಶಯವನ್ನು ಪ್ರತಿಬಿಂಬಿಸುತ್ತಿದೆ ಶಿವಪ್ರಸಾದರ ಕವನ…

ಹುಚ್ಚು ಮಾಧ್ಯಮಗಳ ಹಾವಳಿಯಲ್ಲಿ
ಕುಗ್ಗಿಹೊಗಿವೆ ನಮ್ಮ ಕ್ರಿಯಾತ್ಮಕ ಚಿಂತನೆಗಳು
ಕಂಪ್ಯೂಟರ್ಗಳ ಸಾಮ್ರಾಜ್ಯದಲಿ
ಒಣಗಿಹೋಗಿವೆ ಶಾಹಿ ಕುಡಿಕೆಗಳು
ಸೊರಗಿವೆ ಬಣ್ಣ ಬಣ್ಣದ ಲೇಖನಿಗಳು

ಇ-ಮೇಲ್ ಮೊಬೈಲ್ ಗಳ ಧಾಳಿಯಲ್ಲಿ
ಮಲಗಿವೆ ಪತ್ರ ವ್ಯವಹಾರಗಳು
ಆಂಗ್ಲಭಾಷೆಯ ಪ್ರವಾಹದಲಿ
ಕೊಚ್ಚಿಹೋಗಿವೆ ನಮ್ಮಿ ಭಾಷೆಗಳು
ಸಾಂಸ್ಕೃತಿಕ ಮೌಲ್ಯಗಳು, ಸಂಪ್ರದಾಯಗಳು

ತಲೆಯೆತ್ತಿವೆ ಆತಂಕವಾದೀ ಶಕ್ತಿಗಳು
ಉಗ್ರಗಾಮಿಗಳ ಪಿತೂರಿಗಳು
ನಡುಗಿಸಿವೆ ನಾಗರೀಕತೆಯ ಖಾಯಿಲೆಗಳು
ಎಡ್ಸ್ ಡಯಾಬಿಟಿಸ್ ಬ್ಲಡ್ ಪ್ರೆಶರ್ ಗಳು

ಮಾಯವಾಗಿವೆ ಹಚ್ಚ ಹಸುರಿನ ಕಾಡುಗಳು
ಕರಗಲಿವೆ ಹಿಮದ ಗೆಡ್ಡೆಗಳು
ಇಲ್ಲಿವೆ ಪ್ರಕೃತಿ ವಿಕೋಪಗಳು
ಧಗೆ ಬಿಸಿಲು ಸುನಾಮಿ ಭೂಕಂಪಗಳು

ಈ ತಲ್ಲಣ ಗೊಳಿಸುವ ಹಿನ್ನೆಲೆಯಲ್ಲಿ
ಅನಿಶ್ಚಿತ ಇಂದು ನಾಳೆಗಳಲಿ
ಮುರಿದುಬಿದ್ದ ವಿಶ್ವಾಸಗಳಲಿ
ಸರಿ ತಪ್ಪುಗಳ ದ್ವಂದಗಳಲ್ಲಿ

ಇನ್ನೂ ಉಳಿದಿವೆ…
ಭರವಸೆಗಳು, ಛಲಗಳು
ನಿರ್ಧಾರ, ನಂಬಿಕೆ ಮತ್ತು ಆಶಯಗಳು