ಶಾಲೆಯಿಂದ ಮಗಳನ್ನು ಕರೆದುಕೊಂಡು ವಾಪಸ್ ಮನೆಗೆ ಬರುವಾಗ ದೂರದಿಂದಲೇ ಪ್ಯಾಟ್ರಿಕ್ ಮತ್ತು ಬಾಬ್ (BOB) ಕಾಣಿಸಿದರು. ಪ್ರತಿಸಲದಂತೆ ಮಗಳು ನನ್ನ ಕೈ ಬಿಡಿಸಿಕೊಂಡು ಅವರತ್ತ ಓಡಿ ಹೋದಳು. ಪ್ಯಾಟ್ರಿಕ್ ನನ್ನೆಡೆಗೆ ನೋಡುತ್ತಾ ನಿಮ್ಮನ್ನೇ ಕಾಯುತ್ತಿದ್ದೆ, ನೋಡಿ ನಿನ್ನೆ ರಾತ್ರಿಯಿಂದ ಇವ ಊಟವೇ ಮಾಡಿಲ್ಲ ಅನ್ನುತ್ತಾ ಕಿಸೆಯಿಂದ ತಿಂಡಿ ಪೊಟ್ಟಣ ತೆಗೆದು ನನ್ನ ಮಗಳ ಹತ್ತಿರ ಕೊಟ್ಟು "ನೀ ತಿನ್ನಿಸಿ ನೋಡ್ತೀಯ, ಆಡುವ ಗುಂಗಿನಲ್ಲಿ ಸ್ವಲ್ಪ ತಿಂದರೂ ತಿನ್ನಬಹುದು" ಅಂದ. ನನ್ನ ಮಗಳು ನಿಯತಿ ಮತ್ತು ಬಾಬ್ ಒಂದು ಒಣ ಕಟ್ಟಿಗೆಯ ತುಂಡನ್ನು ಹಿಡಿದು ಆಟ ಆಡುತ್ತ ಮಧ್ಯ ಮಧ್ಯ ನಿಯತಿ ಅವನಿಗೆ ತಿಂಡಿ ತಿನ್ನಿಸುತ್ತ ಹದಿನೈದು ನಿಮಿಷದಲ್ಲಿ ಬಾಬ್ ಪೂರ್ತಿ ಪೊಟ್ಟಣ ತಿಂದು ಮುಗಿಸಿದ್ದನ್ನ ನೋಡಿ ಪ್ಯಾಟ್ರಿಕ್ ಮುಖದಲ್ಲಿ ಸಮಾಧಾನದ ನಗು ಹರಡಿತ್ತು.
ಬಾಬ್ ಮತ್ತು ಪ್ಯಾಟ್ರಿಕ್ ಪರಿಚಯವಾದದ್ದು ೨ ವರುಷಗಳ ಹಿಂದೆ. ಆಗ ನನ್ನ ಮಗಳು ನರ್ಸರಿಯಲ್ಲಿದ್ದಳು, ''ಅಮ್ಮ ನನಗೊಂದು pet ಬೇಕು" ಎಂದು ಗಂಟು ಬಿದ್ದಿದ್ದಳು. ಓಹ್ ಪೆಟ್ಟು ಬೇಕಾ, ಬಾ ನಾನಾ ಹತ್ತಿರ ಡಿಸೈನ್ ಡಿಸೈನ್ ಪೆಟ್ಟುಗಳ ಸಂಗ್ರಹ ಇದೆ, ನನ್ನ ಅಮ್ಮ ನನಗೆ ಕೊಟ್ಟಿದ್ದು, ನಾನು ಈ ವರೆಗೆ ಯಾರಿಗೂ ಕೊಡದೆ ನನ್ನಲ್ಲೇ ಎಲ್ಲಾ ಉಳಿದು ಹೋಗಿವೆ. ಬಾ ಪೆಟ್ಟು ಕೊಡುವೆ ಎಂದು ತಮಾಷೆ ಮಾಡಿ ಆ ಗಳಿಗೆ ನೂಕಿ ಬಿಡುತ್ತಿದ್ದೆ. ಊರಿನಲ್ಲಿ ಆಗಿದ್ದರೆ ಬೆಕ್ಕೋ, ಕೋಳಿಮರಿ, ನಾಯಿಮರಿ ತಂದು ಸಾಕಬಹುದಿತ್ತು. ಆದರೆ ಇಲ್ಲಿ? ನಾಯಿ ಸಾಕುತ್ತಿರುವವರ ಅನುಭವಗಳನ್ನ ಕೇಳಿಯೇ, ಅಯ್ಯೋ! ಇಷ್ಟೊಂದು ಕಷ್ಟವೇ? ಎಂದು ಎನ್ನಿಸಿ ಯಾವತ್ತೂ ಗೋಲ್ಡ್ ಫಿಶ್ ಗಿಂತ ಮೇಲಿನದನ್ನು ಯೋಚಿಸಲಾಗಿರಲಿಲ್ಲ. ಆದರೆ ಆಗಾಗ ಈ ವಿಷಯವಾಗಿ ನನಗೆ ಬೇಸರವೂ ಆಗ್ತಿತ್ತು. ಮಲೆನಾಡ ಸೆರಿಗಿನಲ್ಲಿರುವ ನನ್ನ ತವರಿನಲ್ಲಿ ಸಾಕು ಪ್ರಾಣಿಗಳು ನಮ್ಮ ಜೀವನದ ಒಂದು ಭಾಗವೇ ಆಗಿಬಿಟ್ಟಿದ್ದವು, ನಾವು ಸಾಕಿದ ಪ್ರತೀ ನಾಯಿ, ಬೆಕ್ಕುಗಳ ಸುತ್ತ, ಆಕಳು, ಕರುಗಳ ಜೊತೆ ನಮ್ಮ ನೂರಾರು ನೆನಪುಗಳಿವೆ. ಅಂಥ ಅನುಭವಗಳನ್ನ ನನ್ನ ಮಕ್ಕಳಿಗೆ ಅವರು ಬಯಸಿದ್ದಾಗ್ಯೂ ಕೊಡಲಾಗುತ್ತಿಲ್ಲವಲ್ಲ ಎಂಬ ಸಣ್ಣ ನಿರಾಸೆ ನನಗೆ ಇದ್ದೇ ಇತ್ತು.
ಆ ದಿನ ಎಂದಿನಂತೆ ನರ್ಸರಿಯಿಂದ ವಾಪಸ್ ಬರುವ ಹೊತ್ತು. ಮೇಪಲ್ ಮರಗಳ ಕೆಳಗೆ ಕುಳಿತು ಅರಳುಗಣ್ಣುಗಳಿಂದ ಆಚೀಚೆ ಬರುವವರನ್ನು ನೋಡುತ್ತಾ ಅವರು ರಸ್ತೆಯ ತುದಿಯಲ್ಲಿ ತಿರುಗಿ ಮರೆಯಾಗುವ ತನಕ ಅವರತ್ತ ಕಣ್ಣು ನೆಟ್ಟು ಮತ್ತೆ ಇನ್ನ್ಯಾರೋ ಬಂದರೆನಿಸಿದರೆ ಪಟ್ಟನೆ ಕತ್ತು ಹೊರಳಿಸಿ ನೋಡುತ್ತಿದ್ದ ಕಪ್ಪು ಬಿಳುಪಿನ ಬಾಬ್ ಯಾಕೋ ನಮ್ಮ ಮನೆಯಲ್ಲಿದ್ದ 'ಬುಧ' ಎಂಬ ನಾಯಿಯನ್ನು ನೆನಪಿಸಿ ಬಿಟ್ಟಿದ್ದ.
ಮೊದಲ ಭೇಟಿಯಲ್ಲೇ ಬಾಬ್ ನನ್ನ ಮಗಳಿಗೂ ತನ್ನ ಗುಂಗು ಹಿಡಿಸಿದ್ದ. ಮಾತೆತ್ತಿದರೆ ಬಾಬ್ ಅನ್ನುವಷ್ಟು ಸಲಿಗೆ. ಆಗ ಬಾಬ್ ನ ಬಲಗಾಲು ಮುರಿದಿತ್ತು. “ಗುಡ್ಡದಲ್ಲಿ ನಡೆದಾಡಲು ಕರೆದುಕೊಂಡು ಹೋಗಿದ್ದೆ, ಇವ ತನಗೆ ರೆಕ್ಕೆಯೂ ಇದೆ ಅಂದುಕೊಂಡು ಹಾರಾಡಲು ಹೋಗಿ ಬಿದ್ದು ಕಾಲು ಮುರಿದುಕೊಂಡ. ಈಗ ಪ್ಲಾಸ್ಟರ್ ಬಿಚ್ಚಿದ್ದಾರೆ ಆದರೆ ಇನ್ನು ಓಡಾಡಲು ಆಗುತ್ತಿಲ್ಲ. ಅದಕ್ಕೆ ತನ್ನ ಬಳಿ ಯಾರಾದರೂ ಆಡಲಿ, ಮಾತಾಡಲಿ ಅನ್ನುವ ಅತಿಯಾಸೆ ಇವನಿಗೆ, ಶಾಲೆ ಮಕ್ಕಳು ಬರುವ ಹೊತ್ತು ಹೇಗೆ ಗೊತ್ತಾಗುತ್ತದೋ ಗೊತ್ತಿಲ್ಲ, ಒದರಲು ಶುರು ಮಾಡುತ್ತಾನೆ, ಇನ್ನೆರಡು ಘಂಟೆ ಹೊರಗೆ ಇರಬೇಕು ನಾನು,” ಎಂದು ಪಾಟ್ರಿಕ್ ಒಂದೇ ಸಮನೆ ಮಾತಾಡಿದ. ನಾವು ಆ ನೆರಳಲ್ಲೇ ಬಾಬ್ ಪಕ್ಕದಲ್ಲೇ ಕುಳಿತು ಅವನ ಕತ್ತು ಸವರಿ ಮುದ್ದು ಮಾಡಿ ಬಂದಿದ್ದೆವು. ಹೀಗೆ ಆಗಿತ್ತು ನಮ್ಮ ಮೊದಲ ಭೇಟಿ.
ಆ ದಿನದಿಂದ, ಶಾಲೆಯಿಂದ ಬರುವಾಗ ಬಾಬ್ ನೊಂದಿಗೆ ೧೦ ನಿಮಿಷವಾದರೂ ಆಟ ಆಡಿ ಬರುವ ರೂಡಿ ಆಯಿತು. ಬಾಬ್ ಒಬ್ಬ ತುಂಟ ಪೋರನಂತೆ. ಆಟ ಆಡುತ್ತಲೇ ಇರಬೇಕು. ಕಣ್ಣುಗಳು ಸದಾ ನೂರು ವಾಲ್ಟಿನ ಬಲ್ಬಿನಂತೆ ಕುತೂಹಲದಿಂದ ಮಿನುಗುತ್ತಲೇ ಇರುತ್ತವೆ. ಅವನ ಹತ್ತಿರ ಒಂದು ರಬ್ಬರ್ ಚಂಡು, ದಪ್ಪ ಹಗ್ಗದ ತುಂಡು ಇದೆ ಅದವನ ಆಟಿಕೆಗಳು, ಆದರೆ ಅವನಿಗೆ ಈ ಮಕ್ಕಳು ಎಸೆಯುವ ಕಟ್ಟಿಗೆ ತುಂಡು, ಪೇಪರ್ ಚೂರುಗಳೆಂದರೆ ವೀಪರೀತ ಪ್ರೀತಿ. ಹಾಗೆ ದೂರ ಎಸೆದ ಕಟ್ಟಿಗೆಯನ್ನು ಆರಿಸಿ ತಂದು ಹಲ್ಲಿನಿಂದ ಕಚ್ಚಿ ಚೂರು ಚೂರು ಮಾಡಿ ಎಸೆದು ವಿಜಯದ ನಗೆ ಬೀರಿ ಮತ್ತೆ ಮಾಡು ಅಂತ ಪುಟ್ಟ ಮಕ್ಕಳಂತೆ ಗೋಗರೆಯುತ್ತ ನಿಲ್ಲುವ ಹೊತ್ತಿಗೆ ಇತ್ತ ಪ್ಯಾಟ್ರಿಕ್ ಹೆಮ್ಮೆಯಿಂದ ಬಾಬ್ ಬಗ್ಗೆ ಹೇಳಿಕೊಳ್ಳಲು ಶುರು ಮಾಡುತ್ತಾನೆ. ಈ ಜಾಣ ಮಕ್ಕಳ ಅಪ್ಪ ಅಮ್ಮಂದಿರು ಸ್ನೇಹಿತರು ಸಂಭಂದಿಕರೆದುರು ತಮ್ಮ ಮಕ್ಕಳನ್ನು ಹೊಗಳುತ್ತಾರಲ್ಲ ಹಾಗೆ. ಮಧ್ಯ ಮಧ್ಯ ತನ್ನ ಒಂಟಿತನ, ತನ್ನ ಆರೋಗ್ಯದ ಬಗ್ಗೆ ಹೇಳುತ್ತಾನೆ. ಕೆಲವೊಮ್ಮೆ ವಿಷಾದ ಆವರಿಸಿಕೊಳ್ಳುವುದು ನನ್ನ ಅರಿವಿಗೆ ಬರುತ್ತದೆ ಕೂಡ. ಮರು ನಿಮಿಷದಲ್ಲೇ ಬಾಬ್ ನ ಸುದ್ದಿ ಅವನ ಹೊಗಳಿಕೆ ಶುರುವಾಗುತ್ತದೆ.
“ನನಗೆ ಹೋದವಾರ ಜ್ವರವಿತ್ತು, ಬಾಬ್ ನನ್ನ ಪಕ್ಕವೇ ಮಲಗಿದ್ದ, ನಾ ಕೆಮ್ಮಿದರೂ ಏಳುತ್ತಿದ್ದ ನನಗೆನನ್ನ ಮಕ್ಕಳು ಹತ್ತಿರವಿಲ್ಲದಿದ್ದರೆ ಏನಾಯಿತು ಇವನಿದ್ದಾನಲ್ಲ ನನ್ನ ಕಾಳಜಿ ಮಾಡಲು.” ಹಾಗೆಲ್ಲ ಹೇಳುವಾಗ ನನಗೆ ಪಿಚ್ಚೆನಿಸುತ್ತದೆ. ಮತ್ತೆ ಅವನು ಹೇಳುವುದು ಸುಳ್ಳಲ್ಲ ಎಂಬುದೂ ನನಗೇನು? ಆ ಏರಿಯಾದಲ್ಲಿರುವ ಎಲ್ಲರಿಗು ಗೊತ್ತು.
ನನ್ನ ಮನೆ ಹತ್ತಿರ ಒಂದು old age home ಇದೆ ಅಲ್ಲಿರುವ ಸುಮಾರು ಅಜ್ಜಿಯರಿಗೆ ಬಾಬ್ ಎಂದರೆ ಪ್ರಾಣ, ಅವನಿಗೆ ಒಳ್ಳೊಳ್ಳೆ ಬಿಸ್ಕೆಟ್, ಕೇಕ್ ತಂದು ಕೊಡುತ್ತಾರೆ ಅದನ್ನು ನಾನೂ ನೋಡಿದ್ದೇನೆ. ಪಾಟ್ರಿಕ್ ಹೇಳುವಂತೆ, ಅಲ್ಲಿ ಒಂದು ಅಜ್ಜಿ ಗಟ್ಟಿಮುಟ್ಟಾಗಿದ್ದಾಳೆ ಬಾಬ್ ಸೀದಾ ಅವಳ ಮೇಲೆ ಮುದ್ದಿನಿಂದ ಜಿಗಿದು ಆಕೆಯ ಹೊಟ್ಟೆ ಮೇಲೆ ಕಾಲಿಟ್ಟು ನಿಂತು ಅವಳ ಹತ್ತಿರ ತಲೆ ನೇವರಿಸಿಕೊಳ್ಳುತ್ತಾನೆ, ವೀಲ್ಚೇರ್ ಮೇಲೆ ಇರುವ ಅಜ್ಜಿಯಾ ಹತ್ತಿರ ಸುಮ್ಮನೆ ನಡೆದು ಹೆಚ್ಚಿನ ಆರ್ಭಟ ವಿಲ್ಲದೆ ವಿಧೇಯ ಮಗುವಿನಂತೆ ಅಕ್ಕ ಪಕ್ಕ ಸುತ್ತುತ್ತಾನೆ. ಇನ್ನೊಬ್ಬರು ಅಜ್ಜಿ ಹಾಸಿಗೆ ಹಿಡಿದಿದ್ದಾರೆ ಅವರ ಹತ್ತಿರ ಹೋಗುವಾಗ ಸೀದಾ ಮಂಚದ ಮೇಲೆ ಕಾಲಿಟ್ಟು ನಿಂತು ಮುದ್ದು ಮಾಡಿಸಿಕೊಂಡು ಬರುತ್ತಾನೆ. ಅದಕ್ಕೆ ಅವರು ಅವನಿಗೆ ತಿಂಡಿ ತರುವುದು. ಇವನಿಗೂ ಇದು ಅಭ್ಯಾಸ ಆಗಿ ಹೋಗಿದೆ. ಯಾರು ಹೇಳಿದ್ದು ಪ್ರಾಣಿಗಳಿಗೆ ಸಭ್ಯತೆ ಇಲ್ಲ ಅಂತ! ನೋಡು ನನ್ನ ಹುಡುಗ ಎಷ್ಟು ಜಾಣ. ಎಂದು ಹೆಮ್ಮೆಯಿಂದ ಬಾಬ್ ಕಡೆಗೆ ನೋಡುತ್ತಾನೆ ಬಾಬ್ ಎಲ್ಲ ಅರ್ಥವಾದವರಂತೆ ಬಾಲ ಅಲ್ಲಾಡಿಸಿ ಕಣ್ಣರಳಿಸುತ್ತಾನೆ.
ಪ್ರತಿದಿನ ಭೇಟಿ ಬಾಬ್ ನನ್ನು ಭೇಟಿ ಮಾಡುವುದು ಅಭ್ಯಾಸ ಆಗಿಬಿಟ್ಟಿತ್ತು, ಆ ದಿನ ನಿತ್ಯದ ೧೦ ಆಟ ಮುಗಿಸಿ ಇನ್ನೇನು ಹೋರಡಬೇಕು ಅನ್ನುವಷ್ಟರಲ್ಲಿ ಬಾಬ್ ಒಂಥರಾ ವಿಚಿತ್ರ ಧ್ವನಿ ತೆಗೆದು ಕುಸು ಕುಸು ಮಾಡತೊಡಗಿದ, “Oh he is crying…ಒಹ್ god!” ಅವನಿಗೆ ನೀವು ಹೋಗ್ತೇನೆ ಅಂದಿದ್ದು ಇಷ್ಟ ಆಗ್ತಿಲ್ಲ ಅಂದು ನಗಲು ಶುರು ಮಾಡಿದ. ನನಗು ಬಾಬ್ನ ನ ಈ ವಿಚಿತ್ರ ನಡುವಳಿಕೆ ನೋಡಿ ನಗು ಬಂದಿತ್ತು. ಮತ್ತೆ ಆ ದಿನ ಶುರುವಾದ ಈ ಅಳುವ ಕ್ರಮ ಈಗಲೂ ಜಾರಿಯಲ್ಲಿದೆ.
ಬಾಬ್ ಸ್ವಲ್ಪ ಚಟುವಟಿಕೆ ಕಡಿಮೆ ಮಾಡಿದರೂ ಸಾಕು, ಪ್ಯಾಟ್ರಿಕ್ ಅವನನ್ನು ಕರೆದುಕೊಂಡು ಟ್ರಿಪ್ ಹೊರಡುತ್ತಾನೆ. ಸಮುದ್ರ ತೀರದಲ್ಲಿ ಕ್ಯಾರಾವ್ಯಾನ್ ನಲ್ಲಿ ತಿಂಗಳುಗಟ್ಟಲೆ ಉಳಿದು ಬರುತ್ತಾರೆ. ಬಂದ ನಂತರ ಬಾಬ್ ನ ವೀರಗಾಥೆಗಳನ್ನು ಕಣ್ಣೆದುರೇ ನಡೆದಂತೆ ಬಣ್ಣಿಸುತ್ತಾನೆ. ಈ ಒಂದು ವರುಷದ lockdown ಸಮಯದಲ್ಲಿ ಇಬ್ಬರು ಅದೆಷ್ಟು ಹಳಹಳಿಸಿದ್ದಾರೋ. ಪ್ಯಾಟ್ರಿಕ್ ನ ಕಡುಹಸಿರು ಬಣ್ಣದ ಕಾರಿನ ಮುಂದಿನ ಸೀಟಿನಲ್ಲಿ ಬಾಬ್ ಗತ್ತು ಗಾಂಭೀರ್ಯದಿಂದ ಕುಳಿತುಕೊಳ್ಳುವುದನ್ನು ನೋಡಿದ್ರೆ ಅವನ ಮೇಲೆ ಮುದ್ದು ಉಕ್ಕುತ್ತದೆ.
ಮೊನ್ನೆ ಒಂದು ದಿನ ಹೀಗೆ ಮಾತಾಡುತ್ತ “ನನ್ನ ಮಗಳು ನಿಯತಿ ಕೂಡ ಒಂದು ನಾಯಿ ಮರಿ ಬೇಕು ಅಂತಾಳೆ, ಆದ್ರೆ ನಮಗೆ ಧೈರ್ಯ ಇಲ್ಲ, ಅದನ್ನು ನೋಡಿಕೊಳ್ಳಬಲ್ಲೆವೇ? ಅಂತ ಅನಿಸುತ್ತೆ,” ಎಂದೆ. ಅದಕ್ಕೆ ಪಾಟ್ರಿಕ್ ಗಂಭೀರವಾಗಿ “ನಾವು ಮಕ್ಕಳನ್ನು ಬೆಳೆಸುತ್ತೇವೆ, ಕೇಳಿದ್ದೆಲ್ಲ ಕೊಡಿಸುತ್ತೇವೆ , ನಮಗಾದ ನೋವು ಅವರಿಗಾಗಬಾರದು ಅಂತ ದಿನ ರಾತ್ರಿ ಕಷ್ಟಪಟ್ಟು ಕೆಲಸ ಮಾಡ್ತೇವೆ ಒತ್ತಡದಲ್ಲಿ ಬದುಕುತ್ತೇವೆ , ಆದರೆ ಮಕ್ಕಳು ಏನು ಮಾಡ್ತಾರೆ ಹೇಳು ? ಒಂದೇ ನಮ್ಮನ್ನು ಒಂಟಿ ಯಾಗಿ ಬಿಟ್ಟು ತಮ್ಮ ಕನಸುಗಳನ್ನ ಅರಸಿ ಹೊರಡುತ್ತಾರೆ, ಅಥವಾ ಚಟಗಳಿಗೆ ಬಿದ್ದು ದಾರಿ ಹೆಣವಾಗಿ ಹೋಗ್ತಾರೆ.”
ಬಾಬ್ ನೋಡು ನಾನು ಬರುವುದನ್ನ ಎದುರು ನೋಡ್ತಾನೆ. ಸದಾ ಹಿಂದೆ ಮುಂದೆ ಓಡಾಡ್ತಾನೆ. ಆದರೆ ಎಲ್ಲಿದ್ದಾರೆ ನಾ ಬೆಳೆಸಿದ ನನ್ನ ಮಕ್ಕಳು? ಎಂದು ಬೇಸರಿಸಿದ . 'Dog shelter home' ಗೆ ಹೋಗಿ ಒಂದು ಸಣ್ಣ ಮರಿಯನ್ನು ತಂದುಕೊಡಿ, ಅವಳ ಬಾಲ್ಯ ಇನ್ನು ಸುಂದರವಾಗುತ್ತದೆ ಎಂದು ಹೇಳಿ ಅವನೇನೋ ಸುಮ್ಮನಾದ.
ಆದರೆ ನನ್ನ ತಲೆಯಲ್ಲಿ ಮಹಾಪೂರ ಹರಿಬಿಟ್ಟ ನಾನು ಬಿಟ್ಟು ಬಂದಿರುವ ನನ್ನ ಅಪ್ಪ ಅಮ್ಮ, ನನ್ನ ಮನೆ, ಮಗಳಾಗಿ ನನಗಿರುವ ಕರ್ತವ್ಯ. ಏನೇನೋ ತಲೆಯಲ್ಲಿ ಸುಳಿದಾಡಿತು. ನಮ್ಮ ತಂದೆ ತಾಯಿ ನಮ್ಮ ಬಗ್ಗೆ ಹೀಗೆ ಅಂದುಕೊಂಡರೆ? ನಾ ಅವರನ್ನು ಪ್ರೀತಿಸುವುದು ಸುಳ್ಳಲ್ಲ ಆದ್ರೆ ಜೊತೆಗಿರಲು ಆಗುವುದಿಲ್ಲ ಎನ್ನುವ ಸತ್ಯ ಅರಗಿಸಿಕೊಳ್ಳಲು ಸ್ವಲ್ಪ ಹೊತ್ತು ಹಿಡಿಯಿತು.
ಬಾಬ್ ಗೆ ಈಗ ಒಬ್ಬ girlfriend ಆಗಿದ್ದಾಳೆ ಆಕೆಯ ಹೆಸರು violet ಎಂದು. Weekend ಗಳಲ್ಲಿ ಪ್ಯಾಟ್ರಿಕ್ ಅವನನ್ನು ಹೊರಗೆ ಕರೆದುಕೊಂಡು ಹೋಗಿ ವೈಲೆಟ್ ಜೊತೆ ಪಾರ್ಕಿನಲ್ಲಿ ಆಟ ಆಡಲು ಬಿಡುತ್ತಾನೆ.
ಪ್ಯಾಟ್ರಿಕ್ ಗೆ ಬಾಬ್ ಸಿಕ್ಕ ಘಟನೆಯು ತುಂಬಾ ಮಜವಾಗಿದೆ. ಇಲ್ಲಿ ಕುರಿ ಕಾಯುವ shephard ಗಳು ನಾಯಿಯನ್ನು ಸಾಕುತ್ತಾರೆ. ಆ ನಾಯಿಗಳ ಕೆಲಸ ಕುರಿಗಳನ್ನ ನರಿಗಳಿಂದ ರಕ್ಷಿಸುವುದು ಅವುಗಳು ಹಳ್ಳ ಕೊಳ್ಳಗಳಿಗೆ ಬೀಳದಂತೆ ಎಚ್ಚರಿಸಿ ಅವುಗಳನ್ನ ಒಂದೇ ಕಡೆ ಇರುವಂತೆ ನೋಡಿಕೊಳ್ಳುವುದು. ಈ ನಾಯಿಗಳು ಮರಿ ಹಾಕಿದಾಗ ಒಂದಿಷ್ಟು ವಾರಗಳ ನಂತರ ಅವುಗಳ ಪರೀಕ್ಷೆ ನಡೆಸಲಾಗುತ್ತದಂತೆ, ಮತ್ತು ಆ ದಿನದ ಫಲಿತಾಂಶವೇ ಆ ನಾಯಿಮರಿಯ ಮುಂದಿನ ಭವಿಷ್ಯ ನಿರ್ಧರಿಸುತ್ತದೆ.
ಓಡುವ ಕುರಿ ಮಂದೆಯ ಹಿಂದೆ ಈ ಪುಟ್ಟ ನಾಯಿ ಮರಿಗಳನ್ನು ಓಡಿಸಲಾಗುತ್ತದೆ. ಕೆಲವು ನಾಯಿ ಮರಿಗಳು ಗುಂಪಿನಲ್ಲಿರುವ ದೊಡ್ಡ ನಾಯಿಗಳನ್ನು ಅನುಕರಿಸಿ ಕುರಿಮಂದೆಯ ಹಿಂದೆಯೇ ಜೋರಾಗಿ ಓಡಿ ಬೊಗಳುತ್ತಾ ಸಾಗುತ್ತವೆ ಆದರೆ ಕೆಲವೊಂದು ನಾಯಿಮರಿಗಳು ಮನೆ ಕಡೆಗೆ ಓಡಿ ಬರುತ್ತವಂತೆ. ಹಾಗೆ ಮನೆ ಕಡೆಗೆ ಓಡಿ ಬಂದ ನಾಯಿ ಮರಿಗಳನ್ನು ಶಫರ್ಡ್ ಗಳು ತಮ್ಮ ಜೊತೆಗೆ ಇಟ್ಟುಕೊಳ್ಳುವುದಿಲ್ಲ. ಅವುಗಳನ್ನ ಬೇಗ ಆದಷ್ಟು ಬೇಗ ಸಾಗಿ ಹಾಕಿಬಿಡುತ್ತಾರೆ. ಹಾಗೆ ಕುರಿಗಳ ಹಿಂದೆ ಹೋಗದೆ ಕೂಗುತ್ತಾ ಹೆದರಿ ಮನೆಗೆ ಬಂದು ಮುದುಡಿ ಮಲಗಿದ ಮುದ್ದು ನಾಯಿ ಮರಿ ನಮ್ಮ ಈ ಬಾಬ್ ಅಂದು ಕುರಿಗಳನ್ನು ನೋಡಿಕೊಳ್ಳಕಾಗ್ದಿದ್ರು ಇವತ್ತು ಕ್ಯಾನ್ಸರ್ ಸರ್ವೈವರ್ ಪ್ಯಾಟ್ರಿಕ್ ನ ಸಂಪೂರ್ಣ ಜವಾಬ್ದಾರಿ ಹೊತ್ತು ಅವನೊಂದಿಗೆ ಸರಿಸಮವಾಗಿ ನಡೆಯುತ್ತಿದ್ದಾನೆ. ಅದಕ್ಕೆ 10 ಪಟ್ಟು ಹೆಚ್ಚು ಪ್ರೀತಿಯೂ ಗಳಿಸುತ್ತಿದ್ದಾನೆ.
ಬಾಬ್ ಈಗಲೂ ನಮಗಾಗಿ ಕಾಯುತ್ತಾನೆ , ನಾವು ಅವನಿಗೆ ಕೊಡುವ ಬರೀ ಕೆಲ ನಿಮಿಷದ ಬದಲು, ಬದುಕಿನ ಅತಿ ಸುಂದರ ಪಾಠ ಹೇಳಿಕೊಟ್ಟ ಜೀವಿ ಬಾಬ್. ಈಗ ಒಂದೈದಾರು ತಿಂಗಳ ಹಿಂದೆ ಮನೆ ಮುಂದೆ ಸಿಕ್ಕ ಬಾಬ್ ಕಣ್ಣುಗಳು ಗಾಜಿನ ಗೋಲಿಯಂತೆ ಹೊಳೆಯುತ್ತಿದ್ದ ಕಣ್ಣುಗಳು, ಖಾಲಿ ಖಾಲಿ ಅನ್ನಿಸಿದವು. ಹುಷಾರಿಲ್ವಾ? ಬಾಬ್ ಸಪ್ಪಗಿದ್ದಾನೆ ಅಲ್ಲ? ಎಂದು ಕೇಳಿದ್ದೆ ತಡ 'ಬಾಬ್ ಗೆ ಕುರುಡು ಆವರಿಸುತ್ತಿದೆ. ಸ್ವಲ್ಪ ದಿನಗಳಲ್ಲಿ ಅವನಿಗೆ ಏನೇನೂ ಕಾಣುವುದಿಲ್ಲ’ ಎಂದು ಹೇಳಿದ ಮರುಗಳಿಗೆಯೇ, ನಾನಿದ್ದೇನಲ್ಲ ಅವನ ಕಣ್ಣಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳಿದ ಪ್ಯಾಟ್ರಿಕ್ ದನಿಯಲ್ಲಿ ಮಮಕಾರ ಉಕ್ಕುತ್ತಿತ್ತು.
ಈಗ ಬಾಬ್ ಪೂರ್ತಿ ದೃಷ್ಟಿ ಕಳೆದುಕೊಂಡಿದ್ದಾನೆ. ಆದರೆ ಪ್ಯಾಟ್ರಿಕ್ ಮಾತ್ರ ಅವನನ್ನು ನಿತ್ಯದಂತೆ ವಾಕಿಂಗ್ ಕರೆದುಕೊಂಡು ಹೋಗುತ್ತಾನೆ. ಆದರೆ ಕಣ್ಣು ಕಾಣದ ಅವನಿಗೆ ಮೂಗು, ಕಿವಿಗಳೇ ದಾರಿದೀಪ. ಎಲ್ಲವನ್ನು ಮೂಸುತ್ತ ಮೂಸುತ್ತ, ಏನಾದರೂ ಸದ್ದು ಕೇಳಿದ ಕೂಡಲೇ ಅವ ಪ್ರತಿಕ್ರಿಯಿಸುತ್ತಾನೆ ಈ ಕಾರಣದಿಂದಲೇ ಅವರ ವಾಕುಗಳು ಬೇಗನೆ ಮುಗಿಯುವುದೇ ಇಲ್ಲ.
ಎಷ್ಟೋ ಸಲ ಅವನನ್ನು ಮನೆಗೆ ಕರೆದುಕೊಂಡು ಹೋಗುವುದೇ ಪ್ಯಾಟ್ರಿಕ್ ಗೆ ದೊಡ್ಡ ಸವಾಲು. ತುಂಬ ಕಷ್ಟವೆನಿಸಿದರೆ ಪ್ಯಾಟ್ರಿಕ್ ತನ್ನ ಕ್ಯಾರವಾನ್ ಗೆ ಮರಳಿ ಬಿಡುತ್ತಾನೆ. ವಾಹನಗಳು ಇರದ, ಜನ ಸಂಚಾರವೇ ಇಲ್ಲದ ಹೊಲಗಳಲ್ಲಿ ಬಾಬ್ ಸ್ವಚ್ಛಂದವಾಗಿ ವಿಹರಿಸಲು ಕಣ್ಣುಗಳು ಬೇಕೆಂದೇನೂ ಇಲ್ಲವಂತೆ. ಇದೆಲ್ಲ ಕೇಳುವಾಗ ನನ್ನ ಕಣ್ಣು ಒದ್ದೆಯಾಗುತ್ತವೆ. ಬಾಬ್ ಮಾತ್ರ ಆ ಕುತೂಹಲದ ನಗು ಇನ್ನೂ ಉಳಿಸಿಕೊಂಡಿದ್ದಾನೆ. ಬಾಬ್ ನನ್ನ ಮತ್ತು ಮಗಳ best friend.
ಆ ನಾಯಿಗೆ ನನ್ನ ದೇಶ, ಭಾಷೆ, ಚರ್ಮದ ಬಣ್ಣ, ನಮ್ಮ ಧಿರಿಸು ಯಾವುದೂ ಮುಖ್ಯವಲ್ಲ. ನಾವು ಅದಕ್ಕೆ ಕೊಡುವ ಪ್ರೀತಿಯಷ್ಟೇ ಬೇಕು. ಅಷ್ಟೇ! ಇನ್ನ್ಯಾವ ನಿರೀಕ್ಷೆಯೂ ಇಲ್ಲ. ಒಮ್ಮೆಯೂ ಅವನಿಗೆ ನಾ ತಿಂಡಿಯನ್ನ ಹಾಕಿಲ್ಲ, ಆಟಿಕೆಯ ಉಡುಗೊರೆಯನ್ನೂ ಕೊಟ್ಟಿಲ್ಲ. ಆದರೂ ಅವ ನಮಗಾಗಿ ಕಾಯುತ್ತಾನೆ, ಆ ಹತ್ತು ನಿಮಿಷ ನಮ್ಮೊಂದಿಗೆ ಕಳೆಯಲು. ಅವನ ಇಚ್ಛೆಯಂತೆ ಪ್ಯಾಟ್ರಿಕ್ ಚಳಿ ಗಾಳಿ ಮಳೆ ಎನ್ನದೆ ಶಾಲೆ ಬಿಡುವ ಹೊತ್ತಿನಲ್ಲಿ ಹೊರಗೆ ಬಂದು ನಿಲ್ಲುತ್ತಾನೆ. ಬಾಬ್ ಪರಿಚಯವಾಗಿ ಈಗ 6 ವರ್ಷಗಳಾದವು.
ಬಾಬ್ ನ ಅಭಿಮಾನಿ ಬಳಗ ತುಂಬಾ ದೊಡ್ಡದು. ದೇಶ ಬಿಟ್ಟು ದೇಶ ಕ್ಕೆ ಬಂದಿರುವ ನನಗೆ ಬರೀ ಮನುಷ್ಯ ಬಾಂಧವ್ಯಗಳಷ್ಟೇ ಅಲ್ಲ. ಕಾಲ ಕಾಲಕ್ಕೆ ಅರಳುವ ಹೂ, ಚಿಗುರಿ ಬರಿದಾಗಿ ಮತ್ತೆ ಹಸಿರಾಗುವ ಮರಗಿಡಗಳು, ಹಕ್ಕಿ ಚಿಟ್ಟೆ ಮಾತು ಬಾರದ ಈ ಪ್ರಾಣಿಗಳೂ, ನನ್ನ ಮನಸ್ಸನ್ನು, ಬದುಕನ್ನೂ ಬೆಚ್ಚಗಿಟ್ಟಿವೆ.
ಓದುಗರಿಗೆಲ್ಲ ಆತ್ಮೀಯ ನಮಸ್ಕಾರ, ಸಾಮಾಜಿಕ ಜಾಲತಾಣಗಳು ಮನುಷ್ಯನ ಭಾವಾಭಿವ್ಯಕ್ತಿಗೆ ಸಶಕ್ತ ಮಾಧ್ಯಮಗಾಳಾಗಿವೆ. ಬರವಣಿಗೆ, ಹಾಡು, ಅನಿಸಿಕೆ ಅಭಿಪ್ರಾಯಗಾಲ ಜೊತೆಗೇ ಸೋಶಿಯಲ್ ಮೀಡಿಯಾಗಳಲ್ಲಿ ಫೋಟೋ ಹಾಕುವುದು, ಬಹಳಷ್ಟು ಜನರ ಪ್ರಮುಖವಾದ ಹವ್ಯಾಸವಾಗಿ ಬದಲಾಗಿದೆ. ಫೋಟೋ ವಿಡಿಯೋ ಹಾಕುವ ಕಾಯಕವೇ ಹಣಗಳಿಸುವ ಉತ್ತಮ ವೇದಿಕೆಯಾಗಿಯೂ ಮಾರ್ಪಟ್ಟಿದೆ. ಒಂದಿಷ್ಟು ಜನ ತಮ್ಮ ವೈಯಕ್ತಿಕ ಜೀವನವನ್ನು ಚಿತ್ರಗಳ ಮೂಲಕ ಜಗತ್ತಿನ ಮುಂದೆ ಅನಾವರಣ ಗೊಳಿಸಿದರೆ, ಮತ್ತೊಂದಷ್ಟು ಜನ ಹೂವು, ಹಣ್ಣು, ನೀರು, ಆಕಾಶ, ಕೀಟ, ಹಕ್ಕಿ ಅಂತೆಲ್ಲ ನಮ್ಮ ಸುತ್ತಲಿನ ಸುಂದರ ಜಗತ್ತನ್ನು ಇನ್ನೂ ಸುಂದರವಾಗಿ ತಮ್ಮ ಚಿತ್ರಗಳ ಮೂಲಕ ಚಿತ್ರಿಸಿ ನಮ್ಮ ಮುಂದಿಟ್ಟು ರಂಜಿಸುತ್ತಾರೆ. ಈ ಚಿತ್ರಗಳು ಪರಿಚಯವೇ ಇಲ್ಲದ ಜಗತ್ತಿನ ಅದ್ಯಾವುದೋ ಮೂಲೆಯಲ್ಲಿದ್ದುಕೊಂಡು ಮತ್ತೊಬ್ಬ ಸಮಾನಸಕ್ತನ ಭಾವಕೋಶದ ಪದರನ್ನು ಮೆತ್ತಗೆ ತಟ್ಟಿ, ಸ್ಫೂರ್ತಿ ಕೊಡುತ್ತವೆ. ಕವಿಮನಸನ್ನು ಆವರಿಸಲು ಯಶಸ್ವಿಯಾದ ಒಂದೇ ಒಂದು ಭಾವಚಿತ್ರ ಸಾವಿರ ಭಾವಗಳನ್ನು ಪದಗಳಲ್ಲಿ ಹೊಮ್ಮಿಸಲೂಬಹುದು.
ನಾನು ಆಗಾಗ್ಯೆ, ನನ್ನ ಕ್ಯಾಮೆರಾ ಮತ್ತು ಫೋನಿನಲ್ಲಿ ತೆಗೆದ ಚಿತ್ರಗಳನ್ನ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಎಂಬ ಸಾಮಾಜಿಕ ಜಾಲತಾಣಗಲ್ಲಿ ಹಂಚಿಕೊಳ್ಳುತ್ತಾ ಇರುತ್ತೇನೆ. ಅಲ್ಲಿರುವ ಕೆಲ ಕವಿ ಹೃದಯಗಳಿಗೆ ನಾನು ಹಂಚಿಕೊಂಡ ಚಿತ್ರಗಳು ಇಷ್ಟವಾಗಿ ಅವರ ಮನ ಸೃಜಿಸಿದ ಭಾವವನ್ನು ಅಕ್ಷರರೂಪಕ್ಕಿಳಿಸಿ ನನ್ನೊಂದಿಗೆ ಹಂಚಿಕೊಳ್ಳುತ್ತಾರೆ. ಇತ್ತೀಚಿಗೆ ಲ್ಯಾಂಡ್ ಸ್ಕೇಪ್, ಹೂ, ನದಿ, ಚಿಕ್ಕ ಚಂದ್ರರ ಫೋಟೋ ಕ್ಲಿಕ್ ಮಾಡುವಾಗಲೆಲ್ಲ, ಈ ಸ್ನೇಹಿತರು ನೆನಪಾಗಿ ಬಿಡುತ್ತಾರೆ. ಈ ಚಿತ್ರ ಇವರಿಗೆ ಇಷ್ಟ ಆಗಬಹುದು/ಆಗುತ್ತದೆ ಎಂದು ಮನಸ್ಸು ಹೇಳುತ್ತದೆ.
ನಾನು ಕ್ಲಿಕ್ಕಿಸಿದ ಭಾವಚಿತ್ರವನ್ನು ಸ್ಫೂರ್ತಿಯಾಗಿ ಕವಿತೆಯನ್ನು ಬರೆದು ಕಳಿಸುವ ನನ್ನ ಮೆಚ್ಚಿನ ಮೇದಿನಿ, ಈಶ್ವರ ಭಟ್ ಕೆ, ಮತ್ತು ಗುರುರಾಜ ಹೇರ್ಳೆ ಅವರನ್ನು ಅನಿವಾಸಿ ಬಳಗಕ್ಕೆ ಪರಿಚಯಿಸಿ, ಚಿತ್ರಗಳೊಂದಿಗೆ, ಅವರ ಕವಿತೆ ಹಂಚಿಕೊಳ್ಳುತ್ತಿರುವೆ . —ಅಮಿತಾ ರವಿಕಿರಣ್ ( ವಾರದ ಸಂಪಾದಕಿ)
ಮೇದಿನಿ ಕೆಸವಿನಮನೆ
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಶರಾವತಿ ಹಿನ್ನೀರಿನ ಕೆಸವಿನಮನೆಯವರಾಗಿದ್ದು ಪ್ರಸ್ತುತ ಆಯನೂರಿನಲ್ಲಿ ವಾಸವಾಗಿದ್ದಾರೆ. ಸಮೀಪದ ಸರ್ಕಾರಿ ಶಾಲೆ ಕಲ್ಕುರ್ಚಿಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದ್ದು, ಈಗ ಹೊಸನಗರದ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ಮಂಗಳೂರು ವಿವಿಯಲ್ಲಿ ಬಿ.ಎಡ್. ಪ್ರಸ್ತುತ ಕುವೆಂಪು ವಿವಿಯಲ್ಲಿ ಪಿ ಎಚ್ಡಿ ಮಾಡುತ್ತಿದ್ದಾರೆ.
ಬರೆವಣಿಗೆ ಇವರ ಹವ್ಯಾಸ. ಶೈಕ್ಷಣಿಕ ಲೇಖನಗಳು, ಲಲಿತ ಪ್ರಬಂಧಗಳು, ಕವಿತೆ, ಕಥೆಗಳು - ಸುಧಾ, ವಿಕ್ರಮ, ತುಷಾರ, ಉತ್ಥಾನ, ಹೊಸದಿಗಂತ, ವಿಜಯ ಕರ್ನಾಟಕ, ಉದಯವಾಣಿ, ಪ್ರಜಾವಾಣಿ, ಕ್ರಾಂತಿದೀಪ, ಮಲೆನಾಡು ಮಿತ್ರ, ಸಂಹಿತ, ಶಾಲ್ನುಡಿ ಇತ್ಯಾದಿ ನಾಡಿನ ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಷಟ್ಪದಿ, ಕಂದಪದ್ಯ ಇತ್ಯಾದಿ ಛಂದೋಬದ್ಧ ಕವಿತೆಗಳ ರಚನೆಯನ್ನು ಮಾಡುತ್ತಿದ್ದು, ಇವರ "ಅಸ್ತಿತ್ವ" ಕವಿತೆಗೆ ಚೆನ್ನವೀರ ಕಣವಿ ಕಾವ್ಯ ಪುರಸ್ಕಾರ ದೊರೆತಿದೆ. ಪ್ರಜಾವಾಣಿ -ವೀರಲೋಕ ಸಹಯೋಗದ ಸಂಕ್ರಾಂತಿ ಕವನ ಸ್ಪರ್ಧೆಯ ತೀರ್ಪುಗಾರರ ಮೆಚ್ಚಿನ 50 ಕವಿತೆಗಳ ಸಂಕಲನದಲ್ಲಿ ಇವರ "ಸೇತುವೆಯಾ, ಗೋಡೆಯಾ? " ಕವಿತೆಯೂ ಇದೆ. ವೃತ್ತಿ ಬದುಕಿನ ಅನುಭವ ಕಥನವಾದ “ಮಿಸ್ಸಿನಡೈರಿ” ಇವರ ಮೊದಲ ಕೃತಿಯಾಗಿದ್ದು ಬಿಡುಗಡೆಯಾದ ಹತ್ತು ದಿನಗಳಲ್ಲಿ ಎರಡನೇ ಮುದ್ರಣ ಕಂಡಿದ್ದು ಇದೀಗ ಮೂರು ಮುದ್ರಣವಾಗಿದೆ. “ಮಕ್ಕಳಿಗಾಗಿ ಶ್ರೀ ಶ್ರೀಧರ ಸ್ವಾಮಿಗಳ ಕಥೆಗಳು” ಕೃತಿ - ಐದು ಮುದ್ರಣವಾಗಿದೆ.
ಈ ನೀಲಿಯಾಚೆಗೆ....
ಈ ನೀಲಿಯಾಚೆಗೆ ಆ ಮೋಡದೀಚಿಗೆ ನಗುತಿರುವ ಸಗ್ಗವೊಂದಿದೆ ಅಲ್ಲಿ ಬಾ ನೀಲಿಯೊಳು ಮೈಮರೆತು ಮೋಡದೊಳು ಮರೆಯಾಗಿ ಜಗವನ್ನೆ ಹೊರನೂಕಿ ಮೆರೆಯೋಣ ಬಾ
ತಬ್ಬುವುದೆಂದರೇನು ಸಖೀ? ನೀಲಾಕಾಶವು ನೀಲಸಮುದ್ರವ ಕರೆಯುತ್ತಾ ನಾ ಕೆಳಗಿಳಿದೆ, ನೀ ಮೇಲೆ ಬಾ ಎನ್ನುವ ಸಂಭ್ರಮದಿ ತಾಗಿಯೂ, ತಾಗದಿರುವುದೇ ತಬ್ಬುವುದೆಂದರೇನು ಸಖೀ?!
ಈಶ್ವರ ಭಟ್ ಕೆ (ಕಿರಣ),
ಮೂಲತಃ ಕಾಸರಗೋಡು ಕೇರಳದವರು. ಈಗ ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸ ಬರಹ, ತಿರುಗಾಟ. ಗಡಿನಾಡಿನ ಸೀಮೆಯವರು ಆಗಿದ್ದಕ್ಕೂ ಏನೋ, ಕಿರಣರಿಗೆ ದಕ್ಷಿಣ ಭಾರತದ ಎಲ್ಲ ಭಾಷೆಗಳೂ ಮಾತಾಡಲು ಮತ್ತು ಓದಲು ಬರೆಯಲು ಬರುತ್ತದೆ ಅದೇ ಕಾರಣದಿಂದ ಆ ಭಾಷೆಯ ಕಥೆ, ಕವನ, ಭಜನೆಗಳನ್ನು ತುಂಬಾ ಸುಂದರವಾಗಿ ಕನ್ನಡಕ್ಕೆ ಅನುವಾದಿಸುತ್ತಾರೆ. ಇವರ ಕವಿತೆಗಳು ಸರಳವಾಗಿ ಹಾಡಿಸಿಕೊಂಡು ಹೋಗುತ್ತವೆ. ರಾಗಕ್ಕೆ, ತಾಳಕ್ಕೆ ಹೊಂದುವ ಸಾಹಿತ್ಯ ಬರೆಯುವ ಇವರು, ಹಾಸ್ಯಬರಹ, ಮತ್ತೆ ಅಷ್ಟೇ ಗಂಭೀರ ವಿಷಯಗಳನ್ನೂ ಬರೆಯಬಲ್ಲರು.
ಮಲ್ಲಿಗೆಯವಳು.
ಹೂವಬುಟ್ಟಿಯ ಹೊತ್ತು ಮಲ್ಲಿಗೇ ಮಲ್ಲಿಗೇ ಎಂದೆನುತ ಬಂದಳೋ ಬಿಂಕದವಳು ಮೊಳಕೆ ಎಷ್ಟೆಂದರೆ ಕಣ್ಣಲ್ಲೆ ಗದರಿಸುತ ಹಣದ ಲೆಕ್ಕಾಚಾರ ಯಾಕೆಂಬಳು!
ಮೊಳಕೆ ಮೂವತ್ತಾಯ್ತೆ? ಮೊನ್ನೆ ಇಷ್ಟಿರಲಿಲ್ಲ ಪಿಸುಮಾತಿಗಳಿಗಿಷ್ಟು ಕೋಪಗೊಂಡು; ಮಲ್ಲಿಗೆಯ ಗಿಡಕೆಲ್ಲ ರೋಗ ಬಂದಿದೆ ಒಡೆಯ ಮೊನ್ನೆಯಷ್ಟಿಲ್ಲ ಹೂ ಎಂದೆಂಬಳು.
ಒಂದು ಮೊಳ ಸಾಕೆನಗೆ, ತೆಗೆದುಕೋ ನಲುವತ್ತು ಎಂದಾಡಿದರೆ ಮತ್ತೆ ಜನ್ಮ ಹೊರಗೆ; ಮಾಲೆ ಕಟ್ಟುವ ಸಮಯ ಪರಿಮಳವ ಕುಡಿದೆಹೆನು ನಾ ಹೇಳುವಷ್ಟನೇ ಕೊಡು ಎಂದಳು.
ಮೊಳ ಕತ್ತರಿಸುವಾಗ ಒಂದಿಷ್ಟು ಹೆಚ್ಚಿಸುತ ಜೊತೆಗಷ್ಟು ಗುಲಾಬಿ ತೆಗೆದಿಡುತಲಿ; ಹೂವನ್ನು ಹೆಚ್ಚಿಸುವ ಖುಷಿ ತುಂಬುಮೊಗದಲ್ಲಿ ನಾಳಿನಾ ಭರವಸೆಯ ನಗು ನಕ್ಕಳು.
ಸೂರ್ಯಾಸ್ತ!
ಅಲ್ಲಿ ಕೆರೆಯಂಚಿನಲಿ, ಮುಳುಗುತಿಹ ನೇಸರಗೆ ಮರದ ಹಸಿರನು ಕಪ್ಪು ಮಾಡುವಾಸೆ ಇಲ್ಲಿಯೋ ತಂಗಾಳಿ ಬಿಸಿಯೇರೆ ಹಣಕಿಸುತ ಹತ್ತಿರಕೆ ಕಳಿಸುವುದು, ಒಲವಿನಾಸೆ!
ಎಷ್ಟು ಮಾತುಗಳಾಡಿ, ಜಗಳದಲಿ ಒಂದಾಗಿ ಮತ್ತೆ ಮಾತಿನ ದೋಣಿ ತೇಲಿಹೋಗಿ ಸುತ್ತ ಕತ್ತಲೆ ಹಬ್ಬಿ ಮಾತು ಮೌನಕೆ ದಣಿದು ಅವಳ ಸಾಮೀಪ್ಯವನೆ ಅಲೆವ ರೋಗಿ
ಹಾರುವುದು ಎದೆಗನಸು ನೂರು ಮೈಲಿಗಳಾಚೆ ಅಲ್ಲಿಯೂ ನೇಸರನು ಮುಳುಗುತಿಹನು ಅವಳಿಗೂ ಇದೆ ನೆಪವು, ಇಂತಹದೆ ಬೇಸರವು ಏನನೋ ಕಾಯುವುದು, ಹೆಳವ ನಾನು.
ಒಂದು ದಿನವಾದರೂ ಸಂಜೆಯಾಗದೆ ಇರಲಿ ದೂರವಿಹ ವಿರಹಿಗಳ ಎದೆಯ ಸುಡದೆ ಮಂದಮಾರುತ ಹೋಗಿ ಸುಖಿಪವರ ಜೊತೆಗಿರಲಿ ನನ್ನ ಕಾಡಲುಬೇಡ, ಅವಳು ಸಿಗದೆ
ಗುರುರಾಜ ಹೇರ್ಳೆ
ಮೂಲತಃ ಉಡುಪಿ ಜಿಲ್ಲೆಯ ಸಾಲಿಗ್ರಾಮ ಎಂಬ ಊರಿನವರು. ಪ್ರಸ್ತುತ ಬಹರೈನ್ ಎಂಬ ಪುಟ್ಟ ದ್ವೀಪ ರಾಷ್ಟ್ರದಲ್ಲಿ ಉದ್ಯೋಗಿ ವಾಸ. ಪ್ರಾರಂಭಿಕ ಓದು, ಬೆಳವಣಿಗೆ ಎಲ್ಲ ಉಡುಪಿಯಲ್ಲೇ ಆದರೂ, ಉನ್ನತ ವ್ಯಾಸಂಗ ಮತ್ತು ಉದ್ಯೋಗಕ್ಕಾಗಿ ಬೆಂಗಳೂರಿನಲ್ಲಿಯೂ ಒಂದಷ್ಟು ಕಾಲ ವಾಸಮಾಡಿದ್ದಾರೆ. ಇವರು ಒಳ್ಳೆಯ ಹಾಡುಗಾರರು. ಭಾವಗೀತೆಗಳ ಮೇಲೆ ಒಲವು ಜಾಸ್ತಿ. ಮಕ್ಕಳ ಹಾಡುಗಳು, ಪ್ರೇಮಗೀತೆಗಳನ್ನು ಬರೆಯುತ್ತಾರೆ. ಬರೆದ ಪದ್ಯಕ್ಕೆ ರಾಗ ಹಾಕಿ ಹಾಡುತ್ತಾರೆ ಕೂಡ