
‘Timeless’
ಗ್ಲೋಬಲ್ ವಾರ್ಮಿಂಗ್ ಬಗ್ಗೆ ನಮ್ಮನ್ನೆಚ್ಚರಿಸುವ ಒಂದು”ಜಿಮ್ನಾಸ್ಟಿಕ್ ಶೋ’ದ ಪರಿಚಯ ಇಲ್ಲಿದೆ.
ಕಳೆದ ವಾರ ನನ್ನ ಪಕ್ಕದ ಊರಿನ ’ರೋದರಂ ಶೋ’ದ (Rotherham Show at Clifton Park) ಒಂದು ಮುಖ್ಯ ಆಕರ್ಷಣೆ ಎಂದರೆ ಮೈದಾನದ ಮಧ್ಯದಲ್ಲಿಯ ಏಳು ಮೀಟರುಗಲ ಉದ್ದದ ಮರಳು ಗಡಿಯಾರದಲ್ಲಿ ಸಮತೋಲ ಕಾಯಲು ಯತ್ನಿಸುತ್ತಿರುವ ನಾಲ್ವರು. ಅವರು ಭಾಗವಹಿಸಿದ್ದು ಜೋಲಿ ವೈಯಾನ್ (Joly Vyann) ಅವರು ಹುಟ್ಟು ಹಾಕಿದ ಟೈಮ್ಲೆಸ್ (Timeless) ಎನ್ನುವ ಶೋ. ಅಷ್ಟು ದೊಡ್ಡ ಮರಳು ಗಡಿಯಾರ (Hour glass) ಯಾಕೆ ಬೇಕಿತ್ತು? ಅದಕ್ಕೂ ಗ್ಲೋಬಲ್ ವಾರ್ಮಿಂಗ್ (ಜಾಗತಿಕ ಉಷ್ಣೋದ್ದೀಪನ)ಗೂ ಏನು ಸಂಬಂಧ? ಲಂಡನ್ನಿನ ಯು ಸಿ ಎಲ್ ದ ಪ್ರೊಫೆಸರ್, ಅಂಕಣ ಮತ್ತು ಪುಸ್ತಕಗಳ, ವೈಜ್ಞಾನಿಕ ಲೇಖನಗಳ ಬರಹಗಾರ ಬಿಲ್ ಮ್ಯಾಗ್ವೈಯರ್ ಅವರ ಈ ವಾರದ ಹೇಳಿಕೆಯ ಪ್ರಕಾರ ನಾವು 2030 ತಲುಪುವ ಮೊದಲೇ ಜಗತ್ತಿನ ಉಷ್ಣತಾಮಾನದ ಏರಿಕೆ 1.5 ಡಿಗ್ರಿ ಸೆಲ್ಸಿಯಸ್ ಕೆಳಗೆ ಬರುಬೇಕೆಂದು ಪಣ ತೊಟ್ಟ ಗುರಿ ತಲುಪುವದು ಈಗ ಅಸಾಧ್ಯ ಎನಿಸುತ್ತದೆ. ಇತ್ತೀಚೆಗೆಯಷ್ಟೇ ನಾವೆಲ್ಲ ಪಾಕಿಸ್ತಾನದ ಮಹಾಪೂರದಿಂದಾಗಿ ಮೂರೂಕಾಲು ಕೋಟಿಗಿಂತ ಹೆಚ್ಚಿನ ಜನ ಸಂತ್ರಸ್ತರಾದ ಫೋಟೊಗಳನ್ನು ಸಾಕಷ್ಟು ನೋಡಿದ್ದೇವೆ. ಇದೇ ವರ್ಷ ಮೊದಲ ಬಾರಿ ಇಂಗ್ಲೆಂಡಿನ ಉಷ್ಣತಾಮಾನ 40.3 ಸೆ ಮುಟ್ಟಿದ ಹೆಡ್ಲೈನ್ ವರದಿಗಳನ್ನು ಕೇಳಿದ್ದೇವೆ.ಇವು ಗ್ಲೋಬಲ್ ವಾರ್ಮಿಂಗಿನ ಪ್ರತ್ಯಕ್ಷ ಪರಿಣಾಮಗಳೆಂದು ತಿಳಿದು ಬಂದಿದೆ. ಇನ್ನು ’1.5 ಡಿಗ್ರಿ’ ಗುರಿ ಸಾಧಿಸಲು ನಮಗೆ ಸಮಯದ ಅಭಾವವಿದೆ. ಗಡಿಯಾರದ ಮರಳು ಶೀಘ್ರಗತಿಯಲ್ಲಿ ಸೋರಿಹೋಗುತ್ತಿದೆ ಎನ್ನುವ ಸರ್ವವಿದಿತ ಸತ್ಯವನ್ನೇ ಮನದಟ್ಟ ಮಾಡಲು ನೃತ್ಯ, ಸರ್ಕಸ್ ಮತ್ತು ಕಸರತ್ತುಗಳನ್ನು (gymnastics) ಹೆಣೆದು ಜನರಿಗೆ ಪ್ರಸ್ತುತಪಡಿಸುವ ಒಂದು ಕಲಾತ್ಮಕ ಪ್ರದರ್ಶನವೇ ಜೋಲಿ ವೈಯಾನ್ (Joly Vyann) ಅವರು ಹುಟ್ಟು ಹಾಕಿದ ಟೈಮ್ಲೆಸ್ (Timeless) - ಕಾಲಾತೀತ ಎನ್ನುವ ಶೋ. ತಾಪೋದ್ದೀಪನದ ಜೊತೆಗೆ ಪರಿಸರ ಮತ್ತು ಪ್ರಾಣಿಸಂಕುಲನದ ಸಂರಕ್ಷಣೆಯೂ ಆಗ ಬೇಕಾಗಿದೆ. ಆಸಿಡ್ ಮಳೆ, ಹವೆಯಲ್ಲಿ ಹೆಚ್ಚುತ್ತಿರುವ ಇಂಗಾಲದ ಡೈಯಾಕ್ಸೈಡ್ ಇವೆಲ್ಲ ಹಾನಿಕರ. ಇವೆಲ್ಲದರ ಸುಧಾರಣೆಗೆ ಟೈಮ್- ಲೆಸ್, ಸಮಯ ಬಹಳ ಕಡಿಮೆ ಎನ್ನುವ ಸಂದೇಶವೂ ಅದರಲ್ಲಿದೆ. ಅಂದು ಇಂಗ್ಲೆಂಡಿನ ರಾಣಿಯ ಮೃತ್ಯುವಿನ ಹಿಂದಿನ ರವಿವಾರ. ಇಂಗ್ಲೆಂಡಿನ ಯಾರ್ಕ್ ಶೈರಿನಲ್ಲಿ ಹರಿಯುವ ಡಾನ್ ನದಿಯ ಉಪನದಿಯಾದ ”ರಾದರ್’ ದಂಡೆಯಮೇಲೆ ಬೆಳೆದ ಲಕ್ಷಕ್ಕಿಂತಲೂ ಜಾಸ್ತಿ ಜನವಸತಿಯ ರಾದರಮ್ಮಿನ ವಿಶಾಲವಾದ ಕ್ಲಿಫ್ಟನ್ ಪಾರ್ಕದ ತುಂಬ ವಿವಿಧ ವಸ್ತುಗಳನ್ನು ಮಾರುವ ಮಳಿಗೆಗಳು, ಫುಡ್ ಸ್ಟಾಲ್ ಗಳು ಹರಡಿಕೊಂಡಿದ್ದವು. ಆ ಮಧ್ಯೆ ವಿಂಟೇಜ್ ಕಾರುಗಳ ಮಾಲಕರು ತಮ್ಮ ’ಕೂಸು’ಗಳನ್ನು ತಂದು ಪ್ರದರ್ಶಿಸಿದರು. ಪ್ರದರ್ಶನಗಳ ಸುತ್ತ ಕಿಕ್ಕಿರಿದು ತುಂಬಿದ ಜನಸಂದಣಿ. ಕಳೆದ 43 ವರ್ಷಗಳಿಂದ ಸಾವಿರಾರು ಮಕ್ಕಳು, ತಂದೆತಾಯಿಗಳೊಂದಿಗೆ ಅನೇಕ ಕುಟುಂಬಗಳು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆಟ, ಓಡಾಟ ತಿಂಡಿ, ಬರ್ಗರ್, ಪಿಡ್ಝಾ, ಕೋಲಾ, ಪೆಪ್ಸಿ, ಮ್ಯೂಸಿಕ್, ಬ್ಯಾಂಡ್, ಲೌಡ್ ಸ್ಪೀಕರ್, ಇತ್ಯಾದಿಗಳ ಸುತ್ತಲೂ ಜನ. ನೀವು ಊಹಿಸಿರಬಹುದು, ಆ ದೃಶ್ಯವನ್ನು. ’ಟೈಮ್ಲೆಸ್ ’ ಶೋಗೆ ಜೋಲಿ ವಯನ್ ಆರಿಸಿಕೊಂಡಿದ್ದ ಜಾಗ ಸಮತಟ್ಟಾದ ಹುಲ್ಲಿನ ಮೈದಾನದ ಮಧ್ಯದಲ್ಲಿ. ಕಳೆದ ಹತ್ತು ವರ್ಷಗಳಿಂದ ಈ ಪುಟ್ಟ ಸಂಸ್ಥೆ ಅಕ್ರೋಬಾಟಿಕ್ ’ಡೊಂಬರಾಟ’ಯುಕ್ತ ಕಥಾನಕಗಳನ್ನು ಸರ್ಕಸ್-ಡಾನ್ಸ್ ಮತ್ತು ಜಿಮ್ನಾಸ್ಟಿಕ್ಸ್ಗಲ ಮಿಶ್ರಣದ ನಾಲ್ಕು ಹೊರಾಂಗಣದ ಮತ್ತು ಎರಡು ಒಳಾಂಗಣದ ಪ್ರದರ್ಶನಗಳನ್ನು ಈ ದೇಶದಲ್ಲಷ್ಟೇ ಅಲ್ಲದೆ ದಕ್ಷಿಣ ಕೊರಿಯಾದಲ್ಲೂ ಪ್ರದರ್ಶಿಸುತ್ತಿದೆ. ಒಲೀವಿಯಾ ಕೇಲ್ ಮತ್ತು ಯಾನ್ ಪ್ಯಾಟ್ಸ್ಕೀ ಎರಡೂ ಕಲೆಗಳಲ್ಲಿ ನುರಿತವರು. ಆ ದಿನ ಅಂಗ ಸೌಷ್ಠವವುಳ್ಳ ಧೃಡಕಾಯದ ಇಬ್ಬರು ಗಂಡಸರು ಮತ್ತು ಇಬ್ಬರು ಬೆಡಗಿನ ಯುವತಿಯರು ಪಾಲ್ಗೊಂಡಿದ್ದರು. ಮೊದಲು ಯಾಕೆ ತಾವು ಮನುಕುಲವನ್ನು ಕಾಡುತ್ತಿರುವ ಈ ಸಮಸ್ಯೆಗಳ ಪರಿಹಾರದ ಅವಶ್ಯಕತೆಯನ್ನು ಬಿಂಬಿಸಲು ಮರಳು ಗಡಿಯಾರದ ಆಯ್ಕೆ ಅರ್ಥವತ್ತಾದುದೇ ಅಂತ ಹೇಳಿ ತಮ್ಮ ಅರ್ಧ ಗಂಟೆಯ ’ಆಟ’ವನ್ನು ಪ್ರಾರಂಭಿಸಿದರು. ಮೊದಲು ಒಂದು ಚಿಕ್ಕ ರೂಪಕದಲ್ಲಿ ನಾಲ್ವರೂ ಮಾನವನ ಆದಿಕಾಲದ ಜೀವನದಪರಿಚಯ ಮಾಡಿ ಇಂದಿನ ವರೆಗಿನ ಪ್ರಗತಿಯನ್ನು ನೃತದಲ್ಲಿ ತೋರಿಸಿಕೊಟ್ಟರು. ನಂತರ ಒಬ್ಬೊಬ್ಬ ಗಂಡಸು ಮರಳು ಗಡಿಯಾರದ (hourglass) ಎರಡೂ ಗಾಜಿನ ಗೋಲಕಗಳಲ್ಲಿ ಹೊಕ್ಕು ಸಮತೋಲನ ಸ್ಥಾಪಿಸಿದ ಮೇಲೆ ಇಬ್ಬರು ಹೆಂಗಸರು ಕೋರಿಯೋಗ್ರಫಿಗನುಗುಣವಾಗಿ ನರ್ತಿಸುತ್ತ ಆ ಎರಡು ಗೊಲಕಗಳಲ್ಲಿ ಸೇರಿಕೊಂಡು ಅದರ ಮಧ್ಯದ ಅಚ್ಚಿನ ಸುತ್ತ ಅವರ್ ಗ್ಲಾಸನ್ನು ತಿರುಗಿಸಿದರು. ಕೆಲವಿ ನಿಮಿಷಗಳ ನಂತರ ಅದನ್ನು ನಿಲ್ಲಿಸಿ ಹೊರಬಂದು ಒಂದರಲ್ಲಿ ಮರಳಿನ ಬದಲಾಗಿ ಮರದ ಗೋಲಕಗಳನ್ನು ತುಂಬಿ ಒಂದರಿಂದ ಇನ್ನೊಂದಕ್ಕೆ ಸ್ವಲ್ಪೇ ಸಮದಲ್ಲಿ ಇಳಿದದ್ದನ್ನು ತೋರಿಸಿ ಚಲಿಸುತ್ತಿರುವ ಸಮಯದ ರೂಪಕವಾಗಿ ಪ್ರದರ್ಶಿಸಿದರು. ಆಟದ ಪ್ರದರ್ಶನ ಮುಗಿದಮೇಲೆ ಚಿಕ್ಕ ಪ್ರಶ್ನೋತ್ತರದ ಸಂವಾದದೊಂದಿಗೆ ಆ ಕಾರ್ಯಕ್ರಮ ಮುಕ್ತಾಯವಾಯಿತು. ಮನುಕುಲಕ್ಕೊದಗಿದ ಈ ಗ್ಲೋಬಲ್ ವಾರ್ಮಿಂಗ್ ಗಂಡಾಂತರವನ್ನು ನಾವು ಹೇಗೆ ಎದುರಿಸುತ್ತೇವೆ ನೋಡಬೇಕಾಗಿದೆ. ಶ್ರೀವತ್ಸ ದೇಸಾಯಿ ಚಿತ್ರ ಕೃಪೆ: Luke Witcomb ವಿಡಿಯೋ: ಜೋಲಿ ವೈಯಾನ್