PK ಸಿನೆಮಾ: ಮೂರು ನೋಟಗಳು – ಸು.ಕೇ.ರಾಂ

ರಾಮಶರಣ: “ನಮ್ಮ ಅಳತೆಗಳನ್ನು ಮೀರಲಾಗದ ದೇವರು”

PK1ಸಮಾಜದ ಅಂಕು ಡೊಂಕುಗಳನ್ನು ಈರುಳ್ಳಿಯ ಪದರುಗಳನ್ನು ಸುಲಿದಂತೆ ಬಿಡಿ ಬಿಡಿ ಮಾಡಿ ನಮ್ಮ ಮುಂದೆ ತೆರೆದಿಡುವಲ್ಲಿ ಅಮೀರ್ ಖಾನ್ ನಿಷ್ಣಾತ. ಆತ ನಿರ್ಮಿಸಿದ ಚಿತ್ರಗಳಲ್ಲಿ ಮನರಂಜನೆಯ ಮುಖವಾಡ ಹೊತ್ತ ಮೂರ್ತಿ ಜ್ವಲಂತ ಸಮಸ್ಯೆಗೆ ಪರಿಹಾರ ತೋರಿಸುವ ಸಾಹಸ ಮಾಡುತ್ತದೆ. ಇದೇ ಮಾರ್ಗದಲ್ಲಿ ರಾಜ್ ಕುಮಾರ್ ಹಿರಾನಿಯ ಚಿತ್ರಗಳೂ ಸೇರುತ್ತವೆನಬಹುದು. ಸತ್ಯಮೇವ ಜಯತೆ ನಿರ್ಮಿಸಿದ ಅಮೀರ್, ಸಾಕಷ್ಟು ಜನರ ವಿರೋಧ ಕಟ್ಟಿ ಕೊಂಡರೂ, ಸಾಮಾಜಿಕ ಕುಂದುಗಳನ್ನು ಅನಾವರಿಸಿ, ಚರ್ಚಿಸಿ ನಮ್ಮೊಳಗನ್ನು ನಾವೇ ಪರೀಕ್ಷಿಸಿಕೊಳ್ಳುವಂತೆ ಮಾಡಿದ ಶೂರ. ಈ ಹಿನ್ನಲೆಯಲ್ಲಿ, ೨೦೧೪ರ ಪೂರ್ವಾರ್ಧದಲ್ಲಿ ಇವರಿಬ್ಬರೂ ಜೊತೆಯಾಗಿ ಪೀಕೆ ಎಂಬ ಚಿತ್ರ ಮಾಡುತ್ತಾರೆಂದಾಗ ಕಿವಿ ನಿಮಿರಿತ್ತು, ಕಣ್ಣು ಅಂತರ್ಜಾಲದಲ್ಲಿ ಇದರ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕೀತೇ ಎಂದು ತೀಕ್ಷ್ಣವಾಗಿ ಹುಡುಕತೊಡಗಿತು. ತಿಂಗಳುಗಳು ಉರುಳಿದಂತೆ, ಕುತೂಹಲ ಕೆರಳಿಸುವ ಚಿತ್ರಗಳು ಹೊರಬಂದಂತೇ, ತವಕ ಜ್ವರ ಏರಿದಂತೆ ಏರತೊಡಗಿತು. ಬಾಲಿವುಡ್ ನಿರ್ಮಾಪಕರು ಚಿತ್ರಗಳನ್ನು ಹೈಪ್ ಮಡುವ ಕಲೆಯನ್ನು ಕರಗತ ಮಾಡಿಕೊಂಡೇ ಹುಟ್ಟಿರುತ್ತಾರೆ. ಈ ಹಿಂದೆ ಭ್ರಮ ನಿರಸನ ಹೊಂದಿದ್ದೇ ಹೆಚ್ಚು. ವಿಚಿತ್ರ ಚಹರೆಯ ನಾಯಕನ ಕಥೆ ಇದೇ ಹಾದಿ ಹಿಡಿದೀತೇ ಎಂದೂ ಒಂದೆಡೆ ಅಳುಕೂ ಇತ್ತು. ಇಂಡಿಯನ್ ಎಕ್ಸ್‌ಪ್ರೆಸ್ ನಲ್ಲಿ ಎರಡೂವರೆ ಸ್ಟಾರ್ ಮಾತ್ರ ಸಿಕ್ಕಿದ್ದು ನೋಡಿದಾಗ, ಎದೆ ಸ್ವಲ್ಪ ಕುಸಿದಿದ್ದೂ ನಿಜ. ಆದರೂ ನೆಚ್ಚಿನ ನಟನ ಚಿತ್ರ ನೋಡಲೇಬೇಕೆಂಬ ತುಡಿತಕ್ಕೆ ಪಕ್ಕಾಗಿ ಧೈರ್ಯದಿಂದ ಮುಂದಾದೆ.

ಮೊದಲಲ್ಲಿ ಹಾರುವ ತಟ್ಟೆ ಬಂದಿಳಿಯುವ ದ್ರಿಶ್ಯ ನೈಜವೆಂದೆನಿಸಿ ಸ್ವಲ್ಪ ಮನಸಿಗೆ ನೆಮ್ಮದಿ ಆಯ್ತು ( ಕಾರಂತರ “ನಮ್ಮ ಅಳತೆಯನ್ನು ಮೀರಲಾಗದ ದೇವರು” ನೆನಪಾಯಿತು).  ವಿಚಿತ್ರ ಹೆಸರಿನ, ವಿಚಿತ್ರ ಚಹರೆಯ ಪೀಕೆ, ಮಾನವ ಲೋಕದ ವೈಚಿತ್ರ್ಯಗಳನ್ನು ತೆರೆದಿಡುತ್ತ ಹೋಗುತ್ತಾನೆ. ಮುಗ್ಧ ಮನಸಿನ ನವಜಾತ ಶಿಶುವನ್ನು ಪ್ರತಿನಿಧಿಸುತ್ತಾನೆ. ಹಲವಾರು ಪ್ರತಿಮೆಗಳನ್ನೊಡಗೂಡಿದ ಈ ಚಿತ್ರದಲ್ಲಿ ಪೀಕೆಯ ಬೆರಗುಗಣ್ಣು ಎದ್ದು ಕಾಣುವಂಥದ್ದು. ಜೀವನ ವಿರೋಧಾಭಾಸಗಳ ಕಂತೆಯಾದಂತೇ, ಇಲ್ಲಿ ಬರುವ ಪಾತ್ರಗಳೂ ನಮ್ಮ ದೈನಂದಿನ ಜೀವನವನ್ನು ಪ್ರತಿಫಲಿಸುತ್ತವೆ. ಪೀಕೆಯ ರೆಮೋಟ್ ಕದಿಯುವ ಕುಡುಕನ ಖದೀಮತೆ; ಪೀಕೆಗೆ ಕುಟ್ಟಿ, ಓಡಿ ಹೋಗಲು ಪ್ರಯತ್ನಿಸಿದರೂ, ಆತ್ಮಸಾಕ್ಷಿಯನ್ನು ಮೀರಲಾಗದೇ, ಆತ್ಮೀಯತೆಯಿಂದ  ಆಸರೆ ನೀಡುವ ಭೈಯ್ಯೊನ ಉದಾತ್ತತೆ ಈ ವೈರುದ್ಧ್ಯಗಳನ್ನು ಎತ್ತಿ ತೋರುತ್ತವೆ. ಮೊದಲಾರ್ಧದಲ್ಲಿ ಬರುವ ಹಲವಾರು ಸನ್ನಿವೇಶಗಳು ನಮ್ಮಲ್ಲಿ ಹಾಸುಹೊಕ್ಕಾಗಿರುವ ಆಷಾಢಭೂತಿ ಮನೋಭಾವಕ್ಕೆ ಕನ್ನಡಿ ಹಿಡಿಯುತ್ತವೆ. ತಾಯಿ ನೌಕೆಗೆ ಹಿಂದಿರುಗಲು ಅವಶ್ಯವಾದ ರಿಮೋಟ್ ಕಳಕೊಂಡ ಪೀಕೆ ಕಂಡರಿಯದ ಲೋಕದಲ್ಲಿ ಪರದಾಡುವುದನ್ನು ಕಂಡಾಗ ಯಾರ ಹೄದಯ ತಾನೇ ಕರಗುವುದಿಲ್ಲ? ಆದರೆ ಕಾರುಣ್ಯ ಚಿತ್ರದ ಸ್ಥಾಯಿ ರಸವಾಗದೇ; ಹಾಸ್ಯ- ವಿಡಂಬನೆಯ ಹಳಿಯ ಮೇಲೆ ಪೀಕೆ ಓಡುವುದು ಚಿತ್ರದ ಯಶಸ್ಸಿಗೆ ಮೂಲ ಕಾರಣ.

pk2ಮೆಲ್ಲನೆ,  ಇಂದು ಮಂಗಳನತ್ತ/ ಸೌರ ವ್ಯೂಹದ ಆಚೆ ಚಿಮ್ಮುವ ತಾಕತ್ತಿರುವ ಭಾರತೀಯನ/ಮಾನವನ ವೈಜ್ನಾನಿಕ ಅಸ್ತಿತ್ವವನ್ನೇ ಅಲ್ಲಡಿಸುವಂತಹ ನಮ್ಮೊಳಗಿನ ಅಂಧ ಶ್ರದ್ಧೆಯನ್ನು ಅನಾವರಣ ಮಾಡುವ ಶೈಲಿ ಸ್ವಾರಸ್ಯವಾಗಿ ಮೂಡಿದೆ. ಮುಗ್ಧವಾಗಿ ಜನ ಹೇಳಿದ ಮಾತುಗಳನ್ನೆಲ್ಲ ನಂಬಿ, ರಿಮೋಟ್ ಕೊಡುತ್ತಾನೆಂದು, ಕಾಣದ ದೇವನ ದರ್ಶನಕ್ಕೆ ಪೀಕೆ ಪಾಡುವ ಪಡಿ ನಮ್ಮ ಬಾಲ್ಯವನ್ನು ನೆನಪಿಸುವುದರಲ್ಲಿ ಸಂದೇಹವಿಲ್ಲ. ಮಾನವನ ಮನದಲ್ಲಿ ಮನೆ ಮಾಡಿರುವ ಭೀತಿಯನ್ನೇ ಬಂಡವಾಳವಾಗಿಸಿಕೊಂಡು ಜನರನ್ನು ಮರಳು ಮಾಡುವ ಧರ್ಮಾಧಾರಿತ ವ್ಯಾಪಾರದ ಹಲವು ರೂಪಗಳನ್ನು ತುಂಬಾ ಸೊಗಸಾಗಿ ಚಿತ್ರಿಸಿದ್ದಾರೆ. ಕಾಲೇಜಿನ ಹೊರಗೆ ಕುಂಕುಮ ಲೇಪಿತ ಕಲ್ಲಿಗೆ ಅಡ್ಡ ಬೀಳುವ ಯುವ ಜನರಲ್ಲಿ ನಮ್ಮನ್ನು ಕಂಡುಕೊಳ್ಳಬಹುದು. ಸಿದ್ಧಲಿಂಗಯ್ಯನವರ “ಅಗಸನೂ ಕತ್ತೆಯೂ” ಕವನ ಕಣ್ಣ ಮುಂದೆ ಸಾಕ್ಷಾತ್ಕಾರವಾಯಿತು.  ಹಾಗೆಯೇ, ಟಿ‌ಆರ್‌ಪಿ ಹಿಂದೆ ಬೀಳುವ ಇಂದಿನ ದೄಶ್ಯ ಮಾಧ್ಯಮಗಳತ್ತ ಚಾಟಿ ಬೀಸಿದರೂ ಚಿತ್ರ ವಸ್ತುವಿನ ಮೇಲಿನ ಬಿಗಿತ ಸಾಕಷ್ಟೇ ಉಳಿಸಿಕೊಳ್ಳುತ್ತದೆ. ಮುಂಬರುವ ದೄಶ್ಯಗಳಲ್ಲಿ ಕ್ಲೀಶೆ ಹಲವೆಡೆ ತಲೆ ಎತ್ತಿ, ಅನಗತ್ಯ ಪ್ರೀತಿ-ಪ್ರೇಮಗಳ ಮಸಾಲೆ ಸೇರಿ ತಣ್ಣಗಿನ ನಾನ್ ಜಗಿದಂತಾದೀತು. ಬಾಬಾನ ಜೊತೆಗೆ ನಡೆಸುವ ಚರ್ಚೆಯಲ್ಲಿ ದರ್ಶಕನಿಗೆ ಪೀಕೆಯ ಗೆಲುವಿನ ಬಗ್ಗೆ ಸಂದೇಹವಿಲ್ಲದಿದ್ದರೂ, ಪೀಕೆಯ ಮಾತುಗಳಲ್ಲಿ ವ್ಯಕ್ತವಾಗುವ ವಿಚಾರಗಳು ಸಾರ್ವಕಾಲಿಕ.

ಚಿತ್ರದ ಅಂತ್ಯ ವಿಶಿಷ್ಟವಾಗಿದ್ದು ಸಾಮಾನ್ಯ ಚಿತ್ರಗಳಿಂದ ಪೀಕೆಯನ್ನು ಭಿನ್ನವಾಗಿ ನಿಲ್ಲಿಸುತ್ತದೆ. ಪ್ರತೀ ಚಿತ್ರಕ್ಕೂ ತನ್ನದೇ ಆದ ನ್ಯೂನ್ಯತೆಗಳು ಇದ್ದೇ ಇವೆ. ಈ ನ್ಯೂನ್ಯತೆಗಳನ್ನು ಮೀರಿ ಪೀಕೆ ತಾನು ನೀಡಬೇಕಾದ ಸಂದೇಶವನ್ನು ಸುತ್ತು ಬಳಸದೇ ವಿಶ್ವಾಸದಿಂದ ಎದೆ ತಟ್ಟಿ ಹೇಳುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಬಹುದು.

———————————————————————————————————————————

ಕೇಶವ ಕುಲಕರ್ಣಿ:  “PK ನೋಡಿ ಮಾಡಿದ ಚಿಕ್ಕ ಟಿಪ್ಪಣೆಗಳು”

***

ಸರ್ ಕೆನ್ ರಾಬಿನ್ ಸನ್ ‘TED’ ಟಾಕಿನಲ್ಲಿ ಒಂದು ಕತೆ ಹೇಳುತ್ತಾರೆ:
ಅದೊಂದು ಪಾಶ್ಚಾತ್ಯ ದೇಶದ ಶಾಲೆ. ಅಲ್ಲಿ ಮಕ್ಕಳಿಗೆ ಚಿತ್ರ ಬರೆಯುವ ಪಾಠ.
ಟೀಚರ್ ಒಂದು ಮಗುವಿಗೆ ಕೇಳುತ್ತಾಳೆ, ‘ ಏನು ಚಿತ್ರ ಬರೀತಿದ್ದೀಯಾ, ಪುಟ್ಟೀ?’.
ಮಗು ಹೇಳುತ್ತೆ, ‘ ದೇವರ ಚಿತ್ರ’
ಟೀಚರ್, ‘ ಆದರೆ ದೇವರು ಹೇಗೆ ಇರುತ್ತಾನೆ ಎಂದು ಯಾರೂ ನೋಡಿಲ್ಲವಲ್ಲ!?’ ಎಂದು ಆಶ್ಚರ್ಯದ ಮುಖ ಮಾಡುತ್ತಾಳೆ.
ಮಗು ಅಷ್ಟೇ ಆರಾಮಾಗಿ ಉತ್ತರಿಸುತ್ತೆ, ‘ಇನ್ನೈದು ನಿಮಿಷ ವೇಟ್ ಮಾಡಿ ಮೇಡಂ, ನಿಮಗೂ ಎಲ್ಲರಿಗೂ ಗೊತ್ತಾಗುತ್ತೆ’.
PK ನೋಡಿ ಈ ಕತೆ ನೆನಪಾಯಿತು.

***

bhaaratipuraಯು ಆರ್ ಅನಂತಮೂರ್ತಿಯವರ ‘ಭಾರತೀಪುರ’ ಕಾದಂಬರಿಯಲ್ಲಿ, ನಮ್ಮ ಜೀವನದಲ್ಲಿ, ಸಮಾಜದಲ್ಲಿ ‘ನಾವು ಸೃಷ್ಟಿಸಿದ ದೇವರು’ ಸಾಯದ ಹೊರತು ನಮ್ಮ ಜೀವನ ಮತ್ತು ಸಮಾಜ ಸುಧಾರಿಸುವುದಿಲ್ಲ, PK ಕೂಡ ಅದನ್ನೇ ಸರಳವಾಗಿ ಎಲ್ಲರಿಗೂ ತಿಳಿಯುವಂತೆ ಹೇಳುತ್ತದೆ.

‘ಭಾರತೀಪುರ’ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ, ಅಂಥ ಬದಲಾವಣೆಯನ್ನು ನಿರೀಕ್ಷಿಸುವುದು ಮತ್ತು ಅಂಥ ಒಂದು ಕ್ರಾಂತಿಗೆ ಉದ್ದೀಪಿಸುವುದು ಎಂಥಹ ನಿರಾಸೆ ತರುತ್ತದೆ ಎನ್ನುವುದನ್ನು ಸೂಕ್ಷ್ಮವಾಗಿ ಹೇಳುತ್ತದೆ. ಅದು PK ಸಿನೆಮಾದಲ್ಲಿ ಇರಲಿಲ್ಲ, ಆದರೆ ಅದನ್ನು PK ಸಿನೆಮಾ ಬಿಡುಗಡೆ ಆದ ಮೇಲೆ ಕೆಲವು ಮತಾಂಧರು ಮಾಡಿ ಸಾಬೀತು ಮಾಡಿದರು!

***

ಯಾವುದೇ ಒಳ್ಳೆಯ ಬರಹಗಾರನನ್ನು ಅಥವಾ ಸಿನೆಮಾ ನಿರ್ದೇಶಕನನ್ನು ತೆಗೆದುಕೊಳ್ಳಿ. ಅವರ ಆರಂಭದ ಕೃತಿಯಿಂದ ಹಿಡಿದು ಅಂತ್ಯದ ಕೃತಿಯವರೆಗೆ ಅವರು ಬರೆದ ಕತೆಗಳು/ ಕಾದಂಬರಿಗಳು/ ಸಿನೆಮಾಗಳು ಒಂದೇ ಕೇಂದ್ರದಿಂದ ಹೊರಬಂದಂತೆ ಕಾಣುತ್ತವೆ. ಉದಾಹರಣೆಗೆ ಪುಟ್ಟಣ್ಣ ಕಣಗಾಲ್ ಅವರ ಬಹುತೇಕ ಚಿತ್ರಗಳು ಸ್ತ್ರೀ ಪ್ರಧಾನವಾದವುಗಳು. ಸ್ತ್ರೀಪ್ರಧಾನ ಕತೆಗಳಿಂದ ಬದುಕಿನ ಒಂದೊಂದೇ ಮಗ್ಗಲುಗಳನ್ನು ಬಿಡಿಸುತ್ತ ಪುರುಷ ಪ್ರಧಾನ ಸಮಾಜದಲ್ಲಿ ಸ್ತ್ರೀ ಎಲ್ಲವನ್ನೂ ಎದುರಿಸಿ ಬದುಕುವದನ್ನು ಇಮೋಷನಲ್ಲಾಗಿ ಬಿಚ್ಚುತ್ತಾ ಹೋಗುತ್ತಾರೆ. ಲಂಕೇಶರ ಕತೆಗಳ ಕೇಂದ್ರ ಬಿಂದು, ಬದುಕಿನ ಹಿಪಾಕ್ರಸಿಯನ್ನು ಯಾವುದೇ ಹೇಸಿಗೆಯಿಲ್ಲದೇ ಉಣಬಡಿಸಿದ್ದು. ಈ ಹಿರಾನಿಯೂ ನನಗೆ ಅದೇ ಕಾರಣಕ್ಕೆ ಇಷ್ಟ. ಅವನ ಕೇಂದ್ರಬಿಂದು ಸಮಾಜದ ಹುಳುಕುಗಳು, ಮುಖ್ಯ ಪಾತ್ರಗಳೆಲ್ಲ ಮುಗ್ಧರು, ಮುನ್ನಾಭಾಯಿ, PK; ಅಷ್ಟೇ ಏಕೆ, 3 Idiotsನ ರಾಂಚೋ ಜಾಣನಾದರೂ ಬದುಕಾನು ಮಗುವಿನ ಬೆರಗುಗಣ್ಣಿನಿಂದ ನೋಡುವ ಹುಡುಗ. ಇಂಥ ಮುಗ್ಧರ ಕಣ್ಣುಗಳಿಂದಲೇ ತನ್ನ ಸಿನೆಮಾಗಳಲ್ಲಿ ನಮ್ಮ ಸಮಾಜದ ಅಂಕುಡೊಂಕುಗಳನ್ನು ತಿಳಿಹಾಸ್ಯದಲ್ಲಿ ಒಂಚೂರೂ ಬೋರು ಹೊಡೆಸದೇ ತೋರಿಸುತ್ತ ಹೋಗುತ್ತಾನೆ, ನನಗಂತೂ ಹಿರಾನಿಯ ಮುಖ್ಯ ಪಾತ್ರಗಳು ಹೃಷಿಕೇಶ್ ಮುಖರ್ಜಿಯ ‘ಬಾವರ್ಚಿ’ಯ ಮರುರೂಪಗಳು (ಹಿರಾನಿಯೇ ಒಂದು ಕಡೆ ಹೇಳಿರುವಂತೆ ಆತನಿಗೆ ಹೃಷಿಕೇಶ್ ಮುಖರ್ಜಿಯ ಸಿನೆಮಾಗಳೆಂದರೆ ಪ್ರಾಣ).

***

OMGOMG (Oh My God)ನ ನೆರಳಿನಂತೆ ಕಾಣುವ ಈ ಚಿತ್ರ OMGನಂತೆ ಆಳಕ್ಕಿಳಿದು ಚಿಂತಿಸುವುದಿಲ್ಲ. OMGಯ ನಾಟಕೀಯತೆಯಾಗಲೀ, ಕತೆಯಾಗಲೀ, ಗಾಢವಾದ ಪ್ರಶ್ನೆಗಳಾಗಲೀ ಇಲ್ಲಿ ಇಲ್ಲ. OMG ನಾಟಕಗಿಂದ ಮಾಡಿದ ಸಿನೆಮಾ, ಹಾಗಾಗಿ OMGಗೆ ಸಾಹಿತ್ಯ ಮತ್ತು ಮಾತಿನ ಕಸುವಿತ್ತು, ಬಂಧವಿತ್ತು. OMGಅನ್ನು ಮುಂದಿಟ್ಟುಕೊಂಡು PK ನೋಡಿದರೆ, PK ತಾಂತ್ರಿಕವಾಗಿ ಗೆಲ್ಲುತ್ತದೆ, ಆದರೆ ಒಂದು ‘ಕಲೆ’ಯಾಗಿ OMG ಮುಂದೆ ಪೇಲವವಾಗಿ ಕಾಣುತ್ತದೆ ಎಂದು ನನ್ನ ಅನಿಸಿಕೆ.

ಆದರೂ ಸಹ, PK ಮನೆಮಂದಿಯೆಲ್ಲ ಕೂತು ಮುರು ಗಂಟೆ ನಕ್ಕು, ಒಂದು ಸಂದೇಶದೊಂದಿಗೆ ಒಂದು ಚಿಕ್ಕ ಚಿಂತನೆಯೊಂದಿಗೆ ನಮ್ಮನ್ನು ಮನೆಗೆ ಕಳಿಸಿಕೊಡುತ್ತಾನೆ. ಹಿರಾನಿಗೊಂದು ಥ್ಯಾಂಕ್ಸ್!

***

ಕೊನೆಯದಾಗಿ ಮೂರು ಪ್ರಶ್ನೆಗಳು:

೧. PKಯಲ್ಲಿ ಅಮೀರ್ ಖಾನ್ ಇಲ್ಲದಿದ್ದರೆ ಈಗಿನಂತೆಯೇ ಗಲ್ಲಾಪೆಟ್ಟಿಗೆಯನ್ನು ಸೂರು ಹೊಡೆಯುತ್ತಿತ್ತೇ?
೨. PKಯಲ್ಲಿ ಅಮೀರ್ ಖಾನ್ ಇಲ್ಲದಿದ್ದರೆ ಈಗಿನಂತೆಯೇ ಹಿಂದೂ ಮತಾಂಧ ಮತೀಯರ ಕೆಂಗಣ್ಣಿಗೆ ತುತ್ತಾಗುತ್ತಿತ್ತೇ?
೩. ಅಮೇರಿಕದಲ್ಲಿ ಯಾವುದೇ ಧರ್ಮದ ಹೆಸರು ಹೇಳದೇ Bruce Almighty ಅಂಥ ತಿಳಿ ಹಾಸ್ಯದ ಚಿತ್ರ ಮಾಡಿ ದೇವರನ್ನು ಕಪ್ಪು ಮನುಷ್ಯನ ಹಾಗೆ ತೋರಿಸಿ ಬಿಳಿಯರಿಗೆ ಒಂದು ಸಣ್ನ ಶಾಕ್ ಕೊಟ್ಟು ನಗಿಸಬಹುದು. ಭಾರತದಲ್ಲಿ OMG ಸಿನೆಮಾ ಮಾಡಿ ಅದರಲ್ಲಿ ದೇವರಿಗೆ ಪ್ಯಾಟು ಶರ್ಟು ಹಾಕಿ ನಮ್ಮ ದೇಶದ ಎಲ್ಲ ಧರ್ಮಗಳ ಮುಖಂಡರನ್ನು ಲೇವಡಿ ಮಾಡಿ ಬದುಕಿ ಉಳಿಯಬಹುದು. PKಯಲ್ಲಿ ಅಮೀರ್ ಖಾನ್ ಏಲಿಯನ್ ಆಗಿ ಹಿಂದೂ ಧರ್ಮದ ಧರ್ಮಗುರುಗಳ ಬಣ್ಣವನ್ನು ಬಯಲು ಮಾಡಿ ನಮ್ಮನ್ನೆಲ್ಲ ನಗಿಸಿ ಗಲ್ಲಪೆಟ್ಟಿಗೆಯನ್ನು ದೋಚಸಬಹುದು. ಆದರೆ…(‘ಚಾರ್ಲಿ ಹೆಬ್ಡೋ’ದ ನರಮೇಧ ಇನ್ನೂ ಹಸಿಹಸಿಯಾಗಿರುವಾಗ ಅದನ್ನೆಲ್ಲ ಬರೆಯುವ ಧೈರ್ಯ ನನಗೆ ಎಲ್ಲಿಂದ ಬರಬೇಕು?)

___________________________________________________________________________________________________________

ಸುದರ್ಶನ ಗುರುರಾಜರಾವ್: ಪಿಕೆ ಯ ಪೀಕಲಾಟವೂ ಭಾವನೆಗಳ ತಾಕಲಾಟವೂ:

ಇತ್ತೀಚೆಗೆ ಬಿಡುಗಡೆಯಾದ ಅಮೀರ್ ಖಾನನ ಪಿಕೆ ಎಂಬ ಹಿಂದೀ ಚಲನಚಿತ್ರ ತನ್ನ ವಸ್ತು ವಿಶಯದಿಂದಲೂ, ಅದರ ನಿರೂಪಣೆಯಿಂದಲೂ ಭಾರೀ ಕೋಲಾಹಲ ಉಂಟುಮಾಡಿದ್ದಲ್ಲದೆ ತನ್ನ ವಿವಾದಾತ್ಮಕತೆಯಿಂದಲೂ, ಗಂಭೀರ ವಿಶಯವೊಂದನ್ನು ವಿಡಂಬನೆಯ ರೂಪದಲ್ಲಿ ನಿರೂಪಿಸಿದಕ್ಕೂ,ಅಮೀರ್ ಖಾನನ ನಟನೆಯಿದ್ದುದಕ್ಕೂ ಗಲ್ಲಾ ಪೆಟ್ಟಿಗೆಯಲ್ಲಿ ಬಾಚಿಕೊಳ್ಲುವುದನ್ನೂ ಸಮರ್ಥವಾಗಿ ಮಾಡಿತು. ಚಲನಚಿತ್ರಮಂದಿರಗಳು ೩೦೦ ರುಪಾಯಿಗೆ ಕಡಿಮೆಯಿಲ್ಲದಂತೆ ದರ ನಿಗದಿ ಪಡಿಸುವ ಶರತ್ತು ವಿಧಿಸಿದ ಅಮೀರ್ ಖಾನ- ರಾಜ್ಕುಮಾರ ಹಿರಾನಿ ಜೋಡಿ ಹೊಸ ಯುಗದ ಧರ್ಮದಂತಿರುವ ಸಿನಿಮಾ ಮೂಲಕ ಸುಲಿಗೆ ನಡೆಸಿದ್ದೊಂದು ಇವೆಲ್ಲವುಗಳ ನಡುವೆ ಕಳೆದು ಹೋದ ಗಮನಕ್ಕೆ ಬಾರದ ವಿಚಾರವಾಗಿ ಉಳಿದೊದ್ದೊಂದು ನನಗೆ ಅಚ್ಚರಿ ಮೂಡಿಸಿದ ವಿಷಯವಾಗಿ ಉಳಿಯಿತು.ದೇವರ -ಧರ್ಮದ ಮೇಲಿನ ಜನಗಳ ನಂಬಿಕೆಯನ್ನು ದುರುಪಯೋಗ ಪಡಿಸಿಕೊಳ್ಳುವ ಕುರಿತು ಜನರಿಗೆ ಎಚ್ಚರಿಕೆ ನೀಡುವ ಚಿತ್ರವೊಂದು ಅಮೀರ್ಖಾನನ ಜನಪ್ರಿಯತೆಯ ತಳಹದಿಯ ಮೇಲೆ ಸಾಧಾರಣ ಸರಕನ್ನು ಬಹು ಬೆಲೆಗೆ ಮಾರಿದ್ದು ವಿರೋದಾಭಾಸ!

pk3ಹೊರ ಗ್ರಹದ ಜೀವಿಯೊಂದು ಭೂಮಿಗೆ, ಅದರಲ್ಲೂ ಸರ್ವಧರ್ಮಗಳು ಬೇರೂರಿರುವ ಭಾರತಕ್ಕೆ ಬಂದು ಇಲ್ಲಿನ ರೀತಿ ರಿವಾಜುಗಳನ್ನು ಬೆರಗಿನಿಂದ ನೋಡುವ, ತನ್ನ ಕಳೆದು ಹೋದ ರಿಮೋಟಿಗಾಗಿ ದೇವರುಗಳನ್ನು ಬೇಡುವ, ಅದು ಕೈಗೂಡದಿದ್ದಾಗ ದೇವರುಗಳನ್ನೇ ಹುಡುಕುವ, ಈ ಪ್ರಕ್ರಿಯೆಯಲ್ಲಿ ಧರ್ಮಗಳ ಹುಳುಕನ್ನೂ, ಜನಗಳ ಅಳುಕನ್ನೂ, ಅದರ ಲಾಭ ಪಡೆಯುವ ಧರ್ಮಗುರುಗಳ ಥಳುಕನ್ನೂ ತೋರಿಸಿ ಅ ಕೊಳಕನ್ನು ತೊಳೆಯುವ ಸಾಹಸಕ್ಕೆ ಕೈಹಾಕುತ್ತಾನೆ. ಇದಕ್ಕೆ ಒಬ್ಬ ಹುಡುಗಿ ಜೊತೆಯಾಗುತ್ತಾಳೆ.ಇದರ ಮಧ್ಯದಲ್ಲಿ ಕೆಲವು ಪಾತ್ರಗಳು ಸಾಂಕೇತಿಕವಾಗಿ ಬಂದು ಹೋಗುತ್ತವೆ ಮತ್ತೆ ಕೆಲವು ಮತ್ತೆ ಮತ್ತೆ ತಮ್ಮ ಇರುವಿಕೆಯನ್ನು ತೋರಿಸುತ್ತವೆ. ಬಹುತೇಕ ಸನಾತನ ಧರ್ಮದ ಕುರಿತಾದ ಟೀಕೆ ವಿಡಂಬನೆಯನ್ನು ಮಾಡಲಾಗಿದೆ ಹಾಗೂ ಇತರ ಪ್ರಮುಖ ಧರ್ಮಗಳಾದ ಇಸ್ಲಾಂ ಹಾಗೂ ಕ್ರೈಸ್ತಮತಗಳ ಕುರಿತಾದ ವಿಡಂಬನೆಯನ್ನು ಬಹಳ ಎಚ್ಚರಿಕೆಯಿಂದ ನಿಭಾಯಿಸಲಾಗಿದೆ ಹಾಗೂ ಅವುಗಳ ಗಂಭೀರ ವಿಮರ್ಶೆಗೆ ಕೈಹಾಕದಿರುವುದು ಮೇಲುನೋಟಕ್ಕೇ ಗೋಚರವಾಗುತ್ತ್ತದೆ. ಇದರ ಮಧ್ಯದಲ್ಲಿ ಒಂದು ಪ್ರೇಮ ಪ್ರಸಂಗ ಹಾಗೂ ಅದರ ಸುತ್ತ ಸುತ್ತಲಾದ ಮಾನವಿಯತೆಯ ಮುಖವಾಡ ಹೊತ್ತ ಕ್ಲೈಮ್ಯಾಕ್ಸ್ ಅನ್ನು ರಸ ಕಳೆದ ಚ್ಯೂಯಿಂಗ್ ಗಂ ನಂತೆ ಎಳೆಯಲಾಗಿದೆ.

ಇಷ್ಟನ್ನು ಓದಿದ ನಿಮಗೆ ನನ್ನ ಅನಿಸಿಕೆ, ವಿಮರ್ಶೆಯ ರೂಪು ರೇಶೆಗಳು ಆಗಲೇ ಹೊಳೆದಿರಬಹುದು.

ಈ ಚಿತ್ರದ ಮೂಲ ಪರಿಕಲ್ಪನೆ- ಅನ್ಯಗ್ರಹದ, ಪೂರ್ವಾಗ್ರಹವಿಲ್ಲದ ಜೀವಿ ಭೂಮಿಯ ಜೀವನವನ್ನು ಹೇಗೆ ನೋಡಬಹುದೆಂಬುದು ನಿಜಕ್ಕೂ ವಿನೂತನವಾದದ್ದು. ಆದರೆ ನಿರ್ದೇಶಕ, ನಿರ್ಮಾಪಕ, ನಾಯಕ ನಟ ಹಾಗೂ ವ್ಯವಸ್ಥಿತ ಜಾಲದ ಕಾಣದ ಕೈಗಳ ಪೂರ್ವಾಗ್ರಹಗಳು ಬಹುಮಟ್ಟಿಗೆ ಆರೋಪಿಸಲ್ಪಟ್ಟಿವೆ.ಸಿನಿಮಾ ಒಂದು ಕಲೆ ಅದನ್ನು ಹಾಗೇ ನೋಡಬೇಕು ಎನ್ನುವ ವಾದವೂ ಇದೆ,ನಿಜ. ಆದರೆ ಇದಕ್ಕೆ ಆರಿಸಿಕೊಂದಿರುವ ವಸ್ತು ವಿಶಯ ಧರ್ಮಗಳ ತುಲನಾಕ್ಮಕ ವಿಮರ್ಶೆ ಹಾಗೂ ವಿಡಂಬನೆ. ಹಾಗಾಗಿ ಸುಣ್ಣ ಬಣ್ಣಗಳನ್ನು ಏಕ ರೂಪದಲ್ಲಿ ಏಕ ಪ್ರಮಾಣದಲ್ಲಿ ಬಳಿಯುವಲ್ಲಿ ಪಕ್ಷಪಾತ ಮಾಡಿರುವುದರಿಂದ, ಮೂಲ ಅಶಯಕ್ಕೆ ಧಕ್ಕೆ ಬಂದಿದೆ ಎಂದು ನನ್ನ ಅಭಿಪ್ರಾಯ.

ನಟನೆಯ ವಿಷಯಕ್ಕೆ ಬಂದರೆ ಅಮೀರ್ಖಾನ್ ಎಂದಿನಂತೆ ಲವಲವಿಕೆಯಿಂದ ನಟಿಸಿದ್ದಾನೆ. ಅನುಷ್ಕಾ ಶರ್ಮನ ಮುಂದೆ ಉಬ್ಬಿದ ಗ್ರೇಟ್ ವೈಟ್ ಶಾರ್ಕಿನಂತ ಮೇಲ್ದುಟಿ ಅಸಹನೀಯವಾಗುತ್ತದೆ. ಇನ್ನು ಅವಳು ಹಾಕಿದ ದಿರಿಸುಗಳೂ ಚೆನ್ನಾಗಿಲ್ಲ.ಸ್ವಾಮೀಜಿಯ ಪಾತ್ರಧಾರಿ ಚೆನ್ನಾಗಿ ನಟಿಸಿದ್ದಾನೆ. ಪೋಲೀಸ್ ಕಾನ್ಸ್ ತೇಬಲ್ ಕೂಡಾ ಚಿಕ್ಕ ಪಾತ್ರವನ್ನು ಚೊಕ್ಕದಾಗಿ ನಟಿಸಿದ್ದಾನೆ. ಸಂಜಯ್ ದತ್ತನ ಪಾತ್ರವೂ ಚೆನ್ನಾಗಿ ಬಂದಿದೆ.

ಹಿಂದೂಗಳ ಮದುವೆಗೆ ಹೋಗಿ ಅಲ್ಲಿ ವಧುವಿನ ಕೈ ಎಳೆದಾಡುವ ನಾಯಕ ಬೇರೆ ಧರ್ಮಗಳ ಹೆಣ್ಣುಮಕ್ಕಳನ್ನು ಮುಟ್ಟುವುದಿಲ್ಲ. ಅದನ್ನು ಮಾಡುವ ಧೈರ್ಯ ಈ ಸಾಮಾಜಿಕ ಕಳಕಳಿಯ ಜೋಡಿಗೆ ಬರುವುದಿಲ್ಲ ಎಂಬುದು ಕಾಕತಾಳೀಯ ಸತ್ಯವೆನ್ನಲಾಗುವುದೇ?

ಮೂರ್ತಿಪೂಜೆಯನ್ನು ಲೇವಡಿ ಮಾಡುವ ನಾಯಕನಿಗೆ ಅದರ ಹಿಂದಿನ ಮನೋವೈಜ್ನಾನಿಕ- ಧಾರ್ಮಿಕ- ಸಾಮಾಜಿಕ ಆಯಾಮಗಳನ್ನು ಪರಿಚಯಿಸುವ ಪ್ರಯತ್ನ ಅಗುವುದಿಲ್ಲ. ಮೂರ್ತಿ ಪೂಜೆಯು ಸಾಕ್ಷಾತ್ಕಾರದ ಮೊದಲ ಮೆಟ್ಟಿಲು.ಮೂರ್ತಿಯ ಮುಂಭಾಗ ಹಾಗೂ ಹಿಂಭಾಗದಲ್ಲಿ ಇರುವ ವ್ಯತ್ಯಾವನ್ನು ತಿಳಿಸುವ ಗೊಡವೆಗೆ ಹೋಗುವುದಿಲ್ಲ. ತಾತ್ವಿಕವಾಗಿ ಬೆಳೆಯುವ ಚಿಂತನೆಗೆ ಈ ಮೂರ್ತಿ ಕಿಟಕಿಯ ರೂಪದಲ್ಲಿ ಒಂದು ಸೇತುವೆಯಂತೆ ಎನ್ನುವ ಸತ್ಯ ಇವರಿಗೆ ತಿಳಿಯದೇ ಹೋದದ್ದು ಖೇದಕರ. ಅಕ್ಷರಗಳನ್ನು ಕಲಿಯುವಾಗ ನಾವು ಅದನ್ನು ಮೂರ್ತರೂಪವಾಗಿ ಕಲಿಯುತ್ತೇವೆ ,ನಂತರ ಪದ ಗಳನ್ನು ಕಲಿಯುವಾಗ ಅಕ್ಷರಗಳ ರೂಪ-ಸ್ವರೂಪದ ಪ್ರಯತ್ನ ಪೂರ್ವ ಉಪಯೋಗ ಮಾಡಿಕೊಳ್ಳುತ್ತೇವೆ. ಒಮ್ಮೆ ಭಾಷೆಯ ಸ್ವರೂಪ ಕಲಿತ ನಂತರ ಅಕ್ಷರಗಳನ್ನು ಓದುವಾಗ ಪದಗಳ ಹಿಂದಿನ ಭಾವ ಗಮನಿಸುತ್ತೇವೆಯೇ ವಿನಹ ಅಕ್ಷರಗಳನ್ನಲ್ಲ. ಮೂರ್ತಿಪೂಜೆಯೂ ಈ ಕಲಿಕಾ ಹಂತಗಳ ಮನೋ ವೈಜ್ಣಾನಿಕ ಸೂತ್ರದ ಮೇಲೆ ನಿಂತಿರುವಂತಹದ್ದು. ಮಕ್ಕಳಿಗೆ ಮೂರ್ತಸ್ವರೂಪದಿಂದ ಧರ್ಮದ ಪರಿಚಯ ಮಾಡಿಸಿ ನಂತರ ಉನ್ನತ ಸ್ತರಕ್ಕೆ ಅವರ ತಾತ್ವಿಕ ಚಿಂತನೆಯನ್ನು ಏರಿಸುವುದು ನಿರ್ದೇಶಕರ ಅರಿವಿಗೆ ಬಾರದೇ ಹೋದದ್ದು ಅಥವಾ ಅದನ್ನು ಕೈಬಿಟ್ಟದ್ದು ಸಿನಿಮಾದ ಮೂಲ ಆಶಯಕ್ಕೆ ಧಕ್ಕೆ ತಂದಿದೆ.

ಗೋಮಾತೆಯ ಪೂಜೆಯ ಹಿಂದೆ ಗೋವಿನ ಪ್ರಾಮುಖ್ಯತೆಯನ್ನು ತಿಳಿಸದೇ ವಿಶ್ಲೇಶಿಸಲಾಗಿದೆ. ಗೋವು ಒಂದು ಮನೆಯಲ್ಲಿದ್ದರೆ ಇಡೀ ಸಂಸಾರವೊಂದು ಬಾಳುವೆ ಮಾಡಬಲ್ಲ ಸಾಮರ್ಥ್ಯ ಪಡೆಯುವುದರ ಕೃತಜ್ನತೆಯ ಪ್ರತೀಕ ಎಂದು ತಿಳಿಯಲಾರದಷ್ಟು ಮೂರ್ಖರೇ ಇವರು? ಅಲ್ಲಗಳೆತುವ ಮೊದಲು ಪೂರ್ವಾಪರಗಳನ್ನು ವಿಮರ್ಶಿಸಬೇಕು. ಹಾಗೆಯೇ judgementಕೊಡುವುದು ಎಷ್ಟು ಸಮಂಜಸ?

ಹಿಂದೂ ಧರ್ಮದಂಥ ವಿಶಾಲ ಆಲದ ವೃಕ್ಷವನ್ನು ಕೇವಲ ಕಿರಿದಾದ ದೃಷ್ಟಿಕೋನದಿಂದ ( ಬಹುತೇಕ ಇದನ್ನು ಪಾಶ್ಚಾತ್ಯ ಚಿಂತನೆಯ ಮಸೂರವನ್ನು ಹಾಕಿಕೊಂಡು ವಿಶ್ಲೇಷಿಸಲಾಗಿದೆ) ನೋಡುವುದೇ ಅಸಂಬದ್ಧ. ಧರ್ಮದಲ್ಲಿ ಬದುಕಿ ಬಾಳಬೇಕು; ಆನಂತರ ತೀರ್ಮಾನ ಕೊಡಬೇಕು. ಹೀಗೆ ಬಂದು ಹಾಗೆ ಹೋಗಿ ತತ್ವಗಳನ್ನು ಅರಿಯದೆ ತೀರ್ಪು ನೀಡಿದ ಈ ಚಿತ್ರ ರಾಂಗ್ ನಂಬರ್ ಗೆ ಫೋನಾಯಿಸಿದ ಅನುಭವ ನನಗೆ ನೀಡಿತು. ಇದರ ಜೊತೆಯಲ್ಲಿ ತುಲನಾತ್ಮಕವಾದ ನಿರ್ಧಾರಗಳನ್ನು ( ಹೆದರುವವನು ಮಾತ್ರವೇ ಮಂದಿರಕ್ಕೆ ಹೋಗುತ್ತಾನೆ ಎನ್ನುವುದನ್ನು ಹಿಂದೂ ಪದ್ಧತಿಯ ದೇವರನ್ನು ಪೂಜಿಸುವ ಸನ್ನಿವೇಶವನ್ನು ಉಲ್ಲೇಖಿಸಿ ಘೋಷಿಸಲಾಗಿದೆ) ಪ್ರಕಟಿಸುವಾಗ ಎಚ್ಚರಿಕೆ ಕೂಡಾ ಅತ್ಯಗತ್ಯ.

ಹಾಗಾಗಿ ಇಲ್ಲಿ ಅನ್ಯ ಜೀವಿಗೆ ತಮ್ಮ ಸಂಕುಚಿತ ದೃಷ್ಟಿಕೋನದ ಕನ್ನಡಕ ತೊಡಿಸಿ ಅದನ್ನು ಸಮಾಜಕ್ಕೂ ಆರೋಪಿಸಿದ್ದು ಹಾನಿಕಾರಕವೇ ಹೊರತು ಸುಧಾರಣಾ ಕಾರ್ಯವಲ್ಲ ಎಂದು ನನ್ನ ಭಾವನೆ.

ಹಾಲನ್ನು ಮೂರ್ತಿಗೆ ಸುರಿಯುವ ಬದಲು ಬಡಬಗ್ಗರಿಗೆ ಕೊಡಬೇಕೆನ್ನುವ ಇವರು ಬಕ್ರೀದ್ನಲ್ಲಿ ನಡೆಯುವ ಮಾರಣಹೋಮವನ್ನು ಚಿತ್ರಿಸುವುದಿಲ್ಲ. ಹಿಂದೂ ಸ್ವಾಮೀಜಿಯೊಬ್ಬರ ಆಶಾಢಭೂತಿತನವನ್ನು ಬಯಲು ಮಾಡುವ ಇವರುಗಳು ಮುಲ್ಲಾಗಳು ಕೊಡುವ ಜಿಹಾದಿ ಕರೆಗೆ ಕಿವುಡಾಗುತ್ತಾರೆ; ಅಲ್ಲಿ ಯುವಕರುಗಳಿಗೆ ಸ್ವರ್ಗದಲ್ಲಿ ಸಿಗುವ ಅಮಿಶಗಳಿಗೆ ಬಲಿಯಾಗಿಸುವುದನ್ನು ತೋರಿಸಲು ಮರೆಯುತ್ತಾರೆ, ಕ್ರೈಸ್ತ ಮಿಷನರಿಗಳು ಅವ್ಯಾಹತ ನಡೆಸುವ ನಾನಾ ಪ್ರಕಾರಗಳ ಅವ್ಯವಹಾರಗಳಿಗೆ ಕುರುಡಾಗುತ್ತಾರೆ. ವೇದಗಳು, ಹಿಂದೂ ಪುರಾಣಗಳು, ಇತ್ಯಾದಿಗಳನ್ನು ಸತತವಾಗಿ ಜೀರ್ಣಿಸಿಕೊಂಡು ಅದರಲ್ಲಿನ ಒಳ್ಳೆಯದನ್ನು ತಮ್ಮದೆಂದು ಬಿಂಬಿಸುವ ಕುಕೃತ್ಯವನ್ನು ಗಮನಿಸದವರಾಗುತ್ತಾರೆ. ಇನ್ನು ಲವ್ ಜಿಹಾದ್ ಎಂಬ ಹೆಸರಿನಲ್ಲಿ ನಡೆಸುತ್ತಿರುವ ಸಮಾಜಘಾತಕ ಕೆಲಸವನ್ನು ಸಾಂಕೇತಿಕವಾಗಿಯೂ ಖಂಡಿಸದೆ ಪರೋಕ್ಷವಾಗಿ ಅದರಂತಹ್ದೇ ಸನ್ನಿವೇಶವನ್ನು ನಿರ್ಮಿಸಿಕೊಟ್ಟಿದ್ದಾರೆ.

ಮೇಲುನೋಟಕ್ಕೆ ಬಹು ವಿಶಾಲ ದೃಷ್ಟಿಯ ಕಲಾತ್ಮಕ ಚಿತ್ರ ಎನ್ನುವ ತೆರೆಯ ಮರೆಯಲ್ಲಿ ಹಿಂದೂ ಧರ್ಮದ ಅವಹೇಳನ ಮಾಡುವ ಈ ಚಿತ್ರವನ್ನು ನಾನು ಖಂಡಿತವಾಗಿಯೂ ಅಸ್ವಾದಿಸಲಿಲ್ಲ. ಓಹ್ ಮೈ ಗಾಡ್ ಎನ್ನುವ ಚಿತ್ರ ಇದಕ್ಕಿಂತ ಸಾವಿರಪಾಲು ಚೆನ್ನಾಗಿದೆ. ಅಲ್ಲಿ ನಟನೆಯೂ ಉತ್ತಮ ಕಥೆಯೂ , ನಿರೂಪಣೆಯೂ ಉತ್ತಮ.

ಈ ಸಿನಿಮಾಗೆ ೩೦೦ ರೂಪಾಯಿಗಳ ದುಬಾರಿ ಶುಲ್ಕದ ಹಿಂದೆಯೂ ಇರುವ ಹುನ್ನಾರ ಗಮನಿಸಬಹುದು.

ಹಿಂದೂ ಧರ್ಮದ ಬಡವರು ಕ್ರೈಸ್ತ ಮಿಶನಿರಿಗಳ ಪಾಲು; ಇವರುಗಳು ಈ ಚಿತ್ರವನ್ನು ನೋಡಲಿ, ನೋಡದೆ ಇರಲಿ ಉದ್ದೇಶ ಸಾಧನೆಗೆ ತೊಡಕಿಲ್ಲ.. ಶ್ರೀಮಂತರು ಯಾರ ನಿಲುಕಿಗೂ ಸಿಗದವರು. ಮಧ್ಯಮವರ್ಗದ ಜನ ಈ ಚಿತ್ರದ ಗುರಿ. ಅವರುಗಳಲ್ಲಿ ಧರ್ಮಾಚರಣೆಗಳ ವಿರುದ್ಧ ವಿಡಂಬನೆಯ ಮೂಲಕ ಕೀಳರಿಮೆಯನ್ನೂ, ಕನ್ಪ್ಯೂಷನ್ (ಮನೋಕ್ಲೇಷ) ಅಥವಾ ಗೊಂದಲ ಮೂಡಿಸಿ ಧರ್ಮವಿಮುಖರನ್ನಾಗಿ ಮಾಡುವುದು ಮುಖ್ಯ ಉದ್ದೇಶ. ಇದನ್ನು ಓದಿದ ನಿಮಗೆ ಇವನ್ಯಾರೋ conspiracy theorist ಎಂದೆನ್ನಿಸಬಹುದು. ಎಲ್ಲಾ ವಿಧಾನಗಳಿಂದ ಹಿಂದೂ ಧರ್ಮದ( ಸನಾತನ ಧರ್ಮದ) ಪತನಕ್ಕೆ ಎತ್ನಿಸಿದ ಸೆಮೆಟಿಚ್ ( ಅಬ್ರಹಾಮಿಕ್ ಧರ್ಮಗಳು) ಮತದ ಸಂಸ್ಥೆಗಳು ಇತ್ತೀಚೆಗೆ ಜನಪ್ರಿಯ ಮಾಧ್ಯಮದ ಮೂಲಕ ಜನಗಳ ವಿಚಾರ ಸರಣಿಯ ದಿಕ್ಕ್ಕು ಬದಲಿಸುತ್ತಿರುವುದು ಅದರ ಸುಪ್ತ ಜಾಲದ ಅರಿವಿದ್ದವರಿಗೆ ಈ ಪ್ರಯತ್ನದ ಹಿಂದಿನ ಹುನ್ನಾರ ಅರಿವಾಗದೇ ಹೋಗದು.

ಇದನ್ನು ವಿರೋಧಿಸಿದವರಿಗೆ ಮೂಲಭೂತವಾದಿಗಳು, ಹಿಂದುತ್ವ ಉಗ್ರಗಾಮಿಗಳು ಎನ್ನುವ ಹಣೆಪಟ್ಟಿ ಕಟ್ಟಲಾಯಿತು. ಅವರು ಅಲ್ಲಿ ಆಕ್ಷೇಪಿಸಿದ್ದು ಈ ವಿಡಂಬನೆಯಲ್ಲಿ ಮಾಡಿದ ನಿರ್ದಿಷ್ಟ ತಾರತಮ್ಯವನ್ನು ಎನ್ನುವ ಸಾಂದರ್ಭಿಕ ಸತ್ಯವನ್ನು ಗಮನಿಸದೇ ಹೋದದ್ದು ವಿಪರ್ಯಾಸ. ಈ ನಿಟ್ಟಿನಲ್ಲಿ ಒಂದು ಕಥೆ ನೆನಪಾಗುತ್ತದೆ:

ತನ್ನನ್ನು ಕಂಡು ಎಲ್ಲರೂ ಹೆದರಿ ಓಡುವುದನ್ನು ಕಂಡ ಹಾವೊಂದು ಸನ್ಯಾಸಿಯೊಬ್ಬನ ಬಳಿಗೆ ಹೋಗಿ ತನ್ನ ದುಃಖ ತೋಡಿಕೊಳ್ಳುತ್ತದೆ. ಸರಿ ಆ ಸನ್ಯಾಸಿ ಅದು ನಿನ್ನ ಹುಟ್ಟು ಗುಣ. ನೀನು ಬೇಕಾದರೆ ಬದಲಾಗಬಹುದು. ಸಾಧುವಾಗಿದ್ದರೆ ನಿನಗೆ ಅಪಾಯವೂ ಬರಬಹುದು. ಅವರು ನಿನ್ನಿಂದ ದೂರವಿದ್ದರೇ ನಿನಗೆ ಒಳ್ಳೆಯದು. ಬೇಸರಪಡಬೇದ ಎಂದು ಹೇಳುತ್ತಾನೆ. ಆದರೆ ಆ ಹಾವು ತನಗೆ ಸಂಪೂರ್ಣ ಸಾಧುವಾಗುವ ವರ ದಯಪಾಲಿಸಲು ಆಗ್ರಹಿಸುತ್ತದೆ. ಸರಿ ನಿನ್ನಿಷ್ಟ ಎಂದು ತಥಾಸ್ತು ಎನ್ನುತ್ತಾನೆ.

ಸರಿ , ಆ ಹಾವಿನ ಸಾಧುತನವನ್ನು ಕಂಡ ಜನ ಸುಮ್ಮನಿದ್ದಾರೆ? ಕಲ್ಲುಗಳನ್ನು ಎಸೆದು ಅದನ್ನು ಘಾಸಿಗೊಳಿಸುತ್ತಾರೆ. ಕೋಲಿನಿಂದ ತಿವಿಯುತ್ತಾರೆ. ಹಾವು ದಯನೀಯ ಸ್ಥಿತಿಯಲ್ಲಿ ಇರುವುದನ್ನು ತಿಳಿದ ಸನ್ಯಾಸಿ ಅಲ್ಲಿ ಬಂದು ಹೇಳುತ್ತಾನೆ. ನೀನು ಭುಸ್ಸ್ಸ್ ಎಂದಾದರೂ ಭುಸುಗುಟ್ಟಿದ್ದರೆ ನಿನಗೆ ಈ ಗತಿ ಬರುತ್ತಿರಲಿಲ್ಲ. ಪ್ರಪಂಚದಲ್ಲಿ ನಮ್ಮ ತನವನ್ನು ನಾವು ಕಾಫಾಡಿಕೊಳ್ಳುವುದಕ್ಕಾಗಿ ಕೆಲವೊಂಂಎ ನಮ್ಮ ಶಕ್ತಿಯನ್ನು ಪ್ರದರ್ಶಿಸಬೇಕಾಗುತ್ತದೆ. ಇಲ್ಲವಾದರೆ ನಿನ್ನ ಒಳ್ಳೆಯತನದ ದುರ್ಲಾಭ ಪಡೆದು ನಿನಗೇ ಹಾನಿಮಾಡುವ ಜೀವಿಗಳು ಇಲ್ಲಿರುವ ಕಾರಣ ನಿನ್ನ ಎಚ್ಚರಿಕೆಯಲ್ಲಿ ನೀನಿರು; ಕಚ್ಚ ಬೇಕಾಗಿಲ್ಲ ಆದರೆ ಭಯವನ್ನು ಮೂಡಿಸು ಎಂದು ಹೇಳುತ್ತಾನೆ. ಅಂದಿನಿಂದ ಭುಸುಗುಡುವ ಹಾವನ್ನು ಕಚ್ಚುವ ಹಾವೆಂದೇ ತಿಳಿದ ಜನ ದೂರವೇ ಇರುತ್ತಾರೆ. ಹಾವು ತನ್ನ ಒಳ್ಳೆಯ ತನದ ಜೊತೆಗೆ ತನ್ನ ರಕ್ಷಣೆಯನ್ನು ಮಾಡಿಕೊಳ್ಳಲು ಕಲಿಯುತ್ತದೆ.

ಇದನ್ನು ಇಂಗ್ಲೀಶಿನಲ್ಲಿ porcupine defence ಎಂದು ಕರೆಯಲಾಗಿದೆ.

ಸಾಧಾರಣ ಚಿತ್ರಕ್ಕೆ ಅಸಾಧಾರಣ ಪ್ರಚಾರ, ಅಪೂರ್ಣವಾದ ಚಿತ್ರಣಕ್ಕೆ ಸಂಪೂರ್ಣವಾದ ಬೆಂಬಲ ವ್ಯಕ್ತವಾಗಿದ್ದು ಚಿಂತನೆಯ ಆಳ ಹರವುಗಳು ಕಡಿಮೆಯಾಗಿರುವ ವಿಪರ್ಯಾಸವೋ ನನಗೆ ತಿಳಿಯದು. ಒಟ್ಟಿನಲ್ಲಿ ರಾಂಗ್ ನಂಬರ್ ಅನ್ನು ರೈಟ್ ನಂಬರ್ ಎಂದು ಬಿಂಬಿಸುವ ಪ್ರಯತ್ನದಲ್ಲಿ ಎಲ್ಲಾ ರಾಂಗ್ ಕಾರಣಗಳಿಂದಾಗಿ ಯಶಸ್ವಿಯಾದ ಚಿತ್ರ ಎನ್ನಲು ಅಡ್ಡಿಯಿಲ್ಲ.