ಇಂದು, ಮಧುರ ಕಂಠದ ಗಾಯಕ ಪಿ.ಬಿ.ಶ್ರೀನಿವಾಸ ಅವರ ಎರಡನೇ ಪುಣ್ಯ ತಿಥಿ.
ಕಲಾವಿದರು ಕಲಾರಸಿಕರ ಹೃದಯದಲ್ಲಿ ಯಾವಾಗಲೂ ಬದುಕಿರಬೇಕು. ಸ್ಥಾವರ ಅಳಿಯಬಹುದು ಆದರೆ ಸಾಧನೆ ಎಂಬ ಜಂಗಮಕ್ಕೆ ಅಳಿವಿಲ್ಲ,ಇರಲೂಬಾರದು.
ಅವರನ್ನು ನೆನೆದು, ………
ಪಿ.ಬಿ ಶ್ರೀನಿವಾಸ್ – (ಡಾ.ದಾಕ್ಷಾಯಿಣಿ ಗೌಡ)
“ಇಳಿದು ಬಾ ತಾಯಿ ಇಳಿದು ಬಾ” ಈ ಹಾಡು ಎಲ್ಲಾದರೂ ಕೇಳಿಬ೦ದರೆ, ಕಿವುಡನಲ್ಲದ ಮನುಷ್ಯ, ಭಾಷೆಗೆ ಅಪರಿಚಿತನಾದರೂ ಮಾಡುವ ಕಾರ್ಯವನ್ನು ನಿಲ್ಲಿಸಿ ತಲೆದೂಗುವ೦ತಹ ಧ್ವನಿ, ಈ ಮಧುರ ಕ೦ಠ ಈ ಗಾಯಕನದು.
ಪ್ರಣಯ, ಭಕ್ತಿ,ಪ್ರೇಮ, ಶೋಕ ಇನ್ನಿತರ ಯಾವುದೇ ಭಾವನೆಯನ್ನು ಅಧ್ಭುತವಾಗಿ, ತನ್ನ ಗಾನದಲ್ಲಿ ಬಿ೦ಬಿಸುವ ಕಲೆ, ಪಿಬಿಸ್ ರವರಿಗೆ ಕರಗತವಾಗಿತ್ತು.
ಆ೦ಧ್ರಪ್ರದೇಶದಲ್ಲಿ ಜನಿಸಿ, ತಮಿಳುನಾಡಿನಲ್ಲಿ ಮರಣಹೊ೦ದಿದ ಈ ಗಾಯಕ, ದಕ್ಷಿಣಭಾರತದ ಎಲ್ಲಾ ಭಾಷೆಗಳಲ್ಲಿ ಹಾಡಿದ್ದಾರೆ.
ಆದರೆ ಅವರು ಮೊದಲು ಚಲನಚಿತ್ರದ ಹಿನ್ನಲೆ ಗಾಯಕನಾಗಿ ಹೆಜ್ಜೆಯಿಟ್ಟಿದ್ದು ಹಿ೦ದಿಭಾಷೆಯಲ್ಲಿ. ಇ೦ಥ ಪ್ರತಿಭಾನ್ವಿತ ಕಲಾವಿದನ ಕ೦ಠಸಿರಿಯ ಅನುಭವ ಹೆಚ್ಚಾಗಿ ಪಡೆದ ಕನ್ನಡಿಗರು ಭಾಗ್ಯವ೦ತರೆ೦ದರೆ ಅತಿಶಯೋಕ್ತಿಯೇನಲ್ಲ.
ಕನ್ನಡದಲ್ಲಿ ಇವರ ಧ್ವನಿಯ ಜೊತೆಗೆ, ಮೂಡುವ ಚಿತ್ರ, ಖ್ಯಾತ ನಟ ದಿವ೦ಗತ ರಾಜಕುಮಾರ್ ಅವರದು. ಈ ನಟನ ಪ್ರತಿಭೆಗೆ ಸಮತೂಕದ ಧ್ವನಿ ಪಿಬಿಸ್ ರವರದು. ಈ ಎರಡೂ ಪ್ರತಿಭೆಗಳ ಸಮನ್ವಯದ ಸವಿಯ ಅನುಭವ ಬಲ್ಲವರೆ ಬಲ್ಲರೆ೦ದು ಹೇಳಬಹುದು. ಇವರು ತಮಿಳಿನ ಜೆಮಿನಿ ಗಣೇಸನ್ ರವರ ಬಹಳಷ್ಟು ಚಿತ್ರಗಳಿಗೂ ಹಿನ್ನಲೆ ಗಾಯಕನಾಗಿ ಹಾಡಿ ಹೆಸರು ಮಾಡಿದ್ದಾರೆ.
ನನ್ನ ನೆಚ್ಚಿನ ಈ ಕೆಲವು ಗೀತೆಗಳು ನಿಮ್ಮ ಮನಸ್ಸನ್ನೂ ಮಿಡಿದಿರುವುದರಲ್ಲಿ ಅನುಮಾನವಿಲ್ಲ. ಬನ್ನಿ ಮತ್ತೊಮ್ಮೆ ನೆನೆಯೋಣ
ಭಕ್ತಿ – “ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆ, ಕೂಗಿದರು ದನಿ ಕೇಳಲಿಲ್ಲವೆ ನರಹರಿಯೆ”
ಶೋಕ – “ಹಾಡೊ೦ದು ಹಾಡುವೆ ನೀ ಕೇಳು ಮಗುವೆ, ಬರಿದಾದ ಈ ಮನೆಗೆ ನೀನೆ೦ದು ಬರುವೆ”
ಹುರುಪು – “ನಗುನಗುತಾ ನಲೀ, ನಲೀ ಏನೆ ಆಗಲಿ”
ಪ್ರಣಯ – “ಸುವ್ವೀ, ಸುವ್ವೀ ಸುವ್ವಾಲೆ, ಕಣ್ಣೇ ಕರೆಯೋಲೆ,
ದುವ್ವಿ, ದುವ್ವಿ ದುವ್ವಾಲೆ, ಮನಸೆ ಉಯ್ಯಾಲೆ”.
– “ನೀ ಮುಡಿದಾ ಮಲ್ಲಿಗೆ ಮಾಲೆ, ನಿನಗೆ೦ದೆ ಬರೆದ ಪ್ರೇಮದ ಓಲೆ”.
ಪಿ ಬಿ ಶ್ರೀನಿವಾಸ್- ಚೈತ್ರದ ಕೋಗಿಲೆ ( ಸುದರ್ಶನ ಗುರುರಾಜರಾವ್ )
ಕಾಕಿನಾಡ ಕೋಗಿಲೆ ನೀ ಪಿ ಬಿ ಶ್ರೀನಿವಾಸ
ನೀನು ಹಾಡಿದಂಥ ಯುಗದ ತುಂಬ ಚೈತ್ರ ಮಾಸ
ಭಾವ ಪೂರ್ಣ ಜೇನುಧಾರೆ ನಿನ್ನ ಗಾನ ವಿಶೇಷ
ಕಲ್ಲಿನೆದೆಯು ಕರಗಿ ಹರಿಯುವಂಥ ಧ್ವನಿಯ ಪಾಶ
ಜಾತಕ ಫಲವೆಂಬ ಚಿತ್ರದಲ್ಲಿಮೊದಲು ಹಾಡಿ
ಗೀತೆಗಳಲಿ ತುಂಬಿ ನಿನ್ನ ಮಾಧುರ್ಯದ ಮೋಡಿ
ಚಿತ್ರಗೀತೆ ಜಾತಕವನೆ ಮುಂದೆ ಬದಲು ಮಾಡಿ
ಹೊಸ ಆಯಾಮವೆ ಕೊಟ್ಟೆ ನೀನು ಸಿರಿ ಗಂಧವ ತೀಡಿ
ಬಾಡಿ ಹೋದ ಬಳ್ಳಿಯಲ್ಲು ಹೂ ಅರಳಿಸ ಬಲ್ಲ
ಶಕ್ತಿ ನಿನ್ನ ಕಂಠಕಿಹುದು ನಿನಗೆ ಸಾಟಿ ಇಲ್ಲ
ನೀನು ಹಾಡುತಿರಲು ಅರಿತು ಪದಗಳರ್ಥ ವ್ಯಾಪ್ತಿ
ರಸಿಕರೆದೆಯು ಅರಳುತಿತ್ತು ಪಡೆದು ಭಾವ ಪ್ರಾಪ್ತಿ
ತಾಯಿಯನ್ನು ಕುರಿತು ನೀನು ಅಮ್ಮ ಎಂದು ಕರೆಯೆ
ಮಾತೃಪ್ರೇಮ ದನಿಯಲ್ಲಿಯೆ ಜೇನು ಧಾರೆ ಸುರಿಯೆ
ತೂಕಡಿಸಿ ಬೀಳದಿರಿ ಎಂದು ಬೀಸಿ ಚಾಟಿ
ಸಾವಿರಾರು ಹೃದಯವೀಣೆ ಮಿಡಿದೆ ತಂತಿ ಮೀಟಿ
ಜೇನುದುಂಬಿಯೆಂಬ ಕಾವ್ಯ ನಾಮ ನಿನ್ನದಿಹುದು
ನಿನ್ನ ದನಿಯ ಅನುಕರಿಸಲು ಕಷ್ಟಸಾಧ್ಯವಹುದು
ಕನ್ನಡದ ಹಿರಿತನವನು ನೀನು ಹಾಡೆ ಹೊಗಳಿ
ಮೂಡಿ ಬರುವುದಭಿಮಾನದ ಹೂವು ಎದೆಯಲರಳಿ!
ಒಲವು ಇರದ ಲತೆಯೊಳಿಂದು ಅರಳದಂಥ ಹೂವು
ಹೂವಿನೊಡಲ ತುಂಬ ತುಂಬಿ ಬರಿದೆ ಕಹಿ ಬೇವು!!
ಮೂಲ ಒರತೆ ಬತ್ತುತಿರಲು ಹರಿದ ನದಿಯ ಪಾತ್ರ
ನೀರ ಪಸೆಯೆ ಆರಿ ಹೋಗಿ ಉಳಿದುದುಸುಕು ಮಾತ್ರ
ಸಾಹಿತ್ಯಿಕ ಚೆಲುವೆಲ್ಲವು ಅವಿಯಾದ ಜಲವು
ಸಂಗೀತದ ರಸಧಾರೆಗೆ ಇರದಾಯಿತು ಒಲವು
ಹತ್ತೆಂಟು ಭಾಷೆಗಳಲಿ ಪಾಂಡಿತ್ಯವ ಗಳಿಸಿ
ಲಕ್ಷಕಿಂತ ಹೆಚ್ಚುವರಿಯ ಗೀತೆಗಳನೆ ರಚಿಸಿ
ಸರಸ್ವತಿಯ ಪುತ್ರನಾಗಿ ವೇದ ನದಿಯ ತೆರದಿ
ಗುಪ್ತಗಾಮಿನಿಯಾಗಿ ಉಳಿದೆ ನೀ ಕಾಲಾಂತರದಿ
ನೀನು ಹಾಡಿ ಬಿಟ್ಟು ಹೋದ ಗೀತೆಗಳ ಮಾಲೆ
ರಸಿಕರೆದೆಯ ನದಿಗೆ ನಿರತ ಸುರಿವ ಜೀವ ಸೆಲೆ
ಗೂಢವಾಗಿ ಹರಿದು ಭಾವ ತರಂಗಗಳ ಮಿಡಿಸಿ
ಅಂತರಂಗದಲ್ಲಿ ಒಂದು ಸ್ವರ್ಗವನ್ನೆ ಸೃಜಿಸಿ
ಸಜ್ಜನಿಕೆಯೆ ಮೂರ್ತಿವೆತ್ತ ಗಾನ ಸುಧೆಯ ದೊರೆ
ನಡೆದೆ ನೀನು ಗಮ್ಯದೆಡೆಗೆ ತೊರೆದು ನಮ್ಮ ಧರೆ
ಕಿವಿಗಳಲ್ಲಿ ದುಂಬಿ, ನಿನ್ನ ದನಿ ಅನುರಣಿಸುತಿರೆ
ಸಹೃದಯರೆದೆಯಂಬರದಿ ನೀನೆ ಭಾಗ್ಯತಾರೆ.
ಡಾ.ಸುದರ್ಶನ ಗುರುರಾಜರಾವ್