ನಾಗಾಭರಣಾಯಣ

 

ಈ ವಾರ ನಿಮ್ಮ ಮುಂದಿದೆ ಕಳೆದ ಶನಿವಾರ ಹೆಸರಾಂತ ನಿರ್ದೇಶಕ, ರಂಗ ಕರ್ಮಿ ಟಿ. ಎಸ್. ನಾಗಾಭರಣರೊಡನೆ ಅನಿವಾಸಿಗಳು ನಡೆಸಿದ ಸಂವಾದದ ವರದಿ.

ನವೆಂಬರ್ ೨೬ರಂದು ಕನ್ನಡ ಬಳಗ (ಯು.ಕೆ) ಸ್ಟೋಕ್ ಆನ್ ಟ್ರೆಂಟ್ ನಗರದಲ್ಲಿ ದೀಪಾವಳಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಅಂದು ಮುಖ್ಯ ಅತಿಥಿಗಳಾಗಿ ಹೆಸರಾಂತ ನಿರ್ದೇಶಕ, ರಂಗಕರ್ಮಿ ಶ್ರೀ. ಟಿ. ಎಸ್. ನಾಗಾಭರಣ ಕರ್ನಾಟಕದಿಂದ ಆಗಮಿಸಿದ್ದರು. ಅವರು ಬರುವ ವಿಚಾರ ನಮಗೆ  ಸಪ್ಟೆಂಬರ್ ತಿಂಗಳಲ್ಲೇ ತಿಳಿದಿತ್ತು. ಅದಕ್ಕನುಗುಣವಾಗಿ ಸಂಪ್ರದಾಯದಂತೆ ಅನಿವಾಸಿ ಹುಟ್ಟಿದಾಗಿನಿಂದ ನಡೆಸಿಕೊಂಡು ಬಂದಿರುವ ಗೋಷ್ಠಿಗೆ ನಾಗಾಭರಣರ ನಾಟಕ ಹಾಗೂ ಸಿನಿಮಾಗಳ ವಿಶ್ಲೇಷಣೆ ಮಾಡುವ ನಿರ್ಧಾರಕ್ಕೆ ಬಂದಿದ್ದೆವು. ಇದರೊಡನೆ, ಅವುಗಳ ಬಗ್ಗೆ ಮಾತಾಡುವ ಸದಸ್ಯರಿಗೆ ನಾಗಾಭರಣರನ್ನು ಪ್ರಶ್ನಿಸುವ ಅವಕಾಶವನ್ನು ಕೊಡಲಾಯಿತು. 

ಅನಿವಾಸಿ ಕಾರ್ಯಕ್ರಮಕ್ಕೆ ಉತ್ತಮವಾದ ವಿಂಡ್ಸರ್ ಕೋಣೆ ಹಾಗು ಸೂಕ್ತವಾದ ಧ್ವನಿ ವ್ಯವಸ್ಥೆಯ ಅನುಕೂಲ ಮಾಡಿಕೊಟ್ಟವರು ಕನ್ನಡ ಬಳಗದ ಅಧ್ಯಕ್ಷರಾದ ಶ್ರೀಮತಿ ಸುಮನಾ ಗಿರೀಶ್. ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದವರು ಡಾ. ಲಕ್ಷ್ಮೀನಾರಾಯಣ ಗುಡೂರ್. ಆರು ಅನಿವಾಸಿಗಳು ತಮಗೆ ಬೇಕಾದ ಸಿನಿಮಾಗಳನ್ನು ಆರಿಸಿಕೊಂಡು, ವಿಶ್ಲೇಷಿಸಿದರು. ಪ್ರತಿಯೊಬ್ಬರಿಗೂ ಸರಿ ಸುಮಾರು ಹತ್ತು ನಿಮಿಷಗಳ ಕಾಲಾವಕಾಶವಿತ್ತು. ಮೊದಲ ಒಂದೆರಡು ನಿಮಿಷಗಳು ಸಿನಿಮಾ ಕಥೆಯ ವಿವರಣೆಗೆ ಮೀಸಲಿಡಲು ಸೂಚಿಸಲಾಗಿತ್ತು. ನಂತರದ ಎರಡು ನಿಮಿಷಗಳನ್ನು ಸಿನಿಮಾದ ತುಣುಕನ್ನು ತೋರಿಸಲು ಹಾಗು ಉಳಿದ ಸಮಯದಲ್ಲಿ ವಿಶ್ಲೇಷಣೆ ಹಾಗು ನಾಗಾಭರಣರೊಡನೆ ಆ ಸಿನಿಮಾ ಕುರಿತಾದ ಸಂವಾದಕ್ಕೆಂದು ಗುರುತಿಸಿಕೊಂಡಿದ್ದೆವು. ವಿಶ್ಲೇಷಕರಿಗೆ ಬೇಕಾದ ಸಿನಿಮಾ ತುಣುಕುಗಳನ್ನು ಮುತುವರ್ಜಿಯಿಂದ ತಯಾರಿಸಿ ಒದಗಿಸಿದವರು ಡಾ. ಶ್ರೀವತ್ಸ ದೇಸಾಯಿ.

ಅನಿವಾಸಿಗಳ ಆಯ್ಕೆ ಈ ಕೆಳಗಿನಂತಿದ್ದವು:

೧. ಡಾ. ಕೇಶವ ಕುಲಕರ್ಣಿ: ಅನ್ವೇಷಣೆ (ಬಿಡುಗಡೆ: ೧೯೮೩)

೨. ಡಾ. ಜಿ.ಎಸ್. ಶಿವಪ್ರಸಾದ: ಅಲ್ಲಮ (ಬಿಡುಗಡೆ: ೨೦೧೭)

೩. ಡಾ. ರಶ್ಮಿ ಮಂಜುನಾಥ: ಚಿನ್ನಾರಿ ಮುತ್ತ (ಬಿಡುಗಡೆ: ೧೯೯೩) 

೪. ಡಾ. ರಾಮಶರಣ ಲಕ್ಷ್ಮೀನಾರಾಯಣ: ನಾಗಮಂಡಲ (ಬಿಡುಗಡೆ: ೧೯೯೭) 

೫. ಡಾ. ಶ್ರೀವತ್ಸ ದೇಸಾಯಿ: ಸಿಂಗಾರೆವ್ವ (ಬಿಡುಗಡೆ: ೨೦೦೩) 

೬. ಡಾ. ಲಕ್ಷ್ಮೀನಾರಾಯಣ ಗುಡೂರ್: ಮೈಸೂರು ಮಲ್ಲಿಗೆ (ಬಿಡುಗಡೆ: ೧೯೯೧) 

ಉತ್ತಮವಾದ ಪ್ರತಿ ಸಿಗದ ಕಾರಣ ಕೇಶವ ಕುಲಕರ್ಣಿಯವರು ಸಿನಿಮಾದ ತುಣುಕನ್ನು ತೋರಿಸದಿದ್ದರೂ, ಅವರ ತಮ್ಮ ಹೇಗೆ ಸಿನಿಮಾದ ಪ್ರಾರಂಭದಲ್ಲಿನ ದೃಶ್ಯವೊಂದರ ಬಳಿಕ ಹೆದರಿ ಪರದೆಗೆ ಬೆನ್ನು ಮಾಡಿ ಕುಳಿತಿದ್ದನೆಂಬುದನ್ನು ಕೇಳಿದವರಿಗೆ ಸಿನಿಮಾ ಟ್ರೇಲರ್ ನೋಡಿದ ಅನುಭವವಾಗಿರಬಹುದು. ಜನಮನದ ಗೀತೆಗಳನ್ನು ಆಧಾರಿಸಿ ನಿರ್ಮಿಸಿದ ಸಿನಿಮಾವಾಗಿದ್ದರಿಂದ ಗುಡೂರರು ಸಿನಿಮಾದ ಹಾಡುಗಳ ಸಂಗೀತವನ್ನು ಕತ್ತರಿಸಿ ಧ್ವನಿ ಕೊಲಾಜನ್ನು ಪ್ರಸ್ತುತ  ಪಡಿಸಿದರು. ಇಡೀ ಹಾಡನ್ನು ನಿರೀಕ್ಷಿಸುತ್ತಿದ್ದವರಿಗೆ, ಒಮ್ಮೆಲೇ ಇನ್ನೊಂದು ಹಾಡು ಶುರುವಾಗಿ ತಬ್ಬಿಬ್ಬಾಗಿದ್ದು (ನಾಗಾಭರಣರನ್ನೂ ಸೇರಿ) ಈ ಪ್ರಯೋಗದ ವೈಶಿಷ್ಠ್ಯ. 

ನಮ್ಮ ಕಾರ್ಯಕ್ರಮದ ವಿಶೇಷ ನಾಗಾಭರಣರೊಂದಿಗಿನ ಸಂವಾದ.  ಅವರ ಸಿನೆಮಾಗಳ ಬೆಳವಣಿಗೆಯ ಹಿಂದಿನ ಕುತೂಹಲಕಾರಿ ಕಥೆಗಳು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದವು, ಆಶ್ಚರ್ಯಚಕಿತರಾಗಿಸಿದವು. ‘ಅನ್ವೇಷಣೆ’ ನಾಗಾಭರಣರ ಎರಡನೇ ಸಿನೆಮಾ. ಅವರ ಗುರು ಗಿರೀಶ್ ಕಾರ್ನಾಡರು. ಅವರ ಸಲಹೆಯಂತೆ ಸ್ಮಿತಾ ಪಾಟೀಲರನ್ನು ನಾಯಕಿಯಾಗಿ ಆರಿಸಿದ್ದರು ನಾಗಾಭರಣ. ಅದಕ್ಕೆ ಎರಡು ಕಾರಣಗಳು: ಆಕೆ ಚಿತ್ರಕಥೆ ಇಷ್ಟ ಪಟ್ಟು ತಾನೇ ನಾಯಕಿಯಾಗಿ ನಟಿಸುತ್ತೇನೆಂದಿದ್ದು ಹಾಗು ನಾಗಾಭರಣರ ಕಾಸಿನ ಕಷ್ಟ ನೋಡಿ ಸಂಭಾವನೆ ಇಲ್ಲದೇ ಕೆಲಸ ಮಾಡುವೆನೆಂದು ಒಪ್ಪಿದ್ದು. ನಾಯಕ ಅನಂತನಾಗ್ ಪ್ರೇಮದ ಕಡಲಲ್ಲಿ ಈಸುತ್ತ, ನಾಗಾಭರಣರನ್ನು ಇರುಸು-ಮುರಿಸಿನ ಪ್ರಸಂಗಕ್ಕೆ ಸಿಲುಕಿಸಿದ್ದನ್ನು ಹಂಚಿಕೊಂಡರು. ಕೇವಲ ೨.೫ ಲಕ್ಷದಲ್ಲಿ ತಯಾರಿಸಿದ ಚಿತ್ರವಿದಾಗಿತ್ತು. ಮಕ್ಕಳ ಚಿತ್ರ ಜಗತ್ತಿನಲ್ಲೇ ಹೆಚ್ಚು ಕಡೆಗಣಿಸಲ್ಪಟ್ಟ ಪ್ರಕಾರ ಎಂಬುದು ನಾಗಾಭರಣರ ಅಂಬೋಣ. ‘ಚಿನ್ನಾರಿ ಮುತ್ತ’ ಕ್ಕೆ ಪ್ರೇರಣೆ ಡಿಕನ್ಸ್ ನ ಓಲಿವರ್ ಟ್ವಿಸ್ಟ್. ಕವಿ ಎಚ್ಚೆಸ್ವಿಯವರಿಗೆ ಸವಾಲು ಹಾಕಿ ಕಥೆ, ಸಂಭಾಷಣೆ, ಹಾಡು ಬರೆಸಿ ತಯಾರಿಸಿದ ಸಿನಿಮಾ. ಈ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿಯೂ ಸಿಕ್ಕಿತ್ತು. ಹೀಗೇ ನಾಲಕ್ಕು ಮಕ್ಕಳ ಚಿತ್ರಗಳನ್ನು ತಯಾರಿಸಿ, ಪ್ರಶಸ್ತಿ ಪಡೆದ ಹೆಗ್ಗಳಿಕೆ ನಾಗಾಭರಣರದ್ದು. 

ಸಂಗೀತ ನಾಗಾಭರಣರ ಚಿತ್ರಗಳ ಜೀವಾಳ. ಅದಕ್ಕೆ ಅವರಿಗೆ ಹೆಗಲು ಕೊಟ್ಟಿದ್ದು ಹೆಸರಾಂತ ಕಲಾವಿದ ಸಿ. ಅಶ್ವಥ್. ಇವರ ಯಮಳ ಪ್ರಯೋಗಗಳನ್ನು ಹೆಚ್ಚಿನ ಪ್ರಸಿದ್ಧ ಸಿನಿಮಾಗಳಲ್ಲಿ ಕಾಣುತ್ತೇವೆ (ಮೈಸೂರು ಮಲ್ಲಿಗೆ, ಚಿನ್ನಾರಿ ಮುತ್ತ, ಸಂತ ಶಿಶುನಾಳ ಶರೀಫ, ನಾಗಮಂಡಲ, ಸಿಂಗಾರೆವ್ವ). ‘ಮೈಸೂರು ಮಲ್ಲಿಗೆ’ ನಾಗಾಭರಣರಿಗೆ ವಿಶೇಷ ಸವಾಲನ್ನು ಒಡ್ಡಿದ ಪ್ರಯೋಗ. ಕೇವಲ ಹಾಡುಗಳನ್ನು ಆಧರಿಸಿ ಹೊಸೆದ ಕಥೆಯಿದು. ಸುಮಾರು ಹದಿನೈದು ಹೆಸರಾಂತ ಕವಿಗಳೊಡನೆ ಸಮಾಲೋಚಿಸಿದರೂ, ದಾರಿ ಕಾಣದಾದಾಗ, ನಾಗಾಭರಣರೇ ಕಥೆಯನ್ನು ಹೊಸೆಯುವ ನಿರ್ಧಾರ ಮಾಡಿದರು. ಹಲವು ಆವೃತ್ತಿಗಳನ್ನು ಕವಿತೃಯರಾದ ಎಚ್ಚೆಸ್ವಿ, ನರಹಳ್ಳಿ ಬಾಲಸುಬ್ರಹ್ಮಣ್ಯ ಹಾಗು ವ್ಯಾಸರಾಯರೊಡನೆ ಚರ್ಚಿಸಿದ್ದರಂತೆ. ಒಂದು ಬೆಳಗಿನ ಝಾವ ಬುಲ್ ಟೆಂಪಲ್ ಎದುರಿನ ಕಟ್ಟೆಯ ಮೇಲೆ ಅಶ್ವಥ್ ಜೊತೆ ಕುಳಿತಿದ್ದಾಗ ಬಲ್ಬ್ ತಟ್ಟನೆ ಫ್ಲಾಶ್ ಆಗಿ ಕಥೆಗೊಂದು ರೂಪ ಬಂದಿತ್ತೆಂದು ವಿವರಿಸಿದರು. ಇದರಲ್ಲಿ ಅವರು ಕಾಣುವುದು ಸಂಘರ್ಷ: ಸ್ವಾತಂತ್ರ್ಯ ಹೋರಾಟ, ಸರಕಾರದ ಪರವಾದ ಶಾನುಭೋಗರೊಂದೆಡೆ, ಸಂಗ್ರಾಮದ ಪರವಾದ ಅವರ ಅಳಿಯ, ಇವರ ನಡುವೆ ಬಳಲುವ ಪದುಮ. ಈ ಸಿನೆಮಾದ ತೆರೆಯ ಮರೆಯಲ್ಲಿ ಆದ ಸಂಘರ್ಷ ನಮಗೆಲ್ಲ ನಾಗಾಭರಣರ ಜಿದ್ದು, ಸಿನಿಮಾ ಕ್ಷೇತ್ರದಲ್ಲಿ ಅವರಿಗಿದ್ದ ಪ್ರಭಾವಗಳನ್ನೂ ಪರಿಚಯ ಮಾಡಿಸಿತು. ಮೈಸೂರು ಮಲ್ಲಿಗೆ ಧ್ವನಿ ಸುರುಳಿಯ ಯಶಸ್ಸಿನ ಹಿಂದಿನ ರೂವಾರಿ ಅಶ್ವಥ್ ಎಂಬುದು ಎಲ್ಲರಿಗೂ ಗೊತ್ತಿದ್ದದ್ದೇ. ಆದರೆ ನಾಗಾಭರಣರಿಗೆ ಬೇಕಿದ್ದುದು ಯುವಕನಿಗೆ ಹೊಂದುವ ಧ್ವನಿ. ಹೇಗೆ ಅವರು ಎಸ್ಪಿ ಬಾಲಸುಬ್ರಹ್ಮಣ್ಯರನ್ನು ಅಶ್ವಥ್ ಬದಲು ಅಶ್ವಥ್ ನಿರ್ದೇಶನದಲ್ಲೇ ಹಾಡಿಸಿದರು ಎಂಬುದನ್ನು ಕೇಳಿ ಪ್ರೇಕ್ಷಕರೆಲ್ಲ ದಿಗ್ಭ್ರಂತರಾದರು, ಮನಸಾರೆ ನಕ್ಕರು. 

‘ನಾಗಮಂಡಲದ’ ಲ್ಲಿ ಅವರು ತೋರಬಯಸುವುದು ರಾಣಿಯ ಬಯಕೆ, ಮುಗ್ಧತೆ, ಸಂವೇದನೆಗಳು. ಇದರಲ್ಲಿ ಬರುವ ಹಲವು ಸನ್ನಿವೇಶಗಳು, ಬದುಕಿನ ವಿಪರ್ಯಾಸಗಳಿಗೆ ರೂಪಕಗಳು. ನಾಗಪ್ಪ – ಅಣ್ಣಪ್ಪ ಎರಡು ಪಾತ್ರಗಳಲ್ಲ. ಒಬ್ಬನೇ ವ್ಯಕ್ತಿಯ ಎರಡು ಮನಸ್ಥಿತಿಗಳ ಸಂಕೇತ, ಅವುಗಳ ನಡುವಿನ ಸಂಘರ್ಷ. ಕೊನೆಯಲ್ಲಿ ಕಂಡುಬರುವುದು ರಾಣಿಯ ಪ್ರೀತಿಯ ಗೆಲುವು. ಕಾರ್ನಾಡರ ಪ್ರಸಿದ್ಧ ನಾಟಕವನ್ನಾಧರಿಸಿದ ನಾಗಮಂಡಲವನ್ನು ನೋಡಿ ಮೆಚ್ಚಿದ ಕಾರ್ನಾಡರು ನೀಡಿದ ಪ್ರತಿಕ್ರಿಯೆಯೇ ನಾಗಾಭರಣರಿಗೆ ಚಿತ್ರಕ್ಕೆ ಸಿಕ್ಕ ಇತರ ಪ್ರಶಸ್ತಿಗಳಿಗಿಂತ ಅತ್ಯಮೂಲ್ಯವಾಗಿದ್ದರಲ್ಲಿ ಸಂದೇಹವೇ ಇಲ್ಲ. ‘ಸಿಂಗಾರೆವ್ವ’ ದಲ್ಲಿ ನಾಗಾಭರಣರು ಕಾಣುವುದು ವರ್ಗ ಸಂಘರ್ಷ, ಇರುವವರ-ಇಲ್ಲದವರ ನಡುವಿನ ಸಂಘರ್ಷ, ಹೆಣ್ಣು-ಗಂಡಿನ ನಡುವಿನ ಸಂಘರ್ಷ. ಇಲ್ಲಿ ಸಿಂಗಾರೆವ್ವ ಪ್ರಕೃತಿಯ ಸಂಕೇತ. ಪ್ರಕೃತಿ ನಾಶವಾದಂತೆ ಹೇಗೆ ಪುರುಷ ನಾಶವಾಗುತ್ತಾನೆ ಎಂಬುದನ್ನು ಅವರು ಈ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ‘ಅಲ್ಲಮ’ ದಲ್ಲಿ ಆತನ ಚಿಂತನೆಗಳನ್ನು ಪ್ರಸ್ತುತಕ್ಕೆ ಹೊಂದಿಸುವ ಪ್ರಯತ್ನ ಮಾಡಿದ್ದಾರೆ. ಅವಧೂತನಾದ ಅಲ್ಲಮನ ವಚನಗಳನ್ನೇ ಸಂಭಾಷಣೆಯನ್ನಾಗಿ ಉಪಯೋಗಿಸಿದ್ದಾರೆ. ಅವನ ವಚನಗಳನ್ನು ದೃಶ್ಯ ರೂಪದಲ್ಲಿ ನೋಡುಗರ ಕಣ್ಮುಂದೆ ತಂದಿದ್ದಾರೆ. ಈ ಪ್ರಯೋಗವು ಅವರಿಗೆ ಹೊಸ ಸವಾಲನ್ನೆಸೆದಿತ್ತು. ಅದನ್ನು ಯಶಸ್ವಿಯಾಗಿ ನಿಭಾಯಿಸಿದ ತೃಪ್ತಿ ಅವರಿಗಿದೆ. 

ಸುದೀರ್ಘವಾಗಿ, ನಗೆ ಚಾಟಿಕೆಗಳ ನಡುವೆ ತಮ್ಮ ಸಿನಿಮಾ ಪಯಣವನ್ನು ಹಂಚಿಕೊಂಡ ನಾಗಾಭರಣರು, ತಮ್ಮ ಪ್ರತಿಭೆ, ಸರಳತೆ, ಯೋಚನಾ ಲಹರಿಯ ಹರಿವು – ದಿಕ್ಕುಗಳನ್ನು ಪರಿಚಯಿಸಿದರು. ಬಂದ ಪ್ರೇಕ್ಷಕರೆಲ್ಲ ಸಂವಾದವನ್ನು ತುಂಬು ಹೃದಯದಿಂದ ಅನುಭವಿಸಿದರು. ಅವರಿಗೂ ಸಂವಾದಿಸುವ ಅವಕಾಶ ಸಮಯಾಭಾವದಿಂದ ಸಿಗದೇ ನಿರಾಶರಾಗಿದ್ದು ಪ್ರಯೋಜಕರಿಗೆ ವೇದ್ಯವಾಗಿತ್ತು. 

-ರಾಂ 

ಸಿ ಅಶ್ವಥ್ ಎಂಬ ಭಾವಸಂಗೀತಗಾರ – ಕೇಶವ ಕುಲಕರ್ಣಿ

(೨೯ ಡಿಸೆಂಬರ್ ಸಿ ಅಶ್ವಥ್ ಜನ್ಮದಿನ, ಹಾಗೆಯೇ ಪುಣ್ಯತಿಥಿ ಕೂಡ. ಅವರು ನಮ್ಮನ್ನಗಲಿ ಈಗ ಐದು ವರ್ಷ. ಆಧುನಿಕ ಕನ್ನಡ ಕಾವ್ಯವನ್ನು, ಅದರಲ್ಲೂ ನವೋದಯ ಕಾವ್ಯವನ್ನು, ಕನ್ನಡದ ಮನೆ ಮನೆಗೆ ತಲುಪಿಸಿದವರು ಸಿ ಅಶ್ವಥ್. ಅವರ ನೆನಪಿನಲ್ಲಿ ಒಂದು ಶೃದ್ಧಾಂಜಲಿ.)

CC-Wiki

ಶಿಶುನಾಳ ಶರೀಫ, ನನ್ನ ಮುತ್ತಾತ ಗೋವಿಂದ ಭಟ್ಟನ ಶಿಷ್ಯ. ಹೀಗಾಗಿ ನನ್ನ ಅಜ್ಜಿಗೆ (ತಾಯಿಯ ತಾಯಿ) ಶಿಶುನಾಳ ಶರೀಫನೆಂದರೆ ಪ್ರಾಣ. ನಾನು ಚಿಕ್ಕವನಾಗಿದ್ದಾಗ ಆತನ ಜೀವನಚರಿತ್ರೆಯನ್ನು ನನ್ನಜ್ಜಿಗೆ ಓದಿ ಹೇಳಿದ್ದು ನೆನೆಪಿದೆ. ಸರಿ ಸುಮಾರು ಅದೇ ಕಾಲದಲ್ಲಿ, ಸಿ ಅಶ್ವಥ್ ರ ಮೊದಲ ಶಿಶಿನಾಳ ಶರೀಫರ ಕ್ಯಾಸೆಟ್ ಹೊರಬಂತು. ಆ ಹಾಡುಗಳಲ್ಲಿರುವ ಕವನ, ಭಾಷೆ, ಧಾಟಿ ಮತ್ತು ಆ ಧ್ವನಿ, ಬರೀ ಸಿನಿಮಾ ಹಾಡುಗಳನ್ನು ಕೇಳಿ ಬೆಳೆಯುತ್ತಿದ್ದ ನಮಗೆ ಹೊಸಲೋಕವನ್ನೇ ತೆರೆದಂತಾಯಿತು. ಮತ್ತು ಅದೇ ಕಾಲಕ್ಕೆ ನಾವು ಲಂಕೇಶ್ ಪತ್ರಿಕೆ ಓದಲು ಶುರುಮಾಡಿದ್ದೆವು. ಕನ್ನಡ-ಕರ್ನಾಟಕದ ಸಾಹಿತ್ಯ-ಕವನ-ಜನಪದ-ಸಂಗೀತಗಳಿಗೆ ಒಮ್ಮೆಲೇ ನಾವು ತೆರೆದುಕೊಂಡಿದ್ದು ಹೀಗೆ. ಹೀಗೆ ಆ ನನ್ನ ಎಳೆಯ ವಯಸ್ಸಿನಲ್ಲೇ, ಕೆ ಎಸ್ ನರಸಿಂಹಸ್ವಾಮಿ, ಬೇಂದ್ರೆ, ಅಡಿಗರಿಂದ ಹಿಡಿದು ಜಿ ಎಸ್ ಎಸ್, ಹೆಚ್ ಎಸ್ ವೆಂಕಟೇಶ್ ಮೂರ್ತಿ, ಬಿ ಆರ್ ಲಕ್ಷ್ಮಣರಾವ್ ವರೆಗೆ ಕವಿಗಳ ಪರಿಚಯ ಮಾಡಿಸಿದವರು ಸಿ ಅಶ್ವಥ್.

ಸಿ ಅಶ್ವಥ್ ಮತ್ತು ರಾಜ್ ಕುಮಾರ್ ಕನ್ನಡದ unique ಹಾಡುಗಾರರು ಮತ್ತು ಅವರದು ಯಾವ ಹಿಂದಿನ ಹಾಡುಗಾರರ ಅನುಕರಣೆಯಿರದ ಗಾಯನ. ಬರೀ ಸಂಗೀತವನ್ನೇ ತೆಗೆದುಕೊಂಡು ಅವರಿಬ್ಬರನ್ನೂ ಇಷ್ಟಪಡದ ಬಹಳ ಜನರನ್ನು ನೋಡಿದ್ದೇನೆ, ಕೆಲವು ಬರಹಗಳನ್ನೂ ಓದಿದ್ದೇನೆ. ಆದರೆ ಅವರೇನೂ ಕರ್ನಾಟಕೀ ಅಥವಾ ಹಿಂದುಸ್ಥಾನೀ ಶಾಸ್ತ್ರೀಯ ಹಾಡುಗಾರರಲ್ಲ, ಸಿ ಅಶ್ವಥ್ ಭಾವಗೀತಗಾಯಕ, ರಾಜ್ ಭಾವತುಂಬಿ ಹಾಡುವ ಸಿನಿಮಾ ಗಾಯಕ. ಕನ್ನಡ ಸುಗಮಸಂಗೀತ ಪಿ. ಕಾಳಿಂಗರಾವ್ ರಿಂದ ಶುರುವಾಗಿ, ಮೈಸೂರು ಅನಂತಸ್ವಾಮಿಯಲ್ಲಿ ಕೊನೆಯಾಗುತ್ತೇನೋ ಎಂದುಕೊಳ್ಳುವಾಗ, ಹೊಸ ಧ್ವನಿ, ಹೊಸ ರಾಗ, ಹೊಸ ಭಾವ ತುಂಬಿ ನಮ್ಮನ್ನು ಕನ್ನಡ ಕಾವ್ಯಲೋಕಕ್ಕೆ ತೆರೆದಿದ್ದು ಸಿ ಅಶ್ವಥ್.

ಹಾಗೆಂದು ನಾನು ಸಿ ಅಶ್ವಥ್ ರ ಎಲ್ಲ ಕ್ಯಾಸೆಟ್ ಗಳನ್ನು ಕೇಳಿದ್ದೇನೆ ಎಂದಾಗಲೀ, ಕೇಳಿದ ಎಲ್ಲ ಹಾಡುಗಳನ್ನು ಮೆಚ್ಚುತ್ತೇನೆ ಎಂದಾಗಲಿ, ಎಲ್ಲ ಶೈಲಿಗಳನ್ನೂ ಒಪ್ಪಿಕೊಳ್ಳುತ್ತೇನೆ ಎಂದಾಗಲೀ ಅಲ್ಲ. ನನ್ನದೂ ಸುಮಾರು ತಕರಾರುಗಳಿವೆ. ತಕರಾರಿಗಿಂತ ಮೊದಲು ನನಗೆ ಇಷ್ಟವಾದವುಗಳನ್ನು ಹೇಳುತ್ತೇನೆ.

ಶರೀಫರ ಮೊದಲೆರೆಡು ಕ್ಯಾಸೆಟ್ ಗಳಲ್ಲಿ ಜನಪದದೊಂದಿಗೆ ರಾಗಗಳ ಮಿಶ್ರಣ, ಅದರ ಜೊತೆ ಸಿ ಅಶ್ವಥ್ ಮತ್ತು ಶಿವಮೊಗ್ಗ ಸುಬ್ಬಣ್ಣರ ಹಾಡುಗಾರಿಕೆ ಆಗಿನ ಕಾಲದಲ್ಲಿ ನಿಂತನೀರಾಗಿದ್ದ ಭಾವಗೀತ ಪ್ರಪಂಚದಲ್ಲಿ ಹೊಸ ಅಲೆಗಳನ್ನೆಬ್ಬಿಸಿದವು. ಮುಂದೆ ‘ಸಂತ ಶಿಶುನಾಳ ಶರೀಫ’ ಚಲನಚಿತ್ರ ಬಂದಾಗ ಪುನಃ ಹೊಸ ಸಂಯೋಜನೆ ಮಾಡಿ ಮತ್ತೆ ಹಾಡಿದ ಕ್ಯಾಸೆಟ್ ಸಿ ಅಶ್ವಥ್ ಶರೀಫ ಸಾಹೇಬರಿಗೆ ಕೊಟ್ಟ ಶ್ರೇಷ್ಟ ಕಾಣಿಕೆ ಎನ್ನಬಹುದು. ‘ಅಳಬೇಡ ತಂಗಿ ಅಳಬೇಡ’, ಶಿವಮೊಗ್ಗ ಸುಬ್ಬಣ್ಣನವರ ಬಾಯಲ್ಲೇ ಕೇಳಬೇಕು. ‘ತರವಲ್ಲ ತಗೀ ನಿನ್ನ ತಂಬೂರಿ’, ‘ಸೋರುತಿಹುದು ಮನೆಯ ಮಾಳಿಗಿ’, ಸಿ ಅಶ್ವಥ್ ರ ಹಾಡುಗಾರಿಕೆಯಲ್ಲಿ ಪ್ರತಿ ಶಬ್ದದ ಅರ್ಥ ತುಂಬಿ ತುಳುಕುತ್ತದೆ. ಸಿನಿಮಾಗೆ ಹಾಡಿದ ‘हम तो देखा महम्मद..’, ಸಿ ಅಶ್ವಥ್ ಮಾತ್ರ ಹಾಡಲು ಸಾಧ್ಯ (ಬಹುಷಃ ಸುಖಬಿಂದರ್ ಸಿಂಗ್ ಹಾಡಬಹುದೇನೋ?). ಉತ್ತರ ಕರ್ನಾಟಕದ ಶರೀಫ ಸಾಹೇಬ ಸಮಗ್ರ ಕರ್ನಾಟಕದ ಸಂತ ಶಿಶುನಾಳ ಶರೀಫರನಾಗಿಸಿದ್ದು ನಮ್ಮ unique ಸಿ ಅಶ್ವಥ್.

ಕೆ ಎಸ್ ನರಸಿಂಹಸ್ವಾಮಿ, ‘ಕ್ಯಾಸೆಟ್ ಕವಿ’ಗಳು ಹುಟ್ಟುವ ಮೊದಲು, ಭಾವಗೀತಹಾಡುಗಾರರ ಅಚ್ಚುಮೆಚ್ಚಿನ ಕವಿ; ಅದಕ್ಕೆ ಸಿ ಅಶ್ವಥ್ ಏನೂ ಹೊರತಲ್ಲ. ಮೈಸೂರು ಅನಂತಸ್ವಾಮಿ ಹಾಡಿದ ‘ಹೆಂಡತಿಯೊಬ್ಬಳು ಮನೆಯೊಳಗಿದ್ದರೆ…’ ಹಾಡು ಕೇಳದ ಭಾವಗೀತಪ್ರೀಯನಿಲ್ಲ, ಆದರೆ ಮೈಸೂರು ಅನಂತಸ್ವಾಮಿ ಹೆಂಡತಿಯನ್ನು ಬಿಟ್ಟು ಮುಂದೆ ಹೋಗಲೇಯಿಲ್ಲ. ಸಿ ಅಶ್ವಥ್, ಕೆ ಎಸ್ ನ ರ ಕವನಸಂಕಲನಗಳಿಂದ ಭಾವಗೀತೆಗಳನ್ನು ಹೆಕ್ಕಿ ಹೆಕ್ಕಿ ಹಾಡಿದರು, ಹಾಡಿಸಿದರು. ಮುಂದೆ ‘ ಮೈಸೂರು ಮಲ್ಲಿಗೆ’ ಚಿತ್ರವಾದಾಗ ಮರುಸಂಯೋಜನೆ ಮಾಡಿ, ಎಸ್ ಪಿ ಬಾಲಸುಬ್ರಮಣ್ಯಂ ಧ್ವನಿಗೂಡಿಸಿದಾಗ, ಪ್ರತಿ ಕವನವೂ ಭಾವದುಂಬಿ ಹರಿಯಿತು. ‘ಬಳಿಗಾರ ಚನ್ನಯ್ಯ’, ‘ಒಂದಿರುಳು ಕನಸಿನಲಿ’, ‘ಕತ್ತಲೆ ತುಂಬಿದ’, ‘ ನಿನ್ನ ಪ್ರೇಮದ ಪರಿಯ’ ಚಿತ್ರದ ಪ್ರತೀ ಹಾಡೂ ಭಾವವಾಗಿ ಹಾರಿತು.

ಬೇಂದ್ರೆಯನ್ನು ಮೆಚ್ಚದ ಕಾವ್ಯರಸಿಕರುಂಟೇ? ಬೇಂದ್ರೆ ತಮ್ಮ ಹಾಡುಗಳಿಗೆ ತಾವೇ ರಾಗ ಹಾಕುತ್ತಿದ್ದರು ಅಥವಾ ಸಿದ್ಧ ಧಾಟಿಯಲ್ಲಿ ಬರೆಯುತ್ತಿದ್ದರು ಎಂದು ಕೇಳಿದ್ದೇನೆ, ಆದರೆ ಆ ರಾಗಗಳನ್ನು ನಾನು ಕೇಳಿಲ್ಲ. ಧಾರವಾಡದ ಆಕಾಶವಾಣಿಯಲ್ಲಿ, ಕ್ಯಾಸೆಟ್ ಯುಗ ಶುರುವಾಗುವ ಮೊದಲು, ಬೇಂದ್ರೆ ಹಾಡುಗಳಿಗೇನೂ ಕಡಿಮೆಯಿರಲಿಲ್ಲ. ಸಿ ಅಶ್ವಥ್ ರ ‘ ಶ್ರಾವಣ’ದಲ್ಲಿ ‘ಬದುಕು ಮಾಯೆಯ ಮಾಟ’, ‘ಕುರುಡು ಕಾಂಚಾಣ’, ‘ ಘಮ ಘಮಡಸತಾವ ಮಲ್ಲಿಗೆ’ ನನಗೆ ಇಷ್ಟವಾದ compositions.

ಮೈಸೂರು ಅನಂತಸ್ವಾಮಿ, ಅಡಿಗರ ನವೋದಯಕಾಲದ ‘ಯಾವ ಮೋಹನ ಮುರಲಿ ಕರೆಯಿತು’ ಶ್ರುತಿಮಾಡಿದ್ದಾರೆ; ಆದರೆ ಆ ಕವನದ ‘ಓಲಿದ ಮಿದುವೆದೆ..’ ಯ ಎರಡು ಸಾಲುಗಳನ್ನು ಸೆನ್ಸಾರ್ ಮಾಡಿ, ಕವನಕ್ಕೇ ಮೋಸ ಮಾಡಿದ್ದಾರೆ. ಮತ್ತು ಅಡಿಗರ ನವ್ಯ ಕಾವ್ಯವನ್ನು ಹಾಡುವ ಗೋಜಿಗೆ ಹೋಗಲಿಲ್ಲ (ಕವನವನ್ನು ಹಾಡಿ ಅರ್ಥೈಸಬಹುದೇ? – ಚರ್ಚೆಯ ವಿಷಯ). ಸಿ ಅಶ್ಚಥ್ ಅಡಿಗರ ಅರೆನವ್ಯ ಕಾವ್ಯವನ್ನೂ ಹಾಡಿಸಿದರು. ಅಡಿಗರ ‘ಅಮೃತವಾಹಿನಿ’ ರಾಜ್ ಧ್ವನಿಯಲ್ಲಿ ಕೇಳುತ್ತಿದ್ದರೆ ಮೈ ಝುಂಯೆನ್ನಬೇಕು. ‘ ತಳದೊಳೆಲ್ಲೊ ತಳುವಿ’ ಎಂಬ ಸಾಲನ್ನು ರಾಜ್ ಬಾಯಲ್ಲೇ ಕೇಳಬೇಕು. ಈ ಕವನದ composition ಸಿ ಅಶ್ವಥ್ ರ ಸೃಜನಶೀಲತೆಗೆ ಸಾಕ್ಷಿ.

ಇನ್ನು ಚೆನ್ನವೀರ ಕಣವಿ, ಜಿ ಎಸ್ ಶಿವರುದ್ರಪ್ಪ ಮೊದಲಾದ ಹಿರಿಯರ ಕವನಗಳೂ ತುಂಬ ಚೆನ್ನಾಗಿ ಮೂಡಿಬಂದಿವೆ. ‘ಕಾಣದಾ ಕಡಲಿಗೆ ಹಂಬಲಿಸಿದೇ ಮನ’ ಮತ್ತು ‘ಸ್ತ್ರೀ ಎಂದರೆ ಅಷ್ಟೇ ಸಾಕೆ’ ಯ ಸ್ವರಸಂಯೋಜನೆ ಆ ಕವಿತೆಗಳ ಅರ್ಥವನ್ನು ಪದರು ಪದರಾಗಿ ಬಿಡಿಸುತ್ತದೆ.

ಮಂಕುತಿಮ್ಮನ ಕಗ್ಗ ಇತ್ತೀಚಿಗೆ ಪುರಾಣ-ಪ್ರವಚನವಾಗಿದೆ. ಸಿ ಅಶ್ವಥ್ ಅದಕ್ಕೆ ಹಾಡಿನ ಅಲಂಕಾರವನ್ನೊ ಮಾಡುವ ಪ್ರಯತ್ನ ಮಾಡಿದ್ದಾರೆ ಮಾತ್ತು ರಾಜ್ ಭಾವತುಂಬಿದ್ದಾರೆ. ‘ಶ್ರೀವಿಷ್ಣುವಿಶ್ವಾದಿ ಮೂಲ’ದಿಂದ ಆರಂಭಿಸಿ ‘ಶರಣುವೊಗು ಜೀವನ್ ರಹಸ್ಯದಲಿ’ ವರೆಗು, ಸಿ ಅಶ್ವಥ್ ವಿಭಿನ್ನ ಪ್ರಯತ್ನ ಮಾಡಿದ್ದಾರೆ.

ಬಿ ಆರ್ ಲಕ್ಷ್ಮಣರಾವ್, ನಾವು ಪಡ್ಡೆಹುಡುಗರ ವಯಸ್ಸಿರುವಾಗ, ಮೂಡಿಬಂದ ಯುವಕವಿ. ‘ಜಾಲಿ ಬಾರಿನಲ್ಲಿ’, ‘ನಾ ಚಿಕ್ಕವನಾಗಿದ್ದಾಗ’, ‘ಬಿಡಲಾರೆ ನಾ ಸಿಗರೇಟು’, ‘ಬಣ್ಣಿಸಲೇ ಹೆಣ್ಣೇ’ ಸಿ ಅಶ್ವಥ್ ರ ಇನ್ನೊಂದು ಮಗ್ಗುಲನ್ನು ಪರಿಚಯಿಸುತ್ತವೆ. ಕವನಗಳ ಬಾವಗಳಿಗೆ, ಬಾಷೆಗೆ ತಕ್ಕಂತೆ ಸ್ವರಸಂಯೋಜನೆ ಅಶ್ವಥ್ ರಷ್ಟು ಇನ್ನಾವ ಭಾವಗೀತ ಸಂಯೋಜಕನೂ ಮಾಡಿಲ್ಲ.

ಸಿ ಅಶ್ವಥ್ ಕನ್ನಡಭಾವಲೋಕದಲ್ಲಿ ಹೊಸ ಅಲೆಯೆಬ್ಬಿಸಲು ಕಾರಣವಾಗಿದ್ದು ಅವರ ರಂಗಭೂಮಿ ಸಂಗೀತ. ನಾನು ಅವರ ಸಂಗೀತ ನಿರ್ದೇಶನದ ಒಂದೇ ಒಂದು ನಾಟಕವನ್ನೂ ನೋಡಿಲ್ಲ. ಆದರೆ ‘ನಾಗಮಂಡಲ’ ದಲ್ಲಿ ಗೋಪಾಲ ವಾಜಪೇಯಿಯ ಹುಚ್ಚು ಹಿಡಿಸುವ ಸಾಹಿತ್ಯ ಮತ್ತು ಅಶ್ವಥ್ ರ ಜನಪದದಿಂದ ಸ್ಫೂರ್ತಿ ಪಡೆದ ಮತ್ತು ಹಿಡಿಸುವ ಸಂಗೀತವಿದೆ.

ಇಷ್ಟೆಲ್ಲವಾದರೂ ಸಿ ಅಶ್ವಥ್, ಕನ್ನಡ ಚಿತ್ರರಂದ untapped ಸಂಗೀತ ನಿರ್ದೇಶಕರಾಗಿ ಉಳಿದುಹೋಗಿದ್ದು ಕನ್ನಡ ಚಿತ್ರರಂಗದ ವಿಪರ್ಯಾಸಗಳಲ್ಲಿ ಒಂದು. ಬರೀ art ಚಿತ್ರಗಳಿಗೆ ಮಾತ್ರ ಸೀಮಿತಗೊಳಿಸಿದ ನಮ್ಮ ಚಿತ್ರ ನಿರ್ಮಾಪಕರು ‘ನಮ್ಮೂರ ಮಂದಾರ ಹೂವೇ’ ಹಾಡನ್ನು ಕೇಳಿದ್ದಾರೆಯೇ ಎಂದು ಸಂಶಯ ಬರುತ್ತದೆ. ‘ ನೇಸರ ನೋಡು’, ಕಾಕನಕೋಟೆಯ ಹಾಡು, ಸಲೀಲ್ ಚೌಧರಿ ಸಂಗೀತವನ್ನು ನೆನಪಿಸುತ್ತದೆ.

ನನ್ನ ಪ್ರಕಾರ ಸಿ ಅಶ್ವಥ್ ಸ್ವರಸಂಯೋಜಿತ ಹಾಡುಗಳನ್ನು ಸಿ ಅಶ್ವಥ್ ಬಾಯಿಂದ ಕೇಳಿದರೇ ಇನ್ನೂ ಹೆಚ್ಚು ಸೊಗಸು. ರಾಜ್ ಮತ್ತು ಎಸ್ಪಿ ಬಾಲಸುಬ್ರಮಣ್ಯಂ ಅದಕ್ಕೆ ಅಪವಾದವೇನೋ? ‘ನಮ್ಮೂರ ಮಂದಾರ ಹೂವೇ’ ಎಸ್ ಪಿ ಬಿ ಯನ್ನಲ್ಲದೇ ಬೇರೆಯವರನ್ನು ಊಹಿಸಿ ನೋಡಿ; ‘ಹೊತ್ತಿತೋ ಹೊತ್ತಿತು ಕನ್ನಡದ ದೀಪ’ ರಾಜ್ ಹೊರತು ಇನ್ನೊಬ್ಬರು ಆ ಭಾವತುಂಬಿ ಹಾಡಿಯಾರೇ? ಶಿವಮೊಗ್ಗ ಸುಬ್ಬಣ್ಣ, ಯಶವಂತ್ ಹಳಬಂಡಿ, ರತ್ನಮಾಲಾ ಪ್ರಕಾಶ್, ಸಂಗೀತಾ ಕಟ್ಟಿ ಕೂಡ ನ್ಯಾಯ ಒದಗಿಸಿದ್ದಾರೆ. ಉಳಿದ ಹಾಡುಗಾರರು ಸಿ ಅಶ್ವಥ್ ಸಂಗೀತಕ್ಕೆ ಭಾವತುಂಬಿ ಹಾಡನ್ನು ಯಶಸ್ವಿಯಾಗಿಸುವಲ್ಲಿ ವಿಫಲರಾಗಿದ್ದಾರೆ.

ಸಿ ಅಶ್ವಥ್ ಹಾಡುಗಾರನಾಗಿ ಬಹಳ ಜನರಿಗೆ ಇಷ್ಟವಾಗದೇ ಇರಬಹುದು, ಅದರಲ್ಲೂ ಹಾಡುಗಳಲ್ಲಿರುವ ಸಾಹಿತ್ಯ ಅರ್ಥವಾಗದವರಿಗೆ ಸಿ ಅಶ್ವಥ್ ಕೂಗಿದಂತೆ ಕೇಳಿದರೂ ಅಚ್ಚರಿಪಡಬೇಕಿಲ್ಲ. ಸಾಹಿತ್ಯದ ರುಚಿಯಿರುವವರಿಗೆ ಮಾತ್ರ ಸಿ ಅಶ್ವಥ್ ಹಾಗೇಕೆ ಹಾಡುತ್ತಾರೆಯೆಂದು ಅರ್ಥವಾಗುತ್ತದೆ ಮತ್ತು ಪ್ರತಿ ಶಬ್ದಗಳ, ಸಾಲುಗಳ ಹೊಸ ಅರ್ಥಗಳನ್ನು ಹುಡುಕಲು ಅವರ ಹಾಡುಗಾರಿಕೆ ನೆರವಾಗುತ್ತದೆ.

ಆದರೂ ಅವರು ಅಷ್ಟು ವರ್ಷದಿಂದ ಹಾಡುತ್ತಿದ್ದರೂ ಉತ್ತರಕರ್ನಾಟಕದ ‘ಅ’ ಅನ್ನು ‘ಆ’ ಎಂದು ಹೇಳುವುದನ್ನು ಬಿಡಲಿಲ್ಲ ಎನ್ನುವುದು ಆಶ್ಚರ್ಯ (ಉದಾ: ಬೇಂದ್ರೆಯವರ ‘ಹೊಸದ್ವೀಪಗಳಿಗೆ ಹೊರಟಾನs ಬನ್ನಿ’, ಅಶ್ವಥ್ ರ ಬಾಯಲ್ಲಿ ‘ಹೊಸದ್ವೀಪಗಳಿಗೆ ಹೊರಟಾನಾs ಬನ್ನಿ’ ಆಗಿತ್ತದೆ). ಇದನ್ನು ಯಾಕೆ ಯಾರೂ ಅವರಿಗೆ ಹೇಳಲಿಲ್ಲವೋ ನಾ ಕಾಣೆ.

ಅಶ್ವಥ್ ಸುಗಮಸಂಗೀತದ ಬಗ್ಗೆ ಪುಸ್ತಕವನ್ನೂ ಬರೆದಿದ್ದಾರೆ. ಪುಸ್ತಕ ಅವರ ಸಂಗೀತದಷ್ಟು ಇಷ್ಟವಾಗುವಿದಿಲ್ಲವಾದರೂ ಕನ್ನಡ ಸುಗಮಸಂಗೀತದ ಬಗ್ಗೆ ಅವರ ನಿಲುವನ್ನು ತೋರಿಸುತ್ತದೆ. ಆ ಪುಸ್ತಕದಲ್ಲಿ ಸುಗಮಸಂಗೀತದಲ್ಲಿ interlude ಬಗ್ಗೆ ಸಿ ಅಶ್ವಥ್ ನಿಲುವು ಏನೇ ಇರಬಹುದು, ಆದರೆ ಚಲನಚಿತ್ರ ಸಂಗೀತದಂತೆ ಸುಗಮಸಂಗೀತದಲ್ಲಾಗಲೀ, ಭಕ್ತಿಗೀತೆಗಳಲ್ಲಾಗಲೀ ಈ interlude ಅದೇಕೆ ಬರುತ್ತದೋ ನನಗೆ ಅರ್ಥವಾಗುವುದಿಲ್ಲ. ಸಿ ಅಶ್ವಥ್ ಪ್ರಕಾರ interlude ಹಾಡಿನ ಅರ್ಥವನ್ನು ಹೆಚ್ಚಿಸುತ್ತದೆ, ಆದರೆ ನನ್ನ ಪ್ರಕಾರ ಅದು ಹಾಡನ್ನು ಕೊಲ್ಲುತ್ತದೆ. Interlude ಹಾಡುಗಾರನಿಗೆ ಉಸಿರುತೆಗೆದುಕೊಳ್ಳಲು ಅವಕಾಶ ಮಾಡಿಕೊಡಬೇಕೇ ಹೊರತು, ಕೇಳುಗಾರನಿಗೆ ಹಾಡಿನ continuity ನೇ ಬಿಟ್ಟು ಹೋಗುವಂತಿರಬಾರದು. ಏಷ್ಟೊಂದು ಸಲ interludeನ ಸಮಯ ಹಾಡುಗಾರನ ಸಮಯಕ್ಕಿಂತ ಹೆಚ್ಚಾಗಿರುತ್ತದೆ. ಚಿತ್ರಗೀತೆಯಲ್ಲಾದರೆ interlude ಅನ್ನು ಕುಣಿತಕ್ಕೋ ಏನಕ್ಕೋ ಉಪಯೋಗಿಸಿಕೊಳ್ಳುತ್ತಾರೆ. ಕೆಲವು ಸಂಗೀತ ನಿರ್ದೇಶಕರು interludeಅನ್ನು ತಮ್ಮ ಪ್ರತಿಭೆ ಎಂದುಕೊಳ್ಳುತ್ತಾರೆ. ಸುಗಮಸಂಗೀತದ ಇನ್ನೊಂದು ಸಮಸ್ಯೆ ಹಾಡನ್ನು ೪-೬ ನಿಮಿಷ ಇರಲೇಬೇಕೆಂಬ ಅಲಿಖಿತ ನಿಮಯ; ಅದಕ್ಕಾಗಿ interludeಅನ್ನು ಹಿಗ್ಗಿಸುತ್ತಾರೆ ಅಥವಾ ಕವನದ ಕೆಲ ಸಾಲುಗಳನ್ನು ತಿನ್ನುತ್ತಾರೆ. ನನಗೆ ಇದೇಕೆ ಎಂದೇ ಅರ್ಥವಾಗಿಲ್ಲ.

ದೇವಗಿರಿ ಶಂಕರರಾವ್ ಜೋಷಿಯವರಲ್ಲಿ ಹಿಂದುಸ್ತಾನಿ ಸಂಗೀತ ಕಲಿತು, ರಂಗಭೂಮಿ ಸಂಗೀತದಲ್ಲಿ ಪಳಗಿ, ಜನಪದ ಸಂಗೀತ ಬೆರೆಸಿ ಕನ್ನಡ ಕಾವ್ಯಲೋಕವನ್ನು ಜನಸಾಮಾನ್ಯರಿಗೆ ತೋರಿಸಿದ ಸಿ ಅಶ್ವಥ್ ಕನ್ನಡ ಕಾವ್ಯ-ಸಂಗೀತ ಲೋಕದ ರಾಯಭಾರಿ. ಅಶ್ವಥ್ ಸ್ವರಸಂಯೋಜಕ, ಹಾಡುಗಾರರಷ್ಟೇ ಅಲ್ಲ, he was a great entertainer. ಬೆಂಗಳೂರು ಅರಮನೆ ಆವರಣದಲ್ಲಿ ನಡೆದ ‘ಕನ್ನಡವೇ ಸತ್ಯ’ ಕಾರ್ಯಕ್ರಮಕ್ಕೆ ನೆರೆದ ಒಂದು ಲಕ್ಷ ಜನರೇ ನಿದರ್ಶನ.

ಸಿ ಅಶ್ವಥ್ ಇಲ್ಲದ ಕನ್ನಡ ಸುಗಮಸಂಗೀತ ಇನ್ನೂ ಮುಂದುವರೆದೀತೇ? ಹೇಳುವುದು ಕಷ್ಟ.