ಅಮಿತ ರವಿಕಿರಣ್ ಮತ್ತು ಅನಿತಾ ಹೆಗಡೆ ಅವರ ಕವನಗಳು 

ಪಯಣ

ಚಿತ್ರ -ಮೀರಾ ವಿನಯ್
ಲೇಖಕರು:ಅಮಿತಾ ರವಿಕಿರಣ್

ಅಮಿತಾ ರವಿಕಿರಣ್ ಅವರು ಉತ್ತರ ಐರ್ಲಂಡಿನಲ್ಲಿ ವಾಸವಾಗಿದ್ದಾರೆ. ಇವರ ಆಸಕ್ತಿಗಳು ಒಂದೆರಡಲ್ಲ. ಅದ್ಭುತ ಹಾಡುಗಾರ್ತಿ, ಸಂಗೀತದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ನಮ್ಮ `ಅನಿವಾಸಿ` ಹಾಡಿನ ಸಿಡಿಗೆ ಧ್ವನಿಯಾಗಿದ್ದಾರೆ. ಫೋಟೋಗ್ರಾಫಿ ಇವರ ಇನ್ನೊಂದು ಹುಚ್ಚು. ಅದಲ್ಲದೇ ಚಂದದ ಕವನಗಳನ್ನು ಪೋಣಿಸುತ್ತಾರೆ. ಆಗಾಗ ಪ್ರಬಂಧ ಬರಹಗಳನ್ನು ಬರೆದು ಪ್ರಕಟಿಸುತ್ತಾರೆ. 

ಕಾಯುವುದಿಲ್ಲ ಸಮಯ
ಕಾಯುತ್ತೇನೆ ನಾನು,

ಬಿಳ್ಕೊಡುವ ಮುನ್ನವೇ
ಮತ್ತೆ ಸಿಗುವ ಕಾತರ , ಆತುರ

ನಾಲ್ಕು ಗಾಲಿಗಳು ಇನ್ನೊಂದೂ ಸುತ್ತು
ತಿರುಗಿಲ್ಲ,
ನಾಲ್ಕು ಯುಗಕ್ಕಿಂತ ದೀರ್ಘ
ಈ ಚಣಗಳು

ನಿನ್ನ ಕಣ್ಣನ್ನು ನೋಡಬೇಕೆಂದೇ ಹಣಕಿದೆ
ಹಿಂದಿನ ಗಾಜಿಗೆಲ್ಲ ಮಂಜು
ನಿನ್ನ ಕಣ್ಣೀರ ಊಗಿಯೇ ಇರಬೇಕು,

ಸರಿ ಹೊರಟು ಬಿಡು,
ಮತ್ತೆ ನಿಲ್ಲಬೇಡ,
ಈಗ ನೀ ಹೋದರೆ ತಾನೇ ಮತ್ತೆ ನಾವು ಸಿಗುವ
ಲೆಕ್ಕ ಶುರುವಾಗುವುದು,

ಮತ್ತೆ ಹಾಗೆ ಸಿಗೋಣ ,
ಅಪರಿಚಿತರಂತೆ,
ಅದ್ಯಾವುದೋ ಗೊತ್ತಿರದ ಓಣಿಯ ತಿರುವಿನಲ್ಲಿ.

ಮತ್ತೆ ನಗೋಣ , ಕೈ ಕೈ ಹಿಡಿದು
ಕಳೆದು ಹೋಗೋಣ,
ಮತ್ತೊಮ್ಮೆ ನೀ ಹೊರಟು ನಿಲ್ಲುವ ಮುನ್ನ,
ಈ ಬಾರಿ ಉಳಿದು ಹೋದ ಮಾತು, ಕಸಿವಿಸಿ ಕನವರಿಗೆ
ಹಳದಿ ಹಾಳೆಯಲ್ಲಿ ಬರೆದು , ಒಣಗಿದ ಗುಲ್ಮೊಹರ್ ಅಂಟಿಸಿ
ಸಂಚಿಯಲ್ಲಿ ತುಂಬಿ ಕೊಡುವೆ,

ಈಗ ಹೊರಟು ಬಿಡು,
ಮತ್ತೆ ಸಿಗುವ.

ಪರಿವರ್ತನೆ

ಲೇಖಕರು:ಅನಿತಾ ಹೆಗಡೆ

ಅನಿತಾ ಹೆಗಡೆ , ಮೂಲತಹ  ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನವರು. ಕಳೆದ ೧೨ ವರ್ಷಗಳಿಂದ ಹ್ಯಾರೊದಲ್ಲಿ ವಾಸವಾಗಿದ್ದಾರೆ. ಅವರಿಗೆ ಚಿಕ್ಕಂದಿನಿಂದಲೂ  ಸಾಹಿತ್ಯವನ್ನು ಓದುವದು ಹಾಗೂ ಸಾಧ್ಯವಾದಾಗ ಚಿಕ್ಕ ಪುಟ್ಟ ಕವನ ಬರೆಯುವ ಹವ್ಯಾಸ ಇದೆ. ಇವರು ಮೊದಲ ಬಾರಿಗೆ  ಅನಿವಾಸಿಯಲ್ಲಿ ಬರೆಯುತ್ತಿದ್ದಾರೆ. ಇವರ ಕವನವನ್ನು ಓದಿ  ಮತ್ತು ಪ್ರೋತ್ಸಾಹಿಸಿ. 

ಬಿಸಿಲು ಕಿಚ್ಚೆದ್ದು ಬೆಂದು ಉಬ್ಬೆ ಬೊಬ್ಬೆ
ಬಯಸಿದರೆಲ್ಲಿ ಉದಕವ, ಸ್ವಯಂ ಮಾಡಿದ ಮರುಭೂಮಿಯಲಿ
ಕುರುಡು ಕಾಂಚಾಣ, ನೋಟು ಎಣೆಸೆಣೆಸಿ ಬಿಸಾಕಿ
ಬಂದಿದ್ದು ಫ್ಯಾಷನ್ ಸೂಟು ಬೂಟು
ಕೋಟು ಗೂಟಕೆ, ಹ್ಯಾಂಗರಿಗೆಲ್ಲಿ ಜಾಗ?!
ನೆನಪಾಗಿದ್ದು ಕಾಟನ್ ಕುರ್ತಾ ಸ್ವಾಮೀ!

ಇಳಿದಿತ್ತು ಬಣ್ಣದ ಲಿಪ್ಸ್ಟಿಕು, ನೆತ್ತಿಯ ಮೇಲೆ ಸೂರ್ಯ
ಚಪ್ಪಲಿಗೆ ಹೈ ಹೀಲ್ಸು, ಎಳೆಯುತ್ತ ಅಳೆಯುತ್ತ ದಾರಿಯ
ನಡುಬೀದಿಯಲ್ಲೆಲ್ಲಿ ಸಿಗಲಿ ಎಸಿ, ಗಿರಿಗಿಟಿ ಪಂಖ?
ಆಶಿಸಿದೆ ನೆರಳ, ಸ್ವಯಂ ಮಾಡಿದ ಮರುಭೂಮಿಯಲಿ
ನೆನಪಾಗಿದ್ದು ಕಾಟನ್ ಸೀರೆ ಸ್ವಾಮೀ!

ಕಾರು ಕಂಪೂಟರ್, ಬಗಲಲ್ಲಿ ಲ್ಯಾಪ್ಟೊಪ್
ಉಟ್ಟಿದ್ದು ಟೆರಿಕಾಟು, ಕೈಯಲ್ಲಿ ವಾಟ್ಸಾಪ್
ಊರು ತುಂಬಾ ಪ್ಲಾಸ್ಟೀಕು, ಸಿಮೆಂಟಿನ ಪ್ಯಾಕು
ತುಂಬಿದ ಟ್ರಾಪಿಕ್, ಆಶಿಸಿದರೆಲ್ಲಿ ಹಸಿರು, ಆಕ್ಸಿಜನ್ ಪ್ಯಾಕು?
ಸಾಕಾಗದೆ ನೆವ ಜನರೇಶನ್ ಗ್ಯಾಪು! ಇದು ಎಂಥಾ ಲೈಪು?
ನೆನಪಾಗಿದ್ದು ಕಾಟನ್ ಸೀರೆ, ಕಾಟನ್ ಕುರ್ತಾ ಸ್ವಾಮೀ!

ಕಿಚ್ಚೆದ್ದು ಕೊಚ್ಚೆದ್ದು ರಚ್ಚೆದ್ದು ಮನತುಂಬಾ ರಣಹದ್ದು
ತುಂಬಿದ್ದು ಜೇಬು, ಮನೆತುಂಬಾ ಮದ್ದು!!
ಬಿತ್ತು ಏಟು ಭೂತಾಯಿಗೆ, ಕೊರತೆಯಿಲ್ಲ ಮಾತ್ರ ಕೊಡಲಿಗೆ
ಎಲೇ ಮನುಜಾ, ಸಾಕೀ ಘರ್ಷಣೆ ಸಂಘರ್ಷಣೆ
ಆಗಲಿ ಆತ್ಮ ಪರಿವರ್ತನೆ, ಭೂತಾಯಿಗೆ ಸಮರ್ಪಣೆ
ಕಾಯುವದೇತಕೆ? ಅನಿವಾರ್ಯ ಜೀವನ ಶೈಲಿಯ ಬದಲಾವಣೆ