12 Years a Slave: ನೋಡಲೇ ಬೇಕಾದ ಚಿತ್ರ – ಉಮಾ ವೆಂಕಟೇಶ್

Theatrical release poster – Wiki

ಈ ವರ್ಷ ಬಿಡುಗಡೆಯಾದ ಹಾಲಿವುಡ್ಡಿನ ಉತ್ತಮ ಚಿತ್ರಗಳಲ್ಲಿ ಒಂದಾದ 12 Years a slave  ಚಿತ್ರ, ಬಿಡುಗಡೆಗೆ ಮುಂಚೆಯೇ ತನ್ನ ಕಥಾವಸ್ತು ಮತ್ತು ಉತ್ತಮ ತಾರಾಗಣದಿಂದಾಗಿ ಬಹಳ ಪ್ರಚಾರ ಪಡೆದಿತ್ತು. ಪ್ರತಿಷ್ಟಿತ ಆಸ್ಕರ್ ಪ್ರಶಸ್ತಿಗಳಿಗೆ ಹಲವಾರು ವಿಭಾಗಗಳಲ್ಲಿ  ನಾಮ-ನಿರ್ದೇಶನ  ಗೊಂಡಿರುವುದು  ಈ ಚಿತ್ರದ ಗುಣಮಟ್ಟವನ್ನು ತೋರಿಸುತ್ತದೆ. ವ್ಯಕ್ತಿಯೊಬ್ಬನ ನಿಜಜೀವನದ ವೃತ್ತಾಂತವನ್ನು ಅವನ ಮಾತುಗಳಲ್ಲೇ ಹೇಳಿ ಬರೆದ ಪುಸ್ತಕದ ಮೇಲೆ ಆಧಾರಿತವಾಗಿ ತಯಾರಿಸಿದ ಈ ಚಿತ್ರವನ್ನು ಒಮ್ಮೆ ಎಲ್ಲರೂ ನೋಡಲೇ ಬೇಕು.

ಗುಲಾಮಿ ಪದ್ಧತಿ, ಮಾನವನ ಚರಿತ್ರೆಯಲ್ಲಿ ಒಂದು ಕಪ್ಪು ಚುಕ್ಕೆಯಂತಿದ್ದು, ಮಾನವ ಜಾತಿಗೇ ಕಳಂಕ ತರುವ ಮತ್ತು ನಾಚಿಕೆಯಿಂದ ತಲೆತಗ್ಗಿಸುವಂತಿರುವ ಪ್ರಸಂಗ. ಇತ್ತೀಚಿನವರೆಗೂ, ಆಫ಼್ರಿಕಾದ ಕಪ್ಪು ವರ್ಣೀಯರನ್ನು, ದಿನ ನಿತ್ಯದ ಸಾಮಾನಿನಂತೆ ಕೊಂಡು, ಗುಲಾಮರನ್ನಾಗಿಸಿ ಅವರನ್ನು ದೇಶದಿಂದ ದೇಶಕ್ಕೆ, ಖಂಡದಿಂದ ಖಂಡಕ್ಕೆ ಸಾಗಿಸಿ ಮಾರುತ್ತಿದ್ದ ಈ ಹೇಯ ಕೃತ್ಯವನ್ನು ಎಷ್ಟು ಕಟುವಾದ ಮಾತುಗಳಲ್ಲಿ ಖಂಡಿಸಿದರೂ ಅದು ಕಡಿಮೆಯೇ. ಅವರ ಮೇಲೆ ನಡೆಸುತ್ತಿದ್ದ ಅಮಾನುಷ ಕೃತ್ಯಗಳಂತೂ ಮಾತುಗಳಲ್ಲಿ ವರ್ಣಿಸಲು ಅಸಾಧ್ಯ. ಇಂತಹುದೇ ಕೃತ್ಯದ ಹಿನ್ನೆಲೆಯಲ್ಲಿ ತಯಾರಿಸಿದ ಈ ಚಿತ್ರದ ನಾಯಕ ನ್ಯೂಯಾರ್ಕಿನಲ್ಲಿ ಸ್ವತಂತ್ರವಾಗಿ ಹುಟ್ಟಿ ಜೀವಿಸುತ್ತಿದ್ದ ಮರಗೆಲಸಗಾರ ಮತ್ತು ಪ್ರತಿಭಾವಂತ ಪಿಟೀಲುವಾದಕ ಸಾಲೋಮನ್ ನಾರ್ತಾಪ್. ತನ್ನ ಹೆಂಡತಿ, ಮಗ ಮತ್ತು ಮಗಳೊಡನೆ ಸುಖವಾಗಿ ಜೀವಿಸುತ್ತಿದ್ದ ಸಾಲೋಮನ್, ಒಮ್ಮೆ ನ್ಯೂಯಾರ್ಕಿನ ಉದ್ಯಾನವನದಲ್ಲಿ ಭೇಟಿಯಾದ ಇಬ್ಬರು ಬಿಳಿಯರ ಮಾತುಗಳಲ್ಲಿ ವಿಶ್ವಾಸವಿಟ್ಟು, ಸಂಗೀತದ ಕಾರ್ಯಕ್ರಮ ನಡೆಸುವ ಉದ್ದೇಶದೊಡನೆ ಅವರೊಂದಿಗೆ ವಾಶಿಂಗಟನ್ ನಗರಕ್ಕೆ ಹೋದಾಗ, ಅಲ್ಲಿ ಅವನ ಪಾನೀಯಕ್ಕೆ ಮತ್ತು ಬರಿಸುವ ಮಾದಕ ದ್ರವ್ಯವನ್ನು ಸೇರಿಸಿ ಅವನನ್ನು ಪ್ರಜ್ಞಾಹೀನನ್ನಾಗಿಸುತ್ತಾರೆ. ಅವನಿಗೆ ಎಚ್ಚರವಾದಾಗ, ಕಬ್ಬಿಣದ ಸರಪಳಿಗಳಿಂದ ಬಂಧಿಸಲ್ಪಟ್ಟ ಸಾಲೋಮನ್ ಒಬ್ಬ ವಿಖ್ಯಾತ ಗುಲಾಮ ವ್ಯಾಪಾರಿಯಿಂದ ಖರೀದಿಸಲ್ಪಟ್ಟಿರುತ್ತಾನೆ. ಅವನನ್ನು ಪ್ಲಾಟ್ ಎಂಬ ಹೊಸ ಹೆಸರಿನಿಂದ ಕರೆದು, ಲೂಸಿಯಾನಾ ರಾಜ್ಯದಲ್ಲಿನ ಹತ್ತಿ, ಕಬ್ಬು ಮತ್ತಿತರ ಬೆಳೆಗಳ ತೋಟಗಳಲ್ಲಿ ಕೆಲಸಕ್ಕೆ ಹಾಕಿಕೊಳ್ಳುತ್ತಾರೆ. ತನ್ನ ವ್ಯಕ್ತಿ-ಸ್ವಾತಂತ್ರ, ನಿಜವಾದ ಹೆಸರು ಮತ್ತು ತನ್ನ ಅಸ್ತಿತ್ವವನ್ನೇ ಕಳೆದುಕೊಂಡು ಗುಲಾಮನಾಗಿ ೧೨ ವರ್ಷಗಳ ಕಾಲ ಅನುಭವಿಸಿದ ಅವನ ಜೀವನದ ಕರಾಳ ದಿನಗಳ ಚಿತ್ರಣ ಬಹಳ ಹೃದಯಸ್ಪರ್ಶಿಯಾಗಿದೆ.

ತನ್ನ ಈ ಗುಲಾಮ ವೃತ್ತಿಯ ಜೀವನದಲ್ಲಿ, ಸಾಲೋಮನ್ (ಪ್ಲಾಟ್) ತನ್ನೊಡನೆ ಇದ್ದ ಇತರ ಕಪ್ಪುವರ್ಣದ ಜನರ ಮೇಲೆ ನಡೆಯುತ್ತಿದ್ದ ಶೋಷಣೆಯನ್ನು ನೋಡಿ, ಒಂದೆರಡು ಬಾರಿ ದ್ವನಿಯೆತ್ತಿದಾಗ ಆದ ಪರಿಣಾಮ ಅವನನ್ನು ಪೂರ್ಣವಾಗಿ ಮೂಕನನ್ನಾಗಿಸುತ್ತದೆ. ಅವನ ಜೊತೆಯಲ್ಲಿದ್ದ ಮತ್ತೊಬ್ಬ ತರುಣಿ ಪಾಟ್ಸಿಯ ಮೇಲೆ ಅವ್ಯಾಹತವಾಗಿ ತೋಟದ ಮಾಲೀಕ ನಡೆಸುತ್ತಿದ್ದ ಅತ್ಯಾಚಾರವನ್ನು ಕಂಡು, ಅವನು ಪಡುವ ವ್ಯಥೆ ಪ್ರೇಕ್ಷಕರ ಕಣ್ಣುಗಳನ್ನು ಅನೇಕ ಬಾರಿ ತೇವಗೊಳಿಸುತ್ತದೆ. ಈ ಅತ್ಯಾಚಾರವನ್ನು ತಡೆಯಲಾಗದೆ ಒಮ್ಮೆ ಆಕೆ ಪ್ಲಾಟನನ್ನು ತನ್ನ ಆತ್ಮಹತ್ಯೆಗೆ ಸಹಾಯ ಮಾಡಬೇಕೆಂದು ಕೋರಿದಾಗ ಅವರಿಬ್ಬರ ನಡುವೆ ನಡೆಯುವ ಸಂಭಾಷಣೆ, ಆ ಚಿತ್ರದ ಅತ್ಯುತ್ತಮ ದೃಶ್ಯವೆಂದು ನನ್ನ ಅಭಿಪ್ರಾಯ. ಪ್ಲಾಂಟೇಷನ್ ಮಾಲೀಕನ ವಿಕೃತ ಕಾಮ, ಕಪ್ಪು ಜನರನ್ನು ಕಂಡರೆ ಅವನಿಗಿದ್ದ ತಾತ್ಸಾರ, ಕ್ರೂರ ಮನೋಭಾವ ಇವೆಲ್ಲವೂ ಪ್ರೇಕ್ಷಕನ ಮನಸ್ಸಿನಲ್ಲಿ ರೊಚ್ಚಿನ ಭಾವನೆಗಳನ್ನು ಎಬ್ಬಿಸುವಲ್ಲಿ ಯಶಸ್ವಿಯಾಗುತ್ತದೆ. ಈ ಪಾತ್ರವನ್ನು ಪರಿಣಾಮಕಾರಿಯಾಗಿ ನಿರ್ವಹಿಸಿರುವ ನಟ, ಮೈಕೆಲ್ ಫ಼ಾಸಬೆಂಡರ್ (Michel Fassbender) ಬಹಳ ಪ್ರತಿಭಾಶಾಲಿ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಈ ಕರಾಳ ದಿನಗಳಲ್ಲಿ, ಅಲ್ಲಲ್ಲಿ ಎದಿರಾಗುವ ಹಲವು ದಯಾಮಯ ವ್ಯಕ್ತಿಗಳು, ಪ್ಲಾಟನ ಜೀವನದ ಕತ್ತಲಲ್ಲಿ ಬೆಳ್ಳಿಯ ಕಿರಣಗಳಂತೆ ಕಾಣುತ್ತಾರೆ. ಕಡೆಗೊಮ್ಮೆ ಅವನೊಡನೆ ಕಬ್ಬಿನ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೆನೆಡಾದ ಪ್ರಜೆ ಬಾಸ್ ತನ್ನ ಜೀವದ ಮೇಲಿನ ಹಂಗು ತೊರೆದು, ಇವನನ್ನು ಅಲ್ಲಿಂದ ಹೊರಗೆಳೆಯುವಲ್ಲಿ ಸಹಾಯಮಾಡುತ್ತಾನೆ. ತನ್ನ ಸ್ವತಂತ್ರತೆ ಮತ್ತು ಹೆಸರನ್ನು ಹಿಂತಿರುಗಿ ಪಡೆದು ತನ್ನೂರಿಗೆ ಮರಳುವ ಸಾಲೋಮನ್ ಜೀವನದ ಕಥೆ ಹೃದಯ ಮಿಡಿಯುವಂತಹದು.

ಆ ಸಮಯದಲ್ಲಿ ಗುಲಾಮರಿಗೆ ತಲೆ ಎತ್ತಿ ನೋಡಿ ಮಾತನಾಡುವ ಸ್ವತಂತ್ರತೆ ಇರಲಿಲ್ಲ. ಎಲ್ಲೆಲ್ಲಿ ನೋಡಿದರೂ ನಿಶ್ಯಬ್ದತೆ. ಈ ನಿಶ್ಯಬ್ದ ವಾತಾವರಣ ನೋಡುಗನ ಮೇಲೆ ಎಷ್ಟು ಪರಿಣಾಮಕಾರಿಯಾಗಿದೆ ಎಂದರೆ, ಸಿನಿಮಾ ಮಂದಿರದಲ್ಲಿ ಪೂರ್ಣವಾದ ಮೌನ. ತಪ್ಪಿತಸ್ಥ ಕರಿಯ ಕೆಲಸಗಾರರನ್ನು ನೇಣು ಹಾಕುವ ದೃಶ್ಯವಂತೂ, ನಮ್ಮ ಮನಗಳಲ್ಲಿ ಭೀತಿಯನ್ನು ಉಂಟು ಮಾಡಿತು. ಚಿತ್ರದಲ್ಲಿ ಸಾಲೋಮನ್ ಉರುಫ಼್ ಪ್ಲಾಟನ ಪಾತ್ರವನ್ನು ನಿರ್ವಹಿಸಿರುವ ಬ್ರಿಟಿಷ್ ಕಲಾವಿದ ಚಿವೆಟೆಲ್ ಎಜಿಯೋಫ಼ೋರ್ (Chewetel Ejiofor) ಅಭಿನಯ ಈ ಚಿತ್ರದ ಜೀವಾಳ. ಬ್ರಿಟನ್ನಿನ ರಂಗ ಭೂಮಿಯಲ್ಲಿ ಹೆಸರು ಮಾಡಿರುವ ಈ ನಟ, ಈ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದಾನೆ. ತನ್ನವರನ್ನು ಕಾಣಲಾಗದ ನಿರಾಸೆಯಲ್ಲಿ, ಬರೆದಿದ್ದ ಕಾಗದವನ್ನು ಸುಟ್ಟುಹಾಕುವ ದೃಶ್ಯ, ತನ್ನ ಪ್ರೀತಿಯ ಪಿಟೀಲನ್ನು ಒಡೆಯುವ ದೃಶ್ಯ ಹಾಗೂ ತರುಣಿ ಪಾಟ್ಸಿಯ ಮೇಲಿನ ಅತ್ಯಾಚಾರವನ್ನು ತಡೆಯಲಾಗದ ಅಸಹಾಯಕತೆಯ ದೃಶ್ಯದಲ್ಲಿ, ಈ ಕಲಾವಿದನ ಅಭಿನಯ ಬಹಳ ಮನೋಜ್ಞವಾಗಿದೆ. ಈ ಕಲಾವಿದನಿಗೆ ೨೦೧೪ರ ಆಸ್ಕರ್ ಪ್ರಶಸ್ತಿ ಸಲ್ಲಲೇಬೇಕು. ಈ ಚಿತ್ರವನ್ನು ಚಿತ್ರಿಸಿರುವ ಹೊರಾಂಗಣ ಸ್ಥಳಗಳು ಸುಂದರವಾಗಿದ್ದು, ಈ ಕಥೆಯ ಹಿನ್ನೆಲೆಗೆ ಪೂರಕವಾಗಿದೆ. ಆದರೆ, ಕಥೆಯಲ್ಲಿನ ಭಯಾನಕ ಘಟನೆಗಳನ್ನು ನೋಡುವ ಸಂಧರ್ಭದಲ್ಲಿ, ಈ ಸುಂದರತೆಯನ್ನು ಅನುಭವಿಸಲು ಮನಸ್ಸಾಗದು.

ಗುಲಾಮಿ ಪದ್ಧತಿಯನ್ನು ಮುಖ್ಯ ವಿಷಯವಾಗಿಟ್ಟುಕೊಂಡು ಮಾಡುವ ಇಂತಹ ಚಿತ್ರಗಳು, ಮಾನವನಿಗೆ ಭೂತದಲ್ಲಿ ನಡೆದ ಇಂತಹ ಅನ್ಯಾಯ ಅತ್ಯಾಚಾರಗಳು ಭವಿಷ್ಯದಲ್ಲಿ ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಸಾರಿ ಹೇಳುವಲ್ಲಿ ಪರಿಣಾಮಕಾರಿಯಾದ ಪಾತ್ರವನ್ನು ವಹಿಸುತ್ತವೆ.  ಆಧುನಿಕ ಮಾನವನ ಪೂರ್ವಿಕರಾದ ಈ ಕಪ್ಪುವರ್ಣೀಯರ ಮೇಲೆ ನಡೆಸಿದ ಅತ್ಯಾಚಾರ ಅಕ್ಷಮ್ಯ ಅಪರಾಧ. ಈ ಚರಿತ್ರೆ ಪುನರಾವರ್ತನೆ ಆಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ! ಈ ಚಿತ್ರದ ನಿರ್ದೇಶಕ ಸ್ಟೀವ್ ಮೆಕ್ವೀನ್ ಅದ್ಭುತವಾದ ಚಿತ್ರವನ್ನು ನಿರ್ಮಿಸಿದ್ದಾನೆ. ಹಿನ್ನೆಲೆಯ ಸಂಗೀತವೂ ಬಹಳ ಪರಿಣಾಮಕಾರಿಯಾಗಿದೆ. ಇಂತಹ ಕಥಾ ವಸ್ತುವುಳ್ಳ ಚಿತ್ರಗಳು ಆಗಾಗ ಬಂದರೆ, ಮಾನವನನ್ನು ಈ ಹಾದಿಯಲ್ಲಿ ಮತ್ತೊಮ್ಮೆ ನಡೆಯದಂತೆ ತಡೆಯುವಲ್ಲಿ ಸಹಕಾರಿಯಾಗಬಲ್ಲದು.