ಈ ವಾರಕ್ಕೆ ಜುಂ.. .. .. .. ಯ್! ಅಂತ ಬರುತ್ತಿವೆ ಎರಡು ಹಗುರ-ಹೃದಯದ (ಲೈಟ್-ಹಾರ್ಟೆಡ್) ಕವನಗಳು. ಮುರಳಿ ಹತ್ವಾರ್ ತಮ್ಮ ಸೈಕಲ್ಲಿನ ಸವಾರಿ ಮಾಡಿದರೆ, ನಾನು ನನ್ನ ಮಿತ್ರ ಅನಿಲನೊಂದಿಗೆ ಪೂನಾದಲ್ಲಿ ಅವನ ಲೂನಾದ ಮೇಲೆ ತಿರುಗಿದ್ದರ ನೆನಪನ್ನು ಹಂಚಿಕೊಂಡಿರುವೆ. ಓದಿ, ಸವಾರಿಯ ಮಜಾ ತೊಗೊಳ್ಳಿ – ಎಲ್ಲೆನ್ ಗೂಡೂರ್ (ಸಂ.)
ಸೈಕಲ್ ಸವಾರಿ ಕಂಬ, ಕಂಬ, ಕಂಬ ಹಿಂದಿಕ್ಕಿ ಮತ್ತೊಂದು ಕಂಬ ಮುಂದೋಡುವದೇ ಸವಾರಿ ಮಣ್ಣು, ಕಲ್ಲು, ಟಾರು ಯಾವುದಿದ್ದರೂ ದಾರಿ ಅಯ್ಯೋ! ಅಪ್ ಬಂತು ಅಪ್ ಉಸ್... ಉಸ್... ಅಂಡನೆತ್ತಿ ಕಾಲ್ಗಳೊತ್ತಿ, ಒತ್ತಿ ಹೊಯ್ಯ...ಹೊಯ್ಯ...! ರೊಯ್yyyyyyyyyyyy...! ಇಳಿಜಾರಿನಲಿ ಇಳಿ; ಜಾರಿ ನಲಿ. ಹಿಂದೋ? ಮುಂದೋ? ಮೇಲೋ? ಕೆಳಗೋ? ತಿರುಗುವ ಚಕ್ರ ಮಾಯೆಯ ಸೋಗೋ? ಸ್ಥಿರ, ಸ್ತಬ್ದ, ಒಮ್ಮನದ ಏಕಾಂತದಲಿ ಲೀನ: ಹ್ಯಾಂಡಲ್, ಪೆಡಲ್, ಮತ್ತು ನಾನು. - ಮುರಳಿ ಹತ್ವಾರ್ ೩೧/೦೭/೨೦೨೦

ಲೂನಾಗಾಥೆ ಗೆಳೆಯನೊಬ್ಬನಿರುವ ನನಗೆ ಅನಿಲನವನ ಹೆಸರು ಓಡುತ್ತಿತ್ತು ಅವನ ಲೂನಾ ಹಿಡಿದು ಹಿಡಿದು ಉಸಿರು ಹಿಂದೆ ಉಂಟು ಮುಂದೆ ಇಲ್ಲ ಅದರ ಲೈಟು ಬೆಳಕು ಕಾಲನಿಟ್ಟೆ ಹಾಕಬೇಕು ಕೈಯಲಿಲ್ಲ ಬ್ರೇಕು ಓಡುವಾಗ ವಾಯುವೇಗ ನಿಲ್ಲಿಸೋದೆ ಕಷ್ಟ ಓಡುವುದೋ ನಿಲ್ಲುವುದೋ ಅದರದೇ ಇಷ್ಟ ಮಾಡಬೇಕು ಅದನು ಸ್ಟಾರ್ಟು ತಳ್ಳಿ, ಹಾರಿ ಕೂತು ಕೂತದ್ದಷ್ಟೇ, ಸುಖವೇನಿಲ್ಲ ಸೀಟು ತುಂಬಾ ತೂತು! ಸುಗಮ ರಸ್ತೆಯಲ್ಲಿ ಹಾರೋ ಗಾಳಿಯಂತೆ ಕಾಣಿ ಬಂತೋ ಬಂಪು, ಚುಚ್ಚುವವು ಬುಡಕೆ ಸೀಟಿನಾಣಿ! ಒನ್ ವೇ ಇರಲಿ, ಕೆಂಪೇ ಬರಲಿ ನುಗ್ಗಿದ್ದೊಂದೇ ವರಸೆ ತಿಂಗಳಲ್ಲಿ ಎರಡು ಬಾರಿ ಠಾಣೆಗಳಿಗೆ ವಲಸೆ ಮಳೆಯೇ ಬರಲಿ ಚಳಿಯೇ ಇರಲಿ ಲೂನಾ ನಮ್ಮ ಹಾಥಿ ವರುಷ ವರುಷ ಕಷ್ಟ ಸುಖದಿ ಅದುವೇ ನಿಜದ ಸಾಥಿ ಲೂನಾ ಹೋಗಿ ಕಾರು ಬಂದ್ರೂ ಮೊದಲ ಗಾಡಿಯ ಒನಪು ಹರೆಯ, ಗೆಳೆಯ, ಮತ್ತವನ ಲೂನಾ ಮರೆಯದಂಥ ನೆನಪು! - ಲಕ್ಷ್ಮೀನಾರಾಯಣ ಗೂಡೂರ್ ಪ್ರೆಸ್ಟನ್, ೧೫.೧೦.೨೦೨೦