ಸಮಸುಖಿ (ಸಮದುಃಖಿ) ಕನ್ನಡಿಗರಿಗೆ ಸಬ್ಸ್ಟಿಟ್ಯೂಟ್ ಸಂಪಾದಕನ ನಮಸ್ಕಾರಗಳು. ಕೆಳಗೆ ಬರೆದಿರುವ ಸಂವಾದ ಬರಿಯ ಲೇಖಕಿಯದಲ್ಲ, ಅದು ನಮ್ಮಲ್ಲಿ ಅನೇಕರ ಜೀವನದಲ್ಲಿ ಒಮ್ಮೆ ಬರಬಹುದಾದ ಘಳಿಗೆ. ಇದು ಬರಿಯ ಕನ್ನಡಿಗರಿಗೆ ಮಾತ್ರವಲ್ಲ, ಯಾವ ವಲಸಿಗರಿಗೂ ಬರಬಹುದಾದ ಪ್ರಶ್ನೆ. ಓದಿ, ನಿಮ್ಮ ಸ್ವಂತದ ಅಥವಾ ಕೇಳಿದ / ನೋಡಿದ ಅನುಭವವೇನಾದರೂ ಇದ್ದರೆ, ಹಂಚಿಕೊಳ್ಳಿ - ಸಂ.
*****************************************
ನನ್ನ ಮೊಮ್ಮಗಳು ನನ್ನನ್ನು ಒಂದು question ಕೇಳಿದಳು “ಅಜ್ಜಿ ನಾನು ಯಾರು? ನೀನು ಎಲ್ಲಿಂದ ಬಂದೆ? ಯಾಕೆ ಬಂದಿ?” ಅವಳಿಗೆ ಕೂಡಲೆ ಉತ್ತರ ಕೊಡಲು ಹೊಳೆಯಲ್ಲಿಲ್ಲ. ತುಸು ತಡೆದು “ಮೊಮ್ಮಗಳೇ, ನಮ್ಮ ಚರಿತ್ರೆಯನ್ನು ಕೇಳುವಂತವಳಾಗು.” “ಹಾಗಾದರೆ ಅಜ್ಜಮ್ಮ, ನಿಮ್ಮ ಊರು, ಸಂಸ್ಕೃತಿಯನ್ನು ವಿವರವಾಗಿ ತಿಳಿಸು” ಎಂಬುದಾಗಿ ಕೇಳಲು, ಕೆಳ ಕಂಡ ಕತೆ ಹೇಳಿದೆ. “ನಾವು ಹೊರನಾಡಿನ ಕನ್ನಡಿಗರು. ನಾವು ವಲಸೆ ಬಂದವರು.” “ಹಾಗಾದರೆ ಬೆಂಗಳೂರಿನಿಂದ ಮುಂಬಯಿ, ಚೆನ್ನೈ ಮುಂತಾದ ಪ್ರದೇಶಕ್ಕೆ ಹೋಗುತ್ತಾರಲ್ಲ? ಅವರೆಲ್ಲಾ ವಲಸೆ ಹೋದವರೇ?” “ಹೌದು ಬಂಗಾರಿ, ಅವರೊಬ್ಬರೇ ಅಲ್ಲ. ಅಮೆರಿಕ, ಇಂಗ್ಲಂಡ್, ಇನ್ನೂ ಬೇರೆ ಬೇರೆ ದೇಶಕ್ಕೆ ನಮ್ಮ ಕನ್ನಡನಾಡಿನಿಂದ ಹೋದವರೆಲ್ಲಾ ವಲಸೆ ಹೋದವರೇ.” “ಪರದೇಶಕ್ಕೆ ಕೆಲಸ ಹುಡಿಕಿಕೊಂಡು ಬಂದವರೇ ಹೆಚ್ಚು. ಕೆಲಸ ಸಿಕ್ಕಿದ ಮೇಲೆ ಮನೆ, ಸಂಸಾರ ಎಲ್ಲಾ ಮಾಡಿಯಾಯಿತು.” “ಹಾಗಾದರೆ ನೀವೆಲ್ಲಾ ಸಂತೋಷವಾಗಿ ಇದ್ದೀರಾ? ನಿಮಗೆ ನಿಮ್ಮ ಭಾಷೆ, ಪರಂಪರೆ, ಚರಿತ್ರೆ, ಹಬ್ಬ-ಹುಣ್ಣಿಮೆಗಳು ಮಿಸ್ಸಾಗುತ್ತಾ?” ಎಂದು ಕೇಳಿದಳು. “ಹೌದು ಕಣೆ ಖಂಡಿತವಾಗಲೂ ಮಿಸ್ಸಾಗುತ್ತದೆ. ವಲಸೆ ಬಂದವರು ತುಂಬಾ ಜನ ಒಳ್ಳೆಯ ಕೆಲಸ, ಹಣ ಸಂಪಾದನೆ ಮಾಡಿ ಗೌರವಾಗಿ ಬಾಳುತ್ತಿದ್ದಾರೆ. ಆದರೆ ನಮಗೆ ನಮ್ಮದು, ನಮ್ಮ ಬಾಲ್ಯದ ಅನುಭವಗಳನ್ನು ಮರೆಯಲು ಸಾಧ್ಯವೇ? ನಮ್ಮ ಪರಂಪರೆ, ನಮ್ಮ ಭಾವನೆಗಳನ್ನು ಅಳಿಸಲು ಸಾಧ್ಯವೇ? ಅದೇ ಅಲ್ಲವೇ ನಮ್ಮ ವ್ಯಕ್ತಿತ್ವಕ್ಕೆ ಅಡಿಪಾಯ. ಅಡಿಪಾಯವನ್ನು ಮುರಿಯಲು ಸಾಧ್ಯವೇ? ಮುರಿದರೆ ನಮ್ಮ ಬದುಕು ಬರಡಲ್ಲವೇ, ನಮ್ಮ ವ್ಯಕ್ತಿತ್ವ ಒಂದು ದೊಡ್ಡ ಅಂಶವನ್ನ ಕಳೆದ ಹಾಗಲ್ಲವೇ?” ಮತ್ತೊಂದು ಸವಾಲು – “ನಿಮಗೆ ಕನ್ನಡ ಬಳಗ ಯಾಕೆ ಬೇಕು?” “ನಮ್ಮ ವ್ಯಕ್ತಿತ್ವದ ಅಡಿಪಾಯಕ್ಕೆ ಆಸರೆ ಬೇಡವೇ? ನಾವು ಒಂದು ಸಂಘದಲ್ಲಿಯಿದ್ದೇವೆ. ನಾವು ಭಾಷೆ, ಚರಿತ್ರೆ, ವಾತ್ಯಲ್ಯ ಮುಂತಾದ ಮಾನವೀಯ ಗುಣಗಳನ್ನು ಹಂಚಿಕೊಳ್ಳುತ್ತೇವೆ. ಈ ಹೊರನಾಡಿನ ಸಂಘಗಳು ನಮ್ಮ ವ್ಯಕ್ತಿತ್ವಕ್ಕೆ ಒಂದು meaning ಕೊಡುತ್ತದೆ. ನಾವು ವಲಸೆ ಬಂದ ದೇಶಕ್ಕೆ ಹೊಂದಿಕೊಂಡರೂ, ಈ ಹೊರನಾಡು ನಮ್ಮದು ಎನಿಸಲು ಕಷ್ಷ ಅನಿಸುತ್ತದೆ. ನಮಗೆ chipsಗಿಂತ ಕೋಡುಬಳೆ ರುಚಿಯಲ್ಲವೇ?” ಮತ್ತೊಂದು ಕ್ವೆಶ್ಚನ್ನು – “ಸರಿ ಇಲ್ಲಿಗೆ ಬಂದಿರಿ. ನಿಮ್ಮ ಜೀವನ ಕಟ್ಟಿದಿರಿ. ಮಕ್ಕಳು, ಮರಿಗಳಾದವು. ನಮ್ಮ ವಂಶ ಬೆಳೆಯುತ್ತಿದೆ. ಈಗ ನಾವು ೩ನೆ ಜನರೇಶನ್ನು. ಮೊದಲನೆಯದು ನೀವು; ಹೊರನಾಡಿಗೆ ಬಂದು ನಿಮ್ಮ ಭಾಷೆ, ಸಂಸ್ಕೃತಿ ಬೆಳಿಸಿ, ಉಳಿಸಿಕೊಂಡಿರಿ. “ಎರಡನೆ ಜನಾಂಗ ನಿಮ್ಮ ಮಕ್ಕಳು. ನನ್ನ ತಂದೆ-ತಾಯಿಯರು. ಇಲ್ಲೇ ಹುಟ್ಟಿ ಬೆಳದವರು. ಅವರು ನಿಮ್ಮ ಅಡುಗೆ ತಿಂಡಿ ಎಲ್ಲ ಮಜವಾಗಿ ತಿನ್ನುತ್ತಾರೆ. ಮನೆಯಲ್ಲಿ ನಿಮ್ಮ ಮಾತು ಕೇಳಬಹುದು. ಮನೆಯ ಹೊರಗೆ ಅವರು ಈ ದೇಶದ ಜನರನ್ನೇ ಅನುಸರಿಸುತ್ತಾರೆ. ಕನ್ನಡ ಮಾತನಾಡಲು ಬರುವುದಿಲ್ಲ. ಚಿಕ್ಕವರಾಗಿದ್ದಾಗ ಕನ್ನಡ ಕಲಿಯಲು ನೀವು ಸಹಾಯಮಾಡಲಿಲ್ಲ. ಅವರು ಕುವೆಂಪು, ದ ರಾ ಬೇಂದ್ರೆಯಂಥವರ ಹೆಸರು ಕೇಳಿಲ್ಲ. ಅವರಿಗೆ ನಿಮಗೆ ಇರುವಷ್ಟು ಮಮತೆ ನಿಮ್ಮ ಪರಂಪರೆ ಮೇಲೆ ಖಂಡಿತಯಿಲ್ಲ. ಅವರು ಕನ್ನಡ ಬಳಗಕ್ಕೆ ಬರುವುದಿಲ್ಲ. ಬಂದರೂ, ‘we don’t understand anything’ ಅಂತಾರೆ. ಮೂರನೆಯ ಜನಾಂಗ ನಿಮ್ಮ ಮೊಮ್ಮಕ್ಕಳು. ಅವರ ಬಗ್ಗೆ ಮತ್ತೊಂದು ಸವಾಲು. “ಅಜ್ಜಿ ನಮಗೆ ನಿಮ್ಮ ಭಾಷೆ ಗೊತ್ತಾಗುವುದಿಲ್ಲ. ಬೆಂಗಳೂರಿಗೆ ಒಂದೇ ಸಲ ಮಮ್ಮಿ ಡ್ಯಾಡಿ ಜತೆ ಹೋಗಿದ್ದೆ. ಎಲ್ಲರೂ Englishನಲ್ಲೇ ಮಾತಾಡಿದರು. ಮಮ್ಮಿ ಡ್ಯಾಡಿ ಕನ್ನಡ ಮಾತನಾಡುವುದಿಲ್ಲ. ಅವರಿಗೆ ಬರಲ್ಲ ಅಂತಾರೆ. ಹಬ್ಬ, ಹರಿದಿನ ಮಾಡುವುದಿಲ್ಲ. ನಾವು ಏನು ಮಾಡಬೇಕು? ಬ್ರಿಟಿಶ್ ಜನರಂತೆ ಇರಬೇಕೆ?” “ಇದಲ್ಲದೆ ಮತ್ತೊಂದು ಗುಂಪಿದೆ ಈಗ. ಇವರು ಇತ್ತೀಚಿಗೆ ಹೊರನಾಡಿಗೆ ವಲಸೆ ಬಂದವರು. ಹೊಸ ಟೆಕ್ನಾಲಜಿ ತಿಳಿದವರು. ಅವರೊಡನೆ ನಮ್ಮ ಮೊದಲನೆ ಜನಾಂಗ (ಹಿರಿಯರು, ೩೦-೪೦ವರುಷಗಳಿಂದ ಹೊರನಾಡಿನಲ್ಲಿ ಇರುವವರು) ಬಾಂಧವ್ಯ ಬೆಳಸಲು ಸಾದ್ಯವೇ?” “ನನ್ನ ಕತೆ ಮುಗಿಯಿತು. ನಿನ್ನ ಸವಾಲಿಗೆ ನನ್ನ ಹತ್ತಿರ ಉತ್ತರವಿಲ್ಲ!” - ವತ್ಸಲಾ ರಾಮಮೂರ್ತಿ
*****************************************************