ಅಡುಗೆ – ಅಡುಗೆಮನೆ ಸರಣಿ: ವೆಂಕಟ್ ಶ್ರೀರಾಮುಲು ಮತ್ತು ಲಕ್ಷ್ಮೀನಾರಾಯಣ ಗುಡೂರ್

ನಮಸ್ಕಾರ ಅನಿವಾಸಿಗರೆ, ಇಲ್ಲಿರುವುದು ಅಡುಗೆ-ಅಡುಗೆಮನೆ ಸರಣಿಯ ಮುಂದಿನ ಕಂತು. ಅಡುಗೆಮನೆಯಲ್ಲಿ ಸಿಗುವ ಸಂತೋಷಗಳ ಬಗ್ಗೆಯೂ ಸ್ವಲ್ಪ ಓದೋಣವೇ? ಶ್ರೀ ವೆಂಕಟ್ ಶ್ರಿರಾಮುಲು ಮತ್ತು ನನ್ನ ಅಡುಗೆಮನೆಯ ನಂಟಿನ ಬಗೆಗಿನ ಬರಹಗಳು ಕೆಳಗಿವೆ. ಓದಿ ಏನನ್ನಿಸಿತು ತಿಳಿಸಿ. ಮತ್ತೆ ನಿಮ್ಮ ಅನುಭವಗಳನ್ನೂ ಹಂಚಿಕೊಳ್ಳೋದಕ್ಕೆ ತಯಾರಾಗಿ. – ಎಲ್ಲೆನ್ ಗುಡೂರ್ (ಸಂ.)

ನನ್ನ ಮೊದಲ ಉಪ್ಪಿಟ್ಟು ವೆಂಕಟ್ ಶ್ರೀರಾಮುಲು

ನಾನು ಮೊದಲೇ disclaimer ಡಿಕ್ಲೇರ್ ಮಾಡುವುದು ಉಚಿತ.  ಅಡುಗೆ ಮತ್ತು ಬರಹ ಎರಡರಲ್ಲೂ ಅನುನುಭವಿ.  ಅಡುಗೆ ಮನೆಯಲ್ಲಿ ಪಾತ್ರೆಗಳನ್ನು ಜೋಡಿಸುವುದಲ್ಲಿ ಸ್ವಲ್ಪ ಪರಿಣಿಯಿತಿ ಇರಬಹುದು. ಈ ಐದು ದಶಕಗಳ ದಾಂಪತ್ಯದಲ್ಲಿ ಅಕ್ಷರ ಪದ ಜೋಡಿಸಿವುದರಲ್ಲಿ ಅಷ್ಟಕಷ್ಟೆ.  ಅನಿವಾಸಿ ಓದುಗರೇ ಇದನ್ನು ಗಮನದಲ್ಲಿ ಇಟ್ಟುಕೊಳ್ಳಿ; ಏನಾದರೂ ಎಡವಟ್ಟು ಇದ್ದಲ್ಲಿ ಕ್ಷಮಿಸಿ.  

ಅಡಿಗೆ ಅಂದ ಕ್ಷಣವೇ ಮನಸ್ಸಿಗೆ ಬರುವುದು, ರುಚಿ,ರುಚಿಯಾದ ಘಮಿ ಘಮಿಸುವ ಆಹಾರ ತಿಂಡಿಗಳು. ಅನಿವಾಸಿಯಲ್ಲ ಪ್ರಕಟವಾದ, ಸ್ವಾದಕರವಾದ ಲೇಖನಗಳನ್ನು ನೋಡಿ ನಾನು ಯಾಕೆ  ಒಂದು ಕೈ ಹಾಕಬಾರದು ಅನಿಸಿತು.  ಯಾರೋ ನೀವು ಶಾkAಹಾರಿಯೇ ಎಂದು ಕೇಳಿದರು, ಅಲ್ಲ ಆದರೆ ನನ್ನ ಅಡಿಗೆ ತಿಂದವರು shock ಆಗಿ ಹಾರುತ್ತಾರೆ.

ನನ್ನ ಈ ಲೇಖನದ ಬಗ್ಗೆ ನನ್ನಾಕೆಗೆ  ಹೇಳಿದರೆ ಇಮಾಂಸಾಬಿ ಮತ್ತು ಗೋಕುಲಾಷ್ಟಮಿ ಸಂಬಂಧ ಅಂಥ ಟೀಕ್ ಟಾಕ್ ಆಗಿ ಟೀಕೆ ಬರುತ್ತೆ ನಿರೀಕ್ಷಿಸಿದೆ.  ಆದರೆ ಬದಲಾಗಿ “ನೀವು ಕೆಲವರಿಗಿಂತ ಪರವಾಗಿಲ್ಲ ಬಿಡಿ, ಅವರಿಗೆ SATNAV ಬೇಕು ಅಡಿಗೆ ಮನೆಗೆ ಹೋಗೋಕೆ” ಅನ್ನಬೇಕೆ!

ಅದು ನಿಜ; ನಾನು ಸಾಕಷ್ಟು ವೇಳೆ ಅಡಿಗೆಮನೆಯಲ್ಲಿ ಕಳೆಯುತ್ತೇನೆ.  ಪಾಕಪ್ರವೀಣತೆಯಿಂದ ಅಲ್ಲ, ಮಾಡಿದ್ದನ್ನು ಟೇಸ್ಟ್ ಮಾಡುವ ಅಭ್ಯಾಸವಿಲ್ಲದ ನಮ್ಮಾಕೆಯ ಆ ಮಧುರವಾದ ಉಸ್ತುವಾರಿ ನನಗೆ ಸೇರಿದ್ದು.  ಒಂದು ತರಹ ವೈನ್ ಟೆಸ್ಟರ್ – ಅವನು ನುಂಗಲ್ಲ ಅಷ್ಟೇ!

ಲೊಕ್ಡೌನ್ ಪ್ರಯುಕ್ತ, ನನ್ನ job description ಬದಲಾಯಿಸ ಬೇಕಾದ ಪ್ರಸಂಗ ಬಂತು. ನನ್ನ ಪ್ರಪ್ರಥಮ ಸಾಹಸ, ದಕ್ಷಿಣ ಭಾರತದ ಪ್ರಸಿದ್ಧ ಉಪ್ಪಿಟ್ಟು, (ವಿವಿಧಾತ್ಮಕವಾದ ವಿಷಯ) ಮಾಡುವದಕ್ಕೆ ಸಿದ್ದವಾಗಿದ್ದು.  ಒಂದೆರಡು ಥಿಯರಿ ಕ್ಲಾಸೆಸ್ ಆದ ಮೇಲೆ ನನ್ನ ಪಾಕ ಪ್ರಯೋಗ ಪ್ರಾರಂಭ.  ಪ್ರಾರಬ್ಧಕರ್ಮಾ, ನನ್ನ ಕಲನರಿ ಕೌಶಲ್ಯತೆ ಕುಂಠಿತವಾಗಿ ಕೊನೆಗೊಂಡಿತು. ಫಲಿತಾಂಶ: ತಳ ಕಚ್ಚಿದ, ಹೆಸರಿಗೆ ತಕ್ಕಹಾಗೆ ಉಪ್ಪು ಮತ್ತು ಹಿಟ್ಟು!

Can we have take away today? ಮೇಲಿಂದ ಧ್ವನಿ.  ಅಂದು ಹೇಗೋ ನಿರ್ವಹಿಸಿದೆವು..

ಅಲ್ಲಿಂದ ಮುಂದುವರಿದಿದ್ದನೇ ಈಗ ನನ್ನ ಉಪ್ಪಿಟ್ಟು ನನ್ನವಳ ಮೆಚ್ಚುಗೆ, ಬಡ್ತಿ ಸಿಕ್ಕಿದೆ.  ಪ್ರಸ್ತುತ ನನ್ನ ಪ್ರಯೋಗ ಮೂಲಂಗಿ ಸಾಂಬಾರ್. ನಳಪಾಕ ಪ್ರವೀಣ ಮಿತ್ರನಿಂದ ಪ್ರಮಾಣ ಪತ್ರ ಸಹ ಸಿಕ್ಕಿದೆ.

ಅನಿವಾಸಿ ಓದುಗೆರಿಗಲ್ಲ ನನ್ನ ಕಿಚನ್ ಗೆ ಸ್ವಾಗತ. ನನ್ನ ಪಾಕ, ನಿಮ್ಮ ಪಚನ. ಏನಂತೀರಿ?

  • ಡಾ. ವಿ. ಶ್ರೀರಾಮುಲು  

******************************************************************************

ನನ್ನ ಅಡುಗೆ – ಊಟದ ನಂಟು!ಲಕ್ಷ್ಮೀನಾರಾಯಣ ಗುಡೂರ್

ಇಬ್ಬರು ತಂಗಿಯರು ಮತ್ತು ತಾಯಿ ಇದ್ದ ಮನೆಯ ಚೊಚ್ಚಲ ಮಗನಾದ ನನ್ನನ್ನು ಅಡುಗೆಮನೆಯಲ್ಲಿ ಬರದಂತೆ ತಡೆಯದಿದ್ದರೂ, ನನಗೆ ಅಡುಗೆ ಮಾಡುವುದನ್ನು ಕಲಿಯಲೇಬೇಕೆಂಬ ಜರೂರತ್ತೇನೂ ಇರಲಿಲ್ಲ.  ಆದರೆ, ಅಜ್ಜಿಯ ಮನೆಯಲ್ಲಿದ್ದು, ಅಮ್ಮನಿಂದ ದೂರವಿದ್ದ ನನಗೆ ಅಡುಗೆಮನೆಯಲ್ಲಿ ಸಮಯ ಕಳೆಯುವುದಕ್ಕೆ ಎರಡು ಕಾರಣಗಳಿದ್ದವು.  ಒಂದನೆಯ ಕಾರಣ, ಅಮ್ಮನ ಜೊತೆಗೆ ಅಡುಗೆಯಲ್ಲಿ ಸಹಾಯ ಮಾಡುತ್ತ ಹರಟೆ ಹೊಡೆಯುವ ಅಮ್ಮನ ಜೊತೆ ಹೊತ್ತು ಕಳೆಯುವುದು; ಎರಡನೆಯ ಕಾರಣ, ಅಜ್ಜಿಯ ಮನೆಯಲ್ಲಿ ಅಜ್ಜಿ ಮಡಿ ಅಡಿಗೆ ಮಾಡುವಾಗ ನಮಗೆ ಬೇಕಾದಂತೆ ಅವಲಕ್ಕಿ ಕಲಿಸಿಕೊಳ್ಳಲು ಅವಕಾಶವಿದ್ದುದು – ಅದಕ್ಕೆ ಯಾವ ಪುಡಿ, ಎಷ್ಟು ಎಣ್ಣೆ ಹುಯ್ದು ಯಾವ ರೀತಿ ರುಚಿಕಟ್ಟಾಗಿ ಮಾಡುವುದು ಅಂತ ಅಮ್ಮನಿಂದ ಹೇಳಿಸಿಕೊಳ್ಳುವುದು.  ಆಗ ಕಲಿತದ್ದು ಮುಂದೆ ಸಹಾಯಕ್ಕೆ ಬಂತೆನ್ನುವುದನ್ನೂ ನೊಡೋಣ.

ಅವಲಕ್ಕಿಅವಲಕ್ಕಿಅವಲಕ್ಕಿ!

ಹೆಸರಿಗೆ ಅವಲಕ್ಕಿಯಾದರೂ (ಅವ-lucky) ಅಜ್ಜಿಯ ಮನೆಯಲ್ಲಿ ಅದಕ್ಕೆ ದೇವರ ನಂತರದ ಸ್ಥಾನವೇ ಸರಿ!  ಅಜ್ಜಿ-ತಾತನ ಮನೆಯಲ್ಲಿ ಧಾರ್ಮಿಕ ವಾತಾವರಣವಿದ್ದು, ದಿನವೂ ಸಾಂಗೋಪಾಂಗ ಪೂಜೆ-ನೈವೇದ್ಯವಿಲ್ಲದೇ ಊಟವಿರಲಿಲ್ಲ. ನಾನೋ ಬೆಳಗ್ಗೆ ಎಂಟಕ್ಕೆ ಕಾಲೇಜಿನಲ್ಲಿರಬೇಕು.  ಬೇರೆ ಯಾವ ಮುಸುರಿಯ ತಿಂಡಿಗಳಿಗೆ ಅವಕಾಶವಿರಲಿಲ್ಲ.  ಮತ್ತೇನು, ಅವಲಕ್ಕಿಯೇ ಗತಿ.  ಅದೂ ಒಣ ಅವಲಕ್ಕಿ.  ಹಾಗಂತ ಅವಲಕ್ಕಿ ಇಷ್ಟವಿಲ್ಲವೆಂದಲ್ಲ – ಅವಲಕ್ಕಿ ಯಾವತ್ತೂ ಬೇಜಾರಾಗಲಿಲ್ಲ.  ಅದು ಹೇಗೆ ಅಂತೀರಾ, ಅಮ್ಮನ ಅಡಿಗೆಮನೆಯ ಚಾಟ್ ಸೆಶನ್ನುಗಳ ಮಹಿಮೆ.  ಎಷ್ಟು ವಿಧದಲ್ಲಿ ಅವಲಕ್ಕಿ ಮಾಡಬಹುದು, ಆಹಾ!  ಹುರಿದು ಶೇಂಗಾ – ಪುಠಾಣಿ ಒಗ್ಗರಣೆ ಹಾಕಿ (ರಾಧಿಕಾ ಜೋಶಿಯವರು ಮುಂಚೆ ಹೇಳಿದಂತೆ ಹೊತ್ತಿಸದೇ) ಡಬ್ಬದಲ್ಲಿ ತುಂಬಿಟ್ಟು ವಾರಗಟ್ಟಲೆ ತಿನ್ನಬಹುದು.  ಅದಕ್ಕೆ ಎಷ್ಟು ಬೇಕೋ ಅಷ್ಟು ಸಿಂಗಾರ ಮಾಡಬಹುದು; ಉದಾಹರಣೆಗೆ – ಉಪ್ಪುಮೆಣಸಿನಕಾಯಿ ಕರಿದು ತುಂಡು ಮಾಡಿ ಹಾಕಬಹುದು, ಅರಳು ಸಂಡಿಗೆ ಹಾಕಿದರಂತೂ ಸರಿಯೇ ಸರಿ!  ಇಲ್ಲಾ, ದಿಢೀರನೆ ಮೆಂಥೆದಹಿಟ್ಟು, ಖಾರಪುಡಿ, ಪುಠಾಣಿಪುಡಿ, ಶೇಂಗಾಪುಡಿ, ಚಟ್ಣಿಪುಡಿ, ಗುರೆಳ್ಳುಪುಡಿ – ಯಾವುದು ಸಿಗುತ್ತದೋ ಅದನ್ನು ಹಾಕಿ, ಉಪ್ಪು-ಎಣ್ಣೆ ಹಾಕಿ ಕಲಿಸಿದರಾಯ್ತು.  ಅಥವಾ, ಅವಲಕ್ಕಿ ತೊಳೆದು ಮೇಲಿನ ರೀತಿಯಲ್ಲೇ ಕಲಿಸಿಕೊಂಡು ತಿನ್ನೋದು.  ಖಾರಪುಡಿಯ ಬದಲು ಮಾವಿನಕಾಯಿ ಉಪ್ಪಿನಕಾಯಿ ಇದ್ದರೆ ಅದನ್ನೇ ಉಪಯೋಗಿಸೋದು (ನನ್ನ ಫೇವರಿಟ್ಟು ಇದು).  ಬೇಡ ಅಂದರೆ, ತೊಳೆದು ಮೊಸರವಲಕ್ಕಿ ಮಾಡಿ ಮೇಲಿನ ಲಿಸ್ಟಿಂದ ಯಾವ್ದೋ ಒಂದು ಪುಡಿ ಹಾಕ್ಕೊಂಡು ಮಜಾ ತೊಗೋಬಹುದು.  ಅಂತೂ ನನ್ನ ಜೀವನದಾಗ ಒಂದಷ್ಟು ಟನ್ನು ಅವಲಕ್ಕಿ ತಿಂದಿರಬಹುದು; ಆದರೂ ಇನ್ನೂ ಅವಲಕ್ಕಿಯ ಪ್ರೀತಿ ಹೋಗಿಲ್ಲ.  ಅದರ ಚಟವನ್ನು ಮಕ್ಕಳಿಗೂ ಹಚ್ಚಿದ್ದೇವೆ.  ಇಲ್ಲೇ ಹುಟ್ಟಿ ಬೆಳೆದರೂ, ಅವಲಕ್ಕಿ ಅಂದರಾಯ್ತು ಆಸೆಪಟ್ಟು ತಿನ್ನುತ್ತಾರೆ.  ಅವಲಕ್ಕಿಯ ಬದಲು ಮಂಡಾಳಿನಂತೆ ಇಲ್ಲೇ ಸಿಗುವ ರೈಸ್ ಪಾಪ್ಸ್ (rice pops) ಹಾಕಿದರಂತೂ ಒಂದೆರಡು ದಿನಗಳಲ್ಲಿ ಡಬ್ಬಿಗಟ್ಟಲೆ ಖಾಲಿಯಾಗುತ್ತದೆ, ಸ್ನಾಕ್ಸ್ ತರಹ ಹೋಗ್ತಾ-ಬರ್ತಾ ತಿಂದು. 

|| ಇತಿ ಅಜ್ಜಿಮನಿಪುರಾಣೇ ತಿಂಡಿತೀರ್ಥಾಧ್ಯಾಯೇ ಅವಲಕ್ಕೀ ಮಹಾತ್ಮ್ಯಮ್ ಸಂಪೂರ್ಣಮ್ ||     

ಮೊದಲ ಕೆಲಸ – ಮೊದಲ ಮನೆ.

ಎಂಬಿಬಿಎಸ್ ಮುಗಿಸಿದರೆ ಮುಗಿಯುವುದಿಲ್ಲವಲ್ಲ ಮೆಡಿಕಲ್ ಓದು!  ಡೊನೇಶನ್ ಕೊಡಲಾಗದ ಕೆಳ ಮಧ್ಯಮವರ್ಗದ ಹುಡುಗರ ಮುಂದಿನ ಕಾರ್ಯಕ್ರಮವೆಂದರೆ, ಆಲ್ ಇಂಡಿಯಾ ಅಥವಾ ಅಂಥದ್ದೇ ಹಲವಾರು ಪ್ರವೇಶ ಪರೀಕ್ಷೆಗಳಿಗೆ ತಯಾರಿ ಮಾಡುವುದು.  ಖಾಲಿ ಕೂತು ತಯಾರಿ ಮಾಡಲಾಗದು, ಎಲ್ಲೋ ಒಂದುಕಡೆ ಕೆಲಸಮಾಡುತ್ತ ಖರ್ಚಿಗೆ ಬೇಕಾಗುವಷ್ಟು ಗಳಿಸುತ್ತ ಓದಬೇಕು.  ಸರಿ, ನನ್ನ ಗೆಳೆಯರು ಸೇರಿದ್ದ ದಂತವೈದ್ಯ ಕಾಲೇಜಿನಲ್ಲೇ ಕೆಲಸ ಸಿಕ್ಕಿತು, ಅಧ್ಯಾಪಕನಾಗಿ.  ಆಗಿನ ನನ್ನ ಪರಿಸ್ಥಿತಿಗೆ ಒಳ್ಳೆಯ ಕೆಲಸವೇ – ವಾರಕ್ಕೆರಡು ತರಗತಿಗಳು, ಸಾಕಾಗುವಷ್ಟು ಸಂಬಳ ಅಲ್ಲದೇ ಪ್ರವೇಶ ಪರೀಕ್ಷೆಯ ತಯಾರಿಗೆ ಸಾಕಷ್ಟು ಸಮಯ.  ನಾವು ಮೂರು ಜನ ಒಂದು ಮನೆ ಮಾಡಿಕೊಂಡು ತಯಾರಾದೆವು.  ನಾನು ಬಂದು ಸೇರುವುದಕ್ಕೆ ಮೊದಲು ನನ್ನ ಮಿತ್ರರು ಹೊರಗಿನಿಂದ ಊಟ ತರಿಸಿಕೊಳ್ಳುತ್ತಿದ್ದರು.  ಅದರಲ್ಲಿ ಸ್ವಲ್ಪ ಹೆಚ್ಚೇ ಅನ್ನ ಕೊಡುತ್ತಿದ್ದರು ಅನ್ನಿ.  ನಾನು ಬಂದ ಮೊದಲನೇ ದಿನ ಬೆಳಗ್ಗೆ ಅವರು ಚೆಲ್ಲಲು ಪಕ್ಕಕ್ಕಿಟ್ಟಿದ್ದ ಹಿಂದಿನ ರಾತ್ರಿಯ ಅನ್ನಕ್ಕೆ, ಈರುಳ್ಳಿ-ಹಸಿಮೆಣಸಿನಕಾಯಿ-ಕರಿಬೇವು-ಕೊತ್ತಂಬರಿ ಹಾಕಿ ಚಿತ್ರಾನ್ನ ಮಾಡಿದೆ ನೋಡಿ – ಅಲ್ಲಿಂದ ಶುರುವಾಯ್ತು ನಮ್ಮ ಸ್ವಯಂಪಾಕ!  ಅವತ್ತೇ ಸಾಯಂಕಾಲ ಅಂಗಡಿಗೆ ಹೋಗಿ ಪಾತ್ರೆ-ಪಗಡ, ಸ್ಟವ್ವು ಮತ್ತಿತರ ಪರಿಕರಗಳನ್ನು ತಂದೆವು.  ಮುಂದಿನ ವಾರ ಊರಿಗೆ ಹೋದವರ ಜೊತೆಗೆ ಮನೆಯಲ್ಲಿ ಮಾಡಿದ ಸಾರಿನಪುಡಿ, ಹುಳಿಪುಡಿ, ಭಾತಿನಪುಡಿ, ಸಂಡಿಗೆ, ಹಪ್ಪಳ, ಉಪ್ಪು ಮೆಣಸಿನಕಾಯಿ, ಬೇಳೆಗಳೂ, ಇನ್ನೊಂದಷ್ಟು ಅನುಕೂಲವಾಗುವ ಝಾಲಿಸೌಟು ಇತ್ಯಾದಿ ಸಲಕರಣೆಗಳೂ ಬಂದವು.  ಅನ್ನಕ್ಕೆ ಒದಗುವ ಪುಡಿಗಳನ್ನೂ, ಉಪ್ಪಿನಕಾಯಿಗಳನ್ನೂ ಮರೆಯಲಾದೀತೇ?  ಮನೆಯಲ್ಲಿ ಕಾಯಿಸಿದ ತುಪ್ಪದ ಬಾಟಲಿಗಳೂ ಬೇಕಲ್ಲ, ಅನ್ನಕ್ಕೆ ಕಲಿಸಿಕೊಳ್ಳಲು?  ಇದರೊಂದಿಗೆ ಬೀದರಿನಲ್ಲಿ ಸಿಗುತ್ತಿದ್ದ ರತ್ನಸಾಗರ ಅನ್ನುವ ಸಣ್ಣಕ್ಕಿಯ ರುಚಿಯನ್ನು ಇನ್ನೂ ಮರೆತಿಲ್ಲ ನಾನು!  ಪ್ರತಿ ಸಲ ಊರಿಗೆ ಹೋದಾಗ, ನಾವು ಮೂವರೂ ನಮ್ಮ ಅಮ್ಮಂದಿರಿಂದ ಹೊಸ ರುಚಿ ಕಲಿತು ಬರೋದು, ಮಾಡಿ ತಿನ್ನೋದು.  ಅದೇ ಊರಿನವರಾದ ನಮ್ಮ ಸಹೋದ್ಯೋಗಿಗಳೂ ನಮ್ಮ ಮನೆಗೆ ಹೇಳಿಕೊಂಡು ಬಂದು ಊಟ ಮಾಡೋದು!

ಬೆಳಗಿನ ತಿಂಡಿ ಮನೆಯೆದುರಿಗಿದ್ದ ಒಂದು ಚಿಕ್ಕ ಹೋಟೆಲಿನಲ್ಲಿ ತಿನ್ನುತ್ತಿದ್ದೆವು.  ಊಟ ಮಧ್ಯಾಹ್ನ ಕಾಲೇಜಿನ ಕ್ಯಾಂಟೀನಿನಲ್ಲಿ.  ಮೂರೂ ಗೆಳೆಯರೂ ತಿಂದು ಬಿಲ್ಲಿನ ದುಡ್ಡನ್ನು ಸಮನಾಗಿ ಹಂಚಿಕೊಂಡು ಕೊಡುವ ರೂಢಿಯಿತ್ತು.  ಈ ಪದ್ಧತಿ ಒಳ್ಳೆಯದೂ ಹೌದು, ಕೆಟ್ಟದ್ದೂ ಹೌದು – ಕೆಟ್ಟದ್ದು ಯಾಕೆ ಅಂದ್ರಾ – ಸಮಾ ದುಡ್ಡು ಕೊಟ್ಟ ಮೇಲೆ ಮೂರೂ ಜನ ಸಮಾ… ತಿನ್ನದೇ ಇರುವುದು ಹೇಗೆ?  ಮೊದಲೇ ತಿಂಡಿಬಾಕರಿದ್ದ ನಾವು ಅದರಿಂದ ಸ್ವಲ್ಪ ಹೆಚ್ಚೇ ತಿನ್ನುತ್ತಿದ್ದೆವು ಅನ್ನಿ.  ನಮ್ಮ ಜೊತೆಗೆ ಹಂಚಿಕೊಂಡು ತಿಂಡಿಗೆ ಬರುತ್ತಿದ್ದ ಇನ್ನೊಬ್ಬ ಗೆಳೆಯ 3 ಪೂರಿ ತಿನ್ನುವುದರೊಳಗೆ, ನಾವು ಮೂವರೂ ಒಂಚೂರೂ ಕಷ್ಟವಿಲ್ಲದೇ ಮೂರು-ಮೂರು ಪ್ಲೇಟು ತಿಂದಿರುತ್ತಿದ್ದೆವು.  ಒಂದು ವಾರಕ್ಕೆ ನಮ್ಮ ಹೊಸ ಜೋಡಿದಾರ ನಮ್ಮ ಜಠರಾಗ್ನಿಗೆ ನಮಸ್ಕಾರ ಹಾಕಿ ಬರುವುದನ್ನು ಬಿಟ್ಟ!     

ಸಾಯಂಕಾಲ ನಮ್ಮ ಕೈಯಡಿಗೆ – ಅನ್ನ, ಹುಳಿ, ಪಲ್ಯ, ಖಾನಾವಳಿಯಿಂದ ತಂದ ಭಕ್ಕರಿ (ಜೋಳದ ರೊಟ್ಟಿ) / ಚಪಾತಿ ಮತ್ತು ಅಂಗಡಿಯ ಗಟ್ಟಿ ಮೊಸರು.  ಜೊತೆಗೆ ಮನೆಯಲ್ಲಿ ಕಾಯಿಸಿದ ಘಮ್ಮೆನ್ನುವ ತುಪ್ಪ!  ಸುಖವೋ ಸುಖ!  ಹುಳಿಪುಡಿಯ ಘಮದ ಅಡಿಗೆಯ ವಾಸನೆ ತಡೆಯಲಾಗದೇ ನಮ್ಮ ಮನೆಯ ಮಾಲೀಕರು ಒಂದಷ್ಟು ಸಲ ಏನ್ರೀ ಅಡಿಗೆ ಇವತ್ತು ಅಂದು ಬಂದು ನೋಡಿದ್ದೂ ಇದೆ.  ಮಾಡಿದ ಅಡಿಗೆ ಅವತ್ತಿಗೆ ಖಾಲಿ ಮಾಡುವುದೇ ಕೆಲಸ (“ಫುಲ್ ಜಸ್ಟಿಸ್”) .  ರಾತ್ರಿ 9 ಕ್ಕೆ ಹೊಟ್ಟೆ ತುಂಬಾ ಉಂಡು, ಮನೆಯಿಂದ ತಂದ ಅಡಿಕೆಪುಡಿ ಹಾಕಿಕೊಂಡು, ಕೈಯಲ್ಲಿ ರೇಡಿಯೋ ಹಿಡಿದುಕೊಂಡು ವಾಕಿಂಗ್ ಹೋಗುವುದು; ಅಲ್ಲಿಂದ ಬಂದು ಓದುವುದು.  ಇದು ನಮ್ಮ ನಿತ್ಯದ ದಿನಚರಿ.  ಎರಡು ದಿನಕ್ಕೆ ನಮ್ಮಲ್ಲಿರಲು ಬಂದ ಗೆಳೆಯನೊಬ್ಬ ಅವನ ಹೆಂಡತಿಯ ಕೈಯಡುಗೆಯನ್ನು ಬೈಯುತ್ತ, ನಮ್ಮ ಅಡಿಗೆಯ ರುಚಿಯನ್ನು ಹೊಗಳಿ ಹೋದ; ಅಷ್ಟೇ ಅಲ್ಲ ನಮ್ಮ ಕಾಲೇಜಿನ ಮಿತ್ರರಲ್ಲೆಲ್ಲ ಹಬ್ಬಿಸಿದ ಕೂಡ.

ಬೀದರಿನಲ್ಲಿರುವ ಪ್ರಸಿದ್ಧ ನಾನಕ್ ಝರಾದ ಗುರುದ್ವಾರಾದ ಹತ್ತಿರ ಇರುವ ಪಂಜಾಬಿ ಧಾಬಾಗಳಿಗೆ, ಪ್ರತಿ ರವಿವಾರ ಬೆಳಗ್ಗೆ 7.30ಕ್ಕೆ ಹಾಜರ್ ನಾವು ಮೂವರೂ! ಒಬ್ಬೊಬ್ಬರು ಎಂಟಿಂಚಿನ ಅಗಲದ 6 ಆಲೂ ಪರಾಠಾಗಳನ್ನು ಬೆಣ್ಣೆ-ಮೊಸರು-ಉಪ್ಪಿನಕಾಯಿಗಳೊಂದಿಗೆ ನುಂಗಿ ಬಂದು ಹೆಬ್ಬಾವಿನಂತೆ ಮಲಗಿದರೆ, ಒಮ್ಮೆಲೆ 3 ಗಂಟೆಗೆ ಎದ್ದು, ಚಹಾ ಕುಡಿದು – ಮತ್ತೆ ಸಾಯಂಕಾಲದ ಅಡಿಗೆಯ ತಯಾರಿಗೆ ರೆಡಿ!!  

ಓಡಾಡುವುದಕ್ಕೆ ಗೆಳೆಯ ಅನುರೂಪನ ಬಜಾಜ್ ಸ್ಕೂಟರ್ರು ಇತ್ತು.  ಮೊದಲು ಮೂರೂ ಜನ ಆರಾಮವಾಗಿ ಒಂದೇ ಸ್ಕೂಟರಿನ ಮೇಲೆ ಕೂತು ಓಡಾಡುತ್ತಿದ್ದೆವು.  ನಮ್ಮ ತಿಂಡಿ-ಊಟದ (ಫುಲ್ ಜಸ್ಟಿಸ್!) ಪರಿಣಾಮದಿಂದ, ಮೂವರೂ ಕೂತು ಓಡಿಸುತ್ತಿದ್ದ ಅನುರೂಪನ ಸ್ಕೂಟರಿನ ಹ್ಯಾಂಡಲ್ಲು ಹತ್ತಿರ ಹತ್ತಿರವೆನ್ನಿಸತೊಡಗಿತು.  “ಲೇ, ಸ್ವಲ್ಪ ಮುಂದೆ ಸರಿಯಲೇ, ಹಿಂದೆ ಜಾಗ ಇಲ್ಲ” ಅಂತ ನಾವನ್ನುವುದು, “ಜಾಗ ಎಲ್ಲದರಲೇ, ನಾನಿನ್ನು ಹ್ಯಾಂಡಲ್ ಆ ಕಡೆ ಹೋಗಬೇಕಷ್ಟೇ!” ಅಂತ ಅವನನ್ನುವುದೂ ಶುರುವಾಯ್ತು.  ನಮ್ಮ ಕಾಲೇಜಿನ ಸೀನಿಯರ್ ಹುಡುಗಿಯರು ನಮ್ಮನ್ನು ಒಂದೇ ಸ್ಕೂಟರಿನ ಮೇಲೆ ನೋಡುವ ರೀತಿ ಯಾಕೋ ಬದಲಾಗಿದೆ ಅನ್ನಿಸಲು ಶುರುವಾಗಿ ಅದನ್ನು ನಿಲ್ಲಿಸಿದೆವು.  ಆದರೆ, ದಿನಕ್ಕೆ ಇಬ್ಬರು ಸ್ಕೂಟರಿನ ಮೇಲೆ ಹೋಗುವುದು ಮತ್ತು ಮೂರನೆಯವರು ಕಾಲೇಜು ವ್ಯಾನಿನಲ್ಲಿ ಹೋಗುವುದೆಂದು ತೀರ್ಮಾನಿಸಿದೆವು.  ರೂಲ್ಸ್ ಪ್ರಕಾರ ಪ್ರತಿ ಮೂರನೆಯ ದಿನ (ಸ್ಕೂಟರಿಟ್ಟವನು ಅವನೇ ಆದರೂ) ಅನುರೂಪನನ್ನು ಎಬ್ಬಿಸಿ, ಬಸ್ಸಿಗೆ ಹೋಗಲು ಹೇಳುತ್ತಿದ್ದೆವು!

ಮುಂದೆ ಪುಣೆಯಲ್ಲಿ 3 ವರ್ಷ, ವೆಲ್ಲೂರಿನಲ್ಲಿ 1 ವರ್ಷ ಇದ್ದು ಚೆನ್ನಾಯಿಗೆ ಬಂದೆ.  ಚೆನ್ನಾಯಿಯಲ್ಲಿ ಒಂದು ದೊಡ್ಡ ಫ್ಲಾಟಿನಲ್ಲಿ 5 ಹುಡುಗರೊಂದಿಗೆ ಇದ್ದೆ.  ಅಲ್ಲಿ 2-3 ವಾರಕ್ಕೊಮ್ಮೆ ನಮ್ಮ ಮ್ಯಾಗ್ಗಿ ನೂಡಲ್ಸ್ ಸಮಾರಾಧನೆ.  9-10 ಪಾಕೀಟುಗಳಿಗೆ, ಇತರ ತರಕಾರಿ ಹಾಕಿ ಒಂದಿಡೀ ಅಮುಲ್ ಬಟರ್ ಬ್ಲಾಕ್ ಹಾಕಿ ಮಾಡಿದ ನೂಡಲ್ಸ್ ಅನ್ನು, ಬೆಣ್ಣೆ ಹಚ್ಚಿ ಹಂಚಿನ ಮೇಲೆ ಘಮ್ಮನ್ನುವಂತೆ ಬೇಯಿಸಿದ ಬ್ರೆಡ್ಡಿನೊಂದಿಗೆ ತಿನ್ನುವುದು! ಆಹಾ!

ಪ್ರಸ್ತುತ….

ಮದುವೆಯಾದಾಗಿನಿಂದ, ಅದೂ ಇಂಗ್ಲಂಡಿಗೆ ಬಂದ ಮೇಲೆ, ವಾರ-ಎರಡು ವಾರಕ್ಕೊಮ್ಮೆ (ಹೆಂಡತಿಯ on call ಬರುತ್ತವಲ್ಲ!) ಮಕ್ಕಳೊಂದಿಗೆ ಏನೋ ಒಂದು ಐಟಮ್ ಅಡಿಗೆ ಮಾಡುವುದು ಬಿಟ್ಟರೆ, ಉಳಿದಂತೆ ನನ್ನ ಕೆಲಸ ತರಕಾರಿ ಹೆಚ್ಚುವುದು, ದೋಸೆ ಹುಯ್ದು ಕೊಡುವುದು ಮುಂತಾದ ಸಹಾಯಕ ಕೆಲಸಗಳಷ್ಟೆ.  ಅದೊಂದು ರೀತಿಯ ನಿಶ್ಚಿಂತೆಯ ಕೆಲಸ – ಆದೇಶ ಪರಿಪಾಲನೆ.  ಅದರಲ್ಲೂ ತರಕಾರಿ ಹೆಚ್ಚುವುದು ನನ್ನ ಇಷ್ಟದ ಕೆಲಸ – ಅದಕ್ಕೋಸ್ಕರ ಹೋದಲ್ಲೆಲ್ಲ ಬೇರೆ ಬೇರೆ ತರಹದ ಚಾಕುಗಳನ್ನು ನೋಡುವುದು, ತರುವುದು ಮಾಡಿ ಮನೆಯಲ್ಲೀಗ ಒಂದು ಹನ್ನೆರಡು ಚಾಕುಗಳಿವೆ!  ಇನ್ನೂ ಜಪಾನಿನ ಉಕ್ಕಿನದೊಂದು ತೊಗೊಳ್ಳುವ ಆಸೆಯಿದೆ.  

ಅಡುಗೆಮನೆಯಲ್ಲಿ ಬರಿಯ ಅವಾಂತರಗಳಷ್ಟೇ ಆಗಬೇಕಿಲ್ಲ, ಅಲ್ಲವೇ?  ಅಲ್ಲಿ ಒಂದು ರೀತಿಯ ಮಾನಸಿಕ ಥೆರಪಿ ಸಿಗುತ್ತದೆ.  ತರಕಾರಿ ಸಣ್ಣಗೆ ಹೆಚ್ಚುವುದರ ಕಡೆಗೋ, ದೋಸೆಯನ್ನು ಪರ್ಫೆಕ್ಟ್ ವೃತ್ತಾಕಾರವಾಗುವಂತೆ ಹುಯ್ಯುವುದರ ಕಡೆಗೋ ಮನಸ್ಸನ್ನು ಫೊಕಸ್ ಮಾಡಿ, ಹೊರಜಗದ ಚಿಂತೆ ಮರೆಯಬಹುದು.  “ಪಪ್ಪ ಮೇಕ್ಸ್ ಬೆಟರ್ ದೋಸೆ” ಅಂತಲೋ, ಯಾವತ್ತೋ ಒಮ್ಮೆ ಮಾಡುವ ಸೌತೆಕಾಯಿ ಭಾತನ್ನು “ಹಿಸ್ ಭಾತ್ ಇಸ್ ದ ಬೆಸ್ಟ್, ಅಮ್ಮಾ” ಅಂತಲೋ ಮಕ್ಕಳು ಹೇಳುವಾಗ – ಹೆಮ್ಮೆಯಿಂದ ಹೆಂಡತಿಯ ಕಡೆಗೆ ನೋಡಿ ಬೀಗಬಹುದು!

– ಲಕ್ಷ್ಮೀನಾರಾಯಣ ಗುಡೂರ್.

************************************************************************