ರಾಜಕುಮಾರಿ ಸೋಫಿಯಾ ದುಲೀಪ್ ಸಿಂಗ್ (೧೮೭೬-೧೯೪೮) – ರಾಮಮೂರ್ತಿ ಎಚ್ ಎನ್.

ನಮಸ್ಕಾರ.  ನಮ್ಮ ಅನಿವಾಸಿ ಬಳಗದ ಉತ್ಸಾಹಿ ಬರಹಗಾರ, ಇತಿಹಾಸದ ಅಧ್ಯೇತೃ (ಬೇಸಿಂಗ್‍ಸ್ಟೋಕ್) ರಾಮಮೂರ್ತಿ ಅವರು ಬರೆದಿರುವ ಇನ್ನೊಂದು ಲೇಖನ. ಪಂಜಾಬಿನ ಕೊನೆಯ ರಾಜ ದುಲೀಪ್ ಸಿಂಹರ ಮಗಳು ರಾಜಕುಮಾರಿ ಸೋಫಿಯಾ ಅವರ ಜೀವನ ಚಿತ್ರಣ ಇಲ್ಲಿದೆ.  ಬರಿಯ ರಾಜಕುಮಾರಿಯಾಗಿ ಉಳಿಯದೇ ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಿದ, ಮೊದಲ ಮಹಾಯುದ್ಧದ ವೇಳೆಯಲ್ಲಿ ಹಲವಾರು ಉತ್ತಮ ಕಾರ್ಯಗಳನ್ನು ಮಾಡಿದ, ಆ ಕಾರಣಕ್ಕಾಗಿ ಬ್ರಿಟಿಷ್ ಸರಕಾರದಿಂದ ಗೌರವಿಸಲ್ಪಟ್ಟ ಮಹಿಳೆ.  
ಎಂದಿನಂತೆ ಓದಿ, ಪ್ರತಿಕ್ರಯಿಸಿ, ನಿಮ್ಮ ಅನಿಸಿಕೆಗಳನ್ನು ಬ್ಲಾಗಿನಲ್ಲಿ ಹಂಚಿಕೊಳ್ಳಿ. ಧನ್ಯವಾದಗಳೊಂದಿಗೆ - ಲಕ್ಷ್ಮೀನಾರಾಯಣ ಗುಡೂರ್ (ಈ ವಾರದ ಸಂಪಾದಕಿ ಅಮಿತಾ ರವಿಕಿರಣ ಅವರ ಪರವಾಗಿ).

********************

ದುಲೀಪ್ ಸಿಂಹ ಮತ್ತು ರಾಜಕುಮಾರಿ ಸೋಫಿಯಾ (ಚಿತ್ರಕೃಪೆ: ವಿವಿಧ ಅಂತರ್ಜಾಲತಾಣಗಳು)
೨೦ನೇ ಶತಮಾನದ ಆದಿಯಲ್ಲಿ ಇಂಗ್ಲೆಂಡ್ ದೇಶದ ಮಹಿಳೆಯರು ಮೂಲಭೂತ ಮತ್ತು ಮತದಾನದ ಹಕ್ಕು ಪಡೆಯಲು ನಡೆಸಿದ ಚಳುವಳಿಗಳಿಗೆ (Suffragette Movement) ಹೋರಾಡಿದ ಭಾರತ ಮೂಲದ ರಾಜಕುಮಾರಿ ಸೋಫಿಯಾ.  ಈಕೆ, ಭಾರತದ ಮತ್ತು ಇಂಗ್ಲೆಂಡಿನ ಶ್ರೀಮಂತ ಕುಟುಂಬದ ಆಶ್ರಯದಲ್ಲಿ ಬೆಳೆದರೂ ಅವಳ ಹೋರಾಟ ರಾಜಕೀಯ ಚಟುವಟಿಕೆಯಲ್ಲೇ ಇತ್ತು.

ಇವಳ ತಂದೆ ಪಂಜಾಬಿನ ಕೊನೆಯ ಮಹಾರಾಜ ದುಲೀಪ್ ಸಿಂಗ್. ಪಂಜಾಬಿನ “ಸಿಂಹ” ಮಹಾರಾಜ ರಂಜಿತ್ ಸಿಂಗ್‍ರ (೧೭೮೦-೧೮೩೯) ನಿಧನವಾದಮೇಲೆ ಆ ಪಟ್ಟಕ್ಕೇರಲು ಅನೇಕರು ಹೋರಾಡಿ, ಕೊನೆಗೆ ಐದು ವರ್ಷದ ದುಲೀಪ್ ಸಿಂಗ್‍ನನ್ನು ರಾಜನನ್ನಾಗಿ ಮಾಡಿದರು. ಆದರೆ ರಾಜ್ಯದಲ್ಲಿ ಅಸ್ಥಿರತೆ ಇರುವುದನ್ನು ಕಂಡು ೧೮೪೯ ರಲ್ಲಿ ಈಸ್ಟ್ ಇಂಡಿಯಾ ಕಂಪನಿಯವರು ಎರಡನೆಯ ಆಂಗ್ಲೋ-ಸಿಖ್ ಯುದ್ಧದ ನಂತರ ಪಂಜಾಬ್ ಪ್ರಾಂತ್ಯವನ್ನು ಆಕ್ರಮಿಸಿಕೊಂಡು ಹತ್ತು ವರ್ಷದ ದುಲೀಪ್ ಸಿಂಗ್‍ನಿಂದ ಅವನ ಜಮೀನು ಮತ್ತು ಕೊಹಿನೂರ್ ವಜ್ರವನ್ನು ಕಸಿದುಕೊಂಡರು. ನಂತರ ದುಲೀಪ್ ಸಿಂಗನಿಗೆ ಪಿಂಚಿಣಿ ಕೊಟ್ಟು ಇಂಗ್ಲೆಂಡ್‍ನಲ್ಲಿ ವಾಸಮಾಡುವುದಕ್ಕೆ ಏರ್ಪಾಡು ಮಾಡಿದರು, ಇದಲ್ಲದೆ ಸಿಖ್ ಧರ್ಮದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರ, ಬಹುಶಃ ಬಲವಂತದಿಂದ, ಮಾಡಿದರು.

ಸೋಫಿಯಾ ೮/೦೮/೧೮೭೬ ರಂದು ಲಂಡನ್ ನಗರದ ಬೆಲ್‍ಗ್ರೇವಿಯದಲ್ಲಿ ಜನಿಸಿದಳು. ತಾಯಿ, ಬಾಂಬ ಮುಲ್ಲರ್ (ಜರ್ಮನ್ ಮತ್ತು ಇಥಿಯೋಪಿಯಾ ಮೂಲದವಳು). ದುಲೀಪ್ ಸಿಂಗ್ ೧೮೬೩ರಲ್ಲಿ Suffolk ನಲ್ಲಿ ಇರುವ ೧೭,೦೦೦ ಎಕರೆ Elvedon Hall ಕೊಂಡಿದ್ದ (ಲಂಡನ್‍ನಲ್ಲಿದ್ದ India Office ನ ಸಹಾಯದಿಂದ). ಅವನ ಕುಟುಂಬ ಲಂಡನ್‍ನಿಂದ ಇಲ್ಲಿಗೆ ಬಂದು ನೆಲೆಸಿದರು. ರಾಣಿ ವಿಕ್ಟೊರಿಯಾ ದುಲೀಪ್ ಸಿಂಗನ ಮಕ್ಕಳನ್ನು, ಅದರಲ್ಲೂ ಸೋಫಿಯಾಳನ್ನು, ಸಾಕುಮಕ್ಕಳಂತೆ ಪರಿಗಣಿಸಿ ಅವರ ವಿದ್ಯಾಭ್ಯಾಸಕ್ಕೆ ನೆರವಾಗಿದ್ದಳು.

೧೮೮೭ ರಲ್ಲಿ ಬಾಂಬ ಮುಲ್ಲರ್ ಜ್ವರದಿಂದ ನಿಧನಳಾದ ಮೇಲೆ, ದುಲೀಪ್ ಸಿಂಗ್ ೧೮೮೯ರಲ್ಲಿ ಪುನಃ ಮದುವೆಯಾದ. ಆದರೆ ಇವನ ಆರ್ಥಿಕ ಮತ್ತು ರಾಜಕೀಯ ಪರಿಸ್ಥಿತಿ ಹದಗೆಟ್ಟು ೧೮೮೦ ರಲ್ಲಿ Elvendon Hall ಬಿಡಬೇಕಾಯಿತು. ಸೋಫಿಯಾ ಹತ್ತು ವರ್ಷವಾಗಿದ್ದಾಗ, ದುಲೀಪ್ ಸಿಂಗ್ ತನ್ನ ಸಂಸಾರದ ಜೊತೆಯಲ್ಲಿ ಪಂಜಾಬಿಗೆ ಹಿಂತಿರುಗಲು ಮಾಡಿದ ಪ್ರಯತ್ನ ವಿಫಲವಾಯಿತು. ಹಡಗು ಏಡನ್ ತಲಪಿದಾಗ ಇವರ ಬಂಧನಕ್ಕೆ ಬ್ರಿಟಿಷ್ ಸರ್ಕಾರದ ವಾರಂಟ್ ಕಾದಿತ್ತು. ನಂತರ ದುಲೀಪ್ ಸಿಂಗ್ ಪ್ಯಾರಿಸ್ ನಗರದಲ್ಲಿ ಹಲವು ವರ್ಷಗಳನ್ನು ಕಳೆದು ೫೫ ನೇ ವಯಸ್ಸಿನಲ್ಲಿ ೧೮೯೩ರಲ್ಲಿ ನಿಧನನಾದ.

ರಾಣಿ ವಿಕ್ಟೋರಿಯಾ ಈ ಮಕ್ಕಳ ಯೋಗಕ್ಷೇಮವನ್ನು ಆಲಿಫಂಟ್ ಕುಟುಂಬಕ್ಕೆ ವಹಿಸಿ, ಬ್ರೈಟನ್ ನಗರದಲ್ಲಿ ವಿದ್ಯಾಭ್ಯಾಸ ಮುಂದುವರೆಸುವುದಕ್ಕೆ ಮತ್ತು ವಾಸಕ್ಕೆ ರಾಜ ಮನೆತನದ ಹ್ಯಾಂಪ್ಟನ್ ಕೋರ್ಟ್ ಆವರಣದಲ್ಲಿ ಏರ್ಪಾಡು ಮಾಡಲಾಯಿತು.

ಸೋಫಿಯಾ ಮೊದಲ ಕೆಲವು ವರ್ಷಗಳು ಅತ್ಯಂತ ಆರಾಮದ ಜೀವನವನ್ನು ಕಳೆದಳು. ಆದರೆ ೧೯೦೭ ರಲ್ಲಿ ಮೊದಲ ಬಾರಿಗೆ ಭಾರತಕ್ಕೆ ಭೇಟಿ ಕೊಟ್ಟಾಗ, ಅಲ್ಲಿನ ಜನರ ಬಡತನ ಮತ್ತು ಸಮಾಜದಲ್ಲಿ ನಡೆಯುತ್ತಿದ್ದ ಅನ್ಯಾಯಗಳನ್ನು ನೋಡಿ ಅವಳ ಮನಸ್ಸು ಪರಿವರ್ತನೆ ಆಯಿತು.
೧೯೧೦ ರವರೆಗೂ ಇಂಗ್ಲೆಂಡಿನಲ್ಲಿ ಮಹಿಳೆಯರಿಗೆ ಯಾವ ರೀತಿಯ ಹಕ್ಕುಗಳೂ ಇರಲಿಲ್ಲ. ಇದನ್ನು ಪ್ರತಿಭಟಿಸಿ "Women's Social and Political Union" (WSPU) ಅನ್ನುವ ಸಂಸ್ಥೆ ಎಮೆಲೀನ್ ಪ್ಯಾಂಕ್‍ಹರ್ಸ್ಟ್ (Emmeline Pankhurst) ಳ ನೇತೃತ್ವದಲ್ಲಿ ಪ್ರಾರಂಭವಾಗಿತ್ತು. ಸೋಫಿಯಾ ಈ ಚಳುವಳಿಯಲ್ಲಿ ಭಾಗವಹಿಸಿವುದಕ್ಕೆ ನಿರ್ಧರಿಸಿ, ಈ ಸಂಸ್ಥೆಯ ಸದಸ್ಯೆ ಆಗಿ ಅನೇಕ ರೀತಿಯಲ್ಲಿ ಸಹಾಯ ಮಾಡಿದಳು. ಸೋಫಿಯಾ ತಾನು ವಾಸವಾಗಿದ್ದ ಹ್ಯಾಂಪ್ಟನ್ ಕೋರ್ಟ್ ಹೆಬ್ಬಾಗಿಲಿನ ಮುಂದೆ ನಿಂತು The Suffragette ಪತ್ರಿಕೆಯ ಮಾರಾಟವನ್ನು ಸಹ ಮಾಡುತಿದ್ದಳು.

೧೯೧೦ ರಲ್ಲಿ ಲಂಡನ್ ನಗರದಲ್ಲಿ ನಡೆದ Black Friday ಪ್ರತಿಭಟನೆಯಲ್ಲಿ ೩೦೦ ಮಹಿಳೆಯರ ತಂಡದೊಂದಿಗೆ ಸೋಫಿಯಾ ಭಾಗವಹಿಸಿ ಕ್ಯಾಸ್ಟನ್ ಹಾಲ್‍ನಿಂದ ಪಾರ್ಲಿಮೆಂಟಿನವರೆಗೆ ನಡೆದು, ಅಲ್ಲಿ ಪ್ರಧಾನ ಮಂತ್ರಿಗಳನ್ನು ಭೆಟ್ಟಿಯಾಗಲು ಪ್ರಯತ್ನಿಸಿದರು. ಆದರೆ ಅವರು ನಿರಾಕರಿಸಿದ್ದರಿಂದ ಈ ತಂಡ ಅಲ್ಲೇ ಕುಳಿತು ಘೋಷಣೆಗಳನ್ನು ಕೂಗುವುದಕ್ಕೆ ಪ್ರಾರಂಭಿಸಿದಾಗ ಪೊಲೀಸರು ಇವರ ಮೇಲೆ ಅತ್ಯಂತ ದೌರ್ಜನ್ಯದಿಂದ ವರ್ತಿಸಿದರು. ಈ ತಂಡದ ಅನೇಕರು ಗಾಯಗೊಂಡು ಇಬ್ಬರ ಮರಣಕ್ಕೂ ಪೋಲೀಸರ ದೌರ್ಜನ್ಯ ಕಾರಣವಾಯಿತು. ಅಂದಿನ ಗೃಹಮಂತ್ರಿ ಸರ್ ವಿನ್ಸ್ಟನ್ ಚರ್ಚಿಲ್ ಪೊಲೀಸರಿಗೆ ಉತ್ತೇಜನ ಕೊಟ್ಟರು ಅನ್ನುವ ಆರೋಪ ಸಹ ಬಂದಿತ್ತು.

೧೯೧೧ ರಲ್ಲಿ ನಡೆದ ಜನಗಣತಿಯಲ್ಲಿ (Census) ಭಾಗವಹಿಸುವುದಕ್ಕೆ ಸೋಫಿಯಾ ಮತ್ತು ಸಂಸ್ಥೆಯವರು ನಿರಾಕರಿಸಿದರು. ಸೋಫಿಯಾ ಜನಗಣತಿಯ ಚೀಟಿಯ ಮೇಲೆ ಈ ರೀತಿ ಬರೆದು ಚೀಟಿಯನ್ನು ಹಿಂತಿರಿಗಿಸಿದಳು (ಕೆಳಗೆ ಚಿತ್ರ ನೋಡಿ) - No Vote, No Census. As women do not count, they refuse to be counted; I have a conscientious objection to filling up this form.
No Vote, No Tax.

ಮತದಾನದ ಹಕ್ಕು ಇಲ್ಲದೆ ವರಮಾನ ತೆರಿಗೆ ಕೊಡುವುದಕ್ಕೂ ಸೋಫಿಯಾ ನಿರಾಕರಿಸಿದ್ದರಿಂದ ನ್ಯಾಯಾಲಯ £೧೨ ದಂಡ ಹಾಕಿತು. ಆದರೆ ಇದನ್ನು ಪ್ರತಿಭಟಿಸಿ ದಂಡವನ್ನು ಕಟ್ಟಲಿಲ್ಲವಾದ ಕಾರಣದಿಂದಿಂದ ಅವಳ ಕೆಲವು ಆಭರಣಗಳನ್ನು ವಶಪಡಿಸಿಕೊಂಡು ಹರಾಜು ಮಾಡಲಾಯಿತು. ಆದರೆ WSPUನ ಕಾರ್ಯದರ್ಶಿ ಈ ಹರಾಜಿನಲ್ಲಿ ಭಾಗವಹಿಸಿ ಆಭರಣಗಳನ್ನು ಕೊಂಡುಕೊಂಡು ಸೋಫಿಯಾಗೆ ವಾಪಸ್ಸು ಕೊಟ್ಟರು.

೧೯೧೪ ನಲ್ಲಿ ಮೊದಲನೇ ಮಹಾಯುದ್ಧ ಪ್ರಾರಂಭವಾದ್ದರಿಂದ ಮಹಿಳೆಯರು ತಮ್ಮ ಹೋರಾಟವನ್ನು ನಿಲ್ಲಿಸಿ, ದೇಶದ ಮತ್ತು ಸರಕಾರದ ಪರವಾಗಿ ನಿಂತು ಸಹಾಯ ಮಾಡುವುದಕ್ಕೆ ಸಿದ್ದರಾದರು. ಲಕ್ಷಾಂತರ ಭಾರತೀಯ ಸೈನಿಕರು ಈ ಯುದ್ಧದಲ್ಲಿ ಭಾಗವಹಿಸಿದ್ದರು, ಇವರ ಯೋಗಕ್ಷೇಮ ಕಾಯಲು ಸೋಫಿಯಾ ನೆರವಾಗಿ Red Cross ಸಂಸ್ಥೆಯ ಪರವಾಗಿ ಹಣ ಸಂಗ್ರಹಣೆ ಮಾಡಿದಳು. ಸ್ವತಃ ೧೯೧೫ರಲ್ಲಿ ಮಿಲಿಟರಿ ಆಸ್ಪತ್ರೆಯಲ್ಲಿ ಬ್ರಿಟಿಷ್ ರೆಡ್‍ಕ್ರಾಸ್ ನರ್ಸ್ ಆಗಿ ಸೇರಿ ಸೇವೆ ಮಾಡಿದಳು. ೧೯೧೮ ರಲ್ಲಿ YMCA War Emergency Committee ಯ ಕಾರ್ಯದರ್ಶಿಯಾಗಿ, ಲಂಡನ್‍ನಲ್ಲಿ “ಧ್ವಜ ದಿವಸ” (Flag Day) ನಡೆದ ನಂತರ “ಭಾರತೀಯ ದಿವಸ” (India day)ದ ಆಚರಣೆಯನ್ನು ಮಾಡಿ, ೫೦೦೦೦ ವಸತಿಗೃಹಗಳನ್ನು ಗಾಯಗೊಂಡ ಭಾರತೀಯ ಸೈನಿಕರು ವಾಸಕ್ಕೆ ಒದಗಿಸಲು ಕಾರಣಳಾದಳು.
ಯುದ್ಧ ಮುಗಿದ ಮೇಲೆ (೧೯೧೮) ಆಂಗ್ಲ ಸರ್ಕಾರ "The Representation of the People Act" ಕಾನೂನು ಜಾರಿಯಾದಾಗ ೩೦ ವರ್ಷ ಮೀರಿದ ಮಹಿಳೆಯರಿಗೂ, ೧೯೨೮ ರ “Franchise Act” ಕಾನೂನು ಹೊರಬಂದಾಗ ೨೧ ವರ್ಷ ಮೀರಿದ ಮಹಿಳೆಯರಿಗೂ ಮತದಾನದ ಹಕ್ಕು ಬಂತು.

ಈ ದೇಶದಲ್ಲಿ ಇಂದಿನ ಸಮಾಜದಲ್ಲಿ ಮಹಿಳೆಯರಿಗೆ ಇರುವ ಹಕ್ಕು ಮತ್ತು ಸ್ವಾತಂತ್ರಕ್ಕೆ ಕಾರಣ ಸೋಫಿಯಾ ಮತ್ತು ಅವಳ ಸಂಗಡಿಗರ ಹೋರಾಟವೇ ಕಾರಣ ಅನ್ನುವುದರಲ್ಲಿ ಸಂದೇಹವೇ ಇಲ್ಲ.
೨೨/೦೮/೧೯೪೮ ರಲ್ಲಿ ಸೋಫಿಯಾ ಬಕಿಂಗ್‍ಹ್ಯಾಮ್‍ಶೈರ್ನಲ್ಲಿರುವ ಪೆನ್ನ್ ಊರಿನಲ್ಲಿ ಅವಳ ತಂಗಿಯ ಮನೆಯಲ್ಲಿ ತನ್ನ ೭೨ನೇ ವಯಸ್ಸಿನಲ್ಲಿ ನಿಧನಾದಳು.  ರಾಜಕುಮಾರಿ ಸೋಫಿಯಾಳ ಅಂತ್ಯಕ್ರಿಯೆ Golders Green crematorium ನಲ್ಲಿ ೨೬/೦೮/೧೯೪೮ ರಂದು ನಡೆಯಿತು. ಅವಳ ಕೊನೆ ಇಚ್ಛೆ ತನ್ನ ಅಂತಕ್ರಿಯೆಯು ಸಿಖ್ ಪದ್ಧತಿಯಲ್ಲಿ ನಡೆಯಬೇಕೆಂದು ಇತ್ತು. 

ಸೋಫಿಯಾಗೆ ದೊರೆತ ಮರಣೋತ್ತರ ಮಾನ್ಯತೆಗಳು ಅನೇಕ; ರಾಯಲ್ ಮೇಲ್‍ನವರ "Votes for Women" ದಿನಾಚರಣೆಯಲ್ಲಿ ೧೫/೦೨/೨೦೧೮ ಸೋಫಿಯಾ The Suffragette ಪತ್ರಿಕೆಯನ್ನು ಮಾರುತ್ತಿರುವ ಚಿತ್ರವುಳ್ಳ ಅಂಚೆಚೀಟಿ (postage stamp) ಬಿಡುಗಡೆ ಆಯಿತು.

ಏಪ್ರಿಲ್ ೨೦೧೮ ರಲ್ಲಿ ಪಾರ್ಲಿಮೆಂಟ್ ಮುಂದಿರುವ ಕಂಬದ ಮೇಲೆ ಸೋಫಿಯಾಳ ಚಿತ್ರ ಮತ್ತು ಹೆಸರನ್ನು ಕೆತ್ತಲಾಗಿದೆ.
A Princess' Guide to Burning Issue ಅನ್ನುವ ಮಕ್ಕಳಿಗಾಗಿ ಮಾಡಿದ ನಾಟಕ ಅನೇಕ ಶಾಲೆಗಳಲ್ಲಿ ಪ್ರದರ್ಶಿಸಲ್ಪಟ್ಟಿದೆ.
English Heritage ನವರು ಹ್ಯಾಂಪ್ಟನ್ ಕೋರ್ಟ್‍ನ ಹತ್ತಿರದ ಮನೆಯ ಮೇಲೆ ನೀಲಿ ಫಲಕದ (Blue Plaque) ಅನಾವರಣೆಯನ್ನು ೨೦೨೩ರಲ್ಲಿ ಮಾಡಿದರು.

ಸೋಫಿಯಾ ಜೀವನ ಚರಿತ್ರೆಯ ಬಗ್ಗೆ ಅನೇಕ ಲೇಖನಗಳು ಮತ್ತು ಪುಸ್ತಕಗಳು ಪ್ರಕಟವಾಗಿವೆ. ಉದಾಹರಣೆಗೆ, ಅನಿತಾ ಆನಂದ್ ಅವರ Suffragette Revolutionary (೨೦೧೫, ISBN ೯೭೮೧೪೦೮೮೩೫೪೫೬).

ಕೊನೆಯ ಮಾತು: ಇಂಗ್ಲೆಂಡಿನಲ್ಲಿ ಮಹಿಳೆಯರಿಗೆ ಮತದಾನ ಮಾಡುವ ಹಕ್ಕು ೧೯೨೮ರಲ್ಲಿ, ಅದೂ ೨೧ ವರ್ಷಕ್ಕೆ ಮೀರಿದವರಿಗೆ ಮಾತ್ರ ದೊರೆತಿತ್ತು; ದಕ್ಷಿಣ ಭಾರತದಲ್ಲಿ, ಮೈಸೂರು ರಾಜ್ಯದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮಹಾರಾಜರು ೧೯೨೩ ರಲ್ಲಿಯೇ ಮಹಿಳೆಯರಿಗೆ ಈ ಹಕ್ಕನ್ನು ಕೊಟ್ಟಿದ್ದರ ಮಹತ್ವವನ್ನು ಇಲ್ಲಿ ಮರೆಯಬಾರದು.

- ರಾಮಮೂರ್ತಿ ಎಚ್ ಎನ್.
ಕಾಂಗಲ್‍ಟನ್, ಚೆಶೈರ್.

********************

ದಿ. ಎಸ್ ಎಲ್ ಭೈರಪ್ಪ – ನೆನಪುಗಳ ಅಚ್ಚಿನ ನುಡಿನಮನ.

ನಮಸ್ಕಾರ.  ಕನ್ನಡ ಸಾಹಿತ್ಯಾಸಕ್ತರಿಗೆ ಹೋದವಾರ ಎರಗಿದ ಆಘಾತ ಇನ್ನೂ ಪೂರ್ತಿ ಕಡಿಮೆಯಾಗಿಲ್ಲ.  ಶಕ್ತಿಯುತ ಕಾದಂಬರಿಗಳನ್ನು ನೀಡಿದ, ಸರಸ್ವತೀ ಸಮ್ಮಾನ ಪುರಸ್ಕೃತ ಶ್ರೀ ಎಸ್ ಎಲ್ ಭೈರಪ್ಪ ಈ ಲೋಕವನ್ನು ಬಿಟ್ಟು ಹೊರಟರೂ, ಅವರ ಲೆಗಸಿ, ಓದುಗರ ಮೇಲಿನ ಅವರ ಪ್ರಭಾವ, ಅವರ ಕಾದಂಬರಿಗಳ ಪರಿಣಾಮ ಇವ್ಯಾವೂ ಅವರ ಜೊತೆಗೆ ಹೋಗಲಾರವು.  ಅವರ ಪುಸ್ತಕಗಳನ್ನು ಓದುವವರ ಮನಸ್ಸಿನ ಮೇಲೆ ಅದರಲ್ಲಿನ ಪಾತ್ರಗಳು, ಸನ್ನಿವೇಶಗಳು ಹಾಕುವ ಮೋಡಿ ಮರೆಯಾಗಲಾರದು.  ನನ್ನ ಸೋದರತ್ತೆಯ ಮನೆಯಲ್ಲಿ ನಮ್ಮ ಮಾವ ಪೇರಿಸಿಟ್ಟಿದ್ದ ಪುಸ್ತಕ ರಾಶಿಯನ್ನು ಸೇರಿರುವ ಹೊಸ ಹೊತ್ತಗೆಗಳನ್ನು ಓದಿ ಮುಗಿಸುವ ಸ್ಪರ್ಧೆ ಪ್ರತೀ ಬೇಸಿಗೆ ರಜೆಯಲ್ಲಿ ನನಗೂ ನನ್ನ ತಂಗಿಗೂ ಇದ್ದದ್ದೇ.  ಅಷ್ಟು ದಪ್ಪನೆಯ ಪುಸ್ತಕ ಪರ್ವವನ್ನು ಎಡಬಿಡದೆ, ಊಟ ತಿಂಡಿ ಬಿಟ್ಟು ೨೪ ಗಂಟೆಗಳಲ್ಲಿ ಓದಿದ್ದನ್ನು ಮರೆಯಲಾರೆ.  

ನಮ್ಮಲ್ಲಿನ ಹಲವಾರು ಅನಿವಾಸಿ ಸದಸ್ಯರು ತಮ್ಮ ನೆನಪುಗಳನ್ನು, ಅನಿಸಿಕೆಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ ಕೆಳಗೆ. ಈ ಸಂಚಿಕೆಯನ್ನು ಹೋದವಾರ ಶ್ರೀಮತಿ ಗೌರಿ ಪ್ರಸನ್ನ ಅವರು ಬರೆದ ನುಡಿನಮನಕ್ಕೆ ಜೋಡಿಸಿಕೊಂಡು, ಆಸಕ್ತರು ಒಂದೆಡೆ ಇಟ್ಟುಕೊಳ್ಳಬಹುದು. - ಲಕ್ಷ್ಮೀನಾರಾಯಣ ಗುಡೂರ್ (ವಾರದ ಸಂಪಾದಕ).

ಕೊಸರು: ಇಲ್ಲಿ ಪ್ರಕಟಿಸಿರುವ ಲೇಖನಗಳು ಯಾವುದೇ order ನಲ್ಲಿ ಇರುವುದಿಲ್ಲ, ಅವನ್ನು ನನಗೆ ತಲುಪಿದಂತೆ ಬಳಸಿದ್ದೇನೆ.
**********************
ಒಂದು ಮಹಾನ್ ದೀಪವು ಇತರ ಲೋಕಗಳನ್ನು ಪ್ರಕಾಶಮಾನಗೊಳಿಸಲು ಸಾಗಿದೆ. ಕನ್ನಡ ಭಾಷೆಯ ಮೇಲಿನ ನನ್ನ ಪ್ರೀತಿಯು ಎಸ್.ಎಲ್. ಭೈರಪ್ಪ ಅವರ ಬರವಣಿಗೆಯ ಮೂಲಕ ಆಕಾಶಕ್ಕೇರಿತು. ಅವರ ಸಂಶೋಧನೆಯ ಆಳತೆ, ಸತ್ಯವನ್ನು ಅಸಂಪ್ರದಾಯಿಕವಾಗಿ ಮತ್ತು ಅಚಲವಾದ ದೃಢತೆಯಿಂದ ಪ್ರಸ್ತುತಪಡಿಸುವ ಅವರ ನಿಶ್ಚಯವನ್ನು ತೋರಿಸುತ್ತದೆ, ಜೊತೆಗೆ ಕಾದಂಬರಿಯ ಸಾಹಿತ್ಯದ ಸೌಂದರ್ಯವನ್ನು ಕಸಿದುಕೊಳ್ಳದೆ. 'ಅವರಣ' ಓದಿದಾಗ, ಇತಿಹಾಸವನ್ನು ಎಷ್ಟು ಮಟ್ಟಿಗೆ ವಿಕೃತಗೊಳಿಸಲಾಗಿದೆ ಎಂಬುದನ್ನು ನಾನು ಅರಿತುಕೊಂಡೆ ಮತ್ತು ಇದನ್ನು ಎಲ್ಲರಿಗೂ, ವಿಶೇಷವಾಗಿ ಇತಿಹಾಸದ ಕೇವಲ ಒಂದು ಭಾಗವನ್ನು ಮಾತ್ರ ಕೇಳಿರುವ ಯುವಜನತೆಗೆ ಓದಬೇಕೆಂದು ಶಿಫಾರಸು ಮಾಡುವೆ. ಕಥೆಯೊಳಗಿನ ಕಥೆ ಬರೆಯುವ ಕಠಿಣ ತಂತ್ರವನ್ನು ಡಾ. ಭೈರಪ್ಪ ಅವರು ಅದ್ಭುತವಾಗಿ ನಿರ್ವಹಿಸಿದ್ದಾರೆ.

ಇನ್ನೂ ಅವರ ಅನೇಕ ಕಾದಂಬರಿಗಳನ್ನು ನಾನು ಓದಿಲ್ಲ, ಈಗ ಅವುಗಳನ್ನು ಓದುವ ನಿಶ್ಚಯ ಮಾಡಿಕೊಂಡಿದ್ದೇನೆ. ನಮ್ಮ ನಡುವೆ ಎಸ್‌ ಎಲ್‌ ಭೈರಪ್ಪನವರು ಇದ್ದರು ಎಂಬುದು ನಮಗೆ ಆಶೀರ್ವಾದವೇ ಅಲ್ಲವೇ? ಅವರು ಕರುನಾಡಿನಲ್ಲಿ ಹುಟ್ಟಿದ್ದು, ಅವರ ಸಾಹಿತ್ಯದ ಅಪಾರ ಕೊಡುಗೆ ನಮ್ಮ ಕನ್ನಡ ಭಾಷೆಯಲ್ಲಿ ಎಂಬದು ಕನ್ನಡಿಗರಾದ ನಮೆಲ್ಲರಿಗೆಷ್ಟು ಹೆಮ್ಮೆ! ಅವರು 2019ರಲ್ಲಿ ಯುಕೆಗೆ ಭೇಟಿ ನೀಡಿದಾಗ ಅವರನ್ನು ನೋಡುವ ಮತ್ತು ಕೇಳುವ ಅವಕಾಶ ನನ್ನದಾಯಿತು. ಇದಕ್ಕೆ ನಾನು ಚಿರಋಣಿ. ಅವರ ಬಗ್ಗೆ ಹೆಚ್ಚು ತಿಳಿದಷ್ಟು, ಹೆಚ್ಚು ವಿನಮ್ರತೆಯ ಭಾವನೆ ಉಂಟಾಗುತ್ತದೆ. ಅವರ ಗಮನವು ಒಂದು ಯುಗದ ಅಂತ್ಯದಂತೆ ಅನಿಸುತ್ತದೆ.

ಓಂ ಶಾಂತಿ.

- ಶಾಲಿನಿ ಜ್ಞಾನಸುಬ್ರಮಣಿಯನ್.
**********************
ಡಾ ಎಸ್ ಎಲ್ ಭೈರಪ್ಪ; ಕೆಲವು ಚಿಂತನೆಗಳು ಮತ್ತು ನೆನಹುಗಳು
ಡಾ ಜಿ ಎಸ್ ಶಿವಪ್ರಸಾದ್


ಭೈರಪ್ಪನವರು ಬಹಳ ಜನಪ್ರಿಯ ಲೇಖಕರು ಮತ್ತು ಕನ್ನಡ ಸಾರಸ್ವತ ಲೋಕದ ದಿಗ್ಗಜರು. ಸರಸ್ವತಿ ಸಮ್ಮಾನ ಪ್ರಶಸ್ತಿಯನ್ನು ಕನ್ನಡಕ್ಕೆ ತಂದುಕೊಟ್ಟವರು. ಅವರು ಪದ್ಮಶ್ರೀ ಮತ್ತು ಪದ್ಮವಿಭೂಷಣ ಪುರಸ್ಕೃತರೂ ಆಗಿದ್ದರು. ಭೈರಪ್ಪನವರು ಸಮಾಜದಲ್ಲಿನ ವಿವಿಧ ಸಮುದಾಯಗಳ ಅನುಭವವನ್ನು ಪಡೆಯಲು ಹತ್ತಾರು ನೆಲೆಗಳಲ್ಲಿ ಹೋಗಿ ಬದುಕನ್ನು ಹತ್ತಿರದಿಂದ ಕಂಡು, ಅದನ್ನು ಧರ್ಮ, ತರ್ಕ ಶಾಸ್ತ್ರ, ಮತ್ತು ಸಾಂಸ್ಕೃತಿಕ ವಿಷಯಗಳ ಹಿನ್ನೆಲೆಯಲ್ಲಿ ತೀವ್ರ ಚರ್ಚೆಗೆ ಒಳಪಡಿಸಿದ ಲೇಖಕ. ಅವರ ಕಾದಂಬರಿ ವಸ್ತು ವಿಷಯದ ಬಗ್ಗೆ ಸಾಕಷ್ಟು ಸಂಶೋಧನೆಯನ್ನು ಮಾಡಿ ಬದುಕಿನ ಅನುಭವಗಳ ವಿಸ್ತಾರವನ್ನು ಓದುಗರಿಗೆ ಪರಿಚಯಿಸುತ್ತಿದ್ದರು. ತಮ್ಮ ನಿಲುವಿಗೆ ಬದ್ಧರಾಗಿ ನಿಂತವರು ಭೈರಪ್ಪನವರು. ಪಂಡಿತರು, ವಿಮರ್ಶಕರು, ಮೀಮಾಂಸಕರು ಭೈರಪ್ಪನವರ ಕೃತಿಗಳ ತಿರುಳುಗಳನ್ನು ಚರ್ಚಿಸಿದ್ದು ಅದನ್ನು ರಾಜಕೀಯ, ಧಾರ್ಮಿಕ, ಸಾಮಾಜಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ಅದರ ಪ್ರಸ್ತುತತೆಯನ್ನು ಪರಿಣಾಮಗಳನ್ನು ನೋಡಿ ವಿಶ್ಲೇಷಿಸಿದ್ದಾರೆ. ಅಲ್ಲಿ ಕೆಲವು ವಿವಾದಗಳು ಹುಟ್ಟುಕೊಂಡಿರುವುದು ನಿಜ. ಹಲವಾರು ಸಾಂಸ್ಕೃತಿಕ, ಧಾರ್ಮಿಕ, ಮತ, ಜಾತಿ ವ್ಯವಸ್ಥೆಗಳ ನಡುವೆ ಬಹುತ್ವ ಉಳ್ಳ ಭಾರತೀಯ ಸಮಾಜದಲ್ಲಿ ಇತಿಹಾಸ, ಧರ್ಮ, ಸಂಪ್ರದಾಯ ಎಂಬ ವಿಚಾರಗಳು ಭಾವನೆಗಳನ್ನು ಕಲಕುವುದು ಸಹಜವೇ.

ಜಾಗತೀಕರಣದ ಹಿನ್ನೆಲೆಯಲ್ಲಿ ಸಮಾಜ ತೀವ್ರಗತಿಯಲ್ಲಿ ಬದಲಾಗುತ್ತಿದೆ. ರಾಷ್ತ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜಕೀಯ ಕೂಡ ಬದಲಾಗುತ್ತಿದೆ. ಈ ಬದಲಾವಣೆಗಳ ನಡುವೆ ಬದುಕುತ್ತಿರುವ ಸೃಜನ ಶೀಲ ಲೇಖಕರು ಆ ಬದಲಾವಣೆಗಳಿಗೆ ಸ್ಪಂದಿಸಿ ಅದನ್ನು ತಮ್ಮ ಕಲ್ಪನಾ ಶಕ್ತಿಯಿಂದ ಅದರ ವಿವಿಧ ಆಯಾಮಗಳನ್ನು ಗ್ರಹಿಸಿ ಕಥೆ, ಕವನ, ಕಾದಂಬರಿಗಳಲ್ಲಿ ಪ್ರಸ್ತುತಿ ಪಡಿಸುತ್ತಾರೆ. ಅಲ್ಲಿ ಪ್ರಭುತ್ವದ, ಬಹುಸಂಖ್ಯಾತರ, ಅಲ್ಪಸಂಖ್ಯಾತರ ಪರ ಅಥವಾ ವಿರೋಧ ಭಾವನೆಗಳು ಉಂಟಾಗುವುದು ಅನಿವಾರ್ಯವಾಗುತ್ತದೆ. ಪ್ರಜಾಪ್ರಭುತ್ವದಲ್ಲಿ, ಒಂದು ಸಿದ್ಧಾಂತಕ್ಕೆ ಜನರು,
ಓದುಗರು ತಮ್ಮ ವೈಯುಕ್ತಿಕ ಬದುಕಿನ ಅನುಭವದ ಆಧಾರದಮೇಲೆ, ಹುಟ್ಟಿನಿಂದಲೇ ಪ್ರಾಪ್ತವಾಗಿರುವ ಕೆಲವು ಸಾಮಾಜಿಕ, ಧಾರ್ಮಿಕ ಸಾಂಸ್ಕೃತಿಕ ಪ್ರಭಾವಗಳ ಆಧಾರದ ಮೇಲೆ, ತಮ್ಮ ಶಿಕ್ಷಣ, ಸಾಹಿತ್ಯದ ಅರಿವು, ತಮ್ಮ ಪರಿಸರ, ಒಡನಾಟ, ಬದುಕಿನ ಮೌಲ್ಯ, ದೃಷ್ಟಿಕೋನ ಇವುಗಳ ಆಧಾರದ ಮೇಲೆ ತಮಗೆ ಒಪ್ಪುವಂಥ ನಿಲುವನ್ನು ಕಟ್ಟಿಕೊಂಡಿರುತ್ತಾರೆ. ಇಂಥ ಒಂದು ಸನ್ನಿವೇಶದಲ್ಲಿ ಒಂದು ಕಥಾವಸ್ತುವನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಆಯ್ಕೆಯನ್ನು ಅವರು ಪಡೆದಿರುತ್ತಾರೆ. ಹಿಂದೆ ಸಾಹಿತ್ಯ ವಿಚಾರ ಗೋಷ್ಠಿಯಲ್ಲಿ, ಪತ್ರಿಕೆಗಳಲ್ಲಿ, ಪರ ವಿರೋಧ ಚರ್ಚೆಗಳು ನಡೆಯುತ್ತಿದ್ದವು, ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾಗಳಲ್ಲೂ ನಡೆಯುತ್ತಿವೆ. ಈ ಚರ್ಚೆಗಳು ಘನವಾಗಿದ್ದಲ್ಲಿ ಅದು ಸಾಹಿತ್ಯ ಬೆಳವಣಿಗೆಗೆ ಪೂರಕವಾಗಿರುತ್ತದೆ. ಹಿಂದೆ, ಭಿನ್ನಾಭಿಪ್ರಾಯಗಳ ನಡುವೆಯೂ ಹಿರಿಯ ಸಾಹಿತಿಗಳ ನಡುವೆ ಪರಸ್ಪರ ಗೌರವ, ಸ್ನೇಹ, ವಿಶ್ವಾಸಗಳಿರುತ್ತಿದ್ದವು.

ಒಂದು ಕಥೆಯಲ್ಲಿ ಕಥಾವಸ್ತು, ಬರವಣಿಗೆಯ ಶೈಲಿ, ಪಾತ್ರಪೋಷಣೆ, ಸರಳತೆ, ಸಂಕೀರ್ಣತೆ ಹೀಗೆ ಅನೇಕ ಆಯಾಮಗಳಿರುತ್ತವೆ. ಕೆಲವೊಮ್ಮೆ ಕಥಾವಸ್ತು ಇಷ್ಟವಾಗಬಹುದು, ಅಥವಾ ಇಷ್ಟವಾಗದಿರಬಹುದು, ಶೈಲಿ ಇಷ್ಟವಾಗ ಬಹುದು, ಅಥವಾ ಸನ್ನಿವೇಶಗಳ ಸಂಕೀರ್ಣತೆ ಮತ್ತು ಪಾತ್ರಗಳ ಪೋಷಣೆ ಓದುಗನ ಆಸಕ್ತಿಯನ್ನು ಸೆಳೆಯಬಹುದು. ಬದುಕಿನಲ್ಲಿ ಎದುರಾಗುವ ಸಾಮಾಜಿಕ, ಸಾಂಸ್ಕೃತಿಕ ಸಮಸ್ಯೆಗಳ, ನಂಬಿಕಗಳ ಘರ್ಷಣೆಗಳು ದ್ವಂದ್ವಗಳು ಎಲ್ಲರನ್ನು ಕಾಡುವುದು ಸಹಜ. ಆ ರೀತಿ ವಿಚಾರಗಳನ್ನು ಲೇಖಕರು ತೀವ್ರ ವಿಮರ್ಶೆಗೆ ಒಳಪಡಿಸಿ ಅದನ್ನು ತಮ್ಮ ಅಭಿಪ್ರಾಯ ಎಂದು ಹೇಳದೆಯೇ ಪಾತ್ರಗಳ ಮುಖೇನ ತೆರೆದಿಡುತ್ತಾರೆ. ಓದುಗರನ್ನು ಆ ಆಳಕ್ಕೆ ಲೇಖಕರು ಕರೆದೊಯ್ಯುತ್ತಾರೆ. ಓದುಗರು ತಮ್ಮ ಅನುಭವಕ್ಕೆ ತಕ್ಕಂತೆ ಅದನ್ನು ಅರ್ಥೈಸಿಕೊಳ್ಳಬಹುದು.

ಕೆಲವು ಲೇಖಕರ ಕೃತಿಗಳನ್ನು ಅರ್ಥಮಾಡಿಕೊಳ್ಳಲು ಭಾರತೀಯ ಸಾಂಸ್ಕೃತಿಕ ಪ್ರಜ್ಞೆ ಅಗತ್ಯ. ಕೆಲವು ಕೃತಿಗಳಿಗೆ ಸಾಂಸ್ಕೃತಿಕ ಗಡಿಗಳನ್ನು ದಾಟಿ ನಿಲ್ಲುವ ಶಕ್ತಿ ಇರುತ್ತದೆ, ಕೆಲವು ಕೃತಿಗಳನ್ನು ಅದರ ಸಾಂಸ್ಕೃತಿಕ ಹಿನ್ನೆಲೆಯಲ್ಲಿ
ನೋಡಿ ಅರ್ಥೈಸಿಕೊಳ್ಳಬೇಕು. ಎಲ್ಲ ಕೃತಿಗಳಿಗೂ ಇತಿಮಿತಿಗಳಿರುತ್ತದೆ, ಅದರ ಮಧ್ಯದಲ್ಲಿ ಅದು ಎಷ್ಟರ ಮಟ್ಟಿಗೆ ಜನರ ಮನ್ನಣೆ ಪಡೆದಿದೆ, ಕೃತಿಗಳು ಎಷ್ಟು ಜನರನ್ನು ತಲುಪಿದೆ, ಎಷ್ಟು ಮರು ಮುದ್ರಣವನ್ನು ಕಂಡಿದೆ, ಎಷ್ಟು ಭಾಷೆಗಳಿಗೆ ಭಾಷಾಂತರಗೊಂಡಿದೆ ಮತ್ತು ಮುಂದಕ್ಕೆ ಎಲ್ಲಿಯವರೆಗೆ ಜನರಿಂದ ಸ್ವೀಕೃತವಾಗಿರುತ್ತದೆ ಅನ್ನುವುದು ಕಡೆಗೆ ಉಳಿಯುವ ವಿಚಾರ. ಈ ಮೇಲಿನ ವಿಚಾರಗಳ ಹಿನ್ನೆಲೆಯಲ್ಲಿ ನಾವು ಭೈರಪ್ಪನವರನ್ನು ಒಬ್ಬ ಲೇಖಕನಾಗಿ ಮತ್ತು ಅವರು ಬರೆದಿರುವ ಕೃತಿಗಳನ್ನು ಅರ್ಥಮಾಡಿಕೊಳ್ಳ ಬೇಕಾಗಿದೆ.

ನಾನು ಭೈರಪ್ಪನವರನ್ನು ಹತ್ತಿರದಿಂದ ಕಂಡದ್ದು ಅವರು ನಮ್ಮ ಕನ್ನಡ ಬಳಗದ ಮೂವತ್ತನೇ ವಾರ್ಷಿಕೋತ್ಸವದ ಅತಿಥಿಯಾಗಿ ಬಂದ ಸಂದರ್ಭದಲ್ಲಿ. ನಾನು ಆಗ ಸ್ಮರಣ ಸಂಚಿಕೆಯ ಸಂಪಾದಕನಾಗುವುದರ ಜೊತೆಗೆ ಸಾಹಿತ್ಯ ಕಾರ್ಯಕ್ರಮಗಳ ಜವಾಬ್ದಾರಿಯನ್ನೂ ಹೊತ್ತಿದ್ದೆ. ಆಗ ಮುಖ್ಯ ಮಂತ್ರಿ ಚಂದ್ರು ಮತ್ತು ಪ್ರೊ ಕೃಷ್ಣೇಗೌಡರು ನಮ್ಮ ಅತಿಥಿಯಾಗಿ ಆಗಮಿಸಿದ್ದರು. ಡಾ ಭಾನುಮತಿ ಅವರು ಬಳಗದ ಅಧ್ಯಕ್ಷರಾಗಿದ್ದರು. ಆ ಒಂದು ಸಂಧರ್ಭದಲ್ಲಿ ಭೈರಪ್ಪ ಅವರನ್ನು ಸನ್ಮಾನಿಸಲಾಯಿತು. ನಂತರ ನಡೆದ ಕಾರ್ಯಕ್ರಮದಲ್ಲಿ ನಾನು ಭೈರಪ್ಪನವರನ್ನು ಸಾಹಿತ್ಯ ವಿಚಾರವಾಗಿ ಮಾತನಾಡಬೇಕೆಂದು ವಿನಂತಿಸಿಕೊಂಡಾಗ ಅವರು ಅದಕ್ಕೆ ಬದಲಾಗಿ ಅವರ ಕೃತಿಯ ಬಗ್ಗೆ ಸಾರ್ವಜನಿಕ ಸಂವಾದ ಒಂದನ್ನು ಏರ್ಪಡಿಸುವುದು ಸೂಕ್ತವೆಂದು ಸಲಹೆ ನೀಡಿದ್ದರು. ಅಂದಿನ ಪ್ರಶ್ನೋತ್ತರ ಕಾರ್ಯಕ್ರಮಕ್ಕೆ ಡಾ ವತ್ಸಲಾ ರಾಮಮೂರ್ತಿ ಅವರು ಅಧ್ಯಕ್ಷತೆ ವಹಿಸಿದ್ದರು. ಒಳ್ಳೆ ಸಂವಾದ ನಡೆಯಿತು.

೨೦೧೯ರಲ್ಲಿ ಭೈರಪ್ಪನವರನ್ನು ಕುರಿತು ಲಂಡನ್ನಿನ ನೆಹರು ಸೆಂಟರಿನಲ್ಲಿ ಒಂದು ಇಂಗ್ಲಿಷ್ ವಿಚಾರ ಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ಅದಕ್ಕೆ ಭೈರಪ್ಪನವರು ಆಗಮಿಸಿದ್ದರು. ಆ ಕಾರ್ಯಕ್ರಮದಲ್ಲಿ ನನಗೆ ಭೈರಪ್ಪನವರ ಕೃತಿಯ ಬಗ್ಗೆ ಇಂಗ್ಲೀಷಿನಲ್ಲಿ ಮಾತನಾಡುವುದಕ್ಕೆ ಅಹ್ವಾನ ಒದಗಿ ಬಂತು. ಸಂತೋಷದಿಂದ ಒಪ್ಪಿಕೊಂಡೆ. ಅಂದು ಖ್ಯಾತ ಲೇಖಕ ಅಮಿಶ್ ತ್ರಿಪಾಠಿ ಅಧ್ಯಕ್ಷತೆ ವಿಹಿಸಿದ್ದು ಅಲ್ಲಿ ಶತಾವಧಾನಿ ಗಣೇಶ್ ಮತ್ತು ಸಾಹಿತಿಗಳಾದ ಗಿರೀಶ್ ಭಟ್ ಅವರೂ ಮಾತನಾಡಿದರು. ನಾನು ಒಬ್ಬ ಅನಿವಾಸಿ ಲೇಖಕನಾಗಿ ‘ತಬ್ಬಲಿಯು ನೀನಾದೆ ಮಗನೆ’ ಕೃತಿಯ ಬಗ್ಗೆ ಒಂದು ಪುನರಾವಲೋಕನೆಯನ್ನು ಮಂಡಿಸಿದೆ. ಐದು ದಶಕಗಳ ನಂತರ ಆ ಕಥೆಯನ್ನು ಅವಲೋಕನೆ ಮಾಡಿದಾಗ ಅದು ತನ್ನ ಸ್ವರೂಪವನ್ನು ಹೇಗೆ ಉಳಿಸಿಕೊಂಡಿದೆ ಎನ್ನುವುದರ ಬಗ್ಗೆ ಮಾತನಾಡಿದೆ. ನನ್ನ ಮಾತುಗಳ ನಂತರ ಭೈರಪ್ಪನವರು ನನ್ನನ್ನು ಅಭಿನಂದಿಸಿದರು, ತಮ್ಮ ಮಾತುಗಳಲ್ಲೂ ಉಲ್ಲೇಖಿಸಿದರು. ಇದು ನನಗೆ ಗೌರವದ ವಿಷಯವಾಗಿದೆ.

ಕೋವಿಡ್ ಸಮಯದಲ್ಲಿ 'ಪಯಣ' ಎಂಬ ನನ್ನ ಕಿರುಕಾದಂಬರಿಯನ್ನು ಸಪ್ನಾ ಬುಕ್ ಹೌಸ್ ಭೈರಪ್ಪನವರ ಗಮನಕ್ಕೆ ಕಳುಹಿಸಿದ್ದು ಅದನ್ನು ಬಿಡುವಿನಲ್ಲಿ ಓದಿ, ಅದು ತಮಗೆ ಇಷ್ಟವಾಯಿತೆಂದು ನನ್ನ ಪರಿವಾರ ಮಿತ್ರದವರ ಮೂಲಕ ತಿಳಿಸಿದ್ದು ನನಗೆ ಖುಷಿ ಮತ್ತು ತೃಪ್ತಿಯನ್ನು ನೀಡಿತು. ಕೋವಿಡ್ ನಂತರದ ಸಮಯದಲ್ಲಿ ನನ್ನ ಅಣ್ಣ ಜಯದೇವ್ ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಕನ್ನಡವನ್ನು ಕಡ್ಡಾಯ ಮಾಡಬೇಕೆಂಬ ಒಂದು ಮನವಿಯನ್ನು ಭೈರಪ್ಪನವರ ಬಳಿ ಪ್ರಸ್ತಾಪಿಸಿ ಆ ಚಾಲನೆಗೆ ನೆರವು ಕೇಳಲು ಅವರ ಮನೆಗೆ ಹೋಗಬೇಕಿತ್ತು. ನನಗಾಗಲೇ ಪರಿಚಿತರಾಗಿದ್ದ ಅವರನ್ನು ಕಾಣಲು ಅವರ ಕುವೆಂಪು ನಗರದ ಮನೆಗೆ ಹೋದಾಗ ಅಣ್ಣ ಜಯದೇವನ ಯತ್ನವನ್ನು ಮೆಚ್ಚಿ ಕಂಬಾರರ ಜೊತೆ ಸಮಾಲೋಚಿಸಿ ಸರಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ಭರವಸೆಯನ್ನು ನೀಡಿದರು. ಮಾತುಕತೆಯ ನಂತರ ಅವರೇ ಅಡುಗೆ ಮನೆಗೆ ಹೋಗಿ ಕಾಫಿ ತುಂಬಿದ ಕಪ್ಪುಗಳನ್ನು ಹೊತ್ತು ತಂದರು, ಅದನ್ನು ಕೂಡಲೇ ಗಮನಿಸಿದ ನನ್ನ ಶ್ರೀಮತಿ ತುರ್ತಾಗಿ ಅವರಿಂದ ಕಾಫಿ ಟ್ರೇ ಪಡೆದಳು. ಅವರು ಅಂದು, ಒಂದು ಪಂಚೆ ಬನಿಯನ್ ಹಾಕಿಕೊಂಡು ಸರಳವಾಗಿದ್ದರು, ಮನೆಯಲ್ಲಿ ಒಬ್ಬ ಆಳಿಗೆ ಅಥವಾ ಹೆಂಡತಿಗೆ ಕಾಫಿ ತರಲು ಆಜ್ಞಾಪಿಸುವ ಬದಲು ತಾವೇ ಕಾಫಿ ಟ್ರೇ ಹೊತ್ತು ತಂದದ್ದು ಅವರ ಸರಳ ಬದುಕಿಗೆ ಸಾಕ್ಷಿಯಾಗಿತ್ತು. ಅವರ ವಿನಯ ಶೀಲತೆಯನ್ನು ನಾನು ಬಹಳವಾಗಿ ಮೆಚ್ಚಿಕೊಂಡೆ. ಅಲ್ಲಿ ಪ್ರೀತಿ ವಿಶ್ವಾಸವೇ ಪ್ರಧಾನವಾಗಿತ್ತು. ಅವರ ಮನೆಯ ಅಂಗಳದಲ್ಲಿ ತೂಗು ಹಾಕಿದ್ದ ಒಂದು ಸ್ಕಾಟ್ಲ್ಯಾಂಡಿನ ಸ್ಟಾಗ್ ಚಿತ್ರ ನನ್ನ ಗಮನವನ್ನು ಸೆಳೆಯಿತು, ಅದರ ಬಗ್ಗೆ ನಾನು ಮಾತೆತ್ತಿದಾಗ ಈ ಜಿಂಕೆಯ ಚಿತ್ರ ಅವರು ಉತ್ತರಕಾಂಡವನ್ನು ಬರೆಯಲು ಪ್ರೇರಣೆ ನೀಡಿತೆಂದು ತಿಳಿಸಿದರು. ನನ್ನ ತಂದೆ ಜಿ ಎಸ್ ಎಸ್ ಮತ್ತು ಭೈರಪ್ಪ ಆಪ್ತ ಗೆಳೆಯರಾಗಿದ್ದರು, ಜಿ ಎಸ್ ಎಸ್ ಅವರ ಅರೋಗ್ಯ ಕ್ಷೀಣಿಸುತ್ತಿರುವಾಗ ಭೈರಪ್ಪನವರು ಮನೆಗೆ ಬಂದು ಅವರನ್ನು ವಿಚಾರಿಸಿಕೊಂಡು ಸಂತೈಸಿದ್ದರು. ಪಿ ಶೇಷಾದ್ರಿ ನಿರ್ದೇಶನದ, ಸಾಹಿತ್ಯ ಅಕೆಡೆಮಿ ಹೊರತಂದ ಭೈರಪ್ಪನವರ ಸಾಕ್ಷ್ಯ ಚಿತ್ರದಲ್ಲಿ ಭೈರಪ್ಪನವರು ‘ನನ್ನ ಬದುಕಿನಲ್ಲಿ ಹಲವಾರು ಗೆಳೆತನವನ್ನು ನಾನು ಪಡೆದುಕೊಂಡೆ’ ಎನ್ನುತ್ತಾ ಬದುಕಿನ ಪ್ರೀತಿಯ ಬಗ್ಗೆ ಮಾತನಾಡುವಾಗ ಮೂಡುವ ಭೈರಪ್ಪ ಮತ್ತು ಜಿ ಎಸ್ ಎಸ್ ಹಸ್ತಲಾಘ ಮಾಡುತ್ತಿರುವ ಚಿತ್ರ ಅರ್ಥಪೂರ್ಣವಾಗಿದೆ. ಎಲ್ಲ ಕನ್ನಡಿಗರಲ್ಲಿ ಹೆಮ್ಮೆಯನ್ನು ಉಂಟುಮಾಡುತ್ತದೆ.
**********************
ನಾನು ಮೊದಲ ಬಾರಿ ಭೈರಪ್ಪನವರ ಪುಸ್ತಕ ಓದಿದ್ದು 9ನೇ ತರಗತಿಯಲ್ಲಿರುವಾಗ. ದಸರಾ ರಜೆ ಕಳೆದು ಶಾಲೆಗೆ ವಾಪಸಾದಾಗ ಒಮ್ಮಿಂದೊಮ್ಮೆಲೆ ನನ್ನ ತರಗತಿಯ ಒಂದಿಷ್ಟು ಜನರಿಗೆ ಕನ್ನಡ ಕಾದಂಬರಿಯ ಓದುವ ಹವ್ಯಾಸ ಸ್ಪರ್ಧೆಯಾಗಿ ಮಾರ್ಪಟ್ಟಿತು - ನಾನೆಷ್ಟು ಓದಿದೆ ನೀನೆಷ್ಟು ಓದಿದೆ ಎಂಬ ತೋರಿಕೆಯ ಹುಚ್ಚು.  ಅದಕ್ಕೆ ಸರಿಯಾಗಿ ನಮ್ಮ ಶಾಲೆಯಲ್ಲಿ ತುಂಬಾ ಸುಂದರವಾದ ವಾಚನಾಲಯವಿತ್ತು. ಪುಸ್ತಕಗಳನ್ನು ಮನೆಗೂ ಒಯ್ಯಲು ಕೊಡುತ್ತಿದ್ದರು.  ನಾನು ಆ ತನಕ ಓದಿದ ಯಾವುದೇ ಶಾಲೆಯಲ್ಲಿ, ವಾಚನಾಲಯ, ಪುಸ್ತಕವನ್ನು ಮನೆಗೆ ಕೊಂಡೊಯ್ಯುವ ಆಯ್ಕೆ ಇರಲಿಲ್ಲವಾದ್ದರಿಂದ ಈಗ ಅದೊಂದು ರೀತಿ ಒಮ್ಮಿಂದೊಮ್ಮೆಲೆ ಶ್ರೀಮಂತಿಕೆ ಬಂದಂತೆ ಅನಿಸುತ್ತಿತ್ತು. 

ಬರೀ ಪುಸ್ತಕ ತೆಗೆದುಕೊಂಡರೆ ಮುಗಿಯುತ್ತಿರಲಿಲ್ಲ, ಪುಸ್ತಕ ಮರಳಿಸುವಾಗ ಲೈಬ್ರರಿ ಜವಾಬ್ದಾರಿ ಹೊತ್ತಿದ್ದ ಟೀಚರ್ ನಮ್ಮನ್ನು ಪುಸ್ತಕದ ಸಾರಾಂಶದ ಕುರಿತು ಕೇಳುತ್ತಿದ್ದರು. Test ಗಳಲ್ಲಿ ಕಮ್ಮಿ ಮಾರ್ಕ್ಸ್ ಬಂದಾಗ ಕಾದಂಬರಿ ಓದಿದ್ದು ಜಾಸ್ತಿ ಆಯ್ತು ಅನಿಸುತ್ತೆ ಎಂದು ಹಂಗಿಸುತ್ತಿದ್ದರು ಕೂಡ.

ನನ್ನ ಪಪ್ಪ ಭೈರಪ್ಪನವರ ಅಭಿಮಾನಿ, ಜೊತೆಗೆ ಅವರಷ್ಟು ಒಳ್ಳೆಯ ಓದುಗರೆಂದರೆ, ಅವರು ಓದಿದ ಪುಸ್ತಕದ ಕಥೆ ಸಾರಾಂಶವನ್ನು ಅತ್ಯಂತ ಸುಂದರವಾಗಿ ನಮಗೆ narrate ಮಾಡುತ್ತಿದ್ದರು. ಎಷ್ಟು ಚೆನ್ನಾಗಿ ಹೇಳುತ್ತಿದ್ದರು ಎಂದರೆ ಕೊನೆಯಲ್ಲಿ ನಾವು ಕೂಡ ಪುಸ್ತಕ ಓದಿ ಮುಗಿಸಿದ್ದೇವೆ ಅನ್ನುವ ಭಾವ ಮನಸನ್ನು ತುಂಬಿಕೊಳ್ಳುತ್ತಿತ್ತು. ದಾಟು, ಭಿತ್ತಿ, ತಬ್ಬಲಿಯು ನೀನಾದೆ ಮಗನೆ, ನಾಯಿ ನೆರಳು, ಗ್ರಹಣ, ಇವೆಲ್ಲ ಕಾದಂಬರಿ ನಾನು ಓದಿದ್ದು ಪಪ್ಪನ ಕಥೆಗಳ ಮೂಲಕವೇ!

ಅವರನ್ನು ಮೆಚ್ಚಿಸಲು, ಅಥವಾ ನಾನೂ ದೊಡ್ಡ ಓದುಗಳು ಎಂದು ತೋರಿಸಲೋ ಭೈರಪ್ಪನವರ ಪುಸ್ತಕ ಓದುವೆ ಎಂದು ಆ ಸಲ ವಾಚನಾಲಯಕ್ಕೆ ಹೋಗಿ ಭೈರಪ್ಪನವರ ಧರ್ಮಶ್ರೀ ಕಾದಂಬರಿ ತಂದು ಓದಲು ಶುರು ಮಾಡಿದೆ. ನಾನು ಮುಗಿಸುವ ಮೊದಲೇ ಪಪ್ಪ ಅದನ್ನು ಓದಿ ಮುಗಿಸಿದರು, ಜೊತೆಗೆ ಚಿಕ್ಕಪ್ಪ, ಅಕ್ಕ ಪಕ್ಕದಲ್ಲಿದ್ದ ಅಣ್ಣ, ಅಂಕಲ್ ಎಲ್ಲರೂ ಅದನ್ನು ಓದಿ, ಅದ್ಬುತ ಅದ್ಬುತ ಅನ್ನುವಾಗ. ಅದನ್ನು ವಾಪಸ್ ಕೊಡುವ ಸಮಯ ಬಂದೇ ಬಿಟ್ಟಿತ್ತು. ಆ ದಿನ ರಾತ್ರಿ ಪೂರ್ತಿ ಕೂತು ಪುಸ್ತಕ ಮುಗಿಸಿದೆ. ಆ ಪುಸ್ತಕ ಆಪ್ತವಾಗಲು ಹಲವು ಕಾರಣಗಳಿತ್ತು, ಮುಂಡಗೋಡ, ಹಳಿಯಾಳ, ಯಲ್ಲಾಪುರದ ಹಲವೆಡೆ ಈ ಮತಾಂತರದ ವಿರುದ್ಧ ಹಲವಾರು protest ಗಳು ನಡೆಯುತ್ತಿದ್ದವು. ನಮ್ಮ ಜೊತೆಗೆ ಓದುತ್ತಿದ್ದ ಸಹಪಾಠಿಗಳ ಕುಟುಂಬಗಳು ಮತಾಂತರವಾಗಿ ಒಮ್ಮಿಂದೊಮ್ಮೆಲೆ ಹೆಸರು ಬದಲಿಸಿಕೊಂಡು ಚರ್ಚ್ ಗೆ ಹೋಗುತ್ತಿದ್ದ ದೃಶ್ಯಗಳು, ಅದರ ಬಗ್ಗೆ ನಾವು ಕ್ಲಾಸಿನಲ್ಲಿ ಗುಸು ಗುಸು ಮಾಡುತ್ತಿದ್ದುದು. ಕ್ರೈಸ್ತ ಮಿಷನರಿ ಶಾಲೆಯಲ್ಲಿಯೇ ಓದುತ್ತಿದ್ದ ಕಾರಣ ಅದನ್ನು ಮುಕ್ತ ಚರ್ಚೆ ಮಾಡುವ ಧೈರ್ಯವೂ ಇಲ್ಲದ ವಯಸ್ಸು, ಸಂದರ್ಭ, ವೈಪರೀತ್ಯಗಳ ನಡುವೆಯೇ ಮತಾಂತರ ಎಂಬುದು ಹೇಗೆ ಸಾಂಸ್ಕೃತಿಕ ಘರ್ಷಣೆಯನ್ನು ತಂದು ಒಬ್ಬ ವ್ಯಕ್ತಿಯನ್ನು ಟೊಳ್ಳು ಮಾಡುತ್ತದೆ ಎಂಬ ಸಾರಾಂಶದ ಧರ್ಮಶ್ರೀ ನಮ್ಮ ಸುತ್ತಲಿನ ಕಥೆಯೇ ಆಗಿ ಮನಸನ್ನು ಆವರಿಸಿಕೊಂಡಿತು. ಅಲ್ಲಿನ ನಾಯಕನಂತೆಯೇ, ನನ್ನ ಸುತ್ತಲಿನ ಒಬ್ಬ ವ್ಯಕ್ತಿಯೂ ಹೀಗೆ ಅಮ್ಮನ ಮಡಿಲಿಗೆ ಮರಳಬಹುದೇ? ಯಾರಿರಬಹುದು ಅವರು? ಹೀಗೆಲ್ಲ ಪ್ರಶ್ನೆ ಮನದಲ್ಲಿ ಹುಟ್ಟುತ್ತಿತ್ತು.

ಪುಸ್ತಕ ವಾಪಸ್ ಕೊಟ್ಟ ಮೇಲೆ ಟೀಚರ ಕಥೆ ಕೇಳಿದರು, ನಾನೂ ಅನುಮಾನದಲ್ಲಿ ಕಥೆ ಶುರು ಮಾಡಿದೆ. ಅವರು ಅರ್ಧದಲ್ಲೇ ನಿಲ್ಲಿಸಿ "ಸಾಕು ಸಾಕು, ಸ್ವಲ್ಪ ಓದಿನ ಕಡೆಗೆ ಗಮನವಿರಲಿ. ಬರೀ ಕಾದಂಬರಿ ಓದಿ ವಿಮರ್ಶೆ ಮಾಡೋದಲ್ಲ" ಎಂದು ಜೋರ್ ಮಾಡಿದರು.
ಆಮೇಲೆ ಕೆಂಪು ಬಣ್ಣದ ಮುಖಪುಟವಿದ್ದ ಧರ್ಮಶ್ರೀ ನಮ್ಮ ಲೈಬ್ರರಿಯಲಿ ಕಾಣಲೇ ಇಲ್ಲ.

‘ಭಿತ್ತಿ’ ಓದಿ ನನ್ನ ಪಪ್ಪ ಅದೆಷ್ಟು ಪ್ರಭಾವಿತರಾಗಿದ್ದರು ಎಂದರೆ, ಭೈರಪ್ಪನವರಿಗೆ ಪತ್ರ ಬರೆದು ಅವರ ಫೋಟೋ ಒಂದನ್ನು ಕಳಿಸಲು ವಿನಮ್ರ ವಿನಂತಿ ಮಾಡಿದ್ದರು. ಅವರಿಗೆ ಅದೆಷ್ಟೋ ಜನ ಈ ರೀತಿ ಪತ್ರ ಬರೆಯುತ್ತಾರೋ, ನಿರೀಕ್ಷಿಸಿದಂತೆಯೇ ಅವರಿಂದ ಯಾವ ಉತ್ತರವೂ ಬರಲಿಲ್ಲ.
ಮತ್ತೊಂದಿಷ್ಟು ದಿನ ಬಿಟ್ಟು, ಸ್ವವಿಳಾಸದ ಲಕೋಟೆಗೆ ಅಂಚೆ ಚೀಟಿ ಹಚ್ಚಿ ಮತ್ತೊಂದು ಪತ್ರ ಬರೆದು ಮತ್ತದೇ ಮನವಿ ಮಾಡಿದಾಗ, ಭೈರಪ್ಪನವರು ತಮ್ಮದೊಂದು ಭಾವಚಿತ್ರ ಮತ್ತು ಅದರ ಹಿಂದೆ ತಮ್ಮ ಸಹಿ ಹಾಕಿ ಕಳಿಸಿದ್ದರು.

ಆ ಚಿತ್ರ ಇಂದಿಗೂ ನಮ್ಮ ಆಲ್ಬಮ್ ನಲ್ಲಿ ಬೆಚ್ಚಗಿದೆ. ಭೀಮಕಾಯ, ಯಾನ, ಮತದಾನ ಬಿಟ್ಟು ನಾನು ಅವರೆಲ್ಲ ಪುಸ್ತಕಗಳನ್ನು ಓದಿರುವೆ. (ಕೆಲವು ಪಪ್ಪನ ಬಾಯಲ್ಲಿ ಕೇಳಿರುವೆ) ಮಂದ್ರ ಕಾಲೇಜ್ ದಿನಗಳಲ್ಲಿ ಎರಡೇ ದಿನಕ್ಕೆ ಓದಿ ಮುಗಿಸಿದ್ದು, ಈಗ ಓದಲು ಕುಳಿತರೆ ಎರಡೆರಡು ಪುಟಕ್ಕೆ ಇಪ್ಪತ್ತು ಪ್ರಶ್ನೆ ಮನದಲ್ಲಿ ಮೂಡುತ್ತವೆ. ಸಂಗೀತಲೋಕದ ಕರಾಳತೆ, ಸುಂದರತೆ ಎರಡನ್ನೂ ಅದ್ಭುತವಾಗಿ ತೋರಿಸುತ್ತಾ ಚಿತ್ರಿತಗೊಂಡಿರುವ ಪಾತ್ರಗಳು, ನಮ್ಮ ಸುತ್ತಲಿರುವ ಮಂದಿಯೇ ಅನಿಸಿಬಿಡುತ್ತದೆ.

ನನ್ನ ಅತೀ ಪ್ರೀತಿಯ ಕಾದಂಬರಿಗಳು ಎಂದರೆ, ಆವರಣ, ಮತ್ತು ಸಾರ್ಥ; time travel ಮಾಡಿಸುವ ಪುಸ್ತಕಗಳಿವು. ಸಾರ್ಥದ ಚಂದ್ರಿಕೆಯ ಕುರಿತು ನನಗೆ ಈಗಲೂ, ಕನಸುಗಳು ಬರುತ್ತವೆ. ಆವರಣ ಓದಿ ಒಮ್ಮೆಯಾದರೂ ಕಾಶಿಯ ಬೀದಿಗಳಲ್ಲಿ ಗಮ್ಯದ ಹಂಗಿಲ್ಲದೇ ಓಡಾಡಬೇಕು ಎನ್ನುವ ತುಡಿತ ಇನ್ನೂ ಉಳಿದುಕೊಂಡಿದೆ.

ಸರಸ್ವತಿಪುತ್ರರನ್ನ ಸಾರಸ್ವತ ಲೋಕ ಸದಾ ಸ್ಮರಿಸುತ್ತದೆ. ತುಂಬು ಜೀವನ ನಡೆಸಿದ ಗಟ್ಟಿ ವ್ಯಕ್ತಿತ್ವದ ಭೈರಪ್ಪನವರು, ಸರಸ್ವತಿಯ ಮಡಿಲಲ್ಲಿ ಸದ್ಗತಿ ಪಡೆಯಲಿ ಎಂಬ ಪ್ರಾರ್ಥನೆ.

- ಅಮಿತಾ ರವಿಕಿರಣ್, ಬೆಲ್‍ಫಾಸ್ಟ್.
ಅಮಿತಾ ರವಿಕಿರಣ ಅವರ ಸಂಗ್ರಹ.

**********************

’ಪರ್ವ’
ಚಿಕ್ಕವನಾಗಿದ್ದಾಗ ಓದಿದ ಪರ್ವದಲ್ಲಿನ ಪಾತ್ರಗಳು, ನನ್ನ ನೆಚ್ಚಿನ ಮಹಾಕಾವ್ಯ ಮಹಾಭಾರತವನ್ನು ಪೂರ್ತಿ humanise ಮಾಡಿದ ಕಾದಂಬರಿ. ಆದರೂ, ಕಥೆಗೆ, ಪಾತ್ರಗಳಿಗೆ ಒಂಚೂರೂ ಮರ್ಯಾದಾಭಂಗವಾಗದಂತೆ ಬರೆದ ಶ್ರೇಯಸ್ಸು ಭೈರಪ್ಪನವರಿಗೆ ಸಲ್ಲುತ್ತದೆ. ಯುದ್ಧ ಶುರುವಾಗುವ ಹೊತ್ತಿಗಿನ ಬಕ್ಕಾಗುತ್ತಿರುವ ತಲೆಯ ಭೀಮ, ವಯಸ್ಸಾಗುತ್ತಿರುವಾಗ ರಾಜ್ಯ ಗೆದ್ದು ಏನು ಮಾಡುವುದು ೫ ಹಳ್ಳಿ ಕೇಳು ಸಾಕು ಎಂದು ಕೃಷ್ಣನಿಗೆ ಹೇಳುವ ಯುಧಿಷ್ಠಿರ, ಮುದುಕನಾದರೂ ಮೋಹ ಬಿಡದ ಧೃತರಾಷ್ಟ್ರ ಮುಂತಾವರ ಪಾತ್ರಗಳನ್ನು ನಮ್ಮ ದೃಷ್ಟಿಯಲ್ಲಿ ಪೌರಾಣಿಕದಿಂದ ಐತಿಹಾಸಿಕ ಪಾತ್ರಗಳನ್ನಾಗಿಸಿದ್ದು ಸರಳವೇನಲ್ಲ. ಪರ್ವವನ್ನು ದೂರದರ್ಶನದಲ್ಲಿ ೮೦ರ ದಶಕದಲ್ಲಿ ಪ್ರಸಾರವಾದ ಶ್ಯಾಮ್ ಬೆನೆಗಾಲ್ ನಿರ್ದೇಶನದ ’ಭಾರತ್ ಏಕ್ ಖೋಜ್’ ನೊಂದಿಗೆ ಹೋಲಿಸುತ್ತದೆ ನನ್ನ ಮನಸ್ಸು.

ಯುದ್ಧ ನಡೆದಾಗಿನ ಒಂದು ಸನ್ನಿವೇಶ: ಸೈನಿಕರೊಂದಷ್ಟು ಜನ ಯುದ್ಧಕ್ಕೆ ಶುರುವಾಗುವ ಮುನ್ನ (ದಿನದ ಯುದ್ಧ ಮುಗಿಸಿಯೋ, ನೆನಪಾಗುತ್ತಿಲ್ಲ) ಬೆಂಕಿಯ ಸುತ್ತ ಕೈಕಾಯಿಸಿಕೊಳ್ಳುತ್ತ ಮಾತಾಡುತ್ತಿರುತ್ತಾರೆ.
ಸೈನಿಕ ೧: ಯಾರ ಮಧ್ಯ ಯುದ್ಧ ಈಗ?
ಸೈನಿಕ ೨: ಕುಂತಿಯ ಮಕ್ಕಳಿಗೂ, ಕೌರವರಿಗೂ ಮಧ್ಯ ಅಂತೆ, ರಾಜ್ಯ ಕೊಟ್ಟಿಲ್ಲವಂತೆ.
ಸೈನಿಕ ೩: ಅಲ್ಲ, ಈ ಕುಂತಿ ಅನ್ನುವವನು ಯಾರು, ಯಾವ ಊರಿನ ರಾಜ?

ಇನ್ನೂ ಎಷ್ಟೋ ಕಾದಂಬರಿಗಳನ್ನು ನಾನು ಓದಿಲ್ಲ. ಅದರ ತಪ್ಪನ್ನು ನಮ್ಮ ಸೋದರತ್ತೆಯ ಗಂಡನಿಗೆ ಕಟ್ಟಬೇಕೋ ಅಂತ ವಿಚಾರ ಮಾಡುತ್ತಿರುವೆ. ಈ ನಡುವೆ ಓದುವ ಚಟ ಕಡಿಮೆಯಾಗಿದೆ (ಆ ತಪ್ಪು ನನ್ನ ಸ್ವಂತದ್ದು). ಓದಬೇಕೆನ್ನುವ ಹುಮ್ಮಸ್ಸು ಮತ್ತೆ ಹುಟ್ಟುತ್ತಿದೆ, ಭೈರಪ್ಪನವರ ಪುಸ್ತಕಗಳನ್ನು ಹುಡುಕಬೇಕು ಇನ್ನು.

ಎಸ್ ಎಲ್ ಭೈರಪ್ಪನವರ ಆತ್ಮಕ್ಕೆ ಶಾಂತಿಯನ್ನು ಕೋರುವೆ.

- ಲಕ್ಷ್ಮೀನಾರಾಯಣ ಗುಡೂರ್.
**********************