ರಾಜಕುಮಾರಿ ಸೋಫಿಯಾ ದುಲೀಪ್ ಸಿಂಗ್ (೧೮೭೬-೧೯೪೮) – ರಾಮಮೂರ್ತಿ ಎಚ್ ಎನ್.

ನಮಸ್ಕಾರ.  ನಮ್ಮ ಅನಿವಾಸಿ ಬಳಗದ ಉತ್ಸಾಹಿ ಬರಹಗಾರ, ಇತಿಹಾಸದ ಅಧ್ಯೇತೃ (ಬೇಸಿಂಗ್‍ಸ್ಟೋಕ್) ರಾಮಮೂರ್ತಿ ಅವರು ಬರೆದಿರುವ ಇನ್ನೊಂದು ಲೇಖನ. ಪಂಜಾಬಿನ ಕೊನೆಯ ರಾಜ ದುಲೀಪ್ ಸಿಂಹರ ಮಗಳು ರಾಜಕುಮಾರಿ ಸೋಫಿಯಾ ಅವರ ಜೀವನ ಚಿತ್ರಣ ಇಲ್ಲಿದೆ.  ಬರಿಯ ರಾಜಕುಮಾರಿಯಾಗಿ ಉಳಿಯದೇ ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಿದ, ಮೊದಲ ಮಹಾಯುದ್ಧದ ವೇಳೆಯಲ್ಲಿ ಹಲವಾರು ಉತ್ತಮ ಕಾರ್ಯಗಳನ್ನು ಮಾಡಿದ, ಆ ಕಾರಣಕ್ಕಾಗಿ ಬ್ರಿಟಿಷ್ ಸರಕಾರದಿಂದ ಗೌರವಿಸಲ್ಪಟ್ಟ ಮಹಿಳೆ.  
ಎಂದಿನಂತೆ ಓದಿ, ಪ್ರತಿಕ್ರಯಿಸಿ, ನಿಮ್ಮ ಅನಿಸಿಕೆಗಳನ್ನು ಬ್ಲಾಗಿನಲ್ಲಿ ಹಂಚಿಕೊಳ್ಳಿ. ಧನ್ಯವಾದಗಳೊಂದಿಗೆ - ಲಕ್ಷ್ಮೀನಾರಾಯಣ ಗುಡೂರ್ (ಈ ವಾರದ ಸಂಪಾದಕಿ ಅಮಿತಾ ರವಿಕಿರಣ ಅವರ ಪರವಾಗಿ).

********************

ದುಲೀಪ್ ಸಿಂಹ ಮತ್ತು ರಾಜಕುಮಾರಿ ಸೋಫಿಯಾ (ಚಿತ್ರಕೃಪೆ: ವಿವಿಧ ಅಂತರ್ಜಾಲತಾಣಗಳು)
೨೦ನೇ ಶತಮಾನದ ಆದಿಯಲ್ಲಿ ಇಂಗ್ಲೆಂಡ್ ದೇಶದ ಮಹಿಳೆಯರು ಮೂಲಭೂತ ಮತ್ತು ಮತದಾನದ ಹಕ್ಕು ಪಡೆಯಲು ನಡೆಸಿದ ಚಳುವಳಿಗಳಿಗೆ (Suffragette Movement) ಹೋರಾಡಿದ ಭಾರತ ಮೂಲದ ರಾಜಕುಮಾರಿ ಸೋಫಿಯಾ.  ಈಕೆ, ಭಾರತದ ಮತ್ತು ಇಂಗ್ಲೆಂಡಿನ ಶ್ರೀಮಂತ ಕುಟುಂಬದ ಆಶ್ರಯದಲ್ಲಿ ಬೆಳೆದರೂ ಅವಳ ಹೋರಾಟ ರಾಜಕೀಯ ಚಟುವಟಿಕೆಯಲ್ಲೇ ಇತ್ತು.

ಇವಳ ತಂದೆ ಪಂಜಾಬಿನ ಕೊನೆಯ ಮಹಾರಾಜ ದುಲೀಪ್ ಸಿಂಗ್. ಪಂಜಾಬಿನ “ಸಿಂಹ” ಮಹಾರಾಜ ರಂಜಿತ್ ಸಿಂಗ್‍ರ (೧೭೮೦-೧೮೩೯) ನಿಧನವಾದಮೇಲೆ ಆ ಪಟ್ಟಕ್ಕೇರಲು ಅನೇಕರು ಹೋರಾಡಿ, ಕೊನೆಗೆ ಐದು ವರ್ಷದ ದುಲೀಪ್ ಸಿಂಗ್‍ನನ್ನು ರಾಜನನ್ನಾಗಿ ಮಾಡಿದರು. ಆದರೆ ರಾಜ್ಯದಲ್ಲಿ ಅಸ್ಥಿರತೆ ಇರುವುದನ್ನು ಕಂಡು ೧೮೪೯ ರಲ್ಲಿ ಈಸ್ಟ್ ಇಂಡಿಯಾ ಕಂಪನಿಯವರು ಎರಡನೆಯ ಆಂಗ್ಲೋ-ಸಿಖ್ ಯುದ್ಧದ ನಂತರ ಪಂಜಾಬ್ ಪ್ರಾಂತ್ಯವನ್ನು ಆಕ್ರಮಿಸಿಕೊಂಡು ಹತ್ತು ವರ್ಷದ ದುಲೀಪ್ ಸಿಂಗ್‍ನಿಂದ ಅವನ ಜಮೀನು ಮತ್ತು ಕೊಹಿನೂರ್ ವಜ್ರವನ್ನು ಕಸಿದುಕೊಂಡರು. ನಂತರ ದುಲೀಪ್ ಸಿಂಗನಿಗೆ ಪಿಂಚಿಣಿ ಕೊಟ್ಟು ಇಂಗ್ಲೆಂಡ್‍ನಲ್ಲಿ ವಾಸಮಾಡುವುದಕ್ಕೆ ಏರ್ಪಾಡು ಮಾಡಿದರು, ಇದಲ್ಲದೆ ಸಿಖ್ ಧರ್ಮದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರ, ಬಹುಶಃ ಬಲವಂತದಿಂದ, ಮಾಡಿದರು.

ಸೋಫಿಯಾ ೮/೦೮/೧೮೭೬ ರಂದು ಲಂಡನ್ ನಗರದ ಬೆಲ್‍ಗ್ರೇವಿಯದಲ್ಲಿ ಜನಿಸಿದಳು. ತಾಯಿ, ಬಾಂಬ ಮುಲ್ಲರ್ (ಜರ್ಮನ್ ಮತ್ತು ಇಥಿಯೋಪಿಯಾ ಮೂಲದವಳು). ದುಲೀಪ್ ಸಿಂಗ್ ೧೮೬೩ರಲ್ಲಿ Suffolk ನಲ್ಲಿ ಇರುವ ೧೭,೦೦೦ ಎಕರೆ Elvedon Hall ಕೊಂಡಿದ್ದ (ಲಂಡನ್‍ನಲ್ಲಿದ್ದ India Office ನ ಸಹಾಯದಿಂದ). ಅವನ ಕುಟುಂಬ ಲಂಡನ್‍ನಿಂದ ಇಲ್ಲಿಗೆ ಬಂದು ನೆಲೆಸಿದರು. ರಾಣಿ ವಿಕ್ಟೊರಿಯಾ ದುಲೀಪ್ ಸಿಂಗನ ಮಕ್ಕಳನ್ನು, ಅದರಲ್ಲೂ ಸೋಫಿಯಾಳನ್ನು, ಸಾಕುಮಕ್ಕಳಂತೆ ಪರಿಗಣಿಸಿ ಅವರ ವಿದ್ಯಾಭ್ಯಾಸಕ್ಕೆ ನೆರವಾಗಿದ್ದಳು.

೧೮೮೭ ರಲ್ಲಿ ಬಾಂಬ ಮುಲ್ಲರ್ ಜ್ವರದಿಂದ ನಿಧನಳಾದ ಮೇಲೆ, ದುಲೀಪ್ ಸಿಂಗ್ ೧೮೮೯ರಲ್ಲಿ ಪುನಃ ಮದುವೆಯಾದ. ಆದರೆ ಇವನ ಆರ್ಥಿಕ ಮತ್ತು ರಾಜಕೀಯ ಪರಿಸ್ಥಿತಿ ಹದಗೆಟ್ಟು ೧೮೮೦ ರಲ್ಲಿ Elvendon Hall ಬಿಡಬೇಕಾಯಿತು. ಸೋಫಿಯಾ ಹತ್ತು ವರ್ಷವಾಗಿದ್ದಾಗ, ದುಲೀಪ್ ಸಿಂಗ್ ತನ್ನ ಸಂಸಾರದ ಜೊತೆಯಲ್ಲಿ ಪಂಜಾಬಿಗೆ ಹಿಂತಿರುಗಲು ಮಾಡಿದ ಪ್ರಯತ್ನ ವಿಫಲವಾಯಿತು. ಹಡಗು ಏಡನ್ ತಲಪಿದಾಗ ಇವರ ಬಂಧನಕ್ಕೆ ಬ್ರಿಟಿಷ್ ಸರ್ಕಾರದ ವಾರಂಟ್ ಕಾದಿತ್ತು. ನಂತರ ದುಲೀಪ್ ಸಿಂಗ್ ಪ್ಯಾರಿಸ್ ನಗರದಲ್ಲಿ ಹಲವು ವರ್ಷಗಳನ್ನು ಕಳೆದು ೫೫ ನೇ ವಯಸ್ಸಿನಲ್ಲಿ ೧೮೯೩ರಲ್ಲಿ ನಿಧನನಾದ.

ರಾಣಿ ವಿಕ್ಟೋರಿಯಾ ಈ ಮಕ್ಕಳ ಯೋಗಕ್ಷೇಮವನ್ನು ಆಲಿಫಂಟ್ ಕುಟುಂಬಕ್ಕೆ ವಹಿಸಿ, ಬ್ರೈಟನ್ ನಗರದಲ್ಲಿ ವಿದ್ಯಾಭ್ಯಾಸ ಮುಂದುವರೆಸುವುದಕ್ಕೆ ಮತ್ತು ವಾಸಕ್ಕೆ ರಾಜ ಮನೆತನದ ಹ್ಯಾಂಪ್ಟನ್ ಕೋರ್ಟ್ ಆವರಣದಲ್ಲಿ ಏರ್ಪಾಡು ಮಾಡಲಾಯಿತು.

ಸೋಫಿಯಾ ಮೊದಲ ಕೆಲವು ವರ್ಷಗಳು ಅತ್ಯಂತ ಆರಾಮದ ಜೀವನವನ್ನು ಕಳೆದಳು. ಆದರೆ ೧೯೦೭ ರಲ್ಲಿ ಮೊದಲ ಬಾರಿಗೆ ಭಾರತಕ್ಕೆ ಭೇಟಿ ಕೊಟ್ಟಾಗ, ಅಲ್ಲಿನ ಜನರ ಬಡತನ ಮತ್ತು ಸಮಾಜದಲ್ಲಿ ನಡೆಯುತ್ತಿದ್ದ ಅನ್ಯಾಯಗಳನ್ನು ನೋಡಿ ಅವಳ ಮನಸ್ಸು ಪರಿವರ್ತನೆ ಆಯಿತು.
೧೯೧೦ ರವರೆಗೂ ಇಂಗ್ಲೆಂಡಿನಲ್ಲಿ ಮಹಿಳೆಯರಿಗೆ ಯಾವ ರೀತಿಯ ಹಕ್ಕುಗಳೂ ಇರಲಿಲ್ಲ. ಇದನ್ನು ಪ್ರತಿಭಟಿಸಿ "Women's Social and Political Union" (WSPU) ಅನ್ನುವ ಸಂಸ್ಥೆ ಎಮೆಲೀನ್ ಪ್ಯಾಂಕ್‍ಹರ್ಸ್ಟ್ (Emmeline Pankhurst) ಳ ನೇತೃತ್ವದಲ್ಲಿ ಪ್ರಾರಂಭವಾಗಿತ್ತು. ಸೋಫಿಯಾ ಈ ಚಳುವಳಿಯಲ್ಲಿ ಭಾಗವಹಿಸಿವುದಕ್ಕೆ ನಿರ್ಧರಿಸಿ, ಈ ಸಂಸ್ಥೆಯ ಸದಸ್ಯೆ ಆಗಿ ಅನೇಕ ರೀತಿಯಲ್ಲಿ ಸಹಾಯ ಮಾಡಿದಳು. ಸೋಫಿಯಾ ತಾನು ವಾಸವಾಗಿದ್ದ ಹ್ಯಾಂಪ್ಟನ್ ಕೋರ್ಟ್ ಹೆಬ್ಬಾಗಿಲಿನ ಮುಂದೆ ನಿಂತು The Suffragette ಪತ್ರಿಕೆಯ ಮಾರಾಟವನ್ನು ಸಹ ಮಾಡುತಿದ್ದಳು.

೧೯೧೦ ರಲ್ಲಿ ಲಂಡನ್ ನಗರದಲ್ಲಿ ನಡೆದ Black Friday ಪ್ರತಿಭಟನೆಯಲ್ಲಿ ೩೦೦ ಮಹಿಳೆಯರ ತಂಡದೊಂದಿಗೆ ಸೋಫಿಯಾ ಭಾಗವಹಿಸಿ ಕ್ಯಾಸ್ಟನ್ ಹಾಲ್‍ನಿಂದ ಪಾರ್ಲಿಮೆಂಟಿನವರೆಗೆ ನಡೆದು, ಅಲ್ಲಿ ಪ್ರಧಾನ ಮಂತ್ರಿಗಳನ್ನು ಭೆಟ್ಟಿಯಾಗಲು ಪ್ರಯತ್ನಿಸಿದರು. ಆದರೆ ಅವರು ನಿರಾಕರಿಸಿದ್ದರಿಂದ ಈ ತಂಡ ಅಲ್ಲೇ ಕುಳಿತು ಘೋಷಣೆಗಳನ್ನು ಕೂಗುವುದಕ್ಕೆ ಪ್ರಾರಂಭಿಸಿದಾಗ ಪೊಲೀಸರು ಇವರ ಮೇಲೆ ಅತ್ಯಂತ ದೌರ್ಜನ್ಯದಿಂದ ವರ್ತಿಸಿದರು. ಈ ತಂಡದ ಅನೇಕರು ಗಾಯಗೊಂಡು ಇಬ್ಬರ ಮರಣಕ್ಕೂ ಪೋಲೀಸರ ದೌರ್ಜನ್ಯ ಕಾರಣವಾಯಿತು. ಅಂದಿನ ಗೃಹಮಂತ್ರಿ ಸರ್ ವಿನ್ಸ್ಟನ್ ಚರ್ಚಿಲ್ ಪೊಲೀಸರಿಗೆ ಉತ್ತೇಜನ ಕೊಟ್ಟರು ಅನ್ನುವ ಆರೋಪ ಸಹ ಬಂದಿತ್ತು.

೧೯೧೧ ರಲ್ಲಿ ನಡೆದ ಜನಗಣತಿಯಲ್ಲಿ (Census) ಭಾಗವಹಿಸುವುದಕ್ಕೆ ಸೋಫಿಯಾ ಮತ್ತು ಸಂಸ್ಥೆಯವರು ನಿರಾಕರಿಸಿದರು. ಸೋಫಿಯಾ ಜನಗಣತಿಯ ಚೀಟಿಯ ಮೇಲೆ ಈ ರೀತಿ ಬರೆದು ಚೀಟಿಯನ್ನು ಹಿಂತಿರಿಗಿಸಿದಳು (ಕೆಳಗೆ ಚಿತ್ರ ನೋಡಿ) - No Vote, No Census. As women do not count, they refuse to be counted; I have a conscientious objection to filling up this form.
No Vote, No Tax.

ಮತದಾನದ ಹಕ್ಕು ಇಲ್ಲದೆ ವರಮಾನ ತೆರಿಗೆ ಕೊಡುವುದಕ್ಕೂ ಸೋಫಿಯಾ ನಿರಾಕರಿಸಿದ್ದರಿಂದ ನ್ಯಾಯಾಲಯ £೧೨ ದಂಡ ಹಾಕಿತು. ಆದರೆ ಇದನ್ನು ಪ್ರತಿಭಟಿಸಿ ದಂಡವನ್ನು ಕಟ್ಟಲಿಲ್ಲವಾದ ಕಾರಣದಿಂದಿಂದ ಅವಳ ಕೆಲವು ಆಭರಣಗಳನ್ನು ವಶಪಡಿಸಿಕೊಂಡು ಹರಾಜು ಮಾಡಲಾಯಿತು. ಆದರೆ WSPUನ ಕಾರ್ಯದರ್ಶಿ ಈ ಹರಾಜಿನಲ್ಲಿ ಭಾಗವಹಿಸಿ ಆಭರಣಗಳನ್ನು ಕೊಂಡುಕೊಂಡು ಸೋಫಿಯಾಗೆ ವಾಪಸ್ಸು ಕೊಟ್ಟರು.

೧೯೧೪ ನಲ್ಲಿ ಮೊದಲನೇ ಮಹಾಯುದ್ಧ ಪ್ರಾರಂಭವಾದ್ದರಿಂದ ಮಹಿಳೆಯರು ತಮ್ಮ ಹೋರಾಟವನ್ನು ನಿಲ್ಲಿಸಿ, ದೇಶದ ಮತ್ತು ಸರಕಾರದ ಪರವಾಗಿ ನಿಂತು ಸಹಾಯ ಮಾಡುವುದಕ್ಕೆ ಸಿದ್ದರಾದರು. ಲಕ್ಷಾಂತರ ಭಾರತೀಯ ಸೈನಿಕರು ಈ ಯುದ್ಧದಲ್ಲಿ ಭಾಗವಹಿಸಿದ್ದರು, ಇವರ ಯೋಗಕ್ಷೇಮ ಕಾಯಲು ಸೋಫಿಯಾ ನೆರವಾಗಿ Red Cross ಸಂಸ್ಥೆಯ ಪರವಾಗಿ ಹಣ ಸಂಗ್ರಹಣೆ ಮಾಡಿದಳು. ಸ್ವತಃ ೧೯೧೫ರಲ್ಲಿ ಮಿಲಿಟರಿ ಆಸ್ಪತ್ರೆಯಲ್ಲಿ ಬ್ರಿಟಿಷ್ ರೆಡ್‍ಕ್ರಾಸ್ ನರ್ಸ್ ಆಗಿ ಸೇರಿ ಸೇವೆ ಮಾಡಿದಳು. ೧೯೧೮ ರಲ್ಲಿ YMCA War Emergency Committee ಯ ಕಾರ್ಯದರ್ಶಿಯಾಗಿ, ಲಂಡನ್‍ನಲ್ಲಿ “ಧ್ವಜ ದಿವಸ” (Flag Day) ನಡೆದ ನಂತರ “ಭಾರತೀಯ ದಿವಸ” (India day)ದ ಆಚರಣೆಯನ್ನು ಮಾಡಿ, ೫೦೦೦೦ ವಸತಿಗೃಹಗಳನ್ನು ಗಾಯಗೊಂಡ ಭಾರತೀಯ ಸೈನಿಕರು ವಾಸಕ್ಕೆ ಒದಗಿಸಲು ಕಾರಣಳಾದಳು.
ಯುದ್ಧ ಮುಗಿದ ಮೇಲೆ (೧೯೧೮) ಆಂಗ್ಲ ಸರ್ಕಾರ "The Representation of the People Act" ಕಾನೂನು ಜಾರಿಯಾದಾಗ ೩೦ ವರ್ಷ ಮೀರಿದ ಮಹಿಳೆಯರಿಗೂ, ೧೯೨೮ ರ “Franchise Act” ಕಾನೂನು ಹೊರಬಂದಾಗ ೨೧ ವರ್ಷ ಮೀರಿದ ಮಹಿಳೆಯರಿಗೂ ಮತದಾನದ ಹಕ್ಕು ಬಂತು.

ಈ ದೇಶದಲ್ಲಿ ಇಂದಿನ ಸಮಾಜದಲ್ಲಿ ಮಹಿಳೆಯರಿಗೆ ಇರುವ ಹಕ್ಕು ಮತ್ತು ಸ್ವಾತಂತ್ರಕ್ಕೆ ಕಾರಣ ಸೋಫಿಯಾ ಮತ್ತು ಅವಳ ಸಂಗಡಿಗರ ಹೋರಾಟವೇ ಕಾರಣ ಅನ್ನುವುದರಲ್ಲಿ ಸಂದೇಹವೇ ಇಲ್ಲ.
೨೨/೦೮/೧೯೪೮ ರಲ್ಲಿ ಸೋಫಿಯಾ ಬಕಿಂಗ್‍ಹ್ಯಾಮ್‍ಶೈರ್ನಲ್ಲಿರುವ ಪೆನ್ನ್ ಊರಿನಲ್ಲಿ ಅವಳ ತಂಗಿಯ ಮನೆಯಲ್ಲಿ ತನ್ನ ೭೨ನೇ ವಯಸ್ಸಿನಲ್ಲಿ ನಿಧನಾದಳು.  ರಾಜಕುಮಾರಿ ಸೋಫಿಯಾಳ ಅಂತ್ಯಕ್ರಿಯೆ Golders Green crematorium ನಲ್ಲಿ ೨೬/೦೮/೧೯೪೮ ರಂದು ನಡೆಯಿತು. ಅವಳ ಕೊನೆ ಇಚ್ಛೆ ತನ್ನ ಅಂತಕ್ರಿಯೆಯು ಸಿಖ್ ಪದ್ಧತಿಯಲ್ಲಿ ನಡೆಯಬೇಕೆಂದು ಇತ್ತು. 

ಸೋಫಿಯಾಗೆ ದೊರೆತ ಮರಣೋತ್ತರ ಮಾನ್ಯತೆಗಳು ಅನೇಕ; ರಾಯಲ್ ಮೇಲ್‍ನವರ "Votes for Women" ದಿನಾಚರಣೆಯಲ್ಲಿ ೧೫/೦೨/೨೦೧೮ ಸೋಫಿಯಾ The Suffragette ಪತ್ರಿಕೆಯನ್ನು ಮಾರುತ್ತಿರುವ ಚಿತ್ರವುಳ್ಳ ಅಂಚೆಚೀಟಿ (postage stamp) ಬಿಡುಗಡೆ ಆಯಿತು.

ಏಪ್ರಿಲ್ ೨೦೧೮ ರಲ್ಲಿ ಪಾರ್ಲಿಮೆಂಟ್ ಮುಂದಿರುವ ಕಂಬದ ಮೇಲೆ ಸೋಫಿಯಾಳ ಚಿತ್ರ ಮತ್ತು ಹೆಸರನ್ನು ಕೆತ್ತಲಾಗಿದೆ.
A Princess' Guide to Burning Issue ಅನ್ನುವ ಮಕ್ಕಳಿಗಾಗಿ ಮಾಡಿದ ನಾಟಕ ಅನೇಕ ಶಾಲೆಗಳಲ್ಲಿ ಪ್ರದರ್ಶಿಸಲ್ಪಟ್ಟಿದೆ.
English Heritage ನವರು ಹ್ಯಾಂಪ್ಟನ್ ಕೋರ್ಟ್‍ನ ಹತ್ತಿರದ ಮನೆಯ ಮೇಲೆ ನೀಲಿ ಫಲಕದ (Blue Plaque) ಅನಾವರಣೆಯನ್ನು ೨೦೨೩ರಲ್ಲಿ ಮಾಡಿದರು.

ಸೋಫಿಯಾ ಜೀವನ ಚರಿತ್ರೆಯ ಬಗ್ಗೆ ಅನೇಕ ಲೇಖನಗಳು ಮತ್ತು ಪುಸ್ತಕಗಳು ಪ್ರಕಟವಾಗಿವೆ. ಉದಾಹರಣೆಗೆ, ಅನಿತಾ ಆನಂದ್ ಅವರ Suffragette Revolutionary (೨೦೧೫, ISBN ೯೭೮೧೪೦೮೮೩೫೪೫೬).

ಕೊನೆಯ ಮಾತು: ಇಂಗ್ಲೆಂಡಿನಲ್ಲಿ ಮಹಿಳೆಯರಿಗೆ ಮತದಾನ ಮಾಡುವ ಹಕ್ಕು ೧೯೨೮ರಲ್ಲಿ, ಅದೂ ೨೧ ವರ್ಷಕ್ಕೆ ಮೀರಿದವರಿಗೆ ಮಾತ್ರ ದೊರೆತಿತ್ತು; ದಕ್ಷಿಣ ಭಾರತದಲ್ಲಿ, ಮೈಸೂರು ರಾಜ್ಯದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮಹಾರಾಜರು ೧೯೨೩ ರಲ್ಲಿಯೇ ಮಹಿಳೆಯರಿಗೆ ಈ ಹಕ್ಕನ್ನು ಕೊಟ್ಟಿದ್ದರ ಮಹತ್ವವನ್ನು ಇಲ್ಲಿ ಮರೆಯಬಾರದು.

- ರಾಮಮೂರ್ತಿ ಎಚ್ ಎನ್.
ಕಾಂಗಲ್‍ಟನ್, ಚೆಶೈರ್.

********************

ಮೊಹರು ಕೋಣೆಯ ಕಥೆ – ರಾಮಮೂರ್ತಿ

ಪ್ರಿಯರೆ, ಪತ್ತೇದಾರಿ ಕಥೆಗಳೆಂದರೆ ಸಾಕು, ಮೊದಲ 10 ಸೆಕೆಂಡುಗಳಲ್ಲಿ ನೆನಪಾಗುವ ಹೆಸರುಗಳಲ್ಲಿ ಶರ್ಲಾಕ್ ಹೋಮ್ಸ್ ನ ಹೆಸರು ಇರದಿರಲು ಸಾಧ್ಯವಿಲ್ಲ. ಅಷ್ಟೇ ಏಕೆ, ಮುಚ್ಚಿಟ್ಟಿದ್ದನ್ನು ಪತ್ತೆಹಚ್ಚುವ ಜಾಣರನ್ನು “ಅವನೊಬ್ಬ ದೊಡ್ಡ ಶರ್ಲಾಕ್ ಹೋಮ್ಸ್!” ಅನ್ನುವಷ್ಟು ಜಗದ ಮೂಲೆಯಲ್ಲಿ ಜನ-ಮನದಲ್ಲಿ ಸೇರಿಹೋಗಿದೆ. ಅಂಥ ಒಂದು ಪಾತ್ರವನ್ನು ಹುಟ್ಟುಹಾಕಿದ ಸರ್ ಆರ್ಥರ್ ಕಾನನ್ ಡಾಯ್ಲ ಅವರು ಬರೆದ ಇನ್ನೂ ಅನೇಕ ಕಥೆಗಳಿದ್ದರೂ, ಹೊರ ಜಗತ್ತಿನ ಜನಸಾಮಾನ್ಯರಿಗೆ ಅಷ್ಟು ಪರಿಚಯವಿಲ್ಲ. ದ ಕಾನನ್ ಡಾಯ್ಲ ಎಸ್ಟೇಟ್ ನವರ ಅನುಮತಿಯೊಂದಿಗೆ, ಬಿ ರಾಮಮೂರ್ತಿಯವರು ಅಂಥದೇ ಒಂದು ಕಥೆಯನ್ನು ನಮ್ಮ ಮುಂದೆ ತಂದಿದ್ದಾರೆ. ಓದಿ, ನಿಮ್ಮ ಅನಿಸಿಕೆ ತಿಳಿಸಿ – ಎಲ್ಲೆನ್ ಗುಡೂರ್ (ಸಂ).

ಸರ್ ಅರ್ಥರ್ ಕಾನಾನ್ ಡಾಯಲ್  ಷರ್ಲಾಕ್ ಹೋಮ್ಸ್ ಕಥೆಗಳನ್ನು ಬರೆದವರು ಅನ್ನುವುದು ಎಲ್ಲರಿಗೂ ತಿಳಿದ ವಿಷಯ.  ಇವರ  ೫೬ ಸಣ್ಣ ಕಥೆಗಳು ಮತ್ತು ನಾಲ್ಕು  ಕಾದಂಬರಿಗಳು ೧೮೮೭ ರಿಂದ ೧೯೨೭ ಪ್ರಕಟಿಸಲ್ಪಟ್ಟವು.  ಇವರ ಕೃತಿಗಳು ೨೨೧-ಬಿ ಬೇಕರ್ ಸ್ಟ್ರೀಟ್ ನ ಬಗ್ಗೆ ಮಾತ್ರವೇ ಅಲ್ಲ; ನೂರಾರು ಕಥೆಗಳು ಮತ್ತು ಅನೇಕ ವಿಮರ್ಶಾತ್ಮಕ  ಪ್ರಬಂಧಗಳನ್ನೂ ರಚಿಸಿದ್ದಾರೆ.  ಇವರ ಅನೇಕ ಬರಹಗಳು ದಿ ಸ್ಟ್ರಾಂಡ್ (The Strand) ಅನ್ನುವ ಮಾಸಪತ್ರಿಕೆಯಲ್ಲಿ ೧೮೯೪-೧೯೦೦ರ ಮಧ್ಯೆ ಪ್ರಕಟವಾದವು.

ಆರ್ಥರ್ ಕಾನನ್ ಡಾಯಲ್ ೧೮೫೯ರಲ್ಲಿ (೨೨/೫/೧೮೫೯) ಸ್ಕಾಟ್ಲ್ಯಾಂಡಿನ ಎಡಿನ್ಬರಾದಲ್ಲಿ (Edinburgh) ಜನಿಸಿ, ೧೮೮೫ ನಲ್ಲಿ ವೈದ್ಯಕೀಯ ಪದವಿ ಪಡೆದರು.  ಅದರೆ ಇವರ ಆಸಕ್ತಿ ಇದ್ದಿದ್ದು ಬರವಣಿಗೆಯ ಮೇಲೆ.  ೧೮೯೧ರಲ್ಲೇ ವೈದ್ಯಕೀಯ ವೃತ್ತಿಯನ್ನು ಬಿಟ್ಟಿದ್ದರು.  ಆದರೆ ೧೮೯೯ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿದ್ದ  ಬೋಯಿರ್ ಯುದ್ಧಕ್ಕೆ ಸ್ವಂತ ಇಚ್ಛೆಯಿಂದ ಸರ್ಜನ್ ಆಗಿ ನಾಲ್ಕು ತಿಂಗಳು ಕೆಲಸ ಮಾಡಿದರು.  ನಂತರ ಈ ಯುದ್ಧದ ಬಗ್ಗೆ The Great Boer war ಬರೆದು  ಮನ್ನಣೆ  ಪಡೆದರು ಮತ್ತು ಬ್ರಿಟಿಷ್  ಚಕ್ರವರ್ತಿಯಿಂದ Knighthood ಸಹ ಗಳಿಸಿದರು. ೧೯೧೪ -೧೮ ರ ಮಧ್ಯೆ ನಡೆದ ಮೊದಲನೆಯ ಮಹಾಯುದ್ಧದಲ್ಲಿ ತೀರಿದ ಮಗ ಮತ್ತು ಸಹೋದರನ ನೆನಪಿಗಾಗಿ ಈ ಯುದ್ಧದ ಚರಿತ್ರೆಯನ್ನು ಮೂರು ಸಂಪುಟಗಳಲ್ಲಿ ಪ್ರಕಟಿಸಿದರು.

ಅವರು ಬರೆದ ರೌಂಡ್ ದ ಫೈರ್ ಸ್ಟೋರೀಸ್ (Round the Fire Stories) ಎಂಬ ರಹಸ್ಯ ಸಣ್ಣ ಕಥೆಗಳ ಸಂಕಲನ ದಿ ಸ್ಟ್ರಾಂಡ್ (The Strand Magazine ) ಪತ್ರಿಕೆಯಲ್ಲಿ ಪ್ರಕಟವಾಯಿತು.  ಅಮೇರಿಕಾದ Castle Books ನವರು ಈ ಕಥೆಗಳನ್ನು ೧೯೮೦  ನಲ್ಲಿ ೨೩೬ ಚಿತ್ರ ನಿರೂಪಣೆಯೊಂದಿಗೆ ಪ್ರಕಟಿಸಿದ್ದಾರೆ.  ಇದರಲ್ಲಿಯ ಒಂದು ಕಥೆಯನ್ನು ಕನ್ನಡಕ್ಕೆ ಅನುವಾದ ಮಾಡುವ ನನ್ನ ಮೊತ್ತ ಮೊದಲನೆಯ ಪ್ರಯತ್ನ ಇದು.  ಈ ಕಥೆ, ದಿ ಸ್ಟೋರಿ ಆಫ್ ದಿ ಸೀಲ್ಡ್ ರೂಮ್ (The  Story of  the Sealed Room) ಸೆಪ್ಟೆಂಬರ್ ೧೮೯೮ರಲ್ಲಿ The Strand Magazine ನಲ್ಲಿ ಪ್ರಕಟವಾಯಿತು.

ಮೊಹರು ಕೋಣೆಯ ಕಥೆ 

 ನಾನು  ಒಬ್ಬ ವಕೀಲ, ನನ್ನ ಕಚೇರಿ ಇರುವುದು ಲಂಡನ್ ನಗರದ ಅಬುಚರ್ಚ್ ಲೇನ್ ನಲ್ಲಿ.  ಇಲ್ಲಿ ಸುಮಾರು ಹತ್ತರಿಂದ  ಸಾಯಂಕಾಲ ಆರು ಗಂಟೆಯ ವರೆಗೆ  ಕೂತು  ಕೆಲಸ ಮುಗಿದ ಮೇಲೆ ತಾಜಾ ಗಾಳಿ ಪಡೆಯಲು ಉತ್ತರ ಲಂಡನ್ ಅಂದರೆ ಹ್ಯಾಮ್ ಸ್ಟೆಡ್ ಮತ್ತು  ಹೈ ಗೇಟ್ ಕಡೆ ತಿರುಗಾಡುವ ಅಭ್ಯಾಸ.  ಹೀಗೆ ಒಂದು ದಿನ ವಿಶಾಲವಾದ, ಆದರೆ ನಿರ್ಜನ ರಸ್ತೆಯಲ್ಲಿ ನಡೆಯುತ್ತಿರುವಾಗ ದೂರದಲ್ಲಿ ಕುದುರೆ ಗಾಡಿ ವೇಗವಾಗಿ ಬರುತಿತ್ತು.  ನನ್ನ ಹತ್ತಿರ ಇದು ಬಂದಾಗ, ರಸ್ತೆ ದಾಟುತ್ತಿದ್ದ ಸುಮಾರು ಇಪ್ಪತ್ತು ವರ್ಷದ ತರುಣ ಸೈಕಲ್ ಸವಾರ ಗಾಡಿಗೆ ಡಿಕ್ಕಿ ಹೊಡೆದು ಬಿದ್ದ. 

ಚಿತ್ರ ಕಲೆ: ಲಕ್ಷ್ಮೀನಾರಾಯಣ ಗುಡೂರ್

ಗಾಡಿಯ ಸಾರಥಿ ಇವನನ್ನು ಬೈದು, ಗಾಡಿಯನ್ನು ನಿಲ್ಲಿಸದೆ ಹೊರಟುಹೋದ.  ನಾನು ತಕ್ಷಣ ಅವನ ಸಹಾಯಕ್ಕೆ ಹೋಗಿ ಅವನನ್ನು ಎಬ್ಬಿಸಿ ಕೂಡಿಸಲು ಪ್ರಯತ್ನಪಟ್ಟೆ.  ಆದರೆ ತರುಣನ ಕಾಲು ಉಳುಕಿದ್ದರಿಂದ ಅವನಿಗೆ ಏಳುವುದು ಕಷ್ಟವಾಯಿತು.  ಹೇಗೋ ಅವನ ಕೈಯನ್ನು ನನ್ನ ಹೆಗಲಿನ ಮೇಲೆ ತಂದು ”ನಿನ್ನ ಮನೆ ಎಲ್ಲಿ ಹೇಳು, ಅಲ್ಲಿಗೆ ಹೋಗುವುದಕ್ಕೆ ಸಹಾಯ ಮಾಡುತ್ತೇನೆ” ಅಂದೆ.  ಆ ರಸ್ತೆಯಲ್ಲಿದ್ದದ್ದು ಶ್ರೀಮಂತರ ದೊಡ್ಡ ದೊಡ್ಡ ಮನೆಗಳು.  ನಮ್ಮ ಮನೆ ಇದೇ ಎಂದು ತೋರಿದಾಗ ನನಗೆ  ಆಶ್ಚರ್ಯವೇ ಆಯಿತು.  ಕಬ್ಬಿಣದ ಗೇಟ್ ತೆರೆದು ಸುಮಾರು ದೂರ ನಡೆದ ಮೇಲೆ ಕಾಣಿಸಿದ್ದು ದೊಡ್ಡ ಕಟ್ಟಡ, ಆದರೆ ಅಲ್ಲಿ ಯಾರೂ ವಾಸ ಮಾಡುತ್ತಿರುವ ಸೂಚನೆಗಳು ಕಂಡು ಬರಲಿಲ್ಲ.  ಮನೆಯಲ್ಲಿ ಒಂದು ದೀಪವೂ ಇಲ್ಲದೆ ಕತ್ತಲು.  ಕಷ್ಟದಿಂದ ಕೆಲವು ಮೆಟ್ಟಲುಗಳನ್ನು ಹತ್ತಿ ತನ್ನ ಜೋಬಿನಿಂದ ಬೀಗದಕೈ ತೆಗೆದು ಬಾಗಿಲು ತೆರದ.  “ಅಲ್ಲಿ ನೋಡಿ ಮೇಜಿನ ಮೇಲೆ ದೀಪ ಇದೆ, ಅದರ ಪಕ್ಕದಲ್ಲಿ ಬೆಂಕಿ ಕಡ್ಡಿ ಇದೆ.  ದಯವಿಟ್ಟು ದೀಪ ಹಚ್ಚಿ” ಅಂದ.  ಬೆಳಕಿನಲ್ಲಿ ನೋಡಿದರೆ ಈ ದೊಡ್ಡ ಕೋಣೆಯಲ್ಲಿ ಒಂದು ಕುರ್ಚಿ, ಸಣ್ಣ ಮೇಜು ಮತ್ತು ಸೋಫಾ ಬಿಟ್ಟರೆ ಇನ್ನೇನೂ ಇರಲಿಲ್ಲ.  ಸೋಫಾ ಮೇಲೆ ಕೂಡಿಸಿದ ಮೇಲೆ “ನಿಮಗೆ ತುಂಬಾ ವಂದನೆಗಳು, ನೀವು ಇಲ್ಲಿಂದ ಈಗ ಹೊರಡಬಹುದು” ಅಂದ.  ಆದರೆ ಇವನನ್ನು ಈ  ಸ್ಥಿತಿಯಲ್ಲಿ ಬಿಟ್ಟು   ಹೋಗುವುದು ಸರಿಯಲ್ಲ ಅನ್ನಿಸಿತು ನನಗೆ.  ಇಂಥ ಮನೆಗಳಲ್ಲಿ ಕೆಲವು ಸೇವಕರು ಸಾಮಾನ್ಯವಾಗಿ ಇರುತ್ತಾರೆ, ಇವರನ್ನು ಕರೆಯಲು ಒಂದು ಗಂಟೆ ಇರುತ್ತದೆ.  ಅದನ್ನು ಬಾರಿಸಿದೆ, ಆದರೆ ಯಾರ ಸುಳಿವೂ ಇರಲಿಲ್ಲ.  ಇವನನ್ನು ಮಲಗಿಸಲು ಮಲಗುವ ಕೋಣೆಯಲ್ಲಿ ಮಂಚ ಇರಬಹುದೆಂದು ನೋಡಲು ದೀಪ ತೆಗೆದುಕೊಂಡು ಹೊರಟೆ.  ಹಲವಾರು ಕೋಣೆಗಳು ಇದ್ದರೂ ಒಳಗೆ ಏನೂ ಸೌಕರ್ಯ ಇರಲಿಲ್ಲ. ಒಂದು ಕೋಣೆಗೆ  ಮಾತ್ರ ಬೀಗ ಹಾಕಿ ಅದರ ಸುತ್ತಲೂ ಬಟ್ಟೆ ಕಟ್ಟಿ ಅರಗಿನ ಮೊಹರು ಮಾಡಿತ್ತು.  ಅಷ್ಟರಲ್ಲಿ ನನ್ನನ್ನು ”ಇಲ್ಲೇ ಬನ್ನಿ ಇಲ್ಲೇ ಬನ್ನಿ”  ಅಂತ ಸ್ವಲ್ಪ ಆತಂಕದಿಂದ ಕರೆಯುತ್ತಿದ್ದದು ಕೇಳಿಸಿತು.  “ನೀವು ಇಲ್ಲಿಂದ ದೀಪ ಏಕೆ ತೊಗೊಂಡು ಹೋದಿರಿ?” ಅಂತ ಪ್ರಶ್ನೆ ಮಾಡಿದ.  “ನಿನಗೆ ಪೆಟ್ಟು ಬಿದ್ದು ಕೆಲವು ನಿಮಿಷ ಜ್ಞಾನ  ತಪ್ಪಿತ್ತು, ಆದ್ದರಿಂದ ಯಾರಾದರೂ ಸಹಾಯಕ್ಕೆ ಸಿಗುತ್ತಾರಾ ಅಂತ ಹುಡುಕಿದೆ” ಅಂದೆ. 

“ನನ್ನ ತಾಯಿಯ ತರಹ ನನಗೂ ದುರ್ಬಲ ಹೃದಯ, ಆದ್ದರಿಂದ ಜ್ಞಾನ ತಪ್ಪಿರಬಹುದು.  ಈ ಮನೆಯಲ್ಲಿ ನಾನು ಒಬ್ಬನೇ, ಇನ್ನಾರೂ ಇಲ್ಲ.  ಅಂದಹಾಗೆ ನೀವು ವೈದ್ಯರೆ?  ಮತ್ತೂ ನಿಮ್ಮ ಹೆಸರು ತಿಳಿಯಲಿಲ್ಲ.”

“ನನ್ನ ಹೆಸರು ಫ್ರಾಂಕ್ ಆಲ್ಡರ್. ನಾನು  ಒಬ್ಬ ವಕೀಲ, ವೈದ್ಯನಲ್ಲ”

“ನನ್ನ ಹೆಸರು ಫೀಲಿಕ್ಸ್ ಸ್ಟಾನಿಫೋರ್ಡ್.  ಒಳ್ಳೆದಾಯಿತು, ನನ್ನ ಸ್ನೇಹಿತ ಪರ್ಸಿವಲ್ ನನಗೆ ಹೇಳಿದ್ದ ನಮಗೆ ಒಬ್ಬ ವಕೀಲರ ಸಹಾಯ ಬೇಕಾಗಬಹುದು ಅಂತ.”

“ಹೇಳು, ನನ್ನಿಂದ ಏನು ಸಹಾಯ ಬೇಕು”

“ಅದು ಪರ್ಸಿವಲ್ ಗೆ ಗೊತ್ತು.  ಅಂದ ಹಾಗೆ ನೀವು ದೀಪದೊಂದಿಗೆ ಎಲ್ಲಾ ಕೋಣೆಗಳಿಗೂ ಹೋಗಿದ್ದಿರಲ್ಲ, ಅಲ್ಲಿ ಏನಾದರೂ ಗಮನಿಸಿದ್ದಿರಾ?”

“ಏನು ಗಮನಿಸಬೇಕಾಗಿತ್ತು?”

“ಅದೇ ಒಂದು ಕೋಣೆ ಬಾಗಲಿಗೆ ಬೀಗ ಮತ್ತು ಮೊಹರು ಹಾಕಿದ್ದು”

“ಹೌದು ನೋಡಿದ್ದೇನೆ”

“ನಿಮಗೆ ಅದನ್ನು ನೋಡಿ ಕುತೂಹಲ ಬರಲಿಲ್ಲವೇ?”

“ಹೌದು ಇದು ಅಸಾಮಾನ್ಯ ಅನ್ನಿಸಿತು ನಿಜ, ಆದರೆ ಅದು…”

“ನಾನು ಈ ಮನೆಯಲ್ಲಿ ಅನೇಕ ವರ್ಷದಿಂದ ಒಬ್ಬನೇ ವಾಸವಾಗಿದ್ದೇನೆ.  ನನಗೂ ಆ ಕೋಣೆಯಲ್ಲಿ ಏನಿದೆ ಅಂತ ತಿಳಿಯುವ ಕುತೂಹಲ”

“ಏನು? ಈ ಮನೆಯಲ್ಲಿ ಇದ್ದೂ ನಿನಗೆ ಗೊತ್ತಿಲ್ಲವೇ, ನೀನೇ ಹೋಗಿ ನೋಡಬಹುದಲ್ಲ?”

“ಇಲ್ಲ ಇದು ಸಾಧ್ಯವಿಲ್ಲ ಮತ್ತು ನಾನು ಮಾಡಲೂಬಾರದು”

ನನ್ನ ಸಮಯ ಮೀರುತ್ತಿತ್ತು.  ಗಂಟೆ ೯, ಹೇಗಿದ್ದರೂ ಫೀಲಿಕ್ಸ್ ಪೂರ್ತಿ ಚೇತರಿಸಿಕೊಂಡಿದ್ದಾನೆ.  ಇನ್ನೂ  ಪ್ರಶ್ನೆ  ಮಾಡಿದರೆ ನನ್ನ ಮನೆ ಸೇರುವುದು ತಡ ಆಗುತ್ತೆ, ಆದ್ದರಿಂದ ಹೊರಡುವುದಕ್ಕೆ ಎದ್ದು ನಿಂತೆ.  “ಮಿಸ್ಟರ್ ಆಡ್ಲರ್, ನಿಮಗೆ ಏನೂ ತೊಂದರೆ ಆಗದಿದ್ದರೆ ಇನ್ನು ಸ್ವಲ್ಪ ಹೊತ್ತು ಇಲ್ಲೇ ಇರಿ.  ನನ್ನ ಈ ಪರಿಸ್ಥಿತಿಯಲ್ಲಿ ನಿಮಗೆ ಆತಿಥ್ಯ ನೀಡುವುದಕ್ಕೆ ಸಾಧ್ಯವಾಗುತ್ತಿಲ್ಲ.  ಆದರೆ ಅಲ್ಲಿ ನೋಡಿ ವಿಸ್ಕಿ ಮತ್ತು ಸಿಗಾರುಗಳಿವೆ, ದಯವಿಟ್ಟು ತೆಗೆದುಕೊಳ್ಳಿ.  ನೀವು ನನ್ನ ಜೊತೆ ಸ್ವಲ್ಪ ಸಮಯ ಕಳೆದರೆ ನನಗೆ ಬಹಳ ಸಹಾಯವಾಗುತ್ತೆ”.  ಹೀಗೆ ಕೇಳಿದಮೇಲೆ ಇರಲೇಬೇಕಾಗಿ ಬಂತು.  ಫೀಲಿಕ್ಸ್ ತನ್ನ ಜೀವನದಲ್ಲಿ ನಡೆದಿದ್ದ ವಿಚಾರ ಹೇಳುವುದಕ್ಕೆ ಪ್ರಾರಂಭಿಸಿದ. 

“ನಾನು ಅನೇಕ ರೀತಿಯಲ್ಲಿ ತುಂಬಾ ನತದೃಷ್ಟ.  ನನ್ನ ತಂದೆ ಕೋಟ್ಯಾಧೀಶ್ವರಾಗಿದ್ದರೂ ನಾನು ಈಗ ಬಡವ, ಯಾವ ವೃತ್ತಿಯೂ ಇಲ್ಲ.  ಸಾಲದ್ದಕ್ಕೆ ಈ ದೊಡ್ಡ ಮನೆಯನ್ನು ನಡೆಸುವದು ಅಸಾಧ್ಯ.  ಈ ಮನೆಯನ್ನು ಬಾಡಿಗೆ ಕೊಡಲು ನನಗೆ ಅನುಮತಿ ಇಲ್ಲ.  ಅಂದ ಹಾಗೆ ನನ್ನ ತಂದೆ ಸ್ಟಾನಿಸ್ಲಾಸ್ ಸ್ಟಾನಿಫಾರ್ಡ್, ನೀವು ಕೇಳಿರಬಹುದು ಅವರು ಸಿಟಿಯಲ್ಲಿ ದೊಡ್ಡ ಬ್ಯಾಂಕರ್ ಆಗಿದ್ದರು ” 

ಇವರ ಬಗ್ಗೆ ನಾನು ಓದಿದ್ದೆ, ಸುಮಾರು ಏಳು ವರ್ಷದ ಹಿಂದೆ  ನಡೆದ ದೊಡ್ಡ ಆರ್ಥಿಕ ಹಗರಣ ಮತ್ತು ಈತ ಪರಾರಿ ಆಗಿದ್ದು, ಎಲ್ಲಾ ದಿನಪತ್ರಿಕೆಗಳಲ್ಲಿ ಬಂದಿತ್ತು. 

“ನಮ್ಮ ತಂದೆ ಇತರರು ಹೂಡಿಕೆ ಮಾಡಿದ್ದ ಹಣವನ್ನೆಲ್ಲಾ ಕಳೆದರು.  ಅವರ ತಪ್ಪಲ್ಲ ಆಗ ದೇಶದ ಆರ್ಥಿಕ ಪರಿಸ್ಥಿತಿ ಕೆಟ್ಟಿತ್ತು.  ಪ್ರಾಮಾಣಿಕ ಮನುಷ್ಯ, ಇತರಿಗೆ ಹೀಗೆ ಅನ್ಯಾಯವಾಗಿದ್ದು ಸಹಿಸಲಾರದೆ ಮನೆಯವರಿಗೂ ಮುಖ ತೋರಿಸದೇ ಈ ದೇಶ ಬಿಟ್ಟುಹೋದರು. ಎಲ್ಲೊ ಅಪರಿಚಿತರಾಗಿ ತೀರಿಕೊಂಡರು, ಅವರ ಮೇಲೆ ಯಾವ ಅಪವಾದವೂ ಇರಲಿಲ್ಲ ಅಂದಮೇಲೆ ವಾಪಸ್ಸು ಬರಬಹುದಾಗಿತ್ತು, ಆದರೆ ಬರಲಿಲ್ಲ.  ಸುಮಾರು ಎರಡು ವರ್ಷದ ಹಿಂದೆ ತೀರಿಕೊಂಡಿರಬೇಕು, ಆದರೆ ನಮಗೆ ಇದರ ಮಾಹಿತಿ ಏನೂ ಇಲ್ಲ.  ಅವರು ಬದುಕಿದ್ದರೆ ವಾಪಸ್ಸು ಬಂದಿರಬೇಕಾಗಿತ್ತು. ಆದ್ದರಿಂದ ಅವರು ಇನ್ನಿಲ್ಲ ಅನ್ನುವುದು ನನ್ನ ಊಹೆ”

“ಏನು ಅವರು ತೀರಿಕೊಂಡರೆ?”

“ಇರಬೇಕು; ಅವರು ಮಾಡಿದ್ದ ಹೂಡಿಕೆ ಚೇತರಿಸಿಕೊಂಡಿದ್ದರೂ ಅವರು ಬರಲಿಲ್ಲವಾದ್ದರಿಂದ ಅವರು ತೀರಿಕೊಂಡಿರಬೇಕು”

“ಎರಡು ವರ್ಷದ ಹಿಂದೆ ಅಂತ ಹೇಗೆ ತಿಳಿಯಿತು”

“ಆಗ ಅವರಿಂದ ಒಂದು ಕಾಗದ ಬಂದಿತ್ತು”

“ಹಾಗಾದರೆ ಅವರು ಎಲ್ಲಿದ್ದರು ಅಂತ ಗೊತ್ತಾಗಿರಬೇಕಲ್ಲವೆ?”

“ಇಲ್ಲ, ಸರಿಯಾಗಿ ಗೊತ್ತಿಲ್ಲ.  ಪ್ಯಾರಿಸ್ ನಿಂದ ಬಂದ ಅಂಚೆ ಗುರುತಿತ್ತು.  ಆಗತಾನೆ ನನ್ನ ತಾಯಿ ಸಹ ತೀರಿದ್ದಳು.  ಈ ಕಾಗದದಲ್ಲಿ ನನಗೆ ಕೆಲವು ಸಲಹೆ ಮತ್ತು ಸೂಚನೆಗಳನ್ನು ಕೊಟ್ಟಿದ್ದರು”

“ಹಿಂದೆಯೂ ಅವರಿಂದ ಕಾಗದ ಬಂದಿತ್ತೇ?”

“ಹೌದು.  ನೀವು ನೋಡಿದ ಮೊಹರು ಕೊಠಡಿಯ ಬಗ್ಗೆ ಸಹ ಒಂದು ಕಾಗದದಲ್ಲಿದೆ.  ಅಲ್ಲಿ ನೋಡಿ, ಆ ಮೇಜಿನ ಮೇಲೆ ಅವರು ಬರೆದಿದ್ದ ಕಾಗದಗಳು ಇವೆ.  ದಯವಿಟ್ಟು ಇಲ್ಲಿ ತನ್ನಿ, ಪರ್ಸಿವಲ್ ನನ್ನು  ಬಿಟ್ಟರೆ  ನೀವೇ ಈ ಕಾಗದಗಳನ್ನು ನೋಡುತ್ತಿರುವುದು!”

“ಅಂದಹಾಗೆ ಈ ಪರ್ಸಿವಲ್ ಯಾರು?” 

“ಆತ ನನ್ನ ತಂದೆಯ ಮುಖ್ಯ ಗುಮಾಸ್ತ ಮತ್ತು ಆಪ್ತನಾಗಿದ್ದ.  ನನ್ನ ತಾಯಿ ಬದುಕಿರೋವರೆಗೂ ಸಂಪರ್ಕದಲ್ಲಿದ್ದ.  ಇದು ಮೊದಲನೆಯ ಕಾಗದ, ನನ್ನ ತಂದೆ ಪರಾರಿ ಆದ ದಿನವೇ ಬಂತು. ಇದು ನನ್ನ ತಾಯಿಗೆ ಬರೆದಿದ್ದು.  ನೀವೇ ಓದಿ.”

ನನ್ನ ಪ್ರೀತಿಯ ಮಡದಿ,

ಸರ್ (ಡಾ) ವಿಲಿಯಂ ನಿನ್ನ ಹೃದಯ ಎಷ್ಟು ದುರ್ಬಲವಾಗಿದೆ ಅಂತ ತಿಳಿಸಿದಾಗಿನಿಂದ ನನಗೆ ಅತ್ಯಂತ ಆತಂಕ ಉಂಟಾಗಿದೆ.  ನಾನು ನಿನ್ನೊಡನೆ ನನ್ನ ವ್ಯಾಪಾರದ ಬಗ್ಗೆ ಇದುವರೆಗೂ ಮಾತನಾಡಿಲ್ಲ, ಈಗ ನಾನು ತುಂಬಾ ಕಷ್ಟದ ಪರಿಸ್ಥಿತಿಯಲ್ಲಿ ಇದ್ದೀನಿ ಅಂತ ನಿನಗೆ ತಿಳಿಸುವುದಕ್ಕೆ ನನಗೆ ಸಂಕೋಚ ಮತ್ತು ದುಃಖವಾಗುತ್ತಿದೆ.  ನನ್ನಿಂದಾಗಿ ನಮ್ಮ ಸ್ನೇಹಿತರನ್ನೂ ಒಳಗೊಂಡು ಅನೇಕರು, ಅವರು ಕೂಡಿಟ್ಟ ಹಣವನ್ನು ಕಳೆದುಕೊಂಡಿದ್ದಾರೆ, ಆದರೆ ಇದು ನನ್ನ  ತಪ್ಪಲ್ಲ – ದೇಶದ ಆರ್ಥಿಕ ಪರಿಸ್ಥಿತಿ ಹಾಗಿತ್ತು.  ಈ ಅವಮಾನವನ್ನು ನಾನು ತಡೆಯಲಾರೆ.  ಆದ್ದರಿಂದ ನಾನು ಎಲ್ಲರಿಂದ ತಲೆಮರೆಸಿಕೊಂಡು ಇರಬೇಕೆಂದು ತೀರ್ಮಾನಿಸಿ, ಪರದೇಶದಲ್ಲಿ ಅಜ್ಞಾತವಾಗಿ ವಾಸಿಸುತ್ತಿದ್ದೇನೆ.  ಇದು ಕೇವಲ ತಾತ್ಕಾಲಿಕ ಮಾತ್ರ, ಪುನಃ ನಾವಿಬ್ಬರು ಒಂದಾಗಿರಬಹುದು.  ಆ ದಿನವನ್ನು ನಾನು ಎದುರು ನೋಡುತ್ತಿದ್ದೇನೆ.  ನನಗೆ ನಿನ್ನಿಂದ ಒಂದು ಸಹಾಯ ಬೇಕು, ಇದನ್ನು ತಪ್ಪದೆ ನಡೆಸಿಕೊಡಬೇಕು ಅಂತ ನನ್ನ ಕೋರಿಕೆ.  ನಾನು ಒಂದು ಸಣ್ಣ ಕೋಣೆಯನ್ನು ಫೋಟೋ ಕೆಲಸಗಳಿಗೆ ಕತ್ತಲೆ ಕೋಣೆಯನ್ನಾಗಿ ಮಾಡಿದ್ದು ನಿನಗೆ ಗೊತ್ತಿದೆ.  ನಾನು ಮನೆ ಬಿಡುವದಕ್ಕೆ ಮುಂಚೆ ಇದನ್ನು ಭದ್ರ ಪಡಿಸಿದ್ದೀನಿ, ಅದಕ್ಕೆ ನೀನು ಬೀಗ ಹಾಕಿ ಮೊಹರು ಮಾಡು.  ಅದರಲ್ಲಿ ನಮ್ಮ ಕುಟುಂಬಕ್ಕೆ ಅವಮಾನವಾಗುವ ಹಾಗೆ ಏನು ಇಲ್ಲ.  ಆದರೂ ನೀನು ಅಥವಾ ಫೀಲಿಕ್ಸ್ ಯಾವ ಕಾರಣದಿಂದಲೂ ಈ ಕೋಣೆಗೆ ಹೋಗಬಾರದು.  ನೀವಿರುವ ಮನೆಯನ್ನು ಮಾರುವ ಅಥವ ಬಾಡಿಗೆಗೆ ಕೊಡುವ ಹಾಗಿಲ್ಲ.  ಆದರೆ ಫೀಲಿಕ್ಸ ೨೧ ವರ್ಷಕ್ಕೆ ಬಂದಾಗ ಮಾತ್ರ ಮೊಹರನ್ನು ತೆಗೆದು ಒಳಗೆ ಹೋಗಬಹುದು.  ನಿನಗೆ ಏನಾದರೂ ಸಹಾಯ ಬೇಕಿದ್ದರೆ ಪರ್ಸಿವಲ್ ನ ಕೇಳು, ಅವನಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ.

ಇತಿ, ನಿನ್ನ ಪ್ರೀತಿಯ ಸ್ಟಾನಿಸ್ 

ಜೂನ್ , ೧೮೮೭

“ನಮ್ಮ ಉಳಿತಾಯವೂ ಮುಗಿದು ಜೀವನ ನಡೆಯುವುದು ಕಷ್ಟವಾಯಿತು.  ಮನೆಯ ಕೆಲವು ಸಾಮಾನುಗಳನ್ನು ಮಾರಿ ಮತ್ತು ಸೇವಕರನ್ನು ಕೆಲಸದಿಂದ ತೆಗೆದು ಹಾಕಿ ನಮ್ಮ ಸಂಸಾರವನ್ನು ಮುಂದೆವರೆಸಿದೆವು.  ನನ್ನ ತಾಯಿ ಈ ಕಾಗದ ನೋಡಿದ ಮೇಲೆ ಐದು  ವರ್ಷ ಬದುಕಿದ್ದರು.  ನಂತರ ಇನ್ನೆರಡು ಕಾಗದಗಳೂ ಬಂದವು.  ಕಳುಹಿಸಿದವರ ವಿಳಾಸವಿರಲಿಲ್ಲ, ಆದರೆ ಪ್ಯಾರಿಸ್ ನಿಂದ.  ನನ್ನ ತಾಯಿ ತೀರಿದ ಮೇಲೆ ನನಗೆ ಬಂದ  ಪತ್ರದಲ್ಲಿ ನನಗೆ ಅನೇಕ ಸಲಹೆಗಳನ್ನು ನೀಡಿ, ಮೊಹರು ಹಾಕಿದ ಕೋಣೆಗೆ ಈಗ ಅಷ್ಟೇನು ಪ್ರಾಮುಖ್ಯತೆ ಇಲ್ಲ, ಆದರೂ ನನಗೆ ೨೧ ವರ್ಷ ವಾಗುವರೆಗೆ ತಾಳು ಎಂದಿದ್ದರು. ಇಷ್ಟೇ ದಿನಗಳು ಕಾದಿದ್ದೇನೆ, ಇನ್ನೆರಡು ತಿಂಗಳು ನಾನು ಕಾಯುತ್ತೇನೆ”

“ಎರಡು ತಿಂಗಳು ಏಕೆ?”

“ನನ್ನ ೨೧ ವರ್ಷದ ಹುಟ್ಟಿದಹಬ್ಬ; ಅಲ್ಲಿಯವರೆಗೆ ನಾನು ತಾಳ್ಮೆಯಿಂದ ಇರುತ್ತೇನೆ,  ವಯಸ್ಸಿಗೆ ಬಂದ  ತಕ್ಷಣ ಆ ಕೋಣೆಯಲ್ಲಿ ಏನಿದೆ ಅಂತ ನೋಡಿ ನಂತರ ಈ ಮನೆಯಿಂದ ಹೊರಗೆ ಹೋಗುತ್ತೇನೆ”,

“ಈ ಏಳು ವರ್ಷದಲ್ಲಿ ಷೇರ್ ಮಾರ್ಕೆಟ್ ಚೇತರಿಕೊಂಡಿದೆ ಆಗ ಅವರು ವಾಪಸ್ಸು ಬರಬಹುದಾಗಿತ್ತಲ್ಲ “

“ಬಹುಷಃ ಅವರು ಜೀವಿತವಾಗಿಲ್ಲ ಆದ್ದರಿಂದ”

“ನಿನ್ನ ತಾಯಿಯನ್ನು ಅವರ ಜೊತೆಯಲ್ಲಿ ಕರೆದುಕೊಂಡು ಹೋಗಲಿಲ್ಲ ಏಕೆ?”

“ನನಗೆ ಗೊತ್ತಿಲ್ಲ “

“ನಿನ್ನ ತಾಯಿ ತೀರಿದಾಗ ಅವರ ಶವಸಂಸ್ಕಾರ ಮಾಡುವುದಕ್ಕೆ ಬರಲಿಲ್ಲವೇಕೆ?”

“ನನಗೆ ಗೊತ್ತಿಲ್ಲ”

“ಫೀಲಿಕ್ಸ್, ನೋಡು, ನನ್ನ ಪ್ರಕಾರ ನಿನ್ನ ತಂದೆ ಮೇಲೆ ಇನ್ನೇನೋ ಅಪವಾದ ಇರಬೇಕು ಅಥವ ಇದೆ ಅಂತ ಭಾವಿಸಿರಬೇಕು, ಆದ್ದರಿಂದ ಅವರು ತಲೆತಪ್ಪಿಸಿಕೊಂಡು ಇದ್ದಾರೆ” 

ಇದನ್ನು ಕೇಳಿ ಫೀಲಿಕ್ಸ್ ಗೆ ಬೇಜಾರಾಗಿರಬೇಕು.  “ಮಿಸ್ಟರ್ ಆಡ್ಲರ್, ನಿಮಗೆ ನನ್ನ ತಂದೆಯ ಪರಿಚಯ ಇದ್ದಿದ್ದರೆ ಈ ಸಂಶಯ ಬರುತ್ತಿರಲಿಲ್ಲ. ಅವರು ಕಣ್ಮರೆ ಆದಾಗ ನಾನಿನ್ನು ಚಿಕ್ಕವನು ಆದರೂ ನನಗೆ ಅವರು ಮಾರ್ಗದರ್ಶಿಗಳಾಗಿದ್ದರು.  ಅವರ ಪ್ರಾಮಾಣಿಕತೆ ನನಗೆ ಆಗಲೇ ಗೊತ್ತಿತ್ತು.  ನಿಮ್ಮ ಜೊತೆ ಮಾತನಾಡಿದ್ದು ನನಗೆ ಸಮಾಧಾನವಾಯಿತು.  ನಿಮಗೆ ಹೊತ್ತಾಗುತ್ತಿದೆ, ನೀವು ಇನ್ನು ಹೊರಡಿ” ಅಂದ.

“ನನ್ನಿಂದ ಏನಾದರೂ ಸಹಾಯ ಬೇಕಿದ್ದರೆ ಕೇಳು” ಅಂತ ಹೇಳಿ ನನ್ನ ವಿಸಿಟಿಂಗ್ ಕಾರ್ಡ್ ಕೊಟ್ಟು ಮನೆ ಸೇರಿದೆ.

ಈ ವಿಚಾರದ ಬಗ್ಗೆ ನನ್ನನ್ನು ಯಾರು ಸಂಪರ್ಕಿಸದೇ ಇದ್ದುದರಿಂದ ಇದಕ್ಕೆ ಪರಿಹಾರ ಬಂದಿರಬೇಕೆಂದು ಹೆಚ್ಚು ಗಮನ ಕೊಡಲಿಲ್ಲ. ಆದರೆ ಒಂದು ಮಧ್ಯಾಹ್ನ ನನ್ನ ಕಚೇರಿಗೆ J H Percival ಎಂಬಾತ ನನ್ನನ್ನು ನೋಡಲು ಬಂದ. ಈ ಹೆಸರು ಎಲ್ಲೊ ಕೇಳಿದಹಾಗೆ ಜ್ಞಾಪಕ ಬಂತು. ಆತ 

“ಸರ್ ನನ್ನ ಹೆಸರನ್ನು ನನ್ನ ಸ್ನೇಹಿತ ಫೀಲಿಕ್ಸ್ ನಿಮಗೆ ಹೇಳಿದ್ದಾನೆ.  ಅದರಿಂದ ನಿಮ್ಮನ್ನು ನೋಡಲು ಬಂದೆ” 

”ಹೌದು, ಹೌದು. ಬನ್ನಿ ಏನು ವಿಷಯ”

“ಅವನ ತಂದೆ ಪರಾರಿ ಆದದ್ದು ಮತ್ತು ಮೊಹರು ಹಾಕಿರುವ ಕೋಣೆ ನಿಮಗೆ ಗೊತ್ತಿದೆ.  ಈ ವಿಚಾರದಲ್ಲಿ ನೀವು ನಮಗೆ ಸಹಾಯ ಮಾಡುತ್ತೀರ, ಅಂತ ಹೇಳಿದ್ದಿರಂತೆ” 

“ಹೌದು ಹೇಳಿದ್ದೆ, ನಿಜ.  ಈಗ ನನ್ನಿಂದ ಏನಾಗಬೇಕು ಹೇಳಿ”

“ಫೀಲಿಕ್ಸ್ ನ ೨೧ನೇ ಹುಟ್ಟಿದ ಹಬ್ಬದ ದಿನ ಮೊಹರನ್ನು ತೆಗೆದು ಆ ಕೋಣೆಯ ಒಳಗೆ ಹೋಗಬಹುದು ಅಂತ ಮಿಸ್ಟರ್ ಸ್ಟಾನ್ನಿಫೋರ್ಡ್ ಅನುಮತಿ ಕೊಟ್ಟಿದ್ದಾರೆ ಅಂತ ನಿಮಗೆ ಗೊತ್ತಿದೆ ಅಲ್ಲವೇ?” 

“ಹೌದು ನಾನು ಆ ಪತ್ರವನ್ನು ಓದಿದ್ದೇನೆ “

“ಇವತ್ತು ಫೀಲಿಕ್ಸ್ ಗೆ ೨೧ ವರ್ಷ”

“ಓ ಹಾಗಾದರೆ, ಕೋಣೆ ಒಳಗೆ ಹೋಗಿದ್ದರೆ?”

“ಇಲ್ಲ.  ನನ್ನ ನಂಬಿಕೆ, ಮೊಹರು ತೆಗೆಯುವಾಗ ಒಬ್ಬ ಸಾಕ್ಷಿ ಬೇಕು.  ನೀವು ವಕೀಲರು, ನಿಮಗೆ ಈ ವಿಚಾರ ಗೊತ್ತಿದೆ.  ಆದ್ದರಿಂದ ನಿಮ್ಮ ಎದುರಿಗೆ ಮೊಹರನ್ನು ತೆಗೆದು ಮೂರು ಜನರೂ ಒಳಗೆ ಪ್ರವೇಶಿಸಬಹುದು. ಇದು ನಿಮಗೆ ಒಪ್ಪಿಗೆ ಇದ್ದರೆ ನಮಗೆ ಸಹಾಯ ಮಾಡಿ. ನನಗೆ ದಿನವೆಲ್ಲ ಕಚೇರಿಯಲ್ಲಿ ಕೆಲಸ, ನಿಮಗೂ ಸಹ, ಆದ್ದರಿಂದ ಇವತ್ತು ಒಂಭತ್ತು ಗಂಟೆಗೆ ಭೇಟಿಯಾಗಬಹುದು”

“ಆಗಲಿ ನಾನು ಇವತ್ತು ಬರುತ್ತೇನೆ”

ಚಿತ್ರ ಕಲೆ: ಲಕ್ಷ್ಮೀನಾರಾಯಣ ಗುಡೂರ್

ನಾನು ಸರಿಯಾಗಿ ೯ ಗಂಟೆಗೆ ಹೋದೆ ಅಲ್ಲಿ ಫೀಲಿಕ್ಸ್ ಮತ್ತು ಪರ್ಸಿವಲ್ ನನಗಾಗಿ ಕಾದಿದ್ದರು. ಫೀಲಿಕ್ಸ್ ಮುಖದ ಮೇಲೆ ಸ್ವಲ್ಪ ಆತಂಕ ಇತ್ತು, ಪರ್ಸಿವಲ್ ತುಂಬಾ ನರಬಲದಿಂದ ನಡುಗುವ ಹಾಗೆ ಅನಿಸಿಕೆ ತೋರಿಸಿದ.  ಹಚ್ಚಿದ ದೀಪವನ್ನು ಎತ್ತಿ ಹಿಡಿದು “ಸರಿ ಮೊಹರು ತೆಗೆದು ಒಳಗೆ ಹೋಗುವ ಸಮಯ ಬಂದಿದೆ, ನಡೆಯಿರಿ” ಅಂದು ಹೇಳಿ ಬಾಗಿಲಿನ ಮುಂದೆ ನಿಂತು ಸ್ವಲ್ಪ ನಡುಕದಿಂದ “ಫೀಲಿಕ್ಸ್, ಇಲ್ಲಿ ಏನಿದೆಯೋ ನನಗೆ ಗೊತ್ತಿಲ್ಲ.  ಆದರೆ ಏನಿದ್ದರೂ ಅದನ್ನು ನೋಡುವ ಧೈರ್ಯ ನಿನಗೆ ಇರಬೇಕು”

“ನೀವು ಹೇಳಿದ್ದನ್ನು ಕೇಳಿ ಈ ನನಗೆ ಹೆದರಿಕೆ ಆಗುತ್ತದೆ, ಏನಿರಬಹುದು ಇಲ್ಲಿ?” 

ಪರ್ಸಿವಲ್ ತನ್ನ ಒಣಗಿನ ಗಂಟಲಿಂದ ಕಷ್ಟಪಟ್ಟು ತೊದಲಿದ “ಇಲ್ಲ, ಇಲ್ಲ. ಫೀಲಿಕ್ಸ್ ನೀನು … ನೀನು …. ಧೈರ್ಯ … ಧೈರ್ಯ … ವಾಗಿರು…”

ಇವನು ಮಾತನಾಡುವ ರೀತಿ ನೋಡಿ ಇವನಿಗೆ ಒಳಗೆ ಏನಿದೆ ಅಂತ ಗೊತ್ತಿರಬಹುದು ಅನ್ನುವ ಸಂಶಯ ನನಗೆ ಬಂತು.  

ದೀಪವನ್ನು ನಾನು ನಡುಗುತ್ತಿರುವ ಪರ್ಸಿವಲ್ ನಿಂದ ತೆಗೆದುಕೊಂಡೆ. ಪರ್ಸಿವಲ್ ಬೀಗದ ಕೈಗೊಂಚಲನ್ನು ಫೀಲಿಕ್ಸ್ ಗೆ ಕೊಟ್ಟು “ನಾನು ಕೊಟ್ಟ ಎಚ್ಚರಿಕೆ ಜ್ಞಾಪಕವಿರಲಿ” ಎಂದ. ಫೀಲಿಕ್ಸ್ ನನ್ನ ಚಾಕುವಿನಿಂದ ಮೊಹರನ್ನು ಒಡೆದು, ಬೀಗದಕೈಯಿಂದ ಬೀಗ ತೆಗದು ಬಾಗಿಲನ್ನು ಮುಂದೆ ತಳ್ಳಿ ಒಂದು ಹೆಜ್ಜೆ ಮುಂದೆ ಇಟ್ಟು ತನ್ನ ಕಣ್ಣು ಮುಂದಿನ ದೃಶ್ಯ ನೋಡಿ ಜ್ಞಾನ ತಪ್ಪಿ ಕುಸಿದು ಬಿದ್ದ. 

ಚಿತ್ರಕಲೆ: ಲಕ್ಷ್ಮೀನಾರಾಯಣ ಗುಡೂರ್

ಏಳು ವರ್ಷದಿಂದ ಗಾಳಿ ಬಿಸಿಲು ಕಾಣದೆ ಇರುವ ಈ ಕೋಣೆಯಿಂದ ಗಬ್ಬು ವಾಸನೆ ಬಂತು.  ನಾನು ದೀಪವನ್ನು ಮೇಲೆ ಎತ್ತಿ ನೋಡಿದಾಗ ಅಲ್ಲಿ ಕಾಣಿಸಿದ್ದು ಸಣ್ಣ ಮೇಜು, ಅನೇಕ ಗಾಜಿನ ಬಾಟಲಿಗಳು, ಕುರ್ಚಿಯ ಮೇಲೆ ಒಬ್ಬ ವ್ಯಕ್ತಿಯ ಆಕಾರ ನಮ್ಮ ಕಡೆ ಬೆನ್ನು ತೋರಿಸಿ ಏನೋ ಬರೆಯುತ್ತಿರುವ ಹಾಗಿತ್ತು, ದೀಪವನ್ನು ಇನ್ನೂ ಮೇಲೆತ್ತಿ ನೋಡಿದಾಗ, ಅವನ ಧೂಳು ತುಂಬಿದ ತಲೆ, ಮೇಜಿನ ಮೇಲೆ ಕುಸಿದು ಅವನು ಹಿಡಿದಿದ್ದ ಲೇಖನಿ ಬಣ್ಣ ಕೆಟ್ಟ ಕಾಗದದ ಮೇಲಿತ್ತು ..

ಪರ್ಸಿವಲ್ “ನನ್ನ  ಧಣಿಗಳೇ” ಎಂದು ಕಿರಿಚಿದ, “ಇಲ್ಲಿ ಏಳು ವರ್ಷಗಳ ಕಾಲ ಇಲ್ಲೇ ಕುಳಿತಿದ್ದಾರೆ, ನಾನು ಅವರನ್ನು ಬೇಡಿಕೊಂಡೆ, ಆದರೆ ನನ್ನ ಮಾತು ಕೇಳಲಿಲ್ಲ.  ಮೇಜಿನ ಮೇಲಿರುವ ಬೀಗದಕೈಯಿಂದ ಒಳಗಿಂದ ಬಾಗಿಲನ್ನು ಭದ್ರ ಮಾಡಿದ್ದರು.  ಇಲ್ಲಿರುವ ಕಾಗದ ಮೇಲೆ ಏನೋ ಸಂದೇಶ ಬೇರೆ ಇದೆ. 

ನಾನು “ಏನು! ಇದು ಮಿಸ್ಟರ್ ಸ್ಟಾನಿಸ್ ಸ್ಟಾನಿಫೋರ್ಡ್! ಅಯ್ಯೋ ದೇವರೇ” ಅಂತ ಉದ್ಗರಿಸಿದೆ.

“ಸರಿ, ಸರಿ.  ಆ ಕಾಗದ ತೆಗೆದುಕೊಂಡು ಬೇಗ ನಡೆಯಿರಿ, ಈ ಕೋಣೆಯ ಗಾಳಿ ತುಂಬಾ ವಿಷಪೂರಿತವಾಗಿದೆ” ಎಂದು ಹೇಳಿ ಕುಸಿದಿದ್ದ ಫೀಲಿಕ್ಸ್ ನ ಇಬ್ಬರೂ ಎತ್ತಿ ಹೊರಗೆ ಬಂದೆವು.  ಫೀಲಿಕ್ಸ್ ಎಚ್ಚರಗೊಂಡು  ”ನನ್ನ ತಂದೆ…. ನನ್ನ ತಂದೆ ಇಲ್ಲಿ ಕುರ್ಚಿಯ ಮೇಲೆ ಏಳುವರ್ಷದಿಂದ ಸತ್ತು ಕುಳಿತಿದ್ದಾರೆ.  ಪರ್ಸಿವಲ್, ನಿನಗೆ ಈ ವಿಚಾರ ತಿಳಿದಿತ್ತು ಆದ್ದರಿಂದ ನನಗೆ ಎಚ್ಚರಿಕೆ ಕೊಟ್ಟಿದ್ದು” ಅಂತ ಗೋಳಾಡಿದ. “ಹೌದು, ನನಗೆ ಗೊತ್ತಿತ್ತು ಆದರೆ ನಾನು ಯಾರಿಗೂ ಹೇಳುವ ಹಾಗಿರಲಿಲ್ಲ.  ಇದು ಧಣಿಗಳಿಗೆ ಕೊಟ್ಟ ಮಾತು, ನನ್ನನ್ನು ಕ್ಷಮಿಸು” ಅಂದ. 

“ಹಾಗಾದರೆ ನನ್ನ ತಾಯಿಗೆ ಮತ್ತು ನನಗೆ ಬಂದದ್ದು ಸುಳ್ಳು ಪತ್ರಗಳು ತಾನೇ?” 

“ಇಲ್ಲ ಇಲ್ಲ, ನಿಮ್ಮ ತಂದೆ ಇವನ್ನು ಬರೆದು ನನಗೆ ಕೊಟ್ಟು ಸಮಯಕ್ಕೆ ಪ್ಯಾರಿಸ್ ನಿಂದ ಪೋಸ್ಟ್ ಮಾಡು ಅಂತ ನನಗೆ ಆದೇಶ ಕೊಟ್ಟಿದ್ದರು.  ಅವರು ನನ್ನ ಧಣಿಗಳು, ಅವರ ಮಾತನ್ನು ಪರಿಪಾಲಿಸುವುದು ನನ್ನ ಕರ್ತವ್ಯವಾಗಿತ್ತು”

ನರಗಳನ್ನು ಬಲಪಡಿಸಲು ಫೀಲಿಕ್ಸ್ ಒಂದು ಗುಟುಕು ವಿಸ್ಕಿ ಸೇವಿಸಿ, “ನನಗೆ ಈಗ ಸ್ವಲ್ಪ ಧೈರ್ಯ ಬಂದಿದೆ, ವಿವರಿಸಿ ಹೇಳು” ಎಂದ. 

“ನಿನ್ನ ತಂದೆ ಸಿಟಿಯಲ್ಲಿ ದೊಡ್ಡ Investment banker ಆಗಿದ್ದರು, ಬಹಳ ಹೆಸರಾದಂತಹ ಪ್ರಾಮಾಣಿಕ ಮನುಷ್ಯ ಆಗಿದ್ದರಿಂದ ಅನೇಕ ಜನರು ಅವರ ಹಣವನ್ನು ಬಂಡವಾಳ ಹೂಡಿಕೆಗಾಗಿ ಇವರಿಗೆ ಕೊಟ್ಟಿದ್ದರು. ಆದರೆ ಕ್ರಮೇಣ ದೇಶದ ಆರ್ಥಿಕ ಪರಿಸ್ಥಿತಿ ಕೆಟ್ಟು ಷೇರು ಮಾರುಕಟ್ಟೆ ಕುಸಿದು ಉಳಿತಾಯದಲ್ಲಿದ್ದ ಹಣದ ಮೌಲ್ಯಕ್ಕೆ ಬೆಲೆ ಇಲ್ಲದಾಯಿತು.  ಅನೇಕರ, ಅದರಲ್ಲೂ ಇವರ ಸ್ನೇಹಿತರ ಆರ್ಥಿಕ ಪರಿಸ್ಥಿತಿ ದುರ್ಬಲವಾಯಿತು ಮತ್ತು ಹಲವಾರು ಕುಟುಂಬಗಳು ನಾಶವೇ ಆದವು.  ಇದನ್ನು ನೋಡಿ ಸಹಿಸಲಾರದೆ ತಮ್ಮ ಪ್ರಾಣವನ್ನು ಬಿಡುವುದಕ್ಕೆ ನಿರ್ಧಾರ ಮಾಡಿದರು.  ನಾನು ಇದು ಬೇಡ ಅಂತ ಗೋಗರೆದೆ.  ಆದರೆ ಅವರ ಮನಸ್ಸು ಧೃಡವಾಗಿತ್ತು.  ಅವರ ಒಂದು ಕೊರಗು ಇದ್ದಿದ್ದು ನಿನ್ನ ತಾಯಿಯ ಬಗ್ಗೆ, ಡಾ ವಿಲಿಯಂ ಪ್ರಕಾರ ಅವರಿಗೆ ಯಾವುದೇ ರೀತಿಯ ಗಾಬರಿಯಾದರೆ ಹೃದಯಾಘಾತವಾಗುವುದು ಖಂಡಿತ ಎಂದಿದ್ದರು ಮತ್ತು ಹೆಚ್ಚು ದಿನಗಳು ಬದಕಿರುವುದಿಲ್ಲ ಅಂತಲೂ ಹೇಳಿದ್ದರು.  ಆದ್ದರಿಂದ ಎಲ್ಲರಿಗೂ ತಿಳಿಯುವ ಹಾಗೆ ಆತ್ಮಹತ್ಯೆ ಮಾಡಿಕೊಳ್ಳುವುದು ಸರಿಯಲ್ಲ ಅಂತ ತೀರ್ಮಾನ ಮಾಡಿ, ಎರಡು ಪತ್ರಗಳನ್ನು ಬರೆದು ಆಗಾಗ್ಗೆ ತಲುಪಿಸುವುದಕ್ಕೆ ಅಪ್ಪಣೆ ಮಾಡಿದ್ದರು. ನಿನ್ನ ತಾಯಿ ಐದು ವರ್ಷ ಬದುಕಿದ್ದರು, ಇನ್ನೊಂದು ಕಾಗದವನ್ನು ನಿನ್ನ ತಾಯಿ ತೀರಿದಮೇಲೆ ತಲಪಿಸಬೇಕಾಗಿತ್ತು.  ಈ ಎಲ್ಲಾ ಪತ್ರಗಳನ್ನು ಪ್ಯಾರಿಸ್ ನಿಂದ ಕಳಿಸಬೇಕಾಗಿತ್ತು.  ಏಳು ವರ್ಷ ಆದಮೇಲೆ ಎಲ್ಲರಿಗೂ ಆಗಿರುವ ಅನ್ಯಾಯ ಮತ್ತು ನೋವು ಮರೆತಿರಬಹುದು ಅಥವಾ ಕಡಿಮೆ ಆಗಿರಬಹುದೆಂದು ಅವರ ನಂಬಿಕೆ ಇರಬೇಕು.  ನನ್ನನ್ನು ನೀವು ತಪ್ಪಿತಸ್ತನನ್ನಾಗಿ ಮಾಡಬೇಡಿ, ನನ್ನ ತಪ್ಪು ಇದರಲ್ಲಿ ಏನೂ ಇಲ್ಲ. ಈ ವಿಚಾರವನ್ನೇ ನಿಮ್ಮ ತಂದೆ ಬರೆದಿರುವುದು ಇರಬೇಕು, ಇದನ್ನು ಓದಲೇ ಈಗ?”

“ಓದು”

”ನಾನು ವಿಷ ತೆಗೆದುಕೊಂಡಿದ್ದೇನೆ.  ಅದು ನನ್ನ ರಕ್ತನಾಳದಲ್ಲಿ ಕೆಲಸ ಮಾಡುತ್ತಿರುವುದು ಗೊತ್ತಾಗುತ್ತಿದೆ.  ಇದು ವಿಚಿತ್ರವಾಗಿದ್ದರೂ ನೋವು ಇಲ್ಲ.  ಈ ಪತ್ರವನ್ನು ನೀವು ಓದುತ್ತಿರುವ ವೇಳೆಗೆ ನನ್ನ ಕೋರಿಕೆಯನ್ನು ಪಾಲಿಸಿದ್ದರೆ, ನಾನು ಸತ್ತು ಬಹಳ ವರ್ಷಗಳಾಗಿರುತ್ತದೆ.  ಹಣ ಕಳೆದುಕೊಂಡವರಿಗೆ ಇನ್ನೂ ನನ್ನ ಮೇಲೆ ದ್ವೇಷ ಇರುವುದಿಲ್ಲ ಎಂದು ಭಾವಿಸಿದ್ದೇನೆ.  ಫೀಲಿಕ್ಸ್, ನಮ್ಮ ಕುಟುಂಬಕ್ಕೆ ಆಗಿರುವ ಲೋಕಾಪವಾದಕ್ಕೆ ನನ್ನನ್ನು ಕ್ಷಮಿಸು.  ದೇವರು ನಿನಗೆ ಒಳ್ಳೆಯದು ಮಾಡಲಿ”

ಇದನ್ನು ಕೇಳಿ ನಾವೆಲ್ಲರೂ ಒಟ್ಟಿಗೆ ಆಮೆನ್ ಅಂದೆವು.

***

ಈ ಕಥೆಯನ್ನು ಅನುವಾದ ಮಾಡಲು ಅನುಮತಿ ಕೊಟ್ಟ The Conan Doyle Estate ನವರಿಗೆ ಮತ್ತು ಸುಂದರವಾದ ಚಿತ್ರಗಳನ್ನು ರಚಿಸಿದ ಡಾ. ಲಕ್ಷ್ಮೀನಾರಾಯಣ ಗೂಡೂರ್ ಅವರಿಗೆ ನನ್ನ ಕೃತಜ್ಞತೆಗಳು.  

– ರಾಮಮೂರ್ತಿ,  ಬೇಸಿಂಗ್ ಸ್ಟೋಕ್