ಇಂಗ್ಲಂಡ್ ಕನ್ನಡಿಗರ ಕವಿಗೋಷ್ಠಿ – ಕನ್ನಡಪ್ರೆಸ್ ರಾಜ್ಯೋತ್ಸವ ವಿಶೇಷ ೨೦೨೦

ಅನಿವಾಸಿಯ ವಾಟ್ಸಾಪ್ ಗುಂಪಿನಲ್ಲಿ ಪ್ರೇಮಲತ ಅವರು ಹಾಕಿದ ಅಹ್ವಾನವನ್ನು ಸ್ವೀಕರಿಸಿ ಮುಂದೆ ಬಂದ ನಮ್ಮ ಐವರು ಉತ್ಸಾಹಿ ಕವಿ / ಕವಯತ್ರಿಯರು ಬರೆದ ಕವಿತೆಗಳಿವು. ವಿಡಿಯೊದಲ್ಲಿ ಇರುವ ಕ್ರಮದಲ್ಲಿಯೇ ಇವೆ; ಕೆಲವಕ್ಕೆ ಅವರೇ ಬರೆದಿರುವ ಮುನ್ನುಡಿಗಳಿವೆ. ಅನಿವಾಸಿ ಕವಿಗಳ ಕನ್ನಡ ನಾಡು, ನುಡಿಯ ಪ್ರೇಮವನ್ನು ಮೆರೆಯುವ ಈ ರಚನೆಗಳನ್ನು ಓದಿ, ಕೇಳಿ (ಯೂಟ್ಯೂಬ್ ಲಿಂಕ್ ಕೊನೆಯಲ್ಲಿದೆ) ನೋಡಿ ಆನಂದಿಸಿ. – ಎಲ್ಲೆನ್ ಗುಡೂರ್ (ಸಂ.)

ಮುನ್ನುಡಿ:

ಈ ಬಾರಿಯ ಕನ್ನಡ ರಾಜ್ಯೋತ್ಸವ, ಕೆ.ಎಸ್.ಎಸ್.ವಿ.ವಿ. ಯ ಐವರು ಕವಿಗಳಿಗೆ ತಮ್ಮ ಸ್ವರಚಿತ ಕನನಗಳನ್ನು ವಾಚಿಸಲು ಒಂದು ವಿಶೇಷ  ಅವಕಾಶವನ್ನು ಹೊತ್ತು ತಂದಿತು.

ಈ ವರ್ಷದಲ್ಲೇ ಆರಂಭವಾದ ಕನ್ನಡಪ್ರೆಸ್.ಕಾಂ ಎನ್ನುವ ಅಂತರ್ಜಾಲಜಗಲಿಯ ಪ್ರಧಾನ ಸಂಪಾದಕರಾದ ಶ್ರೀವತ್ಸ ನಾಡಿಗರು ಇಂಗ್ಲೆಂಡಿನ ಅನಿವಾಸಿ ಕನ್ನಡ ಕವಿಗಳಿಂದ ಒಂದು ಕವಿಗೋಷ್ಠಿಯನ್ನು ಮಾಡಬಹುದಲ್ಲವೇ? – ಎಂಬ ಹೊಳಹನ್ನು ನೀಡಿದ್ದೇ ಇದಕ್ಕೆ ನಾಂದಿಯಾಯಿತು.

ಕವಿಗೋಷ್ಠಿಯನ್ನು ವರ್ಚುಯಲ್ ವೇದಿಕೆ-ವೀಡಿಯೋ ಪಾಡ್ ಕಾಸ್ಟ್ ಮೂಲಕ ಮಾಡಬಹುದೆಂದೂ, ಅವರವರ ಕವನವನ್ನು ವಾಚಿಸುವ ವೀಡೀಯೋಗಳನ್ನು ನೀಡಿದರೆ ಸಾಕೆಂದೂ ಅವರು ಹೇಳಿದರು. ಈ ಸಾಧ್ಯತೆಯನ್ನು ಅನಿವಾಸಿಯ ಕವಿಗಳ ಮುಂದಿಟ್ಟಾಗ ಸವಿತಾ ಸುರೇಶ್, ರಾಮ ಶರಣ್, ರಾಧಿಕ, ಕೇಶವ ಕುಲಕರ್ಣಿ ಮತ್ತು ಶ್ರೀವತ್ಸ ದೇಸಾಯಿಯವರು ಇದಕ್ಕೆ ಒಪ್ಪಿದರು. ಈ ಐಡಿಯಾವನ್ನು ಕವಿಗಳ ಮುಂದಿಟ್ಟಿದ್ದು 24 ಅಕ್ಟೋಬರಿನಂದು. 5000 ಮೈಲು ದೂರದ ಐವರು ಕವಿಗಳು ಕವನಗಳನ್ನು ಬರೆದು, ಓದಿ, ವಿಡೀಯೋ ಮಾಡಿ ಕಳಿಸಲು ತಗೊಂಡ ಕಾಲ ಕೇವಲ 3-4 ದಿನಗಳು ಮಾತ್ರ! ಅವುಗಳನ್ನು ನಿರೂಪಣೆಯನ್ನೂ ಸೇರಿಸಿ, ಒಂದಿಷ್ಟೂ ತಪ್ಪಿಲ್ಲದಂತೆ ಪ್ರಬುದ್ಧವಾದ ಕವಿಗೋಷ್ಠಿಯ ಹದಕ್ಕೆ ಜೋಡಿಸಿದ್ದು ಸುಧಾಕರ್ ದರ್ಬೆಯವರು. ಇವರು ಕನ್ನಡಪ್ರಭದ ಮುಖ್ಯ ಇಲ್ಲಸ್ಟ್ರೇಷನ್ ಕಲಾವಿದರು. ಮುನ್ನೂರಕ್ಕೂ ಹೆಚ್ಚು ಪುಸ್ತಕಗಳ ಮುಖ ಪುಟ ವಿನ್ಯಾಸ ಮಾಡಿದವರು. ಮುಖ್ಯ ಮಂತ್ರಿಗಳಿಂದ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಇತ್ಯಾದಿ ಹಲವು ಪ್ರಶಸ್ತಿಗಳಿಗೆ ಭಾಜನರಾದವರು.

ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿ, ಕರ್ನಾಟಕಕ್ಕೂ – ಇಂಗ್ಲೆಂಡಿನ ಕನ್ನಡ ಕವಿಗಳಿಗೂ ಸಂಬಂಧಸೇತುವನ್ನು ನಿರ್ಮಿಸಿದ ಶ್ರೀವತ್ಸ ನಾಡಿಗರು ಎರಡೂ ಕಡೆಗಳಿಂದ ಓದುಗರ ಮತ್ತು ಕೇಳುಗರ ಮೆಚ್ಚುಗೆಗೆ ಪಾತ್ರರಾದರು. ಭಾಗವಹಿಸಿದ ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ವಿಶೇಷ ಸಂಭ್ರಮವನ್ನು ತುಂಬಿದರು.

ಈ ಕವಿಗೋಷ್ಠಿಯ ಕಾರಣ  ಶ್ರೀವತ್ಸ ನಾಡಿಗರು ಮತ್ತು ಕೇಶವ ಕುಲಕರ್ಣಿಯವರು ದೂರದ ಸಂಬಂಧಿಗಳು ಎನ್ನುವ ವಿಚಾರವೂ ತಿಳಿದು ಬಂದಿದ್ದು ಮತ್ತೊಂದು ವಿಶೇಷಕ್ಕೂ ನಾಂದಿ ಹಾಡಿ ಎಲ್ಲರಿಗೂ ಮುದನೀಡಿದ ವಿಚಾರವಾಯಿತು.

– ಡಾ.ಪ್ರೇಮಲತ ಬಿ.

*******************************************************************

 ನಾನು ಮತ್ತು ನನ್ನ ಭಾಷೆ - ಕೇಶವ ಕುಲಕರ್ಣಿ

 ಇಂಗ್ಲಂಡಿನಲ್ಲಿರುವ ನಾನಿರುವ ಊರಿನ poetry clubನಲ್ಲಿ
 ನಾನು ಅನುವಾದಿಸಿ ಓದುವ ಕವಿತೆಯ ಭಾಷೆ 'ಕನ್ನಡ' ಎಂದೆ
 'I didn't know you are from Canada,' ಎಂದು ನಿರೂಪಕ
 ನನ್ನ ಕಂದು ಮೈಬಣ್ಣವನ್ನು ಓರೆಗಣ್ಣಿಂದ ನೋಡುತ್ತಾನೆ
 
 ನಾನು ಕೆಲಸ ಮಾಡುವ ಇಂಗ್ಲಂಡಿನ ಆಸ್ಪತ್ರೆಯಲ್ಲಿ
 ಭಾರತೀಯ ಮೂಲದ ವಯಸ್ಸಾದ ರೋಗಿಗಳಿಗೆ 
 'ನಿಮ್ಮ ಪಂಜಾಬಿ ಉರ್ದು ಹಿಂದಿ ನನಗೆ ಅರ್ಥವಾಗುವುದಿಲ್ಲ,' ಎಂದರೆ
 'ನೀನ್ಯಾವ ಸೀಮೆಯ ಭಾರತೀಯ!' ಎಂದು ಗೇಲಿ ಮಾಡುತ್ತಾರೆ
 
 ಇಂಗ್ಲಂಡಿನ ಅಖಿಲ ಭಾರತೀಯ ಸಮಾರಂಭವೊಂದರಲ್ಲಿ
 ಹಿಂದಿ ಪಂಜಾಬಿ‌ ಬೆಂಗಾಲಿ ಹಾಡುಗಾರರ ನಡುವೆ
 ನಾನೊಂದು ಕನ್ನಡದ ಭಾವಗೀತೆಯನ್ನು ಹಾಡುತ್ತೇನೆ
 'What a lovely Tamil song!' ಎಂದು‌ ಡಿಜೆ ಬೆನ್ನು ತಟ್ಟುತ್ತಾನೆ
 
 ಇಂಗ್ಲೀಷಿನಲ್ಲಿ ಬ್ಲಾಗಿಸುವ ನನ್ನ ಕಸಿನ್ ಮನೆಗೆ ಬೆಂಗಳೂರಿಗೆ ಹೋದಾಗ, 
 'ನೀನೇಕೆ ಕನ್ನಡದಲ್ಲೂ ಬರೆಯುವುದಿಲ್ಲ?' ಎಂದು ಕೇಳಿದರೆ ಆತ ನನ್ನನ್ನೇ ಕೇಳುತ್ತಾನೆ:
 ಇಂಗ್ಲಂಡಿನಲ್ಲಿದ್ದೂ ನೀನ್ಯಾಕೆ ಇನ್ನೂ ಕನ್ನಡದಲ್ಲಿ ಬರೆಯುತ್ತೀಯ?
 ನಿನ್ನ ಮಗಳಿಗಾಗಲಿ ನನ್ನ ಮಗನಿಗಾಗಲಿ ಕನ್ನಡ ಓದಲು ಬರುತ್ತದೆಯೆ?'
 
(ಇದೊಂದು ಗಪದ್ಯ)  
*******************************************************
ದುಂಡು ಮಲ್ಲಿಗೆ ಬರುವೆಯಾ ಇಲ್ಲಿಗೆ - ರಾಧಿಕಾ ಜೋಶಿ

ಮಲ್ಲಿಗೆಯ ಋತುವಿನಲ್ಲಿ ಹಾಗು ಹಬ್ಬಗಳ ಸಮಯದಲ್ಲಿ ಮಲ್ಲಿಗೆಯ ಊರು ಮೈಸೂರಿನವಳಾದ ನಾನು ಅದನ್ನು ಬಹಳ ಹಂಬಲಿಸುತ್ತೇನೆ. ಸುಮಾರು ೩ ವರ್ಷಗಳಿಂದ ಬೆಳೆಸಲು ಪ್ರಯತ್ನಿಸುತ್ತಿದ್ದೇನೆ. ನನ್ನ ದುರಾದೃಷ್ಟ, ಗಿಡ ಒಣಗಿ ಹೋಗುತ್ತಿದೆ. ನನ್ನ ತಂದೆ ತಾಯಿಯೊಡನೆ ದಿನ ಪೇಟೆಗೆ ಹೋಗಿ ಹೂವು ಹಣ್ಣು ಕಾಯಿಪಲ್ಯೆ ತರುವ ಆಚರಣೆ. ಒಬ್ಬ ಹೂವಾಡಗಿತ್ತಿ ನಮಗೆ ಮುಖ ಪರಿಚಯ. ಬಹಳ ಶಾಂತ ಹಾಗು ಹಸನ್ಮುಖಿ ಆಗಿದ್ದ ಅವರ ಮುಖ ಇನ್ನು ನನ್ನ ಮನಸ್ಸಿನಲ್ಲಿ ಹಸಿರಾಗಿದೆ. ಸರಸರನೆ ಮಲ್ಲಿಗೆ ಕಟ್ಟುವ ಅವರ ಕೈಚಾತುರ್ಯ ನನ್ನನ್ನು ಯಾವಾಗಲು ಮಂತ್ರಮುಗ್ಧಳನ್ನಾಗಿ ಮಾಡುತ್ತಿತ್ತು. ನನಗೆ ಯಾವಾಗಲು ಅಂಗೈ ಉದ್ದದ ಮಲ್ಲಿಗೆ ಮಾಲೆ ಉಚಿತವಾಗಿ ಕೊಡುತ್ತಿದ್ದರು,”ತೊಗೋ ಪುಟ್ಟಿ ಹೂ, ನಿನಗೇ” ಅಂತ ಹೇಳಿ ಮುಗುಳ್ನಗುವರು. ಏನೋ ಒಂದು ಖುಷಿ. ಆ ಹೂವನ್ನು ಅಮ್ಮನಿಗೆ ಕೊಡದೇ ನಾನೇ ಹಿಡಿದುಕೊಂಡು ಬರ್ತಿದ್ದೆ. ನನಗೆ ಗುಲಾಬಿ ಸೇವಂತಿಗೆ ಇಷ್ಟವಾಗುತ್ತಿತ್ತು, ಆದರೆ ನನ್ನ ಜಿಜ್ಞಾಸೆ ಎಲ್ಲರೂ ಮಲ್ಲಿಗೆಯ ಬೆಲೆಯನ್ನು ಕೇಳಿ, ಕೊಳ್ಳುತ್ತಿದ್ದರು..

 ದುಂಡು ಮಲ್ಲಿಗೆ ಬರುವೆಯಾ ಇಲ್ಲಿಗೆ 
  
 ಗುಲಾಬಿ ಸೇವಂತಿ ರಾಶಿಯ ನಡುವೆಯೂ ಕಂಗೊಳಿಸುವ ಮಲ್ಲೆ
 ದಿನನಿತ್ಯ ಪೇಟೆಗೆ ಹೋಗುವ ಪುಟ್ಟಿಯ ಪ್ರಶ್ನೆ 
 ಬಣ್ಣಬಣ್ಣದ ಹೂವಿನ ನಡುವೆ ಎಲ್ಲರನು ಆಕರ್ಷಿಸುವುದು ಏಕೆ ಮಲ್ಲಿಗೆ
 ಗುಲಾಬಿಯ ವಿವಿಧ ಬಣ್ಣ ಇದಕಿಲ್ಲ, ಸೇವಂತಿಗೆಯಂತೆ ತಾಜಾತನ ಉಳಿಯುವುದಿಲ್ಲ 
 ಸಂಪಿಗೆಯ ಪ್ರಖರವಾದ ಸುವಾಸನೆ ಇಲ್ಲ, ಮತ್ತೇಕೆ ಬೇಡಿಕೆ ಈ ಹೂವಿಗೆ 
 ಮುಂಜಾನೆ ಬಂದಿಳಿಯಿತು ಶುಭ್ರ ಶ್ವೇತ ಮಲ್ಲಿಗೆ ರಾಶಿ ಬುಟ್ಟಿ
 ಹೂಗಾರ ಒಂದೆರಡು ಮಾರನ್ನು ಕೆಸುವಿನ ಎಲೆಯಲ್ಲಿ ಕಟ್ಟಿ 
 ಆಹ್ಲಾದಕರ ಬಿಡಿ ಮಲ್ಲಿಗೆಯೋ ಸುಂದರ ಸುರುಳಿ ರಾಶಿ ಮುತ್ತಿನ ಹಾರವೋ  
 ಪೋಣಿಸಿದ ಮೊಗ್ಗು ಲಲನೆಯ ಮುಡಿಯ ಜಡೆ ಮಲ್ಲಿಗೆಯ ಅಲಂಕಾರವೋ 
 ಹಬ್ಬವೋ ಮಹೋತ್ಸವವೋ ಕಳೆ ಹೆಚ್ಚಿಸುವ ಮಲ್ಲೆಯ ಮಾಲೆಯೋ  
  
 ಮನೆಯ ತುಂಬಾ ಮಲ್ಲಿಗೆಯ ಪರಿಮಳ 
 ಚಿಕ್ಕ ಮಕ್ಕಳು ಮೊಗ್ಗಿನ ಜಡೆಯ ಸಂಭ್ರಮದಲ್ಲಿ ತಳಮಳ 
 ಕಾಲ ಬೆಳೆದಂತೆ ಮಲ್ಲಿಗೆಯ ಮೇಲಿನ ಪ್ರೀತಿಯು ಬೆಳೆಯಿತು 
 ನಮ್ಮ ಮನೆಯಲ್ಲಿರು ದೇವರ ಕೋಣೆಯ ಚಿತ್ರಪಟದ ಮೇಲೆ 
 ಅಂಬಾರಿಯ ಚಾಮುಂಡೇಶ್ವರಿಯ ಮೂರ್ತಿಯ ಮೇಲೆ
 ಕಂಗೊಳಿಸುವ ಈ ಸರಳ ಸೂಕ್ಷ್ಮ ಹೂ ಮುತ್ತು 
 ಸಾಮಾನ್ಯ ದಿನವನ್ನು ವಿಶೇಷ ಮಾಡಿತ್ತು  
 ದೇಶ ಬಿಟ್ಟು ವಿದೇಶದ ನೆಲದಲ್ಲಿ 
 ತಂದೆ ತಾಯಿಯನ್ನು ಹಂಬಲಿಸುವಂತೆ 
 ಈ ಮುಗ್ಧ ಸುಗಂಧಿತ ಸುಂದರ ಹೂವನ್ನು 
 ಸದಾ ಹಂಬಲಿಸುತ್ತಾ ಈ ಭೂಮಿಯಲ್ಲಿ 
 ಈ ಹೂವನ್ನು ಬೆಳೆಸಲು ಸತತ ಪ್ರಯತ್ನದಲ್ಲಿ 
 ಕನ್ನಡ ನಾಡಿನಲ್ಲಿ ಎಲ್ಲರಿಗೆ ಸರಳವಾಗಿ ಸಿಗುವ ಸ್ವತ್ತು  
 ಆದರೆ ಇಲ್ಲಿ ಬೇಕೆಂದರೂ ಸಿಗದ ವಸ್ತು

***************************************************** 
ರಾಜ್ಯೋತ್ಸವ: ಸ್ವಗತ, ಹಾರೈಕೆ - ರಾಮಶರಣ ಲಕ್ಷ್ಮೀನಾರಾಯಣ
  
 ಉದಯವಾಯಿತು ಅಂದು ಚೆಲುವ ಕನ್ನಡ ನಾಡು
 ಕುಟ್ಟಿ ಮಾಡಿದೆವಿಂದು ಗುಡ್ಡ ಬೆಟ್ಟಗಳ ತೌಡು
 ದುರಾಸೆಗೆ ಬರಿದಾಯ್ತು ಜೀವ ಪೊರೆದಿಹ ಕಾಡು
 ಪ್ರವಾಹ ಭೂಕುಸಿತದಲಿ ಬಿಕ್ಕಿದೆ ಕಣ್ಣೀರ ಹಾಡು
  
 ಬಡಿದೆಬ್ಬಿಸಲು ಬಾರಿಸಿದರು ಕನ್ನಡದ ಡಿಂಡಿಮ
 ಒಂದಿಷ್ಟೂ ಇಲ್ಲ ತಾಳಕ್ಕೆ ಕುಣಿವ ಆ ಸಂಭ್ರಮ
 ಪರಭಾಷೆ  ಪರದೇಶಗಳೆಂಬ ಮೋಹದ ಮೋಡಿ
 ಹಳೆಭಾಷೆ ಸಂಸ್ಕೃತಿಯ ಅವನತಿಗೆ ಇದು ಹಾದಿ
  
 ಕವಿ ಕಂಡ ಸರ್ವರಿಗೂ ಶಾಂತಿಯ ತೋಟ
 ಆಗಬೇಕೆ ಬರಿ ಪುಸ್ತಕದ ಒಳಗಿನ ಪಾಠ?
 ಜಾತಿ, ಮತ, ಪಂಥದಲಿ ಚಿಂದಿ ಜರತಾರಿ
 ಚರ್ಚೆಗೆಲ್ಲಿದೆ ಹಾದಿ ಕಂಠಶೋಷಣೆ ಹೆದ್ದಾರಿ
  
 ಬನ್ನಿ ಬೆಳೆಸುತಲಿರುವ ಪರಿಸರದ ಹೆಮ್ಮುಡಿ
 ಜಲ, ಜೀವ, ತರು, ಲತೆ, ಭವಿತವ್ಯಕೆ ಕುಡಿ.
 ಬನ್ನಿ ಹಚ್ಚುತಲಿರುವ ಭಾಷೆ, ಸಂಸ್ಕೃತಿಯ ಕಿಡಿ
 ಮೂಡಿಸಲು ಹೊಸ ಜೀವಗಳಲೆಮ್ಮ ನಲು ನುಡಿ
  
 ಬನ್ನಿ ಕಟ್ಟೋಣ ಶಾಂತಿ- ಸಮನ್ವಯಗಳ ಗುಡಿ
 ಅದುವೆ ಕನ್ನಡನಾಡು ಆದರ್ಶದ ಕೈಪಿಡಿ 

****************************************************

 ಹೊನ್ನುಡಿ  - ಸವಿತ ಸುರೇಶ್  
  
 ಪ್ರಜ್ವಲಿಸಲಿ  ಎಲ್ಲೆಲ್ಲೂ  ಕನ್ನಡದ  ಪ್ರಜ್ಯೋತಿ
 ತಾಯೊಲ್ಮೆಯ ಸಿರಿಸೊಡರಿಗೆ  ಅಭಿಮಾನವೇ  ಪ್ರಗತಿ
  
 ಕನ್ನಡ  ನುಡಿಗೆ ಶಕ್ತಿ ನೀಡಲಿ ನಿಷ್ಠೆತೈಲ ಭತ್ತದಂತೆ
 ಝಗಝಗನೇ ಉರಿಯುತಿರಲಿ ಛಲದ ಬತ್ತಿ ಆರದಂತೆ
  
 ಮಿಡಿಯುತಿರಲಿ  ಕನ್ನಡಕ್ಕೆ ಕನ್ನಡಿಗರ ಹೃದಯ 
 ಕನ್ನಡ ನೆಲದಿ ಕನ್ನಡವೇ ಸದಾ ಅಗ್ರಮಾನ್ಯ
  
 ಕನ್ನಡಾಂಬೆಯ ಪಾದಕೆ ಹೊನ್ನುಡಿಯಾರ್ಚನೆ
 ನಿರಂತರ ಕನ್ನಡಿಸಲಿ ಕನ್ನಡ ನಿತ್ಯಾರಾಧನೆ
  
***************************************************

ಅಲ್ಲಿಯೂ ಸಲ್ಲುವುದು! – ಶ್ರೀವತ್ಸ ದೇಸಾಯಿ

ಕನ್ನಡ ಪ್ರೆಸ್ ನ ಶ್ರೀವತ್ಸ ನಾಡಿಗ್ ಅವರು ಯು ಕೆ ಕನ್ನಡಿಗರಿಗೆ ರಾಜ್ಯೋತ್ಸವಕ್ಕಾಗಿ ಕವನಗಳನ್ನು ಆಹ್ವಾನಿಸಿದಾಗ ಬಂದ ಯೋಚನೆಗಳಿವು. ಅನಿವಾಸಿಯಾಗಿ ಇಂಗ್ಲೆಂಡಿನಲ್ಲಿ ಕಳೆದ ಹೆಚ್ಚು ಕಡಿಮೆ ಅರ್ಧ ಶತಮಾನ ಬದುಕಿನ ಸಿಂಹಾವಲೋಕನ ಮಾಡುತ್ತ  ಒಬ್ಬ ಕನ್ನಡಿಗನಾಗಿ ನನ್ನ ಅಸ್ಮಿತೆ ಮತ್ತು ಅಸ್ತಿತ್ವದ ಬಗ್ಗೆ (identity) ಯೋಚಿಸುತ್ತ ಬರೆದ ಸಾಲುಗಳಿವು. ಹುಟ್ಟಿದಾಗಿನಿಂದ ಬದುಕಿರುವ ತನಕ ಕನ್ನಡ ಕೈಹಿಡಿದಂತೆ ನಂತರವೂ ಕೈಬಿಡಲಾರದೆಂಬ ಆಶಯ, ಹಂಬಲ! ಇಲ್ಲಿ ಸಲ್ಲಿದ ಭಾಷೆ ಅಲ್ಲಿಯೂ ಸಲ್ಲುವುದೇ? – ಶ್ರೀ ದೇ. (ಕವಿತೆಯನ್ನು ಓದಿ, ಪರಿಷ್ಕರಿಸಿದ ಕೇಶವ ಕುಲ್ಕರ್ಣಿಯವರಿಗೆ ವಂದನೆಗಳನ್ನು ಅರ್ಪಿಸುತ್ತ…)

 ಅಲ್ಲಿಯೂ ಸಲ್ಲುವುದು! 
  
 ನಾನು ಅನಿವಾಸಿಯಾದರೇನು
 ನನ್ನ ಉಸಿರು ಕನ್ನಡ ಎಂಬ ಮಾತು ಹುಸಿಯೇ?
 ಮೊಲೆಹಾಲಿನೊಡನೆ ಕುಡಿದದ್ದು ಕನ್ನಡ
 ನನ್ನೆದೆಯ ಮಿಡಿತವೂ ನನ್ನ ನಾಡಿಯ ತುಡಿತವೂ
 ಕನ್ನಡ ಕನ್ನಡ ಎಂಬ ಅನುಭವ ಸುಳ್ಳೇ?
 
 ಇಲ್ಲಿ ಲೇಕ್ ಡಿಸ್ಟ್ರಿಕ್ಟ್ ನ ವಿಂಡಮಿಯರಿನ ಕೆರೆಯ ಸುಳಿಗಾಳಿಯಲ್ಲಿ
 ನನ್ನ ಕಿವಿಯಲ್ಲಿ ಅದೇ ಗುಂಜನ 
 ಯಾರೋ ಕರೆದಂತೆ, `ಬಾರೋ ಸಾಧನಕೇರಿಗೆ!`
 ಪೀಕ್ ಡಿಸ್ಟ್ರಿಕ್ಕಿನ ಗುಡ್ಡ ಕಣಿವೆಗಳಲ್ಲಿ ಕೇಳುತಿದೆ
 ಅತ್ತಿಕೊಳ್ಳದ ಶಾಲ್ಮಲೆಯ ಮಂಜುಳ ಜುಳು ಜುಳು ನಗೆ!
 
 ಯಾರ್ಕ್ ಶೈರಿನ ಅತಿವೃಷ್ಟಿಯ ಮಹಾಪೂರ
 ಕೊಂಡೊಯ್ತು ನಾ ಹುಟ್ಟಿದ ಮನೆಯ ಸಪ್ತಾಪುರಕ್ಕೆ
 ನಮ್ಮ ಮನೆಯ ಜಾಗದಲ್ಲಿರುವುದೀಗ ಡೂಪ್ಲೆಕ್ಸ್ ಕಾಂಪ್ಲೆಕ್ಸುಗಳು
 ಹೊಸ ಮಾಲಕರು ಕರೆದು ತೋರಿಸಿದರು ಡೌಲಾಗಿ
 ತಮ್ಮ “ಪೋಶ್” ಮಾರ್ಬಲ್ ಸ್ಟಡಿಯನ್ನು
 ನನಗೆ ಕಂಡುದು ನಾ ಹುಟ್ಟಿದ ಬಾಣಂತಿ ಖೋಲಿ
 ಅವ್ವನ ತೊಡೆಯಮೇಲೆ ಪವಡಿಸಿದ ನವಜಾತ ಶಿಶು – ನಾನು!
 
 ಲಗ್ನವಾದೊಡನೆ ಈ ಚಳಿನಾಡಿಗೆ ವಲಸೆ ಬಂದಾಗ
 ಬೆಚ್ಚಗಿರಲು ನಾ ಹೊದ್ದುಕೊಂಡು ಬಂದುದು ಮಾತೃಭಾಷೆ ಮಾತ್ರ
 ಅದನ್ನು ಕಳೆದರೆ ನಾನು ನಗ್ನ!
 ಈಗ ವಯಸ್ಸಾಗುತ್ತಿದೆ--
 'ಬಾಹತ್ತರ` ದಾಟಿದ ಮೇಲೆ ಸ್ವರ್ಗ ಹತ್ತಿರವಲ್ಲವೆ?
 ’ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ’
 ಅದಕ್ಕೆ ಇನ್ನೊಂದು ಪದ ಜೋಡಿಸುವೆ `ಮಾತೃಭಾಷಾ ಚ`!
 ಸತ್ತ ಮೇಲೆ ಸ್ವರ್ಗವೋ ನರಕವೋ
 ಅಲ್ಲಿಯ ಭಾಷೆ ಕನ್ನಡವಾದರೆ ಸಾಕು
 ಭಾಷೆ ಕನ್ನಡವಾದರೆ ನರಕವೂ ಸ್ವರ್ಗ! 

************************************************

ಬಾಲ್ಯದ ನೆನಪುಗಳು – ‘ಬಾಲ್ಯದ ಬೆಳದಿಂಗಳು’ ರಾಧಿಕಾ ಜೋಶಿ ಹಾಗೂ ‘ನನ್ನ ಬಾಲ್ಯದ ಕಥೆಗಾರರು’ ಲಕ್ಷ್ಮೀನಾರಾಯಣ ಗುಡೂರ

ಪ್ರಿಯರೇ, ಚಿಕ್ಕಂದಿನ ದಿನಗಳಲ್ಲಿ ಕಟ್ಟಿಕೊಂಡ ಅನುಭವಗಳ ಬುತ್ತಿ ಕರಗದಂಥದ್ದು. ಅದು ಸಿಹಿ, ಕಹಿ, ಹುಳಿ, ಉಪ್ಪು, ಖಾರ ಎಂಥದ್ದೇ ಇರಲಿ, ಅದರ ರುಚಿ ಬಾಯಲ್ಲಿ ಕೊನೆಯವರೆಗೂ ಉಳಿಯುವುದು ಖಂಡಿತ. ನೀವು ಕೇಳಿರಬಹುದು ಈ ಗಝಲ್, ಜಗಜಿತ ಸಿಂಗ್ ಹಾಡಿರೋದು, “ಯಹ್ ದೌಲತ್ ಭೀ ಲೇಲೋ, ಯಹ್ ಶೋಹೊರತ್ ಭೀ ಲೇಲೋ, ಮಗರ್ ಮುಝ ಕೋ ಲೌಟಾದೋ ಬಚಪನ ಕಾ ಸಾವನ್; ವೋ ಕಾಗಜ ಕಿ ಕಷ್ತಿ ವೋ ಬಾರಿಶ್ ಕಾ ಪಾನಿ” .. ಆ ರೀತಿ ಎಷ್ಟು ಬೇಡಿಕೊಂಡರೂ ಬಾಲ್ಯ ತಿರುಗಿ ಬಾರದೆನ್ನುವುದೇನೋ ನಿಜ. ಆದರೆ, ಆ ನೆನಪುಗಳನ್ನ ಮತ್ತೆ ಮನಸ್ಸಿನ ಅಟ್ಟದಿಂದ ಕೆಳಗಿಳಿಸಿ, ಧೂಳು ಝಾಡಿಸಿ ಒಂದೊಂದಾಗಿ ತೆಗೆದು, ನೋಡಿ ನಕ್ಕು, ನಗುತ್ತಾ ತೆಗೆದಿಟ್ಟದ್ದನ್ನ ಜೊತೆಯವರೊಂದಿಗೆ ಹಂಚಿಕೊಂಡು ಮೆಲುಕು ಹಾಕುವುದಿದೆಯಲ್ಲ, ಅದು ಮಜಾ! ಈ ವಿಚಾರ ಮಾಡಿಯೇ ನನ್ನ ಮುಂಚಿನ ಸಂಪಾದಕಿ ಶ್ರೀಮತಿ ದಾಕ್ಷಾಯಣಿ ಗೌಡ ಅವರು ಹಾಕಿಟ್ಟ ಪಾಯದ ಮೇಲೆ ಕಟ್ಟಿದ ಮೊದಲ ಎರಡು ಲೇಖನಗಳು – ರಾಧಿಕಾ ಜೋಶಿಯವರು ನೋಡಿದ “ಬಾಲ್ಯದ ಬೆಳದಿಂಗಳು” ಮತ್ತು ನಾನು (ಲನಾ ಗುಡೂರ) ಕೇಳಿದ “ನನ್ನ ಬಾಲ್ಯದ ಕಥೆಗಾರರು”. ಎಂದಿನಂತೆ ಓದಿ, ನಿಮ್ಮ ಅಭಿಪ್ರಾಯ ತಿಳಿಸಿ; ನಿಮ್ಮ ಬುತ್ತಿಯಲ್ಲೇನಾದರೂ ಹಂಚಿಕೊಳ್ಳುವಂಥದು ಇದ್ದರೆ, e-ಪೇಪರೆತ್ತಿಕೊಂಡು ಪೊಟ್ಟಣ ಕಟ್ಟಿ ಹಂಚಿ ಮತ್ತೆ! – ಎಲ್ಲೆನ್ ಗುಡೂರ (ಸಂ.)

ಬಾಲ್ಯದ ಬೆಳದಿಂಗಳು – ರಾಧಿಕಾ ಜೋಶಿ

ಚಿತ್ರ ಕೃಪೆ: ಗೂಗಲ್

ಬಾಲ್ಯದ ಬಗ್ಗೆ ನೆನಪುಗಳು ನನ್ನ ಜೀವನದ ಉತ್ತಮವಾದ ಹಾಗು ಈಗಿನ ಜೀವನ ಶೈಲಿಯನ್ನು ರೂಪಿಸುವಲ್ಲಿ ಮಹತ್ತಾದ ಪಾತ್ರ ವಹಿಸಿವೆ. ಎಲ್ಲರಂತೆ ನನ್ನ ಬಾಲ್ಯವೂ ಹಿತಕರವಾಗಿ ಹಾಗು ಆರೋಗ್ಯಕರವಾಗಿ ಇತ್ತು. ಟಿವಿ, ಮೊಬೈಲ್ ಫೋನ್, ಕಂಪ್ಯೂಟ ಇಲ್ಲದ ಜಗತ್ತು ನಮ್ಮ ಮಕ್ಕಳ ಬಾಲ್ಯದ ಜೀವನಕ್ಕಿಂತ ಉತ್ತಮವೆಂದು ದಿನನಿತ್ಯ ಅನಿಸುತ್ತದೆ. ಆದರೆ ಕೆಲವೊಂದು ವಿಷಯಗಳು ಪೀಳಿಗೆಯಿಂದ ಪೀಳಿಗೆಗೆ ಬದಲಾಗುವಂತೆ, ಬದಲಾವಣೆ ನಮ್ಮಲ್ಲಿ ಉತ್ತಮ ವ್ಯಕ್ತಿತ್ವ ಮೂಡಿಸುವಲ್ಲಿ ಸಹಾಯ ಮಾಡುತ್ತದೆ.

ಹುಟ್ಟಿದ್ದು ಹುಬ್ಬಳ್ಳಿಯಲ್ಲಾದರೂ, ನನ್ನ ಸಂಪೂರ್ಣ ಬಾಲ್ಯ ಹಾಗು ವಿದ್ಯಾಭ್ಯಾಸ ಎಲ್ಲವು ವೈಭವಯುತ ಮೈಸೂರಿನಲ್ಲಿ. ನನ್ನ ಅದೃಷ್ಟವೋ ಅವಕಾಶವೋ ಗೊತ್ತಿಲ್ಲ, ಮೈಸೂರಿನಂತಹ ಸಾಂಪ್ರದಾಯಿಕ ಹಾಗು ಪ್ರಗತಿಶೀಲ ನಗರಲ್ಲಿ ನನ್ನ ಬೆಳೆವಣಿಗೆಯ ೨೩ ವರ್ಷಗಳು ಇದ್ದದ್ದು ಒಂದು ಅಮೂಲ್ಯವಾದ ಅಂಶ.

ತಂದೆಯದು ಸರ್ಕಾರೀ ನೌಕರಿ. ಮಧ್ಯಮ ವರ್ಗದ ಪರಿವಾರದಲ್ಲಿ ಇದ್ದ ನಮಗೆ ಮೈಸೂರಿನಲ್ಲಿ ನಮ್ಮ ಸಂಬಂಧಿಕರು ಅಂತ ಯಾರೂ ಇರದಿದ್ದ ಕಾರಣ, ನಮ್ಮ ಅಕ್ಕ ಪಕ್ಕದ ಮನೆಯವರು ಮತ್ತು ನಮ್ಮ ತಂದೆ ವರ್ಷಗಳಿಂದ ಸಂಪಾದಿಸಿದ ಸ್ನೇಹಿತರ ಗುಂಪೇ ನಮ್ಮ ನೆಂಟರಿಷ್ಟರು. ಮನೆಯೊಳಗೆ ಉತ್ತರ ಕರ್ನಾಟಕ ಭಾಷೆ ಹಾಗು ಅಡುಗೆ. ಹೊರಗೆ ಕಾಲಿಟ್ಟ ತಕ್ಷಣ ಮೈಸೂರಿನ ಸೊಗಸಾದ ಕನ್ನಡ ಹಾಗೂ ಅಕ್ಕ-ಪಕ್ಕದ ಮನೆಯವರ ರುಚಿಯಾದ ಬಿಟ್ಟಿ ಕವಳದ (ನನ್ನ ತಾಯಿ ನನ್ನ ಆಡಿಕೊಳ್ಳತಾಯಿದ್ರು ‘ನೀನು ಹೊರಗೆ ಆಟಕ್ಕೆ ಹೋದರೆ ಯಾರದಾದರೂ ಮನೇಲಿ ಊಟ ಮಾಡತಿದ್ದೆ’) ಆನಂದ.

ನಮಗೆ ಬೇಸಿಗೆಯ ರಜೆಯಲ್ಲಿ ಅಜ್ಜಿ ಮನೆಯಾದ ಹುಬ್ಬಳ್ಳಿ, ಮೌಶಿಯಂದಿರ ಊರಾದ ಶಿಗ್ಗಾವಿ, ಗದುಗ, ಧಾರ್ವಾಡ ಹೀಗೆ ಹಲವು ಊರುಗಳ ಪರ್ಯಟನೆ ಆಗುತಿತ್ತು. ನಮ್ಮ ಸೋದರಸಂಬಂಧಿ ಅಕ್ಕ ಅಣ್ಣರೊಂದಿಗೆ ಒಂದು ತಿಂಗಳು ಹೇಗೆ ಕಳೆಯುತಿದ್ವಿ ಗೊತ್ತೇ ಆಗುತ್ತಿರಲಿಲ್ಲ.

ನಾನು ಈ ಕೆಳಗೆ ಬರೆಯುವ ವಿಷಯ ಕೇವಲ ನನ್ನ ಸುತ್ತಮುತ್ತಲಿನ ಸಹೋದರ ಸಂಬಂದಿಯಲ್ಲಿ ಹಾಗು ಅವರ ಗೆಳೆಯೆರ ಗುಂಪಿನಲ್ಲಿ ಕಂಡಂತಹ ವಿಷಯ. ತಮ್ಮದೇ ಮಾರ್ಗ ಸೃಷ್ಟಿಸಿಕೊಂಡು, ಶ್ರಮಪಟ್ಟ ತಂದೆ ತಾಯಿ ವಿರುದ್ಧ ಹೋಗಿ ಭವಿಷ್ಯ ರೂಪಿಸಿಕೊಂಡ ಜನರೂ ಇದ್ದಾರೆ (ಅದು ನನಗೆ ದೊಡ್ಡವಳಾದ ಮೇಲೆ ತಿಳಿಯಿತು). ಹೀಗಾಗಿ ದಯವಿಟ್ಟು ಇದನ್ನು ಬೇರೆ ಯಾವ ಅರ್ಥದಲ್ಲಿ ತಿಳಿಯದಿರಿ.

ಮೈಸೂರಿನಲ್ಲಿ ನಾವು ವಿದ್ಯಾಭ್ಯಾಸ ಹಾಗು ಸಂಗೀತ – ನೃತ್ಯದ ಮೇಲೆ ಹೆಚ್ಚು ಗಮನ ಕೊಟ್ರೆ, ಹುಬ್ಬಳ್ಳಿ, ಬಾಗಲಕೋಟೆ ಅಂತಹ ಊರುಗಳಲ್ಲಿ ಶಾಲಾ ಮಟ್ಟದ ಕ್ರೀಡೆಗಳಲ್ಲಿ ಹೆಚ್ಚಿನ ಆಸಕ್ತಿ. ಆಗಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಪೂರ್ಣಗೊಳಿಸುವ ಶಿಕ್ಷಣ ಮನೆಯಲ್ಲಿ ಕೊಟ್ಟರೂ ಅದನ್ನು ವೃತ್ತಿ ರೂಪಕ್ಕೆ ಪರಿವರ್ತಿಸುವ ಅವಕಾಶ ಕಡಿಮೆ. ವೈದ್ಯಕೀಯ ವೃತ್ತಿಯ ಹೊರತಾಗಿ, ನಾವು ನೋಡಿದ ನಮ್ಮ ಸಂಬಂಧಿಕರಲ್ಲಿ ಹೆಚ್ಚಾಗಿ ಎಲ್ಲಾ ಹೆಣ್ಣು ಮಕ್ಕಳಲ್ಲಿ ವೃತ್ತಿಪರ ಮಹತ್ವಾಕಾಂಕ್ಷೆ ಕಂಡದ್ದು ಕಡಿಮೆ. ಕೆಲವರಿಗೆ ಸಂಗೀತದಲ್ಲಿ ಆಸಕ್ತಿ, ಮತ್ತೊಬ್ಬರಿಗೆ ಕ್ರೀಡೆಯನ್ನು ವೃತ್ತಿಯನ್ನಾಗಿಸಬೇಕೆಂಬ ಆಸೆ ಆದರೆ, ನಮ್ಮ ಜಾತಿ ಅಡ್ಡವಾಯಿತೋ ಅಥವಾ ಸಂಪ್ರದಾಯವೋ ಗೊತ್ತಿಲ್ಲ! ಮೈಸೂರಿನಲ್ಲಿ  (ಬೆಂಗಳೂರು) ಬೆಳೆದ ಮಕ್ಕಳಲ್ಲಿ ಛಾತಿ, ಅದನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ಹೆಚ್ಚು ಕಂಡುಬಂದಿತು.

ನಮ್ಮ ಬ್ರಾಹ್ಮಣ ಜಾತಿಯಲ್ಲಿ ಹೆಣ್ಣು ಮಕ್ಕಳಿಗೆ ಎಷ್ಟೆಲ್ಲಾ ವಿದ್ಯಾಭ್ಯಾಸ ಕೊಟ್ಟು, ಎಲ್ಲಾ ಸಂಸ್ಕಾರವನ್ನು ಕೊಡುವಾಗ ಒಳ್ಳೆಯ ಗೃಹಿಣಿ ಆಗಬೇಕೆಂಬ ಅಂಶವನ್ನು ಅಧಿಕವಾಗಿ ನಮ್ಮಲ್ಲಿ ಬಿತ್ತುತ್ತಾರೆ. ಪ್ರತಿಭೆ ಹಾಗು ಜಾಣ್ಮೆಗೆ ಶಭಾಷಿ ಕೊಟ್ಟರೂ ಅದನ್ನು ಪ್ರೋತ್ಸಾಹಿಸುತ್ತಿರಲಿಲ್ಲ. ಮನೆ ನಡೆಸುವುದು ಸುಲಭವಲ್ಲ. ಒಳ್ಳೆ ಗೃಹಿಣಿಯಾಗಿ, ಒಳ್ಳೆ ತಾಯಿಯಾಗಿ, ಎಲ್ಲವನ್ನು ನಯವಾಗಿ ನಿಭಾಯಿಸುವುದು ಎಲ್ಲಕಿಂತ ಕಷ್ಟದ ಕೆಲಸ. ಆದರೆ ಅವಕಾಶ ಸಿಕ್ಕಾಗ ನಮ್ಮ ಕನಸು ಆಸೆಯನ್ನು ಪೂರ್ಣಗೊಳಿಸುವ ಸಮಯ ಬಂದಾಗ ಹಿಂದೇಟು ಹಾಕುತ್ತೀವಿ.

ನನ್ನ ಅದೃಷ್ಟ ಏನಂದರೆ ನನ್ನ ತಂದೆ ತಾಯಿ ಹುಬ್ಬಳ್ಳಿಯವರಾದರೂ ಇಬ್ಬರು ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಹಾಗು ಮೈಸೂರಿನ ಜೀವನ ಶೈಲಿಯನ್ನು ಮೆಚ್ಚಿ ಅಲ್ಲಿಯೇ ಉಳಿದು ನಮ್ಮ ಮೇಲೆ ತಮ್ಮ ಎಲ್ಲಾ ಗಮನವನ್ನು ಇಟ್ಟು ನಮ್ಮನ್ನು ಕೇವಲ ಪದವೀಧರನ್ನಾಗಿ ಸೀಮಿತ ಮಾಡದೇ ಅದನ್ನು ವೃತ್ತಿಯನ್ನಾಗಿ ಪರಿವರ್ತಿಸಲು ಪ್ರಯತ್ನ ಪಟ್ಟರೂ. ನಮ್ಮಲ್ಲಿನ ಆತ್ಮವಿಶ್ವಾಸ ಕುಗ್ಗದಂತೆ ಉಳಿಯುವ ಸಂಸ್ಕಾರ ಕೊಟ್ಟ ನಮ್ಮ ತಂದೆ-ತಾಯಿಯಂಥವರು ಬಹಳ ವಿರಳ. ಈ ಅದೃಷ್ಟ ನನ್ನ ಸಂಬಂಧಿಕರಲ್ಲಿ ಕಂಡುಬರಲಿಲ್ಲ. ಆದರೆ ಈಗ ಜಗತ್ತು ಬದಲಾಗುತ್ತಿದೆ, ಎಲ್ಲೆಡೆ ಮಕ್ಕಳ ಪ್ರತಿಭೆ ಹಾಗು ಜಾಣ್ಮೆಯನ್ನು ಗುರುತಿಸಿ ಅವರಿಗೆ ಸರಿಯಾದ ಪ್ರೋತ್ಸಾಹ ನೀಡಲಾಗುತ್ತಿದೆ.

ಚಂದ್ರನಂತಿರುವ ಪ್ರತಿಯೊಬ್ಬ ಮಗುವಿನಲ್ಲೂ ಇರುವ ಪ್ರತಿಭೆಯನ್ನು ಕೇವಲ ಇರುಳಿಗೆ ಸೀಮಿತವಾಗಿಸದೇ ಬೆಳದಿಂಗಳಿನ ಕಾಂತಿಯಂತೆ ಎಲ್ಲೆಡೆ ಹರಡಲು ಅವಕಾಶ ಮಾಡಿಕೊಟ್ಟರೆ ಎಷ್ಟು ಸುಂದರ!

– ರಾಧಿಕಾ ಜೋಶಿ

ನನ್ನ ಬಾಲ್ಯದ ಕಥೆಗಾರರು – ಲಕ್ಷ್ಮೀನಾರಾಯಣ ಗುಡೂರ

ಕಥೆ ಕೇಳುವವರಿಗೆ ಎಷ್ಟು ಆಸಕ್ತಿ ಇರಬೇಕೋ, ಹೇಳುವವರಿಗೂ ಅಷ್ಟೇ ಹೇಳುವ ಹುಮ್ಮಸ್ಸು ಇರಬೇಕು. ಇಲ್ಲದಿದ್ದರೆ ಕಥೆಯ ಸ್ವಾರಸ್ಯವೇ ಹಾಳಾಗಿ ಹೋಗಿಬಿಡುತ್ತದೆ, ಕೇಳಿದರೂ ಪ್ರಯೋಜನವಿಲ್ಲ.  ಒಂದು ನುಡಿಗಟ್ಟಿದೆ, ಯಾವಾಗಲೋ ಕೇಳಿದ್ದು ‘there are no boring subjects; there are boring teachers’; ಇದನ್ನು ಕಥೆಗಳಿಗೂ ಅನ್ವಯಿಸಬಹುದು.  ಜನಮೇಜಯನಿಗೆ ಕಥೆ ಹೇಳಿದ ಸೂತ ಪುರಾಣಿಕರಂತಹವರಿದ್ದರೆ, ಕೂತು ಲಕ್ಷ ಶ್ಲೋಕಗಳ ಮಹಾಭಾರತವನ್ನೂ ಕೇಳಬಹುದು.  ಇಲ್ಲದಿದ್ದರೆ, ಐದು ನಿಮಿಷಕ್ಕೆ ಮುಖ ಮುಚ್ಚಿಯೋ, ಆ ಕಡೆ ನೋಡಿಯೋ ಆಕಳಿಸುವ ಪರಿಸ್ಥಿತಿ ಬರುತ್ತದೆ, ಅಷ್ಟೇ!

ಕಥೆ ಹೇಳುವುದು ನನಗೆ ಮುಂಚಿನಿಂದಲೂ ಇಷ್ಟವಾದದ್ದು.  ಶಾಲೆಯಲ್ಲಿದ್ದಾಗ ನನ್ನ ಸಹಪಾಠಿಗಳಿಗೆ ನನ್ನ ಕಥೆ ಹೇಳುವ ರೀತಿ ಸಾಕಷ್ಟು ಇಷ್ಟವಿದ್ದು, ಯಾವುದಾದರೂ ಪಿರಿಯಡ್ ಖಾಲಿ ಇದ್ದರಾಯಿತು, ಅದು ನನ್ನ ಕಥೆಯ ಕ್ಲಾಸ್ ಆಗಿಬಿಡುತ್ತಿತ್ತು.  ಈಗಲೂ ಮನೆಯಲ್ಲಿ ಮಕ್ಕಳಿಗೆ ಕಥೆ ಹೇಳುವುದು ನನ್ನ ಕೆಲಸವೇ.

ಈ ನನ್ನ ಕಥೆ ಹೇಳುವ ಹುಚ್ಚಿಗೆ ಕಾರಣಕರ್ತರು ಕೆಲವರಿದ್ದಾರೆ.  ಅವರನ್ನು ನೆನೆಯುವುದೇ ಈ ಬರಹದ ಉದ್ದೇಶ.  ಕಥೆ ಹೇಳಲು ಒಂಚೂರೂ ಬಾರದವರು ಮಾಡಿದ ಕಥೆಗಳ ಕೊಲೆಯನ್ನೂ ಸಂಕಟಪಟ್ಟು ಸಹಿಸಿದ್ದೇನೆ, ಆದರೆ ಆ ಮಹಾನುಭಾವರನ್ನ ಅಲ್ಲ ನಾನಿಲ್ಲಿ ನೆನೆಯುತ್ತಿರುವುದು.    

ನನಗೆ ನೆನಪಿರುವ ಮೊದಲ ಕಥೆಗಾರ ನನ್ನ ಬಾಲ್ಯದ ಗೆಳೆಯ ಗುಂಡಪ್ಪ, ಈಗ ಎಲ್ಲಿದ್ದಾನೋ ಗೊತ್ತಿಲ್ಲ.  ಒಂದು ಹತ್ತು ನಿಮಿಷ ಖಾಲಿ ಕೂತರೆ ಸಾಕು, ಗುಂಡಪ್ಪನ ಕಥಾಲಹರಿ ಹರಿಯಲು ಶುರು.  ಒಮ್ಮೆ ಶುರುವಾಯಿತೆಂದರೆ ನಿಲ್ಲಿಸುವುದು ಕಷ್ಟ, ವಾಶರ ಕೆಟ್ಟು ಹೋದ ನಲ್ಲಿಯಂತೆ.  ಅವನ ಕಥೆಗಳೋ, ಸುಳ್ಳು-ಬಳ್ಳು ಹೆಣೆದವು – ಆದಿ-ಅಂತ್ಯಗಳಿಲ್ಲದವು!  ಅವನ ಒಂದು ಕಥೆ ವಾರಗಟ್ಟಲೆ ಸಾಗಿದ್ದಲ್ಲದೇ, ಅದರಲ್ಲಿ ಡಾ|| ರಾಜಕುಮಾರ, ವಿಷ್ಣುವರ್ಧನ್ ಇತ್ಯಾದಿ ಕನ್ನಡ ಸಿನಿಮಾದ ದಿಗ್ಗಜರು ಮಾತ್ರವಲ್ಲ, ಅಕ್ಕ-ಪಕ್ಕದ ಓಣಿಯ ಹುಡುಗ-ಹುಡುಗಿಯರೂ, ಶೇಂಗಾ – ಪುಠಾಣಿ ಇತ್ಯಾದಿ ವಿಚಿತ್ರ ನಾಮಧೇಯಗಳುಳ್ಳ ಪಾತ್ರಗಳೂ ಬಂದು ಹೋಗುವಂಥ 12 ತಾಸಿನ ಹಳೆಯ ಕಾಲದ ತಮಿಳು ಸಿನಿಮದಂತಹವು.  ಕೊನೆ ಕೊನೆಗೆ ಯಾರಿಗೆ ಎಲ್ಲಿ ಏನಾಗುತ್ತಿದೆ ಅನ್ನುವದೆಲ್ಲ ಕಲಿತು ಕಲಗಚ್ಚಾಗುವ ಹೊತ್ತಿಗೆ, ಅಮ್ಮನೋ ಅಪ್ಪನೋ ನಮ್ಮ ಹೆಸರು ಹಿಡಿದು ಕೂಗಿ, ಗಜೇಂದ್ರ ಮೋಕ್ಷದ ವಿಷ್ಣುವಿನಂತೆ ಬಂದು ಕಾಪಾಡುತ್ತಿದ್ದರೆನ್ನಿ!

ಅಲ್ಲಿಂದ ಮುಂದಿನವರೆಲ್ಲ, ನನ್ನ ತುಂಬಾ ಇಷ್ಟದ ಕಥೆಗಾರರು. ಕೇಳಿ 40 ವರ್ಷವಾದರೂ, ಹೇಳಿದ ಪಾತ್ರಗಳ, ಸನ್ನಿವೇಶಗಳ ಚಿತ್ರಣ ಇನ್ನೂ ಕಲರ್ ಸಿನಿಮದಂತೆ ನನ್ನ ಕಣ್ಣ ಮುಂದಿದೆ.  ಆಗಾಗ್ಗೆ ನಮ್ಮಲ್ಲಿಗೆ ಬಂದು ಹೋಗುತ್ತಿದ್ದ ನಮ್ಮ ಆಚಾರು ತಾತ (ಅಮ್ಮನ ಅಪ್ಪ) ಅಲ್ಲದೆ, ವರ್ಷಕ್ಕೊಮ್ಮೆ ನಮ್ಮೂರಿಗೆ (ಆಗ ನಮ್ಮಪ್ಪ ಪೋಸ್ಟ್ ಮಾಸ್ಟರ್ ಆಗಿದ್ದ ಊರು, ಗಂಗಾವತಿ) ಪುರಾಣ, ಹರಿಕಥೆ ಹೇಳಲು ಬರುತ್ತಿದ್ದವರು ನನಗೆ ಮಹಾಭಾರತ, ಭಾಗವತ ಇತ್ಯಾದಿ ಕಥೆಗಳ ಪರಿಚಯ ಮಾಡಿಕೊಟ್ಟರು. ನಾವಾಗ ಇದ್ದದ್ದು ರಾಯರ ಮಠದ ಹತ್ತಿರವಾದ್ದರಿಂದ ಈ ರೀತಿಯ ಅವಕಾಶಗಳಿಗೇನೂ ಕೊರತೆಯಿರಲಿಲ್ಲವೆನ್ನಿ.  ಇವರಲ್ಲಿ ಪುರಾಣಿಕರು ಕಡಪ ಕೃಷ್ಟಾಚಾರ್ಯ ಅನ್ನುವವರು ಒಬ್ಬರು.  ಇನ್ನೊಬ್ಬರು ಹರಿಕಥೆ ಹೇಳುತ್ತಿದ್ದ ಶಿವಮೊಗ್ಗ ಶ್ರೀನಿವಾಸ ದಾಸರು ಅನ್ನುವವರು.  ಅವರಿಬ್ಬರ ಕಥೆ (ನನಗೆ ಕಥೆ, ಭಕ್ತರಿಗೆ ಪುರಾಣ / ಹರಿಕಥೆ ಅನ್ನಬಹುದು) ಹೇಳುವ ರೀತಿ, ಪಾತ್ರಗಳನ್ನು ಮತ್ತು ಸನ್ನಿವೇಶಗಳನ್ನು ಬಣ್ಣಿಸುವ ಹಾವ-ಭಾವಗಳು ಇನ್ನೂ ನನ್ನ ಕಣ್ಣಿಗೆ ಕಟ್ಟಿವೆ.  8-10 ವರ್ಷದ ನಾನು ಅವನ್ನು ಕೇಳಲು ಪ್ರತಿದಿನ ಮಠಕ್ಕೋ, ಯಾರದೋ ಮನೆಗೋ ಹೋಗಿ, ಮುಂದಿನ ಸಾಲಲ್ಲೆ ಕುಳಿತು, ಬಿಟ್ಟ ಬಾಯಿ ಬಿಟ್ಟ ಹಾಗೆಯೇ ಗಂಟೆಗಳ ಕಾಲ ಕಥೆ ಕೇಳುತ್ತಿದ್ದುದು ನನಗೆ ನೆನಪಿದೆ.  ಕೇಳುತ್ತಾ ಮೈಮರೆತು ನೇರವಾಗಿ ಕುರುಸಭೆಗೋ, ಕುರುಕ್ಷೇತ್ರಕ್ಕೋ ವೃಂದಾವನಕ್ಕೊ ಸಾಗಿಸಿ, ಅಲ್ಲಿ ನಡೆಯುತ್ತಿದ್ದ ಘಟನೆಗಳನ್ನು ಸೈಡ್ ವಿಂಗಿನಲ್ಲಿ ನಿಂತು ನಾಟಕ ನೋಡಿದಂತೆ ತೋರಿಸಿ ವಾಪಸ್ ಮನೆಗೆ ತಂದು ಬಿಟ್ಟ ಹಾಗೆ ಅನಿಸುತ್ತಿತ್ತು.  ಅವರ ಬಾಯಿಂದ ಕೇಳಿದ ಭೀಮನ ಶಕ್ತಿಯ, ಅರ್ಜುನನ ಬಿಲ್ಲುಗಾರಿಕೆಯ, ದುರ್ಯೋಧನನ ಸ್ವಾಭಿಮಾನದ, ಕೃಷ್ಣನ ಯುಕ್ತಿಯ, ಅಭಿಮನ್ಯುವಿನ ಸಾಹಸದ ಮತ್ತು ಭೀಷ್ಮ-ದ್ರೋಣ-ಕರ್ಣಾದಿಗಳ ಕುರುಕ್ಷೇತ್ರದ ಶೌರ್ಯದ ವರ್ಣನೆ ನನ್ನ ಮೆದುಳಿನ ಮೇಲೆ ಅಚ್ಚು ಒತ್ತಿದಂತಿದೆ. 

ಚಿತ್ರ: ಲಕ್ಷ್ಮೀನಾರಾಯಣ ಗೂಡೂರ್

ಅದಾದ ಮೇಲೆ ನಾನು ನನ್ನ ಅಜ್ಜನ ಮನೆಯಲ್ಲಿದ್ದು ಓದು ಮುಂದುವರಿಸಲು ಕಲಬುರ್ಗಿಗೆ ಬಂದೆ, 7 ನೇ ತರಗತಿಗೆ.  ಬೇಸಿಗೆ ರಜೆ ಬಂತೆಂದರೆ ನಮ್ಮ ಸೋದರತ್ತೆಯ ಮನೆಗೆ ರಾಯಚೂರಿಗೆ ಹೋಗುತ್ತಿದ್ದ 1 ತಿಂಗಳು ನಮಗೆಲ್ಲ ಭಾರಿ ಇಷ್ಟದ ಸಮಯ.  ಇದಕ್ಕೆ ಎರಡು ಕಾರಣಗಳು – ಒಂದು, ವಾರಿಗೆಯ ಹುಡುಗರು ಒಟ್ಟು 9 ಜನ, ದೊಡ್ಡ ಗದ್ದಲ ಹಾಕಿ ಮಜಾ ಮಾಡುವುದು; ಎರಡನೆಯ ಕಾರಣ, ನಮ್ಮ ಸೋದರತ್ತೆಯ ಗಂಡ ಅರವಿಂದ ಮಾಮಾ ಹೇಳುತ್ತಿದ್ದ ಕಥೆಗಳು.  ಅವರ ಮನೆಯಲ್ಲಿ ತರುತ್ತಿದ್ದ ಬುಟ್ಟಿಗಟ್ಟಲೆ ಮಾವಿನಹಣ್ಣುಗಳದ್ದೂ ಸ್ವಲ್ಪ (!) ಪಾತ್ರ ಇತ್ತು ಅನ್ನಬಹುದು.  ಅರವಿಂದ ಮಾಮಾ ನಮಗೆ ಹೇಳುತ್ತಿದ್ದ ಸಿನಿಮಾ ಕಥೆಗಳು, ಇಂಗ್ಲೀಷಿನ ಗಲಿವರನ ಪ್ರವಾಸ ಇತ್ಯಾದಿ ಕಥೆಗಳು, 3-4 ಗಂಟೆಯವು ಒಂದೊಂದೂ. ರಾತ್ರಿ 9 ಕ್ಕೆ ಊಟ ಮುಗಿಸಿ, ಛತ್ತಿನ ಮೇಲೆ ಹಾಸಿಗೆ ಹಾಸಿಕೊಂಡು, ತಣ್ಣನೆ ನೀರಿನ ಹೂಜಿ-ಲೋಟ ಪಕ್ಕದಲ್ಲಿಟ್ಟುಕೊಂಡು, ಬಾಳೆಹಣ್ಣು ಇತ್ಯಾದಿ ಕುರುಕು ತಯಾರಿಟ್ಟುಕೊಂಡು ಕೂತರೆ, ಕಥೆಗೆ ರೆಡಿ ಅಂತರ್ಥ.  ”ಇವತ್ತಿನ ಕಥೆಯ ಹೆಸರು ಪಾತಾಳ ಭೈರವಿ” ಅನ್ನುವ ಥರದ ಘೋಷಣೆಯೊಂದಿಗೆ ಶುರುವಾಗೋದು.  ಎರಡು ಗಂಟೆಗಳ ಮೊದಲ ಭಾಗ ಮುಗಿದೊಡನೆ ಇಂಟರವಲ್ಲು, ದೊಡ್ಡ ಹುಯಿಲೆಬ್ಬಿಸಿ ಎಲ್ಲರೂ  ಮತ್ತೆ ಕೆಳಗೆ ಬಂದು, ಒಂದು ದೊಡ್ಡ ಡಬರಿ ಅವಲಕ್ಕಿ ಕಲಿಸಿಕೊಂಡು, ನಂಚಿಕೊಳ್ಳಲು ಸೌತೆಕಾಯಿ, ಹಸಿಮೆಣಸಿನಕಾಯಿ, ಉಳ್ಳಾಗಡ್ಡಿಗಳೊಂದಿಗೆ ಮತ್ತೆ ಮೇಲೆ ಬಂದು ಕೂತೆವೆಂದರೆ, ಪಾರ್ಟ್ 2 ಶುರು.  ನಾಯಕ ರಾಜಕುಮಾರ (ಎನ್ ಟಿ ಆರ್), ನೇಪಾಳ ಮಾಂತ್ರಿಕನನ್ನು (ಎಸ್ವಿ ರಂಗಾರಾವು) ಸೋಲಿಸಿ, ರಾಜಕುಮಾರಿಯನ್ನು ಕಾಪಾಡುವ ಹೊತ್ತಿಗೆ ನಮ್ಮ ಡಬರಿ ಅವಲಕ್ಕಿ ಇತ್ಯಾದಿಗಳನ್ನು ಧ್ವಂಸ ಮಾಡುವ ಕಾರ್ಯಕ್ರಮವೂ ಮುಗಿದು, ಮಧ್ಯರಾತ್ರಿ ದಾಟಿ 1 ಗಂಟೆ ಆಗಿರುತ್ತಿತ್ತು.  ಅಲ್ಲಿಗೆ ಕಥೆ ಮುಗಿಯಿತು ಅಷ್ಟೇ, ನಮ್ಮ ಮಾತಲ್ಲ!  ಹಾಗೂ ಹೀಗೂ ಪಿಸ-ಪಿಸ ಗುಸು-ಗುಸು ಮಾತು, ನಗುವಿನಲ್ಲಿ ಇನ್ನೊಂದು ಗಂಟೆ ತಳ್ಳಿ, “ಇನ್ನ ಮಲಕೋಳರೊ ಎಲ್ಲ, ಸಾಕದು ನಗೋದು” ಅಂತ ಅಜ್ಜಿಯ ಕಡೆಯಿಂದ ಬೈಸಿಕೊಂಡು ಮಲಗುವಲ್ಲಿಗೆ ನಮ್ಮ ದಿನ ಸಮಾಪ್ತಿ!  ಈ ದಿನಚರಿ ವಾರಕ್ಕೊಂದು 2-3 ದಿನ ಖಂಡಿತ.  ಯಾವುದಾದರೂ ಕಥೆ ಒಂದೇ ದಿನಕ್ಕೆ ಮುಗಿಯದಿದ್ದರೆ, ಮತ್ತೊಂದು ರಾತ್ರಿ ಮುಂದುವರೆಯುತ್ತಿತ್ತು, ಆದರೆ, ನಾವೆಲ್ಲ ಕೇಳಿದ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ಹೇಳಿ ನಮಗೆ ಕಥೆಯ ಪಾತ್ರ-ಸನ್ನಿವೇಶಗಳೆಲ್ಲ ನೆನಪಿವೆಯೆಂದು ಸಾಧಿಸಿ ತೋರಿಸಿದರೆ ಮಾತ್ರ.   ರಾಬರ್ಟ್ ಲೂಯಿ ಸ್ಟೀವನ್ಸನ್ನನ Treasure Island ಮೂರು ಬೇಸಿಗೆಯಾದರೂ ಮುಗಿಯದೇ, ಕಾದು ಕಾದು ಸಾಕಾಗಿ ನಾನೇ ಆ ಪುಸ್ತಕ ಕೊಂಡು ಓದಿ ಮುಗಿಸಿದೆ! 

ಕಥೆ-ಕಾದಂಬರಿಗಳನ್ನು ಸ್ವತಃ ಓದುವ ಮಜಾ ಒಂದು ರೀತಿಯದಾದರೆ, ಒಳ್ಳೆಯ ಕಥೆಗಾರರಿಂದ ಕೇಳುವ ಸ್ವಾರಸ್ಯವೇ ಬೇರೆ.  ಅದೊಂದು ನನ್ನ ಬಾಲ್ಯದ ಮರೆಯದ ಸಿಹಿ ಅಥವಾ ಹುಳಿ-ಉಪ್ಪು-ಖಾರದ ಹದನಾದ ಅನುಭವ.

– ಲಕ್ಷ್ಮೀನಾರಾಯಣ ಗುಡೂರ್, ಪ್ರೆಸ್ಟನ್ (ಲಾಂಕಶೈರ್)