`ಜನಪದ ಜಗುಲಿ` (ಈ-ಜಗುಲಿ ೩) ಕಾರ್ಯಕ್ರಮದ ವರದಿ – ರಮ್ಯ ಭಾದ್ರಿ

ಈ-ಜಗುಲಿಯನ್ನು ತುಂಬಿದ ಜನಪದದ ನಿನಾದ ..  

‘ಸದಾ ಅನಿರೀಕ್ಷಿತಗಳ ನಿರೀಕ್ಷೆಯಲ್ಲಿರುವುದೇ ಪ್ರಬುದ್ಧ ಬದುಕು’ ಎನ್ನುವ ನುಡಿಮುತ್ತಿನಂತೆ ನಮ್ಮೆಲ್ಲರ ಬದುಕಿನಲ್ಲಿ ಬಂದೆರಗಿದ ದೊಡ್ಡ ಅನಿರೀಕ್ಷಿತ ಮಹಾಮಾರಿ ಕರೋನ. ಈ ಕಾಣದ  ಕಂಟಕ ನಮ್ಮ ನಡುವೆಯಿದ್ದರೂ ಅದರೊಂದಿಗೆ ಬದುಕಲು ಕಲಿತಿದ್ದೇವೆ. ಹೊಸ ಸಹಜ (new normal) ಬದುಕಿಗೆ ಹೊಂದಿಕೊಳ್ಳಲು ಸಮಾಜಕ್ಕೂ, ಪರಿಸರಕ್ಕೂ ಸಹಕಾರಿಯಾಗುವಂತಹ, ನಮ್ಮ ಮುಂದಿನ ಬದುಕಿನ ಅವಿಭಾಜ್ಯ ಅಂಗಗಳಾಗಬಹುದಾದ ಅನೇಕ ಬದಲಾವಣೆಗಳನ್ನು ಸಹ ಮಾಡಿಕೊಳ್ಳುತ್ತಾ ಬಂದಿದ್ದೇವೆ. ಈ ಹೊಂದಾಣಿಕೆ ಸಾಧ್ಯವಾಗಲು, ಬೀಗಮುದ್ರೆ ತಂದೊಡ್ಡಿದ ಸವಾಲುಗಳನ್ನು ಎದುರಿಸಲು ಬಹುತೇಕ ಜೊತೆಯಾಗಿದ್ದುದು ಅಂತರ್ಜಾಲ ವೆಂದರೆ ಎಲ್ಲರೂ ಒಪ್ಪುವಂತಹ ಮಾತು. ನಮ್ಮ ‘ಅನಿವಾಸಿ’ ಬಳಗಕ್ಕೂ ಇದರೊಂದಿಗಿನ ನಂಟು ಬಹಳ ದಿನಗಳದ್ದು. ಇತ್ತೀಚಿಗಂತೂ ಬಳಗದವರ ಒಡನಾಟದಿಂದ ಹಿಡಿದು, ಈಗಾಗಲೇ ಯಶಸ್ವಿಯಾಗಿ ನಡೆದ ‘ಥಟ್ ಅಂತ ಹೇಳಿ’, ‘ಈ ಹೊತ್ತಿಗೆ’, ಈ-ಜಗುಲಿ  ಕಾರ್ಯಕ್ರಮಗಳ ಫುಲ್ ಆನ್ ಎಂಟರ್ಟೈನ್ಮೆಂಟು! ಕವಿ ನಿಸಾರರ ಸ್ಮರಣೆಯಿಂದ ಪ್ರಾರಂಭವಾದ ನಮ್ಮ ‘ಈ-ಜಗುಲಿ’ಯ ಪಯಣ,  ಜಯಂತ್ ಕಾಯ್ಕಿಣಿಯವರೊಂದಿಗೆ ಸಂವಾದಿಸುತ್ತಾ ಬೆಳೆಯಿತು ಅನ್ನಬಹುದು. ಇದೀಗ ಈ-ಜಗುಲಿ 3 ರಲ್ಲಿ ಜನಪದ ಸಂಗೀತದ ಸಂಭ್ರಮವಿದ್ದುದರಿಂದ ಜನಪದ ಜಗುಲಿ ಎಂದು ನಾಮಕರಣವಾಯಿತು. 

ಜನಪದ ಜಗುಲಿ / ಈ-ಜಗುಲಿ 3 ಕಾರ್ಯಕ್ರಮದ ಪ್ರಚಾರಪತ್ರ

ಈ ಬಾರಿಯ ಈ-ಜಗುಲಿಗೆ ಹಲವು ವಿಶೇಷತೆಗಳಿವೆ. ಕಳೆದ ಎರಡು ಬಾರಿಯೂ ಅನಿವಾಸಿ ಬಳಗಕ್ಕೆ ಮಾತ್ರ ಸೀಮಿತವಾಗಿದ್ದ ಈ ಕಾರ್ಯಕ್ರಮ, ಈ ಬಾರಿ ”ವಿವಿಡ್ಲಿಪಿ’ಯ ಸತ್ಯಪ್ರಮೋದ್ ಲಕ್ಕುಂಡಿ  ಹಾಗು ’ಹೆಚ್ ಎನ್ ಬಿ ಸಿ’ಯ (HNBC) ಹರೀಶ್ ರಾಮಯ್ಯ ಅವರ ಸಹಕಾರದಿಂದ ಪ್ರಪಂಚದ ಮೂಲೆ ಮೂಲೆಗೂ ನೇರಪ್ರಸಾರದಲ್ಲಿ ತಲುಪುವಂತಾಗಿದ್ದು ವಿಶೇಷ. ಜೊತೆಗೆ ಕಲಾವಿದರು ಹಾಡಿದ ತುಣುಕುಗಳ ಟೀಸರ್ ವೀಡಿಯೊ ತಯಾರಿಸಿ ಎಲ್ಲರಿಗೂ ಕಾರ್ಯಕ್ರಮದ ವಿವರಗಳನ್ನು ತಲುಪುವಂತೆ ಮಾಡಿದ್ದರಿಂದ ಕಾರ್ಯಕ್ರಮಕ್ಕೆ ಉತ್ತಮ ಪ್ರಚಾರ ದೊರೆತದ್ದು; ಪ್ರಮೋದ್ ಹಾಗು ಹರೀಶ್ ಅವರ  ಪ್ರಯತ್ನ ಸಫಲವಾಗಿ ವೀಕ್ಷಕರು ತಮ್ಮ ಮನೆಯ ಜಗುಲಿಯಿಂದ ಜನಪದ ಜಗುಲಿಯನ್ನು ನೋಡುವಂತಾಗಿ ಜನರ ಮೆಚ್ಚುಗೆಯನ್ನು ಪಡೆದದ್ದು ಇನ್ನುಳಿದ ವಿಶೇಷಗಳು. 

ತೆರೆಯ ಹಿಂದೆ 

ಮೊದಲೇ ಹೇಳಿದಂತೆ, ಈ ಕಾರ್ಯಕ್ರಮ ಗೂಗಲ್ ಮಾತೆ, ಫೇಸ್ಬುಕ್ ಅಕ್ಕ, ಯೂ ಟ್ಯೂಬ್ ಅಣ್ಣ, ಜೂಮ್ ರಾಯ, ವಾಟ್ಸ್ ಆಪ್ ದೇವಿ ಇವರೆಲ್ಲರ ಕೃಪಾಕಟಾಕ್ಷದಿಂದ ಈ ಕಾರ್ಯಕ್ರಮ ನಿರ್ವಿಘ್ನವಾಗಿ ನೆರವೇರಿತು ಎಂದರೆ ತಪ್ಪಾಗಲಾರದು! ಈ-ಜಗುಲಿ 1 ಹಾಗು 2 ರ ನಂತರ 3ನೇಯದು ಸಂಗೀತಮಯವಾಗಿದ್ದರೆ ಚಂದ ಎನ್ನುವುದು ‘ಅನಿವಾಸಿ’ಯ ಸದಸ್ಯರ ಒಮ್ಮತದ ಅಭಿಪ್ರಾಯವಾಗಿತ್ತು. ಸಂಗೀತ ಎಂದ ತಕ್ಷಣ ಎಲ್ಲರಿಗೂ ಥಟ್ಟನೆ ಹೊಳೆದ ಹೆಸರು ಅಮಿತಾ ರವಿಕಿರಣ್. ಅಮಿತಾ ತಮ್ಮ ಸುಮಧುರ ಕಂಠ, ಭಾವ ತುಂಬಿ ಹಾಡುವ ಪರಿ, ಸಂಯೋಜನೆ, ಸಾಹಿತ್ಯ, ಕವನಗಳು, ಲೇಖನಗಳು, ಫೋಟೋಗ್ರಫಿ, ಅಡುಗೆಯ ವೈಖರಿ ಹೀಗೆ ಇನ್ನು ಹಲವಾರು ಪ್ರತಿಭೆಗಳ ಮೂಲಕ ಬಳಗದವರಿಗೆ ಅಚ್ಚುಮೆಚ್ಚು . ಹೆಸರು ಸೂಚಿಸಿದೊಡನೆ ಸಂತೋಷದಿಂದ ಒಪ್ಪಿ ಜವಾಬ್ದಾರಿಯನ್ನು ಹೊತ್ತು ಈ ಬಾರಿಯ ಜಗುಲಿಯನ್ನು ಜನಪದಮಯವನ್ನಾಗಿ ಮಾಡಿದರೆ ಹೇಗೆ ಎಂಬ ಹಂಬಲವನ್ನು ವ್ಯಕ್ತಪಡಿಸಿದರು. ಎಲ್ಲರೂ ಜನಪದಕ್ಕೆ ಸೈ ಎಂದ ಕೂಡಲೇ ವಾಟ್ಸ್ ಆಪ್ ದೇವಿಯ ದೆಸೆಯಿಂದ ಗುಂಪುಗಳನ್ನು ಮಾಡಿದ್ದಾಯಿತು. ’ಅನಿವಾಸಿ ಬಳಗ’ದ ದಿಗ್ಗಜರ (ಶ್ರೀವತ್ಸ ದೇಸಾಯಿ , ಕೇಶವ ಕುಲಕರ್ಣಿ, ರಾಂಶರಣ್, ಮುರಳಿ ಹತ್ವಾರ್) ಮಾರ್ಗದರ್ಶನದಲ್ಲಿ ಎಲ್ಲ ಅಭಿಪ್ರಾಯಗಳನ್ನು ಗ್ರಹಿಸಿ ಅಮಿತಾರವರು ಕಾರ್ಯಕ್ರಮದ ರೂಪು-ರೇಷೆಗಳನ್ನು ತಯಾರಿಸಿಯೇಬಿಟ್ಟರು. ಜನಪದ ಜಗುಲಿ ಅಮಿತಾರ ಕನಸಿನ ಕೂಸು – ಅವರೇ ಹೇಳಿದ ಹಾಗೆ ಇದು ಅವರ ಕನಸುಗಳನ್ನು ಆಳಿದ ಕಾರ್ಯಕ್ರಮ. ಅವರ ಕ್ರಿಯಾಶೀಲತೆ, ತನ್ಮಯತೆ, ಪರಿಶ್ರಮ ಮತ್ತು ಇದಕ್ಕೆಲ್ಲ ಅವರಿಗೆ ಜೊತೆಯಾದ ಗೌರಿ ಪ್ರಸನ್ನ ಅವರ ನೆರವು ಜಗುಲಿಯ ಯಶಸ್ಸಿನ ಗುಟ್ಟು ಎಂದರೆ ಅತಿಶಯೋಕ್ತಿಯಲ್ಲ.  ಇದೆಲ್ಲದರ ಹಿಂದೆ ಕಾಲ ಕಾಲಕ್ಕೆ  ಸಲಹೆ-ಸೂಚನೆಗಳನ್ನು ನೀಡುತ್ತಾ ಬೆನ್ನೆಲುಬಾಗಿ ನಿಂತವರು ನಮ್ಮ ದೇಸಾಯಿಯವರು. ಅವರ ಬಗ್ಗೆ ಎಷ್ಟು ಹೇಳಿದರು ಕಮ್ಮಿಯೇ; ಒಟ್ಟಿನಲ್ಲಿ ಅವರ ಎರಡು ಕೈಗಳು ನಮ್ಮ ಮೇಲೆ ಇದ್ದುದರಿಂದ ಈ-ಜಗುಲಿ 3 ಸುಸೂತ್ರವಾಗಿ ನೆರವೇರಿತು ಅನ್ನೋದಂತೂ ಸತ್ಯ. 

ತೆರೆಯ ಮೇಲೆ 

ಜನಪದ ಜಗುಲಿಯ ಮುಖ್ಯ ಉದ್ದೇಶ ಜನಪದ ಗೀತೆಗಳ ಮೂಲಕ ಜೀವನಚಕ್ರದ ದರ್ಶನ. ಕರ್ನಾಟಕದ ನಾಲ್ಕು ದಿಕ್ಕುಗಳಿಂದ ಆಯ್ದು ತಂದ ಪ್ರೀತಿ, ಪ್ರೇಮ, ಮದುವೆ, ಬಸಿರು, ಬಾಣಂತನ, ಜೋಗುಳದ ಹಾಡುಗಳ ಔತಣ ಬಡಿಸಿ, ನಮ್ಮ ಊರು ಕೇರಿಯ ಅಜ್ಜಿ-ಅಜ್ಜಂದಿರು ಹಾಡುತಿದ್ದ ಹಾಡುಗಳನ್ನು ನೆನಪಿಸುವ ಪ್ರಯತ್ನವಾಗಿತ್ತು .  ಈ  ಪ್ರಯತ್ನವು ಸಾರ್ಥಕವಾಯಿತು ಎನ್ನುವುದಕ್ಕೆ ಕಾಮೆಂಟುಗಳ ಮೂಲಕ ಹರಿದು ಬಂದ ವೀಕ್ಷಕರ ಪ್ರಶಂಸೆ, ಪ್ರೋತ್ಸಾಹವೇ ಸಾಕ್ಷಿ . ಅಮಿತಾ ಹಾಗು ಗೌರಿಯವರ ಸೊಗಸಾದ ನಿರೂಪಣೆ ನೋಡುಗರ ಕುತೂಹಲವನ್ನು ಹೆಚ್ಚಿಸಿತು. ಇಬ್ಬರೂ ಒಂದಿಷ್ಟೂ ಸಮಯವನ್ನು ವ್ಯರ್ಥ ಮಾಡದೆ ಸರಾಗವಾಗಿ ಕಾರ್ಯಕ್ರಮವನ್ನು ಬಹಳ ಚೆನ್ನಾಗಿ  ನಡೆಸಿಕೊಟ್ಟರು. ಇಷ್ಟೆಲ್ಲಾ ಮೆಚ್ಚುಗೆ ಪಡೆದ ಈ ಜನಪದ ಜಗುಲಿಯ ಜೀವಾಳ ಭಾಗವಹಿಸಿದ ಎಲ್ಲ ಕಲಾವಿದರ ಸುಶ್ರಾವ್ಯ ಗಾಯನ. ಅದರ ವಿವರಗಳನ್ನು ಈ ಕೆಳಗೆ ಕೊಡಲಾಗಿದೆ. 

ಜನಪದ ಜಗುಲಿಯಲ್ಲಿ ಪಾಲ್ಗೊಂಡ ಆಹ್ವಾನಿತ ಮತ್ತು ಅನಿವಾಸಿ ಬಳಗದ ಕಲಾವಿದರು

ಕನ್ನಡನಾಡಿನ ಪ್ರತಿಭಾವಂತ ಕಲಾವಿದ ಗಾಯಕ, ವಾದಕ, ನಟ, ಸಂಯೋಜಕ ದೇವಾನಂದ ವರಪ್ರಸಾದ್ ಅವರು ‘ಜನಪದ ಪ್ರೇಮಗೀತೆಗಳು’ ಎಂಬ ವಿಷಯವನ್ನು ಎತ್ತಿಕೊಂಡು ಮೂವತ್ತು ನಿಮಿಷಗಳ ಕಾಲ ಸೊಗಸಾದ ಹಾಡುಗಳು ಮತ್ತು ಅವಕ್ಕೊಪ್ಪುವ ವಿವರಣೆಗಳೊಂದಿಗೆ ಪ್ರೇಕ್ಷಕರನ್ನು ರಂಜಿಸಿದರು.  ‘ನಿಂಬೆಯ ಹಣ್ಣಂಗೆ ತುಂಬಿದ ಮೈಯ್ಯೋಳೇ ….’ ಎಂದು ಗೆಳೆಯ ತನ್ನ ಗೆಳತಿಯನ್ನು ವರ್ಣಿಸುವ ಗೀತೆಯ ಮತ್ತದರ ಹಿನ್ನೆಲೆಯ ವಿವರಣೆ;  ಕೋಲಾಟದ ಪದಗಳಲ್ಲಿ ಬರುವ ಪ್ರೇಮ, ಕೊಲಾಟದ ಕುಣಿತದ ಪ್ರಕಾರಗಳ ವಿವರಗಳು; ಹಲಗೆಯನ್ನು ಬಾರಿಸುತ್ತಾ ಅವರು ಹಾಡಿದ ‘ನೀರಿಗೋಗೋ ಹೆಣ್ಣೇ  ನೀ … ಕೋಲು ಕೋಲನ್ನ ಕೋಲು’, ‘ಮಾತಾಡ್ ಮಾತಾಡ್ ಮಲ್ಲಿಗೆ …’, ‘ಎಲ್ಲೋ ಜೋಗಪ್ಪ ನಿನ್ನರಮನೆ …’ ಇತ್ಯಾದಿ ಪ್ರೇಮಗೀತೆಗಳನ್ನು ಕೇಳುತ್ತಾ ಕೇಳುತ್ತಾ ಸಮಯ ಸರಿದದ್ದೇ ತಿಳಿಯಲಿಲ್ಲ 

ಪ್ರಣಯದ  ನಂತರ ಮುಂದಿನದು ಮದುವೆ. ಜನಪದ ಕಲಾವಿದೆ ಕವಯಿತ್ರಿ ಶೋಭಾ ಸಾಗರ್, ಕಾಡುಗೊಲ್ಲರ  ಸಮುದಾಯದ ದುಗ್ಗಾಲಮ್ಮನ ಪದ ಮತ್ತು ಧಾರೆ ಹಾಡುಗಳನ್ನ ಹಾಡಿದರು. ಅದಕ್ಕೆ ಪೂರಕವಾಗಿ ಸುಮನಾ ಧ್ರುವ ಅವರು ಜರಿಯುವ ಹಾಡು ಹಾಡಿದರೆ, ವಧುವರರ ಆರತಿಗೆ ಹೇಳುವ ಶೋಭಾನೆಪದವನ್ನ ಸ್ನೇಹ ತಾಯೂರ್ ಹಾಡಿದರು.  ಸುಪ್ರಸಿದ್ಧ ಗಾಯಕಿ ದೀಪಶ್ರೀ ಪ್ರಣವ್ ಹಾಡಿದ ಗಂಡ-ಹೆಂಡಿರ ಮಧ್ಯೆ ನಡೆಯುವ ಒಂದು ಸಂವಾದ ಗೀತೆ ಭಾವಪೂರ್ಣವಾಗಿತ್ತು.

ಮದುವೆಯ ನಂತರ ಮನೆ, ಸಂಸಾರ, ಮಕ್ಕಳು ಅಲ್ಲವೇ? ಅಮಿತಾ ರವಿಕಿರಣ್ ಬಸುರಿಯ ಬಯಕೆ ಹಾಡನ್ನು ಪ್ರಸ್ತುತಪಡಿಸಿದರೆ, ಶಾಲಿನಿ ಸತೀಶ್ ಬಾಣಂತಿ ಹಾಡನ್ನೂ, ರಮ್ಯ ಭಾದ್ರಿ ಜೋಗುಳವನ್ನೂ ಸುಮಧುರವಾಗಿ ಹಾಡಿದರು.

ಉತ್ತರ ಕರ್ನಾಟಕದ ಭಾಷೆಯ ಸ್ಪಷ್ಟ ನುಡಿಗಟ್ಟು, ಶಿಶು ಪ್ರಾಸಗಳನ್ನು ವಾಚಿಸುತ್ತ ಗೌರಿ ಪ್ರಸನ್ನ  ಎಲ್ಲರನ್ನೂ ಬಾಲ್ಯದ ನೆನಪಿನಂಗಳಕ್ಕೆ ಕರೆದೊಯ್ದರು.

ಜನಪದ ಸಂಗೀತ ಅಂದಮೇಲೆ ಗೀಗೀ ಪದವಿದ್ದರೇ ಚಂದ!  ಲಕ್ಷ್ಮೀನಾರಾಯಣ ಗುಡೂರ ಗೀಗೀ ಪದದೊಂದಿಗೆ ಕಾರ್ಯಕ್ರಮದ ಕೊನೆಯ ಗೀತೆಯನ್ನು ಪ್ರಸ್ತುತಪಡಿಸಿದ್ದು ಸೊಗಸಾಗಿತ್ತು.   ಅಮಿತಾ ಭಾಗವಹಿಸಿದ ಕಲಾವಿದರು ಮತ್ತೂ ಈ ಕಾರ್ಯಕ್ರಮ ಯಶಸ್ವಿಯಾಗುವುದಕ್ಕೆ ಸಹಾಯ ಮಾಡಿದವರಿಗೆಲ್ಲ ಧನ್ಯವಾದಗಳನ್ನು ಅರ್ಪಿಸುವುದರ ಮೂಲಕ ‘ಜನಪದ ಜಗುಲಿ’ಗೆ ಇತಿಶ್ರೀ  ಹಾಡಿದರು.

ನನ್ನ ಅನುಭವ 

ಸಾಮಾನ್ಯ, ಸಾಮೂಹಿಕ, ಸರಳ, ಸ್ಪಷ್ಟ ನೇರ ಮಾತಿನ ಅಭಿವ್ಯಕ್ತಿ ಜನಪದ. ಪುರಾತನ ಪರಂಪರೆಯನ್ನು ಎತ್ತಿ ಹಿಡಿಯುವ ಕಂಠಸ್ಥ ಸಂಪ್ರದಾಯ.  ನನಗಂತೂ ಇಂತಹ ಜನಪದ ಜಗುಲಿಯಲ್ಲಿ ಭಾಗವಹಿಸಿದ್ದು ಹೆಮ್ಮೆಯ ವಿಚಾರ.  ಕಾರ್ಯಕ್ರಮದ ತಯಾರಿಗಾಗಿ ನಡೆಸಿದ ಅಭ್ಯಾಸ, ಜೂಮ್ /ವಾಟ್ಸಪ್ಪ್ ಕರೆಗಳು, ಸಂದೇಶಗಳು, ವಾಯ್ಸ್ ನೋಟ್ ಗಳು, ಕಾರ್ಯಕ್ರಮ ತಂದ ಆ ಸಡಗರ, ಉತ್ಸಾಹ, ಭಯ ಎಲ್ಲವೂ ಒಂದು ಸುಂದರ ಅನುಭವ.  ಅಮಿತಾರವರು ನನಗೆ ಕಲಿಸಿಕೊಟ್ಟ ಹಾಡೇನೊ ಬಹಳ ಚೆನ್ನಾಗಿತ್ತು, ಆದರೆ ಎಲ್ಲರ ಮುಂದೆ ಹಾಡುವುದು ಹೇಗೆ ಎಂಬ ಭಯದಲ್ಲಿದ್ದ ನನಗೆ ಅಮಿತಾ ಹಾಗು ದೇಸಾಯಿಯವರು ‘you can do this’ ಎಂದು ಹುರಿದುಂಬಿಸಿದ ಮೇಲೆ, ಧೈರ್ಯ ಮಾಡಿ ಹಾಡಿದ್ದು ಮನಸ್ಸಿಗೆ  ಮುದನೀಡಿತು. ಒಟ್ಟಿನಲ್ಲಿ ಅದೊಂದು ಅದ್ಬುತ ತಂಡದ ಪರಿಶ್ರಮ   ಹೀಗೆ ಬೆನ್ನು ತಟ್ಟಿ ಒಬ್ಬರನ್ನೊಬ್ಬರು  ಪ್ರೋತ್ಸಾಹಿಸುವ ತಂಡ  ಜೊತೆಯಲ್ಲಿದ್ದರೆ ಗೆಲುವು ಕಟ್ಟಿಟ್ಟಬುತ್ತಿ. ಈ ಚಂದದ ಅವಕಾಶವನ್ನು ಕಲ್ಪಿಸಿಕೊಟ್ಟ ಅನಿವಾಸಿ ಬಳಗಕ್ಕೆ ನಾನು ಆಭಾರಿ. 

ಜನಪದ ಜಗುಲಿ ಕಾರ್ಯಕ್ರಮದ ಯೂ ಟ್ಯೂಬ್ ಆವೃತ್ತಿ ಇಲ್ಲಿದೆ.

********************************************************************************************************

`ಈ ಹೊತ್ತಿಗೆ` ನವರಾತ್ರಿ ಕಾವ್ಯೋತ್ಸವ – ಭಾಗ ೨.

ಹೋದ ವಾರ ಪ್ರಕಟವಾದ `ಈ ಹೊತ್ತಿಗೆ` ನವರಾತ್ರಿ ಕಾವ್ಯೋತ್ಸವದ ವರದಿ ಮತ್ತು ಕವನಗಳನ್ನು ತಾವೆಲ್ಲಾ ಓದಿದ್ದೀರಿ. ಈ ವಾರ ಆ ಕಾರ್ಯಕ್ರಮದ ಎರಡನೇ ಕಂತು ಕೆಳಗಿದೆ; ಅದರಲ್ಲಿ ಅಂದು ಓದಲ್ಪಟ್ಟ ಉಳಿದ ಕವಿತೆಗಳು ಇವೆ. ಓದಿ ಆನಂದಿಸಿ. – ಎಲ್ಲೆನ್ ಗುಡೂರ್ (ಸಂ.)

  ನೆನಪುಗಳು  -  ಡಾ. ಪ್ರೇಮಲತ ಬಿ. 
 
ಬೆಳ್ಳಂಬೆಳಗು ನಸುನಕ್ಕು
 ಮತ್ತೆ ಬಂದಿಹೆನೆಂಬ ಹೊತ್ತಲ್ಲಿ
 ಹೊಸ್ತಿಲಲಿ ನಿಂತು ಕಣ್ಣಾಲೆ ತುಂಬಿ
 ವರ್ತಮಾನವ ಕದಡದಿರಿ
 ಅಂಗಳದ ತುಂಬೆಲ್ಲ ಹಕ್ಕಿಗಳ ಚಿಲಿಪಿಲಿ
 ನೋವು ನಲಿವುಗಳ ಚಿತ್ತಾರದ ರಂಗೋಲಿ
 ಹಾಲುಕ್ಕಿ ಹರಿದ ಬದುಕಿನಲಿ
 ಒಂದೊಂದೇ ಪಾರಿಜಾತಗಳು ಜಾರಿ ಉದುರಿ
 ಭೂತದ ನೆರಳುಗಳಿಗೆ ಇಂದು
 ಹೊಸರೆಕ್ಕೆ ಕಟ್ಟಿ ಅಗಲಿಕೆಯ ನೋವು,
 ವಿರಹದ ಕಾವು ತುಂಬಿಹ ಬೆಂಗಾಡಿನ
 ಮಾಯೆ ಮರುಳಿಗೆ ಹೊತ್ತೊಯ್ಯದಿರಿ
 ಬರಗಾಲದ ಬಿರು ಬಿಸಿಲಿಗೆ
 ನಿಡುಸುಯ್ದ ಈ ಇಹಕ್ಕೆ
 ಮರಳಿ ಅರಳುವ ಬಯಕೆ
 ನೀರು ಹುಯ್ಯುವವರಿಲ್ಲ
 ಒಂಟಿ ಮರಕ್ಕೆ
 ಸಂಜೆ ಗಾಳಿಯ ಹಿತ ಆಳಕ್ಕೆ ಇರಿದ ಕೆಂಪಿನಲಿ
 ಮನಸ್ಸರಳಿ ಹಿತವಾಗಿ ನರಳುತ್ತದೆ
 ಅವನೆದೆ ಕಾವಿನಲಿ ಕರಗುತ್ತದೆ
 ಸೆಟೆದ ನರನಾಡಿಗಳು ಅದುರಿ
 ಹಗುರಾಗಿ ಬಿಡುತ್ತವೆ
 ಕೂಡಿ ಕಳೆದುಹೋಗುವ ತವಕದಲಿ
 ಕಣ್ಣೆವೆ ಭಾರವಾಗುವ ಹೊತ್ತಲ್ಲಿ
 ನಿಮ್ಮ ಒತ್ತಾಸೆಯಿರಲಿ ನನಗೆ
 ನನ್ನ ಬಿಡದಿರಿ,ಬಿಡದೆ ಕಾಡದಿರಿ
 ಅಣಕಿಸದಿರಿ ನೆನಪುಗಳೆ, ಬದುಕಿದು
 ವೃದ್ಧಾಪ್ಯದಲಿ ಒಂಟಿ ಮುದುಕಿ.
 
***************************************************** 
 ಕಾಯಲೇಬೇಕಲ್ಲ......... - ಅಮಿತಾ ರವಿಕಿರಣ
 
 ಬಂದಿಲ್ಲಿ ಜಾವ ಕಳೆದಿಲ್ಲ.. 
 ಅದಾಗಲೇ ಸಮಯ ಸರಿಯುತ್ತಿಲ್ಲ..
 
 ಸೂರ್ಯ ಮುಳುಗುತ್ತಿಲ್ಲ
 ಚಂದ್ರ ನಗುತ್ತಿಲ್ಲ,
 ಸಂಜೆಯ ಆ ತುಳಸಿ ದೀಪದ ಮಿಣುಕಿಲ್ಲ
 ಮಂತ್ರ ಭಜನೆಯ ಜೊತೆಗೆ ಊದುಬತ್ತಿ ಲೊಬಾನದ ಘಮವಿಲ್ಲ
 ನನಗಿಲ್ಲಿ ಸಮಯ ಸರಿಯುತ್ತಿಲ್ಲ
 
 ಸೊಳ್ಳೆಯ ಕಿರಿಕಿರಿಯಿಲ್ಲ 
 ಇರುವೆ ಸಕ್ಕರೆಯ ಮುತ್ತುವುದಿಲ್ಲ
 ಜಿರಳೆಗಳ ಚಿರಿಪಿರಿಯೂ ಇಲ್ಲ..
 ಹಲ್ಲಿ ಲೊಚಗುಡುವುದಿಲ್ಲ,
 ಸಂಜೆಯ ಸಂಗೀತಕ್ಕೆ ಜೀ ಗೊಡುವ ಜೀರುಂಡೆಯೂ ಇಲ್ಲ..
 ಚಾ ಸಮಯಕ್ಕೆ ಸರಿಯಾಗಿ ಟೋಸ್ಟ್ ಬೇಕೆಂದು ಹಿಂದೆ ಮುಂದೆ ಸುತ್ತಿ ಸಿಟ್ಟು 
 ಬರಿಸುವ ನಾಯಿ ಇಲ್ಲ..
 ಆದರೂ ಇಲ್ಲಿ ಯಾಕೋ ಸರಿ ಹೋಗುತ್ತಿಲ್ಲ...
 
 ಬಿಸಿಲಿಗೆ ಝಳವಿಲ್ಲ, ಮಳೆ ಇದೆ ಗುಡುಗು ಮಿಂಚಿಲ್ಲ... ರಸ್ತೆಬದಿ ನಿಲ್ಲುವ 
 ಕೆಂಬಣ್ಣದ ನೀರ ಓಕುಳಿ ಇಲ್ಲ..
 ಎಲ್ಲೆಲ್ಲೂ ಶುಭ್ರ ಸುಭಗ ಎನಿಸುವ ಈ ನಾಡು ನನ್ನದೆನಿಸುತ್ತಿಲ್ಲ...
 
 ಟಿವಿಯಲ್ಲಿ ಬಂದು ವೃಥಾ ನಮ್ಮ ಸಮಯ ತಿನ್ನುವ ಮಹದೇವಿ, ನಾಗಿಣಿ, 
ಸುಬ್ಬಲಕುಮಿ, ಶನಿ ಇನ್ನಿತರರಿಲ್ಲ.
 ರಸ್ತೆ ಮೇಲೆ ವೃಥಾ ಹಾರ್ನ್ ಮಾಡುತ್ತಾ ಸ್ಪರ್ಧೆಗಿಳಿಯುವ ವಾಹನ ದಟ್ಟಣೆ ಇಲ್ಲ, 
 ಅದರೂ ಸಂಜೆ ಸರಿಯುತ್ತಿಲ್ಲ...
 
 ಮನದ ಮಾತು ಕೇಳಲು ಯಾರಿಲ್ಲ..
 ನನ್ನ ಹರಟೆ ಕೇಳಲು ಕಿವಿಗಳಿಲ್ಲ..
 ಮುದ್ದಿಸಿ ಅದೇ ಮಾಯದಲ್ಲಿ ಬುದ್ದಿಹೇಳುವ ಪಪ್ಪ ಅಮ್ಮನ ಆ ದನಿ ಕೇಳಲು.. 
 ಜಗಳವಾಡಿ ಮತ್ತದೆ ಮಾಯದಲ್ಲಿ ಒಪ್ಪಿ ಅಪ್ಪುವ  ತಂಗಿ ತಮ್ಮನ ಹಿತಸ್ಪರ್ಶಕ್ಕೆ
 ಮತ್ತೆ ಕಾಯಲೇಬೇಕಲ್ಲ???

************************************************

 ಏಕತಾರಿ - ಅಮಿತಾ ರವಿಕಿರಣ
 
ಹೇಗಿರುತ್ತಿ ಹೀಗೆ ?
 ಹೇ ಏಕತಾರಿ….
 ಒಂಟಿ ಒಂಟಿ,  
 ಕಂಟಿಗೆ ಕೊರಳ ಕಟ್ಟಿ ಬಿಗಿದು
 ಖಾಲಿ  ಒಣ ಬಿರಡೆಯೊಳು ಬದುಕ ಸವೆಸಿ
 ಯಾವಗಲೂ ಅದೇ ನಾದ ಸ್ವಲ್ಪ ಹೆಚ್ಚು ಚೂರು ಕಡಿಮೆ...
 ಅಲ್ಪ ತೃಪ್ತೆ ನೀ 
 ಹೇ ಏಕತಾರಿ…
  
 ನೊಡಲ್ಲಿ
 ಬಗೆ ಬಗೆಯ ವಿಧ ವಿಧದ
 ನೂರು ನೂರು ತಂತಿ ವಾದ್ಯಗಳು‌.
 ಯಾರೂ ಒಂಟಿ ಅಲ್ಲಾ ನಿನ್ನಂತೆ…
  
 ಸಪ್ತ ಸ್ವರ, ಗಮಕ, ಖಟ್ಕಾ ಮುರ್ಕಿಗಳ ಗುಂಗಲ್ಲಿ….
 ದನಿಗೆ ದನಿಯಂತೆ ಬೆರೆಯಲು ತವಕಿಸುವ 
 ವೀಣೆ ಸಂತೂರ್ ಸಿತಾರು…
  
 ನಾಲ್ಕೇ ತಂತಿ
 ಅದಾಗ್ಯೂ
 ಜೀರ್ ಹಿಡಿದಾಗ ಜುಂಯ್ಯೆಂದು ಸಾತ್ ಕೊಡುವ ತಂಬೂರಿಯ ಖರಜ್ ಷಡಜಗಳು..
 ಮನಸ್ಸಿದ್ದರೆ, ಮನಸೋತರೆ ಒಂದು ತಂತಿ ಮೀಟಿದರೆ ಇನ್ನೊಂದು ನುಡಿಯುತ್ತದೆ.
  
 ಗಿಟಾರು ಎಲ್ಲದ್ದಕ್ಕೂ 
 ಖುಶಿಗೂ ದುಖಃಕ್ಕೂ, 
 ನೋಡು ಆ ಹಾರ್ಪ್ ಎನ್ನುವ ಬಿನ್ನಾಣಗಿತ್ತಿ
 ಬೂಜುಕಿಯ ಬಾಜು ನನ್ನ ಮುಂದ್ಯಾರು ಎನ್ನುತ್ತ ದನಿ ಹೊಮ್ಮಿಸಿ ಅಲೆ ಅಲೆ ನಾದವಾಗಿದ್ದು…
  
 ಇನ್ನೂ ಇವೆ ಅದೆಷ್ಟೋ ಮೋಹನ, ರುದ್ರ ವೀಣೆಗಳು; 
ಸಣ್ಣನೆ ತಂತಿ ಮನಮೀಟಿ ಮಿಡಿಯುವ   
ತರಂಗಾಂತರಗಳ ಯುಗಾಂತರಕ್ಕೂ ಹರಡುವ ನಾದರೂಪಿಗಳು..
  
 ನೀನ್ಯಾಕೆ ಅಷ್ಟು ಒಂಟಿ ಒಂಟಿ 
 ಓ ಏಕತಾರಿ
 ತಳಕು ಬಳುಕಿನ ಈ ಭ್ರಮಾಲೋಕದ
 ನಡುವೆಯೆ ಅವ್ಯಾಹತ ಮಿಡಿಯುವ
 ವಿಕ್ಷಿಪ್ತ ರಾಗರಂಜಿನಿ…

******************************************************
ರೆಕ್ಸನ ಕಿವಿಮಾತು - ಲಕ್ಷ್ಮೀನಾರಾಯಣ ಗುಡೂರ್

 ಕಾಯುತ್ತ ಕುಳಿತಾಗ ಮ್ಯೂಸಿಯಮ್ಮಿನಲೊಮ್ಮೆ
 ದಿಟ್ಟಿಸುತ ಮೈ ಮರೆತಿದ್ದೆ ಟಿ ರೆಕ್ಸನನ್ನೇ
 ಇಪ್ಪತ್ತಡಿಯ ಮೇಲಿದ್ದ ಕಣ್ಣು ನನ್ನೆಡೆ ನೋಡಿ,
 ಚೂಪು ಹಲ್ಲಿನ ಬಾಯಿ ನಸುವೇ ನಕ್ಕಂತಾಗಿ
 ಗಡಸು ದನಿಯಲಿ ಬಂದ ನಮಸ್ಕಾರ ಕೇಳಿ
 ತೆರೆದ ಬಾಯ್ ತೆರೆದಂತೆ ನೋಡಿದೆನು ಅತ್ತ
 'ನೋಡಯ್ಯ ಮನುಜ, ನನ್ನ ಮಾತು ಕೇಳು
 ನನ್ನನುಭವದ ಮಾತು, ಹಾಕಿಕೊ ಕಿವಿಯೊಳು..
 ನಿನ್ನಂತೆ ನಾನೂ ಒಮ್ಮೆ ಈ ಭುವಿಯಲಿದ್ದೆ
 ನನ್ನದೇ ಟೈಮೆಂದು ಉರಿಯುತಲೆ ಇದ್ದೆ;
 ಕೋಟಿ ಕೋಟಿಗಳಲ್ಲಿ ಬಲಶಾಲಿಯಾಗಿ
 ತಡೆಯುವರು ಇಲ್ಲದೆಲೆ ಮೆರೆಯುತ್ತಲಿದ್ದೆ..
 ಸಿಡಿಲಿನೊಲು ಅಪ್ಪಳಿಸಿತಂದೊಮ್ಮೆ ಕಲ್ಲು,
 ಹೊರ ಗಗನದಿಂದೆಲ್ಲೋ ಬಂದಂಥ ಕಲ್ಲು..
 ಹಬ್ಬಿ ಧೂಳಿನ ಮೋಡ, ಸೂರ್ಯ ಮರೆಯಾಯ್ತು
 ಲಕ್ಷ ವರ್ಷಗಳಿದ್ದ ನಮ್ಮೆಲ್ಲರ ಕೊನೆಯಾಯ್ತು
 ನಿಮ್ಮನ್ನು ನೋಡುತ್ತಿರೆ... ಹಾ...ಮತ್ತದೆಲ್ಲ ನೆನಪಾಯ್ತು
 ಉರಿವ ಬೆಂಕಿಗೂ ಕೂಡ ಒಮ್ಮೆ ಕೊನೆಯುಂಟು
 ನಮ್ಮ ಜೀವನಕ್ಕಂತೂ ಮರಣವೇ ನಂಟು
 ಅದಕೆ ಹೇಳುವೆ ಕೇಳು ಮತ್ತೆ ನನ್ನ ಮಾತು
 ಕೈಲಿರದ ಕಾರಣದಿ ನಮ್ಮ ಕೊನೆಯಾಯ್ತು
 ನಿಮ್ಮ ಬದುಕುವ ಪರಿಯೇ ಸಾವಿಗೆಡೆಯಾಯ್ತು
 ಇನ್ನಾದರೂ ಏಳು, ನಮ್ಮ ಪಾಠವನೋಡಿ ಕಲಿತು
 ಪರಿಸರದ ಉಳಿವಿನಲೇ ಮಾನವನ ಒಳಿತು
 ನಿನ್ನದಲ್ಲವೋ ಭುವಿಯು ಬಾಡಿಗೆಯ ತಾನು
 ಇರುವ ಭೂಮಿಯನೊಂದ ಉಳಿಸಿಕೊ ನೀನು...
 ಇರುವುದೊಂದೇ ಭೂಮಿ, ಉಳಿಸಿಕೊ ನೀನು.

 ************************************************** 

ನವರಾತ್ರಿ ಮತ್ತು ಅಜ್ಜಿಯ ಮನೆ - ಲಕ್ಷ್ಮೀನಾರಾಯಣ ಗುಡೂರ್ 
 
ಮತ್ತೆ ಬಂತು ಪ್ರತಿವರ್ಷ ಬರುವ ನವರಾತ್ರಿ,
 ದೇವ-ದೇವಿಯರ, ಹಬ್ಬಗಳ ನೆನಪು ತರುವ ನವರಾತ್ರಿ
 ನನಗೆ ಅಜ್ಜಿಮನೆಯ ನೆನಪ ತರುವ ನವರಾತ್ರಿ
 ಅಜ್ಜಿಯ ನಗುಮುಖವ ನೆನಪಿಸುವ ನವರಾತ್ರಿ
  
 ಶ್ರಾವಣದೊಂದಿಗೇ ಶುರುವಾಗುವ ಗಡಿಬಿಡಿ
 ಹಬ್ಬ-ಪೂಜೆಗಳ ಅಜ್ಜಿ-ತಾತನ ಮಡಿ-ಮಡಿ!
 ಹತ್ತು ಮತ್ತೊಂದು ಮೊಮ್ಮಕ್ಕಳ ಗಜಿಬಿಜಿ
 ಮನೆತುಂಬ ಹರಡಿದ ಸಾಮಾನಿನ ಮಿಜಿ ಮಿಜಿ..
  
 ದೇವರ ಮನೆಗೆ ಹಚ್ಚಲು ಕಲಿಸಿಟ್ಟ ಬಿಳಿಯ ಸುಣ್ಣ
 ಶ್ರೀಕಾರ ಬರೆಯಲು ತೆಗೆದಿಟ್ಟ ಕೆಂಪು ಬಣ್ಣ
 ತೋರಣದಲಿ ಅಣ್ಣ ಕಿತ್ತಿದ ಅಚ್ಚ ಹಸಿರು ಮಾವಿನೆಲೆ
 ತೊಳೆದ ಹೊಸಿಲಿಗೆ ತಂಗಿ ಎಳೆದ ರಂಗೋಲಿಯ ಬಲೆ
  
 ಅಡಿಗೆ ಮನೆಯ ಚಿತ್ರಾನ್ನ ಒಗ್ಗರಣೆ ಘಮಲು
 ಕಡುಬು ಪಾಯಸಗಳ ಮೇಲೆ ತುಪ್ಪದ ಅಮಲು
 ಪಾತ್ರೆಗಳ ಸೌಟುಗಳ ಬಳೆಗಳ ಝಣಝಣ
 ಕರ್ಪೂರದಾರತಿಯ ಜೊತೆ ಕೈಗಂಟೆಯ ಢಣಢಣ

 ರೇಶಿಮೆ ಸೀರೆ ಪಂಚೆ, ಲಂಗಗಳ ಸರಸರ
 ಸಡಗರದ ಮಾತು, ನಗುಗಳು ಭರಪೂರ
 ಬನ್ನಿ ಕೊಡಲು ಮನೆಮನೆಗಳ ತಿರುಗಿದ ರೀತಿ
 ಹಿರಿ-ಕಿರಿಯರೆನ್ನದೆಲೇ ಒಪ್ಪಿಕೊಳ್ಳುವ ಆ ಪ್ರೀತಿ
  
 ಅಜ್ಜಿಯ ಮನೆಯ ಹಬ್ಬದ ಹದವೇ ಬೇರೆ
 ಅಜ್ಜಿ-ತಾತನ ಪ್ರೇಮದ ಮುದವೇ ಬೇರೆ
 ಮರೆತೇನಂದರೂ ಮರೆಯದಾ ನವರಾತ್ರಿ
 ಪ್ರತಿ ಕೇಳದ ಆ ಪ್ರೀತಿಯ ಚಿಕ್ಕಂದಿನ ನವರಾತ್ರಿ .....
 ...... ಅಜ್ಜಿಯ ಮನೆ ನವರಾತ್ರಿ... 

********************************************
 ಪ್ರೀತಿಯೆಂಬ ಸತ್ಯ - ಮುರಳಿ ಹತ್ವಾರ್
  
 ತಾ ನುಡಿವುದೆಲ್ಲ ಸತ್ಯವೆನಲು ನಲ್ಲೆ
 ನಂಬುವೆ, ತಿಳಿದರೂ ಅದರಡಿಯ ನಿಜ
 ಜಗದ ನಾಲಿಗೆಯಾಳವ ಅರಿಯದ
 ತರುಣ ನಾನೆಂದು ತಿಳಿಯಲಿ ಬಿಡಿ! 
 ಆ ಸಿಹಿ ಕಲ್ಪನೆಯ ಜಂಭದ ನಲಿವಲಿ
 ನೆನೆವೆ ನಾ ಯೌವನದ ನಿನ್ನೆಗಳ ನಿಧಿ,
 ಮನದನ್ನೆಯ ಸವಿಮಾತುಗಳ ನಮಿಸುತಲಿ:
 ಸತ್ಯವ ಬಚ್ಚಿಟ್ಟರೂ ನಾವಿಬ್ಬರೂ ಇಲ್ಲಿ, 
 ಹೇಳಿಲ್ಲ ಅವಳೆಲ್ಲೂ ಸುಳ್ಳಲ್ಲವೆಂದು
 ನಾನೂ ನಂಬಿಲ್ಲ ನಾ ತರುಣನೆಂದು.
 ಪ್ರೀತಿಯೆಂಬುದು ನಂಬಿದಂತೆ ಕಾಣುವ ಬಳ್ಳಿ
 ಬೆಳೆದಷ್ಟೂ ಬಲವದಕೆ ಒಲವಿನ ಹುಸಿಗಳಲಿ
 ನನಗವಳು, ಅವಳಿಗೆ ನಾ ಪ್ರೇಮದ ಹೊದಿಕೆ
 ಕೊರತೆಗಳು ಕರಗಿವೆ ಹೊಗಳಿಕೆಯ ಹದಕೆ!
  
 (Translation of Shakespeare’s Sonnet 138: When my love swears that she is made of truth) 

***********************************************
 ಭೂಮಿ  - ರಮ್ಯ ಭಾದ್ರಿ
  
 ಹಗಲಿರುಳು ದಣಿವಿಲ್ಲದೆ ಸಕಲವೂ ಹೊರುವೆ
 ಒಡಲಲ್ಲಿನ ಜೀವಜಲವೆರೆದು ಪೊರೆವೆ
 ವನಸಿರಿಯ ಉಸಿರಾಗಿಸಿ ಪ್ರಾಣವಾಗಿರುವೆ
 ಮಣ್ಣನ್ನು ಹಸಿರಾಗಿಸಿ ಹಸಿವ ನೀಗಿಸುವೆ
 ತಾಯೇ ಧರಣಿಯೇ ನಿನಗೆ ವಂದಿಸುವೆ.
  
 ಭೇದವರಿಯದ ನಿನಗೆ ಭೇದಭಾವ ಬಾಧಿಸಿದೆ 
 ಒಡಲೊಡಲ ಕಿಚ್ಚಿನ ಕೆನ್ನಾಲಿಗೆ ಎಲ್ಲೆಲ್ಲೂ ಚಾಚಿದೆ
 ಪ್ರಕೃತಿಯ ಪಾಠವ ಮರೆತು ಸ್ವಾರ್ಥವೂ ಭುಗಿಲೆದ್ದಿದೆ
 ಬವಣೆಯಾದರೂ ಬಾಗದೆ ಮನ್ನಿಸುತ ನಿಸ್ವಾರ್ಥದ ಪ್ರೀತಿ ಮಳೆಗರೆವೆ
 ತಾಯೇ ಧರಿತ್ರಿಯೇ ನಿನಗೆ ವಂದಿಸುವೆ.
  
 ಯುಗಗಳನ್ನು ಮಡಿಲಲ್ಲಿ ಆಡಿಸಿ ಬೆಳೆಸಿರುವೆ
 ಪಾಪ ಪುಣ್ಯಗಳ ಪರಾಕಾಷ್ಠೆಯ ನೀ ಬಲ್ಲೆ
 ಅನೀತಿ ಅಧರ್ಮಗಳಿಗೆ ಪ್ರಾಯಶ್ಚಿತ್ತವು ಈ ಇಳೆಯಲ್ಲೆ
 ಎನ್ನುವ ಅನಂತ ಸತ್ಯಕ್ಕೆ ಸಾಕ್ಷಿಯಾಗಿರುವ ನ್ಯಾಯ ದೇವತೆಯೇ
 ತಾಯೇ ಭೂರಮೆಯೇ ನಿನಗೆ ವಂದಿಸುವೆ. 

(ಈ ಕವಿತೆಯನ್ನು ರಮ್ಯ ಅವರ ಸಹೋದರಿ ಲಕ್ಷ್ಮಿ ಭಾದ್ರಿ 
ಅವರು ರೇವತಿ ರಾಗಕ್ಕಳವಡಿಸಿ ಹಾಡಿದ್ದಾರೆ; ಆ ಹಾಡನ್ನು 
 ಇಲ್ಲಿ ಕ್ಲಿಕ್ ಮಾಡಿ ಕೇಳಬಹುದು - ಭೂರಮೆಯೇ ನಿನಗೆ ವಂದಿಸುವೆ 
ಅಥವಾ ಪೂರ್ತಿ ಕೊನೆಯಲ್ಲಿನ ಪ್ಲೇಯರ್ ಮೇಲೆ ಕ್ಲಿಕ್ ಮಾಡಿ ಕೇಳಿ) 

***************************************************

  ನವರಾತ್ರಿ - ರಮ್ಯ ಭಾದ್ರಿ
  
 ವರುಷಗಳುರುಳಿದರು ಮರಳಿ ಬಂತು ನವರಾತ್ರಿ
 ಕರುಣಿಸಲು ಎಲ್ಲರಿಗೂ ಸುಖ ಶಾಂತಿ
 ದುಷ್ಟಶಕ್ತಿಗಳ ನಿಗ್ರಹಿಸಿ ಕಳೆಯಲು ಭೀತಿ 
 ಧರೆಗಿಳಿವಳು ಮಹಾ ತಾಯಿ ಆದಿ ಪರಾಶಕ್ತಿ
  
 ಇಳೆಯಲ್ಲ ಮಳೆ ಸುರಿದು ತಂಪಾಗಿ ಕಂಪೆರೆದು
 ಶಿಶಿರ ಸ್ಪರ್ಶಕ್ಕೆ ವನರಾಶಿಯು ವರ್ಣರಂಜಿತವಾಗಿ ಹೂವ ಹಾಸಿರಲು
 ನಿಶೆಯನ್ನು ಕಳೆಯಲು ಕಾತುರದಿ ಉಷೆಯು ಕಾದಿರಲು
 ಸಕಲವೂ ನವೋದಯಕೆ ಮೊಗ ಮಾಡಿ ನಿಂತಿರಲು  
 ಧರೆಗಿಳಿವಳು ದೇವಿ ದೀನರನ್ನುದ್ದರಿಸಲು
  
 ಪೂರ್ವದ ಪೆಂಡಾಲುಗಳಲ್ಲಿ ಪ್ರಜ್ವಲಿಸುತ ಧಗಿಸುವ ದುರ್ಗೆಯಾಗಿ
 ಪಶ್ಚಿಮದ ಜಾನಪದದ ನೃತ್ಯ ಕಲೆಗಳ ಅಧಿದೇವತೆಯಾಗಿ
 ಉತ್ತರದ ಜಾಗರಣೆಗಳಲ್ಲಿ ಜಗಮಗಿಸುತ ಜಗನ್ಮಾತೆಯಾಗಿ
 ದಕ್ಷಿಣದ ಅಂಗಳದ ಬೊಂಬೆಗಳ ರೂಪದಿ ಜಗದಂಬೆಯಾಗಿ
 ಧರೆಗಿಳಿವಳು ದೇವಿ ಅಂಬಾರಿ ಏರಿ ಚಾಮುಂಡಿಯಾಗಿ
  
 ಭವ ಬಂಧನದ ಪಯಣದಲಿ ಭಕ್ತರ ಶಕ್ತಿಯಾಗಿ
 ಸಕಲಾಭಿಷ್ಟಗಳನು ಕರುಣಿಸುವ ಇಷ್ಟದೇವತೆಯಾಗಿ
 ಮದದಿ ಮತಿಗೆಟ್ಟವರ ತಿಮಿರವನೋಡಿಸುವ ಜ್ಞಾನದೀವಿಗೆಯಾಗಿ
 ಬಳಲಿದ ಬಡವರ ಬಾಳಿನ ಸಿರಿದೇವಿಯಾಗಿ
 ಧರೆಗಿಳಿವಳು ತಾಯಿ ಮೊರೆ ಇಡುವವರ ಮೂಕಾಂಬಿಕೆಯಾಗಿ
  
 ಇಳೆಯಲ್ಲ ಕಳೆಕಟ್ಟಿದೆ ನಿನ್ನ ಆಗಮನದಿ 
 ಭಕ್ತರೆಲ್ಲ ನಿನ್ನ ಭಜಿಸುತಿಹರು ಆನಂದ ಪರವಶದಿ 
 ಕಾಣದೆ ಕಾಡುತ್ತಿರುವ ಕಂಟಕವ ಕಳೆಯಮ್ಮ ಭರದಿ 
 ಕೈ ಹಿಡಿದು ನಡೆಸಮ್ಮಾ ಶರಣಾದೆವು ನಿನ್ನ ಚರಣದಿ 
 ಸರ್ವರಿಗೂ ಸನ್ಮಾನಗಳವಾಗಲಿ ತಾಯೆ ನಿನ್ನ ಅನುಗ್ರಹದಿ

*********************************************