ಕಿರುಗಥೆಗಳು

ಇತ್ತೀಚಿಗೆ ಕಿರುಗಥೆಗಳ ಸಂಗ್ರಹವೊಂದನ್ನು ಓದುತ್ತಿದ್ದೆ. ಹಿಂದೊಮ್ಮೆ ಅನಿವಾಸಿ ಅಂಗಳದಲ್ಲಿನ ಕಾರ್ಯಕ್ರಮಕ್ಕೆ ಕಿರುಗಥೆಯನ್ನು ಬರೆದ ನೆನಪು ಬಂತು. ಈ ಪ್ರಕಾರದಲ್ಲಿ ಮತ್ತೆ ಯಾಕೆ ಪ್ರಯತ್ನ ಮಾಡಬಾರದು ಎಂಬ ವಿಚಾರ ಬಂತು. ಅನಿವಾಸಿಯಲ್ಲೇ ಹಂಚಿಕೊಂಡರೆ, ಸಹೃದಯರ ಪ್ರತಿಕ್ರಿಯೆ ಸಿಗುತ್ತದೆ, ನನ್ನ ಸಂಪಾದಕತ್ವದ ಉಪಯೋಗವನ್ನು ಪಡೆದುಕೊಂಡಂತೆಯೂ ಆಗುತ್ತದೆ: ಒಂದು ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆಯುವ ಹುಂಬತನ ಇದು. ಅದಕ್ಕೆ ಸರಿಯಾಗಿ ಎರಡು ಕಿರುಗಥೆಗಳನ್ನು ಈ ವಾರ ನಿಮ್ಮ ಮುಂದಿಟ್ಟಿದ್ದೇನೆ. ಗುರಿ ತಲುಪಿಯಾವೇ? ತಲುಪಿದರೂ ಬಿಟ್ಟರೂ, ಕಲ್ಲು ನೆಲಕ್ಕೇ ಬೀಳಬೇಕಲ್ಲವೇ? ಬಿದ್ದರೆ ಕಲ್ಲು, ನನ್ನ ಮೂಗಲ್ಲ ಎಂಬ ಸಮಾಧಾನವಿದೆ, ನಿಮ್ಮ ಸಮಯ ಹಾಳು ಮಾಡಿದ್ದೇನೆಯೇ ಎಂಬ ಆತಂಕವೂ ಇದೆ.

ವಿಪರ್ಯಾಸ 

ಆತನಿಗೆ ಫುಟ್ ಬಾಲ್ ತುಂಬಾ ಇಷ್ಟ. ಇಂಜಿನಿಯರಿಂಗ್ ಕಾಲೇಜು ತಂಡದ ಮುಖ್ಯ ಆಟಗಾರ ಆತ. ಸ್ನೇಹಪರನಾದ್ದರಿಂದ ಸಹಪಾಠಿಗಳಲ್ಲಿ ಜನಪ್ರಿಯನೂ ಆಗಿದ್ದ. ಡಿಗ್ರಿ ಮುಗಿಸುವಷ್ಟರಲ್ಲಿ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಸಿಕ್ಕಿತ್ತು. ಆಫ್ ಸೈಟ್ ಕೆಲಸ ಎಂದು ಆತನನ್ನು ಕಂಪನಿ ಇಂಗ್ಲೆಂಡಿಗೆ ಕಳಿಸಿತ್ತು. ಫುಟ್ ಬಾಲ್ ಸೆಳೆತ ಆತನನ್ನು ಆಫೀಸಿನ ಫೈವ್-ಅ-ಸೈಡ್ ತಂಡಕ್ಕೆ ಸೇರಿಸಿತ್ತು. ವಾರಕ್ಕೆರಡು ಬಾರಿ ಹತ್ತಿರದ ಸ್ಪೋರ್ಟ್ಸ್ ಸೆಂಟರಿನಲ್ಲಿ ಆಫೀಸಿನ ತಂಡದೊಂದಿಗೆ ಸ್ಪರ್ಧಿಸುತ್ತಿದ್ದ. ಒಟ್ಟಿನಲ್ಲಿ ಅಪ್ಪ-ಅಮ್ಮನ ಕನಸಿನಂತೆ ಇಂಜಿನಿಯರ್ ಆಗಿ, ಒಳ್ಳೇ ಕೆಲಸ ಸೇರಿ, ಬಿಡುವಿನಲ್ಲಿ ತನ್ನ ಪ್ರೀತಿಯ ಹವ್ಯಾಸದಲ್ಲೂ ತೊಡಗಿಕೊಂಡು ಸಂತೃಪ್ತನಾಗಿದ್ದ. ನಿಸ್ವಾರ್ಥವಾಗಿ ಸಾಮಾಜಿಕ ಕಾರ್ಯ ಮಾಡುವ ಕಳಕಳಿಯಿಂದ ಮನೆಯ ಹತ್ತಿರದ ಚ್ಯಾರಿಟಿ ಅಂಗಡಿಯಲ್ಲಿ ವಾರಾಂತ್ಯದಲ್ಲಿ ಸಹಾಯವನ್ನೂ ಮಾಡುತ್ತಿದ್ದ.

ಈತ ಕೂಡ ಆತ ಬೆಳೆದ ಮಹಾನಗರದ ಇನ್ನೊಂದು ಮೂಲೆಯಲ್ಲಿ ಬೆಳೆದಿದ್ದ. ತುಂಬಾ ಬುದ್ಧಿವಂತನಾದ ಈತ ದೇಶದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದಿ, ಎಂಬಿಎ ಮುಗಿಸಿ ಲಂಡನ್ನಿನ ಇನ್ವೆಸ್ಟ್ಮೆಂಟ್ ಬ್ಯಾಂಕ್ ಸೇರಿದ್ದ. ಸಾಕಷ್ಟು ಹಣ ಮಾಡುತ್ತಿದ್ದರೂ ಹಗಲಿರುಳೂ ಇರುತ್ತಿದ್ದ ಕೆಲಸದಿಂದ ಸುಖವಾಗಿ ಎರಡು ತುತ್ತು ಅನ್ನ ತಿನ್ನಲು, ಸರಿಯಾಗಿ ನಿದ್ದೆ ಮಾಡಲೂ ಈತನಿಗೆ ಸಮಯ ಸಿಗುತ್ತಿರಲಿಲ್ಲ. ಆಯಾಸವಾಗದಂತೆ ತನ್ನ ಸಹೋದ್ಯೋಗಿಗಳಂತೆ ಮಾತ್ರೆಗಳನ್ನು ತೆಗೆದುಕೊಳ್ಳುವುದು ಅಭ್ಯಾಸವಾಗಿ ತಳಕ್ಕೆ ತಳ್ಳುವ ಸುಳಿಯಲ್ಲಿ ಸಿಲುಕಿದ್ದ. ಒತ್ತಡದಲ್ಲಿ ಈತನ ಮತಿ ಭ್ರಮಣೆ ಆಗುತ್ತಿತ್ತು. ಅಂದು ಆಫೀಸಿನವರೆಲ್ಲ ವಿರಾಮಕ್ಕಾಗಿ ಹತ್ತಿರದ ಶೂಟಿಂಗ್ ಕ್ಲಬ್ಬಿಗೆ ಹೋಗಿದ್ದರು. ಎಲ್ಲರ ಗಮನ ವಿಧ ವಿಧವಾದ ಬಂದೂಕುಗಳು, ಅವನ್ನು ಲೋಡ್ ಮಾಡುವಲ್ಲಿ ವ್ಯಸ್ತವಾಗಿತ್ತು. ಪಕ್ಕದಲ್ಲಿದ್ದ ಬಂದೂಕನ್ನು ಎತ್ತಿಕೊಂಡು ಈತ ಬಿರಬಿರನೆ ಹೊರಗೆ ಓಡಿದ. ಹೊರಬಂದವನಿಗೆ ಎದುರು ಕಂಡಿದ್ದು ಒಂದು ಚಿಕ್ಕ ಚ್ಯಾರಿಟಿ ಅಂಗಡಿ. ನುಗ್ಗಿದವನೇ ಅಲ್ಲಿದ್ದವರ ಮೇಲೆ ಗುಂಡು ಹಾರಿಸಿ ಅಲ್ಲಿದವರನ್ನೆಲ್ಲ ಕೊಂದು, ತನ್ನ ಮೇಲೆ ಗುಂಡು ಹಾರಿಸಿಕೊಂಡು ಹತನಾದ. ಅಂಗಡಿಯಲ್ಲಿ ಆತನೂ ಇದ್ದ.

ಹೊಣೆ 

ಅದೊಂದು ದೇಶದ ಆರೋಗ್ಯ ವ್ಯವಸ್ಥೆಯಲ್ಲಿ ಇದೊಂದು ಆಸ್ಪತ್ರೆ. ಅಲ್ಲಿಗೆ ಬರುವ ಆರೋಗ್ಯವಿರುವ, ಆರೋಗ್ಯವಿಲ್ಲದ ರೋಗಿಗಳು, ಸಿಬ್ಬಂದಿಗಳೆಲ್ಲ ಸರಕಾರಕ್ಕೆ ಕೇವಲ ಅಂಕಿ-ಅಂಶಗಳು. ಆ ಆಸ್ಪತ್ರೆಯಲ್ಲಿ ಅವನು ಒಂದು ವಿಭಾಗದ ಮುಖ್ಯಸ್ಥ. ಅವನ ಡಾಕ್ಟರಿಕೆಯ ಜೊತೆಗೆ ಕೈಕೆಳಗಿನ ವೈದ್ಯರ, ನರ್ಸಗಳ, ಕಾರಕೂನರ, ಆಯಾಗಳ ಕಿರಿಕಿರಿ ಸಹಿಸುವುದಲ್ಲದೇ, ಮೇಲಿನ ಅಧಿಕಾರಿಗಳ ಅಧಿಕಾರಿಕೆಯನ್ನೂ ಅನುಭವಿಸಬೇಕಿತ್ತು. ಅವನಿಗೆ ಡಾಕ್ಟರಿಕೆ ಮಾಡಲು ಸಮಯವಿತ್ತೋ; ಹೇಳಿಸಿಕೊಂಡು, ಪರಿಚಾರಿಕೆ ಮಾಡಿದ ಮೇಲೆ ಉತ್ಸಾಹ ಉಳಿದಿತ್ತೋ; ಆ ಭಗವಂತನೇ ಬಲ್ಲ! ಅವನ ಮ್ಯಾನೇಜರಿಕೆಗೆ ಸಹಾಯ ಮಾಡಲು ಅವಳು ಜೂನಿಯರ್ ವ್ಯವಸ್ಥಾಪಿಕೆ. ವಾರಕ್ಕೊಂದೆರಡು ಸಮಸ್ಯೆ ಹುಡುಕಿ, ಅದಕ್ಕೆ ಪರಿಹಾರದ ದಾರಿಯನ್ನು ಪತ್ತೆಹಚ್ಚುವುದು ತನ್ನ ಕರ್ತವ್ಯವೆಂದು ಅವಳು ಮನದಟ್ಟು ಮಾಡಿಕೊಂಡಂತಿತ್ತು. ಅವತ್ತು ಆಕೆ ಹೊಸ ಸಮಸ್ಯೆಯೊಂದನ್ನು ಪತ್ತೆ ಹಚ್ಚಿದ್ದಳು. ಕ್ಯಾನ್ಸರ್ ವಿಭಾಗದವರು ಕೊಡುವ ಮದ್ದೊಂದು ಮೂಳೆ ಸವಕಳಿ ಮಾಡಿ, ಮೂಳೆ ಮುರಿತದ ಸಾಧ್ಯತೆ ಜಾಸ್ತಿ ಮಾಡುತ್ತಿತ್ತು. ಆ ವ್ಯತಿರಿಕ್ತತೆಯ ಸಾಧ್ಯತೆ ಹಾಗೂ ಚಿಕಿತ್ಸೆಯ ಪರಿಣತಿ ಅವನ ವಿಭಾಗದ ಅತಿ ಚಿಕ್ಕ ವಿಶೇಷತೆಯಲ್ಲೊಂದು. ಅವನ ಸಹೋದ್ಯೋಗಿಯೊಬ್ಬ ಕೆಲಸಕ್ಕೆ ಸೇರಿದ ಹೊಸತರಲ್ಲಿ ಹುಮ್ಮಸ್ಸಿನಿಂದ ಕ್ಯಾನ್ಸರ್ ತಜ್ಞರಿಗೆ ಈ ವ್ಯತಿರಿಕ್ತತೆಯ ಮಾಹಿತಿ ನೀಡಿ, ಹಣಕಾಸಿನ ವ್ಯವಸ್ಥೆಯನ್ನು ಯೋಚಿಸದೇ ಮೂಳೆ ಸ್ಕ್ಯಾನಿಂಗ್ ಹಾಗೂ  ಚಿಕಿತ್ಸೆಯ ವ್ಯವಸ್ಥೆ ಮಾಡಿದ್ದ, ಮಾಡಿ ತನ್ನ ಪ್ರಭಾವಳಿಯನ್ನು ಹೆಚ್ಚಿಸಿಕೊಂಡಿದ್ದ. ಈಗ ಈ ಸೇವೆಯ ಬೇಡಿಕೆ ಮಿತಿಮೀರಿ, ವಿಭಾಗದ ಇತರ ಮುಖ್ಯ ಕಾರ್ಯಗಳಿಗೆ ಕುತ್ತು ತಂದಿತ್ತು. ಇದನ್ನು ಸರಿಯಾಗಿಸುವುದು ಹೇಗೆ ಎಂಬುದು ಅವಳ ಸಮಸ್ಯೆ.  ಹೊಸ ಸಿಬ್ಬಂದಿಯನ್ನು ನೇಮಿಸೋಣ ಎಂಬುದು ಅವನ ಪರಿಹಾರ. ಅದಕ್ಕೆ ಹಣವೆಲ್ಲಿ ಎಂಬುದು ಅವಳ ಪ್ರಶ್ನೆ. ಇದು ನಮ್ಮ ವಿಭಾಗದ ಮೂಲಭೂತ ಕರ್ತವ್ಯವಲ್ಲ, ಕೇವಲ ನಿನ್ನ ಸಹೋದ್ಯೋಗಿಯ ದತ್ತಿ ಕಾರ್ಯ. ನಿಮಗೆ ನಿಮ್ಮ ಮುಖ್ಯ ರೋಗಿಗಳ ಹೊಣೆ ತುಂಬಾ ಇದೆ, ಅದನ್ನು ಪೂರೈಸಲು ಸಮಯವೂ ಇಲ್ಲ, ಹೆಚ್ಚಿನ ಸಿಬ್ಬಂದಿಗಳನ್ನು ನೇಮಿಸಲು ಹಣವೂ ಇಲ್ಲ. ಕ್ಯಾನ್ಸರ್ ವಿಭಾಗ ಈ ಸೇವೆಗೆ ತಕ್ಕುದಾದ ಹಣವನ್ನು ಸಂದಾಯ ಮಾಡದೇ ನಾವು ಇದನ್ನು ಮುಂದುವರೆಸುವಂತಿಲ್ಲ ಎಂದು ತಾಕೀತು ಮಾಡಿದಳು.

ನಮಗೆ ಸ್ಕ್ಯಾನಿಂಗ್ ವಿಶ್ಲೇಷಣೆಯ ಪರಿಣತಿ ಇಲ್ಲ, ಮೂಳೆ ಸವಕಳಿ ತಡೆಯುವ ಮದ್ದಿನ ಬಗ್ಗೆ ಸರಿಯಾದ ಮಾಹಿತಿಯಿಲ್ಲ, ಜೊತೆಗೆ ನಮ್ಮಲ್ಲಿ ಕೂಡ ಸಂದಾಯ ಮಾಡಲು ಹಣವೂ ಇಲ್ಲ. ನೀವು ಈ ರೀತಿ ಸರಾಗವಾಗಿ ನಡೆದಿದ್ದ ಸೇವೆಯನ್ನು ಥಟ್ಟಂತ ತಡೆದರೆ, ರೋಗಿಗಳಿಗೆ ಹಾನಿಯಾದರೆ ಯಾರು ಹೊಣೆ ಎಂದು ಕ್ಯಾನ್ಸರ್ ನವರು ತಗಾದೆ ತೆಗೆದರು. ಈ ವಿಷಯದ ಪರಿಹಾರಕ್ಕಾಗಿ ಸಂಬಂಧಪಟ್ಟವರನ್ನು ಸೇರಿಸಿ ಮೀಟಿಂಗ್ ನಡೆಸಿದರು. ಆಗ, ಮೂಳೆ ಮುರಿತದ ತಡೆಗೆ ಬೇಕಾದ ಮದ್ದನ್ನು ಕ್ಯಾನ್ಸರ್ ತಜ್ಞರು ಬೇರೊಂದು ಕಾರಣಕ್ಕಾಗಿ ಉಪಯೋಗಿಸುತ್ತಾರೆಂದೂ, ಅದರ ಬಗ್ಗೆ ಅವರಿಗೆ ಬೇಕಾದ ಮಾಹಿತಿಯಿದೆ ಎಂದು ಅರಿವಾಯಿತು. ನೀವು ಮದ್ದಿನ ಬಗ್ಗೆ ಮಾಹಿತಿಯಿಲ್ಲ ಎಂದು ಬೇಕಂತಲೇ ಸುಳ್ಳು ಹೇಳಿದ್ದಿರಿ ಎಂದು ಜಟಾಪಟಿ ಆಯಿತು. ವಿಭಾಗಗಳ ನಡುವಿನ ಕಗ್ಗಂಟನ್ನು ಬಿಡಿಸಲು ಅವನು, ಅವನ ಸಹೋದ್ಯೋಗಿ ಹಾಗೂ ಕ್ಯಾನ್ಸರ್ ವಿಭಾಗದ ಮುಖ್ಯ್ಸತ ಸೇರಿ ಒಂದು ಮಾರ್ಗದರ್ಶಿಕೆಯನ್ನು ತಯಾರಿಸುವುದೆಂದು ನಿರ್ಧರಿಸಿದರು. ಅಂತೂ ಹಗ್ಗ ಜಗ್ಗಾಟ ನಿಂತು ಮಾರ್ಗದರ್ಶಿಕೆ ತಯಾರಾಗಲು ಆರು ತಿಂಗಳುಗಳಾದವು. ಅಷ್ಟರಲ್ಲಿ ಕ್ಯಾನ್ಸರ್ ಮುಖ್ಯಸ್ಥನಿಗೇ ಕ್ಯಾನ್ಸರ್ ಬಂದು ರಜದ ಮೇಲೆ ಹೋಗಿಬಿಟ್ಟ.

ಹೊಸ ಮಾರ್ಗದರ್ಶಿಕೆಯನ್ನು ಅನುಮೋದಿಸಿ ಜಾರಿಗೆ ತರಲು ಎಲ್ಲ ಕ್ಯಾನ್ಸರ್ ತಜ್ಞರನ್ನು ಒಟ್ಟುಗೂಡಿಸಿ ಇನ್ನೊಂದು ಸಭೆ ಕರೆಯಲಾಯಿತು. ಮಾರ್ಗದರ್ಶಿಕೆ ಕೇಂದ್ರದ ನಿಯಮಾವಳಿಗೆ ಅನುಸಾರವಾಗಿದ್ದು ನಮ್ಮ ರೋಗಿಗಳ ಸುರಕ್ಷತೆಗೆ ಅವಶ್ಯ. ಆದರೆ ತುಂಬಾ ಕ್ಲಿಷ್ಟವಾಗಿದೆ, ನಮ್ಮೊಂದಿಗೆ ಸಮಾಲೋಚಿಸದೇ ತಯಾರಿಸಲಾಗಿದೆ, ಇದನ್ನು ಅಳವಡಿಸಲು ನಮ್ಮಲ್ಲಿ ಸಮಯವಿಲ್ಲ ಎಂದು ಅವರೆಲ್ಲ ಗಲಾಟೆ ಮಾಡಿದರು. ಇನ್ನೇನು ಇದರ ರೂವಾರಿಯಾದ ಮುಖ್ಯಸ್ಥ ಕೆಲಸಕ್ಕೆ ವಾಪಸಾಗುತ್ತಾನೆ. ಅವನು ಬಂದ ಮೇಲೆ ಇದನ್ನು ಚರ್ಚಿಸೋಣ. ಅಲ್ಲಿಯವರೆಗೂ ಇಲ್ಲಿಯವರೆಗೂ ನಡೆದ ಹಾಗೇ ಮುಂದುವರೆಸೋಣ ಎಂದು ವರಾತ ಹಚ್ಚಿದರು. ನಮ್ಮ ತಜ್ಞರಿಗೆ ಈ ಸೇವೆಯನ್ನು ಮುಂದುವರಿಸಲು ಸಮಯವಿಲ್ಲ. ಅವರಿಗೆ ಇದಕ್ಕಿಂತಲೂ ಮುಖ್ಯವಾದ ಕೆಲಸಗಳಿವೆ. ಈ ಸೇವೆಗೆ ಹೆಚ್ಚಿನ ಸಿಬ್ಬಂದಿಯನ್ನು ನೇಮಿಸಬೇಕಾಗುತ್ತದೆ. “Show me the money” ಎಂದು ಜೂನಿಯರ್ ವ್ಯವಸ್ಥಾಪಕಿ “ಜೆರಿ ಮೆಗ್ವಾಯರ್” ಸಿನಿಮಾದಲ್ಲಿ ಕ್ಯೂಬಾ ಗೂಡಿಂಗ್ ಮಾಡಿದಂತೆ ಸೊಂಟ ಕುಣಿಸಿದಳು. ವಿಷಯವನ್ನೂ ನೆನೆಗುದಿಯಲ್ಲೇ ಇದೆ. ಆಗಾಗ ಮುಂಗೈಯನ್ನೋ, ಬೆನ್ನು ಮೂಳೆಯನ್ನೋ, ಸೊಂಟವನ್ನೋ ಮುರಿದುಕೊಂಡ ಕ್ಯಾನ್ಸರ್ ರೋಗಿಗಳು ಆಸ್ಪತ್ರೆಗೆ ಬರುತ್ತಿರುತ್ತಾರೆ. ಈ ವ್ಯತಿರಿಕ್ತ ಘಟನೆಗಳನ್ನು ಆಸ್ಪತ್ರೆಯ ಸಂಖ್ಯಾ ಶಾಸ್ತ್ರಜ್ಞ ದಾಖಲಿಸುತ್ತಿದ್ದಾನೆ.

  • ರಾಮ್