ಬೆಂಗಳೂರು ನಾಗರತ್ನಮ್ಮ – ರಾಮಮೂರ್ತಿ

ನಮಸ್ಕಾರ ಅನಿವಾಸಿಯ ಬಂಧುಗಳಿಗೆ.  ಶರಣ-ದಾಸ-ಸಂತರ ಸಾಹಿತ್ಯ ಸಂಗೀತದೊಂದಿಗೆ ಆರಂಭವಾಗಿ, ಇತ್ತೀಚೆಗೆ ನಮ್ಮನ್ನಗಲಿದ ಕವಿ ಎಚ್ಚೆಸ್ವಿ ಅವರಿಗೆ ಅರ್ಪಿಸಿದ ನುಡಿನಮನದ ಪುಷ್ಪಗಳ ಪಕ್ಕದಲ್ಲಿ ಹಾಯ್ದು ಬಂದ ನಮ್ಮನ್ನು ಸಂಗೀತದ ಒಬ್ಬ ಕಲಾವಿದೆಯ ಪರಿಚಯಕ್ಕೆ ಕರೆದೊಯ್ಯುತ್ತಿದ್ದಾರೆ, ನಮ್ಮ ಅನಿವಾಸಿ ಬಳಗದ ಇತಿಹಾಸಕಾರ (resident historian) ಶ್ರೀ ರಾಮಮೂರ್ತಿಯವರು. ಅವರಿದ್ದ ಕಾಲಮಾನದಲ್ಲಿ ಬದಲಾವಣೆ ತರಲು, ಒಬ್ಬ ಸಂಗೀತಗಾರ್ತಿಯಾಗಿ ಹೋರಾಡಿ, ಹಲವಾರು ವಿಷಯಗಳಲ್ಲಿ ಮೊದಲಿಗರಾದ ಬೆಂಗಳೂರು ನಾಗರತ್ನಮ್ಮನವರ ಬಗ್ಗೆ ನೋಡೋಣ ಬನ್ನಿ. ಎಂದಿನಂತೆ ಓದಿ ನಿಮ್ಮ ಅಭಿಪ್ರಾಯ ತಿಳಿಸುವುದು. ಧನ್ಯವಾದಗಳೊಂದಿಗೆ - ಲಕ್ಷ್ಮೀನಾರಾಯಣ ಗುಡೂರ್ (ಸಂ.) 
******************************
******************************
ಬೆಂಗಳೂರು ನಾಗರತ್ನಮ್ಮನ ಹೆಸರು ನಿಮಗೆ ಪರಿಚಯ ಇಲ್ಲದಿರಬಹುದು. ಆದರೆ  ಹತ್ತೊಂಬತ್ತನೇ ಶತಮಾನದಲ್ಲಿ ಒಬ್ಬ ದೇವದಾಸಿಯ ಮಗಳಾಗಿ ಬೆಳದು  ಶಾಸ್ತ್ರೀಯ ಸಂಗೀತದಲ್ಲಿ ಹೆಸರು ಮಾಡಿ, ತಿರುವಾಯೂರಿನಲ್ಲಿ ನಡೆಯುವ ಪ್ರಸಿದ್ಧ ತ್ಯಾಗರಾಜ ಆರಾಧನೆಯಲ್ಲಿ ಮಹಿಳಾ ಸಂಗೀತಗಾರರು ಮೊಟ್ಟಮೊದಲಿಗೆ ಭಾಗವಹಿಸುವಂತೆ ಹೋರಾಡಿದವಳು ಈ ಕನ್ನಡತಿ. ಕಾವೇರಿ ನದಿ ದಡದಲ್ಲಿ ತ್ಯಾಗರಾಜರ ಸಮಾಧಿಯ ಮಂಟಪವನ್ನು ಸ್ವಂತ ಖರ್ಚಿನಲ್ಲಿ ಕಟ್ಟಿಸಿದ್ದೇ  ಈಕೆ.  ಗ್ರಾಮೋಫೋನ್  ಆಗ ತಾನೇ , ಅಂದರೆ ೧೯೦೦ ರಲ್ಲಿ , ಬಂದಾಗ ತನ್ನ  ಧ್ವನಿಯನ್ನು ರೆಕಾರ್ಡ್ ಮಾಡಿದ ಆರಂಭಿಕರಲ್ಲಿ ಒಬ್ಬಳು.  

೧೮೭೮ ರ ನವಂಬರ್ ೩ ರಂದು ನಂಜನಗೂಡಿನಲ್ಲಿ ಜನನ; ತಾಯಿ ಪುಟ್ಟ ಲಕ್ಷ್ಮಿ. ಪ್ರಾರಂಭದಲ್ಲಿ ಇವರ ಪೋಷಕ ವಕೀಲ್ ಸುಬ್ಬರಾಯರು. ಆದರೆ, ಬೆಳಸಿದ್ದು ತಾಯಿ ಪುಟ್ಟ ಲಕ್ಷ್ಮಿ. ನಂತರ ಮೈಸೂರಿನಲ್ಲಿ ನೆಲಸಿ ಮೈಸೂರು ಅರಮನೆಯ ಒಬ್ಬ ವಿದ್ವಾಂಸರಿಂದ ಕನ್ನಡ ಮತ್ತು ಸಂಸ್ಕೃತ ಅಧ್ಯಯನ ಕೆಲವು ವರ್ಷ ನಡೆಯಿತು. ಆದರೆ, ಈತ ದೇವದಾಸಿಯ ಮಗಳನ್ನು ಶಿಷ್ಯೆ ಆಗಿ ಮುಂದುವರಿಸಲು ಹಿಂಜರಿದರು, ಬಹುಶಃ ಸಮಾಜದ ಒತ್ತಡದಿಂದಿರಬಹುದು. ನಂತರ ನಾಗರತ್ನಮ್ಮನ ವಿದ್ಯಾಭ್ಯಾಸ ಅವಳ ಸೋದರ ಮಾವ "ಪಿಟೀಲು" ವೆಂಕಟಸ್ವಾಮಿ ಅವರಿಂದ ಮುಂದುವರೆಯಿತು. ನಂತರ, ತ್ಯಾಗರಾಜರ ಶಿಷ್ಯ ಪರಂಪರೆಯ (ಮೂರನೆಯ ಪೀಳಿಗೆ ) ಮುನಿಸ್ವಾಮಿ ಅವರಿಂದ ಸಂಗೀತ ಮತ್ತು ನೃತ್ಯ ಕಲಿಯಲು ಪ್ರಾರಂಭವಾಯಿತು.
ಹೆಸರಾಂತ ಮೈಸೂರು ಆಸ್ಥಾನ ವಿದ್ವಾನ್ ಬಿಡಾರಂ ಕೃಷ್ಣಪ್ಪನವರು ಇವಳ ಪ್ರತಿಭೆಗೆ ಮೆಚ್ಚಿ ನಾಗರತಮ್ಮನನ್ನು ತಮ್ಮ ಶಿಷ್ಯ ವರ್ಗಕ್ಕೆ ಸೇರಿಸಿಕೊಂಡರು. ಇವಳ ಹದಿನೈದನೇ ವಯಸ್ಸಿನಲ್ಲಿ ಮೊದಲ ಕಚೇರಿ (Public Performance ) ಕೊಟ್ಟಾಗ ಮೈಸೂರು ಪ್ರಜೆಗಳಲ್ಲದೆ, ಅಂದಿನ ಮಹಾರಾಜರು ಚಾಮರಾಜ ಒಡೆಯರಿಂದಲೂ ಸಹ ಮೆಚ್ಚುಗೆ ಪಡೆದಳು. ಕೆಲವು ವರ್ಷಗಳ ನಂತರ ಆಸ್ತಾನ ವಿದುಷಿ ಅನ್ನುವ ಮನ್ನಣೆ ಸಹ ಬಂತು. ಈ ಗೌರವ ಪಡೆಯುವುದಕ್ಕೆ ಈಕೆಯೇ ಮೊದಲನೆಯ ಮಹಿಳೆ.
ನಂತರ, ಮೈಸೂರಿನಲ್ಲಿ ಆಗ ಸಾಕಷ್ಟು ಅವಕಾಶಗಳು ಇಲ್ಲದಿರುವ ಕಾರಣದಿಂದ ನಾಗರತ್ನಮ್ಮ ಬೆಂಗಳೂರಿನಲ್ಲಿ ಮನೆ ಮಾಡಿದಳು. ಇಲ್ಲಿ ಅವಳ ಪ್ರತಿಭೆ ಬೇಗ ಹರಡಿ ಅನೇಕ ಗಣ್ಯ ವ್ಯಕ್ತಿಗಳ ಪರಿಚಯವಾಯಿತು. ಮುಖ್ಯವಾಗಿ, ಡಿ ವಿ ಗುಂಡಪ್ಪ , ಜಸ್ಟಿಸ್ ಚಂದ್ರಶೇಖರ್ ಐಯ್ಯರ್ ಮುಂತಾದವರು. ಡಿ ವಿ ಜಿ ಅವರ "ಜ್ಞಾಪಕ ಚಿತ್ರಶಾಲೆ"ಯಲ್ಲಿ ಇವಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ೧೯೦೮/೯ ರಲ್ಲಿ ಇವರು ಚಿಕ್ಕಪೇಟೆಯಲ್ಲಿ ಸಹೂಜಿ ಅನ್ನುವರ ಮನೆಯಲ್ಲಿ ನಡೆಯುತ್ತಿದ್ದ ಸಂಗೀತ ಕಚೇರಿಗೆ ಹೋಗುತ್ತಿದ್ದರಂತೆ. ಇವರಿಬ್ಬರ ಸ್ನೇಹ ಬಹಳ ವರ್ಷ ಮುಂದುವರೆಯಿತು. ಇನ್ನೊಂದು ಸ್ವಾರಸ್ಯವಾದ ಸಂಗತಿ ಇಲ್ಲಿ ಹೇಳಬೇಕು. ನಾಗರತ್ನಮ್ಮನ ಅಭಿಮಾನಿಗಳಲ್ಲಿ ಹೈಕೋರ್ಟಿನ ಜಸ್ಟಿಸ್ ನರಹರಿ ರಾಯರೂ ಒಬ್ಬರಾಗಿದ್ದರು. ಆಗಾಗ್ಯೆ ಕೋರ್ಟ್ ಮುಗಿದ ಮೇಲೆ ತಮ್ಮ ಅಧಿಕೃತ ಗಾಡಿಯಲ್ಲಿ (Official Vehicle) ಚಿಕ್ಕಪೇಟೆಗೆ ಬಂದು ನಾಗರತ್ನಮ್ಮ ನ ಸಂಗೀತ ವನ್ನು ಕೇಳುತ್ತಿದ್ದರು. ನಂತರ ಸ್ನೇಹವೂ ಹೆಚ್ಚಾಯಿತು. ಈ ಸ್ನೇಹ ಮುಂದುವರೆದಾಗ ನರಹರಿ ರಾಯರು ತಮ್ಮ ಪತ್ನಿಯ ಮುಂದೆ ಇದರ ವಿಚಾರ ಹೇಳಿ ಅವರ ಅನುಮತಿ ಕೇಳಿದರಂತೆ. ಏನಾದರೂ ಆಕ್ಷೇಪಣೆ ಇದ್ದರೆ ನಾಗರತ್ನಮ್ಮನ ಸ್ನೇಹವನ್ನು ಮುಂದೆ ಬೆಳುಸುವುದಿಲ್ಲ ಅಂದರಂತೆ. ಪತ್ನಿಯಿಂದ ಅನುಮತಿ ಪಡೆದ ಮೇಲೆ ಇವರ ಸ್ನೇಹ ಇನ್ನೂ ಮುಂದೆವರಿಯಿತು. ಈ ಸಂಭಾಷಣೆಯ ವಿವರವನ್ನು ಡಿ.ವಿ.ಜಿ.ಬರೆದಿದ್ದಾರೆ.

ನಿಮಗೆ ಬೆಂಗಳೂರಿನ ಬಸವನಗುಡಿಯ ನರಹರಿ ಗುಡ್ಡ ಮತ್ತು Mount Joy ಹೆಸರು ಪರಿಚಿತ ಇದ್ದರೆ ಅದರ ಹಿನ್ನೆಲೆ ಇಲ್ಲಿದೆ. ನರಹರಿ ರಾಯರ ಗಾಡಿ ಆಗಾಗ್ಯೆ ಚಿಕ್ಕ ಪೇಟೆಯಲ್ಲಿ ಬಂದು ನಿಲ್ಲುತ್ತಿದ್ದುದು ಜನರಿಗೆ ಸಂಶಯ ಬಂದು ಅನೇಕ ವದಂತಿಗಳು ಶುರುವಾದವು. ಈ ವಿಚಾರ ಅಂದಿನ ದಿವಾನ್ ಶೇಷಾದ್ರಿ ಐಯ್ಯರ್ ಅವರ ಕಿವಿಗೆ ಬಿದ್ದಾಗ, ರಾಜ್ಯದ ಉನ್ನತ ಪದವಿಯಲ್ಲಿರುವ ಒಬ್ಬ ಹೈ ಕೋರ್ಟ್ ನ್ಯಾಯಾಧೀಶನಿಗೆ ಕೆಟ್ಟ ಹೆಸರು ಬರಬಾರದು ಅನ್ನುವ ಉದ್ದೇಶದಿಂದ ದಿವಾನರು, ಗುಟ್ಟಾಗಿ ನರಹರಿ ರಾಯರನ್ನು ಭೇಟಿಮಾಡಿ ಈ ವದಂತಿಗಳ ಬಗ್ಗೆ ಪ್ರಸ್ತಾಪಿಸಿದರಂತೆ. ನಂತರ ನರಹರಿರಾಯರು, ನಾಗರತ್ನಮ್ಮನ ಸಂಗೀತವನ್ನು ಖಾಸಗಿಯಾಗಿ (in private ) ಕೇಳುವುದಕ್ಕೆ ಒಂದು ಮನೆಯನ್ನು ಗುಡ್ಡದ ಮೇಲೆ ಕಟ್ಟಿ ಅದನ್ನು Mount Joy ಅಂತ ಹೆಸರಿಟ್ಟರು. ಈಗ ನರಹರಿ ಗುಡ್ಡ ಮತ್ತು ಇಲ್ಲಿಗೆ ಹೋಗುವ ರಸ್ತೆ, ಹಣಮಂತನಗರದಲ್ಲಿ, Mount Joy ರಸ್ತೆ.
ಶಾಸ್ತ್ರೀಯ ಸಂಗೀತಕ್ಕೆ ಬಹಳ ವರ್ಷಗಳಿಂದ ಈಗಿನ ಚೆನ್ನೈ (Madras) ನಲ್ಲಿ ಪ್ರಾಮುಖ್ಯತೆ ಇದೆ. ಈ ಕಾರಣದಿಂದ ನಾಗರತ್ನಮ್ಮ, ನರಹರಿರಾಯರ ಸಲಹೆಯ ಮೇಲೆ ಮದ್ರಾಸಿನಲ್ಲಿ ನೆಲಸುವುದಕ್ಕೆ ನಿರ್ಧಾರ ಮಾಡಿದಳು. ಅಲ್ಲಿ ಮೊದಲಿಯಾರ್ ಪಂಗಡದವರಿಂದ ಆಶ್ರಯ ಪಡೆದು ಬಹಳ ಬೇಗ ಒಬ್ಬ ಹೆಸರಾಂತ ಸಂಗೀತಗಾರಳಾದಳು. ೧೯೦೫ ರಿಂದ ಅಲ್ಲಿರುವ ಸಂಗೀತ ಸಭೆಗಳಲ್ಲಿ ಭಾಗವಹಿಸಿ ಯಶಸ್ಸನ್ನು ಕಂಡಳು. ಆ ಕಾಲದಲ್ಲೇ ವರಮಾನ ತೆರಿಗೆ (Income tax) ಕೊಡುವಷ್ಟು ಹಣ ಸಂಪಾದನೆ ಇತ್ತು. ಆಗಿನ ಕಾಲದಲ್ಲಿ , ದೇವದಾಸಿ ಪಂಗಡದಲ್ಲಿ ಇರಲಿ, ಯಾವುದೇ ಮಹಿಳೆಯರಲ್ಲಿ ಈ ತೆರಿಗೆ ಕೊಡುತ್ತಿದ್ದವರು ಬಹಳ ವಿರಳ. ನಾಗರತ್ನಮ್ಮ ಒಂದು ಭವ್ಯವಾದ ಮನೆಯನ್ನು ಕಟ್ಟಿ ಅದರ ಗೃಹ ಪ್ರವೇಶಕ್ಕೆ ಮೈಸೂರು ಬಿಡಾರಂ ಕೃಷ್ಣಪ್ಪನವರವನ್ನು ಆಹ್ವಾನಿಸಿದ್ದಳು. ಪುರಂದರ ದಾಸರ ದೇವರನಾಮಗಳನ್ನು ಮದ್ರಾಸಿನಲ್ಲಿ ಮೊದಲಿಗೆ ಕೇಳಿದ್ದು ಇವರಿಂದ ಎಂದು ಅನೇಕರು ಪ್ರಶಂಸಿದರು.

ತ್ಯಾಗರಾಜರ ಕೃತಿಗಳನ್ನು ಹಾಡುವುದು ಇವಳ ವಿಶೇಷತೆ ಆಗಿತ್ತು. ತ್ಯಾಗರಾಜರ ಸಮಾಧಿ ತಿರುವಾಯೂರಿನಲ್ಲಿ ನಿರ್ಲಕ್ಷ ಸ್ಥಿತಿಯಲ್ಲಿ ಇರುವ ವಿಷಯ ಅವಳ ಗುರು ಬಿಡಾರಂ ಕೃಷ್ಣಪ್ಪ ನವರಿಂದ ತಿಳಿಯುತು. ಅಲ್ಲಿಯವರೆಗೆ ಈ ಸಮಾದ್ಜಿ ಬಗ್ಗೆ ಏನೂ ಮಾಹಿತಿ ಇರಲಿಲ್ಲ. ಈಗ ಈ ಸಮಾಧಿಯನ್ನು ನವೀಕರಿಸುವುದನ್ನು ತನ್ನ ಜೀವನ ಧ್ಯೇಯವನ್ನಾಗಿಸಿಕೊಂಡಳು. ತಿರುವಾಯೂರಿಗೆ ಬಂದು ಸಮಾಧಿಯನ್ನು ಗುರುತಿಸಿ ಅಲ್ಲಿ ಒಂದು ಮಂದಿರವನ್ನು ಕಟ್ಟುವುದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿದಳು. ಮದ್ರಾಸಿನಲ್ಲಿದ್ದ ಮನೆ ಮತ್ತು ಬಳಿ ಇದ್ದ ಒಡವೆಗಳನ್ನು ಮಾರಿ ಬಂದ ಹಣದಿಂದ ಈ ಕಟ್ಟಡದ ನಿರ್ಮಾಣ ೨೭/೧೦/೧೯೨೧ ರಲ್ಲಿ ಪ್ರಾರಂಭವಾಗಿ ೭/೦೧/೧೯೨೫ ರಲ್ಲಿ ಪೂರ್ಣಗೊಂಡಿತು. ನಂತರ, ಅನೇಕರ ಸಹಾಯದಿಂದ, ತಿರುವಾಯೂರಿನಲ್ಲಿ ಮೈಸೂರು ಛತ್ರವನ್ನೂ ಕಟ್ಟಿದಳು.

೧೮೪೭ರಲ್ಲಿ ತ್ಯಾಗರಾಜರು ತೀರಿಹೋದ ಹಲವಾರು ವರ್ಷಗಳ ನಂತರ ಕೆಲವು ಸಂಗೀತಗಾರರು ಅಲ್ಲಿ ತ್ಯಾಗರಾಜರ ಕೀರ್ತನೆಗಳನ್ನು ಹಾಡುತ್ತಿದ್ದರು. ಆದರೆ ಮಹಿಳೆಯರಿಗೆ ಪ್ರವೇಶ ಇರಲಿಲ್ಲ. ಸ್ವಂತ ಖರ್ಚಿನಲ್ಲಿ ಮಂದಿರ ನಿರ್ಮಾಣ ಮಾಡಿದ ಮೇಲೂ ಸಹ ನಾಗರತ್ನಮ್ಮನಿಗೆ ಇವರ ಜೊತೆಯಲ್ಲಿ ಹಾಡುವುದಕ್ಕೆ ಅವಕಾಶ ಸಿಗಲಿಲ್ಲ. ನಂತರ ೧೯೨೭ ಜನವರಿ ತಿಂಗಳಲ್ಲಿ ಮಹಿಳೆಯರದ್ದೇ ಒಂದು ಗುಂಪು ಮಾಡಿಕೊಂಡು, ಇದರಲ್ಲಿ ಅನೇಕರು ದೇವದಾಸಿಯರು, ಮಂದಿರದ ಆವರಣದಲ್ಲಿ ತ್ಯಾಗರಾಜರ ಪಂಚರತ್ನ ಕೀರ್ತನೆಗಳನ್ನು ಹಾಡಲು ಪ್ರಾರಂಭಿಸಿದರು. ನಂತರ ಎರಡೂ ಪಂಗಡಗಳು ಸೇರಿ ಒಪ್ಪಂದಕ್ಕೆ ಬಂದು ಈ ಆರಾಧನೆ ಒಂದಾಗಿ, ಇಂದು ಈ ಆರಾಧನೆ ಉನ್ನತ ಮಟ್ಟಕ್ಕೆ ಏರಿದೆ. ನೂರಾರು ಪ್ರಸಿದ್ಧ ಗಾಯಕರು ಅಲ್ಲಿ ಸೇರಿ ಸಾವಿರಾರು ಪ್ರೇಕ್ಷಕರ ಮುಂದೆ ಪಂಚರತ್ನ ಕೀರ್ತನೆಗಳನ್ನು ಹಾಡುವುದನ್ನ ನೋಡುವುದು ಒಂದು ಅದ್ಭುತ ದೃಶ್ಯ. ತ್ಯಾಗರಾಜರ ಆರಾಧನೆ ಪ್ರತಿ ವರ್ಷ ಜನವರಿ ತಿಂಗಳಲ್ಲಿ ನಡೆಯುತ್ತದೆ.

ಹದಿನೆಂಟನೇ ಶತಮಾನದ ಒಬ್ಬ ದೇವದಾಸಿ ಪಂಗಡದ ತೆಲಗು ಕವಿ ಮುದ್ದುಪಲನಿ ( ೧೭೩೦-೧೭೯೦) ರಚಿಸಿದ "ರಾಧಿಕಾ ಸಂತ್ವನಂ" ನಾಗರತ್ನಮ್ಮನ ಗಮನಕ್ಕೆ ಬಂತು. ಇದರಲ್ಲಿ ರಾಧೆಯ ದೈಹಿಕ ಬಯಕೆಯ ಪ್ರಸ್ತಾವನೆ ಇತ್ತು. ಆದರೆ ೧೮೮೭ ರಲ್ಲಿ ಪ್ರಕಟಿಸಿದ ಭಾಷಾಂತರದಲ್ಲಿ "ರಸವತ್ತವಾದ" ವರ್ಣನೆಗಳನ್ನು ತೆಗೆದುಹಾಕಿದ್ದಲ್ಲದೇ, ಮುದ್ದುಪಲನಿ ಪ್ರತಾಪಸಿಂಹನ ಆಸ್ಥಾನದಲ್ಲಿ ಕವಿಯಾಗಿದ್ದಳು ಅನ್ನುವ ವಿಚಾರವನ್ನು ಸಹ ಬರೆದಿರಿಲಿಲ್ಲ. ಕಾರಣ ಬ್ರಿಟಿಷರ "Victorian Values" ಮತ್ತು "ಕೀಳು ದರ್ಜೆಯ" ದೇವದಾಸಿ ಬರೆದ ರಸವತ್ತಾದ ಕವಿತೆಗಳನ್ನು ಪ್ರಕಟಿಸುವುದು ಸಮಾಜದ ದೃಷ್ಟಿಯಲ್ಲಿ ಸರಿಯಲ್ಲ ಅನ್ನುವ ಊಹೆ ಕೆಲವರಿಗಿತ್ತು. ಉದಾಹರಣೆಗೆ ಇಂಗ್ಲೆಂಡ್ನಲ್ಲಿ ೧೯೨೮ರಲ್ಲಿ DH Lawrence ಬರೆದ Lady Chatterley's Lover ಪುಸ್ತಕ ನಿಷೇಧಿತವಾಗಿತ್ತು. ಎರಡು ಆವೃತ್ತಿಗಳನ್ನೂ ಓದಿ ನಾಗರತ್ನಮ್ಮನಿಗೆ ಅಸಮಾಧಾನವಾಗಿ ಮುದ್ದುಪಲನಿಯ ಮೂಲ ರಾಧಿಕಾ ಸಂತ್ವನಂ ಅನ್ನು ೧೯೧೦ ರಲ್ಲಿ Ramaswamy & Sons ಎಂಬ ಪ್ರಕಾಶಕರಿಂದ ಪ್ರಕಟಣೆ ಮಾಡಿಸಿದಳು. ಆದರೆ ಅನೇಕ ಸಂಪ್ರದಾಯವಾದಿ ವಿದ್ವಾಂಸರು ಇದನ್ನು ಪ್ರತಿಭಟಿಸಿ, ಮುದ್ದುಪಲನಿ ಒಬ್ಬ ವೈಶ್ಯೆ, ಅಂತಹ ಕೀಳು ದರ್ಜೆಯ ಮಹಿಳೆ ಬರೆದಿರುವುದನ್ನು ಜನರು ಓದಬಾರದು ಎಂದು ಹೇಳಿ ಸರ್ಕಾರ ಇದನ್ನು ಬಹಿಷ್ಕಾರ ಮಾಡಬೇಕು ಅನ್ನುವ ಒತ್ತಡ ತಂದರು. ನಾಗರತ್ನಮ್ಮ ಮತ್ತು ದೇವದಾಸಿ ಪಂಗಡದವರು ಒಬ್ಬ ದೇವದಾಸಿ ಮಹಿಳೆ ಇದನ್ನು ಬರೆದ್ದರಿಂದ ಪ್ರತಿಭಟನೆ ಮಾಡುತ್ತೀರ ಎಂದು ವಾದಿಸಿದರು. ಆದರೆ ಸರ್ಕಾರ ಇದನ್ನು ಒಪ್ಪಲಿಲ್ಲ. ೧೯೧೧ ರಲ್ಲಿ ಪೊಲೀಸ್ ಅಧಿಕಾರಿಗಳು, ಐಪಿಸಿ ೨೯೨ ಕಾನೂನಿನ ಪ್ರಕಾರ ಈ ಪುಸ್ತಕದ ವ್ಯಾಪಾರ ನಿಲ್ಲಿಸುವುದಕ್ಕೆ ಆಜ್ಞೆ ಮಾಡಿ ಮಾರಾಟಕ್ಕಿದ್ದ ಪುಸ್ತಕಗಳನ್ನು ವಶ ಮಾಡಿಕೊಂಡರು. ೧೯೪೭ರ ನಂತರ ಈ ಪುಸ್ತಕ ನಿಷೇಧವನ್ನು ರದ್ದು ಮಾಡಲಾಯಿತು.

ಇಪ್ಪತ್ತನೇ ಶತಮಾನದ ಮೊದಲಿನಲ್ಲಿ ಅಂದಿನ ಬ್ರಿಟಿಷ್ ಸರ್ಕಾರ ಮತ್ತು ಕೆಲವು ಹಿಂದು ಪಂಗಡದವರಿಂದ ದೇವದಾಸಿಯರು ವೇಶ್ಯೆಯರು, ಇವರಿಂದ ಸಮಾಜಕ್ಕೆ ಹಾನಿ ಎಂದು ಇವರ ಪದ್ದತಿಗಳನ್ನು ನಿಲ್ಲಿಸಬೇಕೆಂದು ಪ್ರಯತ್ನ ಪಟ್ಟರು. ನಾಗರತ್ನಮ್ಮ ಇದನ್ನು ಪ್ರತಿಭಟಿಸಿ ತಮ್ಮದೇ ಸಂಘವನ್ನು (Union )ಕಟ್ಟಿ ಅದರ ಅಧ್ಯಕ್ಸಳಾಗಿ ಅವರ ಹಕ್ಕುಗಳಿಗಾಗಿ ಹೋರಾಡಿದಳು.
೧೯೨೭ರಲ್ಲಿ ತಮ್ಮ ಹಕ್ಕುಗಳನ್ನು ಕಾಪಾಡುವುದಕ್ಕೆ ಇಂಗ್ಲಿಷ್ ನಲ್ಲಿ ಬರೆದ "A Humble Memorandum of Devadasis" ಅನ್ನುವ ಪತ್ರವನ್ನು ಸರ್ಕಾರಕ್ಕೆ ಕೊಟ್ಟು ತನ್ನ ಪಂಗಡದವರ ಮಾನವ ಹಕ್ಕುಗಳನ್ನು ( Human Rights ) ಕಾಪಾಡಿ ಎಂದು ಮನವಿ ಮಾಡಿಕೊಂಡಳು.
ಅವಳ ಕೊನೆಕಾಲದಲ್ಲಿ ಡಿ.ವಿ.ಜಿ. ಇವಳನ್ನು ಭೇಟಿಮಾಡಿ ಆರೋಗ್ಯವನ್ನು ವಿಚಾರಿಸಿದರು. ಈ ಸಂಭಾಷಣೆಯನ್ನು ಡಿ.ವಿ.ಜಿ. ಹೀಗೆ ಬರೆದಿದ್ದಾರೆ:
"ನಾನು ಹುಟ್ಟಿದಾಗ ನಾಗರತ್ನ, ನಂತರ ಭೋಗರತ್ನ ಆದರೆ ಈಗ ರೋಗರತ್ನ" ಅಂತ ನಾಗರತ್ನಮ್ಮ ಹೇಳಿದ್ದಕ್ಕೆ, ಡಿ.ವಿ.ಜಿ. ಹೇಳಿದರಂತೆ - "ನೀನು ಇನ್ನೆರಡು ರತ್ನಗಳನ್ನು ಮರೆತೆ; ಒಂದು ರಾಗರತ್ನ ಮತ್ತು ತ್ಯಾಗರತ್ನ"
ಇದನ್ನು ಯಾರಿಗೂ ಹೇಳಬೇಡಿ ಅಂದಳಂತೆ ನಾಗರತ್ನಮ್ಮ!
ಈಕೆ ಒಬ್ಬ ಮಹಿಳೆಯರ ಹಕ್ಕುಗಳಿಗೆ ಹೋರಾಡಿದ ಮತ್ತು ಸಮಾಜದಲ್ಲಿ ಎಲ್ಲರಿಗೂ ಸಮಾನ ಹಕ್ಕುಗಳಿವೆ ಎಂದನ್ನು ಪ್ರತಿಪಾದಿಸಿದ ಕನ್ನಡತಿ ಮತ್ತು ಕ್ರಾಂತಿಕಾರಿಣಿ.
ನಾಗರತ್ನಮ್ಮ ೧೯/೫/೧೯೫೨ ರಂದು ತನ್ನ ೭೩ರನೇ ವಯಸ್ಸಿನಲ್ಲಿ ತಿರುವಾಯೂರಿನಲ್ಲಿ ನಿಧನಳಾದಳು. ತ್ಯಾಗರಾಜರ ಸಮಾಧಿ ಪಕ್ಕದಲ್ಲೇ ಇವಳ ಸ್ಮಾರಕವನ್ನು ನಿರ್ಮಿಸಲಾಗಿದೆ.

ಈಕೆಯ ಜೀವನ ಚರಿತ್ರೆ ಬಗ್ಗೆ ಬೆಂಗಳೂರಿನ ರಂಗಶಂಕರದಲ್ಲಿ ನಾಗಾಭರಣರ ನಿರ್ದೇಶದಲ್ಲಿ ಒಂದು ನಾಟಕ ಪ್ರದರ್ಶನ ನಡೆಯಿಲಿದೆ.
ರಾಮಮೂರ್ತಿ
ಕಾಂಗಲ್ಟನ್ , ಚೆಶೈರ್
******************************
******************************