
ಬಿ ಎಂ ಶ್ರೀಯವರು ಬರೆದ ‘ಪದುಮ’
ಅರಸಿನ ಕುಲವೋ, ಏನಿದ್ದೇನು!
ಸುರವಧುರೂಪೋ, ಏನಿದ್ದೇನು!
ಗುಣವೋ, ಸೊಬಗೋ, ಏನಿದ್ದೇನು!
ಪದುಮಾ, ಇದ್ದವು ನಿನಗೆಲ್ಲ.
ಪದುಮಾ, ಎಚ್ಚತ್ತಳುವುದೆ ಅಲ್ಲದೆ
ಕಣ್ಣಿವು ನಿನ್ನನ್ನು ಕಾಣುವುವೆ?
ನೆನಸಿ ಕೊಳ್ಳುವೆ, ಬಿಸುಸುಯ್ಯುವೆ, ಇರುಳನು
ನಿನಗೆಯೆ ಮೀಸಲು ತೆಗೆದಿಡುವೆ.
ಇದು ’ಕನ್ನಡದ ಕಣ್ವ’ ಬಿ ಎಂ ಶ್ರೀಕಂಠಯ್ಯನವರ ಎಂಟೇ ಸಾಲಿನ ಪದ್ಯ ’ಪದುಮ’. ಇದೊಂದು ಚರಮ ಗೀತ. ಆದರೂ ಅದರ ಸೌಂಧರ್ಯವೇನೂ ಕಡಿಮೆಯಿಲ್ಲ.ಅದರ ರಚನೆ, ಛಂದಸ್ಸು, ಲಯಗಳು ಕವಿಯ ಉದ್ವಿಗ್ನತೆಯನ್ನು ಚೆನ್ನಾಗಿ ಪ್ರತಿಬಿಂಬಿಸುತ್ತವೆ. ’ಇಂಗ್ಲಿಷ್ ಗೀತಗಳು’1926ರಲ್ಲಿ ಮೊದಲು ಪ್ರಕಟವಾದರೂ, ಈ ಕವನ ಸಂಕಲನದ 1952ರ ಆವೃತ್ತಿಯಲ್ಲಿ ಪ್ರಸ್ತಾವನೆಯಲ್ಲಿ ತೀ ನಂ ಶ್ರೀಕಂಠಯ್ಯನವರು ಹೀಗೆ ಹೇಳುತ್ತಾರೆ: “ಹೊಸ ಕವಿತೆಗೆ ಒಳ್ಳೆಯ ಮೇಲ್ಪಂಕ್ತಿಯನ್ನು ಇಂಗ್ಲಿಷ್ ಗೀತಗಳಲ್ಲಿ ಅವರು ಹಾಕಿ ಕೊಟ್ಟರು”. ಈ ಕವಿತೆ ಅದಕ್ಕೆ ಒಂದು ಉದಾಹರಣೆ. ಅನುವಾದವೇ ಆದರೂ ಸ್ವಂತ ರಚನೆಯೆನ್ನುವಂತೆ ನಿಲ್ಲುವಷ್ಟು ಸತ್ವ ಇದರಲ್ಲಿದೆ.