
ಯೋಗಿಂದ್ರ ಮರವಂತೆಯವರಿಗೆ ಪರಿಚಯ ಬೇಕಿಲ್ಲ. ಕನ್ನಡದಲ್ಲಿ ಹೆಸರು ಮಾಡಿದ, ಪುರಸ್ಕೃತರಾದ ಪ್ರಬಂಧಕಾರ. ದೈನಿಕಗಳಲ್ಲಿ , ಅಂತರ್ಜಾಲ ಪತ್ರಿಕೆಗಳಲ್ಲಿ ಅವರ ಅಂಕಣಗಳು ಪ್ರಕಟಗೊಂಡಿವೆ . ಅಂಕಣಗಳನ್ನು, ಪ್ರಬಂಧಗಳನ್ನು ಪುಸ್ತಕವಾಗಿಯೂ ಪ್ರಕಟಿಸಿದ್ದಾರೆ. ಸಾಮಾನ್ಯವಾದ ವಿಷಯಗಳಿಗೆ ಮೂರ್ತ ರೂಪ ಕೊಡುವುದು ಅವರ ವಿಶಿಷ್ಟತೆ. ಇದನ್ನು ಅವರ “ಏರೋ ಪುರಾಣ” ಪುಸ್ತಕದ ಹಲವಾರು ಬರಹಗಳಲ್ಲಿ, ಬಹುಮಾನಿತ “ಕಿಟಕಿಗಳು” ಪ್ರಬಂಧದಲ್ಲಿ ಕಾಣಬಹುದು. ಬಹಳ ಕಾಲದ ನಂತರ ಅನಿವಾಸಿಗೆ ಮತ್ತೆ ಹೊಸ ಬರಹವನ್ನು ಈ ವಾರ ಕೊಟ್ಟಿದ್ದಾರೆ. ಅವರ ಬರಹದ ಲಾಲಿತ್ಯ, ಈ ಪ್ರಬಂಧದಲ್ಲಿ ಸೊಗಸಾಗಿ ಪ್ರದರ್ಶಿತವಾಗಿದೆ. ಅಮೂರ್ತವಾದ ‘ಕನಸು’ ರಾತ್ರಿ ಪಾಳಿಯ ಚಾಲಕನಾಗುತ್ತದೆ; ರಸ್ತೆಗಳಲ್ಲಿ ತಿರುಗುವ ಬೀಡಾಡಿ ಪ್ರಾಣಿಗಳು, ಬೇಕಾ ಬಿಟ್ಟಿ ಗಾಡಿ ಓಡಿಸುವವರು, ಯಾನವನ್ನು ಧ್ವಂಸ ಮಾಡುವವರಾಗುತ್ತಾರೆ. ಕತ್ತಲೆಯ ಹಾದಿಯಲ್ಲಿ ನಿಮ್ಮನ್ನು ನಡೆಸುತ್ತ, ಓಡಿಸುತ್ತ ಲೌಕಿಕ, ತಾತ್ವಿಕ, ಆಧ್ಯಾತ್ಮಿಕ ವಿಚಾರಗಳನ್ನೆಲ್ಲ ತಡಕಿ ಅಚ್ಚುಕಟ್ಟಾಗಿ ನಿಮ್ಮ ಮುಂದೆ ರಾತ್ರಿ ಪಾಳಿಯ ಚಾಲಕರ ವಿವಿಧ ಮುಖಗಳನ್ನು ಅನಾವರಣಗೊಳಿಸಿದ್ದಾರೆ.
“ಕನಸೆಂದರೆ ನಿದ್ರೆಯಲ್ಲಿ ನೋಡುವಂತಹದ್ದಲ್ಲ ; ನಿದ್ರೆ ಮಾಡಲು ಬಿಡದ್ದು” ಎನ್ನುತ್ತ ನಿದ್ದೆಗೆಡಿಸಿದವರು ಅಬ್ದುಲ್ ಕಲಾಂ. ಇದು ಸೊಂಪಾದ ನಿದ್ದೆಯ ನಡುವಿನ ಸುಸ್ವಪ್ನವಲ್ಲ. ಬೆವರಿ ಬೆಚ್ಚುವ ದುಸ್ವಪ್ನವೂ ಅಲ್ಲ. ಒಡಲಿನೊಳಗೆ ಸಣ್ಣದಾಗಿ ಹುಟ್ಟಿ ನಿತ್ಯವೂ ಬೇರೆಬೇರೆ ಆಕಾರ ತಾಳಿ ದೊಡ್ಡದಾಗಿ ಜ್ವಲಿಸಿ, ಮೈಮನಗಳನ್ನು ವ್ಯಾಪಿಸಿ ಮುನ್ನಡೆಸುವ ಸ್ವಯಂಸ್ಫೂರ್ತಿ. ನೆಲೆ ಮುಟ್ಟದ ತನಕ ನಿಲ್ಲದ ನಡಿಗೆ, ಯಾವುದೊ ಲಕ್ಷ್ಯದ ಕಡೆಗಿನ ಅವಿರತ ನಿರಂತರ ಓಟ. ಕನಸಿನ ಒಂದು ವ್ಯಾಖ್ಯಾನ ಹೀಗಾದರೆ, ಕಾವ್ಯ ಸಾಹಿತ್ಯಗಳು ಕನಸನ್ನು ಕೆಲವೊಮ್ಮೆ ಬರೇ ಕನಸೆಂದು ಕರೆಯಲು ಬಯಸಬಹುದು. ನಿದ್ದೆಯನ್ನು ಕನಸೆಂದೋ, ಕನಸನ್ನು ನಿದ್ದೆಯೆಂದೋ ಅಥವಾ ಬದುಕನ್ನೇ ಕನಸು ಎಂದೋ ಕಲ್ಪಿಸಲು ಪ್ರೇರೇಪಿಸಬಹುದು. ಕನಸೇ ಬದುಕಾಗುವುದರ ಬಗ್ಗೆ ಎಚ್ಚರಿಸಬಹುದು. ಕನಸಿನ ರಮ್ಯತೆಯನ್ನು ನಿಗೂಢತೆಯನ್ನು ಅಲ್ಲದಿದ್ದರೆ ವಿಹ್ವಲತೆಯನ್ನೂ ಶಬ್ದಚಿತ್ರವಾಗಿ ವರ್ಣಿಸಬಹುದು. ಒಳ್ಳೆಯ ಕನಸು, ಕೆಟ್ಟ ಕನಸು ಎಂದು ಕರೆಯಲು ಅಲ್ಲದಿದ್ದರೆ ಮರೆಯಲು ಹೇಳಿಕೊಟ್ಟಿರಬಹುದು. ಅದು ಕಾವ್ಯದ ದೃಷ್ಟಿ, ಕವಿ ಕಲಾವಿದರ ಕಲ್ಪನೆಯ ಸೃಷ್ಟಿ. ಆದರೆ ಕಲಾಂರು ಹೇಳಿದ್ದು ಕನಸಿನ ಬೆನ್ನು ಹಿಡಿದವರು ನಿದ್ರಿಸುವುದಿಲ್ಲ ಎಂದು. ಇದು ನಿದ್ದೆ ಮಾಡಗೊಡದ ಒಂದು ಬಗೆಯ ಕನಸು. ಗುರಿ ತಲುಪುವ ತನಕ ವಿರಮಿಸಲಾಗದ ವ್ಯಸನ, ನಿದ್ರೆಯೊಳಗಿನ ಎಚ್ಚರ.
ಒಬ್ಬರ ನಿದ್ರೆಯೊಳಗಿನ ಎಚ್ಚರ ಆಸುಪಾಸಿನಲ್ಲಿರುವವರ ನಿದ್ದೆಗೆಡಿಸುವುದೂ ಇದೆ; ರಾತ್ರಿ ಮನೆಯನ್ನು ಮುರಿಯುವ ಕಳ್ಳರಿಗೂ ಒಂದು ಎಚ್ಚರ ಇರುತ್ತದೆ. ಮಲಗಬೇಕಾದವರು ಮಲಗುವುದನ್ನೇ ಕಾದು ತಮಗೆ ಬೇಕಾದ ಕೆಲಸ ಮುಗಿಸಿಕೊಳ್ಳುವ ಎಚ್ಚರ ಅದು. ಅಪರಾಧ ಜಗತ್ತಿನಲ್ಲಿ ಇಂತಹ ಸಂಚಿನ ಎಚ್ಚರಗಳು ಸಾಮಾನ್ಯ. ಇನ್ನು ತಮ್ಮ ಮನೆಗೆ ಹಾಗಾಗಬಹುದೆನ್ನುವ ಊಹೆ ಇರುವವರಿಗೆ ಬೀಳಬಹುದಾದ ಕನ್ನ ಅಥವಾ ಸದ್ಯದಲ್ಲೇ ಎರಗಬಹುದಾದ ಆಪತ್ತು, ತಳಮಳವಾಗಿ ಆಂತರಿಕ ಎಚ್ಚರವನ್ನು ಹುಟ್ಟಿಸುವುದಿದೆ. ಇವಕ್ಕೆಲ್ಲ ವ್ಯತಿರಿಕ್ತವಾಗಿ ಯಾರದೋ ನಿದ್ದೆಯೊಳಗಿನ ಎಚ್ಚರ ಇನ್ಯಾರದೋ ಸುಖನಿದ್ರೆಗೂ ಕಾರಣ ಆಗಬಹುದು. ನಿತ್ಯ ದಿನಚರಿಯಲ್ಲಿ ಬಳಕೆಯಾಗುವ ಉಪಯುಕ್ತವಾಗುವ ಎಷ್ಟೋ ವಿಷಯ ವಸ್ತುಗಳು ಗೊತ್ತಿರುವವರೋ ಗೊತ್ತಿಲ್ಲದವರೋ ನಿದ್ದೆಬಿಟ್ಟು ದುಡಿದು, ದಣಿದು ನೀಡಿದ ಕೊಡುಗೆಯಾಗಿರಬಹುದು. ತಾವು ನಿದ್ದೆ ಬಿಟ್ಟು ಸುತ್ತಮುತ್ತಲಿನವರ ಎಚ್ಚರ ಕಾಯುವವರು ಮನೆಮನೆಯಲ್ಲೂ ಇರುತ್ತಾರೆ. ಆ ಮನೆಗೆ ಬೇಕಾಗಿ ಬಹಳವಾಗಿ ದುಡಿದು ಹಿತ ಕಾಯವವರು. ಇನ್ನು ಮನೆಯನ್ನು ಮೀರಿ ಊರು ಸಮಾಜಕ್ಕೆ ಕೊಡುಗೆ ನೀಡುವವರೂ ಇರುತ್ತಾರಲ್ಲ. ಬಹಳ ವಿಶೇಷವಾದನ್ನು ಸಾಧಿಸಿ ಪ್ರಸಿದ್ಧರಾದವರು ಇತಿಹಾಸದಲ್ಲಿ ವರ್ತನಮಾನದಲ್ಲಿ ದಾಖಲಾಗುತ್ತಾರೆ. ಅವರು ಕಲಾಂರಂತಹ ವಿಜ್ಞಾನಿಗಳೂ ಇರಬಹುದು. ದೊಡ್ಡ ಜನಸಮುದಾಯಕ್ಕೋ ಜಗತ್ತಿಗೋ ನೆರವಾಗುವ ಸಂಶೋಧಕರು ಅನ್ವೇಷಕರು ಇರಬಹುದು. ಸಾಹಿತಿ, ಕ್ರೀಡಾಪಟು, ಸಮಾಜಸೇವಕ, ಸೃಜನಶೀಲ ಕಲಾವಿದ ಹೀಗೆ. ಅವರು ಕಣ್ಣಿಗೆ ಕಾಣದ ದೂರದ ಅನಾಮಿಕ ಸಾಧಕರು ಆಗಿರಬಹುದು. ಅಷ್ಟು ದೊಡ್ಡ ಲೋಕದ ಸುದ್ದಿ ಬೇಡ ಅಂತಾದರೆ ಹತ್ತಿರದಲ್ಲೇ ಸಣ್ಣ ಚಾಕರಿ ಸಣ್ಣ ಸೇವೆಯಲ್ಲಿ ತೊಡಗಿದ ಮೌನವಾಗಿರುವ ದನಿಯೇ ಇಲ್ಲದ ವಿನಮ್ರ ಸೇವಕರೂ ಇರಬಹುದು. ಅವರು ಯಾರೇ ಇದ್ದರೂ ಅವರೆಲ್ಲರಿಗೂ ಸಾಮಾನ್ಯವಾದುದು ನಿದ್ದೆಯೊಳಗಿನ ಎಚ್ಚರ.
ಕತ್ತಲಲ್ಲಿ ಕಂಡ ಕನಸು ಬೆಳಕು ನೀಡಿದ ಸಣ್ಣ ಮಟ್ಟದ, ದೊಡ್ಡ ಪ್ರಮಾಣದ ಉದಾಹರಣೆಗಳು ಎಷ್ಟಿಲ್ಲ? ಇವರೆನ್ನೆಲ್ಲ ನಾನು ಕರೆಯುವುದು ರಾತ್ರಿ ಪಾಳಿಯ ಚಾಲಕರೆಂದು; ತಾವು ಎಚ್ಚರವಿದ್ದು ಪ್ರಯಾಣಿಕರಿಗೆ ನಿದ್ರೆಯ ಜೊಂಪು ಹತ್ತಿಸಿ, ಅವರು ಕಣ್ಣು ಬಿಡುವಾಗ ಇನ್ನೊಂದು ಊರಿಗೆ ತಲುಪಿಸುವವರೆಂದು. ಯಾತ್ರಿಕರನ್ನು ಗುರಿ ತಲುಪಿಸುವುದರಲ್ಲೇ ತೃಪ್ತಿ ಕಂಡುಕೊಳ್ಳುವವವರು. ನಾವೆಲ್ಲರೂ ಇಂತಹ ರಾತ್ರಿ ಪಾಳಿಯ ಚಾಲಕರ ಸಹವಾಸ ಅನುಭವ ಪಡೆದವರೇ.
ಭಾವಾರ್ಥದಲ್ಲೂ, ಶಬ್ದಾರ್ಥದಲ್ಲೂ ರಾತ್ರಿ ಪ್ರಯಾಣದ ಚಾಲಕನೇ ಆದವನೊಡನಿನ ನನ್ನ ಒಂದು ಅನುಭವ ಇಂಜಿನೀಯರಿಂಗ್ ಓದಿನ ದಿನಗಳದ್ದು. ಪದವಿಯ ಕೊನೆಯ ವರ್ಷದಲ್ಲಿದ್ದಾಗ, ಉಷ್ಣ ವಿದ್ಯುತ್ ಸ್ಥಾವರದ ಶೈಕ್ಷಣಿಕ ಭೇಟಿಗೆ ನಾವು ಹೊರಟಿದ್ದೆವು. ನಾವೆಂದರೇನು ,ಆ ಕಾಲದ ಕರ್ನಾಟಕದ ಯಂತ್ರಶಾಸ್ತ್ರ ವಿಭಾಗದ ವಿದ್ಯಾರ್ಥಿಗಳ ಪದವಿ ಪೂರ್ಣಗೊಳ್ಳುವುದೇ ರಾಯಚೂರಿನ ಬಿಸಿಲಿನ ಝಳದಲ್ಲಿ ಒಂದೆರಡು ದಿನಗಳ ಕಾಲ ಬೆಂದು ಬೆವರಿ ನೀರಾದ ಮೇಲೆ. ನಮ್ಮ ಮಟ್ಟಿಗೆ ಆಗ ರಾಯಚೂರಿಗೆ ಪ್ರವೇಶವೇ ಉಷ್ಣ ಸ್ಥಾವರವನ್ನು ಹೊಕ್ಕಂತೆ ಇತ್ತು. ಬೆಂಗಳೂರಿನಿಂದ ರಾಯಚೂರಿನವರೆಗಿನದು ಇಡೀರಾತ್ರಿಯ ಪ್ರಯಾಣ. ಮೂರು ಖಾಸಗಿ ಬಸ್ಸುಗಳು ಕೇಕೆ ಹಾಕುವ ವಿದ್ಯಾರ್ಥಿಗಳ ಜೊತೆಗೆ ಪ್ರಾಧ್ಯಾಪಕರುನ್ನು ತುಂಬಿಸಿಕೊಂಡು ಹೊರಟಿದ್ದವು. ಒಂದರ ಹಿಂದೆ ಒಂದು. ಒಂದು ಇನ್ನೊಂದನ್ನು ಹಿಂದೆ ಹಾಕುವುದು , ಮುಂದೆ ಸಾಗುವ ಬಸ್ಸಿನಿಂದ ಹರ್ಷೋದ್ಗಾರ ಚಪ್ಪಾಳೆ ಶಿಳ್ಳೆಗಳು ರಸ್ತೆಯನ್ನು ತುಂಬುವುದು, ಕತ್ತಲೆಯನ್ನು ಅನಾಗರಿಕವಾಗಿ ಬಡಿದು ಎಬ್ಬಿಸುವುದು ನಡೆಯುತ್ತಲೇ ಇತ್ತು. ಈ ನಡುವೆ ನಮ್ಮ ಬಸ್ಸಿನ ಚಾಲಕನಿಗೆ ತೀರ ನಿದ್ದೆ ಬರುತ್ತಿತ್ತು. ಬಸ್ಸು ಪ್ರಯಾಣದಲ್ಲಿ ನನ್ನ ಸೀಟು ಎಲ್ಲೇ ಇದ್ದರೂ ರಾತ್ರಿ ಚಾಲಕನ ಕ್ಯಾಬಿನ್ ಒಳಗೆ ಹೋಗಿ ಹತ್ತಿರ ಕುಳಿತು ಮಾತನಾಡುವುದು ನನಗೆ ಇಷ್ಟ. ಇಂಜಿನ್ನಿನ ಕರ್ಕಶ ಸದ್ದು, ಮುಖಕ್ಕೆ ಬಡಿಯುವ ತಂಪು ಗಾಳಿ, ಗಿಯರ್ ಲಿವರ್ ನ ಅಲುಗಾಟ, ಎದುರಿನಿಂದ ಬರುವ ನಾಲ್ಕಾರು ಪ್ರಖರ ಕಣ್ಣುಗಳ ವಾಹನಗಳು, ನಡುವೆ ಹಿಂದೆಂದೂ ಭೇಟಿಯಾಗಿರದ ಮುಂದೆಯೂ ಆಗದ ನನ್ನ ಚಾಲಕನ ನಡುವಿನ ಸುಪ್ರೇಮ ಸಲ್ಲಾಪ. ಈ ಕೆಲಸ ಯಾವಾಗಿನಿಂದ ಎಂದು ಆರಂಭವಾಗುವ ಮಾತುಕತೆ, ಇವತ್ತಿನ ರೂಟ್, ಇದೆ ಹಾದಿಯಲ್ಲಿ ಹಿಂದಿನ ಅನುಭವ, ಸ್ವಲ್ಪದರಲ್ಲಿ ತಪ್ಪಿದ ಅಪಘಾತ, ಸಾವಿನ ದವಡೆಯಿಂದ ಪಾರಾದ ಬಸ್ಸು, ಅವನನ್ನು ಗೋಳುಹೊಯ್ದ ವಿಚಿತ್ರ ಪ್ರಯಾಣಿಕರು ಹೀಗೆ ಮುಂದೆ ಸಾಗಿ, ಹೆಂಡತಿ-ಮಕ್ಕಳು ಸಂಸಾರ ಶಾಲೆಗಳನ್ನು ಸುತ್ತಿ ಬಳಸಿ ಸಾಗುತ್ತಿದ್ದವು, ಬಸ್ಸಿನ ಜೊತೆಜೊತೆಗೆ. ಅಂದೂ ಚಾಲಕನ ಜೊತೆ ಉತ್ಸಾಹದಲ್ಲಿ ಮಾತುಕತೆ ಶುರು ಆಗಿದ್ದರೂ ನಮ್ಮ ಚಾಲಕನಿಗೆ ವಿಪರೀತ ನಿದ್ದೆ ಬರುತ್ತಿತ್ತು. ಆತ ಮಧ್ಯಮಧ್ಯ ಸೀಟಿನಿಂದ ಎದ್ದು ನಿಂತು ಬಸ್ಸು ಓಡಿಸುತ್ತಿದ್ದ. ಹಿಂದಿನ ಆರೇಳು ದಿವಸಗಳಿಂದ ಹಗಲು ರಾತ್ರಿ ಸ್ವಲ್ಪವೂ ನಿದ್ರಿಸದೆ ಕೆಲಸ ಮಾಡಿದ್ದನಂತೆ. ನಮ್ಮ ತಿರುಗಾಟಕ್ಕೆ ಚಾಲಕನಾಗಿ ಬಂದಾಗ , ವಾಹನ ಚಲಾಯಿಸುತ್ತಿರುವಾಗ ತನ್ನ ಸೀಟಿನಲ್ಲಿ ಕುಳಿತರೆ ಸಾಕು, ನಿದ್ರಿಸುವ ಸ್ಥಿತಿಯಲ್ಲಿದ್ದ. ಬಿಡುವು ಇಲ್ಲದೆ ಕೆಲಸಕ್ಕೆ ಮಾಡಲು ಮಾಲಿಕರ ಒತ್ತಡ ಕಾರಣ ಇರಬಹುದು, ಬೇರೆ ಡ್ರೈವರ್ ಇಲ್ಲದಿರಬಹುದು, ಅಥವಾ ರಜೆ ಮಾಡಿ ಸಂಬಳ ಕಳೆದುಕೊಳ್ಳುವ ಸ್ಥಿತಿಯೂ ಆತನದಲ್ಲದಿರಬಹುದು. ಇಷ್ಟು ತಿಳಿದ ಮೇಲೆ ನಾವು ಕೆಲವರು ಆತನ ಪಕ್ಕದಲ್ಲೇ ಬಂದು ಕೂತು ಮಾತನಾಡುತ್ತಿದ್ದೆವು. ಅವನದು ನಿದ್ದೆ ತಪ್ಪಿಸಿಕೊಂಡು ವಾಹನ ಓಡಿಸುವ ಪಾಳಿಯಾದರೆ, ನಮ್ಮದು ಅಂದಿನ ಮಟ್ಟಿಗೆ ಅವನನ್ನು ಎಚ್ಚರವಿಡುವ ಸರದಿ. ಇದೂ ಸಾಕಾಗುವುದಿಲ್ಲ ಎನಿಸಿದಾಗ ಮಧ್ಯಮಧ್ಯ ಬಸ್ಸು ನಿಲ್ಲಿಸಲು ಹೇಳಿ, ಅಲ್ಪ ಸ್ವಲ್ಪ ನಿದ್ರಿಸುವ ಅವಕಾಶ ನೀಡುತ್ತಾ ಪ್ರಯಾಣ ಬೆಳೆಸಿದವು. ಆದರೂ ನಿಂತುಕೊಂಡು ಬಸ್ಸು ಚಲಾಯಿಸುವ ಆತನ ಮುಖ ವ್ಯಗ್ರವಾಗುತ್ತಿತ್ತು, ಊದಿಕೊಂಡ ಕಣ್ಣು ಕೆಂಪಾಗಿ, ಕ್ಷಣಕ್ಕಾದರೂ ರೆಪ್ಪೆ ಮುಚ್ಚುತ್ತಿತ್ತು. ಪ್ರತಿ ಬಾರಿ ಚಾಲಕನ ಕಣ್ಣಿಗೆ ಅರೆಕ್ಷಣದ ಜೊಂಪು ಹತ್ತಿದಾಗಲೂ ಕೈಯಲ್ಲಿ ಹಿಡಿದ ಸ್ಟೀಯರಿಂಗ್ ಚಕ್ರ ಗರಕ್ಕನೆ ಒಂದು ದಿಕ್ಕಿಗೆ ತಿರುಗುತ್ತಿತ್ತು, ಹಠಾತ್ ಬಸ್ಸು ಲಯ ತಪ್ಪಿದಂತೆ ಅನಿಸುತ್ತಿತ್ತು. ದಾರಿಯುದ್ದಕ್ಕೂ ಚಾಲಕ ಕಣ್ಣು ರೆಪ್ಪೆಗಳನ್ನು ತೆರೆದಿಡಲು ಹೋರಾಡುತ್ತ , ಎಚ್ಚರದಲ್ಲೇ ನಿದ್ರಿಸುತ್ತ ನಮ್ಮನ್ನು ರಾಯಚೂರು ತಲುಪಿಸಿದ್ದ. ಆ ಚಾಲಕನ ಬದುಕಿನ ಅತ್ಯಂತ ದೀರ್ಘ ರಾತ್ರಿ ಅದಾಗಿದ್ದಿರಬೇಕು. ಮತ್ತೆ ಅಂದು ಆ ಬಸ್ಸಿನಲ್ಲಿ ಪ್ರಯಾಣ ಮಾಡಿದವರ ಮಟ್ಟಿಗೆ ಜೀವನಪೂರ್ತಿ ನೆನಪಿಡುವ ಅತ್ಯಂತ ಕತ್ತಲೆ ನಿಶೆಯ ಪ್ರಯಾಣ.
ಇನ್ನು ನನ್ನ ಹುಟ್ಟೂರಿನ ಆಪ್ತ ಸ್ನೇಹಿತ, ಪ್ರಾಥಮಿಕ ಶಾಲೆಯ ಸಹಪಾಠಿಯೂ ಆಗಿದ್ದವನು ಈಗಲೂ ರಾತ್ರಿ ಪಾಳಿಯ ಬಸ್ ಚಾಲಕ. ವಿದ್ಯಾಭ್ಯಾಸ ಬೇಗ ನಿಲ್ಲಿಸಿ ಅವನ ಕನಸಿನ ಉದ್ಯೋಗವಾದ ಡ್ರೈವಿಂಗ್ ಅರಸಿ ಇನ್ನೊಂದು ಊರಿಗೆ ಹೋದವನು ಸ್ಥಳೀಯ ವ್ಯಾನ್ ಗಳಲ್ಲಿ ಕ್ಲೀನರ್ ಆಗಿ ನೌಕರಿ ಶುರು ಮಾಡಿ, ನೈಟ್ ಬಸ್ ಗಳ ಚಾಲಕನಾಗಿ ಬೆಳೆದು ತನ್ನ ಕನಸನ್ನು ಪೂರೈಸಿಕೊಂಡಿದ್ದ. ನಾವಿಬ್ಬರು ಭೇಟಿಯಾದಾಗಲೆಲ್ಲ ರಾತ್ರಿ ಪ್ರಯಾಣದ ಲೋಕದ ಬಗ್ಗೆ ಚರ್ಚೆ ಆಗುತ್ತದೆ. ಎಲ್ಲವೂ ಸ್ಪಷ್ಟ ಎನಿಸುವ ಹಗಲಿನ ಪ್ರಯಾಣವೇ ಸುಖ ಇರಬೇಕಲ್ಲ ಎಂದು ನಾನು ಹೇಳಿದರೆ, ರಾತ್ರಿ ಪಾಳಿಯ ಚಾಲನೆಯಷ್ಟು ಸಲೀಸು ಇನ್ನೊಂದಿಲ್ಲ ಎಂದು ಆತ ವಾದಿಸುತ್ತಾನೆ. ಹಗಲಿನಲ್ಲಾದರೆ ಎಂತಹ ಹೆದ್ದಾರಿ ರಸ್ತೆಯನ್ನೂ ವಾಚಾಮಗೋಚರವಾಗಿ ಬಳಸಿ ಹಾಳುಗೆಡಹುವವರು, ಉದ್ದ ಸಾಗಬೇಕಾದಲ್ಲಿ ಅಡ್ಡ ಬರುವವರು, ಅಶಿಸ್ತಿನ ಮನುಷ್ಯರು ಅನಧಿಕೃತ ಪ್ರವೇಶ ಮಾಡುವ ಪ್ರಾಣಿಗಳು ಎಲ್ಲವೂ ಸೇರಿದ ಗೋಜಲು ಗೊಂದಲವಾಗುತ್ತದೆ. ನಡುರಾತ್ರಿಯ ಕಗ್ಗತ್ತಲೆಯ ಹೊತ್ತಾದರೆ ಹಗಲಿನಲ್ಲಿ ರಸ್ತೆ ಯಾನವನ್ನು ಧ್ವಂಸ ಮಾಡಿಹೋದ ಆ ಎಲ್ಲರೂ ಮನೆ ಸೇರಿ ಸ್ವಚ್ಛಂದ ಮಲಗಿರುತ್ತಾರೆ. ರಸ್ತೆಯನ್ನು ಬೆಳಗಿ ಹೊಳೆಯಿಸುವ ಚಂದ್ರ, ಮಿಂಚಿ ಮಿನುಗುವ ನಕ್ಷತ್ರಗಳು ಅಲ್ಲದಿದ್ದರೆ ಇನ್ನಷ್ಟು ಮತ್ತಷ್ಟು ರಾತ್ರಿ ಪಾಳಿಯ ಬಸ್ಸು-ಲಾರಿ, ಮತ್ತೆ ಅವುಗಳ ಚಾಲಕರಿಗೆ ಬಿಟ್ಟುಕೊಟ್ಟಿರುತ್ತಾರೆ. ಅವನ ಪ್ರಕಾರ ರಾತ್ರಿಯ ಎಚ್ಚರವೂ ಒಂದು ಕಲೆ ಮತ್ತು ಸಿದ್ಧಿ. ನಿತ್ಯ ರಾತ್ರಿ ನಿದ್ದೆ ಬಿಡಬೇಕಾದರೆ ಹಗಲಿನಲ್ಲಿ ನಿದ್ದೆ ಹಿಡಿಯಬೇಕು. ಪ್ರಕೃತಿಗೆ ವಿರುದ್ಧವಾಗಿ ಹಗಲನ್ನು ರಾತ್ರಿ ಮಾಡಬೇಕು, ರಾತ್ರಿಯನ್ನು ಹಗಲಾಗಿಸಬೇಕು. ಸೂರ್ಯ ಮೂಡುವಾಗ ಕಣ್ಮುಚ್ಚಿ ಮುಸುಕು ಎಳೆಯಬೇಕು, ಚಂದ್ರ ಮೂಡುವ ಹೊತ್ತಿಗೆ ಹಲ್ಲುಜ್ಜಿ ಊಟ ಮಾಡಿ ಸ್ಟೀಯರಿಂಗ್ ಹಿಡಿದು ಏಕಾಗ್ರತೆಯಲ್ಲಿ ಕೂರಬೇಕು. ನಡುವೆ ಒಂದೆರಡು ಕಡೆ ಖಡಕ್ ಚಹಾ ಕುಡಿಯಬೇಕು. ಎದುರಿನಿಂದ ಕೋರೈಸುವ ಬಣ್ಣಬಣ್ಣದ ಬೆಳಕು ಬೀರುತ್ತಾ ವಾಹನ ಚಲಾಯಿಸುವವರನ್ನು ಸುಧಾರಿಸಿಕೊಂಡು ಮುಂದೆ ಸಾಗಬೇಕು. ರಾತ್ರಿಯ ಖಾಲಿ ರಸ್ತೆಯಲ್ಲೂ ಅನಾವಶ್ಯಕ ಹಾರ್ನ್ ಒತ್ತುವವರನ್ನು ನಿರ್ಲಕ್ಷಿಸಬೇಕು, ಮಿತಿಮೀರಿದ ವೇಗದಲ್ಲಿ ನುಗ್ಗುವ ಸಣ್ಣ ವಾಹನಗಳನ್ನು ಆಧರಿಸಿ ಪೊರೆಯಬೇಕು. ರಸ್ತೆ ಹಂಪುಗಳನ್ನು ನಿಧಾನಕ್ಕೆ ನಾಲಿಗೆ ಕಚ್ಚಿಕೊಂಡು ಹತ್ತಿ ಇಳಿಸಬೇಕು. ನಿದ್ದೆಯ ನಶೆಯಲ್ಲಿ ತೇಲುತ್ತಿರುವ ಎಲ್ಲ ಪ್ರಯಾಣಿಕರ ತೊಟ್ಟಿಲು ತೂಗುತ್ತ, ತಲುಪುವಲ್ಲಿಗೆ ತಲುಪಿಸಿ, ಗಾಡಿ ನಿಲ್ಲಿಸಿ ಪ್ರಯಾಣಿಕರು ಒಬ್ಬೊಬ್ಬರಾಗಿ ಸರಂಜಾಮು ಸಮೇತ ಧನ್ಯವಾದವನ್ನೂ ಹೇಳದೇ ಕೆಲವೊಮ್ಮೆ ಕಾರಣಾಂತರದಿಂದ ತಡವಾಗಿದ್ದಕ್ಕೆ ಅಸಮಾಧಾನದಿಂದ ಇಳಿದು ಹೋದ ಮೇಲೆ, ಚಾವಿ ತೆಗೆದು ಬಲಬದಿಯ ಅರ್ಧ ಬಾಗಿಲನ್ನು ದೂಡಿ ಮಣ್ಣು ನೆಲದ ಮೇಲೆ ಧೊಪ್ ಎಂದು ಹಾರಬೇಕು. ಹಣೆಯ ಮೇಲಿನ ಬೆವರು ಒರೆಸಬೇಕು. ಆದಷ್ಟು ಬೇಗ ತಿಂಡಿ ತಿಂದು, ಸರಿಯಾದ ಜಾಗ ಸಿಗದಿದ್ದರೆ, ಬಸ್ಸಿನ ಸೀಟು, ಯಾವುದೊ ಪೆಟ್ರೋಲ್ ಪಂಪಿನ ಚಾವಡಿ ನೋಡಿ ಧೂಳು ಹೊಡೆದು ನಿದ್ದೆ ಮಾಡಬೇಕು. ಮತ್ತೆ ಸಂಜೆಯ ಪಾಳಿಗೆ ತಯಾರಾಗಬೇಕು. ಇಂತಹ ಹಲವು ವರ್ಷಗಳ ರಾತ್ರಿಚರಿಯನ್ನು, ತನ್ನ ಮಕ್ಕಳು ಶಿಕ್ಷಣ ಮುಗಿಸಿ ದುಡಿಯಲು ಶುರು ಮಾಡಿದ ಮೇಲೆ, ಮನೆ ಸಾಲ ತೀರಿದ ನಂತರ ಒಂದು ದಿನ ಪೂರ್ಣ ನಿಲ್ಲಿಸಿ ತಾನೂ ಚಾಲಕ ವೃತ್ತಿ ಬಿಟ್ಟು ನೆಮ್ಮದಿಯ ನಿದ್ದೆ ಮಾಡಬೇಕು.
ರಾತ್ರಿ ಪ್ರಯಾಣದ ವಾಹನಗಳ ಚಾಲಕರಿಂದ ಹಿಡಿದು ನಿದ್ದೆ ಮಾಡಗೊಡದ ದೊಡ್ಡ ಕನಸಿನ ಹಿಂದೆ ಹೊರಟವರು ಕೊಟ್ಟಕೊನೆಗೆ ಅರಸುವುದು ಒಂದು ನಿರಾಳ ನಿದ್ದೆಯನ್ನೇ ಇರಬಹುದು. ಅನಿವಾರ್ಯ ದುಡಿಮೆ, ಯಶಸ್ಸಿನ ಹಸಿವು, ಮಹತ್ವಾಕಾಂಕ್ಷೆಗಳು ಒಂದಕ್ಕಿಂತ ಒಂದು ಭಿನ್ನವಾದರೂ ಬೇರೆ ಬೇರೆ ದಿಕ್ಕಿನಿಂದ ಒಂದು ಸಂಪೂರ್ಣ ಸಂತೃಪ್ತ ನಿದ್ದೆಯ ಹುಡುಕಾಟದಲ್ಲಿರಬಹುದು. ನಿದ್ದೆಯ ಎಚ್ಚರವೂ ಒಂದು ಆತ್ಯಂತಿಕ ಪ್ರಶಾಂತ ವಿಶ್ರಾಮದ ಅನ್ವೇಷಣೆಯಲ್ಲಿರಬಹುದು. ಅಂತಹ ಒಂದು ಹುಡುಕಾಟದ ಕತೆ ಅಲೆಕ್ಸಾಂಡರ್ ಚಕ್ರವರ್ತಿಯ ಬಗೆಗೂ ಇದೆ.
ಗ್ರೀಕ್ ದೊರೆ ಅಲೆಕ್ಸಾಂಡರ್ ದಂಡಯಾತ್ರೆಯನ್ನು ಮಾಡುತ್ತ , ಸಾಮ್ರಾಜ್ಯವನ್ನು ವಿಸ್ತರಿಸುತ್ತ ಇಂದಿನ ಭಾರತದ ಅಂದಿನ ಭೂಪ್ರದೇಶಕ್ಕೂ ಬಂದಿದ್ದನಲ್ಲ. ಹಾಗೆ ಅಲ್ಲಿ ಸುತ್ತುತ್ತಿರುಗುವಾಗ , ಮರದ ನೆರಳಿನಲ್ಲಿ ಸೊಂಪಾಗಿ ಮಲಗಿದ್ದ ಸಾಧುವೊಬ್ಬನನ್ನು ಕಂಡನಂತೆ . ಕುಚೆಷ್ಟೆಯೋ , ಕುತೂಹಲವೋ ಎಬ್ಬಿಸಿ ಮಾತಿಗಿಳಿದನಂತೆ .
“ಈ ಯುದ್ಧಗಳಿಂದ ಏನು ಸಾಧಿಸುವೆ ?” ಎಂದು ಸಾಧು ಕೇಳಿದನಂತೆ
“ಒಂದೊಂದೆ ರಾಜ್ಯವನ್ನು , ರಾಜರನ್ನು ಗೆದ್ದು , ಎಲ್ಲದಕ್ಕೂ ನಾನೆ ಅರಸ , ಜಗತ್ತಿಗೆ ಚಕ್ರವರ್ತಿ ಎನಿಸಿಕೊಳ್ಳುತ್ತೇನೆ ” ಎಂದನಂತೆ ಅಲೆಕ್ಸಾಂಡರ್.
“ಚಕ್ರವರ್ತಿ ಎನಿಸಿಕೊಂಡ ನಂತರ ಏನು ಮಾಡುವೆ? “
“ಎಲ್ಲರನ್ನು ಎಲ್ಲವನ್ನು ಗೆದ್ದ ನಂತರ ಸುಖವಾಗಿ ನಿದ್ರಿಸುತ್ತೇನೆ” ಎಂದನಂತೆ ಅಲೆಕ್ಸಾಂಡರ್.
ಆಗ ಸಾಧು ನಗುತ್ತ “ನಾನದನ್ನು ಈಗಾಗಲೇ ಮಾಡುತ್ತಿದ್ದೇನೆ , ಯಾರನ್ನೂ ಕೊಲ್ಲದೆ ಗೆಲ್ಲದೆ ” ಎಂದನಂತೆ.
ಸಾಧುವೊಬ್ಬನಿಗೆ ಸರಳ ಬದುಕಿನಲ್ಲಿ ಸುಲಭವಾಗಿ ದಕ್ಕಿದೆ ಎಂದೆನಿಸುವ ನಿದ್ರೆ, ಅಲೆಕ್ಸಾಂಡರನಿಗೆ ದಶಕದ ಕಾಲ ಕತ್ತಿಯನ್ನು ಝಳಪಿಸುತ್ತ , ಸಾವಿರಾರು ಮೈಲು ದೂರ ಕುದುರೆಗಳನ್ನು ಕಾಲಾಳುಗಳನ್ನು ದಣಿಸಿ, ರಕ್ತ ಕಣ್ಣೀರುಗಳ ಕಾಲುವೆ ಹರಿಸಿ, ನೂರಾರು ರಾಜರನ್ನು ಮಣಿಸುವುದರಲ್ಲಿ ಸಿಕ್ಕಿತ್ತೋ ಇಲ್ಲವೊ? ಗೊತ್ತಿಲ್ಲ. ತಾನು ಬಯಸಿದಂತೆ ಇಡೀ ಭೂಮಿಯನ್ನು ವಶಪಡಿಸಿಕೊಳ್ಳಲು ಸಾಧ್ಯವಾಗದ ಕಾರಣ , ಆತನ ಕನಸಿನ ನಿದ್ರೆ ಅವನಿಗೆ ದೊರಕದೇ ಹೋಗಿರಬಹುದು; ಸಾಧು ಹೇಳಿದ ಅರ್ಥದಲ್ಲಿ ನಿರಾಳವಾದ ನಿದ್ರೆಯೇ ಬದುಕಿನ ಸರ್ವಸ್ವ ಎಂದು ನಂಬಿದರೆ ಅಲೆಕ್ಸಾಂಡರನಿಗೆ ತಾನೆಷ್ಟು ದೌರ್ಭಾಗ್ಯವಂತ ಎಂದೂ ಅನಿಸಿರಬಹುದು. ಈ ಘಟನೆ ಕತೆಯೊ ಕಲ್ಪನೆಯೊ ಅಥವಾ ಅಲೆಕ್ಸಾಂಡರನ ಸ್ವಗತವೊ ಇರಬಹುದು. ಅಥವಾ ತೀವ್ರ ಮಹತ್ವಾಕಾಂಕ್ಷೆಯನ್ನು ವಿಮರ್ಶೆ ಮಾಡುವ ಒಂದು ತಾತ್ವಿಕ ಪ್ರಜ್ಞೆಯೂ ಇರಬಹುದು.
ನಿದ್ರೆಯ ಎಚ್ಚರದ ಬಗ್ಗೆ ನುಡಿದವರು, ನೆಮ್ಮದಿ ಸಾರ್ಥಕ್ಯ ಯಶಸ್ಸುಗಳನ್ನು ವಿಶಿಷ್ಟವಾಗಿ ವ್ಯಾಖ್ಯಾನಿಸಿ ಜಿಜ್ಞಾಸೆ ಹುಟ್ಟಿಸಿದವರು ಅಲೆಕ್ಸಾಂಡರನ ಕಾಲದ ಮೊದಲೂ ಆಮೇಲೆಯೂ ಸಿಗುತ್ತಾರೆ. ತಮ್ಮೊಳಗಿನ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ, ಹೊರಗಿನ ಉತ್ತರಗಳನ್ನು ಪ್ರಶ್ನಿಸುತ್ತ ಬದುಕಿದ ಬಾಳಿದ ಬುದ್ಧ, ಬಸವಣ್ಣ, ಗಾಂಧಿ ಮತ್ತೆ ಇನ್ನೂ ಅನೇಕರು ಹೀಗೆ ಎಚ್ಚರದಲ್ಲೇ ನಿದ್ರಿಸಿದವರ ಸಾಲಿಗೆ ಸೇರಿದವರು. ಮತ್ತೆ ನಿದ್ದೆಯೊಳಗಿನ ಜಾಗೃತಿಯಿಂದಲೇ ಒಂದು ಸಾರ್ಥಕ ವಿರಾಮದ ಹುಡುಕಾಟದಲ್ಲಿದ್ದವರು. ರಾತ್ರಿಯಿಡೀ ಕತ್ತಲೊಡನೆ ತರ್ಕಿಸುತ್ತಾ ನಿದ್ರೆಗೆಡುತ್ತ ಪ್ರಯಾಣಿಕರನ್ನು ಹೊಸ ನಿಲ್ದಾಣಕ್ಕೆ ತಲುಪಿಸುವ ರಾತ್ರಿ ಪಾಳಿಯ ಚಾಲಕರು.
- ಯೋಗಿಂದ್ರ ಮರವಂತೆ

