ನೀಲಿಆರ್ಕಿಡ್ (ಸಣ್ಣಕಥೆ): ಡಾ ಜಿ ಎಸ್ ಪ್ರಸಾದ್

ಆತ್ಮೀಯ ಓದುಗರೇ 
ಈ ವಾರದ ಅನಿವಾಸಿ ಸಂಚಿಕೆಯಲ್ಲಿ ನನ್ನ ಚೊಚ್ಚಲ ಸಣ್ಣ ಕಥೆ 'ನೀಲಿ ಆರ್ಕಿಡ' ನಿಮ್ಮ ಮುಂದಿಡುತ್ತಿದ್ದೇನೆ. ಇಲ್ಲಿಯವರೆಗೆ ಕವನ, ಬಿಡಿಬರಹ, ಪ್ರವಾಸ ಕಥನಗಳನ್ನು ಬರೆಯುತ್ತಿದ್ದ ನನಗೆ ಎಲ್ಲಿಂದಲೋ ಸಣ್ಣ ಕಥೆಯನ್ನು ಬರೆಯಲು ಪ್ರೇರಣೆ ದೊರೆಯಿತು. ಹಾಗೆ ನೋಡಿದರೆ ಕಥೆ ಬರೆಯುವುದು ನನಗೆ ಹೊಸತೇನಲ್ಲ. 'ಪಯಣ' ಎಂಬ ಕಿರು ಕಾದಂಬರಿಯನ್ನು ಬರೆದು ಕೈತೊಳೆದು ಕೂತ್ತಿದ್ದ ನನಗೆ ಇದ್ದಕ್ಕಿಂದಂತೆ ಸಣ್ಣ ಕಥೆ ಬರೆಯುವ ಸ್ಫೂರ್ತಿ ಮೂಡಿತು. ಮೊನ್ನೆ ಊಟಕ್ಕೆ ಬಂದ ಅತಿಥಿಯೊಬ್ಬರು ಒಂದು ನೀಲಿ ಆರ್ಕಿಡ್ ಗಿಡವನ್ನು ವಿಶ್ವಾಸದಲ್ಲಿ ಕೊಟ್ಟು ಹೋದರು. ಈ ಸುಂದರವಾದ ಹೂಗಳು ನನ್ನ ಮೇಲೆ ಕಥೆ ಬರಿ ಎಂದು ಹಠ ಹಿಡಿದಿದ್ದವು. ಅವುಗಳ ಆಸೆಯನ್ನು ಪೂರೈಸಿದೆ. ನನ್ನ ಕಥೆ ಬರೆಯುವ ಆಸಕ್ತಿ ಇಲ್ಲಿಗೆ ಮುಗಿಯುವುದೋ ಅಥವಾ ಮುಂದಕ್ಕೆ ಒಂದು ಸಣ್ಣ ಕಥೆಗಳ ಸಂಕಲನ ಮೂಡಿ ಬರುವುದೋ ನನಗೆ ಗೊತ್ತಿಲ್ಲ. ನಿಮ್ಮ ಉತ್ತೇಜನ ಮತ್ತು ಸಮಯ ಇದನ್ನು ನಿರ್ಧರಿಸಬಹುದು. ಸಣ್ಣ ಕಥೆ ಎಷ್ಟು ಉದ್ದವಿರಬೇಕು ಎಂಬುದಕ್ಕೆ ಸ್ಪಷ್ಟ ಉತ್ತರವಿಲ್ಲ. ಕಥೆ ಹೇಳುವಷ್ಟೂ ಉದ್ದ ಇದ್ದರೆ ಸಾಕು ಎನ್ನ ಬಹುದು. ಕಾದಂಬರಿಗೆ ಹೋಲಿಸಿದರೆ ಸಣ್ಣ ಕಥೆಯಲ್ಲಿ ಸನ್ನಿವೇಶಕ್ಕೆ ಹೆಚ್ಚು ಪ್ರಾಮುಖ್ಯತೆ, ಅಲ್ಲಿ ಪಾತ್ರ ಪೋಷಣೆಗೆ ಅಷ್ಟು ಅವಕಾಶವಿಲ್ಲ ಎಂಬುದು ನನ್ನ ಅನಿಸಿಕೆ. ಕಥೆ ಎಂಬುದು ಓದಿನ ಅನುಭವದ ಜೊತೆ ಹಲವಾರು ಚಿಂತನೆಗೆ ಅನುವುಮಾಡಿಕೊಟ್ಟಲ್ಲಿ ಮತ್ತು ಸಾಮಾಜಿಕ ಅರಿವನ್ನು ಉಂಟುಮಾಡಿದ್ದಲ್ಲಿ ಅದು ಸಾರ್ಥಕ. ಈ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಕಥೆಯನ್ನು ಹೆಣೆದಿದ್ದೇನೆ. ನಾನು ವೃತ್ತಿಯಲ್ಲಿ ವೈದ್ಯನಾಗಿರುವುದರಿಂದ ನನ್ನ ಕಥೆ ವೈದ್ಯಕೀಯ ವೃತ್ತಿಯ ಆಸುಪಾಸಿನಲ್ಲಿ ಸುಳಿದಿದೆ. ಮುಂದಕ್ಕೆ ನನ್ನ ಈ ವೃತ್ತಿಯ ಕವಚವನ್ನು ಹೊರತೆಗೆದಿಟ್ಟು ಪ್ರಜ್ಞಾಪೂರ್ವಕವಾಗಿ ಇತರ ಸಾಮಾಜಿಕ ಕಥಾವಸ್ತುಗಳನ್ನು ಪರಿಗಣಿಸಬೇಕೆಂಬ ಹಂಬಲವಿದೆ. ದಯವಿಟ್ಟು ಈ ಕಥೆಯನ್ನು ಓದಿ, ಕಥೆಯ ಹಂದರವನ್ನು ಬಿಟ್ಟುಕೊಡದೆ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ.

ಸಂ
ರೆಸಿಡೆನ್ಸಿ ರಸ್ತೆಯ ಮಾನ್ವಿತಾ ಕಾಂಪ್ಲೆಕ್ಸ್ ಒಳಗಿನ ಖಾಸಗಿ ಮೆಂಟಲ್ ಹೆಲ್ತ್ ಕ್ಲಿನಿಕ್ ನಲ್ಲಿ ತನ್ನ ಮೊಬೈಲ್ ಫೋನನ್ನು ತೀಡುತ್ತಾ ಚಿಂತಾಕ್ರಾಂತನಾಗಿ ಕುಳಿತ್ತಿದ್ದ ಸಚ್ಚಿನ್ ಗೆ 'ಮಿಸ್ಟರ್ ಸಚ್ಚಿನ್, ಡಾ ಮೋಹನ್ ಅವರು ನಿಮ್ಮನ್ನು ನೋಡಲು ರೆಡಿಯಿದ್ದಾರೆ, ನೀವು ಅವರ ಕೋಣೆಯೊಳಗೆ ಹೋಗಬಹುದು’ ಎಂದಳು ರೆಸೆಪ್ಷನಿಸ್ಟ್ ಜಯ. 

ಸಚಿನ್ ತನ್ನ ಮೊಬೈಲ್ ಫೋನನ್ನು ಆಫ್ ಮಾಡಿ, ಆತುರದಿಂದ ಮೋಹನ್ ಅವರ ಕೋಣೆಯೊಳಗೆ ಧಾವಿಸಿ 'ಹಲೋ ಡಾಕ್ಟರ್ ನಾನು ಸಚ್ಚಿನ್, ನೀವು ಹೆಗ್ಗಿದ್ದೀರಾ ಎಂದ.

' ನಾನು ಚೆನ್ನಾಗಿದ್ದೇನೆ ಸಚ್ಚಿನ್, ನೀವು ಹೇಗಿದ್ದೀರಾ ಹೇಳಿ’ ಎಂದರು ಮೋಹನ್.

‘ನಾಟ್ ವೆರಿ ವೆಲ್ ಡಾಕ್ಟರ್, ಕಳೆದ ಕೆಲವು ವಾರಗಳಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದೇನೆ, ನಿದ್ದೆ ಬರುತ್ತಿಲ್ಲ, ಮಧ್ಯ ಕೆಟ್ಟ ಕನಸುಗಳು ಬೇರೆ. ಈ ನಡುವೆ ಅಪಿಟೈಟ್ ಕಡಿಮೆ, ಒಂದು ರೀತಿ ನಿರುತ್ಸಾಹ ಅದನ್ನು ಜಿಗುಪ್ಸೆ ಎಂತಲೂ ಕರೆಯಬಹುದು. ಇತ್ತೀಚಿಗೆ ವಿನಾಕಾರಣ ಬಹಳ ಬೇಗ ಮೂಡ್ ಬದಲಾಗುತ್ತಿದೆ, ಎಮೋಷನಲ್ ಆಗುತ್ತಿದ್ದೇನೆ’.

ಹೀಗೆ ಶುರುವಾದ ಧೀರ್ಘ ಸಂವಾದದಲ್ಲಿ ಡಾಕ್ಟರ್ ಮೋಹನ್, ಸಚ್ಚಿನ್ನಿನ ವೈಯುಕ್ತಿಕ ಹಿನ್ನೆಲೆಗಳನ್ನು, ಪರಿವಾರದ ಸಂಬಂಧಗಳನ್ನು, ವೃತ್ತಿ ಜೀವನವನ್ನು ಕೆದಕಿ ಬಹಳಷ್ಟು ಹಿನ್ನೆಲೆ ಮಾಹಿತಿಗಳನ್ನು ಸಂಗ್ರಹಿಸಿದರು. ಸಚ್ಚಿನ್ ತಾನು ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಎಂದು, ಅವನು ಬೆಂಗಳೂರಿನ ಡಿಲಾಯ್ಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ. ಹೆಂಡತಿಯೊಡನೆ ಸಚ್ಚಿನ್ ವಿಚ್ಛೇದನವಾಗಿ ಎರಡು ವರ್ಷಗಳು ಕಳೆದಿದ್ದವು. ಕೋರ್ಟು ಅವರಿಗಿದ್ದ ಹತ್ತು ವರ್ಷದ ಒಬ್ಬಳೇ ಮಗಳನ್ನು ತಾಯಿಯ ಆರೈಕೆಯಲ್ಲಿ ಇಡುವುದು ಸೂಕ್ತವೆಂದು ನಿರ್ಧರಿಸಿತ್ತು. ಸಚ್ಚಿನ್ ತಾಯಿಗೆ ಕ್ಯಾನ್ಸರ್ ಆಗಿ ತೀರಿಕೊಂಡಿದ್ದು ಸಚ್ಚಿನ್ ತಂದೆ ರಾಮಚಂದ್ರ ಶಾನಭಾಗ್ ಅವರು ವಿಲ್ಸನ್ ಗಾರ್ಡನ್ ಅಪಾರ್ಟ್ಮೆಂಟ್ ಒಂದರಲ್ಲಿ ಒಬ್ಬರೇ ವಾಸವಾಗಿದ್ದರು, ಅವರಿಗೆ ಹಲವಾರು ಅರೋಗ್ಯ ಸಮಸ್ಯೆಗಳಿದ್ದವು. ಡಾಕ್ಟರ್ ಮೋಹನ್ ಸಾಕಷ್ಟು ವಿಚಾರಗಳನ್ನು ಕೆದಕಿದ ಮೇಲೆ ನೋಡಿ ಸಚ್ಚಿನ್ ‘ನನ್ನ ಒಂದು ಅಭಿಪ್ರಾಯದಲ್ಲಿ ನಿಮಗೆ ಡಿಪ್ರೆಶನ್ ಎಂದು ಗುರುತಿಸಬಹುದಾದ ಮಾನಸಿಕ ಅಸ್ವಸ್ಥತೆ ಇರುವ ಸಾಧ್ಯತೆ ಹೆಚ್ಚು. ಇದನ್ನು ಕೆಲವು ಮೆಡಿಸಿನ್ ಮತ್ತು ಕೌನ್ಸಿಲಿಂಗ್ ಮೂಲಕ ಹತೋಟಿಯಲ್ಲಿ ಇಡಬಹುದು. ಇದು ಹಲವಾರು ವರ್ಷಗಳಿಂದ ಸುಪ್ತವಾಗಿದ್ದು ಪರಿಸರದ ಒತ್ತಡದಿಂದ ಬಹಿರಂಗಗೊಂಡಿರಬಹುದು. ನೀವು ನಮ್ಮಲ್ಲಿ ಶೀಲಾ ಎಂಬ ಕೌನ್ಸಿಲರ್ ಇದ್ದಾರೆ, ಅವರನ್ನು ಮುಂದಕ್ಕೆ ಕಾಣಬಹುದು. ಸಧ್ಯಕ್ಕೆ ಮೆಡಿಸಿನ್ಗಳನ್ನು ಉಪಯೋಗಿಸಿ ಎರಡುವಾರದ ನಂತರ ಮತ್ತೆ ಭೇಟಿಯಾಗೋಣ. ನನ್ನ ಕನ್ಸಲ್ಟೇಶನ್ ಸಮ್ಮರಿ ದಾಖಲೆಯನ್ನು ನಿಮಗೆ ಈ ಮೇಲ್ ಮಾಡಲೇ' ಎಂದಾಗ 'ಬೇಡ ಡಾಕ್ಟರ್ ನನ್ನ ವಿಳಾಸಕ್ಕೆ ಪೋಸ್ಟ್ ಮಾಡಿ'. ಮತ್ತೆ ಇನ್ನೊಂದು ವಿಚಾರ ಡಾಕ್ಟರ್ ‘ನನ್ನ ಈ ಅಸ್ವಸ್ಥತೆ ನನ್ನ ಭಾವಿ ಹೆಂಡತಿಗೆ, ಕೋರ್ಟಿಗೆ, ಅಥವಾ ಅವಳ ಕುಟುಂಬಕ್ಕೆ ತಿಳಿಯಬಾರದು’ ಎಂದ. ‘ಅಫ್ ಕೋರ್ಸ್ ನನ್ನ ರೋಗಿಗಳ ಆರೋಗ್ಯದ ಬಗ್ಗೆ ನಾನು ಗಾಸಿಪ್ ಮಾಡುವುದಿಲ್ಲ. ಅದರ ಬಗ್ಗೆ ಆಶ್ವಾಸನೆ ಇರಲಿ’ ಎಂದರು ಮೋಹನ್. ಸಚ್ಚಿನ್ ಡಾಕ್ಟರಿಗೆ ಧನ್ಯವಾದಗಳನ್ನು ತಿಳಿಸಿ ನಿರ್ಗಮಿಸಿದ.

ಡಾ ಮೋಹನ್ ಅವರು ಖ್ಯಾತ ಮನೋ ವೈದ್ಯರು. ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಹಲವಾರು ವರುಷ ತಜ್ಞರಾಗಿ, ಪ್ರಾಧ್ಯಾಪಕರಾಗಿ ಐವತ್ತರ ಅಂಚಿನಲ್ಲಿ ಸ್ವಯಿಚ್ಛೆಯಿಂದ ನಿವೃತ್ತಿಯನ್ನು ಪಡೆದು ಖಾಸಗಿ ಪ್ರಾಕ್ಟೀಸಿನಲ್ಲಿ ತೊಡಗಿಕೊಂಡಿದ್ದರು. ಅವರ ಪತ್ನಿ ಡಾ ಶೀಲಾರವರು ಕ್ಲಿನಿಕಲ್ ಸೈಕಾಲಜಿಸ್ಟ್ ಆಗಿದ್ದು ಮೋಹನ್ ಅವರ ಕ್ಲಿನಿಕ್ಕಿನಲ್ಲಿ ಮನೋರೋಗಿಗಳಿಗೆ ಕೌನ್ಸೆಲಿಂಗ್ ಥೆರಪಿ ನೀಡುತ್ತಿದ್ದರು. ಮೋಹನ್ ಮತ್ತು ಶೀಲಾ ದಂಪತಿಗಳಿಗೆ ಇದ್ದ ಒಬ್ಬನೇ ಪುತ್ರ ಡಾ ಶ್ರೇಯಸ್. ಅವನು ಬೆಂಗಳೂರಿನ ಕೆಂಪೇಗೌಡ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಮುಗಿಸಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದ. ಅವನ ಕೆಲವು ಹತ್ತಿರದ ಗೆಳೆಯರು ಇಂಗ್ಲೆಂಡಿನ ರಾಷ್ಟ್ರೀಯ ಅರೋಗ್ಯ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಶ್ರೇಯಸ್ಸಿಗೆ ಇಂಗ್ಲೆಂಡಿಗೆ ಬರುವಂತೆ ಒತ್ತಾಯಿಸಿ ಅವನಿಗೆ ಎಲ್ಲ ರೀತಿಯ ನೆರವು ಮಾರ್ಗದರ್ಶನ ನೀಡುವ ಆಶ್ವಾಸನೆಯನ್ನು ಕೊಟ್ಟಿದ್ದರು. ಶ್ರೇಯಸ್, ಅಪ್ಪ ಅಮ್ಮನೊಂದಿಗೆ ಸಮಾಲೋಚಿಸಿ ಇಂಗ್ಲೆಂಡಿನ "ಪ್ಲ್ಯಾಬ್" ಪ್ರವೇಶ ಪರೀಕ್ಷೆಯನ್ನು ಲಂಡನ್ನಿನಲ್ಲಿ ತೆಗೆದುಕೊಳ್ಳಲು ನಿರ್ಧರಿಸಿದ. ಶ್ರೇಯಸ್, ಇಂಗ್ಲೆಂಡಿನಲ್ಲಿ ವೈದ್ಯಕೀಯ ಉನ್ನತ ಶಿಕ್ಷಣವನ್ನು ಮುಗಿಸಿ ತಾನು ನ್ಯೂರೋ ಸರ್ಜನ್ ಆಗಬೇಕೆಂಬ ಕನಸನ್ನು ಕಾಣುತ್ತಿದ್ದ. ಪರೀಕ್ಷೆ ತಯಾರಿಗೆ ಬೇಕಾದ ಪರಿಶ್ರಮವನ್ನು ಕೈಗೊಂಡ. ಕೊನೆಗೂ ಪ್ಲ್ಯಾಬ್ ಬರೆಯುವ ಅವಕಾಶ ಒದಗಿ ಬಂದಿತು. ಶ್ರೇಯಸ್ ಇಂಗ್ಲೆಂಡಿನ ವೀಸಾ ಪಡೆದುಕೊಂಡ. ಅವನು ಹೊರಡಲು ಇನ್ನು ಕೆಲವೇ ದಿನಗಳು ಉಳಿದಿದ್ದವು ಅಷ್ಟರೊಳಗೆ ಮೋಹನ್ ಅವರ ಹುಟ್ಟು ಹಬ್ಬ ಬಂದಿತ್ತು.

‘ಶ್ರೇಯಸ್ ನೀನು ಇಂಗ್ಲೆಂಡಿಗೆ ಹೋಗಿ ಬರಲು ಎಷ್ಟೊಂದು ದಿನಗಳಾಗುತ್ತದೆ, ಹೇಗೂ ನಿಮ್ಮ ಅಪ್ಪನ ಬರ್ತ್ ಡೇ ಬಂದಿದೆ ವೈ ಡೋಂಟ್ ವೀ ಪಾರ್ಟಿ’ ಎಂದರು ಶೀಲಾ. ‘ಒಳ್ಳೆ ಅವಕಾಶ ಅಮ್ಮ ಸೆಲೆಬ್ರೆಟ್ ಮಾಡೋಣ, ಅಪ್ಪನ ಹತ್ತಿರದ ಸ್ನೇಹಿತರನ್ನೂ ಕರೆಯೋಣ’ ಎಂದ. ಮನೆಯಲ್ಲೇ ಮೋಹನ್ ಅವರ ಬರ್ತ್ ಡೇ ಪಾರ್ಟಿ ಅದ್ದೂರಿಯಿಂದ ನಡೆಯಿತು. ಬಂದವರೆಲ್ಲ ಶ್ರೇಯಸ್ ಇಂಗ್ಲೆಂಡಿಗೆ ಹೊರಡುತ್ತಿರುವ ಬಗ್ಗೆ ವಿಚಾರಿಸಿ ತಮ್ಮ ಶುಭ ಕಾಮನೆಗಳನ್ನು ತಿಳಿಸಿದರು. ಶ್ರೇಯಸ್ ಅಂದು ಬೊಟೀಕ್ ಶಾಪಿನಿಂದ ಸುಂದರವಾದ ಹೂಗಳನ್ನು ಬಿಟ್ಟಿದ್ದ ನೀಲಿ ಆರ್ಕಿಡ್ ಗಿಡವನ್ನು ಪ್ಲಾಸ್ಟಿಕ್ ಮತ್ತು ಬಣ್ಣದ ರಿಬ್ಬನ್ ಸುತ್ತಿ ಅಲಂಕರಿಸಿದ್ದು ಅದನ್ನು ಮೋಹನ್ ಅವರ ಕೈಗಿತ್ತು ‘ಹ್ಯಾಪಿ ಬರ್ತ್ ಡೇ ಅಪ್ಪ, ಈ ಆರ್ಕಿಡ್ಡನ್ನು ನಾನು ಇಂಗ್ಲೆಂಡಿನಿಂದ ಬರುವವರೆಗೂ ಸರಿಯಾಗಿ ಆರೈಕೆ ಮಾಡಿ ನೋಡಿಕೊ’ ಎಂದನು. ಇದನ್ನು ಗಮನಿಸಿದ ಶೀಲಾ ‘ಮೋಹನ್ ನೋಡಿ, ಶ್ರೇಯಸ್ ನಿಮಗೆ ನೀಲಿ ಬಣ್ಣದ ಆರ್ಕಿಡ್ ಹುಡುಕಿ ತಂದಿದ್ದಾನೆ. ಸೈಕಿಯಾಟ್ರಿಸ್ಟ್ ಗಳಿಗೆ ನೀಲಿ ಬಣ್ಣದ ಆರ್ಕಿಡ್ ಇಸ್ ಎ ಪರ್ಫೆಕ್ಟ್ ಗಿಫ್ಟ್’ ಎಂದು ಅದನ್ನು ಮುಂದಕ್ಕೆ ವಿಸ್ತರಿಸಿ ‘ಸೈಕಾಲಜಿಯಲ್ಲಿ ನೀಲಿ ಮಹತ್ವದ್ದು, ಅದು ಪ್ರಶಾಂತತೆ, ನೀರವತೆ, ಸಮಾಧಾನ ಚಿತ್ತ ಮತ್ತು ಅನಂತತೆಯನ್ನು ಪ್ರತಿನಿಧಿಸುವ ಬಣ್ಣ, ಅದಕ್ಕೆ ಮನೋರೋಗಿಗಳಿಗೆ ಸಾಂತ್ವನ ನೀಡುವ ಶಕ್ತಿಯಿದೆ’ ಎಂದರು. ಶ್ರೇಯಸ್ ಕೂಡಲೇ ‘ಅಮ್ಮ ನೀನು ಸೈಕಾಲಜಿ ಲೆಕ್ಚರ್ ಕೊಡಬೇಡ, ನೀಲಿ ಬಣ್ಣ ಹುಡುಗರಿಗೆ, ಪಿಂಕ್ ಬಣ್ಣ ಹುಡುಗಿಯರಿಗೆ, ಸಿಂಪಲ್’ ಎಂದು ನಕ್ಕ. ಶ್ರೇಯಸ್ ಹೊರಡುವ ಸಮಯ ಹತ್ತಿರವಾಗುತ್ತಿತ್ತು. ಶ್ರೇಯಸ್ಸಿನ ಜೊತೆ ಮುಕ್ತವಾಗಿ ಕಾಲ ಕಳೆಯುವ ಉದ್ದೇಶದಿಂದ ಡಾ ಮೋಹನ್ ಒಂದೆರಡು ದಿನಗಳ ಮಟ್ಟಿಗೆ ತಮ್ಮ ಕ್ಲಿನಿಕ್ ಅಪಾಯಿಂಟ್ಮೆಂಟುಗಳನ್ನು ರದ್ದು ಮಾಡಲು ರಿಸೆಪ್ಷನಿಸ್ಟ್ ಜಯಾಳಿಗೆ ಆದೇಶ ನೀಡಿದರು. ಮೋಹನ್ ಅವರು ಶ್ರೇಯಸ್ಸಿನ ಜೊತೆ ಸೆಂಟ್ರಲ್ ಮಾಲಿನಲ್ಲಿದ್ದಾಗ, ಜಯಾ, ಮೋಹನ್ ಅವರಿಗೆ ಫೋನ್ ಮಾಡಿ ‘ಸರ್ ನಿಮ್ಮ ಪೇಶಂಟ್ ಸಚ್ಚಿನ್ ಅವರು ನಿಮ್ಮನ್ನು ತುರ್ತಾಗಿ ಕಾಣಬೇಕಂತೆ ಮೆಡಿಸಿನ್ ಕೆಲಸ ಮಾಡುತ್ತಿಲ್ಲವಂತೆ ಎಂದಳು. ನೋಡು ಜಯ ನಾನು ಈಗ ನನ್ನ ಮಗನ ಜೊತೆ ಕಾಲ ಕಳೆಯುವುದು ಮುಖ್ಯ, ಸಚ್ಚಿನ್ನಿಗೆ ಡಾಕ್ಟರ್ ಮೈಸೂರಿಗೆ ಹೋಗಿದ್ದಾರೆ, ಸೋಮವಾರ ಬೆಳಗ್ಗೆಯೇ ಸಿಗುವುದು ಎಂದು ಹೇಳಿಬಿಡು ಎಂದರು.

ಶ್ರೇಯಸ್ ಹೊರಡುವ ದಿನ ಬಂದೇಬಿಟ್ಟಿತು. ಶ್ರೇಯಸ್ಸನ್ನು ಮೋಹನ್ ಮತ್ತು ಶೀಲಾ ಬೆಂಗಳೂರಿನ ಏರ್ಪೋರ್ಟಿಗೆ
ತಲುಪಿಸಿ ಬಿಳ್ಕೊಟ್ಟರು. ಶ್ರೇಯಸ್ ಹೊಸದಾಗಿ ಕಂಡು ಕೊಂಡಿದ್ದ ಸ್ವಾತಂತ್ರದ ರುಚಿ ಅನುಭವಿಸಲು ಶುರುಮಾಡಿದ. ಏರ್ಪೋರ್ಟ್ ಡ್ಯೂಟಿ ಫ್ರೀ ಶಾಪಿನಲ್ಲಿ ತಿರುಗಿ ಅಲ್ಲಿ ಕೊಡುವ ಫ್ರೀ ಪೆರ್ಫ್ಯೂಮ್ ಗಳನ್ನು ಪರೀಕ್ಷಿಸಿ, ಕೆಲವು ಸ್ಯಾಂಪಲ್ ಗಿಟ್ಟಿದ್ದ ಬಾಟಲ್ಗಳಿಂದ ಧಾರಾಳವಾಗಿ ಮೈಗೆ ಸ್ಪ್ರೇ ಮಾಡಿಕೊಂಡ. ಕೆಲವು ರೆಬಾನ್ ಕಪ್ಪು ಕನ್ನಡಕವನ್ನು ಪ್ರಯತ್ನಿಸಿ ಕನ್ನಡಿಯಲ್ಲಿ ತನ್ನನ್ನು ತಾನೇ ಮೆಚ್ಚಿಕೊಂಡ. ಕಿರಿಯ ಸೇಲ್ಸ್ ಹುಡುಗಿಯರತ್ತ ನೋಡಿ ಕಿರು ನಗೆ ಬೀರಿದ. ಕೊನೆಗೆ ತನ್ನ ಗಡಿಯಾರ ನೋಡಿಕೊಂಡು ಲಂಡನ್ ಗೆ ಹೊರಟಿದ್ದ ಏರ ಇಂಡಿಯಾದ ವಿಮಾನದ ಗೇಟ್ ನಂಬರ್ 10 ರ ಕಡೆಗೆ ಬಿರಿಸುನ ಹೆಜ್ಜೆಯನ್ನು ಹಾಕಿ, ಚೆಕಿನ್ ಮುಗಿಸಿ ವಿಮಾನದ ಒಳಗೆ ಆಸೀನನಾದ. ತನ್ನ ಅಪ್ಪನಿಗೆ ಮೆಸೇಜ್ ಮಾಡಿ ಸರಾಗವಾಗಿ ಚೆಕಿನ್ ಆಗಿದೆಯೆಂದು ಅಮ್ಮನಿಗೂ ತಿಳಿಸುವಂತೆ ಹೇಳಿದ. ವಿಮಾನದಲ್ಲಿನ ಒಂದು ಹೆಣ್ಣು ಮಧುರ ಧ್ವನಿ ಲಂಡನ್ನಿಗೆ ಹೊರಟಿರುವ ಏರ ಇಂಡಿಯಾ 133 ವಿಮಾನಕ್ಕೆ ಎಲ್ಲರನ್ನು ಸ್ವಾಗತಿಸಿದ ನಂತರ ರಕ್ಷಣಾ ನಿಯಮಗಳನ್ನು ಬಿತ್ತರಿಸಲಾಯಿತು. ಸ್ವಲ್ಪ ದೂರ ಚಲಿಸಿದ ವಿಮಾನ ರನ್ವೇ ಬಳಿ ಆದೇಶಕ್ಕೆ ಕಾಯುತ್ತಿತ್ತು. ಒಂದು ಗಡುಸಾದ ಧ್ವನಿ ‘ಕ್ಯಾಬಿನ್ ಕ್ರೂ ರೆಡಿ ಫಾರ್ ಟೇಕ್ ಆಫ್’ ಎಂದಿತು. ಕಗ್ಗತ್ತಲಿನಲ್ಲಿ, ಗುಡುಗಿನ ಶಬ್ದದಲ್ಲಿ, ಶರವೇಗದಲ್ಲಿ ವಿಮಾನ ಕವಿದಿದ್ದ ಮೋಡಗಳನ್ನು ಭೇಧಿಸಿಕೊಂಡು ಮೇಲಕ್ಕೇರಿತು!

ಅಂದು ವಾರಾಂತ್ಯವಾದುದರಿಂದ ಮೋಹನ್ ಇನ್ನು ಹಾಸಿಗೆಯಲ್ಲೇ ಹೊರಳಾಡುತ್ತಾ ನಿಧಾನದಲ್ಲಿ ಎದ್ದರಾಯಿತು ಎನ್ನುವ ಅನಿಸಿಕೆಯಲ್ಲಿ ನಿದ್ದೆ ಎಚ್ಚರಗಳ ನಡುವಿನಲ್ಲಿದ್ದರು. ಅವರಿಗೆ ಒಂದು ಕರೆ ಬಂತು. ಏರ ಇಂಡಿಯಾ ಫ್ಲೈಟ್ 133 ವಿಮಾನವು ಬೆಂಗಳೂರನ್ನು ಬಿಟ್ಟ ಅರ್ಧಗಂಟೆಯೊಳಗೆ ತನ್ನ ಸಾಮರ್ಥ್ಯವನ್ನು ಕಳೆದುಕೊಂಡು ನೆಲಕ್ಕೆ ಅಪ್ಪಳಿಸಿ ಬೆಂಕಿ ಹತ್ತಿಕೊಂಡಿರುವ ವಿಷಯವನ್ನು ತಿಳಿಸಿ, ಶ್ರೇಯಸ್ಸಿನ ಎಮರ್ಜೆನ್ಸಿ ಕಾಂಟ್ಯಾಕ್ಟ್ ವಿವರದಲ್ಲಿ ಡಾ ಮೋಹನ್ ಅವರ ಸಂಪರ್ಕದ ಮಾಹಿತಿ ಇದ್ದು ಅದನ್ನು ಬಳಿಸಿಕೊಂಡು ಫೋನ್ ಮಾಡಿರುವುದಾಗಿ ತಿಳಿಸಲಾಯಿತು. ಇನ್ನು ಹೆಚ್ಚಿನ ಮಾಹಿತಿ ಮತ್ತು ವಿವರಗಳೊಂದಿಗೆ ಮತ್ತೆ ಫೋನ್ ಮಾಡುವುದಾಗಿ ತಿಳಿಸಲಾಯಿತು. ಶ್ರೇಯಸ್ ಬದುಕ್ಕಿದ್ದಾನೋ ಇಲ್ಲವೋ ಎಂಬ ಸ್ಪಷ್ಟವಾದ ಉತ್ತರದ ನಿರೀಕ್ಷೆಯಲ್ಲಿ ನಿಮಿಷಗಳು ಗಂಟೆಗಳಾದವು. ಕೊನೆಗೂ ಅವರು ನಿರೀಕ್ಷಿಸಿದಂತೆ ಈ ಅನಾಹುತದಲ್ಲಿ ಪೈಲೆಟ್ಟನ್ನು ಒಳಗೊಂಡು ಎಲ್ಲರೂ ಮೃತರಾಗಿರುವರೆಂದು ತಿಳಿದು ಬಂತು. ಮೋಹನ್ ಮತ್ತು ಶೀಲಾ ದಂಪತಿಗಳಿಗೆ ತೀವ್ರ ಮಾನಸಿಕ ಆಘಾತ ಉಂಟಾಯಿತು. ಮನಶಾಸ್ತ್ರವನ್ನು ಆಳವಾಗಿ ಅರಿತುಕೊಂಡಿದ್ದ ದಂಪತಿಗಳು ತಮ್ಮ ಮನಸ್ಥಿತಿಯನ್ನು ಹತೋಟಿಯಲ್ಲಿಡಲು ಹೆಣಗಿ ಕಂಗಾಲಾದರು. ಮಳೆ ಸುರಿಸಿದ ಕಾರ್ಮೋಡಗಳು ಕರಗಬಹುದಾದರೂ ಮೋಹನ್ ದಂಪತಿಗಳ ಮನಸ್ಸಿನಲ್ಲಿ ಕವಿದಿದ್ದ ಕಾರ್ಮೋಡಗಳು ಅದೆಷ್ಟು ಕಣ್ಣೀರು ಸುರಿಸಿದರೂ ಕರಗಲಿಲ್ಲ. ಮತ್ತೆ ಮತ್ತೆ ಆವರಿಸುವ ಖಿನ್ನತೆಯನ್ನು ನಿಭಾಯಿಸುವುದು ಕಷ್ಟಕರವಾಯಿತು. ಬೇರೆಯವರಿಗೆ ಸರಾಗವಾಗಿ ಕೌನ್ಸಿಲ್ ಮಾಡುತ್ತಿದ್ದ ಅವರಿಗೆ ತಮ್ಮನ್ನು ತಾವೇ ಸಂತೈಸಿಕೊಳ್ಳುವುದು ಅಸಾಧ್ಯವೆನಿಸಿತು. ಮೋಹನ್ ಅವರ ಸ್ಟಡಿ ಕೋಣೆಯಲ್ಲಿದ್ದ ನೀಲಿ ಆರ್ಕಿಡ್ ತನ್ನ ದಳಗಳನ್ನು ಉದುರಿಸುತ್ತಾ ಮುರುಟಿಕೊಂಡಿತ್ತು. ಕಾವೇರಿಯ ಸಿಹಿ ನೀರಿನ ಜೊತೆ ತಮ್ಮ ಕಣ್ಣೀರನ್ನೂ ಕೂಡಿಸಿ ಎಷ್ಟು ಧಾರೆ ಎರೆದರೂ ಆರ್ಕಿಡ್ ಮತ್ತೆ ಚಿಗುರಲಿಲ್ಲ!

ಏರ ಇಂಡಿಯಾ ವಿಮಾನ ಅನಾಹುತದ ಬಗ್ಗೆ ಸಿವಿಲ್ ಏವಿಯೇಷನ್ ವಿಭಾಗದಿಂದ ಅಧಿಕೃತ ವರದಿ ಹೊರಗೆ ಬಂದು ಎಲ್ಲ ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟಗೊಂಡಿತು. ಈ ವಿಚಾರವನ್ನು ಅರಿತ ಡಾ ಮೋಹನ್ ದಂಪತಿಗಳ ಪರಿವಾರದವರು, ಗೆಳೆಯರು ಮನೆಗೆ ಬಂದು ಅವರನ್ನು ಸಂತೈಸಲು ಪ್ರಯತ್ನಿಸಿದರು. ಹೀಗೆ ಶೋಕದಲ್ಲಿ ದಿನಗಳು ಕಳೆದವು. ಸಿವಿಲ್ ಏವಿಯೇಷನ್ ವಿಭಾಗದಿಂದ ಮೊದಲ ಹಂತದ ತನಿಖಾ ರಿಪೋರ್ಟ್ ಪ್ರಕಟಗೊಂಡಿತು. ಏರ್ ಇಂಡಿಯಾ 133 ವಿಮಾನದ ಎರಡು ಎಂಜಿನ್ಗಳ ವೈಫಲ್ಯದಿಂದ ಈ ಅಪಘಾತ ಉಂಟಾಯಿತು, ಆದರೆ ಈ ವೈಫಲ್ಯದ ಮೂಲ ಕಾರಣವನ್ನು ಬ್ಲ್ಯಾಕ್ ಬಾಕ್ಸ್ ರೆಕಾರ್ಡರ್ ಪರೀಕ್ಷೆಯ ನಂತರೆವೇ ಬಹಿರಂಗಪಡಿಸಲಾಗುವುದು ಎಂದು ನಿರ್ಧರಿಸಲಾಯಿತು. ಈ ವರದಿಯು ಸೋಷಿಯಲ್ ಮೀಡಿಯಾಗಳನ್ನು ತಲುಪಿ ಜನರು ತಮಗೆ ತಿಳಿದಂತೆ ಕಾರಣಗಳನ್ನು ವ್ಯಾಖ್ಯಾನಿಸ ತೊಡಗಿದರು. ಮೋಹನ್ ಅವರನ್ನು ಕಾಣಲು ಬಂದಿದ್ದ ವೆಂಕಟೇಶ್ ‘ಮೋಹನ್ ಈ ಅನಾಹುತಕ್ಕೆ ಮುಸ್ಲಿಂಮರೆ ಕಾರಣ. ಪಹಲ್ಗಾಮ್ ಭಯೋತ್ಪಾದನೆಯ ಹಿನ್ನೆಲೆಯಲ್ಲಿ ಸರಿಯಾಗಿ ಪೆಟ್ಟು ತಿಂದ ಪಾಕಿಸ್ತಾನಿಗಳು ಮತ್ತು ಇಂಡಿಯಾದಲ್ಲಿರುವ ಅವರ ಕುಲ ಬಾಂಧವರು ಏನೋ ಒಳಸಂಚು ನಡೆಸಿ ವಿಮಾನದಲ್ಲಿ ಕುತಂತ್ರ ನಡೆಸಿದ್ದಾರೆ. ಎರಡು ಇಂಜನ್ ಫೇಲ್ ಆಗುವುದು ಅಂದರೇನು, ಇದು ಲಂಡನ್ನಿಗೆ ಹೋರಾಟ ಅಂತರಾಷ್ಟ್ರಿಯ ಡ್ರೀಮ್ ಲೈನರ್, ಇಲ್ಲಿ ಅದೆಷ್ಟೋ ತಾಂತ್ರಿಕ ಚೆಕಿಂಗ್ ಮತ್ತು ಕ್ಲಿಯರೆನ್ಸ್ ಇರುತ್ತೆ. ಇಲ್ಲಿ ಖಂಡಿತ ಸಾಬರ ಕೈವಾಡವಿದೆ. ಇದು ಸಾಬೀತಾಗಿದ್ದಲ್ಲಿ ಈ ಬಡ್ಡಿಮಕ್ಕಳಿಗೆ ಹಿಂದೂಗಳು ಸರಿಯಾದ ಬುದ್ಧಿ ಕಲಿಸಬೇಕು’ ಎಂದು ಬಹಳ ಆವೇಶದಿಂದ ವೆಂಕಟೇಶ್ ನುಡಿದರು. ಅದಕ್ಕೆ ಮೋಹನ್ ‘ಅಲ್ಲಾ ವೆಂಕಿ ನೀ ಸ್ವಲ್ಪ ಸುಮ್ಮನಿರು, ಈ ಅನಾಹುತಕ್ಕೆ ಕಾರಣ ಇನ್ನು ಸ್ಪಷ್ಟವಾಗಿಲ್ಲ, ಇಂತಹ ಸನ್ನಿವೇಶದಲ್ಲಿ ನೀನು ನಿನ್ನ ಊಹೆಗಳ ಮೇಲೆ ಅವರಿವರನ್ನು ಅನುಮಾನಿಸುವುದು ತಪ್ಪು. ಫೈನಲ್ ರಿಪೋರ್ಟ್ ಬರುವವರೆಗೂ ಇದರ ಬಗ್ಗೆ ಚರ್ಚೆ ಮಾಡುವುದು ತಪ್ಪು, ಇದು ನನ್ನ ಪರ್ಸನಲ್ ಟ್ರ್ಯಾಜಿಡಿ, ದಯವಿಟ್ಟು ಇದನ್ನು ಹಿಂದೂ ಮುಸ್ಲಿಂ ಸಮಸ್ಯೆಯಾಗಿ ಮಾಡಿ ರಾಜಕೀಯ ತರಬೇಡ. ಸ್ವಲ್ಪ ಸಂಯಮದಿಂದ ವರ್ತಿಸುವುದು ಒಳ್ಳೇದು’ ಎಂದರು.

ಅನಾಹುತದನಂತರ ಹಲವಾರು ವಾರಗಳೇ ಕಳೆದವು. ಶೋಕ ತಪ್ತರಾಗಿದ್ದ ಮೋಹನ್ ದಂಪತಿಗಳು ಸಾವಧಾನವಾಗಿ ಚೇತರಿಸಿಕೊಳ್ಳುತ್ತಿದ್ದರು. ಮೋಹನ್ ತಮ್ಮ ಕೆಲಸಕ್ಕೆ ಮರಳಿದ್ದರು. ಒಂದು ದಿನ ಮೋಹನ್ ಕೆಲಸದಲ್ಲಿ ನಿರತರಾದಾಗ ಒಂದು ಅಪರಿಚಿತ ಸಂಖ್ಯೆಯಿಂದ ಕರೆ ಬಂತು. ಮೋಹನ್ ಕಾಲ್ ಸ್ವೀಕರಿಸಿದರು.

‘ಗುಡ್ ಮಾರ್ನಿಂಗ್ ಡಾಕ್ಟರ್ ಮೋಹನ್, ನಾನು ಅಜಯ್ ತಿವಾರಿ ಏರ್ ಕ್ರ್ಯಾಷ್ ತನಿಖೆ ವಿಭಾಗದಿಂದ ಮಾತನಾಡುತ್ತಿದ್ದೇನೆ, ನಿಮ್ಮ ಜೊತೆ ಕಾನ್ಫಿಡೆಂಶಿಯಲ್ ವಿಚಾರ ಚರ್ಚೆ ಮಾಡಬೇಕು’ ಎಂದರು

‘ಪ್ಲೀಸ್ ಗೋ ಅಹೆಡ್’ ಎಂದರು ಮೋಹನ್

'ಮೊದಲಿಗೆ ನಿಮಗೂ ಮತ್ತು ನಿಮ್ಮ ಪತ್ನಿ ಶೀಲಾ ಅವರಿಗೂ ನನ್ನ ಸಂತಾಪವನ್ನು ಸೂಚಿಸಲು ಇಚ್ಛಿಸುತ್ತೇನೆ, ಸಾರೀ ಟು ಹಿಯರ್ ಎಬೌಟ್ ಯುವರ್ ಸನ್ ಶ್ರೇಯಸ್’

ಧೀರ್ಘ ನಿಟ್ಟುಸಿರು ಬಿಟ್ಟ ಮೋಹನ್ ‘ಧನ್ಯವಾದಗಳು, ಹೇಳಿ ಅಜಯ್’ ಎಂದರು

‘ಡಾಕ್ಟರ್, ಲಂಡನ್ನಿಗೆ ಹೊರಟಿದ್ದ ಏರ ಇಂಡಿಯಾ 133 ವಿಮಾನದ ಆಕ್ಸಿಡೆಂಟ್ ಬಗ್ಗೆ ಇದುವರೆಗಿನ ತನಿಖೆಯ ಪ್ರಕಾರ ವಿಮಾನದ ಎರಡು ಎಂಜಿನ್ಗಳ ವೈಫಲ್ಯ ಕಾರಣವಾಗಿದೆ. ಎರಡು ಎಂಜಿನ್ಗಳಿಗೆ ಇಂಧನ ಸರಬರಾಜಾಗಲು ಕಾಕ್ ಪಿಟ್ಟಿನ ಪ್ಯಾನೆಲ್ ಒಳಗಿನ ಇಂಧನ ನಿಯಂತ್ರಣದ ಸ್ವಿಚ್ ಆನ್ ಆಗಿರಬೇಕು. ಆದರೆ ಈ ಸನ್ನಿವೇಶದಲ್ಲಿ ಅದು ಆಫ್ ಆಗಿತ್ತು. ಅದು ಏಕೆ ಇದ್ದಕ್ಕಿದಂತೆ ಅಂತರಿಕ್ಷದಲ್ಲಿ ಆಫ್ ಆಯಿತು ಎನ್ನುವುದಕ್ಕೆ ವಿವರಣೆ ಇರಲಿಲ್ಲ. ಇತ್ತೀಚಿಗೆ ಕಾಕ್ ಪಿಟ್ ಬ್ಲಾಕ್ ಬಾಕ್ಸ್ ಪರೀಕ್ಷಿಸಿದಾಗ ಇಬ್ಬರ ಪೈಲೆಟ್ಗಳ ನಡುವಿನ ಸಂಭಾಷಣೆಯನ್ನು ಆಧರಿಸಿ ಆ ಇಂಧನ ಸ್ವಿಚ್ಚನ್ನು ಒಬ್ಬ ಪೈಲೆಟ್ ಉದ್ದೇಶ ಪೂರ್ವಕವಾಗಿ ಸ್ವಿಚ್ ಆಫ್ ಮಾಡಿರುವುದಾಗಿ ತಿಳಿದುಬಂದಿದೆ. ಇದಕ್ಕೆ ತಾಂತ್ರಿಕ ತೊಂದರೆಗಳು ಕಾರಣವಲ್ಲ ಎಂಬುದು ತಜ್ಞರ ಅಭಿಪ್ರಾಯ. ಒಬ್ಬ ನುರಿತ ಪೈಲೆಟ್ ಹೀಗೇಕೆ ತನ್ನ ವಿಮಾನವನ್ನು ತಾನೇ ನೆಲಕ್ಕೆ ಉರುಳಿಸಿದ, ಇದು ಆತ್ಮ ಹತ್ಯೆಯೇ, ಅವನಿಗೆ ಮಾನಸಿಕ ತೊಂದರೆಗಳಿತ್ತೆ ಎಂಬ ಸಹಜ ಪ್ರಶ್ನೆಗಳು ಉದ್ಭವಿಸಿವೆ. ಈ ಸೀನಿಯರ್ ಅನುಭವಿ ಕ್ಯಾಪ್ಟನ್ ಹೆಸರು ಸಚ್ಚಿನ್, ಸಚ್ಚಿನ್ ಶಾನಭಾಗ್. ಕ್ಯಾಪ್ಟನ್ ಸಚ್ಚಿನ್ನಿಗೆ ಮಾನಸಿಕ ಅಸ್ವಸ್ಥತೆ ಇತ್ತು ಎಂಬ ವಿಚಾರ ಹಿಂದೆ ಗೌಪ್ಯವಾಗಿದ್ದು ಈಗ ಅದರ ಬಗ್ಗೆ ಅನುಮಾನವಿದೆ. ನಮ್ಮ ಮೆಡಿಕಲ್ ರೆಕಾರ್ಡಿನಲ್ಲಿ ಅವನಿಗೆ ಮಾನಸಿಕ ತೊಂದರೆ ಇತ್ತು ಎಂಬುದು ದಾಖಲಾಗಿಲ್ಲ. ಹಿಂದಿನ ವೈದ್ಯಕೀಯ ಪರೀಕ್ಷೆಯಲ್ಲಿ ನಮ್ಮ ವೈದ್ಯರು ಅವನಿಗೆ ಮೆಂಟಲ್ ಹೆಲ್ತ್ ಕ್ಲಿಯರೆನ್ಸ್ ಕೊಟ್ಟಿದ್ದಾರೆ’

‘ಹೌ ಡಿಡ್ ಹೀ ಸ್ಲಿಪ್ ಥ್ರೂ ದಿ ನೆಟ್!’ ಎಂದು ಅಚ್ಚರಿಗೊಂಡರು ಮೋಹನ್

‘ಡಾಕ್ಟರ್, ಅನಾಹುತವಾದ ಮೇಲೆ ನಾವು ಸಚ್ಚಿನ್ ಮನೆಗೆ ತೆರಳಿ ಅವನ ಲ್ಯಾಪ್ ಟಾಪ್ ಮತ್ತು ಇತರ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡು ನೋಡಿದಾಗ ನಿಮ್ಮ ಮೆಡಿಕಲ್ ಸಮ್ಮರಿ ಮತ್ತು ಪ್ರಿಸ್ಕ್ರಿಪ್ಷನ್ ಗಳು ದೊರಕಿದವು. ಅವನ ವೃದ್ಧ ತಂದೆಯವರು ಬಹಳಷ್ಟು ಸಹಕರಿಸಿದರು. ನೀವು ಸಚ್ಚಿನ್ನಿನ ಖಾಸಗಿ ಸೈಕ್ಯಾಟರಿಸ್ಟ್ ಎಂದು ತಿಳಿದು ಬಂತು. ದಯವಿಟ್ಟು ನೀವು ಹೇಳಿಕೆ ಕೊಟ್ಟು ಖಾತ್ರಿಪಡಿಸಬೇಕು’

‘ಖಂಡಿತ ಅಜಯ್, ಇದು ನನಗೆ ಆಶ್ಚರ್ಯದ ಸಂಗತಿ. ಸಚಿನ್ ನನ್ನ ಪೇಶಂಟ್ ಎಂಬುದು ಸರಿ, ಆದರೆ ಅವನು ನನ್ನ ಬಳಿ ತಾನು ಸಾಫ್ಟ್ ವೆರ್ ಎಂಜಿನಿಯರ್ ಎಂದು ಸುಳ್ಳು ಹೇಳಿದ್ದಾನೆ, ನನಗೆ ಅವನು ಪೈಲೆಟ್ ಎಂಬ ವಿಚಾರ ಒಂದು ವೇಳೆ ಗೊತ್ತಾಗಿದ್ದರೂ ನಾನು ಅದನ್ನು ಪೇಶಂಟ್ ಕಾನ್ಫಿಡೆಂಶಿಯಾಲಿಟಿ ಬದ್ಧತೆಯಲ್ಲಿ ಬಹಿರಂಗ ಪಡಿಸುವುದು ಕಷ್ಟಕರವಾಗುತ್ತಿತ್ತು’

‘ಹೌದು ಡಾಕ್ಟರ್ ನಮ್ಮ ಎಷ್ಟೋ ಪೈಲೆಟ್ಗಳು ತಮಗೆ ಮಾನಸಿಕ ತೊಂದರೆ ಇದೆ ಎನ್ನುವುದನ್ನು ಬಹಿರಂಗ ಪಡಿಸುವುದಿಲ್ಲ. ನಮ್ಮ ಪೈಲೆಟ್ಗಳಲ್ಲಿ ಅದು ಇನ್ನೂ ಬಾಹಿರವಾದ ಸಂಗತಿ. ಆರ್ಥಿಕವಾಗಿ ಕಷ್ಟದಲ್ಲಿರುವ ಪೈಲೆಟ್ಗಳಿಗೆ ತಮ್ಮ ಕೆಲಸ ಕಳೆದುಕೊಳ್ಳುವ ಭಯ’

‘ಅದು ಹಾಗಿರಬೇಕಿಲ್ಲ ಇಟ್ ಇಸ್ ಸ್ಯಾಡ್’ ಎಂದರು ಮೋಹನ್

‘ಒಹ್ ಇನ್ನೊಂದು ವಿಚಾರ ಈಗ ಥಟ್ ಅಂತ ಹೊಳೆಯಿತು ಅಜಯ್. ಶ್ರೇಯಸ್ ಹೊರಡವು ಒಂದೆರಡು ದಿನಗಳ ಮುಂಚೆ ಕ್ಲಿನಿಕ್ಕಿಗೆ ಸಚ್ಚಿನ್ ಫೋನ್ ಮಾಡಿ ನನ್ನನ್ನು ಅರ್ಜೆಂಟ್ ಆಗಿ ನೋಡಬೇಕು, ಆಂಟಿ ಡೆಪ್ರೆಸ್ಸೆಂಟ್ ಮೆಡಿಸಿನ್ ಕೆಲಸ ಮಾಡುತ್ತಿಲ್ಲ ಎಂದು ಮೆಸೇಜ್ ಬಿಟ್ಟಿದ್ದ. ನಾನು ಆಗ ಶ್ರೇಯಸ್ ಜೊತೆ ಸಮಯ ಕಳೆಯಲು ರಜೆಯಲ್ಲಿದ್ದೆ. ಆ ಹಂತದಲ್ಲಿ ಬಹುಶ ಸಚ್ಚಿನ್ ಕ್ರೈಸಿಸ್ ಪಾಯಿಂಟ್ ತಲುಪಿ ಅವನಿಗೆ ಸೂಯಿಸೈಡ್ ಆಲೋಚನೆಗಳು ಉಂಟಾಗಿರಬಹುದು. ಓಹ್ ಮೈ ಗಾಡ್!! ನೋಡಿ ಅಜಯ್ ನಾನು ಎಂಥ ತಪ್ಪು ಕೆಲಸ ಮಾಡಿದೆ. ನಾನು ಅಂದು ಸಚ್ಚಿನನ್ನು ತುರ್ತಾಗಿ ನೋಡಿದ್ದರೆ, ಅವನಿಗೆ ಕೌನ್ಸಿಲ್ ಮಾಡಬಹುದಿತ್ತು, ಮೆಡಿಸಿನ್ ಬದಲಾಯಿಸಬಹುದಿತ್ತು ಬಹುಶಃ ಈ ಏರ್ ಆಕ್ಸಿಡೆಂಟನ್ನು ತಪ್ಪಿಸಬಹುದಾಗಿತ್ತು. ಇಟ್ ವಾಸ್ ಎ ಮಿಸ್ಡ್ ಆಪರ್ಚುನಿಟಿ, ಶ್ರೇಯಸ್ ಅಷ್ಟೇ ಅಲ್ಲ ನೂರಾರು ಪ್ರಯಾಣಿಕರು ಸಾಯಬೇಕಿರಲಿಲ್ಲ’ ಎಂದು ಮೋಹನ್ ಗದ್ಗದಿಸುವ ದನಿಯಲ್ಲಿ ಹೇಳುವಾಗ ಅವರ ಕಣ್ಣುಗಳು ಒದ್ದೆಯಾದವು.

ಅಜಯ್ ಕೂಡಲೇ ‘ಡಾಕ್ಟರ್ ನಿಮ್ಮನ್ನು ನೀವು ಬ್ಲೆಮ್ ಮಾಡಿಕೊಳ್ಳಬೇಡಿ. ಇದು ವ್ಯವಸ್ಥೆಯ ವೈಫಲ್ಯ. ಇದರ ಬಗ್ಗೆ ಧೀರ್ಘವಾಗಿ ಆಲೋಚಿಸ ಬೇಕಾಗಿದೆ. ಈ ವಿಚಾರವನ್ನು ದಯವಿಟ್ಟು ಬಹಿರಂಗಪಡಿಸಬೇಡಿ. ತನಿಖೆಯ ರಿಪೋರ್ಟ್ ಇನ್ನು ಕೆಲವೇ ದಿನಗಳಲ್ಲಿ ಪ್ರಕಟವಾಗುತ್ತಿದೆ. ನಾನು ಹೊರಡಬೇಕು, ಮತ್ತೆ ಕರೆ ಮಾಡುತ್ತೇನೆ, ಥ್ಯಾಂಕ್ಯೂ ಎನ್ನುತ್ತಾ ಕರೆಯನ್ನು ಮುಗಿಸಿದರು.


ಕೆಲವು ವರುಷಗಳ ತರುವಾಯ;
ಭಾರತ ಸರ್ಕಾರದ ಸಿವಿಲ್ ಏವಿಯೇಷನ್ ವಿಭಾಗದ ವೈದ್ಯಕೀಯ ಬೋರ್ಡಿನಲ್ಲಿ ಮೋಹನ್ ಅವರನ್ನು ತಜ್ಞರಾಗಿ ಆಯ್ಕೆಮಾಡಲಾಯಿತು. ಅವರ ಮಾರ್ಗದರ್ಶನದಲ್ಲಿ ಪೈಲೇಟ್ಗಳ ದೈಹಿಕ ಮತ್ತು ಮಾನಸಿಕ ಅರೋಗ್ಯ ತಪಾಸಣೆ, ಏನು, ಹೇಗೆ ಎಂಬ ವಿಷಯಗಳನ್ನು ಕುರಿತು ಹಲವಾರು ಸಲಹೆ ಸೂಚನೆಗಳನ್ನು ಒಳಗೊಂಡ ನೂತನ ದಾಖಲೆಯನ್ನು ಹೊರತರಲಾಯಿತು. ಪೈಲೆಟ್ಗಳು ತಮಗೆ ಮಾನಸಿಕ ಅಸ್ವಸ್ಥತೆ ಇದ್ದಲ್ಲಿ ಅದನ್ನು ಯಾವುದೇ ಮಾನಭಂಗ ಅಥವಾ ಒತ್ತಡಗಳಿಲ್ಲದೆ ಬಹಿರಂಗಗೊಳಿಸಲು ಉತ್ತೇಜನ ನೀಡಲಾಯಿತು, ಹಾಗೆ ಸಹಾನುಭೂತಿಯಿಂದ ಎಲ್ಲ ರೀತಿಯ ಸಹಕಾರ, ಕೌನ್ಸಿಲಿಂಗ್ ಮತ್ತು ನೆರವು ನೀಡುವುದರ ಬಗ್ಗೆ ಆಶ್ವಾಸನೆ ನೀಡಲಾಯಿತು. ಇದರ ಜೊತೆ ಜೊತೆಗೆ ವೈದ್ಯರಿಗೂ ಕೆಲವು ವಿಶೇಷ ಸನ್ನಿವೇಶಗಳಲ್ಲಿ ಕಾನ್ಫಿಡೆಂಶಿಯಾಲಿಟಿ ಬದ್ಧತೆಯನ್ನು ಏಕೆ, ಯಾವಾಗ ಮುರಿಯಬಹುದು ಎಂಬ ವಿಚಾರದಲ್ಲಿ ಮಾರ್ಗದರ್ಶನ ನೀಡಲಾಯಿತು. ಇಂಡಿಯನ್ ಪೈಲೆಟ್ ಅಸೋಸಿಯೇಷನ್ ಡಾ ಮೋಹನ್ ಅವರ ವರದಿಯನ್ನು ಸಂತೋಷದಿಂದ ಸ್ವಾಗತಿಸಿತು. ಮೋಹನ್ ದಂಪತಿಗಳು ಭಾರತೀಯ ಪೈಲೆಟ್ಗಳ ಮಾನಸಿಕ ತೊಂದರೆಗಳಿಗೆ ನೆರವು ನೀಡುವ ಸಲುವಾಗಿ 'ಬ್ಲೂ ಆರ್ಕಿಡ್' ಎಂಬ ಹೆಸರಲ್ಲಿ ಚಾರಿಟಿ ಸಂಸ್ಥೆಯನ್ನು ಹುಟ್ಟುಹಾಕಿದರು.
***

ಈ ಕಥೆಯ ಬಹುಭಾಗಗಳು ಲೇಖಕರ ಕಲ್ಪನೆಯಾಗಿದ್ದು ಇದರಲ್ಲಿನ ಕೆಲವು ಸನ್ನಿವೇಶಗಳು ನೈಜ ಘಟನೆಯನ್ನು ಆಧರಿಸಿವೆ