ನನ್ನೂರ ಹಾದಿ, ನನ್ನೂರ ಭೇಟಿ -ಡಾ. ರಾಜಶ್ರೀ ವೀ ಪಾಟೀಲ್

ಡಾ. ರಾಜಶ್ರೀ ವೀ ಪಾಟೀಲ್, ಸದ್ಯ ಲೆಸ್ಟರ್ ಗ್ಲೆನ್ ಫೀಲ್ಡ್ ಹಾಸ್ಪಿಟಲ್ ನಲ್ಲಿ ಕಾರ್ಡಿಯೋ ಥೋರಾಸಿಕ್ ರೇಡಿಯೊಲೊಜಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ . ‘ಅನಿವಾಸಿ’ಯಸಿಯಲ್ಲಿ ಒಂದಿಷ್ಟು ಜನಕ್ಕೆ ಪರಿಚಯವಿರುವ ಡಾ. ವೀರೇಶ್ ಪಾಟೀಲ ಅವರ ಪತ್ನಿ.  “ನಮಗಿಬ್ಬರು ಮುದ್ದಾದ ರಾಜಕುಮಾರಿಯರು ಖುಷಿ ಮತ್ತು ಇಂಚರ“ ಅನ್ನುತಾರೆ ಹೆಮ್ಮೆಯಿಂದ. ಅವರು ಸಹ ಅನಿವಾಸಿಗೆ ಹೊಸಬರಲ್ಲ. ಈ ಮೊದಲು ಸರಿಯಾಗಿ ಮೂರು ವರ್ಷಗಳ ಹಿಂದೆ ಅನಿವಾಸಿಯಲ್ಲಿ ಒಂದು ಲೇಖನವನ್ನು ಸಹ ಬರೆದಿದ್ದರು.(https://wp.me/p4jn5J-2OE) ಇತ್ತೀಚೆಗಷ್ಟೇ ಭಾರತಕ್ಕೆ ರಜೆಗೆಂದು ಮಕ್ಕಳೊಂದಿಗೆ ತಮ್ಮ ಊರಿಗೆ ಹೋಗಿ ಬಂದಿದ್ದಾರೆ. ಆ ಅನುಭವವನ್ನೇ ಇಲ್ಲಿ ಹಂಚಿ ಕೊಂಡಿದ್ದಾರೆ. ತಂದೆ -ತಾಯಿ, ಅತ್ತೆ-ಮಾವ ಅವರೊಡನೆ ಸಮಯ ಕಳೆದು ಹಬ್ಬ ಮಾಡಿ ಸವಿ ನೆನಪುಗಳನ್ನು ತರುವದನ್ನು ನಾವು ಸಹ ಮಾಡಿಲ್ಲವೆ?(ಮಕ್ಕಳು, ಮೊಮ್ಮಕ್ಕಳು ಬಂದದ್ದೇ ಹೆತ್ತವರಿಗೆ ಹಬ್ಬವಲ್ಲವೇ? ಆದರೂ …) ನಾವು ಶಾಲೆಯಲ್ಲಿ ಇಂಗ್ಲಿಷ್ ಟೆಕ್ಸ್ಟ್  ಪುಸ್ತಕದಲ್ಲಿ, ಕವಿತೆಗಳಲ್ಲಿ ಓದುತ್ತಿದ್ದ ವಿಕ್ಟೋರಿಯನ್ ‘Rural idyll’ ಇಂದಿನ ಇಂಗ್ಲೆಂಡಿನಲ್ಲಿ ಉಳಿದಿಲ್ಲ ಅಂತ ಬರೆದಿತ್ತು ಇತ್ತೀಚಿನ ಒಂದು ಗಾರ್ಡಿಯನ್ ಲೇಖನದಲ್ಲಿ. ಜಿ ವಿ ಅವರ ನಿಘಂಟು ಆ ಪದಕ್ಕೆ ಕೊಟ್ಟ ಅರ್ಥವಾದ ’ಹಳ್ಳಿ ಜೀವನದ ಮನೋಹರ ಜೀವನದ ವರ್ಣನೆ’ ಭಾರತದ ಹಳ್ಳಿಗಳಲ್ಲಿ ಇಂದಿಗೂ ನೋಡ ಬಹುದು. ರಾಜಶ್ರೀ ಅವರ ಶಿಗ್ಲಿಯ ಮನೆಯ ಮುಂದೆ ಕಾರಿರಬಹುದು. ಹೊಲದಲ್ಲಿ ಟ್ರಾಕ್ಟರ್ ಇರಬಹುದು. ಮನೆಯ ಹಿಂದಿನ ರೊಪ್ಪೆಯಲ್ಲಿ ಆಡುಗಳು ಮತ್ತು ’ನಮ್ಮೂರ ಹಾದಿ’ಯಲ್ಲಿ ಎಮ್ಮೆಗಳ ಹಿಂಡು, ಎತ್ತುಗಳು ಇನ್ನೂ ಇವೆ. ’ಮನೆಯ ಸುತ್ತ ಮಾನವೀಯತೆಯ ಸೆಲೆ’ಗೆ ಸಾಕ್ಷಿಯಾಗಿ ಶಾಲೆಯ ಗೆಳೆಯ ಕುಡಿಸಿದ ಜೀರಾ ಸೋಡಾ ಇದೆ ಪ್ರೀತಿ ಸವಿದು ನೀರಡಿಕೆ ತಣಿಸಲು! ಎಲ್ಲಿದೆ idyll? ನಂದನ ಇಲ್ಲಿದೆ! ಆದರೆ ಪ್ರತಿಯೊಬ್ಬರ ವಿಶಿಷ್ಟ ಅನುಭವವೂ ಭಿನ್ನ. ರಾಜಶ್ರೀ ಅವರ ಅನುಭವವನ್ನು ಅವರ ಬಾಯಲ್ಲೇ ಕೇಳುವಾ, ಓದುವಾ, ನೋಡುವಾ. ಲೇಖನ, ಕವನ ಮತ್ತು ಚಿತ್ರಗಳು ಸಹ ರಾಜಶ್ರೀ ಅವರ ಕೊಡುಗೆಯೇ! (ಸಂ)

ರಾಜಶ್ರೀ ಬರೆಯುತ್ತಾರೆ ...
ಎರಡು ವಾರದ ಹಿಂದೆ ಭಾರತಕ್ಕೆ, ಅಂದರೆ ನನ್ನೂರು ಗದಗ ಜಿಲ್ಲೆಯ, ಶಿರಹಟ್ಟಿ ತಾಲ್ಲೂಕಿನ, ಬಯಲುಸೀಮೆಯ ಸಣ್ಣ ಹಳ್ಳಿ ಶಿಗ್ಲಿಗೆ, ತಮ್ಮನ ಹೆಂಡತಿಯ ಶ್ರೀಮಂತಕೋಸ್ಕರ ಭೇಟಿ ನೀಡಿದ್ದೆವು. ಭಾರತದ ಪ್ರವಾಸದ ಬಗ್ಗೆ ಬರೆಯಲು ಹೊರಟರೆ ಪದಗಳು ಮತ್ತು ವೇಳೆ ಯಾವಾಗಲು ಅಭಾವವೇ. ನನ್ನ ಇತ್ತೀಚಿನ ಭೇಟಿಯ ಬಗ್ಗೆ ತಿಳಿದ ದೇಸಾಯಿಯವರ ಪ್ರೋತ್ಸಾಹ ದೊರಕಿದ್ದೇ ತಡ, ತಲೆಯಲ್ಲಿ ನೂರೆಂಟು ಯೋಚನೆಗಳು. ದಾವಣಗೇರೆ ಬೆಣ್ಣೆ ದೋಸೆ ಬಗ್ಗೆ ಬರೀಲಾ, ಅತ್ತೆ ಮಾವನವರ ಜೊತೆ ಭೇಟಿನೀಡಿದ ಮಲೇಬೆನ್ನೂರು ವೀರಭದ್ರೇಶ್ವರ ದೇವರ ಆಧುನಿಕ ಕಲ್ಲಿನ ಗುಡಿಯ ಬಗ್ಗೆ ಬರೀಲಾ, ಎಲ್ಲರು ಸೇರಿ ಹೋದ ನಾಕು ದಿನದ, ಸಂತಸದ ಬುಗ್ಗೆ ಹರಿಸಿದ ದಾಂಡೇಲಿಯ ಪ್ರವಾಸದ ಬಗ್ಗೆ ಬರೀಲಾ ಅಂತ ಯೋಚಿಸಿದಾಗ, ನನ್ನೂರಿಗೆ ಸರಿಸಾಟಿ ಇಲ್ಲವೆಂದೆನಿಸಿ ಬರೆದ ಈ ಚಿಕ್ಕ ಪ್ರಯತ್ನ.
ನನ್ನೂರ ಹಾದಿ , ನನ್ನೂರ ಭೇಟಿ 
ನನ್ನೂರ ಹಾದಿ , ನನ್ನೂರ ಭೇಟಿ 
ಹಸಿದವಳಿಗೆ ಹರಿವಾಣದಲ್ಲಿ ನೀಡಿದ ರೊಟ್ಟಿ ಬುತ್ತಿ 
ನನ್ನೂರ ಹಾದಿ,  ಈತ್ತೀಚಿನ ನನ್ನೂರ ಭೇಟಿ, 
ಬಾರಿ ಬಾರಿ ನಡೆದರೂ, ಬಾರಿ ಬಾರಿ ಮಾಡಿದರೂ ಇದಕಿಲ್ಲ ಸರಿಸಾಟಿ 

ಬಾಲ್ಯಕಳೆದ ಮನೆ, ಕನ್ನಡದೊಟ್ಟಿಗೆ ಬದುಕು ಕಲಿಸಿದ ಶಾಲೆ 
ಊರ ತುಂಬೆಲ್ಲ ಕಾಕಾ, ಚಿಗವ್ವಗಳು, 
ಅವರು ಕಲಿಸಿದ ಸಂಬಂಧಗಳ ಬೆಲೆ
ಮನೆಯ ಸುತ್ತ ಮಾನವೀಯತೆಯ ಸೆಲೆ,
ಶೇಂಗಾ, ಹತ್ತಿ ಹೊಲ, ಅದರಲ್ಲಿರೋ ದನಕರು, ಕುರಿಕೋಳಿಗಳು. 
ಮನತೃಪ್ತಿ ಯಾಗಲು ಇದಕ್ಕಿಂತ ಬೇಕೇ ಬೇರೆ ಚಂದದ ನೆಲೆ?

ಅಪ್ಪನೊಂದಿಗೆ ಊರ ತುಂಬೆಲ್ಲ ಟ್ರಾಕ್ಟರ್ ಸವಾರಿ,
ನನಗನ್ನಿಸಿತು ಬಾರಿ, ಬಾರಿ ನಾನೊಬ್ಬ ರಾಜಕುಮಾರಿ,
ಆದರೆ ಅವರಿಗೋ ಅನ್ನಿಸಿದ್ದು ತನ್ನದೊಂದು ಅಂಬಾರಿ,  
ಅದರಲ್ಲಿ ನನ್ನೊಂದಿಗೆ ಕುಳಿತ ಅವರ ಮೊಮ್ಮಗಳೊಬ್ಬ ವಿಶ್ವಸುಂದರಿ. 
ಸಿಕ್ಕವರಿಗೆಲ್ಲ ಪರಿಚಯಿಸಿ ಬಣ್ಣಿಸಿದ ವೈಖರಿ ಭಾರೀ. 

ಪಂಚಮಿ ಮುಂಚೆಯೆ ಮೊಮ್ಮಕ್ಕಳಿಗಾಗಿ ಬಂದಿತ್ತು ಗಂಡಮ್ಮನ ಪಂಚಮಿ ಉಂಡಿ, 
ಗೌರವ್ವ ಕೆರೆ ಸೇರಿ ಮಾಸಗಳೇ ಕಳೆದರೂ ಹೆಣ್ಣಮ್ಮನಿಂದ ಬಂದಿತ್ತು ಸಕ್ಕರೆ ಗೊಂಬೆ, 
ಇದೆಲ್ಲ ನೋಡಿ ನೆನಪಾಗಿತ್ತು ನನ್ನ ಬಾಲ್ಯದ ಪಂಚಮಿ, ಗೌರಿ ಹುಣ್ಣಿವೆ . 
ಅದಕಾಗಿ ಆಡಿಯೂ ಆಯಿತು ಜೋಕಾಲಿ, ಹಾಡಿ ಕರೆದೂ ಆಯಿತು ಗೌರವ್ವನ. 

ತಮ್ಮನೊಂದಿಗೆ ಊರ ಸಂತೆಯಲಿ ಮಾಡಿದ ಚೌಕಾಸಿ 
ನೆನಪು ಮಾಡಿತ್ತು ಬಾಲ್ಯದ ನಾಕಾಣಿ, ಎಂಟಾಣಿಯಲಿ ಬಂದ ಖುಸಿ 
ಅದನ ನೆನೆಸಿಕೊಂಡು ಮುಂದೆ ನಡೆವಾಗ ಶಾಲೆಯ ಗೆಳೆಯ 
ಅಕ್ಕರೆಯಿಂದ ಕರೆದು ಕುಡಿಸಿದ ತನ್ನಂಗಡಿಯ ಜೀರಾ ಸೋಡಾ, 
ಅನ್ನಿಸುವಂತೆ ಮಾಡಿತ್ತು ಈ ಖುಷಿಗೆ ಸರಿಸಾಟಿ ಇಲ್ಲ ನೋಡಾ!

       ಡಾ. ರಾಜಶ್ರೀ ವೀ ಪಾಟೀಲ್