ಶತಮಾನಗಳ ಹಿಂದೆ ಶರಣರ ದಾಸರ ಸಾಹಿತ್ಯದ ಚಳುವಳಿ ಪ್ರಾರಂಭವಾಗಿ ಸಮಾಜದ ಸಾಹಿತ್ಯದ ಸುಧಾರಣೆಯಾಯಿತು. ಅನಿವಾಸಿಯಲ್ಲಿ ಯುಗಾದಿಯ ಸಂಭ್ರಮದ ಜೊತೆ ಶುರುವಾದ ಸಂತರ ಸಾಹಿತ್ಯದ ಗೋಷ್ಠಿ ಅಲೆಯಾಗಿ ಸೆಲೆಯಾಗಿ ವಾರಾಂತ್ಯವಾರ ನಮ್ಮ ಮನೆಗಳಲ್ಲಿ ಹರಿಯುತ್ತಾ ಕುತೂಹಲದ ಚಳುವಳಿ ಶುರುವಾಗಿದೆ. ಈ ವಾರ ಡಾ.ಗುಡೂರ್ ಅವರ ಲೇಖನ ದಾಸ ಸಾಹಿತ್ಯದ ಕೇವಲ ಒಂದು ಪರಿಚಯವಲ್ಲ ಒಂದು ಪ್ರಬಂಧ ಅಥವಾ ಸಂಶೋಧನಾ ಬರಹ ಎಂದರೆ ತಪ್ಪಾಗಲಾರದು. ಓದುಗರಲ್ಲಿ ಕುತೂಹಲ, ಆಶ್ಚರ್ಯ ಎಲ್ಲಾ ನವರಸ ಭಾವನೆಗಳನ್ನು ಮೂಡಿಸುವ ಒಂದು ವಿವರವಾದ ವರದಿ. ಸಾಹಿತ್ಯಕ್ಕೆ ತಕ್ಕಂತೆ ಸುಂದರ ಚಿತ್ರವನ್ನು ಒದಗಿಸಿದ ಡಾ. ಗುಡೂರ್ ಅವರಿಗೆ ಶರಣು
ತಪ್ಪದೆ ಕೆಳಗಿರುವ ಧ್ವನಿ ಸುರುಳಿಯನ್ನು ಕೇಳಿ. ಸುಶ್ರಾವ್ಯವಾಗಿ ಹಾಡಿರುವ ಶ್ರೀಮತಿ ಅನ್ನಪೂರ್ಣ ಆನಂದ್ ಅವರಿಗೆ ಧನ್ಯವಾದಗಳು.
ಉತ್ಪನ್ನಾ ದ್ರಾವಿಡೇ ಸಾಹಂ ವೃದ್ಧಿಂ ಕರ್ನಾಟಕೇ ಗತಾ | ಭಕ್ತಿಪಂಥವು ದ್ರಾವಿಡದಲ್ಲಿ ಹುಟ್ಟಿ ಕರ್ನಾಟಕದಲ್ಲಿ ಬೆಳೆಯಿತು (ಪದ್ಮಪುರಾಣ ೧-೧೮)
೧೨ನೆಯ ಶತಮಾನದಲ್ಲಿ ಉಡುಪಿಯ ಹತ್ತಿರದ ಪಾಜಕ ಕ್ಷೇತ್ರದಲ್ಲಿ ಹುಟ್ಟಿ, ಅಖಂಡ ಅಧ್ಯಯನ ಮಾಡಿ, ದೇಶಾದ್ಯಂತ ಪರ್ಯಟನ ಮಾಡಿ ಉಡುಪಿಯಲ್ಲಿ ನೆಲೆಸಿದ ಆಚಾರ್ಯ ಮಧ್ವರು ಪ್ರತಿಪಾದಿಸಿದ ದ್ವೈತ ವೈಷ್ಣವ ತತ್ತ್ವ ಒಂದು ಹೊಸ ಪಂಥಕ್ಕೆ ಕಾರಣವಾಯಿತು. ಭಕ್ತಿಪಂಥ ಹೊಸದೇನಲ್ಲ, ಅದಾಗಲೇ ತಮಿಳುನಾಡು ಕರ್ನಾಟಕಗಳಲ್ಲಿ ಸಾಕಷ್ಟು ಪ್ರಚಲಿತವಾಗಿತ್ತು. ಆ ಸುತ್ತಮುತ್ತಲಿನ ಆರು ಶತಮಾನಗಳು ಭಕ್ತಿಪಂಥದ ಸುವರ್ಣಯುಗವೆಂದರೆ ತಪ್ಪಾಗಲಿಕ್ಕಿಲ್ಲ. ಅದರಲ್ಲೂ, ಸಂಸ್ಕೃತದಲ್ಲಿ ಆಗಲೇ ಬರೆದು ಪ್ರಚಲಿತವಿದ್ದ ಅನೇಕ ಗ್ರಂಥಗಳನ್ನು, ತತ್ತ್ವಗಳನ್ನು ಸಾಮಾನ್ಯ ಮನುಷ್ಯನ ದಿನಬಳಕೆಯ ಭಾಷೆಗೆ ತಂದವರು ಈ ಕಾಲದಲ್ಲಿ ಕಂಡುಬರುತ್ತಾರೆ.
ಭಾರತದ ವಿವಿಧ ಭಾಗಗಳ ಭಕ್ತಿಪಂಥದ ಪ್ರಮುಖರು: ತಮಿಳುನಾಡಿನ – ನಾಯನಾರರು ಮತ್ತು ಆಳ್ವಾರರು ಕರ್ನಾಟಕದಲ್ಲಿ – ಶರಣರು ಮತ್ತು ಹರಿದಾಸರು ಆಂಧ್ರಪ್ರದೇಶ – ತ್ಯಾಗರಾಜರು, ಅಣ್ಣಮಾಚಾರ್ಯ, ಭದ್ರಗಿರಿ ರಾಮದಾಸರು, ಪೋತನ, ಮಹಾರಾಷ್ಟ್ರದಲ್ಲಿ – ಜ್ಞಾನದೇವ, ಮುಕ್ತಾಬಾಯಿ, ನಾಮದೇವ ಇತರ ಅಭಂಗ ಕೀರ್ತನಕಾರರು ಗುಜರಾತಿನಲ್ಲಿ – ನರಸಿಂಹ ಮೆಹತಾ ಮತ್ತಿತರರು ರಾಜಸ್ಥಾನ – ಮೀರಾಬಾಯಿ ಉತ್ತರ ಪ್ರದೇಶ – ಕಬೀರ, ಸೂರದಾಸ, ತುಲಸಿದಾಸ ಬಂಗಾಲದಲ್ಲಿ – ಕೃಷ್ಣ ಚೈತನ್ಯ, ಚಂಡೀದಾಸ, ಜಯದೇವಕವಿ
ಕರ್ನಾಟಕದ ಹರಿದಾಸ ಪಂಥ: ಈ ಪಂಥದಲ್ಲಿ ಎರಡು ಮುಖ್ಯ ಬಣಗಳಿವೆ – ೧) ವ್ಯಾಸಕೂಟ: ಇದರಲ್ಲಿ ಇರುವವರು ಸನ್ಯಾಸಿಗಳು, ಸಂಸ್ಕೃತ ಪಾಂಡಿತ್ಯವುಳ್ಳವರು. ಕನ್ನಡದಲ್ಲಿ ದಾಸಸಾಹಿತ್ಯದ ರಚನೆಗೆ ಮೊದಲ ಹೆಜ್ಜೆಯಿಟ್ಟವರು. ೨) ದಾಸಕೂಟ: ಇವರು ಸಂಸಾರಿಗಳು; ಈ ಜಗತ್ತಿನಲ್ಲಿ ಇದ್ದುಕೊಂಡೇ ದಾಸಪಂಥದ ಜೀವನಕ್ಕೆ ಒಪ್ಪಿಸಿಕೊಂಡವರು. ಹರಿದಾಸ ಎಂದರೆ ಮೊದಲು ಮನಸ್ಸಿಗೆ ಬರುವವರು ಎರಡನೆಯ ಗುಂಪಿಗೆ ಸೇರಿದವರು. ಪ್ರತಿದಿನ ಬೆಳಗ್ಗೆ ಶುಚಿರ್ಭೂತರಾಗಿ, ಸರಳ ಉಡುಗೆಯನ್ನುಟ್ಟು, ತಾಳ-ತಂಬೂರಿಗಳನ್ನು ಹಿಡಿದು ಹೊರಟು, ದೇವರ ನಾಮ ಸಂಕೀರ್ತನೆಗಳನ್ನು ಹಾಡಿ-ಕುಣಿದು ಬಂದರೆಂದರೆ ಆಯಿತು.
ಹರಿದಾಸರೆಲ್ಲರಲ್ಲೂ ಕಂಡುಬರುವ ಸಾಮಾನ್ಯ ಅಂಶಗಳು (common factors): ೧) ಭಕ್ತ ಮತ್ತು ದೇವರುಗಳ ಮಧ್ಯದ ಸಂಬಂಧ – ನಿರ್ವ್ಯಾಜ ಪ್ರೀತಿ / ಭಕ್ತಿ / ಸಮರ್ಪಣಗಳ ಮಿಶ್ರಣ ೨) ವೈಷ್ಣವ ಅದರಲ್ಲೂ ಮಾಧ್ವ ಸಂಪ್ರದಾಯ – ದ್ವೈತ ಪದ್ಧತಿ ಮುಖ್ಯ (ಬೇರೆಯವರೂ ಇದ್ದರು) ೩) ಹರಿದಾಸ ವೃತ್ತಿ / ಜೀವನ ಶೈಲಿ – ಮಧುಕರ ವೃತ್ತಿಯಿಂದ ಬಂದದ್ದು ಅಂದಿನದು ಅಂದಿಗೆ; ನಾಳೆಗಿಡದೆ, ಸಾಲ ಮಾಡದೆ, ಆಸೆಯಿಲ್ಲದೆ ಇರುವ ಬದುಕು. (ಮಧುಕರ ವೃತ್ತಿ ಎನ್ನದು ಬಲು ಚೆನ್ನದು.) ೪) ಜೀವನ ತತ್ತ್ವಗಳು, ವೈರಾಗ್ಯ, ವಿಷ್ಣುವಿನ ಅವತಾರಗಳು, ಮೋಕ್ಷದ ಗುರಿ – ಈ ವಿಷಯಗಳ ಕುರಿತು ರಚಿಸಿದ ಪದಗಳನ್ನು ಕನ್ನಡದಲ್ಲಿ ಹಾಡಿ ಹಂಚುವುದು. ೫) ಹರಿದಾಸ ದೀಕ್ಷೆ, ಅಂಕಿತಗಳ ಬಳಕೆ: ಉದಾಹರಣೆಗೆ – ಪುರಂದರವಿಟ್ಠಲ (ಪುರಂದರ ದಾಸರು), ವಿಜಯವಿಟ್ಠಲ (ವಿಜಯದಾಸರು) ಇತ್ಯಾದಿ ವಿಟ್ಠಲ ನಾಮಾಂಕಿತಗಳು; ಕಾಗಿನೆಲೆಯಾದಿಕೇಶವ (ಕನಕ ದಾಸರು), ಕೃಷ್ಣ (ವ್ಯಾಸರಾಜರು), ಹಯವದನ (ವಾದಿರಾಜರು), ವೇಣುಗೋಪಾಲ (ರಾಘವೇಂದ್ರರು). ೬) ಹೆಚ್ಚನವರು ಬ್ರಾಹ್ಮಣರು, ಆದರೆ ಎಲ್ಲರೂ ಅಲ್ಲ. ಧನಿಕರು (ಪುರಂದರ ದಾಸರು), ಕಡು ಬಡವರು (ವಿಜಯ / ಗೋಪಾಲ ದಾಸರು) ಉದ್ದಾಮ ಪಂಡಿತರು (ಜಗನ್ನಾಥ ದಾಸರು) ಅಥವಾ ವಿದ್ಯೆಯಿಲ್ಲದವರು (ಪ್ರಸನ್ನ ವೇಂಕಟ ದಾಸರು) ರೋಗಿ (ಮೋಹನ ದಾಸರು),
ಕಾಲಮಾನ: ದಾಸಸಾಹಿತ್ಯದ ಬೆಳವಣಿಗೆಯ ದೃಷ್ಟಿಯಿಂದ 12ನೆಯ ಶತಮಾನದಿಂದ 19ನೆಯ ಶತಮಾನದವರೆಗಿನ ಕಾಲವನ್ನು ಮೂರು ಘಟ್ಟಗಳಾಗಿ ವಿಂಗಡಿಸಬಹುದು. ನರಹರಿತೀರ್ಥರಿಂದ ಪುರಂದರ-ಕನಕದಾಸರವರೆಗಿನ ಅವಧಿ, ವಿಜಯದಾಸರಿಂದ ಜಗನ್ನಾಥದಾಸರವರೆಗಿನ ಅವಧಿ ಮತ್ತು ಅವರ ಶಿಷ್ಯ-ಪ್ರಶಿಷ್ಯರ ಅವಧಿ ಮುಖ್ಯವಾದುವು.
೧೩ ರಿಂದ ೧೫ನೆಯ ಶತಮಾನ: ಅಚಲಾನಂದ ದಾಸರು ಮತ್ತು ನರಹರಿ ತೀರ್ಥರು ಮೊದಲ ಕನ್ನಡ ದಾಸಸಾಹಿತ್ಯದ ಹೆಸರುಗಳು. ಶ್ರೀಪಾದರಾಜರು (ರಂಗವಿಠಲ) – ಕನ್ನಡ ಹಾಡುಗಳು ರಚನೆ ಮತ್ತು ದಿನನಿತ್ಯದ ಪೂಜೆಯಲ್ಲಿ ನೃತ್ಯ - ಸಂಗೀತ ಸಹಿತ ಹಾಡುಗಳ ಬಳಕೆಯನ್ನು ಆರಂಭಿಸಿದವರು. ವ್ಯಾಸರಾಜರು (ಶ್ರೀಕೃಷ್ಣ): ವಿಜಯನಗರದ ಅರಸ ಕೃಷ್ಣದೇವರಾಯನ ಸಮಕಾಲೀನರು. ವಾದಿರಾಜರು (ಹಯವದನ), ಪುರಂದರ ದಾಸರು, ಕನಕ ದಾಸರು (ಕಾಗಿನೆಲೆ ಆದಿಕೇಶವ), ವೈಕುಂಠ ದಾಸರು ಮುಂತಾದವರು. ೧೬ - ೧೭ನೆಯ ಶತಮಾನ: ರಾಘವೇಂದ್ರ ತೀರ್ಥರು (ಧೀರವೇಣುಗೋಪಾಲ): ಪುರಂದರದಾಸರ ಕಾಲದ ನಂತರ ಸ್ವಲ್ಪ ಕಡಿಮೆಯಾಗಿದ್ದ ದಾಸಸಾಹಿತ್ಯವನ್ನು ಪುನರುಜ್ಜೀವನಗೊಳಿಸಿದವರು. ವಿಜಯ ದಾಸರು (ವಿಜಯವಿಟ್ಠಲ), ಪ್ರಸನ್ನವೇಂಕಟ ದಾಸರು, ಹೆಳವನಕಟ್ಟೆ ಗಿರಿಯಮ್ಮ, ನರಸಿಂಹ ದಾಸರು, ಜಗನ್ನಾಥ ದಾಸರು, ಪಂಗನಾಮದ ತಿಮ್ಮಣ್ಣದಾಸರು, ಗೋಪಾಲದಾಸರು, ಮೋಹನದಾಸರು, ಮುಂತಾದವರು. ೧೮ ನೆಯ ಶತಮಾನದಿಂದ ಮುಂದೆ: ಹಲವಾರು ದಾಸರುಗಳು – ಲಿಂಗಸೂಗೂರು ಯೋಗೇಂದ್ರ (ಪ್ರಾಣೇಶವಿಟ್ಠಲ), ಕರ್ಜಗಿ ದಾಸಪ್ಪ (ಶ್ರೀದವಿಟ್ಠಲ), ಗದ್ವಾಲ ಸುಬ್ಬಣ್ಣದಾಸರು (ಕೇಶವವಿಟ್ಠಲ), ಹುಂಡೇಕಾರದಾಸರು (ಶ್ರೀಶವಿಟ್ಠಲ), ಸುರಪುರದ ಭೀಮದಾಸರು (ಶ್ರೀಶಕೇಶವವಿಟ್ಠಲ), ಸಂತೆಬೆನ್ನೂರು ರಾಮಾಚಾರ್ಯರು (ಕಮಲಾಪತಿವಿಠಲ), ಗರ್ಗೆಶ್ವರಿ ಕೇಶವರಾಯರು (ಮಧ್ವೇಶವಿಠಲ), ಇನ್ನೂ ಹಲವಾರು ದಾಸರುಗಳು ಈ ಪರಂಪರೆಯನ್ನು ಮುಂದುವರೆಸಿದರು.
ಹರಿದಾಸ ಸಾಹಿತ್ಯ: ಸಾಹಿತ್ಯ ರೂಪಗಳು – ವಚನ, ರಗಳೆ, ಚಂಪೂ, ಷಟ್ಪದಿ ಇತ್ಯಾದಿ ಛಂದೋಬದ್ಧ ರಚನೆಗಳು ಇದ್ದರೂ, ಸಂಗೀತವನ್ನು ಮುಖ್ಯವಾಗಿ ಇಟ್ಟುಕೊಂಡು ರಚಿಸಿದ ಸಾಹಿತ್ಯ ಕನ್ನಡದಲ್ಲಿ ಹರಿದಾಸ ಸಾಹಿತ್ಯ ಮೊದಲು. ಕರ್ನಾಟಕದಲ್ಲಿ ಭಕ್ತಿಯ ಹೊನಲನ್ನು ಜನಸಾಮಾನ್ಯರ ಭಾಷೆ ಕನ್ನಡಕ್ಕೆ ತಂದ ಯಶಸ್ಸು ಶರಣರ ವಚನಗಳು ಮತ್ತು ದಾಸರ ಸಾಹಿತ್ಯಕ್ಕೆ ಸಲ್ಲುತ್ತದೆ. ಭಕ್ತಿಸಾಹಿತ್ಯದ ಮೂಲ ಉದ್ದೇಶವೇ ಜೀವನದ ಮೌಲ್ಯಗಳನ್ನು ತಿಳಿಸಿ ಸಾಮಾನ್ಯರ ಬದುಕನ್ನು ಉದಾತಗೊಳಿಸುವುದು. ಕನ್ನಡ ಸಾಹಿತ್ಯದಲ್ಲಿ ಈ ಉದ್ದೇಶ ಶಿವಶರಣರಿಂದಲೂ ಹರಿದಾಸರಿಂದಲೂ ಸಾಧಿತವಾಗಿರುವುದನ್ನು ಕಾಣುತ್ತೇವೆ. ವಚನಕಾರರ ಮೂಲ ಕಾಳಜಿ ಸಾಮಾಜಿಕವಾಗಿದ್ದರೆ, ದಾಸಸಾಹಿತ್ಯದ ಪ್ರಮುಖ ಧ್ಯೇಯ ಭಕ್ತಿಸಿದ್ಧಾಂತವಾಗಿತ್ತು ಅನ್ನುವುದು ಸ್ಪಷ್ಟ.
ಧರ್ಮದ ಮೂಲಕ ಸಮಾಜವನ್ನು ಕಾಣಲು, ತಿದ್ದಲು ಶರಣರು ಮತ್ತು ದಾಸರು ಈ ಅಗತ್ಯವನ್ನು ಮನಗಂಡರು. ಧರ್ಮ ಮುಖ್ಯ ಮಾಧ್ಯಮವಾದರೆ ಸಮಾಜ ಚಿಂತನೆ ಇವರ ಮುಖ್ಯ ಕಾಳಜಿಯಾಗಿದೆ. ಅಂಧಾಚರಣೆಯ ನಿರ್ಮೂಲನ, ವ್ಯಕ್ತಿತ್ವ ನಿರ್ಮಾಣ, ತನ್ಮೂಲಕ ಆರೋಗ್ಯಕರ ವಾತಾವರಣದ ನಿರ್ಮಾಣಕ್ಕೆ ಶರಣರು ಮತ್ತು ದಾಸರು ಯತ್ನಿಸಿದರು. ಈ ಯತ್ನದ ಕಾರಣವಾಗಿ ವಚನಗಳು, ಕೀರ್ತನೆಗಳು, ಸುಳಾದಿ ಮತ್ತು ಉಗಾಭೋಗಗಳು ಮೂಡಿಬಂದವು. ಭಕ್ತಿಸಿದ್ಧಾಂತದ ಜೊತೆಗೆ ಸಚ್ಚಾರಿತ್ರ್ಯ, ಸದಾಚಾರ ಹಾಗೂ ಸಾತ್ವಿಕ ಜೀವನದ ಕಡೆಗೂ ಈ ಸಾಹಿತ್ಯದ ಹರಿವಿದೆ. ಲೋಕ ನೀತಿಯ ಮಾತುಗಳಲ್ಲಿ ಸುಖಜೀವನದ ಸಂದೇಶ ನೀಡುವ ಮೂಲಕ ಸಾರ್ಥಕ ಬದುಕಿನ ಕರೆ ನೀಡಿದ್ದಾರೆ ಎನ್ನುವುದೂ ಸತ್ಯ.
ಹರಿದಾಸರ ಸಾಧನೆ ಮೂಲವಾಗಿ ಆಧ್ಯಾತ್ಮಿಕ ಪ್ರಪಂಚದಲ್ಲಿ ಆದರೂ ಅವರು ಸಾಮಾಜಿಕ ಜೀವನವನ್ನು ಕಡೆಗಣಿಸಿದವರಲ್ಲ. ಕಾವ್ಯ ಸೃಷ್ಟಿ ಮಾಡುವ ಕವಿ ಸಮಾಜದಿಂದಲೇ ಮೂಡಿ ಬಂದಿರುತ್ತಾನೆ, ಆದ್ದರಿಂದ ಸಮಾಜವನ್ನು ಬಿಟ್ಟು ಪ್ರತ್ಯೇಕವಾಗಿ ಉಳಿದ ಸಾಹಿತ್ಯಕ್ಕೆ ಇಲ್ಲಿ ಅಸ್ತಿತ್ವ ಇಲ್ಲ. ಕಾವ್ಯ ಸೃಷ್ಟಿಯ ಈ ಪ್ರಕ್ರಿಯೆಯಲ್ಲಿ ಸಮಾಜ ಮತ್ತು ಸಾಹಿತ್ಯಗಳ ಸಂಬಂಧ ಜೀವಂತವಾಗಿ, ಪರಸ್ಪರ ಪೂರಕವಾಗಿ ಇರಬೇಕಾದ ಅಗತ್ಯ ಇದೆ.
ದಾಸ ಸಾಹಿತ್ಯದ ಮೂಲ ತತ್ವ – ಧರ್ಮ – ಮೋಕ್ಷಗಳ ಪ್ರಚಾರ ನೆಲದ ಭಾಷೆಯಲ್ಲಿ ತಂದ ಕೆಲಸದಲ್ಲಿ ದಾಸರು ಮೊದಲಿನವರಲ್ಲ – ಬೌದ್ಧರು ಪಾಲಿಯಲ್ಲೂ, ಜೈನರು ಪ್ರಾಕೃತದಲ್ಲೂ, ಶರಣರು ಕನ್ನಡದಲ್ಲೂ ಆಗಲೇ ಶುರು ಮಾಡಿದ್ದ ಕಾರ್ಯವನ್ನೇ ಮುಂದುವರೆಸಿದವರು ಹರಿದಾಸರು. ಇವರಲ್ಲಿ ಅನೇಕರು ಸಂಸ್ಕೃತ ಪಂಡಿತರಾಗಿದ್ದೂ, ಗ್ರಂಥಗಳನ್ನು ರಚಿಸಿದ್ದೂ ಜನಸಾಮಾನ್ಯರಿಗೆ ತಲುಪಿಸುವುದಕ್ಕೋಸ್ಕರ ಕನ್ನಡವನ್ನು ಮಾಧ್ಯಮವಾಗಿಸಿಕೊಂಡು ರಚನೆಗಳನ್ನು ಮಾಡಿದರು.
ಈ ಮುಂಚೆ ಹೇಳಿದಂತೆ, ದಾಸ ಸಾಹಿತ್ಯದಲ್ಲಿ ಹಲವಾರು ರೀತಿಯ ರಚನೆಗಳಿವೆ – ಕೀರ್ತನೆಗಳು, ಸುಳಾದಿ, ಉಗಾಭೋಗಗಳು ಮುಖ್ಯವಾದವು. ಇವೆಲ್ಲ ರಚನೆಗಳು ಮೂಲವಾಗಿ ಸಂಗೀತಕ್ಕೆ ಒಳಪಡುವ ರೂಪದಲ್ಲಿವೆ. ಸುಳಾದಿ ಮತ್ತು ಉಗಾಭೋಗಗಳಿಗೆ ವಚನಸಾಹಿತ್ಯ ಪ್ರಕಾರದ ಪ್ರೇರಣೆ ಇರಬಹುದು ಎನ್ನುವ ಮಾತಿದೆ. ಇನ್ನು ಹಲವರ ಪ್ರಕಾರ ಶಿವಶರಣರ ವಚನಗಳು ಉಕ್ತಿಗಳು, ದಾಸಸಾಹಿತ್ಯ ಗೇಯ ಪ್ರಕಾರ - ಹೀಗಾಗಿ ಸಂಗೀತದ ಛಾಯೆ ಇರುತ್ತದೆ ಎನ್ನುವುದು. ಸುಳಾದಿ ಮತ್ತು ಉಗಾಭೋಗಗಳಲ್ಲಿ ಧಾರ್ಮಿಕ ವಿಚಾರಗಳು, ಆಧ್ಯಾತ್ಮಿಕ ತತ್ವಗಳು ಮತ್ತು ದೈವ ಸ್ತುತಿಗಳ ನಿರೂಪಣೆ ಇದೆ. ಭಕ್ತನಾದವನ ಆರ್ತಭಾವ ಮತ್ತೂ ಅಂತರಂಗದರ್ಶನವು ಆಗುತ್ತದೆ. ಇದಲ್ಲದೇ ಕನಕದಾಸರ ಹರಿಭಕ್ತಿಸಾರ, ಮೋಹನತರಂಗಿಣಿ ಮತ್ತು ಜಗನ್ನಾಥದಾಸರ ಹರಿಕಥಾಮೃತಸಾರದಂತಹ ದೊಡ್ಡ ಕೃತಿಗಳೂ ಇವೆ. ಸುವ್ವಿಪದ, ಕೋಲಾಟದ ಪದ, ಜೋ ಜೋ ಕೊರವಂಜಿ ಪದಗಳಂತಹ ಜಾನಪದ ಸಾಹಿತ್ಯಿಕ ರಚನೆಗಳೂ ಇವೆ.
ಹರಿದಾಸ ಸಾಹಿತ್ಯ ಮತ್ತು ಕನ್ನಡ: (ಆರ್ ರಾಮಕೃಷ್ಣ – ದಾಸಸಾಹಿತ್ಯ ದರ್ಶನ – ed. ಎಚ್ಚೆಸ್ಕೆ) ಹರಿದಾಸರ ಸಾಹಿತ್ಯದ ಮಾಧ್ಯಮ ಕನ್ನಡವಾಯಿತು, ಅದರಲ್ಲೂ ನಡುಗನ್ನಡವೇ ಮುಖ್ಯವಾದರೂ, ಹೊಸಗನ್ನಡದ ಬಳಕೆಯಿದೆ.
ಶರಣರಂತೆ ದಾಸರೂ ಕನ್ನಡವನ್ನು ಬಳಸಿ ಬೆಳೆಸಿದರು. ಹಲವಾರು ತರಹದ ಪ್ರಯೋಗಗಳನ್ನು ದಾಸ ಸಾಹಿತ್ಯದಲ್ಲಿ ಕಾಣಬಹುದು: ೧) ಕನ್ನಡದ ಕುರುಹಾದ ವ್ಯಂಜನಾಂತ ಪದಗಳಿಗೆ ಸ್ವರಾಂತ್ಯದ ಬಳಕೆ – ನಾನ್ – ನಾನು, ಪೆಣ್ – ಹೆಣ್ಣು, ಪಾಲ್ – ಪಾಲು, ಕೇಳ್ – ಕೇಳು,
೩) ಹೆಚ್ಚಿನವರು ಉತ್ತರ ಕರ್ನಾಟಕದವರಾಗಿದ್ದರಿಂದ, ಉತ್ತರ ಕರ್ನಾಟಕದ ಭಾಷಾವೈಶಿಷ್ಟ್ಯ (dialect) ದಾಸರ ರಚನೆಗಳಲ್ಲಿ ಬಳಕೆಯಾಗುತ್ತದೆ. ಉದಾ. ಕಂಡೀರ್ಯಾ, ತಂದೀರ್ಯಾ ಇತ್ಯಾದಿ
೪) ಛಂದಸ್ಸಿಗನುಗುಣವಾಗಿ ಪದಗಳ ಬದಲಾವಣೆ – ಘನ್ನ, ವಿಟ್ಠಲನ್ನ ಇತ್ಯಾದಿ ಸಜಾತೀಯ ಒತ್ತಕ್ಷರಗಳ ಬಳಕೆ.
೫) ಇನ್ನು ಮುದ್ದುಕೃಷ್ಣನ ಬಾಲಲೀಲೆಗಳನ್ನು ಹೇಳುವಾಗ ಮುದ್ದು ಮಾತಿನ ಬಳಕೆ ಬೇಕೇಬೇಕಲ್ಲ? ಗುಮ್ಮ, ಬೂಚಿ, ಮಮ್ಮು, ಅಮ್ಮಿ, ತಾಚಿ, ಪಾಚಿಕೊ ಇತ್ಯಾದಿ ಪದಗಳ ಬಳಕೆ ಹೇರಳವಾಗಿ ಕಾಣುತ್ತವೆ.
೬) ಸಂಸ್ಕೃತ ಪದಗಳ ಬಳಕೆ ಹರಿದಾಸರ ಸಂಸ್ಕೃತ ಪಾಂಡಿತ್ಯವನ್ನು ತೋರುತ್ತವೆ. ಅಲ್ಲದೇ ಸಾಕಷ್ಟು ಪದಗಳ ತದ್ಭವಗಳ ಉಪಯೋಗವನ್ನೂ ಕಾಣುತ್ತೇವೆ: ಉದಾ – ಬ್ರಹ್ಮ – ಬೊಮ್ಮ, ಸರಸ್ವತಿ – ಸರಸತಿ, ಮುಖ – ಮೊಗ, ವಿನಾಯಕ – ಬೆನಕ ಇತ್ಯಾದಿ.
೭) ಗಡಿಪ್ರದೇಶದಲ್ಲಿ ಸಹಜವಾಗಿಯೇ ಕಂಡುಬರುವ ಬೇರೆ ಭಾಷೆಯ ಪದಗಳ ಬಳಕೆ: ಮರಾಠಿ – ಛಪ್ಪನ್ನ ದೇಶಗಳು, ಬತ್ತೀಸು ರಾಗಗಳು ಮತ್ತು ಉರ್ದು – ಫಕೀರ, ಭಂಗಿ (ಭಾಂಗ್), ಲುಂಗಿ ಇತ್ಯಾದಿ.
ಕನ್ನಡವು ಎಳೆದಂತೆ ಬೆಳೆವ, ಸುಲಲಿತ ಭಾಷೆಯೆಂಬುದನ್ನು ದಾಸ ಸಾಹಿತ್ಯ ಸಾಧಿಸಿ ತೋರಿಸಿಕೊಟ್ಟಿದೆ. ಛಂದೋಬದ್ಧವಾದ, ಮಧುರ ಶಬ್ದಗಳ ಜೋಡಣೆಯಿಂದ, ಕನ್ನಡ ಭಾಷೆಯ ಬೆಳವಣಿಗೆಗೆ ತಮ್ಮ ಕೊಡುಗೆಯನ್ನು ಸಲ್ಲಿಸಿದ್ದಾರೆ.
ಹರಿದಾಸ ಸಾಹಿತ್ಯದ ಶೈಲಿ: ಭಾಷೆ – ಭಾವಗಳ ಸಮರಸ ಸಂಯೋಜನೆಯೇ ಶೈಲಿ, ಕಾವ್ಯಕ್ಕೆ ರಸವನ್ನು ತುಂಬುತ್ತದೆ. ಚಲುವಾದ ಭಾವನೆಗೆ ಚಲುವಾದ ಭಾಷೆಯೇ ಜೊತೆಯಾಗಬೇಕು. ಬರೆಯುವವರಿಗೆ ಭಾಷೆಯ ಮೇಲೆ ಸಮರ್ಪಕ ಹಿಡಿತ ಬೇಕು, ಇಲ್ಲದಿದ್ದರೆ ಮನದ ಆಲೋಚನೆಯನ್ನು ಅಂದುಕೊಂಡಂತೆ ಹಂಚಲಾಗದು. ಎಲ್ಲ ದಾಸರೂ ಈ ವಿಷಯದಲ್ಲಿ ಪಾಂಡಿತ್ಯ ಇದ್ದವರೆಂದೇ ಹೇಳಬಹುದು. ಆದಿಪ್ರಾಸ (ಎರಡನೆಯ ಅಕ್ಷರ ಪ್ರಾಸ), ಅಂತ್ಯಪ್ರಾಸ, ಮತ್ತೂ ಮಧ್ಯಪ್ರಾಸಗಳು ರಚನೆಯ ಅಂದವನ್ನು ಹೆಚ್ಚಿಸುತ್ತವೆ. ಸಂಗೀತದ ಸಹಕಾರವೂ ಸೇರಿ ರಸಮಯವಾಗುತ್ತವೆ.
ಈಶ ನಿನ್ನ ಚರಣಭಜನೆ ಆಶೆಯಿಂದ ಮಾಡುವೇನು ದೋಷರಾಶಿ ನಾಶ ಮಾಡೊ ಶ್ರೀಶ ಕೇಶವ ||
ಇನ್ನು ಭಾವಗಳು: ಈಶ್ವರನನ್ನು ಬರಿಯ ಬುದ್ಧಿಗಮ್ಯನೆಂದು ದಾಸರು ತಿಳಿಯದೇ, ಅನುಭಾವದ ಮಾರ್ಗವನ್ನು ಹಿಡಿದರು. ಹೃದಯದಲ್ಲಿ ಉಕ್ಕಿಬಂದ ಭಾವನೆಗಳನ್ನು ನಿಸ್ಸಂಕೋಚವಾಗಿ ಹಾಡಿದರು. ಇದು ದಾಸರ ಹಾಡುಗಳ ವಿಶಿಷ್ಟವಾದ ಲಕ್ಷಣ. ಇಲ್ಲಿ ಭಕ್ತ - ಭಗವಂತನ ಅನಿರ್ವಚನೀಯ ಸಂಬಂಧ ವ್ಯಕ್ತವಾಗುತ್ತದೆ. ದೇವರು ದಾಸರಿಗೆ ತಾಯಿ-ತಂದೆಯೂ ಹೌದು, ಮಿತ್ರನೂ ಹೌದು, ಒಂದು ರೀತಿಯಲ್ಲಿ ಒಡೆಯನೂ ಹೌದು. ಅವನನ್ನು ಗೌರವಿಸಲು, ಮುದ್ದು ಮಾಡಲು, ಹೊಗಳಲು ಅಷ್ಟೇ ಅಲ್ಲ ಬೈಯಲೂ ಹಿಂಜರಿಯಲಾರರು.
ಕೃಷ್ಣನ ಬಾಲಲೀಲೆಗಳು, ಜೀವನ, ಉಪದೇಶ, ತಾಯಿಯ ಮಮತೆ, ಮಗುವಿನ ಆಟ (ಸ್ವಭಾವೋಕ್ತಿ) – ತಾನೇ ತಾಯಾಗಿ, ಮಗುವಾಗಿ, ಪ್ರಿಯೆಯಾಗಿ, ಕಾಡಿಸಿಕೊಂಡ ಗೋಪಿಯಾಗಿ, ದಾಸನಾಗಿ ನಿಂತು ಬರೆದ ಪದ್ಯಗಳು. ಶೃಂಗಾರ – ಕೃಷ್ಣನ ರಾಸಲೀಲೆಗಳ ವಿವರವುಳ್ಳ ಗೀತೆಗಳಲ್ಲಿ ಇದು ಮುಖ್ಯ. ಮೆಲ್ಲ ಮೆಲ್ಲನೇ ಬಂದನೇ ಗೋಪೆಮ್ಮ ಕೇಳೇ.. ಗಲ್ಲಕೆ ಮುದ್ದು ಕೊಟ್ಟು ನಿಲ್ಲದೆ ಓಡಿಪೋದ ದೇವರ ಅವತಾರ ಕ್ರಿಯೆಗಳು- ಬಾರೆ ಗೋಪಿ ಬಾಲಯ್ಯ ಅಳುತಾನೆ ಅನ್ನುವ ಅನೇಕ ಕೃತಿಗಳಲ್ಲಿ ದಶಾವತಾರದ ವರ್ಣನೆ ಕಂಡುಬರುತ್ತದೆ. ಆಶ್ಚರ್ಯ, ಪ್ರಶ್ನೆ: ಏಕೆ ಮನವಿತ್ತೆ ಲಲಿತಾಂಗಿ ಎಂದು ಲಕ್ಷ್ಮಿಯನ್ನು ಕಾರಣ ಕೇಳುತ್ತಾರೆ. ದೈನ್ಯತೆ, ಸಮರ್ಪಣಾ ಭಾವಗಳು – ದಾಸ ಎಂದರೇ ಸಂಪೂರ್ಣ ಸಮರ್ಪಣೆಯನ್ನು ನಂಬಿದವನು, ಶರಣಾಗತ ಅನ್ನುವುದನ್ನು ಪ್ರತಿಬಿಂಬಿಸುವ ಪದಗಳು. ಉದಾ: ನಿನ್ನನ್ನೆ ನಂಬಿದೆ ಕೃಷ್ಣಾ, ಕಂಡು ಕಂಡು ನೀ ಎನ್ನ ಕೈಬಿಡುವರೇ ಕೃಷ್ಣಾ (ವಾದಿರಾಜರು); ದೀನ ನಾನು ಸಮಸ್ತ ಲೋಕಕೆ ದಾನಿ ನೀನು ವೈರಾಗ್ಯ – ನೀರೊಳಗಿನ ಕಮಲದೆಲೆಯಂತೆ ಬದುಕಬೇಕೆಂಬುವ ಆಶಯ ಕಾಣುತ್ತದೆ. ಉದಾ: ಲೊಳಲೊಟ್ಟೆ ಎಲ್ಲಾ ಲೊಳಲೊಟ್ಟೆ (ಪುರಂದರ ದಾಸರು); ಅಲ್ಲಿದೆ ನಮ್ಮನೆ ಇಲ್ಲಿರುವುದು ಸುಮ್ಮನೆ ಸಾಮಾಜಿಕ ಅನ್ಯಾಯಗಳ / ಕಂದಾಚಾರಗಳ ವಿರುದ್ಧ ಎತ್ತಿದ ಧ್ವನಿ; ಇದರಲ್ಲಿ ಸುತ್ತಲೂ ಸಮಾಜದಲ್ಲಿ ಕಂಡುಬಂದ ಢಂಬಾಚಾರಗಳ ಬಗ್ಗೆ ದಾಸರಿಗಿದ್ದ ದೃಷ್ಟಿಯನ್ನು ಕಾಣಬಹುದು – ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ …; ಉದರ ವೈರಾಗ್ಯವಿದು; ನಿಂದಕರಿರಬೇಕು ಊರೊಳಗೆ ನಿಂದಾ ಸ್ತುತಿ – ದಾಸರು ತಮ್ಮ frustration ಅನ್ನು ದೇವರಿಗೆ ಬೈದು ತೀರಿಸಿಕೊಂಡರು ಅನ್ನುವಂತೆ ಮೇಲುನೋಟಕ್ಕೆ ಕಂಡರೂ, ಈ ಪದಗಳು ಸ್ತುತಿಗಳೇ. ಉದಾ: ಆರು ಬದುಕಿದರಯ್ಯ ಹರಿ ನಿನ್ನ ನಂಬಿ, ಕರುಣಾಕರ ನೀನೆಂಬುವದ್ಯಾತಕೋ ಭರವಸೆಯಿಲ್ಲೆನಗೆ ಹಾಸ್ಯ / ವಿಡಂಬನೆ: ಹಾಸ್ಯದ ಮೂಲಕ ದೇವರ ಸ್ತುತಿ ಮಾಡುವ ಪದಗಳು. ಹ್ಯಾಂಗೆ ಕೊಟ್ಟನು ಹೆಣ್ಣ ಸಾಗರನು ಈ ವರಗೆ, ಶೃಂಗಾರ ಪುರುಷರು ಬಹು ಮಂದಿಯಿರಲು; ಒಲಿದೆಯಾತಕಮ್ಮ ಲಕುಮಿ ವಾಸುದೇವಗೆ ಚಿತ್ರಕವಿತೆ – descriptive poetry – ಆಗಿಹೋದ ಘಟನೆಗಳನ್ನು ಕಣ್ಣಮುಂದೆ ಕಟ್ಟುವಂತೆ ಬಣ್ಣಿಸುವುದು ಅದು ದಾಸರ ಪದಗಳ ಒಂದು ಸ್ಟ್ರಾಂಗ್ ಪಾಯಿಂಟ್ ಅನ್ನುವುದರಲ್ಲಿ ಅನುಮಾನವೇ ಇಲ್ಲ. ಗ್ರಾಮ್ಯ, ಬಳಕೆಯ ಭಾಷೆಯ ಬಳಕೆ – ಕನಕ ದಾಸರ ದೇವಿ ನಮ್ಮ ದ್ಯಾವರು ಬಂದಾನ ಬನ್ನೀರೆ ನೋಡ ಬನ್ನೀರೆ (ಡೊಳ್ಳಿನ ಪದದ ಧಾಟಿಯಲ್ಲಿ) ಗಾದೆಮಾತು / ನುಡಿಗಟ್ಟುಗಳ ಬಳಕೆ: ರೊಕ್ಕ ಎರಡಕ್ಕೂ ದುಃಖ ಕಾಣಕ್ಕ; ಕುನ್ನಿ ಕಚ್ಚಿದರಾನೆ ಅಳುಕುವುದೇ ತತ್ತ್ವಪದಗಳು – ಮುಖ್ಯವಾಗಿ ಕನಕದಾಸರ ಮುಂಡಿಗೆಗಳು ಮತ್ತು ಕೃತಿಗಳು ಜಟಿಲವಾದುವು – ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ ಇತ್ಯಾದಿ.
ಒಳ್ಳೆಯ ಕೆಲಸಕ್ಕೆ ಕಾರಣವಾದದ್ದಕ್ಕೆ “ಹೆಂಡತಿ ಸಂತತಿ ಸಾವಿರವಾಗಲಿ” ಎಂದು ಹೊಗಳಿದ್ದಾರೆ.
ಹರಿದಾಸ ಸಾಹಿತ್ಯ ಮತ್ತು ಸಂಗೀತ: ಮಲಗಿ ಪರಮಾದರದಿ ಪಾಡಲು ಕುಳಿತು ಕೇಳುವ, ಕುಳಿತು ಪಾಡಲು ನಿಲುವ, ನಿಂತರೆ ನಲಿವ, ನಲಿದರೆ ಒಲಿವೆ ನಾ ನಿಮಗೆಂಬ | (ಹರಿಕಥಾಮೃತಸಾರ - ಜಗನ್ನಾಥ ದಾಸರು)
ಕೀರ್ತನೆಗಳು ಸಂಗೀತಪ್ರಧಾನವಾದ ರಚನೆಗಳು, ದೇವರು ಸಂಗೀತ – ನೃತ್ಯಗಳಿಗೆ ಒಲಿಯುವನೆಂಬ ನಂಬುಗೆಯಿಂದ ಬೆಳೆದು ಬಂದ ಸಾಹಿತ್ಯ. ಹರಿದಾಸರ ಜೀವನಶೈಲಿಯೂ ಇದಕ್ಕೆ ಅನುಗುಣವಾಗಿಯೇ ಇತ್ತು (ಮಧುಕರ ವೃತ್ತಿ ಎನ್ನದು – ಪುರಂದರ ದಾಸರು).
ಇಲ್ಲಿ ನೆನಪಿಸಿಕೊಳ್ಳಬೇಕಾದ ಹೆಸರು ಶ್ರೀಪಾದರಾಜರದ್ದು. ಇವರು ಕನ್ನಡದಲ್ಲಿ ಸರಳ ರಚನೆಗಳನ್ನು ಮಾಡಿದ್ದಲ್ಲದೇ, ಅವನ್ನು ಸಂಗೀತಕ್ಕೆ ಅಳವಡಿಸಿ ದಿನನಿತ್ಯದ ಪೂಜೆಯ ವೇಳೆಯಲ್ಲಿ ಬಳಕೆಯಲ್ಲಿ ತಂದರು ಸಹ.
ತತ್ತ್ವೋಪದೇಶ, ನೈತಿಕ ಉಪದೇಶಗಳಿಗೆ ಮಾಧ್ಯಮವಾಗಿ ಸಂಗೀತವನ್ನು ಹೊರತಂದ ಶ್ರೇಯ ಪುರಂದರ ದಾಸರದ್ದು. ಕಾವ್ಯವಾದರೆ ಪಂಡಿತರಲ್ಲಿ ಮಾತ್ರ ಉಳಿದು ಹೋಗಬಹುದು ಅನ್ನುವ ಯೋಚನೆಯಿಂದ ಸಂಗೀತವನ್ನು ಆರಿಸಿಕೊಂಡರು ಅನ್ನವುದು ಸರಿಯೇ. ಹಾಡುಗಳು ಬಾಯಿಂದ ಬಾಯಿಗೆ ಕಲಿತು ಬೆಳೆಯುತ್ತವೆ, ಉಳಿಯುತ್ತವೆ ಅನ್ನುವುದೇ ಅವರ ವಿಚಾರವಾಗಿತ್ತು. ದಾಸರ ಗೆಜ್ಜೆಕಟ್ಟಿಕೊಂಡು ಕುಣಿಯುವ ಜೀವನ ಶೈಲಿಗೆ, ಪ್ರಾಸಬದ್ಧ ಸಂಗೀತಮಯ ಹಾಡುಗಳು ಸಮರ್ಪಕ ಜೊತೆಯಾದವು.
ಸಂಗೀತಕ್ಕೆ ಅಳವಡಿಸಬೇಕೆಂದರೆ, ಛಂದಸ್ಸುಗಳ ಬದ್ಧತೆ ಬೇಕು. ಆದಿ, ಅಂತ್ಯ ಅಥವಾ ಮಧ್ಯ ಪ್ರಾಸಗಳ ಬಳಕೆಯಿರಬೇಕು. ದ್ವಿಪದಿ, ಚೌಪದಿಗಳ, ಷಟ್ಪದಿಯ ಬಳಕೆ ಕಾವ್ಯದ ಅಂದವನ್ನು ಹೆಚ್ಚಿಸುತ್ತವೆ. ದಾಸರ ರಚನೆಗಳು ಪಲ್ಲವಿ, ಅನುಪಲ್ಲವಿ ಹಾಗೂ ಚರಣಗಳು ಈ ಕ್ರಮದಲ್ಲಿದ್ದು, ಪಲ್ಲವಿ ತತ್ತ್ವವನ್ನೂ, ಅನುಪಲ್ಲವಿ ವಿವರಣೆಯನ್ನೂ ಕೊಟ್ಟರೆ, ಚರಣಗಳು ಉದಾಹರಣೆಗಳೊಂದಿಗೆ ಮೇಲಿನದನ್ನು ಸಮರ್ಥಿಸುತ್ತವೆ ಅನ್ನಬಹುದು.
ಸಂಗೀತಾಭ್ಯಾಸಿಗಳಿಗೆ ಅನುಕೂಲವಾಗುವಂತೆ ಗೀತೆಗಳನ್ನು ರೂಢಿಗೆ ತಂದ ಶ್ರೇಯಸ್ಸು ಪುರಂದರ ದಾಸರಿಗೆ ಸಲ್ಲುತ್ತದೆ. ಲಂಬೋದರ ಲಕುಮಿಕರ ಅನ್ನುವ ರಚನೆಯಿಂದಲೇ ಅಲ್ಲವೆ ಪ್ರತಿಯೊಬ್ಬ ಸಂಗೀತಾಭ್ಯಾಸಿ ಆರಂಭಿಸುವುದು? ಜೊತೆಯಲ್ಲಿ ಪುರಂದರ ದಾಸರು ಆಗ ಬಳಕೆಯಲ್ಲಿದ್ದ ತಾಳಗಳನ್ನು ಸರಳೀಕರಿಸಿ, ಸಪ್ತತಾಳಗಳನ್ನು ಬಳಕೆಗೆ ತಂದರು. ಖಂಡಛಾಪು, ಮಿಶ್ರಛಾಪು ಈ ಎರಡು ಛಾಪುತಾಳದ ವಿಧಗಳಲ್ಲಿ ಅನೇಕ ಕೀರ್ತನೆಗಳು ಇವೆ. ಮಾಯಾಮಾಳವ ಗೌಳ ರಾಗವನ್ನು ಆಧರಿಸಿ ಸರಳೀ ಸ್ವರಗಳು ಮತ್ತು ಜಂಟಿ ಸ್ವರಗಳನ್ನು ಹಾಕಿಕೊಟ್ಟು, ಹೊಸತಾಗಿ ಕಲಿಯುವವರಿಗೆ ಸುಲಭವಾಗಿಸಿದ ಶ್ರೇಯವೂ ಪುರಂದರ ದಾಸರದ್ದೇ ಅನ್ನಲಾಗಿದೆ. ಪುರಂದರ ದಾಸರ ಈ ಕಾರ್ಯದಿಂದಲೇ, ಅವರನ್ನು "ಕರ್ನಾಟಕ ಸಂಗೀತದ ಪಿತಾಮಹ" ಅನ್ನುವುದು ಸಹಜವೇ.
ಅನೇಕ ರಾಗಗಳು ಆಗ ಪ್ರಚಲಿತವಾಗಿ ಇದ್ದಿರಬಹುದಾದರೂ, ದಾಸರು ಜಾನಪದ ಮೂಲವಾದ ರಾಗಗಳನ್ನು ತಮ್ಮ ಕೀರ್ತನೆಗಳಿಗೆ ಬಳಸಿಕೊಂಡರು. ಅಲ್ಲಿ ಹೆಸರಿಸಿದ ಈ ರಾಗಗಳ ಸಂಖ್ಯೆ ೧೦೦ನ್ನು ಮೀರಲಿಕ್ಕಿಲ್ಲ; ಇದಕ್ಕೆ ಕಾರಣ ರಾಗ ಕ್ಲಿಷ್ಟವಾದರೆ ಜನಸಾಮಾನ್ಯರ ಬಾಯಲ್ಲಿ ಹಾಡು ಉಳಿಯಲಿಕ್ಕಿಲ್ಲ ಅನ್ನುವುದಿರಬಹುದು. ಈಗೀಗ ವಿದ್ವಾಂಸರು ಹತ್ತು ರಾಗಗಳಲ್ಲಿ ಒಂದೇ ಕೃತಿಯನ್ನು ಹಾಡುವುದು ಕಂಡುಬರುತ್ತದೆ. ಅವು ಮೆಚ್ಚುಗೆಯನ್ನೂ ಗಳಿಸುತ್ತವೆ.
ಗೀತ – ವಾದ್ಯಗಳೊಂದಿಗೆ, ನೃತ್ಯವೂ ಸಂಗೀತದ ಒಂದು ಅಂಗವಾಗಿಯೇ ಬೆಳೆದುಬಂದಿತ್ತಾದರೂ, ಮುಂದೆ ನೃತ್ಯ – ಸಂಗೀತಗಳು ಬೇರೆಯಾದವು ಅನ್ನುವುದು ವಿದ್ವಾಂಸರ ಅಭಿಪ್ರಾಯ. ದಾಸರ ರಚನೆಗಳಲ್ಲಿ ಇರುವ ಬಾಲಕೃಷ್ಣನ ಲೀಲೆಗಳು ಮುಖ್ಯವಾಗಿ ನೃತ್ಯಕ್ಕೆ ತಕ್ಕ ಸಾಮಗ್ರಿಯನ್ನು ಒದಗಿಸುತ್ತವೆ. ದಾಸರುಗಳೇ ಗೆಜ್ಜೆಕಟ್ಟಿಕೊಂಡು, ಕುಣಿದು ಹಾಡಿ ಹಂಚಿದರು. ಹಾಗಾಗಿ ನೃತ್ಯ ಆ ಕೀರ್ತನೆಗಳ ಮೂಲ ಉದ್ದೇಶವಲ್ಲದಿದ್ದರೂ, ಗೀತ – ವಾದ್ಯಗಳ ಜೊತೆಗೂಡಿದಾಗ ಕೀರ್ತನೆಗಳ ಭಾವ ಸಶಕ್ತವಾಗಿ ತೋರಿ, ಪರಿಣಾಮಕಾರಿಯಾಯಿತು.
ತಪ್ಪದೆ ಕೆಳಗಿರುವ ಧ್ವನಿ ಸುರುಳಿಯನ್ನು ಕೇಳಿ . ಸುಶ್ರಾವ್ಯವಾಗಿ ಹಾಡಿರುವ ಶ್ರೀಮತಿ ಅನ್ನಪೂರ್ಣ ಆನಂದ್ ಅವರಿಗೆ ಧನ್ಯವಾದಗಳು
- ಲಕ್ಷ್ಮೀನಾರಾಯಣ ಗುಡೂರ್
***************
(ಈ ಲೇಖನ ಸ್ವಲ್ಪ ಉದ್ದವಾಯಿತೇನೊ ಅನ್ನಿಸಿದರೆ, ಕ್ಷಮೆಯಿರಲಿ. ವಿಷಯದ ಕಾರಣದಿಂದ ಅಷ್ಟು ಸಾಲುಗಳು ಬೇಕಾದವು; ಅದರಲ್ಲೂ ನಾನು ಬರಿಯ ಸಾಹಿತ್ಯ-ಸಂಗೀತಗಳ ಬಗ್ಗೆ ಮಾತ್ರ ಬರೆದಿರುವುದು – ಲಕ್ಷ್ಮೀನಾರಾಯಣ)
ಹೆಚ್ಚಿನ ಓದಿಗೆ: ಈ ಕೆಳಗಿನ ಗ್ರಂಥಗಳೆಲ್ಲವೂ ಉಚಿತವಾಗಿ archive.org ಯಲ್ಲಿ ಲಭ್ಯವಿವೆ. ೧. ದಾಸ ಸಾಹಿತ್ಯ - ಸಂ: ದಿ. ವಿ ಸೀತಾರಾಮಯ್ಯ ಮತ್ತು ಪ್ರೊ. ಜಿ ವೆಂಕಟಸುಬ್ಬಯ್ಯ ೨. ದಾಸ ಸಾಹಿತ್ಯ ದರ್ಶನ - ಸಂ: ಎಚ್ಚೆಸ್ಕೆ ೩. ದಾಸ ಸಾಹಿತ್ಯದಲ್ಲಿ ಜಾನಪದ ಅಂಶಗಳು - ಡಾ. ಆರ್ ಸುನಂದಮ್ಮ ೪. ದಾಸ ಸಾಹಿತ್ಯ ಸೌರಭ - ಸಂ: ಶ್ರೀನಿವಾಸ ಸು ಮಠದ ೫. ದಾಸ ಸಾಹಿತ್ಯ ಸುಧೆ - ಸಂ: ಟಿ ಎನ್ ನಾಗರತ್ನ ೬. ಕರ್ನಾಟಕದ ಹರಿದಾಸರು - ಡಾ. ಹೆಚ್ ಕೆ ವೇದವ್ಯಾಸಾಚಾರ್ಯ
ಜಾಗತಿಕ ಪುರಂದರ ಉತ್ಸವವನ್ನು ಈ ವರ್ಷ ೧೨ ದಿನಗಳ ಕಾಲ (ಫೆ ೨೨-ಮಾರ್ಚ್ ೫) ಆಚರಿಸಲಾಯಿತು. ಇಂದು ಈ ಕಾರ್ಯಕ್ರಮದ ೧೨ ನೆಯ ದಿನ. ದಾಸ ಸಾಹಿತ್ಯ ಮತ್ತು ಸಂಗೀತ ಕನ್ನಡ ಸಾಹಿತ್ಯದ ಅವಿಭಾಜ್ಯ ಅಂಗ. ಈ ಉತ್ಸವದಲ್ಲಿ ಸಕ್ರಿಯವಾಗಿ ಭಾಗವಹಿಸಿ, ನಿರೂಪಿಸಿದ ಶ್ರೀಮತಿ ಗೌರಿಪ್ರಸನ್ನ ಈ ಕಾರ್ಯಕ್ರಮದ ಪಕ್ಷಿನೋಟವನ್ನು ಈ ಲೇಖನದಲ್ಲಿ ನಮ್ಮ ಮುಂದಿಟ್ಟಿದ್ದಾರೆ.
‘ಜೈನರ ಕಾವ್ಯದ ಶರಣರ ವಚನದ ದಾಸರ ಹಾಡಿನದೀ ನಾಡು’ಎಂದು ವರಕವಿ ಬೇಂದ್ರೆಯವರು ಹಾಡಿದಂತೆ ಕನ್ನಡ ಸಾಹಿತ್ಯದ ಐಸಿರಿ ರಸಿಕರ,ಭಾವುಕರ ಮೈಮರೆಸುವಂಥದ್ದು.ಕನ್ನಡ ಸಾಹಿತ್ಯ ನಡೆದು ಬಂದ ದಾರಿಯಲ್ಲಿ ದಾಸ ಸಾಹಿತ್ಯಕ್ಕೆ ತನ್ನದೇ ಆದ ಒಂದು ವಿಶಿಷ್ಟ ಹೆಜ್ಜೆ ಗುರುತಿದೆ. ದಾಸ ಸಾಹಿತ್ಯವು ಯಾವೊಂದು ವಗ೯ ಅಥವಾ ಮತಕ್ಕೆ ಸೀಮಿತವಾಗದೇ ಅಪಾರ ಜ್ಞಾನಕೋಶವನ್ನೂ, ಸಶಕ್ತ ಸಾಹಿತ್ಯ ಭಂಡಾರವನ್ನೂ, ಭಕ್ತಿ -ಭಾವ,ವೈರಾಗ್ಯಗಳನ್ನೂ, ಸಾಮಾಜಿಕ ಕಳಕಳಿ, ವಿಡಂಬನೆ, ಸಮಕಾಲೀನ ಪ್ರಜ್ಞೆ ಇತ್ಯಾದಿಗಳನ್ನೊಳಗೊಂಡ ಅಪೂವ೯ ಕಣಜ. ಜನಸಾಮಾನ್ಯರಿಗೂ ಅಥ೯ವಾಗುವಂಥ ಸುಲಭ ಸರಳ ಭಾಷೆಯಲ್ಲಿದ್ದು ಸುಮಾರು ಆರುನೂರು ವರುಷಗಳನಂತರವೂ ಇಂದಿಗೂ ಎಲ್ಲರ ನಾಲಗೆಯ ಮೇಲೆ ನಲಿದಾಡುವ ಸತ್ವ, ಪ್ರಸ್ತುತತೆಯನ್ನು ಉಳಿಸಿಕೊಂಡದ್ದು ಈ ದಾಸ ಸಾಹಿತ್ಯ.
ಅಂಥ ದಾಸವರೇಣ್ಯರಲ್ಲಿ ಅಗ್ರಗಣ್ಯರಾದವರು ಪುರಂದರ ದಾಸರು. ತಮ್ಮ ಗುರುದೇವನಿಂದಲೇ ‘ದಾಸರೆಂದರೆ ಪುರಂದರ ದಾಸರಯ್ಯ’ ಎಂಬ ಹೆಗ್ಗಳಿಕೆ ಪಡೆದುಕೊಂಡವರು. ‘ಕನಾ೯ಟಕ ಸಂಗೀತದ ಪಿತಾಮಹ’ರಾದ ಇವರ ‘ಕೆರೆಯ ನೀರನು ಕೆರೆಗೆ ಚೆಲ್ಲಿ’ ಹಾಗೂ ‘ಲಂಬೋದರ ಲಕುಮಿಕರ’ ದೊಂದಿಗೇ ಸಂಗೀತಾಭ್ಯಾಸ ಆರಂಭವಾಗುವುದು ಇಂದಿಗೂ ರೂಢಿಯಲ್ಲಿದೆ. ನವಕೋಟಿ ನಾರಾಯಣನಾಗಿ ಸಿರಿಸಂಪತ್ತು ತುಂಬಿ ತುಳುಕಾಡುತ್ತಿದ್ದರೂ ಒಂದಗಳನ್ನೂ ಹೆರವರಿಗೆ ನೀಡಲರಿಯದ ಜಿಪುಣಾಗ್ರೇಸರ ಶೀನಪ್ಪನಾಯಕ ಅದಾವುದೋ ಪುಣ್ಯ ಗಳಿಗೆಯಲ್ಲಿ ಐಹಿಕ ಭೋಗದ ನಶ್ವರತೆಯನ್ನರಿತು ಇದ್ದೆಲ್ಲ ಆಸ್ತಿಯ ಮೇಲೆ ತುಳಸೀದಳವನ್ನಿಟ್ಟು’ಕೃಷ್ಣಾಪ೯ಣ’ ಎಂದವರೇ ಕಾಲಿಗೆ ಗೆಜ್ಜೆ ಕಟ್ಟಿ,ಗೋಪಾಳಬುಟ್ಟಿ,ತಂಬೂರಿ ಹಿಡಿದು ಹೊರಟೇ ಬಿಟ್ಟರು. ಮುಂದೆ ಕನ್ನಡನಾಡಿನ ಮಹಾನ್ ಸಾಮ್ರಾಟ್ ಕೃಷ್ಣದೇವರಾಯ ನೀಡ ಬಯಸಿದ ಪದವಿ-ಪುರಸ್ಕಾರಗಳನ್ನೆಲ್ಲ ತಿರಸ್ಕರಿಸಿ ‘ನಿಮ್ಮ ಭಾಗ್ಯ ದೊಡ್ಡದೋ ..ನಮ್ಮ ಭಾಗ್ಯ ದೊಡ್ಡದೋ’ ಎಂದು ಅರಸನಿಗೇ ಸವಾಲು ಹಾಕಿದವರು. ತಮ್ಮ ಜೀವಮಾನದಲ್ಲಿ ಇಡಿಯ ದಕ್ಷಿಣ ಭಾರತವನ್ನೆಲ್ಲ ಸಂಚರಿಸಿದ ಇವರು ಸುಮಾರು ೪ ಲಕ್ಷ ೭೫ ಸಾವಿರ ಕೃತಿಗಳನ್ನು ರಚಿಸಿದ್ದಾರೆಂಬ ಪ್ರತೀತಿಯಿದೆ. ಸಂಗೀತ-ಸಾಹಿತ್ಯ-ಅನುಭಾವಗಳ ಸಂಗಮವಾದ ಇಂಥ ದಾಸವಯ೯ರು ಇಡಿಯ ಕನ್ನಡನಾಡಿನ ಪುಣ್ಯ.
ಅಂಥ ಪುರಂದರದಾಸರ ಆರಾಧನೆಯು ಕಳೆದ ಫೆಬ್ರುವರಿ ೧೧, ೨೦೨೧ ರಂದು ಜರುಗಿತು. ಅದರ ಅಂಗವಾಗಿ ವಿದ್ವಾನ್ ಅರಳುಮಲ್ಲಿಗೆ ಪಾಥ೯ಸಾರಥಿಯವರ ಮಾಗ೯ದಶ೯ನದಲ್ಲಿ ಅಂತರಾಷ್ಟ್ರೀಯ ಕನ್ನಡ ಬಾನುಲಿ ರೇಡಿಯೊ ಗಿರಮಿಟ್,ಮೂಕಟ್ರಸ್ಟ್, ವಿವಿಡ್ಲಿಪಿ ಹಾಗೂ ಅರಳುಮಲ್ಲಿಗೆ ಫೌಂಡೇಶನ್ ಸಹಯೋಗದಲ್ಲಿ ‘ ಜಾಗತಿಕ ಪುರಂದರ ಉತ್ಸವ – ೨೦೨೧’ ಕಾಯ೯ಕ್ರಮ ಬಲು ಸಡಗರದಿಂದ ಫೆಬ್ರುವರಿ ೨೨ ರಂದು ಆರಂಭವಾಯಿತು. ಮಾಚ್೯ ೫ ರವರೆಗೆ (*ಈಗ ೬ನೆಯ ತಾರೀಖಿಗೆ ಮುಂದೂಡಲಾಗಿದೆ. -ಸಂ) ನಡೆಯಲಿರುವ ಈ ಕಾಯ೯ಕ್ರಮದ ಹೆಗ್ಗಳಿಕೆಯೆಂದರೆ ವಿಶ್ವದ ನಾನಾ ಮೂಲೆಗಳಿಂದ ನಾನಾ ವಿಖ್ಯಾತ ಕಲಾವಿದರು, ಮಕ್ಕಳು, ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡು ತಮ್ಮ ಪ್ರತಿಭೆ, ಶ್ರದ್ಧಾಭಕ್ತಿಗಳನ್ನು ತೋರುತ್ತಿರುವುದು. ಬೇರೆ ಬೇರೆ ಸಮಯ ವಲಯದಲ್ಲಿರುವ, ಬೇರೆ ಬೇರೆ ಖಂಡಗಳಲ್ಲಿರುವ ಕಲಾವಿದರನ್ನೆಲ್ಲ ಒಂದೇ ತತ್ವದಡಿ ಒಂದೇ ವೇದಿಕೆಯಲ್ಲಿ ಕಲೆಹಾಕಿರುವುದರ ಹಿಂದಿರುವ ಶ್ರಮ, ಸಂಘಟನಾ ಜವಾಬುದಾರಿಗಳಿಗೆ ಬೆಲೆ ಕಟ್ಟಲಾಗದು.ಭಾರತ, ಆಸ್ಟ್ರೇಲಿಯಾ , ಸಿಂಗಾಪುರ, ಯು.ಎಸ್.ಎ. ಮತ್ತು ಯು.ಕೆ.ಯ ಖ್ಯಾತ ಹಾಗೂ ಹವ್ಯಾಸಿ ಕಲಾವಿದರು ನಡೆಸಿಕೊಟ್ಟ ಕಾಯ೯ಕ್ರಮಗಳು ವಿಭಿನ್ನ ಮಾದರಿಯವು.
ಫೆಬ್ರವರಿ ೨೨ ರಂದು ಡಾ.ಅರಳುಮಲ್ಲಿಗೆಯವರ ವಿದ್ವತ್ಪೂರ್ಣ ಭಾಷಣದೊಂದಿಗೆ ಕಾಯ೯ಕ್ರಮವು ಉದ್ಘಾಟಿಸಲ್ಲಟ್ಟಿತು. ಹೆಸರಿಗೆ ತಕ್ಕಂತೆ ಅರಳು ಮಲ್ಲಿಗೆಯವರ ಮಾತು ಮಲ್ಲಿಗೆ ಅರಳಿದಂತೆ..ಅರಳು ಸಿಡಿದಂತೆ. ಹಲವಾರು ದಶಕಗಳಿಂದ ಹರಿದಾಸ ಸಾಹಿತ್ಯದ ಅಧ್ಯಯನ, ಸಂಶೋಧನೆ, ಗ್ರಂಥ ಸಂಪಾದನೆಯಂಥ ಕಾಯ೯ಗಳಲ್ಲಿ ತಮ್ಮನ್ನು ಸಂಪೂಣ೯ವಾಗಿ ತೊಡಗಿಸಿಕೊಂಡ ಪಾಥ೯ಸಾರಥಿಯವರು ಈಗಷ್ಟೇ ಕೆಲಸಮಯದ ಹಿಂದೆ ‘ಹತ್ತುಸಾವಿರ ಹರಿದಾಸರ ಹಾಡುಗಳು’ ಎಂಬ ಸುಮಾರು ನಾಲ್ಕೂವರೆ ಕೆ.ಜಿ. ತೂಕದ ಬೃಹತ್ ಪುಸ್ತಕವೊಂದನ್ನು ಹೊರತಂದಿದ್ದು ಅದಕ್ಕಾಗಿ ಕನಾ೯ಟಕದ ಹಳ್ಳಿ ಹಳ್ಳಿಗೂ ಅಲೆದು ಹಾಡುಗಳನ್ನು ಸಂಗ್ರಹಿಸಿದ್ದಾರೆ.
ಅದಲ್ಲದೇ ‘ಪುರಂದರ ಸಂಪುಟ’ ಎಂಬ ಪುಸ್ತಕವನ್ನೂ ಹೊರತಂದಿದ್ದಾರೆ. ಈ ಎರಡೂ ಪುಸ್ತಕಗಳ ಬಗ್ಗೆ ಅವುಗಳನ್ನಾಗಲೇ ಓದಲು ತೊಡಗಿದ ನಮ್ಮ ಅನಿವಾಸಿಯ ನಿಯಮಿತ ಓದುಗರೂ, ಬೆಂಬಲಿಗರೂ ಆದ ಶ್ರೀಮತಿ ಸರೋಜಿನಿ ಪಡಸಲಗಿಯವರು ತಮ್ಮ ಅನಿಸಿಕೆಗಳನ್ನು ಬರೆದಿದ್ದಾರೆ. (ಕೆಳಗೆ ನೋಡಿರಿ). ಅನಿವಾಸಿಯ ಹಿರಿಯ ಸದಸ್ಯರೊಬ್ಬರ ಆ ಪುಸ್ತಕದ ನಂಟಿನ ಅಚ್ಚರಿಯ ವಿಚಾರ ತಾವೂ ತಿಳಿಯಬಹುದು (ಕೊನೆಯ ಪ್ಯಾರಾಗ್ರಾಫ್).
ಫೆಬ್ರುವರಿ ೨೩ ರಂದು ಯು.ಎಸ್.ಎ.ದ ವ್ಯಾಸ ಭಜನಾ ಮಂಡಳಿಯಿಂದ ಸಂಗೀತಗೋಷ್ಟಿ, ಫೆ.೨೪ರಂದು ಖ್ಯಾತ ಸಂಗೀತ ನಿದೇ೯ಶಕಿ ಜಯಶ್ರೀ ಅರವಿಂದ ಅವರ ನಿರೂಪಣೆಯೊಂದಿಗೆ ರಕ್ಷಾ ಪ್ರಿಯರಾಮ್ ಅವರಿಂದ ಸಂಗೀತ ಸುಧೆ, ಫೆ. ೨೫ ರಂದು ಪ್ರಸಿದ್ಧ ಹಿಂದೂಸ್ತಾನಿ ಗಾಯಕರಾದ ಪಂಡಿತ್ ಅನಂತ ಭಾಗವತ್ ಅವರಿಂದ ಸಂಗೀತ ಸೇವೆ, ಫೆ.೨೬ ರಂದು ನಮ್ಮ ಅನಿವಾಸಿಯ ಶ್ರೀಮತಿ ಅಮಿತಾ ರವಿಕಿರಣ್ , ಶ್ರೀಮತಿ ಸುಮನಾ ಧ್ರುವ್ ಅವರೇ ಮೊದಲಾದ ಯು.ಕೆ. ಯ ಹಲವಾರು ಕಲಾವಿದರಿಂದ ‘ಪುರಂದರ ಗೀತ ನಮನ’ ಕಾಯ೯ಕ್ರಮಗಳು ತುಂಬ ಸುಂದರವಾಗಿ ಮೂಡಿಬಂದವು.( ಲೇಖನದ ಕೊನೆಯಲ್ಲಿ ಕೊಟ್ಟಿರುವ ಲಿಂಕ್ ಮೂಲಕ ಯು.ಕೆ.ಯ ಕಾಯ೯ಕ್ರಮವನ್ನು ತಾವು ವೀಕ್ಷಿಸಬಹುದಾಗಿದೆ.).
ಒಟ್ಟಿನಲ್ಲಿ ಈ ಪುಸ್ತಕಗಳು ಸಂಗ್ರಹಯೋಗ್ಯವಾದ, ಮುಂದಿನ ಪೀಳಿಗೆಗೆ ನಾವು ಬಿಟ್ಟುಹೋಗಬಹುದಾದ ಅತ್ಯುತ್ತಮ ಕಾಣಿಕೆಗಳೆನ್ನಲಡ್ಡಿಯಿಲ್ಲ.
ಫೆ.೨೭ರಂದು ದೇಶವಿದೇಶದ ಚಿಣ್ಣರಿಂದ ‘ಆದದ್ದೆಲ್ಲ ಒಳಿತೇ ಆಯಿತು’ ಎಂಬ ದಾಸರ ಜೀವನಾಧಾರಿತ ನಾಟಕ ಹಾಗೂ ದಾಸರ ಹಲವಾರು ರಚನೆಗಳ ಸುಂದರ ಪ್ರಸ್ತುತಿ ಜರುಗಿತು.ಫೆ.೨೮ರಂದು ವಿದುಷಿ ಪುಷ್ಪಾ ಜಗದೀಶ ಹಾಗೂ ಆಸ್ಟ್ರೇಲಿಯಾದ ಗಾಯಕಿಯರು ಪುರಂದರ ಸಂಗೀತ ಕಾಯ೯ಕ್ರಮ ನಡೆಸಿಕೊಟ್ಟರು.ಮಾಚ್೯ ೧ ರಂದು ಸಿಂಗಾಪುರದ ಡಾ.ಭಾಗ್ಯಮೂತಿ೯ ಹಾಗೂ ತಂಡದವರಿಂದ ಸಂಗೀತ ಕಾಯ೯ಕ್ರಮ , ಮಾಚ್೯ ೨ ರಂದು ಸುವಣ೯ ಮೋಹನ್ ಹಾಗೂ ತಂಡದವರಿಂದ, ಮಾಚ್೯ ೩ ರಂದು ಡಾ. ಅಚ೯ನಾ ಕುಲಕಣಿ೯ಯವರಿಂದ ಹಾಗೂ ಮಾಚ್೯ ೪ ರಂದು ಸಖಿ ವೃಂದ ತಂಡದಿಂದ ಪುರಂದರ ಸಂಗೀತ ಕಾಯ೯ಕ್ರಮ ನಡೆಯಿತು.ಇಂದು ಮಾಚ್೯ ೫ ರಂದು ಪಾಥ೯ಸಾರಥಿಯವರ ಉಪನ್ಯಾಸ ಹಾಗೂ ವಿಭಿನ್ನ ಸಂಗೀತ ನಾಟಕ ಪ್ರದಶ೯ನ ನಡೆಯಲಿದೆ.ಆಸಕ್ತರು ಹೆಚ್ಚಿನ ಮಾಹಿತಿಗಾಗಿ http://www.vividlipi.com/gpf ನ್ನು ನೋಡಬಹುದು.
ಒಟ್ಟಾರೆ ಕಾಯ೯ಕ್ರಮದಲ್ಲಿ ಹಲಕೆಲವು ಕುಂದು ಕೊರತೆಗಳಿರಬಹುದಾದರೂ ಕಾಯ೯ಕ್ರಮದ ಹಿಂದಿನ ಉದ್ದೇಶ್ಯ, ಪಟ್ಟ ಪರಿಶ್ರಮ ಶ್ಲಾಘನೀಯ. ಇದರ ರೂವಾರಿಯಾದ ಸತ್ಯಪ್ರಮೋದ ಲಕ್ಕುಂಡಿ ಹಲವಾರು ದೈಹಿಕ ತೊಂದರೆ, ಅನಾನುಕೂಲದ ಮಧ್ಯೆ, ನಿದ್ದೆಗೆಟ್ಟು,ಕೆಲಸಲ ಊಟಬಿಟ್ಟು ಕೆಲಸ ಮಾಡಿದ್ದಾರೆ. ಅವರ ಹುಚ್ಚಿಗೆ, ಕೆಚ್ಚಿಗೆ ನನ್ನ ಮೆಚ್ಚುಗೆಯಿದೆ. ರಾತ್ರಿ ೧೦ ಗಂಟೆಯ ಮೇಲೆ ಊಟ-ಕೆಲಸ ಮುಗಿಸಿ ಸೀರೆಯುಟ್ಟು ತಯಾರಾಗಿ ಮಧ್ಯರಾತ್ರಿಯವರೆಗೆ ರೆಕಾಡಿ೯೦ಗ್ ಮಾಡಿದ್ದು..ಹತ್ತುಸಲ ಚಿಕ್ಕಪುಟ್ಟ ತಪ್ಪುಗಳಾಗಿ ಇದಕ್ಕಿಂತ ನೂರು ಜನರ ಸಭೆಯಲ್ಲಿ ಮುಖಾಮುಖಿಯಾಗಿ ಮಾತಾಡುವುದೇ ಒಳ್ಳೆಯದೆನ್ನಿಸಿ ಕಿರಿಕಿರಿ ಮಾಡಿಕೊಂಡರೂ ಇದೊಂದು ಅನನ್ಯ ಅನುಭವವೆಂಬುದು ಸುಳ್ಳಲ್ಲ. ಸುಮನಾ ಧ್ರುವ್ ಅವರೂ ಅಷ್ಟೇ..’ ಅಯ್ಯೋ ಏನ ಕೇಳತೀರಾ? ಮಕ್ಕಳೆಲ್ಲ ಮಲಗಿದ ಮೇಲೆ ಸೀರೆ ಉಟಗೊಂಡು, ಸಿಂಗಾರ ಮಾಡಿಕೊಂಡು , ಅಲ್ಲೊಂಚೂರು ವಿಡಿಯೋ ಸರಿಬರಲಿಲ್ಲ, ಇಲ್ಲೊಂಚೂರು ರಾಗ ಸರಿಯಾಗಲಿಲ್ಲ ಅಂತ ಎಡಿಟ್ ಮಾಡಿ ಅಂತೂ ಮುಗಿಸಿದಾಗ ಬೆಳಗಿನ ೪:೩೦ ಗೌರಿಯವರೇ’ ..ಅಂತ ಹೇಳಿದಾಗ ನಗುವಿನ ಜೊತೆಗೇ ಪಾಪ ಅಂತಲೂ ಅನ್ನಿಸಿತ್ತು. ( sorry ಸುಮನಾ..ನಿಮ್ಮನ್ನು ಕೇಳದೇ ನಿಮ್ಮ ಮಾತು ಬರೆದುಬಿಟ್ಟೆ) ಬಹುಶ: ಈ ಕಾಯ೯ಕ್ರಮದ ಎಲ್ಲ ಕಲಾವಿದರದೂ ಇಂಥದೇ ಪರಿಶ್ರಮದ ಕಥೆಗಳಿದ್ದರೂ ಇರಬಹುದು. ಸಹೃದಯರಾದ ತಾವು ಕುಂದು ಕೊರತೆಗಳನ್ನು ಅವಗಾಣಿಸಿ ಕಾಯ೯ಕ್ರಮಕ್ಕೊಂದು ಮೆಚ್ಚುಗೆಯ ಮಾತಾಡಿದರೆ ಅದಕ್ಕಿಂತ ಹೆಚ್ಚಿನ ಪ್ರೋತ್ಸಾಹ ಮತ್ತೊಂದಿಲ್ಲ. ಅಂತೂ ಇದೊಂದು “ನ ಭೂತೋ ನ ಭವಿಷ್ಯತಿ” ಎನ್ನುವಂಥ ಕಾಯ೯ಕ್ರಮಗಳ ಸಾಲಿನಲ್ಲಿ ನಿಲ್ಲುವುದರಲ್ಲಿ ಯಾವ ಸಂಶಯವಿಲ್ಲ.
–ಶ್ರೀಮತಿ ಗೌರಿಪ್ರಸನ್ನ
ಅನಿವಾಸಿ ಓದುಗರಾದ ಸರೋಜಿನಿ ಪಡಸಲಗಿಯವರು ದಾಸಸಾಹಿತ್ಯದ ತಮ್ಮ ಅನುಭವವನ್ನು ಈ ಕೆಳಗೆ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ:
ಅರಳು ಮಲ್ಲಿಗೆ ಪಾರ್ಥಸಾರಥಿಯವರ ಎರಡು ಬೃಹದ್ಗ್ರಂಥಗಳ ಬಗ್ಗೆ ಎರಡು ಮಾತು:
ಈ ವರ್ಷ ವಿವಿಡ್ಲಿಪಿ ಯವರು ಅರಳುಮಲ್ಲಿಗೆ ಪಾರ್ಥಸಾರಥಿ ಯವರ ಸಾರಥ್ಯದಲ್ಲಿ ಆಚರಿಸಿದ , ಇನ್ನೂ ನಡೆದಿರುವ ಪುರಂದರದಾಸರ ಆರಾಧನೆ ಒಂದು ವಿಶೇಷ ಹಾಗೂ ವಿಶಿಷ್ಟ.ಅದಕ್ಕೆ ಅರಳು ಮಲ್ಲಿಗೆ ಪಾರ್ಥಸಾರಥಿ ಯವರ “ಹರಿದಾಸರ ಹತ್ತು ಸಾವಿರ ಹಾಡುಗಳು” ಹಾಗೂ ” ಪುರಂದರ ಮಹಾಸಂಪುಟ” ಎಂಬ ಎರಡು ಬ್ರಹದ್ಗೃಂಥಗಳ ಸ್ವರ್ಣ ಗರಿಯುಳ್ಳ ಕಿರೀಟ! ಅವರ ಅನಂತ, ಅನುಪಮ ಶ್ರದ್ಧೆ , ಸಾಧನೆಯ ಫಲ ಈ ಅಪ್ಪಟ ಚಿನ್ನವೇ ಎಂಬಂತಹ ಅಮೂಲ್ಯ ಕೃತಿಗಳು !ಹರಿದಾಸರ ಹತ್ತು ಸಾವಿರ ಹಾಡುಗಳು ಒಂದೇ ಕಡೆ ಸಿಗುವಂತಾದದ್ದು ನಮ್ಮ ಅಹೋಭಾಗ್ಯ! ಈ ಒಂದೊಂದು ಬೆಳಕಿನ ಕಿರಣಗಳ ಸಂಗ್ರಹಕಾರ್ಯ ಅರಳು ಮಲ್ಲಿಗೆ ಪಾರ್ಥಸಾರಥಿಯವರು ಹೇಗೆ ಮಾಡಿದರೆಂಬುದು ಊಹೆಗೂ ಮೀರಿದ್ದು, ಎಟುಕದ ವಿಷಯ.ಎಲ್ಲವೂ ಗ್ರಂಥಸ್ತವಾಗಿದ್ದಿಲ್ಲ ಎಂಬುದು ಗಮನಾರ್ಹ ಅಂಶ. ಇನ್ನು “ಪುರಂದರ ಮಹಾಸಂಪುಟ”ವಂತೂ ಪುರಂದರದಾಸರ ಒಂದೊಂದು ವಿಶೇಷತೆಗಳ, ಪ್ರತಿ ಸಂಗತಿಗಳನ್ನು ಎಳೆಎಳೆಯಾಗಿ ಬಿಡಿಸಿತೋರಿಸುವ , ಬೆಳಕು ಚೆಲ್ಲುವ ವೇದಸದೃಶ ಗ್ರಂಥ. ಪ್ರವಚನಕಾರರಿಗೆ, ಸಾಹಿತ್ಯಾಸಕ್ತರಿಗೆ ಮಹಾನಿಧಿ ಅದು.ಅದರಲ್ಲಿಯ 180 ನೇ ಪುಟದಲ್ಲಿರುವ ಒಂದು ವಿಶೇಷ ವಿಷಯ ಬಲು ಆಸಕ್ತಿ ಪೂರ್ಣ! ಪುರಂದರದಾಸರ ಬಗ್ಗೆ ಅಧಿಕೃತ ಮಾಹಿತಿಯ ,ಮೊದಲ ಐತಿಹಾಸಿಕ ಆಧಾರವಾದ ಮೊದಲ ಶಿಲಾಶಾಸನವನ್ನು ಕಮಲಾಪುರದಲ್ಲಿ ಸಂಶೋಧಿಸಿದ್ದು ಡಾ.ಪಾಂಡುರಂಗ ದೇಸಾಯಿಯವರು- ಶ್ರೀವತ್ಸ ದೇಸಾಯಿಯವರ ತಂದೆಯವರು !
ಜನ್ಮಾಂತರಗಳ ಪುಣ್ಯದಿಂದ ದೊರಕಿದ ಅಮೂಲ್ಯ ಆಸ್ತಿ ಈ ಬೃಹದ್ಗ್ರಂಥಗಳು ಎಂಬುದು ಅನಂತ ಸತ್ಯ!
ಸರೋಜಿನಿ ಪಡಸಲಗಿ 03-03-2021
ಯು ಕೆ ತಂಡದವರು ೨೬ ಫೆಬ್ರುವರಿ, ೨೦೨೧ ರಂದು ಪ್ರಸ್ತುತ ಪಡಿಸಿದ ಪುರಂದರ ಸಂಗೀತ ಕಾರ್ಯಕ್ರಮ ನೋಡಲು ಕೆಳಗಿನ ಕೊಂಡಿಯನ್ನು ಒತ್ತಿರಿ.