ಕವಿ ಯಾವ ವಿಚಾರಗಳ ಬಗ್ಗೆ ಕವಿತೆ ಬರೆಯ ಬೇಕು ಮತ್ತು ಹಾಗೆ ಬರೆದ ಕವಿತೆ ಓದುಗರಲ್ಲಿ ಯಾವ ರೀತಿ ಪರಿಣಾಮವನ್ನು ಉಂಟುಮಾಡುತ್ತದೆ ಎಂಬ ತುಮುಲ ಅಥವಾ ಗೊಂದಲ ಕವಿಗಳನ್ನು ಕಾಡುವ ವಿಷಯ. ಅದೆಷ್ಟೋ ಕವಿತೆಗಳು ಓದುಗರ ನಿರೀಕ್ಷೆಗೆ ಮುಟ್ಟುತ್ತದೆ ಮತ್ತೆ ಕೆಲವು ಸ್ವೀಕೃತಗೊಳ್ಳುವುದಿಲ್ಲ. ಹೀಗೆ ಹಲವಾರು ಕವಿತೆಗಳು ಹುಟ್ಟುತ್ತವೆ, ಕೆಲವು ಜೀವಂತವಾಗಿರುತ್ತದೆ, ಕೆಲವು ಸತ್ತು ಹೋಗುತ್ತವೆ. ಈ ಒಂದು ಹಿನ್ನೆಲೆಯಲ್ಲಿ ನನ್ನ ಕವಿತೆ ತುಮುಲ ಮೂಡಿ ಬಂದಿದೆ.
ನನ್ನ ಇನ್ನೊಂದು ಕವಿತೆ ಪರಿಸರದ ಬಗ್ಗೆ ಕಾಳಜಿಯನ್ನು ಕುರಿತಾಗಿದೆ. ಮರ ಮಾತನಾಡಲು ಸಾಧ್ಯವಿದ್ದಲ್ಲಿ ಮರ ಕಡಿಯಲು ಬಂದ ವ್ಯಕ್ತಿಗೆ ಮರ ಏನು ಹೇಳುತ್ತಿತ್ತು ಎಂಬ ಕಲ್ಪನೆಯಲ್ಲಿ ಕವಿತೆ ರಚಿಸಲಾಗಿದೆ.
ಇನ್ನು ಕೆಲವೇ ದಿನಗಳಲ್ಲಿ ನನ್ನ ಹೊಸ ಕವನ ಸಂಕಲನ ಬಿಡುಗಡೆಯಾಗಲಿದೆ. ಆ ಸಂಕಲನದಿಂದ ಒಂದೆರಡು ಕವಿತೆಗಳನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ. ಇದು ಬಿಡುಗಡೆಯ ಮುಂಚಿನ ಪ್ರಮೋ ಎಂದು ಕರೆದರೆ ತಪ್ಪಾಗಲಾರದು.
ತುಮುಲ
ಬೇಡುತ್ತೀರಿ ರಸಿಕರೇ ನೀವು
ದಿನಕ್ಕೊಂದು ಕವಿತೆಯ
ತೋಚದೆ ಗೀಚಿದ ಹಾಳೆಗಳು
ಸೇರಿವೆ ಕಸದ ಬುಟ್ಟಿಯ
ಹೀಗೆ ಬರೆದರೆ ಬಲಪಂಥ
ಹಾಗೆ ಬರೆದರ ಎಡಪಂಥ
ಕೆಲವರ ನಿಲುವು ತಟಸ್ಥ;
ಎಲ್ಲಿಯೂ ಸಲ್ಲದ ನಡುಪಂಥ
ಹೀಗೆ ಬರೆದರೆ
ಭಟ್ಟಂಗಿಗಳ ಬೆದರಿಕೆ
ಹಾಗೆ ಬರೆದರೆ
ವಿಮರ್ಶಕರ ಹೆದರಿಕೆ
ಹೀಗೆ ಬರೆದರೆ
ಚುಟುಕ, ಕಿರುಕವಿತೆ
ಹಾಗೆ ಬರೆದರೆ
ಹಳೆ ಶೈಲಿ ನೀಳ್ಗವನ
ಹೀಗೆ ಬರೆದರೆ ಅದು
ವಿವಾದಾಸ್ಪದ ರಾಜಕೀಯ
ಹಾಗೆ ಬರೆದರೆ ಅವ ಅನಿವಾಸಿ ಕವಿ
ಭಾವನೆಗಳು ಪರಕೀಯ
ಬರೆಯ ಬಹುದು ಕವಿ
ಅವರಿವರ ಮೇಲೊಂದು ಕವಿತೆ
ಬರೆಯಲೇ ಬೇಕು ತನ್ನ
ಶ್ರೀಮತಿಯ ಮೇಲೊಂದು ಕವಿತೆ
ಕವಿತೆ ಬರೆಯುವನು ಕವಿ
ಎಷ್ಟಿದ್ದರೂ ಆಪತ್ತು
ಸೋಷಿಯಲ್ ಮೀಡಿಯಾಗಳ ನಡುವೆ
ನಿಮಗಿದೆಯೇ ಓದಲು ಪುರುಸೊತ್ತು?
ಮರದ ಮಾತು
ಕಡಿಯದಿರು ಮನುಜ
ನೀ ನನ್ನ ಬುಡವನ್ನು
ಮರೆಯಬೇಡ ನಿನ್ನ ಸ್ವಾರ್ಥ
ಸುಡುವುದೆಲ್ಲರನು
ಈ ಭೂಮಿ, ಈ ಹಸಿರು
ಈ ಗಾಳಿ, ಈ ನೀರು
ಮಿತವಾಗಿ ಬಳಸಿದರೆ
ಗೆಲ್ಲುವೆವು ನಾನು-ನೀನು
ಕಾಣದೆದೆಗಳ ಉಸಿರಾಟ
ನೂರಾರು ಇಲ್ಲಿ
ಬಿರು-ಬಿಸಿಲಿನ ತಾಪಕ್ಕೆ
ನೆರಳೂ ಇಲ್ಲಿ
ಪರಿಸರದ ಪ್ರೀತಿಯನು
ಉಳಿಸಿಕೋ ನಿನ್ನಲ್ಲಿ
ಹತ್ತಾರು ಸಸಿಗಳನ್ನು ನೆಟ್ಟು
ನೀರುಣಿಸಿ ನೀನ್ನಿಲ್ಲಿ
ನಿಸರ್ಗದಲ್ಲಿ ಒಂದಕ್ಕೊಂದು
ಕಾಣದ ಬೆಸುಗೆ
ಸೃಷ್ಟಿಯ ಸಂಕೀರ್ಣತೆಯು
ಅರ್ಥವಾಗದು ನಿನಗೆ
ನೀನು ಕೊಡಲಿ ಹಿಡಿಯುವ
ಮುನ್ನ ಇನ್ನೊಮ್ಮೆ ಯೋಚಿಸು
ಪರಿಣಾಮಗಳ ಬಗ್ಗೆ
ಆಳವಾಗಿ ಚಿಂತಿಸು
*