ಕನ್ನಡ ಸಾಹಿತ್ಯಕ್ಕೆ ಶರಣರ ದಾಸರ ಮತ್ತು ಸಂತರ ಕೊಡುಗೆ ಭಾಗ 1

ಡಾ ಜಿ ಎಸ್ ಶಿವಪ್ರಸಾದ್ (ಫೋಟೋ ಕೃಪೆ ಗೂಗಲ್)

ಕೆಲವು ದಿನಗಳ ಹಿಂದೆ ಯು.ಕೆ ಕನ್ನಡ ಬಳಗದ  ಯುಗಾದಿ ಹಬ್ಬದ ಸಂಭ್ರಮದಲ್ಲಿ ಅನಿವಾಸಿ ಸಾಹಿತ್ಯಗೋಷ್ಠಿಯನ್ನು    ಏರ್ಪಡಿಸಲಾಗಿತ್ತು. ಈ ಸಾಹಿತ್ಯ ಗೋಷ್ಠಿಯಲ್ಲಿ ‘ಕನ್ನಡ ಸಾಹಿತ್ಯಕ್ಕೆ ಶರಣರ, ದಾಸರ ಮತ್ತು ಸಂತರ ಕೊಡುಗೆ’ಯನ್ನು ಕುರಿತು ಅನಿವಾಸಿ ಸದಸ್ಯರು ತಮ್ಮ ಚರ್ಚೆಯನ್ನು ಮಂಡಿಸಿದರು. ಈ ಗೋಷ್ಠಿಯಲ್ಲಿ ಶರಣರ  
ಕೊಡುಗೆಯ ಬಗ್ಗೆ ನಾನು ಮಾತನಾಡಿದೆ, ಶರಣೆಯರ ಬಗ್ಗೆ ದಾಕ್ಷಾಯಿಣಿ ಗೌಡ, ದಾಸ ಸಾಹಿತ್ಯದ ಬಗ್ಗೆ ಲಕ್ಷ್ಮೀ ನಾರಾಯಣ ಗುಡೂರ್, ಕೊನೆಯದಾಗಿ ಸಂತ ಶಿಶುನಾಳ ಶರೀಫರ ಬಗ್ಗೆ ಶ್ರೀವತ್ಸ ದೇಸಾಯಿ ಅವರು ಮಾತನಾಡಿದರು. ಚರ್ಚೆಗಳ ಮಧ್ಯೆ ದಾಸರ ಮತ್ತು ಶರಣರ ಗೀತೆಗಳನ್ನು ಗಾಯಕಿಯರಾದ ರಶ್ಮಿ ಮಂಜುನಾಥ್ ಮತ್ತು ಅನ್ನಪೂರ್ಣ ಆನಂದ್ ಪ್ರಸ್ತುತಪಡಿಸಿದರು. ಸದಸ್ಯರು ಮಂಡಿಸಿದ ಈ ಚರ್ಚೆಗಳನ್ನು ಅನಿವಾಸಿ ತಾಣದಲ್ಲಿ ನಾಲ್ಕು ಹಂತಗಳಲ್ಲಿ ಪ್ರಕಟಿಸುವುದೆಂದು ಗೋಷ್ಠಿಯಲ್ಲಿ ಸಮ್ಮತಿಸಲಾಯಿತು. ಈ ನಾಲ್ಕು ವಿಷಯಗಳಿಗೆ ಪೂರಕವಾದ ಹಿನ್ನೆಲೆಯನ್ನು ಒದಗಿಸಿ ನಾನು ಮಂಡಿಸಿರುವ "ಶರಣ ಸಾಹಿತ್ಯದ ಒಟ್ಟಾರೆ ಆಶಯಗಳು, ಸಾಮಾಜಿಕ ನಿಲುವುಗಳು ಮತ್ತು ಮೌಲ್ಯಗಳು" ಎಂಬ ಬರಹವನ್ನು ಈ ವಾರದ ಅನಿವಾಸಿ ಸಂಚಿಕೆಯಲ್ಲಿ ನಿಮಗೆ ತಲುಪಿಸುತ್ತಿದ್ದೇನೆ.

ಕನ್ನಡ ಸಾಹಿತ್ಯಕ್ಕೆ ಶರಣರ ದಾಸರ ಮತ್ತು ಸಂತರ ಕೊಡುಗೆ - ಕೆಲವು ಹಿನ್ನೆಲೆ ವಿಚಾರಗಳು;
ಕನ್ನಡ ಸಾಹಿತ್ಯಕ್ಕೆ 1500 ವರ್ಷಗಳ ಇತಿಹಾಸವಿದೆ. ಇಲ್ಲಿ ಹಳೆಗನ್ನಡ (400 – 1100CE), ನಡುಗನ್ನಡ (1100 -1700 CE) ಮತ್ತು ಹೊಸಗನ್ನಡ (1700 - ಇಲ್ಲಿಯವರೆಗೆ) ಎಂಬ ಮೂರು ಕಾಲಘಟ್ಟಗಳನ್ನು ಗುರುತಿಸಬಹುದು. ಹಳೆಗನ್ನಡ ಕಾಲಘಟ್ಟದಲ್ಲಿ ಜೈನರು ಪ್ರಧಾನವಾಗಿ ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೊಡುಗೆಯನ್ನು ನೀಡಿದರು. ಇವರಲ್ಲಿ ಪಂಪ, ರನ್ನ ಮತ್ತು ಪೊನ್ನ ಮುಖ್ಯವಾದ ಕವಿಗಳು. ಅವರು ಜೈನ ತೀರ್ಥಂಕರರನ್ನು ಕುರಿತಾಗಿ ಅಷ್ಟೇ ಅಲ್ಲದೆ ಮಹಾಭಾರತದ ವಿಷಯವನ್ನು ಆಯ್ಕೆಮಾಡಿ ಮಹಾ ಕಾವ್ಯವನ್ನು ರಚಿಸದರು. ಇನ್ನು 12ನೇ ಶತಮಾನದಲ್ಲಿ ಶರಣರು ಅಂದರೆ ಬಸವಣ್ಣನವರ ಅನುಯಾಯಿಗಳಾದ ವೀರಶೈವ ಮತ್ತು ಹೊಸದಾಗಿ ಹುಟ್ಟಿಕೊಂಡ ಲಿಂಗಾಯಿತ ಎಂಬ ಮತದವರು ವಚನಗಳನ್ನು ರಚಿಸಿದರು. ಈ ವಚನಗಳು ಸಾಮಾಜಿಕ ಕ್ರಾಂತಿಯ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಸಾಹಿತ್ಯ ಎನ್ನಬಹುದು. ಇನ್ನು 15ನೇ ಶತಮಾನದಲ್ಲಿ ವೈಷ್ಣವರು (ಹರಿದಾಸರು ಎಂದು ಕೂಡ ಗುರುತಿಸ ಬಲ್ಲವರು) ಪ್ರಧಾನವಾಗಿ ಭಕ್ತಿರಸವನ್ನು ಮತ್ತು ಕೆಲವು ಸಾಮಾಜಿಕ ಹಿತೋಪದೇಶಗಳನ್ನು ಒಳಗೊಂಡ ಕೀರ್ತನೆಗಳನ್ನು ರಚಿಸಿದರು. ಇವು ಮುಖ್ಯವಾಗಿ ಮಧ್ವಾಚಾರ್ಯರ ದ್ವೈತ ಅಧ್ಯಾತ್ಮ ಪರಿಕಲ್ಪನೆಯನ್ನು ಆಧರಿಸಿರುವ ಕೀರ್ತನೆಗಳು ಎಂದು ಗುರುತಿಸಬಹುದು. ಇದು ಹುಟ್ಟಿಕೊಂಡದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎನ್ನ ಬಹುದು. ಶರಣ ಮತ್ತು ದಾಸ ಸಾಹಿತ್ಯಕ್ಕೆ ಪರ್ಯಾಯವಾಗಿ, ಸಮಾಜದ ಅನಕ್ಷರಸ್ತ ರೈತಾಪಿ ಮತ್ತು ಜನ ಸಾಮಾನ್ಯರು ನಡುವೆ ಕರ್ನಾಟಕ ಪ್ರಾದೇಶಿಕ ನೆಲೆಗಳಲ್ಲಿ ಹುಟ್ಟಿಕೊಂಡ ಮತ್ತು ಜಾನಪದ ಸಂಪ್ರದಾಯವನ್ನು ಹೋಲುವ ಸಾಹಿತ್ಯವನ್ನು ತತ್ವ ಪದಗಳು ಎಂದು ಗುರುತಿಸಬಹುದು. ಇದರಲ್ಲಿ ಭಕ್ತಿ ಮತ್ತು ಸಾಮಾಜಿಕ ವಿಷಯಗಳನ್ನು ಆಧರಿಸಿದ ಕೃತಿಗಳಿವೆ. ಶಿಶುನಾಳ ಶರೀಫರ ತತ್ವ ಪದಗಳನ್ನು ಈ ಗುಂಪಿಗೆ ಸೇರಿಸಬಹುದು. ಶಿಶುನಾಳ ಶರೀಫರು 19ನೇ ಶತಮಾನದಲ್ಲಿ ಬಾಳಿದವರು. ಶರಣ ದಾಸರ ಸಂತರ ಕೊಡುಗೆ ಅಪಾರವಾದದ್ದು, ಅವರು ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಎದ್ದು ನಿಲ್ಲುವ ಬರಹಗಾರರು. ದೇವರು, ಧರ್ಮ ಎಂಬ ವಿಷಯಗಳಲ್ಲದೆ ಸಾಮಾಜಿಕ ಬದುಕಿಗೆ ಬೇಕಾದ ಮಾನವೀಯ ಮೌಲ್ಯಗಳನ್ನು ಸದ್ಭಾವನೆಗಳನ್ನು ಎತ್ತಿಹಿಡಿದಿದ್ದಾರೆ. ಅವರ ಬರಹಗಳಲ್ಲಿ ಸಾಹಿತ್ಯಿಕ ಮೌಲ್ಯಗಳು ಇವೆ. ಆದುದರಿಂದಲೇ ಅವು ಕಾಲಾತೀತವಾದ ಉತ್ತಮ ಸಾಹಿತ್ಯಗಳಾಗಿವೆ.

- ಸಂ


*

“ಶರಣ ಸಾಹಿತ್ಯದ ಒಟ್ಟಾರೆ ಆಶಯಗಳುಸಾಮಾಜಿಕ ನಿಲುವುಗಳು ಮತ್ತು ಮೌಲ್ಯಗಳು

ಡಾ ಜಿ ಎಸ್ ಶಿವಪ್ರಸಾದ್

ಶರಣ ಸಾಹಿತ್ಯದ ಮುಖ್ಯಾಂಶಗಳು ಎಂದರೆ: ಎಲ್ಲರನ್ನು ಒಳಗೊಳ್ಳುವಿಕೆ, ವೈಚಾರಿಕ ಪ್ರಜ್ಞೆ, ಸಂಪ್ರದಾಯವನ್ನು ಪ್ರಶ್ನಿಸುವ, ಧಿಕ್ಕರಿಸುವ ದಿಟ್ಟ ನಿಲುವು, ಧರ್ಮದ ನಿರಪೇಕ್ಷೆ, ದೇವಸ್ಥಾನದ ನಿರಾಕರಣೆ, ಜಾತಿ ವ್ಯವಸ್ಥೆಯ ನಿರಾಕರಣೆ, ಮೂಢ ನಂಬಿಕೆಗಳ ನಿರಾಕರಣೆ, ಸಮಾಜ ಮತ್ತು ಸಂಸಾರ ಮುಖಿಯಾಗಿರುವ ಚಿಂತನೆಗಳು, ಸ್ತ್ರೀ ಸ್ವಾತಂತ್ರ್ಯ, ಸಾಮಾಜಿಕ ನ್ಯಾಯ, ಪ್ರಜಾ ಪ್ರಭುತ್ವದ ಪರಿಕಲ್ಪನೆ, ಮಾನವೀಯ ಮೌಲ್ಯಗಳಾದ ದಯೆ, ಅನುಕಂಪೆ, ವಚನ ನಿಷ್ಠೆ, ದಾಸೋಹ, ಕಾಯಕವೇ ಕೈಲಾಸ ಎಂಬ ಧ್ಯೇಯಗಳ ಬೋಧನೆ ಮತ್ತು ಆಚರಣೆ. ಇವೆಲ್ಲವನ್ನೂ ಒಟ್ಟಾರೆ ನೋಡಿದಾಗ ಬಹಳ ಉದಾರವಾದ ನೀತಿ ಎಂದು ಗುರುತಿಸಬಹುದು. 20ನೇ ಶತಮಾನದ ಯುರೋಪಿನಲ್ಲಿ ಹಲವಾರು ಪ್ರೌಢ ಚಿಂತಕರು ಧೀರ್ಘ ಕಾಲ ಚರ್ಚೆ ಮಾಡಿ ಹುಟ್ಟುಹಾಕಿದ ಉದಾರನೀತಿಗೆ (Liberalism) ಹತ್ತಿರವಾದದ್ದು ಎನ್ನಬಹುದು. ಇವರಿಗಿಂತ ೮೦೦ ವರ್ಷಗಳ ಹಿಂದೆಯೇ ಶರಣರು ಪ್ರಗತಿ ಪರರಾಗಿದ್ದರು ಮತ್ತು ಉದಾರನೀತಿಯ ಬಗ್ಗೆ ಆಗಿನ ಶರಣರು ಆಲೋಚಿಸಿದ್ದರು ಅನ್ನುವ ವಿಚಾರ ಅಚ್ಚರಿಯನ್ನು ಉಂಟುಮಾಡುತ್ತದೆ.

12ನೇ ಶತಮಾನದಲ್ಲಿ ಶರಣರು ಜಡ್ಡು ಹಿಡಿದಿದ್ದ ಸಮಾಜಕ್ಕೆ ಒಂದು ಹೊಸ ಬದಲಾವಣೆಯನ್ನು ತಂದುಕೊಟ್ಟು ಸಾಮಾಜಿಕ ಕ್ರಾಂತಿಯನ್ನು ಉಂಟುಮಾಡಿದರು. ಮುಂದಕ್ಕೆ ಹಿಂದೂ ಧರ್ಮದಲ್ಲಿ /ಸಮಾಜದಲ್ಲಿ/ಸಂಸ್ಕೃತಿಯಲ್ಲಿ ಆಚರಣೆಯೊಳಗಿದ್ದ ಸತಿ ಪದ್ಧತಿ, ಬಾಲ್ಯ ವಿವಾಹ, ವಿಧವೆ ಮರು ವಿವಾಹ, ಜಾತೀಯತೆ ಮತ್ತು ಅಸ್ಪೃಶ್ಯತೆಯ ನಿವಾರಣೆ, ಸ್ತ್ರೀ ಶಿಕ್ಷಣ ಮುಂತಾದ ಸಾಮಾಜಿಕ ಪರಿವರ್ತನೆಗಳನ್ನು ರಾಜಾರಾಂ ಮೋಹನ್ ರಾಯ್, ದಯಾನಂದ ಸರಸ್ವತಿ, ಫುಲೆ, ರಾಮಕೃಷ್ಣ ಪರಮಹಂಸರು, ಗಾಂಧಿ, ಅಂಬೇಡ್ಕರ್ ಮುಂತಾದ ಮಹನೀಯರು ತಂದುಕೊಟ್ಟರು. ಯಾವುದೇ ಒಂದು ಧರ್ಮ ಮತ್ತು ಅದನ್ನು ಆಧರಿಸಿದ ಸಂಸ್ಕೃತಿ ಕಾಲ ಕಾಲಕ್ಕೆ ಪರಿಷ್ಕರಣೆಗೆ ಒಳಗಾಗುವುದು ಆರೋಗ್ಯಕರ. ನಮ್ಮ ಸಾಮಾಜಿಕ ಮೌಲ್ಯಗಳು ತೀವ್ರಗತಿಯಲ್ಲಿ ಬದಲಾಗುತ್ತಿದೆ, ಆದುದರಿಂದ ಅದಕ್ಕೆ ತಕ್ಕಂತೆ ಧರ್ಮಗಳಲ್ಲೂ ಹೊಂದಾಣಿಕೆಗಳನ್ನು ಮಾಡಿಕೊಳ್ಳುವುದು ಅಗತ್ಯ. ಧರ್ಮ ಸೂತ್ರಗಳನ್ನು ದೈವ ಸ್ವರೂಪರು ಬರೆದದ್ದು, ಅದನ್ನು ಬದಲಿಸಲು ಸಾಧ್ಯವೇ ಇಲ್ಲ ಎಂದು ಕೆಲವರು ವಾದ ಮಾಡಬಹುದು, ಕಾಲಕ್ಕೆ ಹೊಂದಿಕೊಳ್ಳದ ಧರ್ಮ ಸಂಘರ್ಷಣೆಗಳಿಗೆ ಕಾರಣವಾಗುತ್ತದೆ.


ಇತಿಹಾಸವನ್ನು ಗಮನಿಸಿದಾಗ ನಮ್ಮ ಸಾಮಾಜಿಕ ಮತ್ತು ಧಾರ್ಮಿಕ ಆಚರಣೆಗಳು ಉದಾರ ಮತ್ತು ಸಂಕುಚಿತ ಸಾಂಪ್ರದಾಯಿಕ ನಿಲುವುಗಳ ನಡುವೆ ಗಡಿಯಾರದ ಪೆಂಡ್ಯುಲಮ್ ರೀತಿಯಲ್ಲಿ ತುಯ್ದಾಡುತ್ತಿತು, ಈಗಲೂ ತುಯ್ದಾಡುತ್ತಿದೆ. ಇದನ್ನು ಹಿಂದೂ ಧರ್ಮವಲ್ಲದೆ ಕ್ರೈಸ್ತ ಮತ್ತು ಇಸ್ಲಾಂ ಧರ್ಮದಲ್ಲೂ ಕಾಣಬಹುದು. ಧರ್ಮ, ಸಂಕಟಕ್ಕೆ ಒಳಗಾದಾಗ (ಅಥವಾ ಒಳಗಾಗಿದೆ ಎಂದು ಭಾವಿಸಿದಾಗ) ಧರ್ಮ ರಕ್ಷಕರು ಮುಂದಾಗಿ ತೀವ್ರವಾದ ಧರ್ಮ ಪ್ರಚೋದನೆಯಲ್ಲಿ ತೊಡಗಿರುವುದನ್ನು ಪ್ರಪಂಚದ ಎಲ್ಲ ಸಂಸ್ಕೃತಿಯಲ್ಲಿ ಕಾಣಬಹುದು. ಸೋಷಿಯಲ್ ಮೀಡಿಯಾ ಬಳಸುವ ಈ ಸಮಯದಲ್ಲಿ ತೀವ್ರವಾದ ಧರ್ಮ ಪ್ರಚೋದನೆಯನ್ನು ವಾಟ್ಸ್ ಆಪ್ ಸಂದೇಶಗಳಲ್ಲಿ ಪ್ರತ್ಯಕ್ಷವಾಗಿ ನಾವು ಭಾರತೀಯರು ಅನುಭವಿಸುತ್ತಿದ್ದೇವೆ. ಈ ವಿಚಾರವನ್ನು ಇಲ್ಲಿ ಪ್ರಸ್ತಾಪಿಸಿದ ಹಿನ್ನೆಲೆ ಉದ್ದೇಶವೆಂದರೆ ಬಹುಶಃ ಹಿಂದೆ ಧರ್ಮದ ಅತಿಯಾದ ಬಳಕೆಯಾಗಿ ಸಂಪ್ರದಾಯಸ್ಥರ ದಬ್ಬಾಳಿಕೆ ಶೋಷಣೆ ಹೆಚ್ಚಾಗಿದ್ದ ಸಮಯದಲ್ಲಿ ಶರಣರು ಬೇಸತ್ತು ಈ ಒಂದು ಕ್ರಾಂತಿಯನ್ನು ಕೈಗೊಂಡಿರಬಹುದು. 11ನೇ ಶತಮಾನದಲ್ಲಿ ಚಾತುರ್ವಣ ಪದ್ಧತಿ ಜಾರಿಯಲ್ಲಿದ್ದಾಗ, ಜ್ಯಾತಿ ವ್ಯವಸ್ಥೆ ತೀವ್ರವಾಗಿದ್ದಾಗ ಶರಣರು ಅದನ್ನು ಪ್ರತಿಭಟಿಸಿ, ಜಾತಿ ವ್ಯವಸ್ಥೆಯ ತರತಮಗಳನ್ನು ಪ್ರಶ್ನಿಸುತ್ತ ಸಮಾನತೆಯನ್ನು ಎತ್ತಿಹಿಡಿದರು. ಶರಣರ ಆ ಪ್ರತಿಭಟನೆಯ ಭಾವನೆಗಳನ್ನು, ಅಸಮಾಧಾನಗಳನ್ನು ವಚನಗಳಲ್ಲಿ ಕಾಣಬಹುದು. ಈ ಸಾಮಾಜಿಕ ಕ್ರಾಂತಿಯ ಫಲವಾಗಿ ಅನುಭವ ಮಂಟಪ ಮತ್ತು ಮಹಾಮನೆಯ ಸ್ಥಾಪನೆಯಾಯಿತು. ಹಲವಾರು ವಚನಗಳಲ್ಲಿ ಈ ಮಹಾಮನೆಯ ಉಲ್ಲೇಖವಿದೆ. ಈ ಅನುಭವ ಮಂಟಪ ಸಮಾಜದ ಕೆಳವರ್ಗದವರ ಮತ್ತು ಸಾಮಾನ್ಯರ ಸಮ್ಮುಖದಲ್ಲಿ ನಡೆಯಿತು ಎಂಬುದಕ್ಕೆ ವಚನಕಾರರ ವೈಯುಕ್ತಿಕ ಹಿನ್ನೆಲೆಗಳು ಸಾಕ್ಷಿಯಾಗಿವೆ. ಈ ವಿಚಾರಗಳು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ನಡೆದ ಸಂಶೋಧನೆಯಿಂದ ಮತ್ತು ಪ್ರಾಜ್ಞರಿಂದ ಅನುಮೋದಿತವಾಗಿದೆ. ಹೀಗೆ 11ನೇ ಶತಮಾನದ ಕರ್ನಾಟಕದಲ್ಲಿ, ಪ್ರಜಾ ಪ್ರಭುತ್ವದ ಪರಿಕಲ್ಪನೆ ಉಂಟಾಯಿತು. ಈ ಎಲ್ಲ ಮೇಲಿನ ಹಿನ್ನೆಲೆಯಲ್ಲಿ ಶರಣರು ವಚನ ಸಾಹಿತ್ಯದಲ್ಲಿ ತೊಡಗಿ ಕೊಂಡರು.

ಈಗ ಶರಣರ ಸಾಮಾಜಿಕ ನಿಲುವುಗಳನ್ನು ಗಮನಿಸೋಣ. ಶರಣರು ದೇವಸ್ಥಾನಗಳನ್ನು ಧಿಕ್ಕರಿಸುವ ದಿಟ್ಟತನವನ್ನು ತೋರಿದರು. ಶರಣರು ಧಾರ್ಮಿಕವಾಗಿ ಸಾಂಸ್ಕೃತಿಕವಾಗಿ ಮುಖ್ಯವಾಹಿನಿಯ ಒಳಗೇ ಇದ್ದರೂ ಏಕೆ ದೇವಸ್ಥಾನವನ್ನು ನಿರಾಕರಿಸಿದರು? ಎಂಬ ಪ್ರಶ್ನೆ ಮೂಡುವುದು ಸಹಜ. ಆಗಿನ ಕಾಲಕ್ಕೆ ದೇವಸ್ಥಾನಗಳಿಗೆ ಮೇಲ್ಜಾತಿ ಜನಕಷ್ಟೇ ಪ್ರವೇಶವಿತ್ತು. ದೇವರ ಮತ್ತು ಭಕ್ತರ ನಡುವೆ ಮಧ್ಯವರ್ತಿಗಳು ಹುಟ್ಟಿಕೊಂಡು ಅವರು ದೇವಸ್ಥಾನಗಳನ್ನು ನಿಯಂತ್ರಿಸುತ್ತಿದ್ದರು. ದೇವರ ಹೆಸರಿನಲ್ಲಿ ಮುಗ್ಧರ ಶೋಷಣೆ ನಡೆದಿತ್ತು.

"ಭಕ್ತನಿರ್ದ ತಾಣವೇ ದೇವಲೋಕ
ಭಕ್ತನಂಗಳವೇ ವಾರಣಾಸಿ
ದೇಹವೇ ದೇಗುಲ"

ಎಂದು ಹೇಳುತ್ತಾ ದೇವರ ಮತ್ತು ದೇವಸ್ಥಾನಗಳ ವೈಭವೀಕರಣ ನಡೆಯುತ್ತಿರುವಾಗ ಇಷ್ಟ ಲಿಂಗವೆಂಬ ನಿರಾಕಾರ ದೇವರ ಪರಿಕಲ್ಪನೆಯನ್ನು ಹುಟ್ಟುಹಾಕಿ, ಶರಣರು ದೇವರನ್ನೇ ಜನಸಾಮಾನ್ಯರ ಹತ್ತಿರ ತಂದು ನಿಲ್ಲಿಸಿದರು. ದೇವರು ಒಂದು ವ್ಯಾಪಾರದ, ವಾಣಿಜ್ಯ ಉತ್ಪನ್ನವಾಗಿದ್ದ ಸಮಯದಲ್ಲಿ ಮುಗ್ಧರ ಶೋಷಣೆಯನ್ನುನಿವಾರಿಸಿದರು. 'ಭಕ್ತನಿರುವ ತಾಣವೇ ವಾರಣಾಸಿ' ಎಂಬ ಸಂದೇಶವನ್ನು ಕೊಟ್ಟರು.

ಮನುಷ್ಯನಿಗೆ ನಂಬಿಕೆ ಮುಖ್ಯ; ಆದರೆ ನಂಬಿಕೆಗಳನ್ನು ಕಟ್ಟು ಕಥೆಗಳನ್ನು ಹುಟ್ಟುಹಾಕಿ ಅದರಿಂದ ಲಾಭ ಪಡೆಯುವುದಾದರೆ ಆ ನಂಬಿಕೆಯ ಹಿಂದಿನ ಉದ್ದೇಶವನ್ನು ಪ್ರಶ್ನಿಸಬೇಕಾಗುತ್ತದೆ. ಕೆಲವೊಮ್ಮೆ ಆ ನಂಬಿಕೆ ವೈಯುಕ್ತಿಕ ನೆಲೆಯಿಂದ ಜಿಗಿದು ಸಾಮೂಹಿಕ ನೆಲೆಯಲ್ಲಿ ಕೆಲವರಿಗಷ್ಟೇ ಅನುಕೂಲವಾದಾಗ, ಧಾರ್ಮಿಕ ಪ್ರಚೋದನೆಗೆ ಬಳಸಿದಾಗ, ಅಥವಾ ಒಂದು ರಾಜಕೀಯ ಪಕ್ಷ ಅದನ್ನು ಬಂಡವಾಳ ಮಾಡಿಕೊಂಡಾಗ ಆ ನಂಬಿಕೆಯನ್ನು ಪ್ರಶ್ನಿಸಬೇಕಾಗುತ್ತದೆ. ನಂಬಿಕೆ ವೈಯುಕ್ತಿಕ ನೆಲೆಯಲ್ಲಿ ಸೀಮಿತವಾಗಿದ್ದರೆ ಅದನ್ನು ಒಪ್ಪಿಕೊಳ್ಳಬಹುದು, ಅದರಿಂದ ಸಮಾಜಕ್ಕೆ ಹಾನಿ ಉಂಟಾಗುವ ಸಾಧ್ಯತೆ ಕಡಿಮೆ. ನಂಬಿಕೆ ಅವೈಜ್ಞಾನಿಕವಾಗಿ, ಸರಳ ತರ್ಕಗಳಿಗೆ ಸಿಗದೇ ಕೆಲವರ ಲಾಭಕ್ಕಾಗಿ ಅದನ್ನು ಬಳಸಿಕೊಂಡಲ್ಲಿ ಅದನ್ನು ಧಿಕ್ಕರಿಸ ಬೇಕಾಗುತ್ತದೆ. ನಂಬಿಕೆಗಳಿಂದ ಮೌಢ್ಯ ಉಂಟಾಗಿ ಕೆಲವು ಯಾಂತ್ರಿಕ ಆಚರಣೆಗಳು ಹುಟ್ಟಿ ಕೊಂಡಿವೆ. ಈ ಒಂದು ಹಿನ್ನೆಲೆಯಲ್ಲಿ ಬಸವಣ್ಣನವರ ಕೆಳಗಿನ ವಚನ ನೂರಾರು ವರ್ಷಗಳ ನಂತರವೂ ಈ ವೈಜ್ಞಾನಿಕ ಯುಗದಲ್ಲೂ ಪ್ರಸ್ತುತವಾಗಿದೆ ಎನ್ನುವುದು ಶೋಚನೀಯ ಸಂಗತಿ.

"ನೀರ ಕಂಡಲ್ಲಿ ಮುಳುಗುವರಯ್ಯ, ಮರ ಕಂಡಲ್ಲಿ ಸುತ್ತುವರಯ್ಯ
ಬತ್ತುವ ಜಲವ ಒಣಗುವ ಮರವ ನೆಚ್ಚುವರು
ನಿಮ್ಮನೆತ್ತ ಬಲ್ಲರು ಕೂಡಲ ಸಂಗಮ ದೇವಾ"

ಶರಣರು ಸ್ವರ್ಗ ನರಕ, ಪಾಪ, ಪುಣ್ಯ ಸಂಪಾದನೆ ಬಗ್ಗೆ ವೈಚಾರಿಕವಾಗಿ ಆಲೋಚಿಸಿ;
"ದೇವ ಲೋಕ ಮರ್ತ್ಯಲೋಕವೆಂಬುದು ಬೇರೆ ಉಂಟೆ
ಸತ್ಯ ನುಡಿವುದೇ ದೇವಲೋಕ ಮಿತ್ಯನುಡಿವುದೆ ಮರ್ತ್ಯ ಲೋಕ
ಆಚಾರವೇ ಸ್ವರ್ಗ ಅನಾಚಾರವೇ ನರಕ "

ಎಂದು ಹೇಳುತ್ತಾ, ಮುಂದಕ್ಕೆ "ಅಯ್ಯಎಂದರೆ ಸ್ವರ್ಗ ಎಲವೋ ಎಂದರೆ ನರಕ" ಎಂಬ ಉಕ್ತಿಯನ್ನು ನೀಡಿದ್ದಾರೆ. ಶರಣ ಸಾಹಿತ್ಯದಲ್ಲಿ ಬಳಸುವ ಅಯ್ಯ, ಅಕ್ಕ, ಅಣ್ಣ ಸಮಾಜದಲ್ಲಿ ಒಂದು ಭ್ರಾತೃತ್ವವನ್ನು, ಆತ್ಮೀಯ ಭಾವನೆಯನ್ನು ಉಂಟುಮಾಡುತ್ತದೆ. ಜನರ ನಡುವೆ 'ಎಲವೋ' ಎನ್ನದೆ, ದ್ವೇಷ ಅಸೂಯೆಗಳನ್ನು ಬದಿಗಿಟ್ಟು ಎಲ್ಲರು "ಸರ್ವಜನಾಂಗದ ಈ ಶಾಂತಿಯ ತೋಟದಲ್ಲಿ'' ಸೌಹಾರ್ದತೆಯಿಂದ ಬದುಕಿದರೆ ಅದೇ ಸ್ವರ್ಗ! ಇಹ ಮತ್ತು ಪರಲೋಕವೆಂಬ ಕಾಲ್ಪನಿಕ ಲೋಕವನ್ನು ಶರಣು ನಿರಾಕರಿಸಿದರು. ಇಹಲೋಕದಲ್ಲಿ ಬದುಕುತ್ತಾ ಬರಿ ಪರಲೋಕವನ್ನೇ ಕುರಿತು ಚಿಂತಿಸುವವರನ್ನು ಕುರಿತು ಅಲ್ಲಮ ಪ್ರಭುಗಳು ಮಾರ್ಮಿಕವಾಗಿ "ಕೊಟ್ಟ ಕುದುರೆಯನು ಏರಲಾಗದವನು ಧೀರನು ಅಲ್ಲ ಶೂರನೂ ಅಲ್ಲ" ಎನ್ನುತ್ತಾರೆ. ಇಲ್ಲಿ ‘ಕೊಟ್ಟ ಕುದುರೆ’ ಎಂದರೆ ನಮಗೆ ದಕ್ಕಿರುವ ಬದುಕು, ಅದು ಕಾಡು ಕುದುರೆ ಇದ್ದಹಾಗೆ, ಅದನ್ನು ಪಳಗಿಸಿ ಅದರ ಮೇಲೆ ಕುಳಿತು ಬದುಕನ್ನು ಕ್ರಯಿಸಬೇಕು, ಅದನ್ನು ಬಿಟ್ಟು ಬೇರೊಂದು ಪರಲೋಕವೆಂಬ ಕುದುರೆಯನ್ನು ಬಯಸುವುದು ನಿರರ್ಥಕ ಎಂದು ತಿಳಿಸಿದ್ದಾರೆ.

ಶರಣರು ತೀಕ್ಷ್ಣ ವಿಮರ್ಶಕರು, ಅವರು ತಮ್ಮ ಬದುಕನ್ನು, ತಮ್ಮ ಆಚಾರ ವಿಚಾರಗಳನ್ನು ವಿಮರ್ಶೆಗೆ ಒಳಪಡಿಸಿಕೊಂಡವರು, ಆತ್ಮ ಶೋಧನೆಯಲ್ಲಿ ತೊಡಗಿಕೊಂಡವರು. ಇದಕ್ಕೆ ನಿದರ್ಶನವಾಗಿ ಕೆಳಗಿನ ವಚನವನ್ನು ಇಲ್ಲಿ ಪ್ರಸ್ತಾಪಮಾಡುವುದು ಸೂಕ್ತ;

ಕಲ್ಲ ನಾಗರ ಕಂಡರೆ ಹಾಲನೆರೆ ಎಂಬರು
ದಿಟ ನಾಗರ ಕಂಡರೆ ಕೊಲ್ಲೆಂಬರಯ್ಯ
ಉಂಬ ಜಂಗಮ ಬಂದೆಡೆ ನಡೆ ಎಂಬರು
ಉಣದ ಲಿಂಗಕ್ಕೆ ಬೋನವ ಹಿಡಿ ಎಂಬರಯ್ಯ

ನಮ್ಮ ಆಚರಣೆಗಳಲ್ಲಿ ಇರುವ ವೈರುಧ್ಯವನ್ನು ಸ್ವಾರ್ಥತೆಯನ್ನು ಮತ್ತು ಅರ್ಥಹೀನತೆಯನ್ನು ಶರಣರು ಖಂಡಿಸುತ್ತಾರೆ. ನಮ್ಮ ಸಂಸ್ಕೃತಿಯಲ್ಲಿ ಮನುಷ್ಯನಿಗೆ ಮಾರಕವಾಗಿರುವ ಹಾವು, ಆನೆ, ಸಿಂಹ ಎಂಬ ಕಂಡ ಕಂಡ ಪ್ರಾಣಿಗಳನೆಲ್ಲಾ ಪೂಜಿಸುವ ಬಗ್ಗೆ ಶರಣರಿಗೆ ಅಸಮಾಧಾನವಿದ್ದಿರಬಹುದು.

ಶರಣರು ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿದವರು. ಹಿಂದೆ ಈ ಜಾತಿ ವ್ಯವಸ್ಥೆ ಅವರವರ ವೃತ್ತಿಗೂ ಸಂಬಂಧಪಟ್ಟಿದ್ದು, ಇದನ್ನು ಚಾತುರ್ವರ್ಣ ಪದ್ಧತಿ ಎಂದು ಗುರುತಿಸಲಾಗಿತ್ತು. ಈ ವ್ಯವಸ್ಥೆಯಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ವಿಂಗಡಣೆಗಳು ಇದ್ದವು. ಶರಣರು 'ಕಾಯಕವೇ ಕೈಲಾಸ' ಎಂಬ ಪರಿಕಲ್ಪನೆಯನ್ನು ತಂದು ತಮ್ಮ ವೃತ್ತಿಯನ್ನು ಮೇಲು-ಕೀಳು ಎಂದು ಪರಿಗಣಿಸದೆ ಅವರವರ ಕೆಲಸವನ್ನು ಶ್ರದ್ಧೆಯಿಂದ ಮಾಡಿದರೆ ಆಗ ಅವರವರ ಕಾಯಕ ಅವರಿಗೆ ಶ್ರೇಷ್ಠ, ಆಗ ಎಲ್ಲರೂ ಸಮಾನರೇ ಎಂಬ ಸಂದೇಶವನ್ನು ಬಿತ್ತಿದರು. ಇಂದು ನಾವು ಅನಿವಾಸಿಗಳು ಪಾಶ್ಚ್ಯಾತ್ಯ ದೇಶಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ಇಲ್ಲಿ ಕೆಲಸ ಮಾಡುವವರು ವೈದ್ಯರೇ ಆಗಿರಬಹುದು, ಅಥವಾ ವಾರ್ಡ್ ಬಾಯ್ ಆಗಿರಬಹುದು ಆದರೂ ಸಮಾಜದಲ್ಲಿ ಎಲ್ಲರೂ ಒಂದೇ ಎನ್ನುವ ಭಾವನೆ ಘನತೆ ನಮಗಿದೆ. ಇದೇ ವಿಚಾರವನ್ನು 900 ವರ್ಷಗಳ ಹಿಂದೆ ಶರಣರು ಕಾಯಕದಲ್ಲಿರುವ ಘನತೆ (Dignity of labour) ಮತ್ತು ಸಮಾನತೆಯನ್ನು ತೋರಿಸಿಕೊಟ್ಟರು. ಈ ಜಾತಿ ಪದ್ದತಿಯನ್ನು ಪ್ರಶ್ನಿಸುತ್ತ ಶರಣರು;

ನೆಲೆ ಒಂದೇ: ಹೊಲಗೇರಿ, ಶಿವಾಲಯಕ್ಕೆ
ಜಲ ಒಂದೇ: ಶೌಚ, ಚಮನಕ್ಕೆ
ಕುಲವೊಂದೇ: ತನ್ನ ತಾನ್ ಅರಿದವಂಗೆ

ಎನ್ನುತ್ತಾ ಹೊಲಗೇರಿಗೂ, ಶಿವಾಲಯಕ್ಕೂ ನೆಲ ಒಂದೇ ಆಗಿದ್ದಲ್ಲಿ, ಶೌಚಕ್ಕೂ, ತೀರ್ಥಕ್ಕೂ, ಶುದ್ಧಿಗೂ ಜಲ ಒಂದೇ ಆಗಿದ್ದಲ್ಲಿ, ಮನುಷ್ಯ ಮನುಷ್ಯರ ನಡುವೆ ಕುಲವೊಂದೇ ಏಕೆ ಆಗಬಾರದು ಎಂದು ಪ್ರಶ್ನಿಸುತ್ತಾರೆ. ಸದರಿ ಪ್ರಪಂಚದಲ್ಲಿ, ಧರ್ಮದ ಹೆಸರಿನಲ್ಲಿ, ಪ್ರಪಂಚದ ನಾನಾ ಭಾಗಗಳಲ್ಲಿ ಧರ್ಮ ಯುದ್ಧ ನಡೆದಿದೆ. "ನಾವು-ಅವರು" ಎಂಬ ಪ್ರತ್ಯೇಕತೆ ಪ್ರಜ್ಞೆ ಹೆಚ್ಚಾಗಿದೆ. ದೇಶಗಳು, ಸಮಾಜ ಧ್ರುವೀಕರಣಗೊಂಡಿದೆ. ಇಂತಹ ಒಂದು ಸನ್ನಿವೇಶದಲ್ಲಿ ಬಸವಣ್ಣನವರ ಈ ವಚನ ಬಹಳ ಪ್ರಸ್ತುತವಾಗಿದೆ;

ಇವನಾರವ ಇವನಾರವ ಎಂದೆನಿಸದಿರಯ್ಯ
ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ
ಕೂಡಲ ಸಂಗಮ ದೇವಾ ನಿಮ್ಮ ಮನೆಯ
ಮಗನೆನಿಸಯ್ಯ

‘ಸರ್ವೇ ಜನಃ ಸುಖಿನೋ ಭವಂತು’ ಎನ್ನುತ್ತಲೇ, ಸಮಾನತೆಯ ಸಂದೇಶವನ್ನು ಸಾರುತ್ತಲೇ "ನಾವು - ಅವರು" ಎಂಬ ಈ ಪ್ರತ್ಯೇಕತೆಯ ಪ್ರಜ್ಞೆಯನ್ನು (Tribalism) ಹುಟ್ಟುಹಾಕಿದ್ದೇವೆ. ಈ ಧ್ರುವೀಕರಣಕ್ಕೆ(Polarization) ಕಾರಣಗಳೇನು ಎಂಬುದನ್ನು ಡಾರ್ವಿನ್ ನೀಡಿರುವ ಜೈವಿಕ ತತ್ವಗಳ ಹಿನ್ನೆಲೆಯಲ್ಲಿ ಗಮನಿಸಬೇಕಾಗಿದೆ. "ಯಾವುದು ಪ್ರಬಲವಾಗಿದೆಯೋ ಅದ್ಕಕಷ್ಟೇ ಉಳಿಗಾಲ" (Survival of the fittest) ಎನ್ನುವ ಸೈಧಾಂತಿಕ ಹಿನ್ನೆಲೆಯಲ್ಲಿ ಮನುಷ್ಯ ತನ್ನ ಒಂದು ಸಂರಕ್ಷಣೆಗೆ ಅನಾದಿ ಕಾಲದಿಂದ ಬುಡಕಟ್ಟು, ವರ್ಣ, ಧರ್ಮ, ರಾಷ್ಟ್ರ, ಜಾತಿ
ಎಂಬ ಗುಂಪುಗಾರಿಕೆ ಮಾಡಿಕೊಂಡು ಬಂದಿದ್ದಾನೆ. ತನ್ನ ಒಂದು ಬದುಕಿನ ರೀತಿನೀತಿಗಳಿಗೆ ಒಗ್ಗಲಾರದವರನ್ನು ಅನ್ಯರೆಂದು ಪರಿಗಣಿಸಿ ಈ ಅನ್ಯರಿಗೆ ಅಸಹ್ಯ ಪಡುತ್ತಾ ಬಂದಿದ್ದಾನೆ. ತನನ್ನು ಬಣ್ಣಿಸಿಕೊಂಡು, ಇತರರನ್ನು ಹಳಿಯುತ್ತ, ಗಂಗಾ ನದಿಯಲ್ಲಿ ಸ್ನಾನ ಮಾಡಿ ಬಹಿರಂಗ ಶುದ್ಧಿಯನ್ನು ಪಡೆದು ಕೊಂಡನೇ ಹೊರೆತು ಅಂತರಂಗ ಶುದ್ಧಿಯನ್ನು ಪಡೆದುಕೊಳ್ಳಲಿಲ್ಲ! ಈ ಒಂದು ಹಿನ್ನೆಲೆಯಲ್ಲಿ ಬಸವಣ್ಣನವರ ವಚನವನ್ನು ಗಮನಿಸಿ;

"ಕಳ ಬೇಡ ಕೊಲಬೇಡ
ಹುಸಿಯ ನುಡಿಯಲು ಬೇಡ
ಅನ್ಯರಿಗೆ ಅಸಹ್ಯ ಪಡಬೇಡ
ತನ್ನ ಬಣ್ಣಿಸ ಬೇಡ, ಇದಿರ ಹಳಿಯಲು ಬೇಡ
ಇದೇ ಅಂತರಂಗ ಶುದ್ಹಿ, ಇದೇ ಬಹಿರಂಗ ಶುದ್ಧಿ"

‘ಸರ್ವೇ ಜನಃ ಸುಖಿನೋ ಭವಂತು’ ಎಂದಾಗಬೇಕಾದರೆ, ನಮ್ಮ-ನಿಮ್ಮ ನಡುವಿನ ಗೋಡೆಗಳನು ಕೆಡವಬೇಕು.

ಸ್ತ್ರೀ ಸ್ವಾತಂತ್ರ್ಯವನ್ನು ಮೊಟ್ಟ ಮೊದಲಿಗೆ ಗುರುತಿಸಿ, ಗೌರವಿಸಿ, ಅನುಷ್ಠಾನಕ್ಕೆ ತಂದವರು ಶರಣರು, "ಸ್ತ್ರೀ ಬಾಲ್ಯದಲ್ಲಿ ತಂದೆಯ, ಯೌವನದಲ್ಲಿ ಗಂಡನ, ಮುಪ್ಪಿನಲ್ಲಿ ಮಗನ ಅಧೀನಳು, ಹೆಣ್ಣು ಮಾಯೆ, ಎಂದು ಹೇಳುತ್ತಿದ್ದ ಕಾಲದಲ್ಲಿ ಅಲ್ಲಮರು; "ಹೆಣ್ಣು ಮಾಯೆಯಲ್ಲ, ಹೊನ್ನು ಮಾಯೆಯಲ್ಲ, ಮನದ ಮುಂದಣ ಆಸೆಯೇ ಮಾಯೆ' ಎಂದು, ಹೆಣ್ಣಿಗೆ ಸಮಾಜದಲ್ಲಿ ಸಮಾನ ಸ್ಥಾನ-ಮಾನಗಳನ್ನು, ಹಕ್ಕುಗಳನ್ನು ಕಲ್ಪಿಸಿಕೊಟ್ಟರು. ಬಸವಣ್ಣನವರು ಅಕ್ಕ ಮಹಾದೇವಿ ಮತ್ತು ಇತರ ಶರಣೆಯರನ್ನು ಅನುಭವಮಂಟಪದಲ್ಲಿ ಆಹ್ವಾನಿಸಿ ಚರ್ಚೆಯಲ್ಲಿ ಪಾಲ್ಗೊಳ್ಳಲು ಅನುವು ಮಾಡಿಕೊಟ್ಟರು. ಶರಣೆಯರೂ ಹಲವಾರು ವಚನಗಳನ್ನು ರಚಿಸಿದರು. ಇಷ್ಟಾಗಿಯೂ ಹೆಣ್ಣು-ಗಂಡಿನ ನಡುವೆ ಏನು ವ್ಯತ್ಯಾಸ, ಅವರನ್ನೇಕೆ ಸಾಮಾಜಿಕ ಆಚರಣೆಯಿಂದ ಹೊರಗಿಡಬೇಕು? ಎಂದು ಪ್ರಶ್ನಿಸಬಹುದು. ಅದಕ್ಕೆ ಉತ್ತರವಾಗಿ ಜೇಡರ ದಾಸಿಮಯ್ಯ ಹೀಗೆ ಹೇಳುತ್ತಾನೆ; "ಮೊಲೆ ಮೂಡಿ ಬಂದರೆ ಹೆಣ್ಣೆಂಬರು, ಗಡ್ಡ ಮೀಸೆ ಮೂಡಿಬಂದರೆ ಗಂಡೆಂಬರು, ಇವೆರಡರ ನಡುವೆ ಸುಳಿವಾತ್ಮ ಹೆಣ್ಣು ಅಲ್ಲ ಗಂಡು ಅಲ್ಲ!”

ಶರಣರ ಚಿಂತನೆಗಳು ಸಮಾಜಮುಖಿ ಅಷ್ಟೇ ಅಲ್ಲದೆ ಅದು ಸಂಸಾರ ಮುಖಿ ಕೂಡ ಎನ್ನುವುದಕ್ಕೆ ಕೆಳಗಿನ ಸಾಲುಗಳು ಸಾಕ್ಷಿಯಾಗಿವೆ;

ಮಠವೇಕೋ, ಪರ್ವತವೇಕೋ,
ಜನವೇಕೊ, ನಿರ್ಜನವೇಕೊ,
ಚಿತ್ತ ಸಮಾಧಾನ ಉಳ್ಳ ಶರಣಂಗೆ?

ಬಹಳಷ್ಟು ಶರಣರು ಕಾವಿ ತೊಡಲಿಲ್ಲ (ಇದಕ್ಕೆ ಕೆಲವು ಹೊರತುಗಳಿರಬಹುದು) ಸನ್ಯಾಸಿಗಳಾಗಿ ಕಾಡಿಗೆ, ಪರ್ವತಗಳಿಗೆ ಹೋಗಿ, ದೇಹವನ್ನು ದಂಡಿಸಿ ಘೋರ ತಪಸ್ಸನ್ನು ಮಾಡಲಿಲ್ಲ. ಬದಲಾಗಿ "ಸತಿ-ಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ" ಎನ್ನುತ್ತಾ ಸಂಸಾರದೊಳಗೇ ಇದ್ದುಕೊಂಡು ಸತ್ಯಶೋಧನೆಯನ್ನು ನಡೆಸಿ, ಅನುಭವ ಮತ್ತು ಅನುಭಾವವನ್ನು ಪಡೆದುಕೊಂಡರು. ದೇಹ ದಂಡನೆಯ ಕ್ರಮವನ್ನು ಅವರು ಅನುಮೋದಿಸಲಿಲ್ಲ. ದೇಹದಂಡನೆಯನ್ನು ಕುರಿತು ಬಸವಣ್ಣನವರು; 'ಹುತ್ತವ ಬಡಿದೊಡೆ ಹಾವು ಸಾಯಬಲ್ಲುದೆ'? ಎಂದು ಪ್ರಶ್ನಿಸುತ್ತಾರೆ. ಮನದೊಳಗೆ ಹಾವೆಂಬ ವಿಷವನ್ನು ಇಟ್ಟುಕೊಂಡು, ದೇಹವೆಂಬ ಹುತ್ತವನ್ನು ಬಡಿದರೆ ಪ್ರಯೋಜನವೇನು ಎನ್ನುತ್ತಾರೆ.

ಶರಣರು ರಚಿಸಿರುವ ವಚನಗಳಲ್ಲಿ ಸಾಹಿತ್ಯ ಮೌಲ್ಯಗಳೂ ಇವೆ. 11ನೇ ಶತಮಾನದ ಶುರುವಿನಲ್ಲಿ ಸಾಹಿತ್ಯ, ಹೆಚ್ಚಾಗಿ ಹಳೆಗನ್ನಡ ಸಂಸ್ಕೃತಮಯವಾಗಿದ್ದ ಸಮಯದಲ್ಲಿ ಕನ್ನಡ ಆಡು ಭಾಷೆಯನ್ನು ವಚನಕಾರರು ಬಳಸಿಕೊಂಡರು. ಅವರ ಬರಹದಲ್ಲಿ ಸರಳತೆ ಮತ್ತು ಸ್ಪಷ್ಟತೆ ಕಾಣುತ್ತದೆ. ಎಲ್ಲರ ಗ್ರಹಿಕೆಗೆ ನಿಲುಕುವಂತೆ ನಾಲ್ಕಾರು ಸಾಲುಗಳ ವಚನಗಳನ್ನು ರಚಿಸಿದ್ದಾರೆ. ಅಲ್ಲಮ ಪ್ರಭುಗಳ ರಚನೆಯು ಹಲವಾರು ರೂಪಕಗಳನ್ನು ಒಳಗೊಂಡು ಸಂಕೀರ್ಣವಾಗಿ ಮತ್ತು ಒಗಟಿನ ರೀತಿಯಲ್ಲಿದ್ದು ಸಾಹಿತ್ಯ ಪ್ರೌಢವಾಗಿದೆ.

ಒಟ್ಟಾರೆ ಕನ್ನಡ ಸಾಹಿತ್ಯಕ್ಕೆ ಶರಣರ ಕೊಡುಗೆ ಮಹತ್ವವಾದದ್ದು. ಅವರು ರಚಿಸಿದ ವಚನ ಸಾಹಿತ್ಯದಲ್ಲಿ ಮಾನವೀಯತೆ, ಅನುಕಂಪೆ, ಸ್ತ್ರೀ ಸ್ವಾತಂತ್ರ್ಯ, ವೈಚಾರಿಕತೆ, ಸಮಾನತೆ, ಪ್ರಜಾಪ್ರಭುತ್ವ ಪರಿಕಲ್ಪನೆಗಳನ್ನು ಒಳಗೊಂಡು, ಎಲ್ಲರೂ ಸಮಾನರೇ ಎಂಬ ಸಮಾಜ ಮುಖಿ ಚಿಂತನೆಗಳಿವೆ. ಕಾಯಕವೇ ಕೈಲಾಸ ಎಂದು ದುಡಿಯುತ್ತಾ, ದುಡಿದದ್ದನ್ನು ದಾಸೋಹ ಅನ್ನುವ ಭಾವನೆಯಲ್ಲಿ ಇತರೊಡನೆ ಹಂಚಿಕೊಳ್ಳುತ್ತಾ ಪ್ರಾಮಾಣಿಕವಾಗಿ ಬದುಕಿ, ಸಮಾಜಕ್ಕೆ ಆದರ್ಶಪ್ರಾಯರಾಗಿ ಬೆಳಕನ್ನು ನೀಡಿದವರು. ಈ ಕಾರಣಗಳಿಂದಲೇ ಅವರು ಕೊಟ್ಟಿರುವ ಸಾಹಿತ್ಯ ಎಲ್ಲ ಕಾಲಕ್ಕೂ ಎಲ್ಲ ದೇಶಕ್ಕೂ ಪ್ರಸ್ತುತವಾಗಿದೆ.

ಪ್ರೇಮಲತಾಅವರ ‘ನಂಬಿಕೆಯೆಂಬ ಗಾಳಿಕೊಡೆ’ ಕಥಾಸಂಕಲನ – ಕೆಲವುಅನಿಸಿಕೆಗಳು

ಡಾ.ಜಿ.ಎಸ್.ಶಿವಪ್ರಸಾದ್

ಪ್ರೇಮಲತಾ ಅವರ 'ನಂಬಿಕೆಯೆಂಬ ಗಾಳಿಕೊಡೆ'  ಕಥಾ ಸಂಕಲನವನ್ನು ಇತ್ತೀಚಿಗೆ ಓದಿ ಮುಗಿಸಿ ನನ್ನ ಕೆಲವು ಅನಿಸಿಕೆಗಳನ್ನು ಇಲ್ಲಿ ದಾಖಲಿಸಿದ್ದೇನೆ. ಈ ಕೃತಿಯನ್ನು ಈಗಾಗಲೇ ಓದಿರುವವರಿಗೆ ಈ ನನ್ನ ಬರಹ ಹೊಸ ದೃಷ್ಟಿ ಕೋನಗಳನ್ನು ನೀಡಬಹುದು. ಇನ್ನು ಓದಬೇಕು ಎಂಬ ಆಕಾಂಕ್ಷೆ ಉಳ್ಳವರಿಗೆ ಈ ಲೇಖನ ಪ್ರವೇಶ ಪರಿಚಯವನ್ನು ಒದಗಿಸಬಹುದು. ಲೇಖಕ/ಲೇಖಕಿಯರಿಗೆ ತಾವು ಬರೆದ ಕೃತಿಯನ್ನು ಇತರರು ಓದಿದರೆ ಅದರಿಂದ ಉಂಟಾಗುವ ಸಂತಸ ತೃಪ್ತಿ ಒಂದು ಕಡೆಯಾದರೆ, ಆ ಕೃತಿಯನ್ನು ಓದಿ ಅದರ ಬಗ್ಗೆ ಚರ್ಚೆ ನಡೆದಲ್ಲಿ ಅವರಿಗೆ ಸಾರ್ಥಕತೆಯ ಭಾವ ಉಂಟಾಗಬಹುದು. ಒಂದು ಕೃತಿಯ ವಿಷಯ ವಸ್ತು, ಆಳ ಮತ್ತು ವಿಸ್ತಾರಗಳು ಈ ಅಂಶಗಳನ್ನು ನಿರ್ಧರಿಸಬಹುದು.  ಬರಹಗಾರರಿಗೆ ಅದಕ್ಕಿಂತ ಹೆಚ್ಚಿನ ನಿರೀಕ್ಷೆ ಇರಲಾರದು. ಇನ್ನು ಕೆಲವು ಕರ್ತೃಗಳು "ಯಾರು ಕಿವಿ ಮುಚ್ಚಿದರು ನನಗಿಲ್ಲ ಚಿಂತೆ" ಎಂಬ ನಿರ್ಲಿಪ್ತ ನಿಲುವಿನಲ್ಲಿ ತಮ್ಮ ಒಂದು ಆತ್ಮ ತೃಪ್ತಿಗೆ ಬರವಣಿಗೆಯನ್ನು ಮುಂದುವರಿಸಬಹುದು. ಅನಿವಾಸಿ ನೆಲದಲ್ಲಿ ಮೂಡಿ ಬರುವ ಕನ್ನಡ ಕೃತಿಗಳನ್ನು ಇಲ್ಲಿಯ ಓದುಗರು ಓದಿ ಉತ್ತೇಜಿಸುವುದು, ಸಾಧ್ಯವಾದಲ್ಲಿ ಚರ್ಚೆಗೆ ಒಳಪಡಿಸುವುದು ಅಗತ್ಯವಷ್ಟೇ ಅಲ್ಲ, ಅದು ಅನಿವಾಸಿ  ಕನ್ನಡಿಗರ ಜವಾಬ್ದಾರಿಯೂ ಹೌದು. ಇದನ್ನು ನಮ್ಮ ಅನಿವಾಸಿ ದಶಮಾನೋತ್ಸವ ಸಂದರ್ಭದಲ್ಲಿ ಅನುಷ್ಠಾನಕ್ಕೆ ತರಲಾಯಿತು. ಸಮಯೋಚಿತವಾಗಿ ವಾಟ್ಸ್ ಆಪಿನಲ್ಲೂ ಚರ್ಚೆ ಮಾಡುಕೊಳ್ಳುತ್ತ ಬಂದಿದ್ದೇವೆ. ನನ್ನ ಒಂದು ಸಣ್ಣ ಕಾಣಿಕೆ ಈ ಬರಹದ ರೂಪದಲ್ಲಿ ಅಭಿವ್ಯಕ್ತಗೊಂಡಿದೆ. ಇಲ್ಲಿ ಸಣ್ಣಕಥೆಗಳ ಬಗ್ಗೆ ನನ್ನ ಕೆಲವು ಸಾರ್ವತ್ರಿಕ ಅನಿಸಿಕೆಗಳನ್ನು ಬೆಸೆಯಲಾಗಿದೆ. 

ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು, ಹೊಸ ವರ್ಷದಲ್ಲಿ ಇನ್ನೂ ಹೆಚ್ಚಿನ ಹೊಸ ಕೃತಿಗಳು ಹೊರಬಂದು ಸೃಜನಶೀಲತೆ ವಿಜೃಂಭಿಸಲಿ

-ಸಂ
ಪ್ರೇಮಲತಾ ಅವರು ದಶಕಗಳಿಂದ ಸಣ್ಣ ಕಥೆಗಳನ್ನು ಬರೆದು ಸುಧಾ, ಮಯೂರ ಮುಂತಾದ ಸಂಚಿಕೆಗಳಲ್ಲಿ ಪ್ರಕಟಿಸಿದ್ದಾರೆ. ಹಾಗೆ ಮೂರು ಕಥಾಸಂಕಲನಗಳನ್ನು ಈಗಾಗಲೇ ಪ್ರಕಟಿಸಿ ಖ್ಯಾತರಾಗಿದ್ದಾರೆ. ಅವರ ‘ನಂಬಿಕೆಯೆಂಬ ಗಾಳಿಕೊಡೆ’ ಕಥಾ ಸಂಕಲನವು ವೀರಲೋಕ ಪ್ರಕಾಶನದಿಂದ ೨೦೨೩ರಲ್ಲಿ ಲೋಕಾರ್ಪಣೆಗೊಂಡಿದೆ. ಇಲ್ಲಿ ೧೦ ಸಣ್ಣ ಕಥೆಗಳಿವೆ. ಪುಸ್ತಕ ತರಿಸಿಕೊಂಡು ಹಲವಾರು ದಿನಗಳು ಕಳೆದಿದ್ದರೂ ಈಗ ಸಮಯ ಒದಗಿಬಂದು ಇತ್ತೀಚಿಗಷ್ಟೇ ಓದಿ ಮುಗಿಸಿ, ನನ್ನ ಕೆಲವು ಪ್ರಾಮಾಣಿಕ ಅನಿಸಿಕೆಗಳನ್ನು ಹಂಚಿಕೊಂಡಿದ್ದೇನೆ. ಇದೊಂದು ವಿಮರ್ಶೆಯಾಗಿ ಮೂಡಿ ಬಂದಿದ್ದರೆ ಹಾಗೂ ಇರಲಿ. 

ಈ ಸಂಕಲನದ ಶೀರ್ಷಿಕೆ ಮತ್ತು ಮುಖಪುಟ ಇಲ್ಲಿಯ ಕಥೆಗಳ ರೂಪಕದಂತೆ ನಿಂತಿದೆ. ಸ್ವತಃ ಲೇಖಕಿ ತಮ್ಮ ಅರಿಕೆಯಲ್ಲಿ ಪ್ರಸ್ತಾಪಿಸಿರುವಂತೆ "ನಂಬಿಕೆಗಳೇ ಜೀವನಕ್ಕೆ ಆಧಾರ, ಬದುಕೇ ಒಂದು ನಂಬಿಕೆ" ಬದುಕಿನ ಹಲವಾರು ಸನ್ನಿವೇಶಗಳಲ್ಲಿ ಈ ನಂಬಿಕೆ ಎನ್ನುವುದು ಚುಕ್ಕಾಣಿಯಾಗಿ ನಮ್ಮ ದಿಕ್ಕು ದೆಸೆಗಳನ್ನು ಬದಲಾಯಿಸುತ್ತದೆ ಎಂಬ ವಿಚಾರ ಸೋಜಿಗವಾದದ್ದು. ಕ್ರಿಸ್ತ್ಮಸ್ ಸಮಯದಲ್ಲಿ ಒಬ್ಬ ಎಳೆ ಬಾಲಕ ರಾತ್ರಿ ತಾನು ಮಲಗಿದ್ದ ಸಮಯದಲ್ಲಿ ಸ್ಯಾಂಟಕ್ಲೌಸ್ ಬಂದು ತನಗೆ ಉಡುಗೊರೆಯನ್ನು ಕೊಡುತ್ತಾನೆ ಎನ್ನುವ ನಿರೀಕ್ಷೆ ಒಂದು ನಂಬಿಕೆಯಾದರೆ, ಬೆನ್ನಿಗೆ ಬಾಂಬು ಕಟ್ಟಿಕೊಂಡಿರುವ ತರುಣ ಭಯೋತ್ಪಾದಕ ತಾನು ಜಿಹಾದಿನಲ್ಲಿ ಮಡಿದರೆ ಪರಲೋಕದಲ್ಲಿ ಅಪ್ಸರೆಯನ್ನು ಕೂಡಬಹುದು ಎಂಬ ಅವನ ನಿರೀಕ್ಷೆಯೂ ನಂಬಿಕೆಯೇ. ಆದರೆ ಈ ರೀತಿಯ ನಂಬಿಕೆಗಳ ಪರಿಣಾಮಗಳೇನು ಎಂಬುದು ಮುಖ್ಯವಾದ ಪ್ರಶ್ನೆ. ನಂಬಿಕೆ ಮತ್ತು ತರ್ಕ, ವೈಚಾರಿಕತೆ, ವಿಜ್ಞಾನ ಇವುಗಳ ಮುಖ ಮುಖಿಯನ್ನು ಈಗಾಗಲೇ ಹಲವಾರು ಕಥೆ, ಕಾದಂಬರಿ ಮತ್ತು ಸಿನಿಮಾಗಳು ಶೋಧಿಸಿವೆ. ಪ್ರೇಮಲತಾ ಅವರೂ ಈ ವಿಚಾರವನ್ನು ಕೈಗೆತ್ತಿಕೊಂಡಿದ್ದಾರೆ. ಸಂಬಂಧಗಳನ್ನು ಬೆಸೆಯುವುದು ಈ ನಂಬಿಕೆಗಳೇ. ಒಬ್ಬ ಬರಹಗಾರನಿಗೂ ತನ್ನ ಬರಹ ಓದುಗರ ಗ್ರಹಿಕೆಗೆ, ನಿರೀಕ್ಷೆಗೆ ನಿಲುಕಬಹುದು ಎನ್ನುವ ಹಂಬಲವೂ ಈ ನಂಬಿಕೆಯನ್ನು ಆಧರಿಸಿರುತ್ತದೆ. ಈ ಸಂಕಲನದ ಹಲವಾರು ಕಥೆಗಳ ಭೂಮಿಕೆ ಒಂದಲ್ಲ ಒಂದು ರೀತಿ ಆ ನಂಬಿಕೆಗೆ ಸಂಬಂಧಿಸಿದ್ದು.

ಕಥೆ ಹುಟ್ಟುವುದೇ ಜೀವನದ ಅನುಭವಗಳ ಮೇಲೆ. ಅದು ಬರಹಗಾರನ ವೈಯುಕ್ತಿಕ ಜೀವನ ಅನುಭವವಾಗಿರಬಹುದು, ಇಲ್ಲವೇ ಬರಹಗಾರ ಕಂಡು ಕೇಳಿದ ಅನುಭವವಾಗಿರಬಹುದು. ಈ ಅನುಭವ ಸಾಮಾನ್ಯನಿಗೆ ಒಂದು ಸಾಧಾರಣ ಘಟನೆ, ಸನ್ನಿವೇಶದಂತೆ ಕಂಡರೂ ಸೃಜನಶೀಲ ಲೇಖಕ, ಲೇಖಕಿಯರು ತಮ್ಮ ಅಪ್ರತಿಮ ಕಲ್ಪನಾ ಶಕ್ತಿಯಿಂದ ಆ ಘಟನೆಯನ್ನು ಗ್ರಹಿಸಿ ಅದಕ್ಕೆ ರೆಕ್ಕೆ, ಪುಕ್ಕ, ಮಾಂಸ, ಎಲಬುಗಳನ್ನು ಜೋಡಿಸಿ ಒಂದು ಸುಂದರ ಕಲಾಕೃತಿಯನ್ನು ಕಡೆದು ನಿಲ್ಲಿಸುತ್ತಾರೆ. ಆ ಪ್ರತಿಭೆ ಪ್ರೇಮಲತಾ ಅವರಿಗೆ ನಿಜವಾಗಿಯೂ ಪ್ರಾಪ್ತವಾಗಿದೆ.

ಬದುಕಿನ ಪ್ರಸಂಗಗಳ ಚಿತ್ರವೇ ಸಣ್ಣ ಕಥೆಯ ಬುನಾದಿ, ಹೀಗಾಗಿ ಸಣ್ಣ ಕಥೆಗಳಲ್ಲಿ, ಕೆಲವೇ ಪುಟಗಳಲ್ಲಿ ಕಥೆಯನ್ನು ಹೇಳಿ ಮುಗಿಸಬೇಕಾದ ಒತ್ತಡ ಇರುವುದರಿಂದ ಇಲ್ಲಿ ಹೆಚ್ಚು ಪಾತ್ರಗಳನ್ನು ತರಲು ಅವಕಾಶವಿಲ್ಲ ಮತ್ತು ಇಲ್ಲಿ ಪಾತ್ರಗಳನ್ನು ಆಳವಾಗಿ ಪೋಷಿಸಲು ಸಾಧ್ಯವಿಲ್ಲ. ಕಾದಂಬರಿಯಲ್ಲಿ ಈ ನಿರ್ಬಂಧೆನೆಗಳು ಇರುವುದಿಲ್ಲ. ಕಾದಂಬರಿಗಳಲ್ಲಿ ಕಾಣುವ ಆಳ, ವಿಸ್ತಾರಗಳನ್ನು ಸಣ್ಣ ಕಥೆಗಳಲ್ಲಿ ತರಲು ಸಾಧ್ಯವಿಲ್ಲವಾದರೂ ಸಣ್ಣ ಕಥೆಗಳ ಅನುಕೂಲವೆಂದರೆ ಇಲ್ಲಿ ವಿವಿಧ ಸಾಮಾಜಿಕ ವಿಷಯಗಳನ್ನು ಕಥಾವಸ್ತುವಾಗಿ ಬಳಸ ಬಹುದು, ಹೆಚ್ಚು ವಿಚಾರಗಳನ್ನು ಚಿಂತನೆಗೆ ಒಳಪಡಿಸಬಹುದು. ಕಾದಂಬರಿ ಹರಿಯುವ ನದಿಯಾದರೆ, ಸಣ್ಣ ಕಥೆಗಳು ಕೆರೆಗಳಂತೆ.

ಸಣ್ಣ ಕಥೆಗಳು ಒಡ್ಡುವ ಎಲ್ಲ ಮಿತಿಯೊಳಗೂ ಕೂಡ ಪ್ರೇಮಲತಾ ಅವರು ಸನ್ನಿವೇಶಗಳ ಜೊತೆ ಜೊತೆಗೆ ತಮ್ಮ ಕಥಾ ನಾಯಕ ನಾಯಕಿಯರನ್ನು ಪೋಷಿಸಿದ್ದಾರೆ. ಈ ಸಂಕಲನದ "ತೆರವು' ಎಂಬ ಕಥೆಯಲ್ಲಿ ಕರ್ನಾಟಕದ ರಿಯಲ್ ಎಸ್ಟೇಟ್ ಅವ್ಯವಹಾರದಲ್ಲಿ ಸಿಕ್ಕಿಕೊಂಡಿರುವ ದಂಪತಿಗಳ ಸನ್ನಿವೇಶದಲ್ಲಿ ಏನನ್ನೂ ಸಾಧಿಸಲಾರದ ನಾಮರ್ದ ಗಂಡ ಮತ್ತು ಮನೆ-ಮಡದಿಯಾದರೂ ಸಾಕಷ್ಟು ವಿಷಯಗಳನ್ನು ತಿಳಿದುಕೊಂಡು ದಿಟ್ಟತನದಿಂದ ಲ್ಯಾನ್ಡ್ ಮಾಫಿಯಾ ಗೂಂಡಾಗಳನ್ನು ನಿಭಾಯಿಸುವ ಗೀತಾಳ ಪಾತ್ರ ಇದಕ್ಕೆ ಸಾಕ್ಷಿಯಾಗಿದೆ. ತೇಜೇಸ್ವಿಯವರ 'ಕಿರಿಗೂರಿನ ಗೈಯಾಳಿಗಳು' ಕಥೆಯನ್ನು ನೆನಪಿಗೆ ತಂದಿದೆ.

ಅನಿವಾಸಿ ಲೇಖಕರು ತಮ್ಮ ಪರಿಸರದ ನೆಲೆಯಲ್ಲಿ ಘಟಿಸುವ ಕಥೆಗಳನ್ನು ದೂರದ ಕನ್ನಡ ನಾಡಿಗೆ ತಿಳಿಸ ಬೇಕೇ ಅಥವಾ ಅವರು ಎಲ್ಲಿದ್ದರೂ, ಎಂತಿದ್ದರೂ ಕನ್ನಡ ನೆಲೆದ ಕಥೆಗಳನ್ನಷ್ಟೇ ಬರೆಯ ಬೇಕೇ ಎಂಬ ಪ್ರಶ್ನೆ ಮೂಡುವುದು ಸಹಜವೇ. ಇಂಗ್ಲೆಂಡಿನಲ್ಲಿ ನಡೆದ ಕಥೆ ಕನ್ನಡ ಜನಕ್ಕೆ ಸಲ್ಲಬಹುದೇ ಎಂತೆಂಬ ಪ್ರಶ್ನೆ ಅನಿವಾಸಿ ಬರಹಗಾರರನ್ನು ಕಾಡುವುದು ಸಹಜ. ಒಬ್ಬ ಲೇಖಕ ಯಾವ ದೇಶ ಕಾಲಮಾನಗಳಲ್ಲಿದ್ದರೂ ಅದು ಮನುಷ್ಯ ಸಂಬಂಧ, ಸಹಜ ಸ್ವಭಾವಗಳ ವೈರುಧ್ಯ ಮತ್ತು ಮಾನವೀಯ ಮೌಲ್ಯಗಳನ್ನು ಒಳಗೊಂಡಿದ್ದಲ್ಲಿ ಅದು ಎಲ್ಲಾ ದೇಶಕ್ಕೂ ಮತ್ತು ಎಲ್ಲಾ ಕಾಲಕ್ಕೂ ಪ್ರಸ್ತುತವಾಗುತ್ತವೆ. ಈ ಕಾರಣಗಳಿಂದ ನಮಗೆ ರಷ್ಯಾದ ಟಾಲ್ಸ್ಟಾಯ್ ಮತ್ತು ಬಂಗಾಳದ ಟ್ಯಾಗೋರ್ ಬರೆದ ಕಥೆಗಳು ಹತ್ತಿರವಾಗುತ್ತವೆ. ಪ್ರೇಮಲತಾ ಅವರು ಇಂಗ್ಲೆಂಡಿನಲ್ಲಿ ನೆಲೆಸಿರುವ ಕನ್ನಡತಿ. ಅವರ ಪರಿಸರ ಇಂಗ್ಲೆಂಡಿನ ಆಂಗ್ಲ ಸಂಸ್ಕೃತಿಗೆ ಸಂಬಂಧಿಸಿದ್ದಾದರೂ ಅವರು ಬರೆಯುವ ಕಥೆಗಳು ನಮ್ಮ ಕನ್ನಡ ನೆಲದ ಕಥೆಗಳಾಗಿವೆ. ಇಲ್ಲಿ ಕರ್ನಾಟಕ ನಗರಗಳ, ಮಲೆನಾಡಿನ ದಟ್ಟ ಕಾಡುಗಳ, ಕಾರ್ಪೊರೇಟ್ ಕಂಪನಿಗಳ ಕಥೆ ಇವೆ. ಇದಕ್ಕೆ ಹೊರತಾಗಿ 'ದ್ರೋಹ' ಎಂಬ ಕಥೆ ಲಂಡನ್ ಮತ್ತು ಸಿರಿಯಾದಲ್ಲಿ ಸಂಭವಿಸುತ್ತದೆ.

ಇನ್ನೊಂದು ವಿಚಾರ; ಕಥೆ ಯಾವುದೇ ನೆಲದಲ್ಲಿ ಹುಟ್ಟಿಕೊಂಡರೂ ಆ ಕಥನ ಪ್ರಪಂಚದ ಬೇರೆಡೆ ಇನ್ನೊಬ್ಬರ ಕಥೆಯಾಗಿರಬಹುದು. ಮನುಷ್ಯನ ಮೂಲಭೂತ ಸ್ವಭಾವಗಳಿಗೆ ಬಣ್ಣ, ಸಂಸ್ಕೃತಿ, ಗಡಿ ರೇಖೆಗಳ ಹಂಗುಂಟೆ? ಈ ಸಂಕಲನದ ಶೀರ್ಷಿಕೆ ಕಥೆಯಾಗಿರುವ ‘ನಂಬಿಕೆಯೆಂಬ ಗಾಳಿಕೊಡೆ’ಯಲ್ಲಿ ಬೆಂಗಳೂರಿನ ಒಂದು ಖಾಸಗಿ ಆಫೀಸಿನ ಉದ್ಯೋಗಿಯ ಬೀಳ್ಕೊಡುಗೆ ಪಾರ್ಟಿಯಲ್ಲಿ ಲಕ್ಷ್ಮಿ ಎಂಬ ವಿವಾಹಿತ ಮಹಿಳೆಗೆ ಅವಳ ಪಾನೀಯದಲ್ಲಿ ಒಬ್ಬ ಕುಹಕಿ ಕದ್ದು ಮುಚ್ಚಿ ಮಾದಕವಸ್ತುವನ್ನು ಸೇರ್ಪಡಿಸಿ (ಸ್ಪೈಕ್ ಮಾಡಿ) ಅದರ ಪರಿಣಾಮವಾಗಿ ಲಕ್ಷ್ಮಿ ನಶೆಯಲ್ಲಿದ್ದಾಗ ಅವಳನ್ನು ಅತ್ಯಾಚಾರಕ್ಕೆ ಒಳಪಡಿಸುತ್ತಾನೆ. ಲಕ್ಷ್ಮಿಯ ಅತ್ಯಾಚಾರವನ್ನು ನಮ್ಮ ಸಮಾಜ ಹೇಗೆ ಗ್ರಹಿಸುತ್ತದೆ, ನಮ್ಮ ವ್ಯವಸ್ಥೆ ಹೇಗೆ ತನಿಖೆ ನಡೆಸುತ್ತವೆ ಮತ್ತು ನಂಬಿಕೆ ಆಧಾರದ ಮೇಲೆ ಜನರ ನಿರೀಕ್ಷೆ ಯಾವ ಯಾವ ರೂಪಗಳನ್ನು ತಳೆಯುತ್ತದೆ, ತನಗೆ ಅತ್ಯಾಚಾರವಾಗಿದೆ ಎಂದು ಲಕ್ಷ್ಮಿ ಬಹಿರಂಗವಾಗಿ ಒಪ್ಪಿಕೊಂಡು ಸೋಷಿಯಲ್ ಮೀಡಿಯಾಗಳಲ್ಲಿ ಆ ವಿಚಾರವನ್ನು ಹಂಚಿಕೊಂಡದ್ದು ಸರಿಯೇ, ತಪ್ಪೇ? ಎಂಬ ವಿಚಾರಗಳ ಹಿನ್ನೆಲೆಯಲ್ಲಿ ಕಥೆಯನ್ನು ಹೆಣೆಯಲಾಗಿದೆ. ಆಶ್ಚರ್ಯವೆಂದರೆ ಪ್ರೇಮಲತಾ ಈ ಕಥೆಯನ್ನು ಬರೆದು ನಾಲ್ಕು ವರುಷಗಳಾಗಿವೆ, ಬಹುಶಃ ಅದೇ ಸಮಯದಲ್ಲಿ, ಫ್ರಾನ್ಸ್ ದೇಶದಲ್ಲಿ, ಗೆಜೆಲ್ ಪೆಲಿಕೋ ಎಂಬ ಹಿರಿಯ ಮಹಿಳೆಯ ಸ್ವಂತ ಗಂಡನೇ ಅವಳಿಗೆ ಗೊತ್ತಾಗದಂತೆ ಡ್ರಗ್ಸ್ ಕೊಟ್ಟು ನಶೆಯಲ್ಲಿರುವಾಗ ಅವನು ತನ್ನ ಸ್ನೇಹಿತರನ್ನು ಕರೆದು ಅವಳೊಡನೆ ಸಂಭೋಗಿಸಲು ಉತ್ತೇಜಿಸಿದ. ಅದು ಗೆಜೆಲ್ ಮೇಲೆ ನಡೆದ ಅತ್ಯಾಚಾರವೆನ್ನಬಹುದು. ಅಷ್ಟೇ ಅಲ್ಲ ಈ ಅತ್ಯಾಚಾರವನ್ನು ಅವನು ವಿಡಿಯೋ ಮಾಡಿದ್ದು ಈ ವಿಚಾರ ಇತ್ತೀಚಿಗೆ ಬಹಿರಂಗಗೊಂಡು ಅದರ ತನಿಖೆ ನಡೆಯಿತು, ಈ ಸುದ್ದಿ ಬಿಬಿಸಿ ವಾರ್ತೆಯಲ್ಲಿ ಪ್ರಸಾರಗೊಂಡಿತು. ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲಾಯಿತು. ನಂಬಿಕೆಯೆಂಬ ಗಾಳಿಕೋಡೆ ಕಥೆಯಲ್ಲೂ ಆಪಾದಿತ, ಲಕ್ಷ್ಮಿ ಮೇಲೆ ನಡೆಸಿದ ಅತ್ಯಾಚಾರವನ್ನು ವಿಡಿಯೋ ಮಾಡಿರುತ್ತಾನೆ. ಇದು ಎಷ್ಟು ಕಾಕತಾಳೀಯವಾಗಿದೆ! ಪ್ರಪಂಚದ ಯಾವುದೋ ಮೂಲೆಯಲ್ಲಿ ಒಬ್ಬ ಕನ್ನಡ ಲೇಖಕಿಯ ಕಲ್ಪನೆಗೆ ದೊರಕಿದ ಕಥೆ, ಇನ್ಯಾವುದೋ ಸಂಸ್ಕೃತಿಯಲ್ಲಿ, ದೇಶದಲ್ಲಿ ಸಂಭವಿಸಿದ ನೈಜ ಘಟನೆಯಾಗಿರುವುದು ಅಚ್ಚರಿಯನ್ನು ಉಂಟುಮಾಡುವಂಥದ್ದು.

ಪ್ರೇಮಲತಾ ಅವರು ಕೈಗೆತ್ತಿಕೊಳ್ಳುವ ಕಥಾವಸ್ತುಗಳು ನಮ್ಮ ನಿಮ್ಮ ಬದುಕಿಗೆ ಬಹಳ ಹತ್ತಿರವಾದದ್ದು. ಅವರ ಕಥೆಗಳಲ್ಲಿ ಪ್ರಾಮಾಣಿಕತೆ ಇದೆ, ಇಲ್ಲಿ ಅಥೆಂಟಿಸಿಟಿ ಇದೆ. ಅವರು ಸಾಮಾಜಿಕ ಸಮಸ್ಯೆಗಳನ್ನು ಅನೇಕ ಸೂಕ್ಷ್ಮ ದೃಷ್ಟಿ ಕೋನಗಳಿಂದ ವಿಶ್ಲೇಷಿಸಿದ್ದಾರೆ, ಇಲ್ಲಿಯ ಕಥೆಗಳು ಹಲವಾರು ಚಿಂತನೆಗಳಿಗೆ ಅನುವು ಮಾಡಿಕೊಡುತ್ತದೆ. ಇಲ್ಲಿ ಅತಿಯಾದ ಭಾವುಕತೆ ಇಲ್ಲ, ಎಲ್ಲ ಸನ್ನಿವೇಶಗಳನ್ನು ಹದವಾಗಿ ನಿರೂಪಿಸಲಾಗಿದೆ. ಇಲ್ಲಿ ಸ್ತ್ರೀ ಭಾವನೆಗಳಷ್ಟೇ ಅಲ್ಲದೆ ಪುರುಷರ ಭಾವನೆಗಳನ್ನು ನಿಭಾಯಿಸಲಾಗಿದೆ. ಇದರ ಉತ್ತಮ ಉದಾಹರಣೆಯನ್ನು 'ಗೊಡ್ಡು' ಎಂಬ ಕಥೆಯಲ್ಲಿ ಕಾಣಬಹುದು. ಸಾಮಾನ್ಯವಾಗಿ ಬಂಜೆತನವೆಂದರೆ ಅದು ಸ್ತ್ರೀಯರಿಗಷ್ಟೇ ಸಂಬಂಧಿಸಿರುವ ವಿಚಾರ ಎಂದು ಸಮಾಜ ನಂಬಿರುತ್ತದೆ. ಮಕ್ಕಳಾಗದ ದಾಂಪತ್ಯದಲ್ಲಿ ಬಹುಪಾಲು ಹೆಂಗಸೇ ಆಪಾದನೆಗೆ ಒಳಗಾಗುವುದನ್ನು ಕಾಣುತ್ತವೆ. ‘ಎಕ್ಸ್ ಎಕ್ಸ್ ವೈ’ (XXY) ಎಂಬ ಗಂಡಸಿನ ಬಂಜೆತನವನ್ನು ಕಥೆಯಲ್ಲಿ ತಂದು ಲೇಖಕಿ ಈ ನಂಬಿಕೆಯನ್ನು ಒಡೆಯುತ್ತಾರೆ. ಕಥಾ ನಾಯಕನಿಗೆ ತನ್ನ ಬಂಜೆ ತನದ ಅರಿವಾದಾಗ ಅವನಿಗೆ ಉಂಟಾಗುವ ಭಾವನೆಗಳ ಏರು ಪೆರುಗಳನ್ನು ಮತ್ತು ತಾನು ನಿಷ್ಪ್ರಯೋಜಕ ಎಂಬ ಮಾನಸಿಕ ತೊಳಲಾಟವನ್ನು ಅತ್ಯಂತ ಮನೋಜ್ಞವಾಗಿ ಸೆರೆ ಹಿಡಿದಿದ್ದಾರೆ. ಸಮಾಜ ತಾನು ನಂಬಿರುವ ಸಾಮಾಜಿಕ "ಸತ್ಯಗಳನ್ನು" ನಂಬಿಕೆಗಳನ್ನು ಒಡೆದು ತೋರಿಸಿದಾಗ ಉಂಟಾಗುವ ಆಘಾತ ಬಹಳ ಆಳವಾದದ್ದು. ಅದು ಸಮಾಜವನ್ನು ತಿದ್ದುವ ಪ್ರಯತ್ನವೂ ಹೌದು. ಈ ಕಾರಣಕ್ಕಾಗಿ ನಮಗೆ ಪ್ರೇಮಲತಾ ಅವರ ಕಥೆಗಳು ಪ್ರಸ್ತುತವಾಗುತ್ತವೆ.

ಸಣ್ಣ ಕಥೆಗಳು ಎಷ್ಟು ಉದ್ದವಾಗಿರಬೇಕು ಎಂಬುದಕ್ಕೆ ಯಾವುದೇ ಅಳತೆಗೋಲುಗಳಿಲ್ಲ. ಹೇಳಿದಷ್ಟೂ ಕಥೆಯೇ. ಪ್ರೇಮಲತಾ ಅವರ ಕಥೆಗಳು ಕೊಂಚ ದೀರ್ಘವೆನಿಸುತ್ತದೆ. ಇವುಗಳ ನಡುವೆ ‘ನಿರ್ವಾತ’ ಎಂಬ ಕಥೆ ನಿಜವಾಗಿಯೂ ಸಣ್ಣ ಕಥೆ ಎನ್ನಬಹುದು. ಕೆಲವೇ ಪುಟಗಳ ಈ ಕಥೆ 'ಇನ್ಸೆಸ್ಟ್' ಕುರಿತಾಗಿದೆ. ಕಥಾನಾಯಕಿಯ ತಂದೆಯೇ ತನ್ನ ಚಿಕ್ಕ ತಾತನಾಗಿರುವ ಕಥೆ ಪರಿಣಾಮಕಾರಿಯಾಗಿದೆ. ಕನ್ನಡದ ಹಿಂದಿನ ಲೇಖಕರು ಸಲಿಂಗಕಾಮ, ವಿಕೃತ ಕಾಮ, ಅತ್ಯಾಚಾರ ಈ ವಿಚಾರಗಳನ್ನು ಮಡಿವಂತಿಕೆಯಿಂದ ಆಯ್ಕೆ ಮಾಡುತ್ತಿರಲಿಲ್ಲ. ಇದು ಸಾಮಾಜಿಕವಾಗಿ ನಿಷಿದ್ಧವಾದ ವಿಷಯವಾಗಿತ್ತು. ಪ್ರೇಮಲತಾ ಅವರು ಈ ರೀತಿಯ ಬಾಹಿರವಾದ ವಿಚಾರಗಳನ್ನು ಮುನ್ನೆಲೆಗೆ ತಂದಿರುವುದು ಶ್ಲಾಘನೀಯ. ಈ ಪ್ರಯತ್ನವನ್ನು ಇತ್ತೀಚಿನ ಇತರ ಲೇಖಕರೂ ಮಾಡುತ್ತಿದ್ದಾರೆ. ಕಥೆ, ಕಾದಂಬರಿ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಈ ರೀತಿ ವಿಷಯಗಳನ್ನು ತರುವುದರಿಂದ ಅದು ಜನ ಸಾಮಾನ್ಯರಲ್ಲಿ ಅರಿವು ಮೂಡಿಸಲು ಸಹಾಯವಾಗುತ್ತದೆ. ಇದರಿಂದ ಸಮಾಜದಲ್ಲಿ ಪರಿವರ್ತನೆ ಆಗಬಹುದು, ಆಗದಿರಬಹುದು, ಆದರೆ ಅರಿವನ್ನು ಹೆಚ್ಚಿಸುವುದು ಲೇಖಕರ ಮತ್ತು ಸಿನಿಮಾ ನಿರ್ದೇಶಕರ ಜವಾಬ್ದಾರಿ.

ಪ್ರೇಮಲತಾ, ತಮ್ಮ ಕಥೆಯಲ್ಲಿ ತಂದಿರುವ ಅನೇಕ ಸ್ತ್ರೀ ಪಾತ್ರಗಳನ್ನು ಸಹಜವಾಗಿ ನಿರೂಪಿಸಿದ್ದಾರೆ. ಇಲ್ಲಿಯ ಬಹುತೇಕ ಕಥೆಗಳಲ್ಲಿ ಸ್ತ್ರೀ ಪಾತ್ರ ಪ್ರಧಾನವಾಗಿರುವಂತೆ ತೋರುತ್ತದೆ. ಇಲ್ಲಿ ಅವಳು ಸತ್ಯಕ್ಕಾಗಿ, ನ್ಯಾಯಕ್ಕಾಗಿ, ಪ್ರೀತಿಗಾಗಿ ಎದ್ದು ನಿಲ್ಲುತ್ತಾಳೆ. ಅತ್ಯಾಚಾರಕ್ಕೆ ಒಳಗಾಗಿ ಹಿಂಸೆಯನ್ನು ಅನುಭವಿಸಿ ತನ್ನ ಹೆಸರಿಗೆ ಒದಗಿದ ಕಳಂಕವನ್ನು ಮುಚ್ಚಿಡದೆ, ಇತರ ಸ್ತ್ರೀಯರ ರಕ್ಷಣೆಗಾಗಿ ತನ್ನ ಅತ್ಯಾಚಾರವನ್ನು ಬಹಿರಂಗಗೊಳಿಸುವ ಧೀಮಂತ ಹೆಣ್ಣಾಗಿ ನಿಲ್ಲುತ್ತಾಳೆ. ಗಂಡು ಮತ್ತು ಹೆಣ್ಣು ಉದ್ಯೋಗಿಗಳಿಗೆ ನೀಡುವ ವೇತನದಲ್ಲಿ ಉಂಟಾಗಿರುವ ತರತಮಗಳಿಗಾಗಿ ಹೋರಾಡಲು ನಿಲ್ಲುತ್ತಾಳೆ. ವಿಚ್ಛೇದನ ಪಡೆದ ಹೆಂಗಸಾದರೂ ತನ್ನ ಭಾವಿ ಪತಿಗೆ ಕ್ಯಾನ್ಸರ್ ರೋಗ ತಟ್ಟಿದ್ದಾಗ ಅವನನ್ನು ಬೆಂಬಲಿಸಿ ನಿಂತು ಸಾಂತ್ವನ ನೀಡುವಷ್ಟು ಉದಾರಿಯಾಗಿರುತ್ತಾಳೆ. ಸಾಂಪ್ರದಾಯ ದೃಷ್ಟಿಕೋನಗಳಲ್ಲಿ ಸ್ತ್ರೀ ಪುರುಷನ ಅಧೀನಳು, ಅಬಲೆ, ಗಂಡನ ನೆರಳಲ್ಲಿ ಜೀವಿಸುವವಳು ಎಂತೆಲ್ಲಾ ನಮ್ಮ ಹಿಂದಿನ ಕಥೆ, ಪುರಾಣ, ಕಾದಂಬರಿ ಮತ್ತು ಸಿನಿಮಾಗಳಲ್ಲಿ ಚಿತ್ರಿಸಲಾಗಿದೆ. ಅದಕ್ಕೆ ವ್ಯತಿರಿಕ್ತವಾಗಿ ಬದಲಾಗುತ್ತಿರುವ ಸಮಾಜದಲ್ಲಿ ಸ್ತ್ರೀಗೆ ತನ್ನದೇ ಅಸ್ತಿತ್ವವಿದೆ, ಅವಳು ತನ್ನ ಸಮಾನ ಹಕ್ಕುಗಳಿಗೆ ನಿಲ್ಲಬಲ್ಲಳು ಎಂಬ ವಿಚಾರವನ್ನು ಇಲ್ಲಿಯ ಕಥೆಗಳಲ್ಲಿ ಕಾಣಬಹುದು. ಜೊತೆಗೆ ಸ್ತ್ರೀ ಒಂದು ಶಕ್ತಿ ಅಷ್ಟೇ ಅಲ್ಲ, ಸ್ನೇಹ, ಪ್ರೀತಿ, ಕರುಣೆ, ಸಹನೆ ಮತ್ತು ಅನುಕಂಪೆಯ ಪ್ರತಿಮೆಯಾಗಿಯೂ ನಿಲ್ಲುತ್ತಾಳೆ.

'ವರ್ತುಲ' ಎಂಬ ಕಥೆ ಬೇರೆ ಕಥೆಗಳಿಗಿಂತ ಭಿನ್ನವಾಗಿ ಎದ್ದು ನಿಲ್ಲುತ್ತದೆ. ಬದುಕೆಂಬ ಸ್ಪರ್ಧೆಯಲ್ಲಿ ನಾವು ಯಶಸ್ಸಿನ ಸಾಧನೆಯಲ್ಲಿ ಸಿಕ್ಕಿಕೊಂಡಿ "ಇರುವುದೆಲ್ಲವ ಬಿಟ್ಟು ಇರದುದರ ಕಡೆ ತುಡಿಯುವ" ನಾಗರೀಕತೆ ಎಂಬ ಖಾಯಿಲೆಯಲ್ಲಿ ನರಳುವವವರ ಚಿತ್ರ ಈ ಕಥೆಯಲ್ಲಿದೆ. ಇಲ್ಲಿ ಪರಿಸರ ನಾಶದ ಬಗ್ಗೆ ಕಾಳಜಿ ಇದೆ. ತೀವ್ರ ಗತಿಯಲ್ಲಿ ಬದಲಾಗಿ ನಿಬಿಡವಾಗಿರುವ ನಗರಗಳ ನಡುವೆ ನಿಡುಸುಯ್ಯುವ ಸ್ವರಗಳ ದನಿಯಿದೆ. "ಹೊಸತಿಗೆ -ಹಳತಿಗೂ, ಒಳ್ಳೆಯದಕ್ಕೂ-ಕೆಟ್ಟದಕ್ಕೂ, ವಿವೇಕಕ್ಕೂ-ಅವಿವೆಕ್ಕಕ್ಕೂ, ಭೂತ-ಭವಿಷ್ಯತ್ತಿಗೂ ಇರುವ ಪರದೆ ಅತಿ ತೆಳುವಾದದ್ದು" ಎಂಬ ಮಾತನ್ನು ಲೇಖಕಿ ಇಲ್ಲಿ ಪ್ರಸ್ತಾಪಿಸುತ್ತಾರೆ. ಈ ಮಾತುಗಳು ಎಲ್ಲರನ್ನು ಕಾಡುವ ವಿಚಾರ. ಹಿಂದೊಮ್ಮೆ ಹಳೆಯದೆಂದು ನಾವೇ ತಿರಸ್ಕರಿಸಿದ ಬದುಕಿನ ರೀತಿಗಳು, ದಿನ ನಿತ್ಯ ಬಳಕೆಯ ವಸ್ತುಗಳು, ಮಣ್ಣಿನ ವಾಸನೆ, ನಿಸರ್ಗದ ತಾಜಾತನ ಕಾಲದ ವರ್ತುಲದಲ್ಲಿ ಕಳೆದು ಹೋಗಿ ಮತ್ತೆ ನಮಗೆ ಅದೇ ಹಳೆತಿನ ಬಗ್ಗೆ ಹೊಸ ವ್ಯಾಮೋಹ ಹುಟ್ಟಿಕೊಳ್ಳುವ ಪರಿ ಸೋಜಿಗವಾದದ್ದು. ಈ ವರ್ತುಲದಲ್ಲಿ ಮೊದಲಾವುದು, ಕೊನೆಯಾವುದು ಎಂಬ ಪ್ರಶ್ನೆ ಕಾಡುತ್ತದೆ. ಪ್ರಗತಿಯ ನೆಪದಲ್ಲಿ ಎಲ್ಲವನ್ನೂ ಕಬಳಿಸುವ ನಮ್ಮ ದುರಾಸೆಯನ್ನು ಪ್ರೇಮಲತಾ ಅವರು "ಹಾವೊಂದು ತನ್ನ ಬಾಲದಿಂದ ಶುರು ಮಾಡಿ ತನ್ನನ್ನು ತಾನೇ ಕಬಳಿಸುವ" ದುರಂತ ಪ್ರಯತ್ನದ ರೂಪಕವನ್ನು ಇಲ್ಲಿ ಇಟ್ಟಿದ್ದು ಅದು ಬಹಳ ಅರ್ಥಪೂರ್ಣವಾಗಿದೆ.

ಈ ಕಥಾ ಸಂಕಲನದ ಕಥಾ ನಿರೂಪಣೆ ಕೆಲವೆಡೆ ಸರಳವಾಗಿರಬಹುದಿತ್ತು. ಹಿಂದು-ಮುಂದಿಲ್ಲದೆ ಏಕಾಏಕಿ ಇಬ್ಬರ ನಡುವಿನ ಸಂಭಾಷಣೆಯೊಂದಿಗೆ ಶುರುವಾಗುವ ಕಥೆ ಓದುಗನಲ್ಲಿ ಗೊಂದಲ ಉಂಟುಮಾಡಬಹುದು. ಸಾರ್ವತ್ರಿಕವಾಗಿ ಹೇಳುವುದಾದರೆ ಓದುಗನನ್ನು ಕಥೆಯ ಆವರಣದೊಳಗೆ ಬರಮಾಡಿಕೊಳ್ಳುವ ಬಗ್ಗೆ ಲೇಖಕರು ಎಚ್ಚರಿಕೆ ವಹಿಸಬೇಕು. ಹೀಗಾಗಿ ಕಥೆಯ ಪ್ರವೇಶ ಸರಾಗವಾಗಿದ್ದಾರೆ ಒಳಿತು. ಕಥೆಯ ನಿರೂಪಕರೇ ಕಥೆಗೆ ಒಂದಿಷ್ಟು ಹಿನ್ನೆಲೆಯನ್ನು ಕೊಟ್ಟು ಪಾತ್ರಗಳನ್ನು ಸಾವಧಾನವಾಗಿ ಪರಿಚಯಿಸಿದರೆ ನಂತರ ಸಂಭಾಷಣೆಯನ್ನು ಗ್ರಹಿಸುವುದಕ್ಕೆ ಸರಾಗವಾಗುತ್ತದೆ ಎಂಬುದು ನನ್ನ ಅನಿಸಿಕೆ. ನಾವೆಲ್ಲಾ ಹಿಂದೆ ಓದಿರುವ ಜನಪ್ರಿಯ ಕಥೆ ಕಾದಂಬರಿಯಲ್ಲಿ ಕಥಾ ವಸ್ತುವನ್ನು ಫ್ಲಾಶ್ ಬ್ಯಾಕ್ ಮಾದರಿಯಲ್ಲಿ ಹಿಂದು ಮುಂದೆ ಮಾಡುವ ತಂತ್ರವನ್ನು ನೋಡಿದ್ದೇವೆ. ಇದು ದೃಶ್ಯ ಮಾಧ್ಯಮಗಳಲ್ಲಿ ಗ್ರಹಿಸುವುದು ಸುಲಭ ಆದರೆ ಬರಹದಲ್ಲಿ ಬಳಸಿದಾಗ ಕಥೆಯನ್ನು ಗ್ರಹಿಸುವುದು ಕಷ್ಟದ ಕೆಲಸ. ಈ ತಂತ್ರ ಸಣ್ಣ ಕಥೆಗಳಲ್ಲಿ ಅಷ್ಟು ಪ್ರಯೋಜನಕ್ಕೆ ಬರದಿದ್ದರೂ ಅದನ್ನು ಕಾದಂಬರಿಗಳಲ್ಲಿ ಅಗತ್ಯವಿದ್ದಾಗ ತರಬಹುದು. ಅಂದಹಾಗೆ ಈ ಕೃತಿಯಲ್ಲಿ ಆ ಫ್ಲಾಶ್ ಬ್ಯಾಕ್ ಗಳಿಲ್ಲ.

ಪ್ರೇಮಲತಾ ಬಳೆಸಿರುವ ಭಾಷೆ ಬಹಳ ಉತ್ಕೃಷ್ಟವಾಗಿದೆ. ಅವರಿಗೆ ಕನ್ನಡ ಭಾಷೆಯ ಮೇಲಿರುವ ಹತೋಟಿ ಇಲ್ಲಿ ಎದ್ದು ತೋರುತ್ತದೆ. ಸಂಕೀರ್ಣವಾಗಿರುವ ವೈದ್ಯಕೀಯ ವಿಷಯಗಳನ್ನು ಸರಳಗೊಳಿಸಿ ಕಥೆ ಹೇಳುವ ಸಾಮರ್ಥ್ಯ ಅವರಿಗಿದೆ. ಸಂಬಂಧಗಳು ಎಂಬ ಕೊನೆ ಕಥೆಯಲ್ಲಿ ಮನುಷ್ಯ-ಮನುಷ್ಯ ಸಂಬಂಧಗಳನ್ನು ಕುರಿತಾದ ಕಥಾವಸ್ತು ಇದೆ. ಯಾರು ಯಾರಿಗೆ? ಹೇಗೆ? ಎಲ್ಲಿಯವರೆಗೆ? ಯಾವ ರೀತಿ? ಸಂಬಂಧಿ ಎನ್ನುವ ವಿಚಾರವನ್ನು ಆಳವಾಗಿ ಚಿಂತಿಸಲಾಗಿದೆ. ಸಾವು ಎಂಬ ವಿಷಯವನ್ನು ಅಂತ್ಯಂತ ಸೂಕ್ಷ್ಮವಾಗಿ ನಿಭಾಯಿಸಲಾಗಿದೆ. ಕ್ಯಾನ್ಸರ್ ಪೀಡಿತ ಕಥಾನಾಯಕ ಸಾವನ್ನು ಬರಮಾಡಿಕೊಳ್ಳುವ ಸನ್ನಿವೇಶವನ್ನು ನವುರಾದ ರೂಪಕದೊಂದಿಗೆ ಬಿತ್ತರಿಸಲಾಗಿದ್ದು ಈ ಹಂತದಲ್ಲಿ ಕಥೆ ಮತ್ತು ಕಥಾ ಸಂಕಲನ ಕೊನೆಗೊಳ್ಳುತ್ತದೆ. ಈ ರೀತಿಯ ಉಪಮೆಗಳ ಬಳಕೆ ಇಲ್ಲಿಯ ಕಥೆಗಳಿಗೆ ವಿಶೇಷ ಆಯಾಮಗಳನ್ನು ದೊರಕಿಸಿಕೊಟ್ಟಿದೆ.

ಕಥೆ, ಕಾದಂಬರಿಯನ್ನು ಓದುತ್ತಿರುವಾಗ ಕಥೆಯ ಓಘ, ದಿಕ್ಕು, ಬೆಳವಣಿಗೆ, ಕುತೂಹಲ ಇವುಗಳಲ್ಲಿ ಮಗ್ನರಾಗಿ ಮುಳುಗಿ ಮೇಲೇಳುತ್ತೇವೆ. ಓದು ಮುಗಿದ ನಂತರ ಕೆಲವು ಕಥೆಗಳು ಸರಳ ಕಥೆಗಳಾಗಿ ನೆನಪಿನಿಂದ ಉದುರುತ್ತವೆ. ಇನ್ನು ಕೆಲವು ಕಥೆಗಳು ಹಿನ್ನೋಟದಲ್ಲಿ ಹಲವಾರು ಚಿಂತನೆಗಳಿಗೆ ಅನುವುಮಾಡಿಕೊಡುತ್ತವೆ, ಹೊಸ ಹೊಳಹುಗಳನ್ನು ನೀಡುತ್ತವೆ ಮತ್ತು ನಮ್ಮ ಸ್ಮೃತಿಯಲ್ಲಿ ಧೀರ್ಘ ಕಾಲ ಉಳಿಯುತ್ತವೆ, ಅದರಲ್ಲಿ ಪ್ರೇಮಲತಾ ಅವರ ಈ ಕೃತಿಯೂ ಸೇರಿದೆ.