ಜಡೆಯಾಚೆಯ ತಾಯ ಮುಖ

ಡಾ ಜಿ ಎಸ್ ಶಿವಪ್ರಸಾದ್

ರೇಖಾಚಿತ್ರ: ಲಕ್ಷ್ಮೀನಾರಾಯಣ ಗುಡೂರ್.
ಶಿವಮೊಗ್ಗ ಜಿಲ್ಲೆಯ ಈಸೂರಿನ ಒಂದು ಬಾಡಿಗೆ ಮನೆಯಲ್ಲಿ ಒಂದು ಕೂಸು ತೊಟ್ಟಿಲಲ್ಲಿ ಮಲಗಿದೆ.  ತಾಯಿಯು, ಮಗು ಮಲಗಿದೆಯಲ್ಲ ಒಂದೆರಡು ನಿಮಿಷದಲ್ಲಿ ಬಂದರಾಯಿತು ಎಂದು ತಿಳಿದು ಮನೆಯ ಬಾಗಿಲನ್ನು ಎಳೆದುಕೊಂಡು ಹತ್ತಿರದ ಭಾವಿಗೆ ನೀರು ತರಲು ಹೋಗುತ್ತಾಳೆ.  ಆಗ ಇದ್ದಕ್ಕಿದ ಹಾಗೆ ಈ ಮನೆಯ ಪಕ್ಕದ ಹುಲ್ಲು ಜೋಪಡಿಗೆ ಬೆಂಕಿ ಹತ್ತಿಕೊಂಡು, ಅದು ಅಕ್ಕಪಕ್ಕದ ಮನೆಗಳಿಗೆ ಹಬ್ಬಿ ನಂತರದಲ್ಲಿ ಮಗು ಮಲಗಿದ್ದ ಮನೆಗೂ ಬೆಂಕಿ ಹತ್ತಿಕೊಳ್ಳುತ್ತದೆ.  ಜನರ ಗದ್ದಲ ಕೇಳಿ ನೀರಿಗೆ ಹೋಗಿದ್ದ ತಾಯಿ ಬಂದು ನೋಡುತ್ತಾಳೆ, ಮನೆಯ ಒಂದು ಭಾಗವನ್ನು ಬೆಂಕಿ ಮೇಯುತ್ತಿದೆ.  ಆ ಹೊಗೆ ಬೆಂಕಿಯ ನಡುವೆ ನುಗ್ಗಿ ತೊಟ್ಟಿಲಲ್ಲಿ ಮಲಗಿದ್ದ ಮಗುವನ್ನೆತ್ತಿಕೊಂಡು, ಆಕೆ ಉರಿಯುವ ಮನೆಗಳ ನಡುವೆ ಹಾದು ಊರಾಚೆಯ ಬಯಲಿಗೆ ಬಂದು ಕೂರುತ್ತಾಳೆ.  ಬೆಂಕಿ ಹತ್ತಿದ ಸುದ್ದಿ ಕೇಳಿ ತತ್ತರಿಸಿಹೋಗಿದ್ದ ಸ್ಕೂಲ್ ಮೇಸ್ಟ್ರಾದ ಮಗುವಿನ ತಂದೆ ಬಂದು ನೋಡುತ್ತಾರೆ, ಮನೆಯಲ್ಲಿ ತಾಯಿ-ಮಗು ಇಲ್ಲ, ಮನೆ ಹೆಚ್ಚೂ ಕಡಿಮೆ ಸುಟ್ಟು ಹೋಗಿದೆ.  ಗಾಬರಿಗೊಂಡ ಅವರಿಗೆ ತಾಯಿ ಮಗು ಈ ಗಂಡಾಂತರದಿಂದ ಪಾರಾದ ವಿಚಾರವನ್ನು ಊರಿನ ಜನ ತಿಳಿಸುತ್ತಾರೆ.  ಊರ ಹೊರಗೆ ಮರದ ಕೆಳಗೆ ಸುರಕ್ಷಿತವಾಗಿ ಕೂತ ಹೆಂಡತಿ ಮತ್ತು ಮಗುವನ್ನು ನೋಡಿದ ಅವರಿಗೆ ಸಮಾಧಾನವಾಗುತ್ತದೆ. 

ಮುಂದಿನ ಎರಡು ವರ್ಷದ ತರುವಾಯ ಒಂದು ದಿನ ಮೇಸ್ಟ್ರು, ಅವರ ಹೆಂಡತಿ, ಮಗು ಸಮೇತವಾಗಿ ಶಿವಮೊಗ್ಗ ನಗರಕ್ಕೆ ಬಂದು ಥಳಥಳಿಸುವ ತುಂಗಾ ನದಿಯ ಮರಳು ಹಾಸಿನ ಮೇಲೆ ಕೂತು ತಾವು ತಂದ ಜೋಳದ ರೊಟ್ಟಿಯ ಗಂಟನ್ನು ಬಿಚ್ಚಿ ಸಂಜೆಯ ಉಪಾಹಾರದಲ್ಲಿ ಮಗ್ನರಾಗಿರುತ್ತಾರೆ. ಮಗುವಿಗೆ ಒಂದು ರೊಟ್ಟಿಯ ತುಣುಕನ್ನು ಕೊಟ್ಟಾಗ ಮಗು ರೊಟ್ಟಿಯನ್ನು ತಿನ್ನುತ್ತಾ ಅವರ ಬೆನ್ನ ಹಿಂದೆ ಅಡ್ಡಾಡಲು ಶುರುಮಾಡುತ್ತದೆ. ಸಂಜೆಯ ಬಿಸಿಲಿಗೆ ಬೆಳ್ಳಿಯಂತಿದ್ದ ನೀರು, ಅದರ ಜುಳು ಜುಳು ನಿನಾದ ಈ ಮಗುವನ್ನು ಬಾ ಬಾ ಎಂದು ಕರೆಯುತ್ತದೆ. ಎರಡು ವರ್ಷದ ಆ ಮಗು ತುಂಗಾನದಿಯ ಅಂಚಿಗೆ ಧಾವಿಸುತ್ತದೆ. ತಂದೆ-ತಾಯಿಯ ಬೆನ್ನ ಹಿಂದೆ "ಅಯ್ಯೋ ಅಯ್ಯೋ, ಅಲ್ನೋಡಿ ಆ ಮಗು ನೀರಿನಲ್ಲಿ ಬೀಳುತ್ತಿದೆ” ಎಂದು ಯಾರೋ ಕೂಗಿಕೊಳ್ಳುತ್ತಾರೆ. ತಾಯಿ, ತಿನ್ನುತ್ತಿದ್ದ ರೊಟ್ಟಿಯನ್ನು ತಟ್ಟನೆ ಕೆಳಗೆ ಹಾಕಿ ಓಡಿಹೋಗಿ ಅಷ್ಟು ಹೊತ್ತಿಗೆ ನೀರಿನಲ್ಲಿ ಮಗುಚಿ ಬಿದ್ದ ಮಗುವಿನ ತೋಳು ಹಿಡಿದು ಎತ್ತಿಕೊಂಡು ಹಿಂದಕ್ಕೆ ತರುತ್ತಾಳೆ.

ಈ ಮಗುವನ್ನು ನೀರು ಮತ್ತು ಬೆಂಕಿ ಅಪಾಯಗಳಿಂದ ಪಾರು ಮಾಡಿದ ತಾಯಿ, ಈ ಮಗುವಿಗೆ ಆರು ವರ್ಷ ತುಂಬಿದಾಗ ಅನಿರೀಕ್ಷಿತವಾಗಿ ತೀರಿಕೊಳ್ಳುತ್ತಾಳೆ. ಆಕೆಯ ಹೆಸರು ವೀರಮ್ಮ, ಮತ್ತವಳ ಈ ಮಗುವೇ ಜಿ ಎಸ್ ಶಿವರುದ್ರಪ್ಪ (ಡಾ ಜಿಎಸ್ಸೆಸ್); ಮೇಲೆ ಪ್ರಸ್ತಾಪಿಸಿರುವ ಮಗುವಿನ ತಂದೆ ಸ್ಕೂಲ್ ಮೇಸ್ಟ್ರು ಜಿ. ಶಾಂತವೀರಪ್ಪನವರು. ವೀರಮ್ಮನವರು ತೀರಿದ ಬಳಿಕ ಶಾಂತವೀರಪ್ಪನವರು ಮತ್ತೆ ಮದುವೆಯಾಗುತ್ತಾರೆ. ಅಲ್ಲಿಂದ ಮುಂದಕ್ಕೆ ಜಿಎಸ್ಸೆಸ್ ತಮ್ಮ ತಂದೆ ಶಾಂತವೀರಪ್ಪ ಮತ್ತು ಮಲತಾಯಿ ಶಾಂತಮ್ಮ ಅವರ ಆರೈಕೆಯಲ್ಲಿ ಬೆಳೆಯುತ್ತಾರೆ.

ಜಿಎಸ್ಸೆಸ್, ತೀರಿಕೊಂಡ ಅವರ ತಾಯಿಯನ್ನು ಕುರಿತು 'ಚತುರಂಗ' ಎಂಬ ತಮ್ಮ ಅಸಮಗ್ರ ಆತ್ಮ ಕಥನದಲ್ಲಿ ಹೀಗೆ ಬರೆಯುತ್ತಾರೆ; "ತಾಯಿಯ ಬಗ್ಗೆ ಅವಳ ಮುಖದ ಬಗ್ಗೆ ನನಗೆ ನಿಲ್ಲುವುದು ಒಂದು ಅಸ್ಪಷ್ಟವಾದ ನೆನಪು. ಮಮತೆ ತುಂಬಿದ ಮುಖ, ಹೊಳೆಯುವ ಎರಡು ಕಣ್ಣುಗಳು, ತಲೆಯ ತುಂಬಾ ಹೊದ್ದ ಹಸುರು ಸೆರಗು. ಆಕೆ ಮಧುರವಾಗಿ ಹಾಡುತ್ತಿದ್ದಳು. ಆಕೆ ತೀರಿದಾಗ ನನಗೆ ಆರು ವರ್ಷ ವಯಸ್ಸು. ನಾನು, ನನ್ನ ತಮ್ಮ ಆಕೆ ತೀರಿಕೊಂಡಾಗ ಹಾಯಾಗಿ ಆಟವಾಡುತ್ತಿದ್ದೆವು. ‘ನಿನ್ನ ಅಮ್ಮ ದೇವರ ಹತ್ತಿರ ಹೋಗಿದ್ದಾಳಪ್ಪ’ ಎಂದು ಅವರಿವರು ಹೇಳಿದ್ದನ್ನು ಕೇಳಿ ಮತ್ತೆ ಬರುತ್ತಾಳೆ ಎಂದು ನಂಬಿದ್ದೆ. ಆಮೇಲೆ, ಹಾಗೆ ಅವರು ಹೇಳಿದ್ದು ಸುಳ್ಳು ಎಂಬುದು ಅರ್ಥವಾಗಿ ಆಕೆ ಮತ್ತೆ ಬರುವುದೇ ಇಲ್ಲವೆಂದು ಖಚಿತವಾದಾಗ ನಿಜಕ್ಕೂ ಅಳು ಒತ್ತರಿಸಿಕೊಂಡು ಬಂತು. ಆಮೇಲೆ "ಕಂಡ ಕಂಡ ಹೆಣ್ಣ ಮೊಗದಿ ತಾಯಿ ಮುಖವನರಸಿದೆ". ಅನಂತರ ಇನ್ನೊಬ್ಬ ತಾಯಿ ಮನೆಯನ್ನು ತುಂಬಿದಳು"

ಹೀಗೆ ತಾಯಿಯನ್ನು ಕಳೆದುಕೊಂಡ ಕವಿಯ ದುಃಖ ಮುಂದಕ್ಕೆ ತಾಯಿಯನ್ನು, ಸ್ತ್ರೀಯರನ್ನು ಕುರಿತ ಅವರ ಅನೇಕ ಕವಿತೆಗಳಗೆ ವಸ್ತುವಿಷಯವಾಯಿತು. ಈ ಹಿನ್ನೆಲೆಯಲ್ಲಿ ಜಿಎಸ್ಸೆಸ್ ಅವರ ಕೆಲವು ಕವಿತೆಗಳನ್ನು ಗಮನಿಸೋಣ:
ಅನ್ವೇಷಣೆ 

ಕಂಡ ಕಂಡ ಹೆಣ್ಣ ಮೊಗದಿ
ನಿನ್ನ ಮೊಗವನರಸಿದೆ
ಏನಾದರೂ ಕಾಣಲಿಲ್ಲ
ನಿಡುಸುಯ್ಲೊಳು ಮುಳಿಗಿದೆ

ಎಳೆಯತನದಿ ಕಂಡ ನೆನಪು
ಮಸುಕು ಮಸುಕು ಮನದಲಿ
ಕರುಣೆಯಿಂದ ಕಂಡ ಕಣ್ಣು
ಮುತ್ತನಿಟ್ಟ ತುಟಿಯ ಚಿತ್ರ
ಇಷ್ಟು ಮಾತ್ರ ಉಳಿದಿರುವುದು
ಸವಿನೆನಪಿನ ಪುಟದಲಿ

ಒಬ್ಬಿಬ್ಬರ ಮೊಗದಿ ನಿನ್ನ
ಬಿಂಬ ಮೂಡಿದಂತೆ ಭಾಸ -
ವಾಯಿತೊಮ್ಮೆ ಅಂದು ನಾನು
ರೋಮಾಂಚನಗೊಳ್ಳಲು;
ಎಂತಿದ್ದೆಯೊ ತಾಯಿ ನೀನು
ನಾನು ಚಿತ್ರಗಾರನೇನು
ನಿನ್ನ ಚಿತ್ರ ಬರೆಯಲು?

ಇಂತೂ ಕಾಲ ಕಳೆದುದಾಯ್ತು
ಎಲ್ಲ ಹೆಣ್ಣ ಮೊಗದಿ ನಿನ್ನ
ಬಿಂಬ ಕಾಣುವಾಸೆಯೊಂದು
ನನ್ನ ಸುತ್ತ ಮುತ್ತಿತ್ತು

ಮದುವೆಯಾಯ್ತು ಮಕ್ಕಳಾಯ್ತು
ಬಾಳ ನೂಲು ಬಿಗಿಯಿತು
ಕಡೆಗೆ ಇಲ್ಲಿ ನನ್ನ ಮಡದಿ
ಮಗುವಿಗೆ ಮುತ್ತಿಡುವ ಹೊತ್ತು
ನಿನ್ನ ಚಿತ್ರ ಮೂಡಿತು
ಬೆರಗು-ಹರ್ಷ ಕವಿಯಿತು!
ಅನ್ವೇಷಣೆ ಎಂಬ ಈ ಕವಿತೆಯಲ್ಲಿ ತಾಯಿಯನ್ನು ಎಳೆ ವಯಸ್ಸಿನಲ್ಲಿ ಕಳೆದುಕೊಂಡ ಕವಿಯು ತನ್ನ ತಾಯಿಯ ಮುಖವನ್ನು ಕಂಡ ಕಂಡ ಹೆಣ್ಣುಗಳಲ್ಲಿ ಅನ್ವೇಷಿಸುತ್ತಾರೆ. ಆದರೆ ಹಾಗೆ ಅನ್ವೇಷಿಸುವುದಕ್ಕೆ ಮುನ್ನ ತಾಯಿಯ ಭಾವ ಚಿತ್ರ ಕವಿಗೆ ದೊರೆತಿಲ್ಲ. ಅವಳು ಹೇಗಿದ್ದಾಳೆ ಎಂಬ ಕಲ್ಪನೆಯೇ ಇಲ್ಲ. ತಾಯಿಯ ಕರುಣೆ, ಮಮತೆ, ಮುತ್ತಿಟ್ಟ ನೆನಪಷ್ಟೇ ಕವಿಯ ಮನಸ್ಸಿನಲ್ಲಿ ಉಳಿದಿದೆ. ಹೀಗಿರುವಾಗ ಕವಿ ಕಂಡ ಕಂಡ ಹೆಣ್ಣುಗಳಲ್ಲಿ ತಾಯಿ ಮುಖ ಅರಸುವುದಾದರೂ ಹೇಗೆ? ನೆನಪಿನಲಿ ಉಳಿದುದ್ದನ್ನು ಹಾಳೆಯ ಮೇಲೆ ಮೂಡಿಸಲು ಕವಿ ಚಿತ್ರಕಾರನೂ ಅಲ್ಲ. ತಾಯಿಯ ಮುಖದ ಅಸ್ಪಷ್ಟತೆಯ ನಡುವೆ ಸ್ಪಷ್ಟವಾಗಿ ಉಳಿದದ್ದು ಆಕೆಯ ಮಮತೆಯಷ್ಟೇ. ಈ ಅನ್ವೇಷಣೆಗಳ ನಡುವೆ ಕವಿಯ ಬಾಳಿನ ನೂಲು ಬಲವಾಗುತ್ತದೆ, ಕವಿಗೆ ಮದುವೆಯಾಗುತ್ತದೆ, ಮಕ್ಕಳಾಗುತ್ತವೆ. ಈ ಅನ್ವೇಷಣೆಯಲ್ಲಿ ಕವಿಗೆ ಕೊನೆಗೂ ತಾಯಿಯ ಮುಖ ಕಂಡದ್ದು ಒಂದು ಸುಂದರ ಭಾವನೆಯಲ್ಲಿ; ತನ್ನ ಹೆಂಡತಿಯೇ ತನ್ನ ಮಗುವಿಗೆ ಮುತ್ತನಿಡುವ ಚಿತ್ರದಲ್ಲಿ ಕವಿಯ ಅನ್ವೇಷಣೆ ಮುಗಿಯುತ್ತದೆ. ತಾಯಿಯ ಪ್ರೀತಿ ಮತ್ತು ಅದರ ಸ್ವರೂಪ ಸ್ಪಷ್ಟವಾಗುತ್ತದೆ.
ಜಿಎಸ್ಸೆಸ್ 'ತಾಯಿಗೆ' ಎಂಬ ನೀಳ್ಗವನದಲ್ಲಿ ಬರೆದ ಸಾಲುಗಳು ಹೀಗಿವೆ: 

ಬೇರೆ ಬೇರೆ ತಾಯಂದಿರನು ನೀನೆಂದು ಭ್ರಮಿಸಿ
ಕೂಗಿ ನಿಷ್ಫಲನಾಗಿ ತಪಿಸಿ
ನೀ ತೋರದಿರಲಾಗಿ
ಕಣ್ಣೀರಿನಲಿ ಮಲಗಿ
ಕನಸಿನಲಿ ನಾನಿನ್ನ ಕಂಡುದುಂಟು
ಕನಸೊಡೆಯೆ ಕಾದಿತ್ತು ಜಗದ ನಂಟು

ಮನೆಯ ತುಂಬಿದಲಂದು ಮತ್ತೊಬ್ಬ ಮಾತೆ
ಮನವ ತುಂಬಲೆ ಇಲ್ಲ - ಅವಳನ್ನದಾತೆ!
ನೀನಿತ್ತ ಒಲವನ್ನು ಆ ದಿವ್ಯ ಸುಧೆಯನ್ನು
ಪರರಿಂದ ಕಡವಾಗಿ ಪಡೆಯ ಬಹುದೇ?
ದೊರೆಯದಿರೆ ಅದಕಾಗಿ ಕೊರಗಬಹುದೇ.

ಈ ಬಗೆಯ ನೋವಿನಲಿ ಏನೋ ಚೆಲುವುಂಟು
ಪರರ ನೋವಿನ ಬಗೆಗೆ ಅನುಕಂಪವುಂಟು
ನೋವಿನಲಿ ನಲಿವುಂಟು
ನಲಿವಿನಲಿ ನೋವುಂಟು
ಎಂಬ ಅನುಭವವಾಗಿ ಬೆಳಕು ಮೂಡುತಿದೆ
ನೋವು ಸೃಷ್ಟಿಯ ಮೂಲ ಎಂದು ತೋರುತಿದೆ
ತಾಯಿಯನ್ನು ಕಳೆದುಕೊಂಡ ನೋವು, ಮತ್ತು ಮುಂದಕ್ಕೆ ಹೆಚ್ಚಾದ ಬಡತನ ಕವಿಯನ್ನು ಬಹಳವಾಗಿ ಕಾಡಿದ ವಿಚಾರವಾಯಿತು. ಈ ನೋವಿನಿಂದ ಉಂಟಾದ ಇತರರ ಬಗೆಗಿನ ಅನುಕಂಪ ಜಿಎಸ್ಸೆಸ್ ಅವರ ಅನೇಕ ಕವಿತೆಗಳಲ್ಲಿ ಕಾಣಬಹುದು; "ದೀಪವಿರದ ದಾರಿಯಲ್ಲಿ ತಡವರಿಸುವ ನುಡಿಗಳೇ, ಕಂಬನಿಗಳ ತಲಾತಲದಿ ನಂದುತಿರುವ ಕಿಡಿಗಳೇ, ಉಸಿರನಿಡುವೆ ಹೆಸರ ಕೊಡುವೆ, ಬನ್ನಿ ನನ್ನ ಹೃದಯಕೆ" ಎಂಬ ಸಾಲುಗಳು ಅವರಲ್ಲಿದ್ದ ಅನುಕಂಪೆಗೆ ಸಾಕ್ಷಿಯಾಗಿದೆ.  ಮೇಲಿನ ಸಾಲುಗಳಲ್ಲಿ ಇನ್ನೊಂದು ಗಮನಿಸಬೇಕಾದ ವಿಚಾರ; ಕವಿ ನೋವಿನಲ್ಲೂ ಚೆಲುವನ್ನು ಕಾಣಬಯಸುತ್ತಿದ್ದಾರೆ.  ಬಹುಶಃ ಬದುಕಿನ ಬಗ್ಗೆ ಕಾಳಜಿ, ಪ್ರೀತಿ ಇರುವವರು ಮಾತ್ರ ಈ ರೀತಿ ಆಲೋಚಿಸಬಹುದು.  ನೋವಿನಲಿ ನಲಿವುಂಟು ಎಂಬುದು ಒಂದು ತೀರಾ ವ್ಯತಿರಿಕ್ತವಾದ ಚಿಂತನೆ.  ಆದರೆ ಆ ನೋವಿನಲ್ಲಿ ನಲಿವನ್ನು ಕಾಣುವವರು ಆಶಾವಾದಿಗಳು.  ನೋವಿನಿಂದ ತಪ್ಪಿಸಿಕೊಳ್ಳಲು ಆಶಯ, ಭರವಸೆ ಅತಿ ಮುಖ್ಯ ಎಂದು ಕವಿ ತನ್ನ ಸ್ವಂತ ಅನುಭವದಿಂದ ಕಂಡುಕೊಂಡಂತಿದೆ.  ಮನುಷ್ಯನಿಗೆ ಮತ್ತು ಪ್ರಾಣಿಗಳಿಗೆ ಬೇಕಾಗಿರುವ ಉಳಿವಿನ ಪ್ರಜ್ಞೆ (Survival Instincts) ಈ ಸೋಲು, ನೋವು ಇವುಗಳಿಂದ ಕಲಿತ ಅನುಭವ.  ಸುಟ್ಟ ಬೂದಿಯಿಂದ ಮೇಲೆರುವ ಕಾಲ್ಪನಿಕ ಫೀನಿಕ್ಸ್ ಪಕ್ಷಿ ‘ನೋವು ಸೃಷ್ಟಿಯ ಮೂಲ’ ಎಂಬುದಕ್ಕೆ ರೂಪಕವಾಗಿ ನಿಲ್ಲುತ್ತದೆ.  ತಾಯಿಯನ್ನು ಕಳೆದುಕೊಂಡ ಕವಿ, ಫೀನಿಕ್ಸ್ ರೀತಿಯಲ್ಲಿ ಮತ್ತೆ ತನ್ನ ಬದುಕನ್ನು ಕಟ್ಟಿಕೊಳ್ಳುವುದು ಈ ಮೇಲಿನ ಸಾಲುಗಳಲ್ಲಿ ಅಭಿವ್ಯಕ್ತಿಗೊಂಡಿದೆ.

ಜಿಎಸ್ಸೆಸ್ ಅವರ ‘ಜಡೆ’ ಎನ್ನುವ ಪ್ರಖ್ಯಾತ ಕವನದಲ್ಲಿ ಕವಿ ಒಮ್ಮೆ ನಡೆದು ಬರುತ್ತಿರುವಾಗ ಮುಂದೆ ಕಂಡ ಲಲನೆಯರ ಬೆನ್ನ ಹಿಂದೆ ಜೋಲುವ ಜಡೆ ಕವನಕ್ಕೆ ಸ್ಪೂರ್ತಿಯಾಗುತ್ತದೆ. ಆ ಕವಿತೆಯ ಕೆಲವು ಆಯ್ದ ಸಾಲುಗಳು ಹೀಗಿವೆ;
ಲಲನೆಯರ ಬೆನ್ನಿನೆಡೆ 
ಹಾವಿನೊಲು ಜೋಲ್ವ ಜಡೆ
ಅತ್ತಿತ್ತ ಹರಿದ ಜಡೆ
ಚೇಳ್ ಕೊಂಡಿಯಂಥ ಜಡೆ
ಮೋಟು ಜಡೆ, ಚೋಟು ಜಡೆ
ಗಂಟು ಜಡೆ, ಅಕ್ಕ ತಂಗಿಯ
ಮುಡಿಯ ಹಿಡಿದು ನಾನೆಳದ ಜಡೆ
ಮಲ್ಲಿಗೆಯ ಕಂಪು ಜಡೆ
ಮಮತಾವೃಕ್ಷ ಬಿಟ್ಟ ಬಿಳಲಿನಂತೆ
ಹರಡಿರುವ ತಾಯ ಜಡೆ!
ಓ ಓ ಈ ಜಡೆಗೆಲ್ಲಿ ಕಡೆ!

ಸಂಜೆಯಲಿ ಹಗಲು ಕೆದರುವ ಕತ್ತಲೆಯ
ಕಾಳ ಜಡೆ
ಬೆಳಗಿನಲಿ ಇರುಳು ಬಿಚ್ಚುವ ಬೆಳ್ಳನೆಯ
ಬೆಳಕು ಜಡೆ
ಬೆಳ್ಳಕ್ಕಿಗಳ ಜಡೆ, ಕೊಂಚೆಗಳ ಜಡೆ
ನಕ್ಷತ್ರಗಳ ಮುಡಿದ ನೆಟ್ಟಿರುಳ ನಭದ ಜಡೆ
ಮುಂಗಾರು ಮೋಡಗಳು ದಿಕ್ಕು ದಿಕ್ಕಿಗೆ ಬಿಚ್ಚಿ
ಹರಡಿರುವ ಮಳೆಯ ಜಡೆ
ಚಂದ್ರಚೂಡನ, ವ್ಯೋಮಕೇಶನ
ವಿಶ್ವವನೆ ವ್ಯಾಪಿಸುತ ತುಂಬಿರುವ ಜಡೆ
ಎಲ್ಲವೂ ರಮ್ಯವೆಲ್ಲ!
ಜಡೆಯಾಚೆ ತಿರುಗಿಸಿದ ತಾಯ ಮುಖ ಮಾತ್ರ
ಇಂದಿಗೂ ಕಾಣದಲ್ಲ!
ಜಡೆಯ ನಾನಾ ಆಕಾರಗಳ ಚಿತ್ರಣ ಕವಿಗೆ ಕಾಣಿಸಿಕೊಳ್ಳುತ್ತದೆ; ಅಲ್ಲಿ ಕೆಲವು ಉದ್ದ ಜಡೆ, ಮೋಟುಜಡೆ, ಗಂಟು ಜಡೆ ಇವುಗಳ ವರ್ಣನೆ ಇದೆ. ಸೀತೆಯ ಕಣ್ಣೀರಿನಲಿ ಮಿಂದ ಜಡೆ ಮತ್ತು ಪಾಂಚಾಲಿಯ ಜಡೆ ಇದೆ.  ಅಕ್ಕ ತಂಗಿಯರ ಜಡೆ ಇದೆ, ಮುಖ್ಯವಾಗಿ ‘ಮಾತೃ ಮಮತಾವೃಕ್ಷ ಬಿಟ್ಟ ಬಿಳಲಿನಂತೆ ಹರಡಿರುವ ಜಡೆ’ ಇದೆ.  ಪರ್ವತ ಶ್ರೇಣಿಗಳ, ಕಾನನದ, ಹೊಳೆಯ, ಪ್ರಕೃತಿಯ ಜಡೆ ಇದೆ. ಕವಿತೆ ಸಾಗಿದಂತೆ ಆ ಜಡೆ ನೆಲವನ್ನು ಬಿಟ್ಟು ಮೇಲಕ್ಕೆ ಹಾರುತ್ತದೆ.  ಅಲ್ಲಿ ಕತ್ತಲೆಯ ಕಾಳ ಜಡೆ ಇದೆ, ಬೆಳಕಿನ ಜಡೆ ಇದೆ, ಬೆಳ್ಳಕ್ಕಿಗಳ ಸಾಲುಗಳ ಜಡೆ ಇದೆ.  ಕವನ ಮುಂದಿನ ಹಂತದಲ್ಲಿ ಆಕಾಶವನ್ನೂ ಮೀರಿ ಅಧ್ಯಾತ್ಮಕ್ಕೆ ಜಿಗಿಯುತ್ತದೆ.  ಅಲ್ಲಿ ಚಂದ್ರ ಚೂಡನ, ವ್ಯೋಮಕೇಶನ ವಿಶ್ವವನೇ ವ್ಯಾಪಿಸುತ ತುಂಬಿರುವ ಜಡೆ ಇದೆ.  ಎಲ್ಲವೂ ರಮ್ಯವಾಗಿದ್ದರೂ ಕವಿಗೆ ಇಲ್ಲೊಂದು ಕೊರತೆಯಿದೆ.  ಇದು ಕವಿತೆಯ ಕೊನೆ ಸಾಲಿನಲ್ಲಿ ಹೀಗೆ ಅಭಿವ್ಯಕ್ತಗೊಂಡಿದೆ; "ಜಡೆಯಾಚೆ ತಿರುಗಿಸಿದ ತಾಯ ಮುಖ ಮಾತ್ರ ಇಂದಿಗೂ ಕಾಣದಲ್ಲ".  ಈ ಕೊನೆಯ ಸಾಲುಗಳು ಕವಿಯ ಮಟ್ಟಿಗೆ ತೀರಾ ವೈಯಕ್ತಿಕವಾದ ಭಾವನೆಯಾದರೂ, ಇಲ್ಲಿ ಓದುಗರಿಗೂ ಒಂದು ರೀತಿ ಕೊರತೆ, ಕೊರಗು ಇದೆ.  ಪರಿಸರ ನಾಶವಾಗುತ್ತಿರುವ ಈ ಸಂದರ್ಭದಲ್ಲಿ ನಮಗೂ ಈ ಭೂಮಿ ಇಷ್ಟು ರಮ್ಯವಾಗಿ ಕಾಣುತ್ತಿದ್ದರೂ ಅಲ್ಲಿ ತಾಯ ಮುಖ ಕಾಣದಾಗಿದೆ.  ಸ್ವಾರ್ಥದಲ್ಲಿ ಮುಳುಗಿ ಆ ತಾಯ ಮುಖ ಕಾಣಲಾರದಷ್ಟು ಕುರುಡರಾಗಿದ್ದೇವೆ.  ತಾಯ ಮುಖ ಕಾಣದಷ್ಟು ನಾವು ವಿಕಾರಗೊಳಿಸಿದ್ದೇವೆ.  ಈ ಕವಿತೆಯ ಇನ್ನೊಂದು ಲಕ್ಷಣ ಎಂದರೆ ಕವಿಗಿರುವ ವಿಸ್ಮಯ.  ಹಬ್ಬಿರುವ ಗಿರಿಪಂಕ್ತಿ, ನಕ್ಷತ್ರಗಳು ತುಂಬಿದ ಆಕಾಶ, ಹರಿಯುವ ನದಿ ಇವು ಜಡೆಯನ್ನು ಹೋಲುವುದೇ ಒಂದು ವಿಸ್ಮಯ.  ವಿಸ್ಮಯವಿಲ್ಲದ ಬದುಕು ರಸಹೀನವಾದದ್ದು.  ಆ ವಿಸ್ಮಯವೇ ನಮ್ಮ ಕಲೆಗೆ, ಸಾಹಿತ್ಯಕ್ಕೆ ಸ್ಪೂರ್ತಿ.  ವಿಸ್ಮಯವೇ ಕಲ್ಪನೆಗೆ ಪ್ರೇರಣೆ.  ಕಲ್ಪನೆಯಿಂದ ಕಲೆ ಮತ್ತು ಕವಿತೆ.  

ಈ ಘಟನೆ ನಡೆದದ್ದು ಸುಮಾರು 75 ವರುಷಗಳ ಹಿಂದೆ. ಜಿಎಸ್ಸೆಸ್ ಅವರಿಗೆ ಆಗ ಸುಮಾರು 25 ವರ್ಷ ವಯಸ್ಸು. ಆಗ ಬಿಎ ಓದಲು ಮೈಸೂರಿಗೆ ಬರುತ್ತಾರೆ. ಬಡತನದ ಕಾರಣದಿಂದ ಎಷ್ಟೋ ದಿನಗಳ ಉಪವಾಸ ಅನಿವಾರ್ಯವಾಗುತ್ತದೆ. ಅವರಿಗೆ ಹಾಸ್ಟಲ್ ಅಡ್ಮಿಷನ್ ದೊರೆತಿರಲಿಲ್ಲ. ಹೀಗಾಗಿ ಕಾಲ ಕಾಲಕ್ಕೆ ಊಟ ಸಿಗುತ್ತಿರಲಿಲ್ಲ. ಒಂದು ದಿನ ಅವರು ತಮ್ಮ ಗುರುಗಳಾದ ತ ಸು ಶ್ಯಾಮರಾಯರ ತರಗತಿಯಲ್ಲಿ ಪಾಠ ಕೇಳುತ್ತಿರುವಾಗ ತಲೆ ಸುತ್ತು ಬಂದು ಹಾಗೆ ಡೆಸ್ಕ್ ಮೇಲೆ ತಲೆಯಿಟ್ಟು ಕುಸಿಯುತ್ತಾರೆ. ಶ್ಯಾಮರಾಯರು ಜಿಎಸ್ಸೆಸ್ ಅವರ ಅಸಹಾಯಕತೆಯನ್ನು ಗಮನಿಸಿ ಮನೆಗೆ ಕರೆದೊಯ್ದು, ಜೊತೆಗೆ ಕೂರಿಸಿಕೊಂಡು ಊಟ ಮಾಡುವಂತೆ ಒತ್ತಾಯಿಸುತ್ತಾರೆ. ಅಷ್ಟೇ ಅಲ್ಲ ಈ ಶಿಷ್ಯನನ್ನು ಮುಂದಿನ ಕೆಲವು ದಿನಗಳಲ್ಲಿ ಜೆ.ಎಸ್.ಎಸ್. ಮಠದ ಸ್ವಾಮೀಜಿಯವರ ಬಳಿ ಕರೆದುಕೊಂಡು ಹೋಗಿ ತಮ್ಮ ಶಿಷ್ಯನಿಗೆ ಹಾಸ್ಟೆಲಿನಲ್ಲಿ ತಂಗುವ ವ್ಯವಸ್ಥೆ ಮಾಡಿಕೊಡಬೇಕೆಂದು ಕೇಳಿ ಕೊಳ್ಳುತ್ತಾರೆ. ಸ್ವಾಮೀಜಿ ಒಪ್ಪುತ್ತಾರೆ. ಇದಾದ ಕೆಲವು ದಿನಗಳ ನಂತರ ಜಿಎಸ್ಸೆಸ್ ಹಣದ ಕೊರತೆಯಿಂದಾಗಿ ಫೀಸು ಕಟ್ಟಲು ಸಾಧ್ಯವಾಗುವುದಿಲ್ಲ. ಆಗ ಕಾಲೇಜಿಗೆ ಚಕ್ಕರ್ ಕೊಟ್ಟು ಹಾಸ್ಟೆಲಿನ್ಲಲೇ ಕಾಲ ಕಳೆಯುತ್ತಾರೆ. ಶಿಷ್ಯನ ಗೈರುಹಾಜರಿಯನ್ನು ಗಮನಿಸಿದ ಶ್ಯಾಮರಾಯರು ಜಿಎಸ್ಸೆಸ್ ಗೆ ಕೂಡಲೇ ಬಂದು ತಮ್ಮನ್ನು ಕಾಣುವಂತೆ ಇನ್ನೊಬ್ಬ ಶಿಷ್ಯನ ಮೂಲಕ ಹೇಳಿ ಕರೆಸುತ್ತಾರೆ. ಜಿಎಸ್ಸೆಸ್ ಆಗ ತಮ್ಮ ಆರ್ಥಿಕ ಸಂಕಟವನ್ನು ಗುರುಗಳಲ್ಲಿ ತೋಡಿಕೊಳ್ಳುತ್ತಾರೆ. ಕೂಡಲೇ ಶ್ಯಾಮರಾಯರು ಆಡಳಿತ ಕಚೇರಿಗೆ ಹೋಗಿ ಜಿಎಸ್ಸೆಸ್ ಬೇಡವೆಂದರೂ ಶಿಷ್ಯನ ಪರವಾಗಿ ತಾವೇ ಹಣ ಕಟ್ಟಿ ಫೀಸ್ ತುಂಬುತ್ತಾರೆ. ’ನೋಡು ಶಿವರುದ್ರಪ್ಪ ನೀನು ಇದನ್ನು ಸಾಲವೆಂದು ಪರಿಗಣಿಸು, ಮುಂದಕ್ಕೆ ನಿನಗೆ ಕೆಲಸ ಸಿಕ್ಕಾಗ ಅದನ್ನು ಹಿಂದಕ್ಕೆ ಕೊಡು’ ಎಂದು ಹೇಳುತ್ತಾರೆ. ಮುಂದಿನ ಕೆಲವು ತಿಂಗಳಲ್ಲಿ ಪ್ರತಿಭಾವಂತರಾದ ಜಿಎಸ್ಸೆಸ್ ಸ್ಕಾಲರ್ಶಿಪ್ ಪಡೆದು ಫೀಸ್ ಹಣವನ್ನು ಶ್ಯಾಮರಾಯರಿಗೆ ಹಿಂದಿರುಗಿಸಲು ಹೋದಾಗ, ’ನೀನು ಕೆಲಸಕ್ಕೆ ಸೇರಿದಾಗ ಕೊಡು’ ಎಂದು ನಿರಾಕರಿಸುತ್ತಾರೆ. ಆಗಿನ ಕಾಲಕ್ಕೆ ತ ಸು ಶ್ಯಾಮರಾಯರು ಮತ್ತು ಅವರ ಅಣ್ಣ ವೆಂಕಣ್ಣಯ್ಯನವರು ಮೈಸೂರಿನ ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರು. ವೆಂಕಣ್ಣಯ್ಯನವರು ಕುವೆಂಪು ಅವರ ಗುರುಗಳು! ಈ ಇಬ್ಬರೂ ಮಹನೀಯರು ಬಹಳ ಉದಾರಿಗಳು. ಕರುಣಾಮಯಿಗಳಾದ ಇವರು ತಮ್ಮ ಅನೇಕ ಶಿಷ್ಯರಿಗೆ ಈ ರೀತಿಯ ಆರ್ಥಿಕ ನೆರವು ನೀಡಿ ಕೈ ಹಿಡಿದು ನಡೆಸಿದ್ದಾರೆ. ತ ಸು ಶ್ಯಾಮರಾಯರ ಮತ್ತು ಜಿಎಸ್ಸೆಸ್ ಅವರ ಗುರು ಶಿಷ್ಯ ಸಂಬಂಧ ಆಪ್ತವಾದದ್ದು ಮತ್ತು ಅನನ್ಯವಾದದ್ದು. ಜಿಎಸ್ಸೆಸ್ ಉದಯೋನ್ಮುಖ ಕವಿಯಾಗಿ ಅನೇಕ ಕವಿತೆಗಳನ್ನು ಬರೆಯುತ್ತಾರೆ. ಆ ಕವಿತೆಯನ್ನು ಒಮ್ಮೆ ಓದುವಂತೆ ಮತ್ತು ಅಭಿಪ್ರಾಯಗಳನ್ನು ತಿಳಿಸುವಂತೆ ಶ್ಯಾಮರಾಯರನ್ನು ಕೇಳಿಕೊಳ್ಳುತ್ತಾರೆ. ಶ್ಯಾಮರಾಯರು ತಮ್ಮ ಶಿಷ್ಯನನ್ನು ಚಾಮುಂಡಿ ಬೆಟ್ಟದ ತಪ್ಪಲಿನ ಪ್ರಶಸ್ತವಾದ ಸ್ಥಳಕ್ಕೆ ಕರೆದುಕೊಂಡು ಹೋಗಿ, ಒಂದು ಬಂಡೆಯ ಮೇಲೆ ಆಸೀನರಾಗಿ, ಮೂಗಿಗೆ ನಶ್ಯ ಏರಿಸಿ ತಮ್ಮ ಶಿಷ್ಯನಿಗೆ ಕವನವನ್ನು ಪ್ರಸ್ತುತ ಪಡಿಸಬೇಕೆಂದು ಆದೇಶ ನೀಡುತ್ತಾರೆ. ಜಿಎಸ್ಸೆಸ್ ತಮ್ಮ ಅನೇಕ ಕವಿತೆಗಳನ್ನು ಗುರುಗಳ ಮುಂದೆ ಪ್ರಸ್ತುತಪಡಿಸುತ್ತಾರೆ. ಗುರುಗಳು ತಾಳ್ಮೆಯಿಂದ ಶಿಷ್ಯನ ಎಲ್ಲ ಕವನಗಳನ್ನು ಕೇಳಿಸಿಕೊಂಡು ಅದನ್ನು ಮೆಚ್ಚುತ್ತಾರೆ, ಇನ್ನೂ ಹೆಚ್ಚು ಬರೆಯಲು ಪ್ರೋತ್ಸಾಹ ನೀಡುತ್ತಾರೆ. ಶಿಷ್ಯನಿಗೆ ಗುರುಗಳ ಈ ಮಾರ್ಗದರ್ಶನ ಅಮೂಲ್ಯವಾಗುತ್ತದೆ. ಶಿಷ್ಯ, ಗುರುಗಳಿಗೆ ಕೃತಜ್ಞತೆಯನ್ನು "ತೃಪ್ತಿ" ಎಂಬ ಶೀರ್ಷಿಕೆ ಉಳ್ಳ ವಿಶೇಷ ಕವಿತೆಯ ಮೂಲಕ ಅರ್ಪಿಸುತ್ತಾನೆ. ಶಿಷ್ಯ ಎದೆತುಂಬಿ ಹಾಡುತ್ತಾನೆ, ಗುರುಗಳು ಮನವಿಟ್ಟು ಕೇಳುತ್ತಾರೆ. ಶಿಷ್ಯ ಹಾಡು ಹಕ್ಕಿಯಾಗುತ್ತಾನೆ, "ಇಂದು ನಾ ಹಾಡಿದರು ಅಂದಿನಂತೆಯೇ ಕುಳಿತು ಕೇಳುವಿರಿ ಸಾಕೆನಗೆ ಅದುವೇ ಬಹುಮಾನ, ಹಾಡುಹಕ್ಕಿಗೆ ಬೇಕೆ ಬಿರುದು ಸನ್ಮಾನ, ಯಾರು ಕಿವಿ ಮುಚ್ಚಿದರು ನನಗಿಲ್ಲ ಚಿಂತೆ" ಎಂಬ ನಿರ್ಲಿಪ್ತ ನಿಲುವನ್ನು ವ್ಯಕ್ತಪಡಿಸುತ್ತಾನೆ.

ಈ ಕವಿತೆ ಮುಂದಕ್ಕೆ "ಎದೆ ತುಂಬಿ ಹಾಡಿದೆನು" ಎಂಬ ಭಾವಗೀತೆಯಾಗಿ ಅತ್ಯಂತ ಜನಪ್ರಿಯವಾಗುತ್ತದೆ. ಈ ಕವಿತೆ ಹೀಗಿದೆ:
ತೃಪ್ತಿ

ಎದೆ ತುಂಬಿ ಹಾಡಿದೆನು ಅಂದು ನಾನು
ಮನವಿಟ್ಟು ಕೇಳಿದಿರಿ ಅಲ್ಲಿ ನೀವು
ಇಂದು ನಾ ಹಾಡಿದರು ಅಂದಿನಂತೆಯೇ ಕುಳಿತು
ಕೇಳುವಿರಿ ಸಾಕೆನಗೆ ಅದುವೆ ಬಹುಮಾನ
ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ?

ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ
ಹಾಡುವುದು ಅನಿವಾರ್ಯ ಕರ್ಮ ನನಗೆ
ಕೇಳುವವರಿಹರೆಂದು ನಾಬಲ್ಲೆನದರಿಂದ
ಹಾಡುವೆನು ಮೈದುಂಬಿ ಎಂದಿನಂತೆ
ಯಾರು ಕಿವಿ ಮುಚ್ಚಿದರು ನನಗಿಲ್ಲ ಚಿಂತೆ
ಈ ಕವಿತೆಗೆ ರಾಗ ಸಂಯೋಜನೆ ಮಾಡಿದವರು ಮೈಸೂರು ಅನಂತಸ್ವಾಮಿಯವರು.  ಜಿಎಸ್ಸೆಸ್ ಇದನ್ನು ಬರೆದು 75 ವರ್ಷಗಳಾಗಿದ್ದರೂ ಇಂದಿಗೂ ಈ ಗೀತೆ ಅತ್ಯಂತ ಜನಪ್ರಿಯವಾಗಿದೆ.  ಎರಡೇ ಪಂಕ್ತಿಯ, ಕೇವಲ 10 ಸಾಲುಗಳ ಕವಿತೆ ಸರಳವಾಗಿ ದಟ್ಟವಾಗಿದೆ.  ಕವಿ ಇಲ್ಲಿ ಎಲ್ಲ ಓದುಗರಿಗೂ ಮತ್ತು ಕೇಳುಗರಿಗೂ ಕೃತಜ್ಞರಾಗಿದ್ದಾರೆ.  ಇದರಲ್ಲಿ ಭಗವದ್ಗೀತೆಯ ಕೆಲವು ಸಾಲುಗಳ ಛಾಯೆಯನ್ನು ಗುರುತಿಸಬಹುದು.  ಜಿಎಸ್ಸೆಸ್ ಆ ವಯಸ್ಸಿನಲ್ಲಿ ತಮ್ಮ ಕಷ್ಟಗಳ ಮಧ್ಯೆ ಭಗವದ್ಗೀತೆಯನ್ನು ಓದಿ ತಿಳಿದಿರುವ ಮತ್ತು ಅದರ ಪ್ರಭಾವದಿಂದ ರಚಿಸಿರುವ ಸಾಧ್ಯತೆ ಕಡಿಮೆ.  ಹೀಗಾಗಿ ಇದು ಬದುಕಿನ ಅನುಭವದಿಂದ ಮೂಡಿಬಂದಿರುವ ಸಾಲುಗಳಿರಬಹುದು.  ಕರ್ಮ ಎಂಬುದನ್ನು ಇಲ್ಲಿ ಕಾಯಕವೆಂದು ಅರ್ಥಮಾಡಿಕೊಳ್ಳಬೇಕು.  ಕಾಯಕ ಅನಿವಾರ್ಯ, ಅದನ್ನು ನಿರಪೇಕ್ಷೆಯಿಂದ ಶ್ರದ್ಧೆಯಿಂದ ಮಾಡುವ ಆಶಯವನ್ನು ಕವಿ ವ್ಯಕ್ತಪಡಿಸಿದ್ದಾರೆ. ಎಷ್ಟೋ ಬಾರಿ ನಮ್ಮ ಬದುಕಿನ ಕಥೆ-ವ್ಯಥೆಗಳನ್ನು ತಾಳ್ಮೆಯಿಂದ ಕೇಳುವವರಿದ್ದರೆ ಸಾಕು ಎನಿಸುತ್ತದೆ.  ನಮ್ಮ ಅಳಲನ್ನು ತೋಡಿಕೊಂಡಾಗ ಹೃದಯ ಹಗುರವಾಗುವುದು ಸಹಜ.  ಒಬ್ಬ ಶಿಷ್ಯನಿಗೆ ತನ್ನ ಗುರುವಿನಿಂದ ಪ್ರಶಂಸೆ ದೊರಕಿದರೆ ಅಷ್ಟೇ ಸಾಕು ಅದಕ್ಕಿಂತ ಹೆಚ್ಚಿನ ಬಹುಮಾನ ಏನಿದೆ?  ಹಕ್ಕಿ ಇಲ್ಲಿ ಅತ್ಯಂತ ಪರಿಣಾಮಕಾರಿಯಾದ ರೂಪಕವಾಗಿ ನಿಲ್ಲುತ್ತದೆ.  ಆ 'ಹಕ್ಕಿ' ಒಬ್ಬ ವೈದ್ಯನಾಗಿರಬಹುದು, ಒಬ್ಬ ಸರ್ಕಾರಿ ಸಾಹೇಬನಾಗಿರಬಹುದು ಅಥವಾ ಒಬ್ಬ ಕಲಾವಿದನಾಗಿರಬಹುದು.  ಹಕ್ಕಿಗೆ ತನ್ನ ಅನಿವಾರ್ಯ ಕಾಯಕವನ್ನು ಮಾಡುವ ಈ ಸಂದರ್ಭದಲ್ಲಿ ಉಂಟಾಗುವ ಭಾವ ಎಲ್ಲರಿಗೂ ಅನ್ವಯವಾಗುತ್ತದೆ.  ಈ ಕವಿತೆ ವಿಶೇಷವಾಗಿ ಗಾಯಕ - ಗಾಯಕಿಯರಿಗೆ ಹೆಚ್ಚು ಪ್ರಸ್ತುತವಾಗಿದೆ.  'ಹಾಡು ಹಕ್ಕಿ' ಎನ್ನುವ ಇಲ್ಲಿಯ ಉಲ್ಲೇಖ ಅದಕ್ಕೆ ಕಾರಣವಾಗಿದೆ.  ಅನೇಕ ಸುಗಮ ಸಂಗೀತ ಕಾರ್ಯಕ್ರಮಗಳಲ್ಲಿ ಈ ಭಾವಗೀತೆಯನ್ನು ಕೊನೆಯಲ್ಲಿ ಪ್ರಸ್ತುತಪಡಿಸುವ ಸಂಪ್ರದಾಯವನ್ನು ಕಲಾವಿದರು ರೂಢಿಮಾಡಿಕೊಂಡಿದ್ದಾರೆ. 

ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿ 'ಕಂಡ ಕಂಡ ಹೆಣ್ಣ ಮೊಗದಿ ತಾಯಿಯನ್ನು ಅರಸುತ್ತ' ಕೊನೆಗೆ 'ಜಡೆಯಾಚೆ ತಿರುಗಿಸಿದ ತಾಯ ಮುಖ ಕಾಣದಲ್ಲ' ಎಂದು ಪರಿತಪಿಸಿದ ಯುವಕ ಜಿಎಸ್ಸೆಸ್ ಅವರಿಗೆ ತಾಯ್ತನದ, ಮಾತೃವಾತ್ಸಲ್ಯದ ಇನ್ನೊಂದು ಸ್ವರೂಪ ಕಂಡದ್ದು ಅವರ ಗುರುಗಳಾದ ತ ಸು ಶ್ಯಾಮರಾಯರಲ್ಲಿ! ಜಿಎಸ್ಸೆಸ್ ಅನೇಕ ಕಡೆ ಹೇಳಿರುವ ಹಾಗೆ ಅವರ ಕಾವ್ಯ ಪರಿಶ್ರಮಕ್ಕೆ "ಕುವೆಂಪು ಗಾಳಿ ಬೆಳಕಾಗಿದ್ದರೆ ಶ್ಯಾಮರಾಯರು ನೆಲ ಮತ್ತು ನೀರು".

ಮುಂದಕ್ಕೆ ಶ್ಯಾಮರಾಯರು ಬರೆದ 'ಮೂರು ತಲೆಮಾರು' ಎಂಬ ಕೃತಿಯ ಮರುಮುದ್ರಣಕ್ಕೆ ಮುನ್ನುಡಿ ಬರೆದವರು ಜಿಎಸ್ಸೆಸ್! ಇಷ್ಟು ಹೊತ್ತಿಗೆ ಖ್ಯಾತ ಕವಿಯಾಗಿ, ಪ್ರೌಢ ವಿದ್ವಾಂಸರಾಗಿ, ಪ್ರಾಧ್ಯಾಪಕರಾಗಿದ್ದ ಜಿಎಸ್ಸೆಸ್ ಅವರು ಈ ಕೃತಿಯ ಮುನ್ನುಡಿಯಲ್ಲಿ ಹೀಗೆ ಬರೆಯುತ್ತಾರೆ; "ಶ್ರೀ ತ ಸು ಶ್ಯಾಮರಾಯರು ನನ್ನ ಪಾಲಿಗೆ ಕೇವಲ ಅಧ್ಯಾಪಕರಲ್ಲ; ನನ್ನ ಹಾಗು ನನ್ನಂಥ ಅನೇಕರ ವ್ಯಕ್ತಿತ್ವಕ್ಕೆ ನೀರೆರೆದು ಬೆಳಸಿದ ವಾತ್ಸಲ್ಯದ ಪ್ರತಿಮಾಸ್ವರೂಪರು"

ಶ್ಯಾಮರಾಯರು ಮತ್ತು ಜಿಎಸ್ಸೆಸ್ ನೆನಪಿನಲ್ಲಿ ಉಳಿಯುವ ಆದರ್ಶ ಗುರು-ಶಿಷ್ಯರು. ಅವರ ಬದುಕು ನಮಗೆ ಆದರ್ಶವಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಜಿಎಸ್ಸೆಸ್ ಶತಮಾನೋತ್ಸವ (7ನೆ ಫೆಬ್ರುವರಿ, 2026) ಇರುವುದರ ಹಿನ್ನೆಲೆಯಲ್ಲಿ ನಾನು ಮೇಲಿನ ವಿಚಾರಗಳನ್ನು ದಾಖಲಿಸಿದ್ದೇನೆ. ಜಿಎಸ್ಸೆಸ್ ಅವರ ಮಗನಾಗಿ ನಾನು ಈ ಬರಹವನ್ನು ಲೇಖನಿಯಿಂದ ಪುಟಗಳಲ್ಲಿ ಮೂಡಿಸುತ್ತಿರುವಾಗ ಅಪ್ಪನ ಬಗ್ಗೆ ಮಗನೇ ಬರೆಯುವುದು ಎಷ್ಟು ಸಮಂಜಸ ಎಂಬ ಭಾವನೆ ಮೂಡಿ ಬಂತು. ಅಲ್ಲಿ ಮುಜುಗರ ಉಂಟಾದರೂ ನನ್ನ ಒಳ ಮನಸ್ಸು, ನಾನು ಅವರ ಮಗನಾಗಿರುವುದು ನನ್ನ ಹುಟ್ಟಿನ ಆಕಸ್ಮಿಕವೆಂದೂ, ಅದಕ್ಕಿಂತ ಹೆಚ್ಚಾಗಿ ನಾನು ಅವರ ಅಭಿಮಾನಿಯೆಂದೂ, ಸಾಹಿತ್ಯಸಕ್ತನೆಂದೂ ಅವರ ಬರಹದಿಂದ ಪ್ರಭಾವಿತನಾದ ಒಬ್ಬ ಸಾಮಾನ್ಯನೆಂದೂ ಸಮರ್ಥನೆ ನೀಡಿತು. ನನ್ನ ಬಾಂಧವ್ಯದ ಚೌಕಟ್ಟಿನ ಹೊರಗೆ ನಿಂತು ಜಿಎಸ್ಸೆಸ್ ಅಭಿಮಾನಿಯಾಗಿ ಅವರ ಶತಮಾನೋತ್ಸವ ಸಂದರ್ಭದಲ್ಲಿ ಅವರ ಬದುಕಿನ ಕೆಲವು ವೈಯುಕ್ತಿಕ ವಿಚಾರಗಳನ್ನು, ಅದಕ್ಕೆ ಸಂಬಂಧಪಟ್ಟ ಕೆಲವು ಕವಿತೆಗಳನ್ನು ಇಲ್ಲಿ ಹಂಚಿಕೊಂಡಿದ್ದೇನೆ. ಈ ರೀತಿಯ ಒಳನೋಟಗಳು ಪರಿವಾರದವರಿಂದ ಬಂದಾಗ ಅದು ಮೌಲಿಕವಾಗಿರುತ್ತದೆ ಎಂಬ ವಿಚಾರ ಕೂಡ ಈ ಬರವಣಿಗೆಗೆ ಪ್ರೇರಣೆ ನೀಡಿದೆ.

***
ಗಮನಿಸಿ:
ಜಡೆ ಕವನದ ಪೂರ್ಣ ಆವೃತ್ತಿ ಮತ್ತು ಅದನ್ನು ವಾಚನ ಮಾಡಿರುವ ಅನಿವಾಸಿ ಬಳಗದ ಅಮಿತಾ ರವಿಕಿರಣ್ ಅವರ ವೀಡಿಯೊ ಲಿಂಕ್ ಕೆಳಗಿದೆ, ಅದನ್ನು ಒತ್ತಿ ಕೇಳಬಹುದು. ವೀಡಿಯೊ ಸಹಕಾರಕ್ಕಾಗಿ ಅಮಿತಾ ಮತ್ತು ಡಾ ದೇಸಾಯಿಯವರಿಗೆ ಕೃತಜ್ಞತೆಗಳು. ಅದನ್ನು ಪ್ರಕಟಿಸಿದ ಡಾ ಗುಡೂರ್ ಅವರಿಗೂ ಧನ್ಯವಾದಗಳು.
ಈ ಬರಹಕ್ಕೆ ಒಪ್ಪುವಂತಹ ರೇಖಾ ಚಿತ್ರವನ್ನು ಬರೆದು ಕೊಟ್ಟ ಡಾ ಲಕ್ಷ್ಮೀನಾರಾಯಣ ಗುಡೂರ್ ಅವರಿಗೆ ಕೃತಜ್ಞತೆಗಳು.
ಉಲ್ಲೇಖನಕ್ಕೆ ಬಳಸಿಕೊಂಡ ಕೃತಿಗಳು; ಜಿ ಎಸ್ ಎಸ್ ಅವರ 'ಚತುರಂಗ' (ಅಸಮಗ್ರ ಆತ್ಮಕಥನ) ಮತ್ತು ಸಮಗ್ರಕಾವ್ಯ.

*****************************************************************