ನನ್ನೂರು ಧಾರವಾಡ – ಡಾ. ಅರವಿಂದ ಕುಲಕರ್ಣಿ ಬರೆದ ಲೇಖನ

ಕನ್ನಡ ಬಳಗ ಯು ಕೆ ದ ಸಂಸ್ಥಾಪಕ ಸದಸ್ಯರಾದ ಅರವಿಂದ ಕುಲಕರ್ಣಿಯವರ ಪರಿಚಯವಿಲ್ಲದವರು ಕಡಿಮೆ. ಬಳಗದ ಬೆನ್ನೆಲುಬಾಗಿ ನಿಂತು,  ದುಡಿದು ಅ೦ದಿನಿ೦ದ  ಇಂದಿನ ವರೆಗೆ ಅಖಂಡ ಸೇವೆ ಸಲ್ಲಿಸಿದ್ದಾರೆ. ಅವರಿಗೆ KBಯಷ್ಟೇ ಅಚ್ಚು ಮೆಚ್ಚು ತಮ್ಮ ಊರು. ಅವರು  ಬರೆಯುತ್ತಾರೆ …Aravind

Dharwad1ನನ್ನೂರು ಧಾರವಾಡ. ನಾನು ಹುಟ್ಟಿದ ಊರು, ನನ್ನ ನೆಚ್ಚಿನ ಊರು. 1930ರ ವರ್ಷದ ಕೊನೆಯಲ್ಲಿ ಹುಟ್ಟಿ, ಬೆಳೆದು, ಕಲಿತು,ಆಟ, ಚೆಲ್ಲಾಟ, ಸ್ನೇಹಿತರ ಕೂಡಿ ಮಂಗತನದ ಹುಡುಗಾಟಗಳಲ್ಲಿ ಆನಂದಪಟ್ಟದ್ದು ಇದೇ ಊರಲ್ಲಿ. ಕಳೆದ 46 ವರ್ಷಗಳಿಂದ ಆಂಗ್ಲನಾಡಿನಲ್ಲಿ ಸ್ಥಾಯಿಕವಾಗಿ ನೆಲಸಿದ್ದರೂ ಕೂಡಾ, ಪಂಪನಂದಂತೆ “ಆರಂಕುಸಮಿಟ್ಟೊಡೇಮ್ ನೆನವುದೆನ್ನ ಮನಂ ಬನವಾಸಿ ದೇಶಮಂ”, ಎನ್ನುವ ತೆರದಿ ನನ್ನ ಮನಸ್ಸು ಈಗಲೂ ಧಾರವಾಡಕ್ಕೆ ಮರಳಲು ಇಚ್ಛಿಸುತ್ತದೆ.

ಐತಿಹಾಸಿಕ ಹಿನ್ನೆಲೆ:

Dharwad Fort
ಧಾರವಾಡದ ‘ಕಿಲ್ಲೆ’

ಧಾರವಾಡ ಎಂಬ ಹೆಸರು ಬರಲು ಹಲವಾರು ಕಾರಣಗಳಿವೆ. ದ್ವಾರ-ವಾಟ, ಅಂದರೆ ಬಯಲುಸೀಮೆಯಿಂದ ಮಲೆನಾಡಿನ ಬಾಗಿಲಿಗೆ (ದ್ವಾರ) ನಿಂತ ಊರು (ವಾಡ,ವಾಟ) ಎನ್ನುವುದು ಕೆಲವರ ಅಭಿಮತ. ಇತಿಹಾಸಕಾರರು 1403ರಲ್ಲಿ, ವಿಜಯನಗರದ ಸಾಮ್ರಾಜ್ಯದ ‘ಧಾರವ’ ಎಂಬ ಅರಸ ಧಾರವಾಡವನ್ನು ಆಳಿದ್ದರ ಉಲ್ಲೇಖವಿದೆ ಎನ್ನುತ್ತಾರೆ. ಅವನಿಂದಲೇ ಆ ಊರಿಗೆ ಆ ಹೆಸರು ಬಂತಂತೆ. ಆ ವರ್ಷದಲ್ಲೇ ಧಾರವಾಡದ ಕೋಟೆ (ಕಿಲ್ಲೆ) ನಿರ್ಮಾಣವಾಯಿತು. ನಂತರ ಅದು 1573ರಲ್ಲಿ, ವಿಜಾಪುರದ ಆದಿಲ್ ಷಾಹಾನ ಕೈವಶವಾಯಿತು. ಅದಾದ ನಂತರ ಧಾರವಾಡವು ಔರಂಗಜೇಬ, ಶಿವಾಜಿ, ಪೇಶ್ವೆ ಬಾಳಾಜಿರಾವ್, ಹೈದರಾಲಿ, ಟಿಪ್ಪು ನಂತರ ಬ್ರಿಟಿಷ್ ಸಾಮ್ರಾಜ್ಯ ಹೀಗೆ ಹಲವು ಹತ್ತು ಜನರ ಅಧಿಕಾರಕ್ಕೆ ಒಳಪಟ್ಟಿತು. ಬ್ರಿಟಿಷರ ವಿರುದ್ಧ ಹೋರಾಡಿದ ಉತ್ತರಕನ್ನಡ ಸ್ವಾತಂತ್ರ್ಯಯೋಧರಲ್ಲಿ, ನರಗುಂದದ ಬಾಬಾಸಾಹೇಬ ಮತ್ತು ಕಿತ್ತೂರ ರಾಣಿ ಚೆನ್ನಮ್ಮ ಅಗ್ರಗಣ್ಯರು. 1956ರಲ್ಲಿ, ಭಾರತ ಸ್ವತಂತ್ರವಾದ ಬಳಿಕ ನಡೆದ ಭಾಷಾವಾರು ಪ್ರಾಂತಗಳ ರಚನೆಯ ಸಮಯದಲ್ಲಿ, ಧಾರವಾಡ ಮುಂಬಯಿ ಪ್ರೆಸಿಡೆನ್ಸಿಯಿಂದ ಬೇರ್ಪಟ್ಟು, ಕರ್ನಾಟಕ ರಾಜ್ಯಕ್ಕೆ ಸೇರಿತು.Read More »