ಜಲಾಲ್ ಅಲ್-ದೀನ್ ಮುಹಮ್ಮದ್ ಬಲಖೀ ೧೩ ನೇ ಶತಮಾನದ ಸೂಫಿ ಸಂತ, ಕವಿ ಹಾಗೂ ಧರ್ಮಶಾಸ್ತ್ರಜ್ಞ . ರೂಮೀ ಎಂದೇ ಆತ ಚಿರಪರಿಚಿತ . ಇಂದಿನ ಅಫ್ಘಾನಿಸ್ಥಾನದ ಬಲ್ಖ್ ಎಂಬಲ್ಲಿ ಜನಿಸಿದ ರೂಮೀ, ಉಜ್ಹ್ಬೇಕಿಸ್ಥಾನದ ಸಮರ್ ಖಂಡದಲ್ಲಿ ಬೆಳೆಯುತ್ತಾನೆ . ತನ್ನ ತಂದೆಯಿಂದ ಧರ್ಮಶಾಸ್ತ್ರವನ್ನು ಅಭ್ಯಾಸ ಮಾಡುವಾಗ, ಮಂಗೋಲರ ದಾಳಿಯಿಂದ ತಪ್ಪಿಸಿಕೊಳ್ಳಲು ಪರಿವಾರದ ಸಮೇತ ಪರ್ಷಿಯಾಕ್ಕೆ ಬರುತ್ತಾನೆ . ಅಲ್ಲಿ ಅತ್ತರ್ ಹಾಗೂ ಶಮ್ಸ್ ತಬ್ರಿಝಿ ಎಂಬ ಫ಼ಾರ್ಸಿ ಭಾಷೆಯ ಕವಿಗಳಿಂದ ಪ್ರೇರೇಪಿತನಾದ ಎಂಬ ಹೇಳಿಕೆಯಿದೆ . ರೂಮೀ ತನ್ನ ಫ಼ಾರ್ಸಿ ಕವಿತೆಗಳಿಂದಲೇ ಹೆಸರುವಾಸಿ . ಸೂಫಿ ಪಂಥವು ಕಾವ್ಯ , ಸಂಗೀತ , ನೃತ್ಯ , ಪ್ರಯಾಣಗಳನ್ನು ದೈವತ್ವಕ್ಕೆ ಹಾದಿ ಎಂದು ನಂಬುತ್ತದೆ . ಇವನ್ನು ರೂಮೀಯ ಕವನಗಳಲ್ಲಿ ಕಾಣಬಹುದು . ಆತನ ಕವನಗಳಲ್ಲಿ ಜೀವನದಲ್ಲಿ ಎದುರಾಗುವ ಸವಾಲು, ಭಯಗಳನ್ನು ಎದುರಿಸುವ ವಿವರಗಳಿವೆ. ದುರ್ಬಲತೆಯಲ್ಲಿ ಬಲವನ್ನು ಕಾಣುವುದನ್ನು , ಪ್ರತಿಕೂಲ ಪರಿಸ್ಥಿತಿಯಲ್ಲಿ ವಿಕಸಿಸುವುದನ್ನು ಅನ್ವೇಷಿಸುವುದು ರೂಮೀಯ ವಿಶೇಷತೆ . ಆದ್ದರಿಂದಲೇ ಇಂದಿಗೂ ಆತ ಪ್ರಸ್ತುತನಾಗುತ್ತಾನೆ . ಈ ವಾರದ ಸಂಚಿಕೆಗೆ ರಾಧಿಕಾ ಜೋಷಿಯವರು ರೂಮೀಯ ಕವನದ ಭಾಷಾಂತರ ಮಾಡಿದ್ದಾರೆ . ಇದರಿಂದ ಪ್ರೇರೇಪಿತನಾಗಿ ಸಂಪಾದಕನೂ ಒಂದು ಚಿಕ್ಕ ಕವನದ ಭಾಷಾಂತರದ ಪ್ರಯತ್ನ ಮಾಡಿದ್ದಾನೆ . ಇವೆರಡನ್ನೂ ನಿಮ್ಮೆದುರಿಗೆ ಇಡುತ್ತಿದ್ದೇನೆ (ಎರಡೂ ಕವನಗಳ ಮೂಲ ಇಂಗ್ಲೀಷ್ ಕವನಗಳನ್ನೂ ಲಗತ್ತಿಸಲಾಗಿದೆ). ಕಳೆದ ವಾರ ಹನೀಫ್ ಅವರು ಆಧ್ಯಾತ್ಮಿಕ ಮೆರುಗಿನ ಕವನಗಳನ್ನು ಪ್ರಕಟಿಸಿದ್ದರು . ಓದುಗರು ಇವು ಸೂಫಿ ತತ್ವದಿಂದ ಸ್ಫೂರ್ತಿ ಪಡೆದಿರಬಹುದೇ ಎಂದು ಉದ್ಗರಿಸಿದ್ದನ್ನು ನೆನೆಯಬಹುದು. ಇಂದಿನ ಕವನಗಳು ಸೂಫಿ ಸಂತನ ಕಲಮಿನಿಂದಲೇ ಹೊಮ್ಮಿವೆ; ಮೂಲ ಕವನಕ್ಕೆ ನ್ಯಾಯ ಒದಗಿಸಿವೆಯೇ ಎಂಬುದು ಓದುಗರ ಜಿಜ್ಞಾಸೆಗೆ .
ಅನಿವಾಸಿಯ ದಶಮಾನೋತ್ಸವದಲ್ಲಿ ಬರಹಗಳು ಧ್ವನಿ ಮಾಧ್ಯಮದಲ್ಲೂ ಬಿಡುಗಡೆ ಮಾಡಿದರೆ , ಕೇಳುತ್ತ ಆನಂದಿಸಬಹುದು ; ಪ್ರಯಾಣ ಮಾಡುವಾಗಲೋ, ವಾಕಿಂಗ್ ಹೋಗುವಾಗಲೋ, ದೈನಂದಿನ ಕೆಲಸದ ಸಮಯದಲ್ಲೋ ಕೇಳಬಹುದು ಎಂಬ ಸಲಹೆ ಬಂದಿತ್ತು . ಆ ಸಲಹೆಯನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ಇಂದಿನ ಸಂಚಿಕೆಯಲ್ಲಿ ಮಾಡಲಾಗಿದೆ. (ಪೋಡ್ಕಾಸ್ಟ್ ಕೇಳಲು ಕೆಳಗಿನ ಸೌಂಡ್ ಕ್ಲಾವುಡ್ ಕೊಂಡಿ ನೋಡಿರಿ). ಅನಿವಾಸಿಯ ಕೋಗಿಲೆ ಅಮಿತಾ ರವಿಕಿರಣ್ ಉತ್ಸಾಹದಿಂದ ಕವನಗಳನ್ನು ಓದಿದ್ದಾರೆ. ರೆಸಿಡೆಂಟ್ ಚಿತ್ರಕಾರ ಗುಡೂರ್ ತಮ್ಮ ಕುಂಚದ ಚಮತ್ಕಾರದಿಂದ ಸಂಚಿಕೆಯ ಅಂದ ಹೆಚ್ಚಿಸಿದ್ದಾರೆ . ಅವರಿಬ್ಬರಿಗೂ ಸಂಪಾದಕನ ಕೃತಜ್ಞತೆಗಳು .
**********************************************

ಆಡಿಯೋ ಕೇಳಲು Listen in browser ಮೇಲೆ ಒತ್ತಿರಿ ⬆️⬆️
ಅರಳುವ ಗುಲಾಬಿ ದಳಗಳು
'ದೇವರು ಸೃಷ್ಟಿಸಿದ ಸುಂದರ ಸೂಕ್ಷ್ಮ ಈ ಮುಗ್ಧ ಗುಲಾಬಿಯ ಮೊಗ್ಗು
ಈ ಮೊಗ್ಗಿನ ದಳವನ್ನು ಈ ನನ್ನ ನಯವಿಲ್ಲದ ಕೈಗಳಿಂದ ಹೇಗೆ ಅರಳಿಸಲಿ
ನನ್ನಂತಹ ಅನರ್ಹನಿಗೆ ತಿಳಿಯದ ಈ ರಹಸ್ಯ
ದೇವ ಎಷ್ಟು ಮೃದುವಾಗಿ ನಾಜೂಕಾಗಿ ಅರಳಿಸಿದ
ಈ ಇನಿದಾದ ಹೂ, ನನ್ನ ಕರದಲ್ಲಿ ಬಾಡಿಹೋಗುತ್ತದೆ
ಆ ಭಗವಂತನು ಕಲ್ಪಿಸಿದ ಗುಲಾಬಿಯ ಮೊಗ್ಗನ್ನು
ನನ್ನಿಂದ ಅರಳಿಸಲಾಗಲಿಲ್ಲ
ಈ ನನ್ನ ಜೀವನವನ್ನು ವಿಕಸಿತ ಗೊಳಿಸಲು
ನನ್ನಲಿ ಯಾವ ವಿವೇಕವು ಇದೆ?
ಅವನ ಮೇಲೆ ಭರವಸೆ ಇರಿಸಿ ಅವನನ್ನೇ ಅರಿಸಿ
ದಿನದ ಪ್ರತಿ ಕ್ಷಣವೂ ನಾನು ಅವನ ಮೊರೆ ಹೋಗುವೆ
ಅವನ ದರ್ಶನದ ಹಾದಿಯಲಿ ಈ ಯಾತ್ರಿಕನು
ಅವನ ಮಾರ್ಗದರ್ಶನದಿಂದ ಪ್ರತಿ ಹೆಜ್ಜೆ ಇಡುವೆ
ಆ ದಿವ್ಯ ತೇಜಸ್ವಿಯೇ ಬಲ್ಲ! ನನ್ನ ಮುಂದಿರುವ ಹಾದಿ
ಸಾಗುತ್ತಿರುವೆ ನಾನು ಅವನನ್ನೇ ನಂಬಿ
ಆ ಮುಗ್ಧ ಗುಲಾಬಿಯ ಪ್ರತಿಯೊಂದು ಪಕಳೆಯನ್ನು ಅರಳಿಸುವಂತೆ
ನನ್ನ ಜೀವನದ ಪ್ರತಿಯೊಂದು ಕ್ಷಣವನ್ನು ಪದರುಪದರಾಗಿ ಮುಂದಿಡುತ್ತಾನೆ
ಎನ್ನುವ ಭರವಸೆ ನನ್ನಲಿದೆ
- ರಾಧಿಕಾ ಜೋಷಿ
UNFOLDING THE ROSE 🌷
It is only a tiny rosebud,
A flower of God's design;
But I cannot unfold the petals
With these clumsy hands of mine.
The secret of unfolding flowers
Is not known to such as I.
GOD opens this flower so sweetly,
When in my hands they fade and die. 🥀
If I cannot unfold a rosebud,
This flower of God's design,
Then how can I think I have wisdom
To unfold this life of mine?
So I'll trust in Him for His leading
Each moment of every day.
I will look to Him for His guidance
Each step of the pilgrim way.
The pathway that lies before me,
Only my Heavenly Father knows.
I'll trust Him to unfold the moments,
Just as He unfolds the rose.
******************************************

ವಿವಾಹ
ಸಪ್ತಪದಿಗೆ ಎಲ್ಲರ ಹಾರೈಕೆ ಇರಲಿ
ಬೆಲ್ಲ ಕಲೆತ ಹಾಲಾಗಲಿ
ಮಧುವಾಗಲಿ, ಮೈಸೂರುಪಾಕಿನಂತಿರಲಿ
ಫಲವನ್ನೂ, ನೆರಳನ್ನೂ ನೀಡಲಿ
ಮಾವಿನ ಮರದಂತೆ
ನಗುವಿನಲಿ ತೇಲಾಡಲಿ
ಪ್ರತಿ ಕ್ಷಣ ಸ್ವರ್ಗಕ್ಕೆ ಕಿಚ್ಚಾಗಲಿ
ಸಹಾನುಭೂತಿಯ ಸಂಕೇತವಾಗಲಿ
ಎಂದಿಗೂ, ಎಂದೆಂದಿಗೂ ಆನಂದ ತುಳುಕಲಿ
ನ್ಯಾಯವಿರಲಿ, ಹೆಸರಾಗಲಿ
ಚಂದಿರನ ಬರಮಾಡುವ ಶುಭ್ರ ನೀಲಾಕಾಶವಾಗಲಿ
ಭಗವಂತನ ಸತ್ವ ಇಳಿವಂದವ
ಬಣ್ಣಿಸಲು ಮಾತೇ ಮರೆವಂತಾಗಲಿ
- ರಾಂ.
This Marriage
May these vows and this marriage be blessed.
May it be sweet milk,
this marriage, like wine and halvah.
May this marriage offer fruit and shade
like the date palm.
May this marriage be full of laughter,
our every day a day in paradise.
May this marriage be a sign of compassion,
a seal of happiness here and hereafter.
May this marriage have a fair face and a good name,
an omen as welcomes the moon in a clear blue sky.
I am out of words to describe
how spirit mingles in this marriage.
********************************************



