ನೆನಪುಗಳ ಶ್ರಾವಣ 

ಎಲ್ಲರಿಗೂ ಆತ್ಮೀಯ ನಮಸ್ಕಾರ,
ಈ ವಾರದ ಅನಿವಾಸಿ ಸಂಚಿಕೆಯಲ್ಲಿ ಎರಡು ಪುಟ್ಟ ಬರಹಗಳಿವೆ. ಒಂದು ಶ್ರಾವಣ ಮಾಸದಲ್ಲಿ ಸಾರಸ್ವತ ಸಮುದಾಯದಲ್ಲಿ ಆಚರಿಸಲಾಗುವ ಚೂಡಿ ಪೂಜೆಯ ಕಿರು ಪರಿಚಯ ಮತ್ತು ಅನಿವಾಸಿ ಬ್ಲಾಗ್ ನಲ್ಲಿ ಇದೇ ಮೊದಲ ಸಲ ಬರೆಯುತ್ತಿರುವ ಶ್ರೀಮತಿ ರೇಖಾ ಪಾಟೀಲ್ ಅವರು, ನಮ್ಮನ್ನು ತಮ್ಮ ಅಜ್ಜನ ಮನೆಯ ನೆನಪುಗಳ ಜಾತ್ರೆಗೆ ಪದಗಳ ತೇರಿನಲ್ಲಿ ಕರೆದೊಯ್ಯಲಿದ್ದಾರೆ.
ಓದಿ ತಮ್ಮ ಅನಿಸಿಕೆಯನ್ನು ತಿಳಿಸುವುದನ್ನು ಮರೆಯಬೇಡಿ
ಪ್ರೀತಿಯಿಂದ
ಅಮಿತಾ ರವಿಕಿರಣ್ .
 ಚೂಡಿ-ಶ್ರಾವಣದ ವಿಶಿಷ್ಟ ಆಚರಣೆ.   
ಮೊನ್ನೆ ಮೊನ್ನೆಯಷ್ಟೇ ಯುಗಾದಿ ಆದಂತಿದೆ, ಅದೋ ಆಗಲೇ ಶ್ರಾವಣ ಬಂದು ಸಾಲು ಸಾಲು ಹಬ್ಬಗಳನ್ನು ತನ್ನೊಟ್ಟಿಗೆ ಕರೆದು ತಂದಿದೆ. ಭಾರತದಲ್ಲಿ ಮಳೆಗಾಲವೆಂಬ ಈ ಚೈತನ್ಯಪೂರ್ಣ ಕಾಲದಲ್ಲಿ ಹೊಲದಲ್ಲಿ ಗದ್ದೆ ತೋಟದಲ್ಲಿ ಮನೆಗಳಲ್ಲಿ ಮನಗಳಲ್ಲಿ ಎಲ್ಲೆಡೆ ಒಂದು ಬಗೆಯ ಸಂಭ್ರಮ. ಜಿರಾಪತಿ ಮಳೆಯಲ್ಲೂ ತಮ್ಮ ಜರಿಸೀರೆಯನ್ನುಟ್ಟು ಮನೆ ಮನೆಗೆ ಅರಿಶಿನ ಕುಂಕುಮಕ್ಕೆ ಹೋಗುವ ಆ ನೋಟವೇ ಚಂದ. ಜೊತೆಗೆ ನಾಗರ ಪಂಚಮಿ,ರಾಖಿ,ನೂಲು ಹುಣ್ಣಿಮೆ, ಕೃಷ್ಣಾಷ್ಟಮಿ, ವರಮಹಾಲಕ್ಷ್ಮಿ ಸಾಲು ಸಾಲು ಸಂಭ್ರಮಗಳ ಮಾಸ ಈ ಶ್ರಾವಣ. ಈ ಶ್ರಾವಣಮಾಸದಲ್ಲಿ ಬರುವ ಇನ್ನೊಂದು ವಿಶಿಷ್ಟ ಹಬ್ಬ, ಕೇವಲ ಸಾರಸ್ವತ ಸಮುದಾಯದವರು ಪಾಲಿಸಿಕೊಂಡು ಬಂದಿರುವ ಆಚರಣೆಯೇ ಚೂಡಿ ಪೂಜೆ.

ಸರಸ್ವತಿ ನದಿತೀರದಿಂದ ವಲಸೆ ಬಂದು ಮಹಾರಾಷ್ಟ್ರದ ರತ್ನಾಗಿರಿಯಿಂದ ಕೇರಳದ ತುದಿಯವರೆಗಿನ ಕೊಂಕಣ ಪಟ್ಟಿಯಗುಂಟ ಹೆಚ್ಹಾಗಿ ನೆಲೆಸಿರುವ ಸಾರಸ್ವತರು ಎದುರು ನೋಡುವುದು ಶ್ರಾವಣದ ಚೂಡಿ ಪೂಜೆಯನ್ನ. ಶ್ರಾವಣದ ಪ್ರತಿ ಶುಕ್ರವಾರ ಮತ್ತು ವಿಶೇಷವಾಗಿ ಭಾನುವಾರಗಳಂದು ಈ ಪೂಜೆ ತುಳಸಿಯ ಮುಂದೆ ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುತ್ತದೆ.

ಬರಿಯ ಪೂಜೆ ಅಂದ್ರೆ ಅದರಲ್ಲೇನು ವಿಶೇಷ ಅಂದ್ರಾ? ಆ ಪೂಜೆಯಲ್ಲಿ ಬಳಸುವ ವಸ್ತುಗಳು ಈ ಆಚರಣೆಯನ್ನು ವಿಶೇಷವಾಗಿಸುತ್ತವೆ. ಮಳೆಗಾಲದಲ್ಲಿ ಭೂಮಾತೆ ಹಸಿರುಟ್ಟು ನಗುವಾಗ ಅವಳಲ್ಲಿ ದೊರೆಯುವ ಅಪರೂಪದ ಹದಿನಾರು ಬಗೆಯ ಎಲೆಗಳು, ಜೊತೆಗೆ ಸೇವಂತಿಗೆ, ಗರಿಕೆ ,ಹೊಲದ ಬದುವಿನಲ್ಲಿ ಸಿಗುವ ನೆಲನೆಲ್ಲಿ,ಲಾಯಾ ಮಡ್ಡಿ,ರತ್ನಗಂಧಿ,ವಿಷ್ಣುಕಾಂತಿ ,ಸುಗಂಧಿ,ಕಾಗಿ ಕಾಲು ಗುಬ್ಬಿ ಕಾಲು ,ಹುಲಿ ಉಗುರು.ಬೆಕ್ಕಿನ ಕಾಲು,ಮಿಟಾಯಿ ಹೂ ,ಗೌರಿ ಮುತ್ತು,ಗೌರಿ ಹೂವು,ರಥದ ಹೂ ಎಂಬ ವಿಚಿತ್ರ ಜನಪದ ಹೆಸರಿನ ಸಸ್ಯಗಳನ್ನು ತಂದು ಕೂಡಿಸಿ ಗುಚ್ಛ ಕಟ್ಟಿದರೆ ಚೂಡಿ ಸಿದ್ಧ. ಚೂಡಿ ಎಂಬುದು ಕಲಾತ್ಮಕತೆಯ ಕನ್ನಡಿಯೂ ಹೌದು. ಲಭ್ಯ ಇರುವ ಸಸ್ಯಗಳನ್ನು ಹೂ ಎಲೆಗಳನ್ನು ಬಣ್ಣದ ಹೊಂದಾಣಿಕೆ ಮತ್ತು ಆಕಾರ ಗಾತ್ರ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಕಟ್ಟ ಬೇಕಾಗುತ್ತದೆ. ಚೂಡಿಯನ್ನು ಕಟ್ಟುವಾಗ ಬಾಳೇನಾರನ್ನು ನೆನೆಸಿ ಅದರಿಂದ ದಾರದ ಎಳೆಗಳನ್ನು ತೆಗೆದು ಅದರಿಂದಲೇ ಕಟ್ಟಲಾಗುತ್ತದೆ.ಇತ್ತೀಚಿಗೆ ಸಾರಸ್ವತ ಸಮಾಜ ಮಂದಿರಗಳಲ್ಲಿ ದೇವಳಗಳಲ್ಲಿ ಚೂಡಿ ಸ್ಪರ್ಧೆ ಏರ್ಪಡಿಸುವುದೂ ಉಂಟು.

ಆಚರಣೆ -ವಿಧಿ ವಿಧಾನ
ಪ್ರತ್ಯೇಕ ಚೂಡಿಯನ್ನು ವೀಳ್ಯದೆಲೆಯೊಂದಿಗೆ ತುಳಸಿ ಮುಂದೆ ಇಟ್ಟು, ದೀಪ ಹಚ್ಹಿ ಹಣ್ಣು ಕಾಯಿ ಸಮರ್ಪಿಸಿ ತುಳಸಿಗೆ ಪ್ರದಕ್ಷಿಣೆ ಹಾಕಲಾಗುತ್ತದೆ. ಜೊತೆಗೆ ಮತ್ತೊಂದು ವಿಶೇಷ ಎಂದರೆ ಇಲ್ಲಿ ಪೂಜೆಗೆ ಅರಿಶಿನ ಕುಂಕುಮ ದೊಂದಿಗೆ ''ರುವಣ'' ಎಂದು ಕರೆಯಲಾಗುವ ಸುಣ್ಣ ಮತ್ತು ಗಂಧ ಅರಿಶಿನದ ಮಿಶ್ರಣವನ್ನು ಬಳಸುವುದು. ಆಗತಾನೇ ಚಿಗುರೊಡೆದು ನಿಂತಿರುವ ಅರಿಸಿನದ ಎಲೆ ತಂದು ಅದರ ಮೇಲೆ ಅಕ್ಕಿಯನ್ನು ಹರಡಿ. ಅದರ ಮೇಲೆ ಅಡಿಕೆ ಬೆಟ್ಟವನ್ನು ಇಟ್ಟು ಅದರ ಎದುರಿಗೆ ೫,೭.೧೧.೨೧.ಹೀಗೆ ಚೂಡಿಯನ್ನಿಟ್ಟು ಪೂಜಿಸಿ ೧೬.೩೨ ರಂತೆ ಗರಿಕೆಯನ್ನು ಕಟ್ಟಿ ಸೆರಗಿನ ತುದಿಯಿಂದ ಅದನ್ನು ಹಿಡಿದು ಸೂರ್ಯನಿಗೆ ಅರ್ಘ್ಯ ನೀಡುತ್ತಾರೆ. ನಂತರ ಬಾವಿ ಕಟ್ಟೆಗೆ ಮನೆಯ ಸೂರಿಗೆ, ತೆಂಗಿನ ಮರಕ್ಕೆ, ಮನೇ ಹೊಸಿಲಿಗೆ ವಿಳ್ಯದೊಂದಿಗೆ ಇವನ್ನು ಇಟ್ಟು ಪೂಜಿಸುತ್ತಾರೆ. ಸೌಭಾಗ್ಯ ಸಮೃದ್ಧಿ ವೃದ್ಧಿಸುವಂತೆ ಹೆಂಗಳೆಯರು ಪ್ರಾರ್ಥಿಸುತ್ತಾರೆ. ಭತ್ತದ ಅರಳು ಮತ್ತು ಬೆಲ್ಲವನ್ನ ನೇವೇದ್ಯ ಮಾಡಿ ಹೊಸಿಲ ಮೇಲೆ ಚೂಡಿಯನ್ನು ಇಟ್ಟು ಆರತಿ ಮಾಡುತ್ತಾರೆ..
ಕೆಲವೊಂದು ಮನೆಯ ಸಂಪ್ರದಾಯದಲ್ಲಿ, ಪೂಜೆಯನ್ನು ದೇವರ ಮುಂದೆ ಮಾಡಿ ಸಂಜೆ ಸಮಯದಲ್ಲಿ ತುಳಸಿಯ ಮುಂದೆ ಚೂಡಿ ಯನ್ನುವಿಸರ್ಜಿಸಲಾಗುತ್ತದೆ. ಘಟ್ಟದ ಕೆಳಗೆ ಮತ್ತು ಘಟ್ಟದ ಮೇಲಿನ ಆಚರಣೆಯಲ್ಲಿ ಕೆಲವು ವ್ಯತ್ಯಾಸಗಳು ಕಾಣಸಿಗುತ್ತವೆ.

ಮದುವೆಯ ನಂತರ ಬರುವ ಮೊದಲ ಚೂಡಿಯನ್ನು ಮದುಮಗಳೊಂದಿಗೆ ಸಮಾಜದ ಎಲ್ಲಾ ಬಂಧು ಭಗಿನಿಯರು ಸೇರಿ ಆಚರಿಸುತ್ತಾರೆ. ಮತ್ತು ಮದುಮಗಳು ಎಲ್ಲಾ ಹಿರಿಯರಿಗೂ ಚೂಡಿ ಕೊಟ್ಟು ನಮಸ್ಕರಿಸಿದ ಮೇಲೆ ಆಕೆಗೆ ಉಡುಗೊರೆಯನ್ನು ನೀಡಲಾಗುತ್ತದೆ. ಪತಿ ಮತ್ತು ಇತರ ಹಿರಿಯರಿಗೆ ಕೇವಲ ವೀಳ್ಯದೆಲೆಯನ್ನು ನೀಡಿ ನಮಸ್ಕರಿಸಲಾಗುತ್ತದೆ. ಅನುಕೂಲಸ್ಥರು ಈ ದಿನ ಔತಣ ನೀಡುವುದೂ ಉಂಟು.ಸಂಜೆ ಮನೆ ಮನೆಗೆ ಹೋಗಿ ಹಿರಿಯ ಮುತ್ತೈದೆಯರಿಗೆ, ದೇವಸ್ಥಾನಗಳಿಗೂ ಚೂಡಿಯನ್ನು ಕೊಟ್ಟು ಬರುವ ನಿಯಮವಿದೆ. ದೂರವಿದ್ದವರು ಪೋಸ್ಟಿನ ಮೂಲಕ ಕಳಿಸುವುದೂ ಉಂಟು.ಇದು ಗೌರವ ಸೂಚಕವು ಹೌದು.

ಆಶಯ
ಮೇಲು ನೋಟದಲ್ಲಿ ಕೇವಲ ಪೂಜೆಯಾಗಿ ಕಾಣುವ ಈ ಆಚರಣೆ, ನಮ್ಮ ಜನಪದರ ಪ್ರಕೃತಿ ಪೂಜೆಯ ಮುಂದುವರಿಕೆ, ಸಮಷ್ಟಿ ಪ್ರಜ್ಞೆಯ ಮತ್ತೊಂದು ಉದಾಹರಣೆ ಎಂದರೂ ತಪ್ಪಲ್ಲ .ಎಲ್ಲೂ ಬಳಕೆ ಆಗದ ಸಸ್ಯಗಳು.ಈ ಆಚರಣೆಯಲ್ಲಿ ಬಳಸಲ್ಪಡುತ್ತವೆ. ಸಮಾಜದಲ್ಲಿ ಎಲ್ಲಾ ಸಮುದಾಯದ ಸಾಮರಸ್ಯದ ತತ್ವವನ್ನು ಇದು ಒಳಗೊಂಡಿದೆ.ಇದೊಂದು ಆಚರಣೆಯ ನಿಮಿತ್ಯ ತನ್ನ ಬಿಡುವಿಲ್ಲದ ದಿನಚರಿಯ ನಡುವೆಯೂ ಗೃಹಿಣಿ ತನ್ನ ಸರೀಕರೊಂದಿಗೆ ಬೆರೆತು ಕಷ್ಟ ಸುಖ ಮಾತಾಡುವ ಅವಕಾಶವನ್ನು ಮಾಡಿಕೊಡುವ ಉದ್ದೇಶದಿಂದಲೂ ಈ ನಿಯಮ ಮಾಡಿರಬಹುದು..
ಪದ್ಧತಿ ಸಂಪ್ರದಾಯಗಳು ಯಾವುದೊ ಒಂದು ಆಶಯ ದ ಹಿನ್ನೆಲೆಯಲ್ಲೇ ರೂಪುಗೊಂಡಿರುತ್ತವೆ.ಮತ್ತು ಮಾನವನಿಗೆ ಸಂಸ್ಕೃತಿಗೆ ಸನ್ನಿಹಿತವಾಗಿ ನಡೆಯಲು ಪ್ರೇರೇಪಿಸುತ್ತವೆ.ಅದನ್ನು ಅರಿತು ಮುನ್ನಡೆಸಿಕೊಂಡು ಹೋಗುವ ಮನಸ್ಸು ನಮಗಿರಬೇಕು ಅಷ್ಟೇ!

ನೆನಪಿನ ಅಂಗಳದಲ್ಲಿ


ರೇಖಾ ಪಾಟೀಲ. ಮೂಲತಃ ಬೆಳಗಾವಿ ಜಿಲ್ಲೆ ಬೈಲಹೊಂಗಲ ಊರಿನವರು. ಅವರ ಕರ್ಮಭೂಮಿಯಾದ ಬೆಂಗಳೂರು ಈಗ ಗಂಡನ ಮನೆ ಕೂಡ. ಸಾಹಿತ್ಯ, ಹಾಡು ಕೇಳುವುದು ಪ್ರವಾಸ, ಹರಟೆ,ಕನ್ನಡ ನಾಡು ನುಡಿ,ಅವರ  ಮನಸಿಗೆ ಖುಷಿ ಕೊಡುವ ವಿಚಾರಗಳು.
ಸಾಫ್ಟವೇರ್ ಕಂಪನಿಯಲ್ಲಿ ಉದ್ಯೋಗ ನಿಮಿತ್ತ ಬೆಲ್ಫಾಸ್ಟ್ನಲ್ಲಿ ಮಕ್ಕಳೊಂದಿಗೆ ವಾಸವಾಗಿದ್ದಾರೆ .


ಚಿಕ್ಕಂದಿನಲ್ಲಿ ಪ್ರಾಥಮಿಕ ಶಾಲೆಯಲ್ಲಿ ಓದುವಾಗ ಶಾಲೆಯ ಕೊನೆಯ ದಿನ ಪರೀಕ್ಷೆ ಮುಗಿಸಿ ಬಂದವರೇ ಅಜ್ಜನ ಊರಿಗೆ ಹೋಗುವುದು ವಾಡಿಕೆಯಾಗಿತ್ತು.
ನನ್ನ ಅಜ್ಜನ ಊರು ಗಾಡಗೋಳಿ ಅನ್ನುವ ಹೆಸರಿನ, ಹೊಳೆ ಆಲೂರಿನ ಹತ್ತಿರ ಒಂದು ಹಳ್ಳಿ. ಭರ್ಜರಿ ೨ ತಿಂಗಳಿನ ಬೇಸಿಗೆ ರಜೆ ಕಳೆಯುವುದು ಅಲ್ಲೇ. ಅಲ್ಲಿಗೆ ಹೋಗುವುದಕ್ಕೆ ಕಾರಣ ಅಜ್ಜ,ಅಜ್ಜಿ,ಚಿಕ್ಕಮ್ಮ, ಮಾಮ ಅವರು ತೋರಿಸುವ ಪ್ರೀತಿ ಒಂದು ಕಡೆ ಆದರೆ ಊರಲ್ಲಿ ಹಾದು ಹೋಗುವ, ಊರಿನ ಜೀವ ನದಿ ಮಲಪ್ರಭೆ ಅತಿ ಮುಖ್ಯ ಮತ್ತು ಅಸಲಿ ಕಾರಣ ಅಂತ ಅನಿಸುತ್ತದೆ

ದೈನಂದಿನ ನೀರಿನ ಎಲ್ಲ ಅವಶ್ಯಕತೆಗಳಿಗೆ ಇಡೀ ಊರೇ ನೆಚ್ಚಿಕೊಂಡಿದ್ದು ಮಲಪ್ರಭೆಯನ್ನೇ. ಅಜ್ಜನ ಮನೆಯಿಂದ ಹೊಳೆ 3 ರಿಂದ 4 ನಿಮಿಷದ ಕಾಲು ದಾರಿ. ಪಾತ್ರೆ ತೊಳೆಯಲು, ಬಟ್ಟೆ ಒಗೆಯಲು, ದನ ಕರುಗಳಿಗೆ ನೀರು ಕುಡಿಸಲು ಹೀಗೆ ಹತ್ತು ಹಲವು ಕೆಲಸಗಳಿಗೆ ಊರಿನ ಜನ ಇಡೀ ದಿನ ಹೊಳೆಗೆ ಹೋಗಿ ಬರುವುದು ಸಾಮಾನ್ಯವಾಗಿತ್ತು. ಪ್ರತಿ ಸಲ ನಮ್ಮ ಮನೆಯಿಂದ ಯಾರಾದರೂ ಹೊಳೆಗೆ ಹೋದರೂ ನಾನು ಮತ್ತು ನನ್ನ ತಮ್ಮಂದಿರು ಅವರನ್ನು ಹಿಂಬಾಲಿಸುತ್ತಿದ್ದೆವು. ಕಾರಣ ನದಿಯಲ್ಲಿ ಈಜುವುದು.

ದಿನದ ಕನಿಷ್ಠ ಪಕ್ಷ, 4 ರಿಂದ 5 ಘಂಟೆಗಳ ಕಾಲ ಹೊಳೆಯಲ್ಲೇ ಕಳೆಯುತ್ತಿದ್ದೆವು. ಬಟ್ಟೆ ತೊಳೆಯುವುದಕ್ಕೆಂದು ಹೋದವರ ಜೊತೆ ಹೋಗಿ, ಬಟ್ಟೆ ತೊಳೆದು, ಮರಳಿನ ಮೇಲೆ ಹಾಕಿ ಬಟ್ಟೆ ಒಣಗಿಸಿ ಮಡಚಿದ ಮೇಲೆಯೇ ಮನೆಗೆ ಮರಳುವುದು. ಅಲ್ಲಿಯವರೆಗೂ ನೀರಲ್ಲೇ ಆಟ.
ಊರಿನಲ್ಲಿ ಕೆಲವೊಂದು ಮನೆಗೆ ನಲ್ಲಿಯ ವ್ಯವಸ್ಥೆ ಇತ್ತಾದರೂ ಸಾಕಾಗುವಷ್ಟು ಕುಡಿಯಲು ನೀರು ಸಿಗುತ್ತಿರಲಿಲ್ಲ. ಅದಕ್ಕೂ ಹೊಳೆ ದಾಟಿ ಮರಳನ್ನು ಬಗೆದು ವರ್ತಿ ತೋಡಿ ತಿಳಿಯಾದ ಕುಡಿಯುವ ನೀರನ್ನುತೆಗೆದುಕೊಂಡು ಹೋಗುತ್ತಿದ್ದರು.
ಆ ವರ್ತಿಯಲ್ಲಿ ಒಂದು ಚಿಕ್ಕ ಪಾತ್ರೆಯ ಸಹಾಯದಿಂದ ತಿಳಿಯಾದ ನೀರನ್ನು ಕೊಡಕ್ಕೆ ತುಂಬುವುದೇ ಒಂದು ಖುಷಿ. ಇದೆಲ್ಲ ಸಂಭ್ರಮವನ್ನು ನೋಡಲೆಂದೇ ತಾಯಿ ಮಲಪ್ರಭೆ ಊರನ್ನು ಶಾಂತವಾಗಿ ದಾಟಿ ಹೋಗುತ್ತಿದ್ದಳೇನೋ ಅನಿಸುತ್ತದೆ.

ಹೊಳೆ ಆಲೂರಿನಲ್ಲಿ ಹೊಳೆಗೆ ಅಡ್ಡವಾಗಿ ರೈಲ್ವೆ ಹಳಿ ಇದೆ. ಅದರ ಮೇಲೆ ಕೂಗಿಕೊಂಡು ಹೋಗುವ ರೈಲಿನ ಶಬ್ದ ಇಲ್ಲಿಗೂ ಕೇಳುತ್ತದೆ. ಆ ಕೂಗಿನೊಂದಿಗೆ ಜನ ಸಮಯವನ್ನು ಗುರುತಿಸುತ್ತಿದ್ದರು. 12ರ ಟಪಾಲ್ ಗಾಡಿ, 5ರ ಹಾಲಿನ ಗಾಡಿ ಹೀಗೆ. ಈಗ ನಾನಿರುವ ಮನೆಯ ಮೇಲೆ ಪ್ರತಿ 10 ರಿಂದ 15 ನಿಮಿಷಕ್ಕೊಂದು ವಿಮಾನ ಹಾರುತ್ತದೆ, ಅದರಿಂದ ನಾನು ಯಾವ ದಿನಚರಿಯನ್ನು ಗುರುತಿಸಿಕೊಂಡಿಲ್ಲವಾದರೂ ನನಗೆ ನೆನಪಾಗುವುದು ಟಪಾಲ್ ಗಾಡಿ ಮತ್ತು ಹಾಲಿನ ಗಾಡಿ.
ಒಂದಷ್ಟು ವರ್ಷಗಳ ನಂತರ ಪ್ರತಿ ಮನೆಗೆ ನಲ್ಲಿ ಸೌಕರ್ಯ ದೊರಕಿ ಹೊಳೆಗೆ ಹೋಗುವುದು ಕಡಿಮೆ ಆಯಿತು. ಅಷ್ಟೊತ್ತಿಗೆ ನಾವುಗಳು ಪ್ರೌಢ ಶಾಲೆಗೆ ಸೇರಿದ್ದರಿಂದ ರಜೆಗೆಂದು ಊರಿಗೆ ಹೋಗುವುದು ತೀರಾ ವಿರಳವಾಗಿತ್ತು. ಹೊಳೆಯಲ್ಲಿ ಮಣ್ಣೆತ್ತುವ ಕೆಲಸ ಭರದಿಂದ ಸಾಗಿ ಹೊಳೆಗೆ ಹೋಗುವುದೇ ಅಪಾಯ ಅನ್ನುವಂತಾಯಿತು. ಊರಿನ ಜನ ಹೊಳೆಯಾಚೆಗಿನ ಹೊಲಗಳನ್ನು ಮಾರಿಕೊಂಡರು.
2009ರ ಪ್ರವಾಹದಲ್ಲಿ ಮಲಪ್ರಭೆ ಇಡೀ ಊರನ್ನೇ ಆವರಿಸಿಕೊಂಡಳು. ಒಂದಿಡೀ ವಾರ ಪೂರ್ತಿ ಊರಿಗೆ ಊರೇ ನೀರಲ್ಲಿ ಮುಳುಗಿ ಹೋಯಿತು. ಊರ ಜನರೆಲ್ಲಾ ಗಂಜಿ ಕೇಂದ್ರಗಳಿಗೆ ಹೋಗಿ ಸೇರಿಕೊಂಡರು.ಈಗ ಊರನ್ನು ನದಿಯಿಂದ ದೂರ ಸ್ಥಳಾಂತರಿಸಲಾಗಿದೆ.
ಸುಮಾರಷ್ಟು ವರ್ಷಗಳಾದ ಮೇಲೆ ಮತ್ತೆ ಹೋದೆ ಅಜ್ಜನ ಮನೆ ಮತ್ತು ನಾವು ಜೀವದಂತೆ ಪ್ರೀತಿಸುತ್ತಿದ್ದ ಹೊಳೆ ನೋಡಲು. ಅಜ್ಜನಿಲ್ಲದ ಬಿದ್ದು ಹೋದ ಮನೆ ನೋಡಿ ಯಾಕೋ ಗಂಟಲಬ್ಬಿಬಂತು, ಮಾತೇ ಹೊರಡಲಿಲ್ಲ ಕಣ್ಣು ತುಂಬಿಕೊಂಡಿತ್ತು.

ಕನ್ನಡ ಭಾಷೆಯ ಮೇಲೆ ಒಂದಿಷ್ಟು ಆಲೋಚನೆಗಳು – ಕೇಶವ ಕುಲಕರ್ಣಿ

ನಾನು ಇಂಗ್ಲೆಂಡಿಗೆ ಬಂದ ಹೊಸತಿನಲ್ಲಿ ಕನ್ನಡವನ್ನು ಓದಬೇಕೆಂದರೆ ಭಾರತದಿಂದ ತಂದ ಪುಸ್ತಕಗಳು ಮಾತ್ರ ಆಸರೆಯಾಗಿದ್ದವು. ಆಗತಾನೆ ಕನ್ನಡದಲ್ಲಿ ಬ್ಲಾಗುಗಳು ಆರಂಭವಾಗುತ್ತಿದ್ದವು. ದಾಟ್ಸ್ ಕನ್ನಡ ಎನ್ನುವ ಜಾಲದಲ್ಲಿ ಕನ್ನಡದ ವಾರ್ತೆಗಳನ್ನು ಓದಲು ಸಿಗುತ್ತಿತ್ತು. ವರುಷಗಳು ಕಳೆದಂತೆ ಕನ್ನಡದ ಬಹುತೇಕ ಎಲ್ಲ ದಿನಪತ್ರಿಕೆಗಳು ಜಾಲದಲ್ಲಿ ಓದಲು ಸಿಗಹತ್ತಿದವು. ಸುಧಾ, ತರಂಗ, ಮಯೂರ, ತುಷಾರ, ರೂಪತಾರಾಗಳೂ ಓದಲು ಸಿಗತೊಡಗಿದವು. ಇತ್ತೀಚೆಗೆ ವಿವಿಡ್‍ಲಿಪಿ, ಮೈಲಾಂಗ್ ಎನ್ನುವ ಆ್ಯಪ್‍ಗಳು ಕನ್ನಡದ ಇ-ಪುಸ್ತಕಗಳನ್ನು ಫೋನಿಗೆ ತಂದು ಹಾಕುತ್ತಿವೆ. ಯುಟ್ಯೂಬಿನಲ್ಲಿ ಕನ್ನಡ ಸಾಹಿತಿಗಳ ಚರ್ಚೆ ಮತ್ತು ಸಂದರ್ಶನಗಳನ್ನು ನೋಡಲು ಸಿಗುತ್ತಿವೆ. ಅವಧಿ ಮತ್ತು ಕೆಂಡಸಂಪಿಗೆ ತರಹದ ಕನ್ನಡ ಸಾಹಿತ್ಯಕ್ಕೇ ಮೀಸಲಾದ ಜಾಲತಾಣಗಳಿವೆ. 

ಕನ್ನಡನಾಡಿನಿಂದ ದೂರ ಬಂದಿದ್ದರೂ ಕನ್ನಡದಲ್ಲಿ ವಾರ್ತೆಗಳನ್ನು, ಕನ್ನಡದ ಕತೆ-ಕಾದಂಬರಿಗಳನ್ನು, ಕವನಗಳನ್ನು ಓದುವುದು ನಿರಂತರವಾಗಿ ನಡೆಯುತ್ತಲೇ ಇದೆ. ನಾನು ಇಂಗ್ಲೆಂಡಿನಲ್ಲಿ ಕಳೆದ ಈ ಹತ್ತು ಹದಿನೈದು ವರ್ಷಗಳಲ್ಲಿ ಕನ್ನಡ ಭಾಷೆಯ ಬಳಕೆಯಲ್ಲಿ ಅಗಾಧವಾದ ಬದಲಾವಣೆಗಳಾಗಿವೆ ಎಂದು ಅನಿಸುತ್ತದೆ. ಅಂಥ ಕೆಲವು ವಿಷಯಗಳನ್ನು ಈ ಅಂಕಣ ಬರಹದಲ್ಲಿ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದೇನೆ (ನಾನೇ ಮೊದಲನೇಯನಲ್ಲ ಎಂದು ಗೊತ್ತು). ನಾನು ಕನ್ನಡದ ಪಂಡಿತನೂ ಅಲ್ಲ ಮತ್ತು ಕನ್ನಡ ಭಾಷೆಯ ಇತಿಹಾಸವನ್ನು ಓದಿಕೊಂಡವನೂ ಅಲ್ಲ ಎಂದು ಮೊದಲು ತಪ್ಪೊಪ್ಪಿಕೊಂಡೇ (ಡಿಸ್‍ಕ್ಲೇಮರ್) ಇದನ್ನೆಲ್ಲ ನಿಮ್ಮ ಮುಂದಿಡುತ್ತಿದ್ದೇನೆ. 

ಸಾಯುತ್ತಲಿರುವ ಕನ್ನಡಪದಗಳು, ಹೆಚ್ಚುತ್ತಲಿರುವ ಇಂಗ್ಲೀಷ್ ಶಬ್ದಗಳು:

ದೊಡ್ಡಪಟ್ಟಣಗಳಲ್ಲಿ ನೆಲೆಸುವ ಕನ್ನಡಿಗರು ಕನ್ನಡದಲ್ಲಿ ಮಾತನಾಡುವಾಗ ಒಂದು ವಾಕ್ಯದಲ್ಲಿ ಒಂದಾದರೂ ಇಂಗ್ಲೀಷ್ ಶಬ್ದವನ್ನು ಉಪಯೋಗಿಸುತ್ತಾರೆ ಎನ್ನುವುದು ನನ್ನ ಅನಿಸಿಕೆ. ಕೇವಲ ಒಂದು ಪೀಳಿಗೆಯ ಹಿಂದೆ ದಿನಬಳಕೆಯಲ್ಲಿದ್ದ ಎಷ್ಟೊಂದು ಕನ್ನಡದ ಶಬ್ದಗಳನ್ನು ಇಂಗ್ಲೀಷ್ ಶಬ್ದಗಳು ಕೊಂದು ಹಾಕಿರುವುದರೆ ನೇರ ಪರಿಣಾಮವಿದು  (ಪ್ರೊಫೇಸರ್ ಕೃಷ್ಣೇಗೌಡರು ‘ಕೋಡಗನ ಕೋಳಿ ನುಂಗಿತ್ತ‘ದ ಮಾದರಿಯಲ್ಲಿ ಇದರ ಬಗ್ಗೆ ಒಂದು ಹಾಡು ಮಾಡಿದ್ದಾರೆ ಕೂಡ). 

ಪಾನಕವನ್ನು ಜ್ಯೂಸ್, ಪಚಡಿಯನ್ನು ಸಲಾಡ್, ಅನ್ನವನ್ನು ರೈಸ್, ಮೊಸರನ್ನವನ್ನು ಕರ್ಡ್‌-ರೈಸ್, ಚಿತ್ರಾನ್ನವನ್ನು ಲೆಮನ್-ರೈಸ್ ಅನ್ನುತ್ತಿದ್ದೇವೆ. ಪಡಸಾಲೆಯನ್ನು ಡ್ರಾಯಿಂಗ್-ರೂಮ್, ಅಡುಗೆಮನೆಯನ್ನು ಕಿಚನ್, ಬಚ್ಚಲುಮನೆಯನ್ನು ಬಾತ್‌-ರೂಮ್ ಅನ್ನುತ್ತಿದ್ದೇವೆ. ಅಪ್ಪ ಡ್ಯಾಡಿಯಾಗಿ, ಅಮ್ಮ ಮಮ್ಮಿಯಾಗಿ ಆಗಲೇ ಒಂದು ಪೀಳಿಗೆಯೇ ಮುಗಿದಿದೆ. ಮಾಮಾ, ಕಾಕಾ, ಸೋದರಮಾವ, ದೊಡ್ಡಪ್ಪ, ಚಿಕ್ಕಪ್ಪ ಎಲ್ಲ ಶಬ್ದಗಳೂ ‘ಅಂಕಲ್’ ಆಗಿಬಿಟ್ಟಿವೆ. ಮಾಮಿ, ಕಾಕು, ದೊಡ್ಡಮ್ಮ, ಚಿಕ್ಕಮ್ಮರೆಲ್ಲ ‘ಆಂಟಿ’ಗಳಾಗಿದ್ದಾರೆ. ಮೆಣಸು ಪೆಪ್ಪರ್ ಆಗಿದೆ, ಶುಂಠಿ ಜಿಂಜರ್ ಆಗಿದೆ, ಬೆಳ್ಳುಳ್ಳಿ ಗಾರ್ಲಿಕ್ ಆಗಿದೆ, ಅರಿಶಿಣ ಪುಡಿ ಟರ್ಮರಿಕ್ ಆಗಿದೆ. ವರ್ಷಗಳು ಉರುಳಿದಂತೆ ನಿಧನಿಧಾನವಾಗಿ ದಿನನಿತ್ಯ ಬಳಸುವ ಕನ್ನಡದ ಪದಗಳನ್ನು ಇಂಗ್ಲೀಷ್ ಪದಗಳು ಆಕ್ರಮಿಸುತ್ತಿವೆ.   

ತಂತ್ರಜ್ಙಾನದಿಂದ ಬಂದ ಹೊಸ ಅವಿಷ್ಕಾರಗಳಾದ ಫೋನು, ಕಂಪ್ಯೂಟರ್, ಮೊಬೈಲ್ ಇತ್ಯಾದಿಗಳಿಗೆ ದೂರವಾಣಿ, ಗಣಕಯಂತ್ರ, ಜಂಗಮವಾಣಿ ಎಂದೆಲ್ಲ ಹೊಸ ಶಬ್ದಗಳನ್ನು ತರುವ ಪ್ರಯತ್ನ ನಡೆಯಿತಾದರೂ ಕೊನೆಗೆ ಕನ್ನಡಿಗರ ಮಾತಿನಲ್ಲಿ ಉಳಿದದ್ದು ಮೂಲ ಇಂಗ್ಲೀಷ್ ಪದಗಳೇ. ಪೋಲೀಸರಿಗೆ ಆರಕ್ಷಕ, ಇಂಜಿನಿಯರನಿಗೆ ಅಭಿಯಂತರ, ಮ್ಯಾನೇಜರನಿಗೆ ವ್ಯವಸ್ಥಾಪಕ (ಕಾರ್ಯನಿರ್ವಾಹಕ) ಎಂದೆಲ್ಲ ಹೊಸ ಶಬ್ದಗಳ ಪ್ರಯೋಗ ಪತ್ರಿಕೆಗಳಿಗೆ ಸೀಮಿತವಾಗಿ, ಕೊನೆಗೆ ಪತ್ರಿಕೆಗಳೂ ಅವುಗಳ ಬಳಕೆಯನ್ನು ಬಿಟ್ಟಿಕೊಟ್ಟವು.

ಕನ್ನಡ ಭಾಷೆಯಲ್ಲಿ ಪಾರಿಭಾಷಿಕ ಪದಗಳನ್ನು ಸೃಷ್ಟಿಸುವ ಕೆಲಸದ ಹಿಂದಿರುವ ಪರಿಶ್ರಮವೆಲ್ಲ ನಷ್ಟವಾಗುತ್ತಲಿದೆ. ಇದೇ ಪ್ರವೃತ್ತಿ ಮುಂದುವರೆದರೆ ಹೊಸ ಕನ್ನಡ ಶಬ್ದಗಳನ್ನು ಹುಟ್ಟುಹಾಕುವ ಪ್ರಯತ್ನವನ್ನೇ ಪಂಡಿತರು ಬಿಟ್ಟುಬಿಡುತ್ತಾರೆ ಅನಿಸುತ್ತದೆ. 

ಮಾತನಾಡುವಾಗ ಇಲ್ಲದ ಮಡಿವಂತಿಕೆ ಬರೆಯುವಾಗ ಇರಬೇಕೇ?:

ಹೀಗೆ ಸಾವಿರಾರು ಇಂಗ್ಲೀಷ್ ಪದಗಳು ದಿನ ಬಳಕೆಯ ಕನ್ನಡದ ಬದುಕಲ್ಲಿ ಹಾಸುಹೊಕ್ಕಾಗಿ, ಕನ್ನಡದ ಪದಗಳೇ ಆಗಿ ಹೋಗಿದ್ದರೂ, ನಾನು ಇಂಗ್ಲೆಂಡಿಗೆ ಬಂದು ಇಷ್ಟು ವರ್ಷಗಳಾದರೂ, ದಿನನಿತ್ಯ ಬಳಸುವ ಇಂಗ್ಲೀಷ್ ಶಬ್ದಗಳನ್ನು ಕನ್ನಡದಲ್ಲಿ ಬರೆಯುವಾಗ ನನ್ನ ಕೈ ಓಡುವುದಿಲ್ಲ, ಆ ಶಬ್ದಗಳಿಗೆ ಸರಿಸಮನಾದ ಕನ್ನಡ ಶಬ್ದವನ್ನೋ, ಕನ್ನಡ ಶಬ್ದ ಸಿಗದಿದ್ದಾಗ ಸಂಸ್ಕೃತ ಶಬ್ದವನ್ನೋ ಮೆದುಳು ಹುಡುಕುತ್ತದೆ. ಕನ್ನಡದಲ್ಲಿ ಅಷ್ಟಾಗಿ ಬಳಕೆಯಲ್ಲಿ ಇಲ್ಲದ ಅಂತರ್ಧಾನ, ಸ್ವರೂಪ, ವ್ಯಾಧಿಗ್ರಸ್ತ, ಜಾಜ್ವಲ್ಯಮಾನ, ವಾಕ್ಚಾತುರ್ಯ ಇತ್ಯಾದಿ ಸಂಸ್ಕೃತದ ಶಬ್ದಗಳನ್ನು ಬರೆಯುವಾಗ ಇಲ್ಲದ ಮಡಿವಂತಿಕೆ, ದಿನಬಳಕೆಯ ಇಂಗ್ಲೀಷ್ ಶಬ್ದಗಳಾದ ಹಾಸ್ಪಿಟಲ್, ಕೀಬೋರ್ಡ್, ಮಾನಿಟರ್ ಎಂದೆಲ್ಲ ಬರೆಯುವಾಗ ಅಡ್ಡಬರುತ್ತದೆ. ನಾನು ಚಿಕ್ಕನಿದ್ದಾಗ ಆಗಲೇ ಕನ್ನಡೀಕರಣಗೊಂಡ ಬಸ್ಸು, ಕಾರು, ರೈಲು, ರೋಡು ಎಂದು ಬರೆಯುವಾಗ ಇಲ್ಲದ ಮುಜುಗರ, ಇತ್ತೀಚಿನ ವರ್ಷಗಳಲ್ಲಿ ಕನ್ನಡೀಕರಣಗೊಂಡ ಇಂಗ್ಲೀಷ್ ಶಬ್ದಗಳನ್ನು ಬರೆಯುವಾಗ ಆಗುತ್ತದೆ. ಪಾರ್ಸಿಯಿಂದ ಬಂದ `ಅರ್ಜಿ` ಎಂದು ಬರೆದಾಗ ಏನೂ ಅನಿಸುವುದಿಲ್ಲ, ಆದರೆ `ಅಪ್ಲಿಕೇಷನ್` ಎಂದು ಕನ್ನಡದ ಲಿಪಿಯಲ್ಲಿ ಬರೆಯುವಾಗ ಇರಿಸುಮುರುಸಾಗುತ್ತದೆ. ಈ ಗೊಂದಲ ಕನ್ನಡದ ಬೇರೆ ಲೇಖಕರನ್ನು ಎಷ್ಟರಮಟ್ಟಿಗೆ ಕಾಡುವುದೋ ನನಗೆ ಗೊತ್ತಿಲ್ಲ. ಪ್ರಶ್ನೆ ಇರುವುದು ಇದರಲ್ಲಿ ಯಾವುದು ಸರಿ, ಯಾವುದು ತಪ್ಪು ಎಂದಲ್ಲ, ಯಾವುದನ್ನು ಬರೆದರೆ ಕನ್ನಡದ ಓದುಗರನ್ನು ಸುಲಭವಾಗಿ ತಲುಪಬಹುದು ಎನ್ನುವುದು.

ವಿರಾಮಚಿಹ್ನೆಗಳ (ದುರು)ಪಯೋಗ: 

ನಾವು ಬರೆಯುವಾಗ ಬಹಳಷ್ಟು ವಿರಾಮಚಿಹ್ನೆಗಳನ್ನು (punctuation) ಬಳಸುತ್ತೇವೆ, ಪೂರ್ಣವಿರಾಮ, ಅಲ್ಪವಿರಾಮ, ಅರ್ಧವಿರಾಮ, ಪ್ರಶ್ನಾರ್ಥಕ,  ಉದ್ಗಾರವಾಚಕ ಇತ್ಯಾದಿ. ಇಷ್ಟೊಂದು ವಿರಾಮ ಚಿಹ್ನೆಗಳನ್ನು ಭಾರತೀಯ ಭಾಷೆಗಳು ಕಲಿತದ್ದು ಬಹುಷಃ ಇಂಗ್ಲೀಷಿನಿಂದಲೇ ಇರಬೇಕು. 

ಅವುಗಳಲ್ಲಿ ಒಂದು ಚಿಹ್ನೆಯನ್ನು ಕನ್ನಡ ಸಾಹಿತ್ಯದ ಓದುಗರೆಲ್ಲರೂ ಖಂಡಿತ ಓದಿರುತ್ತೀರಿ (ಅಥವಾ ನೋಡಿರುತ್ತೀರಿ), ಅದು ಮೂರು ಡಾಟ್‍ಗಳು (…), ಇಂಗ್ಲೀಷಿನಲ್ಲಿ ಅದಕ್ಕೆ ellipse (ಎಲಿಪ್ಸ್) ಎನ್ನುತ್ತಾರೆ. ಈ ಎಲಿಪ್ಸಿಗೆ ಕನ್ನಡ ವ್ಯಾಕರಣಕಾರರು ಯಾವ ಕನ್ನಡ/ಸಂಸ್ಕೃತ ಶಬ್ದವನ್ನು ಕೊಟ್ಟಿದ್ದಾರೋ ಗೊತಿಲ್ಲ. 

ವಾಕ್ಯದ ಕೊನೆಗೆ ಎಲಿಪ್ಸನ್ನು ಉಪಯೋಗಿಸಿದರೆ, ಇನ್ನೂ ಏನೋ ಮಾತು ಉಳಿದಿದೆ ಎಂದು ಅರ್ಥ. ಸಂಭಾಷಣೆಯ ರೂಪದಲ್ಲಿರುವ ವಾಕ್ಯದ ನಡುವೆ ಎಲಿಪ್ಸ್ ಬರೆದರೆ, ಮಾತನಾಡುವ ವ್ಯಕ್ತಿ ಮಾತನ್ನು ನುಂಗಿದ ಎಂದು ಅರ್ಥ. ಒಟ್ಟಿನಲ್ಲಿ ಎಲಿಪ್ಸನ್ನು ಬಳಸಿದರೆ ಎಲ್ಲೋ ಏನೋ ಬಿಟ್ಟುಹೋಗಿದೆ ಎಂದು ಅರ್ಥ. ಆದ್ದರಿಂದ ಈ ಎಲಿಪ್ಸನ್ನು ಎಷ್ಟು ಕಡಿಮೆಯಾಗುತ್ತೋ ಅಷ್ಟು ಕಡಿಮೆ ಬಳಸುವುದು ಒಳ್ಳೆಯದು ಎನ್ನುತ್ತದೆ ಇಂಗ್ಲೀಷ್ ವ್ಯಾಕರಣ. ಎಲಿಪ್ಸ್ ಚಿಹ್ನೆಯನ್ನು ಎಲ್ಲಿ ಉಪಯೋಗಿಸಬೇಕು, ಎಲ್ಲಿ ಉಪಯೋಗಿಸಬಾರದು ಎನ್ನುವುದನ್ನು ತಿಳಿಯಲು ಇಂಗ್ಲೀಷ್ ಭಾಷೆಯಲ್ಲಿ ಸಾಕಷ್ಟು ಲೇಖನಗಳಿವೆ, ವ್ಯಾಕರಣ ಪುಸ್ತಕಗಳಲ್ಲಿ ಅಧ್ಯಾಯಗಳಿವೆ. 

ಈ ಎಲಿಪ್ಸ್ ಚಿಹ್ನೆಯು ಕನ್ನಡದ ಕತೆ ಮತ್ತು ಕವನಗಳಲ್ಲಿ ಲಂಗುಲಗಾಮಿಲ್ಲದೇ ಎಲ್ಲಿಬೇಕೆಂದರಲ್ಲಿ ಒಕ್ಕರಿಸಿಬಿಡುತ್ತದೆ. ನಾವು ಶಾಲೆಯಲ್ಲಿ ಇದ್ದಾಗ ‘ಬಿಟ್ಟ ಸ್ಥಳ ತುಂಬಿ‘ ಎಂದು ಇರುತ್ತದಲ್ಲ, ಹಾಗೆ. ಕತೆ ಬರೆಯುವಾಗ ಪ್ಯಾರಾಗ್ರಾಫಿನ ಕೊನೆಯಲ್ಲಿ ‘…‘ ಬಂದುಬಿಡುತ್ತದೆ. ಓದುಗರೇ, ನೀವೇ ಈ ಕತೆಯನು ಮುಂದುವರೆಸಿ ಎನ್ನುವಂತೆ. ಕತೆ ಕಾದಂಬರಿಗಳಲ್ಲಿ ಸಂಭಾಷಣೆಗಳನ್ನು ಬರೆಯುವಾಗ ಕನ್ನಡದ ಪ್ರಸಿದ್ಧ ಲೇಖಕರೂ ಈ ಎಲಿಪ್ಸನ್ನು ಎಲ್ಲಿ ಬೇಕೆಂದರಲ್ಲಿ ಬಳಸುತ್ತಾರೆ. ಇನ್ನು ಕವನಗಳಲ್ಲಿ ಎಲಿಪ್ಸ್ ಎಲ್ಲೆಲ್ಲೂ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಕವನದ ಶೀರ್ಷಿಕೆಯಲ್ಲೇ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಸಾಲಿನ ಕೊನೆಗೆ ಬರುತ್ತದೆ, ಕೆಲವೊಮ್ಮೆ ಕವನದ ಕೊನೆಯಲ್ಲಿ. ಎಲಿಪ್ಸ್ ಬಳಸುವುದರಿಂದ ಆ ಕವನದ ಅರ್ಥಕ್ಕೆ ಯಾವ ಬದಲಾವಣೆಯೂ ಆಗುವುದಿಲ್ಲ. ಓದುವವರಿಗೆ ಮಾತ್ರ ಕವನ ಅಪೂರ್ಣ ಅನ್ನಿಸದೇ ಇರದು. ಹೆಸರಾಂತ ಪತ್ರಿಕೆಗಳೂ ಎಪಿಪ್ಸನ್ನು ತಿದ್ದಿವ ಗೋಜಿಗೆ ಹೋಗುವುದಿಲ್ಲ. ಕನ್ನಡದಲ್ಲಿ ವಿರಾಮಚಿಹ್ನೆಗಳ ಬಗ್ಗೆ, ಅದರಲ್ಲೂ ಎಲಿಪ್ಸ್ ಚಿಹ್ನೆಯ ಬಗ್ಗೆ ಒಂದು ತರಹದ ಅಸಡ್ಡೆ ಇದೆ ಅನಿಸುತ್ತದೆ.  

ಅಷ್ಟೇ ಅಲ್ಲ, ಇನ್ನೂ ಕೆಲವು ವಿರಾಮ ಚಿಹ್ನೆಗಳನ್ನು ತಮಗೆ ಹೇಗೆ ಬೇಕೋ ಹಾಗೆ ಬರೆಯುತ್ತಾರೆ, ಅದನ್ನು ಪತ್ರಿಕೆಗಳು ಪ್ರಕಟಿಸುತ್ತಾರೆ ಕೂಡ. ಎರಡು, ಮೂರು ಅಥವಾ ನಾಲ್ಕೆ ಉದ್ಗಾರ ವಾಚಗಳನ್ನು ಒಟ್ಟಿಗೇ ಬಳಸುತ್ತಾರೆ. ಉದ್ಗಾರದ ನಂತರ ಪ್ರಶ್ನಾರ್ಥಕವನ್ನೂ, ಪ್ರಶ್ನಾರ್ಥಕವಾದ ಮೇಲೆ ಉದ್ಗಾರವಾಚಕವನ್ನೂ ವಿನಾಕಾರಣ ಬಳಸುತ್ತಾರೆ (ಇಂಗ್ಲೀಷಿನಲ್ಲಿ ಇದಕ್ಕೆ interrobang ಎನ್ನುತ್ತಾರೆ). ಕೆಲವರಂತೂ ಎಲಿಪ್ಸ್ ಆದ ಮೇಲೆ ಉದ್ಗಾರವಾಚಕವನ್ನು ಬಳಸುತ್ತಾರೆ. ಭಾಷೆಯನ್ನು ಕಲಿಯುವಾಗ ಪದಭಂಡಾರ ಮತ್ತು ಕಾಗುಣಿತ ಎಷ್ಟು ಮುಖ್ಯವೋ ವಿರಾಮ ಚಿಹ್ನೆಗಳನ್ನು ಸರಿಯಾಗಿ ಬಳಸುವುದೂ ತುಂಬ ಮುಖ್ಯವಾಗುತ್ತದೆ. 

ಹೆಸರುಗಳನ್ನು ಬರೆಯುವುದು:

ನಾವು ಚಿಕ್ಕವರಿದ್ದಾಗ ಹೆಂಗಸರ ಹೆಸರನ್ನು ಗೀತಾ, ಸವಿತಾ, ಮಾಲಾ, ಸೀತಾ ಎಂದು, ಗಂಡಸರ ಹೆಸರುಗಳನ್ನು ರಮೇಶ, ಗಣೇಶ, ಸಂತೋಷ, ರಾಜೇಶ ಎಂದು ಎಲ್ಲ ಪತ್ರಿಕೆಗಳಲ್ಲಿ ಮತ್ತು ಪುಸ್ತಕಗಳಲ್ಲಿ ಬರೆಯುತ್ತಿದ್ದರು, ನಮ್ಮ ಪೀಳಿಗೆಯವರೂ ಹಾಗೆಯೇ ಬರೆಯುತ್ತಿದ್ದೆವು. ಇತ್ತೀಚಿನ ಒಂದೆರೆಡು ದಶಕಗಳಿಂದ, ಅದರಲ್ಲೂ ಕನ್ನಡ ಟಿವಿ ವಾಹಿನಿಗಳ ಸಂಖ್ಯೆ ಹೆಚ್ಚಾದ ಮೇಲೆ, ಹೆಂಗಸರ ಹೆಸರುಗಳು ಗೀತ, ಸವಿತ, ಮಾಲ, ಸೀತ ಎಂದೂ, ಗಂಡಸರ ಹೆಸರುಗಳನ್ನು ರಮೇಶ್, ಗಣೇಶ್, ಸಂತೋಷ್, ರಾಜೇಶ್ ಎಂದೂ ಬರೆಯುತ್ತಾರೆ. ಅಂದರೆ ಇಂಗ್ಲೀಷ್ ಭಾಷೆಯಲ್ಲಿ ಮೊದಲು ಹೆಸರುಗಳನ್ನು ಬರೆದುಕೊಂಡು, ನಂತರ ಕನ್ನಡಕ್ಕೆ ಭಾಷಾಂತರ ಮಾಡಿದಂತೆ ಕಾಣಿಸುತ್ತವೆ, ಈ ಹೆಸರುಗಳು. ಇದು ಕನ್ನಡ ಭಾಷೆ ಬೆಳೆಯುತ್ತಿರುವ ಸಂಕೇತವೋ ಅಥವಾ ವಿನಾಶದತ್ತ ಹೊರಟಿರುವ ಸಂಕೇತವೋ ಎನ್ನುವುದನ್ನು ಕನ್ನಡ ಪಂಡಿತರೇ ಉತ್ತರಿಸಬೇಕು.  

ಕನ್ನಡದಲ್ಲಿ ಸ್ಪೆಲ್ಲಿಂಗ್:

ಇಂಗ್ಲೀಷಿನಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕ್ ಆಗುವಂತೆ ಕನ್ನಡದಲ್ಲಿ ಕಾಗುಣಿತ ದೋಷಗಳು ಆಗುತ್ತವೆ. ಅದನ್ನು ಅಮೇರಿಕದಲ್ಲಿ ನೆಲೆಸಿರುವ ಕನ್ನಡದ ಹೆಸರಾಂತ ಅಂಕಣಕಾರರಾದ ಶ್ರೀವತ್ಸ ಜೋಶಿಯವರು ಪ್ರತಿ ವಾರ ತಪ್ಪದೇ ‘ಸ್ವಚ್ಛ ಭಾಷೆ ಅಭಿಯಾನ‘ದಲ್ಲಿ ಬರೆದು ವಾಟ್ಸ್ಯಾಪ್ ಮಾಡುತ್ತಾರೆ, ಫೇಸ್ಬುಕ್ಕಿನಲ್ಲಿ ಬರೆಯುತ್ತಾರೆ. ನಾನು ಈಗ ಬರೆಯುತ್ತಿರುವುದು ಕಾಗುಣಿತ ದೋಷದ ಬಗ್ಗೆ ಅಲ್ಲ. ಕನ್ನಡದಲ್ಲಿ ಪ್ರತಿ ಶಬ್ದಕ್ಕೂ ಇರುವ ನಿಖರವಾದ ಸ್ಪೆಲಿಂಗ್ ಇರುವ ಬಗ್ಗೆ. ಏನು ಎನ್ನುವುದನ್ನು ಸ್ವಲ್ಪ ವಿವರಿಸುತ್ತೇನೆ.

‘ಅಂಚೆ‘ಯನ್ನು ‘ಅಞ್ಚೆ‘ ಎಂದೂ ಬರೆಯಬಹುದು. ನಿಜವಾಗಿ ನೋಡಿದರೆ ನಾನು ‘ಅಂಚೆ‘ಯನ್ನು ಉಚ್ಚಾರ ಮಾಡುವುದು ‘ಅಞ್ಚೆ‘ ಎಂದೇ.  ‘ಮಂಗ‘ನನ್ನು ‘ಮಙ್ಗ‘ ಎಂದು ಉಚ್ಚಾರ ಮಾಡುತ್ತೇವೆ, ಆದರೆ ‘ಮಂಗ‘ ಎಂದು ಬರೆಯುತ್ತೇವೆ. ಆದರೆ ‘ಅಂಚೆ‘, ‘ಮಂಗ‘ ಎಂದು ಬರೆದರೆ ಮಾತ್ರ ಓದುವವರಿಗೆ ಅರ್ಥವಾಗುತ್ತದೆ.  ‘ಅಞ್ಚೆ‘ ಅಥವಾ ‘ಮಙ್ಗ‘ ಎಂದು ಬರೆದರೆ ಎಂಥ ಕನ್ನಡ ಓದುಗನೂ ತಬ್ಬಿಬ್ಬಾಗುವುದು ಸಹಜ. ‘ನಿನ್ನನ್ನು‘ ಎನ್ನುವುದನ್ನು ‘ನಿಂನಂನು‘ ಎಂದು ಕೂಡ ಬರೆಯಬಹುದು, ಓದುವುದರಲ್ಲಿ ಯಾವ ವ್ಯತ್ಯಾಸವೂ ಆಗುವುದಿಲ್ಲ, ಆದರೆ ಅದು ತಪ್ಪು ಸ್ಪೆಲ್ಲಿಂಗ್ ಆಗುತ್ತದೆ. ಏಕೆಂದರೆ ರೂಢಿಯಲ್ಲಿ ಇರುವುದು ‘ನಿನ್ನನ್ನು‘ ಎಂದು. ‘ವಿಪರ್ಯಾಸ‘ವನ್ನು ‘ವಿಪರ‍್ಯಾಸ‘ ಎಂದೂ ಬರೆಯಬಹುದು, ಆದರೆ ಅದು ರೂಢಿಯಲ್ಲಿ ಇಲ್ಲದಿರುವುದರಿಂದ ತಪ್ಪು ಸ್ಪೆಲಿಂಗ್ ಆಗುತ್ತದೆ. ಬೀಚಿಯವರು ‘ತಿಮ್ಮ‘ನನ್ನು ‘ತಿಂಮ‘ ಎಂದು ಬರೆಯುತ್ತಿದ್ದರು, ಈಗ ‘ತಿಮ್ಮ‘ ಅದರ ಸರಿಯಾದ ಸ್ಪೆಲಿಂಗ್ ಆಗಿದೆ. .  

ಒಂದೇ ಶಬ್ದವನ್ನು ಸರಿಯಾಗಿಯೇ ಬೇರೆ ಬೇರೆ ರೀತಿಯಲ್ಲಿ ಬರೆಯಲು ಸಾಧ್ಯವಿದ್ದರೂ, ನಮಗೆ ಗೊತ್ತಿಲ್ಲದಂತೆಯೇ ಕನ್ನಡದಲ್ಲಿ ಕನ್ನಡ ಶಬ್ದಗಳ ಸ್ಪೆಲಿಂಗ್ ಇದೆ. ‘ತಂದೆ‘ಯನ್ನು ‘ತನ್ದೆ‘ ಎಂದು ಬರೆದರೆ ಅದು ‘ತಂದೆ‘ಯ ತಪ್ಪು ಸ್ಪೆಲಿಂಗ್ ಆಗುತ್ತದೆ. 

ಇದನ್ನೆಲ್ಲ ಏಕೆ ಬರೆಯುತ್ತಿದ್ದೇನೆ ಎಂದರೆ, ನಾವು ಇತ್ತೀಚೆಗೆ ಬಹಳಷ್ಟು ಇಂಗ್ಲೀಷ್ ಶಬ್ದಗಳನ್ನು ಕನ್ನಡದಲ್ಲಿ ಬರೆಯುತ್ತಿದ್ದೇವಷ್ಟೇ. ಆದರೆ ಇಂಗ್ಲೀಷ್ ಶಬ್ದಗಳನ್ನು ಕನ್ನಡದಲ್ಲಿ ಬರೆಯುವಾಗ  ಎರಡು ಅಥವಾ ಮೂರು ಒತ್ತಕ್ಷರಗಳು ಬರುತ್ತವೆ, ಅದನ್ನು ಹಾಗೆಯೇ ಬರೆದರೆ ಓದುವವರಿಗೆ ಕಷ್ಟವಾಗುತ್ತದೆ, ಆದ್ದರಿಂದ ಕನ್ನಡದಲ್ಲಿ ಸ್ಪೆಲಿಂಗಿನ ಏಕರೂಪವನ್ನು ತರುವ ಅವಶ್ಯಕತೆ ಇದೆ, ಇಲ್ಲದಿದ್ದರೆ ಒಬ್ಬಬ್ಬರೂ ಒಂದೊಂದು ರೀತಿ ಬರೆಯುತ್ತಾರೆ. 

ಉದಾಹರಣೆಗೆ, ‘ಸಾಫ್ಟ್ವೇರ್‘ ಎಂದು ಬರೆಯುವ ಬದಲು ‘ಸಾಫ್ಟ್‌ವೇರ್‘ ಎಂದು ಬರೆದರೆ ಓದುವುದು ಸುಲಭ.“ಹಾರ್ಡ್ವೇರ್‘ ಎಂದು ಬರೆಯುವ ಬದಲು ‘ಹಾರ್ಡ್‌ವೇರ್‘ ಎಂದು ಬರೆದರೆ ಆರ್ಥಮಾಡಿಕೊಳ್ಳುವುದು ಸುಲಭ. ನಾನು ಈಗ ನೆಲೆಸಿರುವ ‘ಬರ್ಮಿಂಗ್ಹ್ಯಾಮ್‘ ನಗರವನ್ನು ‘ಬರ್ಮಿಂಗ್‍ಹ್ಯಾಮ್‘ ಎಂದು ಬರೆದರೆ ಓದುವವರಿಗೆ ಸುಲಭ. ಆದ್ದರಿಂದ ಕನ್ನಡದಲ್ಲಿ ಸ್ಪೆಲಿಂಗಿನ ಸ್ಟ್ಯಾಂಡರ್ಡಾಜೇಶನ್ (ಸ್ಟ್ಯಾಂಡರ್ಡೈಜೇಷನ್) ಮಾಡುವ ಅವಶ್ಯಕತೆ ಇದೆ. 

ಕನ್ನಡದ ಅಕ್ಷರಗಳು:

ನಾನು ಶಾಲೆಯಲ್ಲಿ ಓದುವಾಗ ಕನ್ನಡದ ಅಕ್ಷರಮಾಲೆಯಲ್ಲಿ ಒಂದು ಅಕ್ಷರವಿತ್ತು (ಈಗಲೂ ಇದೆಯೋ ಇಲ್ಲವೋ ಗೊತ್ತಿಲ್ಲ), ಆದರೆ ಅದನ್ನು ಇದುವರೆಗೂ ಉಪಯೋಗಿಸಿದ ನೆನಪೇ ಇಲ್ಲ. ಆ ಅಕ್ಷರವೇ ‘ೠ‘. ಅನುನಾಸಿಕಗಳಾದ ಙ ಮತ್ತು ಞ ಗಳ ಉಪಯೋಗಗಳೂ ವಿರಳವೇ ಆದರೂ ‘ಅಂಚೆ‘, ‘ಮಂಗ‘ ಶಬ್ದಗಳ ಉಚ್ಚಾರವನ್ನು ಹೇಳಿಕೊಡಲು ಉಪಯುಕ್ತವಾಗಿವೆ. ಕೆಲವು ಅಕ್ಷರಗಳು ಕನ್ನಡದಲ್ಲಿ ಇದ್ದವು, ಅವು ಪೂರ್ತಿ ಮರೆಯಾಗಿವೆ. ಉದಾಹರಣೆಗೆ: ಱ ಮತ್ತು ೞ. ಈ ಅಕ್ಷರಗಳನ್ನು ಉಪಯೋಗಿಸಿ ಕನ್ನಡದಲ್ಲಿ ಈಗ ಯಾವ ಶಬ್ದಗಳೂ ಉಳಿದಿಲ್ಲ, ಅವುಗಳನ್ನು ಹೇಗೆ ಉಚ್ಚರಿಸಬೇಕು ಎನ್ನುವುದನ್ನು ಕೂಡ ಕನ್ನಡಿಗರು ಮರೆತಾಗಿದೆ. ಹೀಗೆ ಕೆಲವು ಅಕ್ಷರಗಳು ಮರೆಯಾಗಿವೆ, ಕೆಲವು ಅನುಪಯುಕ್ತವಾಗಿವೆ. 

ಈಗಿರುವ ಕನ್ನಡದ ಅಕ್ಷರಗಳಿಂದ ದಿನ ನಿತ್ಯ ಉಪಯೋಗಿಸುವ ಕೆಲವು ಶಬ್ದಗಳ ಉಚ್ಚಾರಗಳನ್ನು ತರುವುದು ಕಷ್ಟವಾಗುತ್ತದೆ. ಅದರಲ್ಲೂ ಇಂಗ್ಲೀಷ್ ಶಬ್ದಗಳನ್ನು ಕನ್ನಡದಲ್ಲಿ ಬಳಸುವಾಗ, ಕನ್ನಡದ ಅಕ್ಷರಗಳನ್ನು ಬಳಸಿ ಆ ಉಚ್ಚಾರಗಳನ್ನು ತರುವುದು ಸಾಧ್ಯವಾಗುವುವಿಲ್ಲ.

ಉದಾಹರಣೆಗೆ: ‘loss‘ ಶಬ್ದವನ್ನು ‘ಲಾಸ್‘ ಎಂದು ಬರೆದರೆ ಅದರ ಮೂಲ ಉಚ್ಚಾರ ಅದರಲ್ಲಿ ಬರುವುದಿಲ್ಲ. ನಾನು ಚಿಕ್ಕವನಿದ್ದಾಗ ‘ಲಾ‘ ದ ಮೇಲೆ ‘ಅರ್ಧ ಚಂದ್ರಾಕಾರ (U)‘ ಹಾಕಿ ‘loss’ನಲ್ಲಿರುವ ‘ಆ‘ ಉಚ್ಚಾರವನ್ನು ತರುತ್ತಿದ್ದೆವು. ಆದರೆ ಈ ಅರ್ಧಚಂದ್ರಾಕರಾದ ಪ್ರಯೋಗವನ್ನು ನಾನು ಪುಸ್ತಕಗಳಲ್ಲಿ ಅಥವಾ ಪತ್ರಿಕೆಗಳಲ್ಲಿ ನೋಡಿದ ನೆನಪಿಲ್ಲ. 

ಹಾಗೆಯೇ ‘Apple‘ ಶಬ್ದವನ್ನು“ಆ್ಯಪಲ್‘ ಎಂದು ಬರೆದರೆ ಓದಲು ಸುಲಭ, ‘ಆಪಲ್‘ ಎಂದೋ ‘ಯಾಪಲ್‘ ಎಂದೋ ಬರೆದರೆ ‘Apple’ ಎಂದು ಉಚ್ಚಾರ ಮಾಡುವುದು ಕಷ್ಟ. ಆದರೆ ಈ ‘ಆ್ಯ‘ ಎನ್ನುವ ಶಬ್ದ ಕನ್ನಡದ ವ್ಯಾಕರಣದ ಮಟ್ಟಿಗೆ ನಿಷಿದ್ಧ. 

‘ಫ‘ ಮತ್ತು ‘ಜ‘ ಅಕ್ಷರಗಳನ್ನು ಸ್ವಲ್ಪ ಬದಲಾಯಿಸಿ ‘ಫ಼‘ ಮತ್ತು ‘ಜ಼‘ ಎಂದಾಗಿಸಿ ‘fool‘ ಮತ್ತು ‘zoom‘ ಗಳನ್ನು ಸರಿಯಾಗಿ ಕನ್ನಡದಲ್ಲಿ ಬರೆಯಬಹುದು ಎನ್ನುವುದು ಬಹಳಷ್ಟು ಜನರಿಗೆ ಗೊತ್ತಿರುವ ವಿಚಾರವೇ. ಆದರೆ ಈ ಅಕ್ಷರಗಳ ಬಳಕೆಯನ್ನು ಪತ್ರಿಕೆಗಳಲ್ಲಿ ಪುಸ್ತಕಗಳಲ್ಲಿ ನಾನು ನೋಡಿಲ್ಲ. 

ಱ ಮತ್ತು ೞ ಅಕ್ಷರಗಳನ್ನು ಕನ್ನಡದ ಅಕ್ಷರಮಾಲೆಯಿಂದ ಅಧೀಕೃತವಾಗಿ ಕೈಬಿಟ್ಟಂತೆ, ಫ಼ ಮತ್ತು ಜ಼ ಅಕ್ಷರಗಳನ್ನು ಅಧೀಕೃತವಾಗಿ ಸೇರಿಸಬೇಕಾದ ಅವಶ್ಯಕತೆ ಇದೆಯೇ ಅನ್ನುವುದನ್ನು ತಜ್ಞರು ನೋಡಬೇಕು. ಹಾಗೆಯೇ ‘ಆ್ಯ‘ ಉಪಯೋಗಕ್ಕೆ ಮನ್ನಣೆ ಕೊಡಬೇಕು. ಅಕ್ಷರಗಳ ಮೇಲೆ ಅರ್ಧ ಚಂದ್ರಾಕಾರ(U)ವನ್ನು ಅರೆಸ್ವರವಾಗಿ ಕನ್ನಡದಲ್ಲಿ ಸೇರಿಸಬೇಕು ಎನ್ನುವುದು ನನ್ನ ಅನಿಸಿಕೆ. . 

ಕನ್ನಡದ ಅಂಕಿಗಳು:

ಕನ್ನಡದ ಯಾವುದೇ ಪತ್ರಿಕೆ ತೆಗೆದುಕೊಂಡರೂ, ಯಾವುದೇ ಟಿವಿ ಚಾನೆಲ್ ತೆರೆದರೂ ಅಂಕಿಗಳನ್ನು ಕನ್ನಡದಲ್ಲಿ ಬರೆಯದೇ ಹಿಂದೂ-ಅರೇಬಿಕ್‍ನಲ್ಲಿ ಬರೆಯುತ್ತಾರೆ. ನಾನು ಚಿಕ್ಕವನಿದ್ದಾಗ ಎಲ್ಲ ಪತ್ರಿಕೆಗಳೂ ಕನ್ನಡದಲ್ಲೇ ಅಂಕಿಗಳನ್ನು ಪ್ರಕಟಿಸುತ್ತಿದ್ದರು. ಇತ್ತೀಚಿನ ದಶಕಗಳಲ್ಲಿ ಈ ಬದಲಾವಣೆಯಾಗಿದೆ. ಬರೆಯುವಾಗ ಕನ್ನಡದ ಶಬ್ದಗಳಂತೆ ಚಂದವಾಗಿ ಕಾಣುತ್ತಿದ್ದ ಕನ್ನಡದ ಅಂಕಿಗಳು ಶಾಶ್ವತವಾಗಿ ಸತ್ತು ಹೋಗಿರುವುದನ್ನು ನೋಡಿದರೆ ನನ್ನ ಪೀಳಿಗೆಯವರಿಗಾದರೂ ನೋವಾಗದೇ ಇರದು. 

ಲ್ಯಾಟಿನ್ (ರೋಮನ್) ಲಿಪಿಯಲ್ಲಿ ಕನ್ನಡ:

ಕನ್ನಡದ ಅಂಕಿಗಳನ್ನು ಹಿಂದೂ-ಅರೇಬಿಕ್ ಅಂಕಿಗಳು ನಿರ್ನಾಮ ಮಾಡಿದಂತೆ, ಕನ್ನಡದ ಲಿಪಿಯನ್ನು ಲ್ಯಾಟಿನ್/ರೋಮನ್ ಲಿಪಿ ನಿರ್ನಾಮ ಮಾಡುವ ನಿಟ್ಟಿನಲ್ಲಿ ಅಂಬೆಗಾಲಿಡುತ್ತಿದೆ.   

ಇತ್ತೀಚಿನ ವರ್ಷಗಳಲ್ಲಿ ಯುಟ್ಯೂಬಿನಲ್ಲಿ ಹಾಡುಗಳ ‘ಲಿರಿಕಲ್ ವಿಡಿಯೋ‘ಗಳನ್ನು ಬಿಡುತ್ತಾರೆ. ಹೆಚ್ಚು ಕಡಿಮೆ ಎಲ್ಲ ಕನ್ನಡ ಹಾಡುಗಳ ಬರವಣಿಗೆ ಲ್ಯಾಟಿನ್ ಲಿಪಿಯಲ್ಲಿಯೇ ಇರುತ್ತವೆ. ಇದು ಬರೀ ಕನ್ನಡದಲ್ಲಿ ಆಗಿರುವ ಬದಲಾವಣೆಯಲ್ಲ. ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲೂ ಹಾಡಿನ ಸಾಹಿತ್ಯವನ್ನು ಲ್ಯಾಟಿನ್ನಿನಲ್ಲೇ ಬರೆಯುತ್ತಾರೆ. ಹಾಗೆಯೇ ಬಹಳಷ್ಟು ಕನ್ನಡಿಗರು ವಾಟ್ಸ್ಯಾಪ್ ಮಾಡುವಾಗ, ಮೆಸೇಜುಗಳನ್ನು ಕಳಿಸುವಾಗ ಕನ್ನಡವನ್ನು ಕನ್ನಡದಲ್ಲಿ ಬರೆಯದೇ ಲ್ಯಾಟಿನ್ ಲಿಪಿಯಲ್ಲಿ ಬರೆಯುವುದೇ ಹೆಚ್ಚು. ಕನ್ನಡ ಭಾಷೆಯನ್ನು ಲ್ಯಾಟಿನ್ ಲಿಪಿಯಲ್ಲಿ ಬರೆದರೆ ಮಾತ್ರ ಓದಬಲ್ಲ ಕನ್ನಡಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೇ ಪ್ರವೃತ್ತಿ ಮುಂದುವರೆದರೆ ಕನ್ನಡದ ಲಿಪಿಯನ್ನು ಓದುವ ಮತ್ತು ಬರೆಯುವ ಜನರು ಪೀಳಿಗೆಯಿಂದ ಪೀಳಿಗೆಗೆ ಕಡಿಮೆಯಾಗುತ್ತಾರೆ ಅನ್ನುವುದರಲ್ಲಿ ನನಗೆ ಯಾವ ಅನುಮಾನವೂ ಇಲ್ಲ.