ಛಾಯಾ ಚಿತ್ರಗ್ರಹಣ ಒಂದು ಅದ್ಭುತ ಕಲೆ. ಯಾವುದೋ ಒಂದು ಸಂದರ್ಭ ಒಬ್ಬ ಕವಿ/ಸಾಹಿತಿಯನ್ನು ಹೇಗೆ ಬರೆಯಲು ಪ್ರೇ್ರೇಪಿಸುತ್ತದೆಯೋ ಹಾಗೆಯೇ ಕೆಲವು ದೃಶ್ಯಗಳು ಕ್ಯಾಮೆರಾ ಹಿಂದಿನ ಮನವನ್ನು ಪ್ರಲೋಭಿಸಿ ಕ್ಯಾಮೆರಾ ಕಣ್ಣನ್ನು ಮಿಟುಕಿಸುವಂತೆ ಪ್ರಚೋದನೆ ನೀಡಿ ಬಿಡುತ್ತವೆ.ಆಗ ಮೂಡುವುದು ಒಂದು ಚಿತ್ರ ಮಾತ್ರವಲ್ಲ.
ಹಾಗೆಂತಲೇ ಆಂಗ್ಲ ಭಾಷಾಕಾರ ಪ್ರಿಂಟರ್ಸ್ ಇಂಕ್ ಎನ್ನುವ ಜರ್ನಲ್ ನ ಜಾಹೀರಾತು ಸಂಸ್ಥೆಯಲ್ಲಿ ಕೆಲಸಮಾಡುತ್ತಿದ್ದ ಫ್ರೆಡ್ ಆರ್. ಬರ್ನಾರ್ಡ್ ಎಂಬಾತ ’ಒಂದು ಚಿತ್ರ-ಸಾವಿರ ಪದ’ ಎನ್ನುವ ನುಡಿಗಟ್ಟನ್ನು ಜಾರಿಗೆ ತಂದ. ಆಸಕ್ತಿದಾಯಕ ವಿಚಾರ ಎಂದರೆ ಇದೊಂದು ಚೈನೀಸ್ ನುಡಿಗಟ್ಟು ಎನ್ನುವ ಗಾಳಿ ಮಾತನ್ನೂ ಆತನೆ ಹರಿಬಿಟ್ಟದ್ದು! ಜೊತೆಯಲ್ಲಿ ಈ ಹೇಳಿಕೆ ಹತ್ತು ಸಾವಿರ ಪದ ಎಂದಿರಬೇಕಿತ್ತು ಆದರೆ ತಪ್ಪಾಗಿ ಅನುವಾದಿಸಲಾಗಿದೆ ಎನ್ನುವ ಚರ್ಚೆಯನ್ನೂ ಮಾಡಲಾಯಿತು. ಯಾಕೆಂದು ಊಹಿಸಬಲ್ಲಿರಾ? ಸರಳ ಉತ್ತರ -ಮಾರ್ಕೆಟಿಂಗ್! ಜಾಹೀರಾತುಗಳಲ್ಲಿ ಚಿತ್ರಗಳನ್ನು ಬಳಸುವುದನ್ನು ಜನಪ್ರಿಯಗೊಳಿಸಲು “One Look is Worth A Thousand Words” ಎನ್ನುವುದನ್ನೇ ಆತ “One Picture is Worth Ten Thousand Words “ ಎಂದು ತಿರುಚಿ ಕಾರುಗಳ ಮೇಲೆ ಬರೆಸಿ ಅರ್ಥಪೂರ್ಣವಾದ ನುಡಿಗಟ್ಟೊಂದನ್ನು ಅಧಿಕೃತಗೊಳಿಸಿದ. ಆ ಕಾಲದಲ್ಲಿ ’ಚೈನೀಸ್ ’ ಎಂದ ಕೂಡಲೆ ಜನರಲ್ಲಿ ಕೆರಳುತ್ತಿದ್ದ ಆಸಕ್ತಿಯನ್ನು ಆತ ಉಪಯೋಗಿಸಿಕೊಂಡ. ಆದರೆ ನಿಜದಲ್ಲಿ “ಒಂದು ಚಿತ್ರ -ಎಷ್ಟು ಬೇಕಾದರೂ ಪದ “ ಎನ್ನಬಹುದೇನೋ.ಒಂದೇ ಚಿತ್ರವನ್ನು ನೂರು ಜನ ಕವಿಗಳ ಮುಂದಿಟ್ಟರೆ ಅವರಿಂದ ಹೊರಡುವ ಉದ್ಗಾರಗಳು ನೂರು ಬಗೆಯವಾಗುತ್ತವೆ. ಅನಿವಾಸಿಯ ಅಂಗಳದಲ್ಲಿ ಛಾಯಾಚಿತ್ರಕಾರ ಕವಿಯಾಗಬಲ್ಲ. ಕವಿ ಛಾಯಾಚಿತ್ರಕಾರನಾಗಬಲ್ಲ.ಇಬ್ಬರೂ ಒತ್ತಟ್ಟಿಗೆ ಸೇರಿ ನಡೆಸಿದ ಜುಗಲ್ಬಂದಿಯ ರೀತಿಯ ಪ್ರಯೋಗ ಈ ವಾರದ ವಿಶೇಷ.
ಈ ಚಿತ್ರಗಳನ್ನು ನೋಡಿ ನಿಮ್ಮ ಮನಸ್ಸಿನಲ್ಲಿ ಪದಗಳು ಸ್ಪುರಿಸಿದರೆ ಚಿತ್ರದ ಹೆಸರು/ ನಂಬರನ್ನು ಹಾಕಿ ಕಮೆಂಟು ಬಾಕ್ಸಿನಲ್ಲಿ ಅದನ್ನು ಲಗತ್ತಿಸಿಬಿಡಿ.ಚಿತ್ರದ ಎಲ್ಲ ಶೀರ್ಷಿಕೆಗಳು ಮತ್ತು ಅಡಿಟಿಪ್ಪಣಿ ಚಿತ್ರಕಾರರದು. ಚಿತ್ರದ ಕೆಳಗೆ ಛಾಯಾಚಿತ್ರಕಾರನ ಟಿಪ್ಪಣಿಗಳನ್ನು ಅವರು ಕಳಿಸಿದಂತೆಯೇ ಪ್ರಕಟಿಸಿದ್ದೇನೆ. ಇವರ ಮೆಚ್ಚಿನದ್ದು ಕಪ್ಪು ಬಿಳುಪಿನ ಮೊದಲ ಚಿತ್ರ. ಆತ್ಮೀಯರೊಬ್ಬರೊಂದಿಗೆ ಹಂಚಿಕೊಂಡ ಪತ್ರದಲ್ಲಿ ಸಹೋದರನೋರ್ವನನ್ನು ಕಳೆದುಕೊಂಡಾಗ ಈ ಚಿತ್ರ ಅವರ ಮನದಲ್ಲಿ ಹಾದು ಹೋದದನ್ನು ಇವರು ನೆನೆದಿದ್ದಾರೆ.ಅನಿವಾಸಿಯ ಅಂಗಳದಲ್ಲಿ ಈ ವಾರ ಕಣ್ಣಿನ ವೈದ್ಯ, ಬರಹಗಾರ,ಛಾಯಾಚಿತ್ರಕಾರ ಡಾ.ಶ್ರೀವತ್ಸ ದೇಸಾಯಿಯವರ ಚಿತ್ರಗಳನ್ನು ಸಂಭ್ರಮಿಸೋಣ-ಸಂ )
ಬೆಳಕು-ಮುಸುಕಿನತ್ತ ಸೈಕಲ್ ಸವಾರ
ಮರುಳ ಮಾಯೆಯ ಮಬ್ಬಿನಲಿ
ಬೆಳಕಿಂಡಿಯ ದಿಕ್ಕಿನಲಿ
ತ್ವರಿತ ಚಲಿಸೆ ಭೂಮಿ ಕನಲಿದೆ
ಪೊರೆದ ಬದುಕಿಗೆ ಬೆನ್ನ ತಿರುಗಿಸೆ
ಗಮ್ಯವೆಲ್ಲಿಗೆ ಪಯಣಿಗ?
(The smoke is often misinterpreted as a mist or fog. The sunrays make people think it to be very early morning but from the angle of the incident rays, you can guess that it was mid-morning. Your eyes are drawn to the origin of the ‘mist’ at the bottom right-hand corner and then they wander up the tree. After reaching the top they trace the shafts of rays downwards and reach the floor. After seeing the shadow of the cyclist they come to rest on the cyclist himself, now object of our full focus. The cyclist is well balanced. His face is turned away from you. You want to see his face and catch his expression. Where is he going? Where is he coming from? Is he in a rush? Is there happy news he is taking? Perhaps the birth of a son in the family? Or perhaps a piece of sad news? Or is he on one of his mundane daily routines? I might modestly say that I liked it very much and it has been a favorite of mine)
Poppies
ಮರಳಿ ಬಂದನಿವ ಮತ್ತೆ ವಸಂತ ಮುಗಿಲ ಚದುರಿಸುತ ಬೆತ್ತಲಾಗಿಪ ಬಾನ ರೇಷ್ಮ ಕದಪಿನ ಪ್ರಫುಲ್ಲ ಕುಸುಮಿತ ಹಚ್ಚಿಪ ಹಸಿರ ಇಳೆಗೆ ಹರಿಶಿನ, ಕುಂಕುಮ!
(red poppies make an attractive picture, against the blue sky. slightly enhanced on a software, I admit )
(An everyday picture. A twig, a few berries and rain. drops. One has to capture it in the camera, that’s all. Red is photographer’s delight. Always look for red colour. It is always impressive. That water drop tantalisingly hanging there on the well focused berry. You keep watching to see if it going to drip in a minute, even in a still picture! I keep watching! The slow shutter speed makes you see the rain drops produce streaks. It makes it dynamic! I haven’t got the technical details nor the ‘f’ number of the aperture)
Reflections
ಕಾದು ಕುಳಿತ ಕಾರ್ಮೋಡವೋ
ಬಸವಳಿಸಿ ಸರಿವ ನಿಗೂಢತೆಯೋ
ಶಾಂತ ಇಂದು ಮನೆ ಮನವು
ಬಿಂಬ ಮುತ್ತಿಕ್ಕಿದ ಪ್ರತಿಬಿಂಬವು!
(On an early autumn evening, clear air, dark clouds, blue water reflecting blue sky, but not the ominous dark clouds and the colourfully painted canal-side boats, which also act as the abode of the boatmen –all these make it a picture-perfect view and idyllic Engish countryside)
Refections 2
ನೀ ಹಾದು ಹೋದ ಹಾದಿ ನಿಚ್ಚಳ
ಉಳಿಸಿ ತೆರಳಿದ ನೆನಪುಗಳ ಚಿತ್ತಾರ
ಕರಗಿ ಮುಳುಗಿಹ ಕರಿಯ ನೆರಳ
-ಮೇಲೆ ಉದಯಿಸುತಿಹನು ಹೊಸತು ಸೂರ್ಯ!
(Reflections’ is one of my favourite subjects as it instantly doubles the image, as if there are two pictures in one! This was taken at the lakeside one morning after a few aeroplanes had left their jet stream trail in the sky. The ripples on the water make the picture even more interesting)
Reflections 3
ಒಂದರ ಮೇಲೊಂದು ಪೇರಿಸಿಟ್ಟ ಮನೆಗಳಿವು
ತಲೆಕೆಳಗಾಗಿವೆ ನಿಂತ ನೀರಿನೊಳಗೆ!
ಜೊತೆ ಜೊತೆಯೇ ನಾವು ಮೇಲ್ನೋಟಕೆ
ಬಾಗಿ ನೋಡಲೆ ಒಮ್ಮೆ
ಇದ್ದರೆ ಆಳದಲಿ ಇನ್ನೊಂದು ಮಗ್ಗಲು?
——————————————————ಎಲ್ಲ ಪುಟ್ಟ ಪದ್ಯಗಳು– ಡಾ. ಪ್ರೇಮಲತ ಬಿ.
ಯುಗಾದಿ ಹಬ್ಬ ಈ ವರ್ಷ ಮಾರ್ಚ್ ತಿಂಗಳಲ್ಲೇ ಬಂದು ಹೋಯ್ತು. ಆದರೆ ಯು.ಕೆ. ಕನ್ನಡಿಗರಿಗೆ ಇಡೀ ಏಪ್ರಿಲ್ ನ ವಾರಾಂತ್ಯಗಳೆಲ್ಲ ಯುಗಾದಿಯ ಕಂಪನ್ನು ಸೂಸುವ ದಿನಗಳಾಗಿವೆ. ಕನ್ನಡದ ಕುಹೂ… ಈ ತಿಂಗಳೆಲ್ಲ ಕಿವಿಯನ್ನು ತುಂಬುವ ಹರ್ಷ! ಸಿನಿಮಾ, ಸಂಗೀತ, ಸಾಹಿತ್ಯ ,ಸಾಂಸ್ಕೃತಿಕ ಕಾರ್ಯಕ್ರಮಗಳ ಹಸಿರು ತೋರಣ. ಹೊಸಬೇರು , ಹಳೆ ಚಿಗುರುಗಳೆಲ್ಲ ತಾಜಾತನದಿಂದ ಮೈ ತುಂಬಿಕೊಳ್ಳುವ ಸಮಯವಿದು. ಸ್ವಚ್ಛ, ಶುಭ್ರ ಚೈತನ್ಯದಲ್ಲಿ ನಳ ನಳಿಸುವ ಈ ಸಮಯ ಯು.ಕೆ. ಕನ್ನಡಿಗರ ಕಣ್ಮನಗಳನ್ನು ಸಡಗರದ ಕಲರವಗಳಿಂದ ತುಂಬುವ ಸಂಭ್ರಮದ ಸಮಯ.
ಏಪ್ರಿಲ 8 ರಂದು ಡಾನ್ಕ್ಯಾಸ್ಟರಿನ ಮತ್ತು ಸುತ್ತಲ ಕನ್ನಡಿಗರಿಗೆ ಹೊಚ್ಚ, ಹೊಸ ಕನ್ನಡ ಸಿನಿಮಾವನ್ನು ವೀಕ್ಷಿಸುವ ಅವಕಾಶ. ಹೊಚ್ಚ, ಹೊಸತೆಂದರೆ ಇನ್ನೂ ಕರುನಾಡಿನಲ್ಲೇ ವಾಣಿಜ್ಯ ಮಟ್ಟದಲ್ಲಿ ಬಿಡುಗಡೆಯಾಗಿರದ, ನಾಲ್ಕು ರಾಜ್ಯ ಪ್ರಶಸ್ತಿಗಳನ್ನು ಬಾಚಿಕೊಂಡು ಅಂತರ ರಾಷ್ಟ್ರೀಯ ಮಟ್ಟದ ಸಿನಿಮಾ ಫೆಸ್ಟಿವಲ್ ಗಳಲ್ಲಿ ಪ್ರದರ್ಶನಗೊಂಡಿರುವ ‘ಜೀರ್ಜಿಂಬೆ’ ಎನ್ನುವ ಕುತೂಹಲಕರ ಹೆಸರನ್ನು ಹೊತ್ತ ಸಿನಿಮಾ. ಹೊಸ ಭರವಸೆಗಳ ಯುವ ಸರದಾರ ಕಾರ್ತಿಕ್ ಸರಗೂರು ಅವರ ನಿರ್ದೇಶನದ ಚಿತ್ರ.
ಕನ್ನಡ ಸಿನಿಮಾದಲ್ಲಿ ಹೊಸತನ್ನು ಬಯಸುವವರಿಗೆ, ಹೊಸತನ್ನು ಕೊಡುವ ಉತ್ಸಾಹೀ ಜನರಿದ್ದಾರೆ. ಈ ಬಾರಿ ಅಂತಹ ಉತ್ಸಾಹದ ಮೂಟೆಯನ್ನೊತ್ತು ಕ್ಯಾಲಿಫೋರ್ನಿಯಾದ ಫೋಲ್ಸಾಮ್ ನಿಂದ ಬಂದಿಳಿದವರು ಬೆಳದಿಂಗಳ ಬಾಲೆ ಖ್ಯಾತಿಯ ಸುಮನ್ ನಗರ್ಕರ್ ಮತ್ತು ಅವರ ಪತಿ ಗುರುದೇವ್ ನಾಗರಾಜ್. ಏಪ್ರಿಲ್ 14 ರಂದು ನಡೆಯುತ್ತಿರುವ ಕನ್ನಡಿಗರು ಯು.ಕೆ. (ಕೆ.ಯು.ಕೆ) ಆಯೋಜಿಸಿಕೊಂಡಿರೋ ಯುಗಾದಿ ಹಬ್ಬಕ್ಕೆ ಅತಿಥಿಗಳಾಗಿ ಬಂದಿರುವ ಅವರು ಇದೇ ಅವಕಾಶವನ್ನು ಸದುಪಯೋಗಿಸಿಕೊಂಡು ‘ಜೀರ್ಜಿಂಬೆ’ ಚಿತ್ರದ ಜೊತೆ ಯು.ಕೆ.ಯ ಹಲವೆಡೆ ಪ್ರಯಾಣ ಮಾಡಿ, ಈ ಸಿನಿಮಾದ ಪ್ರದರ್ಶನ ನೀಡಿ ಒಂದು ಉತ್ತಮ ಸಿನಿಮಾಕ್ಕೆ ರಾಯಭಾರಿಗಳಾಗಿ ಕೆಲಸಮಾಡುವ ಉತ್ಸಾಹ ತೋರಿದ್ದಾರೆ.
ಚಿತ್ರ ಕೃಪೆ- ಗುರುದೇವ್ ನಾಗರಾಜ್
ಸುಮನ್ ನಗರ್ಕರ್ 1993-2001 ರವರೆಗೆ ನಿಷ್ಕರ್ಷ, ನಮ್ಮೂರ ಮಂದಾರ ಹೂವು, ಬೆಳದಿಂಗಳ ಬಾಲೆ, ಅಮ್ಮಾವ್ರ ಗಂಡ, ದೋಣಿಸಾಗಲಿ, ಹೂ ಮಳೆ, ಮುಂಗಾರಿನ ಮಿಂಚು, ರೆ.., ಯಕ್ಷಪ್ರಶ್ನೆ, ಪ್ರೀತ್ಸು ತಪ್ಪೇನಿಲ್ಲ ಮುಂತಾದ ಚಿತ್ರಗಳಲ್ಲಿ ನಾಯಕ ನಟಿಯ ಪಾತ್ರದಿಂದ ಹಿಡಿದು, ನಾನಾ ಬಗೆಯ ಪಾತ್ರಗಳಲ್ಲಿ ನಟಿಸಿದ ಕಲಾವಿದೆ. ಸುನಿಲ್ ಕುಮಾರ್ ದೇಸಾಯಿ, ನಾಗತಿ ಹಳ್ಳಿ ಚಂದ್ರಶೇಖರ್ ಮುಂತಾದ ನಿರ್ದೇಶಕರ ಗರಡಿಯಲ್ಲಿ ಪಳಗಿದ ಪ್ರಬುದ್ದ ನಟಿ. ಆದರೂ ಈ ಎಂಟು ವರ್ಷಗಳ ಕಾಲದಲ್ಲಿ ಈ ನಟಿಗೆ ಸವಾಲೆಸೆಯುವ ಪಾತ್ರಗಳು ದೊರಕಿದ್ದು ಕಡಿಮೆಯೇ. ರಂಗಭೂಮಿಯಲ್ಲಿ ನಟಿಸಿದ ಅನುಭವದ ಗುರುದೇವ್ ರನ್ನು ಮದುವೆಯಾಗಿ ಅಮೆರಿಕಾಗೆ ಹೋಗಿ ಈ ನಟಿ 15 ವರ್ಷಗಳ ಕಾಲ ಸುದ್ದಿಯಿಲ್ಲದೆ ಕಣ್ಮರೆಯಾಗಿದ್ದವರು. ಈ ಕಾಲದಲ್ಲಿ ಬದುಕು ಕೊಟ್ಟ ಎಲ್ಲ ಬಗೆಯ ಅನುಭವಗಳ ಮೂಸೆಯಲ್ಲಿ ಪಳಗಿದ ಮೇಲೆ ಮತ್ತೆ ಯಾಕಾಗಬಾರದು ಅಂತ ನಾಗತಿಯವರು ಕೊಟ್ಟ ಕರೆಗೆ ಓಗೊಟ್ಟು 2016 ರಲ್ಲಿ ಮರಳಿ ಬಂದದ್ದು ‘ಇಷ್ಟಕಾಮ್ಯ’ ಚಿತ್ರದ ಮೂಲಕ. ಈ ಚಿತ್ರದಲ್ಲಿ ಮದುವೆಯೆನ್ನುವ ದೇಗುಲದ ನೈಜ ಮೌಲ್ಯಗಳನ್ನು ಪ್ರಶ್ನಿಸುವ, ಅದನ್ನು ಹೊರತುಪಡಿಸಿಯೂ ಇರಬಹುದಾದ ಗಂಡು-ಹೆಣ್ಣಿನ ಸಂಭಂದವನ್ನು ಪ್ರತಿಪಾದಿಸುವ ಪಾತ್ರ. ಈ ಪಾತ್ರ ದೊರಕಿದ್ದು ಅಕಸ್ಮಿಕವೋ , ಮತ್ತೊಂದೋ ಒಟ್ಟಿನಲ್ಲಿ ಇವರ ಚಿತ್ರರಂಗದ ವೃತ್ತಿಯಲ್ಲಿ ಹೊಸ ತಿರುವುಗಳು ತೆರೆದುಕೊಂಡಿವೆ! ಈ ನಟಿ ನಟನೆಯನ್ನು ಮೀರಿ ಬೆಳೆದು ನೆಟ್ವರ್ಕಿಂಗ್, ನಿರ್ದೇಶನ, ನಿರ್ಮಾಣ ಮತ್ತು ಹೊಸಬಗೆಯ ಚಿತ್ರ ನಿರ್ಮಾಣಗಳಿಗೆ ಯೋಜನೆ ಹಾಕಿದ್ದಾರೆ. ಈ ನಟಿಯ ಬೆಂಬಲಕ್ಕೆ ಗಂಡ ಗುರುದೇವ್ ಪೂರ್ಣ ಪ್ರಮಾಣದಲ್ಲಿ ನಿಂತಿದ್ದಾರೆ.
ಚಿತ್ರರಂಗದ ಬಗ್ಗೆ ವಸ್ತುನಿಷ್ಠ ಅರಿವಿದ್ದು, ಸಿನಿಮಾದ ತಳುಕು-ಬಳುಕುಗಳಿಗೆ ಬಗ್ಗದ ಈ ಪ್ರತಿಭಾನ್ವಿತ ನಟಿ, 15 ವರ್ಷಗಳ ನಂತರ ಚಿತ್ರರಂಗಕ್ಕೆ ಮರಳಿ ಬಂದಿದ್ದಾದರೂ ಹೇಗೆ? ಯಾಕೆ? ಯಾವ ಭರವಸೆಯ ಮೇಲೆ? ಅವರ ಮುಂದಿನ ಯೋಜನೆಗಳೇನು? ಅನ್ನುವ ಕೂತೂಹಲ ನನ್ನನ್ನು ಕಾಡುತ್ತಿತ್ತು.
ಜೀರ್ಜಿಂಬೆಯ ಪ್ರದರ್ಶನವನ್ನು ಡಾನ್ಕ್ಯಾಸ್ಟರಿನಲ್ಲಿ ಆಯೋಜಿಸಿದವರು ಸುಮನಾ ಮತ್ತು ಡಾ. ಗಿರೀಶ್ ವಶಿಷ್ಠ ದಂಪತಿಗಳು. ಇವರ ಮನೆಯಲ್ಲಿಯೇ ಸುಮನ್ ನಗರ್ಕರ್ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿದ್ದು. ತಮ್ಮ ಮೂರು ದಿನದ ಹೊಸ ಕೂಸಾದ ಕ್ಯಾಮೆರಾವನ್ನು ಜೊತೆಗೆ ಹಳೆಯ ಕ್ಯಾಮರಾ ಮತ್ತು ಮೈಕ್ರೋಫೋನುಗಳನ್ನು ತಮ್ಮ ಎಂದಿನ ಉತ್ಸಾಹದಿಂದ ತಂದವರು ಡಾ. ಶ್ರೀವತ್ಸ ದೇಸಾಯಿ .ಈ ಸಂದರ್ಭದಲ್ಲಿ ‘ಅನಿವಾಸಿ’ ತಂಡದ ಪರವಾಗಿ ಸುಮನ್ ನಗರ್ಕರ್ ಅವರೊಡನೆ ಭೇಟಿ ಮಾಡಿ ನನ್ನನ್ನು ಕಾಡಿದ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ ನಡೆಸಿದ ಸಂವಾದದ ಸಾರಾಂಶವಿದು. ಇದೇ ಸಂದರ್ಶನದ ತುಣುಕನ್ನು ದೇಸಾಯಿಯವರ ವಿಡೀಯೋ ಮೂಲಕ ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ: https://www.youtube.com/watch?v=xkp_uKZwqcQ
ಪ್ರ : ಯು. ಕೆ. ಕನ್ನಡಿಗರನ್ನು ಇದೇ ಮೊದಲ ಬಾರಿಗೆ ಎಡಿನ್ಬರೋ, ಡಾನ್ಕ್ಯಾಸ್ಟರ್, ಲಂಡನ್, ಬ್ರಿಸ್ಟಲ್ ಮುಂತಾದ ನಗರಗಳಲ್ಲಿ ಭೇಟಿ ಮಾಡ್ತಿದ್ದೀರಿ. ಈ ಬಗ್ಗೆ ಏನನ್ನಿಸ್ತಾ ಇದೆ?
ತುಂಬ ಸಂತೋಷ ಆಗ್ತಾ ಇದೆ. ನಾವು ಸ್ಕಾಟ್ಲ್ಯಾಂಡಿಗೆ ಈ ಮೊದ್ಲು ಹೋಗಿರಲಿಲ್ಲ. ಇದೇ ಮೊದಲ ಬಾರಿಗೆ ಗ್ಲಾಸ್ಗೋ, ಎಡಿನ್ಬರೋ ಕಡೆ ಹೋಗಿದ್ದು. ಅಲ್ಲಿ ಇಬ್ಬರು , ಮೂವರು ಕನ್ನಡಿಗರ ಮನೇಲಿ ಉಳಕೊಂಡಿದ್ವಿ. ಆಶ್ಚರ್ಯ ಅಂದರೆ ಹೊಸ ಪರಿಚಯ ಅಂತ ಅನ್ನಿಸ್ಲೇ ಇಲ್ಲ. ಕಾರ್ಯಕ್ರಮಾನು ಚೆನ್ನಾಗಿ ನಡೀತು. ಇವತ್ತು ಡಾನ್ಕ್ಯಾಸ್ಟರಿನ ಕನ್ನಡಿಗರನ್ನು, ನಿಮ್ಮನ್ನೆಲ್ಲ ಭೇಟಿ ಮಾಡ್ತಾ ಇದ್ದೀವಿ. ಜೀರ್ಜಿಂಬೆ ಚಿತ್ರದ ಪ್ರದರ್ಶನನೂ ನಡೀತಾ ಇದೆ. ಇದೇ ಸಿನಿಮಾ ಲಂಡನ್ ಮತ್ತೆ ಬ್ರಿಸ್ಟಲ್ ನಲ್ಲೂ ಪ್ರದರ್ಶನ ಕಾಣುವುದಿದೆ.ಇದೆಲ್ಲ ಯು.ಕೆ ಕನ್ನಡಿಗರನ್ನು ಭೇಟಿ ಮಾಡೋ ಒಳ್ಳೇ ಅವಕಾಶ ಕೂಡ. ಇವೆಲ್ಲ ಆತ್ಮೀಯವಾದ ಭೀಟಿಗಳು ಅಂತ ಅನ್ನಿಸ್ತಾ ಇದೆ
ಪ್ರ: ಈ ಓಡಾಟದ ಮೂಲಕ, ಯು.ಕೆ ಕನ್ನಡಿಗರನ್ನು ಭೇಟಿ ಮಾಡೋ ಮೂಲಕ ಏನನ್ನಾದರೂ ಸಾಧಿಸೋ ಉದ್ದೇಶ, ಹಂಬಲ ಇದೆಯಾ?
ಅಫ್ಕೋರ್ಸ್. ಮುಖ್ಯವಾಗಿ ನೆಟ್ವರ್ಕಿಂಗ್. ನಮ್ಮ ಪರಿಚಯಾನಾ ಇನ್ನೂ ವಿಶಾಲಗೊಳಿಸ್ಕೊಳ್ಳೋ ಉದ್ದೇಶ ಇದೆ. ಜೊತೆಗೆ ಜೀರ್ಜಿಂಬೆ ಸಿನಿಮಾವನ್ನು ಪ್ರದರ್ಶಿಸೋ ಅವಕಾಶ ಸಿಗ್ತಾ ಇದೆ.ಇದೊಂದು ಒಳ್ಳೆ ಚಿತ್ರ. ನಾಲ್ಕು ರಾಜ್ಯ ಪ್ರಶಸ್ತಿ ಪಡೆದಿರೋ ಚಿತ್ರ. ಸಾಮಾಜಿಕ ತಿಳಿವಳಿಕೇನ ಹೆಚ್ಚಿಸೋ ಅಂತ ಚಿತ್ರ. ಅದನ್ನೇ ಈ ಭೇಟಿ ಮೂಲಕ ಮಾಡ್ತಾ ಇದ್ದೀವಿ.
ಚಿತ್ರ ಕೃಪೆ- ಗುರುದೇವ್ ನಾಗರಾಜ್
ಪ್ರ: ಎಂಟು ವರ್ಷಗಳ ನಿಮ್ಮ ಮೊದಲ ಭಾಗದ ಸಿನಿಮಾ ವೃತ್ತಿಯಲ್ಲಿ ಬಹಳ ವಿರಳವಾಗಿ ಅಭಿನಯಿಸಿದ್ರಿ. ಯಾಕೆ? ಇದು ನಿಮ್ಮ ಆಯ್ಕೆ ಆಗಿತ್ತಾ ಅಥವಾ ಚಿತ್ರ ರಂಗ ನಿಮ್ಮ ಪ್ರತಿಭೆನಾ ಸರಿಯಾಗಿ ಉಪಯೋಗಿಸ್ಕೊಳ್ಳಲಿಲ್ಲವಾ?
(ನಗ್ತಾ) ಇದು ನಿಜ. ನಾನು ಬಹಳ ವಿರಳವಾಗಿ ನಟಿಸಿದ್ದು. ಸಂಖ್ಯೆ ದೃಷ್ಟಿಯಿಂದ ನೋಡಿದ್ರೆ ಇನ್ನೂ ತುಂಬಾ ಚಿತ್ರಗಳಲ್ಲಿ ಮಾಡಬಹುದಿತ್ತು. ಆದ್ರೆ ನಾನು ಪಾತ್ರಕ್ಕೆ ಪ್ರಾದಾನ್ಯತೆ ಕೊಡ್ತಾ ಇದ್ದೆ. ಹೀರೋಯಿನ್ನೇ ಇರಬಹುದು, ನಮ್ಮೂರ ಮಂದಾರ ಹೂವಲ್ಲಿ ತಂಗಿ ರೋಲೇ ಇರಬಹುದು, ಮುಂಗಾರಿನ ಮಿಂಚಲ್ಲಿ ಸೆಕೆಂಡ್ ಹೀರೊಯಿನ್ ರೋಲು, ಅಮ್ಮಾವ್ರ ಗಂಡದಲ್ಲಿ ವಿಲನ್ನು ಹೀಗೆ ಬೇರೆ ಬೇರೆ ಪಾತ್ರದಲ್ಲಿ ಮಾಡಿದ್ದು. ಆದ್ರೆ ಪಾತ್ರಗಳು ಮನಸ್ಸಲ್ಲಿ ನಿಲ್ಲೋ ಅಂತವು. ಹಾಗಾಗಿ ತುಂಬಾ ಚೂಸಿಯಾಗಿದ್ದೆ ಅಂತ ಹೇಳಬಹುದು. ಜೊತೆಗೆ ಆಯ್ಕೆ ಮಾಡಿಕೊಳ್ಳೋಕೆ ಅವಕಾಶಗಳು ಹೆಚ್ಚು ಸಿಗಲಿಲ್ಲ. ಹಾಗಾಗಿ ಸಂಖ್ಯೆ ಕಡಿಮೇನೆ ಅಂತ ಹೇಳಬಹುದು.
ಪ್ರ: ಇಷ್ಟಕಾಮ್ಯದ ಮೂಲಕ ಸಿನಿಮಾ ರಂಗದಲ್ಲಿ ಎರಡನೆ ಇನ್ನಿಂಗ್ಸ್ ಆರಂಭಿಸಿದ್ದೀರಿ. 15 ವರ್ಷಗಳ ಬ್ರೇಕ್ ನಂತರ ಇದು ನಡೆದದ್ದು ಹೇಗೆ?
ನಾನು ಮದುವೆ ಆಗಿ ಅಮೆರಿಕಾಗೆ ಹೋದ ಮೇಲೆ ಬ್ರೇಕ್ ತಗೋತೀನಿ ಅಂತಲೇ ಗೊತ್ತಿರಲಿಲ್ಲ. ಇಂಟೆನ್ಷನಲ್ ಆಗಿ ಬ್ರೇಕ್ ತಗೊಳ್ಳಲಿಲ್ಲ. ಬಂದು –ಹೋಗಿ ಮಾಡ್ತಾ ಅಭಿನಯಿಸೋಣ ಅಂತಲೇ ಅಂದು ಕೊಂಡಿದ್ದು. ಆದ್ರೆ ಜನ ಇವರು ಅಮೆರಿಕಾಗೆ ಹೋದ ಮೇಲೆ ಇಲ್ಲಿ ಆಕ್ಟ್ ಮಾಡಲ್ಲ ಅಂತ ಅಸ್ಯೂಮ್ ಮಾಡ್ಕೊಂಬಿಟ್ಟರು. ಹಾಗೇ ವರ್ಷಗಳು ಕಳೆದು ಹೋದವು.
2-3 ವರ್ಷಗಳ ಕೆಳಗೆ ನಾಗತಿಹಳ್ಳಿಯವರು ಎರಡ್ಮೂರು ಬಾರಿ ಅಮೆರಿಕಾಗೆ ಬಂದು, ನಮ್ಮನೇಲೆ ಉಳಕ್ಕೊಂಡಿದ್ದರು. ಯಾಕೆ ಅವರ ಸಿನಿಮಾದಲ್ಲಿ ಮಾಡಬಾರದು ಅಂತ ಕೇಳಿದ್ರು. ಆ ಟೈಂನಲ್ಲಿ ಅವರು ‘ಇಷ್ಟಕಾಮ್ಯ’ ಸಿನಿಮಾ ಮಾಡ್ತಿದ್ರು. ಅದರಲ್ಲೊಂದು ಪಾತ್ರ ಮಾಡಿ ಅಂದ್ರು. ಚಿಕ್ಕ ಪಾತ್ರ, ಆದ್ರೂ ಉತ್ತಮ ಪಾತ್ರ . ಹಾಗಾಗಿ ಮತ್ತೆ ಎಲ್ಲ ಶುರುವಾಯ್ತು.
ಚಿತ್ರ ಕೃಪೆ-ಡಾ. ಶ್ರೀವತ್ಸ ದೇಸಾಯಿ
ಪ್ರ: ಈ ಎರಡನೇ ಇನ್ನಿಂಗ್ಸ್ನಲ್ಲಿ ನಿಮ್ಮದು ಪ್ರಬುದ್ದವಾದ, ವಿಚಾರವಾದಿ ಪಾತ್ರಗಳು. ಒಂದು ಸಂದರ್ಶನದಲ್ಲಿ ವಯಸ್ಸಾದ ನಟ –ನಟಿಯರಿಗೆ (ಹೀರೋಗಳನ್ನು ಹೊರತುಪಡಿಸಿ) ನಮ್ಮಲ್ಲಿ ಹೆಚ್ಚಿನ ಅವಕಾಶಗಳಿಲ್ಲ ಅಂತ ನೀವು ಹೇಳಿದ್ದೀರಿ. ಈ ಬಗ್ಗೆ ಸ್ವಲ್ಪ ವಿಸ್ತಾರವಾಗಿ ಹೇಳಿ.
ಕನ್ನಡ ಚಿತ್ರರಂಗನೇ ಅಲ್ಲ. ಇಡೀ ಭಾರತೀಯ ಚಿತ್ರರಂಗದಲ್ಲಿ ನಟಿಗೆ 30 ರಿಂದ 40 ವರ್ಷ ಆಗಿಬಿಟ್ರೆ ಅಲ್ಲಿಗೆ ಮುಗಿದೇ ಹೋಯ್ತು.ಅವರಿಗೆ ಉತ್ತಮ ಪಾತ್ರ ಸಿಗೋದು ನಿಂತು ಹೊಗುತ್ತೆ. ಅದೇ ಇಂಗ್ಲೀಷ್ ಸಿನಿಮಾದಲ್ಲಿ ಒಳ್ಳೇ ಕಥೆ ಇದ್ರೆ,ಖಂಡಿತಾ ಪಾತ್ರ ಸಿಗತ್ತೆ. ನಮ್ಮಲ್ಲಿ ನಟಿ ಅಂದ್ರೆ ಬರೀ, ಹಾಡು,ಕುಣಿತ ,ಲವ್ ಬರೀ ಇಷ್ಟೇ ಅಗಿದೆ. ಹಾಗಾಗೇ ನಾನು ಮೊದಲಿಂದ ಪಾತ್ರಗಳ ಬಗ್ಗೆ ನಿಖರ ಆಯ್ಕೆ ಇಟ್ಕೊಂಡಿದ್ದೆ.
ಆದರೆ ಇತ್ತೀಚೆಗೆ ಕೆಲವು ಹೊಸ ನಿರ್ದೇಶಕರು ಹೊಸ ಕಾನ್ಸೆಪ್ಟುಗಳನ್ನು ಒಪ್ಕೋತಾ ಇದ್ದಾರೆ.ಹೊಸ ಹೊಸ ವಿಚಾರಧಾರೆಗಳಿವೆ. ಹೊಸ ಥರದ ಕಥೆಗಳನ್ನು ತರ್ತಾ ಇದ್ದಾರೆ.ಈ ಕಾರಣ ಬೇರೆ ಥರದ ಪಾತ್ರಗಳನ್ನು ಕನ್ನಡ ಚಿತ್ರರಂಗದಲ್ಲಿ ಮಾಡಬಹುದು ಅನ್ನೋ ಆಶಯ ಹುಟ್ಟಿದೆ. Hope it works out!
ಪ್ರ: ನೀವು ಮತ್ತೆ ಗುರುದೇವ್ ಅವರು ಸೇರಿ ‘ಸುಮನ್ ನಗರ್ಕರ್ ಪ್ರೊಡಕ್ಷನ್ ‘ ಶುರು ಮಾಡಿದ್ರಿ. ಇದರ ಹಿನ್ನಲೆ ಏನು? ಇದಕ್ಕೆ ಏನು ಸ್ಪೂರ್ತಿ?
ಅಮೆರಿಕಾದಲ್ಲೇ ಇರೋ ಕೆಲವ್ರು ಸ್ನೇಹಿತ್ರು ಸೇರ್ಕೋಂಡು ‘ಬಬ್ರೂ’ ಅನ್ನೋ ಸಿನಿಮಾ ಶುರು ಮಾಡೋಣ ಅಂದ್ಕೊಂಡ್ವಿ. ಸಮಾನ ಆಸಕ್ತಿ ಇರೋ ಹಲವರು ಸ್ನೇಹಿತರು ಸೇರಿ ಈ ನಿರ್ಧಾರ ಮಾಡಿದ್ದು. ಇದು friend’s funded cinema. ಸುಮಾರು ಹತ್ತು ಜನ ಇದ್ದೀವಿ. ಹೀಗಾಗಿ ಎಲ್ರಿಗೂ ಒಂದು ಬ್ಯಾನರ್ರಿನ ಅಗತ್ಯ ಇತ್ತು.. ಹಾಗಾಗಿ ನಮ್ಮದೇ ಪ್ರೊಡಕ್ಷನ್ ಶುರುಮಾಡಿದ್ವಿ.
ಪ್ರ: ಯುಗ ಪ್ರೊಡಕ್ಷನ್ ಮತ್ತು ನಿಮ್ಮದೇ ಬ್ಯಾನರಿನ ಕೆಳಗೆ ನೀವು ‘ಬಬ್ರೂ’ ಚಿತ್ರನ ನಿರ್ಮಿಸ್ತಿದ್ದೀರಿ? ಇದು ಬೇರೆ ಕನ್ನಡ ಚಿತ್ರಗಳಿಗಿಂತ ಯಾವ ರೀತಿ ಭಿನ್ನ?
ನಮಗೆ ಗೊತ್ತಿರೋ ಹಾಗೆ ಇದು ಸಂಪೂರ್ಣ ಅಮೆರಿಕಾಲ್ಲೇ ಚಿತ್ರೀಕರಣ ಆಗಿರೋ ಮೊದಲನೇ ಕನ್ನಡ ಚಿತ್ರ. ಅಂದ್ರೆ ಕೆಲವು ಕನ್ನಡ ಚಿತ್ರಗಳನ್ನು ಅರ್ಧ ಅಮೆರಿಕಾದಲ್ಲಿ ಶೂಟ್ ಮಾಡಿರುತ್ತಾರೆ. ಅಥವಾ ಹಾಡುಗಳ ಚಿತ್ರೀಕರಣ ಮಾತ್ರ ವಿದೇಶಗಳಲ್ಲಿ ಆಗಿರುತ್ತೆ. ಆದ್ರೆ ಬಬ್ರೂ ಕಥೆ ಪೂರ್ತಿ ಅಮೆರಿಕಾದಲ್ಲೇ ನಡೆಯುತ್ತೆ. ಹಾಗಾಗಿ ಇದು ಹೊಸತು. ಕಥೆ ಶುರುವಾಗೋದು, ಮುಗಿಯೋದು ಎಲ್ಲ ಅಮೆರಿಕಾಲ್ಲಿನೇ. ಕೆನಡಾ ಬಾರ್ಡರಿಂದ ಮೆಕ್ಸಿಕೋ ಬಾರ್ಡರ ವರೆಗೆ ವೆಸ್ಟರ್ನ್ ಅಮೆರಿಕಾ ಮೂಲಕ ಆಗೋ ಪ್ರಯಾಣ ಮತ್ತು ನಡುವೆ ನಡೆಯುವ ಹಲವು ಘಟನೆಗಳು ಮತ್ತು ತಿರುವುಗಳ ಕಥೆ ಇರೋ ಚಿತ್ರ.ಇದು ಪೂರ್ಣ ಪ್ರಮಾಣದ ಕನ್ನಡ ಚಲನ ಚಿತ್ರ.
First film completely made in US by people living in US.
ಸಂಗೀತ ಕೂಡ ಭಿನ್ನ. ಇದರಲ್ಲಿ ನಾವು ಹೊಸ ರೀತಿಯ ಸಂಗೀತ ಅಕಿಪಲ್ಲಿ ಮ್ಯೂಸಿಕ್ ಬಳಸ್ತಾ ಇದ್ದೀವಿ. ಜೊತೆಗೆ ಇದು cloud funded ಅಲ್ಲ .ಬದಲು friends funded ಸಿನಿಮಾ.
ಪ್ರ: ಈ ಚಿತ್ರದ ಬಗ್ಗೆ ನಮಗೆಲ್ಲ ಭಾರೀ ನಿರೀಕ್ಷೆಯಿದೆ. ಯಾವಾಗ ಮತ್ತು ಎಲ್ಲೆಲ್ಲಿ ಈ ಚಿತ್ರವನ್ನು ರಿಲೀಸ್ ಮಾಡ್ತಾ ಇದ್ದೀರ?
ಈ ಚಿತ್ರದ ಶೂಟಿಂಗ್ ಮುಗಿದಿದೆ. ಕೊನೆಯ ಹಂತದ ಕಾರ್ಯಗಳು ನಡೀತಾ ಇವೆ. ಇದೇ ವರ್ಷ ಜುಲೈ ಅಥವಾ ಆಗಷ್ಟನಲ್ಲಿ ರಿಲೀಸ್ ಆಗ್ತಾ ಇದೆ.ಕರ್ನಾಟಕದಲ್ಲಿ ರಿಲೀಸ್ ಆಗೋಕಿನ್ನ ಮೊದಲು ಅಮೆರಿಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್ ಎಲ್ಲ ಕಡೆ ಪ್ರೀಮಿಯರ್ ಗಳನ್ನು ನಡೆಸೋ ಉದ್ದೇಶ ಇದೆ.
ಪ್ರ: ನಮ್ಮಂತೆ ನೀವು ಕೂಡ ವಿದೇಶವಾಸಿಗಳು. ಇವತ್ತು ಕರ್ನಾಟಕದಲ್ಲೇ ಕನ್ನಡ ಕಾಣೆಯಾಗ್ತಿರೋ ಸಮಯ. ಇಷ್ಟೊಂದು ದೂರ ಇದ್ಕೊಂಡು ಜನಸಾಮಾನ್ಯರಾದ ನಮ್ಮಂತವರು ಕನ್ನಡ ಭಾಷೆಯನ್ನು ಹೇಗೆ ಉಳಿಸಬಹುದು ಅಂತ ನಿಮ್ಮ ಅಭಿಪ್ರಾಯ?
ತುಂಬಾ ನಿಜ. ಸೌತ್ ಬೆಂಗಳೂರಲ್ಲಿ ಸ್ವಲ್ಪ ಕನ್ನಡ ಇದೆ. ಆದರೆ ಅಲ್ಲೂ ಕನ್ನಡ ಇತ್ತೀಚೆಗೆ ಸಾಯ್ತಾ ಇದೆ.ಮಕ್ಕಳು ಕೂಡ ಕನ್ನಡ ಮಾತಾಡಲ್ಲ. ನಾವು ಇಲ್ಲಿ ಬೆಳೀತಾ ಇರೋ ಮಕ್ಕಳಿಗೆ ಕನ್ನಡ ಕಲಿಸೋ ಪ್ರಯತ್ನ ಮಾಡ್ತಾ ಇದ್ದೀವಿ. ಅದ್ರೆ ಅಲ್ಲಿರೋ ಮಕ್ಕಳೇ ಇವತ್ತು ಕನ್ನಡ ಮಾತಾಡಲ್ಲ.
ಈ ಕನ್ನಡದ ಹೋರಾಟ ಯಾವತ್ತೂ ನಡೀತಾನೆ ಇದೆ. ಇನ್ನೂ ಮುಂದುವರೆಯುತ್ತೆ ಅನ್ನಿಸುತ್ತೆ.ನಾನು ಅಂದ್ಕೊಂಡಿದ್ದೀನಿ ನಾವು ಕನ್ನಡಿಗರು ನಿರಭಿಮಾನಿಗಳು ಅಂತ. ಕೆಲವು ಭಾಷೆಯವರು ದುರಭಿಮಾನಿಗಳು ಅವ್ರು ಯಾವ ಭಾಷೆನೂ ಗೌರವಿಸಲ್ಲ, ಕಲಿಯೋದು ಇಲ್ಲ. ಬೇರೆ ಬೇರೆ ಭಾಷೆ ಕಲೀಬೇಕು ಆದ್ರೆ ನಮ್ಮ ಭಾಷೆನ ಉಳಿಸ್ಕೊಳ್ಳೋದು ಕೂಡ ತುಂಬ ಮುಖ್ಯ.
ನೀವು ನಿಮ್ಮ ಸಾಹಿತ್ಯಕ ಚಟುವಟಿಕೆಗಳ ಬಗ್ಗೆ ಹೇಳಿದ್ರಿ. ಅದನ್ನು ಕೇಳಿ ತುಂಬಾ ಸಂತೋಷ ಆಯ್ತು. ಇಂತಹ ಚಟುವಟಿಕೆಗಳು ಮುಂದುವರೀಬೇಕು. ಬೆಳೀಬೇಕು. ಎಷ್ಟೋ ಸಾರಿ ಹೊರದೇಶಗಳಲ್ಲಿನ ಕನ್ನಡಿಗರು ಮಾಡೋದನ್ನು ನಮ್ಮ ಜನ ಅನುಕರಿಸ್ತಾರೆ.ಹಾಗಾದ್ರೂ ಭಾಷೆ ಉಳಿಯುತ್ತೆ.
ಪ್ರ: ನೀವು 25 ವರ್ಷಗಳಿಂದ ನೀವು ಕನ್ನಡ ಚಿತ್ರರಂಗಾನ ಹತ್ತಿರದಿಂದ ನೋಡಿದ್ದೀರಿ. ಪ್ರಪಂಚದ ಇತರೆ ಸಂಸ್ಕೃತಿ, ಸಮಾಜದಲ್ಲಿ ಇದ್ದು ಗೊತ್ತಿದೆ. ಇದನ್ನೆಲ್ಲ ಒತ್ತಟ್ಟಿಗಿಟ್ಟು ನಮ್ಮ ಸಿನಿಮಾರಂಗದ ಕಡೆ ಪಕ್ಷನೋಟ ಹರಿಸಿದ್ರೆ ನಿಮಗೇನಾದ್ರೂ ಬದಲಾವಣೆ ಕಾಣಿಸುತ್ತಾ?
ಇತ್ತೀಚೆ ಹೊಸ ತರದ ಚಿತ್ರಗಳು ಬರ್ತಾ ಇವೆ. ಹಿಂದೆಲ್ಲ Art cinema and commercial cinema ಅಂತ ಮಾತ್ರ ಇತ್ತು. ಆರ್ಟ್ ಸಿನೆಮಾ ಅಂದ್ರೆ ಬೋರಿಂಗ್ ಅಥವಾ ಗೋಳಿನ ಚಿತ್ರ ಅಂತ ಮಾತ್ರ ಇತ್ತು. ಇವತ್ತು ಮಾಮೂಲಿ ಹಾಡು, ಫೈಟ್ ಇರೋ ಸಿನಿಮಾಗಳು ಒಂದ್ಕಡೆ ಬರ್ತಾನೆ ಇವೆ. ಜೊತೆಗೆ parallel ಆಗಿ ಬೇರೆ ತರ ವಿಚಾರ ಇರೋ ಚಿತ್ರಗಳು ಕೂಡ ಬರ್ತಾ ಇವೆ. ಈಗಿನ ಟ್ರೆಂಡ್ ಹೇಗಿದೆ ಅಂದ್ರೆ ಸಾಫ್ಟ್ ವೇರ್ ಉದ್ಯಮಿಗಳು ಕೂಡ ಕೆಲಸ ಬಿಟ್ಟು ಚಿತ್ರ ರಂಗಕ್ಕೆ ಬರ್ತಿದ್ದಾರೆ.
ಇವತ್ತಿನ ತಲೆಮಾರಿನವರು ಹಳೇ ಫಾರ್ಮುಲಾ ಬಿಟ್ಟು ಬೇರೆ ತರ ಚಿತ್ರ ಮಾಡಬಹುದು ಅಂತ ತೋರಿಸ್ತಿದ್ದಾರೆ. ಇದು ನಿಜಕ್ಕೂ ಒಳ್ಳೇದು.
ಪ್ರ: ನಿಮ್ಮ ಹೊಸಚಿತ್ರ ‘ಬಬ್ರೂ’ ಗೆ ನಮ್ಮ ಶುಭಾಶಯಗಳು. ನಿಮ್ಮ ಮುಂದಿನ ಯೋಜನೆಗಳೇನು?
ವಿಭಿನ್ನ ರೀತಿ ಚಿತ್ರ ಮಾಡ್ಬೇಕು ಅನ್ನೋದೇ ಮುಂದಿನ ಯೋಜನೆ. ಒಂದೆರಡು ಕಥೆಗಳ ಬಗ್ಗೆ ವಿಚಾರ ನಡೀತಾ ಇದೆ. ಈ ವರ್ಷ ಅಂತ ಒಂದೆರಡು ಪ್ರಾಜೆಕ್ಟ್ ಬರ್ತಾ ಇದೆ. ಈ ಬಗ್ಗೆ ಈಗ್ಲೇ ಏನೂ ಹೇಳಕ್ಕಾಗಲ್ಲ.
ಸದ್ಯದಲ್ಲೇ ಈ ಬಗ್ಗೆ ತಿಳಿಸ್ತೀವಿ.
——————-
ಈ ನಟಿಯ ಅವಲೋಕನದಂತೆ ಕನ್ನಡ ಚಿತ್ರರಂಗದಲ್ಲಿ ಹೊಸತು ಬರುತ್ತಿದೆ. ಈ ಹೊಸದಿಕ್ಕಿನಲ್ಲಿ ಇನ್ನಷ್ಟು ಬೆಳವಣಿಗೆ ಕಾಣಲಿ ಎಂದು ಆಶಿಸೋಣ.