’ಅನಿವಾಸಿ’ (KSSVV) ನಡೆದು ಬಂದ ದಾರಿ ಭಾಗ -1 ಡಾ. ಶ್ರೀವತ್ಸ ದೇಸಾಯಿ ಬರೆದ ಲೇಖನ

ವಿನ್ಯಾಸ: ಉಮಾ ವೆಂಕಟೇಶ್

(ಕನ್ನಗಡಿಗರು ಹೊರದೇಶಕ್ಕೆ ಹೋಗುವಾಗ ತಮ್ಮ ಜೊತೆ ಹೊತ್ತೊಯ್ಯಲು ಸಾಧ್ಯವಾಗುವುದು ಕೆಲವೇ ವಸ್ತುಗಳನ್ನು.  ಆದರೆ ವಲಸೆ ಹೋದ ದೇಶಗಳಲ್ಲಿ ಮತ್ತೆ ಬದುಕನ್ನು ಕಟ್ಟಿಕೊಳ್ಳುವಾಗ ಅವರಿಗೆ ಅಂದುಕೊಂಡದ್ದಕ್ಕಿಂತ ಹೆಚ್ಚನ್ನು  ಹೊತ್ತು ತಂದಿರುವುದು ಅರಿವಾಗುತ್ತದೆ. ಅರಿವಿಲ್ಲದಂತೆಯೇ ಅವರೊಡನೆ ಬಂದ  ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ, ಸಂಗೀತ, ನೃತ್ಯ ಎಲ್ಲ ಅವರ ಗುರುತುಗಳಾಗುತ್ತವೆ. ವಿದೇಶಿ ನೆಲದಲ್ಲಿ ಈ ಮೌಲ್ಯಗಳು ಸ್ವದೇಶೀ ತುಣುಕುಗಳನ್ನು ಸೃಷ್ಟಿಸುತ್ತವೆ. ಈ ನೆಲದಲ್ಲಿ ಬೆರೆಯಲು ಸಮಾನ ಆಸಕ್ತಿಯಿರುವ ಮನಗಳು ತುಡಿಯುತ್ತವೆ. ಸಮುದಾಯಗಳು ಕಲೆಯುತ್ತವೆ. ಕನ್ನಡದ ಬದುಕು ಮತ್ತೆ  ಜೊತೆಯಾಗಿ ಮುಂದುವರೆಯುತ್ತದೆ.

 ಆದರೆ ಹಲವು ದಶಕಗಳ ಕಾಲ ಇಲ್ಲಿ ಸಾಹಿತ್ಯಕ್ಕಾಗಿ ಯಾವುದೇ ನಿಗಧಿತ ಗುಂಪಿರಲಿಲ್ಲ. ಆದರೆ ಸಾಹಿತ್ಯದಲ್ಲಿ ಆಸಕ್ತಿಯಿರುವ ಕೆಲವರು ಒತ್ತಟ್ಟಿಗೆ ಬಂದದ್ದು 2014 ರಲ್ಲಿ. ಕೇವಲ ನಾಲ್ಕು ತಿಂಗಳ ನಂತರ ಗುಂಪಿನ ಮೊದಲ ಅಧಿಕೃತ ಸಭೆ ನಡೆಯುವ ಹೊತ್ತಿಗೆ ಈ ಸಂಖ್ಯೆ ದ್ವಿಗುಣಗೊಂಡಿತ್ತು.ಇವರಲ್ಲಿ ಯಾರೂ ಕನ್ನಡವನ್ನೇ ಓದಿದವರಿರಲಿಲ್ಲ. ಪ್ರತಿಯೊಬ್ಬರೂ ಅತ್ಯಂತ ಬ್ಯುಸಿ ಎನ್ನುವ ಜೀವನ ಶೈಲಿಯ ವೃತ್ತಿಗಳಲ್ಲಿ ಇದ್ದವರೇ.

 ಯಾವುದೇ ಸಂಘ-ಸಂಸ್ಥೆಗಳ ಹಣಕಾಸಿನ ಸಹಾಯದ ಹಂಗಿಲ್ಲದಂತೆ ಅನಿವಾಸಿಯ ಕೆಲವರು ಸದಸ್ಯರು  ಸ್ವಯಂ ಪ್ರೇರಿತರಾಗಿ ದೇಣಿಗೆಯ ಮೂಲಕ ಅಂತರ್ಜಾಲದ ಸಾಹಿತ್ಯ ಜಗಲಿಯನ್ನು ನಿಭಾಯಿಸುತ್ತಿದ್ದಾರೆ. ಈ ಜಾಲ ತಾಣ ಐದು ವರ್ಷಕ್ಕೂ ಹೆಚ್ಚು ಕಾಲದಿಂದ ಪ್ರತಿ ಶುಕ್ರವಾರ ಈ ದೇಶದಲ್ಲಿರುವ ಕನ್ನಡ ಬರಹಗಾರರ ಒಂದು ಬರಹವನ್ನು ತಪ್ಪದೆ ಪ್ರಕಟಿಸುತ್ತ ಬಂದಿದೆ.

ಕನ್ನಡ ನಾಡಿನ ಸಮಸ್ತ ಜನಸ್ತೋಮಕ್ಕೆ ತೆರದ ಬಾಗಿಲಿನ ಪಾಲಿಸಿಯನ್ನು ಅನುಸರಿಸುವ ಹಲವು ಅಂತರ್ಜಾಲ ಸಾಹಿತ್ಯಕ ತಾಣಗಳು ಕೂಡ ಹಲವು ವರ್ಷಗಳ ಕಾಲ ಕಾರ್ಯ ನಿರ್ವಹಿಸಲು ಶ್ರಮಪಡುತ್ತವೆ. ಹಲವಾರು ತಾಣಗಳು ಮುಂದುವರೆಯಲಾಗದೆ ಮುಚ್ಚಿಹೋಗಿವೆ.ಅಂಥದ್ದರಲ್ಲಿ ದೂರದ್ದೊಂದು ಪುಟ್ಟ ದ್ವೀಪದ ಬಹಳ ಕಡಿಮೆ ಎನ್ನುವಷ್ಟು ಕನ್ನಡಿಗರಿರುವ ಯುನೈಟೆಡ್ ಕಿಂಗ್ಡಂ ನಲ್ಲಿ ಬೆರಳೆಣಿಕೆಯಷ್ಟು ಕನ್ನಡದಲ್ಲಿ ಸಾಹಿತ್ಯ ಬರೆಯುವ ಮತ್ತು ಓದುವ ಜನರು ನಡೆಸುತ್ತಿರುವ  ಅನಿವಾಸಿ ಸಾಹಿತ್ಯ ಜಗಲಿಯ ಸಾಧನೆ ದೊಡ್ಡದೇ. ಸಾಹಿತ್ಯದಲ್ಲಿ ತೊಡಗಿಕೊಂಡ ಈ ಗುಂಪಿನಲ್ಲಿ ಯಾರೂ ಮುಖಂಡರಲ್ಲ. ಯಾವುದೇ ಪದವಿಗಳಿಲ್ಲ. ಈ ಅನುಕ್ರಮದಲ್ಲಿ ಅನಿವಾಸಿ ಐದು ಮುಗಿಸಿ ಆರು ವರ್ಷಗಳನ್ನು ಸಮೀಪಿಸುತ್ತಿದೆ. ಈ ಸಮಯದಲ್ಲಿ  ಅನಿವಾಸಿ ನಡೆದು ಬಂದ ಹಾದಿಯ ಹಿನ್ನೋಟವೇ ಈ ಸರಣಿ ಮಾಲೆ.

ಮೊದಲಿಗೆ ಈ ಗುಂಪಿನ ಹಿರಿಯರಾದ ಶ್ರೀವತ್ಸ ದೇಸಾಯಿಯವರ ಬರಹ. ಹುಟ್ಟಿನಿಂದ ಈವರೆಗೆ ಅನಿವಾಸಿಯ  ಬಹುತೇಕ ಪ್ರತಿ ಸಭೆಯ ನಿಮಿಷಗಳನ್ನು ದಾಖಲಿಸಿ, ಎಲ್ಲ ಬರಹಗಳ ಕಡತವನ್ನು  ಕಾದಿರಿಸಿ, ಫೋಟೋಗಳ ಸಮೇತ ಜೋಪಾನವಾಗಿಟ್ಟು ಈ ಗುಂಪನ್ನು ಕಾದಿರುವ ದೇಸಾಯಿಯವರು ಅತ್ಯಂತ ಉತ್ಸಾಹದಿಂದ ಅನಿವಾಸಿಯ ಚಟುವಟಿಕೆಗಳಲ್ಲಿ ತೊಡಗಿಕೊಂಡವರು. ಪ್ರತಿ ಬರಹಕ್ಕೆ ಸ್ಪಂದಿಸಿ ಉತ್ತೇಜನದ ಮಾತುಗಳನ್ನು ಆಡಿ ಬರಹಗಾರರಿಗೆ ಪ್ರೋತ್ಸಾಹವನ್ನು ನೀಡಿದವರು. ಈ ಗುಂಪಿನಲ್ಲಿ ಒಂದು ವ್ಯವಸ್ಥೆಗೆ ಮಾರ್ಗದರ್ಶನವನ್ನು ನೀಡಿದವರು. ಹೀಗಾಗಿ ಅನಿವಾಸಿಯ ಇದುವರೆಗಿನ ಪಯಣದ ಬಗ್ಗೆ ಗುರುತರವಾದ ದಾಖಲೆಗಳ ಸಮೇತ  ಲೇಖನವನ್ನು ಬರೆದುಕೊಡಿ ಎಂದು ಕೋರಿದಾಗ ತಮ್ಮೆಲ್ಲ ಕಡತಗಳ ಮೇಲೆ ಕಣ್ಣು ಹಾಯಿಸಿ  ಅನಿವಾಸಿಗಾಗಿ  ಯಾವತ್ತಿಗೂ ಬೆಲೆಯುಳ್ಳ ಲೇಖನವನ್ನು ಬರೆದುಕೊಟ್ಟಿದ್ದಾರೆ. ಅನಿವಾಸಿ ನಡೆದು ಬಂದ  ದಾರಿಯ ಕಡೆ ಒಂದು ಸಮಗ್ರ ನೋಟವನ್ನು ಹರಿಸಿದ್ದಾರೆ.  ಅನಿವಾಸಿಯ ಜೊತೆಗಿನ ತಮ್ಮ ವಯಕ್ತಿಕ ಹಾದಿಯನ್ನೂ ಮೆಲುಕು ಹಾಕಿದ್ದಾರೆ.ಅದರ ಮೊದಲ ಕಂತಿದು.

ಸಮಸ್ತರಿಗೂ ದೀಪಾವಳಿಯ ಶುಭಾಶಗಳೊಂದಿಗೆ ಈ ಸರಣಿಯ ಆರಂಭ –ಡಾ.ಪ್ರೇಮಲತ ಬಿ. )

’ಅನಿವಾಸಿ’ಯ ಹುಟ್ಟು:

ಅದೊಂದು ಅಮೃತ ಘಳಿಗೆ!

(1) 19-10-2013, ಯೂಟೋಕ್ಸಿಟರ್ ಮೋಟರ್ವೇ ಸರ್ವಿಸ್ ಸ್ಟೇಷನ್ (A 50 Uttoxeter)

ಎಲ್ಲಿದೆ ಯೂಟೋಕ್ಸಿಟರ್? ’ಏನ ಕೇನ ಪ್ರಕಾರೇಣ…’ ಕೆಲವು ಊರುಗಳು ಪ್ರಸಿದ್ಧವಾಗುತ್ತವೆಯಲ್ಲವೆ? ಭೌಗೋಳಿಕವಾಗಿ ಇಂಗ್ಲೆಂಡಿನ ಮಧ್ಯವರ್ತಿ ಸ್ಥಳ ಈ ಊರು. ಕೆಲವು ಯು.ಕೆ. ವಾಸಿ ಸಾಹಿತ್ಯಾಸಕ್ತರು ಆ ದಿನ ಅಲ್ಲಿ ಕೂಡಿದಾಗ ಕ ಸಾ ಸಾಂ ವಿ ವೇ(KSSVV) ದ ಹುಟ್ಟು ಆಯಿತೆಂದು ಹೇಳಬಹುದು. ಆಗ ಕಾರ್ಡಿಫ್ ನಲ್ಲಿ ವಾಸಿಸುತ್ತಿದ್ದ ಡಾ.ಉಮಾ ವೆಂಕಟೇಶ್, ಮ್ಯಾಂಚಸ್ಟರ್ ಕಡೆಯಿಂದ ಡಾ ವತ್ಸಲಾ ರಾಮಮೂರ್ತಿ, ಡಾರ್ಬಿಯಿಂದ ಡಾ ಕೇಶವ ಕುಲಕರ್ಣಿ, ಸೌತ್ ಯಾರ್ಕ್ಶೈರ್ ನಿಂದ ಡಾ ಜಿ .ಎಸ್. ಶಿವಪ್ರಸಾದ್ ಮತ್ತು ಡೋಂಕಾಸ್ಟರಿನಿಂದ ಡಾ. ಶ್ರೀವತ್ಸ ದೇಸಾಯಿ ಆ ದಿನ ಬೆಳಿಗ್ಗೆ ಅಲ್ಲಿ ಕೂಡಿದ್ದರು.

ಅದಕ್ಕೂ ಮೊದಲು ಒಬ್ಬೊರಿಗೊಬ್ಬರು ಸಮಕ್ಷಮ ಭೇಟಿಯಾಗಿ ಕೆಲವರಷ್ಟೇ ಸ್ವಲ್ಪ ಪರಿಚಿತರಾಗಿದ್ದರೂ ಎಲ್ಲರೂ ಒಬ್ಬೊರನ್ನೊಬ್ಬರು ನೋಡಿರಲಿಲ್ಲ. ಉಮಾ ಅವರು ಪ್ರತ್ಯೇಕವಾಗಿ ಎಲ್ಲ್ರನ್ನು ಈ-ಮೇಲಿನ ಮುಖಾಂತರ ಈ ಮೊದಲೇ ಸಂಪರ್ಕಿಸಿದ್ದರು. ಕೆಲವರೊಡನೆ ಫೋನಿನಲ್ಲಿ ಮಾತಾಡಿದ್ದರು. ಯು ಕೆ ಕನ್ನಡಿಗರಲ್ಲಿ ಕನ್ನಡದ ”ವಿಚಾರ ವೇದಿಕೆ”ಯನ್ನು ಶುರು ಮಾಡಬೇಕೆಂಬ ಅದಮ್ಯ ಆಸೆ ಉಮಾ ಅವರಲ್ಲಿ ಬಹುದಿನಗಳಿಂದಲೂ ಜ್ವಲಂತವಾಗಿತ್ತು. ಹೇಗೆ ಪ್ರಾರಂಭ ಮಾಡಬೇಕು? ಯಾರನ್ನೆಲ್ಲ ಕೂಡಿಸಬೇಕು? ಯಾವ ಸ್ಥಳದಲ್ಲಿ? ಈ ಪ್ರಶ್ನೆಗಳು ಈಗ ಬಹು ಸುಲಭ ಅನಿಸಿದರೂ, ಆಗ ಅದೊಂದು ಕಠಿಣ ಸಮಸ್ಯೆಯೇ ಆಗಿತ್ತು.

1987 ರ ಸಂದೇಶ ’ಕೈಬರಹ’ ಸಂಚಿಕೆಗಳು

ಹಾಗೆ ನೋಡಿದರೆ ಯು.ಕೆ. ದಲ್ಲಿಯ ಕನ್ನಡಿಗರಲ್ಲಿ ಒಂದು ಕನ್ನಡದ ’ಪತ್ರಿಕೆ-ವೇದಿಕೆ’ ಪ್ರಾರಂಭ ಮಾಡುವ ವಿಚಾರ ಹೊಸದೇನೂ ಆಗಿರಲಿಲ್ಲ. ಕನ್ನಡವನ್ನು ಹೊರದೇಶದಲ್ಲಿ ವಾಸಿಸುವ ಕನ್ನಡಿಗರಲ್ಲಿ ಮತ್ತು ಅವರ ಮುಂದಿನ ಪೀಳಿಗೆಯಲ್ಲಿ

ಸಂದೇಶದ ಆಗಿನ ಸಂಪಾದಕರು

ಜೀವಂತ ಉಳಿಸಿ ಕೊಳ್ಳಬೇಕಾದರೆ ಇಂಥದೊಂದು ಮಾಧ್ಯಮದ ಅವಶ್ಯಕತೆಯಿದೆಯೆಂದಲೇ ಯು .ಕೆ. ಕನ್ನಡ ಬಳಗ ಆರಂಭದ ವರ್ಷಗಳಲ್ಲಿ ’ಸಂದೇಶ” ಎನ್ನುವ ’ಕೈಬರಹ”ದ ಪತ್ರಿಕೆಯನ್ನು 1984ರಲ್ಲಿ ಆರಂಭ ಮಾಡಿತ್ತು. ವತ್ಸಲಾ ಅವರಿಗೆ ಅದರ ಪ್ರತ್ಯಕ್ಷ ವೈಯಕ್ತಿಕ ಅನುಭವವಿತ್ತು ಸಹ.

ಆ ಮಾತಿಗೆ ಈಗ ಮೂವತ್ತೈದು ವರ್ಷಗಳು ಸಂದಿವೆ. ಎಲ್ಲರಿಗೂ ’ಬರಹ’ ಎಂಬ ಕನ್ನಡದ ಗಣಕಯಂತ್ರ ತಂತ್ರಾಂಶವಾದ ಪರಿಚಯವಾಗಲು ಪ್ರಾರಂಭವಾಗಿತ್ತು. ಆಗ ತಾನೆ ಇಂಟರ್ನೆಟ್ ತುಂಬ ’ಬ್ಲಾಗ್’ ಗಳು ದಿನೇ ದಿನೇ ಹುಟ್ಟುತ್ತಿದ್ದವು. ಇತ್ತಿತ್ತಲಾಗಿ ಕೆಲವು ತಿಂಗಳುಗಳಿಂದಲೇ ಇಂಟರ್ನೆಟ್ಟಿನಲ್ಲಿ ಕನ್ನಡ ಬ್ಲಾಗ್ ಅಥವಾ ಮ್ಯಾಗಝಿನ್ ತೆಗೆಯ ಬೇಕು, ಯು .ಕೆ. ಕನ್ನಡಿಗರು ಅದರಲ್ಲಿ ಬರೆಯಲು ಅವಕಾಶವಿರಬೇಕೆಂದು ಉಮಾ ವೆಂಕಟೇಶ್ ಮತ್ತು ಡಾ ಜಿ ಎಸ್ ಎಸ್ ಪ್ರಸಾದರು ಕನ್ನಡ ಸಾಹಿತ್ಯಾಸಕ್ತರೊಂದಿಗೆ ಮಾತಾಡುತ್ತಿದ್ದರೆಂದು ತಿಳಿದು ಬಂದಿತ್ತು. ಅವರಿಬ್ಬರು ಕನ್ನಡ ಬಳಗದಲ್ಲಿ ಕಮಿಟಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅದಲ್ಲದೆ ಅವರು ಕನ್ನಡ ಬಳಗದಿಂದ ಹೊರಡುತ್ತಿದ್ದ ’ಸಂದೇಶ’ ಪತ್ರಿಕೆಯ ಸಂಪಾದಕ ಮಂಡಲಿಯಲ್ಲೂ ಇದ್ದರು.(ಈಗಲೂ ಅದರ ಹಳೆಯ ಸಂಚಿಕೆಗಳು KBUK ವೆಬ್ ಸೈಟಿನಲ್ಲಿ ಓದಲು ಸಿಗುತ್ತವೆ). 1980ರ ದಶಕದಲ್ಲಿ ಈ ದೇಶದಲ್ಲಿ ವಾಸಿಸುತ್ತಿದ್ದ ಕನ್ನಡಿಗರೆಲ್ಲರೂ ಕನ್ನಡ ಬಳಗದ ಸದಸ್ಯರಾಗಿದ್ದಿಲ್ಲ, ಯು ಕೆ ದಲ್ಲಿ ದೂರದೂರದ ಊರುಗಳಲ್ಲಿ ಚದುರಿ ಹೋಗಿದ್ದ ಕನ್ನಡಿಗರಿಗೆ ಬಳಗದ ಎಲ್ಲ ಕಾರ್ಯಕ್ರಮಗಳಲ್ಲಿ ಸೇರುವ ಅವಕಾಶ ಕಾರಣಂತರಗಳಿಂದ ಒದಗಿ ಬರುತ್ತಿರಲಿಲ್ಲ. ಅಂದ ಮೇಲೆ ಕಥೆ, ಕವಿತೆ, ಬರೆಯುವದರಲ್ಲಿ ಪಳಗಿದ, ಬರೆಯುವ ಉತ್ಸಾಹವಿದ್ದವರನ್ನು ಹೇಗೆ ಪತ್ತೆ ಹಚ್ಚಿ ಅವರಿಂದ ಇಂಥ ಒಂದು ದಿಜಿಟಲ್ ಮೀಡಿಯಾದ ಮುಖಾಂತರ ಇದನ್ನು ಮುಂದುವರೆಸಬೇಕು ಅಂತ ತಮ್ಮತಮ್ಮೊಳಗೆ ಚರ್ಚೆ ನಡೆಸುತ್ತಿದ್ದರೇ ಹೊರತು ಅದು ಕನಸಾಗಿಯೇ ಉಳಿದಿತ್ತು. ಒಂದು ದಿನ ಹೇಗೋ ಯಾರೋ ಹೇಳಿದಂತೆ ಟೆಕ್ನಿಕಲ್ ವಿಷಯಗಳಲ್ಲಿ ಉಳಿದವರಿಗಿಂತ ಹೆಚ್ಚು ಪರಿಣಿತಿಯಿದ್ದ ಕೇಶವ ಕುಲಕರ್ಣಿಯವರನ್ನು ಸಂಪರ್ಕಿಸಿ ಆಸಕ್ತರೆಲ್ಲ ಕೂಡಿ ಚರ್ಚೆ ಮಾಡೋಣವೇ ಅಂತ ಕೇಳಿದಾಗ ಕೇಶವ ಅವರ ಪ್ರವಾದಿಯ ನ್ಯೂನೋಕ್ತಿಯಂಥ ಉತ್ತರ: ”ಯಾಕೆ ಕಣಿ ಕೇಳುತ್ತೀರಿ? ಶುರು ಮಾಡಿಬಿಡಿ!” ಹಾಗಾದರೆ ಕೂಡುವಾ ಅಂತ ನಿರ್ಧರಿಸಿದಾಗ ದೇಶದ ಮಧ್ಯದಲ್ಲಿಯ ಕೇಶವ ಅವರೇ ಹುಡುಕಿದ ’ವೆನ್ಯೂ’ ಆ ಯುಟೋಕ್ಸಿಟರ್! ನಮ್ಮವರಲ್ಲಿ ಯಾರೂ ಹೆಸರೇ ಕೇಳಿರದ ಆ ಊರು ಈಗ ಅನಿವಾಸಿಯ ಐತಿಹಾಸಿಕ ದಾಖಲೆಯಲ್ಲಿ ಚಿರಸ್ಮರಣೀಯ ಸ್ಥಾನ ಪಡೆದಿದೆ!

ಅಂದು ಕೂಡಿದ ಐವರು:

ಕೇಶವ ಕುಲಕರ್ಣಿ, ಉಮಾ ವೆಂಕಟೇಶ್, (ಜಿ ಎಸ್ ಎಸ್) ಗುಗ್ಗರಿ ಪ್ರಸಾದ, ವತ್ಸಲಾ ರಾಮಮೂರ್ತಿ, ಶ್ರೀವತ್ಸ ದೇಸಾಯಿ.

ಸಭೆಯ ಪೂರ್ವದಲ್ಲಿ ನಾನು ಮಾಡಿಟ್ಟುಕೊಂಡು ಒಯ್ದ ಟಿಪ್ಪಣಿಗಳು ಹೀಗಿವೆ:

ಪಪ್ರಥಮ ಮೀಟಿಂಗ್, ಯುಟೋಕ್ಸಿಟರ್: (L-R)ಉಮಾ, ವತ್ಸಲಾ, ಕೇಶವ, ಪ್ರಸಾದ್, ಶ್ರೀವತ್ಸ ಫೋಟೋ ಕೃಪೆ: ಕೇಶವ-ಶ್ರೀವತ್ಸ

To discuss;

  1. Mission statement
  2. Constitution:

Who will be members? How to admit? What is our commitment?

3, Communication; How, where to meet?

4, E- magazine? Blog (ಆಗ ತಾನೆ ನಮಗೆ ಬ್ಲಾಗ್ ದ ಕಲ್ಪನೆ ಬರುತ್ತಲಿತ್ತು) How to publish? ನಮಗಾರಿಗೂ ಅನುಭವವಿರಲಿಲ್ಲ. ಬಹುತೇಕ ಎಲ್ಲರಿಗೂ Baraha software ಉಪಯೋಗಿಸಿ ಗೊತ್ತಿತ್ತು. ಆದರೆ ಹೇಗೆ ಪ್ರಕಟಿಸುವದು, ಯಾರಿಗೂ ಗೊತ್ತಿರಲಿಲ್ಲ. (ಶಿಶುವಿನ ಅಂಬೆಗಾಲಿನ ಕ್ಷಣಗಳಿವು. ಈಗ ಇದೆಲ್ಲ ಅತಿ ಸುಲಭ ಅಥವಾ ಹಾಸ್ಯಾಸ್ಪದ ಅನಿಸಿದರೂ ಆಗ ಪ್ರತಿಯೊಂದು ಸಣ್ಣ mole hill ಸಹ ಮೇರುಪರ್ವತವಾಗಿ ಕಾಣುತ್ತಿತ್ತು!)

  1. Money?
  2. Membership: Who all can join? Resignation/termination (this was a very far sighted thought, or premonition because it was to haunt us 5 years later!) ಯಾಕಂದರೆ ನಾನು 20 ವರ್ಷಗಳಿಂದಲೂ ನಮ್ಮೂರಿನ ಒಂದು ವಿಡಿಯೋ ಕ್ಲಬ್ಬಿನ ಸದಸ್ಯನಾಗಿದ್ದೆ. ಅದರ Constitution ದಲ್ಲಿಯೂ ಆ ವಿಷಯದ ಪ್ರಸ್ತಾಪವಿತ್ತು!).

ಚೊಚ್ಚಲು ’ಸಭೆ’

ನಾವು ಕೂಡಿದ ಸ್ಥಳ ಒಂದು ಸಾಮಾನ್ಯ ಮೋಟರ್ವೇ ಸರ್ವಿಸಸ್ ಆಗಿತ್ತು. ನಿಗದಿತ ಸಮಯದಲ್ಲಿ ನಾವೆಲ್ಲ ಬಂದು ಕೂಡಿದೆವು. ಅದು ನಮ್ಮ ಮೊದಲ ಭೇಟಿ. ನಾವು ಒಂದು ರೂಮು ಸಹ ತೆಗೆದುಕೊಡಿರಲಿಲ್ಲ. ಲಭ್ಯವಿತ್ತೋ ಇಲ್ಲವೋ ಗೊತ್ತಿಲ್ಲ. ಒಂದು ಮೂಲೆಯ ಟೇಬಲ್ ಸುತ್ತ ಕುಳಿತು ಶುರುಮಾಡಿದೆವು. ಉಮಾ ಅವರು ತಮ್ಮ ಪೀಠಿಕೆಯಲ್ಲಿ ಮೇಲಿನ ವಿಚಾರಗಳ ಹಿನ್ನೆಲೆ ಕೊಟ್ಟಂತೆ ನೆನಪು.

ನಾಮಕರಣ: ನಮ್ಮ ವಿಚಾರ ವೇದಿಕೆಯನ್ನು ಏನೆಂದು ಕರೆಯುವದು? ಅದರಲ್ಲಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಎರಡೂ ಪ್ರಮುಖವಾಗಿರಬೇಕು. ಉದ್ದವಾದರೂ, ಬಾಯಿ ತುಂಬಿದರೂ, ದೀರ್ಘ ಚರ್ಚೆಯಾದ ನಂತರ ಕೊನೆಗೆ ಎಲ್ಲರೂ ಒಪ್ಪಿದ್ದು: ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ! ನಂತರ Mission statement ಮತ್ತು ಉದ್ದೇಶಗಳ ಬಗ್ಗೆ ಚರ್ಚೆಯಾಗಿತು. (ಅವನ್ನು ಕನ್ನಡದ ”ಅನಿವಾಸಿ’ ಬ್ಲಾಗ್ ನಲ್ಲಿ ಪ್ರಕಟಿಸಿದ್ದೇವೆ).

ಪ್ರಕಟಣೆ:

ತಾಂತ್ರಿಕ ಪಟು ಕೇಶವ ಅವರ ಸಲಹೆ ಇಲ್ಲಿ ಅಮೂಲ್ಯವಾಗಿತ್ತು. ಅವರಿಗೆ ತಮ್ಮದೇ ಒಂದು ಬ್ಲಾಗ್ ಕೆಲಕಾಲದಿಂದಲೂ ಸಂಭಾಳಿಸಿದ ಅನುಭವವಿತ್ತು. ನಮ್ಮ ಕಿಸೆಯಲ್ಲಿ ಮುಂಗಡ ಹಣ ಇಲ್ಲ. ಇಂಟರ್ನೆಟ್ ನಲ್ಲಿ ಫ್ರೀ ಪೋರ್ಟಲ್ ಗಳು ಬಹಳ ಇವೆ, ಉದಾ: ವರ್ಡ್ ಪ್ರೆಸ್. ಎಂದರು ಕೇಶವ. ಅವಧಿ ಇತ್ಯಾದಿ ಟೈಟಲ್ ಗಳ ಪರಿಚಯ ಮಾಡಿಸಿದರು. ಬರಹಗಳನ್ನು ಮೊದಲು ತಿಂಗಳಿಗೊಮ್ಮೆ ಪ್ರಕಟಿಸುವ ವಿಚಾರವಿತ್ತು. ಮ್ಯಾಗಝಿನ್ ”ಕಸಾಸಾಂವಿವೇ” KSSVV ಎನ್ನುವ ಹೆಸರಿನಲ್ಲೇ ಪ್ರಾರಂಭವಾಯಿತು.. ಮುಂದಿನ ಘಟ್ಟದಲ್ಲಿ ಬುಕ್ ಕ್ಲಬ್ ಸ್ಥಾಪಿಸುವ ವಿಚಾರ ಅಂದೇ ಸುಳಿದಿದ್ದರೂ ಆ ಯೋಜನೆ ಬಹುಸಮಯದ ವರೆಗೆ ಕೈಗೂಡಲಿಲ್ಲ.

ಸುಮಾರು ಎರಡು ಗಂಟೆಗಳಿಗಿಂತ ಹೆಚ್ಚು ಸಮಯ ಚರ್ಚಿಸಿದ್ದಾಯಿತು. ಎಲ್ಲರಲ್ಲಿ ಒಂದು ಹೊಸ ಉತ್ಸಾಹ ತುಂಬಿ ತುಳುಕುತ್ತಿತ್ತು. ಏನೋ ಹೊಸ ದಾರಿಯ ನಾಂದಿ ಹಾಕಿದಂಥ ಅನುಭವ! ಎಲ್ಲರೂ ತಮ್ಮ ತಮ್ಮ ಈ-ಮೇಲ್ ವಿಳಾಸ, ಟೆಲಿಫೋನ್ ನಂಬರು ವಿನಿಮಯ ಮಾಡಿಕೊಂಡು ಆ ಭೇಟಿಯ ನೆನಪಿನಗಾಗಿ ಒಂದು ಗ್ರುಪ್ ಫೋಟೊ (Photo1)ತೆಗೆಸಿಕೊಂಡು ತಿಂಡಿ ತಿಂದು ಒಬ್ಬರನ್ನೊಬ್ಬರು ಬೀಳ್ಕೊಟ್ಟೆವು.

PS: ಆಗ ತಾನೇ ಈ ದೇಶದಲ್ಲಿ ಪಾರ್ಕಿಂಗ್ ಮೇಲೆ ನಿಗಾ ಇಡಲು ಅಲ್ಲಲ್ಲಿ ಕ್ಯಾಮರಾಗಳ ಸ್ಥಾಪನೆಯಾಗಿತ್ತು. ನಮ್ಮ ಕೂಟ ಎರಡು ಗಂಟೆಯ ಗಡವು ದಾಟಿದ್ದರಿಂದ ಒಂದು ವಾರದ ನಂತರ ನನ್ನ ಮನೆಯ ಟಪಾಲಿನಲ್ಲಿ ತೊಂಬತ್ತು ಪೌಂಡಿಗಳ ಫೈನ್ ನೋಟಿಸ್ ಬಂದು ಬಿದ್ದಿತ್ತು. ಜಾಲಜಗುಲಿ ವರ್ರ್ಡ್ ಪ್ರೆಸ್ಸಿನ ಮೂರು ವರ್ಷಗಳ ಚಂದಾ ನಾನೇ ತೆತ್ತ ಲೆಕ್ಕ. ಆದರೂ ಮನಸ್ಸಿಗೆ ಏನೂ ಬೇಜಾರಾಗಲಿಲ್ಲ. ಇಂಥ ಶುಭಾರಂಭವಾದಮೇಲೆ ಅದೊಂದು ಬರೀ ದೃಷ್ಟಿ ಬೊಟ್ಟು ಅಂತ ಸಮಾಧಾನ ಪಟ್ಟುಕೊಂಡೆ!

ಲೇಖನ ಮತ್ತು ಚಿತ್ರಗಳು: ಶ್ರೀವತ್ಸ ದೇಸಾಯಿ

 (ಮುಂದಿನ ವಾರ -ಅನಿವಾಸಿ ನದೆದುಬಂದ ಹಾದಿ… ಭಾಗ ೨)

 

ಆ೦ಗ್ಲ ನರಿಗಳು – ಸಿ. ಹೆಚ್. ಸುಶೀಲೇಂದ್ರ ರಾವ್

♥ ∗ಅನಿವಾಸಿಗೆ ಐದು ವರ್ಷದ ಹರ್ಷ ∗♥

(ಭಾರತೀಯರಿಗೆ ತಮ್ಮನ್ನು ಎರಡು ಶತಮಾನ ಆಳಿದ ಬ್ರಿಟಿಷರು ಠಕ್ಕ ನರಿಗಳಂತೇ ಕಂಡಿದ್ದರೆ ಅಚ್ಚರಿಯಿಲ್ಲ. ಆದರೆ 53 ವರ್ಷಗಳ ಕಾಲ ಇಂಗ್ಲೆಂಡಿನಲ್ಲೇ ನೆಲಸಿರುವ ಸುಶೀಲೇಂದ್ರ ರಾವ್ ರ ಗಾಳಕ್ಕೆ ಬ್ರಿಟಿಷರ ಹಲವು ’ನರಿ ’ಗಳು  ಪದಗಳ ’ಮೀನಿಂ’ಗುಗಳಾಗಿ ಸಿಕ್ಕಿ ಬಿದ್ದು ಪದ್ಯರೂಪದಲ್ಲಿ ಮಿದುಳಿನಲ್ಲಿ ಮಿಂಚು ಹರಿಸುತ್ತವೆ.

ಇದೇ ಬಗೆಯ  ಒಂದು ಪ್ರಯತ್ನ ವಾಟ್ಸಾಪ್ ನಲ್ಲಿ ಹರಿದಾಡಿದ ನೆನಪಿದೆ. ಆದರೆ, ಅದರ ಜೊತೆಗೆ  ಒಂದಷ್ಟು ಕಥೆ, ಮಜಾ ಮತ್ತು ಮೋಜನ್ನು ಹರಿಸಿರುವ ಕವಿಗಳು ತಮ್ಮ ಬದುಕಿನುದ್ದಕ್ಕೂ  ಉಳಿಸಿಕೊಂಡ ಮಾತೃ ಭಾಷೆ ಮತ್ತು ಸಂಸ್ಕೃತಿಯ ಬೆಳಕಲ್ಲಿ ಇಲ್ಲಿನವರ  ಭಾಷೆಯ ಒಂದು ಸಾಮಾನ್ಯ  ಅಂತ್ಯಪ್ರತ್ಯಯವನ್ನು ಕನ್ನಡದ ಕನ್ನಡಕ ಹಾಕಿಕೊಂಡು ಅವಲೋಕಿಸಿದ್ದಾರೆ.

ಇಂಗ್ಲೀಷು ಭಾಷೆಯಲ್ಲಿ 26 ಅಕ್ಷರಗಳಿದ್ದರೆ ಅದರ ಜೊತೆಯಲ್ಲಿ 26 ಸಾಮಾನ್ಯ ಅಂತ್ಯ ಪ್ರತ್ಯಯಗಳಿವೆ. ಅದರ ಜೊತೆಯಲ್ಲಿ ಒಂದೇ ರೀತಿಯಲ್ಲಿ ಕೇಳಿಸುವ ಆದರೆ ಬೇರೆ ಬೇರೆ ಅರ್ಥಗಳಿರುವ ಶಬ್ದಗಳಿವೆ  ( HOMONYMS) ಅದರಂತೆ ಒಂದೇರೀತಿ ಕೇಳಿಸುವ ಆದರೆ ಬೇರೆ ಬೇರೆ  ಅಕ್ಷರ ಜೋಡಣೆಯ ಪದಗಳಿವೆ (HOMOPHONES).ಇವೆಲ್ಲದರ ಜೊತೆ  ಒಂದೇ ಅಕ್ಷರ ಜೋಡನೆಯಿದ್ದು ಬೇರೆ ಬೇರೆ ಅರ್ಥಕೊಡುವ ಪದಗಳೂ ಇವೆ (HOMOGRAPHS) ಇವೆಲ್ಲ ಯಾವುದೇ ಇತರೆ ಭಾಷಿಗರಿಗೆ ಕೆಲವೊಮ್ಮೆ ಅಚ್ಚರಿಯ ಜೊತೆ ತಲೆನೋವಾಗುವುದು ಕೂಡ ನಿಜ. ಈ ಗ-ಪದ್ಯ ದಲ್ಲಿ ಕವಿಗಳು  ’ನರಿ ’ಯಿಂದ ಕೊನೆಯಾಗುವ ಪದಗಳ ಬೇಟೆಯಾಡಿ ಅನಿವಾಸಿಯ ಓದುಗರಿಗೆ  ಕನ್ನಡದಲ್ಲಿ ಅರ್ಥಗಳ ಊಟ ಬಡಿಸಿದ್ದಾರ.- ಸಂ)

  ಪರಿಚಯ

ಸಿ. ಹೆಚ್. ಸುಶೀಲೇಂದ್ರ ರಾವ್ ಅನಿವಾಸಿಯ ಪರಿಚಿತ  ಬರಹಗಾರರು. ದಾವಣಗೆರೆಯಲ್ಲಿ ಇ೦ಜನೀಯರಿ೦ಗ್ ಪದವಿಯವರೆಗೆ ವಿದ್ಯಾಭ್ಯಾಸ  ಮಾಡಿದ ಇವರು  4 ವಷ೯ ಕರ್ನಾಟಕ ಪಿ.ಡಬ್ಲು.ಡಿಯಲ್ಲಿ ಕೆಲಸ ಮಾಡಿದರು. ನಮ್ಮಲ್ಲಿ ಕೆಲವರು ಹುಟ್ಟುವ ಮುನ್ನವೇ  ಅಂದರೆ 1966 ರಲ್ಲಿ  ಇಂಗ್ಲೆಂಡಿಗೆ ಪ್ರಯಾಣ  ಬೆಳೆಸಿದ ಇವರು ಸಿವಿಲ್ ಇಂಜಿನಿಯರ್ ಆಗಿ ಕೆಲಸ ಮಾಡಿದವರು. ಮ್ಯಾಕಲ್ಸ ಫೀಲ್ಡ್   ಕೌನ್ಸಿಲ್ ಮತ್ತು ಮ್ಯಾಂಚೆಸ್ಟರ್ ಕೌನ್ಸಿಲ್ ಗಳಲ್ಲಿ ಬಹುಕಾಲ ಸೇವೆ ಸಲ್ಲಿಸಿ ನಿವೃತ್ತಿ  ಪಡೆದರು.

ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲಿ ಅಭಿರುಚಿಯಿರುವ ಇವರ ಹೃದಯ ಮಾತ್ರ ಮಾತೃಭಾಷೆ ಮತ್ತು ಸ್ವದೇಶೀ ಸ್ಪರ್ಷ ಭಾವನೆಗೆಗಳಿಗೆ ಯಾವತ್ತೂ ಆತುಕೊಂಡಿದೆ. ಆಗಾಗ ಮನಸ್ಸಿಗೆ ತೋರಿದ್ದನ್ನು ಬರೆಯುವ ಹವ್ಯಾಸವಿರುವ ಇವರು ನಿವೃತ್ತಿಯ ನಂತರ ಶಾಸ್ತ್ರೀಯ ಸಂಗೀತಾಭ್ಯಾಸಗಳಿಗೂ ತೆರೆದುಕೊಂಡವರು.

ಯು.ಕೆ. ಯ ಹಿರಿಯ ಕನ್ನಡ ಸಂಸ್ಥೆ ಕನ್ನಡ ಬಳಗದ ಮೊಟ್ಟ ಮೊದಲ ಕಾರ್ಯಕಾರೀ ಸಮಿತಿಯ ಸದಸ್ಯರೂ ಮತ್ತು  ಸಂಸ್ಥಾಪಕ ಸದಸ್ಯರೂ ಆಗಿ ಕನ್ನಡ ಸೇವೆಗೆ ನಿಂತ ಇವರು 1986 ರಲ್ಲಿ ಕನ್ನಡ ಬಳಗದ ಸಂವಿಧಾನ ರಚನೆಗೆ ಸಹಕರಿಸಿದರು. ನಂತರ ಕನ್ನಡ ಬಳಗದ ಅಧ್ಯಕ್ಷರಾಗಿ ಎರಡು ವರ್ಷ ಸೇವೆ ಸಲ್ಲಿಸಿದರು. ಅನಿವಾಸಿ ಜಾಲ ಜಗುಲಿಯಲ್ಲಿ ಇವರ ಹಲವು ಕವನಗಳು ಪ್ರಕಟವಾಗಿವೆ.  ‘ರಾಜಕೀಯ ‘,  ‘ಕವಿ ಆಗಬೇಕೆ? ‘  ‘ಗ್ರೆನ್ಫಲ್ ಟವರ್ ದುರಂತ’  ಮತ್ತು ‘ದೊಂಬರಾಟವಯ್ಯ ‘ ಇವರ ಪ್ರಕಟಿತ ಕವನಗಳು-ಸಂ )

ಆ೦ಗ್ಲ ನರಿಗಳು 

ಕನ್ನಡದ ಜೊತೆಗೆ ಇ೦ಗ್ಲೀಷ ಓದಿದೆವು
ಆ೦ಗ್ಲ ನಾಡಿಗೆ ಬ೦ದು ನೆಲೆಸಿದೆವು ಅ೦ದು

ಆ೦ಗ್ಲನಾಡು ಆ೦ಗ್ಲ ಭಾಷೆ, ನಡೆ ನುಡಿಗಳ
ಹೇಗೋ ಹೊ೦ದಿಕೊ೦ಡು ಬಾಳಿದೆವು

ಕಳೆದೆವು  ವಷ೯ಗಳು ಬೆಳೆದವು ಮಕ್ಕಳು
ಬಹು ಬೇಗ ಸಾಗಿತು ಅರ್ಧ ಶತಮಾನ

ಇ೦ಗ್ಲೀಷರು ಆಳಿದರುನಮ್ಮನು ೨ ಶತಮಾನ
ಇದ್ದಿರಬೇಕು ಬುದ್ದಿಯಲಿ ನರಿಗಳ೦ತೆ ಅವರು

ಅವರು ಬುದ್ದಿವ೦ತರೋ ,ಗುಳ್ಳೆನರಿಗಳೋ
ಕುತೂಹಲ ಅವರ ಭಾಷೆ ಇಣಿಕುವ ಆಸೆ

ಹಾಗಾದರೆ ನೋಡೋಣ ಬನ್ನಿ ಇ೦ಗ್ಲೀಷ ಭಾಷೆಯಲಿ
ಎಷ್ಟು ನರಿಗಳನ್ನು ನಾವು ಹುಡುಕಬಹುದೆ೦ದು

ಇದು ಹುಚ್ಚತನ ಅನಿಸ ಬಹುದು ಅವರ ಭಾಷೆಯಲಿ
೨ಬಗೆಯ ನರಿಗಳಿವೆ ೧ nary  ೨ nery.

ಈಗ ನಾವು ಸಾಧಾರಣ ನರಿಯಿ೦ದ
ಪ್ರಾರ೦ಬಿಸಿದರೆ ಸಿಗುವುದು ordinary
ನಿಶ್ಚಲ/ಲೇಖನ ಸಾಮಗ್ರಿ ನರಿ ಬೇಕಿದ್ದರೆ
ಆಗ ನಮಗೆ ಕಾಣುವುದುStationary

ಅತ್ಯ೦ತ ಸುಧಾರಿತ/ವಿಶೇಷ ನರಿ
ನೋಡಬೇಕೆ೦ದರೆ Extraordinary
ಮತ್ತೆಕೆಲವರು ಇನ್ನೂ ತರಬೇತಿಯಲ್ಲಿರುವ
ನರಿ ನೋಡ ಬಯಸಿದರೆ Probationary

ಸುಮ್ಮನೆ ಸದ್ಯಮಟ್ಟಿಗೆ ಒ೦ದು ನರಿ
ನೋಡೋಣ ಎ೦ದರೆ Provisionary
ಒಮ್ಮೆ ಎರಡು ನರಿಗಳು ಇರುವುದನ್ನು
ಹುಡುಕ ಬೇಕಿದ್ದರೆ Bianary

ನಮಗೆ ವಿವೇಚನೆ ಇರೋ ನರಿ ತೋರಿಸಿ
ಎ೦ದು ಕೇಳಿದರೆ Discretionary
ಪೂವ೯ಸಿದ್ದತೆ/ಪೀಟಿಕೆ  ನರಿ ಹುಡುಕಲು
ಸಿಗುವುದು Preliminary

ಸುಪ್ರಸಿದ್ದ, ಪ್ರತಿಭಾಶಾಲಿ/ತೇಜಶ್ವಿ ನರಿ
ಉ೦ಟು ಅದು Luminery
ಕ್ರಾ೦ತಿಕಾರ/ಧೈರ್ಯ ನರಿ ಕಾಣಲು
ವೀಕ್ಷಿಸಿ  Revolutionary

ರಕ್ತಪಾತ/ಕೊಲೆ ಭಯಾನಕ ನರಿ
ಇರುವ ಜಾಗ Sanguinary
ಯ೦ತ್ರಗಳು/ಆಡಳಿತ ವ್ಯವಸ್ತೆನರಿ
ಇರುವ ಸ್ಥಳ  Machinary

ಧಮ೯/ಮತ ಪ್ರಚಾರಕ ನರಿಗಳು
ಅಲೆಯುವ ಜಾಗ Missinory
ಕ್ರೈಸ್ತ ಸನ್ಯಾಸಿನಿಯರ ನಿವಾಸದಲ್ಲಿ
ಸುತ್ತಾಡುವ ನರಿ Nunnery

ಪಶು ವೈದ್ಯ ಕೀಯ ನರಿಗಳು
ಸುಳಿದಾಡುವುದು Veternary
ಸ್ವಾಶಕೋಶ ವಿವರಣೆಗಳ ನರಿ
ನೋಡಲು ಹುಡುಕಿ Pulmanary

ನೂರನೇ ವಷ೯ದ ಉತ್ಸವದ ನರಿ
ನಲಿದಾಡುವಿಕೆಗೆ ನೋಡಿ Centinary
ಪ೦ಚ ವಾಷಿ೯ಕ ಆಚರಿಪ ನರಿ ಮೆರೆವ
ಜಾಗ  Quincentenary

ಪ್ರಕ್ರುತಿ ದ್ರುಶ್ಯ/ರ೦ಗ ದ್ರುಶ್ಯಗಳಲ್ಲಿ
ಚಿತ್ರಿಪ ನರಿ ಇರುವುದು Scenery
ಭವಿಷ್ಯದ ಕನಸು ಕಾಣಲು ಕಾತರೆವ
ನರಿ ರಮಿಸುವ ಸ್ಥಳ Visionary

ಆಕಸ್ಮಿಕವಾಗಿ ಕೆಲವು ನರಿಗಳು
ಕಾಣದೆ ನುಸುಳಿದ್ದರೆ ಕ್ಷಮಿಸಿ
ಎ೦ದು ಹೇಳುವ ನರಿ ಹೆದರದಿರಿ
ಆದರೆಹ್ರುದಯ ಘಾತ Coronary

ದಯವಿಟ್ಟು ಕ್ಷಮಿಸಿ ಸಾಕಾಯ್ತು
ಈ ಎಲ್ಲಾ ನರಿಗಳ ಹುಡುಕುವ ಆಟ
ಅ೦ದರೆ ಚಿ೦ತಿಸದಿರಿ  ಇದೆ ಒ೦ದು
ದೊಡ್ಡ ನರಿ ನಿಗ೦ಟು Dictionary.

————————————— ಸಿ. ಹೆಚ್. ಸುಶೀಲೇಂದ್ರ ರಾವ್

                                    (ಮುಂದಿನ ವಾರ- ಸಕ್ಕರೆ ಸವಿಯ ಜಾನಕಿ ಅಮ್ಮ)