ಈ ವಸಂತ ಋತುವಿನ ಕೊಡುಗೆ ಇದು. ಬಿ ಎಂ ಶ್ರೀ ಅವರ ಒಂದು ‘ಇಂಗ್ಲಿಷ್ ಗೀತ‘* ದ ಅನುವಾದ ಹೀಗೆ ಪ್ರಾರಂಭವಾಗುತ್ತದೆ: ‘’ವಸಂತ ಬಂದ, ಋತುಗಳ ರಾಜ ತಾ ಬಂದ,/ ಚಿಗುರನುತಂದ, ಹೆಣ್ಗಳ ಕುಣಿಸುತ ನಿಂದ”, ಎಂದು. ಇಲ್ಲಿ ವಸಂತಾಗಮನ ನೋಡಿ ಕುಣಿದು ಸರೋಜಿನಿಯವರು ಬರೆದ ಕವನವನ್ನು ಇನ್ನು ಓದಿ.
ವಸಂತಾಗಮನ
ಮಲ್ಲಿಗೆ ಯ ಮುಗುಳು ಹೊಯ್ದಾಡಿ ರೆಂಬೆ ಕೊಂಬೆಯ ಚಿಗುರು ತುಯ್ದಾಡಿ
ವಸಂತೋತ್ಸವದ ಸಂಭ್ರಮವ ಸಾರುತಿದೆ ಬನದರಳು ಚಲ್ಲಾಡಿ
ಹೂತ ಮಾಮರದ ಒಡಲಿಂದ ಕೋಗಿಲೆಯ ಕೂಜನ
ಪಂಚಮದಿಂಚರದ ಸುಂದರ ಸುಮಧುರ ಗಾಯನ
ಸೃಷ್ಟಿಯ ಕಣಕಣದಿ ಕಾಣುತಿದೆ ವೈಭವದ ಚೈತ್ರಾಗಮನ
ಅಲ್ಲಿ ಹುಚ್ಚಾಗಿ ಮೈಮರೆತ ಮನದ ಮಯೂರ ನರ್ತನ ॥೧॥
ಹಸಿರು ಮಕಮಲ್ಲಿನ ಮೆತ್ತನೆಯ ಹಾಸಿನಲ್ಲಿ
ಸುಳಿಗಾಳಿ ಬಿಡಿಸುತಿದೆ ಬಣ್ಣ ಬಣ್ಣದ ಚಿತ್ತಾರ ವಲ್ಲಿ
ಅಲ್ಲೊಂದು ಕೆಂಪು ಇಲ್ಲೊಂದು ಹಳದಿ, ನೀಲ, ಗುಲಾಬಿ ನೋಡಲ್ಲಿ
ಬಾನ ಬಿಟ್ಟು ಇಂದ್ರಧನುಷ ಬಂದಿಳಿದಿದೆ ಧರೆಗೆ ಇಂದಿಲ್ಲಿ ॥೨॥
ಚಂದ್ರಮನ ಚಂದ್ರಿಕೆಗೆ ತಾರಕೆಯ ಮಿಸುನಿ ಬೆಳಕಿಗೆ
ಮಬ್ಬುಕವಿಸುತಿದೆ ಆಗಸದಿ ಸುಳಿವ ಕೋಲ್ಮಿಂಚು ಆಗಾಗ
ಅಂಬರದಿ ಮೆರೆವ ಆರ್ಭಟಕೆ, ರಮಣೀಯ ಭೀಭತ್ಸತೆಗೆ
ಕಂಪಿಸಿದ ಚದುರೆ ಅರಸಿದಳು ನಲ್ಲನೊಲುಮೆಯ ತೋಳಾಸರೆಗೆ ॥೩॥
ಬಳಲಿ ಬೆಂಡಾದ ಭೂ ರಮೆಗೆ ಮೃದು ಮಧುರ ಸಿಂಚನ
ಹೆಜ್ಜೆ ಹೆಜ್ಜೆಗೆ ಇಣುಕುತಿದೆ ಹೊಸ ಹೊಸತು ಈ ಚೇತನ
ಎಲ್ಲೆಲ್ಲೂ ನವೋಲ್ಲಾಸ ಶುರುವಾಗಿದೆ ಹೊಸ ಆವರ್ತನ
ಇದಲ್ಲವೇ ಜೀವನದಿ ಸಂಭ್ರಮದ ವಸಂತಾಗಮನ ॥೪॥
ಸರೋಜಿನಿ ಪಡಸಲಗಿ
ಲೇಖಕಿ ’ಅನಿವಾಸಿ”ಯನ್ನು ತಪ್ಪದೆ ಓದಿ ಇತ್ತೀಚೆಗೆ ಕಮೆಂಟ್ಸ್ ಮಾಡುತ್ತಿರುತ್ತಾರೆ. ಸರೋಜಿನಿಯವರು ಬೆಂಗಳೂರಿನಲ್ಲಿದ್ದರೂ ಒಬ್ಬ ಅನಿವಾಸಿ ಮಗನ ತುಡಿತವನ್ನರಿತಿರುವವರು.
* “Spring”, by Thomas Nashe
(ಚಿತ್ರ ಕೃಪೆ: ಶ್ರೀವತ್ಸ ದೇಸಾಯಿ)


