ಕೃಷ್ಣೆ – ತುಂಗೆಯರ ನಾಡಿನಲ್ಲಿ ಹರಿದಾಸಸಾಹಿತ್ಯ – ಕೆಲವು ಅಂಶಗಳು.

****************************

ಸಾಹಿತ್ಯದ ಮೂಲ ಉದ್ದೇಶವೇ ಜೀವನದ ಮೌಲ್ಯಗಳನ್ನು ತಿಳಿಸಿ ಸಾಮಾನ್ಯರ ಬದುಕನ್ನು ಉದಾತ್ತಗೊಳಿಸುವುದು.  ಕನ್ನಡ ಸಾಹಿತ್ಯದಲ್ಲಿ ಈ ಉದ್ದೇಶ ಶಿವಶರಣರಿಂದಲೂ ಹರಿದಾಸರಿಂದಲೂ ಸಾಧಿತವಾಗಿರುವುದನ್ನು ಕಾಣುತ್ತೇವೆ. ಹರಿದಾಸರ ಸಾಧನೆ ಮೂಲವಾಗಿ ಆಧ್ಯಾತ್ಮಿಕ ಪ್ರಪಂಚದಲ್ಲಿ ಆದರೂ ಅವರು ಸಾಮಾಜಿಕ ಜೀವನವನ್ನು ಕಡೆಗಣಿಸಿದವರಲ್ಲ. ಕಾವ್ಯ ಸೃಷ್ಟಿ ಮಾಡುವ ಕವಿ ಸಮಾಜದಿಂದಲೇ ಮೂಡಿ ಬಂದಿರುತ್ತಾನೆ, ಆದ್ದರಿಂದ ಸಮಾಜವನ್ನು ಬಿಟ್ಟು ಪ್ರತ್ಯೇಕವಾಗಿ ಉಳಿದ ಸಾಹಿತ್ಯಕ್ಕೆ ಇಲ್ಲಿ ಅಸ್ತಿತ್ವ ಇಲ್ಲ. ಕಾವ್ಯ ಸೃಷ್ಟಿಯ ಈ ಪ್ರಕ್ರಿಯೆಯಲ್ಲಿ ಸಮಾಜ ಮತ್ತು ಸಾಹಿತ್ಯಗಳ ಸಂಬಂಧ ಜೀವಂತವಾಗಿ, ಪರಸ್ಪರ ಪೂರಕವಾಗಿ ಇರಬೇಕಾದ ಅಗತ್ಯ ಇದೆ. 

ಕರ್ನಾಟಕದಲ್ಲಿ ಭಕ್ತಿಯ ಹೊನಲನ್ನು ಜನಸಾಮಾನ್ಯರ ಭಾಷೆ ಕನ್ನಡಕ್ಕೆ ತಂದ ಯಶಸ್ಸು ಶರಣರ ವಚನಗಳು ಮತ್ತು ದಾಸರ ಸಾಹಿತ್ಯಕ್ಕೆ ಸಲ್ಲುತ್ತದೆ. ವಚನಕಾರರ ಮೂಲ ಕಾಳಜಿ ಸಾಮಾಜಿಕವಾಗಿದ್ದರೆ, ದಾಸಸಾಹಿತ್ಯದ ಪ್ರಮುಖ ಧ್ಯೇಯ ಭಕ್ತಿಸಿದ್ಧಾಂತವಾಗಿತ್ತು ಅನ್ನುವುದು ಸ್ಪಷ್ಟ.
ಧರ್ಮದ ಮೂಲಕ ಸಮಾಜವನ್ನು ಕಾಣಲು, ತಿದ್ದಲು ಶರಣರು ಮತ್ತು ದಾಸರು ಈ ಅಗತ್ಯವನ್ನು ಮನಗಂಡರು. ಧರ್ಮ ಮುಖ್ಯ ಮಾಧ್ಯಮವಾದರೆ ಸಮಾಜ ಚಿಂತನೆ ಇವರ ಮುಖ್ಯ ಕಾಳಜಿಯಾಗಿದೆ. ಅಂಧಾಚರಣೆಯ ನಿರ್ಮೂಲನ, ವ್ಯಕ್ತಿತ್ವ ನಿರ್ಮಾಣ, ತನ್ಮೂಲಕ ಆರೋಗ್ಯಕರ ವಾತಾವರಣದ ನಿರ್ಮಾಣಕ್ಕೆ ಶರಣರು ಮತ್ತು ದಾಸರು ಯತ್ನಿಸಿದರು. ಈ ಯತ್ನದ ಕಾರಣವಾಗಿ ವಚನಗಳು, ಕೀರ್ತನೆಗಳು, ಸುಳಾದಿ ಮತ್ತು ಉಗಾಭೋಗಗಳು ಮೂಡಿಬಂದವು. ಭಕ್ತಿಸಿದ್ಧಾಂತದ ಜೊತೆಗೆ ಸಚ್ಚಾರಿತ್ರ್ಯ, ಸದಾಚಾರ ಹಾಗೂ ಸಾತ್ವಿಕ ಜೀವನದ ಕಡೆಗೂ ಈ ಸಾಹಿತ್ಯದ ಹರಿವಿದೆ. ಲೋಕ ನೀತಿಯ ಮಾತುಗಳಲ್ಲಿ ಸುಖಜೀವನದ ಸಂದೇಶ ನೀಡುವ ಮೂಲಕ ಸಾರ್ಥಕ ಬದುಕಿನ ಕರೆ ನೀಡಿದ್ದಾರೆ ಎನ್ನುವುದೂ ಸತ್ಯ.

ದಾಸ ಸಾಹಿತ್ಯದಲ್ಲಿ ಹಲವಾರು ರೀತಿಯ ರಚನೆಗಳಿವೆ – ಕೀರ್ತನೆಗಳು, ಸುಳಾದಿ, ಉಗಾಭೋಗಗಳು ಮುಖ್ಯವಾದವು. ಇವೆಲ್ಲ ರಚನೆಗಳು ಮೂಲವಾಗಿ ಸಂಗೀತಕ್ಕೆ ಒಳಪಡುವ ರೂಪದಲ್ಲಿವೆ. ಸುಳಾದಿ ಮತ್ತು ಉಗಾಭೋಗಗಳಿಗೆ ವಚನಸಾಹಿತ್ಯ ಪ್ರಕಾರದ ಪ್ರೇರಣೆ ಇರಬಹುದು ಎನ್ನುವ ಮಾತಿದೆ. ಇನ್ನು ಹಲವರ ಪ್ರಕಾರ ಶಿವಶರಣರ ವಚನಗಳು ಉಕ್ತಿಗಳು, ದಾಸಸಾಹಿತ್ಯ ಗೇಯ ಪ್ರಕಾರ - ಹೀಗಾಗಿ ಸಂಗೀತದ ಛಾಯೆರುತ್ತದೆ ಎನ್ನುವುದು. ಸುಳಾದಿ ಮತ್ತು ಉಗಾಭೋಗಗಳಲ್ಲಿ ಧಾರ್ಮಿಕ ವಿಚಾರಗಳು, ಆಧ್ಯಾತ್ಮಿಕ ತತ್ವಗಳು ಮತ್ತು ದೈವ ಸ್ತುತಿಗಳ ನಿರೂಪಣೆ ಇದೆ. ಭಕ್ತನಾದವನ ಆರ್ತಭಾವ ಮತ್ತೂ ಅಂತರಂಗದರ್ಶನವು ಆಗುತ್ತದೆ.

ಕೃಷ್ಣ ತುಂಗೆಯರ ಮಧ್ಯದಲ್ಲಿರುವ ರಾಯಚೂರು ಜಿಲ್ಲೆ ಹಲವು ರೀತಿಯ ಕಲೆ ಸಾಹಿತ್ಯ. ಸಂಸ್ಕೃತಿಗಳ ನೆಲೆಬೀಡಾಗಿದೆ. ಹರಿದಾಸ ಸಾಹಿತ್ಯಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿ ಹರಿದಾಸರ ತೊಟ್ಟಿಲು ಎಂದು ಹೆಸರಾಗಿದೆ.

ಹರಿದಾಸ ಸಾಹಿತ್ಯವನ್ನು ವಿದ್ವಾಂಸರು ಹಲವು ರೀತಿಗಳಲ್ಲಿ ವಿಭಾಗಿಸಿದ್ದಾರೆ. ಶ್ರೀ ರಾ. ಸ್ವಾ. ಪಂಚಮುಖಿಯವರ ಪ್ರಕಾರ 4 ಘಟ್ಟಗಳಿವೆ – 1. ಮಧ್ವಾಚಾರ್ಯರ ಶಿಷ್ಯ ನರಹರಿ ತೀರ್ಥರ ಕಾಲ, 2. ಕೃಷ್ಣದೇವರಾಯನ ಕಾಲ, 3. ವಿಜಯದಾಸರ ಮತ್ತು ಅವರ ಶಿಷ್ಯರ ಕಾಲ ಮತ್ತು 4. ನಂತರದ ಕಾಲ.

ಡಾ. ಆರ್ ಜಿ ಗುಡಿಯವರು ಇದನ್ನೇ 1. ಶ್ರೀಪಾದರಾಜಪೂರ್ವ ಯುಗ (ಕ್ರಿಶ 879-1450), 2. ಶ್ರೀಪಾದರಾಜಯುಗ (ಕ್ರಿಶ 1451-1565), 3. ವಿಜಯದಾಸಯುಗ (ಕ್ರಿಶ 1566-1809) ಮತ್ತು 4. ಶಿಷ್ಯ-ಪ್ರಶಿಷ್ಯ ಯುಗ (ಕ್ರಿಶ 1810 ರಿಂದ ಮುಂದೆ) ಎಂದು ವಿಭಾಗಿಸಿದ್ದಾರೆ.

ದಾಸಸಾಹಿತ್ಯದ ಬೆಳವಣಿಗೆಯ ದೃಷ್ಟಿಯಿಂದ 12ನೆಯ ಶತಮಾನದಿಂದ 19ನೆಯ ಶತಮಾನದವರೆಗಿನ ಕಾಲವನ್ನು ಮೂರು ಘಟ್ಟಗಳಾಗಿ ವಿಂಗಡಿಸಬಹುದು. ನರಹರಿತೀರ್ಥರಿಂದ ಪುರಂದರ-ಕನಕದಾಸರವರೆಗಿನ ಅವಧಿ, ವಿಜಯದಾಸರಿಂದ ಜಗನ್ನಾಥದಾಸರವರೆಗಿನ ಅವಧಿ ಮತ್ತು ಅವರ ಶಿಷ್ಯ-ಪ್ರಶಿಷ್ಯರ ಅವಧಿ.

ಕನ್ನಡದಲ್ಲಿ ರಚಿತವಾದ ಹರಿದಾಸಸಾಹಿತ್ಯದ ಮೂಲ ಮಧ್ವಾಚಾರ್ಯರ ಶಿಷ್ಯ ನರಹರಿತೀರ್ಥರಿಂದ (ಅಂಕಿತ: ನರಹರಿ / ರಘುಪತಿ) ಆರಂಭವಾದದ್ದು. ಅವರ ರಚನೆಗಳಲ್ಲಿ ನಾಲ್ಕು ಮಾತ್ರ ಈಗ ಲಭ್ಯವಿವೆ (ಎಂತು ಮರುಳಾದೆ, ತಿಳಕೋ ನಿನ್ನೊಳಗೆ ನೀನು, ಹರಿಯೇ ಇದು ಸರಿಯೇ ಮತ್ತು ಎದುರ್ಯಾರೊ ಗುರುವೇ).

ಅದರ ನಂತರದ ರಾಜಕೀಯ, ಸಾಮಾಜಿಕ ಪರಿಸ್ಥಿತಿಗಳಿಂದ ಬತ್ತಿಹೋದಂತೆನಿಸಿದರೂ, ಅರವತ್ತು ಜನ ’ಆದ್ಯ’ರಿಂದ ಮಂದಗಾಮಿಯಾಗಿ ಮುಂದುವರೆಸಲ್ಪಟ್ಟಿತು (ಶ್ರೀ ಗೋರೆಬಾಳು ಹನುಮಂತರಾಯರು / ಕಪಟರಾಳ ಕೃಷ್ಣರಾಯರು). ಸಂಖ್ಯೆಯಲ್ಲಿ ಮಹತ್ವಪೂರ್ಣವಲ್ಲದಿದ್ದರೂ, ಈ ರಚನೆಗಳ ಪ್ರಭಾವ ಪುರಂದರ-ಕನಕರ ಮೇಲೆ ಆಗಿರುವುದಂತೂ ಸತ್ಯ ಎನ್ನುವುದು ವಿದ್ವಾಂಸರ ಅಭಿಪ್ರಾಯ.

ದಾಸಸಾಹಿತ್ಯವಾಹಿನಿ ಅಲ್ಲಿಂದ ಮುಂದೆ ತನ್ನ ಆಳ ವೈಶಾಲ್ಯತೆಗಳನ್ನು ಪಡೆದುಕೊಂಡದ್ದು ಎರಡು ನೂರು ವರ್ಷಗಳ ತರುವಾಯ ಶ್ರೀಪಾದರಾಜರ ಕಾಲದಲ್ಲಿ. ಮುಳುಬಾಗಿಲಿನ ಶ್ರೀಪಾದರಾಜರು ಶ್ರೀರಂಗವಿಟ್ಠಲ ಅನ್ನುವ ಅಂಕಿತದಲ್ಲಿ ಅನೇಕ ರಚನೆಗಳನ್ನು ಮಾಡಿದ್ದಲ್ಲದೇ, ಅವನ್ನು ಪೂಜಾವಿಧಾನಗಳ ಅವಿಭಾಜ್ಯ ಅಂಗವಾಗಿ ಹಾಡಿಸಲೂ ಆರಂಭಿಸಿದರು.

ಶ್ರೀಪಾದರಾಜರ ಶಿಷ್ಯ ವ್ಯಾಸರಾಜರದು ಹರಿದಾಸಸಾಹಿತ್ಯದ ಅಭಿವೃದ್ಧಿಯಲ್ಲಿ ವಿಶೇಷ ಸ್ಥಾನವಿದೆ. ಸಿರಿಕೃಷ್ಣ ಅಂಕಿತದಲ್ಲಿ ಅವರು ಅನೇಕ ರಚನೆಗಳನ್ನು ಮಾಡಿದ್ದಲ್ಲದೇ, ಕೀರ್ತನೆಗಳಿಗೆ ಸಂಗೀತ-ನರ್ತನಗಳ ಸಂಯೋಜನೆ ಇವರ ಕಾಲದಲ್ಲಿ ನಡೆದು, ಕೀರ್ತನೆಗಳು ಜನಪ್ರಿಯವಾದವು. ಮಠಾಧಿಪತಿಗಳೂ, ವಿಜಯನಗರದ ರಾಜಗುರುಗಳೂ ಆಗಿದ್ದ ವ್ಯಾಸರಾಜರು ವ್ಯಾಸಕೂಟ (ಸಂಸ್ಕೃತ ಗ್ರಂಥ-ವ್ಯಾಖ್ಯಾನಕಾರರು) ಮತ್ತು ದಾಸಕೂಟ (ಹರಿದಾಸಸಾಹಿತ್ಯಕಾರರು) ಎರಡಕ್ಕೂ ಸಂರಕ್ಷಕರಾಗಿದ್ದರು.

ವ್ಯಾಸರಾಜರ ಶಿಷ್ಯ ವಾದಿರಾಜರು ಸಂಸ್ಕೃತವಲ್ಲದೇ, ಕನ್ನಡದಲ್ಲೂ ಅನೇಕ ಕೃತಿಗಳನ್ನು ಹಯವದನ ಎಂಬ ಅಂಕಿತದಲ್ಲಿ ರಚಿಸಿದರು. ಜಾನಪದ ಸಾಹಿತ್ಯ ಪ್ರಕಾರಗಳನ್ನೂ ಅಳವಡಿಸಿಕೊಂಡರು ಅಲ್ಲದೇ ತುಳು ಭಾಷೆಯಲ್ಲೂ ರಚನೆಗಳನ್ನು ಮಾಡಿದರು.

ಈ ಹಂತದಲ್ಲಿದ್ದಾಗ, ದಾಸಸಾಹಿತ್ಯವನ್ನು ಶಿಖರಪ್ರಾಯವಾಗಿಸಿದ ಕೀರ್ತಿ ಪುರಂದರದಾಸರು ಮತ್ತು ಕನಕದಾಸರಿಗೆ ಸಲ್ಲಬೇಕು. ಅನೇಕ ಆಯಾಮಗಳಲ್ಲಿ ದಾಸಸಾಹಿತ್ಯದ ಬೆಳವಣಿಗೆ, ಜನಪ್ರಿಯತೆಗೆ ಕಾರಣವಾದ ವಿಜಯನಗರದ ಉಚ್ಛ್ರಾಯದ ಈ ಕಾಲ ’ದಾಸಸಾಹಿತ್ಯದ ಸುವರ್ಣಯುಗ’ ಎನ್ನಿಸಿಕೊಂಡಿತು.

ಅಪಾರ ಕೀರ್ತನೆಗಳನ್ನು, ಸುಳಾದಿಗಳನ್ನು, ಉಗಾಭೋಗ ಮತ್ತಿತರ ಪ್ರಕಾರಗಳನ್ನು ರಚಿಸುವ ಮೂಲಕ ಪುರಂದರದಾಸರು (ಪುರಂದರವಿಟ್ಠಲ) ದಾಸಸಹಿತ್ಯ-ಸಂಗೀತಕ್ಕೆ ಅಪಾರ ಕೊಡುಗೆ ನೀಡಿ ’ಕರ್ನಾಟಕ ಸಂಗೀತದ ಪಿತಾಮಹ’ ಎನ್ನಿಸಿದರು. ತಮ್ಮ ರಚನೆಗಳಲ್ಲಿ ಬುಡುಬುಡುಕೆ ಪದ, ಲಾವಣಿಯಂತಹ ಜಾನಪದ ಮಟ್ಟುಗಳನ್ನು ಧಾರಾಳವಾಗಿ ಬಳಸಿಕೊಂಡರು. ವೇದಾಂತ ಮತ್ತು ಜನಸಾಮಾನ್ಯರನ್ನು ಬೆಸೆದರು.

ಇವರ ಸಮಕಾಲೀನರಾದ ಕನಕದಾಸರು (ಕಾಗಿನೆಲೆಯಾದಿಕೇಶವ) ತಮ್ಮ ವಿಶಿಷ್ಟ ವ್ಯಕ್ತಿತ್ವ, ಕ್ರಾಂತಿಕಾರಿ ಧೋರಣೆ ಹಾಗೂ ಕಾವ್ಯಶಕ್ತಿಗಳಿಂದ ಮಹತ್ವದ ಸ್ಥಾನ ಪಡೆದವರು. ಒಗಟಿನಂತಿರುವ ’ಮುಂಡಿಗೆ’ ಎಂಬ ಹೊಸ ಕಾವ್ಯಪ್ರಕಾರವನ್ನು ದಾಸಸಾಹಿತ್ಯದಲ್ಲಿ ಸೇರಿಸಿದ್ದಲ್ಲದೇ, ಡೊಳ್ಳಿನ ಹಾಡು ಮತ್ತು ಕಣಪದಗಳ ರಚನೆಯಿಂದ ಜಾನಪದದ ಸೊಗಡನ್ನೂ ತಂದರು.

ವಿಜಯನಗರ ಸಾಮ್ರಾಜ್ಯದ ಪತನಾನಂತರ ದಾಸಸಾಹಿತ್ಯವು ತನ್ನ ಅವನತಿಯತ್ತ ಸಾಗಿತು. ಆ ಕಾಲದ ರಾಜಕೀಯ, ಸಾಮಾಜಿಕ ಅಸ್ಥಿರತೆಗಳ ಕಾವು ತಟ್ಟಿದರೂ, ಈ ಸಾಹಿತ್ಯವಾಹಿನಿಯು ಪೂರ್ತಿ ಬತ್ತದೇ ಹರಿಯುತ್ತಿತ್ತು ಅನ್ನುವುದಕ್ಕೆ ಬಿಜಾಪುರ (ಈಗಿನ ವಿಜಯಪುರ) ಪ್ರಾಂತದ ಕಾಖಂಡಕಿ ಮಹಿಪತಿರಾಯರು ಮತ್ತು ಅವರ ಮಗ ಕೃಷ್ಣರಾಯರಿಂದ ರಚಿತವಾದ ಅನೇಕ ಕೃತಿಗಳೇ ಸಾಕ್ಷಿ. ಕೋಲಾಟದ ಪದ, ಕೊರವಂಜಿಯ ಪದ, ಸುಗ್ಗಿಪದಗಳಂತಹ ಜಾನಪದ ಮಟ್ಟುಗಳು ಇವರ ರಚನೆಗಳಲ್ಲಿ ಕಂಡುಬರುತ್ತವೆ.

ಇಲ್ಲಿಂದ ಮುಂದೆ ಹರಿದಾಸಸಾಹಿತ್ಯಕ್ಕೆ ಮತ್ತೆ ಚಾಲನೆ ದೊರೆತದ್ದು ಮಂತ್ರಾಲಯದ ರಾಘವೇಂದ್ರರ (ಕೃಷ್ಣ) ಕಾಲದಲ್ಲಿ. ಹಂಪಿಯಲ್ಲಿ ಕೇಂದ್ರಿತವಾಗಿದ್ದ ಹರಿದಾಸಪಂಥದ ಕೇಂದ್ರ ಮಾನ್ವಿ, ಲಿಂಗಸೂಗೂರು, ಕಾಖಂಡಿಕಿ, ಮಳಖೇಡ ಮೊದಲಾದ ಊರುಗಳಿಗೆ ಹಬ್ಬಿ ಮತ್ತೆ ಬೆಳೆಯತೊಡಗಿತು. ಈ ಸಾಹಿತ್ಯಪ್ರಕಾರವನ್ನು ಮತ್ತೆ ವೈಭವಯುತವಾಗಿಸಿದ್ದು ರಾಯಚೂರು ಜಿಲ್ಲೆಯ ಚೀಕಲಪರವಿ ಗ್ರಾಮದ ವಿಜಯದಾಸರು (ವಿಜಯವಿಟ್ಠಲ). ಭಾವನಾಪ್ರಧಾನವಾಗಿದ್ದ ದಾಸಸಾಹಿತ್ಯ, ಇವರ ಕೃತಿಗಳಲ್ಲಿ ತತ್ವಪ್ರಧಾನವಾಗಿ ಕಂಡುಬರುತ್ತದೆ.

ವಿಜಯದಾಸರ ಸಮಕಾಲೀನರಾದ ಕಾಖಂಡಿಕಿ ಪ್ರಸನ್ನವೆಂಕಟದಾಸರು (ಪ್ರಸನ್ನವೆಂಕಟ), ಶಿಷ್ಯರಾದ ಭಾಗಣ್ಣ (ಗೋಪಾಲವಿಟ್ಠಲ), ತಿಮ್ಮಣ್ಣ (ವೇಣುಗೋಪಾಲ), ಮೋಹನದಾಸರು (ಮೋಹನವಿಠಲ), ಮತ್ತು ಕಲ್ಲೂರು ಸುಬ್ಬಣ್ಣ (ವ್ಯಾಸವಿಠಲ) ಇವರೆಲ್ಲ ತಮ್ಮ ತಮ್ಮ ಕೊಡುಗೆಗಳಿಂದ ದಾಸಸಾಹಿತ್ಯವನ್ನು ಶ್ರೀಮಂತಗೊಳಿಸಿದರು.

ಇವರಲ್ಲಿ ಗೋಪಾಲದಾಸರು (ಭಾಗಣ್ಣ) ವಿಜಯದಾಸರ ತಾತ್ವಿಕವಿಚಾರಧಾರೆಯನ್ನು ಮುಂದುವರಿಸಿದ್ದಲ್ಲದೇ ಸಂಗೀತ, ನರ್ತನ, ಚಿತ್ರಕಲೆಗಳನ್ನೂ ಬಳಸಿಕೊಂಡರು. ಗೋಪಾಲದಾಸರಿಂದ ಪ್ರಭಾವಿತರಾದ ಅವರ ತಮ್ಮಂದಿರಾದ ಸೀನಪ್ಪ (ವರದಗೋಪಾಲವಿಠಲ), ದಾಸಪ್ಪ (ಗುರುಗೋಪಾಲವಿಠಲ), ರಂಗಪ್ಪ (ತಂದೆಗೋಪಾಲವಿಠಲ) ಮತ್ತು ಶಿಷ್ಯ ಐಜಿ ವೆಂಕಟರಾಮಾಚಾರ್ಯ (ವಾಸುದೇವವಿಠಲ) ಅವರೂ ಸಹ ತಮ್ಮನ್ನು ಸಾಹಿತ್ಯಸೇವೆಯಲ್ಲಿ ತೊಡಗಿಸಿಕೊಂಡರು.

ಗೋಪಾಲದಾಸರ ಹೆಸರನ್ನು, ಪರಂಪರೆಯನ್ನು ಉಳಿಸಿದವರಲ್ಲಿ ಜಗನ್ನಾಥದಾಸರು (ಜಗನ್ನಾಥವಿಠಲ) ಪ್ರಮುಖರು. ದಾಸಸಾಹಿತ್ಯ ಪ್ರಕಾರಗಳನ್ನಲ್ಲದೆ ಕನ್ನಡದಲ್ಲಿ ದೊಡ್ಡ ಗ್ರಂಥಗಳನ್ನೂ ರಚಿಸಿದ್ದಾರೆ.

ಅಲ್ಲಿಂದ ಮುಂದೆ, ಹರಿದಾಸಪರಂಪರೆ ಸಾಗಿಬಂದ ದಾಸಪರಂಪರೆಯಲ್ಲಿ ಅನೇಕರು ತಮ್ಮ ಸೇವೆ ಸಲ್ಲಿಸಿದ್ದಾರೆ, ಅವರಲ್ಲಿ ಪ್ರಾಣೇಶದಾಸರು (ಪ್ರಾಣೇಶವಿಠಲ) ಮತ್ತು ಅವರ ಶಿಷ್ಯರ ಪರಂಪರೆಯನ್ನು ಜೀವಂತವಾಗಿಟ್ಟಿರುವ ಅನೇಕ ಹರಿದಾಸರಿದ್ದಾರೆ - ಎಮ್ ಆರ್ ಗೋವಿಂದರಾವ್ (ಗುರುಗವಿಂದವಿಠಲ), ಆರ್ ರಾಮಚಂದ್ರರಾಯರು (ತಂದೆವೆಂಕಟೇಶವಿಠಲ), ಕೋಸಗಿ ಸ್ವಾಮಿರಾಮಾಚಾರ್ಯ (ಶ್ರೀಗುರುಜಗನ್ನಾಥವಿಠಲ), ವಕೀಲ ಸ್ವಾಮಿರಾಯರು (ವರದೇಶವಿಠಲ), ಜೋಳದಹೆಡಗಿ ಶೇಖ್ ಬಡೇಸಾಬ್ (ರಾಮದಾಸ), ವಕೀಲ ಜಿ ಮಧ್ವರಾವ್ (ಮಧ್ವಮುನಿ), ಹೇರೂರು ರಾಮರಾಯರು (ಮೂಲರಾಮ), ಗುರುರಾಜ ಬೆಣಕಲ್ (ನರಹರಿ) ಮತ್ತಿನ್ನೂ ಅನೇಕರನ್ನು ನಾವು ನೆನೆಯಬಹುದು.
ದಾಸಸಾಹಿತ್ಯದಲ್ಲಿ ಮಹಿಳೆಯರು:
ದೈನಂದಿನ ಕಾರ್ಯಕಲಾಪದೊಂದಿಗೆ ದಾಸರ ರಚನೆಗಳನ್ನು ಹಾಡಿಕೊಂಡು ಉಳಿಸಿಕೊಂಡು ಬಂದಿರುವಂತೆಯೇ, ದಾಸಸಾಹಿತ್ಯದ ರಚನೆಯಲ್ಲೂ ಮಹಿಳೆಯರ ಗಮನಾರ್ಹ ಪಾತ್ರವಿದೆ.
ಮೊದಲ ಘಟ್ಟದಲ್ಲಿ ಪುರಂದರ ದಾಸರ ಹೆಂಡತಿ ಸರಸ್ವತೀಬಾಯಿ (ಸಿರಿಪುರಂದರವಿಠಲ) ಮತ್ತು ಮಗಳು ರುಕ್ಮಿಣೀಬಾಯಿ (ತಂದೆಪುರಂದರವಿಠಲ) ಕೃತಿರಚನೆ ಮಾಡಿದ್ದರೆನ್ನಲಾಗಿದ್ದರೂ, ಅವರ ಕೃತಿಗಳು ಈಗ ಉಪಲಬ್ಧವಿಲ್ಲ.

ದ್ವಿತೀಯ ಘಟ್ಟದಲ್ಲಿ ಶ್ರೀರಾಮೇಶ ಅಂಕಿತದೊಂದಿಗೆ ಮುಯ್ಯದ ಪದಗಳು, ಬೀಗರಹಾಡು, ಮೋರೆಗೆ ನೀರು ತಂದ ಹಾಡು ಇತ್ಯಾದಿ ಗಲಗಲಿ ಅವ್ವನವರ ಕೊಡುಗೆ. ಅವರ ಶಿಷ್ಯೆಯಾದ ಭಾಗಮ್ಮ ಅಥವಾ ಪ್ರಯಾಗವ್ವ ಕನ್ನಡದಲ್ಲಿ ಭಾಗವತದ 3ನೆಯ ಸ್ಕಂದ ಬರೆದರು.

ದಾಸಸಾಹಿತ್ಯಕ್ಕೆ ಸೇವೆ ಸಲ್ಲಿಸಿದ ಮಹಿಳೆಯರನ್ನು ನೆನೆಯುವಾಗ, ಹೆಳವನಕಟ್ಟೆ ರಂಗ ಅನ್ನುವ ಅಂಕಿತದಲ್ಲಿ ವಿಪುಲವಾಗಿ ಸಾಹಿತ್ಯಸೃಷ್ಟಿ ಮಾಡಿದ ಗೋಪಾಲದಾಸರ ಶಿಷ್ಯೆಯಾದ ಹೆಳವನಕಟ್ಟೆ ಗಿರಿಯಮ್ಮನವರನ್ನು ಮರೆಯುವ ಹಾಗೆಯೇ ಇಲ್ಲ.

ಭೀಮೇಶಕೃಷ್ಣ ಅಂಕಿತದೊಂದಿಗೆ ಅನೇಕ ರಚನೆಗಳನ್ನು ಮಾಡಿದ ಹರಪನಹಳ್ಳಿ ಭೀಮವ್ವನ ಸರಳ ಶೈಲಿಯ ಜನಪ್ರಿಯ. ಅನೇಕ ಪೌರಾಣಿಕ ಕಥೆಗಳನ್ನು ಸರಳಕನ್ನಡದ ಹಾಡುಗಳಾಗಿ ಪರಿವರ್ತಿಸಿದ ಕೀರ್ತಿ ಭೀಮವ್ವನಿಗೆ ಸಲ್ಲುತ್ತದೆ. ಶ್ರಾವಣ ಶುಕ್ರವಾರದ ಹಾಡು, ಶನಿವಾರದ ಹಾಡು ಇತ್ಯಾದಿ ಭೀಮವ್ವನ ಕೃತಿಗಳು ಶ್ರಾವಣಮಾಸದಲ್ಲಿ ಇಂದಿಗೂ ಹಾಡಲ್ಪಡುತ್ತವೆ.

ಈ ಪಟ್ಟಿಗೆ, ಚೆಲ್ಲಮ್ಮ, ಗಣಪಕ್ಕ, ಸುಂದರಾಬಾಯಿ, ಪನ್ನಿ ಲಕ್ಷ್ಮೀಬಾಯಿ, ಲಕ್ಷ್ಮೀದೇವಮ್ಮ ಮುಂತಾದವರೂ ಸೇರುತ್ತಾರೆ. ತಡವಾಗಿಯಾದರೂ ಸ್ವತಃ ಕೃತಿರಚನೆಗೆ ಕೈಹಾಕಿದ ಮಹಿಳೆಯರ ಕೊಡುಗೆಯಿಂದ ದಾಸಸಾಹಿತ್ಯದ ಹರವು, ಆಳ ಹೆಚ್ಚಿದವು ಎನ್ನುವುದರಲ್ಲಿ ಅತಿಶಯೋಕ್ತಿಯಿಲ್ಲ.

********************************

ಒಟ್ಟಿನಲ್ಲಿ ಕನ್ನಡ ಹರಿದಾಸ ಸಾಹಿತ್ಯವು ವಿಷಯ, ರೂಪ, ಭಾಷೆ, ಪರಿಣಾಮಗಳೆಲ್ಲದರಲ್ಲೂ ವೈಶಿಷ್ಟ್ಯತೆಯನ್ನು ಸಾಧಿಸಿ ಇಂದಿಗೂ ಜೀವಂತವಾಗಿದೆ ಎಂಬ ಮಾತನ್ನು ತಳ್ಳಿಹಾಕುವಂತಿಲ್ಲ. ಕರ್ನಾಟಕದ ಎಲ್ಲ ಭಾಗಗಳ ಮಹನೀಯರ ಕೊಡುಗೆ ಇದೆಯೆನ್ನುವುದು ಎಷ್ಟು ಸತ್ಯವೋ, ಅದರ ಸಿಂಹಪಾಲು ಕೃಷ್ಣೆ-ತುಂಗೆಯರ ತೀರದ ಪ್ರದೇಶಗಳದ್ದು ಅನ್ನುವುದೂ ಅಷ್ಟೇ ದಿಟ.

ಮೂಲ ಕೃತಿಯ ಲೇಖಕಿ: ಶ್ರೀಮತಿ ಸೀತಾ ಗುಡೂರ್-ಕುಲಕರ್ಣಿ
ಸಾರ ಇಳಿಸಿದವರು: ಲಕ್ಷ್ಮೀನಾರಾಯಣ ಗುಡೂರ್

********************************