ಡಾ ಜಿ ಎಸ್ ಶಿವಪ್ರಸಾದ್
ಈ ವಾರದ ಸಂಚಿಕೆಯಲ್ಲಿ ಈಗಿನ ಕಾಲದ ಯುದ್ಧಗಳ ಕುರಿತು ನನ್ನ ಅನಿಸಿಕೆಗಳನ್ನು ಹಂಚಿಕೊಂಡಿದ್ದೇನೆ. ಸ್ವಲ್ಪ ದೀರ್ಘವಾದ ಲೇಖನ. ನಿಮ್ಮ ಪುರುಸೊತ್ತಿನಲ್ಲಿ ಓದಿ, ನಿಮ್ಮ ಅನಿಸಿಕೆಗಳನ್ನೂ ಹಂಚಿಕೊಳ್ಳಿ. ವಂದನೆಗಳು. -ಸಂಪಾದಕ
ಮಾರ್ಚ್ 10ನೇ ತಾರೀಕು 20206, ಮುಂಜಾನೆ 4.30 ರ ವೇಳೆ, ನಮ್ಮ ಎಮಿರೇಟ್ಸ್ ವಿಮಾನ ಬೆಂಗಳೂರನ್ನು ಬಿಟ್ಟು ದುಬೈ ಕಡೆಗೆ ಹಾರಿತ್ತು. ಇಷ್ಟೊತ್ತಿಗಾಗಲೇ ಅಮೇರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧ ಶುರುವಾಗಿತ್ತು. ಹಿಂದಿನ ದಿನವೇ ಅಮೇರಿಕ ಟೆಹ್ರಾನ್ ನಗರದಲ್ಲಿನ ಕೆಲವು ತೈಲ ಸಂಗ್ರಹ ಘಟಕಗಳ ಮೇಲೆ ಬಾಂಬ್ ಸುರಿದು ಅದು ಹತ್ತಿಕೊಂಡು ಉರಿಯುತ್ತಿತ್ತು. ಇದರಿಂದ ಕುಪಿತಗೊಂಡ ಇರಾನ್ ಪಕ್ಕದ ಅರಬ್ ಸಂಯುಕ್ತ ರಾಷ್ಟ್ರಗಳ ಮೇಲೆ ಪ್ರತಿಯಾಗಿ ಇನ್ನೂ ಹೆಚ್ಚು ಡ್ರೋನ್ ಆಕ್ರಮಣ ಮಾಡುವ ನಿರೀಕ್ಷೆ ಇತ್ತು. ಇಂತಹ ಬಿಕ್ಕಟಿನ ಸಮಯದಲ್ಲಿ ನಾವು ದುಬೈ ಮೂಲಕ ಹಾದು ಬರುವ ನಿರ್ಧಾರ ನನ್ನ ಕುಟುಂಬದವರನ್ನು ಚಕಿತಗೊಳಿಸಿತ್ತು. ನಾನು ಮತ್ತು ನನ್ನ ಶ್ರೀಮತಿ ಪೂರ್ಣಿಮಾ ಬೆಂಗಳೂರಿನಲ್ಲಿ ಎರಡು ತಿಂಗಳು ಕಳೆದು ನಮ್ಮ ನೆಚ್ಚಿನ ಶೆಫೀಲ್ಡ್ ನೆಲೆಗೆ ಮರಳುವುದಕ್ಕೆ ಕಾತರರಾಗಿದ್ದೆವು. ನಾವು ನಮ್ಮ ಎಮಿರೇಟ್ಸ್ ಟಿಕೇಟನ್ನು ರದ್ದು ಮಾಡಿದ್ದಲ್ಲಿ ಇನ್ನೂ ಎರಡು ವಾರ ಹೆಚ್ಚಿಗೆ ತಡವಾಗುತ್ತಿತ್ತು. ಬೆಂಗಳೂರಿನ ಎಮಿರೇಟ್ಸ್ ಕಚೇರಿಗೆ ತೆರಳಿ ಅಲ್ಲಿ ವಿಚಾರಿಸಿದಾಗ ದುಬೈ ವಿಮಾನ ನಿಲ್ದಾಣ ಕಾರ್ಯಾಚರಣೆಯನ್ನು ಮುಂದುವರಿಸಿದೆ, ನೀವು ಪ್ರಯಾಣ ಮಾಡಬಹುದು ಎಂಬ ಸಲಹೆ ದೊರಕಿತು. ನಮ್ಮ ಇನ್ನೊಬ್ಬ ಗೆಳೆಯರು ನಮಗಿಂತ ಎರಡುದಿನ ಮುಂಚಿತವಾಗಿ ದುಬೈ ಮೂಲಕ ಪ್ರಯಾಣ ಮಾಡಿ ಅವರು ಸುರಕ್ಷಿತವಾಗಿ ಇಂಗ್ಲೆಂಡ್ ತಲುಪಿದ್ದರು ಎನ್ನುವ ವಿಚಾರ ನಮಗೆ ಸಮಾಧಾನಕರವಾಗಿತ್ತು.
ನಮ್ಮ ವಿಮಾನ ಬೆಳಗ್ಗೆ 7.30ಕ್ಕೆ ದುಬೈನಲ್ಲಿ ಇಳಿಯಿತು. ಪ್ರಪಂಚದಲ್ಲಿ ಅತ್ಯಂತ ಬ್ಯುಸಿ ಏರ್ಪೋರ್ಟ್ ಎಂದು ಪರಿಗಣಿಸಲಾಗಿರುವ ನಿಲ್ದಾಣದಲ್ಲಿ ಕಾರ್ಯಾಚರಣೆ ಕಡಿಮೆಯಾಗಿತ್ತು. ಒಂದು ರೀತಿ ಪ್ರಶಾಂತತೆ ಇತ್ತು. ಹಲವಾರು ಉಪಹಾರ ಗೃಹಗಳಲ್ಲಿ ಜನ ಕಾಫಿ ಹೀರುತ್ತಿದ್ದರು, ಡ್ಯೂಟಿ ಫ್ರೀ ಅಂಗಡಿಗಳಲ್ಲಿ ಜನ ಎಂದಿನಂತೆ ಕೊಳ್ಳುವುದರಲ್ಲಿ ಮಗ್ನರಾಗಿದ್ದರು. ನಮ್ಮ ಮ್ಯಾಂಚೆಸ್ಟರ್ ವಿಮಾನ ಹತ್ತುವುದಕ್ಕೆ 5 ಗಂಟೆಗಳ ಬಿಡುವಿತ್ತು. ನಿದ್ರೆಯ ಕೊರತೆಯಿಂದ ಅರೆಬರೆ ಪ್ರಜ್ಞೆಯಲ್ಲಿದ್ದ ನಾವು ನಿಧಾನಕ್ಕೆ ಏರ್ಪೋರ್ಟ್ ಒಳಗಡೆ ಇರುವ ಮರ್ಹಬ ಲೋಂಜಿನಲ್ಲಿ ಉಪಹಾರ ಮಾಡಲು ಕುಳಿತೆವು. ಜನಸಂದಣಿ ಹೆಚ್ಚಿರುವ ಲೋಂಜಿನ ಒಳಭಾಗದಲ್ಲಿ ನಮ್ಮೊಡನೆ ಕೆಲವು ಬ್ರಿಟಿಷ್ ಸಹಯಾತ್ರಿಗಳು ಉಪಹಾರ ಸೇವಿಸುತ್ತಿದ್ದರು. ಇದ್ದಕಿದ್ದಂತೆ ಏರ್ಪೋರ್ಟಿನಲ್ಲಿ ಒಂದು ಎಚ್ಚರಿಕೆಯ ಕರೆಗಂಟೆ ಕೇಳಿಬಂತು. ನಮ್ಮ ನಮ್ಮ ಮೊಬೈಲಿನಲ್ಲಿ ಅಲ್ಲಿಯ ಸರ್ಕಾರದ ಇಂಗ್ಲಿಷ್ ಮತ್ತು ಅರೇಬಿಕ್ ಭಾಷೆಯ ಮೆಸೇಜ್ ಮೂಡಿಬಂತು. ನಾವು ಕೂಡಲೇ ಕಟ್ಟಡವನ್ನು ತೆರವು ಮಾಡಬೇಕೆಂದು, ದೊಡ್ಡ ಸೈಜಿನ ಗಾಜಿನ ಪ್ಯಾನಲ್ಗಳಿಂದ ದೂರವಿರಬೇಕೆಂಬ ಸೂಚನೆ ನೀಡಲಾಯಿತು. ದುಬೈ ಏರ್ಪೋರ್ಟ್ ಒಂದು ಗಾಜಿನ ಮನೆಯಂತೆ ರೂಪಿಸಲಾಗಿದ್ದು ನಮ್ಮ ತಲೆಯ ಮೇಲೆ ಎಲ್ಲಿ ನೋಡಿದರು ಥಳ ಥಳಿಸುವ ಗಾಜು! ನಮ್ಮ ಎದುರಿಗೆ ಕುಳಿತ ಒಬ್ಬ ಯುವತಿ ಮತ್ತು ಅವಳ ಬಾಯ್ ಫ್ರೆಂಡ್ ತಾವು ಕಳೆದ ಹಲವಾರು ವರ್ಷಗಳಿಂದ ದುಬೈನಲ್ಲಿ ನೆಲೆಸಿದ್ದು, ಈ ಯುದ್ಧ ಶುರುವಾದ ಮೇಲೆ ಕಾಲಕಾಲಕ್ಕೆ ಈ ಮೆಸೇಜ್ ಮೂಡುತ್ತಿದ್ದು ಇಲ್ಲಿಯವರೆಗೆ ಏನು ಅನಾಹುತ ಆಗಿಲ್ಲವೆಂದು ನಮಗೆ ಆಶ್ವಾಸನೆ ನೀಡಿದರು. ಸರಿ ಅವರ ಮಾತು ಕಟ್ಟಿಕೊಂಡು ನಾನು ಪೂರ್ಣಿಮಾ ಅಲ್ಲೇ ಕುಳಿತು ಉಪಹಾರವನ್ನು ಮುಂದುವರಿಸಿದೆವು. ಈ ಯುವತಿಗೆ ಈ ಸರ್ಕಾರದ ಸೂಚನೆಗಳು “ತೋಳ ಬಂತು ತೋಳ” ಕಥೆಯ ಅನುಭವವಾಗಿರಬಹುದು. ಕೆಲವೇ ನಿಮಿಷದಲ್ಲಿ ಮರ್ಹಬ ಲೋಂಜಿನ ಮ್ಯಾನೇಜರ್ ಮತ್ತು ಅವನ ಸಹಾಯಕ ಸಿಬ್ಬಂದಿಗಳು ಬಂದು ತುರ್ತಾಗಿ ಕಟ್ಟಡವನ್ನು ತೆರವು ಮಾಡಬೇಕೆಂದು ಗಡುಸಾಗಿ ನಿರ್ದೇಶನ ನೀಡಿದರು. ಎಲ್ಲರ ಮುಖದಲ್ಲಿ ಆತಂಕ ಕಂಡುಬಂದಿತ್ತು. ನಮ್ಮ ಬ್ಯಾಗ್ ಇತ್ಯಾದಿಗಳನ್ನು ಎತ್ತಿಕೊಂಡು ಕೆಳ ಹಂತವನ್ನು ತಲುಪಿದೆವು. ಅಲ್ಲಿ ಎಮಿರೇಟ್ಸ್ ಸಿಬ್ಬಂದಿಗಳು ನಮ್ಮಂಥ ನೂರಾರು ಪ್ರಯಾಣಿಕರನ್ನು ಏರ್ಪೋರ್ಟಿನ ಕೆಳಭಾಗವಾದ ಅರೈವಲ್ ಹಾಲ್ ಕಡೆಗೆ ಹೋಗುವಂತೆ ನಿರ್ದೇಶಿಸಿದರು. ಅರೈವಲ್ ಹಾಲ್ ಕಟ್ಟಡದ ತಳಮನೆಯಾಗಿದ್ದು ಹೆಚ್ಚು ಗಾಜಿನ ಕಿಟಕಿಗಳು ಅಲ್ಲಿ ಇರಲಿಲ್ಲ. ಅಲ್ಲಿ ಸುರಕ್ಷಿತವಾಗಿ ಸುಮಾರು ಇಪ್ಪತ್ತು ನಿಮಿಷಗಳನ್ನು ಕಳೆದವು. ಜನ ಸಂದಣಿ ಹೆಚ್ಚಾಗಿ ಕಿಕ್ಕಿರಿದ ಆ ಜಾಗದಲ್ಲಿ ನಾನು ಪೂರ್ಣಿಮಾ ಆದಷ್ಟು ಒಟ್ಟಿಗೆ ಇರಲು ಪ್ರಯತ್ನಿಸುತ್ತಿದ್ದೆವು. ಇಂತಹ ಆತಂಕದ ಘಳಿಗೆಯಲ್ಲಿ ಒಟ್ಟಿಗೆ ಇರುವುದು ಕ್ಷೇಮವೆಂದು ನಾವು ಭಾವಿಸಿದ್ದೆವು. ಒಂದು ವೇಳೆ ಬಾಂಬ್ ಸಿಡಿದರೆ ಬೋರಲಾಗಿ ಮಲಗಬೇಕೆಂದು ಪೂರ್ಣಿಮಾ ನನಗೆ ಆದೇಶ ನೀಡಿದ್ದು ನನಗೆ ಸ್ವಲ್ಪ ಹಾಸ್ಯಾಸ್ಪದವಾಗಿ ಕಂಡರೂ ಸರಿ ಎನಿಸಿತು. ಈ ಮಧ್ಯದಲ್ಲಿ ಮಗಳು ಅನನ್ಯಾಳಿಗೆ ಮೆಸೇಜ್ ಮಾಡುವ ಅವಳ ತವಕ ನನಗೆ ಸಹಜವೆನಿಸಿತು. ಪೂರ್ಣಿಮಾಳ ಈ ರೀತಿಯ ಆತಂಕ ಒಂದು ಕಡೆಯಾದರೆ ನಮ್ಮೊಡನಿದ್ದ ಒಬ್ಬ ಬ್ರಿಟಿಷ್ ಮಹಿಳೆ ಸರ್ಕಾರೀ ಸಂದೇಶವನ್ನು ಉಲ್ಲಂಘಿಸಿ ತಾನು ತನ್ನ ಕಿಂಡಲ್ ಪುಸ್ತಕವನ್ನು ಮರ್ಹಬ ಲೋಂಜಿನಲ್ಲಿ ಮರೆತು ಹಿಂದಕ್ಕೆ ಬಿಟ್ಟು ಬಂದಿರುವಳೆಂದು ಅದನ್ನು ಪಡೆಯಲು ಪುನಃ ವಾಪಸ್ಸು ಹೋಗುವೆನೆಂದು ಹಠ ಹಿಡಿದಿದ್ದಳು! ಅಬ್ಬಾ ಇವಳಿಗೆ ಎಂತಹ ಧೈರ್ಯ ಮತ್ತು ಭಂಡತನ ಎಂದುಕೊಂಡೆ. ಒಂದು ಆತಂಕದ ಘಳಿಗೆಯಲ್ಲಿ ಹೇಗೆ ಜನ ಪ್ರತಿಕ್ರಿಯಿಸುತ್ತಾರೆ ಮತ್ತು ಬದುಕಿನಲ್ಲಿ ಯಾರಿಗೆ ಯಾವುದು ಆದ್ಯತೆಯಾಗಿರುತ್ತದೆ ಎನ್ನುವುದು ಸೋಜಿಗದ ವಿಚಾರ.ಸುಮಾರು 20 ನಿಮಿಷಗಳ ನಂತರ ಸನ್ನಿವೇಶ ಹತೋಟಿಗೆಬಂತು, ಯಾವ ಬಾಂಬ್ ಸಿಡಿಯಲಿಲ್ಲ. ನಾವು ಅರಿತಂತೆ ಏರ್ ಡಿಫೆನ್ಸ್ ಉಪಕರಣಗಳು ಡ್ರೋನ್ ಗಳನ್ನು ನಿಷ್ಫಲಗೊಳಿಸಿತ್ತು. ಇದು ಒಂದು ರೀತಿ ಆಕಾಶದಲ್ಲೇ ನಡೆಯುತ್ತಿದ್ದ ಯುದ್ಧ. ಡಿಪಾರ್ಚರ್ ಲೋಂಜಿನ ಹೊರಗೆ ಅಟ್ಟಿದ್ದ ನಾವು ಮತ್ತೆ ಸೆಕ್ಯೂರಿಟಿ ಚೆಕ್ ಮಾಡಿಕೊಂಡು ಧನ್ಯತೆಯ ಭಾವದಲ್ಲಿ ಮತ್ತೆ ಮರ್ಹಬ ಲೋಂಜಿಗೆ ಬಂದು ಉಪಹಾರ ಮುಂದುವರಿಸಿದೆವು. ಅಲ್ಲಿಂದ ಕೆಲವು ಗಂಟೆಗಳ ನಂತರ ನಮ್ಮ ಮ್ಯಾಂಚೆಸ್ಟರ್ ವಿಮಾನ ರೆಡಿಯಾಗಿತ್ತು. ನೆಲದ ಮೇಲೆ ಯಾವ ಅಹಿತಕರ ಘಟನೆ ನಡೆಯಲಿಲ್ಲ. ನಾವು ಸಮಯಕ್ಕೆ ಸರಿಯಾಗಿ ಮ್ಯಾಂಚೆಸ್ಟರ್ ತಲುಪಿದೆವು. ನಮ್ಮ ವಿಮಾನ ನೆಲ ಮುಟ್ಟಿದಾಗ ಎಲ್ಲ ಪ್ರಯಾಣಿಕರು ಚಪ್ಪಾಳೆ ತಟ್ಟಿದರು. ರಣರಂಗದಿಂದ ಸುರಕ್ಷಿತವಾಗಿ ಹೊರಬಂದುದಕ್ಕೆ ಪ್ರಶಂಸೆ ಇರಬಹುದು.
ಎಮಿರೇಟ್ಸ್ ಸಿಬ್ಬಂದಿಗಳು ಬಹಳ ಜವಾಬ್ದಾರಿಯಿಂದ ಕಾರ್ಯವನ್ನು ನಿರ್ವಹಿಸಿದ್ದರು. ನಾವು ಮ್ಯಾಂಚೆಸ್ಟರ್ ತಲುಪಿದ ಮರುದಿನವೇ ಇನ್ನಷ್ಟು ಡ್ರೋನ್ ಗಳ ಸುರಿಮಳೆಯಾಗಿ ದುಬೈ ಏರ್ಪೋರ್ಟಿನ ಆವರಣದಲ್ಲಿರುವ ಒಂದು ಕಟ್ಟಡಕ್ಕೆ ಹಾನಿಯಾಗಿ ಬೆಂಕಿ ಹತ್ತಿಕೊಂಡು ಉರಿಯಿತು. ಈ ಸನ್ನಿವೇಶದಿಂದ ನಾನು ಇರಾನ್ ಯುದ್ಧದ ಬಿಕ್ಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡು ಸ್ವಲ್ಪ ಮಟ್ಟಿಗೆ ಅದರ ಪರಿಣಾಮವನ್ನು ಎದುರಿಸುವ ಅನುಭವ ನನಗೆ ಒದಗಿಬಂತು. ಹಿಂದೆ ಬಾಲಕನಾಗಿದ್ದಾಗ 60ರ ದಶಕದಲ್ಲಿ ಇಂಡೋ ಚೈನಾ ಯುದ್ಧ ನಡೆಯುತ್ತಿರುವಾಗ ಬೆಂಗಳೂರಿನಲ್ಲಿ ರಾತ್ರಿ ಬ್ಲಾಕ್ ಔಟ್ ನಡೆಯುತ್ತಿದ್ದು ಅದು ನನಗೆ ಮಬ್ಬಾಗಿ ನೆನಪಿದೆ. ಯುದ್ಧದ ನಡುವೆ ಸಿಕ್ಕಿಕೊಂಡದ್ದು ಭಯಾನಕವಲ್ಲದಿದ್ದರೂ ಈ ಘಟನೆ ಒಂದು ಅಪೂರ್ವ ಅನುಭವವಾಗಿ ನನ್ನ ನೆನಪಿನಲ್ಲಿ ಉಳಿಯುವಂತಹುದು. ಹಾಗೆಯೇ ಈ ಘಟನೆ ಯುದ್ಧದ ಮಧ್ಯೆ ಬದುಕುತ್ತಿರುವ ಪ್ಯಾಲೆಸ್ಟೀನ್, ಇರಾನ್, ಇಸ್ರೇಲ್, ಯೂಕ್ರೈನ್ ಜನಗಳ ಬಗ್ಗೆ ಚಿಂತಿಸುವಂತೆ ಮಾಡಿತು ಮತ್ತು ಅವರ ಬಗ್ಗೆ ಸಹಾನುಭೂತಿ ಕನಿಕರಗಳು ಮೂಡಿಬಂತು.
ಪೌರಾಣಿಕ ಕಥೆಗಳನ್ನು ಮತ್ತು ಚರಿತ್ರೆಯನ್ನು ಓದಿಕೊಂಡು ಬೆಳದ ನಮಗೆ ಹಿಂದೆ ಯುದ್ಧ ಎಂದಾಕ್ಷಣ ನೆಲೆದ ಮೇಲೆ ನಡೆಯುವ ಕತ್ತಿ, ಈಟಿ, ಗುರಾಣಿ, ಬಿಲ್ಲು, ಬಾಣ ಇವುಗಳು ನೆನಪಿಗೆ ಬರುತ್ತದೆ. ಕಾಲಕ್ರಮೇಣ ಮೆಷೀನ್ ಗನ್ನುಗಳು, ವಿಧ್ವಂಸಕ ಟ್ಯಾಂಕ್ ಗಳು ಹುಟ್ಟಿಕೊಂಡವು. ಮುಂದಕ್ಕೆ ವಾಯು, ಜಲ ಪ್ರದೇಶದಲ್ಲೂ ಯುದ್ಧ ನೆಲೆಗೊಂಡು ಅನೇಕ ಹೊಸ ಹೊಸ ವಿಧಾನಗಳು, ತಂತ್ರಜ್ಞಾನಗಳು ಹುಟ್ಟಿಕೊಂಡವು. ಮನುಷ್ಯ ಮನುಷ್ಯನನ್ನು ದ್ವೇಷಿಸಲು, ಮುಯ್ಯಿ ತೀರಿಸಿಕೊಳ್ಳಲು ಎಷ್ಟೆಲ್ಲಾ ಹಣ ಹೂಡಿಕೆ, ಸಂಶೋಧನೆ, ತಂತ್ರಜ್ಞಾನ, ಹೊಸ ಹೊಸ ಅಸ್ತ್ರಗಳು! ಪ್ರೀತಿಯಿಂದ, ವಿಶ್ವಾಸದಿಂದ ಸಂವಾದದೊಂದಿಗೆ ವಿವಾದಗಳನ್ನು ಬಗೆಹರಿಸಲು ಹಣ ಮತ್ತು ರಕ್ತ ಹರಿಯಬೇಕಿಲ್ಲ.
ಈಗಿನ ಕಾಲದಲ್ಲಿ ಯುದ್ಧಗಳು ಆಕಾಶದಲ್ಲಿ ಸಂಭವಿಸಿ ಅಲ್ಲಿ ಡ್ರೋನ್ ಬಳಕೆ ಸಾಮಾನ್ಯವಾಗಿದೆ. ದೂರದಲ್ಲಿ ಇರುವ ಅಮೇರಿಕ ಸ್ಯಾಟಲೈಟ್ ತಂತ್ರಜ್ಞವನ್ನು ಬಳಸಿ ನಿಖರವಾಗಿ ಆಕಾಶಮಾರ್ಗದಿಂದ ಇರಾನ್ ಜನ ನಾಯಕನನ್ನು ಹತ್ಯೆಗೊಳಿಸಲು ಸಾಧ್ಯವಾಗಿದೆ. ಯುದ್ಧ ಆಕಾಶದಲ್ಲಿ ನಡೆಯುತ್ತಿರುವಾಗ ಕೆಳಗೆ ಜನ ತಮ್ಮ ಪಾಡಿಗೆ ತಾವು ತಮ್ಮ ದಿನಚರಿಯಲ್ಲಿ ನಿರತರಾಗಿರುವಂತೆ ತೋರುತ್ತದೆ. ಆಗೊಮ್ಮೆ ಈಗೊಮ್ಮೆ ಈ ಡ್ರೋನ್ಗಳು ನೆಲಕ್ಕೆ ತಾಕಿ ಸಾವು ನೋವು ಉಂಟಾಗುತ್ತಿದೆ. ಕೆಲವು ನೆಲೆಗಳಲ್ಲಿ ಯುದ್ಧ ಇನ್ನು ಉಗ್ರ ಸ್ವರೂಪವನ್ನು ತಳೆದು ಅನಿಶ್ಚಿತ ಬಾಂಬುಗಳ ಸುರಿಮಳೆಯೂ ನಡೆಯುತ್ತಿದೆ. ಯುದ್ಧದಲ್ಲಿ ಆದಷ್ಟೂ ಸಾರ್ವಜನಿಕ ಪ್ರದೇಶಗಳನ್ನು ಹೊರತುಪಡಿಸಿ ಮಿಲಿಟರಿ ಘಟಕಗಳನ್ನು ಗುರಿಯಾಗಿಸಿ ಯುದ್ಧ ನಡೆಯುತ್ತಿದೆ. ಆದರೂ ಕೆಲವೊಮ್ಮೆ ಈ ಒಂದು ನಿಯಮವನ್ನು ಉಲ್ಲಂಘಿಸಿ ಶಾಲೆಯ ಮೇಲೆ, ಆಸ್ಪತ್ರೆಗಳ ಮೇಲೆ ಜನ ವಾಸಿಸುವ ಬಹು ಅಂತಸ್ತಿನ ಕಟ್ಟಡಗಳ ಮೇಲೆ ಅಸ್ತ್ರಗಳನ್ನು ಉಪಯೋಗಿಸಲಾಗುತ್ತಿದೆ. ಕೆಲವೊಮ್ಮೆ ಲೆಕ್ಕಚಾರ ತಪ್ಪಿ ನಿರುದಿಶ್ಯವಾಗಿ ಈ ತಾಣಗಳು ಆಘಾತಕ್ಕೆ ಒಳಗಾಗುತ್ತವೆ. ಆಕಾಶದಲ್ಲಿ ಯುದ್ಧವನ್ನು ಹೂಡಿ ಒಂದು ಹಂತವನ್ನು ತಲುಪಿದಾಗ ನೆಲದ ಮೇಲೆ ಯುದ್ಧ ಶುರುಮಾಡುವುದು ಮತ್ತೊಂದು ಯುದ್ಧ ತಂತ್ರ. ಇದನ್ನು ಅಮೇರಿಕ ಸೈನ್ಯ ಚೆನ್ನಾಗಿ ಬಳಸಿಕೊಳ್ಳುತ್ತಿದೆ. ಇದನ್ನೇ “ಬೂಟ್ಸ್ ಆನ್ ದಿ ಗ್ರೌಂಡ್” ಎನ್ನುವ ಹೆಸರಿನಲ್ಲಿ ಕಾರ್ಯಾಚರಣೆ ಮಾಡಲಾಗುತ್ತಿದೆ. ನೆಲದ ಮೇಲೆ ನಡೆಯುವ ಈ ಕದನಗಳಲ್ಲಿ ಹೆಚ್ಚು ಸಾವು, ನೋವು ನಷ್ಟಗಳು ಸಂಭವಿಸುತ್ತದೆ.
ಯುದ್ಧಗಳು ಶುರುವಾಗುವುದಕ್ಕೆ ಕಾರಣಗಳೇನು ಎಂಬ ಪ್ರಶ್ನೆಗೆ ಈ ಕಾಲದ ಜನಸಾಮಾನ್ಯರಿಗೆ ಸ್ಪಷ್ಟವಾದ ಉತ್ತರ ಸಿಗಲಾರದು. ಪ್ರಪಂಚದ ರಾಜಕೀಯ ಸ್ವರೂಪ ಸಂಕೀರ್ಣವಾಗಿದೆ, ವರ್ಷ ವರ್ಷ ಬದಲಾಗುತ್ತಿದೆ. ಒಂದು ಕಡೆ ಬಲವಾಗುತ್ತಿರುವ ರಾಷ್ಟ್ರಗಳು ಅಥವಾ ಒಕ್ಕೊಟವು ಇದಕ್ಕೆ ಕಾರಣವಾಗಬಹುದು. ಐತಿಹಾಸಿಕವಾಗಿ ಧರ್ಮ, ಸಂಸ್ಕೃತಿ, ಅನಿಲ ತೈಲ ಸಂಪನ್ಮೂಲಗಳು, ವಿದೇಶಾಂಗ ನೀತಿಗಳು, ಹಿಂದೆ ಸಂಭವಿಸಿದ ಶೀತ ಸಮರ, ಸರ್ವಾಧಿಕಾರ, ವಾಣಿಜ್ಯ ಕ್ಷೇತ್ರದಲ್ಲಿ ಬಲಿಷ್ಠಗೊಳ್ಳುವ ಉದ್ದೇಶ, ದೇಶ ಹಿತ ಅದರ ನೆಪದಲ್ಲಿ ಸ್ವಾರ್ಥ, ತಮ್ಮ ಗಡಿಯ ವಿಸ್ತರಣೆ, ಇತ್ತೀಚಿನ ದಿನಗಳಲ್ಲಿ ಭಯೋತ್ಪಾದನೆ, ಕೊಲೆ,ಹಿಂಸೆ ಇವು ಯುದ್ಧಕ್ಕೆ ಪ್ರೇರಕವಾಗಿದೆ. ಹಿಂದೆ ಯುದ್ಧಗಳನ್ನು ತಡೆ ಹಿಡಿಯಲು, ನಿವಾರಿಸಲು ಸ್ಥಾಪಿತಗೊಂಡ ವಿಶ್ವ ಸಂಸ್ಥೆಗಳು, ಅಂತರಾಷ್ಟ್ರೀಯ ಕಾನೂನು ಸಂಸ್ಥೆಗಳು ಈಗ ಬಲಹೀನಗೊಂಡಿವೆ. ಇದೆಲ್ಲರ ಹಿಂದೆ ನೈತಿಕ ಹೊಣೆಗಾರಿಕೆ, ಪರಸ್ಪರ ವಿಶ್ವಾಸ, ನಂಬಿಕೆ, ಸಹಿಷ್ಣುತೆ ಎಂಬ ಮಾನವೀಯ ಮೌಲ್ಯಗಳು ಕಾಣೆಯಾಗಿವೇ. “ಅಮೇರಿಕ ಫಸ್ಟ್, ಮೇಕ್ ಅಮೇರಿಕ ಗ್ರೇಟ್ ಎಗೈನ್” ಎಂದು ಘೋಷಣೆ ಮಾಡುವುದರ ಹಿಂದಿನ ಸ್ವಾರ್ಥವನ್ನು ಗಮನಿಸಬಹುದು. ಮಧ್ಯಪೂರ್ವ ರಾಷ್ಟ್ರಗಳಲ್ಲಿ ಧರ್ಮಾಂದತೆ ಹೆಚ್ಚಾಗಿ ಅಲ್ಲಿ ಧಾರ್ಮಿಕ ಸಂಘಟನೆಗಳು ಆಯಾ ದೇಶಗಳನ್ನು ಗುತ್ತಿಗೆ ಹಿಡಿದುಕೊಂಡು ಅಲ್ಲಿಯ ಪ್ರಜೆಗಳಿಗೆ ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಕನಸಾಗಿಯೇ ಉಳಿದಿದೆ. ಈ ದೇಶಗಳಲ್ಲಿ ಮಾನವೀಯ ಹಕ್ಕುಗಳನ್ನು ಕಸಿದುಕೊಳ್ಳಲಾಗಿದ್ದು ಅಮೇರಿಕ ಈ ದೇಶಗಳನ್ನು ಖಂಡಿಸಿ ಅಲ್ಲಿಯ ಧಾರ್ಮಿಕ ಆಡಳಿತವನ್ನು, ಸರ್ವಾಧಿಕಾರವನ್ನು ಉರುಳಿಸಿ (Regimen change) ತನ್ನ ಪ್ರಜಾಪ್ರಭುತ್ವ ಮಾದರಿಯನ್ನು ರಫ್ತು ಮಾಡಲು ಹವಣಿಸುತ್ತಿದೆ. ಪ್ರಪಂಚದ ಇನ್ನು ಕೆಲವು ಕಡೆ ಜನಾಂಗೀಯ ಶುದ್ಧಿ (Ethnic Cleansing) ನೆಪದಲ್ಲಿ ಯುದ್ಧಗಳು ನಡೆಯುತ್ತಿವೆ. ಇಪ್ಪತ್ತೊಂದನೇ ಶತಮಾನದ ಆದಿಯಲ್ಲಿ ಸದಾಂ ಬಳಿ ಮಾರಕ ಅಸ್ತ್ರಗಳು ಇವೆ ಎಂಬ ತಪ್ಪು ಮಾಹಿತಿಯ ಆಧಾರದ ಮೇಲೆ ಅಮೇರಿಕ ಮತ್ತು ಯುಕೆ ಘೋರವಾದ ಯುದ್ಧವನ್ನು ಹೂಡಿದವು. ಅಲ್ಲಿ ಗಮನಾರ್ಹವಾದ ಮಾರಕಾಸ್ತ್ರವು ದೊರೆಯಲಿಲ್ಲ ಎಂಬ ವಿಚಾರ ಮುಂದಕ್ಕೆ ಬಹಿರಂಗವಾಯಿತು. ಈಗ ನಡೆಯುತ್ತಿರುವ ಇಸ್ರೇಲ್ ಅಮೇರಿಕ ಇರಾನ್ ಯುದ್ಧದಲ್ಲಿ ಇರಾನ್ ದೇಶದಲ್ಲಿ ಅಣ್ವಸ್ತ್ರ ತಯಾರಿಸುವ ಸಾಮರ್ಥ್ಯ ಇದೆ, ಧಾರ್ಮಿಕ ಆಡಳಿತ ಅದನ್ನು ಇಸ್ರೇಲ್ ಮತ್ತು ಇತರ ದೇಶಗಳ ಮೇಲೆ ಬಳಸ ಬಹುದು ಎಂಬ ಊಹೆಯ ಮೇಲೆ ಈ ಯುದ್ಧವನ್ನು ಹೂಡಲಾಗಿದೆ. ಹೀಗೆ ಊಹೆಯ ಆಧಾರದ ಮೇಲೆ ಯುದ್ಧ ಹೂಡುವುದು ಎಷ್ಟು ಸಮಂಜಸ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಇಸ್ರೇಲ್ ಮತ್ತು ಅಮೇರಿಕ ಗೂಢಚಾರ ಸಂಸ್ಥೆಗಳು ಸಂಗ್ರಹಿಸಿರುವ ಮಾಹಿತಿಗಳು ಸರಿಯೇ ತಪ್ಪೇ ಎಂಬ ಪ್ರಶ್ನೆಗೆ ಉತ್ತರ ಸಿಗುವುದು ಕಷ್ಟ. ಇದರ ಮಧ್ಯೆ ಮಾಧ್ಯಮಗಳು ಏನು ಬಿತ್ತರಿಸುತ್ತವೆಯೋ ಅದನ್ನು ನಾವು ನಂಬ ಬೇಕು. ಈ ಮಾಧ್ಯಮಗಳಿಗೆ ಎಷ್ಟರ ಮಟ್ಟಿಗೆ ಸ್ವಾಯತ್ತತೆ ಇದೆ ಎನ್ನುವುದು ಇನ್ನೊಂದು ವಿಚಾರ.
ಮಧ್ಯಪೂರ್ವ ದೇಶಗಳ ನಡುವೆ ಬದುಕುತ್ತಿರುವ ಇಸ್ರೇಲ್ ದೇಶವು ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಿದೆ. ಆ ದೇಶವನ್ನು ಗುರುತಿಸಲು ಇರಾನ್ ನಿರಾಕರಿಸಿದ್ದಲ್ಲದೆ ಕಾಲ ಕಾಲಕ್ಕೆ ಅಸ್ತ್ರಗಳನ್ನು ಉಪಯೋಗಿಸಿ ಅಲ್ಲಿಯ ಪ್ರಜೆಗಳಿಗೆ ತಲ್ಲಣವನ್ನು ನೀಡಿದೆ. ಪ್ಯಾಲೆಸ್ಟೀನ್ ದೇಶದ ಹಮಾಸ್ ಎಂಬ ಹೋರಾಟಗಾರರು ಇಸ್ರೇಲ್ ಮೇಲೆ ನಿರಂತರವಾಗಿ ಅಸ್ತ್ರಗಳನ್ನು ಎಸೆಯುತ್ತಿದ್ದಾರೆ. ಇಲ್ಲಿ ಯಾರು ಸರಿ ಯಾರು ತಪ್ಪು ಎಂಬುದನ್ನು ವಿಶ್ಲೇಷಿಸಲು ಸಾಧ್ಯವಾಗದಷ್ಟು ಇಲ್ಲಿಯ ಚರಿತ್ರೆ, ನೆಲೆಯ ಸ್ವಾಧೀನ, ಮತೀಯ ದ್ವೇಷ ಬೆಸೆದುಕೊಂಡು ಗೋಜಲಾಗಿದೆ. ತನ್ನ ಉಳಿವಿಗಾಗಿ ಇಸ್ರೇಲ್ ಅಮೇರಿಕ ರಾಷ್ಟ್ರವನ್ನು ಅವಲಂಬಿಸಿದೆ. ಹೀಗಾಗಿ ಇಸ್ರೇಲ್ ಮತ್ತು ಇರಾನಿನ ನಡುವೆ, ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ನಡುವೆ ಉಂಟಾಗಿರುವ ಈ ಹಗೆತನ ಕೊನೆಯಿಲ್ಲದ ಸಂಘರ್ಷಣೆಗೆ ಕಾರಣವಾಗಿದೆ. ರಷ್ಯಾ ಯೂಕ್ರೈನಿನ ಮೇಲೆ ಹೂಡಿರುವ ಯುದ್ಧಕೆ ಯೂಕ್ರೈನ್ ನ್ಯಾಟೋ ಸೇರಿಕೊಳ್ಳುವ ಉದ್ದೇಶವನ್ನು ವ್ಯಕ್ತಪಡಿಸಿದ್ದು ಮತ್ತು ರಷ್ಯಾದ ಸರಹದ್ದಿನ ವಿಸ್ತರಣೆ ಕಾರಣವಾಗಿದೆ. ಆಗಾಗ್ಗೆ ಭುಗಿಲೇಳುವ ಪಾಕಿಸ್ತಾನ ಭಾರತ ನಡುವಿನ ಯುದ್ಧಕ್ಕೆ ಎರಡು ದೇಶಗಳ ನಡುವಿನ ಚರಿತ್ರೆ, ಧರ್ಮ, ಕಾಶ್ಮಿರಕ್ಕೆ ಸಂಬಂಧಿಸಿದ ವಿವಾದ ಮತ್ತು ಭಯೋತ್ಪಾದನೆ ಎಂಬ ವಿಷಯಗಳು ಕಾರಣವಾಗಿದೆ. ಇಲ್ಲಿಯವರೆಗೆ ನಡೆದ ಬಹುತೇಕ ಯುದ್ಧಗಳನ್ನು ಗಮನಿಸಿದಾಗ ಯುದ್ಧದಲ್ಲಿ ಸೋಲು ಗೆಲುವು ಅಥವಾ ಗಮನಾರ್ಹ ಬದಲಾವಣೆ, ಪರಿಹಾರ ಕಂಡುಬಂದಿಲ್ಲ. ಸೋಲು ಗೆಲುವು ಎಂಬ ಪದಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾಗಿದೆ. ಬದಲಾಗಿ ಯುದ್ಧಗಳ ನಂತರ ಅದರ ಕೆಟ್ಟ ಪರಿಣಾಮಗಳು ಮತ್ತು ಸಮಸ್ಯೆಗಳೇ ಹೆಚ್ಚಾಗಿ ಕಾಣುತ್ತಿವೆ. ಒಂದು ರೀತಿಯಲ್ಲಿ ಯುದ್ಧ ಎಂಬುದು ಎಲ್ಲರಿಗೂ ನಷ್ಟವನ್ನು ತಲುಪಿಸುತ್ತದೆ. ಯುದ್ಧಗಳ ಕಾರಣವನ್ನು ಆಳವಾಗಿ ನೋಡಿದಾಗ ಮನುಷ್ಯರು ಗಡಿ, ರೇಖೆ, ಭಾಷೆ, ಸಂಸ್ಕೃತಿ, ಧರ್ಮ, ವರ್ಣ ಇವುಗಳ ಹಿನ್ನೆಲೆಯಲ್ಲಿ, ತಮ್ಮ ತಮ್ಮ ನಡುವೆ ಪಂಗಡಗಳನ್ನು ಕಟ್ಟಿಕೊಂಡು ಸಂಪನ್ಮೂಲಗಳನ್ನು, ನೆಲೆಗಳನ್ನು ಹಂಚಿಕೊಳ್ಳುವ ವಿಚಾರದಲ್ಲಿ ಒಮ್ಮತವಿಲ್ಲದೆ, ಎರಡು ಪಂಗಡಗಳ ನಡುವೆ ನಂಬಿಕೆ, ವಿಶ್ವಾಸ ಮುರಿದುಬಿದ್ದು ಅನುಮಾನ ದ್ವೇಷಗಳೇ ಹೆಚ್ಚಾಗಿ, ಅಲ್ಲಿ ಸಂವಾದಕ್ಕೆ ಅವಕಾಶವೇ ಇಲ್ಲದಿರುವ ಸನ್ನಿವೇಶದಲ್ಲಿ ಯುದ್ಧಗಳು ಹುಟ್ಟಿಕೊಳ್ಳುತ್ತವೆ. ನಿನ್ನೆಯ ಮಿತ್ರ ಇಂದು ಶತ್ರುವಾಗುತ್ತಾನೆ.
ಅಫ್ಘಾನಿಸ್ಥಾನದಲ್ಲಿ, ಮಧ್ಯಪೂರ್ವದ ಕೆಲವು ರಾಷ್ಟ್ರಗಳಲ್ಲಿ ಪ್ರಜಾ ಪ್ರಭುತ್ವದ ಕೊರತೆ, ಅತಿಯಾದ ಧಾರ್ಮಿಕ ನಂಬಿಕೆ ಮತ್ತು ಬಳಕೆ, ಅನಕ್ಷರತೆ, ಧಾರ್ಮಿಕ ಸರ್ವಾಧಿಕಾರ ಯುದ್ಧಕ್ಕೆ ಕಾರಣವಾಗಿದೆ. ಬಹಳ ಕಾಲದಿಂದ ಧರ್ಮ ಎಂಬುದು ಯುದ್ಧಗಳಿಗೆ ಮತ್ತು ರಕ್ತಪಾತಕ್ಕೆ ಕಾರಣವಾಗಿದೆ. ಧರ್ಮ ಮತ್ತು ರಾಜಕಾರಣ ಎರಡನ್ನು ಬೇರ್ಪಡಿಸದಿದ್ದಲ್ಲಿ ಹೆಚ್ಚು ಹೆಚ್ಚು ರಕ್ತಪಾತವಾಗುವುದು ನಿಶ್ಚಿತ. ಧರ್ಮದ ಅತಿಯಾದ ಬಳಕೆ ಉಂಟಾದಾಗ, ಸಂಪ್ರದಾಯವಾದ ಮೂಲಭೂತವಾದವಾಗಿ (Religious Fundamentalism) ಪರಿವರ್ತನೆಗೊಂಡಾಗ, ಧರ್ಮವೆಂಬುದು ಮನೆ ಮಠಗಳನ್ನು ಬಿಟ್ಟು ಬೀದಿಗಿಳಿದಾಗ, ಸಾರ್ವಜನಿಕ ಸೊತ್ತಾದಾಗ, ಧರ್ಮ ಪ್ರಚೋದನೆಗೆ ಒಳಗಾದಾಗ, ಧರ್ಮಕ್ಕಾಗಿ ಹೊಡಿ ಬಡಿ ಕೊಲ್ಲು ಎಂಬ ಆಲೋಚನೆಗಳು ಹುಟ್ಟಿಕೊಳ್ಳುತ್ತವೆ. ಧರ್ಮ (ಕೆಲವೆಡೆ ರಾಜಕಾರಣ, ಆಡಳಿತಗಳ ಆಶ್ರಯದಲ್ಲಿ) ಅವುಗಳ ಉಪಯೋಗಕ್ಕೆ ಸಮರ್ಥನೆ ನೀಡುತ್ತದೆ. ಚರಿತ್ರೆಯಲ್ಲಿ ಧರ್ಮಕ್ಕಾಗಿ ಹೂಡಿರುವ ಯುದ್ಧಗಳು (ಜಿಹಾದ್, ಕ್ರುಸೇಡ್) ಹಿಂದೆ ನಡೆದಿವೆ. ಸನ್ಮಾರ್ಗವನ್ನು ತೋರಬೇಕಾದ ಧರ್ಮ ಸಮಾಜದ ಅಶಾಂತಿಗೂ ಮತ್ತು ಯುದ್ಧಕ್ಕೂ ಕಾರಣವಾಗಬಹುದು. ಇನ್ನೂ ಆಳವಾಗಿ ನೋಡಿದರೆ ಇಲ್ಲಿ ಧರ್ಮವನ್ನು ನೇರವಾಗಿ ದೂರುವುದಕ್ಕಿಂತ ಅದನ್ನು ದುರುಪಯೋಗ ಪಡಿಸಿಕೊಳ್ಳುವ ಮತ್ತು ಬೇರೊಂದು ರೀತಿಯಲ್ಲಿ ವ್ಯಾಖಾನಿಸುವ ಜನರಿಂದ ಈ ಗೊಂದಲಗಳು ಉಂಟಾಗುತ್ತವೆ ಎಂದು ಭಾವಿಸಬಹುದು. ಪ್ರಪಂಚದ ಹಲವಾರು ದೇಶಗಳಲ್ಲಿ ಸಂಭವಿಸುವ ಆಂತರಿಕ ಯುದ್ಧಗಳ ಹಿಂದೆ ಧರ್ಮದ ದುರುಪಯೋಗ ಕಾರಣವಾಗಿರುತ್ತದೆ.
ಹಿಂದೆ ಯುದ್ಧ ಮಾಡಬೇಕಾಗಿದ್ದಲ್ಲಿ ಎರಡು ಕಡೆ ಸೈನ್ಯಕ್ಕೆ ಕೆಲವು ನಿಯಮಗಳಿತ್ತು. ಅದನ್ನು ಒಪ್ಪಿಕೊಂಡು ನಿಯಮಕ್ಕೆ ಅನುಸಾರವಾಗಿ ಯುದ್ಧ ನಡೆಯುತ್ತಿತ್ತು. ಆದರೆ ಈಗಿನ ಕಾಲದಲ್ಲಿ ಆ ನಿಯಮಾವಳಿಗಳ ಉಲ್ಲಂಘನೆಯಾಗುತ್ತಿದೆ. ಪ್ಯಾಲೆಸ್ಟೀನ್ ದೇಶದ ಹಮಾಸ್ ತಮ್ಮ ಪ್ರಜೆಗಳನ್ನೇ ಒತ್ತೆಯಾಳುಗಳನ್ನಾಗಿಸಿಕೊಂಡು ಯುದ್ಧ ಮಾಡುತ್ತಿದ್ದಾರೆ. ಇರಾನ್ ಯುದ್ಧದಲ್ಲಿ ನೇರವಾಗಿ ಪಾಲ್ಗೊಳ್ಳದ ಇತರ ದೇಶಗಳ ಮೇಲೆ ತಮ್ಮ ಆಕ್ರೋಶವನ್ನು ತೀರಿಸಿಕೊಳ್ಳುತ್ತಿದ್ದಾರೆ. ಇಸ್ರೇಲ್ ದೇಶವು ಪ್ಯಾಲೆಸ್ಟೀನ್ ದೇಶದ ಮೇಲೆ ಅವಶ್ಯಕತೆ ಇರುವುದಕ್ಕಿಂತ ಹೆಚ್ಚಿನ ಬಲಪ್ರಯೋಗ ಮಾಡಿರುವ ಆಪಾದನೆಗೆ ಒಳಗಾಗಿದೆ. ಹಮಾಸ್ ಭಯೋತ್ಪಾದನೆಯನ್ನು ಯುದ್ಧ ತಂತ್ರವಾಗಿ ಬಳಸಿಕೊಂಡಿದ್ದಾರೆ. ಯುದ್ಧ ಎಂಬ ಕಾರ್ಯಾಚರಣೆಗೆ ಲಂಗು ಲಗಾಮುಗಳು ಇಲ್ಲದಂತಾಗಿದೆ.
ಇನ್ನು ಯುದ್ಧಗಳ ಪರಿಣಾಮವನ್ನು ಗಮನಿಸಿದಾಗ ಮೇಲೆ ಪ್ರಸ್ತಾಪಿಸಿರುವಂತೆ ಯುದ್ದದಿಂದ ಎಲ್ಲರಿಗೂ ನಷ್ಟವೇ. ಹಿಂದೆ ಎರಡು ರಾಷ್ಟ್ರಗಳ ನಡುವೆ ಯುದ್ಧವಾಗುತ್ತಿದ್ದರೆ ಅದು ಅವರವರ ನಡುವಿನ ಭಿನ್ನಾಭಿಪ್ರಾಯಗಳಾಗಿದ್ದು ಅದರ ಲಾಭ ನಷ್ಟಗಳು ಆ ರಾಷ್ಟ್ರಗಳ ಹೊಣೆಯಾಗಿತ್ತು. ನೆರೆ ಮತ್ತು ದೂರ ರಾಷ್ಟ್ರಗಳಿಗೆ ಅದರ ತಂಟೆಯೇ ಬೇಡವಾಗಿ ತಟಸ್ಥವಾಗಿರಲು ಸಾಧ್ಯವಾಗಿತ್ತು. ಆದರೆ ಪ್ರಸಕ್ತ ಜಾಗತಿಕ ಮಟ್ಟದ ಬೆಳವಣಿಗೆಯಲ್ಲಿ ವಿಶ್ವವೇ ಒಂದು ಸಣ್ಣ ಕುಟುಂಬವಾಗಿರುವ ಸನ್ನಿವೇಶದಲ್ಲಿ ಯುದ್ಧದ ಪರಿಣಾಮಗಳು ಎಲ್ಲರನ್ನು ತಟ್ಟುತ್ತಿದೆ. ಇದೇ ಅಮೇರಿಕ ಇಸ್ರೇಲ್ ಇರಾನ್ ಯುದ್ಧದ ಉದಾಹರಣೆಯನ್ನೇ ಗಮನಿಸಿದಾಗ ಇಂಗ್ಲೆಂಡಿನಲ್ಲಿ ಕುಳಿತ ನಮಗೆ ಯುದ್ಧದ ಪರಿಣಾಮವಾಗಿ ಇಲ್ಲಿಯ ಪೆಟ್ರೋಲ್ ಬೆಲೆ ಹಠಾತ್ತಾಗಿ ಮೇಲಕ್ಕೇರಿದೆ. ಇರಾನಿನ ಯಾವುದೇ ಡ್ರೋನ್ ಅಥವಾ ಅಸ್ತ್ರಗಳು ನಮ್ಮ ತಲೆ ಮೇಲೆ ಬೀಳುವ ಸಾಧ್ಯತೆ ಕಡಿಮೆಯಾದರೂ ಯುದ್ಧದ ಪರಿಣಾಮಗಳನ್ನು ನಾವು ಎದುರಿಸಬೇಕಾಗುತ್ತಿದೆ. ಇರಾನಿನ ಅನಿಲ ಘಟಕದ ಮೇಲೆ ಬಾಂಬ್ ಬಿದ್ದ ಕಾರಣ ಬೆಂಗಳೂರಿನಲ್ಲಿ (ಭಾರತದಲ್ಲಿ) ಅನಿಲದ ಕೊರತೆಯಿಂದ ಮನೆ ಅಡುಗೆಗೆ ಆಪತ್ತು ಒದಗಿದೆ. ಇರಾನ್ ತನ್ನ ಪಕ್ಕದ ದೇಶಗಳಾದ ಸೌದಿ, ಅರಬ್ ಸಂಯುಕ್ತ ರಾಷ್ಟ್ರ, ಮತ್ತು ಕತಾರ್ ದೇಶಗಳ ತೈಲ ಮತ್ತು ಅನಿಲ ಘಟಕಗಳ ಮೇಲೆ ಅಸ್ತ್ರಗಳನ್ನು ಉಪಯೋಗಿಸಿದ ಕಾರಣ, ಮತ್ತು ಹೊರ್ಮುಜ್ ಜಲ ಪ್ರದೇಶವನ್ನು ನಿಯಂತ್ರಿಸಲು ಶುರುವಾದ ಮೇಲೆ ಇಂಧನವು ಇತರ ದೇಶಗಳನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಇದರ ಪರಿಣಾಮವಾಗಿ ಪೆಟ್ರೋಲ್ ಮತ್ತು ಡೀಸಲ್ ಬೆಲೆ ಏರಿರುವುದಲ್ಲದೆ, ದಿನ ನಿತ್ಯ ಬದುಕೇ ದುಬಾರಿಯಾಗುತ್ತಿದೆ. ಎಮಿರೇಟ್ಸ್ ಮತ್ತು ಇತರ ಮಧ್ಯಪೂರ್ವ ದೇಶಗಳ ವೈಮಾನಿಕ ಸಂಸ್ಥೆಗಳು ತಮ್ಮ ಕಾರ್ಯಾಚರಣೆಯನ್ನು ಸ್ಥಗಿತ ಗೊಳಿಸಿರುವುದರಿಂದ ಅಂತಾರಾಷ್ಟ್ರೀಯ ಪ್ರಯಾಣ ಕಷ್ಟವಾಗಿದೆ. ಅದರ ಫಲವಾಗಿ ಈ ಕಂಪನಿಗಳಿಗೆ ಮಿಲಿಯನ್ ಗಟ್ಟಲೆ ನಷ್ಟವಾಗಿದೆ. ಸುದ್ದಿ ಮಾಧ್ಯಮಗಳ ಪ್ರಕಾರ ಈ ಯುದ್ಧದಿಂದ ಅಮೇರಿಕ ದೇಶವು ದಿನಕ್ಕೆ 2 ಬಿಲಿಯನ್ ಯುಎಸ್ ಡಾಲರ್ ಅಷ್ಟು ಖರ್ಚುಮಾಡುತ್ತಿದೆ.
ಒಂದು ಸಮುದಾಯದ ದೃಷ್ಟಿಯಿಂದ ನೋಡಿದಾಗ ಯುದ್ಧದಿಂದ ಉಂಟಾಗುವ ಪರಿಣಾಮಗಳು ತೀವ್ರವಾದದ್ದು. ಯುದ್ಧದಲ್ಲಿ ಪಾಲ್ಗೊಂಡಿರುವ ಬಲಿಷ್ಠ ರಾಷ್ಟ್ರಕ್ಕಿಂತ ಬಲಹೀನ ರಾಷ್ಟ್ರಕ್ಕೆ ಹೆಚ್ಚಿನ ನಷ್ಟ ತಲಪುತ್ತದೆ. ‘ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ’ ಎನ್ನುವಂತೆ ಬೆವರು ಪರಿಶ್ರಮಗಳನ್ನು ಹೂಡಿ ಕಟ್ಟಿಕೊಂಡ ಅನೇಕ ಔದ್ಯೋಗಿಕ ಸಂಸ್ಥೆಗಳು, ಸಾರ್ವಜನಿಕ ಸಂಸ್ಥೆಗಳು, ಸಾಂಸ್ಕೃತಿಕ ಕುರುಹುಗಳು ಕ್ಷಣಾರ್ಧದಲ್ಲಿ ನೆಲಸಮಗೊಳ್ಳುವುದನ್ನು ನೋಡಿದಾಗ ವ್ಯಥೆಯಾಗುತ್ತದೆ. ಯುದ್ಧ ಒಂದು ಇಡೀ ಜನಾಂಗದ ಸಂಸ್ಕೃತಿಯನ್ನೇ ನಾಶಮಾಡಿಬಿಡಬಹುದು. ಕೆಲವು ಜನಾಂಗಗಳಲ್ಲಿ ಕೀಳರಿಮೆಯನ್ನು ಉಂಟುಮಾಡಬಹುದು, ಅವುಗಳನ್ನು ಒಂಟಿತನದಲ್ಲಿ ನರಳುವಂತೆ ಮಾಡಬಹುದು. ಮಧ್ಯಪೂರ್ವ ದೇಶಗಳಲ್ಲಿ ಆಗಾಗ್ಗೆ ಸಂಭವಿಸಿದ ಯುದ್ಧಗಳ ಪರಿಣಾಮವಾಗಿ ಇಡೀ ಇಸ್ಲಾಂ ಅಸ್ತಿತ್ವಕ್ಕೆ ಕಳಂಕವನ್ನು ಕಟ್ಟಿ ಇಸ್ಲಾಮೊಫೋಬಿಯಾ ಉಂಟಾಗಿರುವುದು ವಾಸ್ತವ ಸತ್ಯ. ಇಸ್ಲಾಂ ಮತ್ತು ಭಯೋತ್ಪಾದನೆ ಇವೆರಡನ್ನು ಒಂದೇ ಅಳತೆಗೋಲಿನಲ್ಲಿ ನೋಡಲಾಗುತ್ತಿದೆ, ಒಂದೇ ನಾಣ್ಯದ ಎರಡು ಮುಖಗಳಂತೆ ಪರಿಗಣಿಸಲಾಗಿದೆ. ಇದು ಅಹಿತಕರವಾದ, ಅಸಮಾಧಾನಕಾರವಾದ ಸಂಗತಿ. ಹಿಂದಿನ ಒಂದು ಯುದ್ಧವನ್ನು “ವಾರ್ ಆನ್ ಟೆರರ್” ಎಂದು ಕೂಡ ಕರೆದಿರುವುದನ್ನು ಗಮನಿಸಬಹುದು. ಇಸ್ರೇಲ್ ಪ್ಯಾಲೆಸ್ಟೀನ್ ದೇಶಗಳ ನಡುವಿನ ಯುದ್ಧ ಮತ್ತು ಚಾರಿತ್ರಿಕವಾಗಿ ಇತರ ಕಾರಣಗಳಿಂದ ಯಹೂದಿಗಳನ್ನು ದ್ವೇಷಿಸುವ (Anti Semitism) ಭಾವನೆಗಳು ಹುಟ್ಟಿಕೊಂಡಿವೆ. ಇವು ಕೆಲವೊಮ್ಮೆ ಕಾರಣ-ಪರಿಣಾಮಗಳ (cause and effect) ಚಕ್ರಗತಿಯಲ್ಲಿ ಸಿಲುಕಿ ಕೊಂಡಂತೆ ತೋರುತ್ತದೆ. ಪ್ರಪಂಚದ ನಾನಾ ಭಾಗಗಳಲ್ಲಿ ಅದರಲ್ಲೂ ಮುಖ್ಯವಾಗಿ ಅಮೇರಿಕ, ಇಂಗ್ಲೆಂಡ್, ಆಸ್ಟ್ರೇಲಿಯ ದೇಶದಲ್ಲಿ ಯಹೂದಿಗಳ ಮೇಲೆ, ಅವರ ಪ್ರಾರ್ಥನಾ ಮಂದಿರಗಳ ಮೇಲೆ ಹಲ್ಲೆ ನಡೆಯುತ್ತಿದೆ. ಇದು ಯುದ್ಧದ ಪರಿಣಾಮವೇ ಹೌದು. ಬಡ ದೇಶಗಳಲ್ಲಿ ಯುದ್ಧದ ಪರಿಣಾಮವಾಗಿ ಉದ್ಯೋಗ, ನಿವಾಸ, ಹಣ ಎಲ್ಲವನ್ನೂ ಕಳೆದುಕೊಂಡ ಜನಸಾಮಾನ್ಯರು ನಿರಾಶ್ರಿತರಾಗಿದ್ದಾರೆ. ನೆಲೆ ಇಲ್ಲದ ಇವರು ತಮ್ಮ ಪ್ರಾಣ ಭಯವನ್ನು ತೊರೆದು ವಲಸೆಗೆ ತೊಡಗಿದ್ದಾರೆ. ಸಾವಿರಾರು ಮೈಲಿ ಪಯಣ ಮಾಡಿ ಅಭಿವೃದ್ಧಿಗೊಂಡ ಪಾಶ್ಚಿಮಾತ್ಯ ರಾಷ್ಟ್ರಗಳ ಬಾಗಿಲು ಬಡಿಯುತ್ತಿದ್ದಾರೆ. ಹೀಗೆ ಸ್ಥಳಾಂತರಗೊಂಡು ಹಿಂಡು, ಹಿಂಡಾಗಿ ಯುರೋಪ್ ಮತ್ತು ಇಂಗ್ಲೆಂಡಿಗೆ ವಲಸೆ ಬರುತ್ತಿರುವ ನಿರಾಶ್ರಿತರು ಇಂಗ್ಲೆಂಡ್, ಫ್ರಾನ್ಸ್ ಮುಂತಾದ ದೇಶಗಳ ಸರ್ಕಾರಕ್ಕೆ ಹೊರೆಯಾಗಿದ್ದಾರೆ. ಹಿಂದೆ ವಲಸೆ ಬಂದ ಇತರರೂ ಕೂಡ ಇವರನ್ನು ತಿರಸ್ಕರಿಸುವಷ್ಟು ಮಟ್ಟಿಗೆ ಈ ನಿರಾಶ್ರಿತರು ಸಮಸ್ಯೆಯಾಗಿದ್ದಾರೆ. ಈ ನಿರಾಶ್ರಿತರ ಸಮಸ್ಯೆ ಮುಂದಿನ ರಾಜಕೀಯ ಪಕ್ಷದ ಭವಿಷ್ಯವನ್ನು ರೂಪಿಸುತ್ತಿದೆ.
ಇನ್ನು ವೈಯುಕ್ತಿಕ ನೆಲೆಯಲ್ಲಿ ಯುದ್ಧದ ಪರಿಣಾಮವನ್ನು ಗಮನಿಸಿದಾಗ ಇಲ್ಲಿ ಉಂಟಾಗುವ ಸಾವು ನೋವು ನಷ್ಟಗಳು ಅಪಾರ. ಯುದ್ಧದಿಂದಾಗಿ ಅದೆಷ್ಟೋ ಸಂಸಾರಗಳು ಒಡೆದು ಹೋಗುತ್ತವೆ. ಇದರ ಪರಿಣಾಮ ಹೆಂಗಸರು ಮತ್ತು ಮಕ್ಕಳನ್ನು ಹೆಚ್ಚು ತಟ್ಟುತ್ತದೆ. ಅದೆಷ್ಟೋ ಮಕ್ಕಳು ಅನಾಥವಾಗುವುದುಂಟು. ಮಹಿಳೆಯರ ಮೇಲಿನ ದೌರ್ಜನ್ಯ ಯುದ್ಧದ ಪರಿಣಾಮವು ಹೌದು ಮತ್ತು ಕ್ರೂರ ಸೈನಿಕರ ಯುದ್ಧ ತಂತ್ರವೂ ಹೌದು. ದೇಶ ಅಸ್ಥಿರವಾಗಿ ಮತ್ತು ಬಡವಾಗಿದ್ದರೆ ಯುದ್ಧದ ಪರಿಣಾಮ ಇನ್ನು ಹೆಚ್ಚು ಎನ್ನಬಹುದು. ಬೆಳೆಯುವ ಮಕ್ಕಳಿಗೆ ಆಹಾರದ ಕೊರತೆಯಿಂದಾಗಿ ಬೆಳವಣಿಗೆ ಕುಂಠಿತಗೊಳ್ಳಬಹುದು. ಬರಿ ಎಲುಬಿನ ಗೂಡುಗಳಂತಿರುವ ಶಿಶುಗಳ ಭಿತ್ತಿಯನ್ನು ಇಸ್ರೇಲ್ ಪ್ಯಾಲೆಸ್ಟೀನ್ ಯುದ್ಧದ ನಡುವೆ ಸುದ್ದಿ ಮಾಧ್ಯಮಗಳು ತೋರಿಸಿವೆ. ಈ ರೀತಿಯ ಮಕ್ಕಳಿಗೆ ರೋಗ ನಿವಾರಕ ಶಕ್ತಿ ಕಡಿಮೆಯಾಗುವುದರಿಂದ ಹಲವಾರು ರೋಗ ರುಜಿನಗಳು ಉಂಟಾಗುತ್ತದೆ. ಸ್ಥಳಾಂತರಗೊಂಡ ಮಕ್ಕಳಿಗೆ ಶಿಕ್ಷಣ ದೊರಕದೆಹೋಗಬಹುದು. ಯುದ್ಧದ ನಡುವೆ ಬೆಳೆಯುವ ಮಕ್ಕಳು ಮಾನಸಿಕ ತೊಂದರೆಗೆ ಒಳಗಾಗಬಹುದು. ಯುದ್ಧದ ಮಾನಸಿಕ ಪರಿಣಾಮ ಸೈನಿಕರನ್ನು ಅವರ ಬದುಕಿನುದ್ದಕ್ಕೂ ಕಾಡಬಹುದು. ಬಡ ದೇಶಗಳು ಯುದ್ಧಗಳಿಂದಾಗಿ ಆರ್ಥಿಕವಾಗಿ ದುರ್ಬಲಗೊಂಡು ಚೇತರಿಸಿಕೊಳ್ಳಲು ಅನೇಕ ದಶಕಗಳೇ ಬೇಕಾಗಬಹುದು. ಯುದ್ಧಗಳ ಪರಿಣಾಮವನ್ನು ಮತ್ತು ಕಾರಣಗಳನ್ನು ಕುರಿತು ನೂರಾರು ಪಿಎಚ್`ಡಿ ಪ್ರಬಂಧವನ್ನು ಬರೆಯ ಬಹುದೇನೋ.
ಪ್ರಪಂಚದ ನಾನಾ ಕಡೆ ವ್ಯಾಪಕವಾಗಿ ಯುದ್ಧಗಳು ನಡೆಯುತ್ತಿವೆ. ಇದನ್ನು ಸುದ್ದಿ ಮಾಧ್ಯಮಗಳು 24/7 ನಮಗೆ ತಲುಪಿಸುತ್ತಿವೆ. ಕಟ್ಟಡಗಳು ಬೆಂಕಿ ಹತ್ತಿ ಉರಿಯುವುದು, ಸೈನಿಕರು ಗಾಯಗೊಳ್ಳುವುದು, ಜನಸಾಮಾನ್ಯರು ತಮ್ಮ ಮನೆಗಳು ಕುಸಿದುಬಿದ್ದಾಗ ರೋದಿಸುವುದು, ಮಕ್ಕಳು ಖಾಲಿ ಪಾತ್ರೆ ಹಿಡಿದು ಯುದ್ಧಗಳ ನಡುವೆ ಆಹಾರಕ್ಕಾಗಿ ಬೇಡುವುದು, ನೀರಿಗಾಗಿ ಪರದಾಡುವುದು ಈ ರೀತಿಯ ಭಿತ್ತಿಗಳು ಸಾಮಾನ್ಯ. ಸುರಕ್ಷಿತ ದೇಶಗಳಲ್ಲಿ ನೆಲೆಸಿರುವ ನಾವುಗಳು ಇವುಗಳನ್ನು ನೋಡುತ್ತಲೇ ಹೊಟ್ಟೆತುಂಬ ಉಣ್ಣುತ್ತೇವೆ, ಕಣ್ತುಂಬ ನಿದ್ದೆ ಮಾಡುತ್ತೇವೆ. ನರಳಿಕೆ ಎಂಬುದು ಇಷ್ಟು ಸರ್ವೇ ಸಾಮಾನ್ಯವಾದಾಗ ನಾವು ನಮ್ಮ ಸೂಕ್ಷ್ಮತೆಗಳನ್ನು ಕಳೆದುಕೊಂಡು ಇನ್ನೊಬ್ಬರ ಕಷ್ಟಕೆ ಮಿಡಿಯುವ ಅಂತಃಕರಣವನ್ನು ಕಳೆದುಕೊಂಡು ಬಿಟ್ಟಿದ್ದೇವೆ. ಕ್ಯಾಲಿಫೋರ್ನಿಯಾ ಯುನಿವರ್ಸಿಟಿಯ ಕೆಲವು ಎಡಪಂಥೀಯ ವಿದ್ಯಾರ್ಥಿಗಳು, ಲಂಡನ್ನಿನ ಕೆಲವು ನಾಗರೀಕರು ಅಧಿಕ ಸಂಖ್ಯೆಯಲ್ಲಿ ಸೇರಿ ಯುದ್ಧ ವಿರುದ್ಧ ಮೆರವಣಿಗೆಗಳನ್ನು, ಪ್ರತಿಭಟನೆಯನ್ನು ಮಾಡಿದ್ದಾರೆ. ಇಲ್ಲಿ ಸರಿ ತಪ್ಪುಗಳಾಚೆ ನಿಂತು ಮಾನವೀಯ ದೃಷ್ಟಿಯಿಂದ ನೋಡಬೇಕಾಗಿದೆ. ಸರಿ ತಪ್ಪುಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಭಾವುಕತೆಯಿಂದ, ಯುದ್ಧ ಪರ-ವಿರೋಧ ನಿಲುವು ತಳೆದು ಕೊನೆಯಿಲ್ಲದಂತೆ ಚರ್ಚೆ ಮಾಡಿ ಸಮರ್ಥನೆ ಮಾಡಿಕೊಳ್ಳಬಹುದು. ಇಡೀ ಮನುಜ ಮತವೇ ಒಂದಾಗಿ ಕರೋನ ವಿರುದ್ಧ ಹೋರಾಟಮಾಡಿದಾಗ ಇದ್ದ ಒಗ್ಗಟ್ಟು ಈಗ ಏಕಿಲ್ಲ ಎಂಬ ಪ್ರಶ್ನೆಗೆ ಉತ್ತರ ನಮ್ಮ ಮುಂದೆಯೇ ಇದೆ.
ಯುದ್ಧದಿಂದ ಮುಕ್ತವಾದ ಪ್ರಪಂಚ, ವಿಶ್ವಶಾಂತಿ ಈ ಸನ್ನಿವೇಶದಲ್ಲಿ ಒಂದು ಆದರ್ಶವಾಗಿ ಮತ್ತು ಕನಸಾಗಿಯೇ ಉಳಿದುಬಿಟ್ಟಿದೆ. ಎಲ್ಲಿಯವರೆಗೆ ಸ್ವಾರ್ಥ, ಅಸಮಾನತೆ, ಪೂರ್ವಗ್ರಹ ಪೀಡಿತ ಆಲೋಚನೆಗಳು, ಅನುಮಾನ, ಸಂದೇಹ, ಮತೀಯ ಭಾವನೆಗಳು, ದ್ವೇಷ ಇರುವುದೋ ಅಲ್ಲಿಯವರೆಗೆ ಯುದ್ಧ ಅನಿವಾರ್ಯ. ಕಾದಾಡುವ ಎರಡು ದೇಶಗಳ ನಡುವೆ ಯುದ್ಧವನ್ನು ನಿಲ್ಲಿಸುವ ಯತ್ನದಲ್ಲಿ ಕದನ ವಿರಾಮ ಎಂಬುದು ಮೊದಲನೇ ಹಂತ. ಆ ಹಂತವನ್ನು ತಲುಪಬೇಕಾದರೆ ಹೊಂದಾಣಿಕೆ, ಉದಾರತೆ, ಸಹಿಷ್ಣುತೆಗಳನ್ನು ಒಳಗೊಂಡ ಒಪ್ಪಂದಗಳಾಗಬೇಕು. ಮೇಲೆ ಪ್ರಸ್ತಾಪಿಸಿದ ಹಾಗೆ ಈಗಿನ ಯುದ್ಧಗಳು ಬಹಳ ಸಂಕೀರ್ಣವಾದದ್ದು. ಅಲ್ಲಿ ಕಾದಡುವ ದೇಶಗಳ ಹಿಂದೆ ಇನ್ನು ಹಲವಾರು ದೇಶಗಳ ಹಿತಾಸಕ್ತಿ, ಪ್ರತಿಷ್ಠೆ, ಹಣ ಕಾಸಿನ ಲೆಕ್ಕಾಚಾರ, ಹಳೇ ಚುಕ್ತಗೊಳ್ಳದ ಕೆಲವು ಅಜೆಂಡಾ ಇತ್ಯಾದಿ ಇರುವುದು ಸಾಮಾನ್ಯ. ಯುದ್ಧಗಳ ಲೆಕ್ಕಾಚಾರದಲ್ಲಿ ನಮ್ಮ ಶತ್ರುವಿನ ಶತ್ರು ನಮ್ಮ ಮಿತ್ರನಾಗಿರಬಹುದು. ಶತ್ರುವಿನ ಮಿತ್ರ ಶತ್ರುವಾಗಿ ಪರಿಣಮಿಸಬಹುದು. ಹೀಗೆ ಯುದ್ಧದಲ್ಲಿ ಸಂಕೀರ್ಣವಾದ ಬೆಸುಗೆಯೊಂದು ಇರಲು ಸಾಧ್ಯ. ಯುದ್ಧವನ್ನು ತಡೆಗಟ್ಟಲು, ನಿಲ್ಲಿಸಲು ಅನೇಕ ರಾಷ್ಟ್ರಗಳ ಸಹಕಾರ ಅಗತ್ಯ.
ವಿಶ್ವ ಶಾಂತಿಗೆ ಪ್ರಜಾಪ್ರಭುತ್ವ ಮೌಲ್ಯಗಳು ತುರ್ತಾಗಿ ಬೇಕಾಗಿದೆ. ಇತ್ತೀಚಿಗೆ ಪ್ರಜಾಪ್ರಭುತ್ವದೊಳಗೇ ಸರ್ವಾಧಿಕಾರಿಗಳು ಹುಟ್ಟಿಕೊಳ್ಳುತ್ತಿದ್ದಾರೆ. ರಾಷ್ಟ್ರೀಯತೆ ಎಲ್ಲೆಡೆ ಹೆಚ್ಚಾಗುತ್ತಿದೆ. ಈ ಸರ್ವಾಧಿಕಾರಿಗಳು ತಮ್ಮ ವರ್ಚಸ್ಸನ್ನು ಹೆಚ್ಚುಮಾಡಿಕೊಳ್ಳಲು, ತಾವು ಎಷ್ಟು ಬಲಿಷ್ಠ ನಾಯಕರು ಎಂದು ತೋರಿಸಿಕೊಳ್ಳಲು ಯುದ್ಧದಲ್ಲಿ ತೊಡಗುತ್ತಿದ್ದಾರೆ. ಪ್ರಜಾಪ್ರಭುತ್ವ ಮೌಲ್ಯಗಳು ಕುಸಿಯುತ್ತಿವೆ. ರಾಷ್ಟ್ರೀಯತೆ ಎಂಬ ಅಮಲಿನಲ್ಲಿ ಮತದಾರರು ತಮ್ಮ ವಿವೇಚನೆಯನ್ನು ಕಳೆದುಕೊಳ್ಳುತ್ತಿರುವುದು ಶೋಚನೀಯ. ಮುಂದಕ್ಕೆ ತಮ್ಮ ಜನ ನಾಯಕರನ್ನು ಆಯ್ಕೆ ಮಾಡುವಲ್ಲಿ ಮತದಾರರು ಅತಿಯಾದ ಎಚ್ಚರಿಕೆ ವಹಿಸಬೇಕಾಗಿದೆ. ಇಸ್ರೇಲ್ ಆಕ್ರಮಿಸಿರುವ ನೆಲವನ್ನು ಪ್ಯಾಲೆಸ್ಟೀನ್ ಪ್ರಜೆಗಳಿಗೆ ಹಿಂದಿರುಗಿಸಿ ಆ ನಾಡನ್ನು ಮತ್ತೆ ಕಟ್ಟಲು ಸಹಕರಿಸಬೇಕಾಗಿದೆ. ಮಧ್ಯಪೂರ್ವ ರಾಷ್ಟ್ರಗಳಲ್ಲಿ ಧರ್ಮದ ವಿಜೃಂಭಣೆ ಕಡಿಮೆಯಾಗಬೇಕಾಗಿದೆ. ಮುಸ್ಲಿಂ ಅಸ್ತಿತ್ವ ಎಂದರೆ ಬರಿಯ ಧರ್ಮವಲ್ಲ, ಅದನ್ನು ಮೀರಿದ್ದು ಎಂಬ ಭಾವನೆ ಮೂಡಬೇಕಾಗಿದೆ. ಅವರು ಪ್ರಜಾಪ್ರಭುತ್ವ ಮಾದರಿಗೆ ಸಿದ್ಧವಾಗಿರದಿದ್ದರೂ ಅವರಲ್ಲಿ ಹಲವಾರು ಸುಧಾರಣೆಗಳು ಉಂಟಾಗಬೇಕಾಗಿದೆ. ಅದನ್ನು ಅರಬ್ ಸಂಯುಕ್ತ ರಾಷ್ಟ್ರಗಳಲ್ಲಿ ಈಗಾಗಲೇ ಕಾಣಬಹುದು. ಪ್ರಜಾಪ್ರಭುತ್ವ ಇಲ್ಲವೇ ಇತರ ಮಾದರಿ ಸರ್ಕಾರಗಳು ಏನೇ ಇರಲಿ “ಲೆಟ್ಸ್ ಮೇಕ್ ವರ್ಲ್ಡ್ ಗ್ರೇಟ್ ಎಗೈನ್” ಎನ್ನುವ ಉದಾರಿಗಳು ಬೇಕಾಗಿದ್ದಾರೆ. ಸಾಮಾಜಿಕವಾಗಿ, ರಾಜಕೀಯವಾಗಿ, ಚಲನಶೀಲವಾಗಿರುವ ಈ ಪ್ರಪಂಚದಲ್ಲಿ ಯುದ್ಧಗಳು ನಡೆಯುತ್ತಲೇ ಇರುತ್ತವೆ, ಅವು ಮನುಕುಲದ ಅಸ್ತಿತ್ವದ ಒಂದು ಭಾಗವಾಗಿ ಉಳಿಯುವುದು ಅನಿವಾರ್ಯ. ಕವಿವರ್ಯರು ಹೇಳಿರುವ ಹಾಗೆ ಇರುವಷ್ಟು ದಿನ ನಿನ್ನ ಮುಖ ನಾನು, ನನ್ನ ಮುಖ ನೀನು ನೋಡುವಷ್ಟು ಸೌಜನ್ಯ ಈ ಪ್ರಪಂಚದಲ್ಲಿ ಉಳಿದರೆ ಅಷ್ಟೇ ಸಾಕು.
***