ರಾತ್ರಿ ಪಾಳಿಯ ಚಾಲಕರು

ಯೋಗಿಂದ್ರ ಮರವಂತೆಯವರಿಗೆ ಪರಿಚಯ ಬೇಕಿಲ್ಲ. ಕನ್ನಡದಲ್ಲಿ ಹೆಸರು ಮಾಡಿದ, ಪುರಸ್ಕೃತರಾದ ಪ್ರಬಂಧಕಾರ. ದೈನಿಕಗಳಲ್ಲಿ , ಅಂತರ್ಜಾಲ ಪತ್ರಿಕೆಗಳಲ್ಲಿ ಅವರ ಅಂಕಣಗಳು ಪ್ರಕಟಗೊಂಡಿವೆ . ಅಂಕಣಗಳನ್ನು, ಪ್ರಬಂಧಗಳನ್ನು ಪುಸ್ತಕವಾಗಿಯೂ ಪ್ರಕಟಿಸಿದ್ದಾರೆ. ಸಾಮಾನ್ಯವಾದ ವಿಷಯಗಳಿಗೆ ಮೂರ್ತ ರೂಪ ಕೊಡುವುದು ಅವರ ವಿಶಿಷ್ಟತೆ. ಇದನ್ನು ಅವರ “ಏರೋ ಪುರಾಣ” ಪುಸ್ತಕದ ಹಲವಾರು ಬರಹಗಳಲ್ಲಿ, ಬಹುಮಾನಿತ “ಕಿಟಕಿಗಳು” ಪ್ರಬಂಧದಲ್ಲಿ ಕಾಣಬಹುದು. ಬಹಳ ಕಾಲದ ನಂತರ ಅನಿವಾಸಿಗೆ ಮತ್ತೆ ಹೊಸ ಬರಹವನ್ನು ಈ ವಾರ ಕೊಟ್ಟಿದ್ದಾರೆ. ಅವರ ಬರಹದ ಲಾಲಿತ್ಯ, ಈ ಪ್ರಬಂಧದಲ್ಲಿ ಸೊಗಸಾಗಿ ಪ್ರದರ್ಶಿತವಾಗಿದೆ. ಅಮೂರ್ತವಾದ ‘ಕನಸು’ ರಾತ್ರಿ ಪಾಳಿಯ ಚಾಲಕನಾಗುತ್ತದೆ; ರಸ್ತೆಗಳಲ್ಲಿ ತಿರುಗುವ ಬೀಡಾಡಿ ಪ್ರಾಣಿಗಳು, ಬೇಕಾ ಬಿಟ್ಟಿ ಗಾಡಿ ಓಡಿಸುವವರು, ಯಾನವನ್ನು ಧ್ವಂಸ ಮಾಡುವವರಾಗುತ್ತಾರೆ. ಕತ್ತಲೆಯ ಹಾದಿಯಲ್ಲಿ ನಿಮ್ಮನ್ನು ನಡೆಸುತ್ತ, ಓಡಿಸುತ್ತ ಲೌಕಿಕ, ತಾತ್ವಿಕ, ಆಧ್ಯಾತ್ಮಿಕ ವಿಚಾರಗಳನ್ನೆಲ್ಲ ತಡಕಿ ಅಚ್ಚುಕಟ್ಟಾಗಿ ನಿಮ್ಮ ಮುಂದೆ ರಾತ್ರಿ ಪಾಳಿಯ ಚಾಲಕರ ವಿವಿಧ ಮುಖಗಳನ್ನು ಅನಾವರಣಗೊಳಿಸಿದ್ದಾರೆ.

“ಕನಸೆಂದರೆ ನಿದ್ರೆಯಲ್ಲಿ ನೋಡುವಂತಹದ್ದಲ್ಲ ; ನಿದ್ರೆ ಮಾಡಲು ಬಿಡದ್ದು” ಎನ್ನುತ್ತ  ನಿದ್ದೆಗೆಡಿಸಿದವರು ಅಬ್ದುಲ್ ಕಲಾಂ. ಇದು ಸೊಂಪಾದ ನಿದ್ದೆಯ ನಡುವಿನ ಸುಸ್ವಪ್ನವಲ್ಲ. ಬೆವರಿ ಬೆಚ್ಚುವ ದುಸ್ವಪ್ನವೂ ಅಲ್ಲ. ಒಡಲಿನೊಳಗೆ ಸಣ್ಣದಾಗಿ ಹುಟ್ಟಿ  ನಿತ್ಯವೂ ಬೇರೆಬೇರೆ ಆಕಾರ ತಾಳಿ ದೊಡ್ಡದಾಗಿ ಜ್ವಲಿಸಿ, ಮೈಮನಗಳನ್ನು ವ್ಯಾಪಿಸಿ ಮುನ್ನಡೆಸುವ ಸ್ವಯಂಸ್ಫೂರ್ತಿ. ನೆಲೆ  ಮುಟ್ಟದ ತನಕ ನಿಲ್ಲದ ನಡಿಗೆ, ಯಾವುದೊ ಲಕ್ಷ್ಯದ ಕಡೆಗಿನ ಅವಿರತ ನಿರಂತರ ಓಟ.  ಕನಸಿನ ಒಂದು ವ್ಯಾಖ್ಯಾನ ಹೀಗಾದರೆ,  ಕಾವ್ಯ ಸಾಹಿತ್ಯಗಳು ಕನಸನ್ನು ಕೆಲವೊಮ್ಮೆ ಬರೇ ಕನಸೆಂದು ಕರೆಯಲು ಬಯಸಬಹುದು. ನಿದ್ದೆಯನ್ನು ಕನಸೆಂದೋ, ಕನಸನ್ನು ನಿದ್ದೆಯೆಂದೋ ಅಥವಾ ಬದುಕನ್ನೇ ಕನಸು ಎಂದೋ  ಕಲ್ಪಿಸಲು ಪ್ರೇರೇಪಿಸಬಹುದು. ಕನಸೇ ಬದುಕಾಗುವುದರ ಬಗ್ಗೆ ಎಚ್ಚರಿಸಬಹುದು. ಕನಸಿನ ರಮ್ಯತೆಯನ್ನು ನಿಗೂಢತೆಯನ್ನು ಅಲ್ಲದಿದ್ದರೆ  ವಿಹ್ವಲತೆಯನ್ನೂ ಶಬ್ದಚಿತ್ರವಾಗಿ ವರ್ಣಿಸಬಹುದು. ಒಳ್ಳೆಯ ಕನಸು, ಕೆಟ್ಟ ಕನಸು ಎಂದು ಕರೆಯಲು ಅಲ್ಲದಿದ್ದರೆ ಮರೆಯಲು ಹೇಳಿಕೊಟ್ಟಿರಬಹುದು. ಅದು ಕಾವ್ಯದ ದೃಷ್ಟಿ, ಕವಿ ಕಲಾವಿದರ ಕಲ್ಪನೆಯ ಸೃಷ್ಟಿ.  ಆದರೆ ಕಲಾಂರು ಹೇಳಿದ್ದು  ಕನಸಿನ ಬೆನ್ನು ಹಿಡಿದವರು ನಿದ್ರಿಸುವುದಿಲ್ಲ ಎಂದು. ಇದು ನಿದ್ದೆ ಮಾಡಗೊಡದ ಒಂದು ಬಗೆಯ ಕನಸು. ಗುರಿ  ತಲುಪುವ ತನಕ ವಿರಮಿಸಲಾಗದ ವ್ಯಸನ, ನಿದ್ರೆಯೊಳಗಿನ ಎಚ್ಚರ.

ಒಬ್ಬರ ನಿದ್ರೆಯೊಳಗಿನ ಎಚ್ಚರ ಆಸುಪಾಸಿನಲ್ಲಿರುವವರ ನಿದ್ದೆಗೆಡಿಸುವುದೂ ಇದೆ; ರಾತ್ರಿ ಮನೆಯನ್ನು ಮುರಿಯುವ ಕಳ್ಳರಿಗೂ ಒಂದು ಎಚ್ಚರ ಇರುತ್ತದೆ.  ಮಲಗಬೇಕಾದವರು ಮಲಗುವುದನ್ನೇ ಕಾದು ತಮಗೆ ಬೇಕಾದ ಕೆಲಸ ಮುಗಿಸಿಕೊಳ್ಳುವ ಎಚ್ಚರ ಅದು. ಅಪರಾಧ ಜಗತ್ತಿನಲ್ಲಿ ಇಂತಹ ಸಂಚಿನ ಎಚ್ಚರಗಳು ಸಾಮಾನ್ಯ. ಇನ್ನು ತಮ್ಮ ಮನೆಗೆ ಹಾಗಾಗಬಹುದೆನ್ನುವ ಊಹೆ ಇರುವವರಿಗೆ  ಬೀಳಬಹುದಾದ ಕನ್ನ  ಅಥವಾ ಸದ್ಯದಲ್ಲೇ ಎರಗಬಹುದಾದ ಆಪತ್ತು, ತಳಮಳವಾಗಿ ಆಂತರಿಕ ಎಚ್ಚರವನ್ನು ಹುಟ್ಟಿಸುವುದಿದೆ. ಇವಕ್ಕೆಲ್ಲ  ವ್ಯತಿರಿಕ್ತವಾಗಿ ಯಾರದೋ ನಿದ್ದೆಯೊಳಗಿನ ಎಚ್ಚರ ಇನ್ಯಾರದೋ ಸುಖನಿದ್ರೆಗೂ ಕಾರಣ ಆಗಬಹುದು. ನಿತ್ಯ ದಿನಚರಿಯಲ್ಲಿ ಬಳಕೆಯಾಗುವ ಉಪಯುಕ್ತವಾಗುವ ಎಷ್ಟೋ ವಿಷಯ ವಸ್ತುಗಳು ಗೊತ್ತಿರುವವರೋ ಗೊತ್ತಿಲ್ಲದವರೋ ನಿದ್ದೆಬಿಟ್ಟು ದುಡಿದು, ದಣಿದು ನೀಡಿದ ಕೊಡುಗೆಯಾಗಿರಬಹುದು. ತಾವು ನಿದ್ದೆ ಬಿಟ್ಟು ಸುತ್ತಮುತ್ತಲಿನವರ ಎಚ್ಚರ ಕಾಯುವವರು ಮನೆಮನೆಯಲ್ಲೂ ಇರುತ್ತಾರೆ. ಆ ಮನೆಗೆ ಬೇಕಾಗಿ ಬಹಳವಾಗಿ ದುಡಿದು ಹಿತ  ಕಾಯವವರು. ಇನ್ನು ಮನೆಯನ್ನು ಮೀರಿ ಊರು ಸಮಾಜಕ್ಕೆ ಕೊಡುಗೆ ನೀಡುವವರೂ ಇರುತ್ತಾರಲ್ಲ. ಬಹಳ ವಿಶೇಷವಾದನ್ನು ಸಾಧಿಸಿ ಪ್ರಸಿದ್ಧರಾದವರು  ಇತಿಹಾಸದಲ್ಲಿ ವರ್ತನಮಾನದಲ್ಲಿ ದಾಖಲಾಗುತ್ತಾರೆ. ಅವರು ಕಲಾಂರಂತಹ ವಿಜ್ಞಾನಿಗಳೂ ಇರಬಹುದು. ದೊಡ್ಡ ಜನಸಮುದಾಯಕ್ಕೋ   ಜಗತ್ತಿಗೋ ನೆರವಾಗುವ ಸಂಶೋಧಕರು ಅನ್ವೇಷಕರು ಇರಬಹುದು. ಸಾಹಿತಿ, ಕ್ರೀಡಾಪಟು, ಸಮಾಜಸೇವಕ, ಸೃಜನಶೀಲ ಕಲಾವಿದ ಹೀಗೆ. ಅವರು  ಕಣ್ಣಿಗೆ ಕಾಣದ ದೂರದ ಅನಾಮಿಕ ಸಾಧಕರು ಆಗಿರಬಹುದು. ಅಷ್ಟು ದೊಡ್ಡ ಲೋಕದ ಸುದ್ದಿ ಬೇಡ ಅಂತಾದರೆ ಹತ್ತಿರದಲ್ಲೇ ಸಣ್ಣ ಚಾಕರಿ ಸಣ್ಣ ಸೇವೆಯಲ್ಲಿ ತೊಡಗಿದ ಮೌನವಾಗಿರುವ ದನಿಯೇ ಇಲ್ಲದ ವಿನಮ್ರ ಸೇವಕರೂ ಇರಬಹುದು. ಅವರು ಯಾರೇ ಇದ್ದರೂ ಅವರೆಲ್ಲರಿಗೂ ಸಾಮಾನ್ಯವಾದುದು ನಿದ್ದೆಯೊಳಗಿನ ಎಚ್ಚರ.

ಕತ್ತಲಲ್ಲಿ ಕಂಡ ಕನಸು ಬೆಳಕು ನೀಡಿದ ಸಣ್ಣ ಮಟ್ಟದ, ದೊಡ್ಡ ಪ್ರಮಾಣದ ಉದಾಹರಣೆಗಳು ಎಷ್ಟಿಲ್ಲ?  ಇವರೆನ್ನೆಲ್ಲ ನಾನು ಕರೆಯುವುದು ರಾತ್ರಿ ಪಾಳಿಯ ಚಾಲಕರೆಂದು; ತಾವು ಎಚ್ಚರವಿದ್ದು ಪ್ರಯಾಣಿಕರಿಗೆ ನಿದ್ರೆಯ ಜೊಂಪು ಹತ್ತಿಸಿ, ಅವರು ಕಣ್ಣು ಬಿಡುವಾಗ ಇನ್ನೊಂದು ಊರಿಗೆ ತಲುಪಿಸುವವರೆಂದು. ಯಾತ್ರಿಕರನ್ನು ಗುರಿ ತಲುಪಿಸುವುದರಲ್ಲೇ ತೃಪ್ತಿ ಕಂಡುಕೊಳ್ಳುವವವರು. ನಾವೆಲ್ಲರೂ ಇಂತಹ ರಾತ್ರಿ ಪಾಳಿಯ ಚಾಲಕರ ಸಹವಾಸ ಅನುಭವ ಪಡೆದವರೇ.

ಭಾವಾರ್ಥದಲ್ಲೂ, ಶಬ್ದಾರ್ಥದಲ್ಲೂ ರಾತ್ರಿ ಪ್ರಯಾಣದ ಚಾಲಕನೇ ಆದವನೊಡನಿನ  ನನ್ನ ಒಂದು ಅನುಭವ  ಇಂಜಿನೀಯರಿಂಗ್ ಓದಿನ  ದಿನಗಳದ್ದು. ಪದವಿಯ  ಕೊನೆಯ ವರ್ಷದಲ್ಲಿದ್ದಾಗ, ಉಷ್ಣ ವಿದ್ಯುತ್ ಸ್ಥಾವರದ ಶೈಕ್ಷಣಿಕ ಭೇಟಿಗೆ ನಾವು ಹೊರಟಿದ್ದೆವು. ನಾವೆಂದರೇನು ,ಆ ಕಾಲದ ಕರ್ನಾಟಕದ ಯಂತ್ರಶಾಸ್ತ್ರ ವಿಭಾಗದ ವಿದ್ಯಾರ್ಥಿಗಳ ಪದವಿ ಪೂರ್ಣಗೊಳ್ಳುವುದೇ ರಾಯಚೂರಿನ ಬಿಸಿಲಿನ ಝಳದಲ್ಲಿ ಒಂದೆರಡು ದಿನಗಳ ಕಾಲ ಬೆಂದು ಬೆವರಿ ನೀರಾದ ಮೇಲೆ. ನಮ್ಮ ಮಟ್ಟಿಗೆ ಆಗ ರಾಯಚೂರಿಗೆ ಪ್ರವೇಶವೇ ಉಷ್ಣ ಸ್ಥಾವರವನ್ನು ಹೊಕ್ಕಂತೆ ಇತ್ತು. ಬೆಂಗಳೂರಿನಿಂದ ರಾಯಚೂರಿನವರೆಗಿನದು ಇಡೀರಾತ್ರಿಯ ಪ್ರಯಾಣ.  ಮೂರು ಖಾಸಗಿ ಬಸ್ಸುಗಳು ಕೇಕೆ ಹಾಕುವ ವಿದ್ಯಾರ್ಥಿಗಳ ಜೊತೆಗೆ ಪ್ರಾಧ್ಯಾಪಕರುನ್ನು  ತುಂಬಿಸಿಕೊಂಡು ಹೊರಟಿದ್ದವು. ಒಂದರ ಹಿಂದೆ ಒಂದು. ಒಂದು ಇನ್ನೊಂದನ್ನು ಹಿಂದೆ ಹಾಕುವುದು , ಮುಂದೆ ಸಾಗುವ ಬಸ್ಸಿನಿಂದ ಹರ್ಷೋದ್ಗಾರ ಚಪ್ಪಾಳೆ ಶಿಳ್ಳೆಗಳು ರಸ್ತೆಯನ್ನು ತುಂಬುವುದು, ಕತ್ತಲೆಯನ್ನು ಅನಾಗರಿಕವಾಗಿ ಬಡಿದು ಎಬ್ಬಿಸುವುದು ನಡೆಯುತ್ತಲೇ ಇತ್ತು. ಈ ನಡುವೆ ನಮ್ಮ ಬಸ್ಸಿನ ಚಾಲಕನಿಗೆ ತೀರ ನಿದ್ದೆ ಬರುತ್ತಿತ್ತು. ಬಸ್ಸು ಪ್ರಯಾಣದಲ್ಲಿ ನನ್ನ ಸೀಟು ಎಲ್ಲೇ ಇದ್ದರೂ ರಾತ್ರಿ ಚಾಲಕನ ಕ್ಯಾಬಿನ್ ಒಳಗೆ ಹೋಗಿ ಹತ್ತಿರ ಕುಳಿತು ಮಾತನಾಡುವುದು ನನಗೆ ಇಷ್ಟ. ಇಂಜಿನ್ನಿನ ಕರ್ಕಶ ಸದ್ದು, ಮುಖಕ್ಕೆ ಬಡಿಯುವ ತಂಪು ಗಾಳಿ, ಗಿಯರ್ ಲಿವರ್ ನ ಅಲುಗಾಟ, ಎದುರಿನಿಂದ ಬರುವ ನಾಲ್ಕಾರು ಪ್ರಖರ ಕಣ್ಣುಗಳ ವಾಹನಗಳು, ನಡುವೆ ಹಿಂದೆಂದೂ ಭೇಟಿಯಾಗಿರದ ಮುಂದೆಯೂ ಆಗದ ನನ್ನ ಚಾಲಕನ ನಡುವಿನ ಸುಪ್ರೇಮ ಸಲ್ಲಾಪ. ಈ ಕೆಲಸ ಯಾವಾಗಿನಿಂದ ಎಂದು ಆರಂಭವಾಗುವ ಮಾತುಕತೆ, ಇವತ್ತಿನ  ರೂಟ್, ಇದೆ ಹಾದಿಯಲ್ಲಿ ಹಿಂದಿನ ಅನುಭವ, ಸ್ವಲ್ಪದರಲ್ಲಿ ತಪ್ಪಿದ ಅಪಘಾತ, ಸಾವಿನ ದವಡೆಯಿಂದ ಪಾರಾದ ಬಸ್ಸು, ಅವನನ್ನು ಗೋಳುಹೊಯ್ದ ವಿಚಿತ್ರ ಪ್ರಯಾಣಿಕರು ಹೀಗೆ ಮುಂದೆ ಸಾಗಿ, ಹೆಂಡತಿ-ಮಕ್ಕಳು ಸಂಸಾರ ಶಾಲೆಗಳನ್ನು ಸುತ್ತಿ ಬಳಸಿ ಸಾಗುತ್ತಿದ್ದವು, ಬಸ್ಸಿನ ಜೊತೆಜೊತೆಗೆ.  ಅಂದೂ ಚಾಲಕನ ಜೊತೆ ಉತ್ಸಾಹದಲ್ಲಿ ಮಾತುಕತೆ ಶುರು ಆಗಿದ್ದರೂ ನಮ್ಮ ಚಾಲಕನಿಗೆ  ವಿಪರೀತ ನಿದ್ದೆ ಬರುತ್ತಿತ್ತು.  ಆತ ಮಧ್ಯಮಧ್ಯ ಸೀಟಿನಿಂದ ಎದ್ದು ನಿಂತು ಬಸ್ಸು ಓಡಿಸುತ್ತಿದ್ದ.  ಹಿಂದಿನ ಆರೇಳು ದಿವಸಗಳಿಂದ ಹಗಲು ರಾತ್ರಿ ಸ್ವಲ್ಪವೂ ನಿದ್ರಿಸದೆ ಕೆಲಸ ಮಾಡಿದ್ದನಂತೆ. ನಮ್ಮ ತಿರುಗಾಟಕ್ಕೆ ಚಾಲಕನಾಗಿ ಬಂದಾಗ , ವಾಹನ ಚಲಾಯಿಸುತ್ತಿರುವಾಗ ತನ್ನ ಸೀಟಿನಲ್ಲಿ ಕುಳಿತರೆ ಸಾಕು, ನಿದ್ರಿಸುವ ಸ್ಥಿತಿಯಲ್ಲಿದ್ದ. ಬಿಡುವು ಇಲ್ಲದೆ ಕೆಲಸಕ್ಕೆ ಮಾಡಲು ಮಾಲಿಕರ ಒತ್ತಡ ಕಾರಣ ಇರಬಹುದು, ಬೇರೆ ಡ್ರೈವರ್ ಇಲ್ಲದಿರಬಹುದು, ಅಥವಾ ರಜೆ ಮಾಡಿ ಸಂಬಳ ಕಳೆದುಕೊಳ್ಳುವ ಸ್ಥಿತಿಯೂ ಆತನದಲ್ಲದಿರಬಹುದು.  ಇಷ್ಟು ತಿಳಿದ ಮೇಲೆ ನಾವು ಕೆಲವರು ಆತನ ಪಕ್ಕದಲ್ಲೇ ಬಂದು ಕೂತು ಮಾತನಾಡುತ್ತಿದ್ದೆವು. ಅವನದು ನಿದ್ದೆ ತಪ್ಪಿಸಿಕೊಂಡು ವಾಹನ ಓಡಿಸುವ ಪಾಳಿಯಾದರೆ, ನಮ್ಮದು ಅಂದಿನ ಮಟ್ಟಿಗೆ ಅವನನ್ನು ಎಚ್ಚರವಿಡುವ ಸರದಿ. ಇದೂ ಸಾಕಾಗುವುದಿಲ್ಲ ಎನಿಸಿದಾಗ ಮಧ್ಯಮಧ್ಯ ಬಸ್ಸು ನಿಲ್ಲಿಸಲು ಹೇಳಿ, ಅಲ್ಪ ಸ್ವಲ್ಪ ನಿದ್ರಿಸುವ ಅವಕಾಶ ನೀಡುತ್ತಾ ಪ್ರಯಾಣ ಬೆಳೆಸಿದವು. ಆದರೂ ನಿಂತುಕೊಂಡು ಬಸ್ಸು ಚಲಾಯಿಸುವ ಆತನ ಮುಖ ವ್ಯಗ್ರವಾಗುತ್ತಿತ್ತು, ಊದಿಕೊಂಡ ಕಣ್ಣು ಕೆಂಪಾಗಿ, ಕ್ಷಣಕ್ಕಾದರೂ ರೆಪ್ಪೆ ಮುಚ್ಚುತ್ತಿತ್ತು. ಪ್ರತಿ ಬಾರಿ ಚಾಲಕನ ಕಣ್ಣಿಗೆ ಅರೆಕ್ಷಣದ ಜೊಂಪು  ಹತ್ತಿದಾಗಲೂ ಕೈಯಲ್ಲಿ ಹಿಡಿದ ಸ್ಟೀಯರಿಂಗ್ ಚಕ್ರ ಗರಕ್ಕನೆ ಒಂದು ದಿಕ್ಕಿಗೆ ತಿರುಗುತ್ತಿತ್ತು, ಹಠಾತ್ ಬಸ್ಸು ಲಯ ತಪ್ಪಿದಂತೆ ಅನಿಸುತ್ತಿತ್ತು. ದಾರಿಯುದ್ದಕ್ಕೂ ಚಾಲಕ ಕಣ್ಣು ರೆಪ್ಪೆಗಳನ್ನು ತೆರೆದಿಡಲು ಹೋರಾಡುತ್ತ , ಎಚ್ಚರದಲ್ಲೇ ನಿದ್ರಿಸುತ್ತ ನಮ್ಮನ್ನು ರಾಯಚೂರು ತಲುಪಿಸಿದ್ದ. ಆ ಚಾಲಕನ ಬದುಕಿನ ಅತ್ಯಂತ ದೀರ್ಘ ರಾತ್ರಿ ಅದಾಗಿದ್ದಿರಬೇಕು. ಮತ್ತೆ ಅಂದು ಆ ಬಸ್ಸಿನಲ್ಲಿ ಪ್ರಯಾಣ ಮಾಡಿದವರ ಮಟ್ಟಿಗೆ ಜೀವನಪೂರ್ತಿ ನೆನಪಿಡುವ ಅತ್ಯಂತ ಕತ್ತಲೆ ನಿಶೆಯ ಪ್ರಯಾಣ.

ಇನ್ನು ನನ್ನ ಹುಟ್ಟೂರಿನ ಆಪ್ತ ಸ್ನೇಹಿತ, ಪ್ರಾಥಮಿಕ ಶಾಲೆಯ ಸಹಪಾಠಿಯೂ ಆಗಿದ್ದವನು ಈಗಲೂ ರಾತ್ರಿ ಪಾಳಿಯ ಬಸ್ ಚಾಲಕ. ವಿದ್ಯಾಭ್ಯಾಸ ಬೇಗ ನಿಲ್ಲಿಸಿ ಅವನ ಕನಸಿನ ಉದ್ಯೋಗವಾದ ಡ್ರೈವಿಂಗ್ ಅರಸಿ ಇನ್ನೊಂದು ಊರಿಗೆ ಹೋದವನು ಸ್ಥಳೀಯ ವ್ಯಾನ್ ಗಳಲ್ಲಿ ಕ್ಲೀನರ್ ಆಗಿ ನೌಕರಿ ಶುರು ಮಾಡಿ, ನೈಟ್ ಬಸ್ ಗಳ ಚಾಲಕನಾಗಿ ಬೆಳೆದು ತನ್ನ ಕನಸನ್ನು ಪೂರೈಸಿಕೊಂಡಿದ್ದ.  ನಾವಿಬ್ಬರು ಭೇಟಿಯಾದಾಗಲೆಲ್ಲ ರಾತ್ರಿ ಪ್ರಯಾಣದ ಲೋಕದ ಬಗ್ಗೆ ಚರ್ಚೆ ಆಗುತ್ತದೆ. ಎಲ್ಲವೂ ಸ್ಪಷ್ಟ ಎನಿಸುವ ಹಗಲಿನ  ಪ್ರಯಾಣವೇ ಸುಖ ಇರಬೇಕಲ್ಲ  ಎಂದು ನಾನು ಹೇಳಿದರೆ, ರಾತ್ರಿ ಪಾಳಿಯ ಚಾಲನೆಯಷ್ಟು ಸಲೀಸು ಇನ್ನೊಂದಿಲ್ಲ ಎಂದು ಆತ ವಾದಿಸುತ್ತಾನೆ. ಹಗಲಿನಲ್ಲಾದರೆ ಎಂತಹ  ಹೆದ್ದಾರಿ ರಸ್ತೆಯನ್ನೂ ವಾಚಾಮಗೋಚರವಾಗಿ  ಬಳಸಿ ಹಾಳುಗೆಡಹುವವರು, ಉದ್ದ ಸಾಗಬೇಕಾದಲ್ಲಿ ಅಡ್ಡ ಬರುವವರು, ಅಶಿಸ್ತಿನ ಮನುಷ್ಯರು  ಅನಧಿಕೃತ ಪ್ರವೇಶ ಮಾಡುವ ಪ್ರಾಣಿಗಳು ಎಲ್ಲವೂ ಸೇರಿದ ಗೋಜಲು ಗೊಂದಲವಾಗುತ್ತದೆ. ನಡುರಾತ್ರಿಯ ಕಗ್ಗತ್ತಲೆಯ ಹೊತ್ತಾದರೆ ಹಗಲಿನಲ್ಲಿ ರಸ್ತೆ ಯಾನವನ್ನು ಧ್ವಂಸ ಮಾಡಿಹೋದ ಆ ಎಲ್ಲರೂ ಮನೆ ಸೇರಿ ಸ್ವಚ್ಛಂದ ಮಲಗಿರುತ್ತಾರೆ.  ರಸ್ತೆಯನ್ನು ಬೆಳಗಿ ಹೊಳೆಯಿಸುವ  ಚಂದ್ರ, ಮಿಂಚಿ ಮಿನುಗುವ ನಕ್ಷತ್ರಗಳು ಅಲ್ಲದಿದ್ದರೆ ಇನ್ನಷ್ಟು ಮತ್ತಷ್ಟು ರಾತ್ರಿ ಪಾಳಿಯ ಬಸ್ಸು-ಲಾರಿ, ಮತ್ತೆ ಅವುಗಳ ಚಾಲಕರಿಗೆ ಬಿಟ್ಟುಕೊಟ್ಟಿರುತ್ತಾರೆ. ಅವನ ಪ್ರಕಾರ ರಾತ್ರಿಯ ಎಚ್ಚರವೂ ಒಂದು ಕಲೆ ಮತ್ತು ಸಿದ್ಧಿ. ನಿತ್ಯ ರಾತ್ರಿ ನಿದ್ದೆ ಬಿಡಬೇಕಾದರೆ ಹಗಲಿನಲ್ಲಿ ನಿದ್ದೆ ಹಿಡಿಯಬೇಕು. ಪ್ರಕೃತಿಗೆ ವಿರುದ್ಧವಾಗಿ ಹಗಲನ್ನು ರಾತ್ರಿ ಮಾಡಬೇಕು, ರಾತ್ರಿಯನ್ನು ಹಗಲಾಗಿಸಬೇಕು. ಸೂರ್ಯ ಮೂಡುವಾಗ ಕಣ್ಮುಚ್ಚಿ ಮುಸುಕು ಎಳೆಯಬೇಕು, ಚಂದ್ರ ಮೂಡುವ ಹೊತ್ತಿಗೆ ಹಲ್ಲುಜ್ಜಿ ಊಟ ಮಾಡಿ ಸ್ಟೀಯರಿಂಗ್ ಹಿಡಿದು ಏಕಾಗ್ರತೆಯಲ್ಲಿ ಕೂರಬೇಕು. ನಡುವೆ ಒಂದೆರಡು ಕಡೆ ಖಡಕ್ ಚಹಾ ಕುಡಿಯಬೇಕು. ಎದುರಿನಿಂದ ಕೋರೈಸುವ ಬಣ್ಣಬಣ್ಣದ ಬೆಳಕು ಬೀರುತ್ತಾ ವಾಹನ ಚಲಾಯಿಸುವವರನ್ನು ಸುಧಾರಿಸಿಕೊಂಡು ಮುಂದೆ ಸಾಗಬೇಕು. ರಾತ್ರಿಯ ಖಾಲಿ ರಸ್ತೆಯಲ್ಲೂ ಅನಾವಶ್ಯಕ ಹಾರ್ನ್ ಒತ್ತುವವರನ್ನು ನಿರ್ಲಕ್ಷಿಸಬೇಕು, ಮಿತಿಮೀರಿದ ವೇಗದಲ್ಲಿ ನುಗ್ಗುವ ಸಣ್ಣ ವಾಹನಗಳನ್ನು ಆಧರಿಸಿ ಪೊರೆಯಬೇಕು. ರಸ್ತೆ ಹಂಪುಗಳನ್ನು ನಿಧಾನಕ್ಕೆ ನಾಲಿಗೆ ಕಚ್ಚಿಕೊಂಡು ಹತ್ತಿ ಇಳಿಸಬೇಕು. ನಿದ್ದೆಯ ನಶೆಯಲ್ಲಿ  ತೇಲುತ್ತಿರುವ ಎಲ್ಲ ಪ್ರಯಾಣಿಕರ ತೊಟ್ಟಿಲು ತೂಗುತ್ತ, ತಲುಪುವಲ್ಲಿಗೆ ತಲುಪಿಸಿ, ಗಾಡಿ ನಿಲ್ಲಿಸಿ ಪ್ರಯಾಣಿಕರು ಒಬ್ಬೊಬ್ಬರಾಗಿ ಸರಂಜಾಮು ಸಮೇತ ಧನ್ಯವಾದವನ್ನೂ ಹೇಳದೇ ಕೆಲವೊಮ್ಮೆ ಕಾರಣಾಂತರದಿಂದ ತಡವಾಗಿದ್ದಕ್ಕೆ ಅಸಮಾಧಾನದಿಂದ ಇಳಿದು ಹೋದ ಮೇಲೆ, ಚಾವಿ ತೆಗೆದು  ಬಲಬದಿಯ ಅರ್ಧ ಬಾಗಿಲನ್ನು ದೂಡಿ ಮಣ್ಣು ನೆಲದ ಮೇಲೆ ಧೊಪ್ ಎಂದು ಹಾರಬೇಕು. ಹಣೆಯ ಮೇಲಿನ ಬೆವರು ಒರೆಸಬೇಕು. ಆದಷ್ಟು ಬೇಗ ತಿಂಡಿ ತಿಂದು, ಸರಿಯಾದ ಜಾಗ ಸಿಗದಿದ್ದರೆ, ಬಸ್ಸಿನ ಸೀಟು, ಯಾವುದೊ ಪೆಟ್ರೋಲ್ ಪಂಪಿನ ಚಾವಡಿ ನೋಡಿ ಧೂಳು ಹೊಡೆದು ನಿದ್ದೆ ಮಾಡಬೇಕು. ಮತ್ತೆ ಸಂಜೆಯ ಪಾಳಿಗೆ ತಯಾರಾಗಬೇಕು. ಇಂತಹ ಹಲವು ವರ್ಷಗಳ  ರಾತ್ರಿಚರಿಯನ್ನು, ತನ್ನ ಮಕ್ಕಳು ಶಿಕ್ಷಣ ಮುಗಿಸಿ ದುಡಿಯಲು ಶುರು ಮಾಡಿದ ಮೇಲೆ, ಮನೆ ಸಾಲ ತೀರಿದ ನಂತರ ಒಂದು ದಿನ ಪೂರ್ಣ ನಿಲ್ಲಿಸಿ ತಾನೂ ಚಾಲಕ ವೃತ್ತಿ ಬಿಟ್ಟು ನೆಮ್ಮದಿಯ ನಿದ್ದೆ ಮಾಡಬೇಕು.

 ರಾತ್ರಿ ಪ್ರಯಾಣದ ವಾಹನಗಳ ಚಾಲಕರಿಂದ ಹಿಡಿದು ನಿದ್ದೆ ಮಾಡಗೊಡದ ದೊಡ್ಡ ಕನಸಿನ ಹಿಂದೆ ಹೊರಟವರು ಕೊಟ್ಟಕೊನೆಗೆ ಅರಸುವುದು  ಒಂದು ನಿರಾಳ ನಿದ್ದೆಯನ್ನೇ ಇರಬಹುದು. ಅನಿವಾರ್ಯ ದುಡಿಮೆ, ಯಶಸ್ಸಿನ ಹಸಿವು, ಮಹತ್ವಾಕಾಂಕ್ಷೆಗಳು ಒಂದಕ್ಕಿಂತ ಒಂದು ಭಿನ್ನವಾದರೂ ಬೇರೆ ಬೇರೆ ದಿಕ್ಕಿನಿಂದ ಒಂದು ಸಂಪೂರ್ಣ ಸಂತೃಪ್ತ ನಿದ್ದೆಯ ಹುಡುಕಾಟದಲ್ಲಿರಬಹುದು. ನಿದ್ದೆಯ ಎಚ್ಚರವೂ ಒಂದು ಆತ್ಯಂತಿಕ ಪ್ರಶಾಂತ ವಿಶ್ರಾಮದ ಅನ್ವೇಷಣೆಯಲ್ಲಿರಬಹುದು. ಅಂತಹ ಒಂದು ಹುಡುಕಾಟದ ಕತೆ ಅಲೆಕ್ಸಾಂಡರ್ ಚಕ್ರವರ್ತಿಯ ಬಗೆಗೂ ಇದೆ.

ಗ್ರೀಕ್ ದೊರೆ ಅಲೆಕ್ಸಾಂಡರ್  ದಂಡಯಾತ್ರೆಯನ್ನು ಮಾಡುತ್ತ , ಸಾಮ್ರಾಜ್ಯವನ್ನು ವಿಸ್ತರಿಸುತ್ತ ಇಂದಿನ ಭಾರತದ ಅಂದಿನ  ಭೂಪ್ರದೇಶಕ್ಕೂ ಬಂದಿದ್ದನಲ್ಲ.  ಹಾಗೆ ಅಲ್ಲಿ  ಸುತ್ತುತ್ತಿರುಗುವಾಗ , ಮರದ ನೆರಳಿನಲ್ಲಿ ಸೊಂಪಾಗಿ ಮಲಗಿದ್ದ ಸಾಧುವೊಬ್ಬನನ್ನು ಕಂಡನಂತೆ . ಕುಚೆಷ್ಟೆಯೋ , ಕುತೂಹಲವೋ ಎಬ್ಬಿಸಿ ಮಾತಿಗಿಳಿದನಂತೆ .
“ಈ ಯುದ್ಧಗಳಿಂದ ಏನು ಸಾಧಿಸುವೆ ?” ಎಂದು ಸಾಧು ಕೇಳಿದನಂತೆ
“ಒಂದೊಂದೆ ರಾಜ್ಯವನ್ನು , ರಾಜರನ್ನು ಗೆದ್ದು , ಎಲ್ಲದಕ್ಕೂ ನಾನೆ ಅರಸ , ಜಗತ್ತಿಗೆ ಚಕ್ರವರ್ತಿ ಎನಿಸಿಕೊಳ್ಳುತ್ತೇನೆ ” ಎಂದನಂತೆ ಅಲೆಕ್ಸಾಂಡರ್.
“ಚಕ್ರವರ್ತಿ ಎನಿಸಿಕೊಂಡ ನಂತರ ಏನು ಮಾಡುವೆ? “
“ಎಲ್ಲರನ್ನು ಎಲ್ಲವನ್ನು ಗೆದ್ದ ನಂತರ ಸುಖವಾಗಿ ನಿದ್ರಿಸುತ್ತೇನೆ” ಎಂದನಂತೆ  ಅಲೆಕ್ಸಾಂಡರ್.
ಆಗ ಸಾಧು ನಗುತ್ತ “ನಾನದನ್ನು ಈಗಾಗಲೇ ಮಾಡುತ್ತಿದ್ದೇನೆ , ಯಾರನ್ನೂ ಕೊಲ್ಲದೆ ಗೆಲ್ಲದೆ ” ಎಂದನಂತೆ.

ಸಾಧುವೊಬ್ಬನಿಗೆ ಸರಳ ಬದುಕಿನಲ್ಲಿ ಸುಲಭವಾಗಿ ದಕ್ಕಿದೆ ಎಂದೆನಿಸುವ ನಿದ್ರೆ, ಅಲೆಕ್ಸಾಂಡರನಿಗೆ ದಶಕದ ಕಾಲ ಕತ್ತಿಯನ್ನು ಝಳಪಿಸುತ್ತ , ಸಾವಿರಾರು ಮೈಲು ದೂರ ಕುದುರೆಗಳನ್ನು ಕಾಲಾಳುಗಳನ್ನು ದಣಿಸಿ, ರಕ್ತ ಕಣ್ಣೀರುಗಳ ಕಾಲುವೆ ಹರಿಸಿ, ನೂರಾರು ರಾಜರನ್ನು ಮಣಿಸುವುದರಲ್ಲಿ ಸಿಕ್ಕಿತ್ತೋ ಇಲ್ಲವೊ? ಗೊತ್ತಿಲ್ಲ. ತಾನು ಬಯಸಿದಂತೆ ಇಡೀ ಭೂಮಿಯನ್ನು ವಶಪಡಿಸಿಕೊಳ್ಳಲು ಸಾಧ್ಯವಾಗದ ಕಾರಣ , ಆತನ ಕನಸಿನ ನಿದ್ರೆ ಅವನಿಗೆ ದೊರಕದೇ ಹೋಗಿರಬಹುದು; ಸಾಧು ಹೇಳಿದ ಅರ್ಥದಲ್ಲಿ ನಿರಾಳವಾದ ನಿದ್ರೆಯೇ ಬದುಕಿನ ಸರ್ವಸ್ವ ಎಂದು ನಂಬಿದರೆ ಅಲೆಕ್ಸಾಂಡರನಿಗೆ ತಾನೆಷ್ಟು  ದೌರ್ಭಾಗ್ಯವಂತ ಎಂದೂ ಅನಿಸಿರಬಹುದು. ಈ ಘಟನೆ ಕತೆಯೊ ಕಲ್ಪನೆಯೊ ಅಥವಾ ಅಲೆಕ್ಸಾಂಡರನ ಸ್ವಗತವೊ ಇರಬಹುದು. ಅಥವಾ ತೀವ್ರ ಮಹತ್ವಾಕಾಂಕ್ಷೆಯನ್ನು ವಿಮರ್ಶೆ ಮಾಡುವ ಒಂದು ತಾತ್ವಿಕ ಪ್ರಜ್ಞೆಯೂ ಇರಬಹುದು.

ನಿದ್ರೆಯ ಎಚ್ಚರದ ಬಗ್ಗೆ ನುಡಿದವರು, ನೆಮ್ಮದಿ ಸಾರ್ಥಕ್ಯ ಯಶಸ್ಸುಗಳನ್ನು ವಿಶಿಷ್ಟವಾಗಿ ವ್ಯಾಖ್ಯಾನಿಸಿ ಜಿಜ್ಞಾಸೆ ಹುಟ್ಟಿಸಿದವರು ಅಲೆಕ್ಸಾಂಡರನ ಕಾಲದ ಮೊದಲೂ ಆಮೇಲೆಯೂ ಸಿಗುತ್ತಾರೆ. ತಮ್ಮೊಳಗಿನ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ, ಹೊರಗಿನ ಉತ್ತರಗಳನ್ನು ಪ್ರಶ್ನಿಸುತ್ತ ಬದುಕಿದ ಬಾಳಿದ ಬುದ್ಧ, ಬಸವಣ್ಣ, ಗಾಂಧಿ ಮತ್ತೆ ಇನ್ನೂ ಅನೇಕರು ಹೀಗೆ ಎಚ್ಚರದಲ್ಲೇ ನಿದ್ರಿಸಿದವರ ಸಾಲಿಗೆ ಸೇರಿದವರು. ಮತ್ತೆ ನಿದ್ದೆಯೊಳಗಿನ ಜಾಗೃತಿಯಿಂದಲೇ  ಒಂದು ಸಾರ್ಥಕ ವಿರಾಮದ  ಹುಡುಕಾಟದಲ್ಲಿದ್ದವರು. ರಾತ್ರಿಯಿಡೀ ಕತ್ತಲೊಡನೆ ತರ್ಕಿಸುತ್ತಾ ನಿದ್ರೆಗೆಡುತ್ತ ಪ್ರಯಾಣಿಕರನ್ನು ಹೊಸ ನಿಲ್ದಾಣಕ್ಕೆ ತಲುಪಿಸುವ ರಾತ್ರಿ ಪಾಳಿಯ ಚಾಲಕರು.

  • ಯೋಗಿಂದ್ರ ಮರವಂತೆ

ಮ್ಯಾಸಿಡೋನಿಯಾದ ಬಂದರು ಪಟ್ಟಣ- ಥೆಸ್ಸಲೋನಿಕಿ (Thessaloniki)

 

ಉಮಾ ಅನಿವಾಸಿಯ ಜೀವನಾಡಿ. ಪ್ರಪಂಚ ಸುತ್ತಿದ ಅನುಭವ ಅವರದು. ಹೊಸ ಜಾಗವನ್ನು ತಾವು ನೊಡಿದ್ದಲ್ಲದೇ, ಅನಿವಾಸಿಯ ಓದುಗರೊಂದಿಗೆ ತಮ್ಮ ಅನಿಸಿಕೆಗಳನ್ನು ಹಂಚಿ ಉಣಿಸುವ ಜಾಯಮಾನ ಅವರದ್ದು. ಗ್ರೀಸ್ ದೇಶ ಇಂದಿನ ಜನಾಂಗಕ್ಕೆ ಸಮುದ್ರ ತಡಿಯ ಅನುಭವಕ್ಕೆ; ಸುತ್ತ ಹರಡಿರುವ ನೀಲ ಮೆಡಿಟರೇನಿಯನ್ ಸಮುದ್ರದಲ್ಲಿನ ದ್ವೀಪ ಸಮೂಹಗಳಿಗೆ ಪ್ರಸಿದ್ಧಿ. ನಮಗೆಲ್ಲ ಅಲೆಕ್ಸಾಂಡರ್, ಆರ್ಕಿಮಿಡಿಸ್ ಅವರಂಥ ವಿಶ್ವ ವಿಖ್ಯಾತ ವ್ಯಕ್ತಿಗಳಿಂದ ಪರಿಚಯ. ಸೂಕ್ತವಾಗಿ, ಚಕ್ರವರ್ತಿ ಅಲೆಕ್ಸಾಂಡರ್ ನ ಜನ್ಮಸ್ಥಳವನ್ನು ಸಂದರ್ಶಿಸಿ ಗತ ವೈಭವನ್ನು ಮೆಲಕು ಹಾಕುತ್ತ, ಸಧ್ಯದ ಪರಿಸ್ಥಿತಿಯನ್ನು ಈ ಲೇಖನದಲ್ಲಿ ಮನೋಜ್ಞವಾಗಿ ನಮ್ಮ ಮುಂದೆ ತೆರೆದಿಟ್ಟಿದ್ದಾರೆ…

ಅಲೆಕ್ಸಾಂಡರನ ಪ್ರತಿಮೆ
ಅಲೆಕ್ಸಾಂಡರನ ಪ್ರತಿಮೆ

ಅಲೆಕ್ಸಾಂಡರ್ ಚಕ್ರವರ್ತಿ ಅಲ್ಲೆಲ್ಲೋ ಬರುತ್ತಿದ್ದಾನಂತೆ ಎಂದು ಕೇಳಿದಾಕ್ಷಣವೇ, ನಮ್ಮಲ್ಲಿದ್ದ ರಾಜರು ಹೆದರಿ ಶರಣಾಗತರಾಗುತ್ತಿದ್ದರಂತೆ ಎಂದು ನಮ್ಮ ತಾಯಿ ಚಿಕ್ಕಂದಿನಲ್ಲಿ ನಮಗೆ ಹೇಳಿದ್ದ ಮಾತುಗಳು ಕಿವಿಯಲ್ಲೇ ಗುನುಗುತ್ತಿದೆಯೇನೋ ಅನ್ನಿಸುತ್ತದೆ. ಭಾರತದಲ್ಲಿದ್ದ ಎಲ್ಲಾ ರಾಜರೂ ಅವನಿಗೆ ಹೆದರಿ ತಲೆಬಗ್ಗಿಸಿದ್ದಾಗ, ನಮ್ಮಲ್ಲಿದ್ದ ಒಬ್ಬ ರಾಜ ಪೌರಸ್ ತನ್ನ ಆತ್ಮಾಭಿಮಾನದಿಂದಲೇ ಅವನನ್ನು ಗೆದ್ದಿದ್ದ ಪ್ರಸಂಗವನ್ನು ಕುರಿತಾಗಿ, ನಮ್ಮ ಕನ್ನಡ ಪಠ್ಯ ಪುಸ್ತಕದಲ್ಲಿ ನಮಗಿದ್ದ ಒಂದು ನಾಟಕದ ನೆನಪಾಗುತ್ತದೆ. ಪ್ರಪಂಚದ ಅತ್ಯಂತ ಮಹತ್ವಾಕಾಂಕ್ಷಿ ಸಾಮ್ರಾಟರಲ್ಲಿ ಒಬ್ಬನಾದ ಮಹಾನ್ ಗ್ರೀಕ್ ಯೋಧ ಅಲೆಕ್ಸಾಂಡರನ ಹೆಸರನ್ನು ಕೇಳದವರಾರು? ತನ್ನ ಇಪ್ಪತ್ತನೆಯ ವಯಸ್ಸಿನಲ್ಲಿಯೇ ತಂದೆಯ ಕೊಲೆಯಾದನಂತರ, ಸಾಮ್ರಾಜ್ಯದ ಹೊಣೆಯನ್ನು ತನ್ನ ಕೈಗೆತ್ತಿಕೊಂಡ ಅವನ ಶೌರ್ಯಪರಾಕ್ರಮಗಳ ಬಗ್ಗೆ, ಅವನು ಭಾರತಕ್ಕೆ ದಂಡೆತ್ತಿ ಬಂದ ರೀತಿ ಎಲ್ಲವೂ ಒಂದು ಅದ್ಭುತವಾದ ಚಾರಿತ್ರಿಕ ಸಂಗತಿ.

 

ಈ ಪರಾಕ್ರಮಿಯ ಜನ್ಮಸ್ಥಾನವಾದ ಥೆಸ್ಸಲೋನಿಕಿ ಪಟ್ಟಣಕ್ಕೆ ಭೇಟಿ ನೀಡುವ ಅವಕಾಶವೊಂದು ಕಳೆದ ವಾರ ನನಗೆ ಲಭ್ಯವಾಯಿತು. Displaying DSC_0050.JPGಸಧ್ಯದಲ್ಲಿ ಜರ್ಮನಿಯ ರಾಜಧಾನಿ ಬರ್ಲಿನ್ನಿನಲ್ಲಿ ವಾಸ್ತವ್ಯ ಹೋಡಿರುವ ನಮಗೆ, ಇದೊಂದು ಅಪರೂಪವಾದ ಅವಕಾಶವೆನ್ನಿಸಿತ್ತು. ಸರಿ, ಬರ್ಲಿನ್ನಿನ ಶೋನೆಫ಼ೆಲ್ಡ್ ವಿಮಾನ ನಿಲ್ದಾಣದಿಂದ ಬಡ್ಜೆಟ್ ವಾಯುಯಾನ ಕಂಪನಿ ಈಸಿ-ಜೆಟ್ ವಿಮಾನದಲ್ಲಿ, ಸುಮಾರು ೨ ಗಂಟೆಗಳ ಸುಲಭವಾದ ಪ್ರಯಾಣದ ನಂತರ, ನಾವು ಥೆಸ್ಸಲೋನಿಕಿಯ ಮಾಕೆಡೋನಾ ವಿಮಾನ ನಿಲ್ದಾಣದಲ್ಲಿ ಇಳಿದೆವು. ಕ್ರಿ.ಪೂ. ೩೧೫ ಅಂದರೆ ಸುಮಾರು ೩,೩೩೦ ವರ್ಷಗಳ ಇತಿಹಾಸವಿರುವ, ಮ್ಯಾಸಿಡೋನಿಯಾ ಪ್ರಾಂತ್ಯದ ಈ ಪಟ್ಟಣವನ್ನು, ಸುಂದರವಾದ ಪರ್ವತ ಮಾಲೆಗಳು ಆಗ್ನೇಯ ದಿಕ್ಕಿನಲ್ಲಿ ಆವರಿಸಿದ್ದರೆ, ಇದರ ಪೂರ್ವಕ್ಕೆ ಏಜಿಯನ್ ಸಮುದ್ರವಿದೆ. ಮೌಂಟ್ ಒಲಿಂಪಸ್ ಪರ್ವತವೇ ಇಲ್ಲಿನ ಅತ್ಯಂತ ಎತ್ತರವಾದ ಶೃಂಗ. ವಿಮಾನ ನಿಲ್ದಾನದಿಂದ ಸುಮಾರು ೨೫ ನಿಮಿಷಗಳ ದೂರದಲ್ಲಿರುವ ಥೆಸ್ಸಲೋನಿಕಿ ಪಟ್ಟಣ, ಹತ್ತಿರವಾದಂತೆ ಅಲ್ಲಿನ ಪ್ರಸಕ್ತ ಆರ್ಥಿಕ ಪರಿಸ್ಥಿತಿಯ ಕಠಿಣತೆಯನ್ನು ನಮಗೆ ಪರಿಚಯಿಸಿತು. ರಸ್ತೆಗಳ ಬದಿಯಲ್ಲಿ ಶೇಖರವಾಗಿದ್ದ ಕಸದ ಡಬ್ಬಗಳು, ಗೀರು-ಬರಹಗಳಿಂದ ತುಂಬಿ ಹೋದ ಗೋಡೆಗಳು, ಅವ್ಯವಸ್ಥೆಯ ವಾಹನಸಂದಣಿ, ಅಲ್ಲಲ್ಲೇ ಕಾಣಬರುವ ಬಡ ಭಿಕ್ಷುಕರು ಇದಕ್ಕೆ ಸಾಕ್ಷಿಯಾಗಿದ್ದವು. ಬಿಬಿಸಿ ಕೃಪೆಯಿಂದ ಗ್ರೀಕಿನ ಹಣಕಾಸಿನ ತೊಡಕಿನ ಪರಿಸ್ಥಿತಿಯ ಬಗ್ಗೆ ನಮಗೆ ಅರಿವಿರುವ ಕಾರಣ, ಈ ದೃಶ್ಯಗಳು ಆಘಾತಕಾರಿಯಾಗಿರಲಿಲ್ಲ.

 

ಥೆಸ್ಸಲೋನಿಕಿಯ ಉತ್ತಮ ಅಪಾರ್ಟಮೆಂಟ್ ಹೋಟೆಲಿನಲ್ಲಿ ತಂಗಿದ್ದ ನಮಗೆ, ಊಟ-ತಿಂಡಿಗಳ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಳ್ಳುವ ಪ್ರಸಂಗ ಬರಲಿಲ್ಲ. ಮೆಡಿಟರೇನಿಯನ್ ರೀತಿಯ ಆಹಾರ ಸೇವನೆಯಿರುವ ಗ್ರೀಸಿನಲ್ಲಿ, ಉತ್ತಮ ಗುಣಮಟ್ಟದ ಸಸ್ಯಾಹಾರ ದೊರೆಯುತ್ತದೆ. ಹಣ್ಣಹಂಪಲು ತರಕಾರಿಗಳನ್ನು ಯಥೇಚ್ಛವಾಗಿ ಬೆಳೆಯುವ ಈ ದೇಶದಲ್ಲಿ, ಸಸ್ಯಾಹಾರಿಗಳು ಯಾವ ತೊಂದರೆಯನ್ನೂ ಎದುರಿಸಬೇಕಿಲ್ಲ. ಎಲ್ಲೆಲ್ಲೂ ಕೆಂಪು ಬಿಳಿ ಕಣಿಗಿಲೆ ಗಿಡಗಳು ಹುಲುಸಾಗಿ ಬೆಳೆದು ನಿಂತ ಇಲ್ಲಿಯ ಉದ್ಯಾನವನಗಳು ಮತ್ತು ರಸ್ತೆಯ ಬದಿಗಳು ಕಣ್ಣನ್ನು ತಂಪುಗೊಳಿಸುತ್ತವೆ. ಪಟ್ಟಣದ ಒಂದು ಬದಿಗೆ ವಿಸ್ತಾರವಾಗಿ ಹರಡಿರುವ, ನಸುಹಸಿರು ಬಣ್ಣದ ಏಜಿಯನ್ ಸಮುದ್ರದ ಮುಂದೆ ನಡೆದಾಡುವ ಅನುಭವ ನಿಜಕ್ಕೂ ಆನಂದಮಯವೆನ್ನಿಸಿತು. ಈ ಸಮುದ್ರತಡಿಯ ಒಂದು ತುದಿಯಲ್ಲಿರುವ ಬಂದರಿನಿಂದ, ಮತ್ತೊಂದು ತುದಿಗೆ ಸುಮಾರು ೫ ಕಿಲೋಮೀಟರುಗಳ ದೂರವಿದೆ. ಥೆಸ್ಸಲೋನಿಕೆಯ ಉತ್ತಮ ಹೋಟೆಲುಗಳ ಸಾಲೇ ಇರುವ ಮತ್ತೊಂದು ಬದಿ, ಜನಗಳಿಂದ ತುಂಬಿ ಗಿಜಿಗುಟ್ಟುತ್ತಿರುತ್ತದೆ. ರಸ್ತೆಯ ಉದ್ದಕ್ಕೂ ತುಂಬಿರುವ ವಿವಿಧ ರೀತಿಯ ಉಪಹಾರಗೃಹಗಳಲ್ಲಿ ಕುಳಿತು ಹರಟೆಹೊಡೆಯುವ ಇಲ್ಲಿನ ಯುವಜನತೆಯ ಕೈಯಲ್ಲಿ, ಹೊಗೆಯಾಡುವ ಸಿಗರೇಟನ್ನು ನೋಡಿ ನನಗೆ ಸ್ವಲ್ಪ ನಿರಾಸೆಯೆನಿಸಿತು. ಗಂಡಸರಷ್ಟೇ ಸಂಖ್ಯೆಯ ಹೆಂಗಸರೂ ಕೂಡಾ ನಿರಾಳವಾಗಿ ಧೂಮಪಾನ ನಡೆಸಿದ್ದರು. ಬಹುಶಃ ಗ್ರೀಸಿನ ಜನತೆ ಮತ್ತು ಸರ್ಕಾರ ಸಾರ್ವಜನಿಕ ಧೂಮಪಾನದ ಹಾನಿಯ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಂಡಂತೆ ಕಾಣಲಿಲ್ಲ.

 

ಸಮುದ್ರದ ದಂಡೆಯ ಉದ್ದಕ್ಕೂ ನಡೆಯುತ್ತಾ ನಡೆದ ನನಗೆ, ಪಾದಚಾರಿಗಳ ಜೊತೆಗೆ ಸೈಕಲ್ ಸವಾರರ ದಂಡೇ ಇದ್ದದ್ದು ಕಂಡುಬಂತು. ಇತ್ತೀಚೆಗೆ ಯುರೋಪಿನ ದೇಶಗಳಲ್ಲಿ (ಅದರಲ್ಲೂ ಹಾಲೆಂಡ್ ಮತ್ತು ಜರ್ಮನಿ), ಸೈಕಲ್ ಸವಾರಿ ಬಹಳ ಜನಪ್ರಿಯವಾಗುತ್ತಿದೆ. ಉತ್ತಮ ದೇಹದಾರ್ಢ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ, ಪರಿಸರವನ್ನೂ ಕಾಪಾಡಬಹುದಾದ ಇಲ್ಲಿನ ಜನಗಳ ಮನೋಭಾವ ನಿಜಕ್ಕೂ ಶ್ಲಾಘನೀಯ. ಈ ಚಾರಿತ್ರಿಕ ನಗರವು ನ್ಯಾಶನಲ್ ಜಿಯಾಗ್ರಫಿ ಮ್ಯಾಗಝೀನ್ ನಡೆಸಿದ ಸಮೀಕ್ಷೆಯ ಪ್ರಕಾರ, ಪ್ರವಾಸಿಗರ ಆಯ್ಕೆಯ ಅತ್ಯುತ್ತಮ ಪಟ್ಟಣಗಳಲ್ಲಿ ಒಂದು ಎಂದು ತಿಳಿದು ಬರುತ್ತದೆ. ಇದೇನೂ ಆಶ್ಚರ್ಯದ ವಿಷಯವಲ್ಲ. ಸುಮಾರು 2,500 ವರ್ಷಗಳ ಇತಿಹಾಸವಿರುವ ಈ ನಗರದಲ್ಲಿ, ರೋಮನ್, ಬೈಝಂಟೈನ್, ಆಟ್ಟೋಮಾನ್ ಸಾಮ್ರಾಜ್ಯದ ವೈಭವಗಳ ಗುರುತನ್ನು ಧಾರಾಳವಾಗಿ ಕಾಣಬಹುದು. ಈ ಸಾಮ್ರಾಜ್ಯಗಳ ಸಾರ್ವಭೌಮರು ನಿರ್ಮಿಸಿರುವ ಅದ್ಭುತ ಸ್ಮಾರಕಗಳು, ಇಂದಿಗೂ UNESCO ವಿಶ್ವ ಪರಂಪರೆಯ ತಾಣಗಳಾಗಿ ನಿಂತು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಸಾರ್ವಭೌಮ ಅಲೆಕ್ಸಾಂಡರನ ಮಲಸಹೋದರಿ ಥೆಸ್ಸಲೋನಿಕೆಯ ಹೆಸರಿನಿಂದ ಕರೆಯಲ್ಪಡುವ ಈ ನಗರದ ಹೆಸರಿಗೆ, “ವಿಜಯ” ಎನ್ನುವ ಅರ್ಥವೂ ಇದೆ. ಭೂಗರ್ಭದ ನ್ಯೂನತೆಯ ರೇಖೆಯಲ್ಲಿರುವ ಈ ಪ್ರದೇಶ, ಭೂಕಂಪಗಳಿಂದ ಪೀಡಿತವಾಗಿದ್ದು, ಅದರ ಪರಿಣಾಮಗಳನ್ನು ಇಲ್ಲಿನ ಕಟ್ಟಡಗಳಲ್ಲಿ ಕಾಣಬಹುದು.

 

Displaying DSC_0034.JPGಸಮುದ್ರದ ದಂಡೆಯಲ್ಲಿ ನಡೆಯುತ್ತಾ ಸಾಗಿದ್ದ ನನಗೆ, ಇಲ್ಲಿನ ಪ್ರವಾಸಿಗರ ಆಕರ್ಷಣೆಗಳಲ್ಲಿ ಒಂದಾದ White Tower, ಅಥವಾ ಶ್ವೇತ ಗೋಪುರ ಕಾಣಿಸಿತು. ೧೨ಯ ಶತಮಾನದಲ್ಲಿ, ಇಲ್ಲಿಯ ಬಂದರನ್ನು ಭದ್ರಪಡಿಸುವ ಉದ್ದೇಶದಿಂದ, ಆಟ್ಟೋಮಾನ್ ರಾಜರಿಂದ ನಿರ್ಮಿಸಲ್ಪಟ್ಟ ಈ ಗೋಪುರವು, ಮುಂದೆ ಒಂದು ಕುಖ್ಯಾತ ಸೆರೆಮನೆಯಾಯಿತಲ್ಲದೇ, ಆಟ್ಟೋಮಾನ್ ರಾಜರ ಸಮಯದಲ್ಲಿ ಸಾಮೂಹಿಕ ಹತ್ಯೆಗಳ ಸ್ಥಳವಾಗಿತ್ತು. ಸುಣ್ಣದ ಬಿಳಿಯ ಬಣ್ಣದಿಂದ ಬಳಿಯಲ್ಪಟ್ಟಿರುವ ಈ ಗೋಪುರವನ್ನು, ಇಂದು ಈ ಪಟ್ಟಣದ ಲಾಂಛನವನ್ನಾಗಿ ಅಳವಡಿಸಿಕೊಳ್ಳಲಾಗಿದೆ. ಪ್ರವಾಸಿಗರಿಂದ ಕಿಕ್ಕಿರಿದಿದ್ದ ಇಲ್ಲಿ, ಹಲವು ಛಾಯಾಚಿತ್ರಗಳನ್ನು ಕ್ಲಿಕ್ಕಿಸಲು ಸ್ವಲ್ಪ ಪರದಾಡಬೇಕಾಯಿತು. ನಗರದ ಇನ್ನೂ ಹಲವಾರು ಸುಂದರ ಮತ್ತು ಭವ್ಯವಾದ ಕಟ್ಟಡಗಳನ್ನು ಇಲ್ಲಿಂದ ಕಾಣಬಹುದಾಗಿದೆ. ಅಲ್ಲಲ್ಲೇ ಇರುವ ಉದ್ಯಾನವನಗಳಲ್ಲಿ ಅರಳಿನಿಂತ ರೋಡೋಡೆಂಡ್ರಾನ್ ಪುಷ್ಪಗಳು, ಕಣ್ಸೂರೆಗೊಳ್ಳುವಂತಿದ್ದವು. ಹಕ್ಕಿಗಳ ಕಲರವ, ಅದರಲ್ಲೂ ಗಿಣಿಗಳ ಧ್ವನಿಕೇಳಿ, ನನ್ನೂರು ಮೈಸೂರಿನ ನೆನಪಾಯಿತು. ಸಮುದ್ರದಲ್ಲಿ ಸದ್ದಿಲ್ಲದೇ ಸಾಗಿದ್ದ ಹಲವಾರು ಹಡಗುಗಳು, ಎಲ್ಲರ ಗಮನವನ್ನೂ ಸೆಳೆದಿದ್ದವು. ಅಲ್ಲಿಂದ ಸ್ವಲ್ಪ ಮುಂದೆ ಸಾಗುತ್ತಾ ನಡೆದಾಗ ಮತ್ತೊಂದು ಪ್ರವಾಸಿಗರ ಆಕರ್ಷಣೆ ನನ್ನ ಕಣ್ಸೆಳೆಯಿತು. ಗ್ರೀಕ್ ಸಾರ್ವಭೌಮ, ಮಹಾನ್ ಯೋಧ ಅಲೆಕ್ಸಾಂಡರ್ ಚಕ್ರವರ್ತಿಯು, ಕುದುರೆಯ ಮೇಲೆ ಕುಳಿತ ಕರಿಶಿಲೆಯ ದೊಡ್ಡ ಪ್ರತಿಮೆಯನ್ನು ನೋಡಿ ನನ್ನ ಮನಸ್ಸು, ಈಗ ಕೆಲವು ವರ್ಷಗಳ ಹಿಂದೆ ನೋಡಿದ್ದ, ಅಲೆಕ್ಸಾಂಡರನ ಜೀವನವನ್ನು ಆಧಾರಿಸಿ ತೆಗೆದ ಹಾಲಿವುಡ್ಡಿನ ಚಲನಚಿತ್ರವನ್ನು ನೆನೆಯಿತು. ಮಹಾನ್ ದಾರ್ಶನಿಕ, ಚಿಂತಕ, ವಿಜ್ಞಾನಿ ಹೀಗೆ ಹಲವು ಹತ್ತು ವಿಷಯಗಳ ಮಹಾವಿದ್ವಾಂಸನಾಗಿದ್ದ ಅರಿಸ್ಟಾಟಲನಂತಹ ಮಹಾಮೇಧಾವಿಯ ಶಿಷ್ಯನಾದ ಈ ಚಕ್ರವರ್ತಿಯ ಜೀವನದ ಸಾಹಸಗಾಥೆ ನಿಜಕ್ಕೂ ಆಸಕ್ತಿಪೂರ್ಣ. ಒಬ್ಬ ಮಹತ್ವಾಕಾಂಕ್ಷಿಯಾಗಿದ್ದ ಈ ಚಕ್ರವರ್ತಿ, ಪ್ರಪಂಚದ ಚರಿತ್ರೆಯಲ್ಲಿ ಇಂತಹ ದೊಡ್ಡ ಸ್ಥಾನವನ್ನು ಗಳಿಸಿ, ಜನಗಳ ಮನದಲ್ಲಿ ಚಿರಂತನವಾಗಿ ನಿಲ್ಲುವಂತೆ ಮಾಡಿದ ಅವನ ಸಾಹಸಮಯ ಜೀವನ ಬಹುಶಃ ನಭೂತೋ ನಭವಿಷ್ಯತಿ ಎನ್ನುವಂತಿದೆ. ಆದರೆ ಇಂದು ಗ್ರೀಸ್ ದೇಶದಲ್ಲಿರುವ ನೂರಾರು ಸಮಸ್ಯೆಗಳು, ಅಲ್ಲಿನ ಯುವಜನತೆ ನಿರುದ್ಯೋಗವನ್ನು ಎದುರಿಸಿ ನಡೆಸುತ್ತಿರುವ ಹೋರಾಟ, ಇತರ ದೇಶಗಳಿಗೆ ವಲಸೆ ಹೋಗಬೇಕಾದ ಪರಿಸ್ಥಿತಿಯನ್ನು ನೋಡಿದರೆ, ಅವರಿಗೆ ಅಲೆಕ್ಸಾಂಡರನಂತಹ ಸಾಹಸ ಪುರುಷನ ಬಗ್ಗೆ ಯೋಚಿಸಲು ಪುರುಸೊತ್ತಿಲ್ಲ ಎನ್ನಿಸುತ್ತದೆ. ಕೆಲವೊಮ್ಮೆ ಚರಿತ್ರೆಯ ಗತವೈಭವಗಳು, ಪ್ರಸಕ್ತ ಸಮಸ್ಯೆಗಳಿಗೆ ಯಾವ ಪರಿಹಾರವನ್ನೂ ಒದಗಿಸಲು ಅಸಮರ್ಥವಾಗುತ್ತವೆ.

 

Displaying DSC_0210.JPGನಗರದ ಮಧ್ಯಭಾಗವು ಸಾರ್ವಜನಿಕ ಕಚೇರಿಗಳ ಕಟ್ಟಡಗಳು, ಚಾರಿತ್ರಿಕ ಸ್ಥಳಗಳು, ಅಂಗಡಿಗಳು, ಮಾರುಕಟ್ಟೆಗಳು, ಚೌಕಗಳಿಂದ ತುಂಬಿದೆ. ಅರಿಸ್ಟಾಟಲನ ಹೆಸರಿನಿಂದ ಕರೆಯಲ್ಪಡುವ ಭಾರಿ ಚೌಕದ ಸುತ್ತಮುತ್ತಾ, ಭಾರಿ ಜನಸಂದಣಿಯಿದ್ದು, ನಗರದ ಜೀವಾಳವೇ ಇದಾಗಿದೆ. ಸಮುದ್ರದ ದಂಡೆಯಲ್ಲಿ ನಡೆದಿದ್ದಂತೆಯೇ, ಅಲ್ಲೇ ಇದ್ದ ಉಪಹಾರಗೃಹದೊಳಗಿದ್ದ ಚೆಲುವಾದ ಕೊಳದಲ್ಲಿ ಅರಳಿ ನಿಂತ ನೈದಿಲೆ ಪುಷ್ಪಗಳು ನನ್ನ ಕಣ್ಸೆಳೆದವು. ಹತ್ತಿರ ಹೋಗಿ ಅವುಗಳ ಚೆಲುವನ್ನು ಸವಿದು ಅವುಗಳ ಚಿತ್ರವನ್ನು ನನ್ನ ಕ್ಯಾಮೆರಾದಲ್ಲಿ ಕ್ಲಿಕ್ಕಿಸುತ್ತಿದ್ದಾಗ, “ನೀರಿಗೆ ನೈದಿಲೆ ಶೃಂಗಾರ” ಎನ್ನುವ ಬಸವಣ್ಣನವರ ವಚನದ ಸಾಲುಗಳಲ್ಲಿ ಎಂತಹ ಸತ್ಯವಿದೆ ಎಂದೆನಿಸಿತು. ಸುಮಾರು ನಾಲ್ಕು ಗಂಟೆಗಳ ಕಾಲ ಅಲ್ಲೇ ನಡೆದಾಡಿದ ನನ್ನ ಮನ, ಮರುದಿನ ನಾವು ಭೇಟಿ ನೀಡಲಿದ್ದ ಮತ್ತೊಂದು ಚಾರಿತ್ರಿಕ ಸ್ಥಳದ ಬಗ್ಗೆ ಯೋಚಿಸುತ್ತಿತ್ತು.

 

Sikandar, 1941, Sohrab Modi.jpgಮರುದಿನ ಥೆಸ್ಸಲೋನಿಕಿಯ ಅರಿಸ್ಟಾಟಲ್ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದವರು, ಅಲೆಕ್ಸಾಂಡರ್ ಚಕ್ರವರ್ತಿಯ ತಂದೆ ಎರಡನೆಯ ಫಿಲಿಪ್, ಮತ್ತು ಅಲೆಕ್ಸಾಂಡರನ ಮಗನ ಸಮಾಧಿಗಳಿರುವ, ಒಂದು ಪ್ರಸಿದ್ಧ ಪುರಾತತ್ವದ ಸ್ಥಳಕ್ಕೆ ಸಣ್ಣ ಪ್ರವಾಸವನ್ನೇರ್ಪಡಿಸಿದ್ದರು. Vergina the Archaeological Site of Aigai, ಎಂಬ ಹೆಸರಿನ ಈ ಜಾಗವು UNESCO ಜಾಗತಿಕ ಪರಂಪರೆಯ ಒಂದು ತಾಣವಾಗಿದ್ದು, ಇದು ಥೆಸ್ಸಲೋನಿಕಿಯಿಂದ ಸುಮಾರು ೯೦ ಕಿಲೋಮಿಟರುಗಳ ದೂರದಲ್ಲಿದೆ. ಕ್ರಿ.ಪೂ. ೧೧ನೆಯ ಶತಮಾನದ ರಾಜಮನೆತನದ ಸಮಾಧಿಗಳನ್ನು ಹೊಂದಿರುವ ಈ ಸ್ಥಳವು, ಯೂರೋಪಿಯನ್ ನಾಗರೀಕತೆಯ ಬೆಳವಣಿಗೆಗೆ ಒಂದು ಅಸಾಧಾರಣ ಪುರಾವೆಯಾಗಿದ್ದು, ಶಾಸ್ತ್ರೀಯ ನಗರಸ್ಥಿತಿಯಿಂದ, ಸಾಮ್ರಾಜ್ಯಶಾಹಿ ರಚನೆಗಳಾದ ರೋಮನ್ ಅವಧಿಗಳಿಗೆ ಪರಿವರ್ತಿತವಾದ ಸಮಯವನ್ನು ಪ್ರತಿನಿಧಿಸುವ ಒಂದು ಮಹೋನ್ನತ ಸಾರ್ವತ್ರಿಕ ಮೌಲ್ಯದ ಸ್ಥಳವಾಗಿದೆ. ವೆರ್ಗೀನಾ ಎಂಬ ಆಧುನಿಕ ಹೆಸರಿನಿಂದ ಕರೆಯಲ್ಪಡುವ ಈ ಸ್ಥಳವು, ೧೯೭೭ರಲ್ಲಿDisplaying DSC_0035.JPG ಸಾರ್ವಭೌಮ ಅಲೆಕ್ಸಾಂಡರನ ತಂದೆ, ಮ್ಯಾಸಿಡೋನಿಯಾದ ಫಿಲಿಪನ ಸಮಾಧಿಯನ್ನು ಅನ್ವೇಷಿಸಿದಾಗ ಪ್ರಸಿದ್ಧಿಯಾಯಿತು. ಈ ಸಮಾಧಿಯಿರುವ ದಿಬ್ಬವು ಹೊರಗಿನಿಂದ ಆಕರ್ಷಕವೆನಿಸದಿದ್ದರೂ, ಒಮ್ಮೆ ಒಳಹೊಕ್ಕು ನೋಡಿದಾಗ, ಮೋಡಿಮಾಡುತ್ತದೆ. ೧೯೩೭ರಲ್ಲಿ ಪ್ರಾರಂಭವಾದ ಇಲ್ಲಿನ ಉತ್ಖನನಗಳು, ೧೯೭೭ರಲ್ಲಿ ಫಿಲಿಪ್ ಮತ್ತು ಅವನ ಮೊಮ್ಮಗನ ಸಮಾಧಿಗಳನ್ನು ಹೊರತೆಗೆದಾಗ ಪ್ರಸಿದ್ಧಿಯಾದವು. ಕ್ರಿ.ಪೂ ೩೩೬ ಅಕ್ಟೋಬರ್ ತಿಂಗಳಲ್ಲಿ, ನಾಟಕಮಂದಿರದಲ್ಲಿ, ತನ್ನ ರಕ್ಷಣಾದಳದ ಸಿಪಾಯಿಯ ಕೈಯಲ್ಲೇ ಹತನಾದ ಫಿಲಿಪ್, ಒಳಗಿನ ಪಿತೂರಿಗೆ ಬಲಿಯಾಗಿದ್ದನೆಂದು ತಿಳಿದುಬರುತ್ತದೆ.ಈ ರಾಜಸಮಾಧಿಗಳ ಕೋಣೆಗಳಲ್ಲಿ ಕಂಡುಬಂದಿರುವ ವಸ್ತುಗಳು, ನೋಡುಗರನ್ನು ಮತ್ತೊಂದು ಲೋಕ ಮತ್ತು ಸಮಯಕ್ಕೆ ಕೊಂಡೊಯ್ಯುತ್ತವೆ. ರಾಜನ ಉಡುಪುಗಳು, ಚಿನ್ನಾಭರಣಗಳು, ಪಾತ್ರೆಪರಟಿಗಳು, ವರ್ಣರಂಜಿತ ಗಿಲಾವುಗಳು (Frescos), ದಂತದ ಸಾಮಾನುಗಳು, ಯುದ್ಧದ ಪರಿಕರಗಳು, ಅಂದಿನ ನಾಗರೀಕತೆಯ ಉತ್ಕೃಷ್ಟತೆಯನ್ನು ಎತ್ತಿಹಿಡಿಯುತ್ತವೆ. ಈ ಸಮಾಧಿಗಳ ಒಳಗೆ ಛಾಯಾಚಿತ್ರಗಳನ್ನು ತೆಗೆಯಲು ಅನುಮತಿಯಿಲ್ಲ. ಆದರೂ ಸಹಾ, ನಮ್ಮ ಕಣ್ಣುಗಳು ಸೆರೆಹಿಡಿದ ಚಿತ್ರಗಳನ್ನು, ನಮ್ಮ ಮನ ಶಾಶ್ವತವಾಗಿ ಹಿಡಿದಿಡುವಲ್ಲಿ ಯಶಸ್ವಿಯಾಯಿತು ಎನ್ನುವುದರಲ್ಲಿ ಸಂದೇಹವೇ ಇಲ್ಲ. ನಮ್ಮೊಡನಿದ್ದ ಮಾರ್ಗದರ್ಶಿ ಈ ಸ್ಥಳದ ಬಗ್ಗೆ ಎಲ್ಲಾ ವಿಷಯಗಳನ್ನು ಬಹಳ ವಿವರವಾಗಿ, ನಿರರ್ಗಳವಾಗಿ ಹೇಳುತ್ತಿದ್ದ ರೀತಿ ನಮ್ಮನ್ನೆಲ್ಲಾ ಗ್ರೀಸ್ ಚರಿತ್ರೆಯನ್ನು ಮತ್ತೊಮ್ಮೆ ಓದಿ ನೋಡಲು ಪ್ರೇರೇಪಿಸಿತು ಎನ್ನುವುದನ್ನು ಪ್ರತ್ಯೇಕವಾಗಿ ಹೇಳಲೇ ಬೇಕಾಗಿಲ್ಲ. ಕೊನೆಯಲ್ಲಿ ಆಕೆ ಅಲ್ಲಿನ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಸಂಶೋಧಕಿ ಎಂದು ತಿಳಿದು ಬಂದಾಗ, ಆಕೆಯ ಜ್ಞಾನದ ಬಗ್ಗೆ ನಮ್ಮ ಗೌರವ ಇಮ್ಮಡಿಯಾಯಿತು.

 

ಮಾರನೆಯ ದಿನ ಅಲ್ಲಿನ ಸ್ಥಳಿಯ ರೆಸ್ಟೋರೆಂಟ್ ಒಂದರಲ್ಲಿ ಮದ್ಯಾನ್ಹದ ಭೋಜನ ಮಾಡಿ, ಸ್ಥಳೀಯ ಖಾದ್ಯಗಳ (ಸಸ್ಯಾಹಾರ) ಸವಿಯನ್ನೂ ಸವಿದೆವು. ಆಲೀವ್ ಎಣ್ಣೆಯಲ್ಲಿ ಹುರಿದ ತರಕಾರಿಗಳು, ಬೇಯಿಸಿದ ಕಾಳಿನ ಜೊತೆಗೆ ಸೇರಿಸಿದ ಅನ್ನ, ಸೊಪ್ಪು, ಹೀಗೆ ಹಲವಾರು ವಿಧದ ಸ್ವಾದಿಷ್ಟವಾದ ಭೋಜನ ನಮ್ಮ ಮನಸ್ಸನ್ನು, ಹೊಟ್ಟೆಯನ್ನು ಸಂತೃಪ್ತಿಗೊಳಿಸಿತು. ಹೀಗೆ ಸಂಸ್ಕೃತಿ, ಪರಂಪರೆ, ಇತಿಹಾಸದ ವೈಭವ ಮತ್ತು ಆಧುನಿಕತೆಯ ಪರಿಪೂರ್ಣ ಮೌಲ್ಯಗಳಿಂದ ಕೂಡಿದ ಥೆಸ್ಸಲೋನಿಕಿಯ ಹಿರಿಮೆ, ಗ್ರೀಸಿನ ಮತ್ತೊಂದು ಶ್ರೇಷ್ಠ ನಗರ ಅಥೆನ್ಸಿನ ವೈಭವಕ್ಕೆ ಸರಿಸಾಟಿಯಿಲ್ಲದಿದ್ದರೂ, ಪ್ರಚಂಡ ಇತಿಹಾಸ, ಹಾಗೂ ವಿಶೇಷ ಲಕ್ಷಣಗಳಿಂದ ತನ್ನದೇ ಆದ ಸೌಂಧರ್ಯ ಮತ್ತು ಸೊಬಗನ್ನು ಹೊಂದಿದೆ ಎನ್ನುವುದರಲ್ಲಿ ಸಂದೇಹವೇ ಇಲ್ಲ.

-ಉಮಾ ವೆಂಕಟೇಶ್