ಪುಸ್ತಕ ವಿಮರ್ಶೆ ಎಂಬ ತಕ್ಕಡಿ: ಡಾ ಜಿ.ಎಸ್. ಶಿವಪ್ರಸಾದ್

ಮತ್ತು ಒಂದು ಪುಸ್ತಕ ವಿಮರ್ಶೆ – ಟಿ. ಆರ್. ನಾರಾಯಣ್

ಈ ವಾರದ ಸಂಚಿಕೆಯಲ್ಲಿ ಒಂದಕ್ಕೊಂದು ಪೂರಕವಾಗುವ ಎರಡು ಬರಹಗಳಿವೆ. ನಾನು ‘ಪುಸ್ತಕ ವಿಮರ್ಶೆ ಎಂಬ ತಕ್ಕಡಿ’ ಎನ್ನುವ ಶೀರ್ಷಿಕೆಯಲ್ಲಿ ವಿಮರ್ಶೆಯ ಕುರಿತಾದ ನನ್ನ ಕೆಲವು ಅನಿಸಿಕೆಗಳನ್ನು ದಾಖಲಿಸಿದ್ದೇನೆ. ಪುಸ್ತಕ ವಿಮರ್ಶೆಯ ಕೆಲವು ಆಯಾಮಗಳನ್ನು ಓದುಗರಿಗೆ ಪರಿಚಯಿಸುವ ಪ್ರಯತ್ನ ನನ್ನದಾಗಿದೆ. ನನ್ನ “ಅಪ್ಪ ನೆಟ್ಟ ಆಲದ ಮರ” ಬಿಡಿ ಬರಹಗಳ ಕೃತಿಯನ್ನು ಶ್ರೀಯುತ ನಾರಾಯಣ್ ಅವರು ವಿಶ್ಲೇಷಿಸಿ ಒಂದು ವಿಮರ್ಶೆಯನ್ನು ಒದಗಿಸಿದ್ದಾರೆ. ನಾರಾಯಣ್ ಅವರು ನಮ್ಮ ಕನ್ನಡ ಬಳಗದ ಮಾಜಿ ಸಾಂಸ್ಕೃತಿಕ ಕಾರ್ಯದರ್ಶಿ ಮತ್ತು ಹೆಸರಾಂತ ನಾಟ್ಯ ಕಲಾವಿದೆ ಸುಮನಾ ನಾರಾಯಣ್ ಅವರ ತಂದೆ. ಅವರ ಈ ಒಂದು ಬರಹಕ್ಕೆ ನಾನು ಆಭಾರಿಯಾಗಿದ್ದೇನೆ. ಆ ವಿಮರ್ಶೆಯನ್ನು ಕೆಳಗೆ ಹಂಚಿಕೊಳ್ಳಲಾಗಿದೆ.
ದಯವಿಟ್ಟು ಓದಿ, ನಿಮ್ಮ ಅನಿಸಿಕೆಗಳನ್ನು (ಕಿರು ವಿಮರ್ಶೆಯನ್ನು !) ಒದಗಿಸಿ

  • ಸಂಪಾದಕ

ಫೋಟೋ ಗೂಗಲ್ ಕೃಪೆ

 ಪುಸ್ತಕ ವಿಮರ್ಶೆ ಎಂಬ ತಕ್ಕಡಿ: ಡಾ ಜಿ.ಎಸ್. ಶಿವಪ್ರಸಾದ್

ಒಂದು ಪುಸ್ತಕವನ್ನು ಓದಿದಾಗ ನಮ್ಮ ಗ್ರಹಿಕೆಗೆ ನಿಲುಕುವ ವಸ್ತು ವಿಷಯಗಳನ್ನು, ವಿಚಾರಗಳನ್ನು ಮೆಲುಕು ಹಾಕಿ ಅದನ್ನು ನಮ್ಮ ಬದುಕಿನ ಅನುಭವಗಳ ಜೊತೆ ನಿಲ್ಲಿಸಿ ಒಂದು ತುಲನಾತ್ಮಕ ಮತ್ತು ವಿಮರ್ಶಾತ್ಮಕ ಒಳನೋಟವನ್ನು ಕಂಡುಕೊಂಡು ಅದನ್ನು ಕ್ರಮಬದ್ಧವಾಗಿ ದಾಖಾಲಾಯಿಸುವುದೇ ವಿಮರ್ಶೆ ಎನ್ನ ಬಹುದು. ಒಂದು ಪುಸ್ತಕದ ಸಾರಾಂಶವನ್ನು ಗ್ರಹಿಸಿ ಆಳಕ್ಕೆ ಇಳಿಯದೆ, ವೈಯುಕ್ತಿಕ ದೃಷ್ಟಿಕೋನವನ್ನು ಹೊರಗಿಟ್ಟು, ಲೇಖಕರ ಆಶಯಗಳ್ನು ಯಥಾವತ್ತಾಗಿ ಬಿತ್ತರಿಸಿದರೆ ಅದು ಪುಸ್ತಕ ಪರಿಚಯವಾಗುತ್ತದೆ, ಒಂದು ವರದಿಯಾಗುತ್ತದೆ. ಒಬ್ಬ ಉತ್ತಮ ವಿಮರ್ಶಕನಿಗೆ ಸಾಹಿತ್ಯದ ಪರಿಚಯವಿರಬೇಕು, ಸಾಹಿತ್ಯ ಸಂವೇದನೆ ಇರಬೇಕು, ಪುಸ್ತಕದಲ್ಲಿನ ಸತ್ವ, ನಿಸ್ಸತ್ತ್ವಗಳನ್ನು ಗುರುತಿಸುವ ಸಾಮರ್ಥ್ಯವಿರಬೇಕು, ಅಲ್ಲೊಂದು ನಿಷ್ಪಕ್ಷಪಾತ ನಿಲುವಿರಬೇಕು ಮತ್ತು ಮುಖ್ಯವಾಗಿ ಪ್ರಾಮಾಣಿಕತೆ ಇರಬೇಕು. 

ಒಂದು ಪುಸ್ತಕವನ್ನು ವಿಮರ್ಶಿಸಲು ಹೊರಟ ವಿಮರ್ಶಕನ (ಓದುಗನ) ಸಾಮಾಜಿಕ -ರಾಜಕೀಯ ನಿಲುವುಗಳು, ಬದುಕಿನ ಅನುಭವ, ತಾನು ಕಂಡುಕೊಂಡ ಬದುಕಿನ ಮೌಲ್ಯಗಳು ಅವನು ಪುಸ್ತಕಕ್ಕೆ ಹೇಗೆ ಸ್ಪಂದಿಸುತ್ತಾನೆ ಎನ್ನುವುದನ್ನು ನಿರ್ಧರಿಸುತ್ತವೆ. ಒಬ್ಬ ಸಾಹಿತ್ಯ ವಿಮರ್ಶಕನಾಗಲು ವಿಶೇಷ ಸಾಹಿತ್ಯ ತರಬೇತು ಬೇಕಾಗಿಲ್ಲ ಮತ್ತು ಸಾಹಿತ್ಯ ವಿದ್ಯಾರ್ಥಿಯಾಗಿ ಅಕ್ಯಾಡೆಮಿಕ್ ಆಗಿರಲೇಬೇಕಿಲ್ಲ, ಒಂದು ವೇಳೆ ಆಗಿದ್ದರೆ ಅದು ಸಹಾಯಕವಾಗಬಹುದು.

ಒಂದು ಕೃತಿ ವಿಮರ್ಶೆಯ ಅಂತಿಮ ಗುರಿ ಎಂದರೆ ಒಂದು ಪುಸ್ತಕದ ಪರಿಚಯದ ಜೊತೆ ಉತ್ತಮ ಸಾಹಿತ್ಯವನ್ನು, ಲೇಖಕರ ವಿಚಾರ ಧಾರೆಯನ್ನು ಸಾಮೂಹಿಕ ಚರ್ಚೆಗೆ ಒಳಪಡಿಸುವುದು. ಕೆಲವು ಕೃತಿಗಳಲ್ಲಿ ಪ್ರಖರವಾದ ವಿಚಾರ ಚಿಂತನೆಗಳು ಇಲ್ಲದಿದ್ದರೂ ಆ ಬರಹಗಳಲ್ಲಿನ ಕಲಾತ್ಮಕತೆ, ಸೃಜನ ಶೀಲತೆ, ಕಥನ ಶೈಲಿ ಮತ್ತು ತಾಂತ್ರಿಕ ವಿಚಾರಗಳ ಬಗ್ಗೆ ವಿಶ್ಲೇಷಣೆ ಮಾಡಬಹುದು. ಸಾಮಾಜಿಕ ವಿಚಾರಗಳನ್ನು ಒಳಗೊಂಡ ಕಥೆ, ಕಾದಂಬರಿ ಕವಿತೆ, ಪ್ರಬಂಧಗಳು ಕೆಲವೊಮ್ಮೆ ಉಗ್ರ ಟೀಕೆಗಳಿಗೆ ಒಳಗಾಗಬಹುದು. ಒಬ್ಬ ಲೇಖಕ ತನ್ನ ಒಂದು ಸಾರ್ವತ್ರಿಕವಲ್ಲದ, ಸಂಕುಚಿತವಾದ, ಆಲೋಚನೆಗಳನ್ನು ಕೃತಿಯಲ್ಲಿ ತರಲು ಪ್ರಯತ್ನಿಸಿದಾಗ ನಮ್ಮ ಐಡಿಯಾಲಜಿಗಳ ಸಂಘರ್ಷಣೆ ಸಾಮಾನ್ಯ. ಚರಿತ್ರೆಯನ್ನು ಆಧರಿಸಿ ಬರೆದಂತಹ ಕೃತಿಗಳು ತೀಕ್ಷ್ಣ ವಿವಾದಕ್ಕೆ ಒಳಪಟ್ಟಿರುವುದನ್ನು ಕಂಡಿದ್ದೇವೆ.  ಚರಿತ್ರೆಯಲ್ಲಿ ದಾಖಲಿಸಿರುವ ವಿಚಾರಗಳು ಎಷ್ಟರ ಮಟ್ಟಿಗೆ ಸತ್ಯ ಎನ್ನುವ ಸಂದೇಹ ಮೂಡಿಬರುವುದು ಸಹಜ. ಹಳೆಯ ಅಪ್ರತಸ್ತುತ ವಿಚಾರಗಳನ್ನು ಆಧರಿಸಿ ಲೇಖಕ ತನ್ನ ಒಂದು ಉದ್ದೇಶಿತ ಆಲೋಚನೆಗಳನ್ನು ಹೇರಲು ಹೊರಟಾಗ ಅದನ್ನು ಓದುಗರು ಮತ್ತು ವಿಮರ್ಶಕರು ಪ್ರಶ್ನಿಸುವುದೂ ಸಹಜವೇ. ವೈಚಾರಿಕ ನಿಲುವಿರುವ, ನಮಗೆ ಪ್ರಸ್ತುತವಾಗುವ, ಸಮಾಜದ ವರ್ತಮಾನ ಸಮಸ್ಯೆಗಳ ಬಗ್ಗೆ ಉಲ್ಲೇಖವಿರುವ,  ಜನರ ನೋವು, ದುಃಖಗಳನ್ನು ಅನುಕಂಪೆಯಿಂದ ಕಾಣುವ, ಸಮಾನತೆ ಮತ್ತು ಇತರ ಮಾನವೀಯ ಮೌಲ್ಯಗಳನ್ನು ಒಳಗೊಳ್ಳುವ ಕೃತಿಗಳು ಸಾಮಾನ್ಯವಾಗಿ ವಿವಾದದಿಂದ ದೂರ ಉಳಿಯುತ್ತವೆ ಮತ್ತು ಹೆಚ್ಚು ಹೆಚ್ಚು ಓದುಗರಿಂದ ಸ್ವೀಕೃತವಾಗುತ್ತವೆ ಎನ್ನಬಹುದು. ವಿಮರ್ಶಕರು ಅದೆಷ್ಟೋ ಕೃತಿಗಳನ್ನು ನೈತ್ಯಾತ್ಮಕವಾಗಿ ವಿಮರ್ಶಿಸಿದ್ದರೂ ಒಂದು ಕೃತಿಗೆ ಪರ -ವಿರೋಧ ಅಭಿಪ್ರಾಯಗಳು ಉಂಟಾಗುವುದು ಸಹಜ. ಲೇಖಕನ ಮತ್ತು ಓದುಗರ ಸಾಮಾಜಿಕ-ರಾಜಕೀಯ, ಎಡಪಂಥ, ಬಲಪಂಥ ನಿಲುವುಗಳೇ ಇದಕ್ಕೆ ಕಾರಣವಾಗಿರುತ್ತದೆ. 

ಓದುಗರು ಕೃತಿಯನ್ನು ಓದಿದ ಮೇಲೆ ವಿಮರ್ಶೆಯನ್ನು ಗಮನಿಸುವುದು ಒಳಿತು. ಇಲ್ಲದಿದ್ದಲ್ಲಿ ನಮ್ಮ ಸ್ವಂತ ಚಿಂತನೆಗಳು ಮೊಳಕೆಯೊಡೆಯುವ ಮೊದಲೇ ವಿಮರ್ಶಕನ ಚಿಂತನೆಗಳು ನಮ್ಮ ಮೇಲೆ ಪರಿಣಾಮಗಳನ್ನು ಬೀರಿ ನಾವು ನಮ್ಮ ಸ್ವತಂತ್ರ ಆಲೋಚನೆಗಳನ್ನು ಕಳೆದುಕೊಳ್ಳಬಹುದು. ವಿಮರ್ಶಕ ಒಂದು ಕೃತಿಯನ್ನು ತನ್ನ ಅಳತೆ ಮಾಪನದಲ್ಲಿ ತೂಗಿ ಇದು ಸರಿ ಇದು ತಪ್ಪು ಎಂದು ಹೇಳಬಹುದು ಆದರೆ ಅದನ್ನು ಒಪ್ಪಿಕೊಳ್ಳಲೇ ಬೇಕಿಲ್ಲ. ಏಕೆಂದರೆ ಅದು ಅವನ ದೃಷ್ಟಿಕೋನ, ಅವನ ಗ್ರಹಿಕೆ.  ಆದರೂ ಒಬ್ಬ ಸೃಜನ ಶೀಲ ಲೇಖಕನಿಗೆ ಒಬ್ಬ ಉತ್ತಮ ವಿಮರ್ಶಕನ ಅಭಿಪ್ರಾಯವನ್ನು ಸ್ವೀಕರಿಸುವ  ಔದಾರ್ಯ ಮತ್ತು ಹೃದಯ ವೈಶಾಲ್ಯವಿರಬೇಕು. ವಿಮರ್ಶಕರು ಗುರುತಿಸಿದ ದೋಷಗಳನ್ನು ತನ್ನ ಮುಂದಿನ ಕೃತಿಯಲ್ಲಿ ಸರಿಪಡಿಸುವ ಮುಕ್ತ ಮನಸ್ಸಿರಬೇಕು. ಒಂದು ಕೃತಿ ಬರೆದ ಕೂಡಲೇ ಅದರ ವಿಮರ್ಶೆ ಕೆಲವೇ ದಿನಗಳಲ್ಲಿ ನಡೆಯಬೇಕು ಎಂಬ ನಿರೀಕ್ಷೆ ಇದ್ದರೂ ಅದಕ್ಕೆ ಕಾಲದ ಮಿತಿಯಿಲ್ಲ. ಶೇಕ್ಸ್ಪಿಯರ್, ಕುವೆಂಪು ಬರೆದ ಕಾವ್ಯ ನಾಟಕಗಳನ್ನು ಇಂದು ವಿಮರ್ಶಿಸಿ ಹೊಸ ಹೊಳಹುಗಳನ್ನು ಕಂಡುಕೊಳ್ಳ ಬಹುದು. ಉದಾಹರಣೆಗೆ ‘ತಬ್ಬಲಿಯು ನೀನಾದೆ ಮಗನೆ’ ಎಂಬ ಭೈರಪ್ಪನವರ ೫೦ ವರ್ಷಗಳ ಹಿಂದಿನ ಕೃತಿಯನ್ನು ನಾನು ಕಳೆದ ಕೆಲವು ವರ್ಷಗಳಲ್ಲಿ ಪುನರವಲೋಕಿಸುವ ಪ್ರಯತ್ನ ಮಾಡಿದೆ. (ಇದು ಅನಿವಾಸಿ ಜಾಲತಾಣದಲ್ಲಿ ಹಿಂದೆ ಪ್ರಕಟಗೊಂಡಿತ್ತು) ಕೆಲವು ಕಾಲಾತೀತವಾದ ಬರಹಗಳು ಬದಲಾಗುತ್ತಿರುವ ಸಮಾಜದ ಹಿನ್ನೆಲೆಯಲ್ಲಿ ಮತ್ತೆ ಪುನರ್ವಿಮರ್ಶೆಗೆ ದಕ್ಕುತ್ತವೆ. ಒಂದು ಕಾಲ ಘಟ್ಟದ ಕೃತಿ ಇನ್ನೊಂದು ಕಾಲಘಟ್ಟದಲ್ಲಿ, ಬೇರೆ ಹಿನ್ನೆಲೆಯಲ್ಲಿ ವಿಮರ್ಶೆಗೆ ಗುರಿಯಾಗಬಹುದು.

ಒಬ್ಬ ವಿಮರ್ಶಕ ಬರೆದ ವಿಮರ್ಶೆಯನ್ನು ಬಹಿರಂಗವಾಗಿ ಹಂಚಿಕೊಳ್ಳಬೇಕು. ಕೆಲವು ಗಮನಾರ್ಹ ಕೃತಿಗಳ ವಿಮರ್ಶೆಗಳು ದಿನ ಪತ್ರಿಕೆಗಳಲ್ಲಿ, ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾಗುತ್ತವೆ.  ಕೆಲವು ಪ್ರಬುದ್ಧ ಪಾಂಡಿತ್ಯಪೂರ್ಣ ವಿಮರ್ಶೆ/ ಚರ್ಚೆಗಳು ಸಾಹಿತ್ಯಕ್ಕೆ ಮೀಸಲಾದ ಸಾಹಿತ್ಯ ಪತ್ರಿಕೆಗಳಲ್ಲಿ ಸಂಭವಿಸುತ್ತವೆ. ಇತ್ತೀಚಿಗೆ ಸೋಷಿಯಲ್ ಮೀಡಿಯಾದ ವಾಟ್ಸ್ ಆಪ್ ಮತ್ತು ಫೇಸ್ಬುಕ್ ತಾಣಗಳಲ್ಲಿ ಕಿರು ವಿಮರ್ಶೆಗಳನ್ನು ಯಥೇಚ್ಛವಾಗಿ ಕಾಣಬಹುದು. ಒಂದು ಕೃತಿ ವಿಮರ್ಶೆಗೆ ಒಳಗಾದರೆ ಅದು ಒಂದು ಪ್ರಚಾರವಾಗಿ ಪರಿಣಮಿಸಿ ಲೇಖಕ ನಿರೀಕ್ಷಿಸದಿದ್ದರೂ ತನಗೆ ತಾನೇ ಸಲ್ಲುವ ಒಂದು ಲಾಭ ಎನ್ನಬಹುದು.

ಒಂದು ರೀತಿ ನಾವೆಲ್ಲರೂ ವಿಮರ್ಶಕರೆಂದು ಭಾವಿಸಬಹುದು. ನಮ್ಮ ದಿನ ನಿತ್ಯ ಬದುಕಿನ ಆಗುಹೋಗುಗಳಲ್ಲಿ ಸಂಭವಿಸುವ ಸಂಗತಿಗಳನ್ನು ನಮ್ಮ ಮನಸ್ಸು ವಿಮರ್ಶಿಸುತ್ತಿರುತ್ತದೆ. ಒಂದು ಒಳ್ಳೆಯ ಟಿವಿ ಸೀರಿಯಲ್ ನೋಡಿದಾಗ, ಒಂದು ಸಿನಮಾಗೆ ಹೋಗಿ ಬಂದಾಗ ನಾವು ಅದರ ವಿಮರ್ಶೆಗೆ ತೊಡಗುವುದು ಸಾಮಾನ್ಯ. 
ನನಗೆ ತಿಳಿದಂತೆ ನನ್ನ ಪತ್ನಿ ಮತ್ತು ಅವಳ ಕೆಲವು ಗೆಳತಿಯರು ಒಂದು ಲೇಡಿಸ್ ಬುಕ್ ಕ್ಲಬ್ ಮಾಡಿಕೊಂಡು ಬುಕರ್ ಪ್ರೈಜ್ ಪಡೆದ ಮತ್ತು ಇತರ ಜನಪ್ರಿಯ ಇಂಗ್ಲಿಷ್ ಕೃತಿಗಳನ್ನು ತಿಂಗಳಿಗೊಮ್ಮೆ ಚರ್ಚಿಸುತ್ತಾರೆ. ಅದೂ ಕೂಡ ಒಂದು ವಿಮರ್ಶೆಯ ಅಂಗವೇ ಎನ್ನ ಬಹುದು. ನಮ್ಮ ಅನಿವಾಸಿ ಬ್ಲಾಗಿನಲ್ಲಿ ಪ್ರಕಟಗೊಳ್ಳುವ ಬರಹಕ್ಕೆ ಬರುವ ಕಾಮೆಂಟುಗಳು ಒಂದು ರೀತಿ ವಿಮರ್ಶೆ ಎನ್ನಬಹುದು. ಒಂದು ಪುಸ್ತಕಕ್ಕೆ ಬರೆದು ಕೊಟ್ಟ ಮುನ್ನುಡಿ ಪ್ರವೇಶ ಪರಿಚಯದ ಜೊತೆಗೆ ಒಂದು ವಿಮರ್ಶೆಕೂಡ ಎನ್ನಬಹುದು. 


ವಿಮರ್ಶೆಯು ಒಂದು ಕಲೆ ಮತ್ತು ಅದು ಪ್ರತಿಭೆಯನ್ನು ಬೇಡುತ್ತದೆ. ವಿಮರ್ಶಕರು ಸಾಹಿತ್ಯವನ್ನು ಸೃಷ್ಠಿಸುವ ಲೇಖಕರಷ್ಟೇ ಮುಖ್ಯ. ಅವರಿಗೂ ಮಾನ್ಯತೆ ಮತ್ತು ಪುರಸ್ಕಾರಗಳ ಅವಶ್ಯಕತೆ ಇದೆ. ಇದನ್ನು ಗಮನದಲ್ಲಿಟ್ಟುಕೊಂಡು ಡಾ.ಜಿ.ಎಸ್.ಎಸ್ ಅವರು ವಿಶ್ವಸ್ಥಮಂಡಳಿ ಎಂಬ ಒಂದು ದತ್ತಿ ಸಂಸ್ಥೆಯನ್ನು ಹುಟ್ಟುಹಾಕಿ ಕಳೆದ ಹತ್ತಾರು ವರ್ಷಗಳಲ್ಲಿ ಪ್ರತಿ ವರ್ಷ ಉತ್ತಮ ವಿಮರ್ಶಕರಿಗೆ ಜಿ. ಎಸ್. ಎಸ್ ಪುರಸ್ಕಾರ ನೀಡಲಾಗುತ್ತಿದೆ. ಈ ಪುರಸ್ಕಾರ ಉತ್ತಮ ಕವಿತೆ ಅಥವಾ ಕಾದಂಬರಿಗಲ್ಲ! ಬದಲಾಗಿ ವಿಮರ್ಶಕರಿಗೆ ಮಾತ್ರ ಮೀಸಲಾಗಿದೆ ಎಂಬ ವಿಚಾರವನ್ನು ಇಲ್ಲಿ ಪ್ರಸ್ತಾಪಿಸುವುದು ಸೂಕ್ತ.

ಒಂದು ಭಾಷೆಯ, ಸಂಸ್ಕೃತಿಯ ಮತ್ತು ಸಾಹಿತ್ಯದ ಆರೋಗ್ಯಕರ ಬೆಳವಣಿಗೆಗೆ ವಿಮರ್ಶೆ ಅತ್ಯಗತ್ಯ. ಓದುಗರ ಮೆಚ್ಚುಗೆ ಮತ್ತು ಉಪಯುಕ್ತ ಸಲಹೆಗಳು ಸಾಹಿತ್ಯದ ಬೆಳವಣಿಗೆಯನ್ನು ರೂಪಿಸುತ್ತವೆ.  ಯಾರೇ ಒಬ್ಬ ಲೇಖಕನಿಗೆ ಓದುಗರ ಅನಿಸಿಕಗಳು ಮೌಲಿಕವಾಗುತ್ತವೆ ಮತ್ತು ಮಾರ್ಗದರ್ಶನ ನೀಡುತ್ತವೆ.  ಒಂದು ಸಮುದಾಯದಲ್ಲಿ ಉತ್ತಮ ಸಾಹಿತ್ಯ ಅಭಿರುಚಿಯನ್ನು ಬೆಳೆಸುವುದರಲ್ಲಿ ವಿಮರ್ಶೆ ಮಹತ್ವವಾದ ಜವಾಬ್ದಾರಿಯನ್ನು ವಹಿಸಿರುತ್ತದೆ.

ಡಾ ಜಿ ಎಸ್ ಶಿವಪ್ರಸಾದ್


* * *   

ಒಂದು ಪುಸ್ತಕ ವಿಮರ್ಶೆ – ಟಿ.ಆರ್. ನಾರಾಯಣ್

(ಅಪ್ಪ ನೆಟ್ಟ ಆಲದ ಮರ ಕೃತಿಯ ವಿಮರ್ಶೆ)  

ಶ್ರೀ  ಟಿ. ಆರ್. ನಾರಾಯಣ್ ರವರ ಕಿರು ಪರಿಚಯ:

ಶ್ರೀ ಟಿ. ಆರ್. ನಾರಾಯಣ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ( ಈಗ ರಾಮನಗರ ಜಿಲ್ಲೆ)ಯ ಮಾಗಡಿ ತಾಲ್ಲೋಕಿನ ತಿಪ್ಪಸಂದ್ರ ಎಂಬ ಗ್ರಾಮದವರು. ಇವರ ಬಾಲ್ಯ ಮತ್ತು ವಿದ್ಯಾಭ್ಯಾಸಗಳನ್ನು ಹೆಚ್ಚಿನಂಶ ಬೆಂಗಳೂರಿನ ಬಸವನಗುಡಿಯ (ಬುಲ್ ಟೆಂಪಲ್ ರಸ್ತೆ) ಪರಿಸರದಲ್ಲಿ ಕಳೆದು ಬಿ. ಎಂ. ಎಸ್. ಇಂಜನಿಯರಿಂಗ್ ಕಾಲೇಜಿನಿಂದ ಎಲೆಕ್ಟ್ರಿಕಲ್ ಇಂಜನಿಯರಿಂಗ್ ಪದವಿಯನ್ನು ಗಳಿಸಿದರು. ನಂತರ ಕರ್ನಾಟಕ ವಿದ್ಯುತ್ಛಕ್ತಿ ಮಂಡಲಿಯಲ್ಲಿ (K E B) ಇಂಜನಿಯರ್ ಆಗಿ ಸುಮರು 26 ವರ್ಷಗಳ ಕಾಲ ಅನುಭವಗಳಿಸಿ (Electrical Systems Planning, Maintenance and Development of Application Software), ಸ್ವಯಂ ನಿವೃತ್ತಿ ಪಡೆದು, ನಂತರ ಟಾಟ ಎನರ್ಜಿ ರಿಸರ್ಚ ಇನ್ಸ್ಟಿಟ್ಯೂಟ್ (Tata Enegy Research Institute) ನಲ್ಲಿ ಸಿನಿಯರ್ ಕನ್ಸಲಟಿಂಗ್ ಇಂಜನಿಯರ್/ಫೆಲೊ ಅಗಿ ಅನುಭವ ಗಳಿಸಿದರು (Energy Systems, Design, Planning and Conservation).

ಹೈಸ್ಕೂಲಿನ ವಿಧ್ಯಾರ್ಥಿ ಜೀವನದಿಂದ ಪ್ರಾರಂಭಿಸಿದ ಸಾಹಿತ್ಯ ಕೃತಿಗಳನ್ನು ಓದುವ ಅಭ್ಯಾಸವನ್ನು   ಸಮಾಯಾವಕಾಶವಾದಾಗ ಮುಂದುವರೆಸಿ ಹೊಸ ಪುಸ್ತಕಗಳನ್ನು ಓದಿ ಸಾಹಿತ್ಯ ಲೋಕಕ್ಕೆ ಪ್ರವೇಶಾನುಭವ ಗಳಿಸಿದರು. ಪ್ರಸಕ್ತ ಬೆಂಗಳೂರು ಹನುಮಂತನಗರದ ನಿವಾಸಿಯಾಗಿ ವಿಶ್ರಾಂತ ಜೀವನದಲ್ಲಿ ಸಾಹಿತ್ಯಾಸಕ್ತರಾಗಿ ಗ್ರಂಥಗಳ ಅಧ್ಯಯನ, ಸಾಹಿತ್ಯ ಚಿಂತನ ಮತ್ತು ಕನ್ನಡದಲ್ಲಿ ಕವನ/ಚುಟುಕ ಗಳ ರಚನೆ ಇತ್ಯಾದಿ ಹವ್ಯಾಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವರ್ಷಕ್ಕೊಮ್ಮೆ ಇಂಗ್ಲೆಂಡಿನ ನಾಟಿಂಗ್ ಹ್ಯಾಮ್ ನಲ್ಲಿರುವ ತಮ್ಮ ಮಗಳ ಮನೆಯಲ್ಲಿ ಕೆಲವು ಕಾಲ ವಾಸಿಸುತ್ತಾರೆ.

* * *

ಡಾ. ಶಿವ ಪ್ರಸಾದ್ ರವರ ಪ್ರಬಂಧ ಸಂಕಲನ, 'ಅಪ್ಪ ನೆಟ್ಟ ಆಲದ ಮರ' ವೈವಿಧ್ಯಮಯ ವಸ್ತುನಿಷ್ಠ ಬರಹಗಳೊಂದಿಗೆ ಮನೋಜ್ಞವಾಗಿ ಮೂಡಿಬಂದಿದೆ, ಜೊತೆಗೆ ಭಾವನಾತ್ಮಕ ಹಾಗೂ ತುಲನಾತ್ಮಕ ವಿಶ್ಲೇಷಣೆಗಳು ಸಹೃದಯ ಓದುಗರನ್ನು ಸಕಾರಾತ್ಮಕ ಚಿಂತನೆಗಳಿಗೀಡು ಮಾಡುವುದರಲ್ಲಿ ಸಫಲವಾಗಿವೆ.

ಈ ಸಂಕಲನದಲ್ಲಿ ಒಟ್ಟು 31 ಪ್ರಬಂಧಗಳಿದ್ದು, ಪ್ರತಿಯೊಂದೂ ತನ್ನ ವಿಶಿಷ್ಟ ಛಾಪಿನಿಂದ ಮುಖ್ಯವೆನಿಸಿ ಮನಸೆಳೆಯುತ್ತದೆ. ಕೆಲವು ಪ್ರಬಂಧಗಳಂತೂ ಓದುಗರ ಮನಸ್ಸಿನಲ್ಲಿ ಗಾಢವಾಗಿ ನೆಲೆಯೂರಿ ವಿಚಾರಾತ್ಮಕ ಪ್ರಜ್ಞೆಯನ್ನು ಪ್ರಚೋದಿಸುವಲ್ಲಿ ಸಫಲವಾಗಿವೆ. ಇಲ್ಲಿನ ಕೆಲವು ಪ್ರಬಂಧಗಳ ಬಗ್ಗೆ ನನ್ನ ಅನಿಸಿಕೆಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ. 

ಹಿರಿಯರೂ, ಪೂಜ್ಯರೂ ಆದ ಕವಿ ನಾಡೋಜ ಶ್ರೀ ಜಿ. ಎಸ್. ಶಿವರುದ್ರಪ್ಪನವರ ನೆನಪಿನ ಕೆಲವು ಪ್ರಬಂಧಗಳು ಅವರ ವಿಶಾಲ ದೃಷ್ಟಿ, ಸಮನ್ವಯ ಭಾವ, ಮತ್ತು ಅವರ ಕವನ/ಕಾವ್ಯಗಳಲ್ಲಿನ ಪ್ರಬುದ್ಧ ಪರಿಪಕ್ವತೆ ಎಲ್ಲವೂ ಮನೋಜ್ಞವಾಗಿ, ಹಾಸುಹೊಕ್ಕಾಗಿ ಆಸಕ್ತಿದಾಯಕವಾಗಿ ಓದಿಸಿಕೊಂಡು ಹೋಗುತ್ತವೆ. ಈ ವಿಚಾರಗಳನ್ನು ಲೇಖಕರು ಪೂರ್ವಾಗ್ರಹರಹಿತ ಪ್ರಬುದ್ಧತೆಯಿಂದ ಮಂಡಿಸಿದ್ದಾರೆ. 

ಕವಿ ಕವಿತೆ ಮತ್ತು ಭಾವಗೀತೆ ಎನ್ನುವ ಪ್ರಬಂಧದಲ್ಲಿ, ಕವಿತೆ ಎಂದರೇನು? ಎಂಬ ಪ್ರಶ್ನೆಗೆ ಉತ್ತರವನ್ನು ಸ್ಪಷ್ಟ ವಾಗಿಯೂ, ನಿರ್ದಿಷ್ಟವಾಗಿಯೂ, ಮನದಟ್ಟಾಗುವಂತೆ, ಅಕರ ಗ್ರಂಥ, ಕವನ/ಕಾವ್ಯಗಳಿಂದ ಪ್ರಬುದ್ಧ ಸಾಲುಗಳನ್ನುದ್ಧರಿಸಿ ವಿಶ್ಲೇಷಿಸಲಾಗಿದೆ. ಡಾ. ಜಿ. ಎಸ್. ಶಿವರುದ್ರಪ್ಪನವರ ಪ್ರೌಢ  ಗ್ರಂಥ ' ಕಾವ್ಯರ್ಥ ಚಿಂತನ' ದಿಂದ ಪ್ರಾರಂಭಿಸಿ ಇಂಗ್ಲೀಷ್ ಕವಿ ಕೋಲ್ರಿಡ್ಜ್, ಶೇಕ್ಸಪಿಯರ್, ಕನ್ನಡದ ರಸಕವಿ ಕುವೆಂಪು, ಮುಂತಾದವರ ಅನುಭವದ ಮೂಸೆಯಲ್ಲಿ ಪಕ್ವಗೊಂಡ ಭಾವ ಸಮ್ಮಿಳನ, ಕವಿ ಮನಸ್ಸಿನ ಒಳತೋಟಿ, ಕಾವ್ಯರಚನೆಗೊದಗುವ ಪ್ರಕೃತಿ ಸೌಂದರ್ಯೋಪಾಸನೆ, ವಸ್ತು ವಿಶೇಷ, ಕಾವ್ಯದಲ್ಲಿ ಅಲಂಕಾರ, ರೂಪಕಗಳ/ಪ್ರತಿಮೆಗಳ ಉಪಯೋಗ ಮುಂತಾದವುಗಳನ್ನು ವಿಸ್ತಾರವಾಗಿ ಚರ್ಚಿಸಲಾಗಿದೆ. ಇವೆಲ್ಲವುಗಳ ಜೊತೆಗೆ ಅಧುನಿಕ ಭಾವಗೀತೆಗಳುದಯ, ಅವುಗಳು ಹಂತ ಹಂತವಾಗಿ ಮಹಾಕಾವ್ಯವಾದ ವಿಸ್ತಾರವನ್ನು ಪಡೆಯಬಹುದಾದ ಸಾಧ್ಯತೆ ಇತ್ಯಾದಿ ವಿವರಗಳನ್ನು ಡಾ. ಪ್ರಭುಶಂಕರ ರವರ ಉದ್ಗ್ರಂಥ 'ಕನ್ನಡದಲ್ಲಿ ಭಾವಗೀತೆ' ಯಿಂದ ಆಯ್ದ ಸಾಲುಗಳ ಸಹಾಯದಿಂದ ವಿಶದೀಕರಿಸಲಾಗಿದೆ.

ವೃತ್ತಿಯಲ್ಲಿ ವೈದ್ಯರಾದ (ಮಕ್ಕಳ ತಜ್ಞರು) ಲೇಖಕರು, ತಮ್ಮ ವಿಶೇಷ ಪರಿಣಿತಿ ಮತ್ತು ಅನುಭವದಿಂದ ಮಕ್ಕಳ ನಟ್ಸ್ ಅಲರ್ಜಿ ಬಗ್ಗೆ ಬರೆದ ಪ್ರಬಂಧ ('ಹಲ್ಲಿದ್ದವರಿಗೆ ಕಡಲೆ ಇಲ್ಲ...') ವೈದ್ಯಕೀಯ ವಿಷಯಗಳನ್ನು ಸರಳವಾಗಿ ಜನ ಸಾಮಾನ್ಯರಿಗೆ ಅರ್ಥವಾಗುವರೀತಿ ವಿವರಿಸಿದ್ದಾರೆ. 

'ನಾಗರಿಕ ಸಮಾಜದ ಕರಾಳ ಚಹರೆ' ಎಂಬ ಪ್ರಬಂಧದಲ್ಲಿ ಮಕ್ಕಳ ಶೋಷಣೆ (ಚೈಲ್ಡ್ ಅಬ್ಯುಸ್) ಬಗ್ಗೆ ವಿವರವಾಗಿ ತಿಳಿಸಿದ್ದಾರೆ. ವಿಷಯ ಪರಿಣಿತರಿಗೆ ಮಾಹಿತಿ ಮತ್ತು ನಿರೂಪಣೆ ಸುಲಭ. ಪರಿಣತರಲ್ಲದವರಿಗೆ ವಿಷಯ ಸಂಗ್ರಹಣೆ ಮತ್ತು ನಿರೂಪಣೆ ಕಷ್ಟ ಸಾಧ್ಯವೆನಿಸಬಹುದು. ಈ ರೀತಿಯ ವಿಷಯ ಪರಿಣಿತ ಲೇಖಕರು ನಮ್ಮಲ್ಲಿ ವಿರಳ. ಇಂಥಹ ಲೇಖಕರ ಸಂಖ್ಯೆ ಬೆಳೆಯಬೇಕು.

ಧರ್ಮ ನಿರಪೇಕ್ಷತೆಯ (Secularism) ಬಗೆಗಿನ ಪ್ರಬಂಧಗಳಾದ 'ರಾಷ್ಟ್ರಪ್ರಜ್ಞೆ ಮತ್ತು ಧರ್ಮಪ್ರಜ್ಞೆ', 'ಇಂಗ್ಲೆಂಡ್ ಜನತೆಯ ಧರ್ಮ ನಿರಾಸಕ್ತಿ...' ಮುಂತಾದವುಗಳಲ್ಲಿ ಮತ/ಧರ್ಮಗಳಾಚರಣೆ ನಂಬಿಕೆಗಳು ವೈಯುಕ್ತಿಕ ವಾಗಿರಬೇಕೆಂದೂ,  ನಿತ್ಯದ ವ್ಯವಹಾರಗಳಲ್ಲಿ ಬೆರಸಿ ಪಕ್ಷಪಾತ ಭಾವನೆ ಸಲ್ಲದೆಂಬ ವಾದವನ್ನು ಪರಿಣಾಮಕಾರಿಯಾಗಿ ಪ್ರತಿಪಾದಿಸಲಾಗಿದೆ.  'ನಮ್ಮ ನಿಮ್ಮ ಪ್ರೊಫೆಸರ್ ನಿಸಾರ್ ಅಹಮದ್' ಎಂಬ ಲೇಖನದಲ್ಲಿ ಪ್ರತಿಭಾವಂತ ಕವಿಯೊಬ್ಬರ ಪರಕೀಯ ಭಾವ ಹಾಗೂ ಅನಾಥ ಪ್ರಜ್ಞೆಯ ಲಕ್ಷಣಗಳನ್ನು ಗುರುತಿಸಿ, ವಲಸಿಗರೂ ಕೂಡ ಇಂತಹಾ ಮನಸ್ಥಿತಿ/ಭಾವನೆಗಳಿಂದ ತೊಳಲಾಡುವ ಪರಿಸ್ಥಿತಿಯನ್ನು ಮನೋಜ್ಞವಾಗಿ ವರ್ಣಿಸಲಾಗಿದೆ. ಈ ನಿಟ್ಟಿನಲ್ಲಿ ಪರಿಹಾರೋಪಾಯವಾಗಿ ಬಸವತತ್ವಗಳನುಷ್ಠಾನ ಸಮಯೋಚಿತವಾಗಿರುವುದನ್ನು ಅವರ ಕೆಲವು ವಚನಗಳ ಆಧಾರದಿಂದ ಸ್ಪಷ್ಟವಾಗಿ ಮೂಡಿಸಲಾಗಿದೆ ('ಅನಿವಾಸಿ ಭಾರತೀಯರಿಗೆ ಬಸವ ತತ್ವದ ಪ್ರಸ್ತುತತೆ' ಎಂಬ ಪ್ರಬಂಧ).

'ವಲಸೆ ಎಂಬ ಕನಸಿನಲ್ಲಿನ ನೋವು ನಲಿವುಗಳು' - ಈ ಪ್ರಬಂಧದಲ್ಲಿ ವಲಸೆಗಾರರ ಒಳತೋಟಿ, ಆಳವಾಗಿ ಬೇರೂರಿದ ಸ್ವದೇಶಪ್ರೇಮ, ಹೊಸ ಪರಿಸರದಲ್ಲಿ ಹೊಂದಾಣಿಕೆಯ ಕಷ್ಟ, ಅನಿವಾಸಿಗಳ ದ್ವಂದ್ವ ಮನೋವಿನ್ಯಾಸದ ಹೊಳಹು ಇತ್ಯಾದಿ ವಿಷಯಗಳನ್ನು ಕೂಲಂಕುಶವಾಗಿ ಚರ್ಚಿಸಿ, ದೇಶ ವಿದೇಶಗಳ ಗಡಿತೊಡೆದು 'ವಿಶ್ವಮಾನವ ಸಂಸ್ಕೃತಿ' ಮತ್ತು ಭಾವನೆಗಳನ್ನು ಬೆಳಸಿಕೊಳ್ಳಬೇಕಾಗಿರುವುದನ್ನು ಪರಿಣಾಮಕಾರಿಯಾಗಿ ವಿವರಿಸಿದ್ದಾರೆ.

ಪ್ರವಾಸ ಕಥನ ಮತ್ತದರ ಮೇಲಿನ ಸೃಜನಾತ್ಮಕ ವಿಮರ್ಶೆಗಳ ಬಗ್ಗೆ ಬರೆದಿರುವ ಲೇಖನಗಳು, ' ಲೇಕ್ ಡಿಸ್ಟ್ರಿಕ್ಟಿನ ಶಿಖರಗಳಲ್ಲಿ ' ಮತ್ತು ' ನೋಟಗಳ ನಡುವಿನ ನಿರ್ದಿಷ್ಟ ನಿಲುವುಗಳು '. ಮೊದಲ ಪ್ರಬಂಧದಲ್ಲಿ ಲೇಖಕ ದಂಪತಿಗಳ ಪ್ರಕೃತಿ ಸೌಂದರ್ಯೋಪಸನಾ ಪ್ರಜ್ಞೆ  ಮತ್ತು  ಪ್ರವಾಸಪ್ರಿಯತೆಗಳಿಗೆ ಕೈಗನ್ನಡಿಯಂತಿದೆ. ಇಂಗ್ಲೆಂಡ್ ನಲ್ಲಿಯ ಲೇಕ್ ಡಿಸ್ಟ್ರಿಕ್ಟ್ ನ ಸುಂದರ ಪರಿಸರ, ಮೇರು ಪರ್ವತ ಶ್ರೇಣಿ ಲ್ಯಾಂಗ್ ಡೇಲ್ ಪೈಕ್, ಸ್ಕೆಲ್ವಿಥ್ ಫೋರ್ಸ್ (ಜಲಪಾತ), ಚೇತೋಹಾರಿ ವಿಂಡರ್ ಮಿಯರ್  ಬಟರ್ ಮಿಯರ್ ಮತ್ತು ಮನೋಹರ ತಾಣ ಎಲ್ಟರ್ ವಾಟರ್ ಸರೋವರಗಳು, ಮತ್ತಿತರ ಸ್ಥಳಗಳ ವರ್ಣನೆ ಕಣ್ಣಿಗೆ ಕಟ್ಟಿದಂತಿದೆ. ಎರಡನೆಯ ಪ್ರಬಂಧದಲ್ಲಿ ಡಾ॥ ಕೆ. ಮರುಳ ಸಿದ್ದಪ್ಪ (ಕೆ. ಎಂ. ಎಸ್.) ಅವರ ಪ್ರವಾಸ ಕಥನದ ಪುಸ್ತಕದ ಬಗೆಗಿನ ಲೇಖರ ಅನಿಸಿಕೆಗಳನ್ನು ದಾಖಲಿಸುತ್ತಾ, ಶ್ರೀ ಜಿ. ಎಸ್. ಎಸ್. ಅವರ 'ಇಂಗ್ಲೆಂಡಿನಲ್ಲಿ ಚತುರ್ಮಾಸ' ಎಂಬ ಪ್ರವಾಸ ಕಥನದ ಪುಸ್ತಕದ ಬಗ್ಗೆ ಹೇಳುತ್ತಾ, ಇಳಿ ವಯಸ್ಸಿನಲ್ಲೂ ಪ್ರವಾಸ ಪ್ರಿಯರಾಗಿದ್ದುದು ಮತ್ತವರ ಪ್ರವಾಸ ಪ್ರಿಯರಲ್ಲದವರ ನಿರುತ್ಸಾಹ ' ವಿನಾಯಕ ಪ್ರಜ್ಞೆ ' ಎಂಬ ಉಲ್ಲೇಖ  ನೆನಪಿಸಿಕೊಂಡು ಹೊಸ ಭಾಷಾವೈಶಿಷ್ಟ ವೊಂದನ್ನು ಛಾಪಿಸಿದ್ದಾರೆ.

ವ್ಯಕ್ತಿ ಚಿತ್ರ (ಪರಿಚಯಾತ್ಮಕ) ಲೇಖನಗಳಾದ  'ನನ್ನ ನೆನಪಿನಲ್ಲಿ ಮಾಸ್ಟರ್ ಹಿರಣ್ಣಯ್ಯ' ಮತ್ತು ' ಪ್ರಧಾನಿ ರಿಷಿ ಸುನಾಕ್ - ಬ್ರಿಟನ್ ಕಂಡ ಅಪೂರ್ವ ಪ್ರತಿಭೆ', ಸುಂದರವಾಗಿ ಮೂಡಿ ಬಂದಿವೆ. ಮೊದಲ ಪ್ರಬಂಧದಲ್ಲಿ ಕೊನೆಯಲ್ಲಿ ಉದ್ಧರಿತ ಮಾಸ್ಟರ್ ಹಿರಣ್ಣಯ್ಯನವರ ಉಲ್ಲೇಖ ಅವರ ಸರಳ ವ್ಯಕ್ತಿತ್ವಕ್ಕೆ ಸಂದರ್ಭೋಚಿತವಾಗಿ ಹೊಂದಿಕೊಂಡಿದೆ. ಎರಡನೆಯ ಪ್ರಬಂಧದಲ್ಲಿ ಆಂಗ್ಲ ಜನಾಂಗದ ಹೊರಗಿನ ಭಾರತೀಯ ಮೂಲದ ಒಬ್ಬ ವ್ಯಕ್ತಿ ಬ್ರಿಟನ್ನಿನ ಪ್ರಧಾನಿ ಪಟ್ಟಕ್ಕೇರಿರುವುದು, ಆ ದೇಶದಲ್ಲಿನ ಜನರ ವಿಶಾಲ ಮನೋಭಾವ, ಅಲ್ಲಿ ವ್ಯಕ್ತಿಗತ  ಪ್ರತಿಭೆ ಮತ್ತು ಸಾಮರ್ಥ್ಯಕ್ಕೆ ಸಿಗುವ ಮಹತ್ವಗಳನ್ನು ಬಿಂಬಿಸುತ್ತವೆ. ಲೇಖಕರು ಜಗತ್ತಿನ ಇಂತಹ ಇನ್ನಿತರ ರಾಜಕೀಯ ನಾಯಕರ ಉದಾಹರಣೆ ನೀಡುತ್ತಾ ಮತ್ತೊಮ್ಮೆ  'ವಿಶ್ವ ಮಾನವ ಸಂಸ್ಕೃತಿ'ಯನ್ನು ವಿಶ್ಲೇಷಿಸುತ್ತಾರೆ.

 ವಿಮರ್ಶಾತ್ಮಕ ಲೇಖನಗಳಾದ 'ಬಳ್ಳಿಗೆ ಕಾಯಿ ಭಾರವೆ' ಮತ್ತು 'ಬಾಂಬೆ ಬೇಗಂ' ಕ್ರಮವಾಗಿ ಚಲನಚಿತ್ರ ಹಾಗೂ ದೂರದರ್ಶನದ ಧಾರಾವಾಹಿಗಳ ಸೃಜನಶೀಲವಾದ ಬರಹಗಳಾಗಿವೆ. ಲೇಖಕರ ಮಾನವೀಯ ಕಾಳಜಿಗಳ ಅನಾವರಣವಾಗಿವೆ.

ಇನ್ನಳಿದ ಪ್ರಬಂಧಗಳೆಲ್ಲವೂ ಆಸಕ್ತಿದಾಯಕವಾಗಿದ್ದು ಸುಲಲಿತವಾಗಿ ಓದಿಸಿಕೊಂಡು ಹೋಗುತ್ತವೆ. ಈ ಪ್ರಬಂಧಗಳಲ್ಲಿ ಎಲ್ಲೆಲ್ಲೂ ಲೇಖಕರ ಕನ್ನಡ ಪ್ರೇಮ ಹಾಸುಹೊಕ್ಕಾಗಿ ಸೇರಿದೆ.

ವಿವಿಧ ವಸ್ತು ವಿಷಯಗಳನ್ನೊಳಗೊಂಡಿರುವ ಈ ಪ್ರಬಂಧಗಳು ಲೇಖಕರ ಬಹುಮುಖ ಪ್ರತಿಭೆಯನ್ನು ಅನಾವರಣಗೊಳಿಸುವಲ್ಲಿ ಸಫಲವಾಗಿವೆ.

***