ದೀಪಾವಳಿ ಕವಿತೆ ಮತ್ತು ಅನಬೆಲ್ಲ ಹೇಳಿದ ಅಮರಾಂತೆ ಕಥೆ.

ಎಳ್ಳೆಣ್ಣೆಯ ಎರಡು ದೀಪ. 
            _ ಡಾ. ದಾಕ್ಷಾಯಿಣಿ ಗೌಡ 


ಈ ಬಾರಿ,ಹೊಸ ಪರಿಯ ಕಳಕಳಿ
ನಮ್ಮ ನಿಮ್ಮೆಲ್ಲರ ಈ ದೀಪಾವಳಿ

ನಮ್ಮೂರಲ್ಲಿ, ಗೃಹಜ್ಯೋತಿಯ ಆಗಮನ,
ಆದರೇನು, ಯೂನಿಟ್ನ ಮಿತಿಮೀರದೆಡೆ ಗಮನ
ಸಾಮಾನ್ಯರಿಗೆ ಎಣ್ಣೆ ಬಲು ದುಬಾರಿ,
ಸರ್ಕಾರದ ಖರ್ಚಿನಲ್ಲಿ ಕೋಟಿ ದೀಪಗಳ ಅದ್ದೂರಿ.
ಮನೆಮುಂದೆ ಮಿನುಗುತ್ತಿದೆ ಎಳ್ಳೆಣ್ಣೆಯ ಎರಡು ದೀಪ.

ಈ ಊರಲ್ಲೂ ಬಗ್ಗುತ್ತಿಲ್ಲ ಹಣದುಬ್ಬರ
ಕೈಗೆಟುಕದು ಬಡತನಕೆ ವಿದ್ಯುತ್ ದರ.
ಬಿಸಿ ಊಟ, ಬಿಸಿಗಾಳಿ ಆಶಿಸುವ ಎದೆ, ಉದರ,
ಎಚ್ಚರಿಕೆ, ಕೂಗುತಿದೆ, ಹಿಮಗಾಳಿಯ ಅಬ್ಬರ.
ಮನೆಮುಂದೆ ಮಿನುಗುತ್ತಿದೆ ಎಳ್ಳೆಣ್ಣೆಯ ಎರಡು ದೀಪ.

ಕಾಂಚಾಣ ಕುಣಿಸಿದಂತೆ ಆಡುವ, ತೂಗುವ ಬೆಳಕು,
ಗಗನ ಕುಸುಮ, ಬಡತನಕೆ, ಬಹುದೀಪಗಳ ಥಳುಕು.
ಲಕ್ಷದೀಪವಿರಲಿ, ಕಗ್ಗತ್ತಿನ ಕತ್ತಲಿರಲಿ ಹೊರಗೆ,
ಮಿನುಗಲಿ ನಿಮ್ಮ ನಮ್ಮೊಳಗೆ ಆನಂದದ ದೀಪ,
ಹೊಸಬಗೆಯ ಬೆಳಕಲಿ, ಬೆಳಗಲಿ ನಮ್ಮ ಸೃಷ್ಟಿಯ ದ್ವೀಪ.

ಅನಬೆಲ್ಲ ಹೇಳಿದ ಅಮರಾಂತೆ ಕಥೆ - ಡಾ.ಮುರಳಿ ಹತ್ವಾರ್ 
                     

ಅಮರಾಂತೆ ಪೋರ್ಚುಗಲ್ಲಿನ ಒಂದು ಸಣ್ಣ ಊರು. ಅದರ ಮಧ್ಯದಲ್ಲೊಂದು ನದಿ, ಅದರ ಹೆಸರು ತಮೆಗಾ. ಡ್ಯುರೋ ನದಿಯ ಉಪನದಿಯಾದ ಇದರ ಒಂದು ಕಡೆ ಈಗ ಹೊಟೇಲಾಗಿರುವ ಹಳೇ  ಕಾಲದ ಶ್ರೀಮಂತನ ಬಂಗಲೆ ಮತ್ತದರ ಸುತ್ತ ಬೆಳೆದ ಮನೆಗಳು, ಅಂಗಡಿಗಳು ಇತ್ಯಾದಿ. ಇನ್ನೊಂದು ಕಡೆ, ಸಂತ ಗೋನ್ಸಾಲನ ಇಗರ್ಜಿ ಮತ್ತದರ ಹಿಂದೆ ಯಾವತ್ತೋ ಇದ್ದ ಕಾಡನ್ನು ಮರೆಸಿ ಬೆಳೆದ ಊರು. ಮಧ್ಯದಲ್ಲೊಂದು ಅವೆರಡನ್ನೂ ಸೇರಿಸುವ ಹಳೆಯ ಬ್ರಿಡ್ಜ್ . ಸುಮಾರು  ೭೦೦ ವರ್ಷದ ಹಿಂದೆ ಇದ್ದ, ಮೊದಲು ಪಾದ್ರಿಯಾಗಿ, ಆಗಾಗ ಪವಾಡ ಮಾಡಿ, ದೊಡ್ಡ ಮೊನಾಸ್ಟರಿಯೊಂದನ್ನು ಕಟ್ಟಿ, ಕಡೆಗೆ ಸಂತರಾದ ಗೋನ್ಸಾಲರ ಇಗರ್ಜಿಯ ಅಮರಾಂತೆ ಈಗ ಪೊರ್ಟೊ ನಗರದಿಂದ ಡ್ಯುರೋ ಕಣಿವೆಗೆ ಮುಂಜಾನೆ ಹೊರಟು ಸಂಜೆಗೆ ಮರಳುವ ಪ್ಯಾಕೇಜ್ ಟೂರಿಗರಿಗೆ ಮೊದಲು ಸಿಗುವ ಸ್ಟಾಪ್. 

ಪೊರ್ಟೊ ದಲ್ಲಿ ಮುಂಜಾನೆ ಎಂಟಕ್ಕೆ ಟೂರಿನ ಮಿನಿ ಬಸ್ ಆಫೀಸಿಗೆ ವಿಧೇಯ ವಿದ್ಯಾರ್ಥಿಗಳಂತೆ ಅರ್ಧ ಗಂಟೆ ಮುಂಚೆಯೇ ತಲುಪಿದ್ದ ನಮಗೆ, ಅಲ್ಲಿನ ಏಜೇಂಟ್ ಒಬ್ಬ ನಮ್ಮ ಬಸ್ ನಂಬ್ರ ೧೯ ಮತ್ತು ಗೈಡ್ ಅನಬೆಲ್ಲ ಎಂದು ಪ್ರಿಂಟಾದ ಚೀಟಿ ಕೊಟ್ಟ. ಅದಾಗಿ ಸ್ವಲ್ಪ ಹೊತ್ತಿಗೆ ಆ ಬಸ್ಸು ಮತ್ತದರೊಟ್ಟಿಗೆ ಬಂದಿಳಿದ ಮಧ್ಯ ವಯಸ್ಸಿನ ಸ್ಥೂಲ ಕಾಯದ ಅನಬೆಲ್ಲ, ಗಟ್ಟಿ ದನಿಯಲ್ಲಿ ಬಸ್ಸಿನ ನಂಬ್ರ ಮತ್ತೆ ಹೊರಡುವ ಟೈಮನ್ನು ಮೊದಲು ಇಂಗ್ಲಿಷಿನಲ್ಲೂ ನಂತರ ಫ್ರೆಂಚಿನಲ್ಲೂ ಕೂಗಿ, ಆ ಕರೆಗೆ ಕಾದವರಂತೆ ಗಡಿಬಿಡಿಯಲ್ಲಿ ಅನಬೆಲ್ಲ ಸುತ್ತ ಸೇರಿದ ಜನರನ್ನ ಬಸ್ಸೇರಿಸಿ, ಕಡೆಗೆ ತಾನೂ ಹತ್ತಿ ಮುಂದಿನ ಸೀಟಿನಲ್ಲಿ ಕುಳಿತು,  ಕೈಗೊಂದು ವಯರಿನ ಮೈಕೆಳೆದುಕೊಂಡು ಮಾತು ಶುರುಮಾಡಿದಳು. 

ಅವಳ ಮಾತುಗಳು ರೆಕಾರ್ಡೆಡ್ ಟೇಪಿನಂತೆ ಇಂಗ್ಲಿಷ್-ಫ್ರೆಂಚ್ ತಾಳದಲ್ಲಿ ಬಸ್ಸಿನ ಕಿಟಕಿಯಾಚೆ ಕಾಣುವ ಐತಿಹಾಸಿಕ ಕಟ್ಟಡಗಳು, ಬ್ರಿಡ್ಜುಗಳು, ಸುರಂಗಳು ಅವನ್ನೆಲ್ಲ ಆದಷ್ಟು ಕಡಿಮೆ ಶಬ್ದಗಳಲ್ಲಿ ಹೇಳುತ್ತಾ, ಮಧ್ಯೆ ಮಧ್ಯೆ ನಗೆ ತಾರದ  ಜೋಕುಗಳನ್ನು ಉರುಳಿಸುತ್ತಾ, ಆದಷ್ಟು ಮೊಬೈಲ್ ಫೋನಿನಲ್ಲಿ ಅದ್ದಿದ ಮುಖಗಳನ್ನು ಹೊರ ತೆರೆಯಲು ಪ್ರಯತ್ನಿಸುತ್ತಿದ್ದಳು. ಕಡೆಗೊಮ್ಮೆ ಬಸ್ಸು ನಿಧಾನಿಸಿ ನಿಂತಾಗ, ಎಲ್ಲರನ್ನು ಕೆಳಗಿಳಿಸಿ, ಪಕ್ಕದ ಕಟ್ಟೆಯ ಮೇಲೆ ನಿಂತು, ಕೆಳಗೆ ಹರಿಯುತ್ತಿದ್ದ ತಮೆಗಾ ನದಿಯ ಪರಿಚಯವನ್ನೂ, ಗೋನ್ಸಾಲರ ಇಗರ್ಜಿಯನ್ನೂ ತೋರಿಸಿ, ಮುಕ್ಕಾಲು ಘಂಟೆಯೊಳಗೆ ಎಲ್ಲ ಸುತ್ತಿ, ಫೋಟೋದಲ್ಲಿ ಕಟ್ಟುವಷ್ಟು ಕಟ್ಟಿ, ಮತ್ತೆ ಬಸ್ಸಿನಲ್ಲಿರಬೇಕೆಂದು ಅಪ್ಪಣಿಸಿದಳು. ಅಷ್ಟಕ್ಕೇ ನಿಲ್ಲಿಸದೆ, ತನ್ನ ಮೊಬೈಲಿನಲ್ಲಿದ್ದ ಫೋಟೋವೊಂದನ್ನು ಗುಂಪಿನ ಎಲ್ಲ ಅಡಲ್ಟಿಗರಿಗೆ ತೋರಿಸುತ್ತ, ಅವರ ನಾಚಿಕೆಯ, ಆಶರ್ಯದ ನಗುವಿಗೆ ತಾನು ನಗುತ್ತ, ಅದೊಂದು ಜೋಕು ಎಂದಳು. ಅವಳು ತೋರಿಸಿದ ಆ ಫೋಟೋದ ಮರ್ಮ ಮತ್ತು ಅದರ ಹಿಂದಿನ ಜೋಕು ಆಗ ಅರ್ಥವಾಗಿರಲಿಲ್ಲ. ಸುಮ್ಮನೆ ನಕ್ಕೆವು. 

ಅನಬೆಲ್ಲ ಹೇಳಿದಂತೆ, ಆ ಹಳೆಯ ಬ್ರಿಡ್ಜಿನತ್ತ ನಡೆದು, ಅದರ ಮೇಲೆ ನಿಂತು ಆಚೆ ಈಚೆಯ ಕಟ್ಟಡಗಳನ್ನು, ಕೆಳಗೆ ಹರಿಯುತ್ತಿರುವ ನದಿಯ ಹರಿವನ್ನೂ ನೋಡುತ್ತಾ, ಗೊನ್ಸಾಲರು ತಮ್ಮ ಪವಾಡದಲ್ಲಿ ಮೊದಲು ಕಟ್ಟಿದ, ಆನಂತರ  ೧೭-೧೮ ಶತಮಾನದಲ್ಲಿ ಮತ್ತೆ ಹೊಸದಾಗಿ ಕಟ್ಟಿದ, ನೆಪೋಲಿಯನ್ನಿನ ಕಾಲದಲ್ಲಿ ನಡೆದ ಹೋರಾಟದಲ್ಲಿ ಸಿಡಿದ ಗುಂಡುಗಳ ಕಲೆಯನ್ನ ಇನ್ನೂ ಸಾಕಿರುವ ಆ ಬ್ರಿಡ್ಜನ್ನು ದಾಟಿ, ಅಮರಾಂತೆಯ ಸಂತರ ಇಗರ್ಜಿಯತ್ತ ನಡೆದ ನಮಗೆ, ಮೊದಲು ಕರೆದದ್ದು ಅಲ್ಲಿನ ಕಾರ್ ಪಾರ್ಕಿನ ಪಕ್ಕದ ಸಣ್ಣ ತೋಟದಲ್ಲಿ ದೊಡ್ಡದಾಗಿ ಇಂಗ್ಲಿಷ್ ಅಕ್ಷರಗಳಲ್ಲಿ ನಿಲ್ಲಿಸಿಟ್ಟ AMARANTE. ಬಣ್ಣ ಬಣ್ಣದ ಆ ದೊಡ್ಡ ಅಕ್ಷರಗಳ ಮುಂದೆ ನಿಂತು ಫೋಟೋದಲ್ಲಿ ನಮ್ಮ ಜೊತೆ ಅದನ್ನು ಸೇರಿಸಿ ಹೊರನಡೆಯುವಾಗ, ಪಕ್ಕದಲ್ಲೇ ಚಪ್ಪರವೊಂದರ ಕೆಳಗೆ ಒಂದಿಷ್ಟು ಸಾಮಾನುಗಳನ್ನು ಮಾರುತ್ತಿದ್ದ, ಆ ಕಾರ್ ಪಾರ್ಕಿನ ಒಂದೇ ಅಂಗಡಿಯತ್ತ, ಅಲ್ಲಿನ 'ವಿಶಿಷ್ಣ' ಆಕಾರದ, ಪ್ಲಾಸ್ಟಿಕಿನಲ್ಲಿ ಸುತ್ತಿಟ್ಟ ವಸ್ತುಗಳನ್ನ ಏನೆಂಬ ಕುತೂಹಲದಲ್ಲಿ ನೋಡಲು ಹತ್ತಿರ ಹೋದೆವು. ಅಲ್ಲಿದ್ದದ್ದು, ಅನಬೆಲ್ಲ ಫೋನಿನಲ್ಲಿ ಜೋಕೆಂದು ತೋರಿಸಿದ ಆಕಾರದ ಸಣ್ಣ, ದೊಡ್ಡ, ಗಟ್ಟಿ, ಮತ್ತು ಮೆತ್ತನೆಯ ವೆರೈಟಿಯ ಕೇಕುಗಳು. 

ಆ ಕೇಕುಗಳ ದರ್ಶನದಿಂದ ಮನಸ್ಸಿನಲ್ಲಿ ಕುಣಿಯುತ್ತ ಮುಖದಲ್ಲಿ ಹೊರಬರಲು ಯತ್ನಿಸುತ್ತಿದ್ದ ಚೇಷ್ಟೆಯ ಹುಡುಗುತನವನ್ನ ಸ್ವಲ್ಪ ಬದಿಗಿಟ್ಟು, ಆ ಅಂಗಡಿಯ ಒಡತಿಗೆ, ಆ ಕೇಕುಗಳ ಆಕಾರದ ಹಿಂದಿನ ಕಥೆ ಏನೆಂದು ಕೇಳಿದೆವು. ನಮ್ಮ ಇಂಗ್ಲೀಷು ಆಕೆಯ ಪೋರ್ಚುಗೀಸು ನಡುವೆ ಯಾವುದೇ ಸೇತುವೆ ಇಲ್ಲದ ಕಾರಣ, ಕೈ ಸನ್ನೆಯಲ್ಲಿ ಒಂದು ಕೇಕಿನ ದುಡ್ಡು ಕೇಳಿ, ಕೊಂಡು, ಸಕ್ಕರೆಯ ಐಸಿಂಗಿನ ಆ ಕೇಕಿನ ಪ್ಲಾಸ್ಟಿಕಿನ ಬಂಧನದಿಂದ ಹೊರ ತಂದು, ತರತರದಲ್ಲಿ ಕೈಯಲ್ಲಿ ಹಿಡಿದು, ಫೋಟೋ ಮತ್ತು ವಿಡಿಯೋಗಳಲ್ಲಿ ಅದನ್ನು ವರ್ಣಿಸಿ, ಆಪ್ತ ಗೆಳೆಯರ ವಾಟ್ಸಪ್ಪ್ ಗುಂಪಿಗೆ ಆ  ಕೇಕನ್ನು ವಿಡಿಯೋದ ಮೂಲಕ ಅರ್ಪಿಸಿ, ಮುನ್ನಡೆದೆವು. ಆಗ ಮಾತೆಲ್ಲ ಆ ಕೇಕು ಹುಟ್ಟಿದ, ಮತ್ತೆ ಹೀಗೆ ದಿನ ದಿನ ಅಮರಾಂತೆಯ ಹಲವು ಓವನ್ನು ಗಳಲ್ಲಿ ಬೇಯುತ್ತಿರುವ ಅದರ ಅವತಾರಗಳ ಹಿಂದಿನ ಕಾರಣಕ್ಕೆ ನಮ್ಮ ಊಹೆಯ ಪಟ್ಟಿ. 

ಹಾಗೆ ಪಕ್ಕದ ಇಗರ್ಜಿಯ ಮುಂದಿಷ್ಟು ಭಂಗಿಗಳಲ್ಲಿ ನಮ್ಮನ್ನು ಫ್ರೇಮಿಸಿಕೊಂಡು, ಬ್ರಿಡ್ಜಿನ ಮೊದಲ ಬದಿಗೆ ಮರಳಿ, ಪಕ್ಕದ ಬೀದಿಯಲ್ಲಿ ಕಾಪಿಯ ಬಾಯಾರಿಕೆಗೆ ಹೊರಟ ನಮಗೆ ಮತ್ತೆ ಅಲ್ಲಿನ ಟೂರಿಸ್ಟ್ ಅಂಗಡಿಗಳ ಮ್ಯಾಗ್ನೆಟ್ಟುಗಳಲ್ಲಿ, ಹಾಗೆಯೇ ಆ ಬೀದಿಯ ಕೆಲವು ಬೇಕರಿಗಳಲ್ಲಿ ಮತ್ತದೇ ಕೇಕಿನ ದರ್ಶನ. ಬೇಕರಿಯ ಕೇಕುಗಳಿಗೆ ಸಕ್ಕರೆಯ ಕವಚವಿದ್ದರೆ, ಮ್ಯಾಗ್ನೆಟಿನ ಚಿತ್ರಗಳ ಕೇಕಿನ ಮೇಲೆ ಒಂದು ಹಲ್ಲಿ. ಆ ಮ್ಯಾಗ್ನೆಟ್ಟನ್ನು ಕೊಂಡುಕೊಳ್ಳುವಷ್ಟು ಧೈರ್ಯ ಬರಲಿಲ್ಲ. ಯಾವತ್ತಿನಂತೆ ಮೊಬೈಲಿನ ಕ್ಯಾಮರಾಕ್ಕೆ ಸೇರಿಸಿಕೊಂಡೆವಷ್ಟೇ. ಅಷ್ಟರಲ್ಲಿ ಸಮಯದ ಮುಳ್ಳು ಅನಬೆಲ್ಲ ಹಾಕಿದ ಗೆರೆ ಮುಟ್ತುತ್ತಿದ್ದರಿಂದ, ಅವಸರದಲ್ಲಿ ಕಾಪಿ ಕಪ್ಪು ಹಿಡಿದು ಬಸ್ಸಿನತ್ತ ಓಡಿದಂತೆ ನಡೆದೆವು. 

ಬಸ್ಸಿನ ಬಾಗಿಲಿನ ಪಕ್ಕ ನಿಂತಿದ್ದ ಅನಬೆಲ್ಲಳ ಹತ್ತಿರ ಅಮರಾಂತೆಯ ಕೇಕಿನ ಕಥೆ ಮತ್ತೆ ಕೇಳಲು, ಅವಳು ಅದರ ಹೆಸರು ಸಂತ ಗೊನ್ಸಾಲಿನ್ಹೋ ಎಂದೂ, ಹಾಗೆಂದರೆ 'ದಿ ಲಿಟಲ್ ಗೋನ್ಸಾಲ್' ಎಂದರ್ಥವೆಂದೂ, ಮತ್ತೆ ಒಂದು ಕಾಲದಲ್ಲಿ ಅತಿ ಪ್ರಬಲವಾಗಿದ್ದ ಚರ್ಚಿನ ಹಿಡಿತದ ವಿರುದ್ಧ ಯಾವಾಗಲೋ ಸಿಡಿದೆದ್ದ ರೆಬೆಲಿಗರು, ಅವರ ಕೋಪ ಮತ್ತೆ ವ್ಯಂಗ್ಯವನ್ನು ವ್ಯಕ್ತಪಡಿಸಲು ಮೊದಮೊದಲು ಈ ಕೇಕನ್ನು ಬೇಯಿಸಿದರೆಂದೂ, ಹಾಗೆ ಬರುಬರುತ್ತ ಅದು ಅಮರಾಂತೆಯ ಜೋಕಿನ  ಕೇಕಾಗಿ ಬಿಟ್ಟಿದೆ ಎಂದೆಲ್ಲ ವಿವರಿಸಿದಳು. ಅಷ್ಟಕ್ಕೇ ನಿಲ್ಲದೆ, ಆ ಕೇಕನ್ನು ತಿಂದವರಿಗೆ ಅವರಿಷ್ಟದ 'ಲವ್' ಸಿಗುತ್ತದೆ ಎಂದು ಜೋರಾದ ನಗುವಿನಲ್ಲಿ ಹೇಳುತ್ತಾ ಬಸ್ಸು ಹೊರಡಿಸಿದಳು. 

ಅವಳ ವಿವರಣೆ, ಸಮಾಜದ ಪ್ರಬುದ್ಧತೆಗೆ ಅನುಗುಣವಾಗಿ ಹೋರಾಟದ ಮಜಲುಗಳು ವ್ಯಕ್ತವಾಗುವ ರೀತಿ, ಅವುಗಳ ಹಿಂದಿನ ಪ್ರೇರಣೆ ಮತ್ತು ಧೈರ್ಯವನ್ನು ಮೆಚ್ಚುತ್ತ, ವಿಮರ್ಶಿಸುತ್ತಾ, ನೆನಪಿನ ಕೊಟ್ಟೆಯಲ್ಲಿ ಬೇರೆ ಬೇರೆ ರೀತಿಯಲ್ಲಿ ಅಮರಾಂತೆಯನ್ನ ಮಡಿಚಿಡುತ್ತಿದ್ದವು. ಅಮರಾಂತೆಯನ್ನು ದಾಟಿದ ಮೇಲೂ ತಣಿಯದ ಕುತೂಹಲದಲ್ಲಿ ಹುಡುಕಿದ ವಿಕಿಪಿಡಿಯಾದಲ್ಲೂ ಅನಬೆಲ್ಲ ಕಥೆಯಷ್ಟು ವಿವರಗಳಿರಲಿಲ್ಲ. ಆದರೆ, 'ಸಂತ ಗೊನ್ಸಾಲಿನ್ಹೋ'  ಚಿತ್ರವಿದೆ ಅಲ್ಲಿ, ಬೇಕಾದರೆ, ಸಣ್ಣ ಮಕ್ಕಳು ಪಕ್ಕ ಇಲ್ಲದಿದ್ದಾಗ ಸೈಲೆಂಟಾಗಿ ನೋಡಿ ನಮಸ್ಕರಿಸಿಬಿಡಿ.  

ನವೋಲ್ಲಾಸದ ನವರಾತ್ರಿ

ನಮಸ್ಕಾರ ಅನಿವಾಸಿ ಬಂಧುಗಳೇ. ತಮಗೆಲ್ಲರಿಗೂ ನಾಡಹಬ್ಬದ ಹಾರ್ದಿಕ ಶುಭಾಶಯಗಳು. ತಾಯಿ ಭುವನೇಶ್ವರಿಯ ಕೃಪೆ ನಮ್ಮೆಲ್ಲರನ್ನು ಪೊರೆಯಲಿ. 
 ಇಂದಿನ ಸಂಚಿಕೆಯಲ್ಲಿ ನಮ್ಮ ಹೆಮ್ಮೆಯ ಹಾಡುಗಾರ್ತಿ ಅಮಿತಾ ಅವರು ನವರಾತ್ರಿಗೆಂದೇ ವಿಶೇಷವಾಗಿ ಹಾಡಿದ 'ಶಕ್ತಿ' ಎಂಬ ವರಕವಿಯ ಹಾಡು ನಿಮಗಾಗಿ. ಅಪರೂಪದ ಹಾಡು- ಅತ್ಯಪರೂಪದ ಹಾಡುಗಾರಿಕೆ. ಕೇಳಿ ಆನಂದಿಸಿ. ಆಸಕ್ತರಿಗಾಗಿ ಹಾಡಿನ ಸಾಹಿತ್ಯವೂ ಸಹ ಇದೆ.
ನಾನು ಗೌರಿಪ್ರಸನ್ನ , ಅಂದಿನಿಂದ ಇಂದಿನವರೆಗಿನ ನಾ ಕಂಡ ನವರಾತ್ರಿಯ ನೆನಪಿನ ಮೆರವಣಿಗೆಯನ್ನು ನಿಮಗೂ ತೋರಿಸಬಂದಿದ್ದೇನೆ. ನೋಡಿ ನಿಮ್ಮ ನೆನಪುಗಳೂ ಹೊರಗಿಣುಕಿದರೆ ನಮಗೂ ತೋರಿಸಿ. ಎಲ್ಲ ಸೇರಿ ಖುಷಿಪಡೋಣ. ಖುಷಿಯೇ ತಾನೇ ನಿಜದ ಹಬ್ಬ? 

~ ಸಂಪಾದಕಿ

ಶಕ್ತಿ

ನಮಸ್ತೇ,
ಈ ಸಲದ ಶರನ್ನವರಾತ್ರಿಯ ಸಂಭ್ರಮದಲ್ಲಿ ಬೇಂದ್ರೆ ಅಜ್ಜ ದೇವಿಯ ಕುರಿತು ಬರೆದ ಅಸಂಖ್ಯ ಪದ್ಯಗಳಲ್ಲಿ ಆಯ್ದ ಕೆಲವು ಕವಿತೆಗಳಿಗೆ ರಾಗ ಹಾಕಿ, ಅವರನ್ನ ಇಷ್ಟ ಪಡುವ, ಅವರ ಹಾಡು,ಸಾಹಿತ್ಯ ಉಸಿರಾಡುವ ಕೆಲವರೊಂದಿಗೆ ಹಂಚಿಕೊಳ್ಳೋಣ ಅನ್ನಿಸಿತು. ಇದು ಆ ಸರಣಿಯ ಎರಡನೇ ಹಾಡು.
 'ಶಕ್ತಿ' ಎಂಬ ಶೀರ್ಷಿಕೆಯಡಿಯಲ್ಲಿ ಇರುವ ಈ ಕವಿತೆಯಲ್ಲಿ ಬೇಂದ್ರೆ ಅಜ್ಜ ಜೀವನದ ಮಹಾಮಾತೆಯರಾದ ಸರಸ್ವತಿ ದುರ್ಗೆ, ಲಕ್ಷಿಯರನ್ನು ಕುರಿತು ಪ್ರಾರ್ಥಿಸಿದ್ದಾರೆ. ಇದು ಅವರ ತಾಯಿ ಅಂಬಿಕೆ ಮೆಚ್ಚಿದ ಅವರ ಮೊದಲ ಕವಿತೆಯೂ  ಹೌದು!
ಬಿಡುವಾದಾಗ ಖಂಡಿತ ಒಮ್ಮೆ ಕೇಳಿ.
ಪ್ರೀತಿಯಿಂದ , ಅಮಿತಾ

ನೆನಪುಗಳ ಜಂಬೂಸವಾರಿ

ಅಕ್ಟೋಬರ್ ನ ಚುಮುಚುಮು ಚಳಿಯೊಂದಿಗೆ ಶರನ್ನವರಾತ್ರಿಯ ಪಾದಾರ್ಪಣೆ. ಭರ್ತಿ ಹತ್ತುದಿನಗಳ ಹಬ್ಬ. ಸಡಗರ, ಸಂಭ್ರಮ, ರಂಗುರಂಗಿನ ದಿರಿಸು, ವಿಧವಿಧ ತಿನಿಸು. ಪೂಜೆ-ಪುನಸ್ಕಾರ-ಅಲಂಕಾರ- ಮೈಸೂರಿನ ಜಂಬೂಸವಾರಿ- ನಾಡದೇವಿಯ ಮೆರೆಸುವ ನಾಡಹಬ್ಬ - ಜಾತ್ರೆ-ರಾಮಲೀಲಾ- ಶ್ರೀನಿವಾಸ ಕಲ್ಯಾಣದ ಭಕ್ತಿ ಆರಾಧನೆ- ದುರ್ಗೆಯ ನವರೂಪಗಳ ಶಕ್ತಿ ಉಪಾಸನೆ -ಗರಬಾ,ದಾಂಡಿಯಾಗಳ ನೃತ್ಯ ನಿವೇದನೆ, ಪಟ್ಟದ ಗೊಂಬೆಗಳಿಂದೊಡಗೂಡಿದ ಸಾಲು ಸಾಲು ಗೊಂಬೆಗಳ  ದೃಶ್ಯಾವಳಿ.. ಹೆಮ್ಮೆಯೆನಿಸುತ್ತದೆ ನಾವೆಂಥ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ವಾರಸುದಾರರೆಂದು.
 ಬಾಲ್ಯದ ನವರಾತ್ರಿಯ ಖುಷಿಯ ನೆನಪೆಂದರೆ ಭರ್ತಿ ಹತ್ತುದಿನಗಳ ಥರಾವರಿ ಭೋಜ್ಯ ವಿಶೇಷಗಳೇ ಆಗಿತ್ತೆನ್ನಿ.(ಈಗ? ಎಂದು ಕೇಳಬೇಡಿ. ಬಹುಶ: ಈಗಲೂ ಅದುವೇ. ಆದರೀಗ ಮಾಡಿ ಬಡಿಸುವ ಹೊರೆಯ ಜೊತೆಗೆ)   ವಿಜಯದಶಮಿಯಂದು ಆಗಿನ ನಮ್ಮ ಬಿಜಾಪೂರದ ಏಕೈಕ  ಪ್ರಸಿದ್ಧ ಕೋವಳ್ಳಿ ಹಾಲಿನ  ಡೇರಿಯಿಂದ 4-6 ಕಿಲೋ ಚಕ್ಕಾ( ಮೊಸರನ್ನು ರಾತ್ರಿಯಿಡೀ ಬಟ್ಟೆಯಲ್ಲಿ ಕಟ್ಟಿ ತೂಗುಹಾಕಿ ನೀರಿನಂಶ ತೆಗೆದು ಗಟ್ಟಿಯಾದ ಮೊಸರು) ತಂದು ಒಂದು ಕೊಳಗ ಥಣ್ಣಗಿನ ಏಲಕ್ಕಿ-ಕೇಸರಿಯುಕ್ತ ಶ್ರೀಖಂಡ ಬಿಸಿ ಬಿಸಿ ಉಬ್ಬಿದ ಪುರಿ, ಬಿಸಿಬೇಳೆ ಅನ್ನದೊಂದಿಗೆ ಸವಿಯಲು ಸಿದ್ಧವಾಗುತ್ತಿತ್ತು.  ಅದಿಲ್ಲದಿದ್ದರೆ ಜಿನಗಾರ ಓಣಿಯ ತಾಜಾ ‘ಖವಾ’ ದ  ಉಂಡೆ ಗಾತ್ರದ ಹೊಂಬಣ್ಣದ ಗುಲಾಬ್ ಜಾಮೂನ್ ಗಳು ನಮ್ಮಜ್ಜಿಯ ನೇತೃತ್ವದಲ್ಲಿ ಸಕ್ಕರೆಯ ಪಾಕದಲ್ಲಿ ಮುಳುಗೇಳುತ್ತಿದ್ದವು. ಅವತ್ತು ಕಡಬು-ಹೋಳಿಗೆ ಇರುತ್ತಿರಲಿಲ್ಲ. ಕಾರಣ ಗೊತ್ತೆ? ಹಬ್ಬದ ಮರುದಿನ ಏಕಾದಶಿ. ಮುಸುರೆ ತಿನ್ನುವಂತಿಲ್ಲ. ಇಂಥ ಸಿಹಿಗಳನ್ನು ‘ಛಲೋ ಕೈ’ ಲೆ ಮಾಡಿದರೆ ಮಕ್ಕಳು ಮರುದಿನವೂ ತಿನ್ನುತ್ತವೆಂಬ ತಾಯಂಥಕರಣದ ಅಜ್ಜಿಯ ಮುಂದಾಲೋಚನೆ. ಅದಕ್ಕೇ ಹೂರಣವೇನಿದ್ದರೂ ಪಾಡ್ಯ ಅಥವಾ ಮಾನವಮಿಗೇ ಮೀಸಲು.

 ಸಂಜೆಯಾದೊಡನೆ ವೆಂಕಟೇಶ ಪಾರಿಜಾತ, ಇಬ್ರಾಹಿಂಪುರದ ವೆಂಕಪ್ಪನ ಗುಡಿಗೆ ಟಾಂಗಾಸವಾರಿ, ಲಕ್ಷ್ಮೀಗುಡಿಯೆದುರಿಗಿನ ಆ ಪುಟ್ಟ ಜಾತ್ರೆಯಲ್ಲಿ ಗೆಳತಿಯರೊಡನೆ ಗಲಗಲ.. ಇರೂಬರೂ ಪುಸ್ತಕಗಳನ್ನೆಲ್ಲ ಸರಸ್ವತಿ ಪೂಜಾ ಅಂತ ದೇವರ ಮುಂದೆ ಮಣೆಯ ಮೇಲಿಟ್ಟು ಕೈ ಮುಗಿದುಬಿಡುವ ಆ ನಿರಾಳ. ಮಾನವಮಿಯಂದು ಮನೆಯಲ್ಲಿನ ಹೊಲಿಗೆ ಯಂತ್ರ, ಗಾಡಿಗಳು, ಚಾಕು ಕತ್ತರಿಯಂಥ ಕಬ್ಬಿಣಗಳಿಗೆಲ್ಲ  ಚೆಂಡು ಹೂವನ್ನೋ, ಶೇವಂತಿಗೆಯನ್ನೋ ತಲೆಗೇರಿಸಿಕೊಂಡು ಹಳದಿಯ ಹೊನ್ನಾಗಿಬಿಡುವ ಭಾಗ್ಯ.. ದಸರಾದ ದಿನ ಮನೆ ಮನೆಗೆ ಹೋಗಿ ‘ ಬಂಗಾರ ತಗೊಂಡು ಬಂಗಾರದ್ಹಂಗ ಇರೂಣು’ ಅಂತ ಬನ್ನಿ ಕೊಡುವ ಸಂಭ್ರಮ.
ಮುಂದೆ ದೆಹಲಿಗೆ ಬಂದಮೇಲೆ ಅಲ್ಲಿಯ ನವರಾತ್ರಿಯ,  ದಶೇರಾಗಳ ಸಂಭ್ರಮವೇ ಬೇರೆ.  ಅಷ್ಟಮಿಯವರೆಗೆ ‘ವ್ರತ್’ ಇಟ್ಟು (ದೇವಿಯ ಹೆಸರಲ್ಲಿ ಉಪವಾಸವಿದ್ದು) ಅಷ್ಟಮಿಯ ದಿನ ‘ಕಂಜಕ್” ಎಂದು ಪುರಿ, ಹಲ್ವಾ, ಕಡಲೆಕಾಳಿನ ಸಮೇತ ಪುಟ್ಟ ಬಾಲೆಯರನ್ನು ಕರೆದು ಪಾದ ತೊಳೆದು ಪೂಜಿಸಿ ದಕ್ಷಿಣೆಯ ಜೊತೆಗೆ ಏನಾದರೂ ಗಿಫ್ಟ್ ಕೊಡುವ ಪದ್ಧತಿ. ಓಹ್! ಅವತ್ತು ನನ್ನ ಅವಳಿ-ಜವಳಿಗಳಿಗೆ ಡಿಮ್ಯಾಂಡೋ ಡಿಮ್ಯಾಂಡು..ಕಮಾಯಿಯೋ ಕಮಾಯಿ. ನನಗೆ ಅಂದು ಚಪಾತಿ-ಪುರಿ ಲಟ್ಟಿಸುವ ಗೋಜಿರುತ್ತಿರಲಿಲ್ಲ. ಸುಮಾರು 50- 60 ಪುರಿಗಳು, ಬುಟ್ಟಿ ‘ಶಿರಾ’ ಜಮಾ ಆಗಿರುತ್ತಿತ್ತು .

ರಾತ್ರಿ ಬೇಗ ಊಟ ಮುಗಿಸಿ ರಾಮಲೀಲಾ ಮೈದಾನಕ್ಕೆ ಹೊರಡುವ ಸಡಗರ. ಅಲ್ಲಿ ಮೊದಲ ಸಲ ಆ ಮೇಲಾ ನೋಡಿದಾಗಲೇ ನನಗರ್ಥವಾದದ್ದು ನಮ್ಮ ಬಾಲಿವುಡ್ ಮೂವಿಗಳಲ್ಲಿ ‘ ಬಚಪನ್ ಮೆ ಮೇಲೆ ಮೆ ಬಿಛಡ್ ಗಯೆ ಥೆ’ ಅನ್ನುವ ಥೀಮು ಹೇಗೆ ಬಂತು ಎಂದು. ನಿಜಕ್ಕೂ ಅದರಲ್ಲಿ ಕಿಂಚಿತ್ತೂ ಅತಿಶಯೋಕ್ತಿಯಿಲ್ಲ. ಈಗಲೂ ಅಲ್ಲಿ ಸ್ಟೇಜ್ ಬಳಿ ಯಾವುದಾದರೂ ಗಾಬರಿಯಾಗಿ ಅಳುತ್ತ ನಿಂತಿರುವ ಮಗುವೋ, ಆತಂಕದಲ್ಲಿರುವ ಅಪ್ಪ-ಅಮ್ಮನೋ, ‘ಶ್ರೀವಾಸ್ತವ್, ಗುಪ್ತಾ, ಮಿತ್ತಲ್, ಚೋಪ್ಡಾ’ ಹೀಗೆ ಯಾರದೋ ಹೆಸರನ್ನು ಮೈಕ್ ನಲ್ಲಿ ಕೂಗಿ ಸ್ಟೇಜ್ ಬಳಿ ಕರೆಯುತ್ತಿರುವ ಸ್ವಯಂ ಸೇವಕರೋ ನಿಮಗೆ ಸಿಕ್ಕೇ ಸಿಗುತ್ತಾರೆ.  ದೆವ್ವನಂಥಾ ಆ ಮೈದಾನದಲ್ಲಿ ಅದೆಷ್ಟು ಥರಾವರಿ ಸ್ಟಾಲ್ ಗಳು..ಯಕಶ್ಚಿತ್ ಸೂಜಿಯಿಂದ ಹಿಡಿದು  Yamah , Suzuki  ಅಂಥ ಗಾಡಿಗಳವರೆಗೂ . ಬಟ್ಟೆ-ಬರೆ, ಪಾತ್ರೆ-ಪಗಡೆ, ಕರಕುಶಲ ವಸ್ತುಗಳು, ಆಟಿಕೆ ಸಾಮಾನುಗಳು, ಸ್ವೀಟು-ನಮಕೀನ್ ಗಳು, ಉಪ್ಪಿನಕಾಯಿ- ಮೊರಬ್ಬಗಳು, ಮಸಾಲೆ-ಸಾಂಬಾರ್ ಪದಾರ್ಥಗಳು, ಚುಸ್ಕಿ,ಕುಲ್ಫಿ,ಐಸ್ ಕ್ರೀಂ ತಳ್ಳುಗಾಡಿಗಳು, ಬಾಯಲ್ಲಿ ನೀರೂರಿಸುವ ಚಾಟ್ ಅಂಗಡಿಗಳು,  ಸಣ್ಣ-ದೊಡ್ಡ ನೂರಾರು ರೈಡ್ ಗಳು ಒಂದೆಡೆಯಾದರೆ ಮತ್ತೊಂದೆಡೆ ವಿಶಾಲವಾದ, ಭವ್ಯವಾದ ಸ್ಟೇಜ್ ಹಾಗೂ ಅದರ ಮೇಲೆ ನಡೆಯುವ ರಾಮಲೀಲಾ. ಪ್ರತಿ ನವರಾತ್ರಿಗೂ ಅದೇ ರಾಮಾಯಣ ಆದರೂ ಪ್ರತಿ ಸಲವೂ ಹೊಸತೆನಿಸುವ, ಅರಿಯದ್ದನ್ನೇನೋ ಹೊಳೆಯಿಸಿಬಿಡುವ ಸೊಬಗಿನ ಸೋನೆ. ಭರ್ಜರಿ ಆಕಾರದ ಮುಗಿಲೆತ್ತರದ  ರಾವಣನಂತೂ ರಾಮನ ಬಾಣದ ಬೆಂಕಿಗಾಗಿಯೇ, ತಪ್ಪುಗಳ ಸುಡುವ ಪಾವನ ಪಾವಕರೂಪಿಗಾಗಿಯೇ  ಕಾದವರಂತೆ ಆ ಬಯಲಲ್ಲಿ ನಿಂತಂತೆ ಅನ್ನಿಸುತ್ತದೆ.

ಈಗ ಇಲ್ಲಿ ಯುಕೆ ಗೆ ಬಂದ ಮೇಲಂತೂ ನಮ್ಮ ಹಬ್ಬ ಇನ್ನೂ ಸಮೃದ್ಧ.  ರಾಯರ  ಮಠದ ಶ್ರೀನಿವಾಸ ಕಲ್ಯಾಣ-ಚಂಡೀ ಹೋಮ, ಕುಂಕುಮಾರ್ಚನೆಗಳಲ್ಲಿ, ಅವರಿವರ ಮನೆಯ ಗೋಲು-ಅರಿಶಿಣಕುಂಕುಮಗಳಲ್ಲಿ, ರಾತ್ರಿ ಹಿಂದೂ ಟೆಂಪಲ್ ನಲ್ಲಿ ನಡೆವ ಗರಬಾ-ದಾಂಡಿಯಾಗಳಲ್ಲಿ, ದುರ್ಗಾ ಪೆಂಡಾಲ್ ನ ಪುಷ್ಪಾಂಜಲಿ-ಸಿಂಧೂರ್ ಉತ್ಸವಗಳಲ್ಲಿ ಇದರ ಮೇಲೆ ಮನೆಯ ದೇವರ ಪೂಜೆ-ದೀಪ-ನೈವೇದ್ಯಗಳ ಗದ್ದಲದಲ್ಲಿ ಅದ್ಹೇಗೆ ಪಾಡ್ಯದಿಂದ ದಶಮಿ ಬಂತೋ, ಮುಗೀತೋ ತಿಳಿಯುವುದೇ ಇಲ್ಲ.
 

ಎಲ್ಲರಿಗೂ ನವರಾತ್ರಿಯ ಹಾರ್ದಿಕ ಶುಭಾಶಯಗಳು. ‘ಬನ್ನಿ ತಗೊಂಡು ಬಂಗಾರದ್ಹಂಗ ಇರೂಣು’ 

~ ಗೌರಿಪ್ರಸನ್ನ.