ಮನುಷ್ಯನಿಗೆ ದೇವರು ಕೊಟ್ಟ ಮಹತ್ತರ ಉಡುಗೊರೆ ಮೂಗು. ಅದಿಲ್ಲದೆ ನಾವು ಹೇಗೆ ಉಸಿರಾಡುತ್ತಿದ್ದೆವು ಅನ್ನುವ ಮೂಲಭೂತ ಪ್ರಶ್ನೆಗೂ ಮೊದಲು, ಪ್ರಕೃತಿಯ ಅದೆಷ್ಟೋ ಸ್ವಾರಸ್ಯ ನಮ್ಮ ಅರಿವಿಗೆ ಬರುತ್ತಿರಲಿಲ್ಲವೇನೋ ಬಂದರೂ ಅದು ದೀರ್ಘಕಾಲ ನೆನಪಲ್ಲಿ ಉಳಿಯುವುದು ಕಷ್ಟ ಇತ್ತೇನೋ ಅನ್ನುವ ಯೋಚನೆ ಒಮ್ಮೆಲೇ ಮಿಂಚಿಮಾಯವಾಗುತ್ತದೆ. ಅದಕ್ಕಂತಲೇ ದೇವರಿಗೆ Special thanks ಹೇಳಲೇ ಬೇಕು. ನಮಗೆ ಉಸಿರಾಡಲು,ಆಘ್ರಾಣಿಸಲು,ಮುಖಕ್ಕೊಂದು ಮೂಗು ಕೊಟ್ಟಿರುವುದಕ್ಕೆ! ಮೂಗಿರುವುದರಿಂದಲೇ ಅಲ್ವೇ ಪ್ರತಿಯೊಂದು ಘಟನೆ ಪ್ರತಿಯೊಬ್ಬ ವ್ಯಕ್ತಿ, ಹೂವು, ಪ್ರಾಣಿ ಸ್ಥಳಗಳು .ಕೆಲವೊಮ್ಮೆ ಘಟನೆಗಳು ಘಮಗಳೊಂದಿಗೆ ಬೆಸೆದು ಮನಸಿನಲ್ಲಿ ಅಳಿಸದ ಹಚ್ಚೆಯಂತೆ ಅಚ್ಚಾಗಿ ಬಿಡುವುದು?
ಕೆಲವರಿಗೆ ಈ ಘಮ, ವಾಸನೆ, ಕಂಪು, ಪರಿಮಳಗಳು ಅಷ್ಟಾಗಿ ಕಾಡಿರಲಿಕ್ಕಿಲ್ಲ. ಅಥವಾ ಹಲವರು ಆ ಬಗ್ಗೆ ಯೋಚಿಸಿಯೇ ಇರಲಿಕ್ಕಿಲ್ಲ. ಆದರೆ ಭೂಮಿಯ ಮೇಲೆ ಒಂದಷ್ಟು ಜನ ನನ್ನಂಥವರೂ ಇರುತ್ತಾರೆ. ಘಮದ ಗುಂಗಿನಲ್ಲಿ ಬದುಕುವವರು.ಬುದ್ಧಿ ಕೊಟ್ಟನೋ ಇಲ್ವೋ ದೇವರು, ಮೂಗು ಮತ್ತು ಕಣ್ಣು ಮಾತ್ರ ಸಿಕ್ಕಾಪಟ್ಟೆ ಚುರುಕಾಗಿರಲಿ ಎಂದು ಹರಸಿಬಿಟ್ಟ.
ಸಾರಿನಲ್ಲಿ ಅಪ್ಪಿತಪ್ಪಿ ಜೀರಿಗೆ ಜೊತೆಗೆ ಎರಡು ಕಾಳು ಮೆಂತ್ಯೆ ಹವೀಜ ಬಿದ್ದರೂ ಸಾಕು ರುಚಿ ನೋಡುವ ಮೊದಲೇ ನಾ ಅಮ್ಮನಿಗೆ ಹೇಳಿ ಬಿಡುತ್ತಿದ್ದೆ. ಈ ವಿಷಯಕ್ಕೆ ಮಾತ್ರ ನನಗೂ ಅಮ್ಮನಿಗೂ ಆಗೀಗ ಜಗಳ ಆಗತಿತ್ತು. ಊಟಕ್ಕೆ ಕೂಡುವಾಗ ಉಪ್ಪಿನಕಾಯಿ ದಿಟ್ಟಿಸಿದೆ ಎಂದರೆ ಎಲ್ಲಿ ಊಟದ ನಡುವೆ ಹುಳ ಗಿಳ ಅಂದು ಬಿಡುವೆನೋ ಅಂತ ಆಕೆಗೆ ಆತಂಕವಾಗತಿತ್ತು. ಯಾರಿಗೂ ಕಾಣದ್ದು, ಯಾರ ಮೂಗಿಗೆ ನಿಲುಕದ್ದು ಅದು ಹೇಗೆ ನನಗೇ ಕಾಣಿಸುತ್ತಿತ್ತೋ, ನನ್ನ ಮೂಗಿಗೆ ಅಡರುತಿತ್ತೋ ಆ ದೇವರೇ ಬಲ್ಲ.
ಊಟದ ವಿಷಯ ಮಾತ್ರವಲ್ಲ ಈ ಘಮ ಮತ್ತು ಅದನ್ನು ನೆನಪಿಟ್ಟು ಆ ಜಾಗೆ, ವ್ಯಕ್ತಿ,ಘಟನೆಯೊಂದಿಗೆ ಚಂದದಲ್ಲಿ ಮಿದುಳಿನ ಅದ್ಯಾವ ಡ್ರೈವ್ ನಲ್ಲಿ save ಮಾಡಿ ಕೊಂಡಿದೆಯೋ ಈ ಮನಸು ಮೂಗು. ಕಣ್ಣು ಮುಚ್ಚಿ ಧ್ಯಾನಿಸಿದರೆ ಆ ಘಮ ತನ್ನಿಂತಾನೇ ಫೋಟೋ ಆಲ್ಬಂ ತರಹ ತೆರೆದುಕೊಳ್ಳುತ್ತದೆ. ಯಾವಾಗಲೋ ಇಂಥದ್ದೊಂದಿಷ್ಟು ನನ್ನ ಕಾಡುವ ಘಮಗಳನ್ನು ಪಟ್ಟಿ ಮಾಡಿಟ್ಟಿದ್ದೆ. ಅವನ್ನು ಇಲ್ಲಿ ಇಂದು ಬರೆಯೋಣ ಅನ್ನಿಸಿತು.
ಮೊದಲ ಮಳೆ ಇದು ಎಲ್ಲರಿಗು ಆಗಿರೋ ಅನುಭವ. ಮೊದಲ ಮಳೆ ಬಂದಾಗ ಬರೊ ಹಸಿಮಣ್ಣ ವಾಸನೆ. ಎಲ್ಲರಿಗೂ ಈ ಘಮದೊಂದಿಗೆ ಅಪರೂಪದಲ್ಲಿ ಅಪರೂಪದ ನೆನಪುಗಳಿರಬಹುದು. ನನಗೆ ಈ ಕಂಪು ನೆನಸಿಕೊಂಡರೆ,ನಾವು ಸಿರಸಿ ರಸ್ತೆಯ ನಮ್ಮ ಆ ಹಳೇ ಮನೆಯಲ್ಲಿರುವಾಗ, ಸೋರುತ್ತಿದ್ದ ಮಾಡು ಮೇಲಿಂದ ಬೀಳುವ ನೀರ ಹನಿಗಳನ್ನು ನೇರವಾಗಿ ತನ್ನೆಡೆಗೆ ಸೆಳೆದುಕೊಳ್ಳುತ್ತಿದ್ದ ಅಲ್ಯೂಮಿನಿಯಂ ಪಾತ್ರೆಗಳು. ಅದೇ ಸಮಯಕ್ಕೆ ಅಮ್ಮ ಮಾಡಿ ಕೊಡುತ್ತಿದ್ದ ಸಬ್ಬಸಿಗೆ ಪಲ್ಯ, ಅಕ್ಕಿರೊಟ್ಟಿ. ಕೆರೆಮೀನಿನ ಸಾರು ಮಡಕೆಯಲ್ಲಿ ಕುದ್ದ ಘಮ. ಮಳೆ ನಿಂತ ಮೇಲೆ ಹಿತ್ತಲಲ್ಲಿ ಬರುತ್ತಿದ್ದ ಕಂಚಿ ಹೂವಿನ ವಿಲಕ್ಷಣ ಘಮ ಉಪ್ಪುನೀರನಲ್ಲಿ ಹಾಕಿಟ್ಟ ಕಳಿಲೆ,ಹಲಸಿನ ತೊಳೆ,ಮಾವಿನಕಾಯಿ ,ಅಡಿಗೆಗಳು ಅದಕ್ಕೊಂದು ತೆಂಗಿನೆಣ್ಣೆ ಬೆಳ್ಳುಳ್ಳಿ ಒಗ್ಗರಣೆ.ಆಹ್ಹ್ ! ಆ ಮಳೆ ಘಮ ಹೀರದೆ ಅದೆಷ್ಟೋ ಕಾಲವಾಯಿತು.ಪ್ಯಾಟ್ರಿಕೋರ್ ಅನ್ನುವ ಮಳೆ ಮಣ್ಣಿನ ಘಮದ ಅತ್ತರು ಮಾರುಕಟ್ಟೆಗೆ ಬಂದಿದೆಯಂತೆ. ಅದನ್ನೊಮ್ಮೆ ಕೊಂಡು ತರಬೇಕು.
ದೇವಿಮನೆ ಘಟ್ಟ. ಅದು ನೆನಪಾಗೋದೆ ಅದರ ಕಾಡು ಹೂಗಳ ಘಮದಿಂದ. ಶಿರಸಿ ಮತ್ತು ಕುಮಟೆ ಪೇಟೆ ಗಳನ್ನೂ ಸೇರಿಸುವ ಈ ಘಟ್ಟದ ತಿರುವು ಮುರುವು ೬೬ ಕಿಲೋಮೀಟರ್ ಕಾಡಿನ ಹಾದಿ ಬರಿ ಹಸಿರು ನೋಡುತ್ತಾ, ಕಾಡು ಹೂಗಳ ಪೇರಳೆ,ಕಿತ್ತಳೆ ಹಣ್ಣುಗಳ ಘಮದ ಗುಂಗಿನಲ್ಲಿ ಕಳೆದು ಬಿಡುತ್ತಿದ್ದೆ. ಇನ್ನೇನು ಅಘನಾಶಿನಿ ಬಂದೆ ಬಿಡ್ತಾಳೆ. ಆಕೆಯ ಮತ್ತುಶರಾವತಿ ನದಿಯ ಹೆಸರನ್ನು ಕೇಳಿದ ಕೊಡಲೇ ನೆನಪಾಗೋದು ಹಸಿ.ತಾಜಾ ಮೀನಿನ ಘಮ.ಜೊತೆಗೆ ಕೆಂಪು ಮಣ್ಣು(ಮೀನುತಿನ್ನದವರಿಗೆ ಈ ಘಮದ ಭಾಗ್ಯ ಇಲ್ಲ ಮೂಗಿಗೆ ಕರವಸ್ತ್ರ). ಕುಮಟೆಯ ಬಸ್ಸ್ ನಿಲ್ದಾಣದಲ್ಲಿ ಮಾರಲು ಬರುತ್ತಿದ್ದ ಹಾಲಕ್ಕಿ ಒಕ್ಕಲತಿಯರ ಬಟ್ಟಿಯಲ್ಲಿದ್ದ ಜಾಜಿ,ಬಕುಲಾ,ಸುರಗಿ ಕಂಪು. ಜೀವ ಇರುವ ಒರೆಗೂ ಈ ನೆನಪ ಘಮ ಶಾಶ್ವತ.
ಮಂಗಳೂರು ಮಲ್ಲಿಗೆ. ಈ ಘಮ ಎಂದಕೂಡಲೇ ನೆನೆಪಗೋದು ದಕ್ಷಿಣಕನ್ನಡ ಸೀಮೆಯ ಮದುವೆಗಳು. ದರ್ಶನ, ದೈವದಮನೆ,ಬೇಸಿಗೆಯ ಧಗೆಯಲ್ಲೂ ಬೆವರ ಧಾರೆ ಹರಿಸುತ್ತಲೇ, ಜಗಮಗಿಸುವ ಸೀರೆ ಉಟ್ಟು, ಚಿನ್ನ ಧರಿಸಿದ ಭಗಿನಿಯರೂ, ಬಸ್ಸಿಗೆ ಕಾದು ಜನ ಜಂಗುಳಿಯಲ್ಲಿ ಅಡೆಗೋ ನಿಲ್ಲಲು ಒಂದು ಜಾಗ ಸಿಕ್ಕಾಗ ನೂರಾರು ಪರ್ಫ್ಯೂಮ್ ಗಳು ಬಸ್ಸಿನಲ್ಲಿ ಮಾತಿಗಿಳಿದಿವೆಯೇನೋ ಅನ್ನಿಸುವ ಮರುಗಳಿಗೆ ಮದುವೆ ಹಾಲ್ ತಲುಪಿ, ಭೋಜನ ಮುಗಿಸಿ ಊಟದ ಬಗ್ಗೆ ಸಾರಿಗೆ ಉಪ್ಪು ಕಮ್ಮಿ ಪಾಯಶಕ್ಕೆ ಬೆಲ್ಲ ಜಾಸ್ತಿ ಅಂದು ಕಾಮೆಂಟ್ ಒಗೆದು ಬರುವ ಆಮಂತ್ರಿತರು. ಚಿಕ್ಕವರಿದ್ದಾಗ ತಲೆತುಂಬ ಮಲ್ಲಿಗೆ ಮುಡಿಸಿಕೊಂಡು ಕನ್ನಡಿಯ ಮುಂದೆ ನಿಂತು ಫೋಟೋ ತೆಗೆಸಿಕೊಂಡಿದ್ದು ನೆನಪಾಗುತ್ತದೆ. ಒಣಗಿ ಹೋದರೂ ಘಮ ಬಿಡದ ಆ ಮಲ್ಲಿಗೆಯ ಗುಣಗಾನ ಮಾಡಿದಷ್ಟೂ ಕಡಿಮೆ.
ಊದಬತ್ತಿ (ಅಗರಬತ್ತಿ) ಕೆಲವು ಅಗರಬತ್ತಿಗಳು ಎಷ್ಟು ಮರೆತರು ಆ ಘಟನೆ ಯೊಂದಿಗೆ ನೆನೆಪಿನಲ್ಲೇ ಘಮಘಮಿಸುತ್ತವೆ. ಚವತಿ ಹಬ್ಬದಂದು ಪಪ್ಪ ಅದ್ಯಾವುದೋ ಸಿಟ್ಟಿನಲ್ಲಿ ನನಗೂ ತಂಗಿಗೂ ಹೊಡೆದದ್ದು.ಪರೀಕ್ಷೆ ಹೊತ್ತಿಗೆ ಹುಷಾರುತಪ್ಪಿ ಆಸ್ಪತ್ರೆಯ ಅತಿಥಿ ಆಗಿದ್ದು. ಆ ಸಮಯದಲ್ಲಿ ಮನೆಯಲ್ಲಿ ಹೆಚ್ಚುತ್ತಿದ್ದ ಆ ಊದಬತ್ತಿಯ ಘಮ ಈಗ ಆಘ್ರಾಣಿಸಿದರೂ, ನೆನಪಿಸಿಕೊಂಡರೂ ಮತ್ತೆ ವಾಕರಿಕೆ ಬರುವುದಂತೂ ನಿಜ.
ಕಾಫಿ ಘಮ ಇವರೂಂದಿಗೆ ಹಸಿದ ಹೊಟ್ಟೆಯಲ್ಲಿ ಬೆಂಗಳೂರು, ಲಾಲಬಾಗ್ ಸುತ್ತಾಡಿ ಕೊನೆಯಲ್ಲಿ ನಾಚಿ ನಾಚಿ ಹಸಿದ ವಿಷಯ ಹೇಳಿ ಅಕ್ಕಿರೊಟ್ಟಿ ತಿಂದಿದ್ದು. ಎದೆತುಂಬಿ ಹಾಡುವೆನು,ಎಂದೂ ಮರೆಯದ ಹಾಡು,ಮನತುಂಬಿ ಹಾಡುವೆನು ಕಾರ್ಯಕ್ರಮಗಳ ಚಿತ್ರೀಕರಣ. ಅಲ್ಲಿ ಪುಟ್ಟ ಲೋಟದ ತುಂಬ ಕೊಡುತ್ತಿದ್ದ ಆ ಸಕ್ಕರೆಪಾಕದಂತಿದ್ದ ಕಾಫಿ ಘಮ.. ಕಾಫಿ ಎಂದರೇ ಬೆಂಗಳೂರು ಅನ್ನಿಸುವಂತೆ ಮಾಡಿದೆ. ಒಗ್ಗರಣೆ ಮಧ್ಯಾನ್ಹ ಹೊತ್ತು ಆಕಾಶವಾಣಿ ಬಿತ್ತರಿಸುವ ೮೦ ರ ದಶಕದ ಹಾಡುಗಳು.ಮತ್ತು ಕುಂದಾಪುರದ ಕೋಣಿಯಲ್ಲಿ ಅಜ್ಜಿ ಕೊದ್ದೆಲ್ ಮತ್ತು ಬಟಾಟೆ ಪದಾರ್ಥಕ್ಕೆ ಹಾಕುತ್ತಿದ್ದ ಬೆಳ್ಳುಳ್ಳಿ ಒಗ್ಗರಣೆ ಘಮ.ಈಗಲೂ ಆ ಹಾಡುಗಳನ್ನು ಕೇಳಿದಾಗ ಆ ಹಿತವಾದ ಘಮ ಅಜ್ಜಿ ಮನೆ ನನ್ನ ಮುದ್ದಿಸಿ ಅಟ್ಟಕ್ಕೇರಿಸಿ ಇಟ್ಟಿರುವ ಅಜ್ಜಿ ನೆನಪಾಗಿ ಬಿಡುತ್ತಾರೆ.
ದುಂಡುಮಲ್ಲಿಗೆ ಅದು ಯಾವಕಾಲದಲ್ಲೂ ನನಗೆ ನೆನಪಾಗಿ ಕಾಡುವುದು. ಹಳೆಮನೆಯ ಹಿತ್ತಲಲ್ಲಿ ಹಬ್ಬಿದ್ದ ಹಂದರದಲ್ಲಿ ಬಿಳಿ ಚಿಕ್ಕೆಗಳಂತೆ ತಾಮುಂದು ನಾ ಮುಂದು ಎಂದು ಅರಳುತ್ತಿದ್ದವು ಅವು. ಬೇಸಿಗೆಯ ಬಿಸಿಗಾಳಿ ಅದರೊಂದಿಗೆ ದುಂಡುಮಲ್ಲಿಗೆಯ ಘಮ. ತುಳಸಿ ಕಟ್ಟೆಯಮೇಲೆ ಕುಳಿತು ಬೆಳದಿಂಗಳ ಬೆಳಕಲ್ಲಿ ನನ್ನ ಉದ್ದ ಕೂದಲ ನೆರಳು ನೋಡಿ ಖುಷಿ ಪಡುವ ಕ್ಷಣ. ಅಂಗಳದಲ್ಲಿ ಕೂತು ಬೆಳದಿಂಗಳೂಟ ಮಾಡುವ ಆ ಉಮೇದಿಯ ದಿನಗಳು. ಈಗ ಹಳೆ ಮನೆಯೂ ಇಲ್ಲ ಮಲ್ಲಿಗೆ ಹಂದರವೂ ಇಲ್ಲ. ಘಮ ಮಾತ್ರ ಹಾಗೆ ಉಳಿದು ಹೋಗಿದೆ.
ಅತ್ತರು ಆಕೆಯ ಹೆಸರು ಡಯಾನಾ ಉತ್ತರಕನ್ನಡದ ಕೊಂಕಣಿಗರ ಸಂಸ್ಕೃತಿಯ ಬಗ್ಗೆ PhD ಅಧ್ಯಯನ ಮಾಡುತ್ತಿದ್ದಳು.ನಮ್ಮ ಮನೆಗೆ ಸುಮಾರು ದಿನ ವಿಷಯ ಸಂಗ್ರಹಣೆ ಕ್ಷೇತ್ರಕಾರ್ಯ ಸಂದರ್ಶನಮಾಡಲು ಬಂದಿದ್ದಳು. ನಾನಿನ್ನೂ ಆಗ ೩ನೇ ತರಗತಿಯಲ್ಲಿದ್ದೆ. ಕಣ್ಣುಮುಚ್ಚಿಯೂ ಮನೆ ಬಾಗಿಲಿಗೆ ಬಂದವರು ಅವರೇ ಎಂದು ನಾನು ಹೇಳುತ್ತಿದ್ದೆ, ಕಣ್ಣಿಗಿಂತ ನನ್ನ ಮೂಗು ಆಕೆಯನ್ನು, ಆಕೆ ಹಾಕಿಕೊಳ್ಳುತ್ತಿದ್ದ ಒಂದು ಸುಗಂಧದ್ರವ್ಯದಿಂದ ಇಂದಿಗೂ ನೆನಪಿಟ್ಟುಕೊಂಡಿದೆ.
ಮಗುವಿನ ಘಮ ನನ್ನ ಬದುಕಲ್ಲಿ ಮೊದಲು ನೋಡಿದ ಮಗು ಅದು. ನನ್ನ ಸುಲೋಚನ ಅತ್ತೆಯ ಮೊದಲ ಮಗು. ಅದರ ಮುದ್ದು ಕೈಗಳು ಕೆಂಪುಗಟ್ಟಿದ ಕಾಲು,ಮಗು ಎಂದರೆ ಜೀವವಿರುವ ಗೊಂಬೆ ಅನಿಸಿತ್ತು. ಎಲ್ಲಕ್ಕಿಂತ ಹೆಚ್ಹಾಗಿ ಅದರ ಹತ್ತಿರ ಬರುತ್ತಿದ್ದ ಬೇಬಿ ಪೌಡರ್ ಘಮ,ಮೈಗೆ ಹಚ್ಹುವ ಕೆಂಪು ಬೇರಿನ ಎಣ್ಣೆಸ್ನಾನ ಮಾಡಿ ಬಂದ ನಂತರ ಹಾಕುವ ಲೋಭಾನ ಗಂಧದ ಸಾಣೆಯಲ್ಲಿ ತೇಯುವ ಬಜೆ ಬೇರಿನ ಪರಿಮಳ ಎಳೆಮಗು ನನಗೆ ನೆನಪಾಗೋದೆ ಆ ಘಮ.
ಮಾವಿನಕಾಯಿ, ನೆನಪು ಬಂತೆಂದರೆ ಸಾಲಾಗಿ ನೆನಪಾಗೋದು ವಾರ್ಷಿಕ ಪರೀಕ್ಷೆಗಳು,ಯುಗಾದಿ,ಆಲೀಕಲ್ಲ ಮಳೆ, ಗೆಳೆಯರೊಂದಿಗೆ ನೀರು ಇಂಗುತ್ತಿರುವ ಹೊಂಡ ಕೆರೆಗಳಿಗೆ ಮೀನು ಹಿಡಿಯಲು ಹೋಗುವುದು ಕಪ್ಪೆಮರಿಗಳನ್ನ ತಂದು ಮನೆಯ ನೀರಿನ ತನಕ ನಲ್ಲಿ ಹಾಕುವುದು. ಮಾವಿನ ಸೊನೆ ಪುಟ್ಟ ಬಾಟಲಿಯಲ್ಲಿ ಸಂಗ್ರಹಿಸಿಟ್ಟು ಆಗೀಗ ಅದನ್ನು ತಂಬಳಿ ಮಾಡಲು ಬಳಸುವುದು ಜೊತೆಗೆ ಆ ಸೀಜನ್ನಲ್ಲಿ ಪ್ರತಿದಿನ ಕಡ್ಡಾಯ ಎಂಬಂತೆ ಮಾಡುವ ಮಾವಿನಕಾಯಿ ಅಡುಗೆಗಳು.
ನನಗೆ ಈ ಕಾರಣಕ್ಕೆ ಹ್ಯಾರಿ ಪೊಟರ್ ಮತ್ತು Hogwarts School of Witchcraft and Wizardry ನಿಜವಾಗಿಯೂ ಇರಬಾರದಿತ್ತೆ? ಎಂದು ತೀವ್ರವಾಗಿ ಅನಿಸುವುದುಂಟು. ನನಗೆ ಹೆಚ್ಚೇನು ಬೇಡಿತ್ತು ಬೇಕೇನಿಸಿದಾಗೆಲ್ಲ ಈ ನನಪುಗಳನ್ನ, ಘಮಗಳನ್ನ ಫೋಟೋ ಆಲ್ಬಂ ನಂತೆ ಮತ್ತೆ ಮತ್ತೆ ಮುಟ್ಟಿ ತಟ್ಟಿ ನೋಡಿ ಮತ್ತೆ ಮತ್ತೆ ಆಘ್ರಾಣಿಸುವಂತೆ ಮಾಡುವ ಒಂದೆರಡು spells ಕಲಿಸಿಬಿಟ್ಟರೆ ಸಾಕಿತ್ತು. ಈ ಘಮಗಳ ಕಥೆ ಮುಗಿಯುವಂಥದ್ದಲ್ಲ ಹೇಳಿದರೆ ಹೇಳುತ್ತಲೇ ಹೋಗಬಹುದು, ಮನೆಗೊಂದು ಘಮ. ಒಲಿದ ಮನಸಿಗೊಂದು ,ಮುನಿದ ಮನಸಿಗೆ ಮತ್ತೊಂದು ಘಮ. ಓಲೈಕೆಗೆ ಇನ್ನೊಂದು ಘಮ ಹೀಗೆ ಬದುಕೆಲ್ಲ ಘಮದ ಸೆರಗಲ್ಲಿನೆನಪಿನ ಘಮದಲ್ಲಿ.
ಎಳ್ಳೆಣ್ಣೆಯ ಎರಡು ದೀಪ.
_ ಡಾ. ದಾಕ್ಷಾಯಿಣಿ ಗೌಡ
ಈ ಬಾರಿ,ಹೊಸ ಪರಿಯ ಕಳಕಳಿ
ನಮ್ಮ ನಿಮ್ಮೆಲ್ಲರ ಈ ದೀಪಾವಳಿ
ನಮ್ಮೂರಲ್ಲಿ, ಗೃಹಜ್ಯೋತಿಯ ಆಗಮನ,
ಆದರೇನು, ಯೂನಿಟ್ನ ಮಿತಿಮೀರದೆಡೆ ಗಮನ
ಸಾಮಾನ್ಯರಿಗೆ ಎಣ್ಣೆ ಬಲು ದುಬಾರಿ,
ಸರ್ಕಾರದ ಖರ್ಚಿನಲ್ಲಿ ಕೋಟಿ ದೀಪಗಳ ಅದ್ದೂರಿ.
ಮನೆಮುಂದೆ ಮಿನುಗುತ್ತಿದೆ ಎಳ್ಳೆಣ್ಣೆಯ ಎರಡು ದೀಪ.
ಈ ಊರಲ್ಲೂ ಬಗ್ಗುತ್ತಿಲ್ಲ ಹಣದುಬ್ಬರ
ಕೈಗೆಟುಕದು ಬಡತನಕೆ ವಿದ್ಯುತ್ ದರ.
ಬಿಸಿ ಊಟ, ಬಿಸಿಗಾಳಿ ಆಶಿಸುವ ಎದೆ, ಉದರ,
ಎಚ್ಚರಿಕೆ, ಕೂಗುತಿದೆ, ಹಿಮಗಾಳಿಯ ಅಬ್ಬರ.
ಮನೆಮುಂದೆ ಮಿನುಗುತ್ತಿದೆ ಎಳ್ಳೆಣ್ಣೆಯ ಎರಡು ದೀಪ.
ಕಾಂಚಾಣ ಕುಣಿಸಿದಂತೆ ಆಡುವ, ತೂಗುವ ಬೆಳಕು,
ಗಗನ ಕುಸುಮ, ಬಡತನಕೆ, ಬಹುದೀಪಗಳ ಥಳುಕು.
ಲಕ್ಷದೀಪವಿರಲಿ, ಕಗ್ಗತ್ತಿನ ಕತ್ತಲಿರಲಿ ಹೊರಗೆ,
ಮಿನುಗಲಿ ನಿಮ್ಮ ನಮ್ಮೊಳಗೆ ಆನಂದದ ದೀಪ,
ಹೊಸಬಗೆಯ ಬೆಳಕಲಿ, ಬೆಳಗಲಿ ನಮ್ಮ ಸೃಷ್ಟಿಯ ದ್ವೀಪ.
ಅನಬೆಲ್ಲ ಹೇಳಿದ ಅಮರಾಂತೆ ಕಥೆ - ಡಾ.ಮುರಳಿ ಹತ್ವಾರ್
ಅಮರಾಂತೆ ಪೋರ್ಚುಗಲ್ಲಿನ ಒಂದು ಸಣ್ಣ ಊರು. ಅದರ ಮಧ್ಯದಲ್ಲೊಂದು ನದಿ, ಅದರ ಹೆಸರು ತಮೆಗಾ. ಡ್ಯುರೋ ನದಿಯ ಉಪನದಿಯಾದ ಇದರ ಒಂದು ಕಡೆ ಈಗ ಹೊಟೇಲಾಗಿರುವ ಹಳೇ ಕಾಲದ ಶ್ರೀಮಂತನ ಬಂಗಲೆ ಮತ್ತದರ ಸುತ್ತ ಬೆಳೆದ ಮನೆಗಳು, ಅಂಗಡಿಗಳು ಇತ್ಯಾದಿ. ಇನ್ನೊಂದು ಕಡೆ, ಸಂತ ಗೋನ್ಸಾಲನ ಇಗರ್ಜಿ ಮತ್ತದರ ಹಿಂದೆ ಯಾವತ್ತೋ ಇದ್ದ ಕಾಡನ್ನು ಮರೆಸಿ ಬೆಳೆದ ಊರು. ಮಧ್ಯದಲ್ಲೊಂದು ಅವೆರಡನ್ನೂ ಸೇರಿಸುವ ಹಳೆಯ ಬ್ರಿಡ್ಜ್ . ಸುಮಾರು ೭೦೦ ವರ್ಷದ ಹಿಂದೆ ಇದ್ದ, ಮೊದಲು ಪಾದ್ರಿಯಾಗಿ, ಆಗಾಗ ಪವಾಡ ಮಾಡಿ, ದೊಡ್ಡ ಮೊನಾಸ್ಟರಿಯೊಂದನ್ನು ಕಟ್ಟಿ, ಕಡೆಗೆ ಸಂತರಾದ ಗೋನ್ಸಾಲರ ಇಗರ್ಜಿಯ ಅಮರಾಂತೆ ಈಗ ಪೊರ್ಟೊ ನಗರದಿಂದ ಡ್ಯುರೋ ಕಣಿವೆಗೆ ಮುಂಜಾನೆ ಹೊರಟು ಸಂಜೆಗೆ ಮರಳುವ ಪ್ಯಾಕೇಜ್ ಟೂರಿಗರಿಗೆ ಮೊದಲು ಸಿಗುವ ಸ್ಟಾಪ್.
ಪೊರ್ಟೊ ದಲ್ಲಿ ಮುಂಜಾನೆ ಎಂಟಕ್ಕೆ ಟೂರಿನ ಮಿನಿ ಬಸ್ ಆಫೀಸಿಗೆ ವಿಧೇಯ ವಿದ್ಯಾರ್ಥಿಗಳಂತೆ ಅರ್ಧ ಗಂಟೆ ಮುಂಚೆಯೇ ತಲುಪಿದ್ದ ನಮಗೆ, ಅಲ್ಲಿನ ಏಜೇಂಟ್ ಒಬ್ಬ ನಮ್ಮ ಬಸ್ ನಂಬ್ರ ೧೯ ಮತ್ತು ಗೈಡ್ ಅನಬೆಲ್ಲ ಎಂದು ಪ್ರಿಂಟಾದ ಚೀಟಿ ಕೊಟ್ಟ. ಅದಾಗಿ ಸ್ವಲ್ಪ ಹೊತ್ತಿಗೆ ಆ ಬಸ್ಸು ಮತ್ತದರೊಟ್ಟಿಗೆ ಬಂದಿಳಿದ ಮಧ್ಯ ವಯಸ್ಸಿನ ಸ್ಥೂಲ ಕಾಯದ ಅನಬೆಲ್ಲ, ಗಟ್ಟಿ ದನಿಯಲ್ಲಿ ಬಸ್ಸಿನ ನಂಬ್ರ ಮತ್ತೆ ಹೊರಡುವ ಟೈಮನ್ನು ಮೊದಲು ಇಂಗ್ಲಿಷಿನಲ್ಲೂ ನಂತರ ಫ್ರೆಂಚಿನಲ್ಲೂ ಕೂಗಿ, ಆ ಕರೆಗೆ ಕಾದವರಂತೆ ಗಡಿಬಿಡಿಯಲ್ಲಿ ಅನಬೆಲ್ಲ ಸುತ್ತ ಸೇರಿದ ಜನರನ್ನ ಬಸ್ಸೇರಿಸಿ, ಕಡೆಗೆ ತಾನೂ ಹತ್ತಿ ಮುಂದಿನ ಸೀಟಿನಲ್ಲಿ ಕುಳಿತು, ಕೈಗೊಂದು ವಯರಿನ ಮೈಕೆಳೆದುಕೊಂಡು ಮಾತು ಶುರುಮಾಡಿದಳು.
ಅವಳ ಮಾತುಗಳು ರೆಕಾರ್ಡೆಡ್ ಟೇಪಿನಂತೆ ಇಂಗ್ಲಿಷ್-ಫ್ರೆಂಚ್ ತಾಳದಲ್ಲಿ ಬಸ್ಸಿನ ಕಿಟಕಿಯಾಚೆ ಕಾಣುವ ಐತಿಹಾಸಿಕ ಕಟ್ಟಡಗಳು, ಬ್ರಿಡ್ಜುಗಳು, ಸುರಂಗಳು ಅವನ್ನೆಲ್ಲ ಆದಷ್ಟು ಕಡಿಮೆ ಶಬ್ದಗಳಲ್ಲಿ ಹೇಳುತ್ತಾ, ಮಧ್ಯೆ ಮಧ್ಯೆ ನಗೆ ತಾರದ ಜೋಕುಗಳನ್ನು ಉರುಳಿಸುತ್ತಾ, ಆದಷ್ಟು ಮೊಬೈಲ್ ಫೋನಿನಲ್ಲಿ ಅದ್ದಿದ ಮುಖಗಳನ್ನು ಹೊರ ತೆರೆಯಲು ಪ್ರಯತ್ನಿಸುತ್ತಿದ್ದಳು. ಕಡೆಗೊಮ್ಮೆ ಬಸ್ಸು ನಿಧಾನಿಸಿ ನಿಂತಾಗ, ಎಲ್ಲರನ್ನು ಕೆಳಗಿಳಿಸಿ, ಪಕ್ಕದ ಕಟ್ಟೆಯ ಮೇಲೆ ನಿಂತು, ಕೆಳಗೆ ಹರಿಯುತ್ತಿದ್ದ ತಮೆಗಾ ನದಿಯ ಪರಿಚಯವನ್ನೂ, ಗೋನ್ಸಾಲರ ಇಗರ್ಜಿಯನ್ನೂ ತೋರಿಸಿ, ಮುಕ್ಕಾಲು ಘಂಟೆಯೊಳಗೆ ಎಲ್ಲ ಸುತ್ತಿ, ಫೋಟೋದಲ್ಲಿ ಕಟ್ಟುವಷ್ಟು ಕಟ್ಟಿ, ಮತ್ತೆ ಬಸ್ಸಿನಲ್ಲಿರಬೇಕೆಂದು ಅಪ್ಪಣಿಸಿದಳು. ಅಷ್ಟಕ್ಕೇ ನಿಲ್ಲಿಸದೆ, ತನ್ನ ಮೊಬೈಲಿನಲ್ಲಿದ್ದ ಫೋಟೋವೊಂದನ್ನು ಗುಂಪಿನ ಎಲ್ಲ ಅಡಲ್ಟಿಗರಿಗೆ ತೋರಿಸುತ್ತ, ಅವರ ನಾಚಿಕೆಯ, ಆಶರ್ಯದ ನಗುವಿಗೆ ತಾನು ನಗುತ್ತ, ಅದೊಂದು ಜೋಕು ಎಂದಳು. ಅವಳು ತೋರಿಸಿದ ಆ ಫೋಟೋದ ಮರ್ಮ ಮತ್ತು ಅದರ ಹಿಂದಿನ ಜೋಕು ಆಗ ಅರ್ಥವಾಗಿರಲಿಲ್ಲ. ಸುಮ್ಮನೆ ನಕ್ಕೆವು.
ಅನಬೆಲ್ಲ ಹೇಳಿದಂತೆ, ಆ ಹಳೆಯ ಬ್ರಿಡ್ಜಿನತ್ತ ನಡೆದು, ಅದರ ಮೇಲೆ ನಿಂತು ಆಚೆ ಈಚೆಯ ಕಟ್ಟಡಗಳನ್ನು, ಕೆಳಗೆ ಹರಿಯುತ್ತಿರುವ ನದಿಯ ಹರಿವನ್ನೂ ನೋಡುತ್ತಾ, ಗೊನ್ಸಾಲರು ತಮ್ಮ ಪವಾಡದಲ್ಲಿ ಮೊದಲು ಕಟ್ಟಿದ, ಆನಂತರ ೧೭-೧೮ ಶತಮಾನದಲ್ಲಿ ಮತ್ತೆ ಹೊಸದಾಗಿ ಕಟ್ಟಿದ, ನೆಪೋಲಿಯನ್ನಿನ ಕಾಲದಲ್ಲಿ ನಡೆದ ಹೋರಾಟದಲ್ಲಿ ಸಿಡಿದ ಗುಂಡುಗಳ ಕಲೆಯನ್ನ ಇನ್ನೂ ಸಾಕಿರುವ ಆ ಬ್ರಿಡ್ಜನ್ನು ದಾಟಿ, ಅಮರಾಂತೆಯ ಸಂತರ ಇಗರ್ಜಿಯತ್ತ ನಡೆದ ನಮಗೆ, ಮೊದಲು ಕರೆದದ್ದು ಅಲ್ಲಿನ ಕಾರ್ ಪಾರ್ಕಿನ ಪಕ್ಕದ ಸಣ್ಣ ತೋಟದಲ್ಲಿ ದೊಡ್ಡದಾಗಿ ಇಂಗ್ಲಿಷ್ ಅಕ್ಷರಗಳಲ್ಲಿ ನಿಲ್ಲಿಸಿಟ್ಟ AMARANTE. ಬಣ್ಣ ಬಣ್ಣದ ಆ ದೊಡ್ಡ ಅಕ್ಷರಗಳ ಮುಂದೆ ನಿಂತು ಫೋಟೋದಲ್ಲಿ ನಮ್ಮ ಜೊತೆ ಅದನ್ನು ಸೇರಿಸಿ ಹೊರನಡೆಯುವಾಗ, ಪಕ್ಕದಲ್ಲೇ ಚಪ್ಪರವೊಂದರ ಕೆಳಗೆ ಒಂದಿಷ್ಟು ಸಾಮಾನುಗಳನ್ನು ಮಾರುತ್ತಿದ್ದ, ಆ ಕಾರ್ ಪಾರ್ಕಿನ ಒಂದೇ ಅಂಗಡಿಯತ್ತ, ಅಲ್ಲಿನ 'ವಿಶಿಷ್ಣ' ಆಕಾರದ, ಪ್ಲಾಸ್ಟಿಕಿನಲ್ಲಿ ಸುತ್ತಿಟ್ಟ ವಸ್ತುಗಳನ್ನ ಏನೆಂಬ ಕುತೂಹಲದಲ್ಲಿ ನೋಡಲು ಹತ್ತಿರ ಹೋದೆವು. ಅಲ್ಲಿದ್ದದ್ದು, ಅನಬೆಲ್ಲ ಫೋನಿನಲ್ಲಿ ಜೋಕೆಂದು ತೋರಿಸಿದ ಆಕಾರದ ಸಣ್ಣ, ದೊಡ್ಡ, ಗಟ್ಟಿ, ಮತ್ತು ಮೆತ್ತನೆಯ ವೆರೈಟಿಯ ಕೇಕುಗಳು.
ಆ ಕೇಕುಗಳ ದರ್ಶನದಿಂದ ಮನಸ್ಸಿನಲ್ಲಿ ಕುಣಿಯುತ್ತ ಮುಖದಲ್ಲಿ ಹೊರಬರಲು ಯತ್ನಿಸುತ್ತಿದ್ದ ಚೇಷ್ಟೆಯ ಹುಡುಗುತನವನ್ನ ಸ್ವಲ್ಪ ಬದಿಗಿಟ್ಟು, ಆ ಅಂಗಡಿಯ ಒಡತಿಗೆ, ಆ ಕೇಕುಗಳ ಆಕಾರದ ಹಿಂದಿನ ಕಥೆ ಏನೆಂದು ಕೇಳಿದೆವು. ನಮ್ಮ ಇಂಗ್ಲೀಷು ಆಕೆಯ ಪೋರ್ಚುಗೀಸು ನಡುವೆ ಯಾವುದೇ ಸೇತುವೆ ಇಲ್ಲದ ಕಾರಣ, ಕೈ ಸನ್ನೆಯಲ್ಲಿ ಒಂದು ಕೇಕಿನ ದುಡ್ಡು ಕೇಳಿ, ಕೊಂಡು, ಸಕ್ಕರೆಯ ಐಸಿಂಗಿನ ಆ ಕೇಕಿನ ಪ್ಲಾಸ್ಟಿಕಿನ ಬಂಧನದಿಂದ ಹೊರ ತಂದು, ತರತರದಲ್ಲಿ ಕೈಯಲ್ಲಿ ಹಿಡಿದು, ಫೋಟೋ ಮತ್ತು ವಿಡಿಯೋಗಳಲ್ಲಿ ಅದನ್ನು ವರ್ಣಿಸಿ, ಆಪ್ತ ಗೆಳೆಯರ ವಾಟ್ಸಪ್ಪ್ ಗುಂಪಿಗೆ ಆ ಕೇಕನ್ನು ವಿಡಿಯೋದ ಮೂಲಕ ಅರ್ಪಿಸಿ, ಮುನ್ನಡೆದೆವು. ಆಗ ಮಾತೆಲ್ಲ ಆ ಕೇಕು ಹುಟ್ಟಿದ, ಮತ್ತೆ ಹೀಗೆ ದಿನ ದಿನ ಅಮರಾಂತೆಯ ಹಲವು ಓವನ್ನು ಗಳಲ್ಲಿ ಬೇಯುತ್ತಿರುವ ಅದರ ಅವತಾರಗಳ ಹಿಂದಿನ ಕಾರಣಕ್ಕೆ ನಮ್ಮ ಊಹೆಯ ಪಟ್ಟಿ.
ಹಾಗೆ ಪಕ್ಕದ ಇಗರ್ಜಿಯ ಮುಂದಿಷ್ಟು ಭಂಗಿಗಳಲ್ಲಿ ನಮ್ಮನ್ನು ಫ್ರೇಮಿಸಿಕೊಂಡು, ಬ್ರಿಡ್ಜಿನ ಮೊದಲ ಬದಿಗೆ ಮರಳಿ, ಪಕ್ಕದ ಬೀದಿಯಲ್ಲಿ ಕಾಪಿಯ ಬಾಯಾರಿಕೆಗೆ ಹೊರಟ ನಮಗೆ ಮತ್ತೆ ಅಲ್ಲಿನ ಟೂರಿಸ್ಟ್ ಅಂಗಡಿಗಳ ಮ್ಯಾಗ್ನೆಟ್ಟುಗಳಲ್ಲಿ, ಹಾಗೆಯೇ ಆ ಬೀದಿಯ ಕೆಲವು ಬೇಕರಿಗಳಲ್ಲಿ ಮತ್ತದೇ ಕೇಕಿನ ದರ್ಶನ. ಬೇಕರಿಯ ಕೇಕುಗಳಿಗೆ ಸಕ್ಕರೆಯ ಕವಚವಿದ್ದರೆ, ಮ್ಯಾಗ್ನೆಟಿನ ಚಿತ್ರಗಳ ಕೇಕಿನ ಮೇಲೆ ಒಂದು ಹಲ್ಲಿ. ಆ ಮ್ಯಾಗ್ನೆಟ್ಟನ್ನು ಕೊಂಡುಕೊಳ್ಳುವಷ್ಟು ಧೈರ್ಯ ಬರಲಿಲ್ಲ. ಯಾವತ್ತಿನಂತೆ ಮೊಬೈಲಿನ ಕ್ಯಾಮರಾಕ್ಕೆ ಸೇರಿಸಿಕೊಂಡೆವಷ್ಟೇ. ಅಷ್ಟರಲ್ಲಿ ಸಮಯದ ಮುಳ್ಳು ಅನಬೆಲ್ಲ ಹಾಕಿದ ಗೆರೆ ಮುಟ್ತುತ್ತಿದ್ದರಿಂದ, ಅವಸರದಲ್ಲಿ ಕಾಪಿ ಕಪ್ಪು ಹಿಡಿದು ಬಸ್ಸಿನತ್ತ ಓಡಿದಂತೆ ನಡೆದೆವು.
ಬಸ್ಸಿನ ಬಾಗಿಲಿನ ಪಕ್ಕ ನಿಂತಿದ್ದ ಅನಬೆಲ್ಲಳ ಹತ್ತಿರ ಅಮರಾಂತೆಯ ಕೇಕಿನ ಕಥೆ ಮತ್ತೆ ಕೇಳಲು, ಅವಳು ಅದರ ಹೆಸರು ಸಂತ ಗೊನ್ಸಾಲಿನ್ಹೋ ಎಂದೂ, ಹಾಗೆಂದರೆ 'ದಿ ಲಿಟಲ್ ಗೋನ್ಸಾಲ್' ಎಂದರ್ಥವೆಂದೂ, ಮತ್ತೆ ಒಂದು ಕಾಲದಲ್ಲಿ ಅತಿ ಪ್ರಬಲವಾಗಿದ್ದ ಚರ್ಚಿನ ಹಿಡಿತದ ವಿರುದ್ಧ ಯಾವಾಗಲೋ ಸಿಡಿದೆದ್ದ ರೆಬೆಲಿಗರು, ಅವರ ಕೋಪ ಮತ್ತೆ ವ್ಯಂಗ್ಯವನ್ನು ವ್ಯಕ್ತಪಡಿಸಲು ಮೊದಮೊದಲು ಈ ಕೇಕನ್ನು ಬೇಯಿಸಿದರೆಂದೂ, ಹಾಗೆ ಬರುಬರುತ್ತ ಅದು ಅಮರಾಂತೆಯ ಜೋಕಿನ ಕೇಕಾಗಿ ಬಿಟ್ಟಿದೆ ಎಂದೆಲ್ಲ ವಿವರಿಸಿದಳು. ಅಷ್ಟಕ್ಕೇ ನಿಲ್ಲದೆ, ಆ ಕೇಕನ್ನು ತಿಂದವರಿಗೆ ಅವರಿಷ್ಟದ 'ಲವ್' ಸಿಗುತ್ತದೆ ಎಂದು ಜೋರಾದ ನಗುವಿನಲ್ಲಿ ಹೇಳುತ್ತಾ ಬಸ್ಸು ಹೊರಡಿಸಿದಳು.
ಅವಳ ವಿವರಣೆ, ಸಮಾಜದ ಪ್ರಬುದ್ಧತೆಗೆ ಅನುಗುಣವಾಗಿ ಹೋರಾಟದ ಮಜಲುಗಳು ವ್ಯಕ್ತವಾಗುವ ರೀತಿ, ಅವುಗಳ ಹಿಂದಿನ ಪ್ರೇರಣೆ ಮತ್ತು ಧೈರ್ಯವನ್ನು ಮೆಚ್ಚುತ್ತ, ವಿಮರ್ಶಿಸುತ್ತಾ, ನೆನಪಿನ ಕೊಟ್ಟೆಯಲ್ಲಿ ಬೇರೆ ಬೇರೆ ರೀತಿಯಲ್ಲಿ ಅಮರಾಂತೆಯನ್ನ ಮಡಿಚಿಡುತ್ತಿದ್ದವು. ಅಮರಾಂತೆಯನ್ನು ದಾಟಿದ ಮೇಲೂ ತಣಿಯದ ಕುತೂಹಲದಲ್ಲಿ ಹುಡುಕಿದ ವಿಕಿಪಿಡಿಯಾದಲ್ಲೂ ಅನಬೆಲ್ಲ ಕಥೆಯಷ್ಟು ವಿವರಗಳಿರಲಿಲ್ಲ. ಆದರೆ, 'ಸಂತ ಗೊನ್ಸಾಲಿನ್ಹೋ' ಚಿತ್ರವಿದೆ ಅಲ್ಲಿ, ಬೇಕಾದರೆ, ಸಣ್ಣ ಮಕ್ಕಳು ಪಕ್ಕ ಇಲ್ಲದಿದ್ದಾಗ ಸೈಲೆಂಟಾಗಿ ನೋಡಿ ನಮಸ್ಕರಿಸಿಬಿಡಿ.