ಕಿರಿಕ್ ಪಾರ್ಟಿ ಚಿತ್ರ ವಿಮರ್ಶೆ

kirik-party-1

(ಕನ್ನಡ ಚಲನ ಚಿತ್ರಗಳನ್ನು ಕೆಲವು ವರ್ಷಗಳ ಹಿಂದೆ ಲಂಡನ್ ಮತ್ತು ಬರ್ಮಿಂಗ್ ಹ್ಯಾಮ್ ನಗರಗಳಲ್ಲಿ ಆಗೊಮ್ಮೆ ಈಗೊಮ್ಮೆ ಪ್ರದರ್ಶಿಸಲಾಗಿತ್ತು. ಕನ್ನಡ ಬಳಗ ಈ ಚಟುವಟಿಕೆಗಳಿಗೆ ಪ್ರಚಾರ ಒದಗಿಸಿ ಕೆಲವು ಸ್ಥಳೀಯ ಕನ್ನಡಿಗರು ಸೇರಿ ವೀಕ್ಷಿಸುತ್ತಿದ್ದೆವು. ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಯಶಸ್ವಿಯಾಗಿರುವ ಕನ್ನಡ ಚಿತ್ರಗಳು, ಇಲ್ಲಿಯ ಅನಿವಾಸಿ Distributor ಗಳ ಸಹಕಾರದಿಂದ ಯು.ಕೆಯ ಹಲವಾರು ನಗರಗಳಲ್ಲಿ ಪ್ರದರ್ಶನವಾಗುತ್ತಿವೆ. ಕೆಲವು ಪ್ರಿಮಿಯರ್ ಶೋ ಗಳಿಗೆ ಸಿನಿಮಾದ ಹಿರೋಗಳು ಬಂದು ಭಾಗವಹಿಸುವ ಮಟ್ಟವನ್ನು ತಲುಪಿದ್ದೇವೆ.

ಕನ್ನಡ ಚಿತ್ರಗಳಿಗೆ  ಧಿಡೀರನೆ ಒಂದು ಹೊರದೇಶದ  ಮಾರುಕಟ್ಟೆ ದೊರಕಿದೆ. ಈ ಹೊಸ ಬೆಳವಣಿಗೆ ಚಿತ್ರ ನಿರ್ಮಾಪಕರಿಗೆ ಆರ್ಥಿಕ ಸುಭದ್ರತೆಯನ್ನು ಕೊಟ್ಟಿರುವುದಲ್ಲದೆ ನಿರ್ದೇಶಕರಿಗೂ ಮತ್ತು ಕಲಾವಿದರಿಗೂ ಹುರುಪು ಪ್ರೋತ್ಸಾಹ ಗಳನ್ನು ಒದಗಿಸಿ ಉತ್ತಮ ಚಿತ್ರಗಳನ್ನು ಹೊರತರುವ ಅವಕಾಶ ಕಲ್ಪಿಸಿದೆ. ಇದರಿಂದ ಅನಿವಾಸಿ ಕನ್ನಡಿಗರಿಗೆ ಅವರ ತಾಯ್ನಾಡಿನ ಭಾಷೆ , ನೋಟ ಮತ್ತು ಬದುಕನ್ನು ಬೆಳ್ಳಿ ತೆರೆಯ ಮೇಲೆ ಅನುಭವಿಸುವ ಅವಕಾಶ ಒದಗಿದೆ. ಈ ಚಿತ್ರಗಳ ಮೂಲಕ ತಮ್ಮ ಮಕ್ಕಳಿಗೆ ಅನಾಯಾಸವಾಗಿ ಕನ್ನಡವನ್ನು ಪರಿಚಯಿಸುವ ಅವಕಾಶ ಲಭ್ಯವಾಗಿದೆ. ಜೊತೆಗೆ ಇಂಗ್ಲಿಷ್ ಟೈಟಲ್ಗಳನ್ನು  ಒದಗಿಸಿರುವುದರಿಂದ ಯುವ ಪೀಳಿಗೆ ಈ ಚಿತ್ರಗಳನ್ನು ನೋಡಲು ಅನುಕೂಲವಾಗಿದೆ. ಕೆಲವು ನಿರ್ದೇಶಕರು ತಮ್ಮ ಚಿತ್ರಕ್ಕೆ ಬಂಡವಾಳದ ಭಾಗವನ್ನು ಅನಿವಾಸಿ ಕನ್ನಡಿಗರಿಂದ ಹೊಡಿಸುವ ಕಾರ್ಯಕ್ಕೆ ಕೈ ಹಾಕಿದ್ದಾರೆ. ಈ ಮೇಲಿನ ಬೆಳವಣಿಗೆಗಳು ಕನ್ನಡ ಚಿತ್ರರಂಗವನ್ನು ಸಂವೃದ್ಧಿಗೊಳಿಸುವಲ್ಲಿ ಯಶಸ್ವಿಯಾಗಲಿ ಎಂದು ಹಾರೈಸೋಣ.

ಕಿರಿಕ್ ಪಾರ್ಟಿ ಎಂಬ ಚಿತ್ರ ಕರ್ನಾಟಕದಲ್ಲಿ ಹೌಸ್ ಫುಲ್ ವೀಕ್ಷಣೆ ಪಡೆದು ಜನಪ್ರಿಯವಾಗಿದೆ. ಈ ಚಿತ್ರ ಕಳೆದ ೨-೩ ವಾರಗಳಲ್ಲಿ ಯು.ಕೆ ಆದ್ಯಂತ ಹಲವು ಪ್ರದರ್ಶನಗಳನ್ನು ಕಂಡಿದ್ದು ಇದರ ಯಶಸ್ಸಿನ ಹಿನ್ನೆಲೆ ವಿಮರ್ಶಿಸುವ ಕಾರ್ಯವನ್ನು ವೈಶಾಲಿ ದಾಮ್ಲೆ  ಮತ್ತು ಕೇಶವ್ ಕುಲಕರ್ಣಿಯವರು ಕೈಗೊಂಡು ನಮ್ಮ ಜೊತೆ ಹಂಚಿಕೊಂಡಿದ್ದಾರೆ.ವೈಶಾಲಿ ನಮ್ಮ ‘ಅನಿವಾಸಿ’ ಗೆ ಸೇರಿಕೊಂಡ ನೂತನ ಪ್ರತಿಭೆ. ಮೂಲತಃ ಧರ್ಮಸ್ಥಳದವರಾಗಿದ್ದು ಮಂಗಳೂರಿನಲ್ಲಿ MBBS ಮುಗಿಸಿ ಕಳೆದ ಹತ್ತು ವರ್ಷಗಳಿಂದ ಇಲ್ಲಿ ನೆಲಸಿ ಸೈಕ್ಯಾಟರಿ ತಜ್ಞರಾಗಿ ಮ್ಯಾನ್ ಚೆಸ್ಟರ್ ನಲ್ಲಿ ವೃತ್ತಿ. ಪತಿ ಅನಿಲ್ ಮತ್ತು ಮಕ್ಕಳಾದ ಧಾತ್ರಿ ಮತ್ತು ಧೃತಿಯೊಂದಿಗೆ ಮ್ಯಾನ್ ಚೆಸ್ಟರ್ನಲ್ಲಿ ವಾಸವಾಗಿದ್ದಾರೆ. ಇವರಿಗೆ ಅನಿವಾಸಿ ಪರವಾಗಿ ತುಂಬು ಹೃದಯದ ಸ್ವಾಗತ. – ಸಂ)

***

‘ಕಿರಿಕ್ ಪಾರ್ಟಿ’  ಖಂಡಿತವಾಗಿಯೂ ಒಂದು ಶ್ಲಾಘನೀಯ ಪ್ರಯತ್ನ – ವೈಶಾಲಿ ದಾಮ್ಲೆ

img_5162

 

 

 

ಜಗದ ವಿದ್ಯಮಾನಗಳೆಲ್ಲ ಬೆಳಗ್ಗೆದ್ದರೆ ಬೆರಳ ತುದಿಗೇ ತಲುಪುವ ಯುಗ ಇದಾದ್ದರಿಂದ, ಕರ್ನಾಟಕದಲ್ಲಿ ‘ಕಿರಿಕ್ ಪಾರ್ಟಿ’ ಎಂಬ ಸಿನೆಮಾ ಬಿಡುಗಡೆ ಆದದ್ದು, ಹೌಸ್ ಫುಲ್ ಪ್ರದರ್ಶನಗಳನ್ನು ಕಾಣುತ್ತಿರುವುದು ಇತ್ಯಾದಿ ಸುದ್ದಿಗಳು ಕಳೆದೊಂದು ತಿಂಗಳಿಂದ ದಿನಪತ್ರಿಕೆಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ದಿನವೂ ಕಣ್ಣಿಗೆ ಬೀಳುತ್ತಿವೆ. ಇದೇನಪ್ಪಾ ‘ಕಿರಿಕ್ ಪಾರ್ಟಿ’ ಅಂತ ಕುತೂಹಲದಿಂದ ಇದರ ಬಗ್ಗೆ ಒಂದು ಸ್ವಲ್ಪ ಓದಿಯೂ ಇದ್ದೆ. ಇಂತಹ ‘ಕಿರಿಕ್ ಪಾರ್ಟಿ’ ನಮ್ಮೂರಿನಲ್ಲೇ ಪ್ರದರ್ಶನ ಕಾಣುತ್ತಿದೆ ಎಂದು ಒಂದು ವಾರದ ಹಿಂದೆ ತಿಳಿಯಿತು. ”ಸಿನೆಮಾ ನೋಡಿ ಬರೋಣವೇ” ಎಂದು ನನ್ನವರು ಕೇಳಿದಾಗ ”ನಮಗೆ ಇಷ್ಟವಾಗುತ್ತದೆ ಅಂತೀರಾ? ಅದೇನೋ ಕಾಲೇಜು ಹುಡುಗರ ಕಥೆಯಂತೆ” ಅಂತ ಅನುಮಾನ ವ್ಯಕ್ತಪಡಿಸಿದ್ದೆ. ”ಇಲ್ಲಿ ನಮಗೆ ಕನ್ನಡ ಸಿನೆಮಾಗಳನ್ನು ನೋಡಲು ಸಿಗುವುದೇ ಅಪರೂಪ. ಚೆನ್ನಾಗಿದೆ ಅಂತ ಓದಿದೆ. ಚಿತ್ರೀಕರಣ ಬೇರೆ ನಮ್ಮೂರಲ್ಲಿ, ಅದೂ ಮನೆ ಪಕ್ಕದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ನಡೆದಿದೆ, ನೋಡಿ ಬರೋಣ ಬಾ” ಎಂದು ಇವರೆಂದಾಗ ಸರಿ ಎಂದು ಒಪ್ಪಿದ್ದೆ. ಇನ್ನು, ಚಿತ್ರದ ನಾಯಕ ರಕ್ಷಿತ್ ಶೆಟ್ಟಿ ನಮ್ಮೂರಿನವನು, ಮುಂಚೆಯೂ ಕೆಲವು ಒಳ್ಳೆಯ ಚಿತ್ರಗಳನ್ನು ಕೊಟ್ಟವನು ಎಂಬ ಕಾರಣವೂ ಇತ್ತೆನ್ನಿ. ಅಂತೂ ಮೊನ್ನೆ ಶನಿವಾರದ ಸಂಜೆ ನಮ್ಮ ದೊಡ್ಡ ಮಗಳೊಂದಿಗೆ ‘ಕಿರಿಕ್ ಪಾರ್ಟಿ’ ನೋಡಲು ಹೊರಟೆವು.

ಚಿತ್ರದ ನಾಯಕ ಕರ್ಣ ಇಂಜಿನಿಯರಿಂಗ್ ವಿದ್ಯಾರ್ಥಿ. ಅವನು ಹಾಗೂ ಅವನ ಗೆಳೆಯರ ಗುಂಪೇ ‘ಕಿರಿಕ್ ಪಾರ್ಟಿ’. ಕಾಲೇಜು ಜೀವನದ ಹಲವು ಮುಖಗಳನ್ನು ಈ ಚಿತ್ರ ಹಂತ-ಹಂತವಾಗಿ, ಹಾಸ್ಯ, ಪ್ರೇಮ ಮತ್ತು ಕ್ರೌರ್ಯಗಳ ಮಿಶ್ರಣದೊಂದಿಗೆ ಪರಿಚಯಿಸುತ್ತದೆ. ಕಾಲೇಜು ಜೀವನದ, ಅದರಲ್ಲೂ ಹಾಸ್ಟೆಲ್ ಜೀವನದ ಅನುಭವ ಇರುವ ಎಲ್ಲರಿಗೂ ಈ ಚಿತ್ರ ಯಾವುದಾದರೂ ಒಂದು ರೀತಿಯಲ್ಲಿ ಬಹಳ ಹತ್ತಿರದ್ದೆನಿಸುತ್ತದೆ. ಇದರಲ್ಲಿ ಬರುವ ಒಂದಲ್ಲ ಒಂದು ದೃಶ್ಯದೊಂದಿಗೆ ನಮ್ಮ ಕಾಲೇಜು ಜೀವನದ ಘಟನೆಗಳು ತಾಳೆಯಾಗುತ್ತವೆ ಅನಿಸುತ್ತದೆ. ವೃತ್ತಿಪರ ಕಾಲೇಜುಗಳಿಗೆ ಪ್ರವೇಶ ಪಡೆದ ತಕ್ಷಣ ಪ್ರಪಂಚವನ್ನೇ ಗೆದ್ದವರಂತೆ,ಕಾಲೇಜು- ಹಾಸ್ಟೆಲ್ ಗಳ ನೀತಿ-ನಿಯಮಗಳ ಪರಿವೆಯೇ ಇಲ್ಲದಂತೆ ಇರುವ ಹುಡುಗ-ಹುಡುಗಿಯರನ್ನೆಲ್ಲ ನಾವು-ನೀವೆಲ್ಲರೂ ನೋಡಿದ್ದೇವೆ. ಇಂತಹ ‘ಕಿರಿಕ್ ಪಾರ್ಟಿ’ ಯ ಹುಡುಗರ ಯೋಚನೆಗಳು, ಅವರ ಜೀವನ ಮೌಲ್ಯಗಳು ಹೇಗೆ ಕಾಲ-ಕ್ರಮೇಣ ಬದಲಾಗುತ್ತವೆ, ಅವರು ಹೇಗೆ ತಮ್ಮನ್ನು ತಾವು ಕಂಡುಕೊಂಡು ಜವಾಬ್ದಾರಿಯುತ ನಾಗರಿಕರಾಗಿ ಬದಲಾಗುತ್ತಾರೆ ಎಂಬುದನ್ನು ಈ ಚಿತ್ರ ಬಹಳ ಪರಿಣಾಮಕಾರಿಯಾಗಿ ತೋರಿಸುತ್ತದೆ. ಚಿತ್ರದ ನಾಯಕ ಕರ್ಣನ ಈ ರೂಪಾಂತರಕ್ಕೆ ಕಾರಣರಾಗುವವರು ಅವನ ಸಹಪಾಠಿಗಳಾದ ಸಾನ್ವಿ ಹಾಗೂ ಆರ್ಯ.

‘ಉಳಿದವರು ಕಂಡಂತೆ’, ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’,  ‘ಸಿಂಪಲ್ ಆಗ್ ಒಂದು ಲವ್ ಸ್ಟೋರಿ’ ಇತ್ಯಾದಿ ಚಿತ್ರಗಳಲ್ಲಿ ಉತ್ತಮ ಅಭಿನಯ ನೀಡಿದ ರಕ್ಷಿತ್ ಶೆಟ್ಟಿ ಈ ಚಿತ್ರದಲ್ಲೂ ತನ್ನ ನಟನಾ ಕೌಶಲದಿಂದ ಮಿಂಚಿದ್ದಾನೆ. ಹೊಸಬರಾದ ರಶ್ಮಿಕಾ ಮಂದಣ್ಣ ಹಾಗೂ ಸಂಯುಕ್ತಾ ಹೆಗ್ಡೆ ತಮ್ಮ ಮುಗ್ಧತೆಯಿಂದ ಮನಸೂರೆಗೊಳ್ಳುತ್ತಾರೆ. ಅಜನೀಶ್ ಲೋಕನಾಥರ ಸಂಗೀತ ನೆನಪಿನಲ್ಲುಳಿಯುವಂತಿದೆ

ಇದಲ್ಲದೆ, ಕೆಲವು ಗಂಭೀರ ವಿಷಯಗಳನ್ನೂ ಚಿತ್ರ ಸಂಕ್ಷಿಪ್ತವಾಗಿ ಪರಿಗಣಿಸುತ್ತದೆ. ನಮ್ಮ ಮಡಿವಂತಿಕೆಯ ಸಮಾಜದಲ್ಲಿ ವೇಶ್ಯಾವೃತ್ತಿ ಶೀತ-ಜ್ವರಗಳಷ್ಟೇ ಸಾಮಾನ್ಯವಾಗಿದ್ದರೂ, ಜನರ ಕೆಂಗಣ್ಣಿಗೆ ಗುರಿಯಾಗುವುದು ವೇಶ್ಯೆ ಮಾತ್ರ, ಅವಳ ಅಸಹಾಯಕತೆಯನ್ನು ದುರ್ಬಳಕೆ ಮಾಡುವ ಗಂಡಸರಲ್ಲ ಎನ್ನುವುದು ಗೊತ್ತಿರುವ ವಿಚಾರವೇ ಆಗಿದ್ದರೂ ಇದನ್ನು ಮತ್ತೆ ಪರದೆಯ ಮೇಲೆ ಕಂಡು, ಕಣ್ಣು ಮಂಜಾಗಿದ್ದು ಸುಳ್ಳಲ್ಲ. ವೇಶ್ಯೆಯೊಬ್ಬಳಿಗೆ ಸಹಾಯ-ಹಸ್ತ ನೀಡುವ ಸಾನ್ವಿ ಹಾಗೂ ಕರ್ಣ, ಅವರಿಂದಾಗಿ, ಅವಳೊಂದು ಸಾಮಾನ್ಯ ಜೀವನ ನಡೆಸುವಂತೆ ಆಗುವ ಘಟನೆ ಮನಮಿಡಿಯುವಂತಿತ್ತು. ಹೆತ್ತವರಿಗೆ ತಮ್ಮ ಮಕ್ಕಳು ಉತ್ತಮ ನಾಗರಿಕರಾಗಿ ಬದುಕಬೇಕು ಎಂಬ ನಿರೀಕ್ಷೆ ಇರುವುದು ಎಷ್ಟು ಸಹಜವೋ, ಬೆಳೆಯುವ ವಯಸ್ಸಿನಲ್ಲಿ ಅವರು ಸಮಾನ-ವಯಸ್ಕರ ಪ್ರಭಾವಕ್ಕೊಳಗಾಗುವುದೂ ಅಷ್ಟೇ ಸಹಜ. ಈ ಹಂತದಲ್ಲಿ ಯುವಕ-ಯುವತಿಯರು ದಾರಿ ತಪ್ಪಿದರೆ, ಎಡವಿ ಬಿದ್ದರೆ, ಹೆತ್ತವರು ಹಾಗೂ ಅಷ್ಟೇ ಮುಖ್ಯವಾಗಿ ಶಿಕ್ಷಕರು ತಮ್ಮ ಘನತೆ-ಗೌರವಕ್ಕೆ ಧಕ್ಕೆ ಬಂತೆಂದು ಅವರನ್ನು ತಿರಸ್ಕರಿಸದೆ, ತಿಳಿಹೇಳಿ ಮುಕ್ತ ಮನಸ್ಸಿನಿಂದ ಅವರನ್ನು ಸ್ವೀಕರಿಸಿದರೆ, ಪರಿಣಾಮ ಒಳ್ಳೆಯದಾಗಬಹುದು ಎಂಬ ಸಂದೇಶವನ್ನೂ ಮನಮುಟ್ಟುವಂತೆ ನೀಡುತ್ತದೆ. ಇನ್ನು, ‘ಮಾಡರ್ನ್’ ಆಗುವ ಭರದಲ್ಲಿ, ಹುಡುಗರಿಗಿಂತ ನಾವೇನು ಕಮ್ಮಿ ಎಂದು ಹುಡುಗಿಯರೂ ಈಗ ಮದ್ಯ ಹಾಗೂ ಮಾದಕ ದ್ರವ್ಯಗಳನ್ನು ಸೇವಿಸುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಈ ‘ಮಾಡರ್ನ್’ ವರ್ತನೆಗಳಿಂದ ಅನಾಹುತಗಳೇನಾದರೂ ಸಂಭವಿಸಿದರೆ, ಹುಡುಗರನ್ನು ನೋಡುವ  ದೃಷ್ಟಿಯಿಂದ ಸಮಾಜ ಹುಡುಗಿಯರನ್ನು ಕಾಣುವುದಿಲ್ಲ, ಜನರ ಕಣ್ಣಿನಲ್ಲಿ ಅವರು ಎಂದಿಗೂ ತಪ್ಪಿತಸ್ಥರಾಗಿಯೇ ಇರುತ್ತಾರೆ ಎಂಬ ಕಠೋರ ಸತ್ಯವನ್ನೂ ಬಹಳ ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ.

kirik-party-image-3ವ್ಯಂಗ್ಯ ಚಿತ್ರ – ಕೃಪೆ ಲಕ್ಷ್ಮೀನಾರಾಯಣ ಗುಡೂರ್

ಆದರೆ, ಚಿತ್ರದಲ್ಲಿ ಹಿಂಸೆ-ಕ್ರೌರ್ಯಗಳ ವೈಭವೀಕರಣ ಸ್ವಲ್ಪ ಜಾಸ್ತಿಯೇ ಇತ್ತು ಎಂದು ನನಗನ್ನಿಸಿತು. ಅಲ್ಪಪ್ರಾಣ- ಮಹಾಪ್ರಾಣಗಳು ಕನ್ನಡ ಭಾಷೆಯ ಅವಿಭಾಜ್ಯ ಅಂಗ ಎಂದು ನಂಬಿರುವ ನನಗೆ, ‘ಗರ್ಬಕೋಶ’, ‘ಚಕ್ರವ್ಯೂಹವನ್ನು ಬೇದಿಸಿದ ಅಬಿಮನ್ಯು’ ‘ಕರ್ಣ ಕರೀದಿಸಿದ ಕಾರು’ ಇತ್ಯಾದಿ ಭಾಷಾದೋಷಗಳು ಸಿಹಿ ಅವಲಕ್ಕಿಯೊಳಗಿನ ಕಲ್ಲಿನಂತೆ ಎತ್ತಿ ಕಾಣಿಸಿದ್ದರಲ್ಲಿ ಆಶ್ಚರ್ಯವೇನಿಲ್ಲ. ಇನ್ನು, ಕುಡಿತ ಹಾಗೂ ಸಿಗರೇಟು ಸೇವನೆಯ ದೃಶ್ಯಗಳ ಪ್ರಮಾಣವಂತೂ ಉಸಿರುಗಟ್ಟಿಸುವಂತಿತ್ತು. ನಾನು ಮೊದಲು ಹೇಳಿದಂತೆ, ಕಾಲೇಜು ಜೀವನದಲ್ಲಿ ಕುಡಿತ, ಸಿಗರೇಟುಗಳೊಂದಿಗೆ ‘ಎಕ್ಸ್ ಪೆರಿಮೆಂಟ್’ ಮಾಡುವ ಹಲವರನ್ನು ನಮ್ಮಲ್ಲಿ ಬಹಳಷ್ಟು ಜನ ಕಂಡಿದ್ದೇವಾದರೂ, ಇವೆಲ್ಲ ಕಾಲೇಜು ಜೀವನದ ಅನಿವಾರ್ಯ ವಿಷಯಗಳು, ರಾತ್ರಿ ಹೊತ್ತು ಹಾಸ್ಟೆಲ್ ಗೆ ಬಂದು ಎಲ್ಲರೂ ಮಾಡುವುದೇ ಇದನ್ನು, ಅದೇನೂ ದೊಡ್ಡ ವಿಷಯವಲ್ಲಎಂಬಂತೆ ಬಿಂಬಿಸಿದ್ದನ್ನು ನೋಡಿ, ನನ್ನೊಳಗಿನ ಸಂಪ್ರದಾಯಸ್ಥ ತಾಯಿ ಜಾಗೃತಳಾಗಿದ್ದಳು. ‘Where do we draw the line between what is acceptable and what is not’ ಎಂದು ನಿಷ್ಕರ್ಷಿಸುತ್ತಲೇ ನಾನು ಸಿನೆಮಾ ಮಂದಿರದಿಂದ ಹೊರಬಂದೆ.

ಒಟ್ಟಿನಲ್ಲಿ, ಕನ್ನಡ ಸಿನೆಮಾ ಜಗತ್ತಿನಲ್ಲಿ ಉತ್ತಮ ಚಿತ್ರಗಳು ಬರುತ್ತಿರುವುದು ಸ್ವಾಗತಾರ್ಹ.

ಇತ್ತೀಚಿನ ಕನ್ನಡ ಸಿನೆಮಾಗಳ ಕೀಳು ಹಾಸ್ಯ, ಮುಜುಗರ ಬರಿಸುವ ಸಂಭಾಷಣೆ, ಅರ್ಥವಿಲ್ಲದ ಸಾಹಿತ್ಯ ಇತ್ಯಾದಿಗಳಿಂದ ಬೇಸತ್ತಿದ್ದ ಕನ್ನಡಾಭಿಮಾನಿಗಳು ಮತ್ತೆ ಚಿತ್ರಮಂದಿರಗಳತ್ತ ಹೋಗುವಂತೆ ಪ್ರೇರೇಪಿಸುತ್ತಿರುವ ಚಿತ್ರಗಳು ಈಗ ಮತ್ತೆ ಮೂಡಿಬರುತ್ತಿರುವುದು  ತುಂಬಾ ಸಂತೋಷದ ವಿಷಯ. ಈ ನಿಟ್ಟಿನಲ್ಲಿ ‘ಕಿರಿಕ್ ಪಾರ್ಟಿ’ ಖಂಡಿತವಾಗಿಯೂ ಒಂದು ಶ್ಲಾಘನೀಯ ಪ್ರಯತ್ನ. ಚಿತ್ರದ ಎರಡನೇ ಹಂತ ಸ್ವಲ್ಪ ದೀರ್ಘವೆನಿಸಿದರೂ,  ಎಲ್ಲಿಯೂ ನೀರಸತೆಯ ಭಾವ ಕಾಡದಂತೆ, ಕೆಲವು ಅನಿರೀಕ್ಷಿತ ಬೆಳವಣಿಗೆಗಳೊಂದಿದೆ ಪ್ರೇಕ್ಷಕರ ಮನಸ್ಸನ್ನು ಸೆರೆಹಿಡಿಯುವಲ್ಲಿ ಚಿತ್ರ ಯಶಸ್ವಿಯಾಗಿದೆ. ನಮ್ಮ-ನಿಮ್ಮೆಲ್ಲರನ್ನೂ ನೆನಪಿನಂಗಳದಲ್ಲೊಂದು ವಾಕ್ ಮಾಡಿಸಿ ಬರುತ್ತದೆ, ಮುಖದಲ್ಲೊಂದು ನಗು ಮೂಡಿಸುತ್ತದೆ.  ಕಾಲೇಜು ಜೀವನದ ಉತ್ಸಾಹ, ಅಲ್ಲಿಯ ಆಗು-ಹೋಗುಗಳು, ಕಾಲೇಜು ವಿದ್ಯಾರ್ಥಿಗಳ ದೃಷ್ಟಿಯಿಂದ ನೋಡಿದರೆ ಬಹಳ ಚೆನ್ನಾಗಿ ಚಿತ್ರಿತವಾಗಿವೆ.  ಸದಭಿರುಚಿಯ, ನಾವೆಲ್ಲರೂ  ಕುಟುಂಬದೊಡನೆ ಕುಳಿತು ನೋಡಬಹುದಾದ ಇನ್ನಷ್ಟು ಸಿನೆಮಾಗಳು ಕನ್ನಡದಲ್ಲಿ ಮೂಡಿಬರುತ್ತವೆ ಎಂದು ಆಶಿಸೋಣ. ಕನ್ನಡದ ಪ್ರತಿಭೆಗಳು ನಟಿಸಿರುವ, ನಿರ್ಮಿಸಿರುವ, ಒಳ್ಳೆಯ ಚಿತ್ರಗಳು ಬಂದಾಗ ಕೊಂಕು ನುಡಿಯುವುದನ್ನು ಬಿಟ್ಟು, ಅವುಗಳನ್ನು ಪ್ರೋತ್ಸಾಹಿಸೋಣ. ಹೀಗಾದರೆ, ಕನ್ನಡ ಚಿತ್ರರಂಗ ಡಾಕ್ಟರ್ ರಾಜ್, ಡಾಕ್ಟರ್ ವಿಷ್ಣುವರ್ಧನ್ ರವರ ಕಾಲದಲ್ಲಿ ಇದ್ದಂತೆ ಮತ್ತೆ ಉತ್ತುಂಗಕ್ಕೇರುವ ದಿನ ಬರಬಹುದು.

***

`ಪ್ರೇಮಲೋಕ`ದಿಂದ `ಕಿರಿಕ್ ಪಾರ್ಟಿ`- ಕೇಶವ್ ಕುಲಕರ್ಣಿ

೧೯೮೭:

ನಾನಿನ್ನೂ ಕಾಲೇಜಿಗೆ ಕಾಲಿಟ್ಟಿರಲಿಲ್ಲ. `ಈ ನಿಂಬೆಹಣ್ಣಿನಂಥ ಹುಡುಗಿ ಬಂತು ನೋಡೋ`, `ಚಲುವೆ ಒಂದು ಕೇಳ್ತೀನಿ, ಇಲ್ಲ ಅಂದೇ (ಅನ್ನದೇ ಅಲ್ಲ) ಕೊಡ್ತೀಯಾ?`, `ನೋಡಮ್ಮಾ ಹುಡುಗಿ ಕೇಳಮ್ಮಾ ಸರಿಯಾಗಿ`,  ಎಂದು ಮಾತಾಡುವಂಥ ವಾಕ್ಯಗಳ ಹಾಡು ಕಿವಿಗೆ ಬಿದ್ದವು. ಚಿ ಉದಯ ಶಂಕರ್ ಅವರ ಸರಳಿತ ಸುಲಲಿತ, ವಿಜಯ ನಾರಸಿಂಹ ಅವರ ಕ್ಲಿಷ್ಟಪದಗಳ ಹಾಡುಗಳನ್ನು ಕೇಳಿ ಬೆಳೆದ ನನಗೆ ಮೊದಮೊದಲು ಸ್ವಲ್ಪ ಕಸಿವಿಸಿಯೇ ಆಯಿತು. We all resist change. ಆದರೆ ಸ್ವಲ್ಪೇ ದಿನಗಳಲ್ಲಿ ಹಾಡುಗಳು ಹುಚ್ಚು ಹಿಡಿಸಿದವು, ಬಾಯಿಪಾಠ ಆದವು. ಹೊಸಪರಿಭಾಷೆಯ ಸಾಹಿತ್ಯ ಮತ್ತು ಸಂಗೀತದ ಹೊಸತನ ಮಲಗಿದ್ದ ಕನ್ನಡ ಚಿತ್ರಸಂಗೀತವನ್ನು ಬಡಿದೆಬ್ಬಿಸಿತು. ಇನ್ನೂ ಕಾಲೇಜಿನ ಮೆಟ್ಟಿಲು ಹತ್ತಿಲ್ಲದಿದ್ದರೂ ಕಾಲೇಜಿಗೆ ಹೋಗುವ ಅಣ್ಣ ಇದ್ದ, ಬಳಗದ ಜನ ಇದ್ದರು, ಗೆಳೆಯರ ಅಣ್ಣ ತಂಗಿಯರಿದ್ದರು. ಎಲ್ಲರ ಬಾಯಲ್ಲೂ `ಪ್ರೇಮಲೋಕ`ದ ಹಾಡುಗಳೇ. ಈ ಸಿನೆಮಾ ಮಹತ್ವದ್ದಾಗುವುದು ಬರೀ ಹಾಡುಗಳಿಂದಲ್ಲ. ಹಾಡುಗಳ ಮೂಲಕ ಸಿನೆಮಾದ ಕತೆ ಹೇಳುವ, ಕಾಲೇಜು ಬದುಕಿನ ಪ್ರೇಮವನ್ನು ಪಡ್ಡೆ ಹುಡುಗರ ದೃಷ್ಟಿಯಿಂದ ತೋರಿಸಿತು. ಸಿನೆಮಾ ಯಾವಾಗ ನಮ್ಮೂರಿಗೆ ಬರುತ್ತೋ ಎಂದು ಕಾದಿದ್ದೇ ಕಾದಿದ್ದು. ಕಾಲೇಜಿನ ಬಗ್ಗೆ ಅದೇ ಮೊದಲ ಸಿನೆಮಾ ಏನಲ್ಲ. ಆದರೆ ಪ್ರೇಮಲೋಕ ಕನ್ನಡ ಕಮರ್ಷಿಯಲ್ ಚಿತ್ರದ ಒಂದು ಮಹತ್ವದ ಮೈಲುಗಲ್ಲಯಿತು. ಕಾಲೇಜ್ ಲೈಫನ್ನು ಬೆಳ್ಳಿಪರದೆ ಮೇಲೆ ಅಜರಾಮರವಾಗಿಸಿತು. ತುಂಡುಲಂಗದ ಜೂಹಿ ಚಾವ್ಲಾ ಹುಡುಗರ ಎದೆಯಲ್ಲಿ ಭದ್ರವಾದರು. ತುಟಿಗೆ ತುಟಿಯಿಟ್ಟು ಮುತ್ತನಿತ್ತು ಹುಡುಗರಿಗೆ ಹುಚ್ಚುಹಿಡಿಸಿದರು.

೨೦೧೬-೨೦೧೭:

ಫಾಸ್ಟ್ ಪಾರ್ವರ್ಡ್ ೨೦ ಇಯರ್ಸ್. `ಬೆಳಗೆದ್ದು ಯಾರ ಮುಖವ ನಾನು ನೋಡಿದೆ`, `ಸಾರ್, ತಿರ್ಬೋಕಿ ಜೀವನಾ ನಮ್ಮದಲ್ಲ`, ಎನ್ನುವ ಹಾಡುಗಳು ಕನ್ನಡಿಗರ ಫೋನುಗಳಲ್ಲಿ ಗುಣಗುಣಿಸುತ್ತಿದೆ. ಈಗ ಕೆಲ ವರ್ಷದಿಂದ ಯೋಗರಾಜ ಭಟ್ಟರು ಕನ್ನಡ ಹಾಡುಗಳನ್ನು ಬರೆಯುವ ಶೈಲಿಯನ್ನೇ ಬದಲಾಯಿಸಿದರು (ಹಳೆಪಾತ್ರೆ ಹಳೆಕಬಣ ಹಳೆ ಪೇಪರ್ ತರ ಹೋಯಿ). ಅಲ್ಲಿಂದ ಶುರುವಾದ ಟ್ರೆಂಡು `ಕಿರಿಕ್ ಪಾರ್ಟಿ`ಯಲ್ಲಿ ಮುಂದುವರೆದಿದೆ.

ಮತ್ತೆ ಕಾಲೇಜು ಲೈಫು. ಮತ್ತೊಂದು ಪ್ರೇಮಲೋಕ ಎಂದುಕೊಂಡರೆ ಅದು ಶುದ್ಧ ಸುಳ್ಳು. ಇಲ್ಲಿ ಪ್ರೇಮವಿದೆ, ಆದರೆ ಅದೇ ಮುಖ್ಯ ಎಳೆ ಅಲ್ಲ. ಇಂಜಿನಿಯರಿಂಗ್ ಕಾಲೇಜಿದೆ ಎಂದ ಮಾತ್ರಕ್ಕೆ `ಥ್ರಿ ಇಡಿಯಟ್ಸ್` ನ ನಕಲು ಆಗಿಲ್ಲ, ಎಲ್ಲಿಯೂ ಪ್ರೀಚ್ ಮಾಡುವುದೇ ಇಲ್ಲ. ಹುಡುಗಿಯರು ತುಂಡುಲಂಗ ಹಾಕುವುದಿಲ್ಲ, ಎದೆಸೀಳು ತೋರಿಸುವುದಿಲ್ಲ.  ತುಟಿಗೆ ತುಟಿಯಿಟ್ಟು ಮುತ್ತನಿಡುವುದಿಲ್ಲ. ಆದರೆ ಸಿನೆಮಾ ಬಾಕ್ಸಾಫೀಸನ್ನು ದೋಚುತ್ತಿದೆ.

ಇಪ್ಪತ್ತು ವರ್ಷಗಳಲ್ಲಿ ಎಷ್ಟೊಂದು ಬದಲಾಗಿದೆ!

ಮಲಯಾಳಂನಲ್ಲಿ ಕಾಲೇಜ್ ಜೀವನದ ಬಗ್ಗೆ ಅದ್ಭುತ ಸಿನೆಮಾಗಳನ್ನು ಮಾಡಿದ್ದಾರೆ. ಅದರಲ್ಲಿ ಸುಮಾರು ಸಿನೆಮಾಗಳು ಕನ್ನಡಕ್ಕೂ ಬಂದಿದೆ. `ಅಟೋಗ್ರಾಫ್`, `ಪ್ರೇಮಂ` ಉದಾಹರಣೆಗಳು. `ಕಿರಿಕ್ ಪಾರ್ಟಿ` ಅದಕ್ಕೊಂದು ಉತ್ತರ ಕೊಟ್ಟಿದೆ.

ಯಾವುದೇ ಬೋಧನೆ ಅಥವಾ ಉಪದೇಶದ ಹಂಗಿಲ್ಲದೇ ಒಂದು ದೊಡ್ಡ ಸೋಷಿಯಲ್ ಮೆಸೇಜನ್ನು ಹುಳ ಬಿಡುತ್ತದೆ ಈ ಚಿತ್ರ. ಈ ಲಾಸ್ಟ್ ಬೆಂಚ್ ಹುಡುಗರು ಮಾತೆತ್ತಿದರೆ ಕುಡಿಯುತ್ತಾರೆ, ಸೇದುತ್ತಾರೆ, ಬ್ಯಾಟು-ಸ್ಟಂಪು ಹಿಡಿದು ಹೊಡೆದಾಡಿಕೊಳ್ಳುತ್ತಾರೆ, ಸಸ್ಪೆಂಡಾಗುತ್ತಾರೆ, ಫೇಲಾಗುತ್ತಾರೆ, ಆನ್ಸರ್ ಪತ್ರಿಕೆಯನ್ನೇ ಕದ್ದು ಹಾಸ್ಟೇಲಿನಲ್ಲಿ ಕುಡಿಯುತ್ತ ಸೇದುತ್ತ ಜ್ಯೂನಿಯರುಗಳನ್ನು ಜಾನುವಾರುಗಳಂತೆ ಅಳಿಸುತ್ತ ಉತ್ತರ ಬರೆಯುತ್ತಾರೆ. ಆದರೆ ಈ ಹುಡುಗರ ಬಗ್ಗೆ ಯಾರೂ ಒಂದೇ ಒಂದು ಕೆಟ್ಟ ಮಾತು ಹೇಳುವುದಿಲ್ಲ.

ಆದರೆ ಹುಡುಗಿ, ಕುಡಿದು ಕುಣಿಯುತ್ತ ಅಕಸ್ಮಾತ್ತಾಗಿ ಬಿದ್ದು ಸತ್ತರೆ ಆ ವೀಡಿಯೋ ಮನೆ ಮನೆಯನ್ನೂ ತಲುಪಿ ಹುಡುಗಿಯ ಜನರ ಬಾಯಿಚಪಲದ ವಸ್ತುವಾಗುತ್ತಾಳೆ.  ತಂದೆಯ ಕಣ್ಣಲ್ಲಿ ಮಗಳು ನಿಷ್ಕೃಷ್ಟವಾಗುತ್ತಾಳೆ. ನಗಿಸುತ್ತ, ಎಪಿಸೋಡಿಕ್ ಆಗಿ ಕತೆ ಹೇಳುತ್ತ, ಎರಡೂವರೆ ಗಂಟೆ ಕಾಲೇಜು ಮತ್ತು ಕಾಲೇಜ್ ಹಾಸ್ಟೇಲಿನಲ್ಲಿ ನಮ್ಮನ್ನು ಕರೆದೊಯ್ಯುತ್ತಾರೆ.

ಬದಲಾಗುತ್ತಿರುವ ಸಮಾಜಕ್ಕೆ, ಎಲ್ಲರ ಕೈಯಲ್ಲಿ ಮೊಬೈಲ್ ಇರುವ ಜನಾಂಗಕ್ಕೆ ಈಗ ಮನರಂಜನೆ ಎಂದರೆ ಮರ ಸುತ್ತಿ ಕುಣಿಯುವ ಹಾಡುಗಳಲ್ಲ, ತುಂಡುಲಂಗದ ಹುಡುಗಿಯರಲ್ಲ, ಕ್ಯಾಬರೆಗಳಲ್ಲ. ಒಂದು ಚಿಕ್ಕ ಕತೆ, ಚಂದದ ಚಿತ್ರಕತೆ, ಅದಕ್ಕೊಪ್ಪುವ ಹಾಡುಗಳು, ಒಂದಿಷ್ಟು ನಗು, ಸ್ವಲ್ಪವೇ ಅಳು, ದಿನಾ ಮಾತಾಡುವಂಥ ಸಂಭಾಷಣೆ, ಸುಪ್ತವಾಗಿ ಹರಿಯುವ ಒಂದು ಮೆಸೇಜು ಇದ್ದರೆ ಜನ ಸಿನೆಮಾ ಹಾಲಿಗೆ ಬರುವಂತೆ ಮಾಡಬಹುದು ಎನ್ನುವುದಕ್ಕೆ ಈ ಸಿನೆಮಾ ಉದಾಹರಣೆ.

ಈ ಸಿನೆಮಾ ಏನು ಧಿಡೀರ್ ಎಂದು ಆದದ್ದಲ್ಲ. ಇದೇ ರಕ್ಷಿತ್ `ಉಳಿದವರು ಕಂಡಂತೆ` ಎನ್ನುವ `ರೋಶೋಮಾನ್` ತರಹದ ಸಿನೆಮಾ ಮಾಡಿದವರು. ಕಳೆದ ಕೆಲ ವರ್ಷ ಕನ್ನಡದಲ್ಲಿ ಹೊಸ ಹುಡುಗರು ವಿಭಿನ್ನ ಸಿನೆಮಾಗಳನ್ನು ಮಾಡುತ್ತಿದ್ದಾರೆ, ಅಷ್ಟೇ ಅಲ್ಲ, ಚೆನ್ನಾಗಿ ದುಡ್ಡು ಕೂಡ ಮಾಡುತ್ತಿದ್ದಾರೆ. `ರಂಗಿತರಂಗ`, `ಆಟಗಾರ`, `ಲೂಸಿಯಾ`, `ಯು ಟರ್ನ್`, ಕೆಲವು ಉದಾಹರಣೆಗಳು.

ಈ ಸಿನೆಮಾ, ಕಾಲೇಜು ಬರೀ ಪ್ರೇಮಿಸುವುದನ್ನು ಕಲಿಸುವುದಿಲ್ಲ, ನಗುವುದನ್ನು, ಗೆಳೆಯರನ್ನು, ವೈರಿಗಳನ್ನು, ಕುಡಿಯುವುದನ್ನು, ಸೇದುವುದನ್ನು, ವಿರಹವನ್ನು ಕಲಿಸುತ್ತದೆ ಎಂದು ಹದವಾಗಿ ಹೇಳುತ್ತದೆ, ಕಡೆಬೆಂಚಿನ ಹುಡುಗರ ದೃಷ್ಟಿಕೋನದಿಂದ.

ಬದಲಾಗುತ್ತಿರುವ ಹಿಂದೀ ಸಿನೆಮಾ ಸಂಗೀತದಂತೆಯೇ ಕನ್ನಡ ಸಂಗೀತವೂ ಬದಲಾಗುತ್ತಿದೆ. ಸಂಗೀತದಂತೆ ಸಿನೆಮಾ ಸಾಹಿತ್ಯವೂ ಕಾಲಕ್ಕೆ ತಕ್ಕಂತೆ ಬದಲಾಗುತ್ತಿದೆ. ಹೊಸಕಾಲಕ್ಕೆ ಹೊಸಹುಡುಗರು ಹೊಸ ರೀತಿಯಲ್ಲಿ ಕತೆ ಹೇಳುತ್ತಿದ್ದಾರೆ, ಹೊಸ ರೀತಿಯಲ್ಲಿ ಹಾಡುತ್ತಿದ್ದಾರೆ. ಸಿನೆಮಾದಲ್ಲಿ ಕ್ಲೀಷೆಯಾಗಿರುವ ಸೀನುಗಳನ್ನು ಧಿಕ್ಕರಿಸಿ ಸೀನುಗಳನ್ನು ಹೆಣೆಯುತ್ತಿದ್ದಾರೆ.  ಇಂಗ್ಲಂಡಿಗೂ ಸಿನೆಮಾ ರಿಲೀಸ್ ಮಾಡಿ ನಮಗೆಲ್ಲ ಮುದನೀಡಿದ್ದಾರೆ. ಖುಷಿಯಾಗುತ್ತದೆ.

***

ಕಿಲಿಮಂಜಾರೋ – ಒಂದು ಅನುಭವ

(ಹಲವು ವರ್ಷಗಳ ಹಿಂದೆ ಭಾರತದಲ್ಲಿ ಪ್ರವಾಸಕ್ಕೂ  ತೀರ್ಥಯಾತ್ರೆಗೂ ವ್ಯತ್ಯಾಸ ವಿರಲಿಲ್ಲ. ತಿರುಪತಿ,  ಧರ್ಮಸ್ಥಳ ಗಳಿಗೆ ತೆರಳಿ ದರ್ಶನ ಭಾಗ್ಯ ಪಡೆಯುವುದಷ್ಟೇ ನಮ್ಮ ಉದ್ದೇಶವಾಗಿತ್ತು. ಕಾಲಕ್ರಮೇಣ ಭಾರತೀಯರು ಪ್ರೇಕ್ಷಣೀಯ ಸ್ಥಳಗಳಿಗೆ ಹೋಗಿ ವಿರಮಿಸಿ ಬರುವುದು ರೂಢಿಯಾಯಿತು. ಮುಂದೆ ಫಾರಿನ್ ಟೂರ್ ಗಳು ಕೆಲವರಿಗೆ ಸಾಧ್ಯವಾಯಿತು. ಇತ್ತೀಚಿನ ದಿನಗಳಲ್ಲಿ ಸಾಹಸ ಪ್ರವಾಸ ( Adventure Travel) ಮಾಡುವ ಹಂಬಲ ಅನಿವಾಸಿ ಭಾರತೀಯರಲ್ಲಿ ಹಾಗು ಭಾರತದಲ್ಲಿನ ಯುವ ಪೀಳಿಗೆಯಲ್ಲಿ ಕಾಣಬಹುದು. ಹೀಗೆ ನಮ್ಮ ಪ್ರವಾಸದ ಗೀಳು ಹಂತ ಹಂತ ಗಳಲ್ಲಿ ಬೆಳೆದು ಬಂದಿದೆ.

ಅನ್ನಪೂರ್ಣ ಆನಂದ್ ಅವರು ತಮ್ಮ ಕುಟುಂಬದೊಂದಿಗೆ ಸಾಹಸ ಪ್ರವಾಸವನ್ನು ಮಾಡುವ ಸೆಳತಕ್ಕೆ ಸಿಕ್ಕಿ ಒದಗಿಬಂದ ಅವಕಾಶವನ್ನು ಬಹಳ ಸಿದ್ಧತೆಗಳಿಂದ ಕೈಗೊಂಡು ಪೂರೈಸಿರುವುದಲ್ಲದೇ ತಮ್ಮ ರೋಮಾಂಚಕ ಅನುಭವವನ್ನು ‘ಅನಿವಾಸಿಯಲ್ಲಿ’ ನಮೆಲ್ಲರೊಂದಿಗೆ ಹಂಚಿಕೊಂಡಿದ್ದಾರೆ. ಕಿಲಿಮಂಜಾರೋ ಪರ್ವತದಲ್ಲಿ ಪ್ರತಿವರ್ಷ ಸುಮಾರು ೧,೦೦೦ ಪ್ರವಾಸಿಗರು ದೈಹಿಕ ಹಾನಿಗೆ ಒಳಗಾಗಿ ಹತ್ತರಿಂದ ಇಪ್ಪತ್ತು ಜನ ಸತ್ತಿರುವುದರ ಬಗ್ಗೆ ಅಂತರ್ಜಾಲದಲ್ಲಿ ಮಾಹಿತಿಗಳಿವೆ. ಇಷ್ಟು ಕಷ್ಟಕರವಾದ, ಅಪಾಯವಾದ ಪ್ರವಾಸ ಕೈಗೊಳ್ಳುವ ಉದ್ದೇಶವನ್ನು ಕೆಲವರು ಪ್ರಶ್ನಿಸಬಹುದು

ಪ್ರಕೃತಿ ಒಡ್ಡುವ ಸವಾಲುಗಳನ್ನು ಎದುರಿಸುವ ಛಲ ಮಾನವನಿಗೆ ಸಹಜವಾಗಿ ಬಂದಿದೆ. ಈ ಒಂದು ಸವಾಲನ್ನು ಗೆದ್ದು ಅದರಿಂದ ಪಡೆಯುವ ಆತ್ಮ ವಿಶ್ವಾಸ ಕೆಲವರಿಗೆ ಹೆಮ್ಮೆ ಮತ್ತು ಸಂತೃಪ್ತಿಯನ್ನು ಕೊಡುವುದರ ಜೊತೆಗೆ ಬದುಕಿನಲ್ಲಿ ನೂತನ ಅನುಭವವನ್ನು ಒದಗಿಸಿರಬಹುದು. ಕೆಲವರು ತಮ್ಮ ಬದುಕಿನಲ್ಲಿ ಸಾರ್ಥಕತೆಯನ್ನು ಹೀಗೆ ಕಂಡಿರಬಹುದು. ಸಂ )

***

ಕಿಲಿಮಂಜಾರೋ – ಅನ್ನಪೂರ್ಣ ಆನಂದ್ ಅವರ ಒಂದು ಅನುಭವ

ಕಿಲಿಮಾಂಜರೋ (ಕಿಲಿ) ಹತ್ತಬೇಕೆಂಬ ಹಂಬಲ ಈಗ್ಗೆ ಸುಮಾರು ೫-೬ ವರ್ಷಗಳಿಂದ ನನಗಿತ್ತು. ಸಮಯ ಒದಗಿಬಂದಿರಲಿಲ್ಲ! ಹೋದ ವರ್ಷ ಮೇ ತಿಂಗಳಲ್ಲಿ, UK ಕನ್ನಡ ಬಳಗದ ಹಸ್ತಾಂತರ ಸಭೆಯ ಸಂದರ್ಭದಲ್ಲಿ , ಡಾ| ಗಿರೀಶ್ ವಸಿಷ್ಠ ಅವರು ಕಿಲಿ ಗೆ ಹೋಗುವ ತಮ್ಮ ಆಲೋಚನೆಯ  ಬಗ್ಗೆ ಹೇಳಿದರು. ತಕ್ಷಣ ನಾನೂ ಬರುವುದಾಗಿ ನನ್ನ ಉತ್ಸಾಹವನ್ನ ವ್ಯಕ್ತಪಡಿಸಿದೆ. ಅವರು ಹೃತ್ಪೂರ್ವಕವಾಗಿ ಒಪ್ಪಿದರು. ಮುಂದೆರಡು ವಾರಗಳಲ್ಲಿ ಪ್ರವಾಸದ ವಿವರಗಳನ್ನು ಇಮೇಲ್ ಮೂಲಕ ನನಗೆ ಕಳುಹಿಸಿದರು. Tro-peaks adventures ಎಂಬ ಕಂಪನಿ ನಮ್ಮ ಪ್ರವಾಸದ ಜವಾಬ್ದಾರಿಯನ್ನ ವಹಿಸಿತ್ತು. ವಿಮಾನ ಪ್ರಯಾಣ, ವಸತಿ ಮತ್ತು ೭ ದಿನದ ಪರ್ವತಾರೋಹಣಕ್ಕೆ ಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸುವುದು ಅವರ ಜವಾಬ್ದಾರಿಯಾಗಿತ್ತು  (package deal).

ನಾನು ಕಿಲಿಗೆ ಹೋಗುವ ವಿಷಯ ತಿಳಿದ ನನ್ನ ಮಕ್ಕಳು (ನವ್ಯ, ಹರ್ಷ), ಅವರೂ ಬರುವುದಾಗಿ ತಿಳಿಸಿದರು. ಕಿಲಿ whatsapp ಗ್ರೂಪ್ ಶುರುವಾಗಿ, 2017 Jan ೫ – ೧೫ ಹೋಗಿ ಬರಲು flight ಬುಕ್ ಕೂಡ ಆಯಿತು. ಆ ಸಮಯದಲ್ಲಿ ನನ್ನ ಪತಿ ಆನಂದ್ ತಾವೂ ಬರುವುದಾಗಿ ನಿರ್ಧರಿಸಿ, ಅವರೂ ನಮ್ಮ ಗುಂಪಿಗೆ ಸೇರ್ಪಡೆಯಾದರು

ಕಿಲಿ ಹತ್ತಲು ಬೇಕಾದ ತರಬೇತಿಯನ್ನ ನಾನು ಮತ್ತು ಆನಂದ್ ಪ್ರಾರಂಭಿಸಿದೆವು. ಆನಂದ್ ದಿನಾ ಬೆಳಿಗ್ಗೆ treadmill ನಲ್ಲಿ ಒಂದು ಘಂಟೆ ಓಡಲಾರಂಭಿಸಿದರು. ನಾನು ಕೆಲಸದಿಂದ ಬಂದು ಸಾಯಂಕಾಲ ೧೦k ಹೊರಗೆ ಓಡಿ ಬರಲಾರಂಭಿಸಿದೆ. ವಾರಾಂತ್ಯದಲ್ಲಿ ೪ – ೮ ಘಂಟೆಗಳ ಕಾಲ ನಮ್ಮಮನೆ ಸುತ್ತಲಿರುವ Cotswolds ನಲ್ಲಿ ನಡೆದು ಬರುತ್ತಿದ್ದೆವು.ಆಗಸ್ಟ್ ತಿಂಗಳಲ್ಲಿ  ಬೆನ್ ನೆವಿಸ್ ಹತ್ತಿ ಬಂದೆವು. ಹಾಗೆ, Snowdon ಬೆಟ್ಟವನ್ನ ೪ – ೫ ಸಲಿ ಹತ್ತಿಳಿದೆವು. ಛಳಿಗಾಲ ಶುರುವಾದನಂತರ ನಾನೂ treadmill ಮೊರೆ ಹೋದೆ.    ಕೆಲಸದ ಮೇಲೆ ಬಹಳ ಪ್ರಯಾಣ ಮಾಡುವ ನಾವಿಬ್ಬರೂ ಎಷ್ಟೇ ಕಷ್ಟವಾದರೂ ತರಬೇತಿಯನ್ನ ತಪ್ಪದೆ ಮಾಡುತ್ತಿದ್ದೆವು.

Internet ನಲ್ಲಿ ಕಿಲಿ ಬಗ್ಗೆ ಬಹಳಷ್ಟು ಓದಿದೆವು. ಕಿಲಿಗೆ ಹೋಗಿ ಬಂದವರೊಂದಿಗೆ ಮಾತನಾಡಿ ಅವರ ಅನುಭವಗಳನ್ನ ತಿಳಿದುಕೊಂಡೆವು. ಕಿಲಿ ಹತ್ತಲು ಬೇಕಾದ ಸಾಮಗ್ರಿಗಳ ಪಟ್ಟಿ ಮಾಡಿ ಒಂದೊಂದಾಗಿ ಎಲ್ಲವನ್ನೂ ಕೊಂಡುಕೊಂಡೆವು. ಡಾಕ್ಟರ್ ನ ಭೆಟ್ಟಿ ಮಾಡಿ ಬೇಕಿರುವ ವ್ಯಾಕ್ಸಿನೇಷನ್ಸ್ ಹಾಕಿಸಿಕೊಂಡೆವು.kili-routes-map

ನಮ್ಮ ಜೀವನದಲ್ಲಿ ಈ ಬಗೆಯ ಪ್ರವಾಸ ನಾವೆಂದೂ ಮಾಡಿರಲಿಲ್ಲ . ಹಾಗಾಗಿ, ಹೊರಡುವ ದಿನಗಳು ಹತ್ತಿರವಾಗುತ್ತಿದ್ದಂತೆ ಏನೋ ಒಂದು ರೀತಿಯ ಆತಂಕ ಉತ್ಸಾಹಗಳ ಸಮ್ಮಿಶ್ರ ಭಾವ!

ಅಂತೂ ಹೊರಡುವ ದಿನ ಬಂದೇ ಬಿಟ್ಟಿತು! Jan ೫ ರಂದು ನಾವು ನಾಲ್ಕೂ ಜನ ನಮ್ಮೆಲ್ಲ ಸಾಮಾನು ಸರಂಜಾಮೊಂದಿಗೆ Manchester Airport ತಲುಪಿದೆವು. ನಮ್ಮ ಗುಂಪಿನ ಮಿಕ್ಕ ಮೂರು ಜನರನ್ನ ಅಲ್ಲಿ ಸಂಧಿಸಿದೆವು. ಒಟ್ಟಿಗೆ ಊಟ ಮಾಡಿ plane ಹತ್ತಿ, Doha ಮೂಲಕ Jan ೬, ಮಧ್ಯಾಹ್ನ ೩ ಘಂಟೆ ಹೊತ್ತಿಗೆ ಕಿಲಿ ತಲುಪಿದೆವು. ಇಂಡಿಯಾ ದಿಂದ ಬಂದ ಇನ್ನಿಬ್ಬರು ನಮ್ಮನ್ನು ಅಲ್ಲಿ ಸೇರಿದರು. ಪರಸ್ಪರ ಪರಿಚಯ ಮಾತುಕತೆಗಳ ನಂತರ tro-peaks ನವರು ಕಳಿಸಿದ್ದ ವ್ಯಾನ್ ನಲ್ಲಿ ಹೋಟೆಲ್ ತಲುಪಿದೆವು.

ಮೋಶಿ, ಕಿಲಿ ಪರ್ವತದ ತಪ್ಪಲಲ್ಲಿರುವ ಒಂದು ಪುಟ್ಟ ಊರು. ಅಲ್ಲಿನ ಕೀಸ್ ಹೋಟೆಲ್ ನಮ್ಮ ತಂಗುದಾಣ. ಹೋಟೆಲ್ ತಲುಪಿ, ಸ್ನಾನ ಮಾಡಿ, ಸ್ವಲ್ಪ ವಿಶ್ರಮಿಸಿ, ೭ ಘಂಟೆ ಹೊತ್ತಿಗೆ ಹೋಟೆಲ್ ಲಾಬಿ ಯಲ್ಲಿ ಎಲ್ಲ ಸೇರಿದೆವು. Tro-peaks ನ ಥಾಮಸ್, ನಮ್ಮ ಮುಂದಿನ ಪ್ಲಾನ್ ಬಗ್ಗೆ ವಿವರಿಸಿ, ನಮ್ಮ ಪ್ರಶ್ನೆಗಳಿಗೆಲ್ಲ ಬಹಳ ತಾಳ್ಮೆಯಿಂದುತ್ತರಿಸಿ ನಮ್ಮ ಉತ್ಸಾಹವನ್ನ ಇಮ್ಮಡಿಸಿದರು.

ಮುಂದಿನ ದಿನದಿಂದ (Jan ೭) ನಮ್ಮ ಪರ್ವತಾರೋಹಣ ಆರಂಭ. ಒಬ್ಬೊಬ್ಬರಿಗೆ ೧೫ k.g. ಯಷ್ಟು ತೂಕದ ಒಂದು ಚೀಲದ ಪರಿಮಿತಿ. ಅದರಲ್ಲಿ ವಾರಕ್ಕೆ ಬೇಕಾಗುವ ಬಟ್ಟೆ, ಸ್ಲೀಪಿಂಗ್ bag, ಸ್ಲೀಪಿಂಗ್ mat, ಶೂಸ್ ಎಲ್ಲವನ್ನೂ ಹಾಕಿಡಬೇಕು. ಇದನ್ನ ಪೋರ್ಟರ್ ಗಳು ಹೊತ್ತು ತರುತ್ತಾರೆ. ಇನ್ನೊಂದು ಡೇ ಪ್ಯಾಕ್. ಇದರಲ್ಲಿ ಆ ದಿನಕ್ಕೆ ಬೇಕಾಗುವ ಪಾದಾರ್ಥಗಳು, ಅಂದರೆ – raincoat, ಹೆಚ್ಚುವರಿ layers, ನೀರು, ಶಕ್ತಿದಾಯಕ ಉಪಹಾರ, ಇವುಗಳನ್ನ ಇಟ್ಟುಕೊಂಡು, ನಾವೇ ನಮ್ಮ ಜೊತೆ ಕೊಂಡೊಯ್ಯುವ back-pack.  ಇಷ್ಟನ್ನೂ ಸಿದ್ಧಪಡಿಸಿ ಬೆಳಿಗ್ಗೆ ೯ ರ ಹೊತ್ತಿಗೆ ತಯಾರಿರಲು ಆದೇಶಿಸಿ Thomas ನಿರ್ಗಮಿಸಿದರು. ನಾವೆಲ್ಲಾ ಊಟ ಮುಗಿಸಿ, ತಯಾರಿ ನಡೆಸಲು ನಮ್ಮ ರೂಮ್ ಗಳನ್ನ ಸೇರಿಕೊಂಡೆವು

Jan ದಿನ ಮಚಾಮೆ ಗೇಟ್ ನಿಂದ ಮಚಾಮೆ ಹಟ್ ಕ್ಯಾಂಪ್ ಸೈಟ್೧೭೦೦m – ೩೦೦೦m – ೧೩ k.m – ( ಘಂಟೆಗಳ ಪ್ರಯಾಣ)

km1 ತಾಪಮಾನ ಸುಮಾರು ೨೮c ಇತ್ತು. ಒಳ್ಳೆ ಬಿಸಿಲು! u.k. ಇಂದ ಹೋದವರಿಗಂತೂ ಹಬ್ಬ! ಬೆಳಿಗ್ಗೆ ಎದ್ದು ಸಿದ್ದವಾಗಿ, T-shirt/shorts ಹಾಕಿ, ತಿಂಡಿ ತಿಂದು, ನಮ್ಮ ಬ್ಯಾಗ್ ಗಳನ್ನೆಲ್ಲ ೯ ಘಂಟೆ ಹೊತ್ತಿಗೆ ಹೋಟೆಲ್ ಲಾಬಿ ಯಲ್ಲಿ ತಂದಿಟ್ಟೆವು. Tro-peaks ನ ಸಿಬ್ಬಂದಿ ನಮ್ಮ ಬ್ಯಾಗ್ ಗಳನ್ನೆಲ್ಲ ವಾಟರ್ ಪ್ರೂಫ್ ಚೀಲಗಳಲ್ಲಿ ಹಾಕಿ, ಕಟ್ಟಿ, ಜೀಪಿನ ಮೇಲೆ ಹಾಕಿದರು. ಸುಮಾರು ೧೦ ಘಂಟೆಯ ಹೊತ್ತಿಗೆ ಹೋಟೆಲ್ ಬಿಟ್ಟು, ೧೧ ಘಂಟೆಯ ಹೊತ್ತಿಗೆ ಕಿಲಿಮ್ಯಾಂಜರೋ ನ್ಯಾಷನಲ್ ಪಾರ್ಕ್ ನ ಮಚಮೆ ಹಾದಿಯ ಪ್ರವೇಶದ್ವಾರವನ್ನು ತಲುಪಿದೆವು. ಅಲ್ಲಿ, ನೋಂದಣಿ ಮತ್ತು ಇತರ ಅಧಿಕೃತ ದಾಖಲೆಗಳನ್ನ ಮುಗಿಸಿ, ಮಧ್ಯಾಹ್ನ ಸುಮಾರು ೧೨.೪೫ ರ ಹೊತ್ತಿಗೆ ನಮ್ಮ ಪರ್ವತಾರೋಹಣವನ್ನ ಆರಂಭಿಸಿದೆವು.

Rainforest ಮೂಲಕ ನಾವು ೯ ಜನ, ನಮ್ಮ back-pack ಗಳನ್ನ ಹೊತ್ತು ನಡೆಯಲುಪಕ್ರಮಿಸಿದೆವು. ನಮ್ಮ ಮಿಕ್ಕ ಬ್ಯಾಗ್ಗಳನ್ನು, ಟೆಂಟ್ ಮತ್ತು ಅಡಿಗೆ ಸಾಮಗ್ರಿಗಳನ್ನೆಲ್ಲ ಹೊತ್ತು ಪೋರ್ಟರ್ ಗಳೂ ಹೊರಟರು. ಆದರೆ ಅವರ ನಡಿಗೆಯ ವೇಗವೇ ಬೇರೆ!

km2ನಮ್ಮೆಲ್ಲರಿಗಿಂತ ಕಡೆಯಲ್ಲಿ ಹೊರಟು, ಎಲ್ಲರಿಗಿಂತ ಮುಂಚಿತವಾಗಿ ಮುಂದಿನ ಕ್ಯಾಂಪ್ ತಲುಪಿ, ಟೆಂಟ್ ಗಳನ್ನೆಲ್ಲ ಸಿದ್ಧಪಡಿಸಿ, ಅಡಿಗೆ ಮಾಡಿ, ನಮಗಾಗಿ ನಗು ನಗುತಾ ಕಾಯುವ ದೇವತೆಗಳೆಂದರೆ ತಪ್ಪಾಗಲಾರದು! ನಮ್ಮ ಜೊತೆ ಸುಮಾರು ೨೭ ಪೋರ್ಟರ್ಸ್ –  ಅವರಲ್ಲಿ ಕೆಲವರು ಅಡಿಗೆ ಮಾಡುವವರು, ಊಟ ಬಡಿಸುವವರು, ಟೆಂಟ್ ಹಾಕುವವರು, ನೀರು ತರುವವರು, ಟಾಯ್ಲೆಟ್ ಶೂಚಿಗೊಳಿಸುವವರು  ಮತ್ತು ೩ ಗೈಡ್ ಗಳಿದ್ದರು. ಹೀಗೆ ಪ್ರತಿ ಗುಂಪಿಗೂ ಅವರದೇ ಪೋರ್ಟರ್ಸ್ ಮತ್ತು ಗೈಡ್ ಗಳಿದ್ದರು.

ಸುತ್ತಲಿನ ಸಸ್ಯರಾಶಿಯ ಸೊಬಗನ್ನು ಸವಿಯುತ್ತಾ, ಹಕ್ಕಿಗಳ ಚಿಲಿಪಿಲಿ ಕೇಳುತ್ತಾ, ಹೊಸದಾಗಿ ಪರಿಚಯವಾದ ಸ್ನೇಹಿತರೊಂದಿಗೆ ಮಾತನಾಡುತ್ತಾ ನಡೆದ ನಮಗೆ ಸಮಯ ಕಳೆದದ್ದೇ ಗೊತ್ತಾಗಲಿಲ್ಲ! ಸಾಯಂಕಾಲ ೫ .೩೦ ಹೊತ್ತಿಗೆ ಕ್ಯಾಂಪ್ ಸೈಟ್ ತಲುಪಿದೆವು. ನೋಂದಣಿ ಮುಗಿಸಿ ನಮ್ಮ ಕ್ಯಾಂಪ್ ತಲುಪಿದೆವು. ಬಿಸಿಲಿನಲ್ಲಿ ಹೊರಟ ನಾವು ಕ್ಯಾಂಪ್ ಸೈಟ್ ತಲುಪುವಹೊತ್ತಿಗೆ ಚುಮು ಚುಮು ಚಳಿ ಶುರುವಾಗಿತ್ತು. ಬಿಸಿ ಬಿಸಿ ಕಾಫಿ/ಟೀ ಮತ್ತು popcorn ನಮಗಾಗಿ ಕಾದಿತ್ತು. ಅದನ್ನಾಸ್ವಾದಿಸಿ ನಮ್ಮ ಟೆಂಟ್ ಹೊಕ್ಕೆವು. km3

ನಮ್ಮ ಜನ್ಮದಲ್ಲಿ ನಾವು ಟೆಂಟ್ ನಲ್ಲಿ ಇದ್ದಿಲ್ಲ! ಹಾಗಾಗಿ, ೬ ಬೈ ೬ ಅಡಿ ಇದ್ದ ಆ ಟೆಂಟ್ ನಲ್ಲಿ ಕೈ ಕಾಲು ಅಲ್ಲಾಡಿಸಲೇ ಜಾಗ ಇಲ್ಲ, ಅಂಥದ್ರಲ್ಲಿ ನಾವು ನಮ್ಮ ದೊಡ್ಡ ಬ್ಯಾಗ್ ಗಳು, ಬ್ಯಾಕ್ ಪ್ಯಾಕ್, ಶೂಸ್ ಮತ್ತು ಸ್ಲೀಪಿಂಗ್ ಬ್ಯಾಗ್ ಗಳನೆಲ್ಲಾ ಆ ಚಿಕ್ಕ ಜಾಗದಲ್ಲಿ ಹೊಂದಿಸಿಕೊಳ್ಳಬೇಕಿತ್ತು! ಕಷ್ಟ ಪಟ್ಟು ಎಲ್ಲ ಅಣಿಮಾಡಿಕೊಂಡಾಯ್ತು. ವೆಟ್ ವೈಪ್ಸ್ ನಲ್ಲಿ ಮೈಯೆಲ್ಲಾ ಒರೆಸಿಕೊಂಡು, ಬಟ್ಟೆ ಬದಲಿಸಿದ್ದೂ ಆಯ್ತು. ಅಷ್ಟುಹೊತ್ತಿಗೆ ರಾತ್ರಿ ಊಟದ ಸಮಯವಾಯಿತು. ಎಲ್ಲರೂ ಊಟದ ಟೆಂಟ್ ನಲ್ಲಿ ಸೇರಿದೆವು. ಸೌತೆಕಾಯಿ ಸೂಪ್ ನೊಂದಿಗೆ ಪ್ರಾರಂಭವಾದ ಊಟ, ಬೇಯಿಸಿದ ಆಲೂಗೆಡ್ಡೆ, veg/non-veg ಕರ್ರಿ ಮತ್ತು ಹಣ್ಣುಗಳೊಂದಿಗೆ ಪೂರ್ಣವಾಯಿತು.km6

ಪ್ರತಿ ರಾತ್ರಿ ಊಟದ ಸಮಯದಲ್ಲಿ ಗೈಡ್ ಗಳು ಮುಂದಿನ ದಿನದ ಹಾದಿಯ ಬಗ್ಗೆ ವಿವರಿಸಿ, ಯಾವ ರೀತಿ ಸಿದ್ಧವಾಗಬೇಕೆಂದು ತಿಳಿಸುತ್ತಿದ್ದರು. ಹಾಗೆ ಎಲ್ಲರ ಆಮ್ಲಜನಕದ ಪ್ರಮಾಣದ ತಪಾಸಣೆ ಕೂಡ ಮಾಡುತ್ತಿದ್ದರು.

ಪ್ರತಿ ದಿನ ಬೆಳಿಗ್ಗೆ, ೬ ಘಂಟೆಗೆ ಕಾಫೀ/ಟೀ ಯೊಂದಿಗೆ wake-up ಕಾಲ್. ೬ . ೩೦ ಗೆ ಒಂದು ಚಿಕ್ಕ ಬೋಗುಣಿಯಲ್ಲಿ ಮುಖ ತೊಳೆಯಲು ಉಗುರು ಬೆಚ್ಚ್ಚಗಿನ ನೀರು. ೭ ಘಂಟೆಗೆ ತಿಂಡಿ – porridge, toast, omelet ಮತ್ತು ಹಣ್ಣು. ಆಮ್ಲಜನಕದ ಪ್ರಮಾಣದ ತಪಾಸಣೆ.  ೮ – ೯ ಒಳಗೆ ಆರೋಹಣ ಪ್ರಾರಂಭ. ಸಾಯಂಕಾಲಕ್ಕೆ ಮುಂದಿನ ಕ್ಯಾಂಪ್ ಸೈಟ್, ಊಟ , ಮುಂದಿನ ದಿನದ ವಿವರ, ತಪಾಸಣೆ, ಮಲಗುವುದು – ಇದು ದಿನಚರಿ

ನೀರು – ಪರ್ವತದ ಝರಿ/ತೊರೆಗಳಲ್ಲಿ ಸಿಗುವ ನೀರನ್ನ ಪೋರ್ಟರ್ಗಳು ತುಂಬಿ ತರ್ತಾರೆ. ಅದೇ ಅಡಿಗೆಗೆ, ಕುಡಿಯಕ್ಕೆ ಮತ್ತು ಶೌಚಕ್ಕೆ ಕೂಡ! ನಾವು ಶುದ್ಧೀಕರಣ ಗುಳಿಗೆಗಳನ್ನ ತೆಗೆದುಕೊಂಡು ಹೋಗಿದ್ದೆವು. ಪ್ರತಿ ರಾತ್ರಿ ಈ ಗುಳಿಗೆಯನ್ನ ನಮ್ಮ ಗೈಡ್ ಗೆ ಕೊಡ್ತಿದ್ವಿ. ಅವರು ಅದನ್ನ ನಾವು ಕುಡಿಯುವ ನೀರಿಗೆ ಹಾಕಿರುತ್ತಿದ್ದರು . ಮುಂದಿನ ದಿನ ಅದೇ ನೀರನ್ನ ನಮಗೆಲ್ಲ ಕೊಂಡೊಯ್ಯಲು ಕೊಡುತ್ತಿದ್ದರು. ಎಲ್ಲರೂ ದಿನಕ್ಕೆ ಸುಮ್ಮರು ೨ – ೩ ಲೀಟರ್ ನೀರು ಕುಡಿಯುತ್ತಿದ್ದೆವು

ಶೌಚ – ನಾವು ನಮ್ಮೊಂದಿಗೆ ಪೋರ್ಟಬಲ್ ಟಾಯ್ಲೆಟ್ ಕೊಂಡೊಯ್ಯುವ ವ್ಯವಸ್ಥೆ ಮಾಡಿದ್ದೆವು.  ಒಬ್ಬ ಪೋರ್ಟರ್ ಅದನ್ನ ಹೊತ್ತು ತಂದು ಅದರ ಶುಚಿತ್ವದ ಜವಾಬ್ದಾರಿ ಹೊತ್ತಿದ್ದರು. ಹಾಗಾಗಿ,ನಮಗೆ ಅಷ್ಟೊಂದು ಕಷ್ಟವಾಗಲಿಲ್ಲ. ಪ್ರತಿ ಕ್ಯಾಂಪ್ ಸೈಟ್ ನಲ್ಲೂ  ಸಾರ್ವಜನಿಕ ಶೌಚಾಲಯಗಳಿವೆ. ಆದರೆ ಮೂಗು ಕಣ್ಣು ಮುಚ್ಚಿ ಉಪಯೋಗಿಸಬೇಕು ಅಷ್ಟೇ!

ಊಟದ ನಂತರ ಎಲ್ಲ ನಮ್ಮ ನಮ್ಮ ಟೆಂಟ್ ಸೇರಿದೆವು. ಸ್ಲೀಪಿಂಗ್ ಬ್ಯಾಗ್ ನಲ್ಲಿ ನಾವು ಮುಂದಿನ ದಿನ ಹಾಕಿಕೊಳ್ಳಬೇಕಾದ ಬಟ್ಟೆಗಳನ್ನ ಇಟ್ಟುಕೊಂಡು (ಮಕ್ಕಳು ಹೇಳಿಕೊಟ್ಟ trick! ), ಜಿಪ್ ಏರಿಸಿ ಮಲಗಿದೆವು. ಸ್ಲೀಪಿಂಗ್ ಬ್ಯಾಗ್ ನಲ್ಲಿ ಮಲಗಿ ಅಭ್ಯಾಸವಿಲ್ಲದ ನಮಗೆ ಅದರಲ್ಲಿ ಮಲಗಲು ಬಹಳ ಮುಜುಗರವಾಯಿತು! ಹೊರಳಲಾಗದೆ, ಏಳಲಾಗದೆ ಒದ್ದಾಡಿಕೊಂಡು ರಾತ್ರಿಯನ್ನ ಕಳೆದಿದ್ದಾಯ್ತು!ನಿದ್ದೆ ಕೈಗೆಟುಕದ ಹೊನ್ನಾಯಿತು! ಆದರೆ ದಣಿದ ದೇಹಕ್ಕೆ ವಿಶ್ರಾಂತಿ ಸಿಕ್ಕಿತು.

Jan ದಿನ  – ಮಚಾಮೆ ಹಟ್ ನಿಂದ ಶಿರಾ ಕ್ಯಾಂಪ್ ಸೈಟ್  – ೩೦೦೦m – ೩೮೦೦m –  k.m  (  ಘಂಟೆಗಳ ಪ್ರಯಾಣ)

ಬೆಳಿಗ್ಗೆ ಎದ್ದ ತಕ್ಷಣ ಸ್ಲೀಪಿಂಗ್ ಬ್ಯಾಗ್ ನಲ್ಲಿ ಇಟ್ಟುಕೊಂಡಿದ್ದ ಬಟ್ಟೆಗಳನ್ನ (ಬೆಚ್ಚಗಿದ್ದವು!) ಹಾಕಿಕೊಂಡು,  ಬೆಳಗಿನ ಕಲಾಪಗಳನ್ನೆಲ್ಲಾ ಮುಗಿಸಿ ೮.೩೦ ಹೊತ್ತಿಗೆ ಎಲ್ಲರೂ ಸಿದ್ದರಾದೆವು. ಈ ದಿನ rainforest ಬಿಟ್ಟು, Erika ಮರಗಳ ಮಧ್ಯೆ, ಬಹಳ ಕಡಿದಾದ ಹಾದಿಯಲ್ಲಿ ನಮ್ಮ ಚಾರಣ ಮುಂದುವರೆಯಿತು. ದೊಡ್ಡ ದೊಡ್ಡ ಬಂಡೆಗಳನ್ನ ಹತ್ತಿ ಹೋಗಬೇಕಾದ ಹಾದಿ ಕಷ್ಟಕರವಾಗೇ ಇತ್ತು!

km7ಮಳೆರಾಯನ ಆಗಮನವಾಗಿ, ಎಲ್ಲರೂ ವಾಟರ್ ಪ್ರೂಫ್  ಬಟ್ಟೆಗಳನ್ನ ತೊಟ್ಟು, back-pack ಗೂ ಕವಚ ತೊಡಿಸಿ, ಮುನ್ನಡೆದೆವು. ಸುಮಾರು ೩ ಘಂಟೆಯ ಹೊತ್ತಿಗೆ ಶಿರಾ ಕ್ಯಾಂಪ್ ತಲುಪಿದೆವು.

ಇಲ್ಲಿ ನನಗೆ ನನ್ನ ಮೊದಲ altitude sickness ಅನುಭವವಾಯಿತು! ಸಣ್ಣಗೆ ತಲೆನೋಯುತಿತ್ತು. ಹೆಜ್ಜೆ ಮುಂದಿಡಲಾಗದಂತಹ ನಿಶಕ್ತಿ! ಕ್ಯಾಂಪ್ ಸೈಟ್ ಹತ್ತಿರ (ಅರ್ಧ k.m.) ಇದ್ದ ಶಿರಾ ಕೇವ್ಸ್ ಗೆ ಹೋಗಿ ಬರುವಷ್ಟು ತ್ರಾಣವಿರಲಿಲ್ಲ ನನಗೆ! ನೋಂದಣಿ ಕೂಡ ಆನಂದ್ ಮಾಡಿ ಬಂದರು. ಊಟ ಮಾಡಲಾಗಲಿಲ್ಲ, ಅಸಹ್ಯವಾಗಿ ಓಕರಿಕೆಬರಲಾರಂಭಿಸಿತು. ಚಳಿಯಲ್ಲೂ ಮೈಬೆವರಿತು! ಒಂದು  ಘಂಟೆಯ ನಂತರ ದೇಹ ಸ್ಥಿಮಿತಕ್ಕೆ ಬಂತು. ವೆಟ್ ವೈಪ್ಸ್ ಸ್ನಾನ ಮಾಡಿ, ಬಟ್ಟೆ ಬದಲಿಸಿ, ಊಟದ ಸಮಯದವರೆಗೂ ಮಕ್ಕಳೊಂದಿಗೆ ಕಾರ್ಡ್ಸ್ ಆಡಿದೆವು. ಸೂಪ್, ಮೇನ್ ಕೋರ್ಸ್ ಮತ್ತು ಹಣ್ಣುಗಳೊಂದಿಗೆ ಊಟ ಮುಗಿಸಿ ನಮ್ಮ ಟೆಂಟ್ ಗಳನ್ನ ಸೇರಿದೆವು. ನಿದ್ದೆಯಿಲ್ಲದ ಮತ್ತೊಂದು ರಾತ್ರಿ ಸರಿಯಿತು!

Jan ದಿನ  – ಶಿರಾ ಕ್ಯಾಂಪ್ ಸೈಟ್ ನಿಂದ ಬರ್ರಾನ್ಕೋ ಕ್ಯಾಂಪ್ ಸೈಟ್೩೮೦೦೪೬೦೦೩೯೫೦೧೩ k.m ( ಘಂಟೆಗಳ ಪ್ರಯಾಣ)

km8ಇಂದು ೩೮೦೦m ಎತ್ತರದಲ್ಲಿರುವ ಶಿರಾ ಕ್ಯಾಂಪ್ ನಿಂದ ೪೬೦೦m ಎತ್ತರದಲ್ಲಿರುವ ಲಾವ ರಾಕ್ ವರೆಗೂ ಹತ್ತಿ ಮತ್ತೆ ೩೯೫೦m ನಲ್ಲಿರುವ ಬರ್ರಾನ್ಕೋ ಕ್ಯಾಂಪ್ ಗೆ ಇಳಿಯುವ ದಿನ. ದೇಹವನ್ನ ಆ ಎತ್ತರಪ್ರದೇಶಕ್ಕೆ ಒಗ್ಗಿಸಿಕೊಳ್ಳಲು ಒಳ್ಳೆಯ ಅವಕಾಶ. ಛಳಿ ಇದ್ದಿದ್ದರಿಂದ ಎಲ್ಲ ಎರಡು ಲೇಯರ್ ಬಟ್ಟೆಗಳನ್ನ ಬೆಚ್ಚಗೆ ತೊಟ್ಟು, ಬಹಳ ನಿಧಾನ ಗತಿಯಲ್ಲಿ ಹೊರಟೆವು. ದಾರಿ ಬರಡಾಗಿತ್ತು. ಸುತ್ತಮುತ್ತಲೂ ಕಲ್ಲು ಬಂಡೆಗಳು. ಎಲ್ಲೋ ಒಂದೊಂದು ಚಿಕ್ಕ ಗಿಡಗಳಿತ್ತಷ್ಟೆ. ಆಮ್ಲಜನಕದ ಅಭಾವವಿರುವುದರಿಂದ ಪ್ರತಿ ಹೆಜ್ಜೆ ಇಡುವುದೂ ಒಂದು ಸಾಹಸವೇ! ವೇಗವಾಗಿ ನಡೆಯುವುದಸಾಧ್ಯ ಮತ್ತು ತಪ್ಪು ಕೂಡ! ನಿಧಾನಕ್ಕೆ ನಡೆದಷ್ಟೂ ದೇಹಕ್ಕೆ ಒಳ್ಳೆಯದು, ಸುಸ್ತೂ ಕಡಿಮೆ. ಘಂಟೆಗೊಮ್ಮೆ ವಿಶ್ರಾಮ ತೆಗೆದುಕೊಳ್ಳುತ್ತಾ, ಬಹಳಷ್ಟು ನೀರನ್ನು ಕುಡಿಯುತ್ತಾ ನಮ್ಮ ಪ್ರಯಾಣ ಮುಂದುವರೆಯಿತು. ನಡೆಯುವಾಗ ಮೈ ಬೆಚ್ಚಗಾಗಿ ಛಳಿ ಸ್ವಲ್ಪ ಕಡಿಮೆ ಅನ್ನಿಸುತ್ತಿತ್ತು. ನಡೆದು ಸುಸ್ತಾಗಿ ವಿಶ್ರಮಿಸಲು ಕೂತರೆ ಮತ್ತೆ ಛಳಿ! ಈ ಬಿಸಿ/ಛಳಿಗಳನ್ನು ಅನುಭವಿಸುತ್ತಾ, ಮಧ್ಯಾಹ್ನ ೧ ಘಂಟೆಯ ಹೊತ್ತಿಗೆ ಲಾವಾ ರಾಕ್ ತಲುಪಿದೆವು. ಕೊರೆಯುವ ಛಳಿಯಲ್ಲಿ ಕಟ್ಟಿ ತಂದಿದ್ದ ಬುತ್ತಿಯನ್ನು ತಿಂದು, ಬರ್ರಾನ್ಕೋ ಕ್ಯಾಂಪ್ ಕಡೆಗೆ ಇಳಿಯಲುಪಕ್ರಮಿಸಿದೆವು. ಏರುವುದಕ್ಕಿಂತ ಇಳಿಯುವುದು ಸುಲಭವಾಗಿತ್ತು. ಮಧ್ಯಾಹ್ನ ೩ . ೩೦ ಹೊತ್ತಿಗೆ ಕ್ಯಾಂಪ್ ಸೈಟ್ ತಲುಪಿದೆವು. ನೋಂದಣಿ ಮುಗಿಸಿ ನಮ್ಮ ಕ್ಯಾಂಪ್ ಸೇರಿದೆವು. ಬಿಸಿ ಬಿಸಿ ಕಾಫಿ/ಟೀ ಮತ್ತು ಹುರಿದ ಕಡ್ಲೆಬೀಜ ನಮ್ಮನ್ನು ಸ್ವಾಗತಿಸಿದವು.

ನಂತರ ಎಂದಿನಂತೆ ವೆಟ್ ವೈಪ್ಸ್ ಸ್ನಾನ ಮಾಡಿ, ಬಟ್ಟೆ ಬದಲಿಸಿ ಟೆಂಟ್ ಅಣಿಮಾಡಿಕೊಂಡೆವು. ಅಷ್ಟು ಹೊತ್ತಿಗೆ ನಮ್ಮ ಮಕ್ಕಳು ಪೋರ್ಟರ್ಸ್ ಜೊತೆ ಇಸ್ಪೀಟ್ ಆಡುತ್ತಿದ್ದರು. ನಾನೂ ಅವರೊಂದಿಗೆ ಕೂತು ಹರಟೆ ಹೊಡೆಯುತ್ತ ಸ್ವಲ್ಪ ಕಾಲ ಕಳೆದೆ. ಎಲ್ಲರೂ ಊಟ ಮುಗಿಸಿ ಮಲಗಿದೆವು. ಈ ರಾತ್ರಿ ಒಂದೆರಡು ಘಂಟೆ ನಿದ್ದೆ ಬಂದಂತಿತ್ತು. ದೇಹ ಹೊಸವಾತಾವರಣಕ್ಕೆ ಒಗ್ಗುತ್ತಿತ್ತು!

Jan ೧೦ದಿನ  – ಬರ್ರಾನ್ಕೋ ಕ್ಯಾಂಪ್ ನಿಂದ ಕರಾಂಗ ಕ್ಯಾಂಪ್ ಸೈಟ್ ೩೯೫೦m – ೪೨೦೦m – ೩೯೦೦m – k.m. ( ಘಂಟೆಗಳ ಪ್ರಯಾಣ)

ಸುಮಾರು ೮ . ೪೫ ಆ ಹೊತ್ತಿಗೆ ಎಲ್ಲ ಸಿದ್ಧವಾಗಿ ಹೊರಟೆವು. ಬರ್ರಾನ್ಕೋ ವಾಲ್ ಹತ್ತುವ ದಿನ. ಬಹಳ ಕಡಿದಾದ ಈ ಗೋಡೆಯನ್ನ, ಚಿಕ್ಕದಾದ ಹಾದಿಯ ಮೂಲಕ ಹತ್ತಬೇಕಾಯ್ತು. ಕೈ ಮತ್ತು ಕಾಲುಗಳನ್ನೆಲ್ಲಾ ಉಪಯೋಗಿಸಿ, ಕೆಲವು ಕಡೆ ತೆವಳುತ್ತಾ, km9ಕೆಲವು ಕಡೆ ಜಾರುತ್ತಾ, ಕೆಲವೆಡೆ ಬಂಡೆಯನ್ನ ತಬ್ಬಿ, ಇನ್ನುಕೆಲವೆಡೆ ದೊಡ್ಡ ಬಂಡೆಗಳನ್ನ ಹತ್ತಿ, ಇಳಿದು ಅಂತೂ ಗೋಡೆಯ ಮೇಲಕ್ಕೆ ಬಂದೆವು. ಬಹಳ ಜನ ಒಂದೇ ಸಮಯಕ್ಕೆ ಹತ್ತಲುಪಕ್ರಮಿಸಿದ್ದರಿಂದ ಟ್ರಾಫಿಕ್ ಜಾಮ್ ಆಗಿತ್ತು! ಹಾಗಾಗಿ ಬಹಳ ಶ್ರಮ ಅನ್ನಿಸಲಿಲ್ಲ. ಒಂದು ರೀತಿ challenging ಆಗಿತ್ತು. ಗೋಡೆ ಹತ್ತಿ ಮೇಲೆ ಹೋದ ನಂತರ, ಒಂದು ರೀತಿಯ ಸಾಧನೆ ಮಾಡಿದ ಸಂತೃಪ್ತಿ!  ೪೨೦೦m ಎತ್ತರದಲ್ಲಿ ಇದ್ದ ನಾವು, ಏರಿಳಿತಗಳ ಹಾದಿಯನ್ನ ಕ್ರಮಿಸಿ, ಕಡೆಯಲ್ಲಿ ಮತ್ತೊಂದು ಕಡಿದಾದ ಬೆಟ್ಟವನ್ನ ಹತ್ತಿ ಕರಾಂಗ ಕ್ಯಾಂಪ್ ಸೈಟ್ ತಲುಪಿದೆವು. ಅಷ್ಟುಹೊತ್ತಿಗೆ ಎಲ್ಲ ಸುಸ್ತಾಗಿದ್ದೆವು. ಊಟ ಮಾಡಿ ವಿಶ್ರಮಿಸಿದೆವು. ಮತ್ತೆ ಒಂದೆರಡು ಘಂಟೆ ನಡೆಯಲು ಆಸಕ್ತಿ ಇದ್ದರೆ ಕರೆದುಕೊಂಡು ಹೋಗುವುದಾಗಿ ಗೈಡ್ ಗಳು ಹೇಳಿದರು. ಆದರೆ ನಮಗ್ಯಾರಿಗೂ ದೇಹದಲ್ಲಿ ತ್ರಾಣವಿರಲಿಲ್ಲ! ನಮ್ಮ ಟೆಂಟ್ ಗಳಲ್ಲಿ ರಾತ್ರಿ ಊಟದವರೆಗೂ ಕಾಲ ಕಳೆದು, ಊಟ ಮಾಡಿ ಮಲಗಿದೆವು.

Jan ೧೧ದಿನ  ಕರಾಂಗ ಕ್ಯಾಂಪ್ ಸೈಟ್ ನಿಂದ ಬರಾಫು ಕ್ಯಾಂಪ್ ಸೈಟ್೩೯೦೦m – ೪೬೨೦ m – k.m. ( ಘಂಟೆಗಳ ಪ್ರಯಾಣ)

ಈ ದಿನದ ಪ್ರಯಾಣ ಚಿಕ್ಕದಾದರೂ ಕಠಿಣವಾದದ್ದು! ೪೬೨೦m ಎತ್ತರಕ್ಕೆ ಮೊದಲಬಾರಿ ಹೋಗುತ್ತಿದ್ದೆವು. ಇದು ಬೇಸ್ ಕ್ಯಾಂಪ್ ಕೂಡ. ಚಳಿ, ಗಾಳಿ ಬಹಳ! ಅದಲ್ಲದೆ ಮಧ್ಯ ರಾತ್ರಿ ಪರ್ವತದ ಉತ್ತುಂಗಕ್ಕೆ ಹೊರಡಬೇಕು!

km10ಬೆಳಿಗ್ಗೆ ೮ . ೪೫ ರ ಹೊತ್ತಿಗೆ ಹೊರಟು, ಮರುಭೂಮಿಯಲ್ಲಿ ಸ್ವಲ್ಪ ಕಡಿದಾದ ಹಾದಿಯಲ್ಲಿ ನಿಧಾನವಾಗಿ ಏರುತ್ತಾ ಮಧ್ಯಾಹ್ನದ ಹೊತ್ತಿಗೆ ಬರಾಫು ತಲುಪಿದೆವು. ಆಮ್ಲಜನಕದ ಅಭಾವ ಹೆಜ್ಜೆಯಿಡಲು ಏದುಸಿರು ಬರಿಸುತ್ತಿತ್ತು! ಕ್ಯಾಂಪ್ ತಲುಪುವ ಹೊತ್ತಿಗೆ ಎಲ್ಲ ದಣಿದಿದ್ದೆವು. ಊಟ ಮಾಡಿ ನಮ್ಮ ಟೆಂಟ್ ಗಳಲ್ಲಿ ವಿಶ್ರಮಿಸಿದೆವು. ಸಾಯಂಕಾಲ ೬ ಘಂಟೆಗೆ ಊಟ ಮುಗಿಸಿ ಮಲಗಿದೆವು

Jan ೧೨ ದಿನ ಬರಾಫು ಇಂದ ಉಹೂರು ಪೀಕ್ ಅಲ್ಲಿಂದ ಮಿಲ್ಲೇನಿಯಂ ಕ್ಯಾಂಪ್ ೪೬೨೦m – ೫೮೯೫m – ೩೧೦೦m – ೧೫ k.m. (೧೦ ೧೨ ಘಂಟೆಗಳ ಪ್ರಯಾಣ )          

ರಾತ್ರಿ ೧೧ ಘಂಟೆಗೆ ಎದ್ದು, ೧೧ . ೩೦ ಗೆ ತಿಂಡಿ ತಿಂದು, ೧೨.೩೦ ಹೊತ್ತಿಗೆ ಭಯಂಕರ ಚಳಿ ಮತ್ತು ಭರೋ ಎಂದು ಬೀಸುವ ಗಾಳಿಯಲ್ಲಿ (40-45 kmph), ೫ ಲೇಯರ್ ಬಟ್ಟೆ ಹಾಕಿಕೊಂಡು, ತಲೆಯಿಂದ ಕಾಲಿನವರೆಗೂ ಒಂದಿಂಚೂ ಬಿಡದಂತೆ ಮುಚ್ಚಿಕೊಂಡು, ಅಗಾಧ ಪರ್ವತದ ಉತ್ತುಂಗವನ್ನ ತಲಪುವ ಆಸೆ ಹೊತ್ತು ಹೊರಟೆವು. ತಲೆಗೆ ಹೆಡ್ ಲ್ಯಾಂಪ್ ಹಾಕಿಕೊಂಡು ಹುಣ್ಣಿಮೆ ಚಂದ್ರನ ಬೆಳಕಿನಲ್ಲಿ ನಮ್ಮ ಪ್ರಯಾಣ ನಿಧಾನವಾಗಿ ಸಾಗಿತು. ಹೆಜ್ಜೆ ಮುಂದಿಡುವುದೇ ಪ್ರಯಾಸವಾಯಿತು! ಜೊತೆಗೆ ಗಾಳಿ ನಮ್ಮನ್ನ ನೂಕುತ್ತಿದೆ ಬೇರೆ! ಹೆಜ್ಜೆ ಹೆಜ್ಜೆಗೂ ಏದುಸಿರು! ಅಂತೂ ಬಹಳ ನಿಧಾನವಾಗಿ ನಡೆಯುತ್ತಾ, ಘಂಟೆಗೊಮ್ಮೆ ಸ್ವಲ್ಪ ಸುಧಾರಿಸಿಕೊಂಡು ೩ ಘಂಟೆಗಳ ಪ್ರಯಾಣ ಮುಗಿಸಿದೆವು. ಸುಮಾರು ೫೪೦೦m ಎತ್ತರದಲ್ಲಿದಾಗ, km11ದುರದೃಷ್ಟವಶಾತ್ ನನ್ನ ಕಣ್ಣುಗಳು ಮಂಜಾಗತೊಡಗಿದವು! ಮುಂದಿನ ಹೆಜ್ಜೆ ಕಾಣದಾಯಿತು! ಇನ್ನು ಮುಂದೆ ಹೋದರೆ ನನ್ನ ಕಣ್ಣುಗಳಿಗೆ ಶಾಶ್ವತ ಹಾನಿಯಾಗಿ ದೃಷ್ಟಿಗೆ ಅಪಾಯವೆಂದು, ನಾನು ಹಿಂದಿರುಗಲು ನಿರ್ಧರಿಸಿದೆ. ಪರ್ವತದ ತುದಿ ಮುಟ್ಟುವ ನನ್ನ ಆಸೆ ನಿರಾಸೆಯಲ್ಲಿ ಮುಕ್ತಾಯವಾಯಿತು.

ಗುಂಪಿನ ಇನ್ನೆಲ್ಲರೂ ಅವರ ಪ್ರಯಾಣ ಮುಂದುವರೆಸಿದರು. ನಾನು ಒಬ್ಬ ಗೈಡ್ ನೊಂದಿಗೆ  ೩ ಘಂಟೆಗಳ ಕಾಲ ಸತತವಾಗಿ ಇಳಿದು, ಸುಮಾರು ೭ ಘಂಟೆಯ ಹೊತ್ತಿಗೆ  ಬರಾಫು ಕ್ಯಾಂಪ್ ಸೈಟ್ ಗೆ ಹಿಂದಿರುಗಿದೆ. ಕಣ್ಣು ಸರಿಯಾಗಿ ಕಾಣಿಸುತ್ತಿರಲಿಲ್ಲ. ಗೈಡ್ ಹೇಳಿದ ಕಡೆ ಹೆಜ್ಜೆ ಇಟ್ಟು, ಇಳಿದು ಬಂದೆ. ಬರುವಾಗ ಸೂರ್ಯೋದಯ ನೋಡುವ ಭಾಗ್ಯ ನನ್ನದಾಯಿತು. ಮಂಜಾದ ಕಣ್ಣಿನಲ್ಲೇ ನೋಡಿ ಆನಂದಿಸಿದೆ. ಟೆಂಟ್ ಗೆ ಬಂದವಳೇ ಮಲಗಿದೆ. ಎಂಥಾ ನಿದ್ದೆ! ೧೧ . ೩೦ ಹೊತ್ತಿಗೆ ಮೇಲೆ ಹೋಗಿದ್ದ ನನ್ನ ಗುಂಪು ವಾಪಸ್ ಬಂದಾಗಲೇ ನನಗೆ ಎಚ್ಚ್ಚರವಾಗಿದ್ದು!

ಗುಂಪಿನಲ್ಲಿದ್ದ ಎಲ್ಲರೂ ಪರ್ವತದ ತುದಿ ತಲುಪಿ ಬಂದಿದ್ದು ಬಹಳ ಸಂತೋಷದ ವಿಷಯ. ಎಲ್ಲಾ ಬಹಳ ಸುಸ್ತಾಗಿದ್ದರೂ ಸಂತೃಪ್ತ ಭಾವನೆ ತುಂಬಿತ್ತು. ಸ್ವಲ್ಪ ಹೊತ್ತು ವಿರಮಿಸಿ, ಮಧ್ಯಾಹ್ನದ ಊಟದ ನಂತರ ನಮ್ಮ ಅವರೋಹಣ ಪ್ರಾರಂಭವಾಯಿತು. ಸುಮಾರು ೨ ಘಂಟೆಗಾಲ ಕಾಲ ಇಳಿದು ಮಿಲ್ಲೇನಿಯಂ ಕ್ಯಾಂಪ್ ಸೈಟ್ ಸೇರಿದೆವು.  ಇಳಿಯುವ ದಾರಿಯಲ್ಲಿ Senecio kilimanjari, Giant lobelia, Erica, hericracium, wild carrot ಸಸ್ಯ ಗಳನ್ನ ಕಂಡೆವು.km13km12

ಕ್ಯಾಂಪಿನಲ್ಲಿ ನಮ್ಮ ಕಡೆಯ ರಾತ್ರಿ! ಎಲ್ಲರಿಗೂ ಎಷ್ಟು ಸುಸ್ತಾಗಿತ್ತೆಂದರೆ, ಊಟ ಮಾಡಿ ಮಲಗಿದ್ದೊಂದೇ ಗೊತ್ತು! ೪ – ೫ ದಿನದಿಂದ ಸರಿಯಾಗಿ ಬಾರದ ನಿದ್ದೆ ಇಂದು ಒಟ್ಟಿಗೆ ಆವರಿಸಿದಂತಿತ್ತು. ಎಲ್ಲರೂ ನಿಷ್ಚಿಂತೆಯಿಂದ ನಿದ್ರಾದೇವಿಯಮಡಿಲೊರೆಗಿದೆವು

Jan ೧೩ದಿನ ಮಿಲ್ಲೇನಿಯಂ ಕ್ಯಾಂಪ್ ನಿಂದ ಮೇಕ ಗೇಟ್  – ೩೧೦೦m – ೧೭೦೦m – k.m. ( ಘಂಟೆಗಳ ಪ್ರಯಾಣ )         

ಕಡೆಯ ದಿನ ೮ ಘಂಟೆಯ ಹೊತ್ತಿಗೆ ಎಲ್ಲ ತಿಂಡಿ ತಿಂದು ಹೊರಡಲು ಸಿದ್ದವಾದೆವು. Tro-peaks ತಂಡ ತಮ್ಮ ಹಾಡು ಮತ್ತು ನೃತ್ಯದೊಂದಿಗೆ ನಮಗೆ ವಿದಾಯ ಹೇಳಿದರು. ಅವರಿಗೆಲ್ಲ ನಮ್ಮ ಅಭಿನಂದನೆಗಳನ್ನು ತಿಳಿಸಿ, ಟಿಪ್ಸ್ ಕೊಟ್ಟು ನಮ್ಮ ಧನ್ಯವಾದಗಳನ್ನ ವ್ಯಕ್ತಪಡಿಸಿದೆವುkm14

೮ ಘಂಟೆಯ ಹೊತ್ತಿಗೆ ಹೊರಟು, rainforest ಮೂಲಕ ೧೦ . ೧೫ ಕ್ಕೆ ಮೇಕ ಹಟ್ ತಲುಪಿದೆವು. ಅಲ್ಲಿಂದ ಮತ್ತೆ ೩ ಘಂಟೆ ಇಳಿದು ಮೇಕ ಗೇಟ್ ತಲುಪಿದೆವು. ಅಲ್ಲಿಗೆ ನಮ್ಮ ಅವರೋಹಣ ಮುಕ್ತಾಯವಾಯಿತು. Tro-peaks ತಂಡ ನಮಗೆ ಅಲ್ಲಿಯೇ ಊಟದ ವ್ಯವಸ್ಥೆ ಮಾಡಿದ್ದರು. Champagne ಕುಡಿದು ಊಟ ಮಾಡಿ ನಮ್ಮ ಪರ್ವತಾರೋಹಣದ ಯಶಸ್ಸನ್ನು ಸಂಭ್ರಮವಾಗಿ ಆಚರಿಸಿದೆವು.

Tro-peaks ನ ವ್ಯಾನ್ಗಳನ್ನು  ಹತ್ತಿ ಹೋಟೆಲ್ ಗೆ ಬರುವ ದಾರಿಯಲ್ಲಿ souvenir ಗಳನ್ನು ಕೊಂಡು, ಬನಾನಾ ಬಿಯರ್ ಕುಡಿದು ಹೋಟೆಲ್ ಸೇರಿಕೊಂಡೆವು. ೭ ದಿನದ ನಂತರ ಮಾಡಿದ ಆ ಸ್ನಾನದ ಆಹ್ಲಾದಕ್ಕೆ ಎಣೆ ಇಲ್ಲ! ರಾತ್ರಿ ಊಟದ ಸಮಯದಲ್ಲಿ ಪರ್ವತದ ತುದಿ ಮುಟ್ಟಿದವರಿಗೆಲ್ಲ ಪ್ರಮಾಣಪತ್ರ ಕೊಟ್ಟು ಪುರಸ್ಕರಿಸಲಾಯಿತು. ಮುಂದಿನ ದಿನ ಮೋಶಿ ಊರನ್ನು ಒಂದು ಸುತ್ತು ಹಾಕಿ, ಫ್ಲೈಟ್ ಹತ್ತಿ ವಾಪಸ್ ನಮ್ಮ ನಮ್ಮ ಮನೆಗಳಿಗೆ ಬಂದೆವು

km15

 

ಬಂದು ಒಂದು ವಾರವಾದರೂ ಇನ್ನೂ ಕಿಲಿ ನೆನಪುಗಳು ಮನಸ್ಸಿನಲ್ಲಿ ಹಾದುಹೋಗತ್ತೆ! ಜೀವನದಲ್ಲಿ ಮರೆಯಲಾಗದ ಒಂದು ಅದ್ಭುತ ಅನುಭವ. ಆ ಪರ್ವತದ ಗಾಂಭೀರ್ಯತೆ ಅಗಾಧತೆ ನಮ್ಮನ್ನ ವಿನಮ್ರನಾಗಿಸತ್ತೆ. ಒಂದುವಾರ ಬಹಳ ಕಷ್ಟವಾಯಿತು ನಿಜ, ಆದರೆ ಕಡೆಗೆ ಸಿಕ್ಕ ಆ ಸಂತೃಪ್ತಿ ಮತ್ತು ಸಾಧನೆಯ ಭಾವನೆಗೆ ಬೆಲೆಕಟ್ಟಲಾಗದು!

km16

“ಜೀವನದಲ್ಲಿ ಒಮ್ಮೆ ಕಿಲಿ ಹತ್ತಿ ನೋಡು” ಎಂದು ಹೇಳುತ್ತಾ ನನ್ನ ಪ್ರವಾಸ ಕಥನವನ್ನ ಮುಗಿಸುತ್ತಿದ್ದೇನೆ

kilimanjaro_3d_-_version_1
3-D animation ದಲ್ಲಿ ಕಿಲಿ — ಸಾರ್ವಜನಿಕ ಸ್ವಾಮಿತ್ವ(Public Domain)ದ ಜಿಫ್ ಚಿತ್ರ

(ಫೋಟೋಗಳು: ಲೇಖಕರವು)